ಕೆಸರಿನಿಂದ ಕಮಲ ಹುಟ್ಟುವುದು ಒಂದು ಪ್ರಕೃತಿವೈಚಿತ್ರ್ಯ. ಅದರಂತೆ ಕೊರೋನಾ ಎಂಬ ಭಯಾನಕ ವಿಪತ್ತಿನ ಕಾರಣದಿಂದಾಗಿ ಜನರಿಗೆ ತಮ್ಮ ಕ್ಷಮತೆ ಎಷ್ಟಿದೆಯೆಂಬುದು ಅರಿವಿಗೆ ಬರುವಂತಾಗಿದೆ. ಇದನ್ನು ಒಂದು ಉಪಲಬ್ಧಿ ಎಂದು ಭಾವಿಸಿದರೆ ತಪ್ಪಿಲ್ಲ. ಏಕೆಂದರೆ ನಿತ್ಯ-ಧಾವಂತವೇ ಸಹಜಸ್ಥಿತಿಯೆಂದು ಭಾವಿಸುವಷ್ಟು ಅಧಿಕ ‘ಪ್ರಗತಿ’ಯನ್ನು ಮಾನವತೆ ಸಾಧಿಸಿದ್ದಾಗಿದೆ. ಅವಲೋಕನಕ್ಕೆ ಯಾರಿಗೂ ಪುರಸತ್ತೇ ಇಲ್ಲ. ಅತಿವೇಗಕ್ಕೆ ಬದಲಾಗಿ ನಿಧಾನ, ದುಂದುಗಾರಿಕೆಗೆ ಬದಲಾಗಿ ಮಿತವ್ಯಯ, ಅನಾವಶ್ಯಕ ಸಂಕೀರ್ಣತೆಗೆ ಬದಲಾಗಿ ಸರಳತೆ – ಈ ಲಕ್ಷಣಗಳನ್ನುಳ್ಳ ಜೀವನಕ್ರಮ ಕೂಡಾ ಸಂತೃಪ್ತಿಕರವೂ ಸಮಾಧಾನಕರವೂ ಆಗಿರಬಲ್ಲದೆಂಬ ಪ್ರಾಥಮಿಕ ಮೌಲ್ಯಪರಿಜ್ಞಾನವು ಮರೆತೇಹೋಗಿದೆ. ಚಿಂತನಶೀಲರು ಸರಳತೆಯನ್ನು ಬೋಧಿಸುವುದು ಅದು ಅನಿವಾರ್ಯ, ವ್ಯವಹಾರ್ಯ ಎಂಬ ಕಾರಣಕ್ಕಾಗಷ್ಟೆ ಅಲ್ಲ; ಸರಳತೆಯಲ್ಲಿ ಆನಂದವೂ ಇದೆ ಎಂಬ ಕಾರಣಕ್ಕಾಗಿ. ಲಾಕ್ಡೌನ್ನಿಂದಾಗಿ ಕುಟುಂಬಸದಸ್ಯರೆಲ್ಲ ಒಟ್ಟಿಗೆ ಪರಸ್ಪರರೊಡನೆ ಹೆಚ್ಚು ಸಮಯ ಕಳೆಯುವಂತೆ ಆಯಿತಲ್ಲ – ಈಗಿನ ಸಮಾಜಸ್ಥಿತಿಯಲ್ಲಿ ಇದು ಕಡಮೆಯ ಲಾಭವೇನಲ್ಲ.
