‘ಎಡಗಡೆ ಹೆಗಲ ಮೇಲೆ ಬ್ಯಾಗು ಇಳಿಬಿಟ್ಟುಕೊಂಡು, ತಂಪುಕನ್ನಡಕ ತೊಟ್ಟು
ಬಂದ ಆತನನ್ನು ಮನೆಮಂದಿಯೆಲ್ಲ ಎದುರುಗೊಂಡರು. ಇಡೀ ಮನೆಯೇ ಸಂಭ್ರಮಿಸುತ್ತಿತ್ತು. ಬಾಗಿಲಿಗೆ ಮಾವಿನತೋರಣ. ಅಂಗಳದ ತುಂಬ ಬಣ್ಣ-ಬಣ್ಣದ ರಂಗೋಲಿ. ಸುವಾಸನೆ ಚೆಲ್ಲುತ್ತ ಅಲ್ಲಲ್ಲಿ ಇಳಿಬಿದ್ದ ಮಲ್ಲಿಗೆದಂಡೆಗಳು. ಅವನ ಅಜ್ಜಿಯಂತೂ ದಳ-ದಳ ಕಣ್ಣೀರು ಸುರಿಸುತ್ತಲೇ ಆರತಿ ಮಾಡಿತು. ಅಪ್ಪ ಖುಷಿಯಾಗಿದ್ದರೂ ತೋರಗೊಡದೆ ಗಂಭೀರವಾಗಿ ನಿಂತಿದ್ದರು. ಲಂಗ-ದಾವಣಿ ಉಟ್ಟ ಅತ್ತೆಮಗಳು ಕದ್ದು-ಕದ್ದು ನೋಡುತ್ತ ಆರತಿ ನೀರನ್ನು ದಾರಿಗೆ ಚೆಲ್ಲಲು ಹೋಯಿತು.’
ಗಂಗಾಧರ ಮನೆಗೆ ಬಂದಾಗ ಈ ರೀತಿಯ ಯಾವ ಸಿನಿಮೀಯ ಘಟನೆಗಳೂ ನಡೆಯಲಿಲ್ಲ. ಮನೆಬಾಗಿಲು ಮುಚ್ಚಿತ್ತು. ಅಸಲಿಗೆ ಇವನು ಬರುವ ದಿನವೇ ಎಲ್ಲರೂ ಹೊಲಕ್ಕೆ ಹೋಗಿಬಿಟ್ಟಿದ್ದರು. ಸತತ ಒಂಭತ್ತು ವರ್ಷಗಳ ನಂತರ ಆತ ಹಳ್ಳಿಗೆ ಬಂದಿದ್ದ. ಬರುವ ಬಗ್ಗೆ ಮೊದಲೇ ತಿಳಿಸಿದ್ದ ಕೂಡ. ಆದರೂ ಯಾರೂ ಇಲ್ಲದ್ದು ನೋಡಿ ಅವನಿಗೆ ಪಿಚ್ಚೆನಿಸಿತು. ಮನೆಯ ಮುಂದಿದ್ದ ಕಲ್ಲುಬೆಂಚಿನ ಮೇಲೆ ಕುಳಿತ. ಬಿಸಿಲೇರಿದ್ದರಿಂದ ವಿಪರೀತ ದಾವರ ಆಗಿತ್ತು. ಬ್ಯಾಗಿನಲ್ಲಿದ್ದ ಬಿಸಲೇರಿ ತೆಗೆದು ಎರಡು ಗುಕ್ಕು ಕುಡಿದ. ಇಡೀ ವಾತಾವರಣ ಬಿಕೋ ಎನ್ನುತ್ತಿತ್ತು.
ಹಾಗೇ ಅಕ್ಕ-ಪಕ್ಕ ಕಣ್ಣುಹಾಯಿಸಿದ. ಬಲಕ್ಕೆ ಕೊಟ್ಟಿಗೆ ಇತ್ತು. ಅದಕ್ಕೆ ಆತುಕೊಂಡೇ ಅರ್ಧಂಬರ್ಧ ಪೇರಿಸಿದ ಹುಲ್ಲಿನ ಬಣವೆ. ಮನೆ ಮುಂದೆ ಪಟುಕದ ಹೂವಿನ ಒಂದೆರಡು ಗಿಡಗಳು, ಬಜೆ, ಇತ್ಯಾದಿಗಳಿದ್ದವು. ಒಂದು ಮಂಕರಿಯಷ್ಟು ಹಣ್ಣುಮೆಣಸಿನಕಾಯಿಗೆ ಕೆಮ್ಮಣ್ಣು ಕಟ್ಟಿ ಒಣಗಿ ಹಾಕಲಾಗಿತ್ತು. ಪಾತ್ರೆ ತೊಳೆದ ನೀರು ಅಲ್ಲಲ್ಲೇ ನಿಂತು ನೊಣಗಳು ‘ಜೊಂಯ್’ ಎನ್ನುತ್ತಿದ್ದವು. ಎಡಕ್ಕೆ ಅರೆ-ಬರೆ ಬಾಗಿಲಿನ ಬಚ್ಚಲುಮನೆ. ಅದರ ಪಕ್ಕ ಸೌದೆ ಒಟ್ಟಿದ್ದ ಕಕ್ಕಸುರೂಮು.
