ಸಂತೋಷ್ಕುಮಾರ್ ಮೆಹೆಂದಳೆ
ದಿನಾಲು ಬೆಳಗ್ಗೆ ಎದ್ದು ಒಂದು ಕಪ್ಪು ಚಹ ಕುಡಿದು ವಾಕಿಂಗ್ ಹೋಗುವ ರಂಗನಾಥಭಟ್ಟರಿಗೆ ಎಲ್ಲಿ ಹೋದರೂ ಎದುರಿಗೆ ಸಿಕ್ಕಿದವರು ನಮಸ್ಕಾರದ ಬದಲಿಗೆ,
“ಭಟ್ರೆ ಎಂತಾ ಆಯ್ತು ಕಡೀಗೆ. ವ್ಯವಹಾರ ಬಗೆಹರೀತಾ…?” ಎಂದು ಹುಬ್ಬೇರಿಸಿ ಸಣ್ಣ ಕುತೂಹಲ, ಏನಾದರೂ ಇವರಿಗೆ ದಕ್ಕಿಬಿಟ್ಟಿದೆಯಾ, ಭಟ್ಟರು ಏನಾದರೂ ಮಾಡಿಕೊಂಡರಾ? ಎಂಬೆಲ್ಲ ಭಾವ ತುಳುಕಿಸುತ್ತಾ ನಿಂತುಬಿಡುತ್ತಿದ್ದುದು ಆಡುವಂತಿಲ್ಲ ಅನುಭವಿಸುವಂತಿಲ್ಲ ಎನ್ನುವಂತಾಗಿತ್ತು. ಕಾರಣ ಅನಗತ್ಯವಾಗಿ ಅವರ ಹೆಸರಿಗೆ ತಗುಲಿಹಾಕಿಕೊಂಡಿದ್ದ ಜಮೀನು ವಿವಾದ. ಸುತ್ತಮುತ್ತಲಿನ ಸೀಮೆಗೆ ತಾವಾಯಿತು ಬ್ಯಾಂಕಿನಲ್ಲಿನ ತಮ್ಮ ಡಿಸ್ಪ್ಯಾಚ್ ಕ್ಲರ್ಕ್ನ ಸಣ್ಣ ನೌಕರಿಯಾಯಿತು ಎನ್ನುತ್ತ, ಉಳಿದ ಸಮಯದಲ್ಲಿ ಪೂಜೆ ಪಾಠ ಹೇಳಿಕೊಂಡು ಶಿರಸಿ ಪೇಟೆಯಿಂದ ಎಂಟು ಹತ್ತು ಕಿ.ಮೀ. ದೂರದಲ್ಲಿದ್ದ ಕಾನುಮನೆ ಎಂಬ ಮೂಲೆಊರಿನ, ಸೊಂಪೆ ಹೊಳೆಯ ದಂಡೆಯಲ್ಲಿ ಸಣ್ಣದೊಂದು ಅರ್ಧ ಎಕರೆ
ಜಾಗದಲ್ಲಿ ತಮ್ಮದೇ ಕುಟೀರ ನಿರ್ಮಿಸಿಕೊಂಡಿದ್ದ ಭಟ್ಟರು ಯಾವತ್ತೂ ಊರ ಉಸಾಬರಿಗೆ ಹೋದವರೇ ಅಲ್ಲ. ತೀರ ಅವರಿವರ ಮನೆಯ ಕಾರ್ಯಕ್ರಮಗಳಿಗೆ,
“ಭಟ್ರೆ, ನೀವೆ ಬರದೇ ಸೈ” ಎಂದು
ಬೇಡಿಕೊಂಡರೆ ಮಾತ್ರ ಪೌರೋಹಿತ್ಯಕ್ಕೆ ಹೋಗುತ್ತಾರೆ. ಅದು ಹೊರತುಪಡಿಸಿದರೆ ಗೋಕರ್ಣದಿಂದ ಮಹಾಬಲಭಟ್ಟರು,
“ಜನ ಬೇಕು ಮಾರಾಯ್ರೆ, ನೀವೇ ಬನ್ನಿ” ಎಂದು ಹೇಳಿಕಳಿಸಿದಾಗಲೆಲ್ಲ ಹೋಗಿದ್ದು ಯಾರದೋ ಮನೆಯ ಮಹಾರುದ್ರ, ಇನ್ಯಾರದ್ದೋ ಮನೆಯ ಶನಿಜಪ, ಶಾಂತಿ, ನವಗ್ರಹಹೋಮ, ಕೊನೆಗೆ ನಾರಾಯಣಬಲಿ ಹೀಗೆ ದಿನವಿಡಿ ಕಲಾಪ ನಡೆಸಿ, ಸ್ವಲ್ಪ ಹೆಚ್ಚುಕಮ್ಮಿ ದುಡ್ಡು-ದುಗ್ಗಾಣಿ ಜೊತೆಗೆ ಏನೆಲ್ಲಾ ಮಾಬ್ಲಭಟ್ರು ಕಟ್ಟಿ ಕೈಗಿಡುತ್ತಾರೋ ತೆಗೆದುಕೊಂಡು ಬರುತ್ತಾರೆಯೆ ವಿನಾ ಯಾವತ್ತೂ,
“ಇಷ್ಟೇ ಕೊಡಿ….ಅಷ್ಟು ಕೊಡಿ…. ಪೌರೋಹಿತ್ಯ ತುಟ್ಟಿಯಾಗಿ ಹೋಯಿತು ಮಾರಾಯ್ರೆ..” ಎಂದು ಈಗಿನ ವ್ಯವಹಾರಿಕ ಪುರೋಹಿತ ಹುಡುಗರಂತೆ ವರಾತಕ್ಕಿಳಿದವರೂ ಅಲ್ಲ. ಅಲ್ಲದೆ ಈಗಿನವರಿಗೆ ಸರಿಯಾಗಿ ಯಾವುದೂ ಬಾಯಿಗೂ ಬರುವುದಿಲ್ಲ. ಬೇರೇನೂ ಗಿಟ್ಟದಿದ್ದಾಗ ಚಿಕ್ಕಂದಿನಲ್ಲಿ ಕಲಿತ ನಾಲ್ಕಾರು ಮಂತ್ರಗಳೊಂದಿಗೆ ಧಂಡಿಯಾಗಿ ಲಭ್ಯ ಇರುವ ಪುಸ್ತಕ ಹಿಡಿದು ಕೂತು ಮಂತ್ರ ಓದುವವರೆ ಜಾಸ್ತಿ. ಅದರ ಮಧ್ಯೆ ಉಗುಳು ನುಂಗುವವರಿಗೂ ಕಮ್ಮಿ ಏನಿಲ್ಲ. ಆದ್ದರಿಂದಲೇ ಭಟ್ಟರಂತೆ ಚಾಚೂತಪ್ಪದೆ ಕಾರ್ಯ ಮಾಡಿಸುವವರು ಈಗ ಸಿಗುವುದೇ ಕಡಮೆ ಎನ್ನುವ ಮಾತು ಇತ್ತಲಿನ ಯಲ್ಲಾಪುರದಿಂದ ಸಾಗರದವರೆಗೂ ಚಾಲ್ತಿ. ಅದಕ್ಕೆ ಸರಿಯಾಗಿ ಅದು ಹವ್ಯಕರು, ಮುದ್ರೆಯವರು, ವೈಷ್ಣವರು, ಶಿವಳ್ಳಿ, ಸ್ಮಾರ್ತರು ಕೊನೆಗೆ ಕರಾಡರದ್ದೇ ಇರಲಿ; ಅವರವರ ಭಾವನೆ ಮತ್ತು ಪದ್ಧತಿಗಳಿಗೆ ಅವರು ಯಾವತ್ತೂ ಧಕ್ಕೆ ತಂದವರಲ್ಲ. ಸೂಕ್ತಪದ್ಧತಿಗಳನ್ನು ಮಾತಿಲ್ಲದೆ ಅನುಸರಿಸುತ್ತಾರೆ. ವಾರದ ಮಾಮೂಲಿನ ದಿನದಲ್ಲಿ ಬ್ಯಾಂಕಿನಲ್ಲಿ ಇದ್ದ ಚಿಕ್ಕ ನೌಕರಿಯಲ್ಲಿ ತಲ್ಲೀನ. ಮನೆ ಸುತ್ತ ಅರ್ಧ ಎಕರೆ ಜಾಗ ಇದ್ದರೂ ಏನೊಂದು ಬೆಳೆ ತೋಟ ಮಾಡುವ ಉಮೇದು ಇದ್ದದ್ದು ಕಮ್ಮಿ. ಮನೆ ಬಿಟ್ಟರೆ ಉಳಿದೆಲ್ಲ ಮನೆಯ ಎದುರಿಗೆ ಸುಮ್ಮನೆ ಹಚ್ಚಹಸಿರಿನ ಬಯಲು. ಹಾಗಾಗಿ ರಂಗನಾಥಭಟ್ಟರೆಂದರೆ ಸುಮ್ಮನೆ “ಭಟ್ರಿಗೆ ನಮಸ್ಕಾರ” ಎನ್ನುವಷ್ಟು ಆದರ, ಗೌರವ ಸುತ್ತಲಿನ ಜನರಿಗೆ. ಎಂತಹ ದುರುಳನೂ ಭಟ್ಟರು ಹೋಗುತ್ತಿದ್ದರೆ ಒಮ್ಮೆ ತಲೆ ತಗ್ಗಿಸದಿರಲಾರ.
