ಸಮರ್ಥ ಭಾರತವನ್ನು ಕಟ್ಟಬೇಕಾದರೆ ಅಂತಹ ಭಾರತದ ಚಿತ್ರ ಹೇಗಿರಬೇಕು ಎಂಬ ಕನಸನ್ನು ನಾವು ನಮ್ಮ ಮುಂದಿಟ್ಟುಕೊಳ್ಳಬೇಕು. ಸ್ವಾಮಿ ವಿವೇಕಾನಂದರು, ಗಾಂಧಿಯವರು (ಈ ಕುರಿತು ‘ಮೇರೇ ಸಪ್ನೋಂ ಕಾ ಭಾರತ್’ ಎಂಬ ಗಾಂಧಿಯವರ ಪುಸ್ತಕವಿದೆ.) ಸೇರಿದಂತೆ ಅನೇಕ ಮಹಾಪುರುಷರು ಬೇರೆಬೇರೆ ಸಂದರ್ಭಗಳಲ್ಲಿ ಭಾರತದ ಬಗೆಗಿನ ತಮ್ಮತಮ್ಮ ಚಿತ್ರಣಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಸಮರ್ಥ ಭಾರತವೆಂದರೆ ಅದು ಒಗ್ಗಟ್ಟಿನ ಏಕಾತ್ಮ ಭಾರತ. ಅನೇಕ ರಾಜ್ಯಗಳು, ಭಾಷೆಗಳು, ಮತ ಪಂಥ ಸಂಪ್ರದಾಯಗಳು, ಹೀಗೆ ವಿಭಿನ್ನ ರೀತಿಯಲ್ಲಿರುವ ವೈವಿಧ್ಯಮಯ ದೇಶ ಭಾರತ. ಇಲ್ಲಿ ಅನೇಕ ರೀತಿಯ ಸವಾಲುಗಳು ಎದುರಾಗಿವೆ. 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರವೂ ದೇಶದ ಏಕಾತ್ಮತೆ, ಐಕಮತ್ಯಕ್ಕೆ ಸವಾಲಾಗುವ ಅನೇಕ ಸಂದರ್ಭಗಳನ್ನು ಭಾರತ ಎದುರಿಸಿದೆ. ನಮ್ಮ ಜನರಲ್ಲಿರುವ ಆಂತರಿಕ ಒಗ್ಗಟ್ಟಿನ, ನಮ್ಮ ಪೂರ್ವಜರ ಶ್ರಮದ ಫಲವಾಗಿಯೋ ಅಥವಾ ಸಂಕಟದ ಸಂದರ್ಭಗಳಲ್ಲಿ ನೇತೃತ್ವ ವಹಿಸಿದಂತಹವರ ಪರಿಶ್ರಮದಿಂದಾಗಿಯೋ ಭಾರತ ಇಂದಿಗೂ ಏಕಾತ್ಮವಾಗಿ, ಗಟ್ಟಿಯಾಗಿ ಉಳಿದಿದೆ. ಇದು ಹೀಗೆಯೇ ಇರುತ್ತದೆಂದು ಆಶಿಸೋಣ.
ಐದು ಸಾವಿರ ವರ್ಷಗಳಿಗೂ ಮೀರಿ ಹರಿದುಬಂದಿರುವ ಭಾರತೀಯ ಇತಿಹಾಸ, ಪರಂಪರೆ, ಸಂಸ್ಕøತಿಯ ಪ್ರವಾಹದಲ್ಲಿ ಅನೇಕ ದೋಷಗಳು, ಕಳಂಕಗಳು ಆಗೀಗ ಇದ್ದಿರಬಹುದು. ಇದು ಯಾವುದೇ ಸಮಾಜದಲ್ಲಿ ಇರುವಂತಹದ್ದೇ ಆಗಿದೆ. ಅವುಗಳನ್ನು ಮೀರಿ ಅಥವಾ ನಿವಾರಿಸಿಕೊಂಡು ಬದುಕಬಲ್ಲ, ಇಡೀ ಜಗತ್ತಿಗೆ ಮಾದರಿಯಾಗಬಲ್ಲ ಒಂದು ಸಮಾಜವನ್ನು ಕಟ್ಟಬೇಕಾದರೆ ನಮ್ಮ ಜನರಲ್ಲಿ ಸ್ವಾಭಿಮಾನವನ್ನು ತುಂಬಬೇಕು. ದೇಶದ ಶಕ್ತಿ ಇರುವುದು ಸಮಾಜದ ಜನರ ಒಗ್ಗಟ್ಟಿನಲ್ಲಿ, ಸಮಾಜ-ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ, ಅಲ್ಲಿಯ ಜನರ ಜೀವನದಲ್ಲಿರುವ ಉದಾತ್ತತೆಯಲ್ಲಿ. ಸಶಕ್ತ ಭಾರತದಲ್ಲಿ ಒಗ್ಗಟ್ಟಿನ ಭಾಗವೂ ಇದೆ. ಭಾಷೆ, ಮತ, ಸಂಪ್ರದಾಯಗಳಿಂದ ಮೇಲೆದ್ದು ಒಗ್ಗಟ್ಟಾಗಬೇಕು. ನಮ್ಮ ಆರ್ಥಿಕ ಬಲ, ಸೈನ್ಯದ ಬಲ, ವಿಜ್ಞಾನದ ಬಲ, ಶಿಕ್ಷಣ – ಇವುಗಳಿಂದ ಸಶಕ್ತ ಭಾರತ ನಿರ್ಮಾಣವಾಗುತ್ತದೆ. ಇಡೀ ಸಮಾಜ ಒಂದಾಗಿ ನಿಲ್ಲಬೇಕು. ಎದುರಾದ ಸವಾಲನ್ನು, ಸಂಕಷ್ಟವನ್ನು ಸಂಘಟಿತವಾಗಿ ಸಮರ್ಥವಾಗಿ ಎದುರಿಸಿ ಉಳಿದುಕೊಂಡಿರುವ, ಬೆಳೆದುಬಂದಿರುವ ಅನೇಕ ದೇಶಗಳನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ. ಸ್ವಾಭಿಮಾನಿ ಭಾರತ, ಸಶಕ್ತ ಭಾರತ, ಸಂಘಟಿತ ಭಾರತ, ಏಕಾತ್ಮ ಭಾರತ – ಇವು ಸಮರ್ಥ ಭಾರತಕ್ಕೆ ಅಡಿಗಲ್ಲುಗಳು.
