ಅಧ್ಯಾತ್ಮಜ್ಞಾನಪ್ರಸಾರದ ಏಕೈಕ ಉದ್ದೇಶದಿಂದ ಅಮೂಲ್ಯ ಅನುವಾದಗ್ರಂಥಗಳ ಪ್ರಕಟನೆ, ಪಾಠಪ್ರವಚನಗಳು, ವೇದಾಂತ ಶಿಬಿರಗಳು, ವೇದಾಂತಶಾಸ್ತ್ರಸಂಬಂಧಿತ ಸಂಶೋಧನೆ, ಆಸ್ತಿಕ ಸಮುದಾಯದಲ್ಲಿ ವೇದಾಂತಾಸಕ್ತಿಯನ್ನು ಉದ್ದೀಪಿಸಿ ಜಾಗೃತವಾಗಿರಿಸುವ ದೃಷ್ಟಿಯಿಂದ ‘ಅಧ್ಯಾತ್ಮ ಪ್ರಕಾಶ’ ಹೆಸರಿನ ಮಾಸಪತ್ರಿಕೆಯ ಪ್ರಕಟನೆ – ಈ ಹಲವು ಮುಖಗಳಲ್ಲಿ ಕಳೆದ ನೂರು ವರ್ಷಗಳುದ್ದಕ್ಕೂ ನಿರಂತರ ನಡೆದಿರುವ ಒಂದು ಅನುಪಮ ವೇದಾಂತಾಭಿಯಾನ ಕರ್ನಾಟಕದ ‘ಅಧ್ಯಾತ್ಮ ಪ್ರಕಾಶ ಕಾರ್ಯಾಲಯ’ ಸಂಸ್ಥೆಯದು. ಇಡೀ ದೇಶದಲ್ಲಿಯೇ ಅನನ್ಯವೆನ್ನಬಹುದಾದ ಈ ಸಂಸ್ಥೆಯ ಸ್ಥಾಪನೆಯ ಶತಮಾನೋತ್ಸವದ ವರ್ಷ ಇದೀಗ ನಡೆದಿದೆ (ಸ್ಥಾಪನೆ: 1920).
ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಇತಿಹಾಸವೆಂದರೆ ಅದರ ಸ್ಥಾಪಕರೂ ಸ್ಫೂರ್ತಿಕೆಂದ್ರವೂ ಆಗಿದ್ದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳ (5.1.1880-5.8.1975) ಜೀವಿತವೃತ್ತವೇ ಆಗುತ್ತದೆ. ‘ಅಭಿನವಶಂಕರ’ರೆಂದೇ ತಮ್ಮ ಸಮಕಾಲೀನ ಧೀಮಂತರಿಂದ ಕೀರ್ತಿತರಾಗಿದ್ದವರು ಮಹಾಸ್ವಾಮಿಗಳು (ಪೂರ್ವಾಶ್ರಮದಲ್ಲಿ ‘ಯಲ್ಲಂಬಳಸೆ ಸುಬ್ರಹ್ಮಣ್ಯ ಶರ್ಮಾ’).
ವೇದಾಂತದ ಸಮ್ಯಗ್ದರ್ಶನಕ್ಕಾಗಿ
ಒಂದು ದೃಷ್ಟಿಯಿಂದ ನೋಡಿದರೆ ಅಧ್ಯಾತ್ಮವೆಂಬುದು ಭಾರತಕ್ಕೆ ಸೀಮಿತವಾದುದೇನಲ್ಲ. ಜಗತ್ತಿನ ವಿವಿಧೆಡೆಗಳಲ್ಲಿ ಪರಮಾರ್ಥಪ್ರವೃತ್ತಿಯ ಸಾಧಕರಿಂದ ಅಧ್ಯಾತ್ಮಚಿಂತನೆ ಹಿಂದಿನಿಂದ ನಡೆದಿರುವುದುಂಟು. ಆದರೆ ಸರ್ವಂಕಷವೆನ್ನಬಹುದಾದ ಅಧ್ಯಾತ್ಮದರ್ಶನವು ಲಭ್ಯವಿರುವುದು ಉಪನಿಷದ್ವಾಙ್ಮಯದಲ್ಲಿ. ವೇದಾಂತದ ಹೆಸರಿನಲ್ಲಿ ಭಾರತದಲ್ಲಿ ಜನಸಾಮಾನ್ಯರ ನಡುವೆ ಪ್ರಚಲಿತವಿರುವ ಅಧ್ಯಾತ್ಮಚಿಂತನೆಯಲ್ಲಿ ಹಲವೊಮ್ಮೆ ಕರ್ಮ, ಭಕ್ತಿ, ಜ್ಞಾನ, ವೈರಾಗ್ಯ ಮೊದಲಾದ ತತ್ತ್ವಗಳಲ್ಲಿ ಯಾವುದೋ ಒಂದೋ ಎರಡೋ ಪ್ರಾಧಾನ್ಯ ಪಡೆದಿರುವುದನ್ನು ಕಾಣಬಹುದು. ಅಂತಹ ಮಂಡನೆಗಳ ಸಾಧುತ್ವವನ್ನಾಗಲಿ ಉಪಯುಕ್ತತೆಯನ್ನಾಗಲಿ ಅಲ್ಲಗಳೆಯಲಾಗದು. ಅಂತಹ ಮಂಡನೆಗಳು ಅಸಮಗ್ರವೆನಿಸುವ ಸಂಭವವಿರುವುದರ ಹಿನ್ನೆಲೆಯಲ್ಲಿ ಸಮ್ಯಗ್ದರ್ಶನದ ಅಪೇಕ್ಷೆಯುಂಟಾಗುತ್ತದೆ. ಈ ಅಪೇಕ್ಷೆಯ ಈಡೇರಿಕೆಯು ಉಪನಿಷದಾಧಾರಿತ ಅರಿವಿನಿಂದ ಮಾತ್ರ ಶಕ್ಯವಾಗಬಲ್ಲದು.
ಎರಡನೆಯದಾಗಿ ಭಾರತೀಯ ತತ್ತ್ವಶಾಸ್ತ್ರದ ಬೆಳವಣಿಗೆಯಲ್ಲಿ ಮೀಮಾಂಸಾ ಮೊದಲಾದ ವೇದಾಂತೇತರ ದರ್ಶನಗಳ ಕೊಡುಗೆಗಳು ಗಣನೀಯವೇ ಆಗಿವೆ. ಅವುಗಳ ಪ್ರಧಾನಾಂಶಗಳ ಸ್ವಲ್ಪಮಟ್ಟಿನ ಪರಿಚಯವಾದರೂ ಜಿಜ್ಞಾಸುಗಳಿಗೆ ಇರುವುದೂ ಪ್ರಯೋಜನಕರ. ಅವುಗಳ ಅನೇಕ ಪ್ರಸ್ತಾವಗಳು ವೇದಾಂತಶಾಸ್ತ್ರದ ಮಾರ್ಗದಲ್ಲಿ ಎದುರಾಗುತ್ತವೆ. ಆದುದರಿಂದ ಅವನ್ನು ಕುರಿತ ಯಥಾರ್ಥ ಗ್ರಹಿಕೆಯೂ ಅವಶ್ಯವಾಗುತ್ತದೆ.
ಮೂರನೆಯದಾಗಿ ಸ್ವ-ವ್ಯಾಸಂಗದ ಕ್ಷಮತೆ ಇರುವವರಿಗೆ ಸಾಧ್ಯವಾದಷ್ಟುಮಟ್ಟಿಗೆ ವೇದಾಂತದರ್ಶನದ ಮೂಲಗ್ರಂಥಗಳನ್ನು ಮೂಲರೂಪದಲ್ಲಿಯೇ ಲಭ್ಯವಾಗಿಸುವುದೂ ಅವಶ್ಯವಿದೆ. ಇದು ನಡೆಯದಿದ್ದಲ್ಲಿ ಜನಪ್ರಿಯತೆಯ ಹೆಸರಿನಲ್ಲಿ ಪ್ರಚಾರ ಪಡೆಯುವ ಹಲವೊಮ್ಮೆ ನ್ಯೂನಾಧಿಕ್ಯಗಳಿರುವ ವಿವರಣೆಗಳಿಂದ ಅಭ್ಯಾಸಿಗಳು ದಾರಿತಪ್ಪುವ ಸಂಭವ ಉಂಟು. ಈ ಹಲವು ಕಾರಣಗಳಿಂದ ಶುದ್ಧಶಾಂಕರಪ್ರಸ್ಥಾನಾಧಾರಿತವಾದ ಅಧ್ಯಾತ್ಮಪ್ರಸಾರವ್ಯವಸ್ಥೆಯು ಅಪೇಕ್ಷಣೀಯ.
ಭಗವಂತನನ್ನು ಇಷ್ಟೊಂದು ಹೆಸರುಗಳ ಮತ್ತು ರೂಪಗಳ ಮೂಲಕ ಜನರು ಗುರುತಿಸುತ್ತಿರುವುದರ ಹಿನ್ನೆಲೆ ಏನು? ಹಲವೊಮ್ಮೆ ಪರಸ್ಪರ ವಿರುದ್ಧಗಳೆಂದೇ ತೋರುವ ವರ್ಣನೆಗಳು ಒಂದೇ ಆತ್ಯಂತಿಕತತ್ತ್ವದ ಪ್ರಕಾರಾಂತರÀಗಳೆಂದು ನಂಬುವುದು ಹೇಗೆ? ಇಷ್ಟಾಗಿ ಅರಿವು ಅಥವಾ ಜ್ಞಾನ ಎಂಬ ಜನರ ಗ್ರಹಿಕೆಯ ಮೂಲವೇನು? ಸಾಮಾನ್ಯರ ಮನಸ್ಸುಗಳಿಗೂ ತೋರುವ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆ ಹೇಗೆ? ಸುಲಭವಾಗಿ ಅನುಭವಕ್ಕೆಟುಕದ ಹೇಳಿಕೆಗಳನ್ನು ಅವು ಪಾರಂಪರಿಕವೆಂಬಷ್ಟೆ ಕಾರಣದಿಂದ ಸ್ವೀಕರಿಸಬೇಕೆ? ಬಹುತೇಕ ಎಲ್ಲರಲ್ಲಿಯೂ ಇದ್ದೇ ಇರುವ ಸುಖಾಪೇಕ್ಷೆ ಮೊದಲಾದ ಪ್ರವೃತ್ತಿಗಳನ್ನು ನಿರ್ವಹಿಸುವುದರಲ್ಲಿ ಯಾವ ನಯವಂತಿಕೆ ಇರಬೇಕು? ವೇದಾಂತದ ಹೆಸರಿನಲ್ಲಿ ಪ್ರಚಲಿತಗೊಳಿಸಲ್ಪಟ್ಟಿರುವ ವಿರಕ್ತಿ ಮೊದಲಾದ ಲಕ್ಷ್ಯಗಳನ್ನು ಲೋಕದಲ್ಲಿ ಎಲ್ಲರೂ ಸ್ವೀಕರಿಸಲಾದೀತೆ? ಸಾಮಾನ್ಯವಾಗಿ ನೀತಿವಂತಿಕೆಯೆಂದು ಜನರಲ್ಲಿ ಅಂಗೀಕಾರ ಪಡೆದಿರುವ ನಡವಳಿಗಳಿಗೂ ಆತ್ಯಂತಿಕ ತತ್ತ್ವಾನುಷ್ಠಾನಮಾರ್ಗಕ್ಕೂ ನಡುವಣ ಸಂಬಂಧದ ಸ್ವರೂಪ ಏನು? ಎಲ್ಲ ಪರಮಾರ್ಥಸಾಧಕರೂ ಪ್ರಾಥಮಿಕ ಹಂತದಿಂದ ಆರಂಭಿಸಿ ಹಂತಹಂತವಾಗಿ ಸೋಪಾನಕ್ರಮದಲ್ಲಿ ಕ್ರಮಿಸುವುದು ಅನಿವಾರ್ಯವೆ, ಅಥವಾ ಬೇರೆ ಶೀಘ್ರ ಮಾರ್ಗಗಳೂ ಇದ್ದಾವೆ? ಅವಶ್ಯವೆಂದು ಬೋಧಿಸಲ್ಪಡುವ ಆಂತರಿಕಸಿದ್ಧಿಗೆ ಸರ್ವಾಂಗೀಕಾರ್ಯ ಮಾನದಂಡಗಳು ಇವೆಯೆ, ಇದ್ದರೆ ಅವು ಯಾವುವು? ಲೌಕಿಕ ಅನುಭವಕ್ಕೆ ನಿಲುಕದ ಸ್ವರ್ಗ, ನರಕ, ಜನ್ಮಾಂತರ ಮೊದಲಾದ ಕಲ್ಪನೆಗಳ ಬಗೆಗೆ ಸಾಧಕರ ನಿಲುಮೆ ಏನಿರಬೇಕು? ವೈವಿಧ್ಯಮಯ ಬೋಧನೆಗಳು ಎದುರಾಗುವಾಗ ಋಜುವಾದದ್ದೆಂಬುದರ ಆಯ್ಕೆಗೆ ದಾರಿ ಯಾವುದು? ‘ಇದೊಂದನ್ನು ನೀವು ಮಾಡಿದರೆ ಸಾಕು ಗುರಿಯನ್ನು ತಲಪಿಬಿಡುತ್ತೀರಿ’ ಎಂಬ ಘೋಷಣೆಗಳೂ ಹಲವಾರು ಇರುವಾಗ ನಿಶ್ಚಯಬುದ್ಧಿ ಬರುವುದು ಹೇಗೆ?
ಸೋಪಾನಕ್ರಮದ ಬೋಧನೆ
ಜಟಿಲವೂ ತರ್ಕಭೂಯಿಷ್ಠವೂ ಆದ ಮೂಲ ಶಾಸ್ತ್ರಗ್ರಂಥಗಳ ಅಧ್ಯಯನ ಎಲ್ಲರಿಗೂ ಸಾಧ್ಯವಾಗುವಂತಹದಲ್ಲ. ವ್ಯಾಕರಣ ನ್ಯಾಯಾದಿ ಹಲವು ಅಂಗಗಳ ಪರಿಜ್ಞಾನವನ್ನು ಪಡೆದುಕೊಂಡ ಮೇಲಷ್ಟೆ ಶಾಸ್ತ್ರಗ್ರಂಥಗಳನ್ನು ಸಮೀಪಿಸಬಹುದು. ಸ್ವಾರಸ್ಯಕರ ಅಂಶವೆಂದರೆ ಇಡೀ ವೇದಾಂತದರ್ಶನಕ್ಕೆ ಅಧಿಷ್ಠಾನವಾದ ಉಪನಿಷತ್ತುಗಳು ಸಂವಾದರೂಪದಲ್ಲಿಯೂ ಆಖ್ಯಾನಗಳ ರೂಪದಲ್ಲಿಯೂ ನಿವೇಶಗೊಂಡಿದ್ದು ಅವು ಎಲ್ಲ ಆಸಕ್ತರಿಗೂ ಎಟುಕುವಂತಿವೆ. ಗಹನವಾದ ಒಳತಿರುಳು, ಸರಳವಾದ ಬಾಹ್ಯ ನಿರೂಪಣೆ, ಪೆಡಸಲ್ಲದ ಆಕರ್ಷಕ ಭಾಷಾಶೈಲಿ – ಇವು ಉಪನಿಷತ್ತುಗಳ ಲಕ್ಷಣಗಳಾಗಿವೆ. ಹೀಗೆ ಅಧ್ಯಾತ್ಮವಿಷಯವಾಗಿ ಜಗತ್ತಿನಲ್ಲಿಯೆ ಅತ್ಯಂತ ಪ್ರಾಚೀನವಾದ ಉಪನಿಷದ್-ವಾಙ್ಮಯವು ಅರ್ಥದ ಹರಹಿನಲ್ಲಿ ಸಾರ್ವಕಾಲಿಕವಾಗಿರುವುದು ವಿಸ್ಮಯಕರ. ಅದರ ಕಕ್ಷೆಯಿಂದ ಯಾರೂ ಹೊರಗಿನವರಲ್ಲ. ಅದು ಹೇಳುವುದಾದರೂ ನಿತ್ಯಸಿದ್ಧವಾದ ತತ್ತ್ವಗಳನ್ನೇ ಹೊರತು ಯಾವುದೋ ವೈಚಿತ್ರ್ಯಮಯ ಸಂಗತಿಗಳನ್ನಲ್ಲ.
