ಹಿಂದೂ ಮಹಾಸಾಗರವನ್ನಾದರೂ ದಾಟಬಹುದೇನೋ, ಆದರೆ ಮೌನ-ಮಹಾಸಾಗರವನ್ನು ಈಜಿದವರುಂಟೆ? ಮೌನದ ವಿಧವು ನೂರಿರುವಾಗ ಯಾವ ಮೌನವನ್ನು ಹೇಗೆ ಅರ್ಥೈಸಿಕೊಳ್ಳುವುದೋ ಆ ಮೌನವನ್ನು ಸೃಷ್ಟಿಸಿದ ಭಗವಂತನನ್ನೇ ಕೇಳಬೇಕಷ್ಟೆ. ಹಾಗೆಂದು ಸದಾ ಮೌನವಾಗಿರುವ ಸದಾಶಿವನೇ ಮೌನವನ್ನು ದಾಟಿದನೇ ಎಂದರೆ ಅವನ ಮೌನದಿಂದಲೇ ಗೌರಿ ದಕ್ಷಯಜ್ಞಕ್ಕೆ ಹೋದಳಲ್ಲ! ಮೌನವನ್ನು ಸಮ್ಮತಿ ಎಂಬುದಾಗಿ ಭ್ರಮಿಸಿ ಪರಿಣಾಮವೇನಾಯಿತು? ಗೌರಿ ಯೋಗಾಗ್ನಿಯಲ್ಲಿ ಬೆಂದುಹೋದಳು, ಕ್ರುದ್ಧನಾದ ಮಹಾದೇವ ವೀರಭದ್ರನನ್ನು ಸೃಷ್ಟಿಸುವ ಮೂಲಕ ದಕ್ಷನನ್ನು ಮಡುಹಿದ. ಮತ್ತೆ ಆಡಿನ ಶಿರವನ್ನು ಜೋಡಿಸಿ ಜೀವದಾನ ಮಾಡಿದರೆನ್ನಿ. ಮತ್ತೆಲ್ಲವೂ ಭಗವತ್ಸಂಕಲ್ಪ ಎನ್ನುವುದು ನಮಗೇನೋ ಸುಲಭ. ಹೆಚ್ಚಿನ ಸಂದರ್ಭದಲ್ಲಿ ಮೌನವೆಂಬುದು ಸಮ್ಮತಿಯ ಲಕ್ಷಣವಾಗಿರದೆ ನಿರಾಕರಣೆಯದೋ ಸಿಟ್ಟಿನದೋ ಲಕ್ಷಣವಾಗಿರುತ್ತದೆ ಎಂಬುದಕ್ಕೆ ಬೇರೆ ನಿದರ್ಶನ ಬೇಕೆ? ಹಾಗಿರುವಾಗ ನಿಮ್ಮ ಮೌನವನ್ನು ಅರ್ಥ ಮಾಡಿಕೊಳ್ಳದವರ ಬಳಿ ಮಾತನಾಡಿ ಏನೂ ಪ್ರಯೋಜನವಿಲ್ಲ.
ಮೌನವನ್ನೇ ಅರ್ಥಮಾಡಿಕೊಳ್ಳಲಿಲ್ಲ ಎಂದಮೇಲೆ ಮಾತನ್ನು ಹೇಗೆ ಅರ್ಥಮಾಡಿಕೊಂಡಾರು ಎಂಬುದು ತಪ್ಪಲ್ಲವೆ?
ಮೌನವು ಖಾಲಿಯಲ್ಲ. ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಅದರಲ್ಲಿ ಸಾಕಷ್ಟು ಉತ್ತರಗಳಿರುತ್ತವೆ, ಕೇಳಿಸಿಕೊಳ್ಳುವ ಕೌಶಲ ನಿಮ್ಮದಾಗಬೇಕು ಅಷ್ಟೆ ಎಂದೆಲ್ಲ ವಾಟ್ಸ್ಆ್ಯಪಿನಲ್ಲಿ ಸ್ಟೇಟಸ್ ಹಾಕುವವರಿದ್ದಾರೆ. ಆದರೆ ನಮಗೆ ಬೇಕಾದ ಉತ್ತರ, ಅಥವಾ ನಮ್ಮ ಮನಸ್ಸಿಗೆ ತಲಪುವ ಉತ್ತರ ಸಿಕ್ಕೀತೇ ಎಂಬುದು ಪ್ರಶ್ನೆ.