ಇವೆಲ್ಲದಕ್ಕೂ ಹೊಸರೂಪ ಬಂದಿದ್ದು ಇದ್ದಕ್ಕಿದ್ದಂತೆ ಭಟ್ಟರ ಹೆಸರಿಗೆ ಅನಿರೀಕ್ಷಿತವಾಗಿ ತುಂಡು ಜಮೀನೊಂದು ಬಂದು ಕೂತಾಗ. ಅದು ಆರಂಭವಾಗಿದ್ದು ಸುಮಾರು ಎರಡು ವರ್ಷದ ಹಿಂದೆ.
*****
ಆವತ್ತು ಮಧ್ಯಾನ್ಹ ಬ್ಯಾಂಕಿನ ಹೊರಗೆ ಬಂದ ರಂಗನಾಥಭಟ್ಟರಿಗೆ ಇನ್ನೇನು ತಮ್ಮ ಸ್ಕೂಟಿ ಹತ್ತಬೇಕು ಬ್ಯಾಂಕಿನ ಪಕ್ಕದ ಕಟ್ಟೆಯ ಮೇಲೆ ಕೂತಿದ್ದ ಭಿಕ್ಷುಕನೊಬ್ಬ ಕಂಡಿದ್ದಾನೆ. ನೋಡುತ್ತಿದ್ದರೆ ಎರಡು ಮೂರು ದಿನದ ಆಹಾರಾಭಾವ, ಹಸಿವು ಅವನ ಮುಖದಲ್ಲೂ ದೇಹಭಾಷೆಯಲ್ಲೂ ಎದ್ದುಕಾಣಿಸುತ್ತಿತ್ತು. ವೃತ್ತಿಪರ ಭಿಕ್ಷುಕನಿದ್ದಂತೆಯೂ ಕಾಣಿಸುತ್ತಿಲ್ಲ ಎನ್ನಿಸುತ್ತಿದ್ದಂತೆ ಗಾಡಿಯಿಂದಿಳಿದು ಮಾತಾಡಿಸಿದರೂ ಉತ್ತರ ದಕ್ಕದಿದ್ದಾಗ, ಎದುರಿನ ಗೂಡಂಗಡಿಯಿಂದ ಒಂದೆರಡು ಬಾಳೆಹಣ್ಣೂ, ಪ್ಯಾಕೇಟ್ ಬಿಸ್ಕೇಟೂ ಕೊಡಿಸಿದರು. ಅವನ್ನೆಲ್ಲಾ ಪಡೆಯಲೂ ಶಕ್ತಿ ಇಲ್ಲದವನಂತೆ ಕೂತಲ್ಲಿಂದಲೇ ನಿಧಾನಕ್ಕೆ ಕೈಚಾಚಿ ತೆಗೆದುಕೊಂಡು ಹಾಗೆ ಹಿಂದಕ್ಕೆ ಒರಗಿದ.
ಅಷ್ಟೆ. ಭಟ್ಟರಿಗೂ ಮತ್ತೆ ಬ್ಯಾಂಕಿಗೆ ಹಿಂದಿರುಗಬೇಕಿದ್ದುದರಿಂದ ಕೂಡಲೇ ಊಟಕ್ಕೆ ಹೊರಟು ಹೋಗಿದ್ದರು. ಆನಂತರ ಮರೆತೂಬಿಟ್ಟರು. ಮರುದಿನ ಬೆಳಗ್ಗೆ ಎದ್ದು ಎಂದಿನಂತೆ ರಸ್ತೆಯ ಗುಂಟ ವಿಹಾರ ಹೋಗುವ ಪದ್ಧತಿಯ ಭಟ್ಟರು ಚಹ ಕುಡಿದು ಹೊರಗೆ ಬರುತ್ತಾರೆ; ಮನೆಯ ಮುಂದೆ ಮತ್ತು ಅಂಗಳ ಎಲ್ಲ ಚೊಕ್ಕಟವಾಗಿ ಗುಡಿಸಿ ನೀಟಾಗಿ ಕಸವನ್ನೆಲ್ಲ ಒಂದೆಡೆ ಪೇರಿಸಲಾಗಿತ್ತು. ಅಂಗಳದಿಂದ ಅಲ್ಲಿನ ದಾರಿಯವರೆಗೂ ಎರಡೂ ಬದಿ ಜಳಜಳ ಆಗಿದೆ. ಇದೇನು ಪಂಚಾಯ್ತಿಯವರಿಗೆ ಒಳ್ಳೆಯ ಬುದ್ಧಿ ಬಂದಿದೆಯಲ್ಲ, ಅದೂ ಮನೆಯ ಪಾಗರದ ಆಸುಪಾಸೆಲ್ಲಾ ಕೈಯಿಟ್ಟಿದ್ದಾರೆ ಈವತ್ತು ಎಂದುಕೊಳ್ಳುತ್ತಲೆ ಎಲ್ಲ ಕಡೆಗೂ ದೃಷ್ಟಿ ಹರಿಸಿದರೆ ಅಷ್ಟು ದೂರದಲ್ಲಿ ಕಟ್ಟಿಗೆ ಒಟ್ಟುವ ಮನೆಯ ಪುಟ್ಟ ಜಾಗ ಕಟ್ಟಿಗೆಮನೆಯ ಮೂಲೆಯಲ್ಲಿ ಗೋಣಿಚೀಲ ಹಾಸಿಕೊಂಡು ಅವನು ಕೂತಿದ್ದಾನೆ. ಅವನ ಪಕ್ಕದಲ್ಲಿ ಮನೆಯ ಕರಿಯ ಮೂತಿಯನ್ನು ಮುಂದೆ ಚಾಚಿ ಮಲಗಿದೆ.
ನಿನ್ನೆಯ ದಿನ ಬ್ಯಾಂಕಿನ ಬಳಿ ಇದ್ದ ಭಿಕ್ಷುಕ.
ಭಟ್ಟರ ಸವಾರಿ ನಿಂತುಹೋಯಿತು.
ಅವನನ್ನೆಬ್ಬಿಸಿದರು. ಕಣ್ಣು ಹೊಸಕಿಕೊಂಡು ಎದ್ದವನ ಬಳಿ ಮಾತುಗಳಿರಲಿಲ್ಲ.
