ಅಂದು ಚೌಡಯ್ಯ ಹಾಲಿನಲ್ಲಿ ಭರತನಾಟ್ಯದ ಕಾರ್ಯಕ್ರಮ ಚಾಲನೆಯಲ್ಲಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆಯಿಂದ ನೃತ್ಯ ಪ್ರದರ್ಶನ. ವಿಶಾಲವಾದ ಸಭಾಂಗಣ ನಾಟ್ಯಪ್ರೇಮಿಗಳಿಂದ ತುಂಬಿಹರಿಯುತ್ತಿತ್ತು. ನರ್ತಕಿಯದು ಅಪ್ಸರೆಯಂತಹ ರೂಪ.
ನಾಟ್ಯಕ್ಕೆಂದೇ ಹೇಳಿಮಾಡಿಸಿದಂತಹ ಅಂಗಸೌಷ್ಟವ. ಮಹಾನ್ ಗುರುಗಳಿಂದ ಪಡೆದ ವಿದ್ಯೆ ಎಲ್ಲ ಮೇಳೈಸಿ ಅವಳ ನೃತ್ಯ ಎಲ್ಲರನ್ನೂ ಸಮ್ಮೋಹಗೊಳಿಸಿತ್ತು. ತನ್ನಿನಿಯ ಕೃಷ್ಣನನ್ನು ಕಾಣದ ನಾಯಿಕೆ ತನ್ನೆಲ್ಲ ಹಾತೊರೆಗಳನ್ನು ಪ್ರಕಟಿಸುತ್ತ, ‘ಕೃಷ್ಣಾ ನೀ ಬೇಗನೆ ಬಾರೋ’ಎಂದು ಹಂಬಲಿಸುತ್ತ ಹೋದಳು. ಒಂದೊಂದು ಚರಣದಲ್ಲೂ ಭಾವತುಂಬಿದ ಸಂಚಾರೀಕ್ರಮದಲ್ಲಿ ಒಮ್ಮೆ ರಾಧೆಯಾಗಿ, ಮಾತೆ ಯಶೋದೆಯಾಗಿ ಮತ್ತೊಮ್ಮೆ ಸಮರ್ಪಣಾ ಭಾವದ ಭಕ್ತಳಾಗಿ ಅಭಿನಯಿಸುತ್ತ ಸಾಗಿದಳು. ಈ ನಿರೂಪಣೆ ಮುಗಿದಾಗ ಭಾವಗಳ ಅಲೆಗಳಲ್ಲಿ ಮುಳುಗೇಳುತ್ತಿದ್ದ ಪ್ರೇಕ್ಷಕರು ಒಮ್ಮೆಲೇ ಎಚ್ಚೆತ್ತು ತಮ್ಮ ಆನಂದವನ್ನು ಚಪ್ಪಾಳೆಯ ಮೂಲಕ ತೋರ್ಪಡಿಸಿಕೊಂಡರು.
ಮಧುರವಾದ ರಸಾಸ್ವಾದನೆಯಲ್ಲಿ ಮಿಂದೆದ್ದ ಕಲ್ಯಾಣಿ ತನ್ನ ಆನಂದವನ್ನು ಪಕ್ಕದಲ್ಲಿದ್ದ ಗೆಳತಿಯೊಂದಿಗೆ ಹಂಚಿಕೊಂಡಳು. “ಅಬ್ಬ! ಎಂತಹ ಅದ್ಭುತ ನೃತ್ಯ ಅಲ್ವಾ? ಇವಳು ನೃತ್ಯಕ್ಕೆಂದೇ ಹುಟ್ಟಿಬಂದಂತಿದೆ. ಇವಳು ಆರಿಸಿಕೊಂಡ ಈ ಕೃತಿಯೂ ಅಭಿನಯಕ್ಕೆಂದೇ ಹೇಳಿಮಾಡಿಸಿದಂತಿದೆ. ಪುರಂದರದಾಸರ ಹೊರತಾಗಿ ಇನ್ನಾರಿಂದಲೂ ಇಂತಹ ಕೃತಿ ರಚನೆ ಊಹಿಸಲೂ ಸಾಧ್ಯವಿಲ್ಲ.”
