ಕಳೆದೆರಡು ತಿಂಗಳಿಂದ ದೇಶದ ಹಲವಾರೆಡೆ ನಾಗರಿಕತೆ ತಿದ್ದುಪಡಿ ಕಾಯ್ದೆಯನ್ನು [Citizenship (Amendment) Act] ವಿರೋಧಿಸಲು ನಡೆದಿರುವ ಪ್ರತಿಭಟನೆಗಳು ಪ್ರಮುಖ ಸುದ್ದಿಯಾಗಿವೆ. ಈ ಪ್ರತಿಭಟನಸರಣಿಗಳಲ್ಲಿ ಎಲ್ಲಿಯೂ ಪಾಕಿಸ್ತಾನ, ಬಂಗ್ಲಾದೇಶ, ಆಫ್ಘಾನಿಸ್ತಾನಗಳಲ್ಲಿ ಅವರ್ಣನೀಯ ಬವಣೆಗಳಿಗೊಳಗಾಗಿ ವಲಸೆ ಬಂದು ಯಾವ ನಾಗರಿಕ ಹಕ್ಕುಗಳೂ ಇಲ್ಲದೆ ನಿರಾಶ್ರಿತರಾಗಿ ಸಮಯ ದೂಡುತ್ತಿರುವ ಹತಭಾಗ್ಯರ ಬಗೆಗೆ ಅಪ್ಪಿತಪ್ಪಿಯೂ ಒಂದು ಸಹಾನುಭೂತಿಯ ಧ್ವನಿ ಹೊರಡದಿರುವುದಕ್ಕೆ ಏನೆನ್ನಬೇಕು? ಇಷ್ಟಾಗಿ ಇದು ರಾತ್ರೋರಾತ್ರಿ ಹೊಮ್ಮಿರುವ ಹೊಚ್ಚಹೊಸ ವಿಷಯವೂ ಅಲ್ಲ. ಈ ಸಮಸ್ಯೆಯ ಪರಿಹಾರದ ಆವಶ್ಯಕತೆ ಕುರಿತು ಎಷ್ಟೊ ವರ್ಷಗಳ ಹಿಂದಿನಿಂದ ಭಾಜಪಾ ಕಳಕಳಿಯನ್ನು ವ್ಯಕ್ತಪಡಿಸಿದೆ. ನಿರಾಶ್ರಿತರು ಅನಿರ್ದಿಷ್ಟ ಕಾಲ ನಾಗರಿಕತ್ವವಿಲ್ಲದ ತ್ರಿಶಂಕುಸ್ಥಿತಿಯಲ್ಲಿಯೆ ಮುಂದುವರಿಯಲೆಂಬ ನಿಲವು ಸಮರ್ಥನೀಯವೆ? ಉದ್ದಿಷ್ಟ ಕ್ರಮಗಳು ಯಾವುದೇ ಸಮುದಾಯದ ವಿರುದ್ಧವಲ್ಲವೆನ್ನುವುದು ಸ್ಪಷ್ಟವಿದೆ. ಮೊದಿ ಸರ್ಕಾರದ ಸರ್ವೇಸಮಸ್ತ ಕ್ರಮಗಳನ್ನೂ ಕೆಲವು ಪಕ್ಷಗಳೂ ಸಂಘಟನೆಗಳೂ ವಿರೋಧಿಸುತ್ತ ಬಂದಿರುವುದರಿಂದ ಅವು ಈಗ ಎಷ್ಟು ಮಾತ್ರದ ವಿಶ್ವಸನೀಯತೆಯನ್ನೂ ಉಳಿಸಿಕೊಂಡಿಲ್ಲ. ‘ಶೇಷಂ ಕೋಪೇನ ಪೂರಯೇತ್’ ಎಂಬುದು ಅವರ ಸ್ಥಿತಿಯಾಗಿದೆ. ಭಾರತದೊಳಗಡೆ ಕಟ್ಟಕಡೆಯ ವ್ಯಕ್ತಿಗೂ ಅಭ್ಯುದಯ ಯೋಜನೆಗಳ ಲಾಭ ದೊರೆಯಲೆಂದು ಬಯಸುವವರಿಗೆ ನೆರೆರಾಜ್ಯಗಳಲ್ಲಿ ಭಾರತಮೂಲದ ಅಸಂಖ್ಯ ಮಂದಿ ಪ್ರಾಥಮಿಕ ಜೀವನಾವಕಾಶಗಳಿಂದಲೂ ವಂಚಿತರಾಗಿ ಬಹಿಷ್ಕೃತರಾಗಿರುವುದು ಸಮಸ್ಯೆಯೆಂದೇ ಅನಿಸದಿರುವುದನ್ನು ಏನೆಂದು ಕರೆಯಬೇಕು? ಆಫ್ಘಾನಿಸ್ತಾನದಲ್ಲಿ ದೇವಾಲಯ – ಗುರುದ್ವಾರಾಗಳನ್ನು ಯೋಜನಾಬದ್ಧವಾಗಿ ನೆಲಸಮ ಮಾಡಿ ಹಿಂದೂಗಳಿಗೆ ಪೂಜಾವಕಾಶಗಳನ್ನೂ ತಪ್ಪಿಸಲಾಗಿದೆ. ಬಂಗ್ಲಾದೇಶದಲ್ಲಿ ಹಿಂದೂಗಳ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಅವರನ್ನು ನಿರ್ಗತಿಕರಾಗಿಸಿರುವ ಬಗೆಗೆ ಭಾರತ ಸರ್ಕಾರ ಅನಂತಕಾಲದವರೆಗೆ ನಿಷ್ಕ್ರಿಯವಾಗಿರಬೇಕೆ? ಪಾಕಿಸ್ತಾನದಲ್ಲಿ ರಾಜಸ್ಥಾನ ಮೂಲದವರು ಅಸ್ಪೃಶ್ಯರೆನಿಸಿ ಅವರು ಬಸ್ಸುಗಳನ್ನೂ ಬಳಸುವಂತಿಲ್ಲ.
2014ರ ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ 295 ಬಲಾತ್ಕಾರ ಮತಾಂತರಗಳು (ಹೆಚ್ಚಿನವರು ಹಿಂದೂ ಬಾಲಿಕೆಯರು) ನಡೆದವೆಂದು ಪಾಕಿಸ್ತಾನ ಪತ್ರಿಕೆಗಳ ವರದಿಗಳೇ ಇವೆ. ಯಾವ ಹಿನ್ನೆಲೆಯಲ್ಲಿ ಈಗಿನ ನಾಗರಿಕತ್ವ ಕಾಯ್ದೆಯ ಅನಿವಾರ್ಯತೆ ಇತ್ತೆಂದು ಅರಿಯಬೇಡವೆ? ವಾಸ್ತವಗಳನ್ನು ಅಲಕ್ಷ್ಯಮಾಡಿ ಬೀದಿರಂಪಾಟ ಮಾಡುವುದರಿಂದ ಏನನ್ನು ಸಾಧಿಸಲಾಗುತ್ತದೆ? ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರು ಹಗಲುರಾತ್ರಿ ಅನುಭವಿಸುತ್ತಿರುವ ಕಷ್ಟಕೋಟಲೆಗಳ ಬಗೆಗೆ ತೂಷ್ಣೀಭಾವ ತಳೆಯುವ ಭಾರತದೊಳಗಿನ ಛದ್ಮ ಮಾನವಹಕ್ಕು ಪ್ರತಿಪಾದಕ ಬಣಗಳನ್ನು ಜೆಹಾದಿಗಳಿಗೆ ಸರಿಸಮಾನವಾಗಿ ಪರಿಗಣಿಸುವುದು ಯುಕ್ತವೆನಿಸುತ್ತದೆ. ಎನ್.ಡಿ.ಎ. ಸರ್ಕಾರ ಅಮಲುಗೊಳಿಸಿರುವ ಕಾಯ್ದೆ ಯಾರ ಹಕ್ಕುಗಳನ್ನೂ ಕಸಿಯುವುದಕ್ಕಾಗಿ ಅಲ್ಲ, ಪ್ರತಿಯಾಗಿ ನಿರಾಶ್ರಿತರಿಗೆ ಅಧಿಕಾರ ನೀಡುವುದಕ್ಕಾಗಿ – ಎಂಬ ತಥ್ಯವನ್ನು ಜನಸಾಮಾನ್ಯರಿಗೆ ಸ್ಪಷ್ಟಗೊಳಿಸಬೇಕಾಗಿದೆ.