ಸಮಸ್ಯೆಯ ಸ್ವರೂಪವನ್ನೂ ಗಂಭೀರತೆಯನ್ನೂ ಗಮನಿಸದ ಇಲ್ಲೊಬ್ಬ ಅಲ್ಲೊಬ್ಬ ವಿರಳರು ಕೊಂಕುಮಾತುಗಳನ್ನಾಡುವುದರ ಮೂಲಕ ತಮ್ಮ ಅಪ್ರಬುದ್ಧತೆಯನ್ನೂ ಸ್ಪಂದನಹೀನತೆಯನ್ನೂ ಮೆರೆದಿದ್ದಾರೆ. ಈ ಬಣದವರು ಹೇಗೂ ಸದಾ ಅಡ್ಡದಾರಿಯ ಮಾತುಗಳನ್ನೇ ಆಡುತ್ತಿರುತ್ತಾರಾದ್ದರಿಂದ ಅವರ ಮಾತುಗಳು ಈಗ ಕಿಮ್ಮತ್ತನ್ನು ಪೂರ್ತಿ ಕಳೆದುಕೊಂಡಿವೆ. ಕೋಟಿ ಕೋಟಿ ಜನಸಾಮಾನ್ಯರು ಈಗಿನ ಸಮಸ್ಯೆಯ ಸ್ವರೂಪವನ್ನು ಸರಿಯಾಗಿಯೇ ಗ್ರಹಿಸಿ ಸಹಕರಿಸಿದ್ದಾರೆ. ಕೆಲವರು ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ‘ಪ್ರಕೃತಿಯ ಮುಂದೆ ನಾವು ಎಷ್ಟು ಸಣ್ಣವರೆಂಬುದು ಈಗ ಅರ್ಥವಾಯಿತು’ ಎಂದು ಉದ್ಗರಿಸಿದ್ದಾರೆ. ರಸ್ತೆಗಳು ತೆರವಾಗಿರುವುದರಿಂದ ಹಲವು ವಿಧ ಪ್ರಾಣಿ-ಪಕ್ಷಿಗಳ ವಿಲಾಸದ ದರ್ಶನ ಪಟ್ಟಣಿಗರಿಗೆ ಆಗಿದೆ. ನಡುಬೀದಿಯಲ್ಲಿ ನವಿಲುಗಳನ್ನು ಬೆಂಗಳೂರಿಗರು ಕಾಣುವಂತಾಯಿತು. ಒಬ್ಬ ‘ಗೂಗಲಿಗ’ರು ಹೇಳಿದಂತೆ “ನನ್ನೂರನ್ನು ಮತ್ತೆ ನನ್ನೂರನ್ನಾಗಿ ನೋಡುವ ಅವಕಾಶಕ್ಕಾಗಿ ಒಂದು ವೈರಸ್ ಬೇಕಾಯಿತು.”
ಈ ಎಲ್ಲ ಸೊಬಗಿನ ನಡುವೆ ಸೋಂಕಿಗೆ ಗುರಿಯಾದವರನ್ನು ಪತ್ತೆಹಚ್ಚುವುದು, ಕ್ವಾರಂಟೈನ್ ಉಸ್ತುವಾರಿ, ‘ಸಾಮಾಜಿಕ ಅಂತರ’ ಪಾಲನೆಯ ಅನುಸರಣೆಯ ಬಗೆಗೆ ಕಟ್ಟೆಚ್ಚರ ಮೊದಲಾದ ಪ್ರಕ್ರಿಯೆಗಳೂ ಮುಂದುವರಿದಿವೆ.
ಸಾಂಕ್ರಾಮಿಕಗಳಿಗೆ ಇಷ್ಟೇ ವೇಗದಲ್ಲಿ ಹರಡಬೇಕು, ಇಷ್ಟೇ ಮಂದಿಗೆ ಸೋಂಕಬೇಕು ಎಂಬ ನಿಯಮಗಳೇನೂ ಇಲ್ಲ. ಆದರೆ ಕೆಲವು ತಥ್ಯಗಳಂತೂ ಹಿಂದಿನಿಂದ ಸ್ಥಿರಪಟ್ಟಿವೆ. ಸೋಂಕುರೋಗಗಳಿಗೆ – ಹಾಗೆ ನೋಡಿದರೆ ಯಾವುದೇ ಕಾಯಿಲೆಗೆ – ಹೆಚ್ಚಾಗಿ ತುತ್ತಾಗುವವರು ದೇಹದಲ್ಲಿ ಯಾವುದೊ ದೌರ್ಬಲ್ಯವಿರುವವರು, ಸ್ವಾಸ್ಥ್ಯದ ಮಟ್ಟ ಪೂರ್ಣ ಸಮರ್ಪಕವಾಗಿಲ್ಲದವರು. ನಿದರ್ಶನಕ್ಕೆ: ಈಗ್ಗೆ ಒಂದು ದಶಕದ ಹಿಂದೆ ಕಾಣಿಸಿಕೊಂಡ ಎಚ್1ಎನ್1 ಜ್ವರಕ್ಕೆ ಈಡಾದ ಹದಿನಾರು ಸಾವಿರಕ್ಕೂ ಹೆಚ್ಚಿನವರಲ್ಲಿ ಶೇ. 40ರಷ್ಟು ಮಂದಿ ಬೆಂಗಳೂರಿಗರೇ ಇದ್ದರು. ಇದರ ತಾತ್ಪರ್ಯ ಸ್ಪಷ್ಟವಿದೆ. ಜಂಕ್ಫುಡ್ ಸೇವನೆ ಮೊದಲಾದ ವಿಕೃತಿಗಳ ಫಲಿತವಾದ ಜೀವನಶೈಲಿ-ಸಂಬಂಧಿತ ದೌರ್ಬಲ್ಯಗಳು ಸಾಂಕ್ರಾಮಿಕಗಳೂ ಸೇರಿದಂತೆ ಹಲವು ಕಾಯಿಲೆಗಳಿಗೆ ತೆರೆದ ಬಾಗಿಲುಗಳಾಗಿವೆ. ಇವನ್ನು ಬಹುಮಟ್ಟಿಗೆ ತಡೆಗಟ್ಟಬಲ್ಲವು ಸಾಮಾಜಿಕ ಸ್ವಾಸ್ಥ್ಯ ಮತ್ತು ವೈಯಕ್ತಿಕ ಹೊಣೆಗಾರಿಕೆ. ಈ ಪ್ರಜ್ಞಾವಂತಿಕೆಯನ್ನು ಪಟ್ಟಣಿಗರಲ್ಲಿ – ವಿಶೇಷವಾಗಿ ತರುಣ ಪೀಳಿಗೆಯಲ್ಲಿ – ಬೆಳೆಸಲು ಒಂದು ಜನಾಂದೋಲನವೇ ನಡೆಯಬೇಕಾಗಿದೆ. ಈಚಿನ ವರ್ಷಗಳಲ್ಲಿ ಪಸರಿಸಿರುವ ‘ಹಂದಿಜ್ವರ’ (ಎಚ್1ಎನ್1), ಡೆಂಘೀಜ್ವರ, ಚಿಕೂನ್ಗುನ್ಯಾ, ಅವುಗಳ ಹಿಂದುಗೂಡಿ ಈಗ ಕೊರೋನಾ ವೈರಾಣು – ಈ ಆಘಾತಗಳಾದರೂ ಜನರಲ್ಲಿ ಹೆಚ್ಚಿನ ಸ್ವಾಸ್ಥ್ಯಪ್ರಜ್ಞೆಯನ್ನು ಬೆಳೆಸಲೆಂದು ಹಾರೈಸಬೇಕಾಗಿದೆ. ಏಕೆಂದರೆ ಎಷ್ಟೇ ದಕ್ಷ ಮತ್ತು ವ್ಯಾಪಕ ವೈದ್ಯಕೀಯ ಸೇವಾವ್ಯವಸ್ಥೆಗಳಿದ್ದರೂ ಡೆಂಘೀ-ಕೊರೋನಾಗಳಂತಹ ಸಂಕೀರ್ಣ ಸವಾಲುಗಳ ನಿರ್ವಹಣೆಗೆ ಪರ್ಯಾಪ್ತವಾಗಲಾರವು.