ಒಂಭತ್ತು ವರ್ಷದ ಹಿಂದೆ ದುಬಾಯಿಗೆ ಹೋಗುವ ಮುಂಚೆಯೂ ಹೀಗೇ ಇತ್ತು. ಏನೂ ವ್ಯತ್ಯಾಸ ಕಾಣಿಸಲಿಲ್ಲ ಅವನಿಗೆ. ಅದೇ ಹೆಂಚಿನಮನೆ. ಅದೇ ಬಿದಿರುಮುಳ್ಳಿನ ಗೇಟು. ಕೊಟ್ಟಿಗೆ ಹಾಗೇ ಇತ್ತು. ಕಕ್ಕಸುರೂಮೊಂದೇ ಹೊಸದು. ಕೊಟ್ಟಿಗೆ ಪಕ್ಕದಲ್ಲಿ ಪೇರಿಸುತ್ತಿದ್ದ ಸೌದೆಪುಳ್ಳೆಗಳು ಈಗ ಆ ರೂಮಿನಲ್ಲಿದ್ದವು.
‘ಯಾರ್ ಬೇಕಾಗಿತ್ತು’ ಎಂಬ ಸದ್ದು ಗೇಟಿನ ಕಡೆಯಿಂದ ಬಂತು. ಸಡನ್ನಾಗಿ ತಿರುಗಿದ. ಅಜ್ಜಿಯೊಂದು ನಿಂತಿತ್ತು. ನೋಡಿದ ನೆನಪು, ತಕ್ಷಣಕ್ಕೆ ನೆನಪಾಗದು. ಅಚ್ಚರಿಯಾಗುವಂತೆ ಅಜ್ಜಿಯೇ ಇವನನ್ನು ಗುರುತು ಹಿಡಿದು “ಯಾವಾಗ್ ಬಂದೆ ಗಂಗಾದ್ರಪೆÇ್ಪೀ, ಏಸೊರಸ ಆಯ್ತಪ್ಪ ನೋಡಿ” ಎನ್ನುತ್ತ ಮಾತಾಡಿಸಿತು. ಇವನು ಏನಾದರೂ ಹೇಳಬೇಕೆನ್ನುವಷ್ಟರಲ್ಲಿ ಅಮ್ಮ ಇಲ್ಲೇ ಪಕ್ಕದ ಮನೆಯಲ್ಲಿರುವುದಾಗಿ ಹೇಳಿ ಅಜ್ಜಿ ಹೊರಟೇಹೋಯಿತು.
ಅಮ್ಮ ಪಕ್ಕದ ಮನೆಯಲ್ಲಿರುವ ವಿಷಯ ತಿಳಿದು ಮತ್ತೊಮ್ಮೆ ಬಾಗಿಲ ಕಡೆಗೆ ನೋಡಿದ. ಬೀಗ ಹಾಕಿರಲಿಲ್ಲ. ಚಿಲಕ ಎಳೆದು ಕಡ್ಡಿ ಸಿಗಿಸಿದ್ದರು. ಒಳಗೆ ಹೋಗಿ ಬ್ಯಾಗನ್ನು ಸ್ವಲ್ಪ ಸಿಟ್ಟಲ್ಲೇ ಎಸೆದು ಕುಳಿತ. ಅಮ್ಮ ಬಂದಿತು. ಬಂದವಳೇ “ನಾವ್ ಸತ್ತಿದ್ದೀವೋ ಬದಿಕಿದ್ದೀವೋ ಅಂತ ನೋಡಕ್ ಬಂದಾ, ಅಡ್ಡಕಸಬಿ ನನಮಗನೇ” ಎನ್ನುತ್ತ ಅಡುಗೆಮನೆಯಿಂದ ಏನನ್ನೋ ತೆಗೆದುಕೊಂಡು ಹೋಗೇಬಿಟ್ಟಿತು. ಅಪರೂಪಕ್ಕೆ ಬಂದ ಮಗನ ಮೈದಡವಿ ‘ಯಾವಾಗ್ ಬಂದ್ಯಪ್ಪ, ಚನಗಿದಿಯಾ?’ ಎಂದು ಕೇಳುತ್ತಾಳೆ. ಇಲ್ಲವಾದರೆ ಇಷ್ಟು ವರ್ಷಗಳ ಮೇಲೆ ಮಗ ಬಂದಿರುವುದಕ್ಕೆ ಕನಿಷ್ಟ ಖುಷಿಯಾಗುತ್ತಾಳೆ ಎಂದುಕೊಂಡಿದ್ದ ಗಂಗಾಧರನಿಗೆ ಶಾಕ್ ಕಾದಿತ್ತು. ಅವಮಾನವಾದಂತಾಯಿತು. ನಡುಮನೆಯಲ್ಲಿದ್ದ ಕಾಟಿನ ಮೇಲೆ ಸುಮ್ಮನೆ ಕುಳಿತುಬಿಟ್ಟ.
ಒಂಭತ್ತು ವರ್ಷಗಳ ಹಿಂದೆ ನಡೆದ ಘಟನೆಗಳು ನೆನಪಾಯಿತು.
