ನೈಋತ್ಯಮಾರುತಗಳು ಕರಾವಳಿ, ಪಶ್ಚಿಮಘಟ್ಟ ಮತ್ತು ಮಲೆನಾಡುಗಳಲ್ಲಿ ಧಾರಾಳ ಮಳೆ ಸುರಿಸುತ್ತವೆ. ಮಲೆನಾಡನ್ನು ದಾಟುವಷ್ಟರಲ್ಲಿ ಮೋಡಗಳಲ್ಲಿ ನೀರಿನ ಅಂಶ ಕಡಮೆಯಾಗಿ ಬಯಲುಸೀಮೆ ಪ್ರದೇಶದಲ್ಲಿ ಮಳೆ ತುಂಬ ಕಡಮೆ ಮತ್ತು ಅನಿಶ್ಚಿತವಾಗುತ್ತದೆ. ಒಟ್ಟಿನಲ್ಲಿ ಜಗತ್ತಿನಲ್ಲಿ ಏನೇನೋ ಬದಲಾವಣೆಗಳಾಗುತ್ತಿವೆ; ನಮ್ಮಮಟ್ಟಿಗೆ ಮಳೆ ಆಗಬೇಕೆಂದರೆ ಪಶ್ಚಿಮಘಟ್ಟವನ್ನು ಸುಭದ್ರವಾಗಿ ರಕ್ಷಿಸಬೇಕು. ಅಲ್ಲಿ ಮಾನವ ಚಟುವಟಿಕೆಯನ್ನು ಆದಷ್ಟು ಕಡಮೆ ಮಾಡಬೇಕು. ಅದು ಸಂರಕ್ಷಿತ ಪ್ರದೇಶವಾಗಿ ಇರಬೇಕು.
ಪಶ್ಚಿಮಘಟ್ಟಕ್ಕೆ ಸಹ್ಯಾದ್ರಿ ಪರ್ವತಶ್ರೇಣಿ ಎಂದೂ ಹೆಸರಿದೆ. ಜಗತ್ತಿನಲ್ಲಿ ಜೀವವೈವಿಧ್ಯದಲ್ಲಿ ಶ್ರೀಮಂತವಾಗಿರುವ ಸ್ಥಳ(ಪ್ರದೇಶ)ಗಳನ್ನು ಜೀವವೈವಿಧ್ಯದ ಹಾಟ್ಸ್ಪಾಟ್ಗಳೆಂದು ಕರೆಯುತ್ತಾರೆ. ಒಂದು ಪಟ್ಟಿಯ ಪ್ರಕಾರ ಜಗತ್ತಿನಲ್ಲಿ 25 ಅಂಥ ಹಾಟ್ಸ್ಪಾಟ್ಗಳಿದ್ದರೆ ಇನ್ನೊಂದು ಪಟ್ಟಿಯ ಪ್ರಕಾರ 34 ಇವೆ. ಅದರಲ್ಲಿ ನಾಲ್ಕು ಹಾಟ್ಸ್ಪಾಟ್ಗಳು ಭಾರತದಲ್ಲಿವೆ: 1) ಹಿಮಾಲಯ 2) ಭಾರತ-ಬರ್ಮಾ ಪ್ರದೇಶ (ಈಶಾನ್ಯ ಭಾರತ) 3) ಪಶ್ಚಿಮಘಟ್ಟ ಮತ್ತು 4) ಅಂಡಮಾನ್-ನಿಕೋಬಾರ್ ದ್ವೀಪಗಳು. 25 ಹಾಟ್ಸ್ಪಾಟ್ಗಳಲ್ಲಿ ಎಂಟು ಅತಿ ಬೆಚ್ಚಗಿನ (hottest) ಹಾಟ್ಸ್ಪಾಟ್ಗಳೆನಿಸಿವೆ. ಪಶ್ಚಿಮಘಟ್ಟವು ಅವುಗಳಲ್ಲೊಂದು.
ಪಶ್ಚಿಮಘಟ್ಟ ಅಥವಾ ಸಹ್ಯಾದ್ರಿ ಶ್ರೇಣಿ ಉತ್ತರದಿಂದ ದಕ್ಷಿಣಕ್ಕೆ 1,600 ಕಿ.ಮೀ. ಉದ್ದವಿದೆ. ಸುಮಾರಾಗಿ ಉತ್ತರದಲ್ಲಿ ತಪತಿ ನದಿಯಿಂದ ಆರಂಭವಾಗುವ ಅದು ದಕ್ಷಿಣದಲ್ಲಿ ಕನ್ಯಾಕುಮಾರಿ ಸಮೀಪದ ವರೆಗೆ ವಿಸ್ತರಿಸಿದೆ; ಸಾಮಾನ್ಯವಾಗಿ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಇದೆ. ಪಶ್ಚಿಮಘಟ್ಟ ಪ್ರದೇಶದ ವಿಸ್ತೀರ್ಣ 1.40 ಲಕ್ಷ ಚದರ ಕಿ.ಮೀ. ಎಂದು ಗುರುತಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಇದು ಹಾದುಹೋಗುತ್ತದೆ; ತಮಿಳುನಾಡಿನ ಕನ್ಯಾಕುಮಾರಿ ಸಮೀಪ ಮುಕ್ತಾಯಗೊಳ್ಳುತ್ತದೆ.
ಪಶ್ಚಿಮಘಟ್ಟವು ಇತಿಹಾಸಪೂರ್ವ ಕಾಲದಿಂದಲೇ ಇತ್ತು. ಮೊದಲು ಗೊಂಡವಾನಾ ಲ್ಯಾಂಡ್ ಒಂದೇ ಭೂಭಾಗ ಇತ್ತು. ಅದರಲ್ಲಿ ಆಫ್ರಿಕಾ, ಭಾರತಗಳೆಲ್ಲ ಸೇರಿಕೊಂಡಿದ್ದವು; ಮುಂದೆ ಅದು ಒಡೆದು ದೂರಸರಿದು ಭಾರತ ಜಂಬೂದ್ವೀಪ (ಪರ್ಯಾಯ ದ್ವೀಪ) ರಚನೆಯಾಯಿತು. ಆಗಿನಿಂದಲೇ ಪಶ್ಚಿಮಘಟ್ಟ ಇತ್ತೆಂದು ನಂಬಲಾಗಿದೆ.
ಮಳೆ – ಕಾಡುಗಳ ಸಂಬಂಧ
ಪಶ್ಚಿಮಘಟ್ಟ ಪ್ರದೇಶವು ಜೀವವೈವಿಧ್ಯದಲ್ಲಿ ಶ್ರೀಮಂತವಾಗಿರಲು ಕಾರಣವೆಂದರೆ ಅಲ್ಲಿ ತುಂಬ ಮಳೆ ಬೀಳುತ್ತದೆ. ವರ್ಷದಲ್ಲಿ ಸಾಧಾರಣ 400 ಸೆಂ.ಮೀ.ಗಿಂತ ಜಾಸ್ತಿ ಮಳೆ ಬೀಳುತ್ತದೆ; ಅದರಲ್ಲಿ ವ್ಯತ್ಯಾಸವಿದ್ದು, ಉತ್ತರಕ್ಕೆ ಹೋದಂತೆ ಮಳೆ ಕಡಮೆಯಾಗುತ್ತದೆ; ದಕ್ಷಿಣದಲ್ಲಿ ಮಳೆ ಜಾಸ್ತಿ. ದಕ್ಷಿಣದ ಭಾಗವು ಉಷ್ಣವಲಯದಲ್ಲಿದ್ದರೆ ಉತ್ತರದ ಭಾಗವು ಸಮಶೀತೋಷ್ಣವಲಯದಲ್ಲಿದೆ. ಗುಜರಾತ್, ಮಹಾರಾಷ್ಟ್ರಗಳ ಭಾಗದಲ್ಲಿ ಮಳೆ ಕಡಮೆ ಇದ್ದರೆ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಮಳೆ ಅಧಿಕ. ಮಳೆ ಹೆಚ್ಚಾಗಿರುವ ಕಾರಣ ಅಲ್ಲಿನ ವಾತಾವರಣದಲ್ಲಿ ಆದ್ರ್ರತೆ ಇರುತ್ತದೆ; ಮಳೆ ಹೆಚ್ಚಿದ್ದಾಗ ಆದ್ರ್ರತೆಯು ಹೆಚ್ಚು. ಆದಕಾರಣ ಅಲ್ಲಿ ವಿಪುಲವಾದ ಸಸ್ಯಸಂಪತ್ತಿದ್ದು, ಅದು ಜೀವವೈವಿಧ್ಯದ ಅತಿ ಬೆಚ್ಚಗಿನ ಹಾಟ್ಸ್ಪಾಟ್ ಆಗಿದೆ.
ಒಂದು ಅಂದಾಜಿನ ಪ್ರಕಾರ ಪಶ್ಚಿಮಘಟ್ಟದಲ್ಲಿ ಒಟ್ಟು 7,402 ಹೂಬಿಡುವ ಸಸ್ಯಜಾತಿಗಳಿವೆ; ಮತ್ತು 1,814 ಹೂಬಿಡದ ಸಸ್ಯಜಾತಿಗಳಿವೆ. ಅದಲ್ಲದೆ ಬಹಳಷ್ಟು ಫಂಗೈ (ಶಿಲೀಂಧ್ರ, ಬೂಸ್ಟು) ಮತ್ತು ಮಶ್ರೂಮ್(ಅಣಬೆ, ನಾಯಿಕೊಡೆ)ಗಳಿವೆ. ಅವುಗಳ ಸಂಖ್ಯೆ ಸರಿಯಾಗಿ ಸಿಗುತ್ತಿಲ್ಲ; ಮತ್ತು ಅವುಗಳನ್ನು ಪೂರ್ತಿ ಸಸ್ಯ ಎನ್ನಲಾಗದು. ಫಂಗೈ ಸಸ್ಯವೇ. ಒಟ್ಟು 7,402 ಸಸ್ಯಗಳಲ್ಲಿ 5,588 ಸ್ಥಳೀಯ ಸಸ್ಯಗಳಾದರೆ 376 ವಿವಿಧ ಕಾಲಗಳಲ್ಲಿ ಹೊರಗಿನಿಂದ ಬಂದಂಥವು; ಮತ್ತು 1,438 ಬೆಳೆಸಿದಂಥವು; ಅದರಲ್ಲಿ ಕಾಫಿ, ಚಹಾ, ಅಡಿಕೆ, ಔಷಧೀಯ ಸಸ್ಯಗಳೆಲ್ಲ ಸೇರುತ್ತವೆ. ಸ್ಥಳೀಯ ಸಸ್ಯಗಳಲ್ಲಿ 2,100 ಇಲ್ಲಿ ಮಾತ್ರ ಇರುವಂಥವು (endemic). ಪಶ್ಚಿಮಘಟ್ಟದಲ್ಲಿ ಅಂತಹ ತುಂಬ ಸಸ್ಯಗಳಿದ್ದು ಇಲ್ಲಿ ಅವು ಅಳಿದರೆ ಜಗತ್ತಿನಿಂದಲೇ ಅಳಿದುಹೋದಂತೆ.
ಆರು ಬಗೆಯ ಕಾಡು
ಪಶ್ಚಿಮಘಟ್ಟದಲ್ಲಿರುವ ಸಸ್ಯಗಳನ್ನು ಮುಖ್ಯವಾಗಿ ಆರು ರೀತಿಯವೆಂದು ವಿಭಾಗಿಸಲಾಗುತ್ತದೆ:
- ಸದಾ ಹಸಿರೆಲೆ ಅಥವಾ ನಿತ್ಯಹರಿದ್ವರ್ಣದ ಸಸ್ಯಗಳು.
- ಅರೆ ನಿತ್ಯಹರಿದ್ವರ್ಣ ಅಥವಾ ಮಾಯಿಸ್ಟ್ ಡೆಸಿಡ್ಯೂವಸ್ (ಎಲೆ ಉದುರಿಸುವ ಆರ್ದ್ರ ಸಸ್ಯಜಾತಿ).
- ಶೋಲಾ ಸಸ್ಯಗಳು.
- ಹುಲ್ಲುಗಾವಲು ಸಸ್ಯಗಳು.
- ಎಲೆ ಉದುರಿಸುವ ಒಣ ಪ್ರದೇಶದ ಸಸ್ಯಗಳು (dry decidious).
- ಕುರುಚಲು ಗಿಡಗಳು.
ಸದಾ ಹಸಿರೆಲೆಯ ಕಾಡುಗಳು ಹೆಚ್ಚು ಮಳೆ ಬೀಳುವ ಪಶ್ಚಿಮಘಟ್ಟದ ಪಶ್ಚಿಮ ಭಾಗದಲ್ಲಿವೆ; ಅದಕ್ಕೆ ಗಾಳಿಗೆ (ಮಳೆ ಮಾರುತ) ಎದುರಾದ ಬದಿ (windward side) ಎಂದು ಹೇಳುತ್ತಾರೆ. ಮಳೆಮಾರುತವು ಮೊದಲು ಹೊಡೆಯುವುದೇ ಪಶ್ಚಿಮ ಭಾಗಕ್ಕೆ.
ಮುಖ್ಯವಾಗಿ ಅಲ್ಲಿ ಮಾತ್ರ ಸದಾ ಹಸಿರೆಲೆಯ ಕಾಡುಗಳಿರುತ್ತವೆ. ಘಟ್ಟದ ಪೂರ್ವಭಾಗದಲ್ಲಿ (ಮಲೆನಾಡು) ಅಂತಹ ಮರಗಳ ಕಾಡುಗಳಿದ್ದರೂ ತುಂಬಾ ಕಡಮೆ. ಪಶ್ಚಿಮಘಟ್ಟದ ಪಶ್ಚಿಮ ಭಾಗದ ಬುಡದಲ್ಲಿ ಮತ್ತು ಪೂರ್ವದ ಮಲೆನಾಡಿನ ಭಾಗದಲ್ಲಿ ಎಲೆ ಉದುರಿಸುವ ಆದ್ರ್ರ ಕಾಡುಗಳಿರುತ್ತವೆ.
ಘಟ್ಟದ ತುಂಬ ಎತ್ತರದ ಜಾಗಗಳಲ್ಲಿ ಶೋಲಾ ಅರಣ್ಯವಿದೆ. ಅಲ್ಲಿನ ತುಂಬ ಎತ್ತರದ ಸ್ಥಳಗಳಲ್ಲಿ ಹುಲ್ಲು ಮುಂತಾದ ಶೋಲಾ ಸಸ್ಯಗಳಿದ್ದರೆ ಕಣಿವೆಭಾಗದಲ್ಲಿ ಮರಗಳು ಬೆಳೆದಿರುತ್ತವೆ. ಅದಕ್ಕೆ ವ್ಯಾಲಿ ವೆಜಿಟೇಶನ್ ಎಂದು ಕೂಡಾ ಹೇಳುತ್ತಾರೆ. ಅಲ್ಲಿಯ ಕಣಿವೆಭಾಗದಲ್ಲಿ ತುಂಡುತುಂಡಾಗಿ ನಿತ್ಯಹರಿದ್ವರ್ಣ ಸಸ್ಯಗಳಿದ್ದರೆ ಉಳಿದ ಎತ್ತರದ ಭಾಗದಲ್ಲಿ ಹುಲ್ಲುಗಾವಲಿರುತ್ತದೆ. ಅರ್ಧದಷ್ಟು ಹುಲ್ಲುಗಾವಲಾದರೆ ಉಳಿದ ಅರ್ಧಭಾಗ ನಿತ್ಯಹರಿದ್ವರ್ಣ ಮರಗಳು. ಕುದುರೆಮುಖ, ನೀಲಗಿರಿ, ಕೊಡೈಕೆನಾಲ್ ಮುಂತಾದ ಎತ್ತರದ ಸ್ಥಳಗಳು ಶೋಲಾ ಕಾಡಿಗೆ ಹೆಸರಾಗಿವೆ.