ಈ ಹಿನ್ನೆಲೆಯಲ್ಲಿ ಪ್ರಾಥಮ್ಯ ಸಲ್ಲಬೇಕಾದದ್ದು ಪ್ರತಿಯೊಬ್ಬರ ಶರೀರದಲ್ಲಿ ಸಹಜವಾಗಿಯೆ ಇರುವ ರೋಗನಿರೋಧಕ ಶಕ್ತಿಯನ್ನು ದೃಢತರಗೊಳಿಸುವುದು. ತಟಸ್ಥಕಣಗಳು, ಕ್ಷೀರಕಣಗಳು ಮೊದಲಾದ ಪ್ರಕಾರಗಳನ್ನೊಳಗೊಂಡ ಬಿಳಿರಕ್ತಕಣಗಳ ಕಾರ್ಯವಂತಿಕೆಯನ್ನು ಜೀವನಕ್ರಮದ ಮೂಲಕ ಸಂರಕ್ಷಿಸಿಕೊಂಡಲ್ಲಿ ಯಾವುದೇ ವೈರಾಣುಗಳ ಆಘಾತವನ್ನು ಎದುರಿಸುವುದು ಕಷ್ಟವಾಗದು. ವಿಶಿಷ್ಟ ಚಿಕಿತ್ಸಾಕ್ರಮಗಳು ಕೊನೆಯ ಹಂತದಲ್ಲಷ್ಟೆ ಸಂಗತವಾದಾವು. ರೋಗನಿರೋಧಕ ಶಕ್ತಿಯ ವರ್ಧನೆಗೆ ಮೊಳಕೆ ಬರಿಸಿದ ಕಾಳುಗಳು, ಸಂಭಾರ ಪದಾರ್ಥಗಳು, ಹುಳಿಹಣ್ಣುಗಳು ಮೊದಲಾದವುಗಳ ನಿಯಮಿತ ಬಳಕೆಯಂತಹ ಸರಳ ಮಾರ್ಗಗಳು ಇವೆ. ತಂಬುಳಿ-ಕಷಾಯಗಳ ವೈದ್ಯಕೀಯ ಲಾಭಗಳಂತೂ ಜನಜನಿತವೇ ಆಗಿವೆ. ಈಚಿನ ವರ್ಷಗಳಲ್ಲಿ ಒಂದರ ಹಿಂದೆ ಒಂದರಂತೆ ಎರಗುತ್ತಿರುವ ವೈರಾಣುಗಳ ಆಘಾತಗಳ ಅನುಭವದಿಂದಲಾದರೂ ಸ್ವಾಸ್ಥ್ಯಪೋಷಕ ಜೀವನಕ್ರಮಕ್ಕೂ ರೋಗನಿರೋಧಕ ಶಕ್ತಿಯ ವರ್ಧನೆಗೂ ಹೆಚ್ಚಿನ ಗಮನ ಕೊಡೋಣ; ಆರೋಗ್ಯದ ಮೇಲೆ ಹಲ್ಲೆ ಮಾಡುವ ಫ್ಯಾಶನ್ಗಳ ಬೆಡಗಿನಿಂದ ದೂರ ಸರಿಯೋಣ. ಹೀಗೆ ಆದಲ್ಲಿ ಮಾತ್ರ ಚಿಕಿತ್ಸಾವ್ಯವಸ್ಥೆಗಳು ಸಹಾಯಕಗಳಾದಾವು.
ಅನ್ಯದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜನಸಾಂದ್ರತೆ ಅಧಿಕ ಪ್ರಮಾಣದ್ದಿರುವುದರಿಂದ ರೋಗನಿಯಂತ್ರಣ ಹೆಚ್ಚು ದುಷ್ಕರವೆಂಬ ವಸ್ತುಸ್ಥಿತಿಯನ್ನೂ ಮರೆಯಬಾರದು.
