ರಾಷ್ಟ್ರ-ರಾಷ್ಟ್ರಗಳ ನಡುವಣ ಸಂಬಂಧಗಳ ಮಟ್ಟ ಎಲ್ಲ ಕಾಲಕ್ಕೂ ಒಂದೇ ರೀತಿ ಇರುವುದಿಲ್ಲ; ಆಗಿಂದಾಗ ಬದಲಾಗುತ್ತಿರುತ್ತದೆ. ವಾಸ್ತವ ಹೀಗಿದ್ದರೂ ಕಳೆದ ಆರು ವರ್ಷಗಳ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಅವಧಿಯಲ್ಲಿ ಅಮೆರಿಕ-ಭಾರತ ಸಂಬಂಧದಲ್ಲಿ ಹೆಚ್ಚಿನ ಸೌಹಾರ್ದಮಯತೆ ಕಂಡಿದೆಯೆಂದಲ್ಲಿ ಅದು ಉತ್ಪ್ರೇಕ್ಷೆಯೆನಿಸದು. ಗಾತ್ರವನ್ನೂ ಸಂಪನ್ನತೆಯನ್ನೂ ಮಾತ್ರ ಪರಿಗಣಿಸಿದಲ್ಲಿ ಒಂದು ಮಾಮರ, ಇನ್ನೊಂದು ಕೋಗಿಲೆ ಎಂಬ ತಥ್ಯವನ್ನು ಅಲ್ಲಗಳೆಯಲಾಗದು. (ಅಮೆರಿಕ ಪ್ರಜೆಯ ಸರಾಸರಿ ಆದಾಯ ಭಾರತೀಯ ಪ್ರಜೆಯ ಆದಾಯದ ಎಂಟುಪಟ್ಟು ಇದೆ.) ಅದು ಹೇಗೇ ಇದ್ದರೂ ಎರಡೂ ದೇಶಗಳು ಪರಸ್ಪರ ಸ್ನೇಹಸಂಬಂಧವನ್ನು ವರ್ಧಿಸಿಕೊಳ್ಳಲು ಉತ್ಸುಕವಾಗಿರುವುದು ಹೌದು. ಇದು ನಿಚ್ಚಳವಾಗಿ ಪ್ರಕಟಗೊಂಡದ್ದು ಕಳೆದ (2019) ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದಾದ ಅಮೆರಿಕ ಪ್ರವಾಸದಲ್ಲಿ. ಸೆಪ್ಟೆಂಬರ್ 22ರಂದು ಟೆಕ್ಸಾಸ್ ಪ್ರಾಂತದ ಹೂಸ್ಟನಿನಲ್ಲಿ ನಡೆದ ಅಮೆರಿಕನಿವಾಸಿ ಭಾರತೀಯರ ಸಮಾವೇಶವಂತೂ ಅಭೂತಪೂರ್ವವೆನಿಸಿತು.
ಕೆಲವು ಸಂದರ್ಭಗಳು ಹೇಗಿರುತ್ತವೆಂದರೆ ಅಲ್ಲಿ ಆದ ನಡವಳಿಗಳಿಗಿಂತ ಅವುಗಳಿಂದ ರವಾನೆಯಾದ ಪ್ರಚ್ಛನ್ನ ಸಂದೇಶವೇ ಮಹತ್ತ್ವದ್ದಾಗುತ್ತದೆ. ಹೂಸ್ಟನಿನ ಎನ್.ಆರ್.ಜಿ. ಕ್ರೀಡಾಂಗಣದಲ್ಲಿ ನೆರೆದಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಉದ್ದೇಶಿಸಿ ನರೇಂದ್ರ ಮೋದಿಯವರು ಹೊಸದೇನನ್ನೋ ಹೇಳಿದರೆಂದಲ್ಲ. ನೆರೆದಿದ್ದವರಲ್ಲಿಯೂ ಅಂತಹ ನಿರೀಕ್ಷೆಯೇನಿರಲಿಲ್ಲ. ಅಲ್ಲಿ ಬಿತ್ತರಗೊಂಡ ಸಂದೇಶವೆಂದರೆ ಆ ಸಮಾವೇಶವೇ, ಅದರ ಅನನ್ಯತೆಯೇ!
