“ಹಕ್ಕಿಗಳ ಹಾಡುಗಳ ಹೊದಿಸಿ ನೆರಳನು ಸುರಿದು
ನಿಂತ ಮರಗಳ ಹಣ್ಣು ತಿನ್ನಬೇಕು
ಜೀವಜೋಳಿಗೆ ಹೆಗಲಿಗೇರಿಸಿ ಬಂದುದೆಲ್ಲ
ದೂರ ಪಯಣದ ಬುತ್ತಿ ಅನ್ನಬೇಕು”
– ಸು.ರಂ. ಎಕ್ಕುಂಡಿ
ಹುಬ್ಬಳ್ಳಿಯಿಂದ ಹೊರಟ ಇಂಡಿಗೋ ವಿಮಾನದಲ್ಲಿ ಕುಳಿತ ಸುಧಾಕರ, ಪತ್ನಿ ರೋಹಿಣಿ ಮತ್ತು ಮಗಳು ಜಾಹ್ನವಿ ಜೊತೆ ದೆಹಲಿಯ ಡೊಮೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಇಳಿದು ಹತ್ತನೇ ಬೆಲ್ಟಿನಲ್ಲಿ ಲಗೇಜು ಪಡೆದು ಹೊರಗಡೆಯ ಮುಖ್ಯದ್ವಾರದಲ್ಲಿ ಹೊರಬೀಳುತ್ತಲೇ ಎದುರುಗಡೆ ಸಾಲಾಗಿ ನಿಂತ ಟ್ಯಾಕ್ಸಿಯವರತ್ತ ಕಣ್ಣು ಹಾಯಿಸಿದ. “ಹಲೋ ಅಂಕಲ್ ಇಲ್ಲಿ” ಎಂದು ಕೂಗಿ ಕೈಬೀಸುತ್ತಿದ್ದ ವಿವೇಕನನ್ನು ಗುರುತಿಸಿ, ಮೂವರೂ ಅವನತ್ತ ನಡೆದರು. ಅವರ ಲಗೇಜು ತುಂಬಿದ ಟ್ರಾಲಿಯನ್ನು ತನ್ನ ವಶಕ್ಕೆ ಪಡೆದು, ಅವರಿಬ್ಬರ ಕಾಲು ಮುಟ್ಟಿ, ಮಗಳಿಗೆ ಕೈಕುಲುಕಿ ನಗುತ್ತಲೇ ಸ್ವಾಗತಿಸಿದ ವಿವೇಕ. ಅವರನ್ನು ಸಾವರಿಸಿಕೊಂಡು ಪಾರ್ಕಿಂಗ್ನತ್ತ ಕರೆದೊಯ್ದ. ಹಾಲುಬಣ್ಣದ ಸ್ಕೋಡಾ ರ್ಯಾಪಿಡ್ ಕಾರಿನ ಡಿಕ್ಕಿಗೆ ಇವರ ಬ್ಯಾಗ್ಗಳನ್ನು ತುಂಬುವಾಗ ಸುಧಾಕರ ವಿವೇಕನನ್ನು ಸೂಕ್ಷ್ಮವಾಗಿ ನೋಡಿದ. ಚೆಂದದ ಪೋರ. ಅವರಪ್ಪನದೇ ಮೈಕಟ್ಟು, ಎತ್ತರದ ಮಧ್ಯಮ ಶರೀರದ ಸುಂದರ ಯುವಕ ಬಾಯಿತುಂಬಿ ನಕ್ಕಾಗ ಬಲಗೆನ್ನೆಯಲ್ಲಿ ಗುಳಿ ಕಾಣುತ್ತದೆ. ನೀಟಾಗಿ ಕತ್ತರಿಸಿಕೊಂಡ ದಟ್ಟ ಕಪ್ಪುಗೂದಲು, ತಿಳಿಗಪ್ಪು ಕನ್ನಡಕದೊಳಗಿಂದ ಕಾಣುವ ಭರವಸೆಯ ತಂಪುಕಣ್ಣು, ನೋಡಿದವರು ಯಾರಾದರೂ ಇವನೊಬ್ಬ ಪ್ರತಿಭಾವಂತ ಎಂದು ಹೇಳಲೇಬೇಕು.
ವಿಮಾನನಿಲ್ದಾಣದಿಂದ ಅವರು ವಾಸದಲ್ಲಿದ್ದ ಅಶೋಕವಿಹಾರದ ರಸ್ತೆ ಅಗಲವಾಗಿ ಚೆನ್ನಾಗಿತ್ತು. ದೆಹಲಿಯ ನೇಸರ ಆಗಲೇ ನಿತ್ಯದ ನಿವೃತ್ತಿಗೆ ನೋಟೀಸು ನೀಡಿದ್ದ. ಹೊಂಬಣ್ಣದ ಚಿತ್ತಾರಕ್ಕೆ ಕರಿಮೋಡದ ಕಿರಿಕಿರಿ ಇಲ್ಲದೆ ತುಂಬಿದ ಬಾನು ನಿರ್ಮಲವಾಗಿತ್ತು. ಕಾರಿನ ಒಳಾಂಗಣದಲ್ಲಿ ಸುಗಂಧಯುಕ್ತ ತಂಗಾಳಿ ಹಿತವಾಗಿ ಸೂಸುತ್ತಿದ್ದರೆ, ಕಾರಿನ ಡ್ಯಾಶ್ಬೋರ್ಡಿನಿಂದ ತಲತ್ ಅಜೀಜರ ಇಂಪಾದ ಗಝಲ್ ‘ವೋ ಶ್ಯಾಂ ಭಲಾ ಅಬ್ ಕ್ಯೋಂ. ಯಾದೋಸೆ ನಹೀ ಜಾತಿ’ ಎಂದು ಕಿವಿಗೆ ಮುತ್ತಿಡುತ್ತಿತ್ತು. “ಮತ್ತೇನು ಅಂಕಲ್ ಹುಬ್ಬಳ್ಳಿ ಸುದ್ದಿ? ಅಬ್ಬಾ! ಅಲ್ಲಿಯ ಗಿರಮಿಟ್ ಮತ್ತು ಮಿರ್ಚಿ ಬಜಿ ಮರೆಯುವಂತೆಯೇ ಇಲ್ಲ. ಮೋಸ್ಟ್ ಅಥೆಂಟಿಕ್” ಎಂದ. ಹೌದು, ವಿವೇಕ ಈಗ ನಾಲ್ಕು ವರ್ಷಗಳ ಹಿಂದೊಮ್ಮೆ ಹುಬ್ಬಳ್ಳಿಗೆ ಬಂದಿದ್ದ. ಆರ್.ವಿ. ಕಾಲೇಜು ಬೆಂಗಳೂರಿನಲ್ಲಿ ಬಿ.ಇ. ಮುಗಿಸಿ, ಬೆಂಗಳೂರಿನ ಐ.ಐ.ಎಂ.ನಲ್ಲಿ ಅಂತಿಮ ಎಂ.ಬಿ.ಎ.ನಲ್ಲಿದ್ದ. ಪಾಸ್ಪೋರ್ಟ್ ಮಾಡಿಸಲು ಮಹಾನಗರಪಾಲಿಕೆಯವರಿಂದ ಜನನದಾಖಲೆಯಲ್ಲಿ ಸಣ್ಣದೊಂದು ತಿದ್ದುಪಡಿ ಬೇಕಿತ್ತು. ಪರಿಚಯದವರೊಬ್ಬರಿಂದ ಬೇಗನೆ ಮಾಡಿಸಿಕೊಟ್ಟಿದ್ದ ಸುಧಾಕರ. ಎರಡೇ ದಿನದಲ್ಲಿ ತೀರಾ ಮನೆಯವರಂತೆ ಆಪ್ತನಾಗಿದ್ದ. ಆಗಿನ್ನೂ ಹುಬ್ಬಳ್ಳಿಯ ಬಿವಿಬಿಯಲ್ಲಿ ಐದನೇ ಸೆಮಿಸ್ಟರ್ ಓದುತ್ತಿದ್ದ ಮಗಳು ಜಾಹ್ನವಿಗೆ ಅನೇಕ ಉಪಯುಕ್ತ ಸಲಹೆ ನೀಡಿದ್ದ.
“ಆಂಟೀ, ನೀವು ಅಂದು ಮಾಡಿದ್ದ ಬೇಬಿ ಈರುಳ್ಳಿಯ ಸಾಂಬಾರು ಮತ್ತೆ ಉಣ್ಣೋ ಆಸೆ” ಎಂದ. ಅಷ್ಟಕ್ಕೇ ಉಬ್ಬಿಹೋದ ರೋಹಿಣಿ, ಮುಖ ಅರಳಿಸಿ, “ಓಹೋ, ಅದಕ್ಕೇನು” ಎಂದಳು.
‘ನಾಲ್ಕೇ ವರ್ಷಗಳಲ್ಲಿ ಎಷ್ಟು ಪ್ರಬುದ್ಧನಾಗಿದ್ದಾನೆ ಈ ಹುಡುಗ’ ಸುಧಾಕರ ತನ್ನಷ್ಟಕ್ಕೆ ನುಡಿದುಕೊಂಡ. ಮೌನ ಮುರಿಯಲು ಸೌಜನ್ಯಕ್ಕೆ, “ನೀನು ವೃಥಾ ತೊಂದರೆ ತೆಗೆದುಕೊಂಡೆ. ನಾವು ಓಲಾ ಮಾಡಿಕೊಂಡು ಬರುತ್ತಿದ್ದೆವು” ಎನ್ನುತ್ತಲೂ, “ಛೆ ತೊಂದರೆ ಏನು ಬಂತು? ಶನಿವಾರ ಹೇಗೂ ರಜೆ ಇತ್ತಲ್ಲಾ, ಬಂದೆ. ಅಲ್ಲಿ ನಿಮ್ಮ ಮಿತ್ರರ ಚಡಪಡಿಕೆ ನೋಡಬೇಕು” ಎಂದವನೇ ಅಪ್ಪ ಅಶೋಕರಿಗೆ ಫೋನು ಮಾಡಿದ್ದ. “ಹಾಂ ಡ್ಯಾಡ್, ಫ್ಲೈಟು ಸರಿಯಾದ ಹೊತ್ತಿಗೆ ಬಂತು. ನಾವು ಬರುತ್ತಿದ್ದೇವೆ. ಸೆಂಟ್ರಲ್ ಮಾರ್ಕೆಟ್ ದಾಟಿದೆವು.” ಅಶೋಕವಿಹಾರದ ಸ್ವಾಮಿ ನಾರಾಯಣ ಮಾರ್ಗದಲ್ಲಿರುವ ನಿಧಿಪ್ಲಾಜಾಕ್ಕೆ ಹೊಂದಿಕೊಂಡಿರುವ ನಾಲ್ಕು ಕೋಣೆಯ ಬಂಗಲೆಯಲ್ಲಿ ಅಶೋಕ ಅವರ ವಾಸ. ವಿಶಾಲ ಪಾರ್ಕ್ನೊಳಗೆ ಅವಿತುಕೊಂಡ ಸುಂದರ ಮನೆ. ಮುಂದಣ ಹೂದೋಟ. ಮಧ್ಯೆ ಕುಳಿತುಕೊಳ್ಳಲು ಗ್ರಾನೈಟ್ ಕಲ್ಲು ಬೆಂಚು, ಎದುರು ಗೋಡೆಯ ಮೇಲೆ ಸ್ವಲ್ಪ ದೊಡ್ಡದಾಗಿ ಎದ್ದು ಕಾಣುವಂತೆ ತೂಗುಬಿಟ್ಟ ‘ಡಾ. ಕಾತ್ಯಾಯಿನಿ ಎಸ್., ದಿಲ್ಲಿ ವಿಶ್ವವಿದ್ಯಾಲಯ’ ಎಂಬ ನಾಮಫಲಕ.