ಇತ್ತೀಚೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ‘ಆತ್ಮನಿರ್ಭರ ಭಾರತ’ ಎಂಬ ಕಲ್ಪನೆಯನ್ನು ಪ್ರಸ್ತಾವಿಸಿದರು. ಆತ್ಮನಿರ್ಭರ ಭಾರತ ಎಂದರೆ ಸ್ವಾವಲಂಬೀ ಸ್ವಯಂಪೂರ್ಣ ಭಾರತ. ಸ್ವಯಂಪೂರ್ಣತೆ ಮತ್ತು ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ಕ್ಷೇತ್ರದ ವಿಷಯವಲ್ಲ. ಇದರಲ್ಲಿ ಆರ್ಥಿಕತೆಗೆ ಪ್ರಾಧಾನ್ಯವಿದ್ದರೂ ಸ್ವಯಂಪೂರ್ಣತೆ ಅದನ್ನು ಮೀರಿರುವಂತಹದ್ದು ಮತ್ತು ವ್ಯಾಪಕವಾದದ್ದು.
ಆಧ್ಯಾತ್ಮಿಕ ತಳಹದಿ
ನನಗೆ ನಾನೇ ಹೊರೆಯಾಗದಂತೆ, ಆತ್ಮಕ್ಕೆ ನಾನು ಹೊರೆಯಾಗದಂತೆ ಇರುವುದು ಹೇಗೆ? ಇದರಲ್ಲಿ ಒಂದು ಆಧ್ಯಾತ್ಮಿಕ ಆಯಾಮವೂ ಅಡಗಿದೆ. ನನ್ನ ಮನೆಗೆ ನಾನು ಭಾರವಾದಾಗ ಆ ಮನೆ ಸಂಕಷ್ಟಕ್ಕೆ ಸಿಲುಕುತ್ತದೆ. ಅದು ಮುನ್ನಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ನನ್ನ ಮನೆಗೆ, ನನ್ನ ಸಮಾಜಕ್ಕೆ, ನನ್ನ ದೇಶಕ್ಕೆ ಅನುಕೂಲಕರವಾಗಿ, ಸೃಜನಾತ್ಮಕವಾಗಿ ಕೊಡುಗೆ ನೀಡುವವನಾದಾಗ ನಾನು ನನಗೆ ಭಾರವಾಗುವುದಿಲ್ಲ, ನಾಡಿಗೆ ಭಾರವಾಗುವುದಿಲ್ಲ. ನನಗೆ ನಾನೇ ಭಾರವಾಗದಂತೆ ಇರಬೇಕಾದರೆ, ನನ್ನೊಳಗಿನ ಚೇತನವನ್ನು ನಾನು ಜಾಗೃತವಾಗಿಡಬೇಕು. ನನ್ನೊಳಗೆ ಆ ಸಾಮಥ್ರ್ಯವನ್ನೂ ಕ್ಷಮತೆಯನ್ನೂ ತುಂಬಿಕೊಳ್ಳಬೇಕು. ಆತ್ಮವಿಶ್ವಾಸದಿಂದ ನಾನು ಪುಟಿದೇಳಬೇಕು. ನನ್ನೊಳಗೆ ಜ್ಞಾನದ ಹರವನ್ನು ಹರಡಬೇಕು. ಆಗ ನಾನು ಸಮರ್ಥನಾಗುತ್ತೇನೆ. ಇದೇ ಮಾತು ಸಮಾಜಕ್ಕೂ ದೇಶಕ್ಕೂ ಅನ್ವಯಿಸುತ್ತದೆ.
ನಮ್ಮ ದೇಶದಲ್ಲಿ ರಾಷ್ಟ್ರಪುರುಷ ಎಂಬ ಕಲ್ಪನೆಯಿದೆ. ಪುರುಷಸೂಕ್ತದಲ್ಲಿ ‘ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್’ ಎಂದು ಹೇಳಲಾಗಿದೆ. ರಾಷ್ಟ್ರಪುರುಷನ ಕಲ್ಪನೆ ಇರುವುದು, ಇಡೀ ರಾಷ್ಟ್ರ ಒಬ್ಬ ಪರುಷನಂತೆ ಎದ್ದು ನಿಲ್ಲಬೇಕು ಎಂಬ ಅರ್ಥದಲ್ಲಿ. ಒಬ್ಬ ವ್ಯಕ್ತಿ ತನ್ನ ಕಾಲ ಮೇಲೆ ನಿಂತಾಗ ಮಾತ್ರ ಅವನನ್ನು ಸ್ವಾವಲಂಬಿ ಎನ್ನಬಹುದು. ಆಗ ಆತ ತನ್ನ ಕಣ್ಣುಗಳಿಂದ ನೋಡುತ್ತಾನೆ, ತನ್ನ ಮನಸ್ಸಿನಿಂದ ತಿಳಿದುಕೊಳ್ಳುತ್ತಾನೆ, ತನ್ನ ಬುದ್ಧಿಯಿಂದ ಅದನ್ನು ವಿವೇಚಿಸುತ್ತಾನೆ ಮತ್ತು ತನ್ನ ವಾಣಿಯಿಂದ ಅದನ್ನು ವ್ಯಕ್ತಪಡಿಸುತ್ತಾನೆ. ಅಂತಹವನನ್ನು ಸಮರ್ಥ ಸ್ವಾವಲಂಬಿ ವ್ಯಕ್ತಿ ಎನ್ನಬಹುದು.
ಸ್ವಾವಲಂಬಿಯಾಗಿ ಬದುಕಬೇಕು ಎನ್ನುವುದು ಎಲ್ಲ ಮನುಷ್ಯರ ಸದಾ ಕಾಲದ ಇಚ್ಛೆ. ಇದು ಸ್ವಾಭಿಮಾನವನ್ನೂ ಕಲಿಸುತ್ತದೆ. ಇನ್ನೊಬ್ಬರ ಎದುರು ಕೈನೀಡಬೇಕಾದಾಗ, ಇನ್ನೊಬ್ಬರ ಆಶ್ರಯ ಪಡೆಯಬೇಕಾದಾಗ ಮನುಷ್ಯ ಕುಗ್ಗುತ್ತಾನೆ. ನಡೆಯಲು ಕಷ್ಟಪಡುತ್ತಿದ್ದಾನೆಂದು ನಾವು ಕೈಹಿಡಿಯಲು ಹೋದಾಗ ‘ಬೇಡ ಬೇಡ, ನಾನು ನಡೆಯುತ್ತೇನೆ, ಹತ್ತುತ್ತೇನೆ’ ಎಂದು ಹೇಳುವುದನ್ನು ನಾವು ನೋಡುತ್ತೇವೆ. ನಾನು ನನ್ನ ಮೇಲೆಯೇ ನಿಂತಿದ್ದೇನೆ, ನಾನು ನನಗೇ ಹೊರೆಯಾಗಿಲ್ಲ ಎಂಬ ವಿಶ್ವಾಸ ಅವರ ಮನಸ್ಸಿನಲ್ಲಿ ಇರುತ್ತದೆ. ಇದರಿಂದಾಗಿ ಅಂತಹವರು ಇನ್ನೊಬ್ಬರ ಸಹಾಯವಿಲ್ಲದೆ ನಾನು ನಿಲ್ಲಬಲ್ಲೆ, ನಡೆಯಬಲ್ಲೆ, ಹತ್ತಬಲ್ಲೆ ಎನ್ನುವುದನ್ನು ತೋರಿಸಲು ಸದಾಕಾಲ ಪ್ರಯತ್ತಿಸುತ್ತಿರುತ್ತಾರೆ. ಇದು ಮನುಷ್ಯನ ಸಹಜ ಸ್ವಭಾವ.
ಮನುಷ್ಯನಂತೆಯೇ ಒಂದು ಸಮಾಜ, ರಾಷ್ಟ್ರವೂ ಕೂಡಾ ಹೀಗೆ ಸ್ವಾವಲಂಬಿಯೂ ಸ್ವಯಂಪೂರ್ಣವೂ ಆಗಿರಬೇಕು. ಇದೇ ಆತ್ಮನಿರ್ಭರತೆ. ಭರ ಎಂದರೆ ಭರಿಸುವಂತಹದ್ದು, ತುಂಬುವಂತಹದ್ದು ಎಂದರ್ಥ. ನಿರ್ಭರ ಎಂದರೆ ವಿಶೇಷವಾಗಿ ತುಂಬುವಂತಹದ್ದು. ಒಂದು ರಾಷ್ಟ್ರವು ಆತ್ಮನಿರ್ಭರವಾಗಲು ಸ್ವಾವಲಂಬಿಯಾಗುವುದರ ಜೊತೆಗೆ ಸ್ವಾಭಿಮಾನ, ಸಂಘಟನೆ, ಸಶಕ್ತತೆಯನ್ನು ಒಳಗೊಂಡಿರಬೇಕಾಗುತ್ತದೆ.
ಸಮಸಾಮಯಿಕ ಚಿಂತನೆ
ಪ್ರಧಾನಮಂತ್ರಿ ಮೋದಿ ಅವರು ತಮ್ಮ ಭಾಷಣದಲ್ಲಿ ಮನುಸ್ಮøತಿಯ ‘ಸರ್ವಂ ಆತ್ಮವಶಂ ಸುಖಮ್’ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ‘ಸರ್ವಂ ಪರವಶಂ ದುಃಖಮ್, ಸರ್ವಂ ಆತ್ಮವಶಂ ಸುಖಮ್’ ಎಂಬುದು ಪ್ರಾಚೀನೋಕ್ತಿ. ಅಂದರೆ ಯಾವುದು ಪರಾಧೀನವಾಗಿದೆಯೋ ಅದು ದುಃಖವನ್ನು ಕೊಡುತ್ತದೆ. ಯಾವುದು ಸ್ವಾಧೀನವಾಗಿರುತ್ತದೋ ಅದು ಸುಖವನ್ನು ತರುತ್ತದೆ. ಪರಾವಲಂಬನೆ ಮತ್ತು ಪರಾಧೀನತೆ ದುಃಖಕ್ಕೆ ಕಾರಣ; ಸ್ವಾವಲಂಬನೆ ಮತ್ತು ಸ್ವಾಧೀನತೆ ಸುಖಕ್ಕೆ ಮೆಟ್ಟಿಲುಗಳಾಗುತ್ತವೆ – ಎಂಬ ಮನುಸ್ಮøತಿಯ ಈ ವಾಕ್ಯವನ್ನು ಪ್ರಧಾನಮಂತ್ರಿಗಳು ಉಲ್ಲೇಖಿಸಿದ್ದು, ಅತ್ಯಂತ ಸಮಯೋಚಿತವಾಗಿದೆ.
ಸಂಪೂರ್ಣ ದೇಶ ಆತ್ಮವಶವಾಗಬೇಕು. ನನ್ನ ಕೈಯಲ್ಲಿ ನಾನಿದ್ದೇನೆ ಎಂದು ಒಂದು ರಾಷ್ಟ್ರ ಯಾವಾಗ ಯೋಚನೆ ಮಾಡಬಹುದು? ನಮಗೆ ಬೇಕಾದ ಆವಶ್ಯಕತೆಗಳನ್ನು ನಾವೇ ಪೂರೈಸಿಕೊಂಡು ನಿಲ್ಲುವಂತಾದಾಗ ನಾವು ನಮ್ಮ ಕೈಯಲ್ಲಿದ್ದೇವೆ ಎನ್ನಬಹುದು. ನಮಗೆ ಬೇಕಾಗುವ ಮನೋರಂಜನೆ, ಉಪಭೋಗದ ವಸ್ತುಗಳಿಗಾಗಿ ನಾವು ಇನ್ನೊಂದು ದೇಶವನ್ನು ಕೇಳಿಕೊಂಡರೆ ಅದು ವಿಶೇಷವೆನಿಸದು. ಆತ್ಮನಿರ್ಭರತೆ ಎಂದರೆ ಹೊರಗಿನ ಎಲ್ಲವಕ್ಕೂ ಬಾಗಿಲು ಮುಚ್ಚುವುದು ಎಂದು ಅರ್ಥವಲ್ಲ. ಜೀವನಾವಶ್ಯಕ ವಸ್ತುಗಳಿಗಾಗಿ ಕೈಯೊಡ್ಡಬಾರದು. ಒಂದು ರಾಷ್ಟ್ರದ ಜೀವನಾವಶ್ಯಕತೆಗಳು ಯಾವುವು? ಆಧುನಿಕ ಭಾಷೆಯಲ್ಲಿ ಹೇಳುವುದಾದರೆ, ಅನ್ನದ ಭದ್ರತೆ. ನಮ್ಮ ಬೆಳೆಯನ್ನು ನಾವೇ ಬೆಳೆಯಬೇಕು. ಆಹಾರದಲ್ಲಿ ಸ್ವಾವಲಂಬಿಗಳಾಗುವುದು ಆತ್ಮನಿರ್ಭರತೆಯ ಬಹುಮುಖ್ಯ ಭಾಗ.