ಮಾತು ಅವಶ್ಯವಿದ್ದಲ್ಲಿ ಮೌನವಾಗಿದ್ದರೆ ಮಹಾ ಅಪರಾಧವಲ್ಲವೇ? ಒಂದು ವೇಳೆ ಮೌನದಲ್ಲೇ ಉತ್ತರ ಅಡಗಿರುತ್ತದೆ ಎಂದುಕೊಳ್ಳೋಣ. ಅವರವರು ಗ್ರಹಿಸುವ ಉತ್ತರ ಅವರ ಆ ಕ್ಷಣದ ಮನಃಸ್ಥಿತಿಯನ್ನು ಹೊಂದಿಕೊಂಡೇ ಇರುತ್ತದೆ. ಆಮೇಲಿನ ಪರಿಣಾಮಗಳಿಗೆ ಯಾರು ಹೊಣೆ?
ಮೌನವೆಂಬುದು ಕೆಲವು ಮನೆಗಳಲ್ಲಿ ಕಲಹದ ಮುನ್ಸೂಚನೆಯೂ ಆಗಿರಬಹುದು. ಯೋಚಿಸಿ ನೋಡಿದರೆ ಹಾರರ್ ಸಿನೆಮಾಗಳಲ್ಲಿ ಇನ್ನೇನು ಭೀಕರವಾದುದು ಏನೋ ನಡೆಯಬೇಕು, ಅದಕ್ಕಿಂತ ಮೊದಲ ಕೆಲವು ಕ್ಷಣಗಳು ಅಸಹನೀಯ ಮೌನದ ಕತ್ತಲಿರುತ್ತದೆ. ಕತ್ತಲನ್ನು ಛೇದಿಸಿ ಬೆಳಕು ಜಗ್ಗನೆ ಹತ್ತಿಕೊಂಡಾಗ ಶ್ರವಣೇಂದ್ರಿಯವು ಶಕ್ತಿ ಕಳೆದುಕೊಳ್ಳುವಷ್ಟು ಜೋರಾದ ಸದ್ದೂ ಕೇಳುತ್ತದೆ. ಅಲ್ಲಿ ಶಬ್ದಕ್ಕಿಂತಲೂ ಮೌನದ ಸಾಮಥ್ರ್ಯ ದೊಡ್ಡದು.
ಇದಕ್ಕೆ ಇನ್ನೂ ಒಂದು ಜ್ವಲಂತ ಉದಾಹರಣೆ ಕೊಡುವುದಾದರೆ ವಾಚಾಳಿ ಪತ್ನಿಯ ಮಾತಿನ ಕಾಟವನ್ನು ಸಹಿಸಲಾರದೆ, ಅವಳಿಂದ ದೂರ ಹೋಗಲೂ ಆಗದೆ ಪತಿಯೊಬ್ಬ ಬರೋಬ್ಬರಿ ಅರುವತ್ತೈದು ವರ್ಷಗಳ ಕಾಲ ಅವಳೆದುರು ತಾನು ಶ್ರವಣಶಕ್ತಿಯನ್ನೂ ಮಾತಿನ ಶಕ್ತಿಯನ್ನೂ ಕಳೆದುಕೊಂಡಂತೆ ನಾಟಕಮಾಡುತ್ತ ಬಾಳಿದನಂತೆ. ಕಡೆಗೊಂದು ದಿನ ಅವನು ಯಾವುದೋ ಪಾರ್ಟಿಗೆ ಹೋದಲ್ಲಿ ಸ್ನೇಹಿತರ ಒತ್ತಡಕ್ಕಾಗಿ ಕುಡಿದು ಕುಣಿದು ಮಾಡಿದ್ದನ್ನು ಅದಾರೋ ವಿಡಿಯೋ ಮಾಡಿದ್ದರು. ಅದು ಪತ್ನಿಯವರೆಗೂ ತಲಪಿತು. ಸಾಮಾಜಿಕ ಮಾಧ್ಯಮಗಳ ಅಡ್ಡಪರಿಣಾಮಗಳಲ್ಲಿ ಇದೂ ಒಂದು ಎಂದುಕೊಳ್ಳೋಣ. ಎಂಭತ್ತೈದು ವರ್ಷಗಳ ಆ ಅಜ್ಜಿಗೆ ಬಂದ ಸಿಟ್ಟು ಅಂತಿಂಥದ್ದಲ್ಲ. ಕುಡಿದ, ಕುಣಿದ ಎಂಬುದು ಸಮಸ್ಯೆಯಲ್ಲ. ಅವನ ಹೆಜ್ಜೆಗಾರಿಕೆ ಅಲ್ಲಿ ನುಡಿಸಿದ ವಾದ್ಯದ ನಾದಕ್ಕನುಗುಣವಾಗಿಯೇ ಇತ್ತು. ಸಾಲದ್ದಕ್ಕೆ ಮನೆಯೊಳಗಿನ ಮೌನದೇವ ಅಲ್ಲಿ ಹಾಡಿಗೆ ದನಿಗೂಡಿಸಿದ್ದ. ಮಾತಾಡಲಾಗದವನು ಹಾಡಿಯಾನೇ? ಇಷ್ಟು ವರ್ಷಗಳ ಕಾಲ ತನ್ನನ್ನು ಅವನು ವಂಚಿಸಿದನೆಂಬುದನ್ನು ಅವಳಿಂದ ಸಹಿಸಿಕೊಳ್ಳಲಾಗಲಿಲ್ಲ. ಹಾಗೆಂದು ಆಕೆಗೆ ಹೃದಯಾಘಾತವಾಗಲಿಲ್ಲ. ಗಂಡನಿಗೆ ವಿಚ್ಛೇದನ ಕೊಡುವ ತೀರ್ಮಾನ ತೆಗೆದುಕೊಂಡಳು. ಇಲ್ಲಿ ಯಾರನ್ನು ಸಮರ್ಥಿಸಿ ಮಾತನಾಡುವುದೂ ಕಷ್ಟವೇ! ಅವಳ ವಾಚಾಳಿತನ ತನಗೆ ಹಿಂಸೆಯಾದರೂ ಸಹಿಸಿಕೊಂಡು ಜತೆಗಿದ್ದ ಅವನ ತ್ಯಾಗ ದೊಡ್ಡದೆನ್ನುವುದೆ, ಅಥವಾ ತನ್ನೊಂದಿಗೆ ಮಾತಾಡದೆ, ತನ್ನ ಮಾತುಗಳಿಗೆ ಕಿವಿಯಾಗದೆ ಇದ್ದವನ ಜತೆಗೆ ಬದುಕಿದ ಅವಳ ಸಹನೆ ದೊಡ್ಡದೆನ್ನುವುದೆ? ಎಲ್ಲವೂ ಆಗಿರುವುದು ಅವನ ಮೌನದಿಂದಲೇ ಅಲ್ಲವೆ?