ಇನ್ನೂ ಕಾರಿನಿಂದ ಇಳಿಯಲಿಕ್ಕಿಲ್ಲ, ಅಶೋಕರು ಓಡಿ ಬಂದು ಆವರಿಸಿಕೊಂಡರು. ಸುಧಾಕರನನ್ನು ತಮ್ಮ ಬಲತೆಕ್ಕೆಗೆ ತೆಗೆದುಕೊಂಡು, “ನೀವು ಮೂವರೂ ಬಂದಿದ್ದು ಖುಷಿಯಾಯ್ತು” ಎಂದು ಜಾಹ್ನವಿಯ ತಲೆ ನೇವರಿಸಿದರು. ಅವರ ಬ್ಯಾಗುಗಳನ್ನೆಲ್ಲ ಗೆಸ್ಟ್ರೂಮಿನ ವಾರ್ಡ್ರೋಬಿಗೆ ಆಗಲೇ ಸೇರಿಸಿ ಬಂದಿದ್ದ ವಿವೇಕ. “ಈ ಕುಚೇಲನಿಗಾಗಿ ಹುಬ್ಬಳ್ಳಿಯಿಂದ ತಿನ್ನಲು ಏನೆಲ್ಲಾ ಬಂದಿದೆಯೆಂದು ಕೇಳೋಣವೇ?” ಎಂದು ಯಕ್ಷಗಾನದ ಭಾಷೆಯಲ್ಲಿ ಕೇಳುತ್ತಲೂ, ರೋಹಿಣಿ ನಗುತ್ತ, ಬಾಬುಸಿಂಗ್ ಪೇಡಾ, ಗೋಕಾಕದ ಕರದಂಟು, ಅಣ್ಣಿಗೇರಿ ಶೇಂಗಾ ಹೋಳಿಗೆ, ಬೆಳಗಾವಿ ಕುಂದಾ, ಸವಣೂರ ಖಾರಾ ಪೊಟ್ಟಣಗಳನ್ನು ಅಪ್ಪ ಮಗನೆದುರು ಬಿಡಿಸಿಟ್ಟಳು. ಸಂಜೆ ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳು ‘ಬಾಯಿ ಬೇಡಿ’ ತಿಂದಂತೆ, ಒಂದೊಂದನ್ನೇ ಮೆಂದರು. “ಇನ್ನೇನು, ಅತ್ತೆ ಕಾತ್ಯಾಯಿನಿ ಬರುವ ಹೊತ್ತು. ಓಡಿ ಬಂದು ತಿನ್ನಲು ಸೇರಿಕೊಳ್ಳುತ್ತಾಳೆ” ಎಂದು ವಿವೇಕ ಹೇಳುತ್ತಲೂ ಇಬ್ಬರೂ ನಗತೊಡಗಿದರು.
ಮನೆಯನ್ನೆಲ್ಲ ಒಂದು ಬಾರಿ ಸುತ್ತು ಹಾಕಿ ಬಂದರು ಸುಧಾಕರ ಮತ್ತು ರೋಹಿಣಿ. ಆ ಇಡೀ ಮನೆಯಲ್ಲಿರುವವರು ಮೂರೇ ಜನರು. ಕರ್ನಾಟಕದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನಿವೃತ್ತರಾಗಿ ಈಗ ಕೇಂದ್ರ ಸರಕಾರದ ಮೂರು ವರ್ಷ ಅವಧಿಯ ನಿಯೋಜನೆಯಲ್ಲಿ ಪರಿಸರ ಸಂರಕ್ಷಣ ಸಂಸ್ಥೆಯಲ್ಲಿ ಸಲಹೆಗಾರರಾಗಿ ನೇಮಕಗೊಂಡ ಅಶೋಕ ಅವರು, ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿರುವ ಅಶೋಕರ ತಂಗಿ ಡಾ. ಕಾತ್ಯಾಯಿನಿ ಮತ್ತು ಮೂವತ್ತು ಕಿ.ಮೀ. ದೂರದ ನೋಯ್ಡಾದಲ್ಲಿರುವ ‘ಸೇಪಿಯಂಟಿ’ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಶೋಕರ ಏಕೈಕ ಮಗ ವಿವೇಕ. ಮನೆಗೆಲಸಕ್ಕೆ ಆಳುಗಳಿದ್ದು, ನಿತ್ಯವೂ ಅಡುಗೆಗೆ ಉತ್ತರ ಪ್ರದೇಶದ ಭಯ್ಯಾ ಹರಿಲಾಲ್ ಬರುತ್ತಾನೆ. ಸುಧಾಕರ ಮನೆ ಸುತ್ತುವಾಗ ಅವನ ಬೆನ್ನ ಹಿಂದೆ ಬೆಕ್ಕಿನಂತೆ ಮೌನವಾಗಿ ಹಿಂಬಾಲಿಸಿದ್ದನ್ನು ಗಮನಿಸಿ, ಅಶೋಕರಲ್ಲಿ “ಸರ್, ಶಾರದಕ್ಕನ ಅಗಲುವಿಕೆಯಿಂದ ನಿರ್ವಾತಗೊಂಡ ನಿಮ್ಮ ಬದುಕಿನಲ್ಲಿ ನೀವು ತುಂಬಾ ನೋವುಣ್ಣುತ್ತಿರುವಂತೆ ತೋರ್ತಾ ಇದೆ” ಅಂದ. “ಹೌದು ಸುಧಾಕರ, ಅವಳನ್ನು ಕಳೆದುಕೊಂಡ ನಾನು ನೋವು, ಹತಾಶೆ ಮತ್ತು ಪಶ್ಚಾತಾಪ ಎಲ್ಲವನ್ನೂ ಅನುಭವಿಸುತ್ತಿದ್ದೇನೆ. ನೌಕರಿಯಲ್ಲಿದ್ದಾಗ ಸದಾ ಅರಣ್ಯದ ಬದುಕೇ ಆಯ್ತು. ನಿವೃತ್ತಿಯ ನಂತರದ ಸಂಜೆಗಳನ್ನು ಹಾಯಾಗಿ ಅವಳೊಂದಿಗೆ ಕಳೆಯಬೇಕೆಂದುಕೊಂಡಿದ್ದೆ. ಈ ಭಾಗ್ಯ ನನಗಿಲ್ಲ” ಎಂದು ಕ್ಲೇಷೆಯಿಂದ ನಕ್ಕರು.
ಅಶೋಕರು ಉಪಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರವಾರದಲ್ಲಿ ನಿವೃತ್ತರಾಗಿದ್ದ ದಿನ ಸುಧಾಕರನೂ ಹೋಗಿದ್ದ. ಇಡೀ ಕೆನರಾ ವೃತ್ತದ ಅರಣ್ಯ ಸಿಬ್ಬಂದಿಗಳು ಜಮಾಯಿಸಿದ್ದರು. ಅಶೋಕರ ನಿಸ್ಪøಹ ಸೇವೆ, ಪರಿಸರ ಕಾಳಜಿ, ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆಯನ್ನೆಲ್ಲ ಮುಕ್ತವಾಗಿ ಕೊಂಡಾಡಿದ್ದರು. ಬೆಂಗಳೂರಿನಿಂದ ಮುಖ್ಯ ಸಂರಕ್ಷಣಾಧಿಕಾರಿಗಳು ಮತ್ತು ಜಿಲ್ಲೆಯ ಹಲವು ಪರಿಸರ ತಜ್ಞರು ಆಗಮಿಸಿದ್ದು ವಿಶೇಷ. ಸಮ್ಮಾನಿತ ಅಶೋಕ ಅವರು ತಮ್ಮ ವೃತ್ತಿಜೀವನದ ಅವಲೋಕನ ಮಾಡಿದ್ದರು. “ಪ್ರಕೃತಿದತ್ತ ಉತ್ತರಕನ್ನಡ ಜಿಲ್ಲೆ ಒಂದಿಲ್ಲೊಂದು ಅಭಿವೃದ್ಧಿ ಯೋಜನೆಗಳಿಂದಾಗಿ ಹಾಳಾಗುತ್ತಿರುವ ಕಳವಳವನ್ನು ಬಹಳ ವರ್ಷಗಳ ಹಿಂದೆಯೇ ಈ ನನ್ನ ಮಿತ್ರ ಸುಧಾಕರ ಅವರೊಂದಿಗೆ ಹಂಚಿಕೊಂಡಿದ್ದೆ. ಈಗ ನೋಡಿ, ಸಸ್ಯಶಾಮಲೆ ಸಹ್ಯಾದ್ರಿ ಮತ್ತು ಟಾಗೂರರು ಕಂಡು ಖುಷಿಗೊಂಡ ಸ್ವಚ್ಛ ಕರಾವಳಿಯ ಸೊಬಗು ಇತಿಹಾಸವಾಗುತ್ತಿದೆ” ಎಂದು ವಿಷಾದದಿಂದ ನುಡಿದಿದ್ದರು. ನಿಜ ಹೇಳಬೇಕೆಂದರೆ ಅಶೋಕರು ಅಂದು ಲವಲವಿಕೆಯಿಂದಿರಲಿಲ್ಲ. ಪತ್ನಿ ಶಾರದಕ್ಕ ಒಂದು ವಾರದಿಂದ ಹಾಸಿಗೆ ಹಿಡಿದಿದ್ದರು. ಖ್ಯಾತ ಹೃದಯತಜ್ಞ ಡಾ|| ಹೆಗಡೆಕಟ್ಟೆಯವರು ಶಾರದಕ್ಕ ತುಂಬಾ ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿರುವುದರಿಂದ ಪುಪ್ಪುಸ ಕ್ಷೀಣಗೊಂಡು ಹೃದಯಸ್ತಂಭನದ ಸಾಧ್ಯತೆಯನ್ನು (ಕಂಜೆಸ್ಟಿವ್ ಕಾರ್ಡಿಯಾಕ್ ಫೇಲ್ಯುವರ್) ಅಶೋಕರಿಗೆ ತಿಳಿಸಿದ್ದರಂತೆ.
ಸ್ವಲ್ಪೇ ಹೊತ್ತಿನಲ್ಲಿ ಕಾತ್ಯಾಯಿನಿ ಬಂದಿದ್ದಳು. ಮೊದಲಿನಂತೆ ಚೆಲ್ಲುಚೆಲ್ಲಾಗಿರದೆ ಗಂಭೀರಳಾಗಿದ್ದಳು. ಕಾಲನ ಸವೆತದಲ್ಲಿ ಅವಳಲ್ಲಿಯೂ ವೃದ್ಧಾಪ್ಯದ ಮುನ್ಸೂಚನೆ ಮುಖದಲ್ಲೇ ಎದ್ದು ಕಾಣುತ್ತಿತ್ತು.