ನಾವು ಸ್ವಯಂಪೂರ್ಣರೂ, ಸ್ವಾವಲಂಬಿಗಳೂ, ಆತ್ಮನಿರ್ಭರರೂ ಆಗುವುದಕ್ಕೆ ಮೂಲಾವಶ್ಯಕಗಳಾದ ಸಂಗತಿಗಳು ಅನ್ನ, ಅರಿವು, ಬಟ್ಟೆ, ವಸತಿ, ಔಷಧಿ. ಇವುಗಳಲ್ಲಿ ನಾವು ಪೂರ್ಣ ಸ್ವಾವಲಂಬನೆಯನ್ನು ಸ್ವಯಂಪೂರ್ಣತೆಯನ್ನು ಸಾಧಿಸಬೇಕು. ನಮಗೆ ಅಗತ್ಯವಾದ ಬೆಳೆಯನ್ನು ಬೆಳೆಯಬೇಕು, ವಸ್ತುಗಳನ್ನು ತಯಾರಿಸಬೇಕು. ಜಗತ್ತಿಗೆ ಬೇಕಾಗುವ ಆಹಾರ ಮತ್ತು ಉತ್ಪನ್ನಗಳನ್ನು ನೀಡುವಂತಹ ಮಟ್ಟಕ್ಕೆ ಭಾರತ ಬೆಳೆಯಬೇಕು. ನಿಸ್ಸಂಶಯವಾಗಿ ಇದಕ್ಕೆ ಅಗತ್ಯವಾದ ಸಂಪನ್ಮೂಲಗಳು ಭಾರತದಲ್ಲಿವೆ. ಹಲವು ವರ್ಷ ಹಿಂದೆ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಎನ್ನುವ ಒಂದು ಸಂಸ್ಥೆ ‘ಅನ್ನಂ ಬಹು ಕುರ್ವೀತ’ ಎನ್ನುವ ಒಂದು ಸಂಶೋಧನಾ ಗ್ರಂಥವನ್ನು ಪ್ರಕಟಿಸಿತು. ಭಾರತದಲ್ಲಿ ಹೇಗೆ ಬೆಳೆಯನ್ನು ಬೆಳೆಯಬಹುದು ಮತ್ತು ಸ್ವಾವಲಂಬಿಯಾಗಬಹುದು ಎನ್ನುವುದನ್ನು ಆ ಗ್ರಂಥದಲ್ಲಿ ವಿವರವಾಗಿ ಚಿತ್ರಿಸಿದ್ದಾರೆ. ಭಾರತದ ಎಲ್ಲ ಪ್ರಜೆಗಳಿಗೆ ಎರಡು ಹೊತ್ತಿನ ಊಟವನ್ನು ಕೊಡುವಂತಾಗಬೇಕು. ಅದಕ್ಕೆ ಅಗತ್ಯವಾದ ಅನ್ನದಾನವನ್ನು ಒಂದು ವ್ಯಾಪಕವಾದ ಆಂದೋಲನದ ರೀತಿಯಲ್ಲಿ ಮಾಡಬೇಕು.
ಐತಿಹಾಸಿಕ ವಿಕ್ರಮಗಳು
ಇನ್ನೊಂದು ಆವಶ್ಯಕತೆ ಔಷಧಿ. ಕೊರೋನಾ ಸಂಕಟದ ಸಮಯದಲ್ಲಿ ಅನೇಕ ದೇಶಗಳ ಕೋರಿಕೆಯ ಮೇರೆಗೆ ಭಾರತ, ಅವುಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಸೆಟಮಾಲ್ಗಳನ್ನು ಕಳುಹಿಸಿಕೊಟ್ಟಿದೆ. ಅನೇಕ ಸಂಗತಿಗಳಿಗೆ ನಾವು ಬೇರೆ ದೇಶಗಳ ಮೇಲೆ ಅವಲಂಬಿಸಬೇಕಾದ ಸನ್ನಿವೇಶವೂ ಎದುರಾಯಿತು. (ಉದಾ: ಪಿಪಿಇ – ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್ಮೆಂಟ್, ವೆಂಟಿಲೇಟರ್ಗಳು ಇತ್ಯಾದಿ). ಆದರೆ ಕಳೆದ ಎರಡು ತಿಂಗಳಲ್ಲಿ ಭಾರತ ಆತ್ಮನಿರ್ಭರತೆಯ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ. ಇಂತಹ ಸಂಕಟದ ಪರಿಸ್ಥಿಯಲ್ಲಿ ಭಾರತದ ಜನತೆ ಮತ್ತು ಸರ್ಕಾರ ಒಂದಾಗಿ ಸಾಧಿಸಿದ ಇಂತಹ ಅನೇಕ ವಿಕ್ರಮಗಳು ಇತಿಹಾಸಾರ್ಹ ಸಂಗತಿಗಳಾಗಿವೆ. ಇದು ಮುಂದಿನ ಪೀಳಿಗೆಗೆ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದವುಗಳು. ಒಂದು ಸಂಕಟದ ಸಂದರ್ಭದಲ್ಲಿ ಇಸ್ರೇಲ್, ಜಪಾನ್, ಜರ್ಮನಿ, ಬ್ರಿಟನ್ ಹೇಗೆ ನಡೆದುಕೊಂಡವು ಎಂಬ ಕಥೆಗಳನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಆದರೆ ಈ ಬಾರಿ ಕೊರೋನಾ ಸಂಕಟವನ್ನು ಭಾರತದ ಜನತೆ, ಸಮಾಜ, ಸರ್ಕಾರ ಮತ್ತು ನೇತೃತ್ವ ಹೇಗೆ ಎದುರಿಸಿತು ಎಂಬ ಉದ್ಬೋಧಕ ಸಂಗತಿಗಳು ನಮ್ಮ ಮುಂದಿನ ಪೀಳಿಗೆಗೆ ಅತ್ಯಂತ ಆನಂದ ಮತ್ತು ವಿಶ್ವಾಸವನ್ನು ತುಂಬುವ ಸಂಗತಿಗಳಾಗಿ ಉಳಿಯಲಿವೆ.