ಅಂದು ಬೆಳಗ್ಗೆ ಅಣ್ಣನೊಂದಿಗೆ ಜಗಳವಾಗಿತ್ತು. ಸಣ್ಣ ಕಾರಣಕ್ಕೆ ಶುರುವಾದ ಅದು ಮಾತಿಗೆ ಮಾತು ಬೆಳೆದು ಮುಖ ಕೆಡಿಸಿಕೊಳ್ಳುವ ಹಂತಕ್ಕೆ ಹೋಗಿತ್ತು. ಅಪ್ಪ ಸತ್ತು ಕೆಲವೇ ತಿಂಗಳಾಗಿದ್ದವು. ಮನೆಯಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದು ಆಗಾಗ್ಗೆ ಅಣ್ಣ, ಅಮ್ಮ ಇಬ್ಬರೂ ಬೈಯುತ್ತಿದ್ದರು. ನಾಲ್ಕು ಸಪ್ಲಿಮೆಂಟರಿ ಕಟ್ಟಿದರೂ ಡಿಗ್ರಿಯಲ್ಲಿ ಫೇಲಾಗಿದ್ದ. ಜತೆಗಾರರಲ್ಲಿ ಬಹುತೇಕರು ಬೆಂಗಳೂರಿನಲ್ಲಿ ಲಾರಿ ಕ್ಲೀನರುಗಳಾಗಿ, ಬಾರಿನಲ್ಲಿ ಸಪ್ಲೈಯರುಗಳಾಗಿ, ಕೆಲವರು ಮಧುಗಿರಿಯಲ್ಲಿ ಗಾರೆಕೆಲಸ ಮಾಡುತ್ತಿದ್ದರು. ಎಲ್ಲೂ ಸಲ್ಲದ ಕೆಲವರು ವ್ಯವಸಾಯಕ್ಕೆ ಮರಳಿದ್ದುದೂ ಉಂಟು. ಒಂದಿಬ್ಬರು ಹೇಗೋ ದುಬೈಗೆ ಹೋಗಿ ಸೆಟ್ಲಾಗಿದ್ದರು. ಅಕ್ಕಪಕ್ಕದ ಊರಿನಲ್ಲೂ ಕೆಲವರು ದುಬೈಗೆ ಹೋಗಿ ಸಮಾನವಯಸ್ಕರ ದುಗುಡ ಹೆಚ್ಚಿಸಿದ್ದರು. ಗಂಗಾಧರನೂ ಆಸೆಯಿಂದ ಪಾಸ್ಪೆÇೀರ್ಟ್ ಮಾಡಿಸಿಕೊಂಡಿದ್ದ. ಏನೂ ಪ್ರಯೋಜನವಾಗಿರಲಿಲ್ಲ.
“ಗೆಣಕಾರ್ರೆಲ್ಲ್ಲ ದುಬೈಗೋ ಬೆಂಗಳೂರಿಗೋ ಹೋದ್ರು, ನೀನ್ಯಾವಗಪಣಿ ಹೋಗದು” ಎಂಬ ಊರವರ ಅಣಕ, ಮನೆಯವರ ಕೊಂಕು ಮಾತುಗಳಿಂದ ತಲೆ ರೋಸಿಹೋಗಿತ್ತು. ಏನೂ ಮಾಡಲಾಗದೆ, ಸುಮ್ಮನಿರಲೂ ಆಗದೆ ಒದ್ದಾಡುತ್ತಿದ್ದ. ಮನೆಯಲ್ಲಿ ಹೇಮಾಹೇಮಿ ವ್ಯವಸಾಯದ ಕೆಲಸವಿದ್ದಾಗ ಇವನು ಮದ್ಗಿರಿಗೆ ಹೋಗಿಬಿಡುತ್ತಿದ್ದ. ಇದೆಲ್ಲಾ ಅತಿಯಾಗಿದ್ದು ಒಮ್ಮೆ ಖರ್ಚಿಗೆ ಕಾಸಿಲ್ಲದೆ ಇವನು ಪಕ್ಕದೂರಿಗೆ ರೇಷ್ಮೆ ಹೊಲ ಅಗೆಯಲು ಕೂಲಿ ಹೋದಾಗ. ಇವರಿಗೇ ಐದಾರು ಎಕರೆ ಜಮೀನಿತ್ತು. ಅಮ್ಮ, ಅಣ್ಣ ಇಬ್ಬರೇ ಅಲ್ಲಿ ದುಡಿಯುತ್ತಿದ್ದರು. ಅವರಿಗೆ ಸಹಾಯ ಮಾಡುವ ಬದಲು ಇನ್ನೊಬ್ಬರ ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಕಂಡು ಅಣ್ಣ ಕೆಂಡಾಮಂಡಲವಾಗಿದ್ದ.
