ಅಂತರರಾಷ್ಟ್ರೀಯ ಸ್ತರದಲ್ಲಿ, ದೇಶ-ವಿದೇಶ ಸಂಬಂಧಗಳಲ್ಲಿ ಕೆಲವು ಹೊಂದಾಣಿಕೆಗಳು ಎಲ್ಲೆಡೆ ಪಾಲಿಸಲ್ಪಡುತ್ತವೆ. ಅಂತಹ ಒಂದು ಸಂಗತಿಯೆಂದರೆ ಯಾತ್ರಾಸ್ಥಳಗಳನ್ನೂ ತೀರ್ಥಕ್ಷೇತ್ರಗಳನ್ನೂ ಸಂದರ್ಶಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶಗಳಿರುತ್ತವೆ; ಮತ್ತು ಅವು ಇರುವ ದೇಶಗಳು ಅಂತಹ ಪವಿತ್ರ ಸ್ಥಳಗಳ ದುರಸ್ತಿಗೂ ಗಮನ ಕೊಡುತ್ತವೆ. ಮಧ್ಯಪ್ರಾಚ್ಯದಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಜ್ಯಗಳಲ್ಲಿ ಕ್ರೈಸ್ತ ಕ್ಷೇತ್ರಗಳಿವೆ. ಯೂರೋಪಿನ ಹಲವೆಡೆ ಕ್ರೈಸ್ತ ಬಾಹುಳ್ಯದ ಪ್ರದೇಶಗಳಲ್ಲಿ ಅನ್ಯಮತೀಯರಿಗೆ ಪವಿತ್ರಗಳೆನಿಸಿರುವ ಸ್ಥಾನಗಳಿವೆ. ಅನ್ಯಮತೀಯವೆಂಬ ಕಾರಣದಿಂದ ಆ ಕ್ಷೇತ್ರಗಳಾವವೂ ಅಲಕ್ಷ್ಯಕ್ಕೆ ಗುರಿಯಾಗಿಲ್ಲ. ಈ ಹಿನ್ನೆಲೆಯನ್ನು ಸ್ಮರಿಸುತ್ತಿರುವುದರ ಉದ್ದೇಶ ಭೌಗೋಳಿಕವಾಗಿ ಈಗಿನ ಪಾಕಿಸ್ತಾನ-ಆಕ್ರಾಂತ ಭಾಗದಲ್ಲಿರುವ ಶ್ರೀಶಾರದಾಪೀಠದ ಶೋಚನೀಯ ಸ್ಥಿತಿಗೆ ಗಮನಸೆಳೆಯುವುದು. ಆ ಸ್ಥಳವಿರುವುದು ಈಗಿನ ‘ಲೈನ್ ಆಫ್ ಕಂಟ್ರೋಲ್’ನಿಯಂತ್ರಣರೇಖೆಯಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ. ಸರ್ವಜ್ಞಪೀಠವೆಂದು ಪ್ರಾಚೀನಕಾಲದಿಂದ ಕೀರ್ತಿತವಾಗಿರುವ ಶ್ರೀಶಾರದಾಪೀಠವು ಭಾರತೀಯರಿಗೆಲ್ಲ ಅತ್ಯಂತ ಪವಿತ್ರವಾಗಿರುವ ಹದಿನೆಂಟು ಮಹಾಶಕ್ತಿಪೀಠಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ಹೀಗೆ ಅದು ಕೋಟ್ಯಂತರ ಭಾರತೀಯರಿಗೆ ಶ್ರದ್ಧಾಸ್ಥಾನವಾಗಿದೆ. ಅದನ್ನು ಸಂದರ್ಶಿಸಲು ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ
ದೀರ್ಘಕಾಲದಿಂದ ಇದ್ದರೂ ಫಲಪ್ರದವಾಗಿಲ್ಲ. ಪ್ರಾಚೀನವೂ ಪವಿತ್ರವೂ ಆದ ಶ್ರೀಶಾರದಾಪೀಠಕ್ಕೆ ಶ್ರದ್ಧಾಳುಗಳಿಗೆ ಮುಕ್ತ ಸಂಚಾರಾವಕಾಶ ಶ್ರೀಘ್ರವಾಗಿ ಪ್ರಾಪ್ತವಾಗಲೆಂದೂ ಈಗ ಪಾಳುಬಿದ್ದಿರುವ ಆ ಮಹತ್ತ್ವದ ಸ್ಥಾನವು ದುರಸ್ತುಗೊಂಡು ಪುನರುಜ್ಜೀವಿತವಾಗಲೆಂದೂ ಆಶಿಸೋಣ.