“ಎಷ್ಟುಕಾಲ? ಮಗೂ, ಅದನ್ನು ನಿರ್ಣಯಿಸಬೇಕಾದವನು ನೀನೆ. ನಿನ್ನ ತಪಸ್ಸು ಕಠಿಣವಾದಷ್ಟು ಸಿದ್ಧಿ ಶೀಘ್ರವಾಗುತ್ತದೆ. ಸಾವಿರ ವರ್ಷ ಅಂದರೆ ಒಂದು ಸಾವಿರವೆಂದಲ್ಲ. ಸುದೀರ್ಘಾವಧಿ ಎಂದರ್ಥ. ಸಿದ್ಧಿಸುವವರೆಗೆ ತಪಸ್ಸು ಮಾಡು” ಎಂದು ಪರಮೇಶ್ವರ ಅಂತರ್ಧಾನನಾದ.
ಕಠಿಣ ತಪಸ್ಸು ಎಂದನಲ್ಲವೇ ಶಿವ? ನಿರಂತರ ಹೊಗೆಯುಕ್ಕುವಂತೆ ಕೆಂಡಗಳನ್ನು ಹರವಿ ಅದರ ಮೇಲಿನ ಮರದ ಕೊಂಬೆಗೆ ತಲೆಕೆಳಗಾಗಿ ಜೋತುಬಿದ್ದು ತಪಸ್ಸಿಗೆ ತೊಡಗಿದೆ. ದೈಹಿಕವಾಗಿ ಮಹಾಯಾತನೆಯನ್ನು ಅನುಭವಿಸುತ್ತ ಎಷ್ಟೋ ಕಾಲ ಕಳೆದಿರಬೇಕು. ಕೊನೆಗೊಮ್ಮೆ ಮೃತಸಂಜೀವಿನಿ ಸಿದ್ಧಿಯಾಗುವ ಮುಹೂರ್ತ ಒದಗಿತು.
ನನ್ನೆದುರು ಮತ್ತೊಮ್ಮೆ ಪರಶಿವ ಕಾಣಿಸಿಕೊಂಡ. ಈ ಸಲ ಅವನು ನನ್ನನ್ನು ನಿರಾಶೆಗೊಳಿಸಲಿಲ್ಲ. “ವತ್ಸಾ, ನಿನ್ನ ಘೋರವಾದ ತಪಸ್ಸಿಗೆ ನಾನೊಲಿದಿದ್ದೇನೆ. ಇದೋ ನೀನು ತೀವ್ರವಾಗಿ ಹಂಬಲಿಸುತ್ತಿರುವ ಮೃತಸಂಜೀವಿನಿಯ ಸಿದ್ಧಿ ನಿನಗಾಗುವಂತೆ ಅನುಗ್ರಹಿಸುತ್ತಿದ್ದೇನೆ. ನಿನ್ನ ಮನಸ್ಸಿನಲ್ಲಿ ಈ ಮಂತ್ರವನ್ನು ಮನನ ಮಾಡುತ್ತಿರು. ಆದರೆ ಈ ಸಿದ್ಧಿ ನಿನಗೆ ಮಾತ್ರ. ಅಲ್ಲದೆ ಇಂತಹ ವಿಶಿಷ್ಟತೆಯೊಂದು ಚಿರಕಾಲ ಮತ್ರ್ಯದಲ್ಲಿ ಉಳಿಯಬಾರದು. ಯಾವಾಗ ನೀನಿದನ್ನು ಇನ್ನೊಬ್ಬರಿಗೆ ಉಪದೇಶಿಸುವೆಯೋ ಆಗ ನಿನಗೆ ನಷ್ಟವಾಗುತ್ತದೆ. ನೆನಪಿರಲಿ” ಎಂದು ನನಗೆ ಆ ಅಲೌಕಿಕ ಸಿದ್ಧಿಯ ಮಂತ್ರವನ್ನು ಉಪದೇಶಿಸಿದ. ಮತ್ತೊಮ್ಮೆ ಎಚ್ಚರಿಸಿ ಶಿವ ಅಂತರ್ಧಾನನಾದ.
ನನ್ನ ಸುದೀರ್ಘ ತಪಸ್ಸು ಸಫಲವಾಯಿತು. ಮೃತಸಂಜೀವಿನಿ ನನಗೊಲಿಯಿತು. ಸಹಸ್ರಾರು ಸಂವತ್ಸರಗಳಿಂದ ಪರಾಭವಕ್ಕೊಳಗಾದ ರಾಕ್ಷಸರ ಉದ್ಧಾರದ ಮಾರ್ಗ ತೆರೆಯಿತು. ನನ್ನ ಮಾರ್ಗದರ್ಶನದಲ್ಲಿ ಅವರು ತಲೆಯೆತ್ತಿ ಮೆರೆಯುವ ಸನ್ನಿವೇಶ ಸೃಷ್ಟಿಯಾಯಿತು. ಬಲುದೊಡ್ಡ ಸಾಧನೆಯ ಹೆಮ್ಮೆಯೊಂದಿಗೆ ನಾನು ಆಶ್ರಮಕ್ಕೆ ಮರಳಿದೆ.