ಎಲ್ಲದಕ್ಕೂ ತಲೆ ಅಲ್ಲಾಡಿಸುವುದು ಬಿಟ್ಟರೆ ಬೇರೆ ಉತ್ತರ, ಮಾತು ಎರಡೂ ಇರಲಿಲ್ಲ ಅವನ ಹತ್ತಿರ. ಅದಕ್ಕೂ ಮೊದಲು ಕಾಲು ಹಿಡಿಯುತ್ತಿದ್ದ. ಆಹಾರ ಕೊಟ್ಟಿದ್ದ ಕೃತಜ್ಞತೆಗೋ, ಇನ್ನೇನಾದರೂ ಸಹಾಯ ಬೇಕಿತ್ತೋ, ಗೊತ್ತಾಗಲಿಲ್ಲ. ಹಾವ-ಭಾವ ನೋಡಿದರೆ ಮೂಕನಿರಬೇಕು. ಆದರೆ ಮನೆಯಂಗಳದ ಸ್ವಚ್ಛ ಭಾರತ ಅಭಿಯಾನ ಅವನದೇ ಎಂದು ಖಾತ್ರಿಯಾಗಿತ್ತು. ಅಷ್ಟು ದೂರದಲ್ಲಿದ್ದ ನೀರಿನ ದಾರಿ ತೋರಿಸಿ ಅವನಿಗೆ ಕೈಕಾಲು ತೊಳೆದುಕೊಳ್ಳಲು ಹೇಳಿ ಮತ್ತೆ ಮನೆಯೊಳಕ್ಕೆ ನಡೆದು ಹೋದರು. ಆಗಷ್ಟೆ ಎದ್ದಿದ್ದ ಮಡದಿಗೆ ಸೂಕ್ಷ್ಮವಾಗಿ ವಿಷಯವನ್ನು ಹೇಳಿ ಒಂದಷ್ಟು ಚಹ ಮತ್ತು ತಿಂಡಿ ಕೊಟ್ಟು ಕಳಿಸಿದರು.
ಇತ್ತಿಚಿನ ದಿನದಲ್ಲಿ ಭಿಕ್ಷೆ ಅತ್ಲಾಗಿರಲಿ, ಸಹಾಯ ಸಲ್ಲಿಸಿದವರೂ ಧನ್ಯವಾದ ಹೇಳುವ ಮೌಲ್ಯ ಮತ್ತು ಕೃತಜ್ಞತೆ ಎರಡನ್ನೂ ಕಳೆದುಕೊಂಡಿರುವ ದಿನದಲ್ಲಿ, ಒಂದು ದಿನದ ತುಸು ತಿಂಡಿಗೆ ಹೀಗೂ ಋಣ ತೀರಿಸುವವರಿದ್ದಾರಾ…? ನಂಬಿಕೆಯ ಹೊರಗಿದ್ದರೂ ಮನುಷ್ಯರಲ್ಲಿ ಇನ್ನೂ ಒಳ್ಳೆಯತನ ಸತ್ತಿಲ್ಲ ಎಂದುಕೊಳ್ಳುತ್ತ, ಅವನಿಗೆ ಮಾತು ಬೇರೆ ಬರದಿದ್ದುದರಿಂದ ಅಲ್ಲೇ ಮಲಗಿರಲಿ ಎಂದು ಹೊರಟುಹೋದರು.
ಮಧ್ಯಾಹ್ನ ಊಟಕ್ಕೆ ಬರುವ ವೇಳೆಗೆ ಮನೆಯ ಸುತ್ತಲಿನ ಶಿಸ್ತಿಗೆ ಇನ್ನಷ್ಟು ಕಳೆ ಬಂದಿತ್ತು. ಸೋಗೆಗರಿಗಳನ್ನೆಲ್ಲ ಸರಿ ಮಾಡಿ, ಕಟ್ಟಿಗೆಮನೆಯಲ್ಲಿ ಇದ್ದ ಕುಂಟೆಗಳನ್ನು ಒಡೆದು, ಚಕ್ಕೆಗಳನ್ನೆಲ್ಲ ಗುಡ್ಡೆಹಾಕಿಟ್ಟು, ನಾಯಿ ಕಟ್ಟುತ್ತಿದ್ದ ಜಾಗ ಸ್ವಚ್ಛವಾಗಿರಿಸಿ, ಅಷ್ಟು ದೂರದಿಂದ ನೀರು ತಂದು ಹನಿಸಿ, ಒಟ್ಟಾರೆ ಮನೆ ಎದುರಿನ ಅಂಗಳಕ್ಕೆ ಒಂದು ಕಳೆ ಮತ್ತು ಶಿಸ್ತು ಎರಡನ್ನೂ ಒದಗಿಸಿದ್ದ.
ಅವನ ಹೆಸರು ಶೇಷಪ್ಪ ಎಂದು ಗೊತ್ತಾಗುವುದಕ್ಕೆ ನಾಲ್ಕು ದಿನ ಬೇಕಾಯಿತು. ಭಟ್ಟರು ಕೊಟ್ಟರೆ ತಿನ್ನುತ್ತಿದ್ದ, ಇಲ್ಲ ಸುಮ್ಮನೆ ಗೋಣಿಯ ಮೇಲೆ ಕೂತಿರುತ್ತಿದ್ದ.
ಮನೆಯ ಸುತ್ತಲಿನ ತುಂಡುಜಮೀನು ನಿಧಾನವಾಗಿ ಲಕಲಕ ಎನ್ನತೊಡಗಿತ್ತು. ಕೈ-ಬಾಯಿ ಸನ್ನೆಯ ಮೂಲಕ ಅವನೂ ಒಬ್ಬ ರೈತನಾಗಿದ್ದ ಎನ್ನುವುದು ಮಾತ್ರ ಗೊತ್ತಾಗಿತ್ತು ಭಟ್ಟರಿಗೆ. ಈ ಸುದ್ದಿ ತಿಳಿದ ಸುತ್ತಮುತ್ತಲಿನ ಕೆಲವರು,
“ಮಾರಾಯ್ರೆ, ಎಂಥೆಂಥವ್ರಿರುತ್ತಾರೋ ಗೊತ್ತಿಲ್ಲ. ಯಾರಾರನ್ನೋ ಯಾಕೆ ನಂಬುತ್ತೀರಿ. ಎಲ್ಲಿಂದ ಬಂದವ ಏನೂ ಹೇಳುತ್ತಿಲ್ಲ ಎನ್ನುತ್ತೀರಿ. ಅದರಲ್ಲೂ ಸುಮ್ಮನೆ ಒಂದು ಹಿಡಿ ಊಟಕ್ಕೆ, ಎಂಟಾಣೆ ಕಾಸಿಗೆ ಯಾರೂ ಇಷ್ಟೊಂದೆಲ್ಲ ಕೆಲಸ ಮಾಡೊದಿಲ್ಲ. ಹುಶಾರಾಗಿರಿ…” ಎಂದು ಎಚ್ಚರಿಸಿದವರೆ ಹೆಚ್ಚು.
ಶೇಷಪ್ಪ ಕಟ್ಟಿಗೆಮನೆ ಮತ್ತು ಸುತ್ತಲಿನ ತುಂಡುಜಮೀನು ಬಿಟ್ಟರೆ ಬೇರೆಡೆ ಕಾಣಿಸುತ್ತಲೇ ಇರಲಿಲ್ಲ. ಭಟ್ಟರು ಬೀಜ, ಗೊಬ್ಬರ ಅದೂ ಇದೂ ಎಂದು ತಂದುಕೊಡುತ್ತಿದ್ದರು. ಇದ್ದ ಜಾಗದಲ್ಲೇ ಹುಲುಸಾಗಿ ಕಾಯಿಪಲ್ಯ ಬೆಳೆದು ಭಟ್ಟರ ಮನೆಯ ಕಾಯಿಪಲ್ಯ ಸಮಸ್ಯೆ ಪರಿಹರಿಸಿದ್ದ. ಸುತ್ತಲಿನ ತೆಂಗಿನಗಿಡಗಳು ಮೈತುಂಬಿಕೊಂಡವು. ಬಾವಿಕಟ್ಟೆ ಚೆಂದ ಆಗಿತ್ತು. ಪಾಗಾರದ ಗೋಡೆ ರಿಪೇರಿಯಾಗಿತ್ತು. ಆದರೆ ಶೇಷಪ್ಪ ಮಾತ್ರ ನಿರ್ಲಿಪ್ತ. ನೋಡು-ನೋಡುತ್ತಲೇ ಎರಡು ವರ್ಷ ಕಳೆದಿದ್ದ ಅದೇ ಸಣ್ಣ ಜಾಗದಲ್ಲಿ. ಜೊತೆಗೆ ಅವನಿಗೀಗ ಭಟ್ಟರ ಪೌರೋಹಿತ್ಯಕ್ಕೆ ಬೇಕಾದ ಸಾಮಾನು ತರುವುದೂ ಸಲೀಸಾಗಿತ್ತು. ದರ್ಭೆಯಿಂದ ಹಿಡಿದು ಸಕಲ ಸಾಮಾನುಗಳ ಲಿಸ್ಟ್ ಹಿಡಿದು ನಿಧಾನಕ್ಕೆ ಕಾಲಾಡಿಸುತ್ತಾ ಹೋಗಿಬರುತ್ತಿದ್ದ. ಅವನ ಹಿಂದೆ
ಕರಿಯ ತಲೆಜೀಕುತ್ತಾ ಸಾಗುತ್ತಿತ್ತು. ಮಾತುಬಾರದ ಪ್ರಾಣಿ, ಗೊತ್ತಿದ್ದೂ ದನಿಯಿಲ್ಲದ ಶೇಷಪ್ಪ ಸನ್ನೆಗಳಿಗೆ ಅದ್ಭುತವಾಗಿ ಪಕ್ಕಾಗಿದ್ದರು.
ಅಷ್ಟೆ ಆಗಿದ್ದರೆ ಬಹುಶಃ ಶೇಷಪ್ಪ ಕಾಲದೊಂದಿಗೆ ಕಳೆದುಹೋಗುತ್ತಿದ್ದನೇನೋ.
ಆದರೆ ಹಾಗಾಗಲು ಕಾಲ ಬಿಡಲಿಲ್ಲ.
ಅದೊಂದು ದಿನ ಬ್ಯಾಂಕಿನ ಕೆಲಸ ಮುಗಿಸಿ ಬಂದ ಭಟ್ಟರಿಗೆ, ಇದ್ದಕ್ಕಿದ್ದಂತೆ ಶೇಷಪ್ಪನ್ನು ಯಾರೋ
ಇಬ್ಬರು ಬಲವಂತದಿಂದ ಕರೆದೊಯ್ಯಲು ಬಂದ ಸುದ್ದಿ ತಿಳಿಯಿತು. ಶೇಷಪ್ಪ ಮಾತ್ರ ಎಷ್ಟೇ ಪ್ರಯತ್ನಗಳ ನಂತರವೂ ಅಲ್ಲಿಂದ ಕದಲಿರಲಿಲ್ಲ. ಭಟ್ಟರಿಗೂ ಏನೂ ಅರ್ಥವಾಗಲಿಲ್ಲ. ವಿವರಿಸುವುದಕ್ಕೆ ಅವನಿಗೆ ದನಿಯಿಲ್ಲ. ಒಂದೆರಡು ದಿನ ಕಳೆದರೆ ತಾನೇ ಹೇಳಿಯಾನು ಎಂದು ಹೆಚ್ಚು ಒತ್ತಾಯಿಸದೆ ಸುಮ್ಮನಾಗಿದ್ದರು. ಆನಂತರದಲ್ಲಿ ಶೇಷಪ್ಪ ಮಂಕಾಗತೊಡಗಿದ್ದು, ಸೋತವನಂತೆ ಕಾಣಿಸುವುದು ಗೊತ್ತಾಗುತ್ತಿತ್ತು. ಮೊದಲಿನ ಹುರುಪು ಊಟ, ಕೆಲಸದಲ್ಲಿ ಆಸ್ಥೆಯೂ ಹೊರಟುಹೋಗಿತ್ತು. ಅಂತಿಮವಾಗಿ ಅದು ಸಂಪನ್ನಗೊಂಡಿದ್ದು ಅವನ ನಾಪತ್ತೆಯಾಗುವಿಕೆಯ ಮೂಲಕ ತಿಂಗಳೊಪ್ಪತ್ತಿನಲ್ಲಿ, ಸರಿ ರಾತ್ರಿ ಒಂದು ದಿನ ಬೆಳಗಾಗುವ ಹೊತ್ತಿಗೆ ಶೇಷಪ್ಪ ಕಟ್ಟಿಗೆಮನೆಯ ಗೋಣಿಚೀಲದ ಮೇಲಿಂದ ನಾಪತ್ತೆ ಆಗಿದ್ದ.
ಅವನನ್ನು ಕವುಚಿ ಮಲಗುತ್ತಿದ್ದ ನಾಯಿ, ಕುಂಯಿಗುಡುತ್ತಾ ಅಂಗಳದ ತುಂಬ ದಿಕ್ಕೆಟ್ಟಂತೆ ಓಡಾಡುತ್ತಿತ್ತು; ಅವನ ಸುಳಿವಿಲ್ಲ ಎನ್ನುವುದು ಗೊತ್ತಾಗಿತ್ತು ಅದಕ್ಕೆ.
*****
ಮೂರ್ನಾಲ್ಕು ದಿನಗಳು ಕಾದರೂ ಬಾರದೆ ಇದ್ದಾಗ ಅಲ್ಲಲ್ಲಿ ಹುಡುಕಿಸಿದರು. ಅವನೇನೂ ಕದ್ದಿರಲಿಲ್ಲ. ಹುಲ್ಲಿನಕಡ್ಡಿಯನ್ನೂ ಒಯ್ದಿರಲಿಲ್ಲ. ಆದರೆ
ಎರಡು ವರ್ಷದ ಅವಧಿಯಲ್ಲಿ ಶೇಷಪ್ಪನೊಂದಿಗೆ ಮಾತಿಲ್ಲದೆಯೂ ಒಂದು ಅನೂಹ್ಯವಾದ ಬಂಧ ಅವರಿಗರಿವಿಲ್ಲದೆ ಬೆಳೆದುಬಿಟ್ಟಿತ್ತು. ಅವನಿಲ್ಲದೆ ಮನೆ, ಅಂಗಳ, ನಾಯಿಯ ಚಿನ್ನಾಟ ಎಲ್ಲ ಒಮ್ಮೆಲೇ ಸ್ತಬ್ಧವಾಗಿದ್ದವು. ನಿಃಶಬ್ದವಾಗಿಯೆ ಇದ್ದರೂ, ಮಾತೇ ಬಾರದಿದ್ದರೂ ಎಲ್ಲೆಡೆಯಲ್ಲೂ ಶೇಷಪ್ಪ ತನ್ನ ಸದ್ದು ಮೂಡಿಸಿದ್ದ. ಸದ್ದಿಲ್ಲದ ಅವನ ನಿಃಶಬ್ದತೆ ಈಗ ಸದ್ದು ಮಾಡುತ್ತಿತ್ತು. ಜೀವಸೆಲೆ ತುಂಬಿದ್ದು ಅವನ ಗೈರಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ದಿನಾಲೂ ಬೆಳಗ್ಗೆ ಭಟ್ಟರು ಹೊರಗೆ ಹೊರಟರೆ ಅವರೊಂದಿಗೆ ಗೇಟಿನ ಕಾಲುದಾರಿಯವರೆಗೂ ಬಂದು ಹಿಂದಕ್ಕೆ ಹೋಗುತ್ತಿದ್ದ. ತಮ್ಮೊಂದಿಗೆ ಅವನಿಗೂ ಒಂದು ಕಪ್ಪು ಚಹ ಮಾಡಿ ಕೊಡುವುದರೊಂದಿಗೆ ಅವರ ದಿನಚರಿ ಆರಂಭವಾಗುತ್ತಿತ್ತಲ್ಲ. ಹೀಗಾಗಿ ಬೆಳ್ಳಂಬೆಳಗ್ಗೆ ಅವನ ಅನುಪಸ್ಥಿತಿ ಕಾಡತೊಡಗಿತ್ತು.