“ನೀವೆಂದಂತೆ ಇದೊಂದು ಅದ್ಭುತವಾದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೃತಿ ಪುರಂದರದಾಸರ ರಚನೆಯಲ್ಲ. ಅವರ ಗುರು ಶ್ರೀ ವ್ಯಾಸತೀರ್ಥರದ್ದು.”
ಇದಾರಪ್ಪಾ ಹೀಗೆ ನಮ್ಮಿಬ್ಬರ ನಡುವೆ ಮೂಗುತೂರಿಸುವವರು ಎನ್ನುವಂತೆ ತುಸು ಅಸಹನೆಯಿಂದಲೇ ಕಲ್ಯಾಣಿ ಹಿಂತಿರುಗಿ ನೋಡಿದಳು. ಮಧ್ಯವಯಸ್ಸು ದಾಟಿದ ಗೌರವಾನ್ವಿತ ವ್ಯಕ್ತಿ. ಮುಖದಲ್ಲಿ ವಿದ್ಯೆ, ಅಧ್ಯಯನ, ಉದಾತ್ತ ಚಿಂತನೆಗಳಷ್ಟೇ ತರಬಹುದಾದ ವರ್ಚಸ್ಸು ಕಾಣುತ್ತಿತ್ತು.
“ಏನು! ಇದು ಪುರಂದರ ದಾಸರ ಕೃತಿಯಲ್ಲವೇ?” ಮುಂದೇನು ಹೇಳುತ್ತಿದ್ದಳೋ, ಅಷ್ಟರಲ್ಲಿ ಕಲಾವಿದೆಯು ಸ್ವಾತಿತಿರುನಾಳರ ತಿಲ್ಲಾನವನ್ನು ಆರಂಭಿಸಿ ಎಲ್ಲೆಲ್ಲೂ ಕತ್ತಲಾವರಿಸಿ ಎಲ್ಲೆಡೆ ಗಮನ ರಂಗದತ್ತ ತಿರುಗಿತು.
ಮಂಗಳವಾಗುತ್ತಿದ್ದಂತೆ ಎಲ್ಲರಿಗೂ ಮನೆಸೇರುವ ತವಕ. ಒಬ್ಬರನ್ನೊಬ್ಬರು ತಳ್ಳುತ್ತ ದ್ವಾರದ ಬಳಿ ನುಗ್ಗುತ್ತಿದ್ದ ಜನರ ನಡುವೆ ಕಲ್ಯಾಣಿಗೆ ಆ ಹಿರಿಯರೊಡನೆ ಮಾತು ಮುಂದುವರಿಸಲು ಸಾಧ್ಯವಾಗಲಿಲ್ಲ. ಕಾರ್ ಪಾರ್ಕಿಂಗಿನಿಂದ ವಾಹನವನ್ನು ಹೊರಗೆ ತೆಗೆದು ಗೇಟಿನಬಳಿ ಬರುತ್ತಿದ್ದಂತೆ ಕಾರು ಮುಂದಕ್ಕೆ ಸಾಗಲು ಜಾಗಬಿಟ್ಟು ಪಕ್ಕಕ್ಕೆ ನಿಂತಿದ್ದ ಗುಂಪಿನಲ್ಲಿ ಆ ಹಿರಿಯರನ್ನು ಕಂಡಳು. ಕೂಡಲೇ ಕಾರನ್ನು ರಸ್ತೆಯ ಬದಿಗೆ ನಿಲ್ಲಿಸಿ ಕೆಳಗಿಳಿದು ನಡೆದು ಬಂದಳು.
“ನಾನು ನಿಮ್ಮೊಡನೆ ಮಾತನಾಡಬಹುದೆ?”
“ಅಗತ್ಯವಾಗಿ, ಏನು ವಿಷಯ?”
“ಅದೇ ನೀವು ಸಭಾಂಗಣದಲ್ಲಿ ಹೇಳಿದ ವಿಷಯ; ಆ ಕೃತಿ ಪುರಂದರ ದಾಸರದಲ್ಲ ಎಂದದ್ದು ನನ್ನನ್ನು ಚಿಂತನೆಗೆ ಹಚ್ಚಿತು. ಆ ಕೃತಿಯಲ್ಲಿ ಪುರಂದರವಿಠಲ ಎಂಬ ಅಂಕಿತವಿಲ್ಲ. ನಾನಿದನ್ನು ಅಷ್ಟಾಗಿ ಗಮನಿಸಿರಲಿಲ್ಲ. ನೀವು ಇದು ವ್ಯಾಸರಾಯಸ್ವಾಮಿಗಳ ರಚನೆ ಎಂದಿರಿ. ಅವರ ಬಗ್ಗೆ ಇನ್ನೂ ಹೆಚ್ಚು ನಿಮ್ಮಿಂದ ತಿಳಿದುಕೊಳ್ಳುವ ಕುತೂಹಲ ನನಗೆ. ಸಾಧ್ಯವೇ?”