ಪ್ರಪಂಚದಲ್ಲಿ ರಾಕ್ಷಸರ ಪ್ರಾಬಲ್ಯ ವರ್ಧಿಸತೊಡಗಿತು. ದೇವತೆಗಳು ಆತಂಕಕ್ಕೀಡಾದರು. ಯುದ್ಧದಲ್ಲಿ ಸದಾ ಗೆಲ್ಲುತ್ತಿದ್ದ ದೇವತೆಗಳು ಮತ್ತು ಸಾಯುತ್ತಿದ್ದ ರಾಕ್ಷಸರ ನಡುವಣ ಸಂಘರ್ಷಕ್ಕೆ ಹೊಸರೂಪ ಒದಗಿತು. ರಾಕ್ಷಸರಿಗೆ ಮರಣದ ಭಯ ದೂರವಾಗಿ ಆತ್ಮವಿಶ್ವಾಸ ಹೆಚ್ಚತೊಡಗಿತು. ನನಗೂ ಈ ಬೆಳವಣಿಗೆಯಿಂದ ಏನೋ ಒಂದು ತೃಪ್ತಿ ಉಂಟಾಯಿತು. ಈ ನಡುವೆ ಅನಿರೀಕ್ಷಿತವಾಗಿ ಊರ್ಜಸ್ವತಿ ಎಂಬವಳಲ್ಲಿ ದೇವಯಾನಿ ಎಂಬ ಮಗಳನ್ನು ಪಡೆದಿದ್ದೆ. ಸಾಧನೆ ಹಾಗೂ ಸಂಸಾರ ಎರಡರಲ್ಲಿಯೂ ಸಂತುಷ್ಟನಾಗಿದ್ದೆ. ಇದೇ ಸಂದರ್ಭದಲ್ಲಿ ಬೃಹಸ್ಪತಿಯ ಪುತ್ರನಾದ ಕಚ ವಿದ್ಯಾರ್ಥಿಯಾಗಿ ನನ್ನ ಆಶ್ರಮಕ್ಕೆ ಆಗಮಿಸಿದ.
ಬ್ರಹ್ಮಚರ್ಯೆಯಲ್ಲಿದ್ದುಕೊಂಡು ವಿದ್ಯೆಯೊಂದರಲ್ಲೇ ಆಸಕ್ತನಾಗಿದ್ದ ಕಚನ ಮೇಲೆ ನನಗೂ ದೇವಯಾನಿಗೂ ಆದರ, ವಿಶ್ವಾಸಗಳು ಹೆಚ್ಚತೊಡಗಿದವು. ಅವನು ನಮ್ಮ ಜತೆ ಬೆರೆತುಹೋದ. ಅವನು ನನ್ನ ಪ್ರತಿಸ್ಪರ್ಧಿಯಾದ ಬೃಹಸ್ಪತಿಯ ಪುತ್ರನಾದರೂ ಉತ್ತಮ ವಿದ್ಯಾರ್ಥಿಯಾದುದರಿಂದ ಅಂತಹ ಮನಃಕಷಾಯವೇನೂ ನನ್ನಲ್ಲಿ ಉಳಿಯಲಿಲ್ಲ. ನನ್ನ ಪುತ್ರನೆಂಬ ಭಾವದಿಂದ ಅವನನ್ನು ಕಾಣತೊಡಗಿದೆ. ಹೀಗೆ ನಮ್ಮ ಆಶ್ರಮದಲ್ಲಿ ಕಚನಿರುವುದು ನಮಗೆ ಪ್ರಿಯವಾದ ವಿಚಾರವೆನಿಸಿತು. ಅದೇನೋ ಸರಿ. ಆದರೆ
ನನ್ನ ಶಿಷ್ಯರಾದ ದೈತ್ಯರಿಗೆ ಇದು ಅಸಹನೀಯ ಎನಿಸಿತು. ಅವರ ಅಸಹನೆಗೂ ಕಾರಣವಿಲ್ಲದಿಲ್ಲ. ದೇವಲೋಕದಿಂದ ಯಾರು ಬಂದರೂ ಶತ್ರುಭಾವದಿಂದಲೇ ಕಾಣುವ ಬುದ್ಧಿ ಅವರದು. ಅಲ್ಲದೆ ವಿದ್ಯಾರ್ಥಿಯಾಗಿ ಬಂದ ಕಚನ ಮೇಲೆ ಸಂದೇಹವೂ ಇತ್ತು. ಬೃಹಸ್ಪತಿಯ ಮಗ ಅವನ ತಂದೆಯಲ್ಲಿಯೇ ಅಭ್ಯಾಸ ಮಾಡುವುದು ಬಿಟ್ಟು ನಮ್ಮ ಗುರುಗಳಲ್ಲಿಗೆ ಯಾಕೆ ಬರಬೇಕು ಎನ್ನುವುದು ಅವರಲ್ಲಿ ಹುಟ್ಟಿದ ಪ್ರಶ್ನೆ. ನಮ್ಮ ಗುರುಗಳಲ್ಲಿರುವ ವಿಶಿಷ್ಟ ವಿದ್ಯೆಯಾದ ಸಂಜೀವಿನಿಯನ್ನು ಅಪಹರಿಸಬಹುದೆಂದು ಅವರಿಗೆ ಶಂಕೆ. ಸದಾ ಇನ್ನೊಬ್ಬರದ್ದನ್ನು ಕದಿಯುವವನಿಗೆ ತನ್ನ ಸೊತ್ತನ್ನು ಎಲ್ಲಿಡುವುದಕ್ಕೂ ಅಂಜಿಕೆಯಲ್ಲವೆ? ಹಾಗೆಯೇ ಇವರಿಗೂ. ಆದರೆ ರಾಕ್ಷಸರಿಗೆ ನನ್ನ ಕುರಿತಾಗಿದ್ದ ಭಯ, ಗೌರವಗಳಿಂದಾಗಿ ಕಚ ನಿರಾತಂಕವಾಗಿ ಇರುವುದು ಸಾಧ್ಯವಾಯಿತು.