ಹಲವು ವೈಶಿಷ್ಟ್ಯಗಳಂತೂ ಎಲ್ಲರ ಗಮನ ಸೆಳೆದವು. ಎಲ್ಲಿಯೂ ತಾವು ‘ಎರಡನೆ’ಯವರಾಗಿ ಕಾಣಿಸಿಕೊಳ್ಳಲು ಇಚ್ಛಿಸದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವಾಗಿ ‘ಹೌಡೀ ಮೋದಿ’ ಸಮಾವೇಶದಲ್ಲಿ ಭಾಗವಹಿಸಲು ಮುಂದಾದುದು; ಮೋದಿಯವರು ತಾವೇ ಆತಿಥೇಯರಾಗಿ ಟ್ರಂಪ್ರವರನ್ನು ಸ್ವಾಗತಿಸಿದುದು (“ಹಿಂದಿನ ಭೇಟಿಯಲ್ಲಿ ಟ್ರಂಪ್ ನನ್ನನ್ನು ತಮ್ಮ ಕುಟುಂಬಸದಸ್ಯರಿಗೆ ಪರಿಚಯ ಮಾಡಿದ್ದರು; ಇಂದು ಅವರಿಗೆ ಇಲ್ಲಿ ನೆರೆದಿರುವ ನನ್ನ ಕುಟುಂಬವನ್ನು ಪರಿಚಯ ಮಾಡುತ್ತಿದ್ದೇನೆ”); ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದ ಮೋದಿ ಉದ್ಗಾರ; ಟ್ರಂಪ್ರವರು ತಮ್ಮ ಭಾಷಣದಲ್ಲಿ ಮೋದಿಯವರ ಭಾವನೆಗಳನ್ನೇ ಪ್ರತಿಧ್ವನಿಸಿದುದು; – ಇವೆಲ್ಲ ಅಸಾಮಾನ್ಯ ಘಟನೆಗಳೇ ಆಗಿದ್ದವು.
ಪೋಪ್ ಹೊರತುಪಡಿಸಿ ಅಮೆರಿಕಕ್ಕೆ ಭೇಟಿನೀಡಿದ ಯಾವ ವಿದೇಶೀ ನಾಯಕರ ಸಮಾವೇಶಗಳಿಗೂ ಈ ಪ್ರಮಾಣದ ಜನಸ್ತೋಮ ಸೇರಿದ ದಾಖಲೆ ಇಲ್ಲ. ಅಮೆರಿಕದ ಆಂತರಿಕ ರಾಜಕೀಯದ ದೃಷ್ಟಿಯಿಂದಲೂ ಮೋದಿ ಸಮಾವೇಶ ಮಹತ್ತ್ವದ್ದೇ ಆಗಿತ್ತು. ಭಾರತಮೂಲದ ಅಮೆರಿಕದಲ್ಲಿನ ಸಮುದಾಯವು ಸಂಪನ್ನವೂ ಗಾತ್ರದಲ್ಲಿ ಗಣನೀಯವೂ ಆದದ್ದು. ಹೂಸ್ಟನಿನಲ್ಲಿ ನೆಲಸಿರುವ ಭಾರತೀಯರ ಸಂಖ್ಯೆಯೇ ಒಂದೂವರೆ ಲಕ್ಷದಷ್ಟು ಇದೆ.
