ಪಂಚಮಹಾಭೂತಗಳು ಒಂದಾಗಿ, ಇದಕ್ಕೆ ರೂಪವನ್ನುಂಟುಮಾಡುವವು. ಪಂಚ ಮಹಾಭೂತಗಳನ್ನು ಆಶ್ರಯಿಸಿಕೊಂಡು ಇರುವುದು ಮತ್ತು ಪಂಚೀಕರಣದಿಂದಲೇನೇ ತೋರುವುದು. ಮತ್ತು ಪಂಚಮಹಾಭೂತಗಳೆಲ್ಲ ಬೇರೆ ಬೇರೆಯಾಗಲು, ಇದರ (ಶರೀರದ) ನಾಮರೂಪಗಳು ಇಲ್ಲದಾಗುವವು. ಅದಕ್ಕೆ (ಶರೀರಕ್ಕೆ) ಅಧಿಭೂತವೆನ್ನುವರು. ಬಳಿಕ ಪುರುಷ(ಜೀವ)ನೆಂದರೆ ಅಧಿದೈವತವೆಂದು ತಿಳಿಯಬೇಕು. ಅದು ಪ್ರಕೃತಿಯಿಂದ ದೊರಕಿಸಲ್ಪಟ್ಟ ಭೋಗಗಳನ್ನು ಭೋಗಿಸುವುದು. ಅದು ಬುದ್ಧಿಯ ಪ್ರಕಾಶಕವು, ಇಂದ್ರಿಯ ರೂಪ ದೇಶದ ಅಧಿಪತಿಯು. ಮತ್ತು ಶರೀರಪತನದ ಸಮಯಕ್ಕೆ ಸಂಕಲ್ಪರೂಪ ಪಕ್ಷಿಗೆ ಅದು ಆಶ್ರಯವಿತ್ತ ವೃಕ್ಷವು. ನಿಜಕ್ಕೂ ಇವನು ಪ್ರತಿಪರಮಾತ್ಮನಾಗಿರುವನು. ಆದರೆ ಅಹಂಕಾರವೆಂಬ ನಿದ್ರೆಯ ವಶನಾಗಿ, ಸ್ವಪ್ನವ್ಯವಹಾರದಿಂದ ಸುಖಿಯೂ ದುಃಖಿಯೂ ಆಗುವನು. ಜೀವನೆಂದು ಸಂಬೋಧಿಸುವ ಇದನ್ನೇ ಪಂಚಭೂತಾತ್ಮಕ ಶರೀರದೊಳಗಿನ ಅಧಿದೈವತವೆಂದು ತಿಳಿಯಬೇಕು.
ಅಧಿಭೂತಾದಿಗಳೆಲ್ಲವೂ ಅವಿದ್ಯೆಯ ಆವರಣದಲ್ಲಿ ಮುಚ್ಚಿರುವವರೆಗೆ ಅವು ಪರಮಾತ್ಮನಿಂದ ಬೇರೆ ಎಂದು ತಿಳಿಯಬೇಕು. ಅದೇ ಅವಿದ್ಯೆಯ ಆವರಣವು ದೂರಾದೊಡನೆ, ದ್ವೈತಭಾವವು ಇಲ್ಲದಾಗುವುದು. ಆಗ ಜೀವ-ಪರಮಾತ್ಮರು ಒಂದಾಗುವರೆಂದು ಅನ್ನುವುದಾದರೆ, ಮೂಲದಲ್ಲಿ ಅವರೇನು ಇಬ್ಬರಿದ್ದರೆ? ಕೂದಲು ಸುತ್ತಿನ ಮೇಲೆ ಸ್ಫಟಿಕಶಿಲೆಯನ್ನಿಟ್ಟರೆ, ಮೇಲೆ ಮೇಲೆ ನೋಡುವವರಿಗೆ ಆ ಶಿಲೆಯು ಒಡೆದಂತೆ ತೋರುವುದು. ಆ ಬಳಿಕ ಕೂದಲು ಸುತ್ತನ್ನು ದೂರ ಸರಿಸಲು, ಆ ಶಿಲೆಯ ಒಡಕು ಅದೆಲ್ಲಿ ಹೋಯಿತು? ಆ ಸಂದು ಬೆಸುಗೆಗೊಂಡಿತೆ? ಆದರೆ ಹಾಗೇನೂ ಇರದೆ, ಅದು ಮೂಲದಲ್ಲಿಯೇ ಅಖಂಡವಾಗಿತ್ತು, ಆದರೆ ಕೂದಲಿನ ಸಂಬಂಧದಿಂದ ಮಾತ್ರ ಒಡಕಾಗಿ ತೋರುತ್ತಿತ್ತು. ಅದೇ ಕೂದಲನ್ನು ಬದಿಗೆ ಮಾಡಲು, ಮೊದಲಿನಂತೆ ಈಗಾದರೂ ಅಖಂಡವೇ ಆಗಿದೆ. ಅದರಂತೆ ಅಹಂಬುದ್ಧಿಯು ಹೋದ ಮೇಲೆ ಜೀವ ಪರಮಾತ್ಮೈಕ್ಯವಂತೂ ಮೂಲದಲ್ಲಿನದೇ ಆಗಿದೆ. ಈ ಪ್ರಕಾರವು ಉಂಟಾಗುವಲ್ಲಿನ ಅಧಿಯಜ್ಞವು ನಾನೇ ಆಗಿರುವೆನು.