ರಾಕ್ಷಸರ ಬಗೆಗೆ ನನಗಿದ್ದ ಒಲವು ಅಲುಗಾಡುವಂತಹ ಪ್ರಕರಣ ಕೆಲವು ದಿನಗಳ ಹಿಂದೆ ನಡೆದುಹೋಯಿತು. ಒಂದು ಸಂಜೆ ಹೊರಗೆ ಹೋಗಿದ್ದ ಕಚ ರಾತ್ರಿಯಾದರೂ ಆಶ್ರಮಕ್ಕೆ ಬರಲಿಲ್ಲ.
ಸೂರ್ಯಾಸ್ತಕ್ಕೆ ಮುನ್ನವೇ ಬರಬೇಕೆಂದು ಮೊದಲೇ ತಿಳಿಸಿದ್ದೆ.
ಕುರುಜಾಂಗಲ ಪ್ರದೇಶದಲ್ಲಿ ರಾತ್ರಿಕಾಲ ಮನುಷ್ಯರು ಸಂಚರಿಸುವುದು ಅಪಾಯಕಾರಿಯಾಗಿತ್ತು. ಎಷ್ಟೇ ತಿಳಿಹೇಳಿದರೂ ಮನುಷ್ಯರು ಕಂಡಾಗ ಎಲ್ಲವನ್ನೂ ಮರೆತು ಹಿಡಿದು ತಿನ್ನುವ ಅಭ್ಯಾಸ ಕೆಲವು ರಾಕ್ಷಸರಲ್ಲಿ ಮುಂದುವರಿದಿತ್ತು. ಕೆಲವರಾದರೂ ಅದಕ್ಕೆಂದೇ ಕತ್ತಲಲ್ಲಿ ಹೊಂಚುಹಾಕುತ್ತಿದ್ದರೂ ಇರಬಹುದು. ಹಾಗಾಗಿ ಕತ್ತಲು ಕವಿಯುವ ಮುನ್ನ ಮನೆ ಸೇರಬೇಕೆಂದು ಕಚನಿಗೆ ಸೂಚಿಸಿದ್ದೆ.
ಆ ದಿನ ಸಾಯಂಕಾಲ ಕಳೆದು ಬಹಳ ಸಮಯವಾದರೂ ಕಚ ಬರಲಿಲ್ಲ. ಅವನು ಬರಲಿಲ್ಲವೆಂದು ದೇವಯಾನಿಗೆ ಆತಂಕ ಹೆಚ್ಚಿತು. ರಾತ್ರಿಯಾದರೂ ಅವನ ಸುಳಿವಿಲ್ಲ. ಈಗ ನನಗೂ ಆತಂಕವಾಯಿತು. “ಅಪ್ಪಾ, ಕಚನಿನ್ನೂ ಬಂದಿಲ್ಲ. ಅವನು ಮೇಯಿಸಲೆಂದು ಕೊಂಡೊಯ್ದ ಹಸು ಹಟ್ಟಿಗೆ ಬಂದಿದೆ. ಅವನಿಲ್ಲ. ಯಾಕೋ ನನ್ನ ಮನಸ್ಸು ಕೆಟ್ಟದ್ದನ್ನೇ ಶಂಕಿಸುತ್ತಿದೆ. ಮೊದಲೇ ರಾಕ್ಷಸರಿಗೆ ಅವನನ್ನು ಕಂಡರೆ ಅಸಹನೆ. ಒಂಟಿಯಾಗಿ ಸಿಕ್ಕಿದನೆಂದರೆ ಏನು ಮಾಡಲೂ ಹೇಸುವವರಲ್ಲ ಅವರು. ಏನೋ ಆಗಿರಬೇಕು. ಅವನಿಗೆ ಕೆಡುಕಾದರೆ ನಾನು ಸಹಿಸಲಾರೆ ಅಪ್ಪಾ” ಎಂದಳು ದೇವಯಾನಿ. ಕೊನೆಯ ವಾಕ್ಯಗಳನ್ನಾಡುವಾಗ ಅವಳ ಕಣ್ಣುಗಳಲ್ಲಿ ನೀರು ಕಂಡು ನನಗೆ ಕೆಡುಕೆನಿಸಿತು. ಕಚನ ಕ್ಷೇಮದ ಕುರಿತು ನನಗೂ ಚಿಂತೆ ಹೆಚ್ಚಿತು. ಕೊನೆಗೆ ನಾನು ಜ್ಞಾನದೃಷ್ಟಿಯನ್ನವಲಂಬಿಸಿ ಕಂಡುಕೊಂಡೆ. ದುಷ್ಟಬುದ್ಧಿಯ ರಾಕ್ಷಸರು ಕಚನನ್ನು ಕೊಂದು ಅವನ ಪಾರ್ಥಿವ ಶರೀರವನ್ನು ಎಲ್ಲೋ ಬಿಸುಟಿದ್ದರು. ಆದರೆ ಇದರಿಂದಾಗಿ ನಷ್ಟವೇನಾಗಲಿಲ್ಲ. ಮೃತಸಂಜೀವಿನಿಯ ಬಲದಿಂದ ಕಚನನ್ನು ಬದುಕಿಸಿದೆ.