ಹಾಲು, ಹಣ್ಣು, ತರಕಾರಿಗಳಲ್ಲಿಯೂ ನಾವು ಪೂರ್ಣ ಸ್ವಾವಲಂಬನೆಯನ್ನು ಸಾಧಿಸಬೇಕು. ಇದು ಕೇವಲ ಅಂಕಿ-ಅಂಶಗಳ ದೃಷ್ಟಿಯಿಂದಲ್ಲ. ದೇಶದ ಪ್ರತಿಯೊಂದು ಮನೆಗೂ ಪ್ರತಿಯೊಂದು ಮಗುವಿಗೂ ಪೌಷ್ಟಿಕಾಂಶಪೂರ್ಣ ಹಾಲು ಸಿಗುವುದು ಹೇಗೆ? ಇದಕ್ಕಾಗಿ ‘ಕ್ಷೀರ ಕ್ರಾಂತಿ’ ಎಂಬ ಪ್ರಯತ್ನ ಅನೇಕ ವರ್ಷಗಳ ಹಿಂದೆಯೇ ನಡೆದಿದೆ. ಅದು ಇನ್ನಷ್ಟು ಹೆಚ್ಚು ಸಾರ್ಥಕವಾಗಿ ಮೂಲೆಮೂಲೆಗಳನ್ನು ಮುಟ್ಟುವಂತೆ ಮಾಡಬೇಕು. ಅದಕ್ಕಾಗಿ ನಾವು ದೇಶದ ಉದ್ದಗಲಕ್ಕೂ ದೇಸೀ ಗೋತಳಿಗಳನ್ನು ವೃದ್ಧಿಸುವ, ಸಂರಕ್ಷಿಸುವ ಒಂದು ದೊಡ್ಡ ಅಭಿಯಾನವನ್ನು ಕೈಗೊಳ್ಳಬೇಕು. ಇದರಿಂದ ಮಕ್ಕಳಿಗೆ ಉತ್ತಮ ಹಾಲನ್ನು ಕೊಡುವುದರ ಜೊತೆಗೆ ನಾವು ಸ್ವಾವಲಂಬಿಗಳಾಗುತ್ತೇವೆ.
ಭಾರತ ಆತ್ಮನಿರ್ಭರವಾಗುವ ಮೊದಲ ಮೆಟ್ಟಿಲು ಗ್ರಾಮಭಾರತವನ್ನು ಸಶಕ್ತಗೊಳಿಸುವುದು. ನಮ್ಮ ದೇಶದ ಹಳ್ಳಿ ಜೀವನವನ್ನು ಸ್ವಾವಲಂಬಿ ಸ್ವಯಂಪೂರ್ಣಗೊಳಿಸುವ ಅತ್ಯಂತ ಮಹತ್ತ್ವದ ಕಾರ್ಯಕ್ಕೆ ಎಲ್ಲ ಗಮನವೂ ಅಗತ್ಯ. ಗ್ರಾಮಜೀವನ ಸಶಕ್ತಗೊಂಡಾಗ ಕೃಷಿ, ಗ್ರಾಮಕೈಗಾರಿಕೆ, ಕುಶಲಕೆಲಸ ಮುಂತಾದವು ಇಂದಿನ ಪರಿಸ್ಥಿತಿಗೆ ತಕ್ಕಂತೆ ವಿಕಸಿತಗೊಂಡು ಭಾರತವನ್ನು ಆತ್ಮನಿರ್ಭರಗೊಳಿಸುತ್ತವೆ. ಇಂದು ಬಹುದೊಡ್ಡ ಸವಾಲಾಗಿರುವ ವಲಸೆಕಾರ್ಮಿಕರ ಸಂಕಟವನ್ನು ಬಹುಮಟ್ಟಿಗೆ ಪರಿಹರಿಸುವ ಉಪಾಯ ಅದೇ. ತನ್ನ ಪರಿಸರದಲ್ಲೇ ಗೌರವಯುತವಾಗಿ ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಇದ್ದಾಗ ನಮ್ಮ ಜನ ದೂರದ ನಗರಗಳಿಗೆ ಗುಳೆಯೆದ್ದು ಕೊಳಚೆಪ್ರದೇಶದ ನರಕಗಳಲ್ಲಿ ಜೀವಿಸಬೇಕಾದ ದುಃಸ್ಥಿತಿ ಬಾರದು.
ಅಬ್ದುಲ್ ಕಲಾಂ ಸಂದೇಶ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಒಂದು ಯುವಕರ ಅಧಿವೇಶನಕ್ಕೆ ಡಾ. ಅಬ್ದುಲ್ ಕಲಾಂ ಅವರು ಒಂದು ಸಂದೇಶವನ್ನು ಕಳುಹಿಸಿದ್ದರು. ಆ ಸಂದೇಶದಲ್ಲಿ ಮೂರು ಸಂಗತಿಗಳನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದರು. ಒಂದು, ಆಹಾರದಲ್ಲಿ ಸ್ವಾವಲಂಬನೆ. 350 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯನ್ನು ಮಾಡುವಂತಾಗಬೇಕು. ಎರಡು, ನಮಗೆ ಅಗತ್ಯವಾದಷ್ಟು ವಿದ್ಯುತ್ತನ್ನು ನಾವೇ ಉತ್ಪಾದಿಸಬೇಕು. ಭಾರತ Energy securityಯನ್ನು ಸಾಧಿಸಬೇಕು. ಶಕ್ತಿಯ ಮೂಲಗಳನ್ನು ಅಭಿವೃದ್ಧಿಪಡಿಸಿ, ಅದರಲ್ಲಿ ಸ್ವಾವಲಂಬನೆಯನ್ನೂ ಸ್ವಯಂಪೂರ್ಣತೆಯನ್ನೂ ಸಾಧಿಸಬೇಕು. ಮೂರನೆಯದಾಗಿ, ಇಂದಿನ ಅಗತ್ಯತೆಯ ದೃಷ್ಟಿಯಿಂದ Material science. Material
engineering, Nano-engineeringಗಳಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ನಾವು ಈ ಮೂರು ವಿಷಯಗಳಲ್ಲಿ ಸ್ವಯಂಪೂರ್ಣರಾಗಬೇಕಾದ ಅತ್ಯಂತ ಆವಶ್ಯಕವಿದೆ ಎಂದು ಅವರು ಹೇಳಿದರು. ಇವು ಮೂರೂ ಆತ್ಮನಿರ್ಭರತೆಗೆ ತುಂಬಾ ಆವಶ್ಯಕ ಆಯಾಮಗಳು.