“ಇದು ಒಳ್ಳೆಯ ಕುತೂಹಲವೇ. ತಣಿಸೋಣ ಬಿಡಿ. ಎಂದಾದರೊಮ್ಮೆ ಮನೆಗೆ ಬನ್ನಿ.”
“ನಾಳೆ ಭಾನುವಾರ. ಮುಂಜಾನೆ ಬರಲೇ?” ನಕ್ಕರವರು. “ಸಂತೋಷ, ಬನ್ನಿ.” ಮನೆಯ ವಿಳಾಸ ನೀಡಿ ಮುಂಜಾನೆ ಹತ್ತೂವರೆಗೆ ಬರಲು ಹೇಳಿ ಹೊರಟರು.
***
ಕಲ್ಯಾಣಿ ಕೈಯ್ಯಲ್ಲಿ ಫಲತಾಂಬೂಲ, ಹೂವು ಹಣ್ಣುಗಳೊಡನೆ ಹತ್ತೂವರೆಗೆ ಬಂದು ಕದ ತಟ್ಟಿದಾಗ ಬಾಗಿಲು ತೆರೆದದ್ದು ನಗುಮುಖದ ಮನೆಯ ಗೃಹಿಣಿ. ಒಳಹೊಕ್ಕು ದಿನಪತ್ರಿಕೆ ಓದುತ್ತಿದ್ದ ಹಿರಿಯರಿಗೆ ನಮಿಸಿ, ತಾಂಬೂಲವನ್ನು ಕೈಗಿಟ್ಟಾಗ ಇದೆಲ್ಲಾ ಯಾಕಮ್ಮಾ ತಂದಿರಿ, ಬೇಡವಾಗಿತ್ತು ಎಂದರು ಸಂಕೋಚದಿಂದ. “ಸರ್, ಈವತ್ತು ನಿಮ್ಮಿಂದ ನಾನೊಂದು ಹೊಸ ವಿಷಯ ತಿಳಿದುಕೊಳ್ಳಲು ಬಂದಿದ್ದೇನೆ. ಹಾಗಾಗಿ ನನ್ನ ಗುರುವಿನ ಸ್ಥಾನದಲ್ಲಿದ್ದೀರಿ. ದಯವಿಟ್ಟು ಸ್ವೀಕರಿಸಿ” ಎಂದು ಎದುರಿನಲ್ಲಿದ್ದ ಕುರ್ಚಿಯ ಮೇಲೆ ಕುಳಿತಳು. ಅವರ ಪತ್ನಿ ಇಬ್ಬರಿಗೂ ತಿಂಡಿ ಕಾಫಿ ತಂದಿಟ್ಟು ತಾನೂ ಅವರ ಜೊತೆಗೆ ಉಪಹಾರ ಮಾಡುತ್ತಾ ಅಲ್ಲಿಯೇ ಕುಳಿತರು. ಪರಸ್ಪರ ಪರಿಚಯ, ಅದೂ ಇದೂ ಮಾತನಾಡುತ್ತ ಉಪಾಹಾರ ಮುಗಿಸಿ ಕೈತೊಳೆದು ಬಂದು ಕುಳಿತಾಗ ಅಂದಿನ ವಿಚಾರಕ್ಕೆ ಹಿರಿಯರು ಮುಂದಾದರು.