ಪಶ್ಚಿಮಘಟ್ಟದಲ್ಲಿ ಸಹಜವಾದ (ಟಿಪಿಕಲ್) ಹುಲ್ಲುಗಾವಲಿಲ್ಲ. ಅಮೆರಿಕ, ಆಫ್ರಿಕಾ(ಸವನ್ನಾ)ದಂತಹ ಹುಲ್ಲುಗಾವಲನ್ನು ಇಲ್ಲಿ ಕಾಣಲಾಗದು. ಏಕೆಂದರೆ ಹುಲ್ಲುಗಾವಲಿಗೆ ಬೇಕಾದ ವಿಶಾಲವಾದ ಸಮತಟ್ಟು ಜಾಗ ಇಲ್ಲಿಲ್ಲ. ನಿರ್ಮಾಣ ಕಾರ್ಯ, ಅಣೆಕಟ್ಟು, ರಸ್ತೆ ನಿರ್ಮಾಣ, ಗಣಿಗಾರಿಕೆ, ಕಲ್ಲು ಕಡಿಯುವುದು ಮುಂತಾದ ಕಾರಣಗಳಿಗೆ ಮರಗಳನ್ನು ಕಡಿದಾಗ ಅಲ್ಲಿ ಹುಲ್ಲು ಹುಟ್ಟಿಕೊಂಡು ಬೆಳೆಯುತ್ತದೆ; ಅದೇ ಇಲ್ಲಿನ ಹುಲ್ಲುಗಾವಲು. ಎಲೆ ಉದುರುವ ಮರಗಳ ಒಣಪ್ರದೇಶ ಇರುವುದು ಪಶ್ಚಿಮಘಟ್ಟದ ಪೂರ್ವಭಾಗದಲ್ಲಿ. ಪಶ್ಚಿಮಘಟ್ಟವು ದಖ್ಖನ್ ಪೀಠಭೂಮಿಯೊಂದಿಗೆ (ಬಯಲುಸೀಮೆ) ವಿಲೀನ ಆಗುತ್ತದೆ. ಎಲೆ ಉದುರುವ ಒಣಕಾಡಿನ (ಡ್ರೈ ಡೆಸಿಡ್ಯೂವಸ್) ಆಚೆಗೆ ಕುರುಚಲು ಗಿಡಗಳ ಭೂಭಾಗ ಇರುತ್ತದೆ. ಇದನ್ನು ಘಟ್ಟದ ಪೂರ್ವಭಾಗದಲ್ಲಿ ಕಾಣಬಹುದು. ಪಶ್ಚಿಮಘಟ್ಟ ಮತ್ತು ದಖ್ಖನ್ ಪೀಠಭೂಮಿಗಳು ವಿಲೀನವಾಗುವ ಪ್ರದೇಶವನ್ನು ಪರಿವರ್ತನಾ ವಲಯ (Transitional Zone) ಎಂದು ಕೂಡ ಕರೆಯುತ್ತಾರೆ; ಕುರುಚಲು ಗಿಡಗಳೇ ಅಲ್ಲಿ ಹೆಚ್ಚು.
ಬೆಳಕು ಬೀಳದ ಕಾಡು
ನಿತ್ಯಹರಿದ್ವರ್ಣದ ಕಾಡು ಅತ್ಯಂತ ದಟ್ಟವಾದ ಅರಣ್ಯವಾಗಿರುತ್ತದೆ; ಅದು ಮುಚ್ಚಿದ ಆವರಣದಂತಿರುತ್ತದೆ (canopy close). ಮರಗಳು ಪರಸ್ಪರ ಅಂಟಿಕೊಂಡಂತೆ ಇರುತ್ತವೆ; ಬಳ್ಳಿಗಳು ಹಬ್ಬಿರುತ್ತವೆ. ಅದು ಎಷ್ಟೊಂದು ದಟ್ಟವಾಗಿರುತ್ತದೆ ಎಂದರೆ ಸೂರ್ಯನ ಬೆಳಕು ನೇರವಾಗಿ ಕೆಳಗೆ ಬೀಳುವುದೇ ಇಲ್ಲ. ಇನ್ನು ಈ ಕಾಡಿನಲ್ಲಿ ಮರಗಳು ಸಾಮಾನ್ಯವಾಗಿ ಮೂರು ಅಂತರಗಳನ್ನು (ಲೇಯರ್) ನಿರ್ಮಿಸುತ್ತವೆ; ಅಲ್ಲಿ ಪ್ರಮುಖವಾಗಿ ಮೂರು ಬಗೆಯ ಮರಗಳು ಇರುತ್ತವೆ. ಎತ್ತರದ ಮರಗಳದ್ದು ಮೊದಲ ಲೇಯರ್; ಮಧ್ಯಮ ಎತ್ತರದ ಮರಗಳದ್ದು ಎರಡನೇ ಲೇಯರ್; ಹಾಗೂ ಗಿಡ್ಡಮರಗಳದ್ದು ಮೂರನೇ ಲೇಯರ್. ಮರಗಳು ತಾವಾಗಿಯೇ ಈ ರೀತಿ ಮೂರು ಅಂತರಗಳನ್ನು ನಿರ್ಮಿಸಿಕೊಂಡಿರುತ್ತವೆ. ಇವು tall, medium ಮತ್ತು dwarf ಮರಗಳು. ಮೂರು ಲೇಯರ್ನ ಕೆಳಗೆ ಪೆÇದೆಗಳಿದ್ದು ಅದು ನಾಲ್ಕನೇ ಲೇಯರ್.
ಎಲೆ, ಗೆಲ್ಲು, ಕಸಕಡ್ಡಿಗಳಿಂದ ನಿತ್ಯಹರಿದ್ವರ್ಣ ಕಾಡಿನ ನೆಲವೆಲ್ಲ ಸಂಪೂರ್ಣ ಮುಚ್ಚಿರುತ್ತದೆ. ಎಲೆಗಳು ರಾಶಿರಾಶಿಯಾಗಿ ಬಿದ್ದು ಕೊಳೆಯುತ್ತಿರುತ್ತವೆ. ಅದರಲ್ಲಿ ಫಂಗೈಗಳೇ ಹೆಚ್ಚು. ಕೆಲವು ಮ್ಯಾಕ್ರೋ (ಸ್ಥೂಲ) ಫಂಗೈಗಳಾದರೆ ಉಳಿದವು ಮೈಕ್ರೋ (ಸೂಕ್ಷ್ಮ) ಫಂಗೈಗಳು. ಅವಕ್ಕೆ ಬೆಳೆಯಲು ಬಿಸಿಲು ಬೇಡ. ಈ ಕಾಡಿನ ನೆಲ ಪೂರ್ತಿ ಕವರ್ ಆಗಿಕೊಂಡೇ ಇರುತ್ತದೆ. ಇಲ್ಲಿನ ಮಣ್ಣು ಮುಚ್ಚಿಕೊಂಡಿದ್ದು ಹೊರ ವಾತಾವರಣಕ್ಕೆ ತೆರೆದುಕೊಂಡಿರುವುದಿಲ್ಲ. ತರಗೆಲೆ, ಕೊಂಬೆ-ರಂಬೆಗಳೆಲ್ಲ ಬಿದ್ದು ಕೊಳೆಯುತ್ತಿರುತ್ತವೆ. ಅಲ್ಲಿ ಫಂಗೈ, ಪರೋಪಜೀವಿ ಸಸ್ಯಗಳು, ಅಣಬೆ ಎಲ್ಲವೂ ಇರುತ್ತವೆ.
ಸೆಮಿ-ಎವರ್ಗ್ರೀನ್ ಅಥವಾ ಮಾಯಿಸ್ಟ್ ಡೆಸಿಡ್ಯೂವಸ್ ಕಾಡಿನಲ್ಲಿ ಯಾವಾಗಲೂ ಎಲೆ ಉದುರಿಸುವ ಎವರ್ಗ್ರೀನ್ ಮರಗಳೂ ಇರುತ್ತವೆ; ಅರೆ ಸದಾ ಹಸಿರು ಮರಗಳೂ ಇರುತ್ತವೆ; ಮೊದಲು ಹೇಳಿದ ನಾಲ್ಕು ಲೇಯರ್ಗಳು ಅಲ್ಲಿ ಕಾಣುವುದಿಲ್ಲ. ಡ್ರೈ ಡೆಸಿಡ್ಯೂವಸ್ ಕಾಡಿನಲ್ಲಿ ಹೆಚ್ಚಾಗಿ ಎಲೆ ಉದುರಿಸುವ ಮರಗಳೇ ಇರುತ್ತವೆ. ಅವು ವರ್ಷಕ್ಕೊಮ್ಮೆ ಪೂರ್ತಿಯಾಗಿ ಎಲೆ ಉದುರಿಸುವ ಮರಗಳು. ಚಳಿಗಾಲದಲ್ಲಿ ಎಲೆ ಉದುರಿಸುವುದು ಆರಂಭವಾಗುತ್ತದೆ. ಎಲೆ ಉದುರಿಸುವ ಆದ್ರ್ರ ಕಾಡಿನಲ್ಲಿ ಸದಾ ಹಸಿರಿನ ಮರಗಳು ಕೂಡ ಇರುವ ಕಾರಣ ಅದನ್ನು ಸೆಮಿ-ಎವರ್ಗ್ರೀನ್ ಎನ್ನಲಾಗುತ್ತದೆ. ಡ್ರೈ ಡೆಸಿಡ್ಯೂವಸ್ನಲ್ಲಿ ಹೆಚ್ಚಿನವು ಎಲೆ ಉದುರಿಸುವ ಮರಗಳು. ಉದಾಹರಣೆಗೆ ಕೊಡಗಿನ ಗಡಿಭಾಗದ ಕುಶಾಲನಗರದಲ್ಲಿ ಡ್ರೈ ಡೆಸಿಡ್ಯೂವಸ್ ಕಾಡನ್ನು ನೋಡಬಹುದು. ಅಲ್ಲಿ ಸಾಗುವಾನಿಯಂತಹ ಮರಗಳೇ ಹೆಚ್ಚಾಗಿ ಇರುತ್ತವೆ. ಪಲಾಶ (ಮುತ್ತುಗ) ಕೂಡ ಆ ಭಾಗದಲ್ಲಿರುವ ಒಂದು ಮರ.
ಉಳಿದಂತೆ ಪಶ್ಚಿಮಘಟ್ಟದಲ್ಲಿ ತುಂಬ ಔಷಧೀಯ ಸಸ್ಯ(ಗಿಡಮೂಲಿಕೆ)ಗಳು ಇವೆ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಪಶ್ಚಿಮಘಟ್ಟದಲ್ಲಿರುವ ಗಿಡಮೂಲಿಕೆಗಳು ಅಧಿಕವೆಂದೇ ಹೇಳಬೇಕು. ಲೋದ್ರ, ಜ್ಯೋತಿಷ್ಮತಿ, ನಾಮದ ಬೇರು ಮುಂತಾಗಿ ಅವು ಇಲ್ಲಿ ಧಾರಾಳವಾಗಿ ಲಭ್ಯವಾಗಿವೆ.
ನದಿಗಳ ಉಗಮಸ್ಥಾನ
ಇನ್ನು ಪಶ್ಚಿಮಘಟ್ಟವು ದೇಶದ ದಕ್ಷಿಣಭಾಗದ ನದಿಗಳ ಜಲಾನಯನ ಪ್ರದೇಶವಾಗಿದೆ. ನರ್ಮದಾ, ತಪತಿ, ಶರಾವತಿ, ಕೃಷ್ಣಾ, ಗೋದಾವರಿ, ತುಂಗಭದ್ರಾ, ಕಾವೇರಿ, ನೇತ್ರಾವತಿ ನದಿಗಳೆಲ್ಲ ಹುಟ್ಟುವುದು ಪಶ್ಚಿಮಘಟ್ಟದಲ್ಲಿ. ಇವುಗಳಲ್ಲಿ ಕೃಷ್ಣಾ, ಗೋದಾವರಿ, ತುಂಗಭದ್ರಾ ಮುಂತಾದವು ಪೂರ್ವಕ್ಕೆ ಹರಿಯುತ್ತವೆ. ಪಶ್ಚಿಮಘಟ್ಟದ ಕಾರಣದಿಂದಾಗಿ ಅವುಗಳಿಗೆ ಪಶ್ಚಿಮದಿಕ್ಕಿಗೆ ಹರಿಯಲು ಸಾಧ್ಯವಾಗುವುದಿಲ್ಲ. ಆದರೆ ಅವುಗಳ ಜಲಾನಯನ ಪ್ರದೇಶವು ಪಶ್ಚಿಮಘಟ್ಟದಲ್ಲೇ ಇರುವುದು. ಘಟ್ಟದ ತಡೆಯಿಂದಾಗಿ ಅವು ಪೂರ್ವಕ್ಕೆ ಹರಿದು ಹೋಗುತ್ತವೆ. ದೇಶದ ಬಹಳಷ್ಟು ದೊಡ್ಡ ಪ್ರಮುಖ ನದಿಗಳಿಗೆ ಪಶ್ಚಿಮಘಟ್ಟವೇ ಉಗಮಸ್ಥಾನವಾಗಿದೆ. ಪಶ್ಚಿಮಘಟ್ಟದಲ್ಲಿ ದಟ್ಟ ಕಾಡುಗಳಿದ್ದು ಧಾರಾಳ ಮಳೆಯಾಗುತ್ತದೆ. ಅಲ್ಲಿ ಒಟ್ಟಾದ ನೀರು ಪಶ್ಚಿಮ ಅಥವಾ ಪೂರ್ವ ದಿಕ್ಕಿಗೆ ಹರಿಯುತ್ತದೆ. ಮೈದಾನ (ಬಯಲುಸೀಮೆ) ಪ್ರದೇಶದಲ್ಲಿ ಮಳೆ ಕಡಮೆಯಾದ್ದರಿಂದ ಬಹಳ ಉಪಯುಕ್ತವಾದ ರೀತಿಯಲ್ಲಿ ಅವು ಹರಿಯುತ್ತವೆ; (ಬಂಗಾಳಕೊಲ್ಲಿಯತ್ತ ಹರಿಯುವುದರಿಂದ ಬಹಳಷ್ಟು ದೂರ ಮತ್ತು ವಿಶಾಲಪ್ರದೇಶದಲ್ಲಿ ಹರಿಯುತ್ತವೆ). ಪಶ್ಚಿಮಕ್ಕೆ ಹರಿಯುವ ನದಿಗಳು ಅಷ್ಟೊಂದು ಪ್ರಮುಖವಾಗಿಲ್ಲ; ಅವುಗಳಲ್ಲಿ ಹೆಚ್ಚಿನವು ಸಣ್ಣ ನದಿಗಳು. ಇಳಿಜಾರು ಜಾಗ ಪೂರ್ವಭಾಗದಲ್ಲಿ ಜಾಸ್ತಿ ಇರುವ ಕಾರಣ ಅಲ್ಲಿ ಜಲಾನಯನ ಪ್ರದೇಶ ತುಂಬ ಸಿಗುತ್ತದೆ. ಅದಕ್ಕೆ ಹೋಲಿಸಿದರೆ ಪಶ್ಚಿಮದಲ್ಲಿ ಕಡಮೆ; ಪಶ್ಚಿಮದ ನದಿಗಳು ಸಣ್ಣವಾಗಲು ಅದೇ ಕಾರಣ ಎನ್ನಬಹುದು.
‘ಕಂಡುಹಿಡಿದ ಸಸ್ಯಗಳು ಆರು’
ನನ್ನ ಅಧ್ಯಯನ ಮುಖ್ಯವಾಗಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳು – ಅಂದರೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ. ನಾನು ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ತ್ರ ವಿಭಾಗಕ್ಕೆ ಅಧ್ಯಾಪಕನಾಗಿ ಸೇರಿದ ಮೇಲೆ (1971) ಅಂದಿನ ದಕ್ಷಿಣಕನ್ನಡ ಜಿಲ್ಲೆಯ ಸಸ್ಯಗಳನ್ನು ಸಂಗ್ರಹಿಸುತ್ತಲೇ ಇದ್ದೆ. ಅದನ್ನೆಲ್ಲ ದಾಖಲು ಮಾಡಿ ‘Flora of Udupi’ (ಉಡುಪಿ ಜಿಲ್ಲೆಯ ಸಸ್ಯಪ್ರಭೇದಗಳು) ಎನ್ನುವ ಗ್ರಂಥವನ್ನು ಪ್ರಕಟಿಸಿದೆ. ಅದರಲ್ಲಿ 2,100 ಪ್ರಭೇದಗಳನ್ನು ದಾಖಲಿಸಿದ್ದೇನೆ. ಆಮೇಲೆ ಅದೇ ಕೆಲಸವನ್ನು ವಿಸ್ತರಿಸಿ ‘Flora of South Kanara’ ಎನ್ನುವ ಗ್ರಂಥವನ್ನು ಪ್ರಕಟಿಸಿದೆ. ಅದರಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 2,888 ಸಸ್ಯಜಾತಿಗಳನ್ನು ದಾಖಲು ಮಾಡಿದ್ದೇನೆ.