ಸುದೀರ್ಘ ಚರ್ಚೆಗಳ ತರುವಾಯವೇ ನಾಗರಿಕತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನ ಅಂಗೀಕಾರ ಪಡೆದಿರುವುದು. 1955ರ ಕಾಯ್ದೆಗೆ ತಿದ್ದುಪಡಿ ತಂದು ನೆರೆದೇಶಗಳಿಂದ ವಲಸೆ ಬಂದಿರುವ ಹಿಂದೂ, ಸೀಖ, ಜೈನ, ಬೌದ್ಧ, ಪಾರಸಿ ಕ್ರೈಸ್ತ ಸಮುದಾಯಗಳವರಿಗೆ ಕೆಲವು ಷರತ್ತುಗಳಿಗೊಳಪಟ್ಟು ನಾಗರಿಕತ್ವ ನೀಡುವುದು ಹೊಸ ಕಾಯ್ದೆಯ ಆಶಯ. ಈ ಸಮುದಾಯಗಳವರು ಅವರಿದ್ದ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದ ಕಾರಣದಿಂದ ತೀವ್ರ ಬವಣೆಗಳನ್ನು ಅನುಭವಿಸಿದ್ದರೆಂಬುದು ಕೇಂದ್ರ ವಿಷಯ. ಈ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಅವರಿಗೆ ವ್ಯವಸ್ಥಿತ ಆಸರೆ ಕಲ್ಪಿಸಲು ಹೊಸ ಕಾಯ್ದೆ ಹೊರಟಿದೆ. ಇದನ್ನು ವಿರೋಧಿಸುವುದಕ್ಕೆ ಯಾವ ಯುಕ್ತಿ ಸಮ್ಮತ ಕಾರಣವೂ ಇಲ್ಲ; ಎನ್.ಡಿ.ಎ. ಸರ್ಕಾರದ ಎಲ್ಲ ಧೋರಣೆಗಳನ್ನೂ ವಿರೋಧಿಸುತ್ತಿರಬೇಕೆಂಬ ಪ್ರವೃತ್ತಿಯಷ್ಟೆ ಈಗಿನ ಪ್ರತಿಭಟನೆಗಳನ್ನು ಪ್ರೇರಿಸಿವೆ. ಎಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಬೀದಿರಂಪಾಟ ಮಾಡುವುದರಿಂದಲೂ ಅದಕ್ಕೆ ಸಮರ್ಥನೆಯಾಗಲಿ ತಾರ್ಕಿಕ ಅಧಿಷ್ಠಾನವಾಗಲಿ ದೊರೆಯದು. ಅನ್ಯದೇಶಗಳಿಂದ ವಲಸೆ ಬಂದವರೆಂಬ ಕಾರಣದಿಂದ ಅವರು ಅಕ್ರಮ ಪ್ರವೇಶಿಗರೆನಿಸಿದ್ದಾರೆಂಬ ಪ್ರತಿಬಂಧವನ್ನು ನಿವಾರಿಸಲು ಹೊರಟಿರುವುದು ಈಗಿನ ಕಾಯ್ದೆ. ಇದರಲ್ಲಿ ಏನು ಗಹನೆಯಾಗಲಿ ಜಟಿಲತೆಯಾಗಲಿ ಇದೆ? 2014ರ ಡಿಸೆಂಬರ್ 31ಕ್ಕೆ ಮುಂಚೆ ವಲಸೆ ಬಂದ ಹಿಂದೂ, ಸೀಖ, ಕ್ರೈಸ್ತ ಮೊದಲಾದ ಸಮುದಾಯಗಳವರು ಭಾರತದ ನಾಗರಿಕತ್ವಕ್ಕೆ ಅರ್ಹರಾಗುತ್ತಾರೆಂದಿದೆ, ಹೊಸ ಕಾಯ್ದೆ.