ಅದೇ ಮನೆಯಲ್ಲಿ ಜಗಳಕ್ಕೆ ಕಾರಣವಾಗಿತ್ತು. ಸೀದಾ ಬೆಂಗಳೂರಿಗೆ ಕಾಲುಕಿತ್ತಿದ್ದ. ಅಲ್ಲಿ ಒಂದೆರಡು ತಿಂಗಳು ಏನೋ ಕೆಲಸ ಮಾಡುತ್ತ ಕಾಲ ತಳ್ಳಿದ್ದಾಯಿತು. ಈ ನಡುವೆ ದುಬೈನಲ್ಲಿದ್ದ ಇವನ ಸ್ನೇಹಿತ ಬೆಂಗಳೂರಲ್ಲಿ ಸಿಕ್ಕಿದ. ರಜೆಗಾಗಿ ಬಂದಿದ್ದನಂತೆ. ಅವನಿಗೆ
ಕಾಡಿ-ಬೇಡಿ ದುಬೈಗೆ ಹೋಗಿಬಿಟ್ಟಿದ್ದ. ಗಂಗಾಧರ ಬೆಂಗಳೂರಿಗೆ ಹೋದಾಗಲೂ ಮನೆಯಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಎಲ್ಲೋ ಬಿದ್ದಿರ್ತಾನೆ ಬಿಡು ಎಂದು ಸುಮ್ಮನಾಗಿದ್ದರು. ದುಬೈಗೆ ಹೋಗುವ ಮುನ್ನ ಪಾಸ್ಪೆÇೀರ್ಟ್ ತೆಗೆದುಕೊಂಡು ಹೋಗಲು ಮನೆಗೆ ಬಂದು ವಿಷಯ ತಿಳಿಸಿದಾಗಲೂ ಎಲ್ಲರೂ ನಿರ್ಲಿಪ್ತರಾಗೇ ಇದ್ದರು. ಈ ಮನೆಗೆ ಇನ್ನು ಕಾಲೇ ಇಡುವುದಿಲ್ಲ ಎಂದುಕೊಂಡು ಹೊರಟು ಹೋಗಿದ್ದ.
ಹೊರಗೆ ಏನೋ ಸದ್ದಾದಂತಾಗಿ ಎಚ್ಚರವಾಯಿತು. ಹೊಲದಿಂದ ದನಗಳು ಬಂದವು, ಅಣ್ಣ ಅತ್ತಿಗೆಯೂ ಬಂದರು. “ಯಾವಾಗ್ ಬಂದೋ?” ಎಂದು ಅಣ್ಣನೇ ಕೇಳಿದ್ದರಿಂದ ಬಿಗುಮಾನ ಸಡಿಲವಾಯಿತು. “ಮದ್ಯಾನ ಬಂದೆ ಕಣಣಯ್ಯ” ಎಂದ. ಹಾಗೇ ಸುತ್ತಾಡಲು ಹೊರಟ. ಆಗಲೇ ಸಂಜೆಯಾಗುತ್ತಿತ್ತು. ಮೂರು ಮನೆ ದಾಟಿದ ನಂತರ ಒಂದು ಮನೆ ಮುಂದೆ ಹೆಚ್ಚು ಜನ ಇದ್ದರು. ಏನೋ ಗಡಿಬಿಡಿ. ಇದಕ್ಕೆ ಮುಂಚೆ ಸಿಕ್ಕಿದ್ದ ಅಜ್ಜಿ ‘ಬಾ ಗಂಗಾದ್ರಪೆÇ್ಪೀ’ ಎಂದು ಕರೆಯಿತು. ಜಗುಲಿ ಮೇಲೆ ಕುಳಿತ. “ಲಚ್ಚಮಕ್ಕನಿಗೆ ಈವತ್ತು ಹೆರಿಗೆ ನವ್ವು ಬಂತು. ಅದುಕ್ಕೆ ಸ್ಯಾನೆ ಜನ. ನಿಮ್ಮಮ್ಮನೂ ಒಳಗಡೆ ಐತೆ” ಎಂದು ಅಜ್ಜಿ ಒಂದೇ ಉಸುರಿಗೆ ಹೇಳಿತು. ‘ಪಾಪು ಆಯ್ತಾ?’ ಎಂದು ಕೇಳಿದ ಪ್ರಶ್ನೆಗೆ ‘ಇನ್ನೂ ಇಲ್ಲವೆಂದೂ, ಇನ್ನೇನು ಸ್ವಲ್ಪ ಹೊತ್ತಿಗೆ ಆಗಬಹುದೆಂದೂ’ ಉತ್ತರಿಸಿತು.
ಅಲ್ಲಿ ಕುಳಿತಿರಲು ಮುಜುಗರವಾದಂತಾಗಿ ಎದ್ದು ಹೊರಟ. ಕನ್ನಯ್ಯನ ಗುಡಿ ನೋಡಿಕೊಂಡು ಹಾಗೇ ಮನೆಯ ಹಿಂಭಾಗದ ಬಂಡಿಜಾಡಿನಲ್ಲಿ ನಡೆಯುತ್ತ ಹೋದ. ಹೊಸಕಟ್ಟೆಯ ಬಂಡೆಯ ಮೇಲೆ ಕಡ್ಲೆಗಿಡಗಳ ಬಣವೆಗಳಿದ್ದವು. ಒಂದೆರಡು ಗಿಡ ತೆಗೆದುಕೊಂಡು ಕಡ್ಲೆಕಾಯಿ ಬಿಡಿಸಿಕೊಂಡು ತಿನ್ನುತ್ತ ಹತ್ತಿರದ ಗುಂಡು ಹತ್ತಿದ. ಅಲ್ಲಿಂದ ಇಡೀ ಊರು ಕಾಣುತ್ತಿತ್ತು. ಹದಿನೈದು ದಿವಸ ರಜೆ ಹಾಕಿ ಬಂದಿದ್ದ. ಮೊದಲನೇ ದಿನವೇ ಸಾಕಪ್ಪಾ ಎಂಬಂತಾಗಿತ್ತು. ಹಾಗೇ ಬಂಡೆಯ ಮೇಲೆ ಒರಗಿದ. ಚುಕ್ಕಿಗಳು ಆಗತಾನೆ ಮೂಡುತ್ತಿದ್ದವು. ಆ ರೀತಿ ಶುಭ್ರ ಆಕಾಶ ನೋಡಿ ಎಷ್ಟೋ ಕಾಲವಾಗಿತ್ತು.
