ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
58ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸೆಪ್ಟೆಂಬರ್ 2020 > ನ ದೈನ್ಯಂ, ನ ಪಲಾಯನಂ

ನ ದೈನ್ಯಂ, ನ ಪಲಾಯನಂ

ಒಂದಕ್ಕೆ ಒಂದನ್ನು ಸೇರಿಸಿದರೆ ಎರಡು ಆಗುವುದಕ್ಕೆ ಬದಲು ಹನ್ನೊಂದು ಆಗುವ ಸಂದರ್ಭಗಳು ಇರುತ್ತವೆ. ಕಳೆದ ಜುಲೈ ಮೂರರಂದು ನಸುಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಮು ಪರ್ವತಾಗ್ರ ಪ್ರಾಂತಕ್ಕೆ ನೀಡಿದ ಭೇಟಿ ಅಂತಹ ಒಂದು ಸಂದರ್ಭ. ವಾಸ್ತವವಾಗಿ ಪೂರ್ವನಿಶ್ಚಿತ ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥಸಿಂಗ್ ಅಲ್ಲಿಗೆ ಭೇಟಿ ನೀಡುವುದಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಪ್ರಧಾನಿಗಳೇ ಗಡಿಭಾಗಕ್ಕೆ ಧಾವಿಸಿದುದು ಅತ್ಯಂತ ಪ್ರೇರಣಾದಾಯಕವೆನಿಸಿತು. ಸೈನಿಕರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಗಳ ಚಹರೆಯಲ್ಲಿ ಎದ್ದುಕಾಣುತ್ತಿದ್ದ ಆತ್ಮವಿಶ್ವಾಸ ಮತ್ತು ದಾಢ್ರ್ಯವಂತೂ ಅತುಲನೀಯವಾಗಿದ್ದವು. ನಮ್ಮ ಸಮರ್ಪಿತ ಸೈನಿಕರನ್ನು ಉದ್ದೇಶಿಸಿ ಪ್ರಧಾನಿಗಳು ಮಾತನಾಡಿದರಾದರೂ ಆ ಸಂದೇಶೋದ್ಘೋಷ ತಲಪಿದ್ದು ಗಡಿಯಾಚೆಗೆ. ಸಮುದ್ರಮಟ್ಟದಿಂದ 11,000 ಅಡಿ ಎತ್ತರದಲ್ಲಿರುವ ನಿಮು ಎಂಬ ಆ ಅಪರಿಚಿತ ಪ್ರಾಂತ ಏಕಾಏಕಿ ಭಾರತೀಯರಿಗೆಲ್ಲ ಸುಪರಿಚಿತವಾಗಿಬಿಟ್ಟಿತು.

