ಜಿನ ಎಂಬ ಮಾತಿಗೆ ‘ಗೆದ್ದವನು’ ಎಂದು ಯೌಗಿಕಾರ್ಥ. ರಾಗದ್ವೇಷಾದಿಗಳನ್ನು ಸಂಪೂರ್ಣವಾಗಿ ಗೆದ್ದವನಿಗೆ ‘ಜಿನ’ ಎಂಬ ಹೆಸರು ಸಲ್ಲುತ್ತದೆ. ಜಿನಸಂಬಂಧವಾದ ಧರ್ಮವೇ ‘ ಜೈನಧರ್ಮ’. ಅಹಿಂಸೆ, ಸತ್ಯನಿಷ್ಠೆ, ಅಸ್ತೇಯ (ಕದಿಯದಿರುವುದು), ಬ್ರಹ್ಮಚರ್ಯ ಮುಂತಾದ ವ್ರತಗಳು ಜೈನಧರ್ಮಕ್ಕೂ ಇತರ ವಿಶ್ವಧರ್ಮಗಳಿಗೂ ಸಾಮಾನ್ಯವಾದರೂ ಜೈನಧರ್ಮದ್ದು ಒಂದು ವೈಶಿಷ್ಟ್ಯವುಂಟು. ಇತರ ಮತಗಳಂತೆ ಇದು ಯಾವೊಬ್ಬ ಏಕೈಕ ವ್ಯಕ್ತಿಯಿಂದಲೂ ಪ್ರವರ್ತಿತವಾದದ್ದಲ್ಲ. ಬೌದ್ಧಧರ್ಮದ ಪ್ರವರ್ತಕನೆಂದು ಗೌತಮಬುದ್ಧನನ್ನು ತೋರಿಸಲಾಗುವಂತೆ ಜೈನಧರ್ಮದ ಮೂಲಪುರುಷನೆಂದು ಯಾವ ಒಬ್ಬ ಸಂತನನ್ನೂ ನಿರ್ದೇಶಿಸಲಾಗದು. ಋಷಭನಾಥನಿಂದ ವರ್ಧಮಾನ ಮಹಾವೀರನವರೆಗೆ ಇಪ್ಪತ್ತನಾಲ್ಕು ಜನ ತೀರ್ಥಂಕರರು ಈ ಧರ್ಮವನ್ನು ಜಗತ್ತಿಗೆ ಬೋಧಿಸಿದರೂ ಆ ಯಾರ ಹೆಸರನ್ನೂ ಬಳಸದೆ ‘ಜೈನಧರ್ಮ’ ಎಂಬ ಒಂದೇ ಹೆಸರು ಶತಶತಮಾನಗಳುದ್ದಕ್ಕೂ ಅನುವೃತ್ತವಾಗಿರುವುದು ಒಂದು ಗಮನಾರ್ಹ ವಿಷಯ.
ಅನಾದಿ ಧರ್ಮ
ತೀರ್ಥಂಕರರು ಹೊಸ ಧರ್ಮಪಂಥಗಳನ್ನು ಸೃಷ್ಟಿಸಿದವರಲ್ಲ; ತಮಗೆ ಪರಂಪರಾಗತವಾದ ಅನಾದಿ ಧರ್ಮವನ್ನೇ ಪುನರುಚ್ಚರಿಸಿ ಪೋಷಿಸಿದವರು. ತೀರ್ಥಂಕರರಿಗೆ ಮುಂಚೆಯೂ ಜೈನಧರ್ಮ ಇದ್ದದ್ದೇ.
ತೀರ್ಥಂಕರರ ಪ್ರಸ್ತಾವ ಋಕ್ಸಂಹಿತಾದಿ ವೇದಸಾಹಿತ್ಯದಲ್ಲೇ ಇದೆಯೆಂದು ಜೈನರು ಅರ್ಥೈಸುತ್ತಾರೆ. ಕ್ರಿ.ಪೂ. 800ರ ಸುಮಾರಿಗೇ ಉತ್ತರಭಾರತದಲ್ಲಿ ಜೈನಧರ್ಮ ಜನಪ್ರಿಯವಾಗಿತ್ತೆಂದು ಹಲವರು ವಿದ್ವಾಂಸರ ಮತ.