ಸಾವಿಗೂ ಮೌನಕ್ಕೂ ಅದೇನೋ ಸಂಬಂಧ. ‘ಅದೊಂದು ಮಾತು ಹೇಳಿದಳು ಅಮ್ಮ, ಮತ್ತೆ… ಮೌನ’ ಎಂದು ತನ್ನ ತಾಯಿಯ ಅನಿರೀಕ್ಷಿತ ಸಾವಿನ ಕುರಿತು ಮಕ್ಕಳು ಹೇಳಿದರಂತೆ. ಜೀವ ನಿಸ್ತೇಜವಾಗಿ ಸಾವೆಂದು ಘೋಷಿಸಲ್ಪಟ್ಟಾಗ ಮನೆಮಂದಿಯ ಮನದಲ್ಲಿ ಶೂನ್ಯಭಾವ ಇದ್ದರೂ ಆ ಕ್ಷಣದಲ್ಲಿ ಅಲ್ಲಿ ಮೌನವಿರುವುದಿಲ್ಲ. ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಮೂಡುವ ಆಕ್ರಂದನಕ್ಕೆ ಸಮಯ-ಸ್ಥಳದ ಹಂಗಿಲ್ಲವಲ್ಲ! ಆದರೂ ಸಹಿಸಲು ಸಾಧ್ಯವಾಗದ ಮೌನವನ್ನು ಕುರಿತು ಹೇಳುವಾಗ ಶ್ಮಶಾನಮೌನವೆಂದೋ ಸಾವಿನ ಮನೆಯ ಮೌನವೆಂದೋ ಹೇಳುವುದು ಕ್ಲೀಷೆಯೆಂಬಷ್ಟು ಹಳತಾಗಿಬಿಟ್ಟಿದೆ. ಊರಿಗೆ ಊರನ್ನೇ ಬಲಿತೆಗೆದುಕೊಂಡು ತೃಪ್ತಿಪಡುವ ಪ್ರವಾಹದ ಅಬ್ಬರ ಕಡಮೆಯಿರುವುದಿಲ್ಲ. ಬಿರುಗಾಳಿ, ಜಡಿಮಳೆ ಕರ್ಣಕಠೋರವೆನಿಸುವ ಗುಡುಗು, ಜೀವಝಲ್ಲೆನ್ನಿಸುವ ಮಿಂಚು ಎಲ್ಲವುಗಳ ನಡುವೆ ಹೇಳತೀರದ ಮೌನ. ಆರ್ಭಟ ನಿಂತಾಗ ಮತ್ತೆಲ್ಲವೂ ಸ್ತಬ್ಧ. ಆ ನೀರವತೆಯನ್ನು ತುಂಬುವುದಕ್ಕೆ ಬೇಕಾದ ದಿನಗಳದೆಷ್ಟೋ.
‘ಸೂಜಿ ಬಿದ್ದರೂ ಕೇಳಿಸುವ ಮೌನವಿರಬೇಕು ತರಗತಿಯಲ್ಲಿ’ ಎಂಬುದು ಬಹುತೇಕ ಶಿಕ್ಷಕರ ಅಪೇಕ್ಷೆ. ಆದರಲ್ಲಿ ಸದಾ ಮಾತು ಗಿಜಿಗಿಜಿಗುಟ್ಟುತ್ತಿರುತ್ತದೆ. ನಮ್ಮ ಬಾಲ್ಯದಲ್ಲಿ ಶಾಲೆಯಲ್ಲಿ ಪ್ರತಿ ತರಗತಿಗೊಬ್ಬ ನಾಯಕ. ಶಿಕ್ಷಕರು ಬರುವುದಕ್ಕಿಂತ ಮೊದಲಿನ ಅವಧಿಯಲ್ಲಿ ತರಗತಿ ಮೌನವಾಗಿರುವಂತೆ ಕಾಪಾಡುವುದು ಅವನದ್ದೇ ಹೊಣೆಗಾರಿಕೆ. ಆ ಜವಾಬ್ದಾರಿ ಸಿಕ್ಕಿದ ಕೂಡಲೆ ಎಲ್ಲ ಮಕ್ಕಳ ಮನಸ್ಸಿನಲ್ಲೂ ತಾನು ಈ ದೇಶದ ಪ್ರಧಾನಮಂತ್ರಿಯೇನೋ ಎಂಬ ಹೆಮ್ಮೆ ಮೂಡುವುದು ಸುಳ್ಳಲ್ಲ. ಅಧಿಕಾರದ ಪ್ರೀತಿ ಯಾರಿಗಿಲ್ಲ ಹೇಳಿ? ಯಾರೇ ಮಾತಾಡಿದರೂ ಅವರ ಹೆಸರು ಬರೆದು ಉದ್ದದ ಪಟ್ಟಿ ತಯಾರಿಸಿ, ಆ ಬಳಿಕ ತರಗತಿಗೆ ಬರುವ ಶಿಕ್ಷಕರೆದುರು ಆ ಪಟ್ಟಿಯನ್ನೊಡ್ಡಿ ಶಹಭಾಶ್ ಎನ್ನಿಸಿಕೊಳ್ಳಬೇಕೆಂಬುದು ಆ ನಾಯಕನ ಅಂತರಾಳದ ಅಭಿಲಾಷೆ. ಆದರೆ ತರಗತಿಯನ್ನು ಮೌನವಾಗಿ ಕುಳ್ಳಿರಿಸುವ ಭರದಲ್ಲಿ ಅವನೇ ಇಡೀ ಶಾಲೆಗೆ ಕೇಳುವ ಹಾಗೆ ‘ಮಾತಾಡ್ಬೇಡಿ’ ಎಂದು ಕಿರುಚುವುದು ಆ ಮೌನವನ್ನು ಸದಾ ಭಂಗಿಸುತ್ತಿರುತ್ತದೆ!