ದೇಶದ ರಕ್ಷಣಾ ರಂಗದಲ್ಲೂ ಪೂರ್ಣ ಸ್ವಾವಲಂಬನೆ ನಮ್ಮ ಗುರಿಯಾಗಬೇಕು. ದೇಶ ಇನ್ನೊಬ್ಬರ ಆಕ್ರಮಣಕ್ಕೆ ತುತ್ತಾಗುವ ಎಲ್ಲ ಸಾಧ್ಯತೆಗಳನ್ನೂ ಹಿಮ್ಮೆಟ್ಟಿಸುವ ಸಶಕ್ತ ಮಿಲಿಟರಿ ಶಕ್ತಿಯನ್ನು ರೂಪಿಸಿಕೊಳ್ಳಬೇಕು.
ವ್ಯವಸ್ಥೆಗಳು ಮತ್ತು ಸಂಸ್ಥೆಗಳು (Systems and Institutions)
ಮೊದಲನೆಯದಾಗಿ: ಭಾರತ ಆತ್ಮನಿರ್ಭರವಾಗುವುದಕ್ಕೆ ಇಂದಿನ ನಮ್ಮ ಅನೇಕ ವ್ಯವಸ್ಥೆ ಮತ್ತು ಸಂಸ್ಥೆಗಳು ಅಡಚಣೆಗಳಾಗಿ ನಿಂತಿವೆ. ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯ ಅನೇಕ ಸಂಗತಿಗಳು ಸ್ವಾತಂತ್ರ್ಯ ಬಂದು 73 ವರ್ಷಗಳ ನಂತರವೂ ಅನೇಕ ಮುಖಗಳಲ್ಲಿ ಕೆಲಸ ಮಾಡುತ್ತಿವೆ. ಇದರಿಂದ ಮುಕ್ತಿ ಪಡೆಯದೆ ಆತ್ಮನಿರ್ಭರ ಭಾರತಕ್ಕೆ ಅಗತ್ಯ ಪೂರಕ ವಾತಾವರಣವನ್ನು ನಿರ್ಮಾಣ ಮಾಡಲು ಸಾಧ್ಯವಾಗಲಾರದು. ಹೀಗಾಗಿ ನಮ್ಮ ಸಾಂಸ್ಥಿಕ ರಚನೆ ಮತ್ತು ವ್ಯವಸ್ಥೆಗಳಲ್ಲಿ ಬದಲಾವಣೆಗಳಾಗಬೇಕಾದ ಆವಶ್ಯಕತೆಯಿದೆ. ನಮ್ಮ ಶಿಕ್ಷಣ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಚುನಾವಣಾ ವ್ಯವಸ್ಥೆ – ಈ ಎಲ್ಲವೂ ಇಂದು ಪ್ರಶ್ನಾರ್ಹವಾದ ಸ್ಥಿತಿಯಲ್ಲಿವೆ. ಅವುಗಳನ್ನು ನಾವು ಭಾರತೀಯ ಪದ್ಧತಿಗೆ, ಭಾರತೀಯ ವಾತಾವರಣಕ್ಕೆ, ಭಾರತೀಯ ಜನಮಾನಸಕ್ಕೆ ಹೊಂದಿಕೆಯಾಗುವಂತೆ ಪುನಃ ಎರಕಹೊಯ್ಯಬೇಕಾದ ಆವಶ್ಯಕತೆ ಇದೆ.
ನಮ್ಮ ಜನಮಾನಸವನ್ನೂ ಕೂಡಾ ಭಾರತವನ್ನು ಆತ್ಮನಿರ್ಭರರಾಗುವತ್ತ ಕೆಲ ಪರಿವರ್ತನೆಗಳಿಗೆ ತೆರೆದುಕೊಳ್ಳುವಂತೆ ಮಾಡಬೇಕು. ಜನಸಾಮಾನ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಎರಡನೆಯದಾಗಿ: ಜನರು ಪರಿಶ್ರಮಿಗಳಾಗಬೇಕು. ನಮ್ಮ ರಾಜ್ಯ, ಕೇಂದ್ರಸರ್ಕಾರಗಳ ಆಡಳಿತದಲ್ಲಿರುವ ಎಲ್ಲ ಅಧಿಕಾರಿಗಳೂ ಪೊಲೀಸ್ ವ್ಯವಸ್ಥೆಯೂ ಕೊರೋನಾ ಸಂದರ್ಭದಲ್ಲಿ ಜನರಿಗಾಗಿ ಸಕ್ರಿಯವಾಗಿ ಹಗಲಿರುಳು ಕೆಲಸ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಗೆ ಆ ಸಾಮಥ್ರ್ಯ, ಶಕ್ತಿ ಇದೆ. ಸಂಕಟದ ಕಾಲದಲ್ಲೇನೋ ಅವರು ಎದ್ದು ನಿಂತರು. ಆದರೆ ಎಲ್ಲ ಕಾಲದಲ್ಲಿಯೂ ಅವರು ಇದನ್ನು ಮಾಡುವಂತಾಗುವುದು ಹೇಗೆ? ಅಂತಹ ಒಂದು ಪರಿಶ್ರಮದ, ರಾಷ್ಟ್ರನಿಷ್ಠೆಯ ಕಡೆಗೆ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ. ಪರಿಶ್ರಮವಿಲ್ಲದೆ ಸಮರ್ಥ ಆತ್ಮನಿರ್ಭರ ದೇಶವನ್ನು ಕಟ್ಟಲು ಸಾಧ್ಯವಿಲ್ಲ.