ಈ ಹಿನ್ನೆಲೆಯಲ್ಲಿ ವೇದಾಂತದಲ್ಲಿ ಪ್ರವೇಶವನ್ನು ಬಯಸುವ ಶ್ರದ್ಧಾವಂತ ಸಾಧಕರಿಗೆ ದುಗ್ರ್ರಾಹ್ಯವಲ್ಲದ ಆದರೆ ಶಾಸ್ತ್ರಶುದ್ಧವಾದ ಸರಳ ಪರಿಚಯಗ್ರಂಥಗಳು ಬೇಕಾಗುತ್ತವೆ. ಆಸಕ್ತಿ ಬೆಳೆದಂತೆ ಅವರು ಪ್ರೌಢ ಗ್ರಂಥಗಳತ್ತ ಹೋಗಬಹುದು. ಈ ಕಾರಣದಿಂದಾಗಿ ಶುದ್ಧ ವೇದಾಂತ ಪ್ರಸಾರವನ್ನು ಲಕ್ಷ್ಯವಾಗಿರಿಸಿಕೊಂಡವರು ವಿವಿಧ ಅಧಿಕಾರಿಭೇದಗಳವರಿಗೆ ಹೊಂದುವಂತೆ ಸೋಪಾನಕ್ರಮದಲ್ಲಿ ಸಾಹಿತ್ಯವನ್ನು ಸಜ್ಜುಗೊಳಿಸಿಕೊಡಬೇಕಾಗುತ್ತದೆ.
ಈ ಯೋಜನೆಯು ಸರಳವಾಗಿ ಕಂಡರೂ ಅದರ ನಿರ್ವಹಣೆಯು ತುಂಬಾ ಶ್ರಮವನ್ನೂ ತಾಳ್ಮೆಯನ್ನೂ ಪ್ರಯತ್ನಸಾತತ್ಯವನ್ನೂ ಸುಸಂಘಟನೆಯನ್ನೂ ಅಪೇಕ್ಷಿಸುತ್ತದೆ.
ಪ್ರಾಮಾಣಿಕ ವೈಯಕ್ತಿಕ ಆಸಕ್ತಿಯಿಂದ ವೇದಾಂತದ ಬಳಿಸಾರುವ ಶ್ರದ್ಧಾವಂತರ ಮನಸ್ಸುಗಳಲ್ಲಿ ಏಳುವ ಪ್ರಶ್ನೆಗಳಿಗೆ ಸಮಂಜಸ ಪರಿಹಾರಗಳನ್ನು ನೀಡುವುದು, ವ್ಯವಸ್ಥಿತವಾಗಿ ವಿಷಯಗ್ರಹಣ ಮಾಡಿಕೊಳ್ಳಬಯಸುವವರಿಗೆ ಅನುಕೂಲಕರವಾದ ಸೋಪಾನಕ್ರಮದ ಬೋಧನೆ, ಶಾಸ್ತ್ರೀಯ ಅಂಶಗಳನ್ನು ಎಲ್ಲಿಯೂ ದುರ್ಬಲಗೊಳಿಸದೆ ಶುದ್ಧದರ್ಶನದ ಪ್ರಸಾರ, ಪ್ರೌಢ ಹಂತಗಳಲ್ಲಿ ಪರಂಪರೆಯಲ್ಲಿಯೆ ಮನೆಮಾಡಿಕೊಂಡಿರುವ ಸಂದಿಗ್ಧ ಅಂಶಗಳನ್ನು ತಿಳಿಗೊಳಿಸುವುದು, ಈ ಪ್ರಾಕಾರಕ್ಕೆ ಬದ್ಧವಾಗಿ ಉಳಿದುಕೊಂಡೇ ಆಸ್ತಿಕಜನರಲ್ಲಿ ವೇದಾಂತಾಸಕ್ತಿಯನ್ನು ಬಿತ್ತಿ ಬೆಳೆಸುವುದು, ಮೇಲಿನ ಉದ್ದೇಶಗಳಿಗೆ ಪೂರಕವಾಗುವ ರೀತಿಯಲ್ಲಿ ಅನುವಾದ-ವಿವರಣೆ ಮತ್ತು ಸ್ವತಂತ್ರ ಪ್ರತಿಪಾದನೆ – ಈ ಎರಡೂ ಧಾರೆಗಳಲ್ಲಿ ಸಾಹಿತ್ಯನಿರ್ಮಿತಿ ಮತ್ತು ಪ್ರಸಾರ; – ಸ್ಥೂಲವಾಗಿ ಈ ಚೌಕಟ್ಟನ್ನು ಇರಿಸಿಕೊಂಡು ಆನುಕೂಲ್ಯ ಒದಗಿದಂತೆ ವಿಸ್ತರಿಸುತ್ತಹೋಗುವ ಆಂದೋಲನವನ್ನು ನಡೆಸಹೊರಟವರು ಯಲ್ಲಂಬಳಸೆ ಸುಬ್ರಹ್ಮಣ್ಯಶರ್ಮಾರು – ಬಳಕೆ ಮಾತಿನಲ್ಲಿ ಸುಬ್ಬರಾಯರು.
ಜ್ಞಾನ–ಭಕ್ತಿ–ಕರ್ಮ–ಸಮನ್ವಯ
ಶ್ರೀಶ್ರೀಗಳವರನ್ನು ಅವರ ಪೂರ್ವಾಶ್ರಮದ ಕಾಲದಿಂದ ತಿಳಿದಿರುವವರಲ್ಲಿ ನಾನೂ ಒಬ್ಬ. ಆಗ ಶ್ರೀಶ್ರೀಗಳವರು ಯಲ್ಲಂಬಳಸೆ ಸುಬ್ರಹ್ಮಣ್ಯಶರ್ಮಾ ಎಂದು ಸುವಿಖ್ಯಾತರಾಗಿ ಬೆಂಗಳೂರು ಕೋಟೆಯಲ್ಲಿದ್ದ ಶ್ರೀ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿದ್ದರು. ಆಗ ಆ ಕಾಲೇಜು ಟಿಪ್ಪುಸುಲ್ತಾನ್ ಅರಮನೆಗೆದುರಾಗಿ ಈಗ ಚಂದ್ರಶೇಖರಯ್ಯರ್ ಪಾರ್ವತಮ್ಮ ಜ್ಞಾಪಕಾರ್ಥವಾದ ಪ್ರಸೂತಿ ಆಸ್ಪತ್ರೆಯಿರುವ ಜಾಗದಲ್ಲಿ ಇತ್ತು, ಮತ್ತು ಆಗ ಅದರಲ್ಲಿ ಸ್ವಲ್ಪಮಟ್ಟಿಗೆ ಸ್ಕೂಲ್ ರೀತಿಯ ಇಂಗ್ಲಿಷ್ ಪಾಠವೂ ನಡೆಯುತ್ತಿತ್ತು. ಶ್ರೀ ಸುಬ್ರಹ್ಮಣ್ಯಶರ್ಮಾರವರು ಒಳ್ಳೆಯ ಬೋಧಕರೆಂದು ಹೆಸರಾಗಿದ್ದರು.
***
ಶ್ರೀಶ್ರೀಗಳವರಲ್ಲಿ ಮೆಚ್ಚತಕ್ಕದ್ದು ಅವರ ಆಶ್ರಮಸ್ವೀಕಾರವೊಂದೇ ಅಲ್ಲ. ಅವರ ಪಾಂಡಿತ್ಯ ಅದ್ಭುತವಾದದ್ದು. ಸಂಸ್ಕೃತ, ಸಾಹಿತ್ಯ, ವ್ಯಾಕರಣ ಮೊದಲಾದ ಭಾಗಗಳಲ್ಲಿಯೂ ತರ್ಕ, ಮಿಮಾಂಸಾದಿಗಳಲ್ಲಿಯೂ ಅವರಿಗಿರುವ ಪಾಂಡಿತ್ಯ ಪ್ರಮಾಣಭೂತವಾದದ್ದೆಂದು ತಕ್ಕ ಅಧಿಕಾರಿಗಳಾದ ಪಂಡಿತರು ನನ್ನೊಡನೆ ಹೇಳಿದ್ದಾರೆ. ಶ್ರೀ ಸ್ವಾಮಿಗಳ ಕರ್ಮನಿಷ್ಠೆ, ಆಶ್ರಮನಿಷ್ಠೆಗಳು ಸರ್ವಪೂಜ್ಯವಾಗಿವೆ. ಅವರ ಪ್ರವಚನಶೈಲಿಯ ಸೊಗಸನ್ನು ನಾನು ಮಾತಿನಿಂದ ವರ್ಣಿಸಲಾರೆ. ಅವರ ಉಪನ್ಯಾಸಗಳು ವಿಶದವಾಗಿ, ಮನೋರಂಜಕವಾಗಿ, ಎಲ್ಲರಿಗೂ ಮನಸ್ಸಿನ ಒಳಗಡೆ ರುಜುವಾತು ಕೊಡಬಲ್ಲವಾಗಿರುತ್ತವೆ.
***
[ಶ್ರೀಶ್ರೀಗಳು ಬೆಂಗಳೂರು ವಾಸ್ತವ್ಯದಲ್ಲಿದ್ದಾಗ ಅವರು] ಶಸ್ತ್ರಚಿಕಿತ್ಸೆಗಾಗಿ ಒಂದು ಚಿಕಿತ್ಸಾಲಯವನ್ನು ಸೇರಬೇಕಾಗಿತ್ತು. ಅಲ್ಲಿಂದ ಅವರು ಸ್ವಸ್ಥಾನಕ್ಕೆ ಹಿಂದಿರುಗಿದ ಬಳಿಕ ಮತ್ತು ಹದಿನೈದು ದಿವಸವಾದ ಮೇಲೆ ನಾನು ದರ್ಶನಕ್ಕೆಂದು ಹೋಗಿದ್ದೆ. ಆಗ ಬಸವನಗುಡಿಯಲ್ಲಿ ಎಲ್. ಶ್ರೀನಿವಾಸಯ್ಯಂಗಾರ್ಯರದೆಂದು ಹೆಸರಾಗಿದ್ದ ದೊಡ್ಡ ಮನೆಯಲ್ಲಿದ್ದರು. ಹೊತ್ತು ಬಹುಶಃ ಮೂರೂವರೆ-ನಾಲ್ಕು. ನಾನು ಅಲ್ಲಿಗೆ ಬಂದದ್ದನ್ನು ಶ್ರೀಗಳವರು ಕೇಳಿ ನನ್ನನ್ನು ಅನುಗ್ರಹಿಸಲು ತಾವಿದ್ದ ಕೋಣೆಯಿಂದ ಹೊರಗೆ ಕುಳಿತು ದೇಕಿಕೊಂಡೇ ಬಂದರು. ದೇಹ ದುರ್ಬಲವಾಗಿತ್ತು. ಆದರೆ ಮುಖ ಮುಗುಳ್ನಗೆಯಿಂದ ಕೂಡಿತ್ತು. ನಾನು ಹಜಾರದಲ್ಲಿ ಅಲ್ಲಲ್ಲಿ ಕಾಣುತ್ತಿದ್ದ ಸಣ್ಣ ಬೂದಿರಾಶಿಗಳ ಕಡೆಗೆ ಕಣ್ಣು ಹೊರಳಿಸಿದೆ. ಶ್ರೀಗಳವರು ನನ್ನ ಇಂಗಿತವನ್ನು ಗ್ರಹಿಸಿ ಹೇಳಿದರು: “ಆಸ್ಪತ್ರೆಯಿಂದ ಬಂದಮೇಲೆ ಪಂಚಗವ್ಯ ಮಾಡಿಕೊಂಡದ್ದಾಯಿತು; ಹೋಮ ಮಾಡಿದ್ದಾಯಿತು. ಅದರದು ಈ ಬೂದಿ.”
ಈ ಸಂಗತಿಯನ್ನು ಇಲ್ಲಿ ಹೇಳಿರುವುದೇತಕ್ಕೆಂದರೆ ಸ್ವಾಮಿಗಳವರ ಶಾಸ್ತ್ರಶ್ರದ್ಧೆಯನ್ನು ತೋರಿಸುವುದಕ್ಕಾಗಿ. ತಮ್ಮ ಸಂಸ್ಕಾರೋಪಾಸನಕ್ರಮದಲ್ಲಿ ಸ್ವಾಮಿಗಳವರು ಜ್ಞಾನ-ಭಕ್ತಿ-ಕರ್ಮಗಳನ್ನು ಸಮನ್ವಯ ಮಾಡಿಕೊಂಡಿದ್ದಾರೆ. ಇದು ನಮ್ಮಲ್ಲಿ ಪ್ರಬಲವಾಗಿದ್ದ ಒಂದು ಪ್ರಶ್ನೆಗೆ ಸರ್ವಸಮಾಧಾನಕರ ಉತ್ತರ: ಭಕ್ತಿ ಕರ್ಮಾನುಷ್ಠಾನಗಳನ್ನು ಬಿಟ್ಟು ಜ್ಞಾನವಿಲ್ಲ. ಶ್ರೀಗಳವರಲ್ಲಿ ಜ್ಞಾನ-ಕರ್ಮ-ಭಕ್ತಿಗಳು ತೀರಾ ಬೇರೆಬೇರೆಯಾಗಿ ಅಸಂಬದ್ಧಗಳಾಗಿರುವವುಗಳು ಅಲ್ಲವೆಂದು ಅವರ ಆಚಾರ ಅನುಷ್ಠಾನಗಳಿಂದ ಚೆನ್ನಾಗಿ ತೋರಿಬರುತ್ತದೆ. ಜೀವಕ್ಕೆ ಸಂಸ್ಕಾರವಾಗಬೇಕಾದದ್ದು ಮುಖ್ಯ. ಅದನ್ನು ಯಾರೂ ಬಿಡತಕ್ಕದ್ದಲ್ಲವೆಂಬುದು ಶ್ರೀಗಳವರ ಬೋಧೆಯಾಗಿದೆ.
– ಡಿ.ವಿ.ಜಿ.
ಮೇಲಣ ಕಲ್ಪನೆಯನ್ನು ಸುಬ್ಬರಾಯರ ಮನಸ್ಸಿನಲ್ಲಿ ಖಚಿತಗೊಳಿಸಲು ಅವರು ತಾರುಣ್ಯದಶೆಯಿಂದ ತಾವೇ ಎದುರಿಸಿದ್ದ ಜಟಿಲತೆಗಳೂ ಪ್ರೇರಕವಾಗಿದ್ದಿರಬಹುದು. ಅವರು ತಮ್ಮ ಯೋಜನೆಯನ್ನು ಉಪಕ್ರಮಿಸಿದ, ಎಂದರೆ ಈಗ್ಗೆ ನೂರು ವರ್ಷ ಹಿಂದೆ ಶುದ್ಧವೇದಾಂತ ಪ್ರತಿಪಾದನೆಯ ವಿಷಯ ಹಾಗಿರಲಿ; ಪ್ರಸ್ಥಾನತ್ರಯದಂತಹ ಮೂಲ ಆಧಾರಸಾಹಿತ್ಯದ ಯಾವ ಮಟ್ಟದ ಅನುವಾದ-ಪ್ರಕಾಶನಗಳೂ ಆಗ ವಿರಳವೇ ಆಗಿದ್ದವು ಎಂಬುದನ್ನೂ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಯಾವುದೇ ಸಾಂಸ್ಥಿಕ ಪರಿಮಿತಿಗಳಿಗೆ ಒಳಪಡದೆ ಇದು ಸ್ವತಂತ್ರ ಖಾಸಗಿ ಪ್ರಯಾಸವಾಗಿಯೆ ನಡೆಯಬೇಕಾದುದೂ ಅವಶ್ಯವಿದ್ದಿತು. ಬಾಲ್ಯದಲ್ಲಿಯೂ ತಾರುಣ್ಯದಲ್ಲಿಯೂ ಸುಬ್ಬರಾಯರಿಗೆ ದೈವಿಕವಾಗಿ ಒದಗಿದ್ದ ಅನುಪಮ ಸಾಧಕರ ಹಾಗೂ ವಿದ್ವಜ್ಜನರ ಒಡನಾಟದಿಂದ ಲಭಿಸಿದ್ದ ದಿಗ್ದರ್ಶನವೂ ಅವರ ಅಧ್ಯಾತ್ಮ ಪಯಣವನ್ನು ಋಜುಮಾರ್ಗದಲ್ಲಿ ಮುನ್ನಡೆಸುವ ದೀವಿಗೆಯಾಗಿ ಕೆಲಸ ಮಾಡಿತು.