ಬೌದ್ಧಧರ್ಮದಿಂದ ಜೈನಧರ್ಮವು ಭಿನ್ನವಾದದ್ದೆಂಬುದು ಸುಸ್ಪಷ್ಟ. ಗೌತಮಬುದ್ಧನ ಚಿಕ್ಕತಂದೆ ಬಪ್ಪನು ಪಾಶ್ರ್ವನಾಥ ತೀರ್ಥಂಕರನ ಪರಂಪರೆಯವನೆಂದೂ ಬುದ್ಧನು ತನ್ನ ಬಾಲ್ಯದಲ್ಲಿ ಪಾಶ್ರ್ವನಾಥ ಪರಂಪರೆಯ ಆಚಾರ್ಯನೊಬ್ಬನಲ್ಲಿಗೆ ಹೋಗಿ ಬರುತ್ತಿದ್ದನೆಂದೂ ಈ ಕಾರಣದಿಂದಲೇ ಬೌದ್ಧ-ಜೈನ ಧರ್ಮಗಳಲ್ಲಿ ನಾಲ್ಕಾರು ಸಾಮ್ಯಗಳುಂಟಾದವೆಂದೂ ಹೇಳುತ್ತಾರೆ.
ಜೈನಧರ್ಮವು ಕಾಲವನ್ನು ಉತ್ಸರ್ಪಿಣಿ, ಅವಸರ್ಪಿಣಿ ಎಂದು ಎರಡು ಭಾಗಗಳಾಗಿ ವಿಂಗಡಿಸಿದೆ. ಈ ಒಂದೊಂದರಲ್ಲೂ ಇಪ್ಪತ್ತನಾಲ್ಕು ತೀರ್ಥಂಕರರು ಆವಿರ್ಭವಿಸುವರು. ಪಾಪರಹಿತ ಜೀವನವನ್ನೂ ಜ್ಞಾನಮಾರ್ಗವನ್ನೂ ಜನತೆಗೆ ತಿಳಿಯಪಡಿಸುವವರೇ ತೀರ್ಥಂಕರರು. ಹದಿನಾಲ್ಕನೆಯ ಮನುವಾದ ನಾಭಿರಾಜ, ಅವನ ಪತ್ನಿ ಮರುದೇವಿ – ಇವರ ಪುತ್ರನಾದ ಆದಿನಾಥ ಅಥವಾ ಋಷಭಸ್ವಾಮಿಯು ಅವಸರ್ಪಿಣೀಯುಗದ ಮೂರನೆಯ ಕಾಲದ ಅಂತ್ಯದಲ್ಲಿದ್ದವನು; ಸಾಂಪ್ರತ ತೀರ್ಥಂಕರ ಪರಂಪರೆಯಲ್ಲಿ ಕೊನೆಯವನಾದ ಮಹಾವೀರನು ಅವಸರ್ಪಿಣೀಯುಗದ ನಾಲ್ಕನೆಯ ಕಾಲದ ಅಂತ್ಯದವನು. ಈತನ ತರುವಾಯ ಮುಂದಿನ ಉತ್ಸರ್ಪಿಣಿಯವರೆಗೆ ತೀರ್ಥಂಕರರ ಆವಿಷ್ಕಾರವಾಗದು.
ವರ್ಧಮಾನನ ಅವತಾರ
ಮಹಾವೀರನ ಹಿಂದಿನ ಎಂದರೆ ಇಪ್ಪತ್ತಮೂರನೆಯ ತೀರ್ಥಂಕರನಿದ್ದದ್ದು ಕ್ರಿ.ಪೂ. 9ನೇ ಶತಮಾನದಲ್ಲಿ. ಅವನ ನಿರ್ವಾಣವಾಗಿ ಸುಮಾರು 250 ವರ್ಷಗಳು ಸಂದಮೇಲೆ ಅವತರಿಸಿದವನು ಮಹಾವೀರ. ವರ್ಧಮಾನ ಮಹಾವೀರನ ಜೀವಿತ ಕಾಲ ಕ್ರಿ.ಪೂ. 599ರಿಂದ ಕ್ರಿ.ಪೂ. 527ರವರೆಗೆ. ಹೀಗೆ ಮಹಾವೀರನು ನಿರ್ವಾಣಹೊಂದಿ ಇಂದಿಗೆ 2546 ವರ್ಷಗಳು ಕಳೆದಿವೆ.
ಮಹಾವೀರನ ಬಾಹ್ಯಜೀವನಸಂಗತಿಗಳಿಗಿಂತ ಆತನು ಪ್ರಪಂಚಕ್ಕೆ ನೆನಪುಮಾಡಿಕೊಟ್ಟ ಧರ್ಮವು ಹೆಚ್ಚು ಅವಧಾರ್ಯವೆಂಬುದು ಸ್ಪಷ್ಟ. ಆದರೂ ಜನಜನಿತವಾದ ಹಲವು ಕಥನಗಳನ್ನು ದಾಖಲೆ ಮಾಡಬಹುದು. ಮಹಾವೀರನು ಹುಟ್ಟಿದ್ದು ವಿದೇಹ (ಬಿಹಾರ್) ರಾಜ್ಯದ ಕುಂಡಲಪುರ(ಈಗಿನ ಪಾಟ್ನಾ ಸಮೀಪ)ದಲ್ಲಿ: ಸಿದ್ಧಾರ್ಥ-ಪ್ರಿಯಕಾರಿಣಿಯರ ಮಗನಾಗಿ, ಚೈತ್ರ ಶುದ್ಧ ತ್ರಯೋದಶಿಯಂದು. ಮಹಾವೀರನು ನಿರ್ವಾಣ ಹೊಂದಿದ್ದು ಆಶ್ವಯುಜ ಬಹುಳ ಚತುರ್ದಶಿಯಂದು.