ಫ್ರಾನ್ಸ್ ಯುದ್ಧದಲ್ಲಿ ಸೋತಾಗ, ಫ್ರಾನ್ಸ್ನ ಸೇನಾಪತಿಯನ್ನು ‘ಫ್ರಾನ್ಸ್ ಯಾಕೆ ಸೋತಿತು, ಇಂಗ್ಲೆಂಡಿಗಿಂತ ನಿಮ್ಮ ಮಿಲಿಟರಿ ಹೆಚ್ಚಾಗಿದ್ದರೂ ಯಾಕೆ ಗೆಲ್ಲಲಿಲ್ಲ?’ ಎಂದು ಯಾರೋ ಕೇಳಿದರಂತೆ. ಅದಕ್ಕೆ ಅವನು ಉತ್ತರಿಸಿದ್ದು ಹೀಗೆ – ‘France was not defeated in the battlefield;
It was
defeated in the nightclubs of Paris.’ ನಮ್ಮ ಯುವಕರು ಫ್ರಾನ್ಸ್ ಯುದ್ಧದಲ್ಲಿದೆ, ಸಂಕಟದಲ್ಲಿದೆ ಎಂಬುದನ್ನು ಮನಗಾಣದೆ ಮೋಜಿನಲ್ಲಿ, ವಿಲಾಸದಲ್ಲಿ ತೊಡಗಿದುದರಿಂದ, ಅವರಲ್ಲಿ ರಾಷ್ಟ್ರದ ಬಗೆಗೆ ಜಾಗೃತಿಯಿಲ್ಲದೇ ಇದ್ದುದರಿಂದ ಫ್ರಾನ್ಸ್ ಸೋಲನ್ನು ಕಾಣಬೇಕಾಯಿತು – ಎಂದು ಸೇನಾಪತಿ ಐತಿಹಾಸಿಕ ಉತ್ತರ ನೀಡಿದ. ದೇಶದ ಪ್ರಧಾನಮಂತ್ರಿಯೋ ಸರ್ಕಾರವೋ ಅಥವಾ ಕೆಲವರೋ ಹಗಲಿರುಳು ಕೆಲಸ ಮಾಡಿದರೆ, ಸಕ್ರಿಯರಾಗಿ ರಾಷ್ಟ್ರಭಕ್ತಿಯನ್ನು ತೋರಿಸಿದರೆ, ಭ್ರಷ್ಟಾಚಾರದಿಂದ ಮೇಲೆದ್ದು ಪ್ರಾಮಾಣಿಕವಾಗಿ ನಡೆದುಕೊಂಡರೆ ಸಾಲದು. ಇಡೀ ಹಾಗೆ ಸಮಾಜ ಎದ್ದುನಿಲ್ಲಬೇಕು, ಆ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡಬೇಕು.
ಯುಗಾನುಕೂಲ ಅಭಿವ್ಯಕ್ತಿ
ನಮ್ಮಲ್ಲಿರುವ ಹಳೆಯ ಗ್ರಂಥಭಂಡಾರವನ್ನು ಗಿಳಿಪಾಠದಂತೆ ಒಪ್ಪಿಸಿ ನಮ್ಮಲ್ಲಿ ಎಲ್ಲವೂ ಇದೆ ಎಂದು ಹೇಳುವುದರಿಂದ ಯಾವುದೇ ಸಾಧನೆ ಮಾಡಿದಂತಾಗದು. ನಮ್ಮಲ್ಲಿರುವ ಅಪಾರ ಜ್ಞಾನಭಂಡಾರ, ಸಾವಿರಾರು ವರ್ಷಗಳಿಂದ ನಮ್ಮ ದೇಶದ ವಿದ್ವಾಂಸರುಗಳು, ಸಾಧುಸಂತರು, ಋಷಿಗಳು ಹಾಗೂ ಅನೇಕ ದಿಕ್ಕುಗಳಲ್ಲಿ ಕೆಲಸಮಾಡಿದ ದಿಗ್ಗಜರು ಬರೆದಿಟ್ಟಿರುವ ಗ್ರಂಥಗಳನ್ನು ಉಲ್ಲೇಖಿಸಿ, ಅವುಗಳ ಆಧಾರದ ಮೇಲೆ ಇಂದಿನ ಯುಗಾನುಕೂಲ ರೀತಿಯಲ್ಲಿ ಅದನ್ನು ಪುನಃ ಅಭಿವ್ಯಕ್ತಗೊಳಿಸಬೇಕು. ಅದರ ಆಧಾರದ ಮೇಲೆ ಸಂಶೋಧನೆಗಳನ್ನು ನಡೆಸಿ ಇಂದಿನ ಆಧುನಿಕ ಕಾಲಕ್ಕೆ ಅಗತ್ಯವಾದ ಅನೇಕ ಹೊಸ ಜ್ಞಾನವನ್ನು ಉತ್ಪಾದಿಸಬೇಕು.
ಯೋಗಿ ಅರವಿಂದರು ಭಾರತ ಪೂರ್ಣ ಸ್ವತಂತ್ರವಾಗಲು ಮಾಡಬೇಕಾದುದರ ಕುರಿತು ಮೂರು ಸಂಗತಿಗಳನ್ನು ಹೇಳಿದ್ದಾರೆ. ಒಂದು, ಭಾರತದಲ್ಲಿರುವ ಅಪಾರ ಜ್ಞಾನರಾಶಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಅದನ್ನು ನೀಡಬೇಕು. ಅಂದರೆ ಭಾರತದ ಜ್ಞಾನವ್ಯವಸ್ಥೆ ಮತ್ತು ಜ್ಞಾನಪರಂಪರೆಯನ್ನು ರಕ್ಷಿಸಬೇಕು ಮತ್ತು ಮುಂದಿನ ಜನಾಂಗಕ್ಕೆ ಅದನ್ನು ದಾಟಿಸಬೇಕು. ಎರಡನೆಯದು, ಭಾರತದಲ್ಲಿರುವ ಜ್ಞಾನರಾಶಿಯನ್ನು ಈವತ್ತಿನ ಯುಗಕ್ಕೆ ತಕ್ಕಂತೆ ವ್ಯಾಖ್ಯೆ ಮಾಡಬೇಕು. ಮೂರನೆಯದು, ಹೊಸ ಜ್ಞಾನದ ಸೃಷ್ಟಿ ಮಾಡಬೇಕು. ಜ್ಞಾನದ ಸೃಜನೆ ಸಮಾಜವನ್ನು ಎದ್ದುನಿಲ್ಲಿಸುತ್ತದೆ. ವಿಭಿನ್ನ ಕ್ಷೇತ್ರಗಳಲ್ಲಿ ಜ್ಞಾನದ ಸೃಜನೆಯನ್ನು, ಸೃಷ್ಟಿಯನ್ನು ಮಾಡುವಂತಹ ಹೊಸ ಪೀಳಿಗೆಯನ್ನು ರೂಪಿಸಬೇಕು – ಎಂದಿದ್ದಾರೆ.