ಯಾಂತ್ರಿಕವಾಗಿ ತಮ್ಮ ಬ್ಯಾಂಕ್ ಕೆಲಸಕ್ಕೆ ಹೋಗಿ ಬರತೊಡಗಿದ್ದರು ಭಟ್ಟರು. ಅದಾಗಿ ಕೆಲವೇ ದಿನಗಳಲ್ಲಿ, ಆವತ್ತಿನ ಮಧ್ಯಾಹ್ನಕ್ಕೂ ಮೊದಲೇ ಪೊಲೀಸರು ಅವರನ್ನು ಹುಡುಕಿಕೊಂಡು ಬಂದಿದ್ದರು. ಭಟ್ಟರು ಏನು ಎಂದು ವಿಚಾರಿಸುವ ಗೋಜಿಗೂ ಹೋಗಬೇಕಿರಲಿಲ್ಲ. ಪೆÇಲೀಸರು ಮಾಹಿತಿ ಕೊಟ್ಟಿದ್ದರು. ಶೇಷಪ್ಪ ಇನ್ನಿಲ್ಲವಾಗಿದ್ದ. ಸಿದ್ಧಾಪುರದ ಅವನ ಮನೆಪಕ್ಕದ ಚಿಕ್ಕ ಖಾಲಿಜಾಗದಲ್ಲಿದ್ದ ಮರಕ್ಕೆ ಶೇಷಪ್ಪ ನೇಣಿಗೆ ಶರಣಾಗಿದ್ದ. ಅವರೊಂದಿಗೆ ಆ ಸ್ಥಳಕ್ಕೆ ಧಾವಿಸಿದ ಭಟ್ಟರಿಗೆ ಮರ, ಅವನು ನೇಣಿಗೆ ಸಿಗೇ ಬಿದ್ದಿದ್ದ ಕೊಂಬೆ ಯಾವ ವ್ಯತ್ಯಾಸವನ್ನೂ ತೋರಿಸದೆ ಹಾಗೆ ಇದ್ದವು. ಒಮ್ಮೆ ಯಾಕೋ ಶೇಷಪ್ಪನೆಲ್ಲಿಂದಾದರೂ ತಮ್ಮನ್ನು ನೋಡುತ್ತಿದ್ದಾನಾ ಎನ್ನಿಸದಿರಲಿಲ್ಲ. ಅವನ ಋಣ ಮುಗಿದಿಲ್ಲ ಎನ್ನಿಸುತ್ತಿದ್ದಂತೆ ಪೆÇಲೀಸರು ತಿಳಿಸಿದ ವಿಷಯ ಅದನ್ನು ನಿಜವಾಗಿಸಿತ್ತು. ಅವನು ನೇಣಿಗೇರಿದ್ದ ತನ್ನ ಸುಪರ್ದಿಯಲ್ಲಿದ್ದ ಸುಮಾರು ಅರ್ಧ ಎಕರೆಯಷ್ಟಿದ್ದ, ಚಿಕ್ಕ ಜಾಗವನ್ನು ಅಧಿಕೃತವಾಗಿ ಭಟ್ಟರ ಹೆಸರಿಗೆ ಬರೆದು ತೀರಿಹೋಗಿದ್ದ ಶೇಷಪ್ಪ.
ಆಗಿದ್ದಿಷ್ಟು.
ಇಲ್ಲಿಗೆ ಬರುವ ಮೊದಲು, ಮನೆಯಲ್ಲಿ ಮಕ್ಕಳ ಮತ್ತು ಆಸ್ತಿಯ ತಾಕಲಾಟದಲ್ಲಿ ಬೀದಿಗೆ ಬಿದ್ದಿದ್ದ ಶೇಷಪ್ಪ. ಆ ನೋವನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಮನೆಬಿಟ್ಟಿದ್ದ. ಆದರೆ ಇದೇನೂ ಗೊತ್ತಿಲ್ಲದೆ, ಯಾರು ಏನು ನೋಡದೆ ಭಟ್ಟರು ಆಶ್ರಯ ನೀಡಿದ್ದರು. ಅತ್ತಲಿನ ಕಿರಿಕಿರಿ ಬೇಡವೆನ್ನಿಸಿ, ಮನೆಗೆ ಮರಳದೆ ನೆಮ್ಮದಿಯಾಗಿ ಭಟ್ಟರ ಅಂಗಳದಲ್ಲಿ ಹಾಕಿದ್ದು ಉಂಡು ಉಳಿದುಬಿಟ್ಟಿದ್ದ. ಆದರೆ ತುಂಬ ಆಯಕಟ್ಟಿನಲ್ಲಿ ಉಳಿದಿದ್ದ ತುಂಡುಭೂಮಿಯೊಂದು ಇನ್ನೂ ಶೇಷಪ್ಪನ ಹೆಸರಿನಲ್ಲೇ ಉಳಿದಿತ್ತು. ಅದನ್ನು ಅವನು ವಿಲೇವಾರಿ ಮಾಡಿಯೇ ಮನೆ ಬಿಟ್ಟಿದ್ದರೆ ಇಷ್ಟೊಂದು ಅವನಿಗಾಗಿ ಹುಡುಕಾಟ ಇತ್ಯಾದಿ ನಡೆದು ಕೊನೆಗೆ ಅವನ ನೇಣಿನಲ್ಲಿ ಪರ್ಯವಸಾನ ಆಗುತ್ತಿರಲಿಲ್ಲವೇನೋ. ಆದರೆ ಅದಕ್ಕಾಗಿ ಎರಡು ವರ್ಷಗಳ ಅವಧಿಯಲ್ಲಿ ಅವನನ್ನು ಹುಡುಕಿ ತೆಗೆದ ಮಕ್ಕಳು ಅವನನ್ನು ಭಟ್ಟರ ಅನುಪಸ್ಥಿತಿಯಲ್ಲಿ ಒತ್ತಾಯದಿಂದಲೇ ಕಾರಿಗೆ ಏರಿಸಿಕೊಂಡು ಕರೆದೊಯ್ದಿದ್ದರು. ಮಾನಸಿಕ ಕ್ಲೇಶಕ್ಕೂ, ಒತ್ತಡಕ್ಕೂ
ತಡೆಯದ ಶೇಷಪ್ಪ ಸಂಕಟಗಳಿಂದ ಹತಾಶನಾಗಿ ಮರಣಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದ. ಮರಣಪತ್ರದಲ್ಲಿ ಭಟ್ಟರ ವಿವರಗಳಿದ್ದುದರಿಂದ ಪೆÇಲೀಸರು ಭಟ್ಟರನ್ನು ಹುಡುಕಾಡಿ ತಂದು ಕೂಡಿಸಿಕೊಂಡಿದ್ದರು.