ನಾನು ಪಶ್ಚಿಮಘಟ್ಟದ ಈ ಭಾಗದ ಸಸ್ಯಗಳನ್ನು ದಾಖಲಿಸಿದ್ದೇನೆ. ಅದೇ ರೀತಿ ಬೇರೆ ಜಿಲ್ಲೆಗಳದ್ದು ಕೂಡ ಇದೆ. ಸಸ್ಯಜಾತಿಗಳ ಒಟ್ಟು ಸಂಖ್ಯೆಯನ್ನು ಅದೇ ರೀತಿ ಕಂಡುಹಿಡಿಯಲಾಗುತ್ತದೆ. ಪಶ್ಚಿಮಘಟ್ಟದ ವ್ಯಾಪ್ತಿಗೆ ಬರುವ ಬೇರೆ ಬೇರೆ ಅಧ್ಯಯನಗಳನ್ನು ಒಟ್ಟು ಸೇರಿಸಿ ಇಡೀ ಪ್ರದೇಶದ ಒಟ್ಟು ಸಂಖ್ಯೆಯನ್ನು ಕಂಡುಹಿಡಿಯಲಾಗುತ್ತದೆ. ಅದು ಜಿಲ್ಲಾವಾರಾಗಿ ನಡೆದಿದೆ. ಉತ್ತರಕನ್ನಡ ಜಿಲ್ಲೆಗೆ ಸಂಬಂಧಿಸಿ ಈ ಕೆಲಸವನ್ನು ಧಾರವಾಡ ವಿಶ್ವವಿದ್ಯಾಲಯದವರು ಮಾಡಿದ್ದಾರೆ; ಮುಖ್ಯವಾಗಿ ಜಿ.ಆರ್. ಹೆಗಡೆ ಅವರು. ಆದರೆ ಅವರ ಗ್ರಂಥ (Flora of North Kanara) ಪ್ರಕಟವಾಗಿಲ್ಲ. Flora of Hasan District ಬಂದಿದೆ. ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನ ಫಾ| ಸಲ್ದಾನಾ ಅವರು ಆ ಕೆಲಸವನ್ನು ಮಾಡಿದ್ದಾರೆ. ಅದೇ ಮೊತ್ತಮೊದಲು ಪ್ರಕಟವಾದ ಜಿಲ್ಲಾ ಸಸ್ಯಸಂಪತ್ತಿನ ಗ್ರಂಥ. ಅನಂತರ ಡಾ| ಬಿ.ಬಿ. ರಾಸಿ ಮತ್ತು ರಾಘವೇಂದ್ರರಾವ್ ‘ಫ್ಲೋರಾ ಆಫ್ ಮೈಸೂರು’ ಪ್ರಕಟಿಸಿದರು. ಕಾಸರಗೋಡು ಭಾಗದ್ದನ್ನು ಕಣ್ಣಾನೂರು ವಿಶ್ವವಿದ್ಯಾಲಯದವರು ಮಾಡಿದ್ದಾರೆ. ಈಗ ಉತ್ತರಕನ್ನಡದ್ದು ಬಿಟ್ಟು ಬಹುತೇಕ ಎಲ್ಲ ಜಿಲ್ಲೆಗಳ ಫ್ಲೋರಾ ಗ್ರಂಥಗಳು ಬಂದಿವೆ. ಉತ್ತರಕನ್ನಡ ಜಿಲ್ಲೆಯವರು ಪ್ರಬಂಧಗಳನ್ನು ಮಾಡಿದ್ದಾರೆ; ಒಟ್ಟು ಸೇರಿಸಿ ಗ್ರಂಥವಾಗಿ ಪ್ರಕಟವಾಗಿಲ್ಲ, ಅಷ್ಟೆ.
ನಾನು ಮೊದಲಿಗೆ ಉಡುಪಿ ಜಿಲ್ಲೆಯದನ್ನು ಪ್ರಕಟಿಸಿದೆ; ಬಳಿಕ ಎರಡೂ ಜಿಲ್ಲೆಗಳದ್ದು ಸೇರಿಸಿ ಅವಿಭಜಿತ ದ.ಕ. ಜಿಲ್ಲೆಯ ಬಗೆಗಿನ ಪುಸ್ತಕ ಮಾಡಿದೆ; ಮತ್ತು ಗಮನಾರ್ಹ ಅಂಶವೆಂದರೆ, ಈ ಎರಡೂ ಜಿಲ್ಲೆಗಳ ಸಸ್ಯಗಳಿಗೆ ಹೆಚ್ಚು ವ್ಯತ್ಯಾಸವಿಲ್ಲ. ಈಗ ‘ಫ್ಲೋರಾ ಆಫ್ ಸೌತ್ ಕೆನರಾ’ವನ್ನು ಪರಿಷ್ಕರಿಸಿ, ಮರುಮುದ್ರಣ ಮಾಡುವ ಕೆಲಸದಲ್ಲಿ ತೊಡಗಿದ್ದೇನೆ. 3-4 ತಿಂಗಳಿನಲ್ಲಿ ಆಗಬಹುದು. ಹಿಂದಿನ ಆವೃತ್ತಿಯ ಎಲ್ಲ ಪ್ರತಿಗಳು ಖರ್ಚಾಗಿವೆ. ಆ ಮುದ್ರಣದ ಬಳಿಕ ನಾನು ನೋಡಿದ ಗಿಡಗಳನ್ನು ಸೇರಿಸುತ್ತಿದ್ದೇನೆ. ಮತ್ತೆ ಕೆಲವು ಸಸ್ಯಗಳು ರೆಕಾರ್ಡ್ ಆಗಿವೆ, ಬೇರೆಯವರು ರೆಕಾರ್ಡ್ ಮಾಡಿದ್ದು. ಅದನ್ನೆಲ್ಲ ಸೇರಿಸಿ ಮಾಡುತ್ತಿದ್ದೇನೆ.
ಈಚೆಗೆ ಕಳೆದ ಹತ್ತು ವರ್ಷಗಳಲ್ಲಿ ನನಗೆ ಯಾವುದೇ ಹೊಸ ಸಸ್ಯ ಸಿಕ್ಕಿಲ್ಲ. ಫ್ಲೋರಾ ಆಫ್ ಸೌತ್ ಕೆನರಾ ಮಾಡುತ್ತಿದ್ದಾಗ ಪುತ್ತೂರು ಸಮೀಪದ ಪಾಣಾಜೆ ಕಡೆಯ ಒಂದು ಹೊಸ ಪ್ರಭೇದ ಸಿಕ್ಕಿತ್ತು. ‘ಕಾಂಬ್ರಿಟಂ ರಾಸಿಯಾನಂ’ ಎಂದು ಅದನ್ನು ಹೆಸರಿಸಲಾಗಿದೆ. ಪಾಣಾಜೆ ವೈದ್ಯರಾದ ದಿ| ವೆಂಕಟ್ರಾಮ ದೈತೋಟ ಅವರೇ ನನಗೆ ತೋರಿಸಿದ್ದು. ಅವರ ಮನೆ ಸಮೀಪವೇ ಇತ್ತು. ನಾನು ಕಂಡುಹಿಡಿದು ಹೆಸರಿಟ್ಟ ಮೇಲೆ ಈಗ ಅದು ಪಶ್ಚಿಮಘಟ್ಟ ಮತ್ತು ಕೇರಳದಿಂದೆಲ್ಲ ರೆಕಾರ್ಡ್ ಆಗಿದೆ; ನಾನು ಕಂಡುಹಿಡಿದದ್ದು ಅದೇ ಕೊನೆಯದು; ಆ ಬಳಿಕ ಹೊಸ ಸಸ್ಯ ಸಿಕ್ಕಿಲ್ಲ.
‘ನ್ಯೂ ರೆಕಾರ್ಡ್ ಟು ಇಂಡಿಯ’ (ಭಾರತದಲ್ಲಿ ಹೊಸದಾಗಿ ಕಂಡದ್ದು) ವಿಭಾಗದಲ್ಲಿ ಒಂದು ಸಿಕ್ಕಿದೆ. ಅದು ಭಾರತಕ್ಕೆ ಹೊರಗಿನಿಂದ ಬಂದ ಸಸ್ಯ (exotic). ಯಾವಾವುದೋ ರೀತಿಯಲ್ಲಿ ಗಿಡಗಳು ದೇಶಕ್ಕೆ ಹೊರಗಿನಿಂದ ಬರುತ್ತಾ ಇರುತ್ತವೆ. ಆ ರೀತಿಯಲ್ಲಿ ಸಿಕ್ಕಿದ ‘ಕುಟ್ರಲೇರಿಯ ಗೋವರೇಸಿಸ್’ ಅನ್ನು ಭಾರತದಲ್ಲಿ ನಾನೇ ಮೊದಲಿಗನಾಗಿ ದಾಖಲು ಮಾಡಿದೆ. ಆಫ್ರಿಕಾದಿಂದ ಬಂದ ಅದು ನನಗೆ ಉಡುಪಿಯಲ್ಲಿ ರೈಲುಮಾರ್ಗದ ಹತ್ತಿರ ಸಿಕ್ಕಿತು. ಅದಕ್ಕೆ ಮುನ್ನ ಭಾರತದಲ್ಲಿ ಯಾರೂ ಅದನ್ನು ಗುರುತಿಸಿರಲಿಲ್ಲ. ನಾನು ಗುರುತಿಸಿ ವರದಿ ಮಾಡಿದಾಗ ಅದು ನ್ಯೂ ರೆಕಾರ್ಡ್ ಟು ಇಂಡಿಯ ಎಂದಾಯಿತು.
ಭಾರತಕ್ಕೆ ಆ ಗಿಡ ಬಂದದ್ದು ಹೆಚ್ಚು ಹಿಂದೆ ಇರಲಾರದು. ಸುಮಾರು 30 ವರ್ಷಗಳ ಹಿಂದೆ ಅದು ಅಲ್ಲಿ ಇದ್ದಿರಲಿಕ್ಕಿಲ್ಲ. ಆಫ್ರಿಕಾದಿಂದ ಅದು ಯಾವುದಾದರೂ ಆಹಾರಧಾನ್ಯದ ಜೊತೆಗೆ ಬಂದಿರಬಹುದು; ಅಥವಾ ಆಫ್ರಿಕಾದಿಂದ ಯಾರಾದರೂ ಬರುವಾಗ ಅವರ ಬಟ್ಟೆಯಲ್ಲಿಯೋ ಬ್ಯಾಗಿನಲ್ಲಿಯೋ ಬಂದಿರಬಹುದು. ಹೀಗೆಯೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಅದು ಅಂತಹ ಉಪಯೋಗ ಇರುವ ಗಿಡ ಕೂಡ ಅಲ್ಲ. ಹೇಗೋ ಅಕಸ್ಮಾತ್ ಬಂದಿರಬೇಕು. ಅದು ಗುಂಪಾಗಿ (ಬುಶ್) ಬೆಳೆಯುವ ಸಣ್ಣ ಗಿಡ. ಹರ್ಬ್ (ಮೂಲಿಕೆ) ಅಂತಲೂ ಅನ್ನಬಹುದು. ಸೀಸನಲ್ ಆದ ಅದು ಮಳೆಗಾಲದಲ್ಲಿ ಹುಟ್ಟಿ ಹೂ-ಕಾಯಿ ಎಲ್ಲ ಆಗಿ ಇಲ್ಲವಾಗುತ್ತದೆ; ಮತ್ತೆ ಮುಂದಿನ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ.
ನಾನು ಕಂಡುಹಿಡಿದ ಒಟ್ಟು ಸಸ್ಯಗಳು ಆರು. ಮೊದಲಿನದ್ದು ‘ಪಾರಾಕೌಟ್ಲಿಯ’; ಕೊನೆಯದ್ದು ‘ಕಾಂಬ್ರಿಟಂ ರಾಸಿಯಾನಂ’. ಮೊದಲಿನದ್ದು ಕಂಡುಹಿಡಿದದ್ದು ತುಂಬ ಹಿಂದೆ. 1976ರಲ್ಲಿ ಅದು ನನಗೆ ಸಿಕ್ಕಿತು; 1977ರಲ್ಲಿ ನಾಮಕರಣ ಮಾಡಲಾಯಿತು. ನನ್ನ ಪೂರ್ತಿ ಸೇವೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯಿತು. ಎಂ.ಎಸ್ಸಿ. ಮಾಡಿ ಇಲ್ಲೇ ಸೇರಿದ್ದು; 2005ರಲ್ಲಿ ನಿವೃತ್ತನಾದೆ.
ಮಣ್ಣಿನ ಫಲವತ್ತತೆ
ಮಣ್ಣನ್ನು ಫಲವತ್ತಾಗಿಸುವಲ್ಲಿ ಪಶ್ಚಿಮಘಟ್ಟವು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಇಲ್ಲಿ ಎರಡು-ಮೂರು ರೀತಿಯ ಮಣ್ಣಿದೆ. ಪಶ್ಚಿಮಭಾಗದಲ್ಲಿ ಹೆಚ್ಚಾಗಿ ಕೆಂಪು ಮಣ್ಣಿದ್ದರೆ ಪೂರ್ವಭಾಗದಲ್ಲಿ ಬಹಳಷ್ಟು ಕಪ್ಪು ಮಣ್ಣು ಇದೆ (Block cotton soil); ಮತ್ತು ನದಿಗಳ ಬದಿಯಲ್ಲಿ ಫಲವತ್ತಾದ ಮೆಕ್ಕೆಮಣ್ಣಿದೆ. ಅದು ನದಿಯ ನೀರಿನೊಂದಿಗೆ ಬಂದು ಎರಡೂ ಕಡೆ ಸಂಗ್ರಹವಾದಂಥವು. ಹೊೈಗೆ, ಕೆಂಪುಮಣ್ಣು, ಕೊಳೆತ ಎಲೆ, ಕಸ-ಕಡ್ಡಿ ಇವೆಲ್ಲ ಸೇರಿ ಮೆಕ್ಕೆಮಣ್ಣು ತಯಾರಾಗಿರುತ್ತದೆ. ಅದು ತುಂಬ ಫಲವತ್ತಾದದ್ದು. ಏಕೆಂದರೆ ಕೊಳೆತ ಎಲೆಗಳು-ಮಣ್ಣು ಎಲ್ಲ ಸೇರಿ ಅದೊಂದು ಉತ್ತಮ ಮಿಶ್ರಣವಾಗಿರುತ್ತದೆ.
ಈ ಭಾಗದ ಸದಾ ಹಸಿರೆಲೆಯ ಕಾಡುಗಳು ವರ್ಷವಿಡೀ ಎಲೆ ಉದುರಿಸುತ್ತಿದ್ದು, ಅವು ಮರದ ಬುಡದಲ್ಲಿ ಯಾವಾಗಲೂ ಕೊಳೆಯುತ್ತಿರುತ್ತವೆ. ಇದಕ್ಕೆ ಹೋಲಿಸಿದರೆ ವರ್ಷಕ್ಕೊಮ್ಮೆ ಎಲೆ ಉದುರಿಸುವ ಮರಗಳ ಕೊಡುಗೆ ಸೀಮಿತವಾದದ್ದು. ಇದರೊಂದಿಗೆ ಆ ಭಾಗದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಮರದಿಂದ ಬಿದ್ದ ಎಲೆಗಳು ಯಾವಾಗಲೂ ಕೊಳೆಯುತ್ತಿರುತ್ತವೆ. ಮಳೆ ಕಡಮೆಯಾಗಿ ಎಲೆಗಳಿಗೆ ನೀರು ಸಿಗದಿದ್ದರೆ ಅವು ಒಣಗಿಹೋಗುವ ಅಪಾಯವಿರುತ್ತದೆ. ಅಲ್ಲಿರುವ ಫಂಗೈ ಮುಂತಾದವುಗಳಿಗೆ ಬೆಳೆಯಲು ಆದ್ರ್ರತೆ ಬೇಕು. ಆದ್ರ್ರತೆ ಇಲ್ಲದಿದ್ದರೆ ಫಂಗೈ ಕಡಮೆ. ಫಂಗೈ ಮಣ್ಣಿಗೆ ಬಹಳ ಅಗತ್ಯ; ಏಕೆಂದರೆ ಎಲೆ ಮುಂತಾದವೆಲ್ಲ ಕೊಳೆಯುವುದೆಲ್ಲ ಫಂಗೈ, ಬ್ಯಾಕ್ಟೀರಿಯಾ ಮುಂತಾದವುಗಳ ಕಾರಣದಿಂದ. ಅವುಗಳ ಚಟುವಟಿಕೆಗೆ ಮಣ್ಣಿನಲ್ಲಿ ಆದ್ರ್ರತೆ ಇರಲೇಬೇಕು. ಫಂಗೈ, ಬ್ಯಾಕ್ಟೀರಿಯಾ ಮುಂತಾದವನ್ನು ಅವು ಮಾಡುವ ಕೆಲಸದ ಕಾರಣದಿಂದ ಡಿಕಂಫೋಸರ್ಸ್ ಎಂದು ಕರೆಯುತ್ತಾರೆ. ಅವು ಇಲ್ಲವಾದರೆ ಮರದಿಂದ ಬಿದ್ದ ಎಲೆಗಳು ಕೊಳೆಯದೆ ಹಾಗೆ ಬಿದ್ದು ರಾಶಿಯಾಗುತ್ತವೆ; ಮಣ್ಣು ಫಲವತ್ತಾಗುವುದಿಲ್ಲ; ಪಶ್ಚಿಮಘಟ್ಟದ ಮಣ್ಣಂತೂ ತುಂಬ ಫಲವತ್ತಾಗಿದೆ.