ಅಪರೂಪಕ್ಕೊಮ್ಮೆ ತರಗತಿಯಲ್ಲಿ ಪಾಠಮಾಡುವ ಉತ್ಸಾಹವಿಲ್ಲದೆ ಇದ್ದಾಗ ಅವಧಿ ಕಳೆಯುವ ಸುಲಭ ವಿಧಾನ ಎಂದರೆ ಮಕ್ಕಳಿಗೆ ಪ್ರಶ್ನೆ ಕೇಳುವುದು. ಪಾಠವನ್ನು ತಲೆಯಲ್ಲೇ ಬರೆದುಕೊಳ್ಳುವ ಮಕ್ಕಳು ಪಟಪಟನೆ ಉತ್ತರಿಸಿದರೆ ಪುಸ್ತಕದಲ್ಲೂ ಎರಡಕ್ಷರ ಬರೆಯಲು ಮರೆತವರು ಉತ್ತರಿಸುವುದು ಹೋಗಲಿ, ಪ್ರಶ್ನೆ ಯಾವ ಪಾಠದ್ದೆಂಬುದೂ ಅರ್ಥವಾಗದೆ ಮೌನದ ಮೊರೆಹೊಗುತ್ತಾರೆ. ಆ ಮೌನಕ್ಕೆ ಶಿಕ್ಷಕರ ತಾಳ್ಮೆಯನ್ನು ಪರೀಕ್ಷೆಗೊಡ್ಡುವ ಎಲ್ಲ ಸಾಮಥ್ರ್ಯವೂ ಇರುತ್ತದೆ. ‘ಮೌನವ್ರತ ಮಾಡುತ್ತಿದ್ದೀಯೇನೋ, ಮಾತಾಡೋ…ಬೇರೆ ಸಂದರ್ಭದಲ್ಲಿ ಅದೆಷ್ಟು ಮಾತಾಡ್ತೀಯಾ, ಈಗ ತೋರಿಸು ನಿನ್ನ ಪ್ರತಾಪ ಎಂಬಲ್ಲಿಂದ ತೊಡಗಿ ಹಲವಾರು ಸುಳಿವುಗಳನ್ನು ನೀಡಿಯಾದರೂ ಆ ವಿದ್ಯಾರ್ಥಿಯ ಬಾಯಿಂದ ಉತ್ತರವನ್ನು ಹೇಳಿಸಬೇಕೆಂದು ಪಣತೊಡುವ ಶಿಕ್ಷಕರು ವಿದ್ಯಾರ್ಥಿಯನ್ನು ಹಾಗೆಯೆ ಬಿಡಲೂ ಆಗದೆ ದಂಡಿಸಲೂ ಆಗದೆ ಒಳಗೊಳಗೇ ಕುದಿಯುವ ಪರಿ ಅವರನ್ನೂ ಮೌನವಾಗಿಸುತ್ತದೆ ಮತ್ತು ಆ ಮೌನ ಸಾಕ್ಷಾತ್ ಜಮದಗ್ನಿಯದೇ ಆಗಿರುತ್ತದೆ. ಈ ಮೌನ ಖಾಲಿಯೋ, ಉತ್ತರದ ಭಾಂಡವೋ ಯಾರಾದರೂ ನಿರ್ಧರಿಸಬಹುದು.