ಮಿಕ್ಕ ಧಾರ್ಮಿಕ ಸಂತಶ್ರೇಷ್ಠರಂತೆ ವರ್ಧಮಾನನ ವಿಷಯದಲ್ಲಿಯೂ ಹಲವಾರು ಪವಾಡಗಳು ನಡೆದವೆಂದು ಉಲ್ಲೇಖಗಳಿವೆ.
ಪವಾಡಗಳು
ಕೆಲವು ತಾತ್ತ್ವಿಕ ಸಂಶಯಗಳಿಂದ ಬಾಧಿತರಾದ ಸಂಜಯ, ವಿಜಯ – ಎಂಬ ಚಾರಣಮುನಿಗಳ ದಿವ್ಯಚಕ್ಷುಸ್ಸಿಗೆ ವರ್ಧಮಾನನ ಜನ್ಮವೃತ್ತಾಂತ ತಿಳಿಯಿತು. ಅವರು ಕುಂಡಲಪುರಕ್ಕೆ ಬಂದು ಬಾಲಲೀಲೆಗಳಲ್ಲಿ ತೊಡಗಿದ್ದ ವರ್ಧಮಾನನ ದರ್ಶನ ಮಾಡಿದ ಒಡನೆಯೇ ಅವರ ಸಂದೇಹಗಳು ನಿವೃತ್ತವಾದವಂತೆ. ಸುಪ್ರೀತರಾದ ಆ ಮುನಿಗಳು ವರ್ಧಮಾನನನ್ನು ‘ಸನ್ಮತಿ’ ಎಂದು ಕರೆದು ಗೌರವಿಸಿದರು.
ಇಂದ್ರಸಭೆಯಲ್ಲೊಮ್ಮೆ ಲೋಕದಲ್ಲಿ ಅತ್ಯಂತ ವೀರನಾದವನಾರೆಂದು ಜಿಜ್ಞಾಸೆ ಹುಟ್ಟಿತಂತೆ. ದೇವೇಂದ್ರನು ವರ್ಧಮಾನನ ಹೆಸರನ್ನು ಹೇಳಿದ. ಇದನ್ನು ಪರೀಕ್ಷಿಸಲು ಸಂಗಮನೆಂಬ ದೇವಪುರುಷನು ವರ್ಧಮಾನನೂ ಅವನ ಸಂಗಡಿಗರೂ ಆಟವಾಡುತ್ತಿದ್ದ ಉದ್ಯಾನದ ಮರವೊಂದನ್ನು ಘೋರ ಸರ್ಪರೂಪದಿಂದ ಆಕ್ರಮಿಸಿದ. ಮಿಕ್ಕೆಲ್ಲ ಹುಡುಗರೂ ಹೆದರಿ ಓಡಿಹೋದರು; ವರ್ಧಮಾನನು ಆ ಬೃಹತ್ಸರ್ಪವನ್ನು ತನ್ನ ಕಾಲಿನಿಂದ ಮೆಟ್ಟಿ ಅಡಗಿಸಿ ಮರದಿಂದಿಳಿದನಂತೆ. ವರ್ಧಮಾನನ ಶೌರ್ಯವನ್ನು ಮೆಚ್ಚಿದ ಸಂಗಮನು ಆತನನ್ನು ‘ಮಹಾವೀರ’ನೆಂದು ಸ್ತುತಿಸಿ ದೇವಲೋಕಕ್ಕೆ ಹಿಂತಿರುಗಿದ.
ಮಹಾವೀರನು ದರಿದ್ರರಿಗೆ ಸಂಪತ್ತನ್ನು ಅನುಗ್ರಹಿಸಿದ್ದು, ರೋಗಗ್ರಸ್ತರನ್ನು ಗುಣಪಡಿಸಿದ್ದು – ಈ ಬಗೆಯ ಪ್ರವಾದ ಕಥೆಗಳಿಗೂ ಕೊರತೆಯಿಲ್ಲ.