ಸುಧಾಕರ ಮತ್ತವನ ಹೆಂಡತಿ, ಮಗಳನ್ನು ಪ್ರೀತಿಯಿಂದ ಕಂಡಳು. ಹುಬ್ಬಳ್ಳಿಯಿಂದ ತಂದ ತಿಂಡಿಗಳನ್ನು ಚಪ್ಪರಿಸಿ ತಿಂದಳು. ಅಂದು ರಾತ್ರಿಯ ಊಟಕ್ಕೆ ಅಶೋಕರು ಹರಿಲಾಲ್ ಕೈಯಿಂದ ಉತ್ತರ ಪ್ರದೇಶದ ವಿಶೇಷ ವ್ಯಂಜನಗಳಾದ ‘ಬತ್ತಿ ಛೋಕಾ’, ‘ಬೇಢಾಯಿ’, ‘ತೆಹ್ರಿ’ ಮತ್ತು ‘ಬಿಂಡಿ ಸಾಲನ್’ ಮಾಡಿಸಿದ್ದರು. ಜಾಹ್ನವಿ ತುಂಬಾ ಪ್ರೀತಿಸಿ ಉಂಡಳು. ಬೆಂಗಳೂರಿನ ಓರ್ಯಾಕಲ್ನಲ್ಲಿ ಇಂಜಿನಿಯರ್ ಆದ ಆಕೆಗೆ ಅಲ್ಲಿನ ಪಿ.ಜಿ.ಯಲ್ಲಿ ನೀಡುವ ಅದೇ ಹಳಸಿದ ಚಿತ್ರಾನ್ನದಿಂದ ಬೇಸತ್ತು, ಹೊಸ ಅಡುಗೆರುಚಿ ಹಿಡಿಸಿತ್ತು. ಈ ಮಧ್ಯದಲ್ಲಿ ನೀರಿನ ಲೋಟಕ್ಕೆ ಚಮಚೆ ಬಡಿದು
ಕಣಕಣ ಸದ್ದು ಮಾಡುವ ಮೂಲಕ ಎಲ್ಲರ ಗಮನ ಎಳೆದ ಅಶೋಕರು, “ನಾಳೆಯಿಂದ ಒಂದು ವಾರ ಶ್ರೀಮತಿ ರೋಹಿಣಿ ಸುಧಾಕರ ಅವರು ಹರಿಲಾಲ್ ಅವರ ನೆರವು ಪಡೆದು ಮುಖ್ಯ ಬಾಣಸಿಗರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಉತ್ತರಕನ್ನಡದ ದೇಸಿ ಅಡಿಗೆಗಳಾದ ಹುಳಿ, ಹಸಿ, ಗೊಜ್ಜು, ತಂಬುಳಿ, ಪಾಯಸ, ಕಡುಬು, ತೆಳ್ಳೇವುಗಳನ್ನೆಲ್ಲ ಉಣಬಡಿಸುತ್ತಾರೆ” ಎಂದು ಫರ್ಮಾನು ಹೊರಡಿಸುವುದಕ್ಕೂ, ಕಾತ್ಯಾಯಿನಿ ಮತ್ತು ವಿವೇಕ ಯಸ್ ಯಸ್ ಎಂದು ಟೇಬಲ್ಲ ತಟ್ಟುತ್ತ ಸಹಮತಿಸಿದರು. ಒಂದು ಪುಟ್ಟ ನಗುವಿನ ಮೂಲಕ ಈ ಪಟ್ಟವನ್ನು ಪಟ್ಟನೆ ಒಪ್ಪಿಕೊಂಡಿದ್ದಳು ರೋಹಿಣಿ.
ಈ ಮನುಷ್ಯ ತನ್ನನ್ನು ಇಷ್ಟೊಂದು ಹಚ್ಚಿಕೊಂಡಿದ್ದಾರಲ್ಲ ಎಂದು ಸುಧಾಕರನಿಗೆ ಅನೇಕ ಬಾರಿ ಅನ್ನಿಸಿದ್ದುಂಟು, ಈಗಲೂ ಅಷ್ಟೇ, ಒಂದು ತಿಂಗಳ ಮುಂಚೆಯೇ ಮೂವರಿಗೂ ವಿಮಾನದ ಟಿಕೆಟು ಕಳಿಸಿದ್ದರು. “ಸರ್, ಇದೇನು? ನನಗೆ ಒಂದು ಮಾತು ತಿಳಿಸದೆ ಈ ಆಮಂತ್ರಣ?” ಎಂದರೆ, “ಇಲ್ಲದಿದ್ದರೆ ನೀವೆಲ್ಲಿ ಬರುತ್ತೀರಿ? ಸುಮ್ಮನೆ ಒಂದು ವಾರ ಇದ್ದು ಹೋಗಿ. ದಿಲ್ಲಿಯ ವಾತಾವರಣ ಈಗ ಚೆನ್ನಾಗಿದೆ. ಜಾಹ್ನವಿಗೂ ಬದಲಾವಣೆ ಸಿಕ್ಕಂತಾಯ್ತು” ಎಂದಿದ್ದರು. ಅಶೋಕರ ಜೊತೆಗಿನ ದಶಕಗಳ ಒಡನಾಟದಲ್ಲಿ ಸುಧಾಕರ ಅವರನ್ನು ತನ್ನ ಸ್ವಂತ ಅಣ್ಣನಂತೆ ಪ್ರೀತಿಸುತ್ತಿದ್ದ. ಅಪಾರ ಗೌರವವೂ ಇತ್ತು. ಕೆಲವು ವಿಚಾರಗಳಲ್ಲಿ
ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅವರು ಯಾರ ಸಲಹೆಗೂ ತಮ್ಮ ನಿಲುಮೆ ಬದಲಿಸುತ್ತಿರಲಿಲ್ಲ. ಶಾರದಕ್ಕ ತೀರಿಕೊಂಡಾಗಲೂ ಅಷ್ಟೇ. ಸುದ್ದಿ ತಿಳಿದೊಡನೆಯೇ ಸುಧಾಕರ ಹೋಗಿದ್ದ. ಅಷ್ಟೇನೂ ಜನ ಸೇರಿರಲಿಲ್ಲ. ಕೇರಿಯ ಒಂದಿಷ್ಟು ಜನ, ಅವರ ಇಲಾಖೆಯ ಕೆಲ ಆಪ್ತರು ಅಷ್ಟೇ. ಶಾರದಕ್ಕನ ಬಳಗದವರೂ ಯಾರೂ ಇರಲಿಲ್ಲ. ಇರುವ ಒಬ್ಬ ಅಣ್ಣ ದಿನೇಶ ಪುರಾಣಿಕರು ಹುಬ್ಬಳ್ಳಿಯ ಸಾಯಿ ನಗರದಲ್ಲಿದ್ದವರು ಆ ಸಮಯ ಅಮೆರಿಕದಲ್ಲಿರುವ ಮಗನ ಮನೆಯಲ್ಲಿ ಇದ್ದರು. ದಿಲ್ಲಿಯಿಂದ ಕಾತ್ಯಾಯನಿ ಸಹ ಬಂದಿರಲಿಲ್ಲ. ಮೃತ ಶರೀರಕ್ಕೆ ಮೈ ತೊಳೆಸಿ, ಹೊಸ ಸೀರೆ ಉಡಿಸಿ, ತಲೆ ತುಂಬ ಹೂ ಮುಡಿಸಿ, ಅರಿಷಿಣ ಕುಂಕುಮ ಹಚ್ಚಿ, ಮಗನ ಹತ್ತಿರ ಗಂಧದ ಮಾಲೆ ಹಾಕಿಸಿ ಪಾದ ಮುಟ್ಟಿಸಿ, ತಾವೂ ಒಂದು ಮಲ್ಲಿಗೆ ಹಾರ ಹಾಕಿ ಆಗಷ್ಟೇ ಬಂದ ಕಿಮ್ಸ್ನ ಶವವಾಹನಕ್ಕೆ ಪತ್ನಿಯ ದೇಹವನ್ನು ಒಪ್ಪಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು.
“ಸರ್ ಇದೇನು?” ಎಂಬ ಸುಧಾಕರನ ಪ್ರಶ್ನೆಗೆ, “ಇದು ನಾವಿಬ್ಬರೂ ಆಗಲೇ ತೆಗೆದುಕೊಂಡ ನಿರ್ಧಾರ” ಎಂದು ಒಬ್ಬರೇ ಮರದಡಿ ಕುಳಿತು ಬಿಕ್ಕಿಬಿಕ್ಕಿ ಅತ್ತಿದ್ದರು. ಮುಂದೆ ಹದಿಮೂರನೇ ದಿನ ಅಪ್ಪ ಮಗ ತ್ರಯಂಬಕೇಶ್ವರಕ್ಕೆ ಹೋಗಿ ಶಾಸ್ತ್ರೋಕ್ತ ಅಂತ್ಯಸಂಸ್ಕಾರ ಮುಗಿಸಿ ಬಂದಿದ್ದರು.
ಸುಧಾಕರ ಮತ್ತವನ ಕುಟುಂಬ ಬಂದ ದಿನ ರಾತ್ರಿ ಅಶೋಕರು ತಡರಾತ್ರಿಯವರೆಗೂ ಹರಟೆ ಹಚ್ಚಿದ್ದರು. ಪ್ರಯಾಣದ ಆಯಾಸದಿಂದ ಸುಧಾಕರನ ಕಣ್ಣು ಕೂರುವದನ್ನು ಗಮನಿಸುತ್ತಲೂ, “ಓ! ನಿದ್ದೆ ಮಾಡಿ ಗುಡ್ ನೈಟ್” ಎಂದು ತಾವೇ ದೀಪವಾರಿಸಿ ಹೋಗಿದ್ದರು.
ಸುಧಾಕರ ಮತ್ತು ಅಶೋಕರ ನಡುವೆ ಬೆಸೆದುಕೊಂಡ ಮೈತ್ರಿಯ ಪ್ರಸಂಗದ ಬಗ್ಗೆ ಈಗ ಹೇಳಲೇಬೇಕು.
ಪದವಿ ಮುಗಿಯುತ್ತಲೇ ಮುಂಬಯಿಯ ಕಂಪೆನಿಯೊಂದರಲ್ಲಿ ಸೇರಿಕೊಂಡಿದ್ದ ಸುಧಾಕರನಿಗೆ ತನ್ನ ತಂದೆ ತಾಯಿಯರ ಸಮೀಪದಲ್ಲಿ ತನ್ನ ಜಿಲ್ಲೆಯಲ್ಲೇ ಒಂದು ನೌಕರಿ ಮಾಡಿಕೊಂಡಿರಬೇಕೆಂಬ ಇರಾದೆ ಇತ್ತು. ಅವನ ಹಣೆಬರಹಕ್ಕೆ ಆಗಷ್ಟೇ ಪ್ರಾರಂಭವಾದ ಕಾಳಿ ಯೋಜನೆಯ ಸುಪಾ ಎಂಬಲ್ಲಿ ಕೆಲಸ ಸಿಕ್ಕಿತ್ತು. ಅದೇ ಜಿಲ್ಲೆಯವನಾದರೂ, ಈ ಸುಪಾ ಎಲ್ಲಿದೆ ಎಂದು ನಕಾಶೆ ನೋಡಿಕೊಂಡು ಹೋದ ಊರು ಅದು. ಪೌರಾಣಿಕ ಹಿನ್ನೆಲೆಯ ರಾಮಾಯಣದ ಶೂರ್ಪನಖಿ ಇಲ್ಲಿ ಇದ್ದಿದ್ದಳೆಂಬ ದಂತಕತೆಗೆ ಥಳಕು ಹಾಕಿ, ಆ ಊರಿಗೆ ‘ಸುಪಾ’ ಎಂಬ ಹೆಸರು ಬಂದಿದೆ ಎನ್ನುತ್ತಿದ್ದರು. ಅಲ್ಲಿಯವರೆಗೂ, ‘ಪೇಟೆ’ಯ ಸ್ಥಾನದಲ್ಲಿದ್ದ ದಂಡಕಾರಣ್ಯ ಪ್ರದೇಶ ರಾಜಸ್ವೀ ಇಲಾಖೆಯ ದಯೆಯಿಂದ ತಾಲೂಕಿನ ಪಟ್ಟ ಪಡೆದಿತ್ತು. ಒಂದು ತಾಲ್ಲೂಕಿನಲ್ಲಿರಬೇಕಾದ ತಾಲ್ಲೂಕು ಕಛೇರಿ, ಪೊಲೀಸ್ ಠಾಣೆ, ಅಂಚೆ ಕಛೇರಿ, ಆರೋಗ್ಯ ಕೇಂದ್ರ, ಸರಕಾರಿ ಶಾಲೆ, ದಟ್ಟ ಕಾಡಿನ ಸಂರಕ್ಷಣೆಗೆಗಾಗಿ ಒಂದು ವಲಯ ಅರಣ್ಯ ಸಂರಕ್ಷಕರ ಕಛೇರಿ ಇದ್ದವು. ವಿಪರೀತ ಮಳೆ, ಛಳಿ ಮತ್ತು ಮಲೇರಿಯಾ ಸೊಳ್ಳೆಗಳ ಕಾಟದಿಂದಾಗಿ ಸರಕಾರಿ ನೌಕರರಲ್ಲಿ ಬಹುತೇಕ ಮಂದಿ ಇದ್ದ ಬಿದ್ದ ರಜೆ ಹಾಕಿ ಗೈರು ಬೀಳುತ್ತಿದ್ದರು. ಅಲ್ಲಿಯ ಹೆಚ್ಚಿನ ನಾಗರಿಕರು ಕೊಂಕಣಿ ಮಿಶ್ರಿತ ಮರಾಠಿಗರಾದರೆ, ಕಾರವಾರಿಗಳಾದ ಸುಮಾರು ನೌಕರರು ಕೊಂಕಣಿ ಭಾಷಿಗರಾಗಿದ್ದರು. ಹೀಗಾಗಿ ಸರಸ್ವತಿಯ ಚೆಂದದ ಭಾಷೆ ಕನ್ನಡವು ಆ ಮಂದಿಯ ಬಾಯ್ತುಂಬ ‘ಕಾನಡಿ’ ಎಂದು ಅಪಭ್ರಂಶವಾಗಿ ಓಲಾಡಿತ್ತು. ಬೆಳಗಾವಿಯಿಂದ ಸುಪಾ ಮಾರ್ಗವಾಗಿ ಹೋಗಿ ತಿರುಗಿ ಬರುವ ಬಸ್ಸು ಮತ್ತು ಸದಾಶಿವಗಡದಿಂದ ರಾತ್ರಿ ವಸತಿಗೆ ಬರುವ ಬಸ್ಸು ಇಷ್ಟೇ ವಾಹನ ಸಂಚಾರ ಅಲ್ಲಿತ್ತು.