ಇತರ ಹಲವು ವೈರಾಣು-ಸೋಂಕು ವ್ಯಾಧಿಗಳಂತೆ ಕೊರೋನಾದ ಪೀಡಕ ಅವಧಿಗೂ ಸಹಜ ಪರಿಮಿತಿ ಇದೆ. ಹೀಗಾಗಿ ಹರಡಿಕೆಯನ್ನು ತಡೆಯುವ ಕಟ್ಟುನಿಟ್ಟು ಕ್ರಮಗಳನ್ನು ಅನುಸರಿಸುವುದು ನಿರ್ವಹಣೆಯ ಮುಖ್ಯಭಾಗ. ಈ ಪ್ರಾಥಮಿಕ ಎಚ್ಚರ ವಹಿಸಿದಲ್ಲಿ ಭಯಕ್ಕೆ ಕಾರಣವಿರದು. ಜಾಗೃತಿ ಅನಿವಾರ್ಯ. ಅಲಕ್ಷ್ಯ ಬೇಡ, ಆತಂಕವೂ ಬೇಡ.
ನಿವಾರಣೆಯು ಚಿಕಿತ್ಸೆಗಿಂತ ಪರಿಣಾಮಕಾರಿ ಎಂಬುದು ವೈದ್ಯಶಾಸ್ತ್ರದ ಪ್ರಾಥಮಿಕ ತತ್ತ್ವವೇ ಆಗಿದೆ. ಸೋಂಕು ಹರಡುವಿಕೆಯನ್ನು ತಡೆಯಲು ಅವಗುಂಠನದ (‘ಮಾಸ್ಕ್’, ಮುಸುಕು) ಬಳಕೆ ಹೊಸದೇನಲ್ಲ. ಇದು ‘ಟೈಮ್-ಟೆಸ್ಟೆಡ್’ ವಿಧಾನ. ಆಯುರ್ವೇದದ ಮೂರು ಪ್ರಮುಖ ಆಧಾರಗ್ರಂಥಗಳಲ್ಲೊಂದಾದ ‘ಅಷ್ಟಾಂಗಹೃದಯ’ದಲ್ಲಿಯೆ ‘ಮಾಸ್ಕ್’ನ ಪ್ರಸ್ತಾವವಿದೆ: “ನಾಸಂವೃತಮುಖಃ ಕುರ್ಯಾತ್ ಕ್ಷತಿ-ಹಾಸ್ಯ-ವಿಜೃಂಭಣಮ್” ಇತ್ಯಾದಿ. ಯಾವುದೇ ವೈರಾಣು ಪ್ರಸಾರವಾಗುವ ಪ್ರಮುಖ ಮಾರ್ಗವೆಂದರೆ ವ್ಯಕ್ತಿಸಂಪರ್ಕದ ಮೂಲಕ; ಎಂದರೆ ವೈರಾಣುವಿರುವ ವ್ಯಕ್ತಿ ಕೆಮ್ಮಿದಲ್ಲಿ ಅಥವಾ ಸೀನಿದಲ್ಲಿ ಅದರ ಸ್ಪರ್ಶಕ್ಕೆ ಇತರರು ಬರುವ ಮೂಲಕ. ಹೀಗಿರುವುದರಿಂದ ಸಮರ್ಥ ನಿವಾರಕ ಕ್ರಮಗಳೆಂದರೆ ವ್ಯಕ್ತಿಗಳ ನಡುವಣ ಅಂತರವನ್ನು ಉಲ್ಲಂಘಿಸದಿರುವುದು ಮತ್ತು ಮುಖಗವುಸನ್ನು (‘ಮಾಸ್ಕ್’, ಅವಗುಂಠನ) ಧರಿಸುವುದು.