ಪರಿನಿಷ್ಕ್ರಮಣ
ತನ್ನ ಮೂವತ್ತನೆಯ ವರ್ಷದಲ್ಲಿ ಒಮ್ಮೆ ವರ್ಧಮಾನನು ಧ್ಯಾನಾರೂಢನಾಗಿದ್ದಾಗ ಆತನ ಅಂತರಂಗವು ಪಕ್ವಗೊಂಡಿತ್ತಾದ ಕಾರಣ ವೈರಾಗ್ಯಬುದ್ಧಿ ಆತನಲ್ಲುದಿಸಿತು. ಲೋಕೋದ್ಧಾರಕಾರಕವಾದ ಈ ಶುಭಸೂಚನೆಯನ್ನು ದೇವತೆಗಳೆಲ್ಲ ಹರಸಿದರು. ದೇವನಿರ್ಮಿತವಾದ ‘ಚಂದ್ರಪ್ರಭ’ವೆಂಬ ಪಲ್ಲಕ್ಕಿಯಲ್ಲಿ ಕುಳಿತ ಮಹಾವೀರಸ್ವಾಮಿಯನ್ನು ರಾಜಮಹಾರಾಜರು ಹೆಗಲಮೇಲೆ ಹೊತ್ತು ನಾಗಖಂಡವನಕ್ಕೆ ಬಂದರು. ಅಲ್ಲಿ ಸ್ವಾಮಿಯು ತಾನು ತೊಟ್ಟಿದ್ದ ವಸ್ತ್ರ, ಆಭರಣಗಳನ್ನೆಲ್ಲ ದಾನಮಾಡಿ ಸಂಸಾರದೂರನಾದ. ಮಾರ್ಗಶಿರ ಶುದ್ಧ ದಶಮಿಯಂದು ಐದು ಮುಷ್ಟಿಗಳಿಂದ ಕೇಶೋತ್ಪಾಟನ ಮಾಡಿಕೊಂಡು ‘ನಮಃ ಸಿದ್ಧೇಭ್ಯಃ’ ಎಂದು ಜಪಿಸುತ್ತ ಮಹಾವೀರನು ಸಂನ್ಯಾಸಗ್ರಹಣ ಮಾಡಿದ. ಈ ದೀಕ್ಷೆಯನ್ನೇ ‘ಪರಿನಿಷ್ಕ್ರಮಣ ಕಲ್ಯಾಣ’ವೆನ್ನುವುದು.
ಹನ್ನೆರಡು ವರ್ಷಗಳ ತಪಸ್ಸಾಧನೆ-ಪರಿವ್ರಜನ ಮಾಡಿದನಂತರ ಆರು ದಿನಗಳು ಉಪವಾಸದಲ್ಲಿ ಧ್ಯಾನಾರೂಢನಾಗಿದ್ದಾಗ ಮಹಾವೀರನ ಮೋಹಾವರಣಗಳು ಕಳಚಿ ಸರ್ವಜ್ಞತ್ವ ಅಥವಾ ಕೇವಲಜ್ಞಾನ ಸಿದ್ಧಿಸಿತು. ಸಂತುಷ್ಟರಾದ ಇಂದ್ರಾದಿ ದೇವತೆಗಳು ಪೂಜೆ ಸಲ್ಲಿಸಿದರು. ಇದೇ ‘ಕೇವಲಜ್ಞಾನ ಕಲ್ಯಾಣ.’
ಇದಾದ ಮೇಲೆ ನಿರ್ವಾಣ ಹೊಂದುವವರೆಗೆ. ಎಂದರೆ ಮೂವತ್ತು ವರ್ಷಕಾಲ ಮಹಾವೀರನು ನಾಡಿನಲ್ಲೆಲ್ಲ ಸಂಚರಿಸಿ ಧರ್ಮೋಪದೇಶ ಮಾಡಿ ಕ್ರಿ.ಪೂ. 527ರಲ್ಲಿ ಕೈವಲ್ಯ ಹೊಂದಿದನು.