ಬಾಲ್ಯ–ತಾರುಣ್ಯ
ಯಲ್ಲಂಬಳಸೆ ಸುಬ್ರಹ್ಮಣ್ಯಶರ್ಮಾರ ಬಾಲ್ಯದ ಮತ್ತು ಪೂರ್ವತಾರುಣ್ಯದ ದಿವಸಗಳು ಅತ್ಯಂತ ಕ್ಲೇಶಮಯವಾಗಿದ್ದವು. ಆ ದಿನಗಳಲ್ಲಿ – ಎಂದರೆ ಇಪ್ಪತ್ತನೇ ಶತಮಾನದ ಆರಂಭಕಾಲದಲ್ಲಿ – ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗಳು ತುಂಬಾ ಉತ್ಸಾಹಜನಕವಾಗೇನಿರಲಿಲ್ಲ; ಇನ್ನೊಂದುಕಡೆ ತೀವ್ರ ಬಡತನ. ಹೀಗಾಗಿ ಹೆಜ್ಜೆಹೆಜ್ಜೆಗೂ ಅಡಚಣೆಗಳನ್ನು ಎದುರಿಸುತ್ತಲೇ ಸುಬ್ಬರಾಯರ ಬಾಲ್ಯ ಸಾಗಬೇಕಾಯಿತು. ಹೆಚ್ಚುಕಾಲ ‘ವಾರದ ಮನೆ’ಗಳೇ ಮುಖ್ಯ ಆಸರೆಯಾಗಿದ್ದವು. ಮೂಡಿಗೆರೆ ಮೊದಲಾದೆಡೆ ಕುಂಟುತ್ತ ಸಾಗಿ ಬೆಂಗಳೂರಿನಲ್ಲಿ ಹೇಗೋ ಎಫ್.ಎ. ತಲಪುವವರೆಗಿನದು ಸಾಹಸಮಯ ಪಯಣವೇ ಆಯಿತು. (ಇದನ್ನು ಆ ದಿನಗಳಲ್ಲಿ ಅಸಾಮಾನ್ಯ ಎಂದು ಭಾವಿಸಬೇಕಾದದ್ದು ಇಲ್ಲವೇನೋ.) ದೈವಿಕವೆಂಬಂತೆ ಬೆಂಗಳೂರು ವಾಸ್ತವ್ಯದಲ್ಲಿ ಒದಗಿಬಂದ ಸಂಪರ್ಕಗಳು ಅವರಲ್ಲಿ ವೇದಾಂತಾಸಕ್ತಿಯು ಅಂಕುರಗೊಳ್ಳುವುದಕ್ಕೆ ದಾರಿಮಾಡಿತು. ಬೆಂಗಳೂರು ವಾಸ್ತವ್ಯದಿಂದಾಗಿ ಆ ತಲೆಮಾರಿನ ಶ್ರೇಷ್ಠ ಪಂಡಿತರಾದ ದೊಡ್ಡಬೆಲೆ ನಾರಾಯಣಶಾಸ್ತ್ರಿಗಳು, ಮೋಟಗಾನಹಳ್ಳಿ ರಾಮಶೇಷಶಾಸ್ತ್ರಿಗಳು ಮೊದಲಾದವರ ಒಡನಾಟವು ಲಭಿಸಿತು. ಸ್ವಾರಸ್ಯಕರ ಅಂಶವೆಂದರೆ ಸುಬ್ಬರಾಯರಿಗೆ ಉದ್ಯೋಗ ದೊರೆತದ್ದು ಇಂಗ್ಲಿಷ್ ಅಧ್ಯಾಪಕರಾಗಿ; ಆದರೆ ಅವರ ಉಳಿದ ಅಷ್ಟೂ ಸಮಯ ವ್ಯಯವಾಗುತ್ತಿದ್ದದ್ದು ವೇದಾಂತ ವ್ಯಾಸಂಗ ಅನುಸಂಧಾನದಲ್ಲಿ.
ಅವರು ಸಂಸ್ಕೃತ ಕಲಿಕೆಯಲ್ಲಿ ತೊಡಗಿಕೊಂಡದ್ದು ಸ್ಕಾಲರ್ಶಿಪ್ ಆಕರ್ಷಣೆಯಿಂದ ಬೆಂಗಳೂರಿನ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡಾಗಲಷ್ಟೆ (1900-1901). ಅವರ ಅಂತರಂಗದಲ್ಲಿ ಸುಪ್ತವಾಗಿರಬಹುದಾಗಿದ್ದ ವೇದಾಂತವೆಂಬ ಸಸಿಯು ನಿಜವಾಗಿ ಮೊಳಕೆಯೊಡೆದದ್ದು ಅವರು 1903ರಲ್ಲಿ ಎಫ್.ಎ. (ಸೀನಿಯರ್) ತರಗತಿಗೆ ಸೇರಲು ಬೆಂಗಳೂರಿಗೆ ಬಂದ ದಿನಗಳಿಂದ; ಅವರಿಗೆ ವೇದಾಂತದಲ್ಲಿ ಗಾಢ ಆಸಕ್ತರೂ ಶಾಲಾಧ್ಯಾಪಕರೂ ಆಗಿದ್ದ ಕೆ.ಎ. ಕೃಷ್ಣಸ್ವಾಮಿ ಅಯ್ಯರ್ ಅವರ ನಿಕಟ ಸಂಪರ್ಕ ದೊರೆತಾಗ ಎನ್ನಿಸುತ್ತದೆ. ಅನಂತರದ ಕಾಲದಲ್ಲಿ ಸುಬ್ಬರಾಯರ ಗಣನೆಯಲ್ಲಿ ಕೃಷ್ಣಸ್ವಾಮಿ ಅಯ್ಯರ್ ಅವರೇ ಆದ್ಯ ಗುರುಗಳೆನಿಸುವಂತೆ ಆಯಿತು. ಅನಂತರದ ಕಾಲದಲ್ಲಿ ಹಾನಗಲ್ ವಿರೂಪಾಕ್ಷಶಾಸ್ತ್ರಿಗಳು, ಹೊಸಕೆರೆ ಚಿದಂಬರಯ್ಯನವರು ಮೊದಲಾದವರಿಗೂ ನಿಕಟವರ್ತಿಯಾದರು. ಕುರ್ತಕೋಟಿ ಮಹಾಭಾಗವತರ ಅನುಚರಣೆ ಮಾಡುವ ಸುಯೋಗವೂ ಒದಗಿತು. ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರಿಂದ ಮಂತ್ರೋಪದೇಶ, ಶೃಂಗೇರಿ ಶಾರದಾಪೀಠದ ಶ್ರೀ ಶಿವಾಭಿನವ ನೃಸಿಂಹಭಾರತಿಗಳ ಸಾನ್ನಿಧ್ಯದಲ್ಲಿ ಭಾಷ್ಯಶಾಂತಿ – ಈ ಅತ್ಯಪೂರ್ವ ಸಂಸ್ಕಾರಗಳು ಅವರ ಅಂತರಂಗದಲ್ಲಿ ಅವರ ಜೀವಿತೋದ್ದೇಶದ ಬೇರನ್ನು ನೆಟ್ಟಿದುದು ಅವರ ಆಧ್ಯಾತ್ಮಿಕ ಜೀವನಕ್ಕೆ ನಾಂದಿಯಾಯಿತೆನ್ನಬಹುದು (1910-11). ಆ ಕಾಲಘಟ್ಟದಲ್ಲಿ ಅವರು ಇನ್ನೂ ಲೌಕಿಕ ಜೀವನದ ಏಳುಬೀಳುಗಳಲ್ಲಿ ಸಂಚರಿಸುತ್ತಿದ್ದರೂ ಆಧ್ಯಾತ್ಮಿಕಾಸಕ್ತಿಯನ್ನು ತೀವ್ರಗೊಳಿಸಿಕೊಳ್ಳುತ್ತಹೋದರು; ಅಧ್ಯಯನ, ಮನನ, ಬರಹಗಳ ಕಡೆಗೆ ಮನಸ್ಸು ಹೆಚ್ಚುಹೆಚ್ಚಾಗಿ ಬಾಗತೊಡಗಿತು.
1922-23ರ ಸುಮಾರಿನಲ್ಲಿ ಬೆಂಗಳೂರಿನ ಸಂಸ್ಕೃತ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಕರ ಕೆಲಸ ಖಾಲಿ ಇರುವುದು ತಿಳಿದುಬಂದಿತು. ಬೆಂಗಳೂರಿನಲ್ಲಿ ನೆಲೆಗೊಳ್ಳಬೇಕು ಎಂಬ ಆಕಾಂಕ್ಷೆ ಹೀಗೆ ನೆರವೇರಿದುದರ ಜೊತೆಗೆ ಆಗಿನ ಹಲವು ಪಂಡಿತಶ್ರೇಷ್ಠರ ಒಡನಾಟದ ಲಾಭವೂ ದೊರೆಯಿತು. ಆ ಸನ್ನಿವೇಶವನ್ನು ಬಳಸಿಕೊಂಡು ಸುಬ್ರಹ್ಮಣ್ಯಶರ್ಮರು ಸಂಸ್ಕೃತ ಭಾಷಾಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆಧ್ಯಾತ್ಮಿಕ ಬರವಣಿಗೆಯಲ್ಲಿಯೂ ಹೆಚ್ಚುಹೆಚ್ಚಾಗಿ ತೊಡಗಿಕೊಂಡರು. 1920ರ ದಶಕದ ಆರಂಭದ ವರ್ಷಗಳಲ್ಲಿ ‘ಅಧ್ಯಾತ್ಮ ಪ್ರಕಾಶ’ ಮಾಸಪತ್ರಿಕೆಯನ್ನು ಆರಂಭಿಸುವ ಸಾಹಸವನ್ನೂ ಮಾಡಿ ಅದನ್ನು ಪಟ್ಟುಹಿಡಿದು ಮುಂದುವರಿಸಿದುದು ಈಗ ಇತಿಹಾಸ.
1935ರಲ್ಲಿ ಅಧ್ಯಾಪಕವೃತ್ತಿಯಿಂದ ನಿವೃತ್ತರಾದ ಮೇಲೆ ಸುಬ್ರಹ್ಮಣ್ಯಶರ್ಮರು ಪೂರ್ಣಾವಧಿ ವೇದಾಂತ ಪ್ರಸಾರಕರಾದರು. ಅವರು ಹಿಂದಿನಿಂದಲೇ ಸಂಕಲ್ಪಿಸಿದ್ದಂತೆ ಕಾರ್ಯಾಲಯದ ವಹಿವಾಟುಗಳನ್ನು ಅನ್ಯರಿಗೆ ವಹಿಸಿ ತುರೀಯಾಶ್ರಮ ಸ್ವೀಕರಿಸಿ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಗಳಾಗಿ ಯೋಗಪಟ್ಟ ಧರಿಸಿ ಪ್ರಕಾಶಗೊಂಡದ್ದು 1948ರ ಜೂನ್ 10ರಂದು.
ಕಾರ್ಯಾಲಯದ ಸ್ಥಾಪನೆ, ವಿಕಾಸ
ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಂನ್ಯಸ್ತರಾಗುವುದಕ್ಕೆ 28 ವರ್ಷ ಹಿಂದೆಯೇ (ಅವರು ಇನ್ನೂ ‘ಯಲ್ಲಂಬಳಸೆ ಸುಬ್ರಹ್ಮಣ್ಯಶರ್ಮ’ರಾಗಿದ್ದಾಗಲೇ) 1920ರಲ್ಲಿ ಸ್ಥಾಪಿಸಿದುದು ‘ಅಧ್ಯಾತ್ಮ ಪ್ರಕಾಶ ಕಾರ್ಯಾಲಯ’. ಸಾಮಾನ್ಯವಾಗಿ ‘ಪೀಠ’ಗಳೂ ಆಶ್ರಮಗಳೂ ಯಾವುದೋ ವಿಶಿಷ್ಟ ಸಂಪ್ರದಾಯದ ಪ್ರವರ್ತನೆಗಾಗಿ ಸ್ಥಾಪಿಸಲ್ಪಡುತ್ತವೆ. ಆದರೆ ‘ಅಧ್ಯಾತ್ಮ ಪ್ರಕಾಶ ಕಾರ್ಯಾಲಯ’ ಸ್ಥಾಪನೆಗೊಂಡದ್ದು ಜಾತಿ ಮತ್ತು ಸಂಪ್ರದಾಯಾದಿಗಳಿಗೆ ಅತಿರಿಕ್ತವಾಗಿ ಸಮಸ್ತರಿಗೂ ಶುದ್ಧವೇದಾಂತವನ್ನು ಪರಿಚಯಿಸಿ ಅವರನ್ನು ಪಾರಮಾರ್ಥಿಕ ಸಾಧನೆಯಲ್ಲಿ ತೊಡಗಿಸುವ ಏಕೈಕ ಉದ್ದೇಶದಿಂದ. ಈ ಉದ್ದೇಶದ ಈಡೇರಿಕೆಗಾಗಿ ಆಯ್ದುಕೊಂಡ ಮಾಧ್ಯಮಗಳು ವೇದಾಂತಗ್ರಂಥ ರಚನೆ ಮತ್ತು ಪ್ರಕಾಶನ, ಅಧ್ಯಾತ್ಮಜಾಗೃತಿಗಾಗಿ ‘ಅಧ್ಯಾತ್ಮ ಪ್ರಕಾಶ’ ಮಾಸಪತ್ರಿಕೆಯ ಪ್ರಕಟಣೆ, ಹೆಚ್ಚಿನ ಶಾಸ್ತ್ರಾಧ್ಯಯನಾಸಕ್ತಿ ಇದ್ದವರಿಗಾಗಿ ಪಾಠಪ್ರವಚನಗಳು, ಬೇರೆಬೇರೆಡೆಗಳಲ್ಲಿ ಆಸಕ್ತರಿಗಾಗಿ ವೇದಾಂತೋಪನ್ಯಾಸಗಳು, ಆಗಿಂದಾಗ ವೇದಾಂತಶಿಬಿರಗಳು – ಇವು. ಈ ಅಷ್ಟೂ ರೀತಿಯ ಚಟುವಟಿಕೆಗಳು ಕಳೆದ ನೂರು ವರ್ಷಗಳುದ್ದಕ್ಕೂ ಅವಿಚ್ಛಿನ್ನವಾಗಿ ನಡೆದುಕೊಂಡುಬಂದಿವೆ; ಈಗಲೂ ನಡೆದಿವೆ.
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಿಸಿರುವ ಕೃತಿಗಳಲ್ಲಿ ಹೆಚ್ಚಿನವು ಸ್ವಾಮಿಗಳವರೇ ರಚಿಸಿರುವವು. ಉಳಿದವು ಒಂದಷ್ಟು ಪ್ರಕಟಣೆಗಳು ಅನ್ಯರಚಿತಗಳು. ಇದುವರೆಗೆ ಪ್ರಕಟಗೊಂಡಿರುವ ಸುಮಾರು 250 ಗ್ರಂಥಗಳಲ್ಲಿ 200ಕ್ಕೂ ಹೆಚ್ಚಿನವು ಸ್ವಾಮಿಗಳು ಬರೆದಿರುವವು. ಇವುಗಳಲ್ಲಿ ಅತ್ಯಂತ ಸಾರಗರ್ಭಿತವಾದವು ಪ್ರಸ್ಥಾನತ್ರಯದ ಶಾಸ್ತ್ರಶುದ್ಧವೂ ವಿವರಣೆಗಳನ್ನೊಳಗೊಂಡವೂ ಆದ ಅನುವಾದ-ವ್ಯಾಖ್ಯಾನಗಳು. ಅಲ್ಲದೆ ಅನ್ಯ ಪ್ರಮುಖ ಮೂಲಕೃತಿಗಳ ಅನುವಾದಗಳೂ ಸಾಮಾನ್ಯರನ್ನು ಉದ್ದೇಶಿಸಿದ ಪ್ರವಚನರೀತಿಯ ಸ್ವತಂತ್ರ ಗ್ರಂಥಗಳೂ ಇವೆ. ಇವಕ್ಕಿಂತ ಮಿಗಿಲಾಗಿ ಶಾಂಕರ ದರ್ಶನದಲ್ಲಿ ಹೆಚ್ಚಿನ ಸ್ಫುಟೀಕರಣವನ್ನು ಅಪೇಕ್ಷಿಸುವ ಭಾಗಗಳ ಮೇಲಣ ವ್ಯಾಖ್ಯಾನಗಳಿಗೂ ವಿವಾದಗಳಿಗೆಡೆಮಾಡಿರುವ ಹಲವು ದಾರ್ಶನಿಕ ವಿವರಗಳ ಬಗೆಗೆ ಶಾಸ್ತ್ರಜಿಜ್ಞಾಸೆಯ ಬರಹಗಳೂ ಇವೆ.