1947ರಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಪ್ರಮಾಣ ಶೇ. 19ರಷ್ಟಿದ್ದುದು ಈಗ ಶೇ. 1.5ಕ್ಕೆ ಇಳಿದಿದೆ, ಬಂಗ್ಲಾದೇಶದಲ್ಲಿ ಶೇ. 23ರಿಂದ ಶೇ. 8ಕ್ಕೆ ಇಳಿದಿದೆ – ಎಂಬ ಅಂಕಿ-ಅಂಶಗಳೇ ವಸ್ತುಸ್ಥಿತಿಯನ್ನು ಬಿಂಬಿಸುತ್ತವೆ. ಈ ವಾಸ್ತವಗಳ ಬಗೆಗೆ ತಥೋಕ್ತ ಸೆಕ್ಯುಲರ್ ಬಣಗಳವರದೂ ‘ಮಾನವಹಕ್ಕು ಪ್ರತಿಪಾದಕ’ರೆಂದು ಕರೆದುಕೊಳ್ಳುವವರದೂ ವರ್ಷಗಳುದ್ದಕ್ಕೂ ಅರ್ಥ ಗರ್ಭಿತ ಮೌನ ಮುಂದುವರಿದಿದೆ. ಈ ಅಸಮತೋಲ ಅನಂತಕಾಲ ಹೀಗೆಯೆ ಇರಲೆಂದು ಅಪೇಕ್ಷಿಸುವುದು ಸತರ್ಕವೆನಿಸೀತೆ? ಸವ್ಯಮಾರ್ಗಕ್ಕೆ ಒಗ್ಗದ ‘ಗಾರ್ಡಿಯನ್’ ಗಂಟನ್ನು ಛೇದನ ಮಾಡುವುದು ಏಕೈಕ ಪರಿಹಾರ.
ಈಗಲೂ ನೆರೆದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹಿಂದಿನಂತೆಯೆ ಮುಂದುವರಿಯುತ್ತಿವೆ. ಆ ಅಲ್ಪಸಂಖ್ಯಾತ ವರ್ಗಗಳವರಾದರೊ ಭಾರತದೊಡನೆ ಬಹುಕಾಲ ಹಿಂದಿನಿಂದ ಗಾಢ ನಂಟನ್ನು ಹೊಂದಿರುವವರು.
ಹೀಗೆ ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ನಾಗರಿಕತ್ವ ತಿದ್ದುಪಡಿಯ ಹೊಸ ಕಾಯ್ದೆ ಒಂದು ಐತಿಹಾಸಿಕ ಅನಿವಾರ್ಯತೆಯಾಗಿದೆಯೆಂಬುದನ್ನು ಒಪ್ಪಲೇಬೇಕಾಗುತ್ತದೆ.
ಈಗಾಗಲೆ ಭಾರತದ ನಾಗರಿಕರಾಗಿರುವವರಿಗೆ – ಅವರು ಮುಸ್ಲಿಮರಾಗಿರಲಿ ಯಾರೇ ಆಗಿರಲಿ – ಹೊಸ ಕಾಯ್ದೆಯಿಂದ ಯಾವ ವಿಪರಿಣಾಮಗಳೂ ಆಗದೆಂಬುದು ಸ್ಪಷ್ಟವೇ ಆಗಿದೆ.
ಹೊಸ ಕಾಯ್ದೆಯ ಅಧಿಕ ಪ್ರಮಾಣದ ಫಲಾನುಭವಿಗಳು ದಲಿತ ಹಾಗೂ ಆರ್ಥಿಕವಾಗಿ ಸಂತ್ರಸ್ತರಾಗಿರುವ ವರ್ಗಗಳವರು. ಆ ದೇಶಗಳಲ್ಲಿ ದಲಿತ ಹೆಣ್ಣುಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರದಿಂದ ಮುಸ್ಲಿಮರು ವಿವಾಹವಾಗುವುದು ಮಾಮೂಲು ಸಂಗತಿಯಾಗಿದೆ.