*****
ಧರ್ಮಸಾರ
ಜೀವದಯೆಯೇ ಪರಮ ಧರ್ಮ ಎಂಬುದು ಜೈನಸಿದ್ಧಾಂತದ ಮುಖ್ಯ ಬೋಧೆ. ಅಹಿಂಸೆಯೇ ಶಾಂತಿಗೆ ಮಾರ್ಗ. ಶಾಂತಿಯಿಂದ ಮೋಕ್ಷ. ಅಹಿಂಸಾವ್ರತವನ್ನು ಬೌದ್ಧಾದಿ ಧರ್ಮಗಳೂ ಬೋಧಿಸಿದ್ದರೂ ಅದನ್ನು ತಮ್ಮ ದರ್ಶನಕ್ಕೇ ಅಡಿಗಲ್ಲಾಗಿ ಭಾವಿಸಿ ವಿಸ್ತಾರವಾಗಿ ಪ್ರತಿಪಾದಿಸಿದವರು ಜೈನರೇ. ಜೀವಿಗಳಿಗೆ – ಎಂದರೆ ಮನುಷ್ಯರಿಗೆ ಮಾತ್ರವಲ್ಲ. ಪ್ರಾಣಿ-ಸಸ್ಯ-ಕ್ರಿಮಿಕೀಟಗಳಿಗೂ ನಮ್ಮಿಂದ ಹಿಂಸೆಯಾಗದಂತೆ ನಡೆದುಕೊಳ್ಳಬೇಕು. ನಿಮ್ಮ ನಿತ್ಯ ಕರ್ತವ್ಯಗಳನ್ನು ಮಾಡಿ; ಆದರೆ ಎಲ್ಲ ಕೆಲಸಗಳಲ್ಳೂ ಉದಾರದೃಷ್ಟಿಯನ್ನು ಬೆಳೆಸಿಕೊಳ್ಳಿ – ಎನ್ನುತ್ತದೆ ಜೈನಧರ್ಮ.
ಅಹಿಂಸೆಯ ಪಾರಮ್ಯ ಎಷ್ಟು ಮುಖ್ಯವೆಂದರೆ, ಈ ತತ್ತ್ವಕ್ಕೆ ಭಂಗತಂದವರನ್ನು ವಧೆಮಾಡಬಹುದೆಂದೇ ಕುಮಾರಪಾಲನು ಆದೇಶವಿತ್ತಿದ್ದ. ಕೊಲೆ ಮಾಡಿದವನು ತನ್ನ ಅನುಕಂಪಾರ್ಹತೆಯನ್ನು ಕಳೆದುಕೊಂಡನಾದ್ದರಿಂದ ಅವನನ್ನು ವಧೆಮಾಡುವುದು ಸಮಂಜಸ ಮಾತ್ರವಲ್ಲ, ಅವನನ್ನು ವಧೆಮಾಡದಿರುವುದು ದೋಷವೆಂದೇ ಸ್ಪಷ್ಟೋಕ್ತಿಯಿದೆ ಜೈನಗ್ರಂಥಗಳಲ್ಲಿ. ಅಂತೆಯೇ ಯುದ್ಧಭೂಮಿಯಲ್ಲಿ ಶತ್ರುಗಳನ್ನು ಕೊಲ್ಲುವುದೂ ಪಾಪವಾಗದು. ಹೀಗೆ ಅಹಿಂಸಾವ್ರತಕ್ಕೂ ದೈನಂದಿನ ವ್ಯವಹಾರಕ್ಕೂ ವಿರೋಧ ಬಾರದು.
ಪರಮತಸಹಿಷ್ಣುತೆ
ಚರಿತ್ರೆಯಿಂದಲೂ ಜೈನರ ಅಹಿಂಸಾನಿಷ್ಠೆ ಸ್ಥಿರಪಡುತ್ತದೆ. ಮಧ್ಯಯುಗದಲ್ಲಿ ಬ್ರಾಹ್ಮಣಧರ್ಮೀಯರೂ ಇತರ ಧರ್ಮೀಯರೂ ಜೈನರನ್ನು ದಮನಮಾಡಹೊರಟ ಸಂದರ್ಭಗಳು ಅನೇಕ. ಆದರೆ ಜೈನರು ಇದಕ್ಕೆ ಪ್ರತೀಕಾರ
ತೋರಿದ್ದಾಗಲಿ ಅಥವಾ ಅನ್ಯಧರ್ಮವೊಂದರ ಮೇಲೆ ದಾಳಿಮಾಡಿದ್ದಾಗಲಿ ಇಲ್ಲ. ಒಟ್ಟಿನಮೇಲೆ ಜೈನಮತ ಉದಾರವಾದದ್ದು. ಕೆಲವು ಜಿನಮಂದಿರಗಳನ್ನು ಕೆಡವಿ ಅನ್ಯರು ದೇವಾಲಯಗಳನ್ನೆಬ್ಬಿಸಿದ ದಾಖಲೆಗಳಿವೆ; ಆದರೆ ಜೈನರು ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಂಡ ನಿದರ್ಶನಗಳಿಲ್ಲ. ಮೂರುಸಾವಿರ ವರ್ಷ ಕಾಲ ಹಿಂದೂಧರ್ಮದ ನಟ್ಟನಡುವೆ ಜೈನಧರ್ಮ ಉಳಿದಿರಲು ಪ್ರಮುಖ ಕಾರಣ ಅದರ ವಿಶ್ವವ್ಯಾಪಕ ದೃಷ್ಟಿ, ಉದಾರತೆ. ಅನ್ಯಮತಗಳ ಬಗ್ಗೆ ಜೈನಧರ್ಮಕ್ಕೆ ಅಸಹನೆಯಿಲ್ಲ.