ನಾವು ಚಿಕ್ಕವರಿದ್ದಾಗ ನಮ್ಮ ಮನೆಗೊಬ್ಬರು ಖಾಯಂ ಅತಿಥಿ ಬರುತ್ತಿದ್ದರು. ಅವರು ಮಹಾನ್ ವಾಚಾಳಿಯೇ ಆದರೂ ಊಟ ಮಾಡುವಾಗ ಮೌನ. ಸಾಕಾದರೂ ಬೇಕಾದರೂ ಏನೂ ಹೇಳರು. ಕೆಲವೊಮ್ಮೆ ಕೈಸನ್ನೆ, ಕಣ್ಣುಸನ್ನೆ ಮಾಡಿಯಾರು. ಅವರು ಊಟಕ್ಕೆ ಕುಳಿತಾಗ ಮಕ್ಕಳಾದ ನಮ್ಮ ಪಡೆ ಅಲ್ಲಿ ಇರಬಾರದು ಎಂಬ ಅಲಿಖಿತ ನಿಯಮವಿದ್ದರೂ ಅವರ ಕಣ್ಣುತಪ್ಪಿಸಿಯಾದರೂ ಎಲ್ಲಿಂದಾದರೂ ಇಣುಕಿಯೇವು. ಅವರು ಆಂಗಿಕ ಭಾಷೆಯಲ್ಲಿ ಏನೇನೋ ಸೂಚಿಸುವುದು ನಮಗೆ ಮೋಜು. ಹೊಟ್ಟೆಯಿಂದಲೇ ಉಕ್ಕಿ ಬರುವ ನಗುವನ್ನು ಸಹಿಸಿಕೊಂಡು ಅವರ ಅಭಿನಯಚಾತುರ್ಯವನ್ನು ಕಣ್ತುಂಬಿಕೊಂಡು ಬಳಿಕ ನಮ್ಮದೇ ಆಟದ ವೇಳೆಯಲ್ಲಿ ಅವರಂತೆ ಅಭಿನಯಮಾಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದೆವು. ಮಾಮೂಲಿ ದಿನಗಳಲ್ಲಾದರೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಅವರದ್ದೊಂದು ಫಜೀತಿ. ಅವರು ಪಾಯಸ ಬೇಕೆಂದು ತಲೆಯಲ್ಲಾಡಿಸುವುದೋ ಬೇಡವೆಂದೋ ಎಂಬುದೇ ಅರಿವಾಗದೆ ಬಡಿಸುವವರು ತಬ್ಬಿಬ್ಬಾಗಬೇಕು. ಬೇಡವೆಂದಾಗ ಬಡಿಸಿಯೋ
ಬೇಕೆಂದಾಗ ಬಡಿಸದೆಯೋ ಇದ್ದರೆ ಅವರಿಗೆ ಬರುತ್ತಿದ್ದ ಸಿಟ್ಟು ಸಾಧುವಲ್ಲ ಎಂಬುದು ನನ್ನ ಅಭಿಮತ. ಅಷ್ಟು ಕಷ್ಟಪಟ್ಟು ಮೌನವಾಗಿದ್ದು ಸಾಧಿಸುವುದಕ್ಕಿಂತ ಮಾತಾಡಿ ಜಯಿಸುವುದು ಒಳ್ಳೆಯದಲ್ಲವೆ?