ವಾಸ್ತವ ತಥ್ಯಾಧಾರಿತ ರಾಜಕಾರಣದಲ್ಲಿ ಭ್ರಮೆಗಳಿಗೆ ಆಸ್ಪದವಿರದು. ಆ ಕ್ಷೇತ್ರದ ಆಗುಹೋಗುಗಳು ಗಣಿತಶಾಸ್ತ್ರದಷ್ಟೆ ಕರಾರುವಾಕ್ಕಾಗಿರುತ್ತವೆ. ಅವುಗಳನ್ನು ಗ್ರಹಿಸುವುದರಲ್ಲಿ ಸ್ಫುಟತೆಯ ನ್ಯೂನತೆ ಇರಬಹುದಷ್ಟೆ. ಈಗ್ಗೆ ಆರು ವರ್ಷ ಹಿಂದೆಯೆ (ಸೆಪ್ಟೆಂಬರ್ 2014) ಪ್ರಧಾನಿ ನರೇಂದ್ರ ಮೋದಿಯವರು ಜಪಾನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದಿನ ಜಗತ್ತಿನ ವಾಸ್ತವದ ಬಗೆಗೆ ಸೂತ್ರರೂಪವಾಗಿ ವ್ಯಾಖ್ಯೆ ಮಾಡಿದ್ದರು, ಹೀಗೆ: “ಈಗ ಜಗತ್ತಿನಲ್ಲಿ ಎರಡು ಚಿಂತನಧಾರೆಗಳ ದೇಶಗಳಿವೆ: ಒಂದು ವಿಸ್ತರಣವಾದಿ ಪ್ರವೃತ್ತಿಯವು; ಇನ್ನೊಂದು ವಿಕಾಸವಾದಿ ಪ್ರವೃತ್ತಿಯವು ಮತ್ತು ಇದು ಮಾತ್ರ ಅಭ್ಯುದಯಕ್ಕೂ ಶಾಂತಿಗೂ ದಾರಿಮಾಡಬಲ್ಲದೆಂದು ನಂಬಿರುವವು.” 2020 ಜುಲೈ 3ರಂದು ನಿಮುವಿನಲ್ಲಿ ಭಾರತೀಯ ಸೇನಾಪಡೆಗಳನ್ನು ಉದ್ದೇಶಿಸಿ ಪ್ರಧಾನಿಗಳು ಮಾಡಿದ ಸ್ಫೂರ್ತಿಪ್ರದ ಭಾಷಣವು ಬಿಂಬಿಸಿದುದೂ ಅದೇ ದರ್ಶನಸ್ಫುಟತೆಯನ್ನು: “ದೇಶದ ಮತ್ತು ಇಡೀ ಜಗತ್ತಿನ ಹಾಗೂ ಮಾನವತೆಯ ಪ್ರಗತಿಗಾಗಿ ಶಾಂತಿಯೂ ಸೌಹಾರ್ದವೂ ಅವಶ್ಯವೆಂಬುದು ಎಲ್ಲರ ನಂಬಿಕೆಯಾಗಿದೆ. ಆದರೆ ದುರ್ಬಲರಾದವರು ನಮಗೆ ಶಾಂತಿ ತಂದುಕೊಡಲಾರರೆಂಬುದನ್ನೂ ನಾವು ಚೆನ್ನಾಗಿಯೆ ಬಲ್ಲೆವು. ದುರ್ಬಲರ ಮೂಲಕ ಶಾಂತಿಯು ಜನಿಸಲಾರದು. ಶಾಂತಿಯ ಸಾಧನೆಗೆ ಪೂರ್ವಶರತ್ತೆಂದರೆ ಶೌರ್ಯಪರಾಕ್ರಮಗಳು. ಶೌರ್ಯ, ಸ್ವಾಭಿಮಾನ, ವರ್ತನೆಯಲ್ಲಿ ಘನತೆ, ಭರವಸೆ – ಇವು ನಾಲ್ಕು ಯಾವುದೇ ದೇಶದ ಸೈನ್ಯದ ಆಧಾರಸ್ತಂಭಗಳು – ಎಂಬ ಸಂತ ತಿರುವಳ್ಳುವರ್ ಅವರ ಉಕ್ತಿಯು ಸದಾ ಮನನಾರ್ಹ.”

ಸಾಂದರ್ಭಿಕವಾಗಿ ನರೇಂದ್ರ ಮೋದಿಯವರು ಭಾರತದ ಕ್ಷಾತ್ರ ಪರಂಪರೆಯನ್ನೂ ಸ್ಮರಿಸಿ ಸೈನಿಕರಿಗೆ ಹೇಳಿದರು: “ಸಾವಿರಾರು ವರ್ಷಗಳಲ್ಲಿ ಹತ್ತಾರು ಆಕ್ರಮಕರನ್ನು ನೀವು ಹಿಮ್ಮೆಟ್ಟಿಸಿರುವಿರಿ. ಇದೇ ನಮ್ಮ ದೇಶದ ಪರಿಚಾಯಕವಾಗಿರುವುದು. ನಾವೆಲ್ಲ ಶ್ರೀಕೃಷ್ಣನ ಆರಾಧಕರಲ್ಲವೆ? ಕೊಳಲನ್ನು ನುಡಿಸಿದ ಶ್ರೀಕೃಷ್ಣನ ಕೈಯೇ ಆವಶ್ಯಕತೆಯುಂಟಾದಾಗ ಸುದರ್ಶನಚಕ್ರವನ್ನೂ ಪ್ರಯೋಗಿಸಿತಲ್ಲವೆ? ಈ ಪರಂಪರೆ ಇರುವುದರಿಂದಲೇ ನಮಗೊದಗಿದ ಪ್ರತಿ ಸವಾಲೂ ನಮ್ಮನ್ನು ಹೆಚ್ಚು ಬಲಿಷ್ಠವಾಗಿಸಿದೆ. …. ದೇಶವು ನಿಮ್ಮ ಸಾಹಸವಂತಿಕೆಯಿಂದ ಅತ್ಯಂತ ಹೆಮ್ಮೆ ತಳೆದಿದೆ. …. ಈ ಗಲ್ವಾನ್ ಕಣಿವೆಯಲ್ಲಿ ನೀವೆಲ್ಲ ಮೆರೆದಿರುವ ಶೌರ್ಯ ಇತ್ತೀಚಿನ ನಿದರ್ಶನವಷ್ಟೆ.”