“ಭಟ್ಟರೇ, ಪತ್ರದ ಕಾಪಿ ಇಲ್ಲಿದೆ. ಶಾನುಭೋಗರಿಗೂ, ತಹಶೀಲ್ದಾರರಿಗೂ ಬರೆದು ಅದನ್ನು ತಲಪಿಸುವ ವ್ಯವಸ್ಥೆ ಮಾಡಿ ತೀರಿಕೊಂಡಿದ್ದಾನೆ. ಅನಾಥರಿಗೆ ಒಂದು ತುತ್ತು ಊಟವನ್ನು ಅವನ ಹೆಸರಲ್ಲಿ ಭಟ್ಟರ ಕೈಲಿ ಹಾಕಿಸಿ ಎಂದು ಬರೆದಿದ್ದಾನೆ. ಇದೊಂದು ಆತ್ಮಹತ್ಯೆಯಾಗಿದ್ದರಿಂದ ಕೇಸು ಮುಗಿತದೆ. ಆದರೆ ಆ ಜಮೀನಿನ ವಿಷ್ಯ ಕಾನೂನು ಏನು ಹೇಳುತ್ತೋ ಹಂಗೇ ಮಾಡ್ಕೊಳಿ. ಅವನ ಅಂತಿಮ ಇಚ್ಛೆಯಂತೆ ಒಂದು ಪ್ರತಿ ನಿಮಗೆ ತಲಪಿಸ್ತಿದ್ದೇವೆ..” ಎನ್ನುತ್ತ ತಮ್ಮ ಕರ್ತವ್ಯ ಪೂರೈಸುವ ಸಲುವಾಗಿ ಫೈಲು, ಕಾಗದದ ಪ್ರತಿಗಳನ್ನು ಎದುರಿಗಿಡುತ್ತಾ ಪೆÇಲೀಸ್ ಅಧಿಕಾರಿ ನುಡಿಯುತ್ತಿದ್ದರೆ, ಅವನ್ನೆಲ್ಲ ಸುಮ್ಮನೆ ಒಮ್ಮೆ ಕಣ್ಣಲ್ಲೇ ದಿಟ್ಟಿಸಿದ ಭಟ್ಟರು ನಿಧಾನಕ್ಕೆ ನುಡಿದರು,
“ಸಾರ್, ಶೇಷಪ್ಪ ನಮ್ಮ ಮನೆಗೆ ಸ್ವಂತಕ್ಕೂ ಹೆಚ್ಚಿಗೆ ದುಡಿದಿದ್ದಾನೆ. ಅವನ ಋಣವೇ ನನ್ನ ಮೇಲಿದೆ. ಮುಂದಿನ ವರ್ಷಾನುದ್ದಕ್ಕೂ ತೀರಲಾಗದ ತೋಟ ಮಾಡಿಟ್ಟಿದ್ದಾನೆ. ಅವನ ಯಾವ ಇಚ್ಛೆನೂ ಉಳಿಯೋದು ಬೇಡ. ಅವನ ಕರ್ಮಾದಿಗಳ ಕಾರ್ಯ ನಾನೇ ಮಾಡುತ್ತೇನೆ. ಉಳಿದಂತೆ ನನಗೇನೂ ಅವನ ಜಮೀನಿನ ಹಂಗು ಬೇಡ” ಎಂದು ಹೇಳಿ ಬಂದುಬಿಟ್ಟರು.
ಅಲ್ಲಿಗೆ ಎಲ್ಲ ಮುಗಿತೆಂದುಕೊಂಡು ಅವನ ಇಚ್ಚೆಯಂತೆ ಕೆಲವು ಜನರನ್ನು ಕರೆದು ಊಟ ಹಾಕಿಸಿದರೂ ಕೂಡಾ. ಆದರೆ ಭಟ್ಟರು ಬಿಟ್ಟರೂ, ಅವನ ಜಮೀನು ಭಟ್ಟರನ್ನು ಬಿಡಲಿಲ್ಲ. ಕಾನೂನು ಪ್ರಕಾರ ಅದಾಗಲೇ ಎಲ್ಲ ಕಚೇರಿಯಲ್ಲೂ ದಾಖಲಾಗಿದ್ದರಿಂದ ಅವರ ಮಕ್ಕಳು ಭಟ್ಟರನ್ನು ಹುಡುಕಿ ಬಂದರು. ಕಾರಣ ಅದು ಮುಖ್ಯರಸ್ತೆಯ ಪಕ್ಕದ ಆಯಕಟ್ಟಿನ ಜಾಗದಲ್ಲಿದೆ. ತುಂಬಾ ಬೆಲೆಬಾಳುತ್ತದೆ. ಚಿಕ್ಕದಾದರೂ ಸರಿ.. ಶೇಷಪ್ಪ ಭಟ್ಟರ ಕೈಯ್ಯಲ್ಲಿ ಇಟ್ಟು ಹೋಗಿದ್ದಾನೆ. ಉಳಿದೆಲ್ಲ ಜಮೀನು ಮತ್ತವರ ಆಸ್ತಿಗೊಂದು ಕಿಮ್ಮತ್ತು ಬರುವುದೇ ಈ ತುಂಡು ಜಮೀನಿನಿಂದಾಗಿ. ಇದೇನಾದರೂ ಅವರ ಕೈ ತಪ್ಪಿದರೆ ಅಕ್ಕಪಕ್ಕದ ಜಮೀನಿನ ಕಿಮ್ಮತ್ತು ಅರ್ಧಕ್ಕೂ ಕೆಳಗಿಳಿಯುತ್ತದೆ. ಹೀಗಿದ್ದಾಗ ಭಟ್ಟರ ಯಜಮಾನತ್ವ ಹೇಗೆ ಒಪ್ಪಿಕೊಂಡಾರು..?
“ಭಟ್ಟರೆ, ಏನೋ ಒಂದಷ್ಟು ಕೊಟ್ಟು-ತೊಗೊಳ್ಳೋದು ಮಾಡ್ಕೊಳ್ಳೋಣ. ನಿಮಗೇನೂ ಜಮೀನು ಜಾಯದಾದು ಅಂತೆಲ್ಲ ಬೇಕಿಲ್ಲವಲ್ಲ. ಮುಂಚಿಂದನೂ ಪುರೋಹಿತಕೆ ಮಾಡ್ಕಂಡಿದ್ದೀರಿ. ನ್ಯಾಯ ತಪ್ಪುಒಪ್ಪು ಎಲ್ಲ ನಿಮಗಿಂತ ಚೆನ್ನಾಗಿ ಗೊತ್ತಿರುವವರು ಯಾರಿದ್ದಾರೆ ಸುತ್ತಲ ಸೀಮೆಯಲ್ಲಿ. ಅದಕ್ಕೆ ಹೆಂಗೋ ಒಂಚೂರು ಹಿಂದೆಮುಂದೆ ಮಾಡ್ಕಂಡು ಇದನ್ನು ಮುಗಿಸಿಕೊಡಿ. ಮೊದಲೇ ಆಸ್ತಿ ವಿಷಯವಾಗಿ ನಮ್ಮಲ್ಲೂ ಸಾಕಷ್ಟು ಸಮಸ್ಯೆಗಳು ತಲೆದೋರಿದ್ದಾವೆ. ನಿಮಗೂ ಗೊತ್ತಾಗಿರಬೇಕು. ಅಪ್ಪ ಕೊನೆಗಾಲದವರೆಗೂ ನಿಮ್ಮಲ್ಲೆ ಇದ್ರಲ್ಲ. ಎಲ್ಲ ವಿಷಯ ಹೇಳಿರ್ತಾರೆ. ಹಂಗಾಗಿ ನೀವೆ ಮುಂದೆ ನಿಂತು ಸಮಸ್ಯೆ ಬಗೆಹರಿಸಿಕೊಟ್ಟರೆ ಎಲ್ಲರಿಗೂ ಅನುಕೂಲ…” ಎಂದು ಶೇಷಪ್ಪನ ಇಬ್ಬರೂ ಗಂಡುಮಕ್ಕಳು ಮತ್ತು ಅವರೊಬ್ಬ ಮಾವ ಎಲ್ಲ ಸೇರಿ ಮಾತಾಡುತ್ತಲೇ, ಸೂಚ್ಯವಾಗಿ ಇದರಿಂದ ಹಿಂದಕ್ಕೆ ಸರಿಯಿರಿ ಎನ್ನುವ ಮಾತನ್ನು ಹೇಳಿದಾಗ ಭಟ್ಟರು ಮಾತಾಡಲಿಲ್ಲ.