ಮಳೆ ಅಧಿಕವಾಗಿರುವ ಕಾರಣ ಪಶ್ಚಿಮಘಟ್ಟದಲ್ಲಿ ಶ್ರೇಷ್ಠಮಟ್ಟದ ಆದ್ರ್ರತೆ ಇರುತ್ತದೆ; ಬೇಸಿಗೆಯಲ್ಲಿ ಕೂಡ ಅಲ್ಲಿನ ಮಣ್ಣು ತಂಪಾಗಿರುತ್ತದೆ. ಅಲ್ಲಿ ವರ್ಷದ ಏಳೆಂಟು ತಿಂಗಳು ಮಳೆ ಬರುತ್ತದೆ. ಉತ್ತಮ ಮಳೆ ಬರಿಸುವಲ್ಲಿ ಪಶ್ಚಿಮಘಟ್ಟದ ಪಾತ್ರ ಮಹತ್ತ್ವದ್ದು. ಮಳೆ ಮಾರುತಕ್ಕೆ (ಮಾನ್ಸೂನ್) ಅದೊಂದು ಬ್ರೇಕ್ ಕೊಡುತ್ತದೆ. ನೈಋತ್ಯದಿಂದ ಬರುವ ಮಾನ್ಸೂನ್ ಮೋಡಗಳನ್ನು ತೆಗೆದುಕೊಂಡು ಬರುತ್ತದೆ. ಘಟ್ಟದ ಭಾಗಕ್ಕೆ ಬರುವಾಗ ಮೋಡ ತಂಪಾಗಿ ಮಳೆಯಾಗುತ್ತದೆ. ಮೋಡಗಳು ಕಂಡೆನ್ಸ್ (ಕ್ರೋಡೀಕರಣ) ಆಗಿ ಮಳೆ ಬರುವುದಕ್ಕೆ ಪಶ್ಚಿಮಘಟ್ಟ ಕಾರಣವಾಗುತ್ತದೆ. ಅದು ಇಲ್ಲದಿದ್ದರೆ ಮೋಡಗಳು ಚದುರಿ ಎತ್ತೆತ್ತಲೋ ಹೋಗಬಹುದು. ಮೋಡಕ್ಕೆ ತಂಪಾಗಿ ಮಳೆ ಬರುವುದೂ ಇಲ್ಲ. ಮರಗಳಿಂದಾಗಿ ಮೋಡಗಳು ತಂಪಾಗುತ್ತವೆ. ಮರಗಳ ಪಾತ್ರ ಇರುವುದು ಅಲ್ಲೇ. ಪಶ್ಚಿಮಘಟ್ಟಕ್ಕೆ ಬಂದೊಡನೆ ಮೋಡಗಳು ತಂಪಾಗುತ್ತವೆ. ಮೋಡ ತಂಪಾದ ಕೂಡಲೇ ಸಹಜವಾಗಿ ಮಳೆಯಾಗುತ್ತದೆ. ಈ ರೀತಿ ಮಳೆಯನ್ನು ಹೆಚ್ಚಿಸುವುದು ಪಶ್ಚಿಮಘಟ್ಟದ ಒಂದು ಮುಖ್ಯವಾದ ಕೆಲಸ.
ಅಕೇಶಿಯಾದಿಂದ ಹಾನಿ
ಆದರೆ ಅದಕ್ಕೆ ಭಂಗತರುವ ಪ್ರವೃತ್ತಿ ಈಚಿನ ವರ್ಷಗಳಲ್ಲಿ ಕಂಡುಬರುತ್ತಿದೆ. ಅದರಲ್ಲಿ ಬಹಳಷ್ಟು ಹಾನಿಯಾಗುತ್ತಿರುವುದು ಅಕೇಶಿಯಾ ಮೊದಲಾದ ಮರಗಳಿಂದ. ಏಕೆಂದರೆ ಅಕೇಶಿಯಾ ಬೆಳೆದಲ್ಲಿ ಬೇರೆ ಯಾವ ಗಿಡವೂ ಬೆಳೆಯುವುದಿಲ್ಲ. ಇನ್ನೊಂದು ಅಂಶವೆಂದರೆ, ಅದರಿಂದ ಅಂತರ್ಜಲದ ಮಟ್ಟ ಕೆಳಗೆ ಹೋಗುತ್ತದೆಂದು ಹೇಳುತ್ತಾರೆ. ಮಣ್ಣಿನ ಫಲವತ್ತತೆಯು ಕಡಮೆಯಾಗುತ್ತದೆ. ಏಕೆಂದರೆ ಅಕೇಶಿಯಾದ ಎಲೆಗಳು ಬೇಗ ಕೊಳೆಯುವುದಿಲ್ಲ. ಇನ್ನು ಅದರಲ್ಲಿ ಹಣ್ಣುಗಳು ವಿಶೇಷ ಏನೂ ಆಗುವುದಿಲ್ಲ; ಪ್ರಾಣಿ-ಪಕ್ಷಿಗಳಿಗೆ ಹಣ್ಣು ಸಿಗುವುದಿಲ್ಲ. ಅದೇ ನಮ್ಮ ಸ್ಥಳೀಯ ಮರಗಳ ಕಾಡು ಆದಲ್ಲಿ ಅಲ್ಲಿ ತುಂಬ ಜಾತಿಯ ಮರಗಳಿರುತ್ತವೆ; ಕಾಡುಪ್ರಾಣಿಗಳಿಗೆ (ಪಕ್ಷಿ ಸಹಿತ) ಬೇಕಾದ ಆಹಾರ ಸಿಗುತ್ತದೆ. ಅಕೇಶಿಯಾ ಬೆಳೆಸಿದರೆ ಅದೇನೂ ಸಿಗದಿರುವ ಕಾರಣ ಅಲ್ಲಿ ಪ್ರಾಣಿ-ಪಕ್ಷಿಗಳ ಚಟುವಟಿಕೆ ತುಂಬಾ ಕಡಮೆ ಆಗುತ್ತದೆ.
ಪ್ರಾಣಿ-ಪಕ್ಷಿಗಳ ಚಟುವಟಿಕೆಯು ಕಾಡಿಗೆ ತುಂಬ ಅಗತ್ಯ. ಸಸ್ಯಗಳ ಬೀಜಪ್ರಸಾರದಲ್ಲಿ ಅವುಗಳ ಪಾತ್ರ ತುಂಬಾ ದೊಡ್ಡದು; ಅದಲ್ಲದೆ ಅವುಗಳ ಹಿಕ್ಕೆ ಬಿದ್ದು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ; ಒಂದು ಮಾದರಿ ಕಾಡೆಂದರೆ ಅಲ್ಲಿ ಮರಗಳು ಬೇಕು; ಪೊದೆಗಳು ಬೇಕು; ಪ್ರಾಣಿ-ಪಕ್ಷಿಗಳು ಬೇಕು. ಅಕೇಶಿಯಾ ಬೆಳೆದರೆ ಒಂದು ಕೃತಕ ಕಾಡಿನಂತೆ ಮಾತ್ರ ಆಗುತ್ತದೆ. ಅದು ನಿಜವಾದ ಕಾಡಲ್ಲ. ಅಲ್ಲಿ ಸಹಜ ಕಾಡಿನಲ್ಲಿರುವಂತೆ ಮೂರು ಲೇಯರ್ಗಳು ಇರುವುದಿಲ್ಲ. ಅಕೇಶಿಯಾ ಮರಗಳು ಒಂದೇ ರೀತಿ, ಸಮವಸ್ತ್ರದಂತೆ. ನೀಲಗಿರಿ ಬೆಳೆದರೂ ಅದೇ ಕಥೆ. ಅವುಗಳನ್ನು ಬೆಳೆದಾಗ ತಂಪೆಲ್ಲ ಹೋಗುತ್ತದೆ; ಆದ್ರ್ರತೆ ಉಳಿಯುವುದಿಲ್ಲ. ಸ್ಥಳೀಯ ಸಸ್ಯಗಳ ಕಾಡಾದರೆ ತಂಪಾಗಿ ಮೋಡದಿಂದ ಮಳೆ ಸುರಿಯುತ್ತದೆ. ಅಕೇಶಿಯಾ, ನೀಲಗಿರಿಗಳಿಂದ ಆ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ. ಅಂತರ್ಜಲಮಟ್ಟ ಕೆಳಗೆ ಹೋಗುವುದರಿಂದ ಕಾಡಿನಲ್ಲಿ ನೀರು ಕಡಮೆಯಾಗುತ್ತದೆ. ಪಶ್ಚಿಮಘಟ್ಟದಿಂದ ನೀರು ಬರುವುದು ಕಡಮೆ ಆಗುತ್ತದೆ.
ಮಾನವನ ಆಕ್ರಮಣ
ಇನ್ನೊಂದು ಬದಲಾವಣೆ ಎಂದರೆ ಪಶ್ಚಿಮಘಟ್ಟದಲ್ಲಿ ಮಾನವನ ಚಟುವಟಿಕೆ ತುಂಬ ಹೆಚ್ಚಾಗಿದೆ. ಆಣೆಕಟ್ಟು ನಿರ್ಮಿಸುತ್ತಾರೆ; ರಸ್ತೆಗಳನ್ನು ಮಾಡುತ್ತಾರೆ; ಕಲ್ಲು ಕಡಿಯುತ್ತಾರೆ. ಕಾಫಿ-ಟೀ ಎಸ್ಟೇಟ್ಗಳನ್ನು ವಿಸ್ತರಿಸುತ್ತಾರೆ. ಕೃಷಿಯ ವಿಸ್ತರಣೆಗಾಗಿ ಮರಗಳನ್ನು ಕಡಿಯುತ್ತಾರೆ.
ಮಾಧವ್ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ – ಹೀಗೆ ಪಶ್ಚಿಮಘಟ್ಟದ ಸಂರಕ್ಷಣೆಯ ಬಗ್ಗೆ ಯಾವ ಕ್ರಮ ಕೈಗೊಂಡರೂ ಜನರಿಂದ ವಿರೋಧ ಬರುತ್ತಿದೆ. ಏಕೆಂದರೆ ಮಾನವನ ಯಾವ ಚಟುವಟಿಕೆ ನಡೆದರೂ ಅಲ್ಲಿ ಮೊದಲಿಗೆ ಆಗುವುದೇ ಮರಗಳನ್ನು ಕಡಿಯುವುದು. ಈಗೀಗ ಪಶ್ಚಿಮಘಟ್ಟದಲ್ಲೆಲ್ಲ ‘ಹೋಂ ಸ್ಟೇ’ ಮತ್ತು ಅಂತಹ ಕೆಲವು ಚಟುವಟಿಕೆಗಳೂ ಶುರು ಆಗಿವೆ. ಅವನ್ನು ಮಾಡಬೇಕಿದ್ದರೆ ಮರಗಳನ್ನು ಕಡಿಯಲೇಬೇಕು. ಮನುಷ್ಯನ ವಾಸ್ತವ್ಯ ಇದೆ ಎಂದಾದರೆ ಅವನ ಮನೆಗೆ ಹೋಗಲು ಮಾರ್ಗ (ರಸ್ತೆ) ಬೇಕು ಮುಂತಾಗಿ ಆರಂಭವಾಗುತ್ತದೆ. ಈ ರೀತಿಯಲ್ಲಿ ಈಗ ಅರಣ್ಯ ತುಂಬಾ ನಾಶವಾಗುತ್ತಿದೆ. ಇದರಿಂದಾಗಿ ಪಶ್ಚಿಮಘಟ್ಟದ ಕೆಲವು ಸಸ್ಯಜಾತಿಗಳು ಪೂರ್ತಿ ನಾಶವಾಗಿಹೋಗಬಹುದು. ಏಕೆಂದರೆ ಕೆಲವು ಸಸ್ಯಗಳು ಜಗತ್ತಿನ ಒಂದು ನಿರ್ದಿಷ್ಟ ಜಾಗದಲ್ಲಿ ಮಾತ್ರ ಉಳಿಯುತ್ತವೆ. ಇದಕ್ಕೊಂದು ತಾಜಾ ಉದಾಹರಣೆಯನ್ನು ಕೊಡುವುದಾದರೆ, ನಾನು ಕಂಡುಹಿಡಿದ ಸಸ್ಯ ‘ಪಾರಾಕೌಟ್ಲೀಯ ಭಟ್ಟೀಯೆ’ ಇದುವರೆಗೆ ಜಗತ್ತಿನಲ್ಲಿ ಉಡುಪಿ ಜಿಲ್ಲೆಯಿಂದ ಮಾತ್ರ ರೆಕಾರ್ಡ್ ಆಗಿತ್ತು. ಅದರಲ್ಲೂ ಮಣಿಪಾಲ, ಕಾರ್ಕಳದ ಗೊಮ್ಮಟ ಬೆಟ್ಟ, ಮತ್ತು ಉಡುಪಿ ಹೊರವಲಯದ ಅಲೆವೂರು – ಈ ಮೂರು ಸ್ಥಳಗಳಲ್ಲಿ ಮಾತ್ರ ಕಂಡುಬಂದಿತ್ತು. ಮಣಿಪಾಲದಲ್ಲಿ ಈಗ ಅದು ಇಲ್ಲವೇ ಇಲ್ಲ. ಏಕೆಂದರೆ ಅಲ್ಲಿ ತುಂಬ ಕಟ್ಟಡಗಳು ಬಂದವು; ಒಳಗೊಳಗೆ ಕೂಡ ರಸ್ತೆಗಳು ನಿರ್ಮಾಣವಾದವು. ಅದರಿಂದಾಗಿ ಆ ಸಸ್ಯ ಮಣಿಪಾಲದಲ್ಲಿ ಇಲ್ಲವಾಗಿದೆ. ಅದು ಮಳೆಗಾಲದಲ್ಲಿ ಮಾತ್ರ ಇರುವ ಒಂದು ಸಣ್ಣ ಗಿಡ. ಜೂನ್ ವೇಳೆಗೆ ಕಾಣಿಸಿಕೊಂಡು ಅಕ್ಟೋಬರ್-ನವೆಂಬರ್ ಹೊತ್ತಿಗೆ ಸತ್ತುಹೋಗುತ್ತದೆ; ಗಡ್ಡೆ ಮಣ್ಣಿನೊಳಗಿದ್ದು, ಮುಂದಿನ ಮಳೆಗಾಲದಲ್ಲಿ ಪುನಃ ಹುಟ್ಟಿಕೊಳ್ಳುತ್ತದೆ. ಮಣಿಪಾಲದಲ್ಲೀಗ ಅದು ನಶಿಸಿಹೋಗಿದೆ. ಇನ್ನು ಕಾರ್ಕಳ ಮತ್ತು ಅಲೆವೂರಿನದ್ದು ಕೂಡ ನಶಿಸಿಹೋದರೆ ಆ ಸಸ್ಯಜಾತಿ ಪೂರ್ತಿ ಅಳಿದಂತಾಗುತ್ತದೆ. ಈ ರೀತಿ ಮಾನವನ ಚಟುವಟಿಕೆಗಳಿಂದ ಅದೆಷ್ಟೋ ಸಸ್ಯಗಳು ನಾಶವಾಗುತ್ತಲೇ ಇವೆ. ಪಶ್ಚಿಮಘಟ್ಟದಲ್ಲೀಗ ಎಷ್ಟೋ ಸಸ್ಯಗಳು ಅದೇ ರೀತಿ ಆಗುತ್ತಿರಬಹುದು. ಅದಲ್ಲದೆ ಈ ಫಂಗೈನಂತಹ ಸಸ್ಯಗಳು ಇಲ್ಲವಾದರೆ ನಮಗೆ ಗೊತ್ತಾಗುವುದೇ ಇಲ್ಲ. ಏಕೆಂದರೆ ಮೈಕ್ರೋ ಫಂಗೈಗಳು ಕಣ್ಣಿಗೆ ಕಾಣದಂಥವು. ಸಾಂಪ್ರದಾಯಿಕ ಅರಣ್ಯದ ಬದಲು ಅಕೇಶಿಯಾ ಮತ್ತು ಅಂತಹದ್ದೇ ಏಕಸಸ್ಯ ಕಾಡುಗಳು (ಮಾನೋಕಲ್ಚರ್) ಬಂದಾಗ ಬಹಳಷ್ಟು ಸಸ್ಯಜಾತಿಗಳು ಇಲ್ಲವಾಗುವುದು ನಿಶ್ಚಿತ. ಅದೇ ರೀತಿ ಆಣೆಕಟ್ಟುಗಳು ನಿರ್ಮಾಣಗೊಂಡು ಮುಳುಗಡೆಯಾದಾಗ ಎಷ್ಟೋ ಪ್ರದೇಶ ಮುಳುಗಡೆಯಾಗಿಹೋಗುತ್ತದೆ. ಆಗ ಅಲ್ಲಿನ ಎಲ್ಲ ಗಿಡಗಳು ನಾಶವಾಗುತ್ತವೆ. ಲಿಂಗನಮಕ್ಕಿ ಆಣೆಕಟ್ಟು ಮತ್ತದರ ವಿಶಾಲ ಪ್ರದೇಶದ ಮುಳುಗಡೆಯಿಂದ ಪಶ್ಚಿಮಘಟ್ಟದ ಎಷ್ಟೋ ಸಸ್ಯಪ್ರಭೇದಗಳು ನಾಶವಾಗಿರಲೇ ಬೇಕು. ಅಲ್ಲಿಂದ ಆರಂಭಗೊಂಡು ಅದು ನಡೆಯುತ್ತಲೇ ಇದೆ.