ಹೀಗೆ ಗಾತ್ರದಲ್ಲಿಯೂ ಗುಣವತ್ತತೆಯಲ್ಲಿಯೂ ಅನುಪಮವೆನ್ನಬಹುದಾದ ಅಧ್ಯಾತ್ಮಸಾಹಿತ್ಯರಾಶಿಯು ಅಧ್ಯಾತ್ಮ ಪ್ರಕಾಶ ಕಾರ್ಯಾಲಯದಿಂದ ಪ್ರಕಟಗೊಂಡಿದೆ. ಮೊದಲಿಗೆ ಪ್ರಕಟವಾಗಿ ಆರೇಳು ದಶಕಗಳೇ ಕಳೆದಿದ್ದರೂ ಈ ಗ್ರಂಥಗಳಲ್ಲಿ ಹೆಚ್ಚಿನವು ಮತ್ತೆ ಮತ್ತೆ ಪುನರ್ಮುದ್ರಣಗೊಳ್ಳುತ್ತಿರುವುದೇ ಅವುಗಳ ಅನನ್ಯತೆಗೆ ಸಾಕ್ಷಿಯಾಗಿದೆ. ಸ್ವಾಮಿಗಳು ಬ್ರಹ್ಮೀಭೂತರಾಗಿ (1975) ನಾಲ್ಕೂವರೆ ದಶಕಗಳು ಕಳೆದಿದ್ದರೂ ಅವರು ರಚಿಸಿರುವ ಗ್ರಂಥಗಳಿಗೆ ನಿರಂತರ ಬೇಡಿಕೆ ಈಗಲೂ ಇದೆ. ಹೀಗೆ ಕಳೆದ ನಾಲ್ಕು ಪೀಳಿಗೆಗಳವರ ಅಧ್ಯಾತ್ಮಜ್ಞಾನದಾಹವನ್ನು ಈ ಉತ್ಕೃಷ್ಟ ಗ್ರಂಥರಾಶಿಯು ಪೂರೈಸಿದೆ, ಈಗಲೂ ಪೂರೈಸುತ್ತಿದೆ.
ಗ್ರಂಥಪ್ರಕಾಶನವೂ ಸೇರಿದಂತೆ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಎಲ್ಲ ಚಟುವಟಿಕೆಗಳೂ ಅತಿ ಸಾಮಾನ್ಯ ಜನತೆಯ ಸ್ವಪ್ರೇರಿತ ನೆರವನ್ನು ಅವಲಂಬಿಸಿಯೇ ನಡೆದಿವೆ ಎಂಬುದನ್ನು ಗಮನಿಸಬೇಕು. ಹೀಗೆ ಎಲ್ಲ ದೃಷ್ಟಿಗಳಿಂದಲೂ ಇದೊಂದು ಅನುಪಮ ವಾಙ್ಮಯಾಧ್ವರ.
ಅನುಭವಗಮ್ಯತೆಯೇ ಮಾನದಂಡ
ಉಪನಿಷದಾಧಾರಿತವಾದ ವೇದಾಂತದರ್ಶನವನ್ನು ಆತ್ಮವಿಜ್ಞಾನವೆಂದು ವರ್ಣಿಸುವ ಪ್ರಥೆ ಇದೆ. ಅದರಲ್ಲಿನ ಪ್ರತಿಪಾದನೆಗಳಿಗೆ ಅತಿಶಯ ಮಹತ್ತ್ವ ಬಂದಿರುವುದು ಅವು ಪಾರಂಪರಿಕವೆಂಬಷ್ಟೆ ಕಾರಣದಿಂದ ಅಲ್ಲ. ಆ ತತ್ತ್ವಗಳು ಅತ್ಯಂತ ಉದಾತ್ತಗಳಾಗಿರುವುದು ಮಾತ್ರವಲ್ಲದೆ ಪೂರ್ಣವಾಗಿ ಬುದ್ಧಿಸಮ್ಮತವೂ ಅನುಭವಗಮ್ಯವೂ ಆಗಿವೆ – ಎಂಬ ಕಾರಣದಿಂದ ಅವಕ್ಕೆ ‘ವಿಜ್ಞಾನ’ವೆಂಬ ವರ್ಣನೆ ಸಂದಿದೆ. ತಾರ್ಕಿಕತೆ, ಅನುಭವಗಮ್ಯತೆ – ಈ ಎರಡೂ ಕಾರಣಗಳಿಂದ ವೇದಾಂತವು ‘ವಿಜ್ಞಾನ’ವೆನಿಸಿದೆ. ಹೀಗೆ ಅದು ದೇಶಕಾಲಾತೀತವಾಗಿದೆ. ಈ ವೈಜ್ಞಾನಿಕತೆಯನ್ನು ತಮ್ಮ ವ್ಯಾಖ್ಯಾನಗಳ ಮೂಲಕ ಸಂದೇಹಾತೀತವಾಗಿ ಪ್ರಕಟೀಕರಿಸಲು ತಮ್ಮ ಜೀವನದುದ್ದಕ್ಕೂ ಶ್ರಮಿಸಿದವರು ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳು.
ಅಪೂರ್ವ ಅದ್ವೈತಜ್ಯೋತಿ
ಶ್ರೀಶಂಕರಭಗವತ್ಪಾದರ ಅದ್ವೈತಸಿದ್ಧಾಂತವು ವೇದವೆಂಬ ಕ್ಷೀರಸಾಗರದಿಂದ ಕಡೆದು ತೆಗೆದ ಅಮೃತ. ಈ ಅಮೃತವನ್ನುಂಡು ತೃಪ್ತರೂ ಕೃತಕೃತ್ಯರೂ ಆದ ಅನೇಕ ಮಹಾತ್ಮರು, ತಮ್ಮಂತೆ ಇತರರೂ ಶ್ರೇಯೋಭಾಗಿಗಳಾಗಲೆಂದು ಕಾರುಣ್ಯದಿಂದ ಅದನ್ನು ಹಂಚಲು ಪ್ರಯತ್ನಿಸಿದ್ದಾರೆ – ಸಾಕ್ಷಾತ್ತಾಗಿ ಶಿ?ರಿಗೆ ಬೋಧಿಸುವುದರಿಂದ ಮತ್ತು ಗ್ರಂಥಗಳ ರಚನೆಯಿಂದ. ಈ ಎರಡು ಬಗೆಯಿಂದಲೂ ತನುಮನಧನಗಳನ್ನು ಧಾರೆಯಾಗಿ ಎರೆದು ಧನ್ಯರೆನಿಸಿದ ಮಹಾತ್ಮರಲ್ಲಿ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಕೊಡುಗೆ ವಿಶಿಷ್ಟವಾದುದು.– ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮಾ
ವಿಶ್ರಾಂತಿಯನ್ನರಿಯದ ಜ್ಞಾನತಪಸ್ಸು ಅವರದು. ಅವರು ಸಮಾಜಕ್ಕೆ ನೀಡಿದುದು ಅಪಾರ ಮತ್ತು ಮೌಲಿಕ. ಬಾಹ್ಯ ಆಕಾರದಲ್ಲಿಯೂ ಜೀವನಕ್ರಮದಲ್ಲಿಯೂ ಮಾತ್ರವಷ್ಟೆ ಅವರು ವಿರಕ್ತರಾಗಿರಲಿಲ್ಲ. ವಿರಕ್ತಭಾವವು ಅವರ ಕಣಕಣವನ್ನೂ ಆವರಿಸಿದ್ದಿತು. ವೃದ್ಧಾಪ್ಯದಿಂದಾಗಿ ಪಕ್ಕದಲ್ಲಿ ಕುಳಿತಿದ್ದವರಿಗೂ ಕೇಳಿಸಲಾಗದಷ್ಟು ಅವರ ಶ್ವಾಸವು ದುರ್ಬಲವಾಗಿದ್ದ ಸ್ಥಿತಿಯಲ್ಲಿಯೂ ಅವರು ಬೋಧನೆಯನ್ನು ನಿಲ್ಲಿಸಲಿಲ್ಲ; ಸಂನ್ಯಾಸಧರ್ಮದ ಯಾವ ಕಟ್ಟಳೆಗಳಿಂದಲೂ ವಿರಮಿಸಲಿಲ್ಲ. ಶಾಂಕರಸಿದ್ಧಾಂತವು ಪರಿಪೂರ್ಣವೂ ಶಂಕಾತೀತವೂ ಆಗಿದೆಯೆಂದು ಹೃದಯದಾಳದಿಂದ ನಂಬಿದ್ದ ಅವರು ಆ ದರ್ಶನದ ಸೂಕ್ಷ್ಮತೆಗಳನ್ನು ಆಜೀವವೂ ಅನ್ವೇಷಿಸಿ ಪ್ರಕಾಶಗೊಳಿಸಿದರು. ಅವರು ಎಂದೂ ಶ್ರದ್ಧಾಜಾಢ್ಯಕ್ಕೆ ಒಳಗಾಗಲಿಲ್ಲ.
ಶ್ರೀ ಶಂಕರಭಗವತ್ಪಾದರ ಜೀವನ ಕುರಿತು ಅವರಷ್ಟು ಆಳವಾಗಿ ಶೋಧಿಸಿದವರು ವಿರಳ. ಶ್ರೀ ಶಂಕರರ ಹೆಸರಿನಲ್ಲಿ ಜನಜನಿತವಾಗಿರುವ ರಚನೆಗಳಲ್ಲಿ ನಿಖರವಾಗಿ ಯಾವುವು ಆಚಾರ್ಯಕೃತ, ಯಾವುವು ಅಲ್ಲ – ಎಂಬ ಬಗೆಗೆ ಇತಿಹಾಸದ, ಭಾಷಾಶಾಸ್ತ್ರಾದಿಗಳ ಹಾಗೂ ಆಂತರಿಕ ತಾರ್ಕಣೆಗಳ ಆಧಾರದ ಮೇಲೆ ಸ್ವಾಮಿಗಳು ವ್ಯಕ್ತಪಡಿಸಿರುವ ಅಭಿಮತಗಳನ್ನು ನಿರಾಕರಿಸುವುದು ದುಷ್ಕರ.
ಶಾಂಕರಭಾಷ್ಯಗಳನ್ನು ಆಧರಿಸಿ ತಾವು ಪ್ರಕಾಶಪಡಿಸಿರುವ ನಿಲುಮೆಗಳು ಜಿಜ್ಞಾಸುಗಳಿಗೆ ಮಾತ್ರವಲ್ಲದೆ ಅಧ್ಯಾತ್ಮಸಾಧಕರಿಗೂ ಪ್ರಯೋಜನಕರಗಳಾಗಬೇಕೆಂದು ಸದಾ ಎಚ್ಚರ ವಹಿಸುತ್ತಿದ್ದುದು ಸ್ವಾಮಿಗಳ ವೈಶಿಷ್ಟ್ಯ.
ಪ್ರಸ್ಥಾನತ್ರಯ ಹೃದಯದ ಪ್ರಕಟೀಕರಣ
ಸ್ವಾಮಿಗಳು ನೀಡಿರುವ ಪ್ರಸ್ಥಾನತ್ರಯ ಭಾಷ್ಯಗಳ ಅನುವಾದಗಳು ಕೇವಲ ಶಬ್ದಶಃ ಮಾಡಿದ ತರ್ಜುಮೆಗಳಲ್ಲ; ಉದ್ದಕ್ಕೂ ಒಳನೋಟಗಳಿಂದ ಕೂಡಿವೆ. ಕರಾರುವಾಕ್ಕಾದ ಅನುವಾದದೊಡಗೂಡಿ ಅವರು ಹೇರಳವಾಗಿ ಪೂರಕ ಟಿಪ್ಪಣಿಗಳನ್ನೂ ಉಲ್ಲೇಖ ನಿರ್ದೇಶನಗಳನ್ನೂ ಪಾಠಾಂತರ ಮಾಹಿತಿಗಳನ್ನೂ ನೀಡಿದ್ದಾರೆ. ಹೀಗೆ ಅವು ಒಂದೊಂದೂ ಮೇಲ್ಮಟ್ಟದ ಶೋಧಕೃತಿಯೇ ಆಗಿದೆ. ಸ್ವಯಂ ಶ್ರೇಷ್ಠ ವಿದ್ವಾಂಸರಾಗಿದ್ದ ವಿದ್ಯಾಲಂಕಾರ ಶಾಸ್ತ್ರಚೂಡಾಮಣಿ ಪ್ರೊ|| ಎಸ್.ಕೆ. ರಾಮಚಂದ್ರರಾಯರು ಉದ್ಗರಿಸಿರುವಂತೆ: “ಶ್ರೀಶಂಕರಾಚಾರ್ಯರೇ ಕನ್ನಡದಲ್ಲಿ ಬರೆದಿದ್ದಿದ್ದರೆ ಹೇಗೋ ಹಾಗೆ [ಸ್ವಾಮಿಗಳ] ಅನುವಾದ: ಮೂಲಾಭಿಪ್ರಾಯಗಳಿಗೆ ಏನೇನೂ ಏರುಪೇರು ಬರದಂತೆ, ಭಾವವು ಸ್ಪಷ್ಟವಾಗುವಂತೆ, ಸಂಸ್ಕೃತದ ಮಾತುಗಳು ಕನ್ನಡದ ತೊಡುಗೆ ತೊಟ್ಟು ಬಂದಿವೆ.”