ಈ ಎಲ್ಲ ಸಂದರ್ಭದಲ್ಲಿಯೂ ಕೂಡಾ ನಾವು ಒಂದು ಏಕಾತ್ಮತೆ ಹಾಗೂ ಏಕತೆಯಿಂದ ಕಾರ್ಯ ಮಾಡಬೇಕು. ಅನೇಕ ಬಾರಿ ವಿವಿಧ ಸ್ವಾರ್ಥಪ್ರೇರಿತ ಕಾರಣಗಳಿಂದಾಗಿ ನಮ್ಮ ಸಮಾಜವನ್ನು ಕುಗ್ಗಿಸುವ ಕೆಲಸಗಳು ನಡೆಯುತ್ತಿರುತ್ತವೆ. ಒಂದು ದೇಶ, ಸಮುದಾಯ, ಸಮೂಹ ತನ್ನೊಳಗಿನ ಈ ರೀತಿಯ ವಿರೋಧಾಭಾಸಗಳಿಂದ ತನ್ನನ್ನು ತಾನು ಮೇಲೆತ್ತಿಕೊಳ್ಳಬೇಕು. ಒಳ್ಳೆಯದು ಎಲ್ಲಿ ನಡೆದರೂ ಅದನ್ನು ಬೆಂಬಲಿಸಬೇಕು. ವಿವೇಕಾನಂದರು ಅದನ್ನೇ ಹೇಳಿದ್ದು: “ನೀನು ಒಳ್ಳೆಯವನಾಗಲು ಪ್ರಯತ್ನಿಸು ಮತ್ತು ಯಾರು ಒಳ್ಳೆಯ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೋ ಮತ್ತು ಮಾಡುತ್ತಿದ್ದಾರೋ ಅವರಿಗೆ ಬೆಂಬಲವಾಗಿರು” ಎಂದು. ಒಳ್ಳೆಯ ಕೆಲಸ ಮಾಡುವವರನ್ನು ಆತ್ಮೀಯತೆಯಿಂದ, ಸ್ನೇಹದಿಂದ ಕಂಡು ಬೆಂಬಲಿಸಬೇಕು.
ಬೃಹಜ್ಜಾಲ ಏರ್ಪಡಲಿ
ಆಹಾರ, ಅರಿವು, ವಸತಿ, ಔಷಧ, ಮೂಲಾವಶ್ಯಕತೆಗಳಿಗೆ ಬೇಕಾದ ಸಂಶೋಧನೆ ಮತ್ತು ಅದಕ್ಕೆ ಬೇಕಾದಂತಹ ಮಾನಸಿಕ ತಯಾರಿಯನ್ನು ನಾವು ಮಾಡಬೇಕು. ಜನರಲ್ಲಿ ವಿಶ್ವಾಸವನ್ನು ನಿರ್ಮಾಣ ಮಾಡುವ ಜೊತೆಜೊತೆಗೆ networking ಮತ್ತು collaboration ಕೂಡಾ ಅಗತ್ಯ. ಒಂದು ಕಡೆ ನಡೆಯುತ್ತಿರುವ ಕೆಲಸವನ್ನು ಇನ್ನೊಬ್ಬರಲ್ಲಿ ಹಂಚಿಕೊಂಡು ಅವರು ಆ ಕೆಲಸದ ಇನ್ನೊಂದು ಮುಖವನ್ನು ಮಾಡುವಂತಾಗಬೇಕು. ಅನೇಕ ನಮ್ಮ ಸಂಶೋಧನೆಗಳಲ್ಲಿ, ಜ್ಞಾನದ ಆವಿಷ್ಕಾರವನ್ನು ಮಾಡುವಂತಹ ಕ್ಷೇತ್ರಗಳಲ್ಲಿ ನಮ್ಮತನವನ್ನು ಜೋಡಿಸುವಂತಹ ಬಹುದೊಡ್ಡ ಆವಶ್ಯಕತೆಯಿದೆ. ಈ ಎಲ್ಲ ಸಂಗತಿಗಳಿಂದ ಭಾರತವನ್ನು ಆತ್ಮನಿರ್ಭರ ಮಾಡಲು ಸಾಧ್ಯ.
ನಾವು ನಮ್ಮ ಕಾಲ ಮೇಲೆ ನಿಲ್ಲಬೇಕು. ನಮ್ಮ ಕೈಯೊಳಗೆ ನಾವಿರಬೇಕು. ನಮ್ಮ ಬುದ್ಧಿ ನಮ್ಮನ್ನು ನಡೆಸಬೇಕು. ನನ್ನ ಮನಸ್ಸು ನನ್ನನ್ನು ಅರಳಿಸಬೇಕು. ನನ್ನ ಹೃದಯ ಎಲ್ಲರನ್ನೂ ಒಪ್ಪಿಕೊಳ್ಳಬೇಕು. ಈ ದೃಷ್ಟಿಯಿಂದ ಆತ್ಮನಿರ್ಭರರಾಗಿ ಭಾರತವನ್ನು ಎತ್ತಿ ಹಿಡಿಯುವಂತಹ ಸಮರ್ಥ ಭಾರತದ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ‘ಅಪಿ ಸ್ವರ್ಣಮಯೀ ಲಂಕಾ, ನ ಮೇ ಲಕ್ಷ್ಮಣ ರೋಚತೇ | ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||’ ಇದು ರಾಮಾಯಣದ ಒಂದು ಪ್ರಚಲಿತ ಮಾತು. ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮೇಲು – ಎಂದು. ಈ ಆಧಾರದ ಮೇಲೆ ಆತ್ಮನಿರ್ಭರತೆಯ ಒಂದು ಸಮರ್ಥ ಭಾರತವನ್ನು ನಾವು ಕಟ್ಟಬೇಕಾಗಿದೆ.