ನರಿಯೊಂದು ‘ಕೊಯ್ಯೋ’ ಎಂದು ಕೂಗಿತು. ಥಟಕ್ಕನೆ ಎದ್ದ. ಸುತ್ತ-ಮುತ್ತ ನೋಡಿದರೆ ಗವ್ವೆನ್ನುವ ಕತ್ತಲು. ಮೊದಲು ನರಿ ಕೂಗಿದ ವಿರುದ್ಧದಿಕ್ಕಿನಿಂದ ಮತ್ತೊಂದು ನರಿಯ ಊಳು ತೇಲಿಬಂತು. ಅದಕ್ಕೆ
ಸಾಥ್ ಕೊಡುವಂತೆ ಹಲವಾರು ನರಿಗಳ ಕೂಗು. ಹತ್ತು ವರ್ಷಗಳ ಹಿಂದೆ ಕೇಳಿದ್ದ ಸದ್ದು ಕೇಳಿ ಒಂಥರಾ ಖುಷಿಯಾಯಿತು. ಮನೆಯತ್ತ ಹೆಜ್ಜೆ ಹಾಕಿದ.
ಲಚ್ಚಮಕ್ಕನ ಮನೆ ಮುಂದೆಯೇ ಹೋಗಬೇಕಾಯಿತು. ಅಲ್ಲಿ ಈಗ ಗಡಿಬಿಡಿ ಹೆಚ್ಚಾಗಿತ್ತು. ಆತಂಕದ ಮುಖಗಳು. ಇನ್ನೂ ಪಾಪು ಆಗಿರಲಿಲ್ಲ. ಅಲ್ಲಿಯೇ ಸಿಕ್ಕ ಒಬ್ಬರಿಗೆ ‘ಆಸ್ಪತ್ರೆಗೆ ಹೋಗಬೇಕಾಗಿತ್ತು’ ಎಂದ. ‘ಲಚ್ಚಮಕ್ಕನ ಗಂಡ ಯಾವುದಾದರೂ ಆಟೋ ಸಿಗುತ್ತದೇನೋ ನೋಡಲು ಹೋಗಿದ್ದಾನೆ’ ಎಂದು ಅವರು ಹೇಳಿದ್ದು ಕೇಳಿ ಸಮಾಧಾನವಾಯಿತು. ಆ ಮನೆಯಿಂದ ಹೊರಗೆ ಬಂದ ಅಮ್ಮ ಒಂಚೂರು ದುಡ್ಡು ಕೊಡು ಎಂದಿತು. ಕೈಗೆ ಬಂದಷ್ಟು ತೆಗೆದುಕೊಟ್ಟ. ಒಂದು ಸಾವಿರ ಮಾತ್ರ ಇಸಿದುಕೊಂಡು ಪಕ್ಕದಲ್ಲಿದ್ದ ಯಾರ ಕೈಗೋ ಇಟ್ಟಿತು. ಒಳಗಡೆ ನೋವಿನ ಚೀರಾಟ. ಅಮ್ಮ ಓಡಿಹೋಯಿತು. ಗಂಗಾಧರ ತನ್ನ ಮನೆಗೆ ಬಂದ.
ಅಣ್ಣನ ಜೊತೆಗೆ ಅದೂ-ಇದೂ ಮಾತಾಡುತ್ತ ಊಟ ಆಯಿತು. ದುಬೈನಿಂದ ತಂದಿದ್ದ ಗಿಫ್ಟುಗಳನ್ನು ಕೊಟ್ಟ. ಅಣ್ಣ ಅತ್ತಿಗೆ ಇಬ್ಬರೂ ಅವನ್ನು ತಿರುಗಾ ಮುರುಗಾ ಒಂದು ಸಲ ನೋಡಿ ‘ಚನಗವೆ’ ಎಂಬ ಒಂದೇ ಶಬ್ದ ಹೇಳಿದರು. ಅಣ್ಣ ಹಟ್ಟಿ ಮುಂದೆ ಕಡ್ಲೆಗಿಡ ಗುಡ್ಡೆಹಾಕಿ ಸುಟ್ಟರು. ಕಡ್ಲೆಕಾಯಿ ಸುಲಕೊಂಡು ತಿನ್ನುತ್ತಾ ದುಬೈನಲ್ಲಿ ಯಾರಿಗಾದರೂ ಸಣ್ಣ ಉಡುಗೊರೆ ಕೊಟ್ಟರೆ ಮುಖ ಅರಳಿಸಿ ಬಾಯ್ತುಂಬಾ ನಗು ತುಂಬಿಕೊಂಡು ಎಷ್ಟೋ ಹೊತ್ತು ಧನ್ಯವಾದ ಹೇಳುತ್ತಿದ್ದುದನ್ನೂ ಇಲ್ಲಿ ಒಂದೇ ಶಬ್ದಕ್ಕೆ ಮುಗಿಸಿದ್ದನ್ನೂ ನೆನೆಸಿಕೊಂಡು ನಗು ಬಂತು.
