ಈಗ್ಗೆ ಹದಿಮೂರು ತಿಂಗಳ ಹಿಂದೆ (30 ಮೇ 2019) ಎರಡನೇ ಬಾರಿಗೆ ಭಾಜಪಾ ನೇತೃತ್ವದ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಷ್ಟ್ರಜೀವನದ ಚಹರೆಯೇ ಬದಲಾಗಿದೆಯೆಂದರೆ ಹೆಚ್ಚು ಹೇಳಿದಂತಾಗಲಿಲ್ಲ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ 370ನೇ ವಿಧಿಯ ರದ್ಧತಿ, ನೆರೆಯ ರಾಷ್ಟ್ರಗಳಲ್ಲಿ ಅವರ್ಣನೀಯ ಕಿರುಕುಳಗಳಿಗೊಳಗಾಗಿದ್ದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಿಕೆ ಮೊದಲಾದ ಕ್ರಮಗಳು ಇತಿಹಾಸಾರ್ಹ. ಬಹುತೇಕ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ, ಬಡವರಿಗೆ ಸವಲತ್ತುಗಳ ನೇರ ವರ್ಗಾವಣೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪ್ರೋತ್ಸಾಹನ ಮತ್ತು ಅದರ ಮೂಲಕ ಹೆಚ್ಚಿನ ಉದ್ಯೋಗ ನಿರ್ಮಾಣ – ಇಂತಹ ಹಲವಾರು ಕ್ರಮಗಳು ಜನಜೀವನವನ್ನು ಸುಗಮಗೊಳಿಸಿರುವುದು ಎದ್ದುಕಾಣುತ್ತಿದೆ. ದೇಶದ ಯಾವುದೇ ಮೂಲೆಯ ರೇಶನ್ ಅಂಗಡಿಯಲ್ಲಿ ಪಡಿತರ ತೆಗೆದುಕೊಳ್ಳುವ ಸೌಲಭ್ಯ, ಎಲ್ಲೆಡೆ ನಗದುರಹಿತ ವ್ಯವಹಾರಾವಕಾಶ – ಈ ಹಲವಾರು ಕ್ರಮಗಳಿಂದಾಗಿ ಎಷ್ಟುಮಟ್ಟಿನ ಉಳಿತಾಯವೂ ಸೌಕರ್ಯವೂ ಸಾಧ್ಯವಾಗಿದೆಯೆಂಬುದು ಕಣ್ಣಿಗೆ ಕಾಣುತ್ತಿದೆ.
ಐದು ತಿಂಗಳ ಹಿಂದೆ ಬಂದೆರಗಿದ ಕೊರೋನಾ ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಸರ್ಕಾರ ತೋರಿರುವ ದಕ್ಷತೆ ದಾಢ್ರ್ಯವಂತಿಕೆಗಳಂತೂ ವಿದೇಶಗಳ ಮೆಚ್ಚಿಕೆಗೂ ಪಾತ್ರವಾಗಿವೆ. ಈ ಹಲವಾರು ಕ್ರಮಗಳು ತಾತ್ಕಾಲಿಕ ಜನಪ್ರಿಯತೆಯ ಆಕಾಂಕ್ಷೆಯಿಂದ ರೂಪಿತವಾದವಲ್ಲವೆಂಬುದನ್ನೂ ಇವುಗಳ ಹಿಂದೆ ದೃಢವಾದ ಆತ್ಮನಿರ್ಭರತೆಯ ಮತ್ತು ಸ್ವಾವಲಂಬನೆಯ ಲಕ್ಷ್ಯವಿರುವುದನ್ನೂ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಸಂದೇಶವು ಸ್ಫುಟಪಡಿಸಿದೆ. ಅಭ್ಯುದಯಸಂಬಂಧಿತ ಸವಾಲುಗಳಿಂದ ಹಿಡಿದು ವಿದೇಶಸಂಬಂಧಗಳ ಜಟಿಲತೆಗಳವರೆಗೆ ಸಮಸ್ತ ಸಮಸ್ಯೆಗಳಿಗೂ ಏಕೈಕ ಮತ್ತು ನಿರ್ಣಾಯಕ ಪರಿಹಾರವೆಂದರೆ ಸ್ವಾವಲಂಬನೆ-ಸಮೃದ್ಧಿ, ಸಶಕ್ತತೆಗಳ ದೃಢತೆ. ಈ ಮಹತ್ತ್ವದ ಸಂದೇಶವನ್ನೇ ಪ್ರಧಾನಿಗಳ ಆತ್ಮನಿರ್ಭರತೆಯ ಆವಾಹನೆ ಸಂಕೇತಿಸುತ್ತಿರುವುದು. ಬಹುಕಾಲದಿಂದ ದೇಶಕ್ಕೆ ತೀವ್ರ ಆವಶ್ಯಕತೆ ಇದ್ದದ್ದು ಇಂತಹ ಸಮರ್ಥ ಮತ್ತು ದಾರ್ಶನಿಕ ನಾಯಕತ್ವದ್ದೇ. ಈ ಉಜ್ಜ್ವಲ ಪ್ರಸ್ಥಾನಕ್ಕೆ ಸಾಕ್ಷಿಗಳಾಗಿರುವುದು ಈ ಪೀಳಿಗೆಯವರ ಮಹದ್ಭಾಗ್ಯ.