ಸಮರ್ಥ ಹಾಗೂ ಸಕಾಲಿಕ ಕೇಂದ್ರ ಹಾಗೂ ರಾಜ್ಯ ನೇತೃತ್ವದಿಂದಾಗಿ ಜಗತ್ತಿನ ಅನ್ಯಭಾಗಗಳಿಗೆ ಹೋಲಿಸಿದರೆ ಭಾರತವು ಸೋಂಕು ಹರಡುವಿಕೆಯನ್ನು ಕನಿಷ್ಠಗೊಳಿಸುವುದರಲ್ಲಿ ಗಣನೀಯ ಸಾಫಲ್ಯ ಪಡೆದಿದೆಯೆಂಬುದು ನಿರ್ವಿವಾದವಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 26ರ ‘ಮನ್ ಕೀ ಬಾತ್’ನಲ್ಲಿ ಹೇಳಿದಂತೆ ನಾವೀಗ ಸಮರದ ನಡುಭಾಗದಲ್ಲಿ ಇದ್ದೇವಷ್ಟೆ – ಎಂಬುದನ್ನು ಮರೆಯುವಂತಿಲ್ಲ. ಜಾಗ್ರತೆಯನ್ನು ಸಡಿಲಗೊಳಿಸಿದರೆ ಸೋಂಕು ಮತ್ತೆ ಉಜ್ಜೀವಿತವಾಗುವ ಸಂಭವ ತಪ್ಪಿದ್ದಲ್ಲ. ಈ ವ್ಯಾಜದಲ್ಲಾದರೂ ಸಾರ್ವಜನಿಕ ಸ್ವಾಸ್ಥ್ಯಪ್ರಜ್ಞೆ ಇನ್ನಷ್ಟು ದೃಢಗೊಳ್ಳಲೆಂದು ಆಶಿಸೋಣ. ದಾಢ್ರ್ಯವೃದ್ಧಿಗೆ ಅರಿಶಿನ ಧನಿಯ ಕರಿಮೆಣಸು ಮೊದಲಾದ ಸಂಭಾರಗಳ ಬಳಕೆ, ನಿತ್ಯವ್ಯಾಯಾಮ, ಆಯಾ ಋತುವಿನಲ್ಲಿ ಸುಲಭವಾಗಿ ಜೀರ್ಣವಾಗುವ ತರಕಾರಿಗಳ ಬಳಕೆ ಮೊದಲಾದ ಸರಳ ಮಾರ್ಗಗಳಿವೆ.
ವಾಸ್ತವವಾಗಿ ಪ್ರಕೃತಿಯಲ್ಲಿ ಲಕ್ಷಾಂತರ ವೈರಸ್ಗಳು ಇವೆ. ಅವುಗಳಲ್ಲಿ ಇದುವರೆಗೆ ವಿಜ್ಞಾನಿಗಳ ಪರಿಶೀಲನೆಗೆ ಲಭ್ಯವಾಗಿರುವವು ಸುಮಾರು ಐದು ಸಾವಿರ ವೈರಸ್ಗಳಷ್ಟೆ; ಮತ್ತು ವೈರಸ್ಗಳು ಏಕರೀತಿಯಿರದೆ ತಮ್ಮ ಸ್ವರೂಪವನ್ನು ಬದಲಾಯಿಸುತ್ತಿರುವುದೂ ಉಂಟು. ಹೀಗಿರುವುದರಿಂದ ಆರೋಗ್ಯಪೋಷಕ ಜೀವನಕ್ರಮದಿಂದ ಶರೀರದಾಢ್ರ್ಯವನ್ನು ಹೆಚ್ಚಿಸಿಕೊಳ್ಳುವುದು ಮಾತ್ರ ಬಹುಮಟ್ಟಿಗೆ ರಕ್ಷಕವಾಗಬಹುದು. ವ್ಯಕ್ತಿಯಲ್ಲಿ ದುರ್ಬಲತೆಯೋ ರುಗ್ಣತೆಯೋ ಈಗಾಗಲೇ ಇದ್ದಲ್ಲಿ ಹೊಸ ವೈರಾಣು ಹೆಚ್ಚು ಮಾರಕವಾಗಿ ಪರಿಣಮಿಸಬಹುದು.
