ಕಿಂ ಯಜ್ಞೈರ್ವಿಪುಲಾಯಾಸೈಃ ಕಿಂ ವ್ರತೈಃ ಕಾಯಶೋಷಣೈಃ |
ಅವ್ಯಾಜಸೇವಾ ಸುಭಗಾ ಭಕ್ತಿರ್ಯೇಷಾಂ ಮಹೇಶ್ವರೇ ||
– ಸುಭಾಷಿತ ಸುಧಾನಿಧಿ
“ತುಂಬಾ ಆಯಾಸವನ್ನುಂಟುಮಾಡುವ ಯಜ್ಞಾಚರಣೆಗಳಿಂದಾಗಲಿ ದೇಹದಂಡನೆಗೆ ಕಾರಣವಾಗುವ ಕಠಿಣವ್ರತಗಳಿಂದಾಗಲಿ ಆಗುವುದೇನಿದೆ? ಆ ವಿಧಾನಗಳಿಂದ ದೊರೆಯಬಹುದಾದ ಆನಂದವು ಯಾರಿಗಾದರೂ ನಿರ್ನಿಮಿತ್ತವಾಗಿ ಸೇವೆ ಮಾಡುವ ಸುಲಭ ಮಾರ್ಗದಿಂದಲೇ ದೊರೆತೀತು. ಈಶ್ವರನಲ್ಲಿ ಭಕ್ತಿ ತಳೆಯುವುದೆಂದರೂ ಅದೇ.”
ಭಗವದ್ಭಕ್ತಿ, ಯಾರಾದರೊಬ್ಬರಲ್ಲಿ ಪ್ರೇಮ, ಜೀವಸ್ನೇಹಾಭ್ಯಾಸ – ಇವುಗಳ ವಿಶೇಷತೆಯೆಂದರೆ ಮಾರ್ಗವೂ ಅದೇ, ಗಮ್ಯವೂ ಅದೇ. ಪರಮಪ್ರೇಮವು ತಾನೇ ಫಲಸ್ವರೂಪದ್ದೂ ಆಗಿದೆ – ಎಂದಿದ್ದಾರೆ ನಾರದರು. ಫಲಾಪೇಕ್ಷೆಯಿಂದ ಮಾಡುವುದು ವ್ಯವಹಾರವಾಗುತ್ತದಷ್ಟೇ ವಿನಾ ಭಕ್ತಿಯಾಗಲಿ ಪ್ರೇಮವಾಗಲಿ ಆಗಲಾರದು.
ನಿರ್ಮಲಪ್ರೇಮವನ್ನು ದೃಷ್ಟಾಂತಪಡಿಸುವ ಒಂದು ಸುಂದರ ಸತ್ಯಕಥೆ ಇಲ್ಲಿದೆ.
ಅಪರವಯಸ್ಕನೊಬ್ಬ ಚಿಕಿತ್ಸಾಲಯಕ್ಕೆ ಬಂದು, ಅವಧಿ ಮುಗಿದಿದ್ದ ಕಾರಣ ತನ್ನ ಗಾಯದ ಕೈಗೆ ಹಾಕಲಾಗಿದ್ದ ಹೊಲಿಗೆಗಳನ್ನು ತುರ್ತಾಗಿ ತೆಗೆಯುವಂತೆ ವಿನಂತಿ ಮಾಡಿದ. ಸಾಲುಗಟ್ಟಿ ಬಂದಿದ್ದಿದ್ದರೆ ಇದಕ್ಕೆ ಒಂದು-ಒಂದೂವರೆ ಗಂಟೆ ಹಿಡಿಯುತ್ತಿತ್ತೇನೋ. ಆದರೆ ಅಲ್ಲಿದ್ದ ಶುಶ್ರೂಷಕಿ ತೀರಾ ಒತ್ತಡದ ಕೆಲಸ ಇರದಿದ್ದುದರಿಂದ ಕೂಡಲೇ ಹೊಲಿಗೆಗಳನ್ನು ಬಿಚ್ಚಿ ವೃದ್ಧನನ್ನು ಕೇಳಿದಳು:
ಶು: “ಇದು ತುರ್ತಾಗಿ ಆಗಬೇಕೆಂದಿರಿ ತಾವು. ತಮಗೆ ಬೇರೆ ವೈದ್ಯರಲ್ಲಿಗೋ ಇನ್ನೆಲ್ಲಿಗೋ ಹೋಗಬೇಕಾಗಿತ್ತೇ?”
ವೃದ್ಧ: “ಅಂಥದ್ದೇನಿಲ್ಲ. ನನ್ನ ಪತ್ನಿ ಇರುವ ವೃದ್ಧಾಲಯಕ್ಕೆ ಹೋಗಿ ಅವಳೊಡನೆ ಉಪಾಹಾರ ಮಾಡಬೇಕಾಗಿದೆ.”
ಶು: “ಆಕೆಗೆ ಅನಾರೋಗ್ಯವಿದೆಯೆ?”
ವೃದ್ಧ: “ಆಕೆ ಸುಮಾರು ದಿನಗಳಿಂದ ಅಲ್ಲಿದ್ದಾಳೆ. ಆಕೆಗೆ ಆಲ್‍ಜೈಮರ್ಸ್ ವ್ಯಾಧಿ ಇದೆ.”
ಶು: “ನೀವು ಸ್ವಲ್ಪ ತಡವಾಗಿ ಹೋದರೆ ಆಕೆಗೆ ಕಷ್ಟವಾಗುತ್ತದೆಯೆ?”
ವೃದ್ಧ: “ಆಕೆಗೆ ನಾನು ಯಾರೆಂಬುದೂ ಅರಿವಾಗುವ ಸ್ಥಿತಿ ಈಗ ಇಲ್ಲ. ಆಕೆ ನನ್ನನ್ನು ಗುರುತು ಹಿಡಿದೇ ಐದು ವರ್ಷವಾಗಿದೆ.”
ಶು: “ಆದರೂ ನೀವು ಯಾರೆಂಬುದೇ ಆಕೆಗೆ ತಿಳಿಯುತ್ತಿಲ್ಲವಾದರೂ ಪ್ರತಿದಿನ ಬೆಳಗ್ಗೆ ಆಕೆಯ ಬಳಿಗೆ ಹೋಗುತ್ತಿದ್ದೀರಾ?”
ವೃದ್ಧ: “ನಾನು ಆಕೆಗೆ ಗುರುತಾಗದಿರಬಹುದು. ಆದರೆ ಆಕೆ ಯಾರೆಂಬುದು ನನಗೆ ತಿಳಿದಿದೆಯಲ್ಲ!”