ಭಾರತವು ಶಾಂತಿಪ್ರಿಯ ದೇಶವೆಂಬುದು ಎಷ್ಟು ವಾಸ್ತವವೋ ಅದು ತನ್ನ ಗಡಿಗಳ ರಕ್ಷಣೆಯಲ್ಲಿ  ರಾಜಿಯಾಗದ ಸಾಮಥ್ರ್ಯ ತೋರಬಲ್ಲದೆಂಬುದೂ ಅಷ್ಟೇ ವಾಸ್ತವವೆಂಬ ಆತ್ಮವಿಶ್ವಾಸ ನರೇಂದ್ರ ಮೋದಿಯವರ ಒಂದೊಂದು ಮಾತಿನಲ್ಲೂ ಬಿಂಬಿತವಾಗಿದೆ. ಹಿಂದಿನ ವರ್ಷಗಳಲ್ಲಾದರೋ ಸಂಧಾನ ಸಂದರ್ಭಗಳಲ್ಲಿ “ಗಡಿಗಳ ವಿಷಯ ನಾಜೂಕಿನದು, ಅದನ್ನು ಮಾತುಕತೆಗಳೊಳಕ್ಕೆ ಎಳೆದು ತರುವುದು ಬೇಡ” ಎಂಬ ಜಾಡಿನ ನಿಸ್ಸತ್ತ್ವತೆ ಮಾಮೂಲು ನಡವಳಿಯೇ ಆಗಿಬಿಟ್ಟಿತ್ತು.

2008 ಜನವರಿಯ ಬೈಜಿಂಗ್ ಭೇಟಿಯಲ್ಲಿ ಆಗಿನ ಪ್ರಧಾನಿ ಮನಮೋಹನ್‍ಸಿಂಗ್ “ಪರಸ್ಪರ ಅನುಕೂಲಕರವಾದ ಸಹಕಾರವೇ ಭಾರತದ ಧೋರಣೆ” ಎಂದು ಸ್ವಸ್ತಿವಾಚನ ಮಾಡಿ ವಾಪಸ್ಸಾಗಿದ್ದರು.

2010ರ ಮೇ ತಿಂಗಳಲ್ಲಿ ಚೀನಾಕ್ಕೆ ಭೇಟಿಯಿತ್ತ ಕಾಂಗ್ರೆಸ್ ವರಿಷ್ಠ ಜೈರಾಮ್ ರಮೇಶ್ ಅವರೂ “ಭಾರತದಲ್ಲಿ ಚೀನಾದ ಹಣ ಹೂಡಿಕೆಯ ವಿಷಯದಲ್ಲಿ ಭಾರತೀಯರು ಅನಾವಶ್ಯಕವಾಗಿ ಗಾಬರಿಗೊಂಡಿದ್ದಾರೆನಿಸುತ್ತದೆ” ಎಂದು ಪ್ರಾಜ್ಞವಾಗಿ ವಿಶ್ಲೇಷಿಸಿದ್ದರು. ಅದಕ್ಕೆ ಹೋಲಿಸಿದಲ್ಲಿ ಚೀನಾ ಅಧ್ಯಕ್ಷ ಕ್ಸೈ ಜಿಂಪಿಂಗ್‍ರ 2014ರ ಭಾರತ ಭೇಟಿಯ ಸಂದರ್ಭದಲ್ಲಿಯೆ ‘ಗಡಿ ಉಲ್ಲಂಘನೆಗಳು ಭಾರತಕ್ಕೆ ಸ್ವೀಕಾರ್ಯವಲ್ಲ’ ಎಂದು ನರೇಂದ್ರ ಮೋದಿ ಖಂಡತುಂಡವಾಗಿ ಹೇಳಿದರು. ಅಲ್ಲಿಂದೀಚೆಗೂ ಅವರು ತಮ್ಮ ನಿಲವನ್ನು ಎಂದೂ ಸಡಿಲಗೊಳಿಸಿಲ್ಲ. ನಾಯಕತ್ವವೆಂಬ ಹೆಸರು ಸಲ್ಲುವುದು ಇಂತಹ ದಾಢ್ರ್ಯವಂತಿಕೆಗೇ ಅಲ್ಲವೆ?