ಕೆಲವು ದಿನಗಳಿಂದ ಅದನ್ನೇ ಯೋಚಿಸುತ್ತಿದ್ದೆ. ವೃಷಪರ್ವನ ಆಜ್ಞೆ, ಅನುಮತಿಯಿಂದಲೇ ಇದು ನಡೆದಿರಬಹುದೇ ಎಂಬುದನ್ನು ತರ್ಕದಿಂದ ತಿಳಿಯಲಾಗಲಿಲ್ಲ. ದುಷ್ಟತನವೇ ಸ್ವಭಾವವಾದ ಕೆಲವರು ಮಾಡಿದ ಅನಾಹುತಗಳಿಗೆಲ್ಲ ನಾಯಕನನ್ನೇ ಹೊಣೆ ಮಾಡುವಂತಿಲ್ಲ, ನಿಜ. ಆದರೆ ಅವರ ಮೇಲೆ ನಿಯಂತ್ರಣವಿರುವುದೂ ಉತ್ತಮ ಪ್ರಭುವಿನ ಲಕ್ಷಣವಲ್ಲವೆ? ಅವನು ಈವತ್ತು ಸುರಾಪಾತ್ರೆಯನ್ನು ಹಿಡಿದುಕೊಂಡು ಬಂದಾಗ ವಿಚಾರಿಸಬೇಕಿತ್ತು ಎಂದುಕೊಂಡೆ. ಕಚನ ಕೊಲೆ ಮಾಡಿಸಿದೆಯ ಎಂದು ಕೇಳಿದಾಗ ಅವನು ಒಪ್ಪಿದರೆ ಅಥವಾ ಗೊತ್ತಿಲ್ಲವೆಂದರೆ ಸರಿ. ಒಂದು ವೇಳೆ ಅವನು ನಿರಾಕರಿಸಿದರೆ? ನಾನು ಮುಂದೇನು ಮಾಡಬೇಕೆಂದು ನಿರ್ಣಯಿಸಿರಲಿಲ್ಲ. ಅಲ್ಲದೆ ಕಚನನ್ನು ಕೊಂದವರಿಗೆ ಅವನು ಉಜ್ಜೀವಿಸಿದ್ದನ್ನು ಕಂಡು ಕೊಲ್ಲುವುದರಿಂದ ಪ್ರಯೋಜನವಿಲ್ಲ ಎನ್ನುವುದು ಮನದಟ್ಟಾಗಿರುತ್ತದೆ. ಮತ್ತೆ ಅಂತಹ ಯತ್ನಕ್ಕೆ ಕೈಯಿಕ್ಕಲಾರರು ಎಂದು ಭಾವಿಸಿ ಕೇಳದೆ ಇದ್ದೆ.
ಇದನ್ನೆಲ್ಲ ಚಿಂತಿಸುತ್ತ ಹಿತವಾದ ಸುರೆಯ ಮತ್ತನ್ನು ಅನುಭವಿಸುತ್ತ ಮರದ ಕೆಳಗೆ ಕುಳಿತಿದ್ದ ನಾನು ಸಾಯಂಕಾಲವಾದುದನ್ನು ಕಂಡು ಮೆಲ್ಲನೆ ಎದ್ದು ಮನೆಯತ್ತ ಸಾಗಿದೆ. ಅಂಗಳವನ್ನು ತುಳಿಯುತ್ತಿದ್ದಂತೆ ಭಯಾತಂಕಗಳಿಂದ ಕೂಡಿದ ಮುಖ ಹೊತ್ತ ಮಗಳು ಎದುರಾದಳು. “ಅಪ್ಪಾ” ಎಂದವಳು ನಾನು ಕುಡಿದಿರುವುದನ್ನು ಗಮನಿಸಿದಳೋ ಎಂಬಂತೆ ಒಂದು ಕ್ಷಣ ತಡೆದಳು. “ಏನು ಮಗಳೇ?” ಎಂದೆ.
