ಕೃತ್ವಾ ಪಾಪಂ ಹಿ ಸಂತಪ್ಯ ತಸ್ಮಾತ್ಪಾಪಾತ್ ಪ್ರಮುಚ್ಯತೇ |
ನೈವಂ ಕುರ್ಯಾಂ ಪುನರಿತಿ ನಿವೃತ್ತ್ಯಾ ಪೂಯತೇ ತು ಸಃ ||
– ಮನುಸ್ಮೃತಿ
“ಯಾವುದೊ ಅಕಾರ್ಯವನ್ನು ಮಾಡಿದವನು ಪಶ್ಚಾತ್ತಾಪಪಟ್ಟು ನಾನು ಹೀಗೆ ಮತ್ತೆ ಎಂದೂ ಮಾಡಬಾರದು ಎಂದು ಮನಸ್ಸು ಮಾಡಿದರೆ ಅವನು ಪಾಪದಿಂದ ಮುಕ್ತನಾಗಿ ಪವಿತ್ರನಾಗುತ್ತಾನೆ.”
ಎಷ್ಟೋ ವೇಳೆ ತಮ್ಮಿಂದ ತಪ್ಪು ಘಟಿಸಿದ್ದರೂ ಅದನ್ನು ಮುಚ್ಚಿಹಾಕಲು ಯತ್ನಿಸುವುದುಂಟು. ಇನ್ನು ತಮ್ಮಿಂದ ತಪ್ಪು ನಡೆಯಿತೆಂದು ಹೇಳಿ ಕ್ಷಮೆ ಕೇಳುವುದಂತೂ ಅನಿವಾರ್ಯವಾದಾಗ ಮಾತ್ರವೆನ್ನಬಹುದು. ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ ದಾಢ್ರ್ಯ ಬೇಕಾಗುತ್ತದೆ.
ಪಶ್ಚಾತ್ತಾಪದ ಸಂಸ್ಕಾರಕಾರಿ ಗುಣವನ್ನು ಸ್ಮೃತಿಗಳು ಒತ್ತಿಹೇಳಿವೆ. ಕಾರಣವೆಂದರೆ ಅದು ವ್ಯವಹಾರದಲ್ಲಿ ಅಸಮತೋಲವನ್ನು ನಿವಾರಿಸಲು ನೆರವಾಗುತ್ತದೆ. ಅದಕ್ಕಿಂತ ಮಿಗಿಲಾಗಿ ತಪ್ಪು ಮಾಡಿದವನ ಮನಸ್ಸಿನಲ್ಲಿಯೂ ಕಹಿಯನ್ನು ಕಳೆದು ಒಂದಷ್ಟು ಸಮಾಧಾನಕ್ಕೆ ಅದು ದಾರಿಮಾಡುತ್ತದೆ – ಪಶ್ಚಾತ್ತಾಪವು ಪ್ರಾಮಾಣಿಕವಾಗಿದ್ದಲ್ಲಿ.
ಈಗ್ಗೆ ಹತ್ತು-ಹನ್ನೊಂದು ವರ್ಷ ಹಿಂದಿನ ಒಂದು ಘಟನೆ. ತೆಲುಗು ಚಿತ್ರರಂಗದ ಗಣ್ಯ ಸಂಗೀತ ನಿರ್ದೇಶಕ ಕೀರವಾಣಿ ಅವರು ಸಂಯೋಜಿಸಿದ್ದ ಚಿತ್ರಗೀತೆಗಳ ಸಂಕಲನದ ಲೋಕಾರ್ಪಣೆಯ ಸಂದರ್ಭ. ಸಮಾರಂಭದ ಕೇಂದ್ರವ್ಯಕ್ತಿ ಅವರೇ. ಆದರೆ ಅವರು ತಮ್ಮ ಸಾಧನೆಗಳ ಬಗೆಗೆ ಮಾತನಾಡುವುದಕ್ಕೆ ಬದಲಾಗಿ ಹೀಗೆಂದರು: “ನನ್ನ ಅಭಿಮಾನಿಗಳಾದ ನೀವೆಲ್ಲ ಸೇರಿರುವಾಗ ನಾನು ಹಿಂದೆ ಮಾಡಿದ್ದ ಒಂದೆರಡು ತಪ್ಪುಗಳಿಗಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆನಿಸಿದೆ. ಅವು ನಡೆದು ಎಷ್ಟೋ ದಿನಗಳಾಗಿದ್ದರೂ ನನ್ನ ಮನಸ್ಸಿನ ಮೂಲೆಯಿಂದ ಮರೆಯಾಗಿಲ್ಲವಾದ್ದರಿಂದ ನಿಮ್ಮೆಲ್ಲರ ಸಮ್ಮುಖದಲ್ಲಿ ಹೇಳಿಕೊಳ್ಳುತ್ತಿರುವೆ. ಒಮ್ಮೆ ಸಂಗೀತ ನಿರ್ದೇಶಕ ಚಕ್ರವರ್ತಿ ಅವರು ನೀಡಿದ್ದ ಸಂಭಾವನೆ ಕಡಮೆಯೆನಿಸಿ ಆ ಕೆಲಸದಿಂದ ಕಳಚಿಕೊಂಡು ಅವರಿಗೆ ನೋವುಂಟು ಮಾಡಿದ್ದೆ. ನಾನು ಹಾಗೆ ಮಾಡಬಾರದಾಗಿತ್ತು.
ಇನ್ನೊಮ್ಮೆ ಯಾವುದೊ ಸಣ್ಣ ಕಾರಣಕ್ಕಾಗಿ ನಿರ್ದೇಶಕ ರಾಘವೇಂದ್ರರಾವ್ ಅವರೊಡನೆ ಜಗಳ ಮಾಡಿ ಮನಸ್ತಾಪ ಕಟ್ಟಿಕೊಂಡಿದ್ದೆ. ಹೀಗೆ ಆಗೀಗ ನನ್ನ ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದೇನೆ. ಅವಕ್ಕಾಗಿ ತಮ್ಮೆಲ್ಲರಲ್ಲಿ ಕ್ಷಮೆ ಕೋರುತ್ತಿದ್ದೇನೆ.”
ಅದೊಂದು ಮಾರ್ಮಿಕ ಸಂದರ್ಭ. ಯಾರೂ ಅದನ್ನು ಕೀರವಾಣಿ ಅವರಿಂದ ಕೋರಿರಲಿಲ್ಲ, ನಿರೀಕ್ಷಿಸಿರಲೂ ಇಲ್ಲ. ಪ್ರಬುದ್ಧಮನಸ್ಕರಾದ ಅವರು ಆತ್ಮಾವಲೋಕನದಿಂದ ಸ್ವ-ಪ್ರಕ್ಷಾಲನಕ್ಕಾಗಿ ಹೀಗೆ ವರ್ತಿಸಿದ್ದರು.