ಭಾರತೀಯ ಕಲೆಗೂ ಭಾಷಾ ಸಾಹಿತ್ಯಗಳಿಗೂ ಜೈನರು ಸಲ್ಲಿಸಿದ ಸೇವೆಯನ್ನು ಎಲ್ಲ ಸಂಸ್ಕøತಿಪ್ರೇಮಿಗಳೂ ಕೃತಜ್ಞತೆಯಿಂದ ನೆನೆಯದೆ ವಿಧಿಯಿಲ್ಲ.
ಈ ದೃಷ್ಟಿವೈಶಾಲ್ಯದ ಕಾರಣದಿಂದ ಜೈನಧರ್ಮದ ಪ್ರಭಾವ ಆ ಮತಸ್ಥರಿಗಷ್ಟೇ ಸೀಮಿತವಾಗದೆ ಸಾರ್ವತ್ರಿಕವಾಯಿತು. ಕರ್ನಾಟಕ ಜನತೆಯ ಸೌಮ್ಯ ಸ್ವಭಾವ, ಬಹುಸಂಖ್ಯೆಯವರ ಮಾಂಸವರ್ಜನೆ ಮುಂತಾದವಕ್ಕೆ ಜೈನಪ್ರಭಾವವೂ ಒಂದು ಪ್ರಬಲ ಕಾರಣವೆಂದು ಹೇಳಬಹುದು.
ಸದಾಚಾರ ಸಂಹಿತೆ
ಇನ್ನು ಜೈನರು ಗೃಹಸ್ಥರಿಗೆ ವಿಧಿಸುವ ವ್ರತಗಳಂತೂ ಅವಿರೋಧವಾಗಿ ವಿಶ್ವದ ಎಲ್ಲ ಮತಗಳಿಗೂ ಸಮ್ಮತವಾಗುವಂಥವು. ಸ್ಥೂಲವಾಗಿ ಇವನ್ನು ಹನ್ನೆರಡೆಂದು ಗಣಿಸಿದ್ದಾರೆ.
(1) ಅಹಿಂಸೆ: ಸಂಪೂರ್ಣ ಅಹಿಂಸೆಯು ಲೋಕದಲ್ಲಿ ಶಕ್ಯವಿಲ್ಲದಿದ್ದರೂ ಆದಷ್ಟುಮಟ್ಟಿಗೆ ಜೀವಿಗಳಿಗೆ ನೋವಾಗದಂತೆಯೂ ಸಹಾಯವಾಗುವಂತೆಯೂ ನಡೆದುಕೊಳ್ಳಬೇಕು.
(2) ಸೂನೃತ ಅಥವಾ ಸತ್ಯನಿಷ್ಠೆ: ಮಿಥ್ಯಾ ಭಾಷಣ, ವಿಶ್ವಾಸಘಾತ, ತಿಳಿದೂ ತಿಳಿದೂ ಸುಳ್ಳು ಪುರಾವೆಗಳನ್ನು ಹುಟ್ಟುಹಾಕುವುದು, ಇತರರ ಬಗೆಗೆ ಅನವಶ್ಯವಾಗಿ ಸುಳ್ಳಾಡುವುದು, ಚಾಡಿಮಾತು – ಇವುಗಳನ್ನು ಆಡತಕ್ಕದ್ದಲ್ಲ.
(3) ಅಸ್ತೇಯ ಎಂದರೆ ಕದಿಯದಿರುವುದು: ಪ್ರತ್ಯಕ್ಷವಾಗಷ್ಟೇ ಅಲ್ಲದೆ ಪರೋಕ್ಷವಾಗಿಯೂ ಕದಿಯತಕ್ಕದ್ದಲ್ಲ: ನಮಗೆ ಸಲ್ಲದ ಪದಾರ್ಥಗಳನ್ನು ಸ್ವೀಕರಿಸತಕ್ಕದ್ದಲ್ಲ. ವ್ಯಾಪಾರದಲ್ಲಿ ಕೊಡು-ಕೊಳ್ಳುವಿಕೆಗಳೂ ಅನ್ಯೂನಾಧಿಕವಾಗಿ ನಡೆದು ಎಲ್ಲರಿಗೂ ನ್ಯಾಯ ಸಲ್ಲಬೇಕೆಂಬುದು ಇದರ ತಾತ್ಪರ್ಯ.
