“ಇತ್ತೀಚೆಗೆ ಅವಿಭಕ್ತ ಕುಟುಂಬ ಪದ್ಧತಿ ದುರ್ಬಲವಾಗುತ್ತಿದೆ. ಜನರಲ್ಲಿ ನೈತಿಕಪ್ರಜ್ಞೆ ಕುಸಿಯುತ್ತಿದೆ. ಆಧುನಿಕವೆನಿಸಿಕೊಳ್ಳುವ ಆಡಂಬರದ ಜೀವನರೀತಿ ಪ್ರಚುರಗೊಂಡಿರುವುದೂ ದಾಂಪತ್ಯವಿಚ್ಛೇದನಗಳಿಗೆ ಒಂದು ಪ್ರಮುಖ ಕಾರಣವೆನಿಸುತ್ತಿದೆ” – ಎಂದು ಇತ್ತೀಚೆಗೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ವಿಚ್ಛೇದನ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಹರಿಹರ, ದಾವಣಗೆರೆ – ಈ ಎರಡೇ ತಾಲೂಕುಗಳಲ್ಲಿ ಕಳೆದೊಂದು ದಶಕದಲ್ಲಿ ಸಲ್ಲಿಸಲಾಗಿದ್ದ ವಿಚ್ಛೇದನ ಅರ್ಜಿಗಳು 2848. ಈಗ್ಗೆ ಮೂವತ್ತು-ನಲವತ್ತು ವರ್ಷ ಹಿಂದೆ ವಿಚ್ಛೇದನ ಪ್ರಕರಣಗಳು ತೀರಾ ವಿರಳವಾಗಿದ್ದವು. ಈಗ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಒಂದರಲ್ಲಿಯೇ ವರ್ಷಕ್ಕೆ ಇನ್ನೂರರಿಂದ ಮುನ್ನೂರರಷ್ಟು ವಿಚ್ಛೇದನ ಅರ್ಜಿಗಳು ದಾಖಲೆಗೊಳ್ಳುತ್ತಿವೆ. ಇದರ ಒಂದು ಪರಿಣಾಮವಾಗಿ ಗಣನೀಯ ಸಂಖ್ಯೆಯ ಅಪ್ರಾಪ್ತವಯಸ್ಕ ಮಕ್ಕಳ ಉಸ್ತುವಾರಿಸಮಸ್ಯೆಯೂ ಬೆಳೆಯುತ್ತಿದೆ. ಈ ಸಂಕೀರ್ಣ ಸಮಸ್ಯೆಗೆ ಮೂಲಭೂತ ಪರಿಹಾರವನ್ನು ಬಹುಶಃ ಕಾನೂನಿನ ಕಕ್ಷೆಯಿಂದ ಆಚೆಗೇ ಅರಸಬೇಕಾದೀತೆನಿಸುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ದೃಢಪಡಿಸುವುದು ಮಾತ್ರ ಅಂತಿಮಪರಿಹಾರವಾದೀತು. ದಾಂಪತ್ಯದಿಂದ ವಿಚ್ಛೇದನ ಕೋರುತ್ತಿರುವವರಲ್ಲಿ ಅಧಿಕಸಂಖ್ಯೆಯವರು ನವವಿವಾಹಿತರು – ಎಂಬ ಸಂಗತಿಯೂ ಹೊರಹೊಮ್ಮಿದೆ. ಇದನ್ನೆಲ್ಲ ಗಮನಿಸುವಾಗ ಶಿಷ್ಟವಾದ ಕೌಟುಂಬಿಕ ವ್ಯವಸ್ಥೆಯನ್ನು ಬಲಪಡಿಸಲು ವ್ಯಾಪಕ ಆಂದೋಲನ ನಡೆಯುವುದು ತೀರಾ ಆವಶ್ಯಕವೆನಿಸುತ್ತದೆ.
ಕೌಟುಂಬಿಕತೆ ಬಲಿಷ್ಠವಾಗಲಿ
Month : March-2020 Episode : Author :