ಈ ಯಾವ ವಾಸ್ತವಗಳನ್ನೂ ಗಣಿಸದೆ ನಾಗರಿಕತೆ ತಿದ್ದುಪಡಿ ಕಾಯ್ದೆಗೆ ಪ್ರತಿಭಟನೆಗಳನ್ನು ನಡೆಸಲಾಗುತ್ತಿರುವುದು ಪೂರ್ಣ ಅಸಮರ್ಥನೀಯ. ನೆರೆದೇಶಗಳಲ್ಲಿ ಬದುಕುವ ಅವಕಾಶಗಳಿಂದಲೇ ವಂಚಿತರಾಗಿರುವ ವರ್ಗಗಳಿಗೆ ಅವರ ಮೂಲದೇಶದಲ್ಲಿ ಆಸರೆ ಕಲ್ಪಿಸಲು ಹೊರಟಿರುವ ಎನ್.ಡಿ.ಎ. ಸರ್ಕಾರದ ಕ್ರಮವನ್ನು ವಿರೋಧಪಕ್ಷಗಳು ‘ಮುಸ್ಲಿಂ ವಿರೋಧಿ’ ಎಂದು ಬಿಂಬಿಸುತ್ತಿರುವುದು ಸಮಂಜಸವಾದೀತೆ?
ನೆರೆದೇಶಗಳಲ್ಲಿ ರೊಹಿಂಗ್ಯಾಗಳು, ಅಹ್ಮದಿಯಾಗಳು, ಶ್ರೀಲಂಕಾದ ತಮಿಳರು ಮೊದಲಾದವರೂ ಸಂತ್ರಸ್ತರಾಗಿರುವುದು ಹೌದಾದರೂ ಅವರು ಎದುರಿಸುತ್ತಿರುವುದು ಜನಾಂಗೀಯ ವಿದ್ವೇಷವನ್ನೇ ಹೊರತು ಧಾರ್ಮಿಕಾಸ್ತಿತ್ವಜನ್ಯ ಸಮಸ್ಯೆಗಳನ್ನಲ್ಲ. ಹೀಗಾಗಿ ಅಂಥ ವರ್ಗ ಈಗಿನ ನಾಗರಿಕತ್ವ ಕಾಯ್ದೆಯ ವ್ಯಾಪ್ತಿಗೆ ಒಳಪಡಲಾರದು.
ಈ ಎಲ್ಲ ವಾಸ್ತವಗಳನ್ನು ಸಮಗ್ರವಾಗಿ ಪರಿಶೀಲಿಸಿದ ಮೇಲೆಯೇ ನಾಗರಿಕತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರ ಪಡೆದಿರುವುದು. ಇದು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯೆಂಬುದಕ್ಕೆ ಯುಕ್ತವೂ ನಿರಾಪೇಕ್ಷಣೀಯವೂ ಆದ ಪರಿಹಾರವನ್ನು ನೀಡಲಿದೆಯೆಂದು ಒಪ್ಪಬೇಕು. ಪ್ರತಿಭಟನಕಾರರ ವಿರೋಧವನ್ನು ಆಕರ್ಷಿಸುವ ಇನ್ನೊಂದು ಅಂಶವೆಂದರೆ ದೇಶದ ಎಲ್ಲ ನಾಗರಿಕರ ಬಗೆಗೆ ದಾಖಲಾತಿ ಮಾಡುವ ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕುರಿತದ್ದು. ಇದಾದರೂ ಹೊಸ ಸಂಗತಿಯೇನಲ್ಲ; ಹಿಂದೆ ಅಂಗೀಕೃತವಾಗಿದ್ದದ್ದೇ. ಆ ದಾಖಲಾತಿಯನ್ನು ಈವರೆಗೆ ಮಾಡಿರಲಿಲ್ಲವಷ್ಟೆ. ಈಗ ರಾಷ್ಟ್ರಸ್ತರದಲ್ಲಿ ಅದನ್ನು ಮಾಡಲು ಉಪಕ್ರಮಿಸಲಾಗುತ್ತಿದೆಯಷ್ಟೆ.