ಆ ಕ್ಷಣಕ್ಕೆ ಅವರೆಲ್ಲ ಸರಿದು ಹೋದರಾದರೂ, ಪರೋಕ್ಷವಾಗಿ ಭಟ್ಟರ ಮೇಲೆ ಒತ್ತಡ ತರತೊಡಗಿದ್ದರು. ಕಚೇರಿಯಲ್ಲಿ ಮೆನೇಜರ್ರಿಗೆ ಬೇಕಾದವರು ಸೇರಿ ಅವರಿಂದಲೂ ಭಟ್ಟರ ಮೇಲೆ ಒತ್ತಡ ತಂದರು.
“ಭಟ್ಟರೇ. ಸೀಮೆಲೆಲ್ಲಾ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದೀರಿ. ಈಗೇಕೆ ಸುಮ್ಮನೆ ನಿಮ್ಮ ಹೆಸರು ಹಾಳುಮಾಡಿಕೊಳ್ತೀರಿ. ಅದೇನು
ತೊಗೊಂಡು ಶೇಷಪ್ಪನ ಜಮೀನು ಅವರ ಮಕ್ಕಳಿಗೆ ತಕರಾರಿಲ್ಲದಂತೆ ಮಾಡಿಕೊಡಿ. ನೀವಂತೂ ಜಮೀನು ಮಾಡೊದಿಲ್ಲವಲ್ಲ…..” ಇತ್ಯಾದಿ ಬುದ್ಧಿವಾದದಂತೆ ತಮಗೆ ಬೇಕಾದವರ ಕಡೆಗೆ ಒಲವನ್ನು ತಿರುಗಿಸುವ ಕೆಲಸ ಮಾಡಿದರು. ಮತ್ತೆ ಎರಡು ಮೂರು ವಾರ ಕಳೆಯುವಷ್ಟರಲ್ಲಿ ಒಂದೆರಡು ಬಾರಿ ಭಟ್ಟರು ಸೀದಾ ತಹಶೀಲ್ದಾರರನ್ನು ಭೇಟಿಯಾಗಿದ್ದರೆಂದು ತಿಳಿಯುತ್ತಿದ್ದಂತೆ ಶೇಷಪ್ಪನ ಮಕ್ಕಳ ವರ್ತನೆಯೂ ಬದಲಾಯಿತು. ಬರಬರುತ್ತಾ ಎಲ್ಲಿ ಹೋದರೂ ಜನ ಅವರನ್ನು ನಿಂತಲ್ಲಿ ಕೂತಲ್ಲಿ, ಬ್ಯಾಂಕಿನಲ್ಲೂ ವ್ಯವಹಾರಕ್ಕೆ ಬಂದವರೆಲ್ಲಾ ನಿಂತುಕೊಂಡು,
“ಭಟ್ಟರೆ ಜಮೀನು ನಿಮ್ಮಂತೆ ಆಯ್ತಾ?” ಎನ್ನತೊಡಗಿದರು. ಯಾರಿಗೂ ಏನೂ ಹೇಳದೆ ಒಮ್ಮೆ ತಹಶೀಲ್ದಾರರು, ಪೆÇಲೀಸು ಅಧಿಕಾರಿ ಸಂಬಂಧಿಸಿದವರನ್ನೆಲ್ಲ ಕರೆದುಕೊಂಡು ಶೇಷಪ್ಪನ ಮನೆಗೇ ನಡೆದು ಹೋದರು.
“ಸ್ವಾಮಿಗಳೇ, ಶೇಷಪ್ಪ ಬದುಕಿದ್ದಾಗ ಏನಾಯಿತು ಅವನೇಕೆ ಮನೆಬಿಟ್ಟು ಬಂದಿದ್ದ ಎನ್ನುವುದನ್ನು ಕೊನೆಗಾಲಕ್ಕೆ ಅವನಿಗಿಂತ ಹೆಚ್ಚಾಗಿ ಅವನ ಮಕ್ಕಳೇ ಹೇಳುತ್ತಾರೆ. ನನಗೆ ಒಗ್ಗದ ಈ ಋಣಕ್ಕೆ ಎಳೆಸಿದ್ದು ಅವನ ಒಳ್ಳೆಯತನ. ಆದರೆ ಅದೀಗ ಇದ್ದವರಿಗೆ ಒಪ್ಪಿಗೆಯಿಲ್ಲ. ನೀವೆಲ್ಲ ಎಷ್ಟೆಂದರೂ ಅವನ ಕುಟುಂಬ. ಹೀಗಿದ್ದಾಗ ಕೊನೆಗಾಲಕ್ಕೆ ಅವನು ನನ್ನ ಮನೆಯಲ್ಲಿ ಎರಡು ತುತ್ತು ಅನ್ನ ಉಂಡ ಮಾತ್ರಕ್ಕೆ ನಾನು ಹಿರಿಯವನಾಗಲಾರೆ. ಈ ತುಂಡು ಜಮೀನಿಗಿಂತಲೂ ಜೀವಂತಿಕೆ ಎಂದರೆ ಏನು ಎನ್ನುವುದನ್ನು ಅವನು ಇಲ್ಲದಿದ್ದರೂ ಇರುವಂತೆ ಮಾಡಿಟ್ಟಿರುವ ನನ್ನ ಮನೆಯಂಗಳ. ಬದುಕು ಎಷ್ಟು
ಚೆಂದ ಎನ್ನುವುದನ್ನೂ ಜೀವಂತಿಕೆ ಮೈದುಂಬಿದಂತಿರುವ ಚಿಕ್ಕ ಪುಟ್ಟ ಹಸಿರು ಗಿಡಗಳಲ್ಲಿ ಕಾಣಿಸುತ್ತಿದೆ.
ಅವನೆಂದಿಗೂ ಬದುಕಿಗೂ, ಭ್ರಮೆಗಳಿಗೂ ಒಳಗಾಗಿದ್ದು ನಾನು ಕಾಣಲಿಲ್ಲ. ಅಂತಹದರಲ್ಲಿ ಅವನು ಬರೆದಿಟ್ಟು ತನ್ನ ಋಣಭಾರ ಇಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದು ಅವನ ದೊಡ್ಡತನ. ಅವನ ಕಾಗದ ಇಟ್ಟುಕೊಂಡು ಕಾನೂನು ಹೋರಾಟ ಇತ್ಯಾದಿ ನನಗೆ ಬೇಕಿಲ್ಲ. ಅವನ ಇಚ್ಛೆಯಂತೆ ನಾನಿದನ್ನು ಉಪಯೋಗಿಸುವ ಸ್ವಾತಂತ್ರ್ಯ ನನಗಿದೆಯಾದರೂ, ಒಂದು ವಿಷಯ ಅರ್ಥಮಾಡಿಕೊಂಡರೆ ಒಳ್ಳೆಯದು.