“ಅಪ್ಪಾ, ನೋಡಿದಿರ? ಕಚ ಇನ್ನೂ ಮರಳಿಲ್ಲ. ಆಗಲೇ ಕತ್ತಲಾವರಿಸುತ್ತಿದೆ. ಮೊನ್ನೆಯಷ್ಟೆ ನಿಮ್ಮ ಶಿಷ್ಯರು ಅವನಿಗೆ ಪ್ರಾಣಾಪಾಯ ಉಂಟುಮಾಡಿದ್ದರು. ಇನ್ನು ಅಂತಹುದೆಲ್ಲ ನಡೆಯುವುದಿಲ್ಲ ಅಂತ ನೀವು ಭರವಸೆ ಕೊಟ್ಟಿದ್ದೀರಿ. ಈಗ ನೋಡಿದರೆ ಇಂದು ಅವನು ಕಾಣಿಸುತ್ತಿಲ್ಲ. ಅಪ್ಪಾ ಏನು ಮಾಡಲಿ? ನನಗಂತೂ ಭಯವಾಗುತ್ತಿದೆ. ನಿಮ್ಮ ಶಿಷ್ಯರಿಗೆ ಕಚನ ತಲೆಕಂಡರಾಗದು. ಏನು ಮಾಡಿದರೋ ಏನೋ… ಅಯ್ಯೋ ಕಚಕುಮಾರ… ಅಪ್ಪಾ.. ಅಪ್ಪಾ.. ಅವನಿಲ್ಲದೆ ನಾನು ಬದುಕಿರಲಾರೆ…..” ಅವಳು ಗಂಟಲು ಕಟ್ಟಿಹೋಗಿ ಮಾತು ನಿಂತು ಅಳು ಮೊದಲಾಯಿತು.
ನಾನೀಗ ಸುರೆಯ ಪ್ರಭಾವದಿಂದ ಹೊರಬಂದಿದ್ದೆ. ಮತ್ತೆ ಕಚನಿಗೆ ಹಾನಿ ಮಾಡಿದರೇ ಇವರು? ಅಬ್ಬಾ ಇವರ ದೇವದ್ವೇಷವೆ! ಅವನು ದೇವಲೋಕದಿಂದ ಬಂದವನೆಂಬ ಒಂದೇ ಕಾರಣವಲ್ಲ ಇಲ್ಲಿರುವುದು. ಅವನೆಲ್ಲೋ ಕಪಟವಿನಯದಿಂದ ನನ್ನ ಮನಸ್ಸನ್ನು ಗೆದ್ದು ನನ್ನಲ್ಲಿರುವ ಅನಘ್ರ್ಯವಾದ ಮೃತಸಂಜೀವಿನಿಯನ್ನು ಪಡೆದುಕೊಳ್ಳುತ್ತಾನೋ ಎಂಬ ಭೀತಿ ಅವರಿಗೆ. ಇದ್ದರೂ ಇರಬಹುದು, ಕಚನಿಗೆ ಅಂತಹ ಹಂಬಲವಿದ್ದರೆ ಅದು ಸಹಜ. ಆದರೆ ನಾನು ಸಾವಿರಾರು ವರ್ಷ ಕಷ್ಟಪಟ್ಟು ಗಳಿಸಿದ ಅಮೂಲ್ಯವಾದ ವಿದ್ಯೆಯನ್ನು ಅವನು ಕೇಳಿದ ಮಾತ್ರಕ್ಕೆ ಕೊಟ್ಟುಬಿಡುವೆನೇನು? ಆದರೆ ರಾಕ್ಷಸರಿಗೆ ನನ್ನ ಮೇಲೆ ಭರವಸೆಯಿಲ್ಲವಾಗಿರಬೇಕು. ಹಾಗಾಗಿ ಕಚನನ್ನು ಕೊಂದು ಕಳೆದರೆ ನಿಶ್ಚಿಂತೆ ಎಂದವರು ಭಾವಿಸಿರಬೇಕು. ಅದಕ್ಕಾಗಿ ಈ ಬಾರಿಯೂ…ಮುಂದೆ ಯೋಚಿಸಲಿಲ್ಲ ನಾನು.
“ಮಗಳೇ ಸಾಕು. ಅಳು ನಿಲ್ಲಿಸು. ನೀನು ಆಚಾರ್ಯ ಶುಕ್ರನ ಮಗಳು. ಅಳಬಾರದು. ನಿನ್ನ ಕಣ್ಣೀರು ನನ್ನನ್ನು ದುರ್ಬಲನನ್ನಾಗಿ ಮಾಡುತ್ತದೆ. ಕಚನನ್ನು ಮತ್ತೆ ನಿನ್ನೆದುರು ನಿಲ್ಲಿಸುತ್ತೇನೆ”
ಹೀಗೆಂದು ಹೇಳಿ ಅವನನ್ನು ಬದುಕಿಸುವುದಕ್ಕಾಗಿ ಅವನೆಲ್ಲಿ ಇದ್ದಾನೆಂದು ಜ್ಞಾನದೃಷ್ಟಿಯಿಂದ ಕಂಡೆ. ಅವನು ಜೀವಂತವಾಗಿಲ್ಲವೆಂದು ತಿಳಿಯಿತು. ಎಲ್ಲಕ್ಕಿಂತ ಮೊದಲು ಬದುಕಿಸುವ ಕಾರ್ಯವಾಗಲೆಂದು ವಿಧ್ಯುಕ್ತವಾಗಿ ಮಂತ್ರ ಪ್ರಯೋಗವನ್ನು ಮಾಡಿದೆ. ಅವನು ಬದುಕಿದ. ಅದರೆ ಬರಲಿಲ್ಲ. ಬರಲೇಬೇಕಿತ್ತು ಮಂತ್ರಪ್ರಭಾವದಿಂದ. ಗಟ್ಟಿಧ್ವನಿಯಿಂದ, “ಓ ಕಚಕುಮಾರಾ, ಎಲ್ಲಿದ್ದರೂ ನನ್ನೆದರು ಬಾ” ಎಂದು ಎತ್ತರಿಸಿದ ಕಂಠದಿಂದ ಕರೆದೆ.