“ಕೃಷ್ಣಾ ನೀ ಬೇಗನೆ ಬಾರೋ’ ಇದು ಇಂದು ಬಲು ಜನಪ್ರಿಯ ಗೀತೆ. ಭಾಷೆ ಪ್ರಾಂತಗಳ ಮೇರೆಗಳನ್ನು ಮೀರಿ ವಿವಿಧ ಸಂಗೀತ ನೃತ್ಯ ಪ್ರಕಾರಗಳಲ್ಲಿ ಈ ಗೀತೆಯು ಮಿಂಚಿದೆ. ಅಪ್ರತಿಮ ಭರತನಾಟ್ಯ ಕಲಾವಿದೆ ಬಾಲಸರಸ್ವತಿಯ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಖ್ಯಾತ ನಿರ್ದೇಶಕ ಸತ್ಯಜಿತ್ ರಾಯ್ ಅವರು ಮುಂದಾದಾಗ ಚಿತ್ರೀಕರಣಕ್ಕಾಗಿ ಆಕೆ ಆರಿಸಿಕೊಂಡಿದ್ದು ಇದೇ ಗೀತೆಯನ್ನು. ಚೆನ್ನೈನ ಕಡಲತಡಿಯಲ್ಲಿ ಅಲೆಗಳ ಹಿನ್ನೆಲೆಯೊಂದಿಗೆ ಬಾಲಸರಸ್ವತಿ ಅದ್ಭುತವಾಗಿ ಅಭಿನಯಿಸಿದ್ದರು.”
“ನಾನೂ ಈ ಸಾಕ್ಷ್ಯಚಿತ್ರ ನೋಡಿದ್ದೇನೆ. ಆ ಹಾಡಿಗೆ ಅದ್ಭುತವಾದ ಅಭಿನಯನ್ನು ತೋರಿದ್ದರು. ಇದನ್ನು ರಚಿಸಿದ ವ್ಯಾಸತೀರ್ಥರು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲದಲ್ಲಿದ್ದರಲ್ಲವೇ?”
“ಆತನೊಬ್ಬನಷ್ಟೇ ಅಲ್ಲ. ವ್ಯಾಸತೀರ್ಥರು ಸಾಳುವ ನರಸಿಂಹನಿಂದ ಆರಂಭಗೊಂಡು ಕೃಷ್ಣದೇವರಾಯನನ್ನೂ ಒಳಗೊಂದು ಎಷ್ಟೋ ಅರಸರಿಗೆ ಮಾರ್ಗದರ್ಶಕರಾಗಿ, ರಾಜಗುರುಗಳಾಗಿ ಮೆರೆದವರು. ನೀವು ಅವರ ಬಗ್ಗೆ ಹೆಚ್ಚು ತಿಳಿಯಬಯಸಿದರೆ ಅದಕ್ಕೆ ಸಂಬಂಧಪಟ್ಟ ಪುಸ್ತಕ ನನ್ನಲ್ಲಿದೆ. ಓದಿನೋಡಿ. ವ್ಯಾಸತೀರ್ಥರು ಈ ಗೀತೆಯನ್ನು ರಚಿಸಿದ ಸಂದರ್ಭದ ಬಗ್ಗೆ ಆಸಕ್ತಿದಾಯಕ ಘಟನೆಯೊಂದಿದೆ. ಅದನ್ನು ಇಂದು ಹೇಳಲಿದ್ದೇನೆ” ಎಂದು ಆರಂಭಿಸಿದರು.
***
ಇದು ನಡೆದದ್ದು ಸಾಳುವ ನರಸಿಂಹನ ಕಾಲದಲ್ಲಿ. ಈತ ವಿದ್ಯಾ ಪಕ್ಷಪಾತಿಯಾಗಿದ್ದ. ಒಂದು ವಿಶಿಷ್ಟವಾದ ವಿದ್ಯಾಪೀಠ ಸ್ಥಾಪಿಸಿ ಅಲ್ಲಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾರ್ಜನೆ ಮಾಡಬೇಕೆಂಬುದು ಅವನ ಹೆಬ್ಬಯಕೆಯಾಗಿತ್ತು. ಅಂದಿನ ಕಾಲಕ್ಕೆ ಪ್ರಕಾಂಡ ಪಂಡಿತರೆಂದು ಖ್ಯಾತರಾಗಿದ್ದ ಯೋಗಿ ಲಕ್ಷ್ಮೀನಾರಾಯಣ ಮುನಿಗಳನ್ನು ಉಪಕುಲಪತಿಯನ್ನಾಗಿ ನೇಮಿಸಿಕೊಂಡು ವಿದ್ಯಾಪೀಠ ಆರಂಭಿಸಿದ. ಅದಕ್ಕಾಗಿ ಬೇಕಾದ ಸಕಲ ಅನುಕೂಲಗಳನ್ನೂ ಮಾಡಿಸಿಕೊಟ್ಟ. ವಿದ್ಯಾಪೀಠ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸತೊಡಗಿತ್ತು. ಇದೇ ಸಂದರ್ಭದಲ್ಲಿ ಯುವಸಂನ್ಯಾಸಿಯಾಗಿದ್ದ ವ್ಯಾಸತೀರ್ಥರು ಉನ್ನತ ವ್ಯಾಸಂಗಕ್ಕಾಗಿ ಲಕ್ಷ್ಮೀನಾರಾಯಣ ಯತಿವರ್ಯರ ಬಳಿಗೆ ಬಂದು ಸೇರಿದರು. ತನ್ನ ಕುಶಾಗ್ರಬುದ್ಧಿ, ಗ್ರಹಣಶಕ್ತಿ, ಪ್ರತಿಭೆಯಿಂದ ಹಾಗೂ ಮೈಗೂಡಿಸಿಕೊಂಡಿದ್ದ ವಿವೇಕ, ವಿನಯದಿಂದಾಗಿ ಗುರುಗಳ ಅಚ್ಚುಮೆಚ್ಚಿನ ಶಿಷ್ಯನಾಗಿ ಬಿಟ್ಟಿದ್ದ. ಸ್ವತಃ ವಾಗ್ಗೇಯಕಾರರಾಗಿದ್ದ ಗುರುಗಳ ಅನೇಕ ರಚನೆಗಳನ್ನು ತರುಣ ಸಂನ್ಯಾಸಿ ಪೂಜಾಸಮಯದಲ್ಲಿ ತನ್ನ ಸುಮಧುರ ಕಂಠದಲ್ಲಿ ಹಾಡುವುದು ದಿನನಿತ್ಯದ ವಾಡಿಕೆಯಾಗಿತ್ತು.
ಒಂದು ಮುಂಜಾನೆ ಗುರುಗಳು ಎಂದಿನಂತೆ ವಿದ್ಯಾರ್ಥಿಗಳಿಗೆ ಪಾಠ ಹೇಳಿ ತಮ್ಮ ಆರಾಧ್ಯದೈವ ರಂಗವಿಠ್ಠಲನ ಆರಾಧನೆಗೆ ಅಣಿಮಾಡುವಂತೆ ವಾಡಿಕೆಯಂತೆ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗೆ ಹೇಳದೆ ವ್ಯಾಸತೀರ್ಥರಿಗೆ ಮಾಡುವಂತೆ ಹೇಳಿ ತಾವು ಸ್ನಾನಕ್ಕೆ ತೆರಳಿದರು. ಗುರುಗಳ ಆದೇಶದಂತೆ ಈ ಯುವಸಂನ್ಯಾಸಿ ಹಿಂದಿನ ದಿನದ ನಿರ್ಮಾಲ್ಯ ತೆಗೆದು ಮಂಟಪ ಶುದ್ಧಿಮಾಡಿ ದೇವರ ಪೆಟ್ಟಿಗೆ ತೆಗೆದು ಸಂಪುಟದಲ್ಲಿದ್ದ ರಂಗವಿಠ್ಠಲನ ಮೂರ್ತಿಯನ್ನು ಪ್ರತಿಷ್ಠಾಪಿಸಿದ. ಪೆಟ್ಟಿಗೆಯ ಅಡಿಭಾಗದಲ್ಲಿದ್ದ ಮತ್ತೊದು ಸಂಪುಟ ಕಣ್ಣಿಗೆ ಬಿತ್ತು. ಗುರುಗಳೆಂದೂ ಇದನ್ನು ಹೊರತೆಗೆದದ್ದು ಕಂಡಿರಲೇ ಇಲ್ಲ. ತಾರುಣ್ಯಸಹಜವಾದ ಕುತೂಹಲ. ತೆರೆಯಲೋ-ಬೇಡವೋ ಎಂಬ ತೂಗಾಟ ಕ್ಷಣಕಾಲ. ಕುತೂಹಲವೇ ಗೆದ್ದು ಸಂಪುಟ ಹೊರತೆಗೆದ. ಬಹುಕಾಲದಿಂದ ಬಳಕೆ ಇಲ್ಲದೆ ಮುಚ್ಚಳ ಕಚ್ಚಿಕೊಂಡು ತೆರೆಯಲಾಗಲೇ ಇಲ್ಲ. ತಾರುಣ್ಯದ ಆತ್ಮವಿಶ್ವಾಸ ಹಾಗೂ ಗೆಲ್ಲಲೇಬೇಕೆಂಬ ಛಲ ಮುನ್ನಡೆಯಲು ಪ್ರೇರೇಪಿಸಿತು. ಯೋಗಸಾಧನೆಯಿಂದ ಉಕ್ಕಿನಂತಿದ್ದ ಬಾಹುಗಳಬಲ ಇಂದು ಅವನ ನೆರವಿಗೆ ಬಂದಿತು. ಕಚ್ಚಿಕೊಂಡಿದ್ದ ಮುಚ್ಚಳ ತೆರೆದುಕೊಂಡಿತು. ಅದರಲ್ಲಿ ವಿರಮಿಸುತ್ತಿದ್ದ ಶುದ್ಧ ತಾಮ್ರದ ಮುದ್ದಾದ ಗೋಪಾಲಕೃಷ್ಣನ ಮೂರ್ತಿಯನ್ನು ಕಂಡ. ಮೋಹಕ ಮೂರ್ತಿ ನಕ್ಕಂತಾಯ್ತು. ಮೋಹಗೊಂಡು ಮೈಮರೆತು ನೋಡುತ್ತಲೇ ನಿಂತುಬಿಟ್ಟ. ಅಂದು ಈ ಸುಂದರಾಂಗ ತನ್ನ ಸುಮಧುರ ವೇಣುಗಾನದಿಂದ ಬೃಂದಾವನದ ವನಿತೆಯರನ್ನು ಪರವಶಗೊಳಿಸಿದ್ದನಲ್ಲಾ, ಅದೇ ತುಂಟ ಈಗ ಈ ತರುಣ ಸಂನ್ಯಾಸಿಯನ್ನು ಪರವಶಗೊಳಿಸುತ್ತಲೇ ಅವನ ಅಂತರಂಗ ಪ್ರವೇಶಿಸಿಬಿಟ್ಟ. ಅಷ್ಟಕ್ಕೇ ಬಿಟ್ಟನೇನು? ಕ್ಷಣ ಕ್ಷಣಕ್ಕೂ ಬೆಳೆಯುತ್ತಾ ಹೋಗಿ ಜೀವತಳೆದು ನಾಟ್ಯವಾಡತೊಡಗಿದ. ಬೆರಗಾಗಿ ನಿಂತು ನೋಡುತ್ತಿದ್ದ ಇವ ಸಮ್ಮೋಹನಗೊಂಡಂತೆ ತಾನೂ ಅದೇ ಲಯಕ್ಕೆ ಹೆಜ್ಜೆಹಾಕತೊಡಗಿದ.
ಇತ್ತ ಅಂದಿನ ಪೂಜೆಗಾಗಿ ಉದ್ಯಾನವನದಿಂದ ಹೂವು, ತುಳಸೀದಳಗಳನ್ನು ಕಿತ್ತು ತಂದು ಪೂಜಾಗೃಹದೊಳಗಡಿಯಿಟ್ಟ ಹಿರಿಯ ಶಿಷ್ಯ ತನ್ನ ಕಣ್ಣಮುಂದಿನ ದೃಶ್ಯಕಂಡು ಗಾಬರಿಯಿಂದ ಕೈಲಿದ್ದ ಬುಟ್ಟಿಯನ್ನು ಅಲ್ಲಿಯೇ ಕೆಡವಿ ಸ್ನಾನಗೃಹದತ್ತ ಓಟಕಿತ್ತ. ಅದೇ ಸ್ನಾನಮುಗಿಸಿ ಬಂದಿದ್ದ ಗುರುಗಳ ಮುಂದೆ ಮಾತನಾಡಲಾರದೆ ಏದುಸಿರುಬಿಡುತ್ತಾ ನಿಂತುಬಿಟ್ಟ.
“ಏನಾಯಿತಪ್ಪಾ? ಏಕಿಷ್ಟು ವಿಚಲತೆ?”