ಪ್ರಸ್ಥಾನತ್ರಯದ ಮೇಲಿನ ಶಾಂಕರಭಾಷ್ಯಗಳು ಇಂದಿಗೂ ಲಭ್ಯವಿರುವಾಗ ಅವುಗಳ ಭಾಗಗಳಿಗೆ ಹೊಸ ಯುಕ್ತಿಸಮ್ಮತ ಸೇರ್ಪಡೆಗಳ ಅಥವಾ ವಿವರಣೆಗಳ ಆವಶ್ಯಕತೆ ಇದೆಯೇ? – ಎಂಬ ಶಂಕೆ ಉದಿಸಬಹುದು. ಸ್ವಲ್ಪ ಆಳಕ್ಕೆ ಇಳಿದು ಪರಿಶೀಲಿಸುವಾಗ ಇದರ ಆವಶ್ಯಕತೆಯ ಮನವರಿಕೆಯಾಗುತ್ತದೆ. ಶಂಕರರ ಕಾಲದಲ್ಲಿ ಅವೈದಿಕ ಮತಗಳ ಪ್ರಾಚುರ್ಯ ಇದ್ದಿತಾಗಿ ವೇದಾಧಾರಿತ ದರ್ಶನದ ಪುನಃಸ್ಥಾಪನೆ ಆಚಾರ್ಯರಿಗೆ ಆದ್ಯತೆಯ ಕಾರ್ಯವಾಗಿದ್ದಿತು. ಇದರ ಜೊತೆಜೊತೆಗೆ ಅದ್ವೈತವೇ ಸಮ್ಯಗ್ದರ್ಶನವೆಂದು ಸ್ಥಾಪಿಸಬೇಕಾಗಿತ್ತು. ಶಂಕರರ ಕಾಲದಲ್ಲಿ ಭಕ್ತಿಪಂಥವು ವ್ಯಾಪಕವಾಗಿ ಹರಡುತ್ತಿತ್ತು. ಭಕ್ತಿಯೂ ಜ್ಞಾನವೂ ಪರಸ್ಪರ ಪೂರಕಗಳೆಂದು ತಿಳಿಸಿಕೊಡಬೇಕಾಗಿದ್ದಿತು. ಈ ಉದ್ದೇಶಗಳಿಗೆ ಅವಶ್ಯವಿದ್ದ ತರ್ಕಪರಿಷ್ಕರಣಗಳನ್ನೂ ಆಸ್ವಾದ್ಯ ಶೈಲಿಯನ್ನೂ ಭಗವತ್ಪಾದರು ಆವಿಷ್ಕರಿಸಿದರು. ಅದಾದ ಸಾವಿರದಿನ್ನೂರು ವರ್ಷಗಳ ತರುವಾಯ ವೇದಾಂತಾನುಸಂಧಾನದಲ್ಲಿ ತೊಡಗಿಕೊಂಡ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಗಳ ಕಾಲಕ್ಕೆ ಹೊಸ ಸನ್ನಿವೇಶ ಇದ್ದಿತು. ಶಂಕರರ ಕಾಲದಲ್ಲಿ ಜನರಲ್ಲಿ ಇದ್ದ ಶಾಸ್ತ್ರಗ್ರಹಣಶಕ್ತಿ ಈಗ ಹ್ರಾಸಗೊಂಡಿತ್ತು. ಶಾಂಕರದರ್ಶನದ ಮುಂದುವರಿಕೆಯ ಹೆಸರಿನಲ್ಲಿ ಕಾಲಗತಿಯಲ್ಲಿ ಹಲವು ವಿಕೃತಿಗಳು ಹುಟ್ಟಿಕೊಂಡಿದ್ದವು. ನಿದರ್ಶನಕ್ಕೆ: ಶಾಂಕರಭಾಷ್ಯದ ಅಭಿಪ್ರಾಯಗಳಿಗೂ ಭಾಮತೀ ಧಾರೆಯ ವಿವರಣೆಗಳಿಗೂ ಅಲ್ಲಲ್ಲಿ ವ್ಯತ್ಯಾಸಗಳಿದ್ದವು. ಇಂತಹ ಜಿಜ್ಞಾಸ್ಯ ವಿಷಯಗಳ ಪರಾಮರ್ಶೆಯನ್ನೂ ಒಳಗೊಂಡು ಶಾಂಕರದರ್ಶನದ ಅಧಿಷ್ಠಾನವನ್ನು ದೃಢಗೊಳಿಸಬೇಕಾಯಿತು. ಈ ದಿಶೆಯ ಪ್ರತಿಪಾದನೆಗಳು ಈಗಿನ ಓದುಗರಿಗೆ ಕ್ಲಿಷ್ಟವೆನಿಸದ ಶೈಲಿಯಲ್ಲಿಯೂ ಇರಬೇಕಾಯಿತು. ಈ ದೃಷ್ಟಿಯೇ ಸ್ವಾಮಿಗಳ ಜೀವನಕಾರ್ಯವನ್ನು ಪ್ರೇರಿಸಿದುದು. ಸಂಗ್ರಹವಾಗಿ ಹೇಳಬೇಕೆಂದರೆ: ಶಂಕರಭಗವತ್ಪಾದರು ಸನಾತನಧರ್ಮವನ್ನು ಪುನಃಸ್ಥಾಪಿಸಿದಂತೆ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಶಾಂಕರದರ್ಶನವನ್ನು ಪುನಃಸ್ಥಾಪಿಸಲೆಳಸಿದರು.
ಒಂದು ಎದ್ದುಕಾಣುವ ಸಂಗತಿ ಇದು: ವಿಷಯದ ಜಟಿಲತೆಯ ಕಾರಣದಿಂದಾಗಿ ಶಾಂಕರಭಾಷ್ಯದಲ್ಲಿ ಪೂರ್ವಪಕ್ಷಗಳೂ ಸಿದ್ಧಾಂತಗಳೂ ಸರಣಿಯಾಗಿ ಬರುತ್ತವೆ. ವ್ಯುತ್ಪತ್ತಿಯ ಕೊರತೆ ಇದ್ದವರು ಅಲ್ಲಲ್ಲಿ ಗೊಂದಲಕ್ಕೆ ಸಿಲುಕುವ ಸಂಭವವಿರುತ್ತದೆ. ಸ್ವಾಮಿಗಳು ತಮ್ಮ ಅನುವಾದಗ್ರಂಥಗಳಲ್ಲಿ ಇಂತಹ ತೊಡಕುಗಳನ್ನೆಲ್ಲ ನಿವಾರಿಸಿ ವಿಷಯವಿಭಜನೆಯನ್ನು ಸ್ಪಷ್ಟೀಕರಿಸಿ ಸುಲಭಗ್ರಾಹ್ಯಗೊಳಿಸಿದ್ದಾರೆ. ಪಾಠಾಂತರಗಳನ್ನೂ ಟಿಪ್ಪಣೀಕರಿಸಿದ್ದಾರೆ. ತಮ್ಮ ಸ್ವೀಯ ಹೆಚ್ಚುವರಿ ವಿವರಗಳನ್ನು ಮೂಲದಲ್ಲಿ ಮಿಶ್ರಮಾಡದೆ ಪ್ರತ್ಯೇಕವಾಗಿ ನೀಡುತ್ತಹೋಗಿದ್ದಾರೆ. ಹೆಚ್ಚಿನ ವಿವರಣೆಗಳನ್ನು ಅಪೇಕ್ಷಿಸುವ ಗ್ರಂಥಾಂಶಗಳ ಬಗೆಗೆ ಪ್ರತ್ಯೇಕ ಪರಿಶಿಷ್ಟಗಳನ್ನು ನೀಡಿದ್ದಾರೆ.
ಅಭಿನವಶಂಕರರ ಸಾರಸ್ವತ ಸೇವೆ
ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳವರು ಉಸಿರಾಡಿದ ಒಂದೊಂದು ಗಳಿಗೆಯೂ ವೇದಾಂತಕ್ಕೇ ಮೀಸಲಾಗಿದ್ದಿತು. ಗುರುಗಳು ಕೈಗೊಂಡು ನೆರವೇರಿಸಿದ ಕೆಲಸ ಶುದ್ಧಶಾಂಕರವೆನ್ನಬಹುದಾದ ಸುಮಾರು ಒಂದು ಸಾವಿರದ ಮುನ್ನೂರು ವ?ಗಳ ಹಿಂದೆ ಭಗವತ್ಪಾದರು ಮಾಡಿದ ಕೆಲಸದಂತೆ ಶುದ್ಧವೇದಾಂತಪ್ರಕ್ರಿಯೆಯನ್ನು ತಿಳಿಸಿಕೊಡುವುದು. ಔಪನಿ?ದ ದರ್ಶನದ ಸಾಂಪ್ರದಾಯಿಕ ನಿಲವನ್ನು ಸ್ಪ?ಪಡಿಸಿ, ಅದನ್ನು ಮರೆಮಾಚುವ, ಹದಗೆಡಿಸುವ, ಗಾಸಿಪಡಿಸುವ ಪ್ರಯತ್ನಗಳಿಂದ ಜಿಜ್ಞಾಸುಗಳನ್ನೂ ಮುಮುಕ್ಷುಗಳನ್ನೂ ಪಾರುಮಾಡಿದವರು ಶ್ರೀಮಚ್ಚಂಕರರು. ನಮ್ಮ ಕಾಲದಲ್ಲಿಯೂ ಇಂಥದೊಂದು ಪರಿಸ್ಥಿತಿ ಮತ್ತೆ ತಲೆದೋರಿಕೊಂಡಾಗ, ಶಾಂಕರದರ್ಶನದ ನಿಲವನ್ನು ಮರೆಮಾಚಿದ ವ್ಯಾಖ್ಯಾನಗಳ ಹಿಡಿತದಿಂದ ನಮ್ಮನ್ನು ಪಾರುಮಾಡುವ ಪ್ರಯತ್ನ ಶ್ರೀಶ್ರೀಗಳವರಿಂದ ನಡೆಯಿತು.
.- ವಿದ್ಯಾಲಂಕಾರ ಶಾಸ್ತ್ರಚೂಡಾಮಣಿ ಪ್ರೊ|| ಎಸ್.ಕೆ. ರಾಮಚಂದ್ರರಾವ್
ಜಿಜ್ಞಾಸುಗಳಿಗೆ ತೋರಬಹುದಾದ ಬಹುತೇಕ ಎಲ್ಲ ಸಂದೇಹಾಂಶಗಳನ್ನೂ ಸ್ವಾಮಿಗಳು ನಿರೀಕ್ಷಿಸಿ ವಿಶ್ಲೇಷಿಸಿ ಗ್ರಾಹ್ಯವಾದ ಸ್ವಾಭಿಪ್ರಾಯಗಳನ್ನು ನೀಡಿದ್ದಾರೆ.
ನಿದರ್ಶನಕ್ಕೆ: ಕೇನೋಪನಿಷತ್ತಿನ ಮೇಲೆ ಶಂಕರರ ಎರಡು ಭಾಷ್ಯಗಳು ಪ್ರಚಲಿತವಿವೆಯಷ್ಟೆ. ಇದರ ಬಗೆಗೆ ಸ್ವಾಮಿಗಳು ಸೂಕ್ಷ್ಮ ವಿಶ್ಲೇಷಣೆ ನಡೆಸಿದ್ದಾರೆ; ಒಂದು ಭಾಷ್ಯದಲ್ಲಿ ಇರುವ ಅಸಮಗ್ರತೆಗಳನ್ನು ಇನ್ನೊಂದು ಭಾಷ್ಯವು ಪೂರೈಸಿರುವ ಅಂಶಗಳನ್ನು ಗುರುತಿಸಿ ವ್ಯಾಖ್ಯೆ ಮಾಡಿದ್ದಾರೆ. ಎರಡು ಭಾಷ್ಯಗಳೂ ಏಕಕರ್ತೃಕವಿರಲಾರದು ಎಂಬ ಸಂಭವನೀಯತೆಯನ್ನು ತಮ್ಮ ಸ್ವೀಯ ಅಭಿಪ್ರಾಯವಾಗಿ ಮಂಡಿಸಿದ್ದರೂ, ಜಿಜ್ಞಾಸುಗಳ ಸೌಕರ್ಯಕ್ಕಾಗಿ ಎರಡೂ ಭಾಷ್ಯಗಳ ಯಥಾವತ್ ಅನುವಾದಗಳನ್ನು ಕೊಟ್ಟಿದ್ದಾರೆ.
ವೇದಾಂತಸಂವಾದದಲ್ಲಿ ಪದೇ ಪದೇ (ಒಮ್ಮೊಮ್ಮೆ ಸಾಮಾನ್ಯವಾಗಿ, ಒಮ್ಮೊಮ್ಮೆ ಪಾರಿಭಾಷಿಕವಾಗಿ) ಬಳಕೆಯಾಗುವ ‘ಅವಿದ್ಯೆ’, ‘ಮಿಥ್ಯೆ’ ಮೊದಲಾದ ಶಬ್ದಗಳಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಯಾವಾವ ಅರ್ಥಗಳು ಸಲ್ಲುತ್ತವೆ – ಎಂಬ ಬಗೆಗೆ ಸ್ವಾಮಿಗಳು ವಿಸ್ತಾರವೂ ನಿಷ್ಕೃಷ್ಟವೂ ಆದ ಪರಾಮರ್ಶನೆ ನಡೆಸಿ ಇದಮಿತ್ಥಂ ಎಂಬಂತೆ ದಿಗ್ದರ್ಶನ ಮಾಡಿರುವುದು ವೇದಾಂತಾಸಕ್ತರಿಗೆ ವರದಾನವಾಗಿದೆ.
ಶಾಸ್ತ್ರದೃಷ್ಟಿಯಿಂದ ಜಟಿಲತೆಯನ್ನೊಳಗೊಂಡ ‘ಅವಿದ್ಯೆ’, ‘ಮಾಯೆ’ – ಇವುಗಳ ಪ್ರಸ್ತಾವಗಳು ಕಠೋಪನಿಷತ್ ಮೊದಲಾದೆಡೆ ಬಂದಿವೆ. ಅವನ್ನು ಕೂಲಂಕಷವಾಗಿ ಪರಾಮರ್ಶಿಸಿ ಸ್ವಾಮಿಗಳು ವಿಶದಗೊಳಿಸಿದ್ದಾರೆ. ಸಾಮಾನ್ಯವಾಗಿ ಎಲ್ಲೆಡೆ ಅವಿದ್ಯೆ ಎಂಬ ಶಬ್ದವು ಕರ್ಮಪರವಾಗಿ ಉಪನಿಷತ್ತುಗಳಲ್ಲಿ ಪ್ರಯುಕ್ತವಾಗಿರುವುದನ್ನು ಗಮನಿಸಿ ಸ್ವಾಮಿಗಳು ಇದನ್ನು ಅಧ್ಯಾಸಭಾಷ್ಯಪ್ರಯುಕ್ತ ‘ಅವಿದ್ಯಾ’ ಶಬ್ದದೊಡನೆ ಸಮೀಕರಿಸಬಾರದು, ಹೀಗಾಗಿ ಉಪಾಧಿಸ್ವಭಾವಭೇದ ದೃಷ್ಟಿಯಿಂದಷ್ಟೇ ಅವಿದ್ಯೆ, ಮಾಯಾ ಎಂಬ ಪ್ರಸ್ತಾವಗಳು ಬಂದಿದ್ದರೂ ‘ಅಬ್ರಹ್ಮ’ವಾಗಿ ತೋರುವುದೂ ದಿಟವಾಗಿ ಬ್ರಹ್ಮವೇ – ಎಂಬ ಭಾಷ್ಯದ ನಿಲವಿಗೆ ಬಾಧೆ ಬರದು – ಎಂದು ವಿವರಿಸಿದ್ದಾರೆ.
ಸಂದಿಗ್ಧಾಂಶಗಳ ಪರೀಕ್ಷಣೆ
ಮಾಂಡೂಕ್ಯೋಪನಿಷದ್ ಭಾಷ್ಯದ ಶೈಲಿ, ಬೇರಾವ ಉಪನಿಷದ್ ಭಾಷ್ಯದಲ್ಲಿಯೂ ಕಾಣದ ಮಂಗಲ ಶ್ಲೋಕಗಳು – ಇಂತಹ ಅಂಶಗಳನ್ನು ಆಧರಿಸಿ ಮಾಂಡೂಕ್ಯಭಾಷ್ಯವು ಶಂಕರಕೃತವಲ್ಲದಿರಬಹುದು ಎಂಬ ಹಲವರ ವಾದವನ್ನು ಸ್ವಾಮಿಗಳು ಭಾಷ್ಯದ ವಿಷಯಪ್ರತಿಪಾದನರೀತಿಯು ಶಾಂಕರ ರೀತಿಯದೇ ಆಗಿರುವುದನ್ನು ಆಧರಿಸಿ ಭಾಷ್ಯವು ಶಂಕರಕೃತವೇ ಎಂದು ನಿರ್ಣಯಿಸಿದ್ದಾರೆ.
ಅದ್ವೈತಪ್ರಕ್ರಿಯೆಗೆ ಸಂಬಂಧಿಸಿದಂತೆ ಬ್ರಹ್ಮಸೂತ್ರಭಾಷ್ಯವೂ ಬೃಹದಾರಣ್ಯಕಭಾಷ್ಯವೂ ಒಂದಕ್ಕೊಂದು ಪೂರಕವಾಗಿವೆ ಎಂದು ಗುರುತಿಸಿ ಸ್ಥಾಪಿಸಿರುವುದು ಸ್ವಾಮಿಗಳ ಮತ್ತೊಂದು ಅನನ್ಯ ಕೊಡುಗೆ; ಅಂತೆಯೇ ಬೃಹದಾರಣ್ಯಕಭಾಷ್ಯಕ್ಕೂ ತೈತ್ತಿರೀಯೋಪನಿಷದ್ ಭಾಷ್ಯಕ್ಕೂ ನಡುವೆ ತೋರುವ ಅಂತಃಸಂಬಂಧಗಳನ್ನು ಎತ್ತಿ ತೋರಿಸಿರುವುದೂ ಸ್ವಾಮಿಗಳ ಒಂದು ವಿಶೇಷ ಕೊಡುಗೆ.