ಕುದುರೆಮುಖ ಅರಣ್ಯ ನಾಶ: ಪರಿಹಾರ
ಮಾನವಚಟುವಟಿಕೆ ಅಥವಾ ಉದ್ಯಮದ ಕಾರಣದಿಂದ ಒಂದು ಪ್ರದೇಶದ ಅರಣ್ಯ ನಾಶವಾದರೆ ಅದನ್ನು ಹಿಂದಿನ ಸ್ಥಿತಿಗೆ ತರುವುದು ತೀರಾ ಕಷ್ಟ. ಆದರೂ ವ್ಯವಸ್ಥಿತವಾದ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಅಲ್ಲಿ ಸಹಜ ಅರಣ್ಯವನ್ನು ಬೆಳೆಸಲು ಪ್ರಯತ್ನಿಸಬಹುದು. ಈಗ ಮುಖ್ಯವಾಗಿ (ಗಣಿಗಾರಿಕೆಯಿಂದ ಅರಣ್ಯ ನಾಶವಾದ) ಕುದುರೆಮುಖದಲ್ಲಿ ಮಾಡಬೇಕಾದದ್ದೆಂದರೆ, ಅಲ್ಲಿ ಹಿಂದೆ ಯಾವ ಜಾತಿಯ ಮರಗಳಿದ್ದವು ಎಂಬುದನ್ನು ತಿಳಿದುಕೊಂಡು ಆ ಜಾತಿಯ ಗಿಡಗಳನ್ನು ತಂದು ನೆಡಬಹುದು. ಬೇರೆ ಯಾವುದೇ ಮರಗಳನ್ನು ಅಲ್ಲಿ ಬೆಳೆಸಬಾರದು. ಈಗ ಅಲ್ಲಿ ತುಂಬ ಅಕೇಶಿಯಾ ಬೆಳೆಸಿದ್ದಾರೆ; ಅದನ್ನೆಲ್ಲ ಕಡಿದು ತೆಗೆಯಬೇಕು. ಅದರ ಬದಲು ಬೇರೆ ಸ್ಥಳೀಯ ಸಸ್ಯಗಳನ್ನು ಬೆಳೆಸಬೇಕು; ಅಲ್ಲಲ್ಲಿ ಕೆಲವು ಗಿಡಗಳನ್ನು ನೆಟ್ಟರೆ ಮತ್ತೆ ಅಲ್ಲಿ ಕಾಡು ತಾನಾಗಿಯೇ ಬೆಳೆಯುತ್ತದೆ. ಹೀಗೆ ನೆಟ್ಟರೂ ಸರಿ; ಅಥವಾ ಮಾನವ ಚಟುವಟಿಕೆ ಇಲ್ಲದಂತೆ ಅದರಷ್ಟಕ್ಕೆ ಬಿಟ್ಟರೂ ಆಗುತ್ತದೆ. ಏನಿದ್ದರೂ ಅಕೇಶಿಯಾ, ನೀಲಗಿರಿ ಇಂಥದ್ದೆಲ್ಲ ನೆಡಬಾರದು. ಸ್ಥಳೀಯ ಸಸ್ಯ ಬೇರೆ ಬೇರೆ ಜಾತಿಯ ಗಿಡಗಳನ್ನು ನೆಟ್ಟು ಬೆಳಸಬಹುದು.
ಇನ್ನು ಅಲ್ಲಿನ ಶೋಲಾಕಾಡಿನ ಪ್ರದೇಶದ ನಿರ್ವಹಣೆಯಲ್ಲೂ ಎಚ್ಚರವಹಿಸಬೇಕು. ಸಹಜ ಶೋಲಾಕಾಡಿನ ಶೇ. 50 ಭಾಗದಲ್ಲಿ ಹುಲ್ಲುಗಾವಲಿದ್ದರೆ ಉಳಿದ ಶೇ. 50 ಭಾಗದ ಕೊರಕಲಿನಲ್ಲಿ (ಕಣಿವೆ) ಮರಗಳಿರುತ್ತವೆ. ಮಾದರಿ ಹುಲ್ಲು ಇರುವಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬಾರದು. ಏಕೆಂದರೆ ಅಲ್ಲಿನ ಕಾಟಿ, ಜಿಂಕೆಯಂತಹ ಕಾಡುಪ್ರಾಣಿಗಳಿಗೆ ಹುಲ್ಲು ಬೇಕು. ಅಲ್ಲಿ ಮರಗಳು ಬೆಳೆಯುವುದಿಲ್ಲ. ಆದರೂ ಕಷ್ಟಪಟ್ಟು ಬೆಳೆಸಿದರೆ ಹುಲ್ಲುಗಾವಲು ಇಲ್ಲವಾಗಿ ಆ ಕಾಡುಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ. ಅಲ್ಲಿನ ಕಣಿವೆ ಭಾಗದಲ್ಲಿ ಮರಗಳು ಇರಬೇಕು; ಅಲ್ಲಿ ಗಿಡ ನೆಟ್ಟು ಮರ ಬೆಳೆಸಬಹುದು. ಮುಖ್ಯ ವಿಷಯವೆಂದರೆ, ಅಲ್ಲಿ ಮೊದಲು ನಿಸರ್ಗದಲ್ಲಿ ಯಾವ ರೀತಿ ಇದ್ದಿತೋ ಮತ್ತೆ ಕಾಡು ಬೆಳೆಸಿ ಅದೇ ರೀತಿ ಮಾಡಬೇಕು; ಏರುಪೇರಾಗಬಾರದು. ಹಾಗೆಯೇ ದಖ್ಖನ್ ಪೀಠಭೂಮಿಯಲ್ಲಿ ಪಶ್ಚಿಮಘಟ್ಟದ ಮರಗಳನ್ನು ಬೆಳೆಸುವುದು ಕೂಡ ಸಲ್ಲದು; ಅಲ್ಲಿನದ್ದನ್ನೇ ಬೆಳೆಸಬೇಕು. ನೀವು ಯಾವುದೇ ಜಾಗವನ್ನು ಅದರಷ್ಟಕ್ಕೆ ಬಿಟ್ಟರೆ ಮೊದಲಿಗೆ ಕುರುಚಲು ಗಿಡ, ಅದು-ಇದು ಎಲ್ಲ ಬರಬಹುದು. ಆದರೆ ಕ್ರಮೇಣ ಬದಲಾಗುತ್ತದೆ. ಅದನ್ನು ಸಕ್ಸೆಶನ್ (ಮುಂದುವರಿಕೆ) ಎಂದು ಹೇಳುತ್ತಾರೆ. ಕಾಡು ಕಡಿದು ಖಾಲಿಯಾದ ಜಾಗದಲ್ಲಿ ಮೊದಲಿಗೆ ಸಣ್ಣ ಸಸ್ಯಗಳು ಬರುತ್ತವೆ; ಮತ್ತೆ ಪೊದೆಗಳು, ಅನಂತರ ಮರಗಳು ಬರುತ್ತವೆ; ಅದು ಸಕ್ಸೆಶನ್.
ವಿಫಲ ಯೋಜನೆ ಎತ್ತಿನಹೊಳೆ
ರಾಜ್ಯಸರ್ಕಾರ ಈಚೆಗೆ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಬಹುಮಟ್ಟಿಗೆ ವಿಫಲ ಎನ್ನಬಹುದು. ಅಲ್ಲಿ 24 ಟಿಎಂಸಿ ನೀರು ಸಿಗುತ್ತದೆ; ಅದನ್ನು ಪೂರ್ವಕ್ಕೆ ಘಟ್ಟದಾಚೆಗೆ ಸಾಗಿಸುತ್ತೇವೆಂದು ಸರ್ಕಾರ ಹೇಳುತ್ತದೆ; ಆದರೆ ಅಷ್ಟು ನೀರು ಅಲ್ಲಿ ಸಿಗಲು ಸಾಧ್ಯವೇ ಇಲ್ಲ; ಸುಮಾರು ಎಂಟು ಟಿಎಂಸಿ ನೀರು ಮಾತ್ರ ಸಿಗಬಹುದು; ಆದ್ದರಿಂದ ಅದು ವಿಫಲ ಯೋಜನೆಯೆಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿ ಡಾ| ರಾಮಚಂದ್ರ ಮುಂತಾದವರು ಹೇಳಿದ್ದಾರೆ. (ಪಶ್ಚಿಮಘಟ್ಟದಲ್ಲಿ ಮಾನವನ ಚಟುವಟಿಕೆ ವ್ಯಾಪಕವಾಗಿ ಕಂಡುಬರುತ್ತಿವೆ. ಮೊದಲು ಬೆಂಗಳೂರು ಕಡೆಯಿಂದ ಹೋಗುವಾಗ ಸಕಲೇಶಪುರವನ್ನು ದಾಟಿದ ಬಳಿಕ ರಸ್ತೆಬದಿಯಲ್ಲಿ ಕೆಳಗೆ ಸುಮಾರು ಗುಂಡ್ಯದ ವರೆಗೆ ಏನೂ ಕಾಣುತ್ತಿರಲಿಲ್ಲ. ಈಗ ಅಂಗಡಿ-ಗೂಡಂಗಡಿಗಳು, ರಾತ್ರಿ ಬಸ್ಸುಗಳ ಪ್ರಯಾಣಿಕರಿಗೆ ಟೀಸ್ಟಾಲ್ಗಳು, ಬಾಳೆ-ಕಾಫಿಯಂತಹ ಗಿಡಗಳು ಕಾಣಿಸುತ್ತಿವೆ. ಮೊದಲು ಕಿಲೋಮೀಟರುಗಟ್ಟಲೆ ದೂರದಲ್ಲಿ ಇದೇನೂ ಇರಲಿಲ್ಲ. ಈಚೆಗೆ ಜಲವಿದ್ಯುತ್ ಯೋಜನೆಯಂತಹ ದೊಡ್ಡ ಪ್ರಾಜೆಕ್ಟ್ಗಳ ಚಟುವಟಿಕೆಯೂ ಕಾಣಿಸುತ್ತಿದೆ. ಕೆಲವೆಡೆ ಸಣ್ಣ ಸಣ್ಣ ಗುಡಿ, ಕ್ರೈಸ್ತರ ಶಿಲುಬೆಯ ಕಟ್ಟೆ, ಸ್ವಲ್ಪ ಜನವಸತಿ, ಜನರ ಸಂಚಾರ ಎಲ್ಲವೂ ಶುರುವಾಗಿದೆ; ಬೇರೆ ಘಾಟಿಗಳಲ್ಲಿಯೂ ಇದೇ ರೀತಿ ಆಗುತ್ತಿರಬಹುದು. – ನಿರೂಪಕ).
ಬಹುತೇಕ ಎಲ್ಲ ಘಾಟಿಗಳ ಭಾಗದಲ್ಲೂ ಪರಿಸ್ಥಿತಿ ಅದೇ ರೀತಿ ಇದೆ; ಮಾನವನ ಚಟುವಟಿಕೆ ಹೆಚ್ಚುತ್ತಲೇ ಇದೆ. ನನ್ನ ಅಧ್ಯಯನದಿಂದ ಕಂಡುಕೊಂಡ ಒಂದು ಅಂಶವೆಂದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪಶ್ಚಿಮಘಟ್ಟದ ಸಸ್ಯಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅದೇ ಉತ್ತರಕನ್ನಡ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆ ಪರಿಸ್ಥಿತಿ ಬದಲಾಗುತ್ತದೆ. ಭೌಗೋಳಿಕ ಪ್ರದೇಶವೇ ಆ ರೀತಿಯಲ್ಲಿದೆ; ಅಲ್ಲಿ ಗುಡ್ಡಗಳು ಹೆಚ್ಚು. ನೀವು ಬೈಂದೂರಿಗೆ ಹೋದಾಗಲೇ ಅದು ಗೊತ್ತಾಗುತ್ತದೆ. ಪಶ್ಚಿಮಘಟ್ಟದ ಸ್ವರೂಪ ಬದಲಾಗುವುದನ್ನು ಅಲ್ಲೇ ಕಾಣಬಹುದು. ಅಲ್ಲಿ ಕೆಲವೆಡೆ ಪಶ್ಚಿಮಘಟ್ಟ ಅರಬ್ಬಿ ಸಮುದ್ರದ ವರೆಗೂ ವಿಸ್ತರಿಸಿದೆ. ಕಾರವಾರದಲ್ಲಿ ಕರಾವಳಿ ತೀರಾ ಕಿರಿದು. ಅಲ್ಲಿ ಪಶ್ಚಿಮಘಟ್ಟ ಸಮುದ್ರದ ಹತ್ತಿರವೇ ಬಂದಿದೆ. ಉಡುಪಿ, ಮಂಗಳೂರುಗಳಲ್ಲಿ ಹಾಗಿಲ್ಲ; ತುಂಬಾ ದೂರ ಇದೆ. ಅದಕ್ಕೆ ಸುಳ್ಯ-ಮಂಗಳೂರುಗಳ ದೂರವನ್ನು ಗಮನಿಸಬಹುದು.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕರಾವಳಿ ಮತ್ತು ಘಟ್ಟದ ನಡುವಣ ದೂರ ಸಾಕಷ್ಟಿದ್ದರೂ ಕರಾವಳಿ ಮತ್ತು ಪಶ್ಚಿಮಘಟ್ಟದ ಸಸ್ಯಗಳು ಬಹಳಷ್ಟು ಸಮಾನವಾಗಿಯೇ ಇವೆ; ಕೆಲವು ಬೇರೆ ಇವೆ. ಮುಖ್ಯವಾಗಿ ಸಮುದ್ರದ ಬದಿಯಲ್ಲಿ ಬೆಳೆಯುವ ಸಸ್ಯಗಳನ್ನು ಘಟ್ಟದಲ್ಲಿ ಕಾಣಲು ಸಾಧ್ಯವಿಲ್ಲ; ಅವು ಪೂರ್ತಿ ಭಿನ್ನವಾಗಿವೆ. ಕರಾವಳಿ ತೀರದಲ್ಲಿ ಬೆಳೆಯುವ ಬಹಳಷ್ಟು ಸಸ್ಯಗಳು ಹೊಯಿಗೆಯಲ್ಲಿ ಬೆಳೆಯುವಂಥವು; ಅವು ಪಶ್ಚಿಮಘಟ್ಟದಲ್ಲಿ ಸಿಗುವುದಿಲ್ಲ. ಅದೇ ರೀತಿ ಘಟ್ಟದಲ್ಲಿರುವ ಎಷ್ಟೋ ಮರಗಳು ಕರಾವಳಿ ಪ್ರದೇಶದಲ್ಲಿಲ್ಲ; ಕಿರಾಲುಬೋಗಿಯಂತಹ ಮರಗಳು ಎರಡೂ ಕಡೆ ಇವೆ.
ಮಾನವ-ಪ್ರಾಣಿ ಸಂಘರ್ಷ
ಪಶ್ಚಿಮಘಟ್ಟದ ಕಾಡುಗಳು ಸಮೃದ್ಧವಾಗಿದ್ದಾಗ ಹಣ್ಣು ಸೇರಿದಂತೆ ಪ್ರಾಣಿ-ಪಕ್ಷಿಗಳಿಗೆ ಬೇಕಾದ ಆಹಾರವೆಲ್ಲ ಅಲ್ಲೇ ಸಿಗುತ್ತದೆ; ಅವುಗಳಿಗೆ ಊರಿನ ಕಡೆಗೆ ಹೆಜ್ಜೆಹಾಕುವ ಪ್ರಮೇಯ ಬರುವುದಿಲ್ಲ. ಆನೆಗಳು ಊರಿಗೆ ನುಗ್ಗಿ ತೋಟ, ಬೆಳೆ ಹಾಳುಮಾಡುವುದು, ಚಿರತೆಗಳು ಎಲ್ಲೆಂದರಲ್ಲಿ ಕಂಡುಬರುವುದು ಇತ್ಯಾದಿ ಈಗ ಬಹಳಷ್ಟು ವರದಿಯಾಗುತ್ತಿವೆ. ಅದಕ್ಕೆ ಕಾರಣ ಮಾನವಚಟುವಟಿಕೆಯೇ. ಹಿಂದೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾನವನ ಚಟುವಟಿಕೆ ತೀರಾ ಕಡಮೆ ಇತ್ತು. ಈಗ ಮರಕಡಿಯುವುದು, ನೆಲ ಅಗೆಯುವುದು, ನೀರು ನಿಲ್ಲಿಸುವುದು ಮುಂತಾಗಿ ವಿನಾಶಕಾರ್ಯ ವ್ಯಾಪಕವಾಗಿದೆ. (ಇತರ ಕಾಡುಗಳಲ್ಲೂ ಅದೇ ಸ್ಥಿತಿ). ಕಾಡಿನಲ್ಲಿ ಪ್ರಾಣಿಗಳಿಗೆ ಹಣ್ಣು-ಆಹಾರ ಸಿಗುವುದಿಲ್ಲ. ಆದ್ದರಿಂದ ಪ್ರಾಣಿಗಳು ಎಲ್ಲಿಗೆ ಹೋಗಬೇಕು? ಅಕೇಶಿಯಾ, ನೀಲಗಿರಿ ನೆಡುತೋಪುಗಳು ಒಂದೆಡೆಯಾದರೆ ಇನ್ನೊಂದೆಡೆ ಎಸ್ಟೇಟ್ಗಳ ವಿಸ್ತರಣೆಯಾಗುತ್ತಿದೆ. ಕಾಫಿ-ಟೀ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದೆ. ಆನೆಗಳು ಅಲ್ಲಿಗೆ ನುಗ್ಗುತ್ತವೆ; ಆಹಾರ ಸಿಗದ ಕಾರಣ ಹಾನಿ ಎಸಗುತ್ತವೆ. ಮಂಗಗಳ ಹಾವಳಿ, ಬೆಳೆಗೆ ಅವುಗಳ ಪೀಡೆಯೂ ತುಂಬ ಹೆಚ್ಚಾಗುತ್ತಿದೆ.