“ಗುರುವರ್ಯ, ನಮ್ಮ ವ್ಯಾಸತೀರ್ಥರಿಗೆ ಬುದ್ಧಿಭ್ರಮಣೆಯಾದಂತಿದೆ. ಪೂಜೆಗೆ ಅಣಿಮಾಡಲು ಕಳಿಸಿದ್ದಿರಷ್ಟೆ. ಈಗ ನಾವು ಹಿಂದೆಂದೂ ಕಾಣದಿದ್ದ ಮೂರ್ತಿಯೊಂದನ್ನು ಹಿಡಿದು ಕುಣಿಯುತ್ತಿದ್ದಾನೆ.”
ಗುರುಗಳು ವೇಗವಾಗಿ ಪೂಜಾಗೃಹದತ್ತ ಬರುತ್ತಿದ್ದಂತೆ ಮಾಯಾವಿ ಕೃಷ್ಣ ತರುಣಸಂನ್ಯಾಸಿಯ ದೃಷ್ಟಿಯಿಂದ ಮಾಯವಾಗಿಬಿಟ್ಟ! ಒಮ್ಮೆಲೇ ಅದೃಶ್ಯನಾದವನನ್ನು ಮತ್ತೆ ಕಾಣಲು ಹಂಬಲಿಸುತ್ತ ವ್ಯಾಸತೀರ್ಥರು ಆರ್ತತೆಯಿಂದ ಹಾಡತೊಡಗಿದರು.
ಕೃಷ್ಣಾ ನೀ ಬೇಗನೆ ಬಾರೋ
ಬೇಗನೇ ಬಾರೋ, ಮುಖವನ್ನೆ ತೋರೋ..
ಕೃಷ್ಣಾ ನೀ ಬೇಗನೆ
ಕಾಲಲಂದುಗೆ ಗೆಜ್ಜೆ, ನೀಲದ ಬಾವುಲಿ
ನೀಲವರ್ಣನೆ ನಾಟ್ಯ ಆಡುತ ಬಾರೋ……
ಕೃಷ್ಣಾ ನೀ ಬೇಗನೆ
ಕರದಲ್ಲಿ ಕಂಕಣ, ಬೆರಳಲ್ಲಿ ಉಂಗುರ
ಕೊರಳಲಿ ಹಾಕಿದಾ ವೈಜಯಂತಿ ಮಾಲಾ…
ಕೃಷ್ಣಾ ನೀ ಬೇಗನೆ
ತಾಯಿಗೆ ಬಾಯಲ್ಲಿ, ಜಗವನೆ ತೋರಿದ
ಜಗದೋದ್ಧಾರಕ ನಮ್ಮಾ, ಉಡುಪಿಯ ಕೃಷ್ಣಾ….
ಕೃಷ್ಣಾ ನೀ ಬೇಗನೆ
ಹಾಡು ಮುಗಿಸುತ್ತಿದ್ದಂತೆ ಗುರುಗಳು ಭರದಿಂದ ಮುನ್ನುಗ್ಗಿ ಪ್ರಿಯ ಶಿಷ್ಯನನ್ನು ಅಪ್ಪಿ ಹಿಡಿದರು. ಇಬ್ಬರ ಕಣ್ಣಿನಲ್ಲೂ ಅಶ್ರುಧಾರೆ. “ನೀನು ಧನ್ಯ ಕಣಪ್ಪ. ನನಗೊಲಿಯದ ಕೃಷ್ಣ ನಿನಗೊಲಿದುಬಿಟ್ಟ.”