ಹನ್ನೊಂದು ಗಂಟೆ ಹೊತ್ತಿಗೆ ಅಮ್ಮ ಲಚ್ಚಮಕ್ಕನ ಮನೆಯಿಂದ ಬಂತು. ಬಂದವಳೇ “ಆಟೋ ಹತ್ತಲಿಕ್ಕೇ ಆಗಲಿಲ್ಲ, ಉಳಿಯೋದ್ ಕಷ್ಟ ಕಣಪೆÇ್ಪೀ” ಎಂದಿತು. ಮೂರು ಜನರ ಬಾಯಿಂದಲೂ ಒಟ್ಟಿಗೇ ‘ಆಂ’ ಎಂಬ ಉದ್ಗಾರ. ಹಾಗೆಂದು ಅದರ ಬಗ್ಗೆಯೇ ಚರ್ಚೆ ಮಾಡುತ್ತಾ ಯಾರೂ ಕೂರಲಿಲ್ಲ. ಅಮ್ಮ ತಟ್ಟೆಗೆ ಚೂರು ಅನ್ನ ಹಾಕಿಕೊಂಡು ಜಗಲಿಯ ಕತ್ತಲಲ್ಲಿಯೇ
ಗಬಗಬ ತಿನ್ನತೊಡಗಿತು. ಅತ್ತಿಗೆ ಹಟ್ಟಿ ಮೂಲೆಯಲ್ಲಿ ಪಾತ್ರೆ ತೊಳೆಯುತ್ತಿತ್ತು. ಅಣ್ಣ ಪಕ್ಕದ ಕೊಟ್ಟಿಗೆಯಲ್ಲಿದ್ದ ದನಗಳಿಗೆ ಮೇವು ಕತ್ತರಿಸಿ ಹಾಕತೊಡಗಿದ. ಒಂಭತ್ತು ವರ್ಷ ದುಬೈಲಿದ್ದು ಬಂದಿದ್ದರಿಂದ ಮನಸ್ಸು ಇಲ್ಲಿನ ಪ್ರತಿಯೊಂದು ಕ್ರಿಯೆಯನ್ನೂ ಅಲ್ಲಿಗೆ ಹೋಲಿಸಿ ನೋಡುತ್ತಿತ್ತು.
ಬೆಳಗ್ಗೆಯಿಂದ ಹೊಲದಲ್ಲಿ ದುಡಿದ ದಣಿವಿಗೆ ಅಣ್ಣ-ಅತ್ತಿಗೆ ಮಲಗಿಬಿಟ್ಟರು. ಕಡ್ಲೆಕಾಯಿ ಸುಟ್ಟ ಬೆಂಕಿಗೆ ಸೌದೆಪುಳ್ಳೆ ಹಾಕಿದ್ದರಿಂದ ಹೊಗೆಯಾಡುತ್ತಿತ್ತು. ಅದರ ಕಮ್ಮಗಿನ ವಾಸನೆ, ಬೆಚ್ಚಗಿನ ಸುಖಕ್ಕೆ ಸೋತು ಗಂಗಾಧರ ಅಲ್ಲೇ ಕುಳಿತ. ಸ್ವಲ್ಪ ಹೊತ್ತಿಗೆ ಅಮ್ಮನೂ ಬಂತು. “ಬೆಳಕಿದ್ದಂಗೆ ಆಸ್ಪತ್ರೆಗೆ ಯಾಕ್ ಹೋಗಲಿಲ್ಲ?” ಎಂದು ಕೇಳಿದ.
“ನಾಲ್ಕನೇ ಹೆರಿಗೆ ಸಲೀಸಾಗಿ ಆಗ್ತೈತೆ ಅಂದ್ಕಂಡಿದ್ರು, ದೇವರು ಯಾಕೋ ಕಣ್ ಬಿಡಲಿಲ್ಲ.”
“ನಾಲಕ್ಕು ಮಕ್ಳು ಯಾಕೆ ಬೇಕಿತ್ತು, ಎರಡು ಸಾಕಾಗ್ತಾ ಇರಲಿಲ್ವಾ?”
“ಮದಲ್ನೇದು ಗಂಡು, ಎರಡು ವರ್ಷ ಇತ್ತು. ಏನೊ ಆಗಿ ಸತ್ತೋಯ್ತು. ಆಮ್ಯಾಲೊಂದು ಹೆಣ್ಣು ಆಯ್ತು. ಒಂದ್ ಗಂಡು ಹುಟ್ಲಿ ಅಂತ ನೋಡಿರು. ಅದೂ ತಿರಗಾ ಹೆಣ್ಣೇ ಆಯ್ತು. ಯಾವ್ಯಾವ್ ದೇವುರಿಗೋ ಹರಕೆ ಹೊತ್ಗಂಡು ಈ ತಡನಾದ್ರೂ ಗಂಡಾಗ್ಲಿ ಅಂತ ನೋಡಿರು. ಇವಾಗ್ ನೋಡಿದ್ರೆ ಗಂಟೇ ಹೋಗಂಗೈತೆ.”
ಇದೇ ತರ ಗಂಡುಮಗು ಬೇಕು ಎಂದು ಸತತ ಐದು ಹೆಣ್ಣುಮಕ್ಕಳ ತಂದೆಯಾಗಿದ್ದ ಪಾತಪ್ಪ ಸಡನ್ನಾಗಿ ನೆನಪಾದ. ಆತನ ಬಗ್ಗೆ ಕೇಳಿದ್ದಕ್ಕೆ,
“ಇನ್ನೆಲ್ಲಿ ಪಾತಪ್ಪ, ಗೊಟಕ್ ಅಂದು ಯಾವುದೋ ಕಾಲ ಆಯ್ತು.”