ಕೊರೋನಾ ವೈರಾಣುವಿನ ಪ್ರಸಾರವನ್ನು ತಡೆಯಲು ಭಾರತದಲ್ಲಿ ಆರಂಭಹಂತದಲ್ಲಿಯೇ ದೇಶಾದ್ಯಂತ ನಿವಾರಕ ಕ್ರಮಗಳನ್ನು ಜಾರಿಗೊಳಿಸಿದುದು ಸತ್ಪರಿಣಾಮವನ್ನು ನೀಡಿದೆ. ಲಾಕ್ಡೌನ್ ಆಗಿರದಿದ್ದಿದ್ದರೆ ಸೋಂಕು ಪ್ರಕರಣಗಳು ಎರಡು ಲಕ್ಷಕ್ಕೂ ಮಿಗಿಲಾಗಿರುತ್ತಿದ್ದವೆಂದು ತಜ್ಞರ ಅಂದಾಜು. ವೈರಾಣು ಗಮನಕ್ಕೆ ಬಂದ (ಫೆಬ್ರುವರಿ ನಡುಭಾಗ) ಏಳು ವಾರಗಳ ತರುವಾಯವೂ (ಮೇ ಮೊದಲ ವಾರ) ಭಾರತದಲ್ಲಿ ಸೋಂಕಿತರ ಸಂಖ್ಯೆ ಸುಮಾರು 34000ದಷ್ಟಕ್ಕೆ ಸೀಮಿತವಾಗಿದೆ (ಅಮೆರಿಕದಲ್ಲಿ ಹತ್ತೂಮುಕ್ಕಾಲು ಲಕ್ಷ ಇದೆ). ಭಾರತದಲ್ಲಿ ಮೃತರ ಸಂಖ್ಯೆ 1151; ಅಮೆರಿಕದಲ್ಲಿ 62378 (ಮೇ ಆರಂಭದ ವೇಳೆಗೆ).
ಜುಲೈ 2020ರ ಅಂತ್ಯದೊಳಗೆ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಬಹುಮಟ್ಟಿಗೆ ಅಂತ್ಯಗೊಂಡಾವೆಂದು ಸಿಂಗಾಪುರ-ಸ್ಥಿತ ಅಂತರರಾಷ್ಟ್ರೀಯ ಶೋಧಸಂಸ್ಥಾನ (Data-driven Innovation Lab) ಅಭಿಪ್ರಾಯಪಟ್ಟಿದೆ. ಆಗಸ್ಟ್ ಮೊದಲ ವಾರದ ವೇಳೆಗೆ ಶೇ. 99ರಷ್ಟು ಸೋಂಕು ಉಚ್ಚಾಟಿತವಾದೀತೆಂದು ತಜ್ಞರ ವಿಶ್ಲೇಷಣೆ ಇದೆ.
ಸೋಂಕು ನಿಯಂತ್ರಣದಲ್ಲಿ ಅನ್ಯದೇಶಗಳಿಗಿಂತ ಹೆಚ್ಚಿನ ಸಫಲತೆ ಸಾಧಿಸಿರುವುದಲ್ಲದೆ ಭಾರತ ಇತರ ದೇಶಗಳಿಗೆ ಬೃಹತ್ಪ್ರಮಾಣದಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಒದಗಿಸಿ ಅನ್ಯ ವೈದ್ಯಕೀಯ ಸೇವೆಗಳನ್ನೂ ಒದಗಿಸಲು ಮುಂದಾದುದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ.
ಸೋಂಕು ನಿವಾರಣೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಯವಂತಿಕೆ ಕೇಂದ್ರಸರ್ಕಾರದ ಆರೋಗ್ಯ ಸಚಿವಾಲಯದ ಪ್ರಶಂಸೆಗೆ ಪಾತ್ರವಾಗಿದೆ. ಸೋಂಕು ನಿಯಂತ್ರಣದಲ್ಲಿ ಕೊರೋನಾ ವ್ಯಾಪಿಸಿರುವ 16 ರಾಜ್ಯಗಳಲ್ಲಿ 10 ರಾಜ್ಯಗಳನ್ನು ಕರ್ನಾಟಕ ಹಿಂದಿಕ್ಕಿದೆ. ಇದು ಕಡಮೆಯ ಸಾಧನೆಯೇನಲ್ಲ.