ಇಂತಹ ಊರನ್ನು ಹುಡುಕಿಕೊಂಡು ಬಂದ ಸುಧಾಕರ, ಊರಿಂದ ಎರಡು ಕಿ.ಮೀ. ದೂರದ ‘ವಿರ್ಖೊಲ’ ಎಂಬ ಕುಗ್ರಾಮದಲ್ಲಿದ್ದ ಕಛೇರಿಯಲ್ಲಿ ಸೇವೆಗೆ ವರದಿ ಮಾಡಿಕೊಂಡಿದ್ದ. ಆಗಷ್ಟೇ ಪ್ರಾರಂಭವಾಗಿದ್ದ ಯೋಜನೆಗೆ ಕಾರ್ಯವಹಿಸಲು ಒಂದು ಕಟ್ಟಡವಿರಲಿಲ್ಲ. ಒಂದು ಕಾಲದಲ್ಲಿ ಗಣಿಗಾರಿಕೆ ಮಾಡಿಕೊಂಡು ಕೇಂದ್ರವನ್ನಾಗಿರಿಸಿಕೊಂಡು ನಂತರ ಬಿಟ್ಟುಹೋಗಿದ್ದ ಕಬ್ಬಿಣ ತಗಡಿನ ಪಾಳುಬಿದ್ದ ಶೆಡ್ಡುಗಳಲ್ಲಿ ಕಛೇರಿಯನ್ನಾಗಿಸಿದ್ದರು. ಕಾರವಾರದ ಸಮೀಪ ಡಿಗ್ಗಿ ಎಂಬಲ್ಲಿ ಉಗಮವಾದ ಜೀವನದಿ ಕಾಳಿಯು ತನ್ನ ಇತರ ಸಹೋದರಿ ಉಪನದಿಗಳಾದ ಪಾಂಡರಿ, ಜುಡುಗಳೊಂದಿಗೆ ಸೇರಿ ನಿಸರ್ಗದತ್ತ ಸುಪಾದ ಎರಡು ಗುಡ್ಡಗಳ ಕಣಿವೆಯ ಮೂಲಕ ಹಾದು, ಮುಂದೆ 160 ಕಿ.ಮಿ. ಪರಿಕ್ರಮಣ ಮುಗಿಸಿ ಕಾರವಾದ ಅರಬೀಸಮುದ್ರದ ಒಡಲು ಸೇರುವ ಸೃಷ್ಟಿಯ ಬೊಕ್ಕಸಕ್ಕೆ ವಿಜ್ಞಾನಿಗಳು ಕನ್ನಹಾಕಿದ್ದರು. ಓಡುವ ಕಾಳಿ ನದಿಯನ್ನು ಕಟ್ಟಿ ಅದರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯೋಜನಾ ಕಾರ್ಯ ಭರದಿಂದಿತ್ತು. ಆಣೆಕಟ್ಟು ಮತ್ತು ವಿದ್ಯುದಾಗರ ವಿನ್ಯಾಸ, ನಿರ್ಮಾಣ ಕಾರ್ಯಗಳು ಮುಖ್ಯವಾದುದಾದರೆ, ಅಣೆಕಟ್ಟಿನ ನಿರ್ಮಾಣದಿಂದ ಪರಿಸರ ನಾಶ, ಮುಳುಗಡೆಯಾಗಲಿರುವ ಗ್ರಾಮ, ಸಂತ್ರಸ್ತರಿಗೆ ಪುನರ್ವಸತಿ, ಪರಿಹಾರ ಇತ್ಯಾದಿ ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿತ್ತು. ಸುಧಾಕರ ಆ ವಿಭಾಗಕ್ಕೆ ನಿಯುಕ್ತಿಗೊಂಡಿದ್ದ.
ಸುಧಾಕರನಿಗೆ ವಾಸದ ಮನೆಯೊಂದನ್ನು ಹುಡುಕಲು ತುಂಬಾ ಪರದಾಡಬೇಕಾಯಿತು. ಬಣ್ಣದ ನಗರಿ ಮುಂಬೈಯ ಅಕ್ಕನ ಮನೆಯಲ್ಲಿ ಸುಖವಾಗಿ ತಿಂದುಂಡುಕೊಂಡು ನೌಕರಿ ಮಾಡಿಕೊಂಡಿದ್ದವನಿಗೆ ಈ ಕೊಂಪೆಯ ಬದುಕು ಬೇಕಿತ್ತಾ ಎಂದು ಅನೇಕ ಬಾರಿ ಅನ್ನಿಸಿದ್ದುಂಟು. ಆದರೂ ತನ್ನ ಜಿಲ್ಲೆಗೆ ತಾನು ಸಲ್ಲಿಸಲಿರುವ ಸೇವೆ ಮತ್ತು ಅಪ್ಪ-ಅಮ್ಮರನ್ನು ಹಂಬಲಿಸಿದಾಗಲೆಲ್ಲ ನೋಡಬಹುದೆಂಬ ಸಮಾಧಾನ ಅವನನ್ನು ಅಲ್ಲಿ ಹಿಡಿದಿಟ್ಟಿತ್ತು.
ಅಂತೂ ಅಲ್ಲಿನ ಆಯಕಟ್ಟು ಜಾಗೆಯಲ್ಲಿ ಅವನಿಗೊಂದು ಕೋಣೆ ಸಿಕ್ಕಿತ್ತು. ಊರಲ್ಲಾದರೆ ‘ದೊಡ್ಡಿ’ ಎಂದು ಕರೆಸಿಕೊಳ್ಳಬಹುದಾದ ಹತ್ತೂ ಹತ್ತು ಅಡಿಯ ಬಿದಿರು ಗಳದ ಮೇಲೆ ಕುಂತ ನಾಡಹೆಂಚಿನ, ಬಚ್ಚಲಮನೆ, ಕಕ್ಕಸು, ವಿದ್ಯುದೀಪ ಏನೂ ಇಲ್ಲದ ಕಡಪಾ ಕಲ್ಲುಹಾಸಿನ ಕೋಣೆ ಅವನಿಗೆ ಸಿಕ್ಕಿತ್ತು. ಮುಂಜಾನೆ ಎದ್ದಾಗಿನಿಂದ ಮುಂದಿನ ಕಾರ್ಯಕ್ರಮಗಳಿಗೆ ಹಿಂದೆ ಐನೂರು ಮೀಟರು ದೂರದಲ್ಲಿದ್ದ ಪ್ರಚ್ಛಂದವಾಗಿ ಹರಿಯುವ ಕಾಳಿ ನದಿ. ಕೋಣೆಯ ಸುತ್ತ-ಮುತ್ತ ಸರಕಾರಿ ನೌಕರರ ಮನೆಗಳಿದ್ದವೆಂಬುದೇ ವಿಶೇಷ. ಅಂತೂ ಪರಿಸರಕ್ಕೆ ಹೊಂದಿಕೊಂಡಿದ್ದ.
ತನ್ನ ಕೋಣೆಯ ಸಾಲಿನ ಮನೆಯಿಂದ ಬುಲೆಟ್ ಗಾಡಿಯಲ್ಲಿ ಓಡಾಡುತ್ತಿದ್ದ ಅಜಾನುಬಾಹು ಅರಣ್ಯ ಅಧಿಕಾರಿ ಅಶೋಕರನ್ನು ಸುಧಾಕರ ಗಮನಿಸಿದ್ದ. ಆದರೆ ಅವರಿಬ್ಬರ ಪರಿಚಯವಾದದ್ದು ಸುಧಾಕರನ ಆಫೀಸಿನಲ್ಲಿ. ಸುಪಾ ಅಣೆಕಟ್ಟಿನ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗಲಿರುವ ಅರಣ್ಯ ಭೂಮಿಯ ವಿವರ ಪಡೆಯಲು ಬಂದಿದ್ದ ವಲಯ ಅರಣ್ಯ ಅಧಿಕಾರಿ ಅಶೋಕರು, ಸುಧಾಕರನ ಪರಿಚಯವಾಗಿ ಅದು ಮಿತ್ರತ್ವವಾಗಿ ಮಾರ್ಪಟ್ಟಿತ್ತು. ತಮ್ಮ ಮನೆಯ ಸಾಲಿನ ಕೋಣೆಯಲ್ಲೇ ಇರುವನೆಂದು ತಿಳಿದ ಮೇಲಂತೂ ಸುಧಾಕರ ಮೇಲಿಂದ ಮೇಲೆ ಅಶೋಕರ ಮನೆಗೆ ಹೋಗಿ ಬರುತ್ತಿದ್ದ. ಮನೆಯೊಡತಿ ಶಾರದಕ್ಕ ಹಾಗೂ ಪುಟ್ಟ ಮಗು ವಿವೇಕನನ್ನು ತುಂಬಾ ಹಚ್ಚಿಕೊಂಡಿದ್ದ. ರಜಾ ದಿನಗಳಲ್ಲಂತೂ ಸುಧಾಕರನ ಠಿಕಾಣಿ ಅಶೋಕರ ಮನೆಯಲ್ಲೇ. ಹರಟೆ, ಚೆಸ್ಸು, ಇಸ್ಪೀಟು ಇತ್ಯಾದಿಗಳಲ್ಲಿ ರಜೆ ಮುಗಿಯುತ್ತಿತ್ತು.