ಈಗಿನ ಪ್ರತಿಭಟನೆಗಳ ತಾತ್ಪರ್ಯವೆಂದರೆ ಯಾವುದೇ ಗಂಭೀರ ಸಮಸ್ಯೆಗಳಿಗೆ ಅಭಿಮುಖರಾಗದೆ ಸಮಯ ತಳ್ಳುತ್ತಿರಬೇಕೆಂಬುದು. ಈ ಜಾಡಿನ ಚಿಂತನೆಯನ್ನು ಹಾಸ್ಯಾಸ್ಪದವೆನ್ನಬೇಕು.
ರಾಜ್ಯಾಂಗೀಯ ದೃಷ್ಟಿಯಿಂದ ಚರ್ಚನೀಯ ವಿಷಯಗಳು ಉಳಿದುಕೊಂಡಿದ್ದಲ್ಲಿ ಅದಕ್ಕೆ ಸೂಕ್ತವೇದಿಕೆಗಳು ಸಂಸತ್ತು ಮತ್ತು ನ್ಯಾಯಾಲಯಗಳೇ ಹೊರತು ಬೀದಿಗಳಲ್ಲ. ಯಾವುದೇ ಮಸೂದೆ ಒಮ್ಮೆ ಅಂಗೀಕೃತವಾಗಿ ಶಾಸನರೂಪ ಪಡೆದ ಮೇಲೆ ರಸ್ತೆಯ ರಂಪಾಟಗಳು ಸಲ್ಲವು.
ಪಶ್ಚಿಮ ಬಂಗಾಳ, ಪಂಜಾಬ್, ಕೇರಳ, ಮಧ್ಯಪ್ರದೇಶ, ಛತ್ತೀಸ್ಗಢ ಸರ್ಕಾರಗಳು ತಾವು ನಾಗರಿಕತ್ವ ತಿದ್ದುಪಡಿ ಕಾಯ್ದೆಯನ್ನು ಅಮಲುಗೊಳಿಸುವುದಿಲ್ಲವೆಂದು ಘೋಷಿಸಿರುವುದು ಅಪ್ರಬುದ್ಧ ಕ್ರಮವಾಗಿದೆ; ಸಂವಿಧಾನವಿರೋಧಿಯಾಗಿದೆ. ಸಂವಿಧಾನದ 246ನೇ ವಿಧಿಯಡಿಯಲ್ಲಿ ಅಂಗೀಕೃತವಾದ ಶಾಸನವನ್ನು ಯಾವುದೇ ರಾಜ್ಯಸರ್ಕಾರ ಉಲ್ಲಂಘಿಸಲಾಗದು; ಸರ್ವೋಚ್ಚ ನ್ಯಾಯಾಲಯವನ್ನು ಮೊರೆಹೋಗಬಹುದಷ್ಟೆ. ರಾಜ್ಯಸರ್ಕಾರಗಳು ಉದ್ಧಟತನ ತೋರಿದಲ್ಲಿ ಅವುಗಳ ಮೇಲೆ ಸಂವಿಧಾನದ 356ನೇ ವಿಧಿಯಂತೆ ಕ್ರಮಕೈಗೊಳ್ಳಬಹುದಾಗಿದೆ. ಹೀಗಾಗಿ ಈ ಐದು ರಾಜ್ಯಗಳ ಘೋಷಣೆಗಳನ್ನು ಜನಪ್ರಿಯತೆಯ ಬೆನ್ನುಹತ್ತಿದ ಬಡಾಯಿ ಎಂದಷ್ಟೆ ಭಾವಿಸಬಹುದು.
ಹೊಣೆಗೇಡಿ ಪ್ರತಿಭಟನೆಗಳು ಅಣಗಿ ವಿವೇಕದ್ದೂ ವಾಸ್ತವಜ್ಞಾನದ್ದೂ ಮೇಲುಗೈಯಾಗಲೆಂದು ಆಶಿಸೋಣ.