ಶೇಷಪ್ಪ ನಮ್ಮನೆಗೆ ಬಂದಾಗಲೂ ಅವನನ್ನು ಯಾರು ನೀನು, ಯಾಕೆ ಬಂದೆ? ಕೇಳಿಲ್ಲ. ಅವನು ಹೋಗುವಾಗಲೂ ನನಗೇನೊಂದೂ ಹೇಳಿ ಹೋಗಲಿಲ್ಲ. ಪ್ರತಿ ಬಾರಿ ಅಡುಗೆ ಮಾಡುವಾಗಲೂ ಅವನ ಕೈಯಲ್ಲಿ ಬೆಳೆದ ತರಕಾರಿಯೇ ನಮ್ಮಡುಗೆ ರುಚಿ ಹೆಚ್ಚಿಸಿದ್ದರೆ, ಮನೆಯ ಹಿಡಿಅನ್ನದಲ್ಲಿ ಉಂಡು ಹಸಿವು ನೀಗಿಸಿಕೊಳ್ಳುತ್ತಿದ್ದ ಯೋಗಿಯಂಥವನು ಶೇಷಪ್ಪ. ಅವನ ಶೇಷಾಯುಷ್ಯದಲ್ಲಿ ನಾವಿಬ್ಬರೂ ಒಂದೇ ತಪ್ಪಲೆಯ ಅನ್ನವನ್ನು ತಿಂದಿದ್ದೇವೆ. ಅವನು ಜಗತ್ತಿನೆಡೆಗೆ ದಿವ್ಯಮೌನವನ್ನು ಕಾಯ್ದುಕೊಂಡು ಬಿಟ್ಟಿದ್ದ. ಈ ಎರಡೂ ಚಿಲ್ಲರೆ ವರ್ಷದಲ್ಲಿ ಮೌನವಾಗೇ ಸಂಭಾಷಿಸಿದ್ದೇವೆ. ಬದುಕಿದ್ದಷ್ಟು ದಿನವೂ ಜೀವಂತಿಕೆಯಿಂದ ಬದುಕಿದ್ದ. ಅವನೊಡನೆ ಮಾತಾಡದಿದ್ದರೂ ನಮ್ಮ ಹೃದಯಗಳು ಸಂಭಾಷಣೆಯಲ್ಲಿ ನಿರಂತರವಾಗಿರುತ್ತಿದ್ದವು. ನಾನು ಒಬ್ಬನೆ ಮಾತಾಡುತ್ತಿದ್ದರೆ ಅವನ ಮುಖದಲ್ಲೊಂದು ಕಿರುನಗೆ ಇರುತ್ತಿತ್ತು ಅಥವಾ ಅದರ ಪ್ರತಿಕ್ರಿಯೆ ಅವನಾಗೆ ಬೆಳೆಸುತ್ತಿದ್ದ ಗಿಡಗಳಲ್ಲಿರುತ್ತಿತ್ತು. ಭೂಮಿಯಿಂದ ವಿಮುಖನಾಗಿ ಬದುಕುವುದು ಅವನಿಗೆ ಗೊತ್ತೇ ಇರಲಿಲ್ಲ.
ಇದರ ವಿಲೇವಾರಿಯನ್ನು ಅವನ ಇಚ್ಛೆಯಂತೆ ಮಾಡುವುದಾದರೆ, ಅವನ ಈ ಭೂಮಿ ನನಗೆ ಬೇಕಾಗಿಯೇ ಇಲ್ಲ. ಅಗತ್ಯ ಬಿದ್ದಾಗ ಸರಕಾರ ನಿರ್ಮಿಸಲು ಯೋಜಿಸಿರುವ ವೃದ್ಧಾಶ್ರಮಕ್ಕೆ ಅವನದೇ ಹೆಸರಿಟ್ಟು ಕೊಟ್ಟುಬಿಡಿ. ಅದರಿಂದ ಶೇಷಪ್ಪನಂಥವರು ಕೊನೆಗಾಲದಲ್ಲಿ ಬೀದಿಪಾಲಾಗುವುದು ತಪ್ಪಿ ಕೊಂಚವಾದರೂ ನೆಮ್ಮದಿ ದೊರಕೀತು. ಅವನ ಆತ್ಮಕ್ಕೂ ನೆಮ್ಮದಿಯಾಗಬಹುದು. ಉಳಿದಂತೆ ಅವನ ಮಕ್ಕಳು, ಅಧಿಕಾರಿಗಳು, ಸಮುದಾಯದ ಮುಖಂಡರು ಹೇಗೆ ನಿರ್ಧರಿಸುತ್ತಿರೋ ನಿಮಗೆ ಬಿಟ್ಟಿದ್ದು. ನನಗೆ ಏನೆಂದರೆ ಏನೂ ಬೇಕಾಗಿಲ್ಲ. ಕಾರಣ ಅವನ ಆ ಮೌನ ಮತ್ತು ಆ ನೆಮ್ಮದಿ ನನ್ನ ಮನೆಯಂಗಳದಲ್ಲಿ ಈಗಲೂ ಇದೆ. ನನಗೆ ಅದಷ್ಟೆ ಸಾಕು. ದಯವಿಟ್ಟು ಅಲ್ಲಿಗೂ ಪದೆಪದೇ ಬಂದು ಅವನ ನೆಮ್ಮದಿ ಹಾಳುಮಾಡಬೇಡಿ” ಭಟ್ಟರು ಕೈಮುಗಿದು ಎದ್ದು ನಿಂತರು, ತಮ್ಮ ಕೆಲಸ ಮುಗಿಯಿತು ಎನ್ನುವಂತೆ.
ಯಾರಿಂದಲೂ ಯಾವ ಮಾತೂ ಹೊರಡಲಿಲ್ಲ.
ಸರಸರನೆ ಮನೆಯ ಅಂಗಳದವರೆಗೂ ನಡೆದು ಬಂದರು, ಬಿರುಸಾಗಿ. ಸುಮ್ಮನೆ ಹಿಂದಿರುಗಿ ನೋಡಿದರು. ಕಟ್ಟಿಗೆಮನೆ ಹತ್ತಿರ ಹಾಸಿದ್ದ ಗೋಣಿ ಖಾಲಿಯಾಗಿತ್ತು. ಅವನ ಪಕ್ಕೆಗೆ ಆತುಕೊಳ್ಳುತ್ತಿದ್ದ ನಾಯಿ ಸಪ್ಪಗೆ ಅಲ್ಲೆ ಕೂತು ಕಿವಿ ನಿಮಿರಿಸುತ್ತಿತ್ತು. ಉಹೂಂ. ಶೇಷಪ್ಪ ಎಲ್ಲೂ ಹೋಗಿಲ್ಲ. ಮನೆಯ ಸುತ್ತಲಿನ ಹಸಿರುಗಿಡಗಳು, ಆ ಚೆಂದದ ತೆಂಗಿನಗರಿಯ ಹೆಣಿಕೆ, ಅವನು ಮಾಡುತ್ತಿದ್ದ ಹಸಿರು ತೋರಣ, ಒಪ್ಪ-ಓರಣ, ಬಾವಿಕಟ್ಟೆಯ ವಗಾತಿ ಎಲ್ಲ ಸೇರಿ ಮತ್ತೊಮ್ಮೆ ಹಸಿರುಕ್ಕಿದಂತಾಗಿ ಒಮ್ಮೆ ಕಣ್ಣು ಮಂಜಾದವು. ಅವನು ಗಿಡಗಳಿಗೆಲ್ಲ ಹರಿಸುತ್ತಿದ್ದ ನೀರಿನ ಪೈಪನ್ನು ತಾವೆತ್ತಿಕೊಂಡು ನಲ್ಲಿ ತಿರುಗಿಸಿದರು. ಅಲ್ಲೆಲ್ಲ ಒಮ್ಮೆ ನೀರಿನ ಹನಿಗಳು ಹಾರುತ್ತ ಎಲೆಗಳು ಮತ್ತೊಮ್ಮೆ ಜೀವಂತಿಕೆ ತುಂಬಿಕೊಂಡಂತಾಗಿ ಹಸಿರಾಗುತ್ತಿದ್ದರೆ ಪ್ರತೀ ಹಸಿರಿನಲ್ಲೂ, ಮಾತಾಡದಿದ್ದರೂ ದನಿಯಾಗುತ್ತಿದ್ದವನ ಉಸಿರು ಆಡುತ್ತಿದೆ ಎನ್ನಿಸಿ ನಿರಾಳವಾದರು.
ಯಾಕೋ ಕರಿಯ ಸುಮ್ಮನೆ ನೆಗೆಯುತ್ತಾ ಕುಂಯ್….. ಕುಂಯ್….. ಎನ್ನತೊಡಗಿತ್ತು.