ಶ್ವೇತಾಶ್ವತರ ಉಪನಿಷತ್ತಿನಲ್ಲಿ ದ್ವೈತ-ಅದ್ವೈತ, ನಿರ್ಗುಣ-ಸಗುಣ, ಯೋಗ-ಸಾಂಖ್ಯ ಮತ್ತಿತರ ಹಲವಾರು ಸಂಕೀರ್ಣ ವಿಷಯಗಳು ಬಂದಿವೆ. ಉಪಲಬ್ಧ ಭಾಷ್ಯದಲ್ಲಿ ಶಂಕರರ ಬೇರೆ ಬರಹಗಳಲ್ಲಿ ಕಾಣದಂತಹ ಪುರಾಣೋದ್ಧೃತಗಳು ನುಸುಳಿರುವುದನ್ನೂ ಶೈಲಿಯ ಶಿಥಿಲತೆಯನ್ನೂ ಗಮನಿಸಿ ಸ್ವಾಮಿಗಳು ಶ್ವೇತಾಶ್ವತರಭಾಷ್ಯವು ಆಚಾರ್ಯರದಿರಲಾರದು ಎಂದು ನಿರ್ಣಯಿಸಿದ್ದಾರೆ. ಆದರೆ ಮೂಲ ಉಪನಿಷತ್ತಿನ ಶ್ರುತಿತ್ವವನ್ನು ಅವರು ಅಲ್ಲಗಳೆದಿಲ್ಲ.
ಆಕಾರದ ದೃಷ್ಟ್ಯಾ ‘ಸ್ಮೃತಿ’ ಎನಿಸಿರುವ ಭಗವದ್ಗೀತೆಯನ್ನು ಶಾಸ್ತ್ರವೆಂದು ಗಣಿಸಿರುವುದು ಯುಕ್ತವೇ? – ಎಂದು ಹಲವರು ಎತ್ತಿರುವ ಪ್ರಶ್ನೆಯನ್ನು ಸ್ವಾಮಿಗಳು ಕೂಲಂಕಷವಾಗಿ ವಿಮರ್ಶಿಸಿದ್ದಾರೆ. ಶಂಕರರಿಗಿಂತ ಹಿಂದಿನ ಕಾಲದಲ್ಲಿಯೇ ಗೀತೆಯು ಶಾಸ್ತ್ರವೆಂದು ಕರೆಯಲ್ಪಟ್ಟಿರುವ ಸಂಗತಿಗೆ ಗಮನ ಸೆಳೆದು, ಗೀತೆಯ ಪ್ರಮುಖಾಂಶಗಳು ಉಪನಿಷದನುವರ್ತಿಗಳೆಂಬುದನ್ನು ಗಣಿಸಿ ಗೀತೆಯ ಶಾಸ್ತ್ರತ್ವವನ್ನು ಸಮರ್ಥಿಸಿದ್ದಾರೆ.
ವೇದಾಂತವಿಷಯಗಳು ಭಗವದ್ಗೀತೆಯಲ್ಲಿ ಬೇರೆಬೇರೆಯಾಗಿ ಚದರಿರುವಂತೆ ಮೇಲ್ನೋಟಕ್ಕೆ ಕಾಣುವುದರಿಂದ ಅಭ್ಯಾಸಿಗಳ ಮನಸ್ಸಿನಲ್ಲಿ ತೋರಬಹುದಾದ ಶಂಕೆಗಳನ್ನು ಪರಿಹರಿಸಿ ಗೀತೆಯಲ್ಲಿನ ದರ್ಶನವನ್ನು ಸಮಂಜಸವೂ ಗ್ರಾಹ್ಯವೂ ಆದ ರೀತಿಯಲ್ಲಿ ಪರಿಚಯಿಸಲು ಸ್ವಾಮಿಗಳು ‘ಗೀತಾ-ಶಾಸ್ತ್ರಾರ್ಥ-ಸರ್ವಸ್ವ’ ಎಂಬ ಸ್ವತಂತ್ರ ಗ್ರಂಥವನ್ನೇ ರಚಿಸಿ ಉಪಕರಿಸಿದ್ದಾರೆ. ಗೀತೆಯ ಸ್ಮೃತಿಸ್ಥಾನೀಯತೆ, ಶಾಸ್ತ್ರತ್ವ ಮೊದಲಾದ ಅಂಶಗಳನ್ನೂ ಸ್ವಾಮಿಗಳು ಸ್ಫುಟಗೊಳಿಸಿದ್ದಾರೆ.
ಶಾಂಕರಭಾಷ್ಯದ ಸಾರ್ವಭೌಮತೆ
ಬ್ರಹ್ಮಸೂತ್ರಗಳ ಮೇಲಣ ಶಂಕರಾಚಾರ್ಯಕೃತ ಭಾಷ್ಯವು ಭಾಷ್ಯಗಳಲ್ಲೆಲ್ಲ ಪ್ರಾಚೀನತಮವಾಗಿರುವುದು, ವೇದಾಂತದರ್ಶನಕ್ಕೆ ಅಡಿಪಾಯದಂತಿರುವುದು, ವಿಚಾರಪ್ರಧಾನವಾಗಿರುವುದು, ಜ್ಞಾನದಿಂದಲೇ ಕೈವಲ್ಯವೆಂಬುದನ್ನು ಶಂಕಾತೀತವಾಗಿ ಸ್ಥಾಪಿಸಿರುವುದು, ಬುದ್ಧಿಗೋಚರ ಯುಕ್ತಿಗೂ ಅನುಭವಕ್ಕೂ ವಿರೋಧಿಯಲ್ಲದಿರುವುದು, ಭಾಷಾಗಾಂಭೀರ್ಯ, ಪ್ರಮುಖವಾಕ್ಯಗಳ ಹೇರಳ ಉದ್ಧೃತಗಳು, ಅನಂತರಕಾಲದ ಭಿನ್ನ ಸಂಪ್ರದಾಯ ಭಾಷ್ಯಗಳೆಲ್ಲಕ್ಕೂ ಅದೇ ನೇರ ಪ್ರೇರಕವಾಗಿರುವುದು – ಈ ಹಲವು ಕಾರಣಗಳಿಂದಾಗಿ ಬ್ರಹ್ಮಸೂತ್ರ ಶಾಂಕರಭಾಷ್ಯಕ್ಕೆ ಸರ್ವೋನ್ನತ ಸ್ಥಾನ ಸಂದಿದೆ – ಎಂದು ಸ್ವಾಮಿಗಳು ವಿಶದೀಕರಿಸಿದ್ದಾರೆ.
ಬಾದರಾಯಣಸೂತ್ರಗಳು ಅದ್ವೈತಪರವೇ ಹೊರತು ಬೇರೆಯಲ್ಲ ಎಂಬುದನ್ನೂ ಸ್ವಾಮಿಗಳು ವಿಮರ್ಶನಪೂರ್ವಕ ಸ್ಥಾಪಿಸಿದ್ದಾರೆ.
ಪ್ರಸ್ಥಾನತ್ರಯಭಾಷ್ಯಗಳ ಅನುವಾದ ಮಾತ್ರವಲ್ಲದೆ ಅವಕ್ಕೆ ಪೂರಕಗಳಾದ ಪದ್ಮಪಾದಾಚಾರ್ಯರ ‘ಪಂಚಪಾದಿಕಾ’, ಸುರೇಶ್ವರಾಚಾರ್ಯರ ‘ನೈಷ್ಕಮ್ರ್ಯಸಿದ್ಧಿ’ ಮೊದಲಾದ ಶಾಸ್ತ್ರಗ್ರಂಥಗಳನ್ನೂ ಸ್ವಾಮಿಗಳು ಅನುವಾದಿಸಿ ಕೊಟ್ಟಿದ್ದಾರೆ.
ಹೀಗೆ ಸ್ವಾಮಿಗಳ ಒಂದೊಂದು ಬರಹವೂ ಅನುವಾದ-ವಿವರಣೆ ಮಾತ್ರವಲ್ಲದೆ ಸಂಶೋಧನಾಂಶಗಳನ್ನು ಒಳಗೊಂಡಿದೆ. ಆಚಾರ್ಯರ ‘ಉಪದೇಶಸಾಹಸ್ರೀ’ ಮೊದಲಾದ ಪ್ರಕರಣಗ್ರಂಥಗಳ ಅನುವಾದದೊಡಗೂಡಿ ಸ್ವಾಮಿಗಳು ಆ ಗ್ರಂಥಗಳ ಕರ್ತೃತ್ವವಿಚಾರಾದಿ ಅಂಶಗಳ ಮೇಲೆ ಶೋಧಪೂರ್ವಕ ಜಿಜ್ಞಾಸೆ ನಡೆಸಿದ್ದಾರೆ.
ಸ್ವಾಮಿಗಳ ಸ್ವತಂತ್ರ ಗ್ರಂಥಗಳಾದರೋ ಬೇರೆಬೇರೆ ಸ್ತರಗಳ ಅಭ್ಯಾಸಿಗಳ ಆವಶ್ಯಕತೆಯನ್ನು ಪೂರೈಸಿವೆ. ಇವಷ್ಟನ್ನೇ ಅವಧಾನಪೂರ್ವಕ ಅಧ್ಯಯನ ಮಾಡಿದಲ್ಲಿ ವೇದಾಂತದರ್ಶನದ ಸುಷ್ಠುವಾದ ಪರಿಚಯ ದೊರೆಯುವುದು ನಿಶ್ಚಿತ. ಈ ಸ್ವತಂತ್ರ ರಚನೆಗಳಲ್ಲಿ ಅವಶ್ಯ ಗಮನಿಸಬೇಕಾದ ಪ್ರಮುಖ ಕೃತಿಗಳು – ಕನ್ನಡದಲ್ಲಿ ‘ಪರಮಾರ್ಥ-ಚಿಂತಾಮಣಿ’ ಮತ್ತು ‘ಶಂಕರಭಗವತ್ಪಾದ-ವೃತ್ತಾಂತ-ಸಾರಸರ್ವಸ್ವ’; ಸಂಸ್ಕೃತದಲ್ಲಿ ‘ಮಾಂಡೂಕ್ಯರಹಸ್ಯ ವಿವೃತಿಃ’. ಈ ಒಂದೊಂದೂ ಅದ್ಭುತ ಶೋಧಕೃತಿಯೇ ಆಗಿದೆ.
ಮೇಲಿನವು ಮಧ್ಯಮವರ್ಗಾಧಿಕಾರಿಗಳನ್ನು ಉದ್ದೇಶಿಸಿರುವವಾದರೆ ಸ್ವಲ್ಪ ಹೆಚ್ಚಿನ ಸ್ತರದ ಶಾಸ್ತ್ರಾಸಕ್ತರಿಗಾಗಿ ಅವರು ರಚಿಸಿರುವ ‘ವೇದಾಂತ-ಪ್ರಕ್ರಿಯಾ-ಪ್ರತ್ಯಭಿಜ್ಞಾ’ ಒಂದು ಅನನ್ಯವೂ ಅತ್ಯುಪಯುಕ್ತವೂ ಆದ ಆಕರಗ್ರಂಥವಾಗಿದೆ.
ವಿಶಿಷ್ಟ ಕೊಡುಗೆಗಳು
ಅನುವಾದ-ಪ್ರತಿಪಾದನ ಗ್ರಂಥಗಳನ್ನು ವಿಪುಲವಾಗಿ ನೀಡಿರುವ ಸ್ವಾಮಿಗಳು ಅದ್ವೈತಸಿದ್ಧಾಂತಪರಂಪರೆಯ ಇತಿಹಾಸಕಾರರೂ ಆಗಿದ್ದಾರೆ. ಭಗವತ್ಪಾದಭಾಷ್ಯದಲ್ಲಿ ಉಲ್ಲೇಖಗೊಂಡಿರುವ ಆತ್ರೇಯ, ಉಪವರ್ಷ ಮೊದಲಾದ ಪೂರ್ವಾಚಾರ್ಯರ ವಾದಸರಣಿಗಳ ಇತಿಹಾಸವನ್ನು ನಮಗೆ ತಿಳಿದಂತೆ ದೇಶದಲ್ಲಿಯೇ ಮೊದಲ ಬಾರಿಗೆ ರಚಿಸಿರುವವರು ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು. ಅಂತೆಯೇ ಅದ್ವೈತದರ್ಶನ ವಿಕಾಸದಲ್ಲಿ ಗೌಡಪಾದ-ಗೋವಿಂದಪಾದರ ಸ್ಥಾನವನ್ನು ಖಚಿತವಾಗಿ ಗುರುತಿಸಿರುವುದು ಸ್ವಾಮಿಗಳ ಮತ್ತೊಂದು ಮಹತ್ತ್ವದ ಕೊಡುಗೆ.
ವೇದಾಂತದರ್ಶನದ ಅಡಿಪಾಯ ಎನ್ನಬಹುದಾದ ಹಲವು ಅಂಶಗಳಿವೆ. ಉದಾಹರಣೆಗೆ ಕರ್ಮ-ಜ್ಞಾನ ಸಂಬಂಧ, ಇತ್ಯಾದಿ. ಈ ವಿಷಯಗಳ ಪ್ರಸ್ತಾವ ಬರುವೆಡೆಗಳಲ್ಲಿ (ಉಪನಿಷದ್ಭಾಷ್ಯಗಳು ಇತ್ಯಾದಿ) ಈ ವಿಷಯಗಳನ್ನು ಸಂದೇಹಕ್ಕೆ ಎಡೆಯಿಲ್ಲದಂತೆ ಸ್ವಾಮಿಗಳು ಪರಾಮರ್ಶಿಸಿ ದಿಗ್ದರ್ಶನ ಮಾಡಿದ್ದಾರೆ. ಈ ಕಾರಣದಿಂದಾಗಿ ಸ್ವಾಮಿಗಳ ತಥೋಕ್ತ ‘ಅನುವಾದ’ ಕೃತಿಗಳನ್ನು ಅವಧಾನಪೂರ್ವಕ ಅವಲೋಕಿಸಿದಲ್ಲಿ ವೇದಾಂತದರ್ಶನದ ಸ್ವರೂಪವು ಅಭ್ಯಾಸಿಗಳಿಗೆ ಅವಗತವಾಗಬಲ್ಲದೆಂಬುದು ನಿಶ್ಚಿತ. ಸ್ವಾಮಿಗಳ ‘ಪರಮಾರ್ಥ-ಚಿಂತಾಮಣಿ’ ಗ್ರಂಥದಲ್ಲಿ ಪ್ರಧಾನವಾಗಿ ಪರಾಮರ್ಶನೆಗೊಂಡಿರುವುದು ಅವಸ್ಥಾತ್ರಯ ವಿವೇಚನೆಯೇ. ಗೌಡಪಾದೀಯ ವಿವರಗಳು ವೇದಾಂತಪರಂಪರೆಯವೇ ಹೊರತು ಬೌದ್ಧಧಾರೆಯವಲ್ಲ ಎಂದು ಸ್ಥಾಪಿಸಿರುವ ಸ್ವಾಮಿಗಳ ‘ಮಾಂಡೂಕ್ಯರಹಸ್ಯವಿವೃತಿಃ’ ಗ್ರಂಥವು ದಾರ್ಶನಿಕವಾಗಿ ಮಹತ್ತ್ವದ್ದಾಗಿದ್ದು ಕನ್ನಡದಲ್ಲಿಯೂ (‘ಗೌಡಪಾದಹೃದಯ’) ಲಭ್ಯವಿದೆ.
ಸ್ವಾಮಿಗಳ ‘ಶಂಕರಭಗವತ್ಪಾದ-ವೃತ್ತಾಂತ-ಸಾರಸರ್ವಸ್ವ’ ಗ್ರಂಥವಂತೂ ಶಂಕರರನ್ನು ಕುರಿತ ಅತ್ಯಂತ ಪ್ರಮಾಣಬದ್ಧ ಶೋಧಕೃತಿಯಾಗಿದೆ.
ಜೀವದ ಅವಸ್ಥಾಭೇದಗಳು, ಸಗುಣ-ನಿರ್ಗುಣ ಮೀಮಾಂಸೆ ಮೊದಲಾದ ವಿಷಯಗಳೆಲ್ಲ ‘ಅಧ್ಯಾರೋಪಾಪವಾದ’ ಪ್ರಕ್ರಿಯೆಯಲ್ಲಿಯೇ ಅಂತರ್ಗತವಿವೆ – ಎಂದು ಸಮರ್ಥವಾಗಿ ಮಂಡಿಸಿರುವವರು ಸ್ವಾಮಿಗಳು. ಈ ಕಾರಣದಿಂದಲೇ ಅಧ್ಯಾರೋಪಾಪವಾದ ಪ್ರಕಟೀಕರಣವು ವೇದಾಂತಪ್ರಕ್ರಿಯೆಗಳಲ್ಲೆಲ್ಲ ಸಾರ್ವಭೌಮಸ್ಥಾನೀಯವಾದದ್ದೆಂದು ಪ್ರಸಿದ್ಧವಿದೆ.