ಭೋಗಮಿತಿ
(4) ಬ್ರಹ್ಮಚರ್ಯ, ಎಂದರೆ ಸ್ತ್ರೀಕಾಂಕ್ಷೆಯ
ಪರಿಮಿತಿ: ಪರದಾರಸೋದರತ್ವ ಮುಂತಾದ ಆದೇಶಗಳೂ ಇದರಲ್ಲಿ ಅಂತರ್ಗತವಾಗಿರುತ್ತವೆ. ಸ್ವಭಾರ್ಯೆಯ ವಿಷಯದಲ್ಲಿಯೂ ಮರ್ಯಾದೆ ಸಂಯಮಗಳಿಂದ ವರ್ತಿಸಬೇಕೆಂಬುದು ನಿಯಮ.
(5) ಆಶಾಪರಿಮಿತಿ: ತನ್ನ ಆವಶ್ಯಕತೆಗೆ ಮೀರಿದ ಧನಸಂಗ್ರಹಾದಿಗಳನ್ನು ವಜ್ರ್ಯಮಾಡಬೇಕು: ತನ್ನ ಆವಶ್ಯಕತೆ ಪೂರಯಿಸಿ ಉಳಿದುದನ್ನು ಲೋಕಕ್ಕೆ ದಾನ ಮಾಡಬೇಕು.
(6) ದಿಕ್ಪರಿಮಿತಿ: ಇಷ್ಟು ದೂರ ಮಾತ್ರ ನನ್ನ ಗಮನ ಯುಕ್ತ. ಅದನ್ನು ನಾನು ಅತಿಕ್ರಮಿಸುವುದಿಲ್ಲ – ಎಂಬ ವ್ರತ.
(7) ಭೋಗಪರಿಮಿತಿ: ಆಹಾರ-ವಸ್ತ್ರಾದಿ ಭೋಗವಸ್ತುಗಳನ್ನು ಮಿತವಾಗಿರಿಸಿಕೊಳ್ಳಬೇಕು. ಈ ದಿನ ಇಂತಿಷ್ಟೇ ಪದಾರ್ಥಗಳನ್ನು ಇಷ್ಟೇ ಪ್ರಮಾಣದಲ್ಲಿ ಬಳಸುತ್ತೇನೆ – ಎಂಬ ಸ್ವವಿಹಿತ ನಿಯಮಪಾಲನೆ. ಮರ್ಯಾದಾತಿಕ್ರಮವಾಗುವ ಉಪಭೋಗವು ವಜ್ರ್ಯ.
(8) ಅನರ್ಥ ಮತ್ತು ದುಷ್ಟ ಆಲೋಚನೆಯ ವರ್ಜನೆ: ಕೆಡುಕಾಗುವ ಅಥವಾ ಮೋಸದ ಸಲಹೆಗಳನ್ನು ಕೊಡುವುದು ಪಾಪಕಾರಕ. ಬೇರೆಯವರಿಗೆ ಅಥವಾ ದೇಶಕ್ಕೂ ರಾಜನಿಗೂ ಸಂಬಂಧಿಸಿದಂತೆ ಅಪಪ್ರಚಾರ ಮಾಡುವುದು, ಸುಳ್ಳು ಸುದ್ದಿ ಹರಡುವುದು – ಇವು ವಜ್ರ್ಯ.
(9) ಸಾಮಾಯಿಕ ವ್ರತ: ಮನಸ್ಸನ್ನು ಸಮಾಧಾನವಾಗಿರಿಸುವ ಅಭ್ಯಾಸ. ಪ್ರತಿ ದಿನ 48 ನಿಮಿಷಗಳಷ್ಟಾದರೂ ಬಾಹ್ಯ ವ್ಯಾಪಾರಗಳಿಂದ ವಿರಮಿಸಿ ಪರಮಾತ್ಮನನ್ನು ಕುರಿತು ಧ್ಯಾನ ಮಾಡಬೇಕು; ಪವಿತ್ರ ಗ್ರಂಥಗಳನ್ನೋದಿ ಮನನ ಮಾಡಬೇಕು; ಸ್ವವಿಮರ್ಶೆ ಮಾಡಿಕೊಳ್ಳಬೇಕು.
ಸಂಯಮ
(10) ದೇಶಾವಕಾಶಿಕ ವ್ರತ: ವರ್ಷದಲ್ಲಿ ಒಂದು ದಿನವಾದರೂ ಪೂರ್ತಿ ದೈನಂದಿನ ವ್ಯವಹಾರಗಳಿಂದ ದೂರವಾಗಿ ತಪಶ್ಚರ್ಯೆ ನಡೆಸಬೇಕು.
(11) ಪೌಷಧ ವ್ರತ: ವರ್ಷದಲ್ಲಿ ಒಂದು ದಿನವಾದರೂ ಪೂರ್ಣ ಉಪವಾಸದಲ್ಲಿದ್ದು, ನಿತ್ಯದ ವ್ಯಾಪಾರಗಳನ್ನು ಬಿಟ್ಟು ಜ್ಞಾನ-ಧ್ಯಾನನಿಷ್ಠರಾಗಿರತಕ್ಕದ್ದು. ತಪಶ್ಚರ್ಯೆಯೊಡಗೂಡಿ ಪೌಷಧವೆಂಬ ವ್ರತಾನುಸರಣೆ ಮಾಡತಕ್ಕದ್ದು.