ನವಿಲಿನ ಹಾವಳಿ
ಈಚೆಗೆ ಕರಾವಳಿ ಪ್ರದೇಶದಲ್ಲಿ ಎಲ್ಲೆಡೆ ನವಿಲುಗಳು ಕಂಡುಬರುತ್ತಿವೆ. ಹಿಂದೆ ಈ ಭಾಗದಲ್ಲಿ ನವಿಲುಗಳು ಇರಲಿಲ್ಲ. ಅದಕ್ಕೆ ಕಾರಣ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಬಹುಶಃ ನವಿಲುಗಳನ್ನು ತಿನ್ನುವಂತಹ ಪ್ರಾಣಿಗಳ ಸಂಖ್ಯೆ ಕಡಮೆ ಆದದ್ದು. ಅಂದರೆ ನವಿಲನ್ನು ನಿಯಂತ್ರಿಸುವ ನಿಸರ್ಗದ ವ್ಯವಸ್ಥೆ ಇಲ್ಲವಾದದ್ದು ಇದಕ್ಕೆ ಕಾರಣವಿರಬಹುದು. ನಿಸರ್ಗದಲ್ಲಿ ಪ್ರತಿಯೊಂದು ಪ್ರಾಣಿ ಇನ್ನೊಂದು ಪ್ರಾಣಿಗೆ ಆಹಾರವಾಗಿರುತ್ತದೆ. ಅದನ್ನು ಆಹಾರದ ಸರಪಳಿ ಎನ್ನುತ್ತಾರೆ. ಅದರಲ್ಲಿ ಯಾವುದಾದರೂ ಒಂದರ ಸಂಖ್ಯೆ ಹೆಚ್ಚು ಕಡಮೆ ಆದರೆ ಇಡೀ ವ್ಯವಸ್ಥೆ ಬುಡಮೇಲಾಗುತ್ತದೆ. ಉದಾಹರಣೆಗೆ ಕಪ್ಪೆಗಳು ಕಡಮೆಯಾದ್ದರಿಂದ ಕ್ರಿಮಿಕೀಟಗಳು ಹೆಚ್ಚಾಗಿ ಕೃಷಿಗೆ ತೊಂದರೆಯಾಗಿದೆ. ಆ ರೀತಿ ಆಗಿರಬಹುದು. ನವಿಲನ್ನು ತಿನ್ನುವ ಪ್ರಾಣಿಗಳ ಸಂಖ್ಯೆ ಕಡಮೆ ಆದದ್ದು ಇದಕ್ಕೆ ಕಾರಣವಿರಬಹುದು. (ಇನ್ನು ನವಿಲಿನಿಂದ ರಾಜ್ಯದ ಕರಾವಳಿ ಭಾಗದಲ್ಲಿ ಬೆಳೆ ಅಲ್ಲದೆ ಪ್ರಕೃತಿಗೂ ತುಂಬ ಹಾನಿಯಾಗುತ್ತಿದೆ. ಹಾವುಗಳನ್ನು ನವಿಲು ಕೊಲ್ಲುವ ಕಾರಣ ಹಾವುಗಳ ಸಂಖ್ಯೆ ಕಡಮೆ ಆಗಿರಬೇಕು – ನಿರೂಪಕ.) ಸಸ್ಯಸಂಪತ್ತಿಗೆ ಹಾವುಗಳ ಕೊಡುಗೆಯೂ ಇರುತ್ತದೆ. ಅವುಗಳಿಂದ ಇಲಿ-ಹೆಗ್ಗಣಗಳು ನಿಯಂತ್ರಿಸಲ್ಪಡುತ್ತವೆ.
ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಗೂ ಅದರದ್ದಾದ ಒಂದು ಕೆಲಸವಿರುತ್ತದೆ. ಒಂದು ಪ್ರಾಣಿಯ ಸಂಖ್ಯೆ ಕಡಮೆ ಆದರೆ ಆಹಾರದ ಸರಪಳಿ ವ್ಯತ್ಯಾಸವಾಗಿ ಎಲ್ಲವೂ ಏರುಪೇರಾಗುತ್ತದೆ. ನಿಸರ್ಗದಲ್ಲಿ ನಿಷ್ಪ್ರಯೋಜಕವೆಂದು ಯಾವ ಪ್ರಾಣಿಯೂ ಇಲ್ಲ; ಪ್ರತಿಯೊಂದಕ್ಕೂ ಅದರದ್ದಾದ ಒಂದು ಪಾತ್ರವಿರುತ್ತದೆ. ಅದರ ಸಂಖ್ಯೆ ಇಷ್ಟೇ ಇರಬೇಕೆಂದಿಲ್ಲ; ಆದರೆ ವ್ಯತ್ಯಾಸವಾದರೆ ಎಲ್ಲವೂ ಬುಡಮೇಲಾಗುತ್ತದೆ.
ಆಹಾರದ ಸರಪಳಿ
ಪಶ್ಚಿಮಘಟ್ಟದಲ್ಲಿ ಸಹಜವಾಗಿಯೇ ಆಹಾರದ ಒಂದು ಸರಪಳಿ ಕೆಲಸ ಮಾಡುತ್ತಿರುತ್ತದೆ. ಈ ಸರಪಳಿಯಲ್ಲಿ ಮೊದಲಿಗೆ ‘ಉತ್ಪಾದಕರು’ ಬರುತ್ತಾರೆ. ಸರಪಳಿ ಆರಂಭವಾಗುವುದು ಉತ್ಪಾದಕರಿಂದ. ಉತ್ಪಾದಕರೆಂದರೆ ಸಸ್ಯಗಳು. ಆಹಾರವನ್ನು ಉತ್ಪಾದಿಸುವುದು ಸಸ್ಯಗಳು ಮಾತ್ರ. ಪ್ರಾಣಿಗಳಿಗೆ ಆಹಾರವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಫೋಟೊ-ಸಿಂಥೆಸಿಸ್ (ದ್ಯುತಿ-ಸಂಶ್ಲೇಷಣೆ) ಆಗುವಾಗ ಮಾತ್ರ ಅಂಗಾರಾಮ್ಲ (ಕಾರ್ಬನ್ ಡೈ-ಆಕ್ಸೈಡ್) ನೀರು ಸೇರಿ ಆಹಾರದ ಉತ್ಪಾದನೆಯಾಗುತ್ತದೆ. ಆದ್ದರಿಂದ ಸಸ್ಯಗಳನ್ನು ಉತ್ಪಾದಕರು ಎಂದು ಕರೆಯಲಾಗುತ್ತದೆ. ಇನ್ನು ಆಹಾರದ ‘ಬಳಕೆದಾರರು’ ಇರುತ್ತಾರೆ. ಅದರಲ್ಲಿ ಮೊದಲ ಗ್ರಾಹಕರು, ಎರಡನೇ ಗ್ರಾಹಕರು ಮತ್ತು ಮೂರನೇ ಗ್ರಾಹಕರು ಎನ್ನುವ ವಿಭಾಗಗಳಿವೆ. ಕೀಟಗಳು ಮೊದಲ (ಪ್ರಾಥಮಿಕ) ಗ್ರಾಹಕರು; ಕೀಟಗಳನ್ನು ತಿನ್ನುವ ಕಪ್ಪೆ ಮುಂತಾದವು ಎರಡನೇ (ಸೆಕೆಂಡರಿ) ಗ್ರಾಹಕರು; ಕಪ್ಪೆಯನ್ನು ತಿನ್ನುವ ಹಾವು ಮೂರನೇ (ಟರ್ಶಿಯರಿ) ಗ್ರಾಹಕರು. ಈ ಮೂರೂ ಬಳಕೆದಾರರ ಬಳಿಕ ಡಿಕಂಪೋಸರ್ಸ್ (ಕೊಳೆಸುವಂಥವರು) ಇರುತ್ತವೆ. ಸಸ್ಯ ಅಥವಾ ಪ್ರಾಣಿಗಳು ಸತ್ತ ಮೇಲೆ ಕೊಳೆತು ಪುನಃ ಮಣ್ಣಿಗೆ ಸೇರುತ್ತವೆ. ಒಂದು ಭಾಗ ಗಾಳಿಯಾಗಿ ಆಕಾಶಕ್ಕೆ ಹೋಗುತ್ತದೆ. ಉದಾಹರಣೆಗೆ ಕಾರ್ಬೊಹೈಡ್ರೇಟ್ ಕೊಳೆಯುವಾಗ ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ; ಉಳಿದದ್ದು ಮಣ್ಣಿಗೆ ಸೇರುತ್ತದೆ. ಹೀಗೆ ಆಹಾರದ ಸರಪಳಿಯಲ್ಲಿ ಉತ್ಪಾದಕರು, ಬಳಕೆದಾರರು ಮತ್ತು ಕೊಳೆಸುವವರು ಮುಖ್ಯ ಪಾತ್ರವನ್ನು ವಹಿಸುತ್ತವೆ. ಫಂಗೈ, ಬ್ಯಾಕ್ಟೀರಿಯ ಮುಂತಾದವು ಡಿಕಂಪೋಸರ್ಸ್ನಲ್ಲಿ ಬರುತ್ತವೆ. ಅವು ಮಣ್ಣಿನಲ್ಲಿ ಇರಲೇಬೇಕು. ಕೀಟನಾಶಕಗಳನ್ನು ಬಳಸಿದಾಗ ಮಣ್ಣಿನಲ್ಲಿರುವ ಡಿಕಂಪೋಸರ್ಸ್ ನಾಶವಾಗುತ್ತವೆ. ಅದರಿಂದ ಮಣ್ಣಿಗೆ ಬಿದ್ದ ವಸ್ತುಗಳು ಸರಿಯಾಗಿ ಕೊಳೆಯುವುದಿಲ್ಲ; ಪರಿಣಾಮವಾಗಿ ಮಣ್ಣಿನ ಫಲವತ್ತತೆ ಕುಸಿಯುತ್ತದೆ.
ಪಶ್ಚಿಮಘಟ್ಟದಲ್ಲಿ ಆಹಾರದ ಸರಪಳಿಯ ಉತ್ಪದಕರಾದ ಸಸ್ಯಗಳು, ಒಂದು, ಎರಡು, ಮೂರನೇ ಬಳಕೆದಾರರಾದ ಕೀಟ, ಕಪ್ಪೆ, ಹಾವು ಎಲ್ಲವೂ ಇವೆ. ಪ್ರಾಣಿಗಳು ಮೂರರಲ್ಲಿ ಒಂದು ವಿಭಾಗಕ್ಕೆ ಸೇರಲೇಬೇಕು. ಇದು ಎಲ್ಲ ಪ್ರಾಣಿಗಳಿಗೂ ಅನ್ವಯ; ಎಲ್ಲವೂ ಬಳಕೆದಾರರು. ಮನುಷ್ಯರು ಸಸ್ಯಾಹಾರಿಗಳಾದರೆ ಸಸ್ಯಗಳನ್ನು ತಿನ್ನಬಹುದು; ಮಾಂಸಾಹಾರಿಗಳಾದರೆ ಪ್ರಾಣಿ-ಪಕ್ಷಿಗಳನ್ನು ತಿನ್ನಬಹುದು. ಹೀಗೆ ಮನುಷ್ಯ ಪ್ರಾಥಮಿಕ, ಎರಡನೇ ಅಥವಾ ಮೂರನೇ ಬಳಕೆದಾರ – ಹೀಗೆ ಯಾವುದೂ ಆಗಬಹುದು. ಮಾಂಸಾಹಾರದಲ್ಲಿ ಸೆಕೆಂಡರಿ, ಟರ್ಶಿಯರಿ ಎಲ್ಲವೂ ಆಗಲು ಸಾಧ್ಯ. ಇದೇ ರೀತಿ ಎಂದು ಖಚಿತವಾಗಿ ಹೇಳಲು ಅಸಾಧ್ಯ; ಮತ್ತು ಅವುಗಳ ನಡುವೆ ಒಂದಕ್ಕೊಂದು ಸಂಬಂಧವಿದೆ. ಈಗ ಫುಡ್ ವೆಬ್ (ಆಹಾರ ಜಾಲ) ಎಂದು ಹೇಳಲಾಗುತ್ತದೆ; ಅದನ್ನು ಸರಪಳಿ ಎಂದು ನೇರವಾಗಿ ಹೇಳಲು ಸಾಧ್ಯವಾಗುವುದಿಲ್ಲ.
ಏಕಸಸ್ಯ ಕಾಡು
ಪಶ್ಚಿಮಘಟ್ಟದ ಹಲವು ಕಡೆ ಮಾನೋಕಲ್ಚರ್ ಅಥವಾ ಏಕಸಸ್ಯ ನೆಡುತೋಪಿನ ಸಮಸ್ಯೆ ಕಂಡುಬಂದಿದೆ. ಅಕೇಶಿಯಾವಷ್ಟೇ ಅಲ್ಲ; ಕಾಫಿ, ಚಹಾ, ಶುಂಠಿ, ಅಡಿಕೆತೋಟ ಎಲ್ಲವೂ ಮಾನೋಕಲ್ಚರ್ ಸಮಸ್ಯೆಗಳೇ. ಗೇರುತೋಟ(ಗೋಡಂಬಿ)ವನ್ನು ಪಶ್ಚಿಮಘಟ್ಟದಲ್ಲಿ ಬೆಳೆಸುವುದಿಲ್ಲ. ಅದು ಕೂಡ ಮಣ್ಣನ್ನು ಹಾಳುಮಾಡುತ್ತದೇನೋ! ಆದರೆ ಪಶ್ಚಿಮಘಟ್ಟದಲ್ಲಿ ಅದು ಬೆಳೆಯುವುದಿಲ್ಲ. ಅದಕ್ಕೆ ಸಮುದ್ರದ ಗಾಳಿ ಮತ್ತು ಮುರಮಣ್ಣು (ಲ್ಯಾಟರೈಟ್ ಸಾಯಿಲ್) ಬೇಕು. ಅದು ಮುರಕಲ್ಲಿರುವ ಜಾಗದಲ್ಲಿ ಬೆಳೆಯುವಂಥದ್ದು. ಪಶ್ಚಿಮ ಕರಾವಳಿಯ ಹಾಗೆಯೇ ಒಡಿಶಾ ಮುಂತಾಗಿ ಪೂರ್ವ ಕರಾವಳಿಯಲ್ಲೂ ಗೇರುತೋಟಗಳನ್ನು ಕಾಣಬಹುದು. ಪಶ್ಚಿಮಘಟ್ಟದ ಕೆಲವು ಕಡೆ, ಮುಖ್ಯವಾಗಿ ಪೂರ್ವಭಾಗದಲ್ಲಿ, ಉತ್ತರಕನ್ನಡ ಮತ್ತಿತರ ಕಡೆ ಸಾಗುವಾನಿ ಏಕಸಸ್ಯ ತೋಪುಗಳನ್ನು ಕಾಣಬಹುದು.
ಒಂದು ಮಾದರಿ ಕಾಡಿನಲ್ಲಿ ತುಂಬ ರೀತಿಯ ಮರಗಳಿರುತ್ತವೆ; ಹಣ್ಣು ಮುಂತಾಗಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡುವ ಮರಗಳು ಸಾಕಷ್ಟು ಇರುತ್ತವೆ; ಮತ್ತು ಮರಗಳ ಸುಮಾರು ಮೂರು ಲೇಯರ್ ಇರುತ್ತವೆ. ಮಾನೋಕಲ್ಚರ್ನಲ್ಲಿ ಹಾಗೆ ಆಗುವುದಿಲ್ಲ. ಒಂದು ವೇಳೆ ಸಾಗುವಾನಿಯನ್ನು ಬೆಳೆಸಿದರೆ ಪ್ರಾಣಿಗಳಿಗೆ ಯಾವ ಆಹಾರವೂ ಸಿಗುವುದಿಲ್ಲ; ಅಕೇಶಿಯಾದಂತೆ ಅದರಲ್ಲೂ ಹಣ್ಣಿಲ್ಲ. ಕೆಲವು ಸಸ್ಯಗಳಲ್ಲಿ ಹೂ, ಹಣ್ಣು ಇದ್ದರೂ ಕೂಡ ಒಂದು ಸೀಸನ್ನಲ್ಲಿ ಮಾತ್ರ ಇರಬಹುದು. ಅಂತಹ ಮಾನೋಕಲ್ಚರ್ ಕಾಡಿನಿಂದ ವರ್ಷವಿಡೀ ಹಣ್ಣು ಅಥವಾ ಆಹಾರ ಸಿಗುವುದಿಲ್ಲ. ಆದರೆ ಪಶ್ಚಿಮಘಟ್ಟದ ಕಾಡುಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಹೂಬಿಟ್ಟು ಹಣ್ಣು ಕೊಡುವ ಮರಗಳಿರುತ್ತವೆ. ಕೆಲವು ಮಳೆಗಾಲದಲ್ಲಿ ಹೂಬಿಟ್ಟರೆ ಇನ್ನು ಕೆಲವು ಚಳಿಗಾಲದಲ್ಲಿ ಬಿಡುತ್ತವೆ; ಇನ್ನೂ ಕೆಲವು ಬೇಸಿಗೆಯಲ್ಲಿ ಹೂ-ಹಣ್ಣು ಕೊಡುತ್ತವೆ. ಅದರಿಂದಾಗಿ ಪ್ರಾಣಿ-ಪಕ್ಷಿಗಳಿಗೆ ಇಡೀ ವರ್ಷ ಹಣ್ಣು-ಕಾಯಿ ಎಲ್ಲವೂ ಸಿಗುತ್ತವೆ. ಅಂದರೆ ಈ ಕಾಡು ಎಲ್ಲವೂ ಇರುವ ಒಂದು ವ್ಯವಸ್ಥೆ. ಹುಲಿಯಿಂದ ಕಾಡಿಗೆ ರಕ್ಷಣೆ ದೊರೆತರೆ ಹುಲಿಗೆ ಕಾಡಿನಿಂದ ರಕ್ಷಣೆ ಸಿಗುತ್ತದೆ; ಒಂದು ರೀತಿ ಎಲ್ಲ ಪ್ರಾಣಿಗಳೂ ಹಾಗೆಯೇ. ಪ್ರಾಣಿ-ಪಕ್ಷಿಗಳು ಕಾಡಿನಲ್ಲಿದ್ದು ಕಾಡಿನಿಂದ ಪಡೆದುಕೊಳ್ಳುತ್ತವೆ; ಮತ್ತು ಕಾಡಿಗೆ ತಮ್ಮ ಕೊಡುಗೆಯನ್ನು ನೀಡುತ್ತವೆ.