“ಆ ಹೆಣ್ಣುಡುಗರು?”
“ಅವೂ ಎಲ್ಲೆಲ್ಲೋ ಅವೆ. ದೊಡ್ಡೋಳು ಮದ್ವೆ ಆಗಿ ಪುಲಮಾಚೆಗವ್ಳೆ. ಎರಡ್ನೇಳು ಆ ಓಬಳಕ್ಕನ ಮಗಂಜೊತೆ ಓಡೋಗಿ ಮದ್ವೆ ಆದ್ಲು. ಈಗ ಹಿಂದೂಪುರದಾಗೆ ಚೆನಾಗವ್ರಂತೆ. ನಡುವುಲೋಳನ್ನ ಯಾರೋ ವಯಸ್ಸಾಗಿರೋ ತಾತಂಗೆ ಕೊಟ್ರು. ಕೊನೇ ಇಬ್ರು ಇಲ್ಲೇ ಕೂಲಿ-ನಾಲಿ ಮಾಡ್ಕಂಡು ಅವರೆ. ಕೈಗೆ ಬಂದವರೆ. ಇನ್ನ ಮದ್ವೆ ಗಿದ್ವೆ ಇಲ್ಲ.”
“ಅಶ್ವಥಪ್ಪ ಹೇಗಿದಾರೆ?”
“ಯಾವ?”
“ಅದೇ ನಾಟಕ ಕಲುಸ್ತಿದ್ರಲ್ಲ ಮೇಷ್ಟ್ರು.”
“ಅವರಾ, ಹೋದ ಮಳಗಾಲದಲ್ಲೇ ಹೋದ್ರು. ಸಾಯಕೆ ಆರು ತಿಂಗ್ಳು ಮುಂಚೆನೆ ಲಕ್ವ ಹೊಡುದು ಮಾತೇ ಬಿದ್ದೋಗಿತ್ತು. ಯಾರು ಮಾತಾಡ್ಸಕೆ ಹೋದ್ರೂ ಕೈನಲ್ಲೇ ತಾಳ ಹಾಕ್ತಾ ಕಣ್ಣೀರು ಸುರುಸ್ತಿತ್ತಂತೆ.”
ಇನ್ನೂ ಎಷ್ಟೋ ಜನರ ಬಗ್ಗೆ ವಿಚಾರಿಸಬೇಕೆಂದುಕೊಂಡಿದ್ದ ಗಂಗಾಧರ ಸುಮ್ಮನೇ ಕುಳಿತುಬಿಟ್ಟ. ಕೇಳಿದರೆ ಎಲ್ಲಿ ಅವರ ಸಾವಿನ ಸುದ್ದಿ ಕೇಳಬೇಕಾಗುತ್ತದೋ ಎಂಬ ಭಯ ಅವನೊಳಗೆ ಮೂಡತೊಡಗಿತು. ಹೊಗೆಯಾಡುತ್ತಿದ್ದ ಸೌದೆಪುಳ್ಳೆಗಳು ಈಗ ಕೆಂಡವಾಗಿ ಸಣ್ಣಗೆ ಬೆಂಕಿ ಹೊತ್ತಿಕೊಂಡಿತು.
“ದುಬಾಯ್ನಗೆ ಸಿಗ್ತವಾ ಕಳ್ಳೆಕಾಯಿ?”
ಇದ್ದಕ್ಕಿದ್ದಂಗೆ ಅಮ್ಮ ಕೇಳಿದ್ದು ಎಲ್ಲೋ ಇದ್ದವನನ್ನು ಮತ್ತೆಲ್ಲಿಗೋ ಎತ್ತಿ ಎಸೆದಂತೆ ಆಯಿತು. ಸ್ವಲ್ಪ ಹೊತ್ತು ಸಾವರಿಸಿಕೊಂಡು “ಅಲ್ಲೆಲ್ ಸಿಕ್ತವಮ್ಮ ಕಡ್ಲೆಕಾಯಿ? ಬೇಕಾದರೆ ಬೇಜಾನ್ ಬಂಗಾರ ಸಿಗುತ್ತೆ ನೋಡು.”
“ಬಂಗಾರದ ರೇಟು ಕಮ್ಮೀನಾ? ಹಂಗಾರೆ ತಗಂಬರದಲ್ವ?”
ಆಗ ಅಮ್ಮನಿಗೇ ಎಂದು ದುಬೈನಿಂದ ಒಂದು ಚಿನ್ನದಸರ ತಂದಿರುವುದು ಥಟ್ಟನೆ ನೆನಪಾಯಿತು. ಎದ್ದು ನಡುಮನೆಗೆ ಹೋಗಿ ಮಿರಿಮಿರಿ ಮಿಂಚುವ ಒಡವೆಬಾಕ್ಸ್ ತಂದು ಅಮ್ಮನ ಕೈಗೆ ಕೊಟ್ಟ.