ಬೇರೆಲ್ಲ ಮೌನದ ಪರಿ ಹೀಗಾದರೆ ಕವಿಗಳಿಗೆ ನಿಲಕುವ ಮೌನ ಬೇರೆಯೇ ತರಹÀದ್ದು. ‘ಮೌನ ತಬ್ಬಿತು ನೆಲವ ಜುಮ್ಮನೆ ಪುಳಕಗೊಂಡಿತು ಧಾರಿಣಿ/ ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಸೆರಗಲಿ’ ಎಂದ ಕವಿಗೆ ಮೌನವು ಅದೆಷ್ಟು ಹಿತವಾಗಿ ಕಂಡಿತೋ ಅಷ್ಟೇ ಅಹಿತ ‘ಈ ಮೌನವಾ ತಾಳೆನು..’ ಎಂದುಕೊಂಡ ಹೃದಯಕ್ಕೆ. ‘ಕರೆದರೂ ಕೇಳದೇ..ನನ್ನಲ್ಲಿ ಈ ಮೌನ?’ ಎಂಬ ಪ್ರಶ್ನೆಗೆ ಆದ್ರ್ರವಾಗದ ಮನಸ್ಸುಗಳಿದ್ದಾವೆಯೆ? ಇದ್ದರೂ ಇರಬಹುದೇನೋ! ಹಲವು ಬಾರಿ ಅನ್ನಿಸುವುದಿದೆ, ಮಾತಿನ ಪ್ರಹಾರಕ್ಕಿಂತಲೂ ಮೌನ ಉಳಿಸಿಹೋಗುವ ನೋವು ಸಹಿಸಲಸಾಧ್ಯವಾಗುತ್ತದೆ. ಮಾತು ಮನಸ್ಸಿನ ತುಮುಲಗಳನ್ನು ಹೊರಹಾಕಿದರೆ ಮೌನ ಆ ತುಮುಲವನ್ನು ಹೆಚ್ಚಿಸಬಹುದು.
ಸಂಬಂಧಗಳು ಉಳಿದು ಭದ್ರವಾಗುವಲ್ಲಿಯೂ ಸಿಡಿದು ಹೋಳಾಗುವುದರಲ್ಲಿಯೂ ಮೌನದ ಪಾತ್ರ ದೊಡ್ಡದು. ಮಾತನ್ನು ಸಹಿಸುವುದು ಕಷ್ಟವಾದರೆ ಮೌನವನ್ನು ತಡೆದುಕೊಳ್ಳುವುದು ಇನ್ನಷ್ಟು ಕಷ್ಟ. ಆ ಮೌನವೆಲ್ಲ ಮಾತಾಗಲಿ ಎಂದು ಹಂಬಲಿಸುತ್ತೇವೆ. ಹಾಗೆಂದು ವರುಷಾನುಗಟ್ಟಲೆ ಮೌನದ ಜವನಿಕೆಯೊಳಗೆ ಉಳಿದ ಭಾವಗಳೆಲ್ಲವೂ ಅಕಸ್ಮಾತ್ತಾಗಿ ಮಾತುಗಳಾಗಿ ಹೊರಹೊಮ್ಮಿದರೆ ಅದಕ್ಕೆ ಕಿವಿಯಾಗುವ ಎದೆಗಾರಿಕೆ ಯಾರಿಗಾದರೂ ಇದ್ದೀತೆ? ಮೌನ ಪೋಣಿಸಿದರೆ ಮಾತಾಗುವಂತೆ, ಮೌನದೊಳಗಡೆ ಮಾತಿನ ಹೂರಣವಿರುವಂತೆ ಮಾತಿನೊಳಗೊಂದು ಮೌನವಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದೊಂದು ಸವಾಲು. ನಮ್ಮ ಮಾತನ್ನು ಅರ್ಥ ಮಾಡಿಕೊಳ್ಳಬಲ್ಲವರು ಮೌನವನ್ನೂ ಓದಿಯಾರು ಎಂಬುದೊಂದು ಭ್ರಮೆ. ಮಾತಿನ ದನಿಗೆ, ಭಾವಕ್ಕೆ, ಆಯ್ದುಕೊಳ್ಳುವ ಪದಗಳಿಗೆ ಒಂದು ಅರ್ಥವಿರುತ್ತದೆ. ಅರಿಯಲರಿಯದ ಮಹಾಮೌನದ ನಿಟ್ಟುಸಿರಿಗೆ ಅದಾವ ಮಹದರ್ಥ?