ಆಗ ಅವನ ಧ್ವನಿ ಕೇಳಿಸಿತು. “ಹೇಗೆ ಬರಲಿ ಗುರುವರ್ಯ? ನಾನು ನಿಮ್ಮ ಉದರದೊಳಗಿದ್ದೇನೆ” ಹಾ! ಏನಾಶ್ಚರ್ಯ! ನನ್ನ ಹೊಟ್ಟೆಯೊಳಗೆ ಇವನು ಸೇರಿದ್ದೆಂತು? ಜ್ಞಾನದೃಷ್ಟಿಗೆ ನಿಚ್ಚಳವಾಯಿತು. ವೃಷಪರ್ವ ಅವನನ್ನು ಕೊಂದು ಅವನ ಪಾರ್ಥಿವ ಶರೀರವನ್ನು ಸುಟ್ಟು ಆ ಭಸ್ಮವನ್ನು ಸುರೆಯಲ್ಲಿ ಕದಡಿ ನನಗೇ ಕುಡಿಸಿದ್ದ! ಅದಕ್ಕಾಗಿಯೇ ನಾನು ಪಾತ್ರೆಯಲ್ಲಿದ್ದ ಸುರೆಯನ್ನು ಅವನೆದುರೇ ಕುಡಿದು ಮುಗಿಸಬೇಕೆಂದು ಬೇಡಿದ್ದ. ಈಗ ನಿಚ್ಚಳವಾಯಿತು ಅವನ ಹುನ್ನಾರ.
ಈಗ ಕಚನನ್ನು ಹೊರಬರಿಸುವುದೆಂತು? ಅವನನ್ನು ಹೊರಗೆ ಬರಿಸಬೇಕಿದ್ದರೆ ನನ್ನ ಹೊಟ್ಟೆಯನ್ನು ಸೀಳಬೇಕು. ಅಂದರೆ ನನ್ನ ಮರಣ. ಇಲ್ಲವೇ ಅವನು ಶಾಶ್ವತವಾಗಿ ನನ್ನೊಳಗೇ ಇರಬೇಕು. ಹಾಗಿದ್ದರೆ ಬದುಕಿಸಿಯೂ ಲಾಭವಿಲ್ಲ. ಅಲ್ಲದೆ ನನ್ನ ಮೇಲೆ ವಿಶ್ವಾಸವಿರಿಸಿ ಕಳುಹಿಸಿಕೊಟ್ಟನಲ್ಲ ಅವನ ತಂದೆ, ಅವನ ವಿಶ್ವಾಸವನ್ನು ಕಳೆಕೊಂಡಂತಾಗದೆ? ಪ್ರತಿಸ್ಪರ್ಧಿಯಾದರೂ ಘನತೆಯುಳ್ಳವನು ಬೃಹಸ್ಪತಿ. ಅವನೆದುರು ನಾನು ಸಣ್ಣವನಾಗುತ್ತೇನಲ್ಲ? ಪ್ರತಿಸ್ಪರ್ಧಿಯ ಎದುರು ಅಲ್ಪನೆನಿಸುವುದಕ್ಕಿಂತ ಸಾಯುವುದೇ ಒಳಿತು.
ದೇವಯಾನಿಗೆ ಎಲ್ಲವನ್ನೂ ವಿವರಿಸಿ ಹೇಳಿದೆ. “ಅಪ್ಪಾ, ನಿಮ್ಮಿಬ್ಬರಲ್ಲಿ ಒಬ್ಬರಿಲ್ಲವಾದರೂ ನಾನು ಬದುಕಿರಲಾರೆ” ಎಂದು ನಿರ್ಧಾರದ ದ್ವನಿಯಲ್ಲಿ ಅವಳೆಂದಳು. ಏನು ಮಾಡಲಿ? ನನ್ನ ಅಸಹಾಯಕತೆಗಾಗಿ ನಖಶಿಖಾಂತ ಕ್ರೋಧ ಏರಿತು. ಗುರುವಿಗೆ ಇಂತಹ ಒಂದು ವಿದ್ರೋಹವನ್ನು ಮಾಡಿದ ರಾಕ್ಷಸರನ್ನು ಉದ್ಧರಿಸುವುದಕ್ಕಾಗಿ ನಾನು ಶ್ರಮಿಸಬೇಕೆ? ಎಷ್ಟು ತಿಳಿಹೇಳಿದರೂ ಅವರ ದುರ್ಬುದ್ಧಿ ಬಿಡಲಾರರು ಎಂದಾಯಿತಲ್ಲ? ಹಿಂದೆ ನಾನು ತಪೆÇೀನಿರತನಾಗಿದ್ದ ಕಾಲದಲ್ಲಿ ಬೃಹಸ್ಪತಿ ವೇಷಾಂತರದಿಂದ ನನ್ನಂತೆ ಕಾಣಿಸಿಕೊಂಡು ರಾಕ್ಷಸರಿಗೆ ಸ್ವಚ್ಛಂದತೆಯ ಉಪದೇಶ ಮಾಡಿದ್ದ. ಅಲ್ಲಿಯವರೆಗೆ ನಾನು ಅವರನ್ನು ತಿದ್ದಿ ರೂಪಿಸಿದ ಪರಿಶ್ರಮವೆಲ್ಲ ಹಾಳಾಗುವಂತೆ ಅವರು ರುಚಿಯಾದ ಅವನ ದುರ್ಬೋಧನೆಯಿಂದ ಹಿಂದಿನಂತೆ ಮೃಗೀಯವಾದ ಜೀವನವಿಧಾನಕ್ಕೆ ಮರಳಿದ್ದರು. ನಾನು ಹಿಂದೆ ಬಂದ ಬಳಿಕ ಎಷ್ಟು ಬೋಧಿಸಿದರೂ ಬೃಹಸ್ಪತಿಯ ಕಪಟ ಅವರ ಮನ ನಂಬಲಿಲ್ಲ. ಅದು ನಾನೇ ಎಂದು ದೃಢವಾಗಿ ನಂಬಿದ್ದರು. ಅಲ್ಲದೆ ಸ್ವೇಚ್ಛಾಚಾರ ಪ್ರಿಯವಾದಂತೆ ಕಟ್ಟುಪಾಡಿನ ಬದುಕು ಎಲ್ಲರಿಗೂ ಪ್ರಿಯವಾಗುವುದಿಲ್ಲವಷ್ಟೆ? ಅದೇನಿದ್ದರೂ ಇದು ಮಾತ್ರ ಅಕ್ಷಮ್ಯವೆನಿಸಿತು ನನಗೆ.
ಅವರಿಗೆ ಶಾಪದಿಂದಲೇ ಶಾಸನ ಮಾಡುವುದಕ್ಕೆ ಮುಂದಾದೆ. “ನನಗೆ ದ್ರೋಹವೆಸಗಿದ ರಾಕ್ಷಸರು ದೇವತೆಗಳಿಂದ ಪರಾಭವವನ್ನು ಹೊಂದಲಿ. ಅವರಿಗೆ ಎಂದೂ ಶಾಶ್ವತವಾದ ಜಯ ಲಭಿಸದೇ ಹೋಗಲಿ” ಎಂದು ಶಪಿಸಿದೆ.
ದೇವಯಾನಿ ಇದನ್ನು ಕೇಳಿ ನಕ್ಕುಬಿಟ್ಟಳು. “ಅಪ್ಪಾ, ನಿಮ್ಮ ಶಿಷ್ಯರಿಗೆ ತಕ್ಕುದನ್ನೇ ಮಾಡಿದಿರಿ ನಿಜ. ಆದರೆ ನಿಮ್ಮ ದೌರ್ಬಲ್ಯವನ್ನು ಮುಚ್ಚಿಡುತ್ತೀರೇನು? ನೀವು ಸುರೆಯ ಅಧೀನರಾಗದೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಅಲ್ಲವೆ? ಬ್ರಾಹ್ಮಣರಿಗೆ ಉದಾತ್ತ ಮೇಲ್ಪಂಕ್ತಿಯಾಗಬೇಕಿದ್ದ ನೀವು ಮಾಡಿದ್ದೇನು? ಸುರೆಯ ಆಕರ್ಷಣೆಯಲ್ಲಿ ಕಚನನ್ನೇ ಕುಡಿದಿರಲ್ಲ?”
ಅವಳ ಮಾತು ನನ್ನ ಅಂತರಂಗವನ್ನು ಚುಚ್ಚಿತು. ನಿಜ. ರಾಕ್ಷಸರು ಅವರ ಸಂಸ್ಕಾರದಿಂದ ಹೊರಬರಲಾರದ ಅಸಹಾಯರು. ಆದರೆ
ನಾನು? ಸಕಲ ವಿದ್ಯಾಪಾರಂಗತನಾಗಿ, ಸುಸಂಸ್ಕೃತನಾಗಿ ಸುರೆಯ ಪ್ರಮತ್ತತೆಯ ದಾಸನಾಗಿದ್ದೇನಲ್ಲ? ನನ್ನಿಂದಾಗಿ ಗೌರವಕ್ಕೆ ಪಾತ್ರರಾಗಬೇಕಾದ ಬ್ರಾಹ್ಮಣವರ್ಗವೂ ನಿಂದೆಗೆ ಭಾಜನವಾಗುವಂತಾಯಿತು. ಒಬ್ಬನೇ ಒಬ್ಬ ಕೆಡುಕನಾದರೂ ಅವನ ವರ್ಗಕ್ಕೇ ಅಪವಾದ ಅಡಸುವುದು ಸ್ವಾಭಾವಿಕ. ಹಾಗೆ ನಿಂದಿಸುವುದು ಪ್ರಾಪಂಚಿಕರಿಗೆ ಸಹಜಗುಣ. ಇಂತಹ ವಿಪರೀತವು ಪುನರಾವರ್ತಿಸದ ಹಾಗಾಗಬೇಕು. ಅದಕ್ಕಾಗಿ ಶಾಸನವನ್ನು ಮಾಡಬೇಕಾದ್ದು ನನ್ನ ಕರ್ತವ್ಯವೆಂದು ಆಲೋಚಿಸಿದೆ.