“ಓ ತಂದೇಬುಟ್ಟಿದ್ದೀಯಾ, ಎಷ್ಟು ತೊಲ?” ಎಂದು ಕೇಳಿ ಬಾಕ್ಸ್ ಬಿಚ್ಚಬೇಕೆನ್ನುವಷ್ಟರಲ್ಲಿ “ರುದ್ರಮ್ಮಜ್ಜೀ ಓಡ್ ಬಾ” ಎಂಬ ಕೂಗು. ಅಮ್ಮ ಬಾಕ್ಸ್ ಎಸೆದಿದ್ದೇ ಲಚ್ಚಮಕ್ಕನ ಮನೆಕಡೆ ಓಡಿತು. ಇವನೂ ಎದ್ದು ಹೋಗಲು ನೋಡಿದ. ಅಮ್ಮ ಎಸೆದಿದ್ದ ಚಿನ್ನದ ಒಡವೆಬಾಕ್ಸ್ ಬೆಂಕಿಯೊಳಗೆ ಬಿದ್ದುಬಿಟ್ಟಿತ್ತು. ಸಾವಿನ ದವಡೆಯಲ್ಲಿದ್ದ ಲಚ್ಚಮಕ್ಕನ ಮನೆ ಕಡೆಗೊಮ್ಮೆ ಉರಿಯುತ್ತಿದ್ದ ಒಡವೆಬಾಕ್ಸ್ ಕಡೆಗೊಮ್ಮೆ ನೋಡಿದ. ಕೊನೆಗೆ ಒಡವೆಬಾಕ್ಸನ್ನು ಬೆಂಕಿಯಿಂದ ಹೊರಗೆಳೆದ. ಅದರ ತುದಿಗೆ ಆಗಲೇ ಬೆಂಕಿತಾಗಿತ್ತು. ಅದನ್ನು ‘ಉಫ್’ ಎಂದು ಊದಲು ಬಗ್ಗಿದಾಗ ಇವನು ಹೊದ್ದಿದ್ದ ಶಾಲು ಹತ್ತಿಕೊಂಡುಬಿಟ್ಟಿತು. ಗಾಬರಿಯಾಗಿ ಶಾಲನ್ನು ಕಿತ್ತೆಸೆದ. ಒಡವೆ ಬಾಕ್ಸೂ ಸೈತ ಶಾಲಿನೊಂದಿಗೆ ಸೇರಿ ಮತ್ತೆ ಬೆಂಕಿಗೆ ಬಿದ್ದವು. ಉರಿ ಮತ್ತಷ್ಟು ಜೋರಾಯಿತು. ಅಕ್ಕ-ಪಕ್ಕದ ಮನೆಯವರು ಲಚ್ಚಮಕ್ಕನ ಮನೆಕಡೆ ಓಡುತ್ತಿದ್ದರು. ಯಾರಾದರೂ ಸಹಾಯಕ್ಕೆ ಬರುತ್ತಾರೇನೋ ಎಂದು ನೋಡಿದ. ಯಾರೂ ಇತ್ತ ನೋಡಲಿಲ್ಲ. ಎಷ್ಟೋ ಆಸೆಯಿಂದ ತಂದಿದ್ದ ಅಪರೂಪದ ಡಿಸೈನಿನ ಚಿನ್ನದಚೈನು ಬೆಂಕಿಯಲ್ಲಿ ಉರಿಯುತ್ತಿರುವುದನ್ನೇ ನೋಡುತ್ತಾ ಗಂಗಾಧರ ಜಗಲಿ ಮೇಲೆ ಕುಂತುಬಿಟ್ಟ. ಎಷ್ಟೋ ಹೊತ್ತು ಹಾಗೇ ಕುಳಿತಿದ್ದ. ನಿನ್ನೆ ಇಷ್ಟೊತ್ತಿನಲ್ಲಿ ನಾನೆಲ್ಲಿದ್ದೆ, ಹೋದ ವಾರ ಇಷ್ಟೊತ್ತಿನಲ್ಲಿ ನಾನೆಲ್ಲಿದ್ದೆ ಎಂದು ಅವನ ಮನಸ್ಸು ಯೋಚಿಸುತ್ತಿತ್ತು. ಹಾಗೇ ನಿದ್ದೆ ಆವರಿಸಿತು. ಹಾಸಲು ಹೊದೆಯಲು ಇಲ್ಲದಿದ್ದರೂ ಗಾಢನಿದ್ದೆ.
ಎದ್ದಾಗ ಆಗಲೇ ಬೆಳಕು ಹರಿದಿತ್ತು. ರಾತ್ರಿ ನಡೆದಿದ್ದೆಲ್ಲ ಒಂದೇ ಸಲ ನೆನಪಾದವು. ಬೆಂಕಿ ಹಾಕಿದ್ದ ಕಡೆ ನೋಡಿದ. ಅಲ್ಲಿ ಬರೀ ಬೂದಿ ಇತ್ತು. ಅದೇ ಹೊತ್ತಿಗೆ ಅಮ್ಮ ಬೀದಿಯಿಂದ ಮನೆಯೊಳಗೆ ಬಂದಿತು. ಚಿನ್ನದ ಒಡವೆ ಬಗ್ಗೆ ಕೇಳಿದರೆ ಏನು ಉತ್ತರ ಕೊಡಬೇಕೆಂಬ ಆತಂಕದಿಂದ ಅವಳ ಮುಖವನ್ನೇ ನೋಡಿದ.
“ತಾಯಿ-ಮಗು ಇಬ್ರೂ ಚನಾಗವ್ರೆ” ಎಂದಿತು.