ಲಾಕ್ಡೌನನ್ನು ಸಡಿಲಗೊಳಿಸುವ ಪ್ರಕ್ರಿಯೆ ಕರ್ನಾಟಕದಲ್ಲಿ ಏಪ್ರಿಲ್ ಅಂತ್ಯದಿಂದಲೇ ಉಪಕ್ರಮಗೊಂಡಿದೆ. ‘ಕೆಂಪು ವಲಯ’ವಾಗಿ ಗುರುತಿಸಲ್ಪಟ್ಟಿರುವ 6 ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ ದೈನಂದಿನ ವಹಿವಾಟುಗಳಿಗೂ ಉದ್ಯಮಗಳಿಗೂ ಪುನರಾರಂಭಕ್ಕೆ ಕೆಲವು ನಿಬಂಧನೆಗಳಿಗೊಳಪಟ್ಟು ಅನುಮತಿ ಘೋಷಿಸಲಾಗಿದೆ. ಕರ್ನಾಟಕದ 14 ಜಿಲ್ಲೆಗಳಲ್ಲಿ ಎಂದರೆ ಅರ್ಧದಷ್ಟು ಭಾಗದಲ್ಲಿ ಏಪ್ರಿಲ್ ಅಂತ್ಯದಿಂದಲೇ ಲಾಕ್ಡೌನ್ ಕ್ರಮೇಣ ಬಹುಮಟ್ಟಿಗೆ ತೆರವಾಗಿದೆ. ಹೀಗಾಗಿ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಆರ್ಥಿಕತೆಗೆ ಮರುಜೀವ ಬಂದಂತಾಗಿದೆ.
ಎಲ್ಲೆಡೆ ಎದ್ದುಕಾಣುತ್ತಿರುವ ಸಂಗತಿಯೆಂದರೆ ಸರ್ಕಾರೀ ಅಧಿಕಾರಿಗಳು, ವೈದ್ಯರು, ವೈದ್ಯಕೀಯ ಸಹಾಯಕ ಅರೆಕಾಲಿಕ ಕಾರ್ಯಕರ್ತರು, ಪೊಲೀಸ್ ಇಲಾಖೆ, ಬಗೆಬಗೆಯ ಸೇವೆಗಳನ್ನು ಸ್ವಪ್ರೇರಿತರಾಗಿ ಒದಗಿಸುತ್ತಿರುವ ಸಮಾಜಹಿತೈಷಿಗಳು, ಅನ್ನದಾನಾದಿಗಳಲ್ಲಿ ನಿರತವಾಗಿರುವ ವ್ಯಕ್ತಿ-ಸಂಸ್ಥೆಗಳು, ಎಲ್ಲ ವ್ಯವಸ್ಥೆಗಳಲ್ಲಿಯೂ ಮನಃಪೂರ್ವಕವಾಗಿ ಸಹಕರಿಸುತ್ತಿರುವ ಜನಸಾಮಾನ್ಯರು – ಎಲ್ಲರೂ ಏಕಮುಖವಾಗಿ ಹೊಣೆಗಾರಿಕೆಯಿಂದ ವರ್ತಿಸುತ್ತಿರುವುದು ಒಂದು ಹೃದ್ಯ ಅನುಭವವಾಗಿದೆ. ಈ ಸನ್ನಿವೇಶವಿಲ್ಲದ ‘ಮುಂದುವರಿದ’ ದೇಶಗಳ ಸಮುದಾಯಗಳು ಹೆಚ್ಚಿನ ದುರಂತಗಳಿಗೆ ತೆರೆದಬಾಗಿಲುಗಳಾಗಿರುವುದು ಸ್ಪಷ್ಟವಿದೆ.
ಭಾರತದಲ್ಲಿ ಕಳೆದ ಮೂರು ತಿಂಗಳಲ್ಲಿ ಕಂಡಿದ್ದ ಅನುಶಾಸನ ಇನ್ನೂ ಮೂರು ತಿಂಗಳು ಮುಂದುವರಿಯಬೇಕಾದುದು ಅನಿವಾರ್ಯವಾಗಿದೆ. ಇದರಲ್ಲಿ ಮಹತ್ತ್ವದ ಪಾತ್ರವಿರುವುದು ಸಾರ್ವಜನಿಕರದೇ.