ಸುಧಾಕರನಿಗೆ ಬಿಡುವು ಇದ್ದಾಗಲೆಲ್ಲಾ ಅಶೋಕರು ತಮ್ಮ ಮೋಟಾರ್ಬೈಕಿನಲ್ಲಿ ತಮ್ಮ ಕಾರ್ಯಕ್ಷೇತ್ರದ ಕಾಡಿಗೆ ಕರೆದೊಯ್ಯುತ್ತಿದ್ದರು. ಅವರ ಹೆಗಲಲ್ಲಿ ಯಾವಾಗಲೂ ‘ಕೆನಾನ್’ ಕ್ಯಾಮರಾ ಇರುತ್ತಿತ್ತು. ಅಶೋಕರು ತಮ್ಮ ವೃತ್ತಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅರಣ್ಯ ಸಂರಕ್ಷಣೆಯೇ ತಮ್ಮ ಉಸಿರೆಂದು ನಂಬಿದ್ದರು. “ಮನುಷ್ಯನ ದುರಾಸೆಯಿಂದ ಹಾಗೂ ಅರಣ್ಯ ಅತಿಕ್ರಮಣದಿಂದ ಕಾಡು ನಾಶವಾಗುತ್ತಿದೆ, ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟು, ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವಣ ಸಂಘರ್ಷಣೆ ಹೆಚ್ಚುತ್ತಿವೆ. ಅರಣ್ಯಗಳಲ್ಲಿ ವಾಸಿಸುವುದು ಪ್ರಾಣಿ ಪಕ್ಷಿ ಕೀಟಗಳ ಹಕ್ಕು” ಎನ್ನುತ್ತಿದ್ದರು.
ಒಂದು ದಿನ ಅಶೋಕರಿಗೆ ಮೇಲಾಧಿಕಾರಿಗಳ ರಾತ್ರಿ ವಸತಿಯ ಏರ್ಪಾಡಿಗೆ ಅಣಶಿ ಎಂಬಲ್ಲಿಗೆ ಹೋಗಬೇಕಾಗಿತ್ತು. ಗಾರ್ಡ್ ಒಬ್ಬನಿಗೆ ಮನೆ ಕಾಯುವ ವ್ಯವಸ್ಥೆ ಮಾಡಿ ಹೋಗಿದ್ದರು. ಮಧ್ಯರಾತ್ರಿಯಲ್ಲಿ ಅವರ ಗಾರ್ಡ್ ಓಡಿ ಬಂದು ಸುಧಾಕರನ ಕೋಣೆಯ ಬಾಗಿಲು ಬಡಿದಿದ್ದ. “ರೇಂಜರ್ ಸಾಹೇಬರ ಮಗುವಿಗೆ ಗಂಟಲು ಕಟ್ಟಿ ತ್ರಾಸಾಗ್ತಿದೆ ಬೇಗ ಬನ್ನಿ” ಎಂದು ಒಂದೇ ಉಸಿರಿನಲ್ಲಿ ಹೇಳಿದ್ದ. ಸುಧಾಕರ ಓಡಿ ಹೋದ. ಮಗು ವಿವೇಕ ಗರ ಗರ ಶಬ್ದ ಮಾಡುತ್ತ ಒದ್ದಾಡುತ್ತಿದ್ದ. ಶಾರದಕ್ಕ ಕಂಗಾಲಾಗಿದ್ದರು. ಕಾರ್ಯಪ್ರವೃತ್ತನಾದ ಸುಧಾಕರ, ಸಮೀಪದ ಮಮದಾಪೂರ ಎನ್ನುವವರನ್ನು ಸಂಪರ್ಕಿಸಿ ಅವರ ಕಾರಿನಲ್ಲಿ ದಾಂಡೇಲಿಯ ಮಕ್ಕಳತಜ್ಞ ಡಾ|| ಕಾಮತರಲ್ಲಿ ಒಯ್ದಿದ್ದ. “ಮಗುವಿಗೆ ಡಿಪ್ತೀರಿಯಾ ಲಕ್ಷಣವಿದೆ, ತರಲು ಸ್ವಲ್ಪ ತಡ ಮಾಡಿದರೂ ಪ್ರಾಣಾಪಾಯವಿತ್ತು” ಎಂದು ಉಪಚರಿಸಿ ಮರುದಿನ ಕಳಿಸಿದ್ದರು.
ಈ ಘಟನೆಯ ನಂತರ ಸುಧಾಕರ, ಆ ದಂಪತಿಗಳಿಗೆ ಇನ್ನೂ ಆಪ್ತನಾಗಿದ್ದ. ಅದುವರೆಗೂ ಅಶೋಕರು ತಮ್ಮ ಕುರಿತಾಗಿ ಏನೂ ಹೇಳಿಕೊಂಡಿರಲಿಲ್ಲ. ಒಂದು ಸಂದರ್ಭದಲ್ಲಿ ಮಾತ್ರ ತಮ್ಮ ವೈಯಕ್ತಿಕ ಬದುಕಿನ ಹೂರಣವನ್ನು ಬಿಚ್ಚಿಟ್ಟಿದ್ದರು.
ಅಶೋಕ-ಶಾರದಕ್ಕರ ಒತ್ತಾಸೆಗೆ ಸುಧಾಕರ ತಂದೆ ತಾಯಿಯರನ್ನು ಸುಪಾಕ್ಕೆ ಕರೆಸಿಕೊಂಡಿದ್ದ. ಅವರು ನಾಲ್ಕು ದಿನ ಅಶೋಕರ ಮನೆಯಲ್ಲೇ ಉಳಿದು ಹೋಗಿದ್ದರು. ಅವರ ಪರಸ್ಪರ ಪ್ರೀತಿ, ಮಗನ ಮೇಲಿನ ಕಾಳಜಿ, ಸಜ್ಜನಿಕೆ ಅಶೋಕರಿಗೆ ತುಂಬಾ ಹಿಡಿಸಿತು. ಅಂದೇ ರಾತ್ರಿ ಸುಪಾದ ಬ್ರಿಟಿಷ್ ಪ್ರವಾಸಿ ಬಂಗಲೆಯಲ್ಲಿ ಸುಧಾಕರನನ್ನು ಕರೆದೊಯ್ದರು. ತಮ್ಮ ಖಾಸಗಿ ಬದುಕಿನದೆಲ್ಲ ಬಿಚ್ಚಿಟ್ಟಿದ್ದರು.
ಅಶೋಕರು ಮೂಲತಃ ಉತ್ತರ ಕನ್ನಡದ ಸೋದೆಯವರು. ಸೋದೆ ಅರಸರ ರಾಜಧಾನಿಯಲ್ಲಿ ಶಾಲ್ಮಲಾ ನದಿಯ ತಟದಲ್ಲಿ ಇಮ್ಮಡಿ ಸದಾಶಿವರಾಯ, ಸುಂದರ ನೆಲ, ಜಲ, ಅರಣ್ಯ, ಗಿರಿಕಂದರಗಳ ಪರಿಸರದಲ್ಲಿ ಸೋದಾ ಕೋಟೆ ಕಟ್ಟಿದ್ದ. ನೆಲದುರ್ಗ, ಜಲದುರ್ಗ, ವನದುರ್ಗ, ಗಿರಿದುರ್ಗವೆಂದು ಆ ಪ್ರದೇಶಕ್ಕೆ ಕರೆಯುತ್ತಿದ್ದರು. ಮುಖ್ಯ ದ್ವಾರದ ಎದುರು ಸುಂದರವಾದ ಮಾರುತಿ ಮತ್ತು ಹುಲಿಯಪ್ಪನ ಗುಡಿ ಕಟ್ಟಿಸಿದ್ದ. ಅಶೋಕರ ಮೂಲ ವಂಶಜರನ್ನು ಆ ಗುಡಿಯ ಪೂಜೆಗಾಗಿ ನಿಯೋಜಿಸಿದ್ದರು. ಉಂಬಳಿಯಾಗಿ ಒಂದಿಷ್ಟು ಫಲವತ್ತಾದ ಭೂಮಿಯನ್ನು ನೀಡಿದ್ದರು.
ಕಾಲಘಟ್ಟದ ಅಳಿವಿನಲ್ಲಿ ಸೋದೆ ಅರಮನೆ ಇತಿಹಾಸ ಸೇರಿತು. ಗುಡಿಯ ಪೂಜೆ ನಿಂತಿತು. ಇವರ ವಂಶಜರು ಬೇಸಾಯದಲ್ಲಿ ತೊಡಗಿಕೊಂಡರು. ತಲಾಂತರದಲ್ಲಿ ಅಶೋಕರ ಅಜ್ಜ ಒಂದಿಲ್ಲೊಂದು ಚಟಕ್ಕೆ ಬಿದ್ದು, ಪ್ರಾಯಕ್ಕೆ ಬಂದ ಮಗಳು ಅಹಲ್ಯೆಯನ್ನು ಬಿಟ್ಟು ದೇಶಾಂತರ ಓಡಿ ಹೋದ. ಅನುಕಂಪದ ಸೋಗಿನಲ್ಲಿ ಬಂದ ಅನೇಕ ಯುವಕರ ಹಸಿ ಹಸಿ ಕಣ್ಣುಗಳಿಗೆ ಮಾಂಸದ ವಸ್ತುವಾಗಿದ್ದ ಇವರ ತಾಯಿ ಕೊನೆಗೂ ಶಿವಪ್ಪ ನಾಯಕರ ‘ಮಡಗಿಕೊಂಡ’ವಳಾಗಿ ಅಶೋಕ ಮತ್ತು ತಂಗಿ ಕಾತ್ಯಾಯನಿಯರಿಗೆ ಜನ್ಮಕೊಟ್ಟಿದ್ದಳು. ಸ್ವಲ್ಪ ಬುದ್ದಿ ಬರುವವರೆಗೂ ನಾಯಕರ ಆಶ್ರಯದಲ್ಲಿ ಬೆಳೆದ ಅಶೋಕರ ಮುಂದಿನ ಓದೆಲ್ಲಾ ರಾಮಕೃಷ್ಣಾಶ್ರಮ ಮತ್ತು ಮೈಸೂರಿನಲ್ಲಾಯ್ತು.
ಅಶೋಕರು ಭಾವುಕರಾಗುತ್ತಿರುವಂತೆ ಕಂಡಿತು ಸುಧಾಕರನಿಗೆ. “ನೋಡಿ ಮಿತ್ರರೇ, ನಿಮ್ಮ ಮತ್ತು ನಿಮ್ಮ ಹೆತ್ತವರ ನಡುವಣ ಅನೂಹ್ಯ ಸಂಬಂಧ, ಅವರ ಅವ್ಯಾಜ ಪ್ರೇಮ ನನಗೆ ಅಸೂಯೆ ಬರಿಸಿದೆ, ನನಗೆಲ್ಲಿದೆ ಆ ಭಾಗ್ಯ? ಪಾಪಿ ನಾನು, ನಾನೊಬ್ಬ ಸತ್ಯಕಾಮ”. ಭಾವುಕರಾಗಿ ಅಶೋಕರನ್ನು ಆ ರಾತ್ರಿ ಮನೆ ಮುಟ್ಟಿಸಿ ಬಂದಿದ್ದ.
ಸಂದರ್ಭ ಬಂದಾಗಲೆಲ್ಲಾ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸುಧಾಕರನನ್ನು ಕರೆದೊಯ್ಯುತ್ತಿದ್ದರು. ಸಸ್ಯಶಾಸ್ತ್ರದ ವಿದ್ಯಾರ್ಥಿಯಾದರೂ ಆಂಗ್ಲ ಸಾಹಿತ್ಯವನ್ನು ಪ್ರೀತಿಸುತ್ತಿದ್ದರು. ಕುರಂದಿ ಮೈನ್ಸ್ನ ಪಾಲುದಾರರಾದ ಅಯ್ಯಂಗಾರರು ಬೆಂಗಳೂರಿಗೆ ಹೋದಾಗಲೆಲ್ಲ ಇವರಿಗಾಗಿ ಹೊಸ ಹೊಸ ಇಂಗ್ಲಿಷ್ ಕಾದಂಬರಿ ತರುತ್ತಿದ್ದರು. ಕುಂಬಾರವಾಡಾದ ಅವರ ಕ್ಯಾಂಪಿನಲ್ಲಿ ಇಬ್ಬರೂ ರಸ ಸಾಹಿತ್ಯದ ಅಮಲಿಗಿಳಿಯುತ್ತಿದ್ದರು.