ಯಾವುದೇ ಪ್ರತಿಕೂಲತೆಗಳನ್ನು ಲೆಕ್ಕಿಸದೆ ಮುಂದುವರಿಯುವ ಮೋದಿಯವರ ಪ್ರಚಂಡ ಆತ್ಮವಿಶ್ವಾಸವೂ ಅದೇ ಸ್ವಭಾವದ ಟ್ರಂಪ್ರ ಮೆಚ್ಚುಗೆಗೆ ಪಾತ್ರವಾಗಿದ್ದಿರಬಹುದು. ಇಸ್ಲಾಮೀ ಉಗ್ರವಾದದ ಹಿನ್ನೆಲೆಯಲ್ಲಿ ಅಮೆರಿಕ, ಭಾರತ ಎರಡು ದೇಶಗಳೂ ರಾಷ್ಟ್ರಸುರಕ್ಷಿತತೆಗೆ ಆದ್ಯತೆ ನೀಡಲೇಬೇಕಾಗಿದೆ – ಎಂದು ಟ್ರಂಪ್ ಹೇಳಿದುದು ಗಮನಸೆಳೆಯಿತು. ತಮ್ಮ ದೇಶದ ಹಿತಕ್ಕೆ ಆದ್ಯತೆ ಎಂಬುದು ಟ್ರಂಪ್ ಅವರ ಚುನಾವಣಾಪ್ರಚಾರದ ಪ್ರಮುಖ ಅಂಶವಾಗಿತ್ತೆಂಬುದನ್ನು ನೆನಪಿಸಿಕೊಳ್ಳಬಹುದು.
ವಾಣಿಜ್ಯದ ಸ್ತರದಲ್ಲಿ ಅಮೆರಿಕ-ಭಾರತಗಳ ನಡುವೆ ತ್ವಂಚಾಹಂಚಗಳು ಇತ್ತೀಚೆಗೂ ನಡೆದಿರುವುದು ಸಹಜ. ಹೀಗಿದ್ದರೂ ಅವುಗಳಿಂದ ಅತೀತವಾಗಿ ಕೊಡು-ಕೊಳ್ಳುವಿಕೆಯ ಸಾಧ್ಯತೆಗಳು ಇರುತ್ತವೆಂಬ ಎರಡೂ ದೇಶಗಳ ನಿಲವು ಆರೋಗ್ಯಕರ ಸಂಬಂಧದ ಸೂಚಕ. ಜಟಿಲವಾದ ಮತ್ತು ಆಳವಾಗಿ ಬೇರೂರಿದ ಸಿಕ್ಕುಗಳು ಒಂದು ಸಮಾವೇಶದಿಂದಲೋ ವೇದಿಕೆಭಾಷಣಗಳಿಂದಲೋ ಪರಿಹಾರವಾಗಿಬಿಡುತ್ತವೆಂದು ನಿರೀಕ್ಷಿಸಲಾಗದು. ಹೀಗಿದ್ದರೂ ಈಗಿನ ಅಮೆರಿಕ ಸರ್ಕಾರದ ಭಾರತದ ಬಗೆಗಿನ ಧೋರಣೆ ಹಿಂದಿನ ಸರಕಾರಗಳದ್ದಕ್ಕಿಂತ ಹೆಚ್ಚು ಸುಮುಖವೆನಿಸುವ ಸಂಕೇತಗಳು ಲಭ್ಯವಿವೆ.
ಒಂದು ಮಹತ್ತ್ವದ ಅಂಶವೆಂದರೆ ಇತ್ತೀಚಿನ ಜಮ್ಮು-ಕಾಶ್ಮೀರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ನೀತಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧವನ್ನು ಸಂಘಟಿಸುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ಖಾನರ ಪ್ರಯಾಸಗಳು ನಿಷ್ಫಲಗೊಂಡಿರುವುದು.