ಅಂತಿಮವಾಗಿ ಜಗತ್ತು ಗೌರವಿಸುವುದು ಅಸ್ಖಲಿತ ಮನೋಬಲವನ್ನೇ ಹೊರತು ‘ಅಂದರಿಕೀ ಮಂಚಿವಾಡು’ ಎಂಬಂತಹ ಒನಪು ಒಯ್ಯಾರ ಸೋಗಲಾಡಿತನಗಳನ್ನಲ್ಲ.  ನೆರೆದೇಶಗಳ ದುರಾಕ್ರಮಣಪ್ರವೃತ್ತಿಗಳಿಗೂ ಒಂದಷ್ಟುಮಟ್ಟಿಗೆ ಹೆದ್ನ(ಬ್ರೇಕ್)ವಾಗಿ ಕೆಲಸ ಮಾಡಬಲ್ಲದ್ದು ದಾಢ್ರ್ಯಪೂರ್ಣ ವರ್ತನೆಯೇ.

ಚೀನಾವನ್ನು ಎದುರುಹಾಕಿಕೊಂಡಲ್ಲಿ ಭಾರತಕ್ಕೆ ಆರ್ಥಿಕ ಕ್ಷೇತ್ರದಲ್ಲಿ ಒಂದಷ್ಟು ಹಿನ್ನಡೆಯಾದೀತೆಂಬ ಸಂಭವನೀಯತೆಯೂ ಪ್ರಧಾನಿಯವರ ನಿಲವನ್ನು ಸಡಿಲಗೊಳಿಸಿಲ್ಲವೆಂಬುದು ಈಗಿನ ಸರ್ಕಾರದ ಆದ್ಯತಾಪ್ರಜ್ಞೆಯನ್ನು ಸ್ಪಷ್ಟಗೊಳಿಸಿದೆ.

ಕಳೆದ ಜೂನ್ 29ರಂದು ಮೋದಿ ಸರ್ಕಾರ ಒಮ್ಮೆಗೇ ಐವತ್ತು ಚೀನೀ ‘ಆ್ಯಪ್’ಗಳನ್ನು ನಿಷೇಧಿಸಿದಾಗ ಅದು ಅವ್ಯವಹಾರ್ಯವೆಂದು ವ್ಯಂಗ್ಯವಾಡಿದವರಿಗೆ ಕಡಮೆಯಿಲ್ಲ. ಆದರೆ ಭಾರತ ಅದನ್ನು ಜೀರ್ಣಿಸಿಕೊಂಡದ್ದು ಮಾತ್ರವಲ್ಲದೆ ನಿಷೇಧಾವಳಿ ಪ್ರಕ್ರಿಯೆಯನ್ನು ಮುಂದುವರಿಸಿದೆ. ಪ್ರಳಯವೇನೂ ಆಗಿಲ್ಲ!

ಸದಾ ಒಂದಲ್ಲ ಒಂದು ಗಡಿಪ್ರದೇಶದಲ್ಲಿ ಚೀನಾದ ಕಿರಿಕಿರಿ ಇರುವುದೇ. ಹಾಗೆಂದು ಭಾರತ ಪೂರ್ಣಪ್ರಮಾಣದ ಯುದ್ಧಕ್ಕೆ  ಇಳಿಯುವುದು ಅಪ್ರಬುದ್ಧವಾಗುತ್ತದೆ. ಗಡಿಗಳ ಗಡಿಬಿಡಿಗಳನ್ನು ಕನಿಷ್ಠಗೊಳಿಸುವ ಮಾರ್ಗವೆಂದರೆ ಸವಾಲುಗಳನ್ನೆದುರಿಸುವಲ್ಲಿ ಭಾರತ ಸದಾ ಸಜ್ಜಾಗಿರುವುದೇ. ಇದಕ್ಕೆ ಪರ್ಯಾಯವಿಲ್ಲವೆಂಬ ಪ್ರಜ್ಞೆಯನ್ನು ಈಗಿನ ಆರೂಢ ಸರ್ಕಾರ ಹಿಂದಿನವುಗಳಿಗಿಂತ ನಿಚ್ಚಳವಾಗಿ ಪ್ರಕಟೀಕರಿಸಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