ಅಶೋಕರು ವಯಸ್ಸಾದ ತಾಯಿಯನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದರು. ತಂಗಿ ಕಾತ್ಯಾಯನಿಯನ್ನು ಧಾರವಾಡದಲ್ಲಿಟ್ಟು ಓದಿಸಿದರು. ತಾಯಿ ಅಹಲ್ಯಾಬಾಯಿ ತುಂಬಾ ದಿನ ಬದುಕದೆ, ಇವರು ಅಂಕೋಲೆಯ ಸೇವೆಯಲ್ಲಿರುವಾಗ ತೀರಿಕೊಂಡಿದ್ದರು. ಕಾತ್ಯಾಯಿನಿ ಆಗಾಗ್ಗೆ ಅಣ್ಣನ ಮನೆ ಸುಪಾಕ್ಕೆ ಬರುತ್ತಿದ್ದಳು. ಸುಧಾಕರನ ಭೆಟ್ಟಿಯಾದಾಗಲೆಲ್ಲಾ ಧಾರವಾಡ ವಿಶ್ವವಿದ್ಯಾಲಯದಲ್ಲಿ ತನ್ನ ವಿದ್ಯಾರ್ಥಿ ಜೀವನದ ಬಗ್ಗೆ ಜಂಬದಿಂದ ಹೇಳಿಕೊಳ್ಳುವ ಅವಳ ಆತ್ಮರತಿ ಸುಧಾಕರನಿಗೆ ಎಷ್ಟಕ್ಕೂ ಇಷ್ಟವಾಗುತ್ತಿರಲಿಲ್ಲ. ಮುಂದೊಂದು ಸಂದರ್ಭದಲ್ಲಿ ಅಶೋಕರು ಕಾತ್ಯಾಯಿನಿ ಜೀವನದಲ್ಲಿ ತಪ್ಪುಹೆಜ್ಜೆ ಇಡುತ್ತಿರುವುದು, ಪ್ರೊ|| ಪಂಚಮುಖಿ ಎನ್ನುವ ಸಂಸಾರಿಯೊಡನೆ ಸಲುಗೆ ಬೆಳೆಸಿದ್ದನ್ನೆಲ್ಲ ಖೇದದಿಂದ ಹೇಳಿದ್ದರು.
ಒಮ್ಮೆ, ವಿನಾಶದ ಅಂಚಿನಲ್ಲಿರುವ ಹೆಣ್ಣು ಕಾಳಿಂಗಸರ್ಪ ಮತ್ತು ಮಂಗಟ್ಟೆ (ಹಾರ್ನಬಿಲ್) ಪಕ್ಷಿಯ ಅಧ್ಯಯನತಂಡದ ಜೊತೆ ಅಶೋಕರು ಸುಧಾಕರನನ್ನೂ ಜೋಯಿಡಾ ಸಮೀಪದ ಡೇರಿಯಾ ಎಂಬ ಗ್ರಾಮಕ್ಕೆ ಕರೆದೊಯ್ದಿದ್ದರು. ಅಲ್ಲೇ ಸಮೀಪದ ಒಂದು ಮನೆಯ ಒಳಗಡೆ ಹೋಗಿ ಸುಮಾರು ಅರ್ಧ ಘಂಟೆ ಬಿಟ್ಟು ಬಂದಿದ್ದರು. ಇನ್ನೊಮ್ಮೆ ಅರಣ್ಯ ಗಿಡಗಳ ಸಾಗುವಳಿ ತೋಪಿಗೆ ಹೋದಾಗಲೂ ಹಾಗೆಯೇ ಆಯ್ತು. “ಈಗ ಬಂದೆ, ಇಲ್ಲೇ ಇರಿ” ಎಂದು ತಮ್ಮ ಮೋಟಾರು ಬೈಕು ಬಿಟ್ಟು ಆ ಮನೆಗೆ ಹೋಗಿ ಬರುತ್ತಿದ್ದ ಅಶೋಕರ ಈ ನಡಾವಳಿಯಿಂದ ಸುಧಾಕರನಿಗೆ ಆಶ್ಚರ್ಯವಾಗಿತ್ತು. ಸದಾ ಕಾಯಿಲೆಯಲ್ಲಿರುವ ಶಾರದಕ್ಕನಿಂದ ಸರಿಯಾಗಿ ಸಿಗದ ದೇಹಸುಖಕ್ಕಾಗಿ ಇಂಥದ್ದೊಂದು ಪರ್ಯಾಯ ವ್ಯವಸ್ಥೆಗೆ ಜಾರಿದರೇ ಎಂಬ ಅನುಮಾನ ಅವನಲ್ಲಿ ಸ್ಥಾಯಿಯಾಗಿತ್ತು. ಮುಂದೆ ಸುಧಾಕರನಿಗೆ ಕಂಪೆನಿಯ ಹೊಸ ಮನೆ ವಾಸಕ್ಕೆ ಸಿಕ್ಕಿತ್ತು. ಪ್ರಮೋಷನ್ ಪಡೆದು, ಮದುವೆಯಾಗಿ ಸಂಸಾರ ನಡೆಸಿದ್ದ. ಅಶೋಕರಿಗೆ ಮೇಲ್ಜಾಗೆಯಲ್ಲಿ ಖಾನಾಪುರಕ್ಕೆ ವರ್ಗವಾಗಿತ್ತು. ಆದರೆ ಸುಧಾಕರ ಮತ್ತು ಅಶೋಕರ ಸ್ನೇಹ ಸೇತು ಮಾತ್ರ ಭದ್ರವಾಗಿಯೇ ಇತ್ತು.
ಸುಧಾಕರ ಮತ್ತು ಹೆಂಡತಿ ಮಗಳು ದಿಲ್ಲಿಗೆ ಬಂದು ಆಗಲೇ ನಾಲ್ಕು ದಿನ ಕಳೆದಿತ್ತು. ಅಶೋಕರು ಒಂದು ಟ್ಯಾಕ್ಷಿಯನ್ನು ಗೊತ್ತು ಮಾಡಿ ಅವರಿಗೆ ದೆಹಲಿಯ ಸುತ್ತ ಮುತ್ತ ನೋಡಲೇಬೇಕಾದ ಆಗ್ರಾ, ಕುತುಬ್ ಮಿನಾರ್, ಕೆಂಪುಕೋಟೆ, ಇಂಡಿಯಾ ಗೇಟ್, ಅಕ್ಷರಧಾಮ, ರಾಷ್ಟ್ರಪತಿ ಭವನ ಎಲ್ಲವನ್ನೂ ತೋರಿಸಿದ್ದರು. ಮುಂಜಾನೆ ಹೊರಡುವುದಕ್ಕೂ ಮುನ್ನ ರೋಹಿಣಿ ರಾತ್ರಿ ಊಟಕ್ಕಾಗಿ ಹವ್ಯಕದ ದೇಸಿ ಅಡುಗೆ ಮತ್ತು ದಿನಕ್ಕೊಂದು ಕಜ್ಜಾಯ ಮಾಡಿಟ್ಟು ಹೋಗುತ್ತಿದ್ದಳು. ಮುಂಜಾನೆಯ ನಾಸ್ಟಾಕ್ಕೆ ಮತ್ತು ಮಧ್ಯಾಹ್ನದ ಊಟಕ್ಕೆ ಪರೋಟಾ, ದಹಿ, ತೇಪ್ಲಾ, ವಾಂಗೀಬಾತ್ಗಳನ್ನೆಲ್ಲಾ ಹರಿಲಾಲ್ ಡಿಬ್ಬಾ ಮಾಡಿಕೊಡುತ್ತಿದ್ದ. ಒಂದು ದಿನ ಎಲ್ಲರೂ ಸೇರಿ ಲೋಕಲ್ ಮಾರ್ಕೆಟಿಂಗ್ ಇಟ್ಟುಕೊಂಡಿದ್ದರು.
ವಿವೇಕನ ಕಾರಿನಲ್ಲಿ ಜಾಹ್ನವಿ ಒಬ್ಬಳೇ ಇದ್ದರೆ, ಉಳಿದವರು ಇನ್ನೊಂದು ಟ್ಯಾಕ್ಸಿಯಲ್ಲಿದ್ದರು. ಕರೋಲಿಭಾಗ್, ಕನೌಟಪ್ಲೇಸ್, ಸರೋಜಿನಿನಗರ ಎಲ್ಲ ಸುತ್ತಾಡಿದರು. ರೋಹಿಣಿಗೆ ಕಲಾಮಂದಿರದಲ್ಲಿ ಮೈಸೂರ ಸಿಲ್ಕ್ ಸೀರೆ, ಸುಧಾಕರನಿಗೆ ಫ್ಯಾಬ್ ಇಂಡಿಯಾದಿಂದ ಕುರ್ತಾ-ಪೈಜಾಮಾ ಮತ್ತು ಜಾಹ್ನವಿಗೆ ಸೋಚ್ದಿಂದ ಲೆಹಂಗಾವನ್ನು ಒತ್ತಾಯಮಾಡಿ ಕೊಡಿಸಿದ್ದರು. ಜಾಹ್ನವಿಯ ಬಟ್ಟೆಯ ಆಯ್ಕೆ ವಿವೇಕನದಾಗಿತ್ತು. “ಇದು ನಿನ್ನ ಸುಂದರ ರಂಗೋಲಿ ಕಲಾಕೃತಿಗಾಗಿ” ಎಂದು ಕೈಕುಲುಕಿ ಉಡುಗೊರೆ ನೀಡಿದ್ದ ವಿವೇಕ, ಮುಂದಕ್ಕೆ ದನಿಗೂಡಿಸಿದ ಕಾತ್ಯಾಯಿನಿ, “ನೀನು ಈ ಮನೆಯ ಸೊಸೆಯಾಗಲೆಂದು ಆಶಿಸೋಣ” ಎಂದಳು. ಮಿಕ್ಕವರೂ ಕೈಕುಲುಕಿದರು.
ಜಾಹ್ನವಿ ನಿತ್ಯವೂ ಮುಂಜಾನೆ ಮನೆಯ ಎದುರಿನ ನುಣುಪು ಕಲ್ಲಿನ ಮೇಲೆ ಆಕರ್ಷಕ ರಂಗೋಲಿ ಬಿಡಿಸುತ್ತಿದ್ದಳು. ಅಷ್ಟು ಬೇಗನೆ ಎಲ್ಲರನ್ನೂ ಅವಳು ಹಚ್ಚಿಕೊಂಡಿದ್ದಳು. ಒಂದುದಿನ ಸಂಜೆ ಎಲ್ಲರೂ ಹರಟೆಯಲ್ಲಿ ತೊಡಗಿಕೊಂಡಾಗ ಒಳಗಿನಿಂದ ಪ್ಯಾರಾಚ್ಯೂಟ್ ತೆಂಗಿನೆಣ್ಣೆ ತಂದು ಬೊಗಸೆಯಲ್ಲಿ ಹಾಕಿ, ಅಶೋಕರ ನೆರೆತ ತಲೆ ತುಂಬಾ ಸುರುವಿ, ಪಟಪಟನೆ ತಟ್ಟಿ, ‘ಇದೇನಿದು ಅಂಕಲ್, ನಿಮ್ಮ ತಲೆ ಕಾದ ಹೆಂಚಾಗಿದೆಯಲ್ಲಾ’ ಎಂದು ನೇವರಿಸುತ್ತಲೂ, ಅಶೋಕರು ಒಮ್ಮೆಲೆ ಭಾವುಕಾಗಿ, “ಓ ನನ್ನ ತಾಯೀ” ಎಂದು ಜಾಹ್ನವಿಯ ಮುಂಗೈ ಹಿಡಿದು ಕಣ್ಣೀರಿಟ್ಟ ದೃಶ್ಯ ರೂಪುಗೊಂಡಿತ್ತು. “ಅಂಕಲ್ ನೀವು ಬಂದಾಗಿನಿಂದಲೂ ಅಪ್ಪ ಲವಲವಿಕೆಯಿಂದಿದ್ದಾರೆ. ಅವರು ಸರಿಯಾಗಿ ನಕ್ಕಿದ್ದನ್ನು ನೋಡದೆ ತುಂಬಾ ದಿನಗಳಾಗಿದ್ದವು” ಎಂದಿದ್ದ ವಿವೇಕ.
ಇತ್ತೀಚೆಗೆ ನಿರ್ಲಿಪ್ತರಾಗಿರುತ್ತಿದ್ದುದನ್ನು ಸುಧಾಕರನೂ ಗಮನಿಸಿದ್ದ. ಅದು ಗಾಂಭೀರ್ಯವೋ, ಒಂದು ತರಹದ ವಿರಕ್ತಿಯೋ ಎಂದು ವಿಶ್ಲೇಷಿಸಿರಲಿಲ್ಲ. ಸದಾ ಅಧ್ಯಾತ್ಮದ ಗ್ರಂಥಗಳಲ್ಲಿ ತಲ್ಲಿನರಾಗಿರುತ್ತಾರೆ. ಎಂದಾದರೂ ತಮ್ಮ ಗುರು ಪರಿಸರತಜ್ಞ ಯಲ್ಲಪ್ಪರೆಡ್ಡಿಯವರೊಂದಿಗೆ ಚರ್ಚಿಸಲು ಬೆಂಗಳೂರಿಗೆ ಬಂದಾಗ ಹುಬ್ಬಳ್ಳಿಗೂ ಬರುತ್ತಿದ್ದರು. ಅಲ್ಲಿ ರಾಮಕೃಷ್ಣಾಶ್ರಮದ ರಘುವೀರಾನಂದಜೀಯವರೊಂದಿಗೆ ಅಧ್ಯಾತ್ಮದ ಚರ್ಚೆ ನಡೆಸುತ್ತಿದ್ದರು. ಹುಬ್ಬಳ್ಳಿಗೆ ಹೊರಡಲು ಎರಡು ದಿನ ಇರುವಾಗ ರಾತ್ರಿ ಅಶೋಕರು ಸುಧಾಕರನನ್ನು ದಿಲ್ಲಿಗೆ ಕರೆಸಿಕೊಂಡಿರುವ ಹಕೀಕತನ್ನು ವಿವರಿಸಿದರು. ತಂಗಿ ಕಾತ್ಯಾಯನಿ ದೆಹಲಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಿರಿಯ ಸಾಧಕರಿಂದ “ಪ್ಯಾಸೇಜ್ ಆಫ್ ಲೈಫ್” ಎಂಬ ಜೀವನಯಾತ್ರೆಯ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನು ವಿವರಿಸುತ್ತ, “ನನಗೂ ಒಂದಿಷ್ಟು ಆತ್ಮಾವಲೋಕನದ ಅವಕಾಶವಿದೆ, ಹೀಗಾಗಿ ನಿಮಗೆ ಬರಹೇಳಿದ್ದು” ಎಂದರು. ಮುನ್ನಾದಿನ ರಾತ್ರಿ ಅವರು ಪ್ರಕ್ಷುಬ್ಧರಾದಂತೆ ಸುಧಾಕರನಿಗೆ ಕಂಡಿತು.
ದೆಹಲಿಯ ಚಿತ್ತರಂಜನದಲ್ಲಿರುವ ‘ಉತ್ತರಾಯಿಣಿ’ ಸಾಂಸ್ಕøತಿಕ ಭವನ ಸಂಜೆ ಐದಕ್ಕೆಲ್ಲ ಕಳೆ ತುಂಬಿಕೊಂಡಿತ್ತು. ಆಗಲೇ ಸಭಾಭವನದ ಅರ್ಧ ಆಸೀನಗಳು ಭರ್ತಿಯಾಗಿದ್ದವು. ಹಾಲುಬಣ್ಣದ ಗೋಡೆಯ ಮೇಲೆ ಇಳಿಬಿಟ್ಟ ಬಣ್ಣದ ದೀಪದ ಸರ, ಓಡೋನಿಲ್ ಮಲ್ಲಿಗೆ ಘಮ ತುಂಬಿದ ಒಳಾಂಗಣ, ಎಲ್ಲಿಂದಲೋ ತೇಲಿ ಬಂದಂತಿರುವ ಪ್ರವೀಣ್ ಗೋಡಖಿಂಡಿಯವರ ‘ಯಮನ್’ರಾಗದ ಬಾನ್ಸುರಿ ವಾದನ ಇಡೀ ವಾತಾವರಣವನ್ನು ಮುದಗೊಳಸಿತ್ತು. ಕಾರ್ಯಕ್ರಮದಲ್ಲಿ ಸಾದರಪಡಿಸಲಿರುವ ಅನೇಕ ಸಾಧಕರು, ಅವರ ಬಳಗ, ದೆಹಲಿ ವಿಶ್ವವಿದ್ಯಾಲಯದ ಕಾತ್ಯಾಯಿನಿ ಗುಂಪು ಎನ್ನುತ್ತ ‘ಉತ್ತರಾಯಣಿ’ ತುಂಬಿಕೊಂಡಿತ್ತು. ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಅಶೋಕರು ಸುಧಾಕರನ ಪರಿವಾರದೊಂದಿಗೆ ಆಗಲೇ ಬಂದು ಸೇರಿದ್ದರು. ನಿಗದಿತ ಸಮಯದಲ್ಲಿ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ, ಆಯೋಜಕಿ ಕಾತ್ಯಾಯಿನಿ ವೇದಿಕೆಗೆ ಬಂದು ಸುಶ್ರಾವ್ಯವಾಗಿ ಗಣಪತಿಯ ಸ್ತುತಿ ಹಾಡಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದಳು. ಪಟಪಟನೆ ಅರಳು ಹುರಿದಂತೆ ಅವಳ ಅಸ್ಕಲಿತ ಭಾಷೆಯ ಝರಿಗೆ ಸುಧಾಕರ ಬಾಯ್ತೆರೆದು ನೋಡಹತ್ತಿದ. ತನ್ನ ಅಣ್ಣ ಅಶೋಕರನ್ನೇ ಮೊದಲು ವೇದಿಕೆಗೆ ಆಹ್ವಾನಿಸಿ, ಅರಣ್ಯ ಸಂರಕ್ಷಣೆ, ಪರಿಸರ ಕಾಳಜಿ, ವನ್ಯಜೀವಿಗಳ ರಕ್ಷಣೆಯಲ್ಲಿ ಅಶೋಕರ ಪಾತ್ರವನ್ನು ಬಿಂಬಿಸಿ, ಅವರಿಗೆ ವೇದಿಕೆ ಬಿಟ್ಟಿದ್ದಳು. ಅಶೋಕರು ಕಾಪಿಟ್ಟುಕೊಂಡಿದ್ದ ತಾವೇ ಸೆರೆಹಿಡಿದ ಛಾಯಾಚಿತ್ರಗಳ ಸ್ಲೈಡ್-ಶೋ ಮಾಡಿದ್ದನ್ನು ಪ್ರದರ್ಶಿಸುತ್ತ ಅಲ್ಲಲ್ಲಿ ವಿವರಣೆ ನೀಡುತ್ತಿದ್ದರು. ಪ್ರಾರಂಭದ ಅವರ ಚಿತ್ರ ರಾಡಿಕೊಳವೊಂದರಲ್ಲಿ ಅನೇಕ ಪ್ರಾಣಿಗಳಾದ ಎಮ್ಮೆ, ಹಂದಿ, ಕುದುರೆ ಇತ್ಯಾದಿ ಕೆಸರಾಟದಲ್ಲಿದ್ದರೆ, ಮೂಲೆಯಲ್ಲೊಂದು ಕಮಲದ ಮೊಗ್ಗು ಅರಳುವ ಹುನ್ನಾರದಲ್ಲಿತ್ತು. ಮನೋವೈಜ್ಞಾನಿಕ ಈ ದೃಶ್ಯಕ್ಕೆ ಯಾವುದೇ ವಿವರಣೆ ನೀಡದೆ, ನೋಡುಗನಿಗೇ ಬಿಟ್ಟಂತಿತ್ತು. ಮುಂದೆಲ್ಲಾ ಸಸ್ಯಶಾಮಲೆ ಸಹ್ಯಾದ್ರಿಯ ಗುಡ್ಡ ಬೆಟ್ಟಗಳು, ಶಾಲ್ಮಲಾ ನದಿಯ ವಿಹಂಗಮ ನೋಟ, ವಿವಿಧ ಸಸ್ಯಗಳು, ಕಂಗೊಳಿಸುವ ತೆಂಗು, ಅಡಿಕೆ, ಬಾಳೆತೋಟ ಇತ್ಯಾದಿ ಅಶೋಕರು ತಮ್ಮ ಬಾಲ್ಯದ ಕುರಿತಾಗಿ ಏನೂ ಹೇಳದೆ, ನೇರವಾಗಿ ರಾಮಕೃಷ್ಣಾಶ್ರಮ ಮತ್ತು ಮೈಸೂರಿನಲ್ಲಿ ಪದವಿ ಮುಗಿಸಿದ್ದು, ಮುಂದೆ ಅರಣ್ಯ ಇಲಾಖೆಯಲ್ಲಿನ ಸೇವೆ, ಸಾಧನೆ, ಪ್ರಶಸ್ತಿ, ಅವರ ವೈವಾಹಿಕ ಜೀವನ, ಮಗ ವಿವೇಕನ ಹುಟ್ಟು ಬಾಲ್ಯ ಎಲ್ಲವೂ ತಮ್ಮ ‘ಕೆನಾನ್’ ಕ್ಯಾಮರಾದಲ್ಲಿ ಸೆರೆಹಿಡಿದಿಟ್ಟ ಸುಂದರ ಕಪ್ಪು-ಬಿಳಿ ಚಿತ್ರಗಳಲ್ಲಿ ತೋರಿಸುತ್ತಿದ್ದರು. ಸ್ಲೈಡ್-ಶೋವನ್ನು ಕೆಲಕಾಲ ನಿಲ್ಲಿಸಿ,
“ಇಲ್ಲೊಂದು ವಿಷಯ ಹೇಳಲಿಕ್ಕಿದೆ, ಇಲ್ಲಿ ನನ್ನ ಜೀವನದಲ್ಲಿ ಒಬ್ಬ ಗೆಳೆಯನ ಪ್ರವೇಶವಾಗುತ್ತದೆ. ನಾನು ಕರ್ತವ್ಯದ ಮೇಲೆ ಕಾಡಿನಲ್ಲಿದ್ದಾಗ, ಮನೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ನನ್ನ ಕುಲದೀಪಕನನ್ನು ಬದುಕಿಸಿಕೊಟ್ಟ ಪುಣ್ಯಾತ್ಮ” ಎಂದು ಸುಧಾಕರ ಮತ್ತು ರೋಹಿಣಿಯನ್ನು ವೇದಿಕೆಗೆ ಕರೆಯುತ್ತಾರೆ. ಸುಧಾಕರನಿಗೆ ಇದು ತೀರಾ ಅನಿರೀಕ್ಷಿತವಾಗಿತ್ತು. ಎಲ್ಲವನ್ನೂ ಪೂರ್ವ ತಯಾರಿ ಮಾಡಿಕೊಂಡಂತೆ ವಿವೇಕನೂ ವೇದಿಕೆಗೆ ಬಂದು ಅವರಿಬ್ಬರಿಗೂ ಹಾರಹಾಕಿ ನಮಸ್ಕರಿಸಿ ಹಿಂದಿನ ದಿನ ತಂದಿದ್ದ ಉಡುಗೊರೆ ನೀಡಿದ್ದ. ಸಭೆಯ ತುಂಬಾ ಕರತಾಡನೆಯಿತ್ತು. ಮುಂದೆಲ್ಲ ಕಾಳಿ ನದಿ, ಪಶ್ಚಿಮ ಘಟ್ಟದ ವನರಾಶಿ, ವಿವಿಧ ಪ್ರಾಣಿ, ಪಕ್ಷಿ, ಕೃಷ್ಣ ಮೃಗ, ಕಾಳಿಂಗ ಸರ್ಪ, ಹುಲಿ, ಕರಡಿ, ಆನೆ, ಕಾಡುಕೋಣಗಳ ಜೀವನಕ್ರಮ ಕುರಿತ ಚಿತ್ರ-ವಿವರಣೆ ಇತ್ಯಾದಿ. ಮತ್ತೆ ಮಧ್ಯೆ ನಿಲ್ಲಿಸಿ,
“ಇನ್ನೊಂದು ವಿಷಯ, ಒಮ್ಮೆ ಕಾಡಿನಲ್ಲಿ ಕರಡಿಯೊಂದು ನನ್ನ ಮೇಲೆ ಎರಗಿ ಬಂದಿತ್ತು. ಅದೊಂದು ಭೀಕರ ದಾಳಿ. ಪಕ್ಕದಲ್ಲೇ ಇದ್ದ ಆದಿವಾಸಿ ನನ್ನನ್ನು ರಕ್ಷಿಸಲು ಹೋಗಿ ಒಂದು ಕೈಯನ್ನು ಕಳೆದುಕೊಂಡ. ಮಾನವೀಯತೆಯಿಂದ ಅವರ ಒಬ್ಬನೇ ಮಗನಿಗೆ ನಾನೇ ನೆರವು ನೀಡಿ ಬೆಳೆಸಿ ಓದಿಸಿದೆ. ಇಂದು ಆ ಹುಡುಗ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.”