ಹವಾಮಾನ ವ್ಯತ್ಯಾಸ
ಹಿಂದೆ ಗುಡ್ಡದ ಕಡೆಯಿಂದ ಅಬ್ಬಿನೀರು ಕೆಳಗೆ ಬರುತ್ತಿತ್ತು. ಪಶ್ಚಿಮಘಟ್ಟದ ಕಾಡುಗಳಿಂದ ಬೇಸಿಗೆಯಲ್ಲೂ ನೀರು ಹರಿದುಬರುತ್ತಿತ್ತು. ಆದರೆ ಈಗ ಮಳೆ ಕಡಮೆಯಾಗುತ್ತಿದೆ. ಮಳೆಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ಆಗುತ್ತಿದೆ. ಈ ವರ್ಷದ ಹವಾಮಾನವನ್ನೇ ಅದಕ್ಕೆ ಉದಾಹರಣೆಯಾಗಿ ನೋಡಬಹುದು. ಜೂನ್, ಜುಲೈ ತಿಂಗಳುಗಳಲ್ಲಿ (ಕರಾವಳಿ, ಮಲೆನಾಡುಗಳಲ್ಲಿ ಕೂಡ) ಮಳೆ ತುಂಬ ಕಡಮೆ ಇತ್ತು. ಆಗಸ್ಟ್ನಲ್ಲಿ ಮಳೆ ಕಡಮೆ ಆಗಬೇಕಿತ್ತು. ಈಗ ಹೆಚ್ಚು ಬರುತ್ತಾ ಇದೆ. ಈ ರೀತಿ ಹವಾಮಾನ ಬದಲಾಗುವುದಕ್ಕೆ ಮುಖ್ಯ ಕಾರಣ ಮರಗಳನ್ನು ಕಡಿಯುವುದು ಮುಂತಾದ ಮಾನವನ ಚಟುವಟಿಕೆ.
ಒಟ್ಟಿನಲ್ಲಿ ಇದು ಜಾಗತಿಕ ವಿದ್ಯಮಾನ ಕೂಡ ಹೌದು. ಇಡೀ ಜಗತ್ತಿನ ಉಷ್ಣತೆಯೇ ಏರುತ್ತಿದೆ. ಅದಕ್ಕೆ ವಾಹನಗಳು ಹೆಚ್ಚಾಗಿ ಅಂಗಾರಾಮ್ಲ ಹೆಚ್ಚುಹೆಚ್ಚು ಬಿಡುಗಡೆ ಆಗುತ್ತಿರುವುದು ಒಂದು ಕಾರಣ. ಅದರಿಂದ ಗ್ರೀನ್ಹೌಸ್ ಇಫೆಕ್ಟ್ (ಹಸಿರುಮನೆ ಪರಿಣಾಮ) ಉಂಟಾಗಿ ಮಳೆಯಲ್ಲಿ ವ್ಯತ್ಯಾಸ ಆಗುತ್ತಿರಬೇಕು. ವಾತಾವರಣದ ಉಷ್ಣತೆ ವ್ಯತ್ಯಾಸವಾದಾಗ ಮಳೆ ಕೂಡ ಬದಲಾಗುತ್ತದೆ. ಮೋಡ ಇದ್ದರೂ ಕೂಡ ಅದನ್ನು ತಂಪು ಮಾಡುವಂಥದ್ದು ಇಲ್ಲದಿದ್ದಾಗ ಮಳೆ ಬರುವುದಿಲ್ಲ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕೂಡ ಕ್ರಮೇಣ ಬಿಸಿ ಹೆಚ್ಚಾಗುತ್ತಿದೆ ಅನ್ನಿಸುತ್ತದೆ. ಮೊದಲಿನ ಚಳಿಗಾಲದಲ್ಲಿ ಇದ್ದಷ್ಟು ಚಳಿ ಈಗ ಚಳಿಗಾಲದಲ್ಲಿ ಇಲ್ಲ ಎಂದು ಮಡಿಕೇರಿಯ ಜನ ಹೇಳುತ್ತಾರೆ. ಈಗ ಮೊದಲಿನಷ್ಟು ಮಳೆಯೂ ಇಲ್ಲ, ಚಳಿಯೂ ಇಲ್ಲ. ಹಿಂದೆ ಬೆಂಗಳೂರಿನ ಸಮೀಪದಲ್ಲಿ ಸೇಬು ಬೆಳೆಯುತ್ತಿದ್ದರೆಂದು ನಾನು ಒಂದು ಕಡೆ ಓದಿದ್ದೇನೆ; ಅಲ್ಲಿ ಅಷ್ಟೊಂದು ಚಳಿ ಇತ್ತು. ಚಳಿಗಾಲದಲ್ಲಿ ಉಷ್ಣತೆ ತುಂಬ ಕೆಳಗೆ ಬರುತ್ತಿತ್ತು; ಬೆಂಗಳೂರು, ಮೈಸೂರು ನಗರಗಳ ವಾತಾವರಣ ಬಹುತೇಕ ಹವಾನಿಯಂತ್ರಿತದಂತೆ ಇರುತ್ತಿತ್ತು. ನಾನು ಮೈಸೂರಿನಲ್ಲಿ ಎಂ.ಎಸ್ಸಿ. ಓದುತ್ತಿದ್ದಾಗ (1969-71) ಅಲ್ಲಿ ಫ್ಯಾನುಗಳೇ ಇರುತ್ತಿರಲಿಲ್ಲ. ಅದರ ಉಪಯೋಗವೇ ಇರಲಿಲ್ಲ. ಒಂದುಥರಾ ಚಳಿಯ ವಾತಾವರಣ ಇರುತ್ತಿತ್ತು; ಬೆಂಗಳೂರಲ್ಲೂ ಹಾಗೆಯೆ ಇತ್ತು. ಈಗ ಪೂರ್ತಿ ಬದಲಾಗಿದೆ. ನಗರಗಳ ಬಿಸಿ ಹೆಚ್ಚಾಗಲು ವಾಹನಗಳ ಹೊಗೆಯೇ ಮುಖ್ಯ ಕಾರಣ ಇರಬೇಕು. ಇನ್ನು ಮರ ಕಡಿಯುವುದು ಮತ್ತು ಎಲ್ಲ ಕಡೆ ಕಾಂಕ್ರೀಟ್ ಹಾಕುವುದರ ಪರಿಣಾಮವೂ ಇರಲೇಬೇಕು; ಕಾಂಕ್ರೀಟ್ನಿಂದಾಗಿ ನೆಲದಲ್ಲಿ ನೀರು ಇಂಗುತ್ತಿಲ್ಲ.
ಕಾಡು ಬೆಳೆಸುವ ಕ್ರಮ
ಕಾಡಿನಿಂದ ವಾತಾವರಣ ತಂಪಾಗುತ್ತದೆ ಎಂಬುದು ನಿಜವಾದರೂ ಕಾಡು ಯಾವ ರೀತಿಯಲ್ಲಿ ಬೆಳೆಯಬೇಕು ಎಂಬುದೂ ಅಷ್ಟೇ ಮುಖ್ಯ. ಒಂದು ಕಾಡನ್ನು ಮಾದರಿ ಎನ್ನಬೇಕಿದ್ದರೆ ಆ ಜಾಗವನ್ನು ಅದರಷ್ಟಕ್ಕೆ ಬಿಡಬೇಕು. ಆ ಜಾಗದ ಸುತ್ತಲಿನ ಸ್ಥಳೀಯ ಸಸ್ಯಗಳು ಯಾವುದಿವೆ ಅವುಗಳನ್ನು ಬೇಕಾದರೆ ತಂದು ಅಲ್ಲಿ ನೆಡಬಹುದು. ಈಗ ಪಶ್ಚಿಮಘಟ್ಟದ ಒಂದು ಪ್ರದೇಶದಲ್ಲಿ ಕಾಡು ನಾಶವಾಗಿದೆ ಅಥವಾ ಮಾನವ ಚಟುವಟಿಕೆಯ ಕಾರಣದಿಂದ ಮರಗಳನ್ನೆಲ್ಲ ಕಡಿದಿದ್ದಾರೆ ಎಂದಾದಲ್ಲಿ ಅಲ್ಲಿ ಸುತ್ತ ಯಾವ ಮರಗಳಿವೆಯೋ – ಕಾಟುಮಾವಿನ ಮರ, ಹಲಸು, ಹೆಬ್ಬಲಸು, ದೂಮ ಮುಂತಾದ ಸ್ಥಳೀಯ ಗಿಡಗಳನ್ನು ತಂದು ಬೆಳೆಸಬೇಕು; ಗಿಡ ನೆಟ್ಟು ಮರ ಬೆಳೆಸುವುದಾದರೆ ಹಾಗೆ ಮಾಡಬೇಕು. ಇಲ್ಲವಾದರೆ, ಆ ಜಾಗವನ್ನು ಅದರಷ್ಟಕ್ಕೆ ಬಿಡಬೇಕು. ಆಗ ಪ್ರಾಣಿ-ಪಕ್ಷಿಗಳು ಬಂದು ಸಹಜವಾಗಿ ಬೀಜ ಪ್ರಸಾರವನ್ನು ಮಾಡುತ್ತವೆ. ಸ್ವಲ್ಪ ಸಮಯ ಹೋಗುವಾಗ ಗಿಡಗಳು ಮೇಲೆದ್ದು ಬೆಳೆಯುತ್ತವೆ. ಅಲ್ಲಿ ಯಾವುದೇ ಚಟುವಟಿಕೆ ಮಾಡಬಾರದು. ದನಗಳು ಗಿಡಗಳನ್ನು ತಿಂದುಹಾಕುವಂತಿದ್ದರೆ ಆ ಜಾಗದಲ್ಲಿ ಮೇಯುವುದಕ್ಕೂ ಬಿಡಬಾರದು. ಆದರೆ ಇಲ್ಲಿ ಒಂದು ಅಂಶವಿದೆ. ಅಂತಹ ಜಾಗದಲ್ಲಿ ಸ್ವಲ್ಪಮಟ್ಟಿಗೆ ದನ-ಕರುಗಳ ಚಟುವಟಿಕೆ ಇರಬೇಕು. ದನಗಳ ಸೆಗಣಿ ಗಿಡಗಳಿಗೆ ಪೆÇೀಷಣೆ ನೀಡುವುದು ಒಂದಾದರೆ, ಮೊದಲಿನಿಂದಲೂ ಕಾಡುಗಳಲ್ಲಿ ಮನುಷ್ಯರು ವಾಸಮಾಡುತ್ತಿದ್ದರು ಎಂಬುದನ್ನೂ ನಾವು ನೆನಪಿಡಬೇಕು; ಸಂಖ್ಯೆ ಹೆಚ್ಚಾದಾಗ ವ್ಯವಸ್ಥೆ ಹಾಳಾಗುತ್ತದೆ.
ಸಸ್ಯಗಳ ವರ್ಗೀಕರಣ ಶಾಸ್ತ್ರದಲ್ಲಿ (Taxonomy) ಗಿಡಗಳ ವರ್ಗೀಕರಣ ಮಾಡುವಾಗ ಶಾಶ್ವತವಾಗಿ ಹೂಬಿಡದ ಸಸ್ಯಗಳನ್ನು ಮಾತ್ರ ಹೂಬಿಡದ ಸಸ್ಯಗಳೆಂದು ವರ್ಗೀಕರಿಸಲಾಗುತ್ತದೆ. ಜರಿಗಿಡ, ಪಾಚಿ, ಹಾವಸೆ ಇವೆಲ್ಲ ಹೂಬಿಡದ ಸಸ್ಯಗಳು. ವಿಕಾಸವಾದದ ಪ್ರಕಾರ ಹೂಬಿಡುವ ಸಸ್ಯಗಳು ಅನಂತರ ಬಂದಂಥವು. ವಿಕಾಸವಾದದಂತೆ ಮನುಷ್ಯ ಕೊನೆಯಲ್ಲಿ ಬಂದವನಲ್ಲವೆ? ಹಾಗೆ. ಸಸ್ಯಶಾಸ್ತ್ರದ ಪ್ರಕಾರ ಹೂ ಆದದ್ದು ಕಾಯಿ ಆಗಲೇಬೇಕು; ಬಾಟನಿಯಲ್ಲಿ ಎಲ್ಲವೂ ಫ್ರೂಟ್; ಭತ್ತ, ಗೋಧಿಗಳು ಕೂಡ. ಕಾಯಿ ಆಗುವುದು ಹೂಬಿಡುವ ಗಿಡದಲ್ಲಿ ಮಾತ್ರ. ಹೂಬಿಡುವ ಸಸ್ಯಗಳಲ್ಲಿ ಬೀಜದಿಂದ ಪುನರುತ್ಪತ್ತಿಯಾದರೆ ಹೂಬಿಡದವುಗಳಲ್ಲಿ ಏಕಕಣದಿಂದ ಪುನರುತ್ಪತ್ತಿ ಆಗುತ್ತದೆ. ಜರಿಗಿಡದ ಎಲೆಯ ಅಡಿಭಾಗದಲ್ಲಿ ಆ ಏಕಕಣಗಳಿರುತ್ತವೆ.
ಪೂರ್ವಘಟ್ಟದ ಮಳೆ
ಸಾಮಾನ್ಯವಾಗಿ ಮಳೆ ಬರುವುದರಲ್ಲಿ ಪರ್ವತಶ್ರೇಣಿಗಳ ಪಾತ್ರ ಇದ್ದೇ ಇರುತ್ತದೆ. ದಕ್ಷಿಣದಲ್ಲಿ ಪಶ್ಚಿಮಘಟ್ಟವು ಮಳೆ ತಂದರೆ ಉತ್ತರದಲ್ಲಿ ಹಿಮಾಲಯ ಆ ಕೆಲಸವನ್ನು ಮಾಡುತ್ತದೆ. ದೇಶದಲ್ಲಿ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿ ಎರಡೂ ಕಡೆಯಿಂದ ಮಳೆಮಾರುತಗಳು ಹೊರಡುತ್ತವೆ. ಬಂಗಾಳಕೊಲ್ಲಿ ಕಡೆಯಿಂದ ಬರುವ ಮಳೆ ಕಡಮೆ; ಅದು ಹೆಚ್ಚಾಗಿ ಬರುವುದು ಚಳಿಗಾಲದಲ್ಲಿ (ಹಿಂಗಾರುಮಳೆ). ಆಗ ಪಶ್ಚಿಮಘಟ್ಟ ತರುವಷ್ಟು ಮಳೆ ಬರುವುದಿಲ್ಲ. ಅದಕ್ಕೆ ಕಾರಣವೆಂದರೆ ಪೂರ್ವಘಟ್ಟವು ಪಶ್ಚಿಮಘಟ್ಟದಷ್ಟು ಎತ್ತರವಿಲ್ಲ; ಮತ್ತು ಅದು ತುಂಡುತುಂಡಾಗಿದೆ. ಪಶ್ಚಿಮಘಟ್ಟವು ಕೇರಳದ ಪಾಲ್ಘಾಟ್ಗೆ ಹೊರತಾಗಿ ಬೇರೆಲ್ಲೂ ತುಂಡಾಗಿಲ್ಲ; ಅಭೇದ್ಯವಾಗಿದೆ. ಆ ತುಂಡಾದ ಭಾಗವನ್ನು ಪಾಲ್ಘಾಟ್ ಗ್ಯಾಪ್ ಎಂದು ಕರೆಯುತ್ತಾರೆ. ಪೂರ್ವಘಟ್ಟದಲ್ಲಿ ಅಂತಹ ಗ್ಯಾಪ್ಗಳು ತುಂಬ ಇವೆ.
ಬೇಸಿಗೆಯ ಕೊನೆಯಲ್ಲಿ ಬೀಸುವ ನೈಋತ್ಯಮಾರುತಗಳು ಕರಾವಳಿ, ಪಶ್ಚಿಮಘಟ್ಟ ಮತ್ತು ಮಲೆನಾಡುಗಳಲ್ಲಿ ಧಾರಾಳ ಮಳೆ ಸುರಿಸುತ್ತವೆ. ಮಲೆನಾಡನ್ನು ದಾಟುವಷ್ಟರಲ್ಲಿ ಮೋಡಗಳಲ್ಲಿ ನೀರಿನ ಅಂಶ ಕಡಮೆಯಾಗಿ ಬಯಲುಸೀಮೆ ಪ್ರದೇಶದಲ್ಲಿ ಮಳೆ ತುಂಬ ಕಡಮೆ ಮತ್ತು ಅನಿಶ್ಚಿತವಾಗುತ್ತದೆ. ಒಟ್ಟಿನಲ್ಲಿ ಜಗತ್ತಿನಲ್ಲಿ ಏನೇನೋ ಬದಲಾವಣೆಗಳಾಗುತ್ತಿವೆ; ನಮ್ಮಮಟ್ಟಿಗೆ ಮಳೆ ಆಗಬೇಕೆಂದರೆ ಪಶ್ಚಿಮಘಟ್ಟವನ್ನು ಸುಭದ್ರವಾಗಿ ರಕ್ಷಿಸಬೇಕು. ಅಲ್ಲಿ ಮಾನವ ಚಟುವಟಿಕೆಯನ್ನು ಆದಷ್ಟು ಕಡಮೆ ಮಾಡಬೇಕು. ಅದು ಸಂರಕ್ಷಿತ ಪ್ರದೇಶವಾಗಿ ಇರಬೇಕು.