“ಗುರುಗಳೆ, ನೀವು ಹಾಗನ್ನಬಾರದು. ನೀವೆಲ್ಲಿ ನಾನೆಲ್ಲಿ? ಆತ ಇಷ್ಟು ದಿನಗಳು ನಿಮ್ಮ ಬಳಿಯಲ್ಲೇ ಇದ್ದನಲ್ಲ”
“ನನ್ನ ಬಳಿ ಸುಮ್ಮನೇ ಅಜ್ಞಾತವಾಗಿ ಇದ್ದನಷ್ಟೆ. ಇಷ್ಟು ದಿನ ನಿನಗಾಗಿ ಕಾದು ಇಂದು ಬಂದು ನಿನ್ನ ಕೈಹಿಡಿದ ಆ ಚೋರ ಶಿಖಾಮಣಿ. ಬಹಳ ಹಿಂದೆ ನಾನು ಯಾತ್ರೆಯಲ್ಲಿದ್ದಾಗ ಪಂಢರಾಪುರದ ಚಂದ್ರಭಾಗಾ ನದಿಯ ತಟದಲ್ಲಿ ನನಗೆ ಎರಡು ಸಂಪುಟಗಳು ಭಗವಂತನ ಅನುಗ್ರಹದಿಂದ ದೊರಕಿದ್ದುವು. ಒಂದರಲ್ಲಿದ್ದ ರಂಗವಿಠಲನ ಮೂರ್ತಿಯನ್ನು ನಾನು ಅನುದಿನವೂ ಆರಾಧಿಸತೊಡಗಿದೆ. ಮತ್ತೊಂದು ಸಂಪುಟದ ಮುಚ್ಚಳವನ್ನು ನಾನೆಷ್ಟು ಪ್ರಯತ್ನಿಸಿದರೂ ತೆರೆಯಲಾಗಲೇ ಇಲ್ಲ. ಅದು ಬೇರಾರಿಗಾಗಿಯೋ ಕಾಯುತ್ತಿದೆ ಎಂದೆನಿಸಿತು. ನಾನದನ್ನು ಅಷ್ಟಕ್ಕೇ ಬಿಟ್ಟುಬಿಟ್ಟೆ. ಆ ಸುಂದರಾಗ ಗೋಪಾಲ ಇಂದು ಪ್ರಕಟಗೊಂಡು ನಿನ್ನ ಕೈ ಹಿಡಿದ.”
“ಆದರೆ ಇದುವರೆಗೂ ನನ್ನೊಡನಿದ್ದವ ಈಗ ಎಲ್ಲಿಯೋ ಕಣ್ಮರೆಯಾಗಿದ್ದಾನೆ ಗುರುಗಳೆ. ನನಗವನನ್ನು ದೊರಕಿಸಿಕೊಡಿ.”
“ಕಣ್ಮರೆಯಾಗಿಲ್ಲ ವತ್ಸಾ. ನಿನ್ನ ಒಳಗಣ್ಣ್ಣು ತೆರೆದು ನೋಡು. ನಿನ್ನಂತರಂಗದಲ್ಲಿ ಹುದುಗಿಬಿಟ್ಟಿದ್ದಾನಷ್ಟೆ. ಅಷ್ಟೇ ಅಲ್ಲದೆ ನಿನ್ನ ಮುಖದಿಂದ ನಮ್ಮ ಹರಿದಾಸ ಸಾಹಿತ್ಯಕ್ಕೆ ಒಂದು ಅನಘ್ರ್ಯರತ್ನವನ್ನು ಹೊರಹೊಮ್ಮಿಸಿದ್ದಾನೆ. ನಿನ್ನೀ ಸೇವೆ ಹೀಗೆಯೇ ಮುಂದುವರಿಯಲಿ. ಈ ಗೋಪಾಲಕೃಷ್ಣಮೂರ್ತಿ ನಿನ್ನಿಂದ ಸದಾ ಪೂಜೆಗೊಳ್ಳಲಿ. ಇನ್ನು ಮುಂದೆ ನಿನ್ನ ರಚನೆಗಳಿಗೆಲ್ಲ ‘ಕೃಷ್ಣ’ ಎಂಬುದೇ ಅಂಕಿತವಾಗಲಿ” ಎಂದು ಲಕ್ಷ್ಮೀನಾರಾಯಣಮುನಿಗಳು ಆಶೀರ್ವದಿಸಿದರು.
ತನ್ಮಯಳಾಗಿ ಕೇಳುತ್ತಿದ್ದ ಕಲ್ಯಾಣಿ ಹಿರಿಯ ವಿದ್ವಾಂಸರಿಗೆ ಕೃತಜ್ಞತೆ ತಿಳಿಸಿ ಹೊರಡುತ್ತಿದ್ದಂತೆ ಅವಳ ಕೈಗೆ ಒಂದು ಪುಸ್ತಕ ನೀಡಿದರು.
“ಇದರಲ್ಲಿ ವ್ಯಾಸತೀರ್ಥರ ಸಂಪೂರ್ಣ ಚರಿತ್ರೆ ಇದೆ. ನಾನೀಗ ನಿಮಗೆ ಹೇಳಿದ ಘಟನೆಯೂ ಇಲ್ಲಿ ನಿರೂಪಿತವಾಗಿದೆ. ಓದಿ ನೋಡಿ” ಎಂದರು.