ಈ ಬಾರಿ ಅಶೋಕರು ಮೋಟುಕೈನ ಒಬ್ಬ ಮುದುಕ ಮತ್ತು ಚೆಂದದ ಮೈಗಟ್ಟಿನ ಸುಂದರ ಹುಡುಗನನ್ನು ವೇದಿಕೆಗೆ ಕರೆಸಿ ಬಾಗೋ ಮತ್ತು ಅವರ ಮಗ ರಾಮದಾಸನನ್ನು ಪರಿಚಯಿಸಿ, ಕಾತ್ಯಾಯನಿಯ ಕೈಯಿಂದ ಇಬ್ಬರಿಗೂ ಉಡುಗೊರೆ ಮತ್ತು ಹೂಗುಚ್ಚ ಕೊಡಿಸಿದರು. ಮತ್ತೆ ಕರತಾಡನ. ಒಂದಿಷ್ಟೂ ಸುಳಿವು ನೀಡದೆ ಕಾರ್ಯಕ್ರಮ ಆಯೋಜಿಸಿದ್ದು ಆಶ್ಚರ್ಯವಾಯ್ತು ಸುಧಾಕರನಿಗೆ. ತಮ್ಮ ಜೀವನಾನುಭವ, ಮುಂದೆ ಪತ್ನಿಯ ವಿಯೋಗ ತಿಳಿಸಿ ಭಜಗೋವಿಂದದ ‘ಪುನರಪಿ ಜನನಂ’ ಶ್ಲೋಕದೊಂದಿಗೆ ಮುಗಿಸಿದ್ದರು. ಸಭಿಕರಿಂದ ಅವರ ನಿರೂಪಣೆಗೆ ತುಂಬಾ ಮೆಚ್ಚುಗೆ ಬಂದಿತ್ತು. ಮರುದಿನವೇ ಹುಬ್ಬಳ್ಳಿಗೆ ಹೊರಡಲಿದ್ದ ಸುಧಾಕರ ಮಾತ್ರ ಆ ರಾತ್ರಿ ಖಿನ್ನನಾಗಿದ್ದ.
ಜೋಯಿಡಾ ಹಳ್ಳಿಯ ಬಾಗೋ ಮತ್ತು ಮಗ ರಾಮದಾಸನನ್ನು ನೋಡಿದ ಮೇಲೆ ದಶಕಗಳಿಂದ ಮಡುಗಟ್ಟಿದ ಸಣ್ಣ ಗುಮಾನಿಗೆ ಪರಿಹಾರ ಸಿಕ್ಕಂತಾದರೂ, ಆ ಸ್ಪುರದ್ರೂಪಿ ಯುವಕ ಖಂಡಿತ ಬಾಗೋನ ಮಗ ಇರಲಿಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ ಅಶೋಕರು ಆ ಹಳ್ಳಿಯ ಮನೆಗೆ ಒಬ್ಬರೇ ಹೋಗಿ ಬರುತ್ತಿದ್ದುದ್ದು…… ಛೇ….. ಸಾಧ್ವಿ ಶಾರದಕ್ಕನಿಗೆ ಎಲ್ಲೋ ಅನ್ಯಾಯವಾಯಿತೇ? ಅವರು ಇಡೀ ಸಭೆಯಲ್ಲಿ ಬೆತ್ತಲು ಸತ್ಯವೊಂದನ್ನು ಮರೆಮಾಚಿದರಾ ಎಂದೆಲ್ಲ ಊಹಿಸಿ ಆ ತಾಪದಲ್ಲಿ ರಾತ್ರಿ ಸುಧಾಕರ ಸರಿಯಾಗಿ ಊಟ ಮಾಡಿರಲಿಲ್ಲ. ಅವನ ಸೂಕ್ಷ್ಮವನ್ನಾಗಲೇ ಗಮನಿಸುತ್ತಿದ್ದ ಅಶೋಕರು ಮನೆಯೆದುರಿನ ಕಲ್ಲುಬೆಂಚಿನಲ್ಲಿ ಕೂಡ್ರಿಸಿ, ಲೋಕಾಭಿರಾಮ ಮಾತುಕತೆ ಮುಗಿಸಿ ವಿಷಯಕ್ಕೆ ಬಂದಿದ್ದರು.
“ನೋಡಿ ಸುಧಾಕರ, ದಶಕಗಳಿಂದ ಬಚ್ಚಿಟ್ಟುಕೊಂಡ ಸತ್ಯವನ್ನು ಈಗ ಹೊರಹಾಕಬೇಕಾಗಿದೆ. ಪ್ರಾಯಶಃ ನನ್ನ ಮೇಲಿನ ನಿಮ್ಮ ಸಂದೇಹಕ್ಕೂ ತೆರೆ ಬೀಳಲು ಸಾಕು. ಅಸಲಿನಲ್ಲಿ ರಾಮದಾಸ ಕಾತ್ಯಾಯನಿಯ ಮಗ. ಅವಳ ಮಾರ್ಗದರ್ಶಕ ಡಾ|| ಪಂಚಮುಖಿಯ ಅನೈತಿಕ ಬೀಜದ ಪಿಂಡ. ಅದನ್ನು ಇಳಿಸುವ ಯೋಚನೆ ಮಾಡುವಷ್ಟರಲ್ಲೇ ಅವಳಿಗೆ ತಿಂಗಳು ತುಂಬುವುದರಲ್ಲಿತ್ತು. ಕ್ಯಾಸಲ್ರಾಕ್ ಆಸ್ಪತ್ರೆಯ ವೈದ್ಯ ಡಾ|| ದಿನೇಶರಿಂದ ಪ್ರಸೂತಿ ಮಾಡಿಸಿದೆ. ಮುದ್ದಾದ ಗಂಡು ಮಗು. ಬೀಸಾಡಲು ಬರುತ್ತಿರಲಿಲ್ಲವಲ್ಲ, ಗಟ್ಟಿ ಮನಸ್ಸು ಮಾಡಿ ಜೊಯಿಡಾದ ಮಕ್ಕಳಿಲ್ಲದ ಬಾಗೋ ದಂಪತಿಗಳ ತೆಕ್ಕೆಗೆ ಹಾಕಿ ಬಂದೆ. ಅದಕ್ಕೆ ಮೇಲಿಂದ ಮೇಲೆ ನಿಮ್ಮನ್ನು ಹೊರಗೆ ಬಿಟ್ಟು ಬಾಗೊನ ಮನೆಗೆ ಹೋಗಿ ಬರುತ್ತಿದ್ದುದು.”
ಸುಧಾಕರ ಇದನ್ನು ಕೇಳಿದವನೇ ಮೂಕನಾಗಿದ್ದ. ಮತ್ತೆ ಮುಂದುವರಿಸಿ, “ಇಲ್ಲಿಯ ಜೀವನ ಯಾಕೋ ನನಗೆ ಬೇಸರವಾಗಿದೆ. ಇತ್ತೀಚೆಗೆ ಅಮ್ಮನ ನೆನಪು ಅವ್ಯಾಹತವಾಗಿ ಕಾಡುತ್ತಿದೆ. ಪಾಪ, ಅವಳನ್ನು ನಾನು ಸರಿಯಾಗಿ ನೋಡಿಕೊಳ್ಳಲಿಲ್ಲ. ಪರಿಸ್ಥಿತಿಯ ಕೈಗೊಂಬೆಯಾಗಿದ್ದ ಅವಳಾದರೂ ಏನು ಮಾಡಬಹುದಿತ್ತು ಹೇಳಿ?” ಎಂದು ಬಿಕ್ಕಿ ಬಿಕ್ಕಿ ಅಳಹತ್ತಿದರು. ಸುಧಾಕರ ಅವರ ಮುಂಗೈಯನ್ನು ಗಟ್ಟಿಯಾಗಿ ಹಿಡಿದಿದ್ದ. ಏನೋ ಖಚಿತ ನಿರ್ಧಾರ ಕೈಗೊಂಡವರಂತೆ ಅಶೋಕರು ಮಾತು ಮುಂದುವರಿಸಿದರು. “ನಾನೀಗ ಸೋದೆಗೆ ಹೋಗಿ ಉಳಿಯಬಯಸಿದ್ದೇನೆ. ಅಲ್ಲಿನ ನೆಲ ಮತ್ತು ಬಿಟ್ಟು ಹೋದ ಅಮ್ಮ ಸದಾ ಗಂಧವತಿಯಾಗಿ ಕಾಡುತ್ತಿದ್ದಾರೆ. ಪಾಳುಬಿದ್ದ ಮಾರುತಿ ಮತ್ತು ಹುಲಿಯಪ್ಪರಿಗೆ ಮತ್ತೆ ದೀಪ ಹಚ್ಚುತ್ತೇನೆ. ಹಾಯಾಗಿದ್ದು, ಸ್ವರ್ಣವಲ್ಲಿ ಶ್ರೀಗಳ ಹಸಿರುಕ್ರಾಂತಿಗೆ ಕೈ ಜೋಡಿಸುತ್ತೇನೆ” ಎನ್ನುತ್ತಲೂ, ಸುಧಾಕರ, “ಸರ್, ನೀವು ಅನಂತವಾಗಿ ದೊಡ್ಡವರು. ನಿಮ್ಮನ್ನು ಬೀಗರಾಗಿಸಿಕೊಳ್ಳುವುದು ನಮ್ಮ ಭಾಗ್ಯ” ಎಂದು ಬಲವಾಗಿ ಅಪ್ಪಿಕೊಂಡ.