ಸ್ವಾಮಿಗಳ ಸಾಧನೆ: ಮೈಲಿಗಲ್ಲು
ಮಾಂಡೂಕ್ಯದ ಅಲಾತಶಾಂತಿಪ್ರಕರಣ ಮೊದಲಾದೆಡೆ ಬಂದಿರುವ ಹಲವು ಶಬ್ದಪ್ರಯೋಗಗಳು ಬೌದ್ಧದರ್ಶನದಿಂದ ಬಂದವೆಂದು ಹೊರತೋರಿಕೆಗೆ ಕಂಡರೂ ಅವೆಲ್ಲ ಅದ್ವೈತ ವೇದಾಂತ ಧಾರೆಯವೇ ಹೊರತು ಬೌದ್ಧಮೂಲದವಲ್ಲ – ಎಂದು ಸ್ವಾಮಿಗಳು ದೃಢವಾಗಿ ಸ್ಥಾಪಿಸಿದ್ದಾರೆ.
ಶಾಂಕರವಾಙ್ಮಯದಿಂದ ಅನಂತರದ ಕಾಲದಲ್ಲಿ ಅನುವೃತ್ತಗಳಾದ ಅಭಿಮತಗಳಷ್ಟನ್ನೂ ವಿಮರ್ಶನೆಗೊಳಪಡಿಸಿರುವವರು ನಮಗೆ ತಿಳಿದಂತೆ ಸ್ವಾಮಿಗಳು ಮಾತ್ರ.
ಪ್ರಧಾನವಾಗಿ ಶಾಂಕರಾದ್ವೈತ ಪ್ರತಿಪಾದನೆಗೇ ಮೀಸಲಾಗಿ ನೂರು ವರ್ಷ ಕಾಲ ಸತತವಾಗಿಯೂ ಉನ್ನತಮಟ್ಟದಲ್ಲಿಯೂ ನಡೆದಿರುವ ‘ಅಧ್ಯಾತ್ಮ ಪ್ರಕಾಶ’ ಮಾಸಪತ್ರಿಕೆಯಷ್ಟು ನೈರಂತರ್ಯದಿಂದ ಮುಂದುವರಿದಿರುವ ವೇದಾಂತವಿಷಯಕ ನಿಯತಕಾಲಿಕೆ ಬಹುಶಃ ಬೇರೆ ಇರಲಾರದು.
ಶೈಲಿಯ ರಮ್ಯತೆ, ಜನಪ್ರಿಯತೆ ಮೊದಲಾದ ಕಾರಣಗಳಿಂದಾಗಿ ‘ವಿವೇಕಚೂಡಾಮಣಿ’ ಗ್ರಂಥವು ಗಣ್ಯತೆ ಪಡೆದುಕೊಂಡಿದ್ದರೂ ಅಲ್ಲಿಯ ಹಲವು ಮಂಡನೆಗಳು ಶುದ್ಧವೇದಾಂತಪ್ರಕ್ರಿಯೆಗೆ ಹೊಂದಿಕೆಯಾಗುವುದು ದುಷ್ಕರ – ಎಂಬ ಸ್ವಾಮಿಗಳ ವಿಶ್ಲೇಷಣೆಯು ಪರಾಮರ್ಶನಾರ್ಹವಾಗಿದೆ.
ಹೀಗೆ ಯಾವ ವಿವರಾಂಶಗಳ ಬಗೆಗೂ ಈಗಿನ ಮತ್ತು ಮುಂದಿನ ಕಾಲದ ಅಭ್ಯಾಸಿಗಳ ಮನಸ್ಸಿನಲ್ಲಿ ಶಾಂಕರಾದ್ವೈತದರ್ಶನದ ಬಗೆಗೆ ಯಾವುದೇ ಸಂದೇಹಗಳು ಉಳಿಯದಿರಲಿ – ಎಂಬ ನೆಲಗಟ್ಟಿನಿಂದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಆಜೀವವೂ ಪರಿಶ್ರಮಿಸಿರುವುದನ್ನು ಭಾರತದ ಸಾರಸ್ವತಜಗತ್ತಿನಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಿದರೆ ತಪ್ಪಾಗದೆನಿಸುತ್ತದೆ.
ವೇದಾಂತಮಾರ್ಗಕ್ಕೂ ಅನ್ಯ ಉಪಾಸನಾಪ್ರಧಾನ ಭಾಗವತಾದಿ ಪಂಥಗಳಿಗೂ ನಡುವಣ ಪಾರಸ್ಪರಿಕತೆಯ ಬಗೆಗೆ ಸ್ವಾಮಿಗಳು ವಿಸ್ತಾರವಾಗಿ ಪರಾಮರ್ಶನೆ ನಡೆಸಿದ್ದಾರೆ. ಇದು ಐತಿಹಾಸಿಕ ದೃಷ್ಟಿಯಿಂದಲೂ ಮಹತ್ತ್ವದ್ದಾಗಿದೆ.
ವಿಮರ್ಶನಪೂರ್ವಕ ಪ್ರತಿಪಾದನೆ
ಶುದ್ಧ ಶಾಸ್ತ್ರದೃಷ್ಟಿಗೂ ಲೌಕಿಕಾನುಭವಕ್ಕೂ ನಡುವೆ ಪೂರ್ಣ ವಿರೋಧವಿದೆಯೆಂದು ಭಾವಿಸಿದಲ್ಲಿ ಅದು ಪ್ರಯೋಜನಕರವಾಗದು. ಈ ಎರಡು ದೃಷ್ಟಿಗಳಲ್ಲಿ ಯಾವ ಅಂಶಗಳಲ್ಲಿ ಭೇದವಿದೆ ಎಂದು ವಿಮರ್ಶನಪೂರ್ವಕವಾಗಿ ಅರಿಯುವುದು ಸಾಧಕರಿಗೆ ಲಾಭಕಾರಿಯಾಗುತ್ತದೆ – ಎಂಬ ವಾಸ್ತವವನ್ನು ಗ್ರಹಿಸಿ ಸ್ವಾಮಿಗಳು ದರ್ಶನದ ನಿಜಸ್ವರೂಪವನ್ನು ಪ್ರಕಟೀಕರಿಸಿದ್ದಾರೆ: ಲೌಕಿಕದೃಷ್ಟಿಯಲ್ಲಿ ‘ಅವಿದ್ಯೆ’ ಎಂದರೆ ಅಜ್ಞಾನ; ವೇದಾಂತದೃಷ್ಟಿಯಲ್ಲಿ ‘ಅವಿದ್ಯೆ’ ಎಂದರೆ ಆತ್ಮ-ಅನಾತ್ಮಗಳ ಪರಸ್ಪರ ಅಧ್ಯಾಸ. ಲೌಕಿಕದೃಷ್ಟಿಯಲ್ಲಿ ಆತ್ಮನು ತಾನೇ ವ್ಯವಹಾರ ಮಾಡುವವನಾದರೆ ವೇದಾಂತದೃಷ್ಟಿಯಲ್ಲಿ ಆತ್ಮನು ಎಲ್ಲ ಪ್ರತ್ಯಯಗಳಿಗೆ ಸಾಕ್ಷಿಯಾಗಿರುತ್ತಾನೆ. ಇಂತಹ ಅರ್ಥಸೂಕ್ಷ್ಮಗಳ ಗ್ರಹಿಕೆಯಿಂದ ಗೊಂದಲವು ನಿವಾರಣೆಯಾಗುವುದೆಂಬುದನ್ನು ಮನಗಂಡು ಸ್ವಾಮಿಗಳು ಈ ಸೂಕ್ಷ್ಮತೆಗಳನ್ನು ತಮ್ಮ ವ್ಯಾಖ್ಯಾನಗಳುದ್ದಕ್ಕೂ ಪ್ರಕಟೀಕರಿಸಿದ್ದಾರೆ. ಈ ಅಂಶಗಳಾದರೋ ಅಧ್ಯಾರೋಪ-ಅಪವಾದ ಪ್ರಕ್ರಿಯೆಯ ಭಾಗಗಳೇ ಆಗಿವೆ. ಅಧ್ಯಾರೋಪ-ಅಪವಾದ ಪ್ರಕ್ರಿಯೆಯನ್ನೂ ಅವಸ್ಥಾತ್ರಯ ಮೀಮಾಂಸೆಯನ್ನೂ ಮನನ ಮಾಡಿ ಅರಿತುಕೊಂಡಲ್ಲಿ ವೇದಾಂತದರ್ಶನಕ್ಕೆ ಅಭಿಮುಖರಾದಂತೆಯೇ.
ವೇದಾಂತದ ಅನುಸಂಧಾನ-ಪ್ರಸಾರ ಕ್ಷೇತ್ರದಲ್ಲಿ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ದಿಗಂತವ್ಯಾಪಿ ಸಾಧನೆಯನ್ನು ಮೆಲುಕುಹಾಕಿದಲ್ಲಿ ಇಂತಹ ಸಮುನ್ನತ ಸಾಧಕರು ಕರ್ನಾಟಕದಲ್ಲಿ ಜನಿಸಿ ಯಶಃಕಾಯರಾದುದು ನಮ್ಮ ರಾಜ್ಯದ ದೊಡ್ಡ ಭಾಗ್ಯವೆಂದು ಹೇಳಬೇಕಾಗುತ್ತದೆ. ಅವರು ಬ್ರಹ್ಮಲೀನರಾಗಿ ನಲವತ್ತೈದು ವರ್ಷಗಳು ಗತಿಸಿದ ಮೇಲೂ ಅವರು ಉಪಕ್ರಮಿಸಿದ ಆಧ್ಯಾತ್ಮಿಕಾಭಿಯಾನವು ಅವರ ಶಿಷ್ಯಪ್ರಶಿಷ್ಯರ ಮೂಲಕ ಈಗಲೂ ಅವಿಚ್ಛಿನ್ನವಾಗಿ ಮುಂದುವರಿದಿರುವುದು ಸಂತಸ ತರುವ ವಿಷಯವಾಗಿದೆ.
ಅಸಾಧಾರಣ ಸಾಧನೆ
ಶ್ರೀಶ್ರೀಗಳವರು ಶಾಂಕರವೇದಾಂತಪ್ರಪಂಚಕ್ಕೆ ಸಲ್ಲಿಸಿರುವ ಸೇವೆ ಅಗಾಧವಾದುದು. ಒಂದು ಅಕ್ಯಾಡೆಮಿಯು ಅಥವಾ ವಿಶ್ವವಿದ್ಯಾಲಯವು ಮಾಡಬಹುದಾದ? ಕೆಲಸವನ್ನು ಅವರೊಬ್ಬರೇ ಮಾಡಿರುವುದನ್ನು ನೋಡಿದರೆ ’ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಮ್’ ಎಂಬ ಸೂಕ್ತಿಯು ನೆನಪಾಗುತ್ತದೆ. ಅಲ್ಲದೆ ಶ್ರೀಗಳವರ ಯಾವ ಗ್ರಂಥವನ್ನೇ ತೆಗೆದುಕೊಂಡರೂ – ಅದು ಚಿಕ್ಕದಾಗಿರಲಿ, ದೊಡ್ಡದಾಗಿರಲಿ – ಸತ್ತ್ವಪೂರ್ಣವಾಗಿಯೂ ಖಚಿತವಾದ ಅಭಿಪ್ರಾಯವುಳ್ಳದ್ದಾಗಿಯೂ ಪ್ರಾಮಾಣಿಕವಾಗಿಯೂ ವಿಮರ್ಶಾತ್ಮಕವಾಗಿಯೂ ಇರುತ್ತದೆ.
ಶ್ರೀಗಳವರ ಗ್ರಂಥಗಳಲ್ಲಿರುವ ಪರಾಮರ್ಶನ ವಾಕ್ಯಗಳನ್ನು ನೋಡಿದರೆ ಓದುಗರು ಅವರ ಒಂದೇ ಪುಸ್ತಕದಿಂದ ನೂರು ಪುಸ್ತಕಗಳಲ್ಲಿ ಸಂಗ್ರಹಿಸಬಹುದಾದ? ವಿಚಾರಗಳ ಲಾಭವನ್ನು ಸಂಶಯವಿಲ್ಲದೆ ಪಡೆಯುತ್ತಾರೆ. ಹೀಗೆ ಪೂಜ್ಯ ಶ್ರೀಗಳವರ ಗ್ರಂಥರಚನೆ, ಗ್ರಂಥಸಂಪಾದನೆ, ಅನುವಾದ – ಎಲ್ಲವೂ ಉಚ್ಚತರಗತಿಯ ಕೆಲಸಗಳಾಗಿದ್ದು ಅವುಗಳ ಬೆಲೆಯನ್ನು ಕಟ್ಟಲು ಅಸಾಧ್ಯವೆನಿಸುತ್ತದೆ. ಅದರಲ್ಲಿಯೂ ವೇದಾಂತಕ್ಷೇತ್ರದಲ್ಲಿ ಇಂಥ ಅಸಾಧಾರಣವಾದ ಕೆಲಸ ಶತಮಾನಗಳಿಂದೀಚೆಗೆ ಆಗಿಲ್ಲವೆಂದರೆ ಅತಿಶಯೋಕ್ತಿಯೆನಿಸಲಾರದು.
- ಡಾ|| ಎನ್.ಎಸ್. ಅನಂತರಂಗಾಚಾರ್ಯ
ಲೇಖನಕಲೆಯು ಎಲ್ಲರಿಗೂ ಒಲಿಯುವಂತಹದಲ್ಲ; ಆ ಜಾಡಿನ ಅಂತರಂಗಪ್ರವೃತ್ತಿ ಇದ್ದವರು ಕಷ್ಟಪಟ್ಟು ರೂಢಿಸಿಕೊಳ್ಳಬೇಕಾದದ್ದು. ಶಾಸ್ತ್ರಸಂಬಂಧಿತ ಬರಹವಂತೂ ಇನ್ನೂ ಹೆಚ್ಚು ಕ್ಲಿಷ್ಟ. ಆದರೆ ಸ್ವಾಮಿಗಳು (ಆಗ ಇನ್ನೂ ‘ಸುಬ್ರಹ್ಮಣ್ಯಶರ್ಮಾ’) ಆರಂಭದ ದಿನಗಳಲ್ಲಿಯೆ ಬರವಣಿಗೆಯ ಅನಿವಾರ್ಯತೆಯನ್ನು ಮನಗಂಡು ಅದನ್ನು ಅಭ್ಯಾಸ ಮಾಡಿಕೊಳ್ಳತೊಡಗಿದುದು ಸಮಾಜಕ್ಕೆ ವರದಾನವಾಯಿತು; ವೇದಾಂತ ಪರಿಚಯ ಪುಸ್ತಿಕೆಗಳಿಂದ ಆರಂಭಿಸಿ ‘ವೇದಾಂತ-ಪ್ರಕ್ರಿಯಾ-ಪ್ರತ್ಯಭಿಜ್ಞಾ’ದಂತಹ ಪ್ರೌಢ ಸ್ವತಂತ್ರ ಶಾಸ್ತ್ರೀಯ ಗ್ರಂಥಗಳ ರಚನೆಯ ವರೆಗೆ ಅವರ ಲೇಖನೋದ್ಯಮ ನಿರಂತರ ಸಾಗಿತು. ಅವರಲ್ಲಿ ಅಂತರ್ಮಥನದ, ಪರೀಕ್ಷಣದ, ಅನ್ವೇಷಣದ ಹಾಗೂ ಯಾಥಾಥ್ರ್ಯ ಸ್ಥಾಪನೆಯ ಪ್ರವೃತ್ತಿ ಮೊದಲಿನಿಂದಲೇ ಇದ್ದುದರಿಂದ ಆಜೀವವೂ ಅವರದು ಸಂಶೋಧನವ್ಯವಸಾಯವೇ ಆಯಿತು.