ಜ್ಞಾನಿಗಳು ಮೊದಲು ವೈರಾಗ್ಯವೆಂಬ ಸಾಕಷ್ಟು ಕಟ್ಟಿಗೆಗಳ ಸಹಾಯದಿಂದ ಚೆನ್ನಾಗಿ ಪ್ರಜ್ವಲಿಸಿದ ಇಂದ್ರಿಯರೂಪ ಅಗ್ನಿಯಲ್ಲಿ ಶಬ್ದಾದಿ ವಿಷಯರೂಪ ದ್ರವ್ಯಗಳನ್ನು ಆಹುತಿ ನೀಡುವರು. ಬಳಿಕ ವಜ್ರಾಸನರೂಪದ ಭೂಮಿಯನ್ನು ಶುದ್ಧಗೊಳಿಸಿ, ಅದರ ಮೇಲೆ ಶರೀರರೂಪ ಮಂಟಪದಲ್ಲಿ ಆಧಾರಮುದ್ರೆಯೆಂಬ ಚನ್ನಾದ ಕಟ್ಟೆಯನ್ನು ಹಾಕುವರು. ಅಲ್ಲಿ ಸಂಯಮಾಗ್ನಿಯ ಕುಂಡದೊಳಗೆ ಯುಕ್ತ ಮಂತ್ರದಿಂದ ಮತ್ತು ಇಂದ್ರಿಯದ್ರವ್ಯದ ಸಹಾಯದಿಂದ ಅವರು ಯಜನ ಮಾಡುವರು. ಬಳಿಕ ಮನಸ್ಸು ಮತ್ತು ಪ್ರಾಣಗಳ ನಿಗ್ರಹವೇ ಒಂದು ಹವನ ದ್ರವ್ಯದ ಸಿದ್ಧತೆಯಾಗಿದ್ದು, ಅದರಿಂದ ಹೊಗೆಯಿಲ್ಲದ ಜ್ಞಾನಾಗ್ನಿಯನ್ನು ಸಂತುಷ್ಟಗೊಳಿಸುವರು. ಈ ಬಗೆಯಾಗಿ ಇವೆಲ್ಲವನ್ನು ಜ್ಞಾನಾಗ್ನಿಗೆ ಅರ್ಪಿಸಲು, ಆ ಜ್ಞಾನವೂ ಕೂಡ ಜ್ಞೇಯ(ಪರಮಾತ್ಮ)ನಲ್ಲಿ ಲಯವಾಗುವುದು, ಮತ್ತು ಕೊನೆಗೆ ಕೇವಲ ಜ್ಞೇಯವೇ ಶೇಷವಾಗಿ ಉಳಿಯುವುದು. ಇದಕ್ಕೆ ಅಧಿಯಜ್ಞವೆಂದು ಕರೆಯುವರು.
[ಜ್ಞಾನೇಶ್ವರೀ ಗೀತೆ, ಅಧ್ಯಾಯ 8.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ]