ಮುಹೂರ್ತಮಪಿ ಜೀವೇತ ನರಃ ಶುಕ್ಲೇನ ಕರ್ಮಣಾ |
ನ ಕಲ್ಪಮಪಿ ಕೃಷ್ಣೇನ ಲೋಕದ್ವಯವಿರೋಧಿನಾ ||
– ಸುಭಾಷಿತರತ್ನ–ಭಾಂಡಾಗಾರ
“ಒಂದೇ ಘಳಿಗೆ ಬದುಕಿದ್ದರೂ ಅಷ್ಟು ಸಮಯವನ್ನು ಪರಿಶುದ್ಧ ಕರ್ಮಾಚರಣೆಯಲ್ಲಿ ತೊಡಗಿಸಬೇಕು. ಇಹಕ್ಕೆ, ಪರಕ್ಕೆ – ಯಾವುದಕ್ಕೂ ಪ್ರಯೋಜನಕರವಲ್ಲದ ವ್ಯವಹಾರಗಳಲ್ಲಿಯೆ ತೊಡಗಿರುತ್ತ ಒಂದು ಕಲ್ಪಕಾಲ ಬದುಕಿದ್ದರೂ ಅದು ನಿರರ್ಥಕವೇ.”
ಈಶ್ವರನು ನಮಗೆ ಜಗಜ್ಜೀವನವನ್ನು ಅನುಗ್ರಹಿಸಿರುವುದು ಸಾರ್ಥಕವಾದ ಕಾರ್ಯಗಳನ್ನು ಮಾಡಲೆಂದು. ಧನ್ಯತೆಯುಂಟಾಗುವುದು ವಿಹಿತ ಕರ್ಮಾಚರಣೆಯಿಂದ ಮಾತ್ರವೇ ಹೊರತು ಯಾದೃಚ್ಛಿಕ ಕಾಲಯಾಪನೆಯಿಂದಲೊ ದುಷ್ಕರ್ಮಾಚರಣೆಯಿಂದಲೊ ಅಲ್ಲ. ಬದುಕಿಗೂ ದೇಹಕ್ಕೂ ಪಾವಿತ್ರ್ಯವನ್ನು ತಂದುಕೊಡಬಲ್ಲದ್ದು ಪುಣ್ಯಪ್ರದವೂ ಲೋಕೋಪಕಾರಕವೂ ಆದ ಜೀವನರೀತಿ. ಆಲಸ್ಯದಿಂದಲೊ ಅವಿವೇಕದಿಂದಲೊ ದೈಹಿಕ-ಮಾನಸಿಕ ಶ್ರಮದಿಂದ ದೂರ ಸರಿಯುವುದು ಆತ್ಮಘಾತಕ. ಇದನ್ನೇ ಶ್ರಮಪ್ರತಿಷ್ಠೆಯೆಂದೂ ಕರೆಯಲಾಗಿದೆ.
ಗುರು ಗೋವಿಂದಸಿಂಹರು ಆನಂದಪುರ ವಾಸ್ತವ್ಯದಲ್ಲಿದ್ದಾಗ ಒಮ್ಮೆ ಬಾಯಾರಿಕೆಯಾಗಿ ಯಾರಾದರೂ ಸ್ವಲ್ಪ ನೀರನ್ನು ತಂದುಕೊಡುವಂತೆ ಕೇಳಿದರು. ಸಮೀಪದಲ್ಲಿದ್ದ ಒಬ್ಬಾತ ಹೋಗಿ ನೀರನ್ನು ತಂದು ಗುರುಗಳ ಕೈಗಿತ್ತ. ಆ ಬಟ್ಟಲನ್ನು ತೆಗೆದುಕೊಳ್ಳುವಾಗ ನೀರನ್ನು ತಂದಿದ್ದಾತನ ಕೈಗಳ ಸ್ಪರ್ಶವಾಯಿತು. ಆತನನ್ನು ಕೇಳಿದರು: “ನಿನ್ನ ಕೈಗಳು ಇಷ್ಟು ಮೃದುವಾಗಿ, ಕೋಮಲವಾಗಿ ಇವೆಯಲ್ಲ, ಇದು ಹೇಗೆ?” ಆತ ಉತ್ತರಿಸಿದ: “ನನ್ನ ಬಂಗಲೆಯಲ್ಲಿ ಅನೇಕ ಪರಿಚಾರಕರಿದ್ದಾರೆ. ನನಗೆ ನಾನೇ ಯಾವ ಕೆಲಸವನ್ನೂ ಮಾಡುವ ಸಂದರ್ಭವೇ ಇರುವುದಿಲ್ಲ. ಆದ್ದರಿಂದ ನನ್ನ ಕೈಗಳು ಶುದ್ಧವೂ ಕೋಮಲವೂ ಆಗಿವೆ.” ಇದನ್ನು ಕೇಳಿದೊಡನೆ ಗುರುಗಳು ನೀರಿನ ಬಟ್ಟಲನ್ನು ಕೆಳಗಿರಿಸಿ ಹೇಳಿದರು: “ತಮ್ಮ, ಹಿರಿಯರಿಗೊ ದೀನದುರ್ಬಲರಿಗೊ ಒಂದಿಷ್ಟೂ ಸೇವೆ ಮಾಡದ ಕೈಗಳಲ್ಲಿ ಪಾವಿತ್ರ್ಯ ಇರಲಾರದು. ಆದ್ದರಿಂದ ನಿನ್ನ ಕೈ ಸೋಂಕಿದ ನೀರನ್ನು ನಾನು ಕುಡಿಯಲಾರೆ.” ಗುರುಗಳ ಮಾತನ್ನು ಕೇಳಿ ಆ ಯುವಕನಲ್ಲಿ ಕರ್ತವ್ಯಪರಿಜ್ಞಾನ ಜಾಗೃತವಾಯಿತು.