‘ಮೂಲಾವಿದ್ಯಾ’
‘ಅವಿದ್ಯೆ’ಗೆ ಸಂಬಂಧಿಸಿದಂತೆ ‘ಮೂಲ ಅವಿದ್ಯೆ’ ಎಂಬ ಕಲ್ಪನೆ ಶಂಕರಸಮ್ಮತವಲ್ಲದಿದ್ದರೂ ಪಂಚಪಾದಿಕಾಕಾರರಿಂದ ಪ್ರವೃತ್ತವಾಗಿ ನೆಲೆಗೊಂಡಿತು – ಎಂಬ ಸ್ವಾಮಿಗಳ ಮಂಡನೆಯು ಅವರ ಗುರುಸ್ಥಾನೀಯರಾದ ವಿರೂಪಾಕ್ಷಶಾಸ್ತ್ರಿಗಳೂ ಸೇರಿದಂತೆ ಹಲವರ ದೃಷ್ಟಿಯಲ್ಲಿ ಸಂಪ್ರದಾಯವಿರುದ್ಧವಾದೀತೆಂಬ ಅಭಿಪ್ರಾಯ ಹೊಮ್ಮಿದರೂ, ಸ್ವಾಮಿಗಳು ತಮ್ಮಲ್ಲಿ ಮೂಡಿದ್ದ ನಿಶ್ಚಯದಿಂದಾಗಿ ತಮ್ಮ ನಿಲವನ್ನು ದೃಢವಾಗಿ ಮುಂದೊತ್ತುತ್ತಹೋದರು. 1920-1930ರ ದಶಕಗಳಲ್ಲಿ ಇದು ಪಂಡಿತವಲಯಗಳಲ್ಲಿ ತೀಕ್ಷ್ಣವಾದ ವಿವಾದಗಳಿಗೆ ಚೋದನೆಯನ್ನು ನೀಡಿತ್ತು.
“ಮೂಲ ಅವಿದ್ಯೆ’ ಎಂಬ ಕಲ್ಪನೆಯು ಶಾಂಕರಭಾಷ್ಯಕ್ಕೆ ಸಮ್ಮತವೇ ಎಂದು ಪ್ರತಿಪಾದಿಸಿ ವಿದ್ವಾನ್ ಕೋಡೂರು ಕೃಷ್ಣ ಜೋಯಿಸರು, ಪಾಲಘಾಟ್ ನಾರಾಯಣಶಾಸ್ತ್ರಿಗಳು, ಪಾಟನಕರ ಚಂದ್ರಶೇಖರಶಾಸ್ತ್ರಿಗಳು ಮೊದಲಾದವರು ವಾದಪ್ರಬಂಧಗಳನ್ನು ಪ್ರಕಟಿಸಿದರೆ ‘ಮೂಲ ಅವಿದ್ಯೆ’ ಎಂಬ ಕಲ್ಪನೆಯು ಶಾಂಕರಭಾಷ್ಯವಿರುದ್ಧ ಎಂಬ ಸ್ವಾಮಿಗಳ ನಿಲವನ್ನು ಸಮರ್ಥಿಸಿದವರು ವಿದ್ವಾನ್ ವಿಠ್ಠಲಶಾಸ್ತ್ರಿಗಳು, ವಿದ್ವಾನ್ ಅನಂತಮೂರ್ತಿಶಾಸ್ತ್ರಿಗಳು ಮೊದಲಾದವರು.
ಒಟ್ಟಿನ ಮೇಲೆ ಈಗಲೂ ಕಗ್ಗಂಟಾಗಿಯೇ ಉಳಿದಿರುವ ಶಾಸ್ತ್ರಸೂಕ್ಷ್ಮತೆಗಳ ಪೈಕಿ ಇದೂ ಒಂದು ಎನ್ನಬಹುದು. ಏನೇ ಆದರೂ, ಈ ಸೂಕ್ಷ್ಮ ವಿಷಯವನ್ನು ಸ್ಫೋಟಮಾಡಿದವರಂತೂ ಸ್ವಾಮಿಗಳೇ ಎಂದು ಒಪ್ಪಬೇಕು. ಅವರ ಈ ದಿಕ್ಕಿನ ಚಿಂತನೆಯನ್ನು ಬೀಜರೂಪದಲ್ಲಿ ಪ್ರಚೋದಿಸಿದ್ದವರು ಅವರ ಗುರುಸ್ಥಾನೀಯರಾದ ಕೆ.ಎ. ಕೃಷ್ಣಸ್ವಾಮಿ ಅಯ್ಯರ್.
ಅಸದೃಶ ಸಾಧನೆ
ಸ್ವಾಮಿಗಳ ಗ್ರಂಥರಚನೆಯ ಗಾತ್ರವೇ ದಿಗ್ಭ್ರಮೆ ತರಿಸುವಂತಹದು. ಅವರ ಪ್ರಸ್ಥಾನತ್ರಯ ಭಾಷ್ಯಾನುವಾದ ಸಂಪುಟಗಳೇ ದೊಡ್ಡ ಗಾತ್ರದಲ್ಲಿ 8000 ಪುಟಗಳಷ್ಟು ಇವೆ. ಇವಲ್ಲದೆ ಆಚಾರ್ಯರ ಎಲ್ಲ ಪ್ರಕರಣಗ್ರಂಥಗಳನ್ನೂ ಅನುವಾದಿಸಿಕೊಟ್ಟಿದ್ದಾರೆ. ಸ್ವಾಮಿಗಳವೇ ಸ್ವತಂತ್ರ ರಚನೆಗಳಾದ ‘ಪರಮಾರ್ಥ-ಚಿಂತಾಮಣಿ’ ಮೊದಲಾದ ಗ್ರಂಥಗಳಂತೂ ವೇದಾಂತದರ್ಶನಕ್ಕೆ ಅಪೂರ್ವ ನೂತನ ಕೊಡುಗೆಗಳೇ ಆಗಿವೆ.
ಸ್ವಾಮಿಗಳು ಸಂಪ್ರದಾಯಜಡರಲ್ಲವೆನ್ನಲು ಅವರು ಹೃದಯಂಗಮವಾಗಿ ರಚಿಸಿರುವ ಬೌದ್ಧಮತಧಾರೆಯ ‘ಧಮ್ಮಪದ’, ಬ್ರಹ್ಮಸೂತ್ರಗಳ ಮೇಲಣ ಭಗವದ್ರಾಮಾನುಜಾಚಾರ್ಯರ ‘ಶ್ರೀಭಾಷ್ಯ’ ಮೊದಲಾದ ಅನ್ಯಧಾರೆಗಳ ಆಧಾರಕೃತಿಗಳ ಅನುವಾದಗಳು ಸಾಕ್ಷ್ಯಗಳಾಗಿವೆ.
ಸ್ವಾಮಿಗಳಿಗೆ ಅತ್ಯಂತ ನಿಕಟವರ್ತಿಗಳೂ ಸ್ವಯಂ ಪ್ರಕಾಂಡ ವೇದಾಂತಜ್ಞರೂ ಆಗಿದ್ದ ಜ್ಞಾನಾನಂದೇಂದ್ರ ಸರಸ್ವತೀ ಸ್ವಾಮಿಗಳು (ಪೂರ್ವಾಶ್ರಮದಲ್ಲಿ ಎಸ್. ವಿಠ್ಠಲಶಾಸ್ತ್ರಿಗಳು) ಒಂದು ಹೃದಯಂಗಮ ಸನ್ನಿವೇಶವನ್ನು ದಾಖಲೆ ಮಾಡಿದ್ದಾರೆ. ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಶ್ರೀ ವಿಠ್ಠಲಶಾಸ್ತ್ರಿಗಳೊಡನೆ ತಮಿಳುನಾಡು ಪ್ರವಾಸದಲ್ಲಿದ್ದಾಗ ಕಾರೈಕುಡಿಯಲ್ಲಿ ಕಾಂಚಿ ಪರಮಾಚಾರ್ಯರ ಮೊಕ್ಕಾಂ ಇದ್ದುದು ತಿಳಿದುಬಂದು ಆ ಮಹಾಮಹಿಮರ ಸಂದರ್ಶನಕ್ಕೆ ತೆರಳಿದರು. ಪರಮಾಚಾರ್ಯರು ವಿಠ್ಠಲಶಾಸ್ತ್ರಿಗಳನ್ನು ಕೇಳಿದರು: “ಶಾಸ್ತ್ರಿಗಳೇ, ‘ಆಸುಪ್ತೇರಾಮೃತೇಃ ಕಾಲಂ ನಯೇದ್ ವೇದಾಂತಚಿಂತಯಾ’ ಎಂಬುದರ ಅಭಿಪ್ರಾಯವೇನು?”
ಶಾಸ್ತ್ರಿಗಳು “ಮನುಷ್ಯರು ಎಚ್ಚರವಾದಾಗಿನಿಂದ ನಿದ್ರಿಸುವವರೆಗೂ, ಹುಟ್ಟಿನಿಂದ ಅವಸಾನದವರೆಗೂ ವೇದಾಂತ ಚಿಂತನೆಯಲ್ಲಿ ಕಳೆಯಬೇಕು” ಎಂದು ಹೇಳಿದರು. ಪರಮಾಚಾರ್ಯರು ಮುಗುಳ್ನಕ್ಕು “ಆ ವಾಕ್ಯಕ್ಕೆ ಜೀವಂತ ಉದಾಹರಣೆಯೆಂದರೆ ಈ ನಿಮ್ಮ ಸ್ವಾಮಿಗಳು!” – ಎಂದು ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಕಡೆಗೆ ಬೊಟ್ಟುಮಾಡಿ ಹೇಳಿದರಂತೆ. ಸ್ವಾಮಿಗಳು ಸಾಧಿಸಿದ್ದ ಉನ್ನತಿಗೆ ಮೇಲಣ ಪರಮಾಚಾರ್ಯರ ಉದ್ಗಾರಕ್ಕಿಂತ ಅನ್ಯ ಪ್ರಮಾಣ ಇರುವುದು ಸಾಧ್ಯವಿಲ್ಲ.
ಋಷಿಋಣ ಸಲ್ಲಿಸೋಣ
ದೇಶದಲ್ಲಿಯೇ ಅಪೂರ್ವವಾಗಿ ಅಗಾಧ ಪ್ರಮಾಣದಲ್ಲಿ ಶಾಂಕರವೇದಾಂತದರ್ಶನದ ಪ್ರಸಾರವನ್ನು ಮಾಡಿದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಸಾಧನೆಯು ವೇದಾಂತಾಸಕ್ತ ವಲಯಗಳಲ್ಲಿ ಒಂದಷ್ಟು ಪ್ರಚಾರವನ್ನು ಆ ಸಾಧನೆಯ ಅನನ್ಯತೆಯ ಕಾರಣದಿಂದಾಗಿ
ಪಡೆದುಕೊಂಡದ್ದು ಹೌದು. ಆದರೆ ಆ ಅನುಪಮ ಸಾಧನೆಗೆ ನ್ಯಾಯವಾಗಿ ದೊರೆಯಬೇಕಾಗಿದ್ದಷ್ಟು ಮಟ್ಟದ ಯಾವ ಗೌರವ-ಮನ್ನಣೆಗಳೂ ಸಲ್ಲದಿದ್ದುದು ಒಂದು ವಿಪರ್ಯಾಸವೆಂದೇ ಖೇದದಿಂದ ಹೇಳಬೇಕಾಗಿದೆ. ವಿರಕ್ತರೂ ಸಂಮಾನದೂರರೂ ಆದ ಆ ಮಹನೀಯರೇನೊ ನಿರಂತರ ಜ್ಞಾನೋಪಾಸನೆಯಿಂದ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡು ಮುಕ್ತರಾದರು. ಆದರೆ ಸಮಾಜವು ಸ್ವಾಮಿಗಳಿಗೆ ಸಹಜವಾಗಿ ಸಲ್ಲಬೇಕಾಗಿದ್ದ ಋಷಿಋಣವನ್ನು ತೀರಿಸಿತೆನ್ನಲಾಗದು. ಈ ದೊಡ್ಡ ಲೋಪವು ಸ್ವಾಮಿಗಳು ಬ್ರಹ್ಮೈಕ್ಯರಾಗಿ ನಾಲ್ಕೂವರೆ ದಶಕಗಳು ಕಳೆದು ಇದೀಗ ‘ಅಧ್ಯಾತ್ಮ ಪ್ರಕಾಶ ಕಾರ್ಯಾಲಯ’ದ ಸ್ಥಾಪನೆಯ ಶತಮಾನದ ಉತ್ಸವಾಚರಣೆ ನಡೆದಿರುವ ಸಂದರ್ಭದಲ್ಲಿಯಾದರೂ ಪರಿಮಾರ್ಜನೆಗೊಂಡೀತೆಂದು ಆಶಿಸೋಣ. ಬಹುಶಃ ಶುದ್ಧ ಜ್ಞಾನೋಪಾಸಕ ಕ್ಷೇತ್ರದಲ್ಲಿ ಬೆಡಗು-ಬಿನ್ನಾಣ ಆಕರ್ಷಣೆಗಳು ಇಲ್ಲದಿರುವುದರಿಂದ ಇಂತಹ ಕರ್ತವ್ಯಲೋಪಗಳು ಘಟಿಸುತ್ತವೇನೋ!
ಸ್ವಾಮಿಗಳು ಕನ್ನಡ ಓದುಗರಿಗೆ ಅತ್ಯಂತ ನಿಷ್ಕøಷ್ಟಮಟ್ಟದಲ್ಲಿ ಲಭ್ಯವಾಗಿಸಿರುವ ಪ್ರಸ್ಥಾನತ್ರಯದ ಅನುವಾದಗಳೂ ಅನ್ಯ ಪ್ರಕರಣಗ್ರಂಥಗಳ ಅನುವಾದಗಳೂ ಸ್ವತಂತ್ರ ಗ್ರಂಥಗಳೂ ಕನ್ನಡಭಾಷೆಗೂ ವೇದಾಂತಕ್ಷೇತ್ರಕ್ಕೂ ನೀಡಿರುವ ಕೊಡುಗೆ ಚಿರಕಾಲ ಉಳಿಯುತ್ತದೆಂಬುದು ನಿಸ್ಸಂಶಯ. ಸ್ವಾಮಿಗಳ ಈ ಹೋಲಿಕೆಯಿಲ್ಲದ ವಾಙ್ಮಯಸೇವೆಗೆ ಈಗಲಾದರೂ ನಮನಗಳನ್ನು ಸಲ್ಲಿಸೋಣ. ಸ್ವಾಮಿಗಳಂತಹ ನಿಃಸ್ಪೃಹರು ಸಮಾಜದಿಂದ ಬಯಸುವ ‘ನಮನ’ ಸಮರ್ಪಣೆಯೆಂದರೆ ಅವರು ಉಳಿಸಿಹೋಗಿರುವ ಅಧ್ಯಾತ್ಮಸಾಹಿತ್ಯರಾಶಿಯ ಅಧ್ಯಯನ-ಪ್ರಸರಣಗಳು ಮತ್ತು ಸ್ವಾಮಿಗಳು ನಿರಂತರ ನಡೆಸುತ್ತಿದ್ದಂತಹ ವೇದಾಂತಶಿಬಿರಗಳ ವ್ಯಾಪಕ ಆಯೋಜನೆ. ಇದು ಎಲ್ಲ ದೃಷ್ಟಿಗಳಿಂದಲೂ ಕಲ್ಯಾಣಕಾರಿಯಾದೀತು. ಸಮಾಜದಲ್ಲಿನ ಆಢ್ಯರು ಸ್ವಾಮಿಗಳ ಜನಪ್ರಿಯ ಕೃತಿಗಳ ದಾನರೂಪದ ಪ್ರಸಾರವನ್ನು ಪ್ರಾಯೋಜಿಸಬಹುದು; ಈಗಲೂ ಹಿಂದಿನಂತೆಯೆ ಮುಂದುವರಿಯುತ್ತಿರುವ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಚಟುವಟಿಕೆಗಳನ್ನು ಹೆಚ್ಚು ವ್ಯಾಪಕಗೊಳಿಸಲು ನೆರವಾಗಬಹುದು; ಸ್ವಾಮಿಗಳ ಜೀವನ-ಸಾಧನೆಗಳನ್ನು ಪರಿಚಯಿಸುವ ಬರಹವನ್ನು ವಿವಿಧ ಭಾಷೆಗಳಿಗೆ ತರ್ಜುಮೆ ಮಾಡಿಸಿ ಪ್ರಸಾರ ಮಾಡಬಹುದು.
||ಇತಿ ಶಿವಂ||