ಪಾಕಿಸ್ತಾನಕ್ಕೆ ಅಮೆರಿಕ ನೀಡಲು ಒಪ್ಪಿದ್ದ 1.3 ಬಿಲಿಯನ್ ಡಾಲರ್ ನೆರವನ್ನು ಕಳೆದ ವರ್ಷ ಪ್ರತಿಬಂಧಿಸಿತ್ತು. ಅದನ್ನು ಬಿಡುಗಡೆ ಮಾಡಲು ಪಾಕಿಸ್ತಾನದ ಕೋರಿಕೆ ಇದ್ದರೂ ಅಮೆರಿಕ ಇದುವರೆಗೆ ಸ್ಪಂದಿಸಿಲ್ಲ. ಅಮೆರಿಕ-ಪಾಕಿಸ್ತಾನ ನಂಟು ಹಳೆಯದು. ಹೀಗಾಗಿ ತಾಲಿಬಾನಿ ಶಕ್ತಿಗಳನ್ನು ಮಣಿಸುವುದರಲ್ಲಿ ಪಾಕಿಸ್ತಾನ ಕೆಲಸಕ್ಕೆ ಬಂದೀತೆಂದು ಅಮೆರಿಕ ನಿರೀಕ್ಷಿಸಿರಲೂಬಹುದು.
ಮೋದಿ ಕಾಶ್ಮೀರನೀತಿಯಿಂದ ಇಮ್ರಾನ್ಖಾನ್ ಚಿಂತಿತರಾಗಿದ್ದಾರೆಂದು ಮೋದಿಯೊಡನೆ ಮಾತುಕತೆಯಲ್ಲಿ ಟ್ರಂಪ್ ಪ್ರಸ್ತಾವಿಸದಿರಲಿಲ್ಲ.
ಅಮೆರಿಕ-ಭಾರತ ಸಂಬಂಧಗಳು ಇದೀಗ ಮೇಲ್ನೋಟಕ್ಕೆ ತೋರುವಷ್ಟು ಘನಿಷ್ಠವೂ ಅಲ್ಲ, ಹಿಂದಿನ ಅಮೆರಿಕಾಧ್ಯಕ್ಷರುಗಳ ಅಧಿಕಾರಾವಧಿಗಳಲ್ಲಿದ್ದಷ್ಟು ನಿರುತ್ಸಾಹಕರವೂ ಅಲ್ಲ – ಎಂಬುದು ವಾಸ್ತವಕ್ಕೆ ಹತ್ತಿರವಾದ ವಿಶ್ಲೇಷಣೆಯಾದೀತು.
ಅಮೆರಿಕದ ಭಾರತಪರ ಭಂಗಿ ತೋರಿಕೆ ಮಾತ್ರದ್ದೆಂದು ಪಾಕಿಸ್ತಾನದೊಳಗಿನ ಮಾಧ್ಯಮಗಳು ತಳ್ಳಿಹಾಕಿವೆ. ಆದರೆ ನಾಟಕ ಮಾಡಬೇಕಾದ ಪರಿಸ್ಥಿತಿ ಅಮೆರಿಕಕ್ಕೆ ಎಲ್ಲಿದೆ? ಯಾರು ಒಪ್ಪಲಿ ಬಿಡಲಿ ತಾವು ತಮಗನಿಸಿದಂತೆಯೇ ಮಾಡುವೆನೆಂಬ ದಾಢ್ರ್ಯವೇ ‘ಟ್ರಂಪಿಸಂ’ನ ಮುಖ್ಯ ಲಕ್ಷಣವೆಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ.
ಪಾಕಿಸ್ತಾನದ ಮಾತು ಹಾಗಿರಲಿ. ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಟ್ರಂಪ್ ಮುಂದಾದದ್ದು ಚೀನಾದಲ್ಲಿಯೂ ಕಲರವವನ್ನು ಸೃಷ್ಟಿಸಿತು. ಏಕೆಂದರೆ ಈ ಹಿಂದೆ ವಿದೇಶ ನೇತಾರರೊಬ್ಬರ ಕಾರ್ಯಕ್ರಮದಲ್ಲಿ ಅಮೆರಿಕಾಧ್ಯಕ್ಷರು ಖುದ್ದಾಗಿ ಭಾಗವಹಿಸಿದ ಉದಾಹರಣೆ ಇಲ್ಲ.
ಈ ‘ಮೋದಿ ಮೋಡಿ’ಯನ್ನು ಯಾರೂ ಅಲ್ಲಗಳೆಯುವಂತಿಲ್ಲ.