ಎಸ್ಟೇಟ್ ಕಾಡಲ್ಲ
ಕರ್ನಾಟಕಕ್ಕೆ ಹೋಲಿಸಿದರೆ ಕೇರಳದಲ್ಲಿ ಪಶ್ಚಿಮಘಟ್ಟ ತುಂಬ ನಾಶವಾಗಿದೆ. ಅಲ್ಲಿ ಜನಸಂಖ್ಯೆ ಹೆಚ್ಚಾಗಿರುವುದು ಅದಕ್ಕೆ ಮುಖ್ಯ ಕಾರಣ. ಉತ್ತರಕ್ಕೆ ಹೋದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಜನಸಂಖ್ಯೆ ಕಡಮೆಯಾಗುತ್ತದೆ. ಕರ್ನಾಟಕದ ಭಾಗದ ಪಶ್ಚಿಮಘಟ್ಟದಲ್ಲಿ ಸ್ವಲ್ಪವಾದರೂ ನಾಶವಾಗದ ಭಾಗ ಇನ್ನೂ ಇದೆ; ಕೇರಳದಲ್ಲಿ ಹಾಗಿಲ್ಲ. ತುಂಬ ಡಿಗ್ರೇಡ್ ಆಗಿದೆ. ಎಲ್ಲ ಕಡೆ ಎಸ್ಟೇಟ್ಗಳು ಕಾಣಿಸುತ್ತವೆ. ಈ ಎಸ್ಟೇಟ್ಗಳನ್ನು ದೂರದಿಂದ ನೋಡುವಾಗ ಕಾಡಿನಂತೆ ಕಾಣಿಸುತ್ತದೆ. ಆದರೆ ಅದು ಮಾದರಿ ಕಾಡಿನ ಹತ್ತಿರಕ್ಕೂ ಬರುವುದೇ ಇಲ್ಲ. ಕಾಫಿತೋಟಗಳೂ ಅಷ್ಟೆ. ಸಹಜ ಅರಣ್ಯದ ವೈವಿಧ್ಯ ಅಲ್ಲಿರುವುದಿಲ್ಲ. ಅಲ್ಲಿ ನೆರಳಿಗೆ ಬೇಕಾಗಿ ಕೆಲವು ಮರಗಳನ್ನು ಬೆಳೆಸುತ್ತಾರೆ, ಅಷ್ಟೆ. ಏಕೆಂದರೆ ಕಾಫಿಗಿಡಕ್ಕೆ ನೆರಳು ಬೇಕು. ದೂರ ದೂರ ಒಂದೊಂದು ಮರಗಳನ್ನು ಬೆಳೆಸುತ್ತಾರೆ. ಪಶ್ಚಿಮಘಟ್ಟದ ಸದಾ ಹಸಿರೆಲೆ ಮರಗಳು ಒತ್ತೊತ್ತಾಗಿ ಇರುವ ಕಾಡಿಗೆ ಅದನ್ನು ಹೋಲಿಸುವಂತೆಯೇ ಇಲ್ಲ. ಕಾಡು ಇರಬೇಕಾದದ್ದು ಹಾಗೆಯೇ. ಮರಗಳು ಒತ್ತೊತ್ತಾಗಿ ಇರಬೇಕು. ಗೆಲ್ಲು ಕೂಡ ಕಡಿಯಬಾರದು. ಮಾದರಿ ಕಾಡು ಎನಿಸಬೇಕಿದ್ದರೆ ಅಲ್ಲಿ ಯಾವುದೇ ಅತಿಕ್ರಮಣ ಸಲ್ಲದು. ಸತ್ತುಬೀಳುವ ಮರಗಳನ್ನು ಕಡಿದು ಸಾಗಿಸುವುದು ಕೂಡ ಸರಿಯಲ್ಲ. ಸತ್ತ ಮರ ಅಲ್ಲೇ ತುಂಡಾಗಿ ಬಿದ್ದು ಕೊಳೆತು ಮಣ್ಣಿಗೆ ಸೇರಿಹೋಗಬೇಕು.
ಮಾನೋಕಲ್ಚರ್ ಆಗಿ ಬಂದಾಗ ಎಲ್ಲ ಸಸ್ಯಗಳು ಕೆಟ್ಟದಾಗಿಯೇ ಪರಿಣಮಿಸುತ್ತವೆ. ಆ ಮಟ್ಟಿಗೆ ರಬ್ಬರ್ ಕೂಡ ಬಹುತೇಕ ಅಕೇಶಿಯಾದಂತೆಯೇ ಮಣ್ಣನ್ನು ಹಾಳುಮಾಡುತ್ತದೆ. ರಬ್ಬರ್ ಇತರ ಗಿಡ-ಮರಗಳ ಜೊತೆಗೆ ಬೆಳೆಯುವುದಿಲ್ಲ. ಪಶ್ಚಿಮಘಟ್ಟ ಪ್ರದೇಶಕ್ಕೆ ರಬ್ಬರ್ ಸಾಕಷ್ಟು ಹಿಂದೆಯೇ ಬಂದಿದೆ. (ಉದಾ- ಸಂಪಾಜೆ ಘಾಟಿ ಸಮೀಪ). ರಬ್ಬರ್ ದಕ್ಷಿಣ ಅಮೆರಿಕದ ತಳಿಯಾದರೆ ಅಕೇಶಿಯಾ ಮತ್ತು ನೀಲಗಿರಿ ಆಸ್ಟ್ರೇಲಿಯದಿಂದ ಬಂದಂಥವು.
ಸಸ್ಯಜಾತಿ – ಉದಾಹರಣೆ
ಪಶ್ಚಿಮಘಟ್ಟದ ಸಸ್ಯವೈವಿಧ್ಯಕ್ಕೆ ಅದೆಷ್ಟೋ ಸಸ್ಯಜಾತಿಗಳು ತಮ್ಮ ಕೊಡುಗೆಯನ್ನು ಕೊಡುತ್ತಾ ಬಂದಿವೆ. ಕೆಲವು ಉದಾಹರಣೆಗಳನ್ನು ಹೇಳುವುದಾದರೆ, ಹೆಬ್ಬಲಸು, ದೂಮದಮರ, ಕಿರಾಲುಬೋಗಿ, ನಾಗಸಂಪಿಗೆ, ಬಲಗಿಮರ ಮುಂತಾದವು ನಿತ್ಯಹರಿದ್ವರ್ಣ ಕಾಡಿನಲ್ಲಿ ಇರುವಂಥವು. ಜಂಬೆ, ಬೀಟೆ, ಚೇರದ ಮರ, ನಂದಿ ಮರ ಮೊದಲಾದವು ಆದ್ರ್ರ ಎಲೆಉದುರಿಸುವ ಕಾಡಿಗೆ ಸೇರಿದಂಥವು. ಮೇಲಿನವೆಲ್ಲ ಹೂಬಿಡುವ ಮರಗಳು. ಜರಿಗಿಡ, ಹಾವಸೆ, ಪಾಚಿ ಮುಂತಾದವು ಹೂಬಿಡದ ಜಾತಿಯವು. ಜರಿಗಿಡದಲ್ಲಿ ಸಣ್ಣಮರ ಆಗುವಂಥದ್ದು ಕೂಡ ಇದೆ; ಅದಕ್ಕೆ ಟ್ರೀಫನ್ರ್ಸ್ ಎನ್ನುತ್ತಾರೆ. ಟ್ರೀಫನ್ರ್ಸ್ ಅಡಿಕೆಮರ, ತೆಂಗಿನಮರ, ತಾಳೆಮರಗಳ ಹಾಗೇ ಇರುತ್ತದೆ. ಲೋದ್ರ, ನಾಮದಬೇರು, ಸುಗಂಧಿ, ಮಂತೋಳಿ, ಪುನರ್ಪುಳಿ (ಮುರುಗಲ), ಅಗ್ನಿಶಿಖೆ, ಪಲಾಶ ಮೊದಲಾದವು ಪಶ್ಚಿಮಘಟ್ಟದಲ್ಲಿರುವ ಔಷಧೀಯ ಸಸ್ಯಗಳು. ಸಾಗುವಾನಿ, ಮತ್ತಿಮರ, ನಂದಿಮರ ಮುಂತಾದವು ಪೂರ್ವಭಾಗದ ಎಲೆ ಉದುರಿಸುವ ಒಣಜಾತಿಗೆ ಸೇರಿದ ಸಸ್ಯವಾಗಿವೆ.
ಅಡಿಕೆಮರ ಸ್ಥಳೀಯ ಪ್ರಭೇದವಲ್ಲ. ಅಸ್ಸಾಂ ಕಡೆಯಿಂದ ಬಂದದ್ದು. ಅಡಿಕೆ ಅಸ್ಸಾಂ ಮತ್ತು ಅಂಡಮಾನ್ ದ್ವೀಪದಲ್ಲಿದ್ದು ಅಲ್ಲಿ ಅದು ಸಾಮಾನ್ಯವಾಗಿ ವನ್ಯಸಸ್ಯವಾಗಿದೆ. ಒಂದೊಂದು ಮರವಿದ್ದರೆ ತೊಂದರೆಯಿಲ್ಲ. ತೋಟ ಮಾಡಿದಾಗ ಮಾನೋಕಲ್ಚರ್ ಆಗಿಬಿಡುತ್ತದೆ. ತೆಂಗು ಪಶ್ಚಿಮಘಟ್ಟದ ವಿಷಯವೇ ಅಲ್ಲ; ಅದು ಕರಾವಳಿ ಪ್ರದೇಶದ್ದು. ಅದು ಹಿಂದೂ ಮಹಾಸಾಗರ ಭಾಗದ ಕೊಕ್ಕೋಸ್ ದ್ವೀಪದಿಂದ ಬಂದದ್ದೆಂದು ಹೇಳುತ್ತಾರೆ. ಸಿಪ್ಪೆಸಹಿತವಾದ ತೆಂಗಿನಕಾಯಿ ಸಮುದ್ರದಲ್ಲಿ ತೇಲಿಕೊಂಡು ಈ ಭಾಗಕ್ಕೆ ಬಂದಿರಬೇಕು. ಅದಕ್ಕೆ ನೈಸರ್ಗಿಕವಾಗಿ ಸಮುದ್ರದ ಗಾಳಿ ಇತ್ಯಾದಿ ಬೇಕು; ಮುಖ್ಯವಾಗಿ ಸಮುದ್ರತೀರದಲ್ಲಿ ಬೆಳೆಯುವಂಥದ್ದು. ಈಗ ಎಲ್ಲ ಕಡೆ ಬೆಳೆಸುತ್ತಾರೆ.
ಬೋರ್ವೆಲ್ ಬೇಡ
ನೀರಿನ ಕೊರತೆ ಹೆಚ್ಚಾದಂತೆ ಈಗ ಪಶ್ಚಿಮಘಟ್ಟದ ಪ್ರದೇಶದಲ್ಲೂ ಬೋರ್ವೆಲ್ಗಳನ್ನು ತೋಡುತ್ತಿದ್ದಾರೆ. ಬೋರ್ವೆಲ್ ಎಂದರೆ ಸಂಗ್ರಹಿಸಿಟ್ಟ ನೀರನ್ನು ಮೇಲಕ್ಕೆತ್ತಿ ಬಳಸುವುದು; ಅದು ಪುನಃ ಸರಿಯಾಗಿ ಮರುಪೂರೈಕೆ ಆಗುವುದಿಲ್ಲ; ಆದರೂ ತುಂಬ ಕಡಮೆಯೇ. ಅದು ನೀವು ಬ್ಯಾಂಕಿನಲ್ಲಿಟ್ಟ ಅಸಲು ಹಣವನ್ನು ತೆಗೆದು ಬಳಸಿಕೊಂಡ ಹಾಗೆ. ನಿಮಗೆ ನಿರಂತರವಾಗಿ ಹಣ ಸಿಗುತ್ತಿರಬೇಕೆಂದರೆ ಬಡ್ಡಿಯನ್ನು ಮಾತ್ರ ಬಳಸಿಕೊಳ್ಳಬೇಕು. ಅಸಲನ್ನು ಮುಟ್ಟಬಾರದು. ಅಸಲನ್ನು ತೆಗೆದರೆ ಸಿಗುವ ಬಡ್ಡಿ ಕಡಮೆಯಾಗುತ್ತಾ ಹೋಗುತ್ತದೆ. ಇದು ನಿರಖು ಠೇವಣಿಯೊಂದಿಗೆ (ಎಫ್.ಡಿ.) ವ್ಯವಹರಿಸಿದಂತೆ.
ರೀಚಾರ್ಚ್ ಆಗದಿರುವುದು ಕೊಳವೆಬಾವಿಯ ಪ್ರಮುಖ ದೋಷವಾಗಿದೆ. ಅದಕ್ಕೆ ನೀರು ತುಂಬಿಸುವ ಪ್ರಯತ್ನಗಳೇನೋ ನಡೆಯುತ್ತಿವೆ. ಅದರಲ್ಲಿ ಎಷ್ಟು ಯಶಸ್ಸು ಸಿಗುತ್ತಿದೆಯೊ ಗೊತ್ತಿಲ್ಲ. ಮತ್ತೊಂದೆಂದರೆ ಮಣ್ಣಿನ ಸವಕಳಿ ಎನ್ನುತ್ತಾರಲ್ಲ; ಅದರಿಂದಾಗಿ ಆಳದಲ್ಲಿ ಭಾರನೀರು (hಚಿಡಿಜ-ತಿಚಿಣeಡಿ) ಇರುತ್ತದೆ. ಅದನ್ನು ಕೃಷಿಗೆ ಉಪಯೋಗಿಸಿದಾಗ ಮಣ್ಣಿನ ಪಿಎಚ್ನಲ್ಲಿ ಏರುಪೇರಾಗುತ್ತದೆ. ಮಣ್ಣಿನ ಪಿಎಚ್ ಸಾಮಾನ್ಯವಾಗಿ ಏಳು ಇರಬೇಕು. ಅದರಲ್ಲಿ ವ್ಯತ್ಯಾಸವಾದರೆ ಗಿಡಗಳಿಗೆ ತೊಂದರೆಯಾಗುತ್ತದೆ. ಈ ಕಾರಣದಿಂದ ಘಟ್ಟದ ಮೇಲಿನ ಕೆಲವು ಕಡೆ ಮಣ್ಣು ಕ್ಷಾರಯುಕ್ತ ಆಗುತ್ತದೆ. ಕೆಲವು ವರ್ಷಗಳಾದ ಮೇಲೆ ಮತ್ತೆ ಅಲ್ಲಿ ಬೆಳೆ ಬೆಳೆಯುವುದಿಲ್ಲ. ಬೋರ್ವೆಲ್ ನೀರೇ ಅದಕ್ಕೆ ಕಾರಣ.
ಬೋರ್ವೆಲ್ನಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿರುವುದು ಕೂಡ ನಿಜ. ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಉಡುಪಿಯ ಇಂದ್ರಾಳಿ ದೇವಸ್ಥಾನದ ಬಳಿ ಆಚೆ ಮಣಿಪಾಲ ಗುಡ್ಡದ ಕಡೆಯಿಂದ ಹಿಂದೆ ಇಡೀ ವರ್ಷ ನೀರು ಇಳಿಯುತ್ತಿತ್ತು. ಈಗ ಬೇಸಿಗೆಯಲ್ಲಿ ಅಲ್ಲಿಂದ ನೀರು ಕೆಳಗೆ ಬೀಳುವುದಿಲ್ಲ. ಗುಡ್ಡದ ಭಾಗದ ಬೋರ್ವೆಲ್ ಅಂಥದ್ದೆಲ್ಲ ಅದಕ್ಕೆ ಕಾರಣವಿರಬೇಕು.
ಒಟ್ಟಿನಲ್ಲಿ ಪಶ್ಚಿಮಘಟ್ಟವನ್ನು ಉಳಿಸುವ ಬಗ್ಗೆ ಪರಿಣಾಮಕಾರಿ ಕ್ರಮ ಆಗಬೇಕಾಗಿದೆ. ಅದನ್ನು ಸಂರಕ್ಷಿತ ಪ್ರದೇಶವಾಗಿ ಗುರುತಿಸಿ ಅಂಗೀಕರಿಸಿದರೆ ಅದರಿಂದ ಪ್ರಯೋಜನ ಆಗಬಹುದು.
(ನಿರೂಪಣೆ: ಎಚ್. ಮಂಜುನಾಥ ಭಟ್)
ಲೇಖಕರು ಸಸ್ಯವರ್ಗೀಕರಣಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯುಳ್ಳ ವಿಜ್ಞಾನಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ.