ಮಾನವಜೀವಿಗಳು ಈ ಲೋಕಕ್ಕೆ ಬರುವಾಗಲೂ ಸ್ವರ್ಗದಲ್ಲಿರುವ ಭಗವಂತನ ಸಾಯುಜ್ಯಕ್ಕೆ ಸೇರುವಾಗಲೂ ಏಕಾಂಗಿಗಳಾದರೂ, ಇಲ್ಲಿರುವಷ್ಟು ಕಾಲ ಒಂಟಿಯಾಗಿ ಬಾಳಲಾರರು! ಕುಟುಂಬವನ್ನಾಗಲಿ ಅಥವಾ ಒಂದು ಗುಂಪನ್ನಾಗಲಿ ಏರ್ಪಡಿಸಿಕೊಂಡು ಸಹಬಾಳ್ವೆ ನಡೆಸುವುದು ಅವರ ಸ್ವಭಾವ. ಗುಂಪುಗುಂಪಾಗಿ ವಾಸಿಸುವ ಅವರ ಪ್ರವೃತ್ತಿಯಿಂದಾಗಿ, ಆ ಗುಂಪು ಮಿತಿಮೀರಿ ಬೆಳೆದಾಗ ಸಣ್ಣ ಸಣ್ಣ ಪಂಗಡಗಳಾಗಿ ವಿಭಜನೆಯಾಗುವುದು ಅನಿವಾರ್ಯವಾಗುತ್ತದೆ. ಈ ವಿಭಜನೆಗೆ ನಾನಾ ಅಂಶಗಳು ನೆರವಾಗುತ್ತವೆ: ವೃತ್ತಿಗಳು, ಜನಾಂಗದ ಸ್ವಭಾವ, ನಂಬಿಕೆಗಳು, ತಲೆತಲಾಂತರದಿಂದ ಬೆಳೆದುಬಂದಿರುವ ಪದ್ಧತಿ, ಆಚರಣೆಗಳು ಆರ್ಥಿಕ ಅನುಕೂಲತೆಯಿಂದ ಅಥವಾ ಶಿಕ್ಷಣ ಮತ್ತು ಸಂಸ್ಕೃತಿಯಿಂದ ಉಂಟಾಗುವ ಅಂತಸ್ತಿನ ಪ್ರಜ್ಞೆ ಇತ್ಯಾದಿ.
ಪ್ರಪಂಚದ ಎಲ್ಲ ಭಾಗಗಳ ಜನರೂ ಈ ರೀತಿಯ ಬದಲಾವಣೆಗಳಿಗೆ ಒಳಗಾಗಿದ್ದಾರೆ.
ಯಾವುದೇ ಕುಲ ಬುಡಕಟ್ಟು ಪಂಗಡವೂ ಕಾಲಗತಿಯ ಹಾಗೂ ಜೀವನವಿಧಾನಗಳ ಪರಿಣಾಮಕ್ಕೆ ಹೊರತಾಗಿಲ್ಲ; ಮುಂಚಿನ ಸ್ಥಿತಿಯಲ್ಲೇ ಉಳಿದಿಲ್ಲ. ಬಗೆಬಗೆಯ ಅನುಭವಗಳಿಂದ, ಬೇರೆ ಬೇರೆ ಗುಂಪುಗಳ ರೀತಿನೀತಿಗಳಿಂದ, ಜೀವನ ಮೌಲ್ಯಗಳಿಂದ, ನಾಗರಿಕತೆ ಮತ್ತು ಸಂಸ್ಕೃತಿಗಳ ಏಳುಬೀಳುಗಳಿಂದ ಅಥವಾ ತಮ್ಮ ಗುಂಪಿನಲ್ಲೇ ಆದ ಅನಿರೀಕ್ಷಿತ ಸ್ಫೋಟಗಳಿಂದ – ತೀವ್ರ ಸ್ಥಿತ್ಯಂತರಗಳುಂಟಾಗಿ ಅವುಗಳಲ್ಲಿ ಶಾಶ್ವತ ಮಾರ್ಪಾಡುಗಳಾಗಿವೆ. ಈ ಬದಲಾವಣೆಯ ಆಘಾತವನ್ನು ತಡೆದುಕೊಳ್ಳಲಾಗದ ಬಣಗಳು ಹೇಳಹೆಸರಿಲ್ಲದಂತಾಗಿವೆ, ಬೇರೆ ಬಣಗಳೊಳಗೆ ಬೆರೆತುಹೋಗಿವೆ.
ಹಲವಾರು ಸಹಸ್ರಮಾನಗಳ ಅವಧಿಯಲ್ಲಿ, ಹೊರಗಿನ ಮತ್ತು ಆಂತರಿಕ ದಾಳಿಗಳನ್ನೆದುರಿಸಿ ಯಶಸ್ವಿಯಾದ ಒಂದು ಸಮಾಜವ್ಯವಸ್ಥೆ ಎಂದರೆ ಹಿಂದೂಗಳ ಜಾತಿವ್ಯವಸ್ಥೆ. ಗ್ರೀಸ್, ರೋಮ್, ಪರ್ಷಿಯ ಅಥವಾ ಜಪಾನ್‍ಗಳಲ್ಲಿಯ ಇದೇ ರೀತಿಯ ವ್ಯವಸ್ಥೆಗಳು ಸದ್ದಿಲ್ಲದೆ ಹೇಳಹೆಸರಿಲ್ಲದಂತಾಗಿದ್ದರೂ ಹಿಂದೂ ವ್ಯವಸ್ಥೆ ಮಾತ್ರ ಈಗಲೂ ತಲೆಯೆತ್ತಿ ನಿಂತಿದೆಯೆಂದರೆ, ಅದಕ್ಕೆ ಕಾರಣ ಅದರ ಚೇತರಿಸಿಕೊಳ್ಳುವ ಶಕ್ತಿ ಮತ್ತು ತತ್ತ್ವಕ್ಕೆ ಬದ್ಧವಾಗಿರುವ ಗುಣಗಳು ಮಾತ್ರ ಅಲ್ಲ; ಹಿಂದೂ ಜನಾಂಗದ ಹೆಚ್ಚಿನ ಅಗತ್ಯ ಮತ್ತು ಉದ್ದೇಶಗಳನ್ನು ಸಫಲಗೊಳಿಸಿರುವುದೂ ಹೌದು. ಈ ವಿಚಾರವನ್ನು ಮುಂದೆ ಇನ್ನೂ ವಿವರವಾಗಿ ಪರಿಶೀಲಿಸೋಣ.
ಸೆಮೆಟಿಕ್1 ಧರ್ಮಗಳು ಬಂಡೆಯಂತೆ ಗಟ್ಟಿಯಾಗಿವೆ, ಹಿಂದೂ ಜಾತಿಪದ್ಧತಿಗೆ ಹೋಲುವ ಸಾಮಾಜಿಕ ವ್ಯವಸ್ಥೆ ವ್ಯತ್ಯಾಸಗಳು ಅವುಗಳಲ್ಲಿಲ್ಲ ಎನ್ನುವ ಸಾಮಾನ್ಯ ನಂಬಿಕೆ ಜನರಲ್ಲಿದೆ. ಆ ಧರ್ಮಗಳಿಗೆ ಒಬ್ಬ ಸ್ಥಾಪಕ, ಒಂದು ಧರ್ಮಗ್ರಂಥ ಉಂಟು ನಿಜ; ಹಿಂದೂಧರ್ಮಕ್ಕೆ ಆ ರೀತಿ ಇಲ್ಲ. ಆದರೆ ಕ್ರೈಸ್ತಧರ್ಮದಲ್ಲೂ ಅನೇಕ ಮತಭೇದಗಳು, ಒಳಪಂಗಡಗಳು ಇವೆ; ಮುಸ್ಲಿಮರಲ್ಲೂ, ಕಡೇಪಕ್ಷ ಭಾರತದಲ್ಲಂತೂ, ಅನೇಕ ಜಾತಿಗಳಿವೆ. 2
ವರ್ಣ – ಜಾತಿವ್ಯವಸ್ಥೆಯ ತಳಹದಿ
ಹಿಂದೂಸಮಾಜವು ವರ್ಣವೆಂದು ಕರೆಯಲಾಗುವ ನಾಲ್ಕು ಸ್ಪಷ್ಟವಾದ ಸಮುದಾಯಗಳಾಗಿ ವಿಭಜನೆಯಾಗಿರುವುದು ಈಗ ಮಾನ್ಯತೆ ಪಡೆದಿರುವ ಸಂಗತಿ. ಋಗ್ವೇದದ ಮೊದಲ ಪ್ರಕರಣಗಳಲ್ಲಿ ಸದಾಕಾಲದಲ್ಲೂ ಪರಸ್ಪರ ಹೋರಾಟದಲ್ಲಿ ನಿರತರಾಗಿದ್ದ ಸುಂದರ ಆಕರ್ಷಕ ಬಣ್ಣದ ಆರ್ಯರು ಕಪ್ಪುಬಣ್ಣದ ದಸ್ಯುಗಳು – ಚರ್ಮದ ಬಣ್ಣದ (ವರ್ಣ ಎಂದರೆ ಬಣ್ಣ) ಆಧಾರದ ಮೇಲೆ – ಎರಡು ವರ್ಣ(ಗುಂಪು)ಗಳಾಗಿ ವಿಂಗಡಿಸಲ್ಪಟ್ಟಿದ್ದರು ಎಂದು ತಿಳಿಸಲಾಗಿದೆ. ಆದರೆ ‘ವರ್ಣ’ ಶಬ್ದವು ಬೇಗನೆ ‘ಚರ್ಮದ ಬಣ್ಣ’ ಎನ್ನುವ ಅರ್ಥವನ್ನು ಕಳೆದುಕೊಂಡುಬಿಟ್ಟಿತು.
ನಾಲ್ಕು ಸ್ತರದ ವರ್ಣಪದ್ಧತಿಯು ಋಗ್ವೇದಸಂಹಿತೆಯ ಕಾಲಕ್ಕೇ (8.35.16.7; 1.10.8.7) ಕಂಡುಬಂದಿತ್ತು. ಎಲ್ಲ ನಾಗರಿಕ ಸಮಾಜಗಳಲ್ಲೂ, ತನ್ನ ಇಚ್ಛೆಗೆ ಮತ್ತು ಸಾಮಥ್ರ್ಯಕ್ಕೆ ಅನುಗುಣವಾದ ವೃತ್ತಿಯನ್ನು ಆರಿಸಿಕೊಳ್ಳುವ ಪರಿಪಾಟವಿದೆ. ತನ್ನ ಸದಸ್ಯರಿಗೆ ಅವರ ಸ್ವಭಾವಕ್ಕೆ ಹೊಂದುವ, ಅವರಿಗೆ ಸಮ್ಮತವಾಗುವಂತಹ ವೃತ್ತಿಯನ್ನು ಆರಿಸಿಕೊಳ್ಳಲು ಯೋಗ್ಯ ಅವಕಾಶಗಳನ್ನು ಒದಗಿಸುವುದು ಸಮಾಜದ ಕರ್ತವ್ಯ. ಇದೇ ವರ್ಣವ್ಯವಸ್ಥೆಯ ತಿರುಳು. ವೇದಗಳಾಗಲಿ ಪುರುಷಸೂಕ್ತವೇ ಆಗಲಿ (ಇದರಲ್ಲಿ ಸಮಾಜವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿರುವ ಸ್ಪಷ್ಟ ಸೂಚನೆಗಳಿವೆ) ವರ್ಣವ್ಯವಸ್ಥೆ ಜಾರಿಯಲ್ಲಿರುವುದನ್ನು ಪರಿಗಣನೆಗೆ ತೆಗೆದುಕೊಂಡಿವೆಯೇ ಹೊರತು, ತಾವೇ ಆ ವ್ಯವಸ್ಥೆಯನ್ನು ಸೃಷ್ಟಿಸಿಲ್ಲ!
ಒಂದು ಸಮಾಜವು ಗಾತ್ರ ಮತ್ತು ನಾಗರಿಕತೆಯಲ್ಲಿ ಬೆಳೆದಂತೆಲ್ಲ, ಎಲ್ಲ ವ್ಯಕ್ತಿಗಳೂ ಎಲ್ಲ ಕಾರ್ಯಗಳನ್ನೂ ಮಾಡಲು ಸಾಧ್ಯವಿಲ್ಲ. ಆದುದರಿಂದ, ಕೆಲಸ ಅಥವಾ ಕರ್ಮಗಳಿಗೆ ಅನುಗುಣವಾಗಿ ವಿಭಜಿತಗೊಳ್ಳಲೇಬೇಕು: ಒಂದು ಕುಟುಂಬದ ಸದಸ್ಯರು, ಕುಟುಂಬದಲ್ಲಿನ ಎಲ್ಲ ಸದಸ್ಯರಿಗೂ ಸಂಬಂಧಿಸಿದ ವಿಶೇಷ ಸಮಾರಂಭಗಳಲ್ಲಿ ಸ್ವಯಂಪ್ರೇರಣೆಯಿಂದ ಕೆಲಸ ಹಂಚಿಕೊಳ್ಳುವಂತೆ.
ವೇದಗಳ ಕಾಲದ ಆದಿಭಾಗದಲ್ಲಿ ಸ್ವಯಂಪ್ರೇರಿತರಾಗಿ ವೃತ್ತಿಗಳನ್ನಾರಿಸಿಕೊಂಡಿರಬಹುದು. ಕೆಲವರು ಜ್ಞಾನ, ವಿವೇಕ, ಸಂಸ್ಕೃತಿಗಳ ಆರ್ಜನೆ ಮಾಡಿ, ಅನಂತರ ಅವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡುವ ವೃತ್ತಿಯನ್ನಾಶ್ರಯಿಸಿದರು. ಅವರೇ ‘ಬ್ರಾಹ್ಮಣ’ರೆನಿಸಿದರು. ಸುದೃಢ ಶರೀರ ಹೊಂದಿ ಬಲಶಾಲಿಗಳಾಗಿದ್ದವರು ಆಯುಧಗಳನ್ನು ಹಿಡಿದು ಸಮಾಜವನ್ನು ಹೊರಗಿನ ದಾಳಿಗಳಿಂದ ರಕ್ಷಿಸಿ, ಆಂತರಿಕವಾಗಿ ಕಾನೂನು ಮತ್ತು ಶಿಸ್ತುಗಳನ್ನು ಮೂಡಿಸಲು ಮುಂದೆ ಬಂದರು. ಅವರೇ ‘ಕ್ಷತ್ರಿಯ’ರು. ಉಳಿದವರಲ್ಲಿ ಬಹಳಷ್ಟು ಜನ ಕೃಷಿ, ಪಶುಸಂಗೋಪನೆ, ವ್ಯಾಪಾರ ಮತ್ತು ವಾಣಿಜ್ಯಗಳಲ್ಲಿ ತೊಡಗಿ ಸಂಪತ್ತು ಮತ್ತು ವಸ್ತುಗಳ ಉತ್ಪಾದನೆಗೆ ಹಾಗೂ ವಿತರಣೆಗೆ ನೆರವಾದರು. ಅವರನ್ನು ‘ವೈಶ್ಯ’ರೆಂದು ಕರೆಯಲಾಯಿತು. ಈ ಮೂರೂ ಉದ್ಯೋಗಗಳಿಗೆ ಹೊಂದಿಕೊಳ್ಳಲಾರದೆ ಉಳಿದವರು, ದೈಹಿಕಶ್ರಮ ಹಾಗೂ ಸೇವಾವೃತ್ತಿಯಿಂದ ಜೀವನ ನಡೆಸಲುಪಕ್ರಮಿಸಿದರು. ಇವರೇ ‘ಶೂದ್ರ’ರು ಎಂದೆನಿಸಿದರು. ಕಾಲಾನುಕ್ರಮದಲ್ಲಿ, ಬ್ರಾಹ್ಮಣರಿಂದ ಶೂದ್ರರವರೆಗಿನ ವರ್ಣಗಳಲ್ಲಿ ಕ್ರಮಾನುಗತ ಜ್ಯೇಷ್ಠತೆಯ ಕಲ್ಪನೆ ಉಂಟಾಯಿತು.
ಗುಣ ಮತ್ತು ಸ್ವಭಾವಜನ್ಯವಾದ ವೃತ್ತಿಗಳ ಆಧಾರದ ಮೇಲೆ ಈ ಪ್ರಕ್ರಿಯೆ ಸಹಜವಾದದ್ದಾದರೂ ಇದೊಂದು ಸಾಮಾನ್ಯ ನಿಯಮ. ಆದರ್ಶವೂ ಹೌದು. ಪ್ರತಿಯೊಬ್ಬನ ಗುಣವನ್ನು ವಿಶ್ಲೇಷಿಸಿ ಸೂಕ್ತಕ್ರಮವನ್ನು ನಿಗದಿಪಡಿಸುವುದೂ ದುಸ್ಸಾಧ್ಯವಾದ ಕೆಲಸ. (ಈಗತಾನೇ ಹುಟ್ಟಿದ ಮಗುವಿನ ವಿಷಯದಲ್ಲಿ ಹೇಗೆ?) ಆದ್ದರಿಂದ ಹುಟ್ಟಿನಿಂದ ವರ್ಣ ನಿರ್ಧರಿಸುವುದು ಸುಲಭವೂ ಕಾರ್ಯಸಾಧುವೂ ಆಯಿತು. ‘ಜಾತ’ ಎಂದರೆ ಹುಟ್ಟುವಿಕೆ. ಇದರಿಂದ ‘ಜಾತಿ’ ಪದ್ಧತಿಗೆ – ಯಾವ ವರ್ಣದಲ್ಲಿ ವ್ಯಕ್ತಿಯು ಹುಟ್ಟುತ್ತಾನೋ ಅವನು ಆ ವರ್ಣಕ್ಕೇ ಸೇರಿದವನೆಂಬ ನಿರ್ಧಾರಕ್ಕೆ ನಾಂದಿಯಾಯಿತು.
ಹುಟ್ಟಿನಿಂದ ಒಬ್ಬ ಮನುಷ್ಯನ ವರ್ಣ ನಿಗದಿಯಾದರೂ, ಅವನು ತನಗೆ ಬೇಕೆನಿಸಿದ ವೃತ್ತಿಯನ್ನು ಆರಿಸಿಕೊಳ್ಳಲು ಸ್ವತಂತ್ರನಿದ್ದನೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ವಿಶ್ವಾಮಿತ್ರ ವೀತಹವ್ಯರು, ಜನ್ಮತಃ ಕ್ಷತ್ರಿಯರು. ಆದರೂ ವೇದದ ಜ್ಞಾನಾರ್ಜನೆ ಮಾಡಿ, ತಪಸ್ಸನ್ನಾಚರಿಸಿ ಬ್ರಹ್ಮರ್ಷಿಗಳಾದರು. ಇನ್ನೊಂದೆಡೆ ಪರಶುರಾಮ ಮತ್ತು ದ್ರೋಣಾಚಾರ್ಯರು ಶಸ್ತ್ರಾಭ್ಯಾಸ ಮಾಡಿ ಹೋರಾಟವನ್ನೇ ವೃತ್ತಿಯಾಗಿಸಿಕೊಂಡು, ಹೆಸರಿಗೆ ಮಾತ್ರ ಬ್ರಾಹ್ಮಣರೆನಿಸಿ, ವಸ್ತುತಃ ಕ್ಷತ್ರಿಯರಾದರು. ಆದರೆ ಈ ರೀತಿಯ ಪರಿವರ್ತನೆಗಳು ಅಪರೂಪ.
ಜಾತಿಪದ್ಧತಿಯ ಬೆಳವಣಿಗೆ
ಮಾನವನಿಗೆ ಇಂದ್ರಿಯಗಳ ಆಕರ್ಷಣೆ ಮತ್ತು ಲೈಂಗಿಕ ಕಾಮನೆಗಳು ಸಹಜ. ಇದರಿಂದಾಗಿ, ತಮ್ಮತಮ್ಮ ವರ್ಣದೊಳಗೇ ವಿವಾಹವಾಗಬೇಕೆಂಬ ಸಾಮಾನ್ಯ ನಿಯಮವು ಆಗಾಗ ಮೀರಲ್ಪಡುತ್ತಿತ್ತು. ಹಾಗಾಗಿ, ‘ಅನುಲೋಮ’ ವಿವಾಹಗಳು – ಮೇಲಿನ ವರ್ಣದ ಪುರುಷರು ಕೆಳಗಿನ ವರ್ಣಕ್ಕೆ ಸೇರಿದ ಸ್ತ್ರೀಯರನ್ನು ಮದುವೆಯಾಗುವುದು – ಸಾಮಾನ್ಯವಾಯಿತು. ಅದಕ್ಕೆ ಕಾನೂನೂ ಸಮ್ಮತಿಸಬೇಕಾಯಿತು. ಆದರೆ ‘ಪ್ರತಿಲೋಮ’ ವಿವಾಹಗಳನ್ನು – ಅನುಲೋಮಗಳ ವಿರುದ್ಧವಾದವು- ತಡೆಯಲಾಗದೆ ಇದ್ದರೂ, ತಿರಸ್ಕಾರದಿಂದ ನೋಡುತ್ತಿದ್ದರು. ಇವುಗಳು ವರ್ಣಸಂಕರಕ್ಕೆ (ವರ್ಣಗಳ ಅಥವಾ ಜಾತಿಗಳ ಸಂಕೀರ್ಣತೆಗೆ) ಎಡೆಗೊಟ್ಟು ಅಸಂಖ್ಯಾತ ಮಿಶ್ರಜಾತಿಗಳ ಉದಯಕ್ಕೆ ಕಾರಣವಾದವು.
ಕ್ರಿಸ್ತಪೂರ್ವ 3000 ವರ್ಷಗಳ ಸುಮಾರಿಗೆ, ಮಹಾಭಾರತದ ಕಾಲಕ್ಕೇ, ವರ್ಣಸಂಕರದ ಸಮಸ್ಯೆ ಬಹಳ ಬೃಹತ್ತಾಗಿತ್ತು. ಗ್ರೀಕರು ಹೂಣರು ಶಕರು ಸಿಥಿಯನ್ನರು ಪರ್ಷಿಯನ್ನರೂ, ಮತ್ತಿತರ ಬೇರೆ ಜನಾಂಗದ ಸಂಸ್ಕೃತಿಯ ಜನರೂ, ತಮ್ಮ ಸತತ ಆಕ್ರಮಣಗಳಿಂದ, ಹಾಗೆಯೇ ಕೆಲವೊಮ್ಮೆ ಇಲ್ಲೇ ನೆಲಸಿ ಹಿಂದೂಸಮಾಜದ ಜೊತೆ ಬೆರೆತುದರಿಂದ ಜಾತಿಗಳು ಇನ್ನಷ್ಟು ಹೆಚ್ಚಾದವು.
ಶಾಸ್ತ್ರಕಾರರು, ಸ್ಮೃತಿಕಾರರು, ಧರ್ಮಶಾಸ್ತ್ರ (ಎರಡನೆಯ ಮಟ್ಟದ ಧರ್ಮಗ್ರಂಥಗಳು) ರಚನಾಕಾರರು ಅಸಂಖ್ಯಾತ ಜಾತಿ, ಉಪಜಾತಿಗಳಿಗೆ ಹೊಸದಾಗಿ ಹೆಸರುಗಳನ್ನು ಶೋಧನೆ ಮಾಡುತ್ತಿದ್ದಾಗ, ಕಾಲಗತಿ ಮತ್ತು ಮಾನವನ ಇತಿಹಾಸ ಒಂದು ರೀತಿಯಲ್ಲಾದರೂ ಅವರ ನೆರವಿಗೆ ಬಂದಿತು. ಜನಸಂಖ್ಯೆಯ ಹೆಚ್ಚಳದಿಂದ, ನಾಗರಿಕತೆಯ ಅಭಿವೃದ್ಧಿಯಿಂದ ಹೊಸ ಹೊಸ ಉಪಕರಣಗಳು, ಆಯುಧಗಳು, ಜೀವನವಿಧಾನಗಳ ಆವಿಷ್ಕಾರ, ಹೆಚ್ಚಿನ ಸುಖ ಹಾಗೂ ಸುಸೂತ್ರವಾದ ಜೀವನಕ್ಕಾಗಿ ಆದವು. ಇದರಿಂದ ಹೊಸ ಹೊಸ ಉದ್ಯೋಗಗಳು, ವೃತ್ತಿಗಳು ಹುಟ್ಟಿಕೊಂಡವು. ಹೆಚ್ಚಿನ ಜನರು ಅವುಗಳಲ್ಲಿ ತೊಡಗಿದರು. ಅವೇ ಹೊಸ ಜಾತಿಗಳಾಗಿ ರೂಪಗೊಂಡವು. ಈ ಪ್ರಗತಿಯ ಸೂಚಕವೇ ಅನೇಕ ಜಾತಿಗಳ ಉಪಜಾತಿಗಳ ಹೆಸರು ನೇರವಾಗಿ ಅಥವಾ ಅಪ್ರತ್ಯಕ್ಷವಾಗಿ ಅವರವರ ವೃತ್ತಿಗಳಿಗೆ ಸಂಬಂಧಿಸಿರುವುದು. ದಶಕಗಳ ಅಥವಾ ಶತಮಾನಗಳ ನಂತರ ಆಯಾ ವೃತ್ತಿಕೌಶಲಗಳಲ್ಲಿ ಅವರವರಿಗೆ ಹೆಚ್ಚಿನ ಪರಿಣತಿ ಉಂಟಾಯಿತು.
ಜಾತಿವ್ಯವಸ್ಥೆಯ ಸತ್ಪರಿಣಾಮಗಳು
ಆಧುನಿಕರೆನಿಸಿಕೊಂಡವರಿಗೆ ಜಾತಿವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವುದೇ ಒಂದು ಮೋಜಿನ ಹವ್ಯಾಸವಾಗಿಬಿಟ್ಟಿದೆ. ಆ ವ್ಯವಸ್ಥೆಯಲ್ಲಿ, ‘ಬುದ್ಧಿವಂತ ಹಾಗೂ ಕುಟಿಲ’ ಬ್ರಾಹ್ಮಣರು ರಾಷ್ಟ್ರವನ್ನೇ ನಮ್ಮ ದಾಸ್ಯಕ್ಕೆ ವಶಪಡಿಸಿಕೊಳ್ಳುವ, ‘ದುಷ್ಟ ಒಳಸಂಚು’ಗಳನ್ನು ‘ಹುಡುಕುವ’, ಜನಕ್ಕೇನೂ ಕಡಮೆ ಇಲ್ಲ. ಹೇಗೆ ಸೈನಿಕಶಕ್ತಿಯಾಗಲಿ ಅಥವಾ ಹಣದ ಬೆಂಬಲವಾಗಲಿ ಇಲ್ಲದ, ಕೈ ಬೆರಳಣಿಕೆಯಷ್ಟು ಅಲ್ಪ ಜನ ಕೇವಲ ತಮ್ಮ ಉದಾತ್ತ ನಡತೆಯಿಂದಲ್ಲದೆ, ಸಕಲ ಜನರ ಹಿತಕ್ಕಾಗಿ ಮೀಸಲಾದ ಜೀವನದಿಂದಲ್ಲದೆ, ಸಾವಿರಾರು ವರ್ಷಗಳ ಕಾಲ ಲಕ್ಷಾಂತರ ಜನರನ್ನು ತಮ್ಮ ಅನುವರ್ತಿಗಳಾಗಿರುವಂತೆ ಮಾಡಿಕೊಳ್ಳಲು ಸಾಧ್ಯವಾಯಿತು ಎಂಬುದು ಈ ಪೂರ್ವಗ್ರಹಪೀಡಿತ ಜನರ ಮನಸ್ಸಿಗೇ ನಾಟುವುದಿಲ್ಲ.
ನಿಷ್ಪಕ್ಷಪಾತಿಗಳಾದ ವಿದ್ವಾಂಸರು – ಪಾಶ್ಚ್ಚಾತ್ಯರೂ ಹಾಗೂ ಪೌರಸ್ತ್ಯರೂ – ಈ ವ್ಯವಸ್ಥೆಯು, ಶತಶತಮಾನಗಳಿಂದ ಪಾಶವೀ ದಾಳಿಗೆ ಒಳಗಾಗಿದ್ದರೂ, ಚೇತೋಹಾರಿಯಾಗಿರುವ ಬಗ್ಗೆ ಪ್ರಶಂಸೆಯ ಹೊಳೆಯನ್ನೇ ಹರಿಸಿದ್ದಾರೆ. ಸಿಡ್ನೀಲೋರವರು ತಮ್ಮ ‘ವಿಷನ್ ಆಫ್ ಇಂಡಿಯಾ’ (ಎರಡನೇ ಆವೃತ್ತಿ 1907, ಪುಟ 262-263) ಪುಸ್ತಕದಲ್ಲಿ ಹೀಗೆ ಉದಾರವಾಗಿ ಕೊಂಡಾಡಿದ್ದಾರೆ:
“ಭಾರತೀಯ ಸಮಾಜವು ಶತಶತಮಾನಗಳಿಂದಲೂ ರಾಜಕೀಯ ಹಾಗೂ ಪ್ರಕೃತಿಯ ವಿಪ್ಲವಗಳ ಹೊಡೆತವನ್ನು ಬಲವಾಗಿ ತಡೆದುಕೊಂಡಿದೆಯೆಂದರೆ, ಅದರ ಮೂಲಭೂತ ಸ್ಥಿರತೆ ಮತ್ತು ತೃಪ್ತಿಗಳಿಗೆ ಈ ವ್ಯವಸ್ಥೆಯೇ ಕಾರಣ ಎಂಬುದರಲ್ಲಿ ಏನೂ ಸಂಶಯವಿಲ್ಲ. ಅದು ಪ್ರತಿಯೊಬ್ಬ ಮನುಷ್ಯನಿಗೂ ಅವನವನ ಸ್ಥಾನ, ಜೀವನೋಪಾಯ, ವೃತ್ತಿ ಹಾಗೂ ಮಿತ್ರರನ್ನು ಒದಗಿಸುತ್ತದೆ. ಅವನನ್ನು ಸಮುದಾಯದ ಒಬ್ಬ ಸದಸ್ಯನನ್ನಾಗಿ ಮಾಡುತ್ತದೆ; ಅವನನ್ನು ಸಾಮಾಜಿಕ ಅಸೂಯೆ, ಅತೃಪ್ತ ಹೆಬ್ಬಯಕೆಗಳಂಥ ಕಳಂಕಗಳಿಂದ ರಕ್ಷಿಸುತ್ತದೆ. ಅವನಿಗೆ ತನ್ನಂತಹ ಜೊತೆಗಾರರ ಒಡನಾಟವನ್ನೂ ಸಾಮೂಹಿಕ ಒಡೆತನವನ್ನೂ ಭರಿಸುತ್ತದೆ. ಜಾತಿಯವರ ಮೇಳ ಅವನಿಗೆ ಸಮಾಜದ ಕೂಟವೂ ಹೌದು, ಕಾರ್ಮಿಕಸಂಘವೂ ಹೌದು; ಹಾಗೆಯೇ ತನಗೆ ಅನುಕೂಲವೊದಗಿಸುವ, ಲೋಕಕ್ಕೂ ಉಪಕಾರಿಯಾದ ಸಂಘಟನೆಯೂ ಹೌದು. ಅದಕ್ಕಾಗಿಯೇ ಭಾರತದಲ್ಲಿ ಉದ್ಯೋಗ ಸಂಘ (work-house)ಗಳಿಲ್ಲ – ಸದ್ಯದವರೆಗೂ ಅವುಗಳ ಅಗತ್ಯವೂ ಕಂಡುಬಂದಿಲ್ಲ.”
ಎಲ್ಲ ಜಾತಿಗಳಿಗೆ ಸೇರಿದ ಭಾರತೀಯರೊಡನೆ ಹದಿನೈದು ವರ್ಷಗಳಿಗೂ ಹೆಚ್ಚಿನ ಕಾಲ ನಿಕಟಸಂಪರ್ಕ ಹೊಂದಿದ್ದ ಅಬ್ಬೆ ಡ್ಯುಬಾಯ್ ಎಂಬ ಫ್ರಾನ್ಸಿನ ಕ್ರೈಸ್ತಧರ್ಮಪ್ರಚಾರಕನು ಅದೇ ವಿಷಯವಾಗಿ ಹೀಗೆ ಹೇಳುತ್ತಾನೆ:
“ನಾನು ಹಿಂದೂರಾಷ್ಟ್ರಗಳಲ್ಲಿನ ಜಾತಿಗಳ ವ್ಯವಸ್ಥೆಯನ್ನು ಅವರ ಶಾಸನಗಳ ಅತ್ಯಂತ ಸಂತೋಷದಾಯಕ ಪ್ರಯತ್ನ ಎಂದು ಭಾವಿಸುತ್ತೇನೆ; ಯೂರೋಪಿನ ಎಲ್ಲಾ ಭಾಗಗಳೂ ಬರ್ಬರತೆ-ಕ್ರೌರ್ಯಗಳ ಭಯಂಕರ ಕಮರಿಗಳಲ್ಲಿ ಮುಳುಗಿದ್ದರೂ, ಭಾರತವು ಆ ಪಿಡುಗಿಗೆ ಒಳಗಾಗದೆ ತನ್ನ ಹಿರಿಮೆಯನ್ನುಳಿಸಿಕೊಂಡು ವಿಜ್ಞಾನ ಕಲೆ ನಾಗರಿಕತೆಗಳಲ್ಲಿ ಪ್ರಗತಿ ಹೊಂದಿತೆಂದರೆ ಜಾತಿಗಳ ವೈಶಿಷ್ಟ್ಯವೇ ಅದಕ್ಕೆ ಕಾರಣವೆಂದು ನನಗೆ ಪೂರ್ಣ ಮನವರಿಕೆಯಾಗಿದೆ. ಆ ಕೀರ್ತಿಯು ಅದಕ್ಕೆ ಸಲ್ಲುತ್ತದೆ.”3
ಆಧುನಿಕ ಭಾರತದ ಮಹಾನ್ ಪ್ರವಾದಿ ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ:
“ನಾವು, ಭಾರತೀಯ ಜಾತಿಗಳನ್ನು ಭಗವಂತನು ಮಾನವನಿಗೆ ದಯಪಾಲಿಸಿದ ಸರ್ವೋತ್ತಮ ಸಾಮಾಜಿಕ ವ್ಯವಸ್ಥೆಗಳಲ್ಲೊಂದೆಂದು ನಂಬುತ್ತೇವೆ. ಅನಿವಾರ್ಯವಾದ ನ್ಯೂನತೆಗಳು, ವಿದೇಶೀಯರ ಕಿರುಕುಳ, ಅವಕ್ಕಿಂತ ಹೆಚ್ಚಾಗಿ ಬ್ರಾಹ್ಮಣರೆಂದು ಕರೆಸಿಕೊಳ್ಳಲು ಯೋಗ್ಯತೆ ಇಲ್ಲದವರ ಅಜ್ಞಾನ, ಅಹಂಕಾರಗಳು ಈ ಪ್ರಭಾವಪೂರ್ಣ ಭಾರತೀಯ ವ್ಯವಸ್ಥೆಯ ನ್ಯಾಯಸಮ್ಮತ ಪ್ರಯೋಜನಗಳನ್ನು ಹೊಂದಲು ನಾನಾ ರೀತಿಗಳಲ್ಲಿ ಅಡ್ಡಿ ಬಂದಿತಾದರೂ ಭರತಖಂಡಕ್ಕೆ ಅದರಿಂದ ಅಚ್ಚರಿಯ ಪರಿಣಾಮಗಳುಂಟಾಗಿ ಭಾರತೀಯರನ್ನು ಅದರ ಗುರಿಯತ್ತ ಸಾಗಲು ಸಿದ್ಧಗೊಳಿಸಿದೆ ಎಂದು ನಂಬಿದ್ದೇವೆ.”4
ಜಾತಿವ್ಯವಸ್ಥೆಯು ಉಳಿದುಕೊಂಡು ಬಂದಿರುವುದಕ್ಕೆ ಕಾರಣಗಳನ್ನು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದಾಗ, ಈ ಕೆಳಗಿನ ಸ್ವೀಕಾರಾರ್ಹ ಮತ್ತು ರಚನಾತ್ಮಕ ವಿಚಾರಗಳು ಹೊರಹೊಮ್ಮುತ್ತವೆ:
ಅ) ಜಾತಿಯು ಪ್ರತಿಯೊಬ್ಬನಿಗೂ ತಾನು ಒಂದು ವ್ಯವಸ್ಥೆಗೆ ಒಳಪಟ್ಟಿರುವೆನು ಎಂಬ ಭಾವನೆಯನ್ನಿತ್ತು, ಸಾಮಾಜಿಕ ಭದ್ರತೆ ಒದಗಿಸಿದೆ.
ಆ) ನಿರ್ದಿಷ್ಟ ವ್ಯಾಪಾರದಲ್ಲಿ ಅಥವಾ ವೃತ್ತಿಯಲ್ಲಿ ಪೂರ್ತಿ ಕುಟುಂಬವೇ ತೊಡಗಿರುವುದರಿಂದ, ಸುಲಭ ಹಾಗೂ ಸಹಜವಾಗಿಯೇ, ಸದಸ್ಯನಾದವನಿಗೆ ಅನುಪಮ ಶಿಕ್ಷಣ ಲಭಿಸಿದೆ. ಒಂದು ಉದ್ಯೋಗವನ್ನು ಅವಲಂಬಿಸಿದ ಒಂದೇ ಜಾತಿಗೆ ಸೇರಿದವರು ತಮ್ಮದೇ ವಸಾಹತುಗಳಲ್ಲಿ ವಾಸಿಸುವುದರಿಂದ ಆ ವಾತಾವರಣವೂ ಶಿಕ್ಷಣಕ್ಕೆ ಅನುಕೂಲವಾಗಿ ಪರಿಣಮಿಸಿದೆ. ಇದು, ಈಗ ಉಲ್ಬಣವಾಗಿರುವ, ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ತಾನೇ ತಾನಾಗಿ ಒದಗಿಬಂದ ಪರಿಹಾರ.
ಇ) ಒಟ್ಟು ಸಮುದಾಯದ ಸಹಕಾರ ಸಹಾಯಗಳಿಂದ ಅನಾರೋಗ್ಯಕರ ಹಾನಿಕಾರಕ ಪೈಪೋಟಿ ದೂರವಾಯಿತು.
ಈ) ಸಮುದಾಯದೊಳಗಿನ ಆಂತರಿಕ ವಿವಾಹಗಳು ಸದಸ್ಯರ ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಬೆಸೆದು ಆಪತ್ಕಾಲಗಳಲ್ಲಿ ವ್ಯಕ್ತಿಗಳ ಹಿತವನ್ನು ಕಾಯುತ್ತವೆ.
ಉ) ಸಮಾಜದ ಪ್ರತಿಯೊಂದು ಜಾತಿಯ ಗುಂಪಿನ ಕರ್ತವ್ಯ ಸೇವೆಗಳು ಸ್ಫುಟಗೊಂಡು ಪರಸ್ಪರರ ಹಕ್ಕು ಬಾಧ್ಯತೆಗಳಿಗೆ ಮನ್ನಣೆ ದೊರೆತು ಶತಮಾನಗಳವರೆಗೆ ಶಾಂತಿಯುತ ಸಹಬಾಳ್ವೆಗೆ ನೆರವಾಯಿತು.
ಅವನತಿಯ ಹಾದಿಯಲ್ಲಿ
ಕಳೆದ 150 ವರ್ಷಗಳಲ್ಲಿ ಜಾತಿವ್ಯವಸ್ಥೆಯ ಹಿಂದಿರುವ ನಿಜವಾದ ಮನೋಭಾವ ದಿನೇ ದಿನೇ ಕ್ಷೀಣಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ರಾಜಕೀಯ ಸ್ವಾತಂತ್ರ್ಯದ ನಂತರದ ಐವತ್ತು ವರ್ಷಗಳಲ್ಲಿ ಆ ಅವನತಿ ಎದ್ದುಕಾಣಿಸುತ್ತ ಇದೆ. ಅವುಗಳನ್ನು ಈ ರೀತಿಯಾಗಿ ಗುರುತಿಸಬಹುದು:
ಅ) ಸಂಪತ್ತು ಹೆಚ್ಚಾಗುತ್ತಿದ್ದಂತೆ ಮಾನವರು ಭ್ರಷ್ಟರಾಗುತ್ತಾರೆ. ಅಧಿಕಾರಕೇಂದ್ರೀಕರಣ ಲಂಚಗುಳಿತನಕ್ಕೆ ಎಡೆಗೊಟ್ಟಿದೆ. ಬ್ರಾಹ್ಮಣರೂ ಕ್ಷತ್ರಿಯರೂ ಅಧಿಕಾರಸ್ಥಾನ, ಅಂತಸ್ತುಗಳಲ್ಲಿ ತಮ್ಮ ಸ್ವಾಮ್ಯ ಬೆಳೆಸಿಕೊಂಡು ಪ್ರಾಪಂಚಿಕ ಭವಿತವ್ಯಗಳನ್ನು ಉತ್ತಮಗೊಳಿಸಿಕೊಳ್ಳಲು ಉದ್ಯುಕ್ತರಾದರು. ಸಮಾಜಕ್ಕೆ ಸೇವೆ ಸಲ್ಲಿಸುವುದಕ್ಕೆ ಅವುಗಳನ್ನು ಉಪಯೋಗಿಸುವ ಬದಲಾಗಿ ತಮ್ಮ ಸ್ವಾರ್ಥಸಾಧನೆಗೆ ದುರುಪಯೋಗಮಾಡಿಕೊಂಡರು. ಸ್ವಾಭಾವಿಕವಾಗಿಯೇ ಇದಕ್ಕೆ ಪ್ರತಿರೋಧ ಉಂಟಾಗಿ, ಜಾತಿಕಲಹಗಳಿಗೆ ನಾಂದಿಯಾಯಿತು. ಈ ಕಲಹಗಳು ಕೆಳಜಾತಿಗಳೆಂದು ಹೇಳಲಾದ ಜಾತಿಗಳವರೆಗೆ ಹಬ್ಬಿ, ಒಂದಕ್ಕೊಂದು ತಮ್ಮ ‘ಶ್ರೇಷ್ಠತೆ’ಯನ್ನು ಸ್ಥಾಪಿಸಿಕೊಳ್ಳುವವರೆಗೆ ಹೋಯಿತು.
ಆ) ಒಟ್ಟು ಸಮಾಜಕ್ಕೆ ತಮ್ಮ ಕರ್ತವ್ಯ ಬಾಧ್ಯತೆಗಳನ್ನು ಮರೆತು ಜನರು ತಮ್ಮ ಹಕ್ಕು ಸವಲತ್ತುಗಳನ್ನು ಸಾಧಿಸಿಕೊಳ್ಳಲು, ಅದಕ್ಕಾಗಿ ಹೋರಾಡಲು, ಪ್ರಾರಂಭಿಸಿದರು.
ಇ) ಪಶ್ಚಿಮದಿಂದ ಬಂದ ವಿಜ್ಞಾನ ಮತ್ತು ತಾಂತ್ರಿಕಜ್ಞಾನಗಳು ಕೆಲಸ ಕಡಮೆ ಮಾಡಿ ಹೆಚ್ಚು ವಿರಾಮ, ಅಧಿಕ ಪ್ರಾಪಂಚಿಕ ಸೌಲಭ್ಯಗಳು ದೊರೆಯುವಂತೆ ಮಾಡಿದವು. ಇದರ ಅಡ್ಡಪರಿಣಾಮವು ಭಾರತದ ಸಮಾಜದ ಮೇಲೂ ಆದುದರಿಂದ ಜನರು ಅಗತ್ಯ ಆಧಾರಿತ ಜೀವನದಿಂದ ದುರಾಶಾಪ್ರೇರಿತ ಜೀವನಕ್ಕೆ ಮುಂದಾದರು. ಜೀವನದ ಎಲ್ಲ ಭಾಗಗಳಲ್ಲೂ ಅಶಾಂತಿ ಮೂಡಿತು.
ಈ) ತತ್ಪರಿಣಾಮವಾಗಿ, ಧರ್ಮ ನೀತಿ ಆಧ್ಯಾತ್ಮಿಕ ಮೌಲ್ಯಗಳ ಮೂಲ ಸಂರಕ್ಷಕರಾದ ಬ್ರಾಹ್ಮಣರೂ ಸೇರಿದಂತೆ, ಸಮಾಜದ ಎಲ್ಲ ವರ್ಗಗಳ ಜನರೂ ತಮ್ಮ ಪ್ರಾಚೀನ ಮತ್ತು ಮಹತ್ತರವಾದ ಆದರ್ಶಗಳನ್ನು ತ್ಯಜಿಸಿ, ಪಾಶ್ಚಾತ್ಯಪ್ರಭಾವದ ಯಾಂತ್ರಿಕ ನಾಗರಿಕತೆ ಹಾಗೂ ಐಂದ್ರಿಯಲೋಲುಪ ಸಂಸ್ಕೃತಿಯ ದಾಸರಾಗಿದ್ದಾರೆ.
ಇದಕ್ಕೆ ಪರಿಹಾರೋಪಾಯಗಳನ್ನು ಅಧ್ಯಯನ ಮಾಡುವ ಮೊದಲು ಕಾಲಾನುಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಏರಬೇಕಾಗಿದ್ದ ಮೂಲ ಬ್ರಾಹ್ಮಣತ್ವದ ಧ್ಯೇಯದ ಬಗ್ಗೆ ನಮ್ಮ ಗಮನ ಹರಿಸುವುದು ಒಳಿತು.
ಆದರ್ಶ ಬ್ರಾಹ್ಮಣನ ಲಕ್ಷಣಗಳು
ಯಾವುದೇ ಸಮಾಜದ ಸಾಮಥ್ರ್ಯ ಮತ್ತು ಸಹನಶಕ್ತಿಯು ಅದರ ಭೌತಿಕ ಸತ್ತ್ವ ಹಾಗೂ ಪ್ರಾಣಶಕ್ತಿಗಿಂತ ಹೆಚ್ಚಾಗಿ ವ್ಯಕ್ತಿಗಳ ವೈಯಕ್ತಿಕ ನಡತೆಯನ್ನು ಅವಲಂಬಿಸಿದೆ. ಸತತ ಅನ್ವೇಷಣೆ, ಹೋರಾಟ, ಶರಣಾಗದಿರುವಿಕೆಗಳನ್ನು ಹುರಿದುಂಬಿಸುವ ಮನೋದಾಢ್ರ್ಯ ಹೊಂದಿರುವ ಜನರೇ ಒಂದು ರಾಷ್ಟ್ರದ ನಿಜವಾದ ಸಂಪತ್ತು. ಆ ಉತ್ತಮಮಟ್ಟದ ವಿಕಾಸ ಒಮ್ಮೆಲೇ ಸಾಧ್ಯವಾಗುವುದಿಲ್ಲ. ದಶಕಗಳು, ಕೆಲವೊಮ್ಮೆ ಶತಮಾನಗಳೇ ಬೇಕಾಗುತ್ತವೆ. ಬೇರೆಯವರು ಆದರ್ಶಪ್ರಾಯರೆಂದು ತಿಳಿಯಬಹುದಾದಂತಹ ಪ್ರಬುದ್ಧ, ಉದಾತ್ತ ಪುರುಷರ ಆವಶ್ಯಕತೆ ತುಂಬಾ ಇದೆ. ಅಂತಹ ಜನರು ತಮ್ಮ ಕಾರ್ಯ, ಮೇಲ್ಪಂಕ್ತಿ, ವಿಧಿವಿಧಾನಗಳಿಂದ ಸಮಾಜದ ಉಳಿದವರನ್ನು ತರಬೇತು ಮಾಡಿ, ಅವರಿಗೆ ಮಾರ್ಗದರ್ಶನ ನೀಡುವಂತಹವರಾಗಿರಬೇಕು.
ವೇದ-ಧರ್ಮದ ಹಾಗೂ ತತ್ತ್ವಗಳ ಪ್ರವರ್ತಕರಾದ ಭಾರತದ ಪುರಾತನ ಋಷಿಗಳು ವರ್ಣಪದ್ಧತಿಯನ್ನೂ ಅದರೊಡನೆ ಆದರ್ಶ ಬ್ರಾಹ್ಮಣತ್ವದ ಧ್ಯೇಯವನ್ನೂ ನಮಗೆ ಬಳುವಳಿಕೊಟ್ಟಾಗ ಅದನ್ನೇ ಮಾಡಿದ್ದು.
ಬ್ರಾಹ್ಮಣನು ಮೊಟ್ಟಮೊದಲಿಗೆ ಬ್ರಹ್ಮವಿದ್ಯೆ ಎಂದರೆ, ಬ್ರಹ್ಮನನ್ನು (ಪರಮಾತ್ಮನನ್ನು) ಅರಿತವನಾಗಿರಬೇಕು. ಬ್ರಹ್ಮ ಅಥವಾ ಆತ್ಮದ ಅರಿವುಂಟುಮಾಡುವ ವೇದಗಳು ಬ್ರಹ್ಮವಿದ್ಯೆ ಆಗುವುದಕ್ಕೆ ಮಾರ್ಗ. ಆದುದರಿಂದ ಬ್ರಾಹ್ಮಣನಾದವನು ಅದನ್ನು ಕರಗತಮಾಡಿಕೊಂಡು ತನ್ನನ್ನು ಅರಸಿಬರುವ ಯೋಗ್ಯ ವಿದ್ಯಾರ್ಥಿಗಳಿಗೆ ಆ ಜ್ಞಾನವನ್ನು ಹರಡಬೇಕಾಗಿತ್ತು.
‘ಆಧ್ಯಾತ್ಮಿಕ ಜೀವನ’ಎಂದರೆ ಅಧ್ಯಾತ್ಮದಲ್ಲಿ ಅಥವಾ ಬ್ರಹ್ಮದಲ್ಲಿ ನೆಲೆನಿಂತ ಜೀವನ. ಅರ್ಥಾತ್ ತಪಸ್ಸು, ನಿಷ್ಠೆಗಳಿಂದ ಅಂತಿಮವಾಗಿ ಗುರಿಯನ್ನು ಸಾಧಿಸಲು, ಬೌದ್ಧಿಕ, ನೈತಿಕ, ಆಧ್ಯಾತ್ಮಿಕ ಶಕ್ತಿಗಳನ್ನು ಹೆಚ್ಚುಹೆಚ್ಚಾಗಿ ಗಳಿಸುವುದು. ಭೌತಿಕ ಶರೀರ, ಜ್ಞಾನೇಂದ್ರಿಯಗಳು, ಅಪಕ್ವವಾದ ಬುದ್ಧಿ, ಅತಿಯಾದ ಗರ್ವ – ಇವು ಉತ್ತಮ ಸಾಧಕರನ್ನೂ ಪಾತಾಳಕ್ಕೆ ತಳ್ಳಬಹುದಾದ್ದರಿಂದ, ಬ್ರಾಹ್ಮಣನು ಅವುಗಳನ್ನೆಲ್ಲ ನಿಗ್ರಹಿಸಿ ತನ್ನ ವಶಪಡಿಸಿಕೊಳ್ಳುವುದರತ್ತ ನಿರಂತರವಾಗಿ ತನ್ನ ಗಮನವನ್ನು ಹರಿಸಬೇಕು. ಹೀಗೆ ಬ್ರಾಹ್ಮಣನು ಏಕಕಾಲದಲ್ಲಿ ಭೌತಿಕ ಕಾಮನೆಗಳ ಹತೋಟಿ, ಮನಸ್ಸನ್ನು ಮೇಲಿನ ಮಟ್ಟಕ್ಕೆ ಒಯ್ಯುವುದು ಎಂಬ ಎರಡೂ ಬಗೆಯ ಹೋರಾಟಗಳನ್ನು ಬಿಡದೆ ಮುಂದುವರಿಸಿಕೊಂಡು ಹೋಗಬೇಕು.
ಪ್ರತಿಯೊಂದು ದೇಶದಲ್ಲಿ ದೇಶರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆರಲು ಸಿದ್ಧವಿರುವ ಸೈನಿಕನಿಗೆ ಕೆಲವು ವಿಶೇಷ ಹಕ್ಕು ಸವಲತ್ತುಗಳು ಸಿಗುತ್ತವೆ; ಅವು ದೊರೆಯಲೂ ಬೇಕು. ಹಾಗಿರುವಾಗ ಅದೇ ಸೌಲಭ್ಯಗಳನ್ನು ಒಟ್ಟು ಸಮಾಜದ ಹಿತವನ್ನು ಕಾಯುವ ಉದ್ದೇಶಕ್ಕಾಗಿ ತನ್ನ ಸ್ವಂತ ಅನುಕೂಲ ಭೋಗಭಾಗ್ಯಗಳನ್ನು ಕೈಬಿಡುವ ಉತ್ತಮ ಸಂತರಿಗೇಕೆ ನೀಡಬಾರದು?
ಇದನ್ನು ಪರಿಗಣನೆಗೆ ತೆಗೆದುಕೊಂಡು ಸ್ಮೃತಿಗಳು, ಧರ್ಮಶಾಸ್ತ್ರಗಳು (ವೇದಗಳ ನಂತರ ಬರುವ, ಜನಜೀವನವನ್ನು ನಿಯಂತ್ರಿಸುವ ಗ್ರಂಥಗಳು) ಬ್ರಾಹ್ಮಣರಿಗೆ ಹಲವು ಹಕ್ಕು ಸವಲತ್ತುಗಳನ್ನು ನೀಡಿವೆ.
ಬ್ರಾಹ್ಮಣನ ಮುಖ್ಯ ಕರ್ತವ್ಯವೆಂದರೆ ವೇದಾಧ್ಯಯನ ಮಾಡಿ, ಆ ಜ್ಞಾನ ಪಡೆಯಲು ಯೋಗ್ಯರಾದವರಿಗೆ ಅದನ್ನು ತಿಳಿಸಿಕೊಡುತ್ತ ಅಧ್ಯಾತ್ಮಚಿಂತನದಲ್ಲಿ ನಿರತನಾಗಿರುವುದು. ಅವನು ವಿಜ್ಞಾನದ, ಕಲೆಯ ಹಲವು ವಿಭಾಗಗಳಲ್ಲಿ ಪಂಡಿತನಾಗಿರಬಹುದು; ಯಾವುದೇ ಶುಲ್ಕವನ್ನೂ ಬಯಸದೆ ಬೇರೆಯವರಿಗೆ ಆ ವಿಷಯಗಳಲ್ಲಿ ಶಿಕ್ಷಣ ನೀಡುವುದು ಅವನ ಕರ್ತವ್ಯ. ಬಯಸಿದಲ್ಲಿ ತಾನೇ ಯಜ್ಞಯಾಗಾದಿಗಳನ್ನು ಮಾಡಬಹುದು. ಇಲ್ಲವೇ ಬೇರೆಯವರು ನಡೆಸುವ ಯಾಗಗಳಲ್ಲಿ ಆಚಾರ್ಯನಾಗಬಹುದು. ಅಂತಹ ಸಂದರ್ಭಗಳಲ್ಲಿ ದಕ್ಷಿಣೆಗಳನ್ನು ತಾನೂ ಸ್ವೀಕರಿಸಬಹುದು, ಬೇರೆಯವರಿಗೂ ಕೊಡಿಸಬಹುದು.
ನಿಜಜೀವನದಲ್ಲಿ ಬ್ರಾಹ್ಮಣ
ಮೇಲಿನ ವಿಚಾರಗಳಿಂದ ಬ್ರಾಹ್ಮಣನು ದೇಶದ ಕಾನೂನಿಗೆ ಅತೀತನಾಗಿದ್ದನೆಂದೂ, ಆದುದರಿಂದ ಅವನು ಮಾಡಿದ್ದೇ ನ್ಯಾಯವೆಂದೂ ತಿಳಿಯಬಾರದು. ಅವನ ಶುದ್ಧ ಮನಸ್ಸಾಕ್ಷಿಯೇ ಅತ್ಯುತ್ತಮ ನ್ಯಾಯಾಧೀಶನಾಗಿದ್ದುದರಿಂದ, ಬೇರೆಯವರಿಗಿಂತಲೂ ಕಾನೂನನ್ನು ತನಗೇ ಅನ್ವಯಿಸಿಕೊಳ್ಳುವಾಗ ಹೆಚ್ಚು ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುತ್ತಿದ್ದನು. ಮಹಾಭಾರತದ ಶಾಂತಿಪರ್ವದ 23ನೇ ಅಧ್ಯಾಯದಲ್ಲಿ ನಿರೂಪಿತವಾಗಿರುವ ಶಂಖ ಮತ್ತು ಲಿಖಿತರ ಆಖ್ಯಾನವು ಈ ಸಂಗತಿಯನ್ನು ಸೂಚಿಸುತ್ತದೆ.
ಮಾನವನು ಸ್ವಭಾವತಃ ದುರ್ಬಲನು; ವಿಷಯಲೋಲುಪತೆ, ಧನಮೋಹಗಳಿಗೆ ಸುಲಭವಾಗಿ ಒಳಗಾಗುತ್ತಾನೆ. ಆದ್ದರಿಂದ ಎಲ್ಲ ಬ್ರಾಹ್ಮಣರೂ ದಿವ್ಯಮಾನವ ಲಕ್ಷಣಗಳ ಮಟ್ಟಕ್ಕೆ ಏರಲು ಸಾಧ್ಯವಾಗಲಿಲ್ಲ. ಉನ್ನತ ಆದರ್ಶಗಳಿಗಿಂತ ಅವರು ಕ್ರಮೇಣ ದೂರ ಉಳಿದಂತೆ, ಕ್ಷತ್ರಿಯ ಮತ್ತು ವೈಶ್ಯರಿಗೆ ನಿಗದಿತವಾಗಿದ್ದ ಯುದ್ಧ, ಕೃಷಿ, ವ್ಯಾಪಾರ ಮತ್ತು ವಾಣಿಜ್ಯಗಳಂತಹ ಉದ್ಯೋಗಗಳಲ್ಲಿ ಆಸಕ್ತಿ ವಹಿಸಿದರು. ಅವರು ವೇದಾಧ್ಯಯನಕ್ಕಾಗಿ ಸಾಧನೆ ಮಾಡುತ್ತ ಸರಳ ಹಾಗೂ ನಿಷ್ಠುರ ಜೀವನ ನಡೆಸುತ್ತಿದ್ದಷ್ಟು ಕಾಲವೂ ಸ್ಮೃತಿಗಳು ಹಾಗೂ ಧರ್ಮಶಾಸ್ತ್ರಗಳು ಆ ಸೌಲಭ್ಯಗಳು ದೊರೆಯುವಂತೆ ಅವಕಾಶ ಮಾಡಿಕೊಟ್ಟಿದ್ದವು.
ಬ್ರಾಹ್ಮಣಿಕೆಯು ಕ್ಷೀಣಿಸುತ್ತಿದ್ದ ಮುಂದಿನ ದಿನಗಳಲ್ಲಿ ಕೇವಲ ಹುಟ್ಟಿನಿಂದ ತಮ್ಮ ಜ್ಯೇಷ್ಠತೆಯನ್ನು ಸಮರ್ಥಿಸಿಕೊಳ್ಳುತ್ತ ಹಿಂದಿನ ಸವಲತ್ತುಗಳಿಗೆ ಬ್ರಾಹ್ಮಣರು ತಮ್ಮ ಹಕ್ಕನ್ನು ಸ್ಥಾಪಿಸಲು ಯತ್ನಿಸಲು ಆರಂಭಿಸಿದರು.5
ಇದರಿಂದ ಎರಡು ರೀತಿಯ ಹಾನಿಕರ ಪರಿಣಾಮಗಳಾದುವು. ಬ್ರಾಹ್ಮಣರು ತಮ್ಮ ಆಧ್ಯಾತ್ಮಿಕ ಅಧೋಗತಿಗೆ ತಾವೇ ಕಾರಣರಾದರು. ಸಮಾಜದ ಇತರ ವರ್ಗಗಳವರಿಂದ ಪ್ರತಿಕ್ರಿಯೆಗಳುಂಟಾದುವು. ಕ್ರಮೇಣ ಬ್ರಾಹ್ಮಣರು ತಮ್ಮ ಸವಲತ್ತುಗಳನ್ನು ಕಳೆದುಕೊಂಡರು. ಇತರರಂತೆ ತಾವೂ ದೇಶದ ಸಾಮಾನ್ಯ ಕಾನೂನಿಗೆ ಒಳಪಡಬೇಕಾಯಿತು.
ಬ್ರಾಹ್ಮಣರು ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಡುವವರಾಗಿದ್ದುದರಿಂದ ಅವರು ಆದರ್ಶಮಾನವರೆಂದು ಭಾವಿಸಲ್ಪಟ್ಟಿದ್ದರು. ಅವರು ಯಾವಾಗ ಉತ್ತಮ ಮಾನವೀಯತೆಯ ಆಧ್ಯಾತ್ಮಿಕ ಆದರ್ಶಗಳನ್ನು ತೊರೆದರೋ, ಆಗ ಒಟ್ಟು ಸಮಾಜವು ದುಷ್ಪರಿಣಾಮಕ್ಕೀಡಾಯಿತು. ಇಂದು ಹಿಂದೂಸಮಾಜ ಲಂಚಗುಳಿಯಾಗಿ, ಸ್ವಜನಪಕ್ಷಪಾತ ಅನೈತಿಕತೆಯಲ್ಲಿ ಮುಳುಗಿರುವುದಕ್ಕೆ ಬ್ರಾಹ್ಮಣರೇ ಹೆಚ್ಚಿನ ಹೊಣೆ ಹೊತ್ತುಕೊಳ್ಳಬೇಕು.
ಶೂದ್ರಸಮಸ್ಯೆ
ಮೂಲ ವರ್ಣವ್ಯವಸ್ಥೆಯಲ್ಲಿ, ಬ್ರಾಹ್ಮಣರು ಸಾಮಾಜಿಕವಾಗಿ ಮೇಲಿನ ಹಂತದಲ್ಲಿದ್ದರೆ ಶೂದ್ರರು ಕೆಳಹಂತದಲ್ಲಿದ್ದರು.
ವಿದ್ವಾಂಸರಿಗೆ – ಮುಖ್ಯವಾಗಿ ಸಮಾಜವಿಜ್ಞಾನಿಗಳಿಗೆ, ಮಾನವ ವಿಜ್ಞಾನಿಗಳಿಗೆ – ನಿಜವಾದ ಶೂದ್ರರು ಎಂಬವರಾರು ಎಂಬುದು ಪರಿಶೀಲನಾರ್ಹ ಹಾಗೂ ಚರ್ಚಾಸ್ಪದ ವಿಷಯವಾಗಿದೆ. ಮೂಲವ್ಯವಸ್ಥೆಯಲ್ಲಿ, ಶೂದ್ರರು ಆರ್ಯಸಮಾಜದ ಅವಿಭಾಜ್ಯ ಅಂಗವೇ ಆಗಿದ್ದರು. ಅವರು ದೈಹಿಕ ಶ್ರಮ ಮತ್ತು ಮೂರು ವರ್ಣಗಳ ಜನರ ಸೇವೆಯಲ್ಲಿ ನಿರತರಾಗಿದ್ದರೂ, ಸಾಮಾಜಿಕ ಅಂತಸ್ತು ಮತ್ತು ಗೌರವವನ್ನು ಪಡೆದಿದ್ದರು. ಪ್ರಾಚೀನ ವೇದಕಾಲೀನ ಸಮಾಜದ ನಿಯಮಗಳು, ಪರಸ್ಪರರಲ್ಲಿ ಉಟೋಪಚಾರಗಳು ವಿವಾಹಗಳ ವಿಷಯಗಳಲ್ಲಿ ಕಠೋರವಾಗಿರಲಿಲ್ಲ. ಬ್ರಾಹ್ಮಣರು ಶೂದ್ರರನ್ನು ಅಡಿಗೆಯವರನ್ನಾಗಿ ನೇಮಿಸಿಕೊಳ್ಳಬಹುದಾಗಿತ್ತು. (ಆಪಸ್ತಂಬ ಧರ್ಮಸೂತ್ರ 2.2.3.4); ಅವರು ತಮ್ಮ ಸೇವಕರು ಅಥವಾ ಬೇಸಾಯಗಾರರು ಅಥವಾ ಸಂಸಾರದ ಮಿತ್ರರಾಗಿದ್ದರೂ ಸಹ ಅವರಿತ್ತ ಭೋಜನ ಆಹ್ವಾನಗಳನ್ನು ಸ್ವೀಕರಿಸಬಹುದಾಗಿತ್ತು. (ಗೌತಮಧರ್ಮ ಸೂತ್ರಗಳು 17.1 ಮತ್ತು 6). ಬಾದರಿಯಂಥ ಕೆಲವು ಗ್ರಂಥಕರ್ತರು ಶೂದ್ರರಿಗೆ ವೇದಗಳ ಅಗ್ನಿಕಾರ್ಯವನ್ನೂ ಮತ್ತು ಧಾರ್ಮಿಕ ಸಂಸ್ಕಾರಗಳನ್ನೂ ಮಾಡುವ ಅಧಿಕಾರವಿದೆ ಎಂದು ಹೇಳಿದ್ದರು.
ಇವೆಲ್ಲವುಗಳಿಂದ ವೇದಾಧ್ಯಯನ, ಅಧ್ಯಾಪನ, ಯಜ್ಞಗಳನ್ನು ಹೊರತುಪಡಿಸಿ ಆರ್ಯರ ಸಮಾಜದ ಬೇರೆ ಸದಸ್ಯರಂತೆ ಶೂದ್ರರೂ ಗೌರವಯುತ ಜೀವನ ನಡೆಸುವ ಅವಕಾಶವನ್ನು ಪಡೆದಿದ್ದರೆನ್ನುವ ಅಭಿಪ್ರಾಯಕ್ಕೆ ಪ್ರಾಯಶಃ ನಾವು ಬರಬಹುದು. ವೇದಗಳಲ್ಲದಿದ್ದರೂ ಇತಿಹಾಸ, ಪುರಾಣಗಳಂತಹ ಇತರ ಗ್ರಂಥಗಳ ಮೂಲಕ ಆಧ್ಯಾತ್ಮಿಕ ಜ್ಞಾನ ತಿಳಿವಳಿಕೆ ಪಡೆಯಲು ಖಂಡಿತ ಅರ್ಹರಾಗಿದ್ದರು.
ದಿನ ಕಳೆದಂತೆ ಶೂದ್ರರ ಪರಿಸ್ಥಿತಿ ಹದಗೆಡುತ್ತ ಬಂತು. ಕ್ರಮೇಣ ಅವರ ಸ್ವಾತಂತ್ರ್ಯವು ಮೊಟಕಾಯಿತು. ಅವರ ಸಾಮಾಜಿಕ ಅನರ್ಹತೆಗಳು ಹೆಚ್ಚುತ್ತ ಹೋದವು. ಅವರ ಗೌರವ, ಘನತೆಗಳು ಕಡಮೆಯಾದವು. ಅವರಲ್ಲಿ ಕೆಲವರನ್ನು ಅಸ್ಪೃಶ್ಯರೆಂದು ಸಮಾಜದಿಂದ ಬೇರೆಯಾಗಿಸಿ, ಗ್ರಾಮ ಮತ್ತು ಪಟ್ಟಣಗಳ ಹೊರಗಡೆ ವಾಸಿಸುವಂತೆ ಮಾಡಲಾಯಿತು. ಮೇಲಿನ ವರ್ಣಗಳ ವಿರುದ್ಧ ಅತಿಕ್ರಮಗಳೆಸಗಿದಾಗ ಅವರಿಗೆ ವಿಧಿಸುವ ಶಿಕ್ಷೆಯು ಹೆಚ್ಚು ಹೆಚ್ಚು ತೀಕ್ಷ್ಣವಾಗಿರುತ್ತಿತ್ತು. ಕಾನೂನಿನ ರಕ್ಷಣೆಯೂ ಬರಬರುತ್ತ್ತ ಕಡಮೆ ಪರಿಣಾಮದ್ದಾಗಿರುತ್ತಿತ್ತು.
ಆರ್ಯರ ಸಮಾಜದಲ್ಲಿ ಶೂದ್ರರ ಸ್ಥಾನಮಾನ ಕ್ರಮೇಣ ಹೀನಗತಿ ಪಡೆಯಲು ಹಲವಾರು ಕಾರಣಗಳಿರಬಹುದು.
ಜನಸಂಖ್ಯೆಯು ಹೆಚ್ಚಿದಂತೆಲ್ಲ ಸ್ವಾಭಾವಿಕವಾಗಿ, ಶೂದ್ರರ ಸಂಖ್ಯೆಯೂ ಅಗಾಧವಾಗಿ ಬೆಳೆಯಿತು. ಅವರ ಸಂಖ್ಯಾ ಬಾಹುಳ್ಯವು ಅರಿವಿಲ್ಲದೆಯೇ ಬೇರೆ ವರ್ಗಗಳಲ್ಲಿ ಭಯವುಂಟು ಮಾಡಿ, ಅವರ ಮೇಲೆ ಹೆಚ್ಚಿನ ನಿರ್ಬಂಧ ಹೇರಲು ಕಾರಣವಾಯಿತು.
ಅನುಲೋಮ, ಪ್ರತಿಲೋಮ ವಿವಾಹಗಳಿಂದುಂಟಾದ ಸಂತತಿಯವರೂ, ಗುಟ್ಟಾದ ಸಂಬಂಧಗಳಿಂದ ಜನಿಸಿದವರೂ ಮತ್ತು ತಂದೆತಾಯಿಯರೂ, ಶೂದ್ರವರ್ಗಕ್ಕೆ ತಳ್ಳಲ್ಪಟ್ಟವರು. ಘೋರ, ಹೀನಾಯ ಅಪರಾಧವೆಸಗಿದ ಮೇಲ್ಜಾತಿಯವರೂ ಶೂದ್ರ ಜಾತಿಗೆ ಸೇರಿಸಲ್ಪಟ್ಟರು. ಇಂತಹವರು ಸ್ವಮತ ಭ್ರಷ್ಟರಾದುದರಿಂದ, ಶೂದ್ರರಿಗೆ ಮೊದಲು ಲಭ್ಯವಿದ್ದ ಸೌಲಭ್ಯಗಳನ್ನು ಇವರಿಗೆ ಕೊಡಲು ಪ್ರಾಯಶಃ ಬ್ರಾಹ್ಮಣರು ಸಿದ್ಧರಿರಲಿಲ್ಲ.
ಪರದೇಶಗಳಿಗೆ ಸೇರಿದ ಆಕ್ರಮಣಕಾರರ ತಂಡಗಳು ಭಾರತದಲ್ಲೇ ನೆಲಸಲು ನಿರ್ಧರಿಸಿದಾಗ, ಅವರನ್ನು ಕಡೆಗಣಿಸಲೂ ಆಗದೆ, ಪೂರ್ತಿ ತಮ್ಮೊಡನೆ ಸೇರಿಸಿಕೊಳ್ಳಲೂ ಆಗದೆಹೋಯಿತು. ಆದ್ದರಿಂದ ಅವರನ್ನು ಶೂದ್ರ ಸರಿಸಮಾನವಾಗಿ, ಇಷ್ಟವಿಲ್ಲದಿದ್ದರೂ, ಭಾವಿಸಬೇಕಾಯಿತು. ಇಲ್ಲಿಯ ಮತ, ಸಂಸ್ಕøತಿಗಳ ಪರಿಚಯ ಇಲ್ಲದ ಅವರಿಗೆ, ಆರ್ಯಜನರ ಜೀವನರೀತಿಗಳ ಮೇಲೆ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ, ನಿರ್ಬಂಧಗಳನ್ನು ವಿಧಿಸಬೇಕಾಯಿತು.
ಅಸ್ಪೃಶ್ಯತೆ
ಶೂದ್ರರ ಅವನತಿಯೊಂದಿಗೆ, ಇದುವರೆಗೆ ಕಂಡು ಕೇಳದಿದ್ದ ಒಂದು ಅನಿಷ್ಟ ಪದ್ಧತಿ – ಅಸ್ಪೃಶ್ಯತೆ (ಮುಟ್ಟುವುದಕ್ಕೆ ಅನರ್ಹ ಎಂಬ ಭಾವನೆ) ಹಿಂದೂಸಮಾಜದಲ್ಲಿ ಕಂಡುಬಂದಿತು. ವೇದಗಳ ಕಾಲದಲ್ಲಾಗಲಿ, ಧರ್ಮಶಾಸ್ತ್ರಗಳ ಕಾಲದಲ್ಲಾಗಲಿ, ಅಸ್ಪೃಶ್ಯತೆಯ ಪ್ರಸ್ತಾವ ಅಥವಾ ಆಚರಣೆ ಇರಲಿಲ್ಲ. ಸಮಾಜದ ಅತ್ಯಂತ ಕೆಳಸ್ತರದವರೆನಿಸಿದ ಚಂಡಾಲರೂ ಸಹ ಶೂದ್ರರ ಜೊತೆಯಲ್ಲೇ ಪರಿಗಣಿಸಲ್ಪಡುತ್ತಿದ್ದರು.
ಈ ಅನಿಷ್ಟ ಪದ್ಧತಿ ಯಾವಾಗ ಹೇಗೆ ಜಾರಿಗೆ ಬಂತು ಎಂದು ಹೇಳುವುದು ಕಷ್ಟ. ಹುಟ್ಟುಸಾವಿನ ಮೈಲಿಗೆ ಚೆನ್ನಾಗಿ ಪ್ರಚಲಿತವಿತ್ತು. ಅಶುದ್ಧರಾದ ಜನರಿಂದ ಅಥವಾ ಪದಾರ್ಥಗಳಿಂದ ಉಂಟಾದ ಮೈಲಿಗೆ (ಅಶೌಚ), ಸ್ನಾನದಿಂದ ಪರಿಹಾರವಾಗುತ್ತಿತ್ತು.
ಕಾಲಾನುಕ್ರಮದಲ್ಲಿ ಸತತವಾಗಿ ಹೇಸಿಗೆಯನ್ನು ಶುಚಿಮಾಡುವ, ಪ್ರಾಣಿವಧೆಮಾಡುವ, ಮಾಂಸ ಮಾರಾಟಮಾಡುವ, ಚರ್ಮವನ್ನು ಹದಗೊಳಿಸುವ ಇತ್ಯಾದಿ ಅಶುದ್ಧ ಉದ್ಯೋಗದಲ್ಲಿ ನಿರತರಾದ ಜನರನ್ನು, ಆರೋಗ್ಯಕ್ಕೆ ಹಾನಿಕರವೆಂಬ ಕಾರಣದಿಂದ ಒಟ್ಟು ಸಮಾಜದ ಹಿತದೃಷ್ಟಿಯಿಂದ ಬೇರೆ ಇಟ್ಟು, ಅಸ್ಪೃಶ್ಯರೆಂದು ಪರಿಗಣಿಸಬೇಕೆಂಬ ಅಭಿಪ್ರಾಯ ಬೆಳೆದುಬಂದಿರಬಹುದು. ಆದುದರಿಂದ ಅವರು ಊರು ಅಥವಾ ಗ್ರಾಮಗಳಿಂದ ಹೊರಗಡೆ ವಾಸಿಸುವಂತೆ ಮಾಡಿ, ಪ್ರವೇಶ, ಓಡಾಟಗಳ ಮೇಲೆ ನಿರ್ಬಂಧ ವಿಧಿಸಲಾಯಿತು.6 ಈ ರೀತಿಯಾಗಿ ಆರಂಭವಾದದ್ದು ದುರದೃಷ್ಟಕರವಾಗಿ, ಆ ಜಾತಿಗಳ ಎಲ್ಲ ಸದಸ್ಯರಿಗೂ, ಅವರು ಸಭ್ಯವೃತ್ತಿಗಳನ್ನು ಅನುಸರಿಸುತ್ತ ಇದ್ದರೂ, ಅನ್ವಯಿಸಲಾಯಿತು.
ಅಸ್ಪೃಶ್ಯತೆಯು ಹಿಂದೂ ಸಮಾಜದ ಕಳಂಕ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಮೊದಲಿಗೆ ಶ್ರೀಕೃಷ್ಣಚೈತನ್ಯರಂಥ (ಕ್ರಿ.ಶ. 1485-1533) ಭಕ್ತಿಪಂಥದ ಗುರುಗಳು, ಇತ್ತೀಚೆಗೆ ನಾರಾಯಣಗುರು (ಕ್ರಿ. ಶ. 1854-1928) ಮತ್ತು ಗಾಂಧಿಜೀ (ಕ್ರಿ. ಶ. 1869-1948) ಇದನ್ನು ಹೋಗಲಾಡಿಸಿ, ಈ ನತದೃಷ್ಟ ಜನರಿಗೆ ಒಂದು ಗಣ್ಯಸ್ಥಾನವನ್ನು ಮತ್ತೆ ದೊರಕಿಸಲು ತೀವ್ರ ಪ್ರಯತ್ನ ಮಾಡಿರುತ್ತಾರೆ.
ಆಧುನಿಕ ಭಾರತದಲ್ಲಿ ಜಾತಿಸಮಸ್ಯೆಗೆ ಪರಿಹಾರ
ಕೆಲವು ದೂರದೃಷ್ಟಿಯುಳ್ಳ ಪೌರಸ್ತ್ಯ ಹಾಗೂ ಪಾಶ್ಚಾತ್ಯ ವಿದ್ವಾಂಸರು ಜಾತಿವ್ಯವಸ್ಥೆಯ ಬಗ್ಗೆ ಪ್ರಶಂಸೆಯ ಮಳೆಯನ್ನೇ ಹರಿಸಿದ್ದರೂ, ಈಗಿರುವ ರೀತಿಯಲ್ಲಿ ವ್ಯವಸ್ಥೆಯು ಆಗಾಗ್ಗೆ ಗಂಭೀರ ಪರಿಸ್ಥಿತಿಗಳಿಗೆ, ಕೆಲವೊಮ್ಮೆ ಕಾನೂನು ಶಿಸ್ತು ಭಂಗಗಳಿಗೂ ಸಮಸ್ಯೆಗಳಿಗೂ ಕಾರಣವಾಗುವುದು ನಿರಾಕರಿಸಲಾಗದ ವಿಷಯ. ಜಾತಿಪ್ರಜ್ಞೆ ನಮ್ಮ ಜನರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಅಸ್ಪೃಶ್ಯರೆಂದು ಹೇಳಿಸಿಕೊಳ್ಳುವ ವರ್ಗದವರಲ್ಲೂ ಕೆಲ ಪಂಗಡಗಳು ತಾವು ಇತರ ಪಂಗಡಗಳಿಗಿಂತ ‘ಮೇಲು’ ಎಂದು ಸಾಧಿಸಬಯಸುತ್ತಾರೆ. ಸ್ವಾರ್ಥ, ಸಂಕುಚಿತ ಮನೋಭಾವದ ರಾಜಕೀಯ ಹಾಗೂ ಸಮಾಜದ ನಾಯಕರೆನ್ನಿಸಿಕೊಂಡವರು ಕಠಿಣ ಪರಿಸ್ಥಿತಿಗಳಲ್ಲೂ, ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ, ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸದುದ್ದೇಶದಿಂದ ತಂದ ಹಲವಾರು ಕಾನೂನುಗಳು ಸಮಾಜದ ಮೇಲೆ ನಿರೀಕ್ಷಿತ ಪರಿಣಾಮ ಬೀರಿಲ್ಲ.
ಸಮಾಜದ ಕೆಲ ನಾಯಕರು ‘ಉದಾರ’ವಾಗಿ ಆಗಾಗ್ಗೆ ಸೂಚಿಸುವ ಪರಿಹಾರಗಳಲ್ಲೊಂದು ಎಂದರೆ ವ್ಯವಸ್ಥೆಯನ್ನೇ ನಿರ್ಮೂಲಗೊಳಿಸುವುದು! ಈ ಸಲಹೆ ಹೇಗಿದೆ ಎಂದರೆ ಯಾವುದೇ ರಾಜಕೀಯ ವ್ಯವಸ್ಥೆ ಮಾನವಜನಾಂಗಕ್ಕೆ ತೃಪ್ತಿಕರ ಸಹಾಯ ಮಾಡಿಲ್ಲವಾದ್ದರಿಂದ ಎಲ್ಲ ರಾಜಕೀಯ ವ್ಯವಸ್ಥೆಗಳನ್ನೂ ರದ್ದುಮಾಡಬೇಕೆನ್ನುವಂತಿದೆ; ಅಥವಾ ತಲೆನೋವು ನಿವಾರಣೆಗೆ ತಲೆಯನ್ನೇ ಕತ್ತರಿಸಬಾರದೇಕೆ? – ಎನ್ನುವಂತಿದೆ.
ಭಾರತದ ಮಧ್ಯಕಾಲೀನದ ಹಲವು ಧಾರ್ಮಿಕ ನಾಯಕರು ಈ ಪರಿಹಾರವನ್ನೂ ಪ್ರಯೋಗದಲ್ಲಿ ತರಲು ಯತ್ನಿಸಿ ವಿಫಲರಾಗಿದ್ದಾರೆ. ಕೊನೆಗೆ ಈಗಾಗಲೇ ಇರುವುದರ ಜೊತೆಗೆ ಇನ್ನಷ್ಟು ಜಾತಿ ಉಪಜಾತಿಗಳು ಸೇರಿದುವಷ್ಟೆ.
ಭಾರತದಲ್ಲಿ ಇರುವಂತಹ ಜಾತಿವ್ಯವಸ್ಥೆ ಇಲ್ಲದ ದೇಶಗಳಲ್ಲೂ ಕೂಡ ಸಾಮಾಜಿಕ ಅಶಾಂತಿ ಮತ್ತು ಹಿಂಸಾತ್ಮಕ ಗಲಭೆಗಳಿಲ್ಲದೇ ಇಲ್ಲ. ಜನಾಂಗೀಯ ದೊಂಬಿ, ಹಿಂಸೆಯಿಂದ ಕೂಡಿದ ಆಂತರಿಕ ಕಲಹಗಳು, ಮತೀಯ ಗಲಭೆಗಳು – ಇವು ಒಂದೇ ಮತಕ್ಕೆ ಸೇರಿದ ಜನರಲ್ಲೂ ಸರ್ವೇಸಾಮಾನ್ಯವಾಗಿವೆ.
ಆದ್ದರಿಂದ ಜಾತಿಪದ್ಧತಿಯನ್ನೇ ಕೈಬಿಡಬೇಕೆನ್ನುವ ಪರಿಹಾರ, ಸಮಸ್ಯೆಗಿಂತ ಹೆಚ್ಚು ಕೆಡಕುಂಟುಮಾಡಬಲ್ಲದು.
ಶತಮಾನಗಳಿಂದ ನಡೆದು ಬಂದಿರುವ ಸಮಗ್ರ ವ್ಯವಸ್ಥೆಯನ್ನು ವಿಶ್ಲೇಷಣೆ ಮಾಡಿ, ಅದರಲ್ಲಿರುವ ನ್ಯೂನತೆಗಳನ್ನು ಗುರುತಿಸಿ, ಅದಕ್ಕೆ ನಿವಾರಣೋಪಾಯಗಳನ್ನು ಯೋಚಿಸಿ, ಪ್ರಚಲಿತ ವ್ಯವಸ್ಥೆಯನ್ನು ಬೇರೆ ರೀತಿಯಿಂದ ಸುಧಾರಿಸಿ ಅದರ ಅತ್ಯುತ್ತಮ ಫಲ ಪಡೆದುಕೊಳ್ಳುವುದು ಜಾಣತನ. ಐದು ಸಾವಿರಕ್ಕೂ ಹೆಚ್ಚು ವರ್ಷಗಳು ಈ ಜಾತಿಪದ್ಧತಿ ಯಶಸ್ವಿಯಾಗಿ ನಡೆದುಬಂದಿದೆ ಎನ್ನುವುದನ್ನು ಮರೆಯಬಾರದು.
ಜಾತಿಯ ಪ್ರಜ್ಞೆಯೂ ಸೇರಿದಂತೆ ಮಾನವರ ಎಲ್ಲ್ಲ ಸಂಘರ್ಷಗಳಿಗೂ ಮೂಲತಃ ಎರಡು ಕಾರಣಗಳಿವೆ – ಸ್ವಾರ್ಥ ಮತ್ತು ಅಹಂಭಾವ. ಜಾತಿಯ ಒಂದು ಗುಂಪು ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಮೇಲುಗೈ ಸಾಧಿಸಿದರೆ, ಅದು ಉಳಿದ ಜಾತಿ ಪಂಗಡಗಳಲ್ಲಿ ಅಪಮಾನ ಮತ್ತು ಸಿಟ್ಟು ಮೂಡಿಸುತ್ತದೆ. ಈ ರೀತಿಯ ಒಣಗರ್ವದಿಂದ, ಅಭಿಮಾನಕ್ಕೆ ಬರುವ ಧಕ್ಕೆಯಿಂದ ಪ್ರಕ್ಷುಬ್ಧತೆ ಸಂಘರ್ಷ ಗಲಭೆಗಳಿಗೆ ಪ್ರಚೋದನೆ ಸಿಗುತ್ತದೆ.
ಇದಕ್ಕೆ ಅತ್ಯುತ್ತಮವಾದ ಏಕೈಕ ಉಪಾಯವೆಂದರೆ, ನಮ್ಮ ದೇಶದ ಎಲ್ಲ ಜನರಿಗೂ ಒಳ್ಳೆಯ ಶಿಕ್ಷಣ ಒದಗಿಸುವುದು. ವಿದ್ಯಾಭ್ಯಾಸವೇ ನಮ್ಮ ಸಮಾಜದ ಹಲವಾರು ಅನಿಷ್ಟಗಳಿಗೆ ರಾಮಬಾಣದಂತಹ ಔಷಧಿ. ಆದರೆ ಈ ವಿದ್ಯಾಭ್ಯಾಸ ಕೇವಲ ಸಾಮಾನ್ಯ ಜ್ಞಾನವಾಗದೆ, ಯಾವುದಾದರೊಂದು ವೃತ್ತಿಯಲ್ಲಿ ನಿಪುಣತೆಯನ್ನೊದಗಿಸಿ, ನೀತಿ, ಧರ್ಮ ಹಾಗೂ ಆಧ್ಯಾತ್ಮಿಕತೆಗಳ ಮೂಲಕ ಮಾನವನನ್ನು ಸುಧಾರಿತ ಸುಸಂಸ್ಕೃತ ವ್ಯಕ್ತಿಯಾಗಿಸುವಂತೆ ಇರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಧರ್ಮವು, ನಿಜವಾದ ಅರ್ಥದಲ್ಲಿ, ಶಿಕ್ಷಣ ಪದ್ಧತಿಯ ಸಮಗ್ರ ಭಾಗವಾಗಬೇಕು. ಇಂತಹ ಶಿಕ್ಷಣದಿಂದ ಎಲ್ಲ ಜನರಲ್ಲೂ ತಾವು ಮಹಾನ್ ದೇಶದವರು, ತಮಗೆ ಅಗಾಧ ಸಾಮಥ್ರ್ಯವಿದೆ, ಪಶುಮಟ್ಟದಿಂದ ಮಾನವನಾಗಲು, ಆನಂತರ ದೇವತೆಯ ಮಟ್ಟಕ್ಕೇರಲೂ ಸಾಧ್ಯ – ಎಂಬ ಮನೋಭೂಮಿಕೆ ಏರ್ಪಟ್ಟರೆ ಅವರು ಮಾನವಕುಲಕ್ಕೇ ಅಮೂಲ್ಯವಾದ ಆಸ್ತಿಯಾಗುತ್ತಾರೆ. ನಮ್ಮ ಪ್ರಾಚೀನ ಋಷಿಗಳು ಇದೇ ಗುರಿಯನ್ನು ಸಾಧಿಸಲೆಂದೇ ವರ್ಣವ್ಯವಸ್ಥೆಯನ್ನು ಪ್ರಸ್ತುತಪಡಿಸಿ, ಬ್ರಾಹ್ಮಣಲಕ್ಷಣಗಳ ಗುಣಗಾನ ಮಾಡಿ, ಪ್ರತಿಯೊಬ್ಬನೂ ಆದರ್ಶ ಭವ್ಯ ಬ್ರಾಹ್ಮಣನಾಗಲೆಂದು ಸರ್ವಪ್ರಯತ್ನ ಮಾಡಿದ್ದು. ಅದರಲ್ಲಿ ವ್ಯಾಸ, ವಾಲ್ಮೀಕಿ, ವಸಿಷ್ಠರಂತಹ ಅನೇಕರು ಜನ್ಮತಃ ಬ್ರಾಹ್ಮಣರೇ ಅಲ್ಲ!
ಅತ್ಯಂತ ದುರದೃಷ್ಟಕರವೆಂದರೆ, ಕಳೆದ ಕೆಲವು ದಶಕಗಳಿಂದ ಕೆಲವು ಬ್ರಾಹ್ಮಣೇತರ ನಾಯಕರು ತಮ್ಮ ತಮ್ಮ ಸಮುದಾಯಗಳನ್ನು ಕ್ಲೇಶಪಡಿಸುತ್ತಿರುವ ಎಲ್ಲ ಕೆಡಕುಗಳಿಗೂ ಬ್ರಾಹ್ಮಣರನ್ನೇ ದೂಷಿಸಿ, ಮತ್ಸರದಿಂದ ಕೂಡಿದ ವ್ಯವಸ್ಥಿತ ಪ್ರಚಾರ ನಡೆಸಿರುವುದು. ಇದಕ್ಕುತ್ತರವಾಗಿ, ತಾವೇ ಸ್ವತಃ ಜಾತಿಯಿಂದ ಬ್ರಾಹ್ಮಣರಲ್ಲದ ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸುವುದೇ ಸೂಕ್ತ:
“ಆದ್ದರಿಂದ ಜಾತಿಗಳ ಆಂತರಿಕ ಜಗಳಗಳಿಂದ ಏನೂ ಪ್ರಯೋಜನವಿಲ್ಲ. ಅದು ನಮ್ಮನ್ನು ಇನ್ನೂ ವಿಭಜಿಸುತ್ತದೆ, ಶಕ್ತಿಗುಂದಿಸುತ್ತದೆ ಮತ್ತು ಅಧೋಗತಿಗೆ ಕೊಂಡೊಯ್ಯುತ್ತದೆ. ಮೇಲಿರುವವರನ್ನು ಕೆಳಮಟ್ಟಕ್ಕಿಳಿಸುವುದು ಪರಿಹಾರವಲ್ಲ. ಆದರೆ ಕೆಳಗಿರುವವರನ್ನು ಮೇಲ್ಮಟ್ಟಕ್ಕೆ ತರುವುದೇ ನಿಜವಾದ ಪರಿಹಾರ. ನಮ್ಮ ಎಲ್ಲ್ಲ ಗ್ರಂಥಗಳಲ್ಲೂ ಈ ವಿಚಾರಧಾರೆಯೇ ಇದೆ. ಒಂದು ಕೊನೆಯಲ್ಲಿ ಬ್ರಾಹ್ಮಣ, ಇನ್ನೊಂದು ಕೊನೆಯಲ್ಲಿ ಚಂಡಾಲ. ನಮ್ಮ ಪೂರ್ತಿ ಗಮನ ಚಂಡಾಲನನ್ನು ಬ್ರಾಹ್ಮಣತ್ವಕ್ಕೆ ಏರಿಸುವುದರಲ್ಲಿರಬೇಕು. ಹಂತ ಹಂತಗಳಲ್ಲಿ ಅವರಿಗೆ ಹೆಚ್ಚು ಹೆಚ್ಚು ಸವಲತ್ತುಗಳು ಲಭ್ಯವಾಗುವುದನ್ನು ಕಾಣಬಹುದು.
“ಭಾರತೀಯ ಜನಾಂಗದ ಮೊಟ್ಟಮೊದಲ ಧರ್ಮಪ್ರಚಾರಕ ಬ್ರಾಹ್ಮಣನೆನ್ನುವುದು ನಿಜ. ಬೇರೆಯವರಲ್ಲಿ ಈ ವಿಚಾರ ಮೂಡುವ ಮುಂಚೆಯೇ, ಜೀವನದ ಉನ್ನತಮಟ್ಟಕ್ಕಾಗಿ ಸಕಲವನ್ನೂ ತ್ಯಾಗಮಾಡಿದವರಲ್ಲಿ ಮೊದಲಿಗ, ಬೇರೆ ಜಾತಿಯವರಿಗಿಂತ ಮುಂಚೂಣಿಯಲ್ಲಿರುವುದು ಅವನ ತಪ್ಪಲ್ಲ. ಇತರ ಜಾತಿಯವರೇಕೆ ಅವನಂತೆ ಅರಿವು ಪಡೆಯಲಿಲ್ಲ ಮತ್ತು ಆಚರಿಸಲಿಲ್ಲ? ಅವರೇಕೆ ಸುಮ್ಮನೆ ಕುಳಿತು ಸೋಮಾರಿಗಳಾಗಿ, ಬ್ರಾಹ್ಮಣರು ಸ್ಪರ್ಧೆಯಲ್ಲಿ ಮುಂದೆ ಹೋಗಲು ಅನುವು ಮಾಡಿಕೊಟ್ಟರು?
“ಬ್ರಾಹ್ಮಣೇತರ ಜಾತಿಗಳವರಿಗೆ ನಾನು ಹೇಳುವುದಿಷ್ಟೇ – ತಡೆಯಿರಿ, ಆತುರ ಪಡಬೇಡಿ;
ಏಕೆಂದರೆ ನೀವು ನಿಮ್ಮ ತಪ್ಪಿನಿಂದಾಗಿಯೇ ಕಷ್ಟಪಡುತ್ತಿದ್ದೀರಿ. ಬ್ರಾಹ್ಮಣರೊಡನೆ ಹೊಡೆದಾಡುವ ಅವಕಾಶಗಳನ್ನು ದೂರಮಾಡಿಕೊಳ್ಳಿರಿ. ಆಧ್ಯಾತ್ಮಿಕತೆ ಮತ್ತು ಸಂಸ್ಕೃತ ಭಾಷೆಯ ಕಲಿಕೆಯನ್ನು ತಾತ್ಸಾರ ಮಾಡಲು ನಿಮಗೆ ಯಾರು ಹೇಳಿದರು? ಇಷ್ಟು ಕಾಲವೂ ನೀವು ಏನು ಮಾಡುತ್ತಿದ್ದಿರಿ? ಎಲ್ಲ ಜಾತಿಗಳವರಿಗೂ ಸಂಸ್ಕೃತ ಕಲಿಸಲು ನೀವೇಕೆ ಲಕ್ಷಾಂತರ ಖರ್ಚು ಮಾಡುವುದಿಲ್ಲ? …. ಇವೆಲ್ಲ ನೀವು ಮಾಡಿದ ಕೂಡಲೇ ಬ್ರಾಹ್ಮಣರಿಗೆ ಸರಿಸಮಾನರಾಗುತ್ತೀರಿ. ಇದೇ ಭಾರತದ ಗುಪ್ತಶಕ್ತಿ.”7
ವಿವೇಕಾನಂದರು ಅವರ ಕಾಲದಲ್ಲಿ ಎಲ್ಲರೂ ಸಂಸ್ಕೃತ ಕಲಿಯಬೇಕೆಂದು ಪ್ರತಿಪಾದಿಸಿದರು; ಏಕೆಂದರೆ, ಅವರ ದೃಷ್ಟಿಯಲ್ಲಿ ಸಂಸ್ಕೃತ ಭಾಷೆಯೇ ನಮ್ಮ ಧಾರ್ಮಿಕ ಸಾಂಸ್ಕೃತಿಕ ಸಾಹಿತ್ಯಭಂಡಾರಕ್ಕೆ ದಾರಿ. ಅದರ ಮೂಲಕ ಸಂಸ್ಕೃತಿ, ಸೂಕ್ಷ್ಮಾಭಿರುಚಿಗಳನ್ನು ಪಡೆಯಬಹುದು.
ಜಾತಿಜಗಳಗಳಿಗೆ ಸಂಬಂಧ ಹೊಂದಿದ ಸಮಸ್ಯೆ ಎಂದರೆ ಜಾತಿ-ಜಾತಿಗಳ ಮಧ್ಯೆ ಊಟದ, ವಿವಾಹದ ಬಾಂಧವ್ಯ. ಭಾರತದ ನಗರವಲಯಗಳಲ್ಲಿ ಊಟದ ಸಮಸ್ಯೆ ಪರಿಹಾರ ಕಂಡುಕೊಂಡಂತೆ ತೋರಿದರೂ, ಹಳ್ಳಿಗಳ ಕಡೆ ಇನ್ನೂ ನಿಷೇಧವಿದ್ದೇ ಇದೆ. ಅಂತರ್ಜಾತೀಯ ವಿವಾಹ ಸಂಬಂಧಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲೂ ಇಲ್ಲ.
ಹಳ್ಳಿಗಾಡಿನ ಕಡೆ ಅದು ಕೇವಲ ಬಹಿಷ್ಕೃತವಷ್ಟೇ ಅಲ್ಲ, ಕೆಲವು ಬಾರಿ ಹಿಂಸಾಚಾರಕ್ಕೂ ಘರ್ಷಣೆಗೂ ಕಾರಣವಾಗಿದೆ. ಸರಕಾರೀ ಮಾಧ್ಯಮಗಳು ಅಂತರ್ಜಾತೀಯ ಮದುವೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಸಿದ್ದರೂ ಸಾಮಾನ್ಯ ಜನರಿನ್ನೂ ಆ ಕಲ್ಪನೆಯನ್ನು ಅಥವಾ ಅದರ ಆವಶ್ಯಕತೆಯನ್ನು ಒಪ್ಪಿಕೊಳ್ಳಬೇಕಷ್ಟೆ. ಸಾಮಾನ್ಯಜನರ ಭಾವನೆಗಳ ತೀವ್ರತೆ ಎಷ್ಟೆಂದರೆ ಒಂದೇ ಜಾತಿಯ ಉಪಜಾತಿಗಳ ನಡುವೆಯೂ ವಿವಾಹ ಸಂಬಂಧಗಳನ್ನೂ ಅವರು ಸಹಿಸುವುದಿಲ್ಲ. ವಿಷಯ ಬಹಳ ಸೂಕ್ಷ್ಮವಾದುದರಿಂದ ತುಂಬಾ ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಮುಂದುವರಿಯಬೇಕು. ಈ ಒಗ್ಗೂಡಿಸುವ ಕಾರ್ಯ, ಉಪಜಾತಿ-ಪಂಗಡಗಳ ಮಟ್ಟದಲ್ಲಿ ಆರಂಭವಾಗಿ, ಕ್ರಮೇಣ, ಮುಖ್ಯವಾದ ಆಯಾ ವರ್ಣಗಳ ಜೊತೆಗೆ ಸಮೀಕರಿಸಿ, ಮುಂಚಿನ ನಾಲ್ಕು ವರ್ಣಗಳ ವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು ಎಂಬುದು ವಿವೇಕಾನಂದರ ಅಭಿಪ್ರಾಯ.