(12) ಅತಿಥಿ ಸಂವಿಭಾಗ ವ್ರತ: ವರ್ಷದಲ್ಲಿ ಒಂದು ದಿನವಾದರೂ ಉಪವಾಸ ಮಾಡಿ, ಮಾರನೆಯ ದಿನ ಗುರುಗಳಿಗೆ ಭೋಜನದಾನ ಮಾಡಿ ತಾನು ಒಪ್ಪತ್ತು ಮಾತ್ರ ವಿಹಿತ ಆಹಾರ ಸ್ವೀಕಾರ ಮಾಡಬೇಕು. ಗುರುಗಳು ಅನುಗ್ರಹಿಸಿದ ಪ್ರಸಾದವನ್ನೇ ತಾನು ಭುಜಿಸಬೇಕು. ಗುರುಗಳು ಅಲಭ್ಯರಾಗಿದ್ದಲ್ಲಿ ಬೇರೆ ಯಾರಾದರೂ ಸದ್ಧರ್ಮನಿಷ್ಠರಿಗೆ ನಿವೇದಿಸಿ, ಅವರು ಊಟ ಮಾಡಿದ ವಸ್ತುಗಳನ್ನು ಮಾತ್ರ ತಾನು ಊಟ ಮಾಡಬೇಕು.
ಈ ದ್ವಾದಶವ್ರತಗಳು ಜೈನರಿಗೆ ಮಾತ್ರವಲ್ಲದೆ ಎಲ್ಲ ಮತಗಳವರಿಗೂ ಪರಿಗ್ರಾಹ್ಯಗಳೇ. ಈ ವಿಶ್ವೌದಾರ ನೀತಿಯನ್ನು ಜಗತ್ತಿಗೆ ನೆನಪು ಮಾಡಿಕೊಟ್ಟ ತೀರ್ಥಂಕರರಲ್ಲಿ ಕಟ್ಟಕಡೆಯವನು ಈಗ್ಗೆ 2546 ವರ್ಷ ಹಿಂದೆ ನಿರ್ವಾಣ ಹೊಂದಿದ ವರ್ಧಮಾನ ಮಹಾವೀರ.
ಯೋ ವಿಶ್ವಂ ವೇದವೇದ್ಯಂ ಜನನಜಲನಿಧೇರ್ಭಂಗಿನಃ ಪಾರದೃಶ್ವಾ|
ಪೌರ್ವಾಪರ್ಯಾವಿರುದ್ಧಂ ವಚನಮನುಪಮಂ ನಿಷ್ಕಲಂಕಂ ಯದೀಯಂ|
ತಂ ವಂದೇ ಸಾಧುವಂದ್ಯಂ ಸಕಲಗುಣನಿಧಿಂ ಧ್ವಸ್ತದೋಷದ್ವಿಷಂತಂ |
ಬುದ್ಧಂ ವಾ ವರ್ಧಮಾನಂ ಶತದಲನಿಲಯಂ ಕೇಶವಂ ವಾ ಶಿವಂ ವಾ ||
“ಅರಿಯುವುದಕ್ಕೆ ಅರ್ಹವಾದ್ದನ್ನೆಲ್ಲ ಯಾವನು ತಿಳಿದಿರುತ್ತಾನೋ, ಅಸ್ಥಿರ ಸಂಸಾರಸಮುದ್ರದ ಪಾರವನ್ನು ಕಂಡಿರುತ್ತಾನೋ, ಯಾರ ಮಾತು ಪೂರ್ವಾಪರ ವಿರೋಧವಿಲ್ಲದೆ ಅನುಪಮವೂ ಆಗಿರುತ್ತದೋ, ಯಾವನು ಸಜ್ಜನರಿಗೆ ವಂದ್ಯನೂ ಎಲ್ಲ ಗುಣಗಳ ನಿಧಿಯೂ ದೋಷವೆಂಬ ಶತ್ರುಗಳನ್ನು ನಾಶಮಾಡಿದವನೂ ಆಗಿರುತ್ತಾನೋ – ಆ ದೇವನು ಬುದ್ಧನಾಗಿರಲಿ, ವರ್ಧಮಾನನಾಗಿರಲಿ, ಬ್ರಹ್ಮ, ವಿಷ್ಣು ಅಥವಾ ಶಿವನೇ ಆಗಿರಲಿ – ಅವನನ್ನು ವಂದಿಸುತ್ತೇನೆ.”
(-ಅಕಲಂಕ)