“ಮಗಳೇ, ನಿನ್ನ ಮಾತು ನಿಜ. ನಾನು ತಪ್ಪಿದೆ. ಅದಕ್ಕಾಗಿ ನಾನೂ ಸೇರಿದಂತೆ ಸಮಸ್ತ ಬ್ರಾಹ್ಮಣರಿಗೆ ಕಟ್ಟನ್ನು ವಿಧಿಸುತ್ತಿದ್ದೇನೆ. ಇಂದಿನಿಂದ ಯಾವನೇ ಇರಲಿ, ಬ್ರಾಹ್ಮಣನೆನಿಸಿಕೊಂಡು ಸುರೆಯನ್ನು ಸೇವಿಸಿದರೆ ಅವನಿಗೆ ಬ್ರಹ್ಮಹತ್ಯೆಯ ಪಾತಕ ಉಂಟಾಗಲಿ. ಅಂತಹವರು ಪತಿತರಾಗಲಿ. ಇದು ಶುಕ್ರನ ಶಾಸನ ಮಾತ್ರವಲ್ಲ ಶಾಪವೂ ಹೌದು” ಹೀಗೆಂದು ಘೋಷಿಸಿದೆ. ಅದರಿಂದಾಗಿ ನನಗೊಂದು ಸಾಂತ್ವನವೂ ದೊರೆತಂತಾಯಿತು. ಸ್ವೇಚ್ಛೆಯನ್ನು ಪೆÇ್ರೀತ್ಸಾಹಿಸುವ ನೀತಿಯನ್ನು ಆಚರಿಸುತ್ತ ಬಂದ ನನ್ನ ಅಪರಾಧಕ್ಕೆ ಇದೊಂದು ಪ್ರಾಯಶ್ಚಿತ್ತವೆಂಬ ಕಲ್ಪನೆಯೂ ನನ್ನಲ್ಲಿ ಮೂಡಿತು. ಅಂತೂ ಅಲ್ಲಿಂದ ಮುಂದೆ ಸುರೆಯನ್ನು ಬ್ರಾಹ್ಮಣರು ಕುಡಿಯುವದು ಪಾತಕವೆಂದು ಅಂಗೀಕರಿಸಲ್ಪಟ್ಟಿತು.
ಮುಂದೆ ಕಚನನ್ನು ಹೊರತೆಗೆಯುವುದಕ್ಕೆ ಒಂದು ಉಪಾಯ ಮಾಡಿದೆ. ಹೊಟ್ಟೆಯೊಳಗಿದ್ದಾಗಲೇ ಸಂಜೀವಿನಿಯ ಉಪದೇಶವನ್ನು ಮಾಡಿದೆ. ಅವನು ಧೀಮಂತ. ಅದನ್ನು ಗ್ರಹಿಸಿದ. ಆ ಬಳಿಕ ನನ್ನ ಹೊಟ್ಟೆಯನ್ನು ಸೀಳಿ ಹೊರಬಂದು ಮೃತನಾದ ನನ್ನನ್ನು ಮಂತ್ರಬಲದಿಂದ ಬದುಕಿಸಿದ. ನನಗೆ ವಿದ್ಯಾನಷ್ಟವಾಯಿತು. ಆದರೆ ಯೋಗ್ಯನಿಗೆ ಉಪದೇಶಿಸಿದೆನೆಂಬ ಸಮಾಧಾನವೂ ಇತ್ತು. ಅಲ್ಲಿಗೆ ಕಚನ ಗುರುಕುಲದ ವಾಸ ಮುಗಿಯಿತು. ಅವನು ದೇವಲೋಕಕ್ಕೆ ಹೊರಟುಹೋದ.
ಅದಕ್ಕೆ ಮುನ್ನ ದೇವಯಾನಿ ಅವನಲ್ಲಿ ಪ್ರಣಯ ನಿವೇದನೆ ಮಾಡಿಕೊಂಡದ್ದು, ಅವನು ಅದಕ್ಕೆ ಸಮ್ಮತಿಸದಿದ್ದಾಗ ದೇವಯಾನಿ ಕುಪಿತಳಾಗಿ ‘ನಿನಗೆ ಮೃತಸಂಜೀವಿನಿ ಫಲಿಸದಿರಲಿ’ ಎಂಬ ಶಾಪವನ್ನು ನೀಡಿದ್ದೂ, ಕಚನೂ ಪ್ರತಿಯಾಗಿ, “ಬ್ರಾಹ್ಮಣಕುಮಾರಿಗೆ ಯೋಗ್ಯವಲ್ಲದ ಛಲ ನಿನ್ನಲ್ಲಿದೆ. ಆದುದರಿಂದ ನಿನ್ನನ್ನು ಕ್ಷತ್ರಿಯನು ಮದುವೆಯಾಗಲಿ” ಎಂಬ ಶಾಪ ನೀಡಿದ್ದೆಲ್ಲ ಇನ್ನೊಂದು ಸುದೀರ್ಘ ಪ್ರಕರಣ.