ಅದೇ ಕಾಲಕ್ಕೆ ಸವಲತ್ತುಗಳ ವಿಷಯ ಕೈಬಿಟ್ಟು, ಸಮಗ್ರ ಸಮಾಜಕ್ಕೆ ಪ್ರತಿಯೊಬ್ಬರ ಕರ್ತವ್ಯವೇನು ಎನ್ನುವ ಕಡೆಗೆ ಒತ್ತು ಕೊಡಬೇಕು. ಚಿಕ್ಕ ವಯಸ್ಸಿನಿಂದ ಸರಿಯಾದ ಶಿಕ್ಷಣ ಕೊಟ್ಟರೆ ಅನತಿಕಾಲದಲ್ಲಿ ಇದು ಸಾಧ್ಯವಾಗುವುದು ಖಂಡಿತ.
ಬ್ರಾಹ್ಮಣರು ಸರಳಜೀವನ ಮತ್ತು ಉದಾತ್ತ ಚಿಂತನೆಯ ಆದರ್ಶಕ್ಕೆ ಹಿಂತಿರುಗಿ, ಅತ್ಯುತ್ತಮ ನಡತೆಯ ಮಹಾನ್ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿ, ದಾರಿ ತೋರಿದರೆ ಸಮಾಜದಲ್ಲಿ ಸುಲಭವಾಗಿ, ಶೀಘ್ರವಾಗಿ ಸಮತೋಲವನ್ನು ಪುನಃ ಸ್ಥಾಪಿಸಬಹುದು.
ಉಪಸಂಹಾರ
ಇದುವರೆಗೆ ನಡೆಸಿದ ವಿವೇಚನೆ ಅಧ್ಯಯನಗಳ ಸಾರಾಂಶವಿಷ್ಟೆ:-
1. ಹಿಂದೂ ಜಾತಿವ್ಯವಸ್ಥೆಯು ವೈದಿಕ ಸಂಸ್ಕøತಿ ಮತ್ತು ಆರ್ಯರ ಸಮಾಜದ ವರ್ಣಧರ್ಮದೊಳಗೆ ಸ್ವಾಭಾವಿಕವಾಗಿ ಬೆಳೆದು ವಿಕಸನಗೊಂಡಿದೆ.
2. ಇದು ಹಿಂದೂಸಮಾಜಕ್ಕೆ ಸ್ಥಿರತೆ ಒದಗಿಸಿದೆ ಹಾಗೂ ಭಾರತದ ವಿರುದ್ಧ ಮತ್ತೆ ಮತ್ತೆ ಆಕ್ರಮಣಗಳು ನಡೆದರೂ ಐದಾರುಸಾವಿರ ವರ್ಷಗಳ ನಂತರವೂ ಗಟ್ಟಿಯಾಗಿ ಉಳಿದುಕೊಂಡಿದೆ.
3. ಮೊದಲಿಗೆ ಬ್ರಾಹ್ಮಣನು ಹಣ ಮತ್ತು ಅಧಿಕಾರಕ್ಕಾಗಿ ಆಧ್ಯಾತ್ಮಿಕ ಧ್ಯೇಯಗಳನ್ನು ತ್ಯಜಿಸಿದ್ದರಿಂದಲೂ, ಆನಂತರ ಭಾರೀ ಯಂತ್ರಗಳು ಮತ್ತು ಭೋಗದ ಜೀವನಸೌಲಭ್ಯಗಳಿಂದ ಆವೃತವಾದ ಪಾಶ್ಚಾತ್ಯ ನಾಗರಿಕತೆ ಮತ್ತು ಸಂಸ್ಕೃತಿಗಳ ಪ್ರಭಾವದಿಂದಲೂ ಅದರ ಅವನತಿಯು ಪ್ರಾರಂಭವಾಯಿತು.
4. ಜಾತಿಪದ್ಧತಿಯನ್ನು ಕೈಬಿಡುವ ಅಗತ್ಯವಿಲ್ಲ; ಕೈಬಿಡಲೂ ಬಾರದು. ಪರಸ್ಪರ ಸಂಶಯ, ದ್ವೇಷಗಳನ್ನು ಹೋಗಲಾಡಿಸುವ ಉತ್ತಮ ಶಿಕ್ಷಣ, ಸಂಸ್ಕೃತಿಗಳ ಮೂಲಕ ಜನರಲ್ಲಿ ಸಮರ್ಪಕ ಭಾವನೆಗಳನ್ನು ಮೂಡಿಸಬೇಕು ಹಾಗೂ ಸಮಾಜದ ಎಲ್ಲ್ಲ ವರ್ಗಗಳ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬೆಳೆಸಬೇಕು.
ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಬಹುದು. ಒಂದು ಸಂಸಾರದಲ್ಲಿ ಕಡೆಯ ಮಗುವು ಅಂಗವಿಕಲವಾದರೆ ಅದು ನಿರುಪಯೋಗಿ ಎಂದೂ, ತಮಗೆ ಭಾರವೆಂದೂ ಹಿರಿಯ ಸೋದರ ಸೋದರಿಯರು ಅದನ್ನು ಬಾವಿಗೆ ಎಸೆಯುತ್ತಾರೆಯೇ? ಅದರ ಬದಲಿಗೆ ಅವರು ಹೆಚ್ಚು ಪ್ರೀತಿ ವಿಶ್ವಾಸವನ್ನು ತೋರುತ್ತಾರೆ. ಅದನ್ನು ಪೋಷಿಸಿ ಸಂತೋಷಪಡಿಸುತ್ತಾರೆ; ಸ್ವಾವಲಂಬಿಯಾಗುವ ಅವಕಾಶಗಳನ್ನಿತ್ತು ಮೇಲಕ್ಕೆತ್ತುತ್ತಾರೆ. ಅದೇ ರೀತಿಯಲ್ಲಿಯೇ ಸಮಾಜದ ಮುಂದುವರಿದ ವರ್ಗಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಿಂದುಳಿದ ವರ್ಗಗಳ ಉನ್ನತಿಗಾಗಿ ಸ್ವಲ್ಪ ಹೆಚ್ಚು ಶ್ರಮವಹಿಸಿದರೆ ಹಿಂದುಳಿದ ವರ್ಗಗಳು ಸಂತೋಷಿಸುವರಲ್ಲದೆ, ಉನ್ನತವರ್ಗದವರು ತಮ್ಮ ಪ್ರಯತ್ನಗಳು ಸಫಲವಾದ ಆನಂದದಿಂದ ಕೂಡಿದವರಾಗುತ್ತಾರೆ. ಸಾಮಾಜಿಕ ಘರ್ಷಣೆಗಳು, ಅಸಮಾಧಾನಗಳು ತಮ್ಮಷ್ಟಕ್ಕೆ ತಾವೇ ಇಳಿಮುಖವಾಗುತ್ತವೆ.
ಭಗವಾನ್ ಬುದ್ಧನು 2500 ವರ್ಷಗಳ ಹಿಂದೆಯೇ,
“ದ್ವೇಷದಿಂದ ದ್ವೇಷವು ಉಂಟಾಗುತ್ತದೆ; ಪ್ರೇಮವು ದ್ವೇಷವನ್ನು ಗೆಲ್ಲುತ್ತದೆ” ಎಂದು ಘೋಷಿಸಲಿಲ್ಲವೇ? ಕಾಲದ ಪರೀಕ್ಷೆಯನ್ನು ಎದುರಿಸಿದ ಅಂತಹ ಸರ್ವಕಾಲೀನ ಸತ್ಯಕ್ಕೆ ಒಂದು ಸದವಕಾಶವನ್ನೇಕೆ ಕೊಡಬಾರದು?
ಒಮ್ಮೆ ಜನರು, ಈ ಸರಳ ಆದರೆ ಸತ್ಯ ವಿಚಾರಗಳ ಬಗ್ಗೆ ಎಚ್ಚೆತ್ತು ಅದನ್ನು ಪ್ರಾಮಾಣಿಕವಾಗಿ ಆಚರಣೆಗೆ ತಂದರೆ ಸಾಮಾಜಿಕ ಸಮತೋಲನ ಹಾಗೂ ಶಾಂತಿ ಸುಲಭವಾಗಿ ನೆಲೆಗೊಳ್ಳುತ್ತದೆ. ಆಗ ಜಾತಿಯು ಒಂದು ಸಮಸ್ಯೆಯಾಗುವ ಬದಲಿಗೆ, ಬೇರೆ ರಾಷ್ಟ್ರಗಳೂ ಸಹ ಬಯಸುವಂತಹ ಒಂದು ಆಸ್ತಿಯಾಗುತ್ತದೆ.
ಆಧಾರಗಳು:
1. ಯೆಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು.
2. M.N. Srinivas, ‘Caste in Modern India’, Bombay, Media Promoters & Publishers Pvt. Ltd., 1994, pp. 88 and 108
3. Quoted from: P.V. Kane, ‘History of Dharmasastra’, Vol. II, pt. 1, Edn. 1941, Poona Bhandarkar Oriental Research Institute, p. 20.
4. ‘India and Her Problems’, Edn. 1992, Mayavati, Advaita Ashrama, p.63
5. ಎರಡು ಸಾವಿರ ವರ್ಷಗಳ ಹಿಂದೆ, ಬ್ರಾಹ್ಮಣರು ಆತ್ಮಸ್ತುತಿಯನ್ನು ಮಾಡಿಕೊಂಡದ್ದನ್ನು ಹೀಗಳೆಯುವಾಗ, 20ನೆಯ ಶತಮಾನದಲ್ಲಿ ವಿಜ್ಞಾನದ ಅಧ್ಯಯನವನ್ನು ಬೆನ್ನಟ್ಟಿ ಪರಾಕಾಷ್ಠೆಯನ್ನು ಮುಟ್ಟುತ್ತಿದ್ದೇವೆಂದುಕೊಳ್ಳುತ್ತಿದ್ದಾಗಲೂ, ನಾರ್ಡಿಕ್ ಸಂಮೋಹಕ ಹಾಗೂ ಸೊಕ್ಕಿನ ಮಹತ್ಕಾರ್ಯಗಳ ಬಗ್ಗೆ, ಅದರಿಂದ ಇನ್ನೂ ಹೆಚ್ಚು ಶ್ಲಾಘನೀಯ ಭವಿಷ್ಯ ರೂಪಿಸುವ ಬಗ್ಗೆ ನಾವು ಕೇಳುತ್ತಿರುವುದನ್ನು ಮರೆಯಬಾರದು (vide the very first sentence in Oswald Spengler’s ‘The Decline of the West’, English translation by S. F. Atkinson) ರಾಜರನ್ನು ಪದಚ್ಯುತಿಗೊಳಿಸಿ, ವಿಸ್ತಾರವಾದ ಭೂಪ್ರದೇಶಗಳನ್ನು ತಮ್ಮ ಮನಬಂದವರಿಗೆ ಕೊಡುವಂತಹ ದುರಹಂಕಾರವನ್ನೆಂದೂ ಬ್ರಾಹ್ಮಣರು ಎಸಗಲಿಲ್ಲ. ಆದರೆ ಪೋಪ್ ಅಲೆಗ್ಸಾಂಡರ್ ತನ್ನ ‘1493ರ ಬುಲ್’ ಆದೇಶವನ್ನು ಹೊರಡಿಸಿ ಕ್ಯಾಸ್ಟಿಲ್‍ನ ಇಸಬೆಲ್ಲಾ ಮತ್ತು ಆರ್‍ಗಾನ್‍ನ ಫರ್ಡಿನಾಂಡ್‍ರಿಗೆ ‘ದಿ ನ್ಯೂ ವಲ್ರ್ಡ್’ನ್ನು ಒಪ್ಪಿಸಿದನು. (vide Dean Inge, ‘Christian Ethics’, Edn. 1930, p.160, where this astounding Bull is set out.)’
Quoted from P. V.
Kane’s ‘The History of Dharmasastra’, Vol II, pt. 1, Edn. 1941, Poona,
Bhandarkar Oriental Research Institute, p.138.
6. ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ಬುಷ್‍ಮೆನ್‍ಗಳಿಗೆ, ಅಮೆರಿಕಾದಲ್ಲಿ ನೀಗ್ರೋಗಳಿಗೆ ಯೂರೋಪ್ ಜನಾಂಗದವರು, ಕೇವಲ ಜನಾಂಗ ದುರಾಗ್ರಹಕ್ಕೆ ಒಳಗಾಗಿ ತೋರಿದ ಅಮಾನುಷ ನಡತೆಗೆ ಇದನ್ನು ಹೋಲಿಸಿನೋಡಿ!
ಮುಸ್ಲಿಮರ ದೇಶವಾದ ಅರೇಬಿಯಾದಲ್ಲಿ (ಅವರು ಸ್ಥಳೀಯ ಮುಸ್ಲಿಮರಾದರೂ ಅವರಲ್ಲಿ) ಅಸ್ಪೃಶ್ಯರೂ ಇದ್ದರೆಂಬುದು ಕೌತುಕದ ಸಂಗತಿ. (vide G.S. Ghurye, ‘Caste and Race in India’, Bombay, Popular Prakashan, Edn. 1994, pp.14-161.)
7. Swami Vivekananda, India and Her Problems, Edn. 1992, Mayavati, Advaita Ashrama, PP. 67, 69, 70.