ಕನ್ಯಾತುಲಿತ ಸುವರ್ಣದಾನ ಎಂಬ ಹದಿನಾರನೇ ಉಪಾಖ್ಯಾನ
-ಡಾ. ಶಾಂತಲಾ ವಿಶ್ವಾಸ
ಬಳಿಕ ಸಿಂಹಾಸನವನ್ನು ಏರಲು ಬಂದ ಭೋಜರಾಜನನ್ನು ತಡೆದು ಗೊಂಬೆಯು ಹೇಳಿತು – “ರಾಜನೇ ಕೇಳು, ಒಮ್ಮೆ ರಾಜನಾದ ವಿಕ್ರಮಾರ್ಕನು ದಿಗ್ವಿಜಯಕ್ಕೆ ಹೋದನು. ಅವನು ಪೂರ್ವ-ದಕ್ಷಿಣ-ಪಶ್ಚಿಮ-ಉತ್ತರ ದಿಕ್ಕುಗಳಲ್ಲೆಲ್ಲ ಸಂಚರಿಸಿ, ಅಲ್ಲಿಯ ರಾಜರುಗಳನ್ನು ಗೆದ್ದು, ಅವರು ಸಮರ್ಪಿಸಿದ ವಸ್ತುಗಳನ್ನು ಮಾತ್ರ ತೆಗೆದುಕೊಂಡು, ಅವರನ್ನೇ ಮತ್ತೆ ಅವರವರ ಸ್ಥಾನಗಳಲ್ಲಿ ತನ್ನ ಪ್ರತಿನಿಧಿಗಳನ್ನಾಗಿ ಇರಿಸಿ ತನ್ನ ನಗರಕ್ಕೆ ಹೊರಟನು. ಬಳಿಕ ನಗರವನ್ನು ಪ್ರವೇಶಿಸುವ ಸಮಯದಲ್ಲಿ ಒಬ್ಬ ದೈವಜ್ಞನು “ರಾಜನ್, ಸ್ವಲ್ಪ ನಿಲ್ಲು. ಇನ್ನು ನಾಲ್ಕು ದಿನಗಳ ವರೆಗೆ ನಗರಪ್ರವೇಶಕ್ಕೆ ಯೋಗ್ಯವಾದ ಮುಹೂರ್ತವಿಲ್ಲ. ನೀನು ಅಲ್ಲಿಯವರೆಗೆ ಹೊರಗೇ ಉಳಿಯುವುದು ಒಳ್ಳೆಯದು” ಎಂದನು. ಅವನ ಮಾತನ್ನು ಕೇಳಿ ರಾಜನು ನಗರದ ಹೊರಗೆ ಉದ್ಯಾನವನದಲ್ಲಿ ತಾತ್ಕಾಲಿಕವಾಗಿ ವಾಸದ ವ್ಯವಸ್ಥೆಯನ್ನು ಮಾಡಿಸಿಕೊಂಡು ಅಲ್ಲಿಯೇ ನಾಲ್ಕು ದಿನಗಳನ್ನು ಕಳೆಯಲು ನಿಶ್ಚಯಿಸಿದನು. ಅದೇ ಸಮಯದಲ್ಲಿ ವಸಂತಕಾಲವೂ ಬಂತು.
ಆ ವಸಂತಕಾಲವನ್ನು ನೋಡಿ ಸುಮಂತ್ರ ಎಂಬ ಮಂತ್ರಿಯು ರಾಜನ ಬಳಿಗೆ ಬಂದು “ರಾಜನ್, ಋತುರಾಜ ವಸಂತನ ಆಗಮನವಾಗಿದೆ. ಇಂದು ಅವನನ್ನು ಪೂಜಿಸಿದರೆ ಎಲ್ಲ ದೇವತೆಗಳೂ ಪ್ರಸನ್ನರಾಗುತ್ತಾರೆ” ಎಂದು ಹೇಳಿದನು. ರಾಜನು “ಹಾಗೆಯೆ ಆಗಲಿ” ಎಂದು ಒಪ್ಪಿಕೊಂಡು ವಸಂತಪೂಜೆಯನ್ನು ನೆರವೇರಿಸಲು ಅವನಿಗೆ ಆಜ್ಞೆ ಮಾಡಿದನು.
ಬಳಿಕ ಆ ಮಂತ್ರಿಯು ಸುಮನೋಹರವಾದ ಮಂಟಪವನ್ನು ಮಾಡಿಸಿ, ವೇದಶಾಸ್ತ್ರಪರಿಣತರಾದ ಪಂಡಿತರನ್ನೂ, ಬ್ರಾಹ್ಮಣರನ್ನೂ, ಗೀತೆವಾದ್ಯಗಳಲ್ಲಿ ನಿಪುಣರಾದ ಕಲಾಕಾರರನ್ನೂ, ನೃತ್ಯಪಟುಗಳನ್ನೂ ಕರೆಸಿದನು. ದುಃಖಿತರು, ಕುರುಡರು, ಕಿವುಡರು, ಕುಂಟರು ಮತ್ತು ಕುಳ್ಳರೆಲ್ಲ ತಾವಾಗಿಯೇ ಬಂದರು. ಸಭೆಯ ಮಧ್ಯದಲ್ಲಿ ನವರತ್ನಗಳಿಂದ ಕೂಡಿರುವ ಸಿಂಹಾಸನವನ್ನು ಇಟ್ಟು ಅಲ್ಲಿ ಲಕ್ಷ್ಮೀನಾರಾಯಣರ ಪ್ರತಿಮೆಗಳನ್ನು ಇಟ್ಟನು. ಪೂಜೆಗಾಗಿ ಕುಂಕುಮ, ಕರ್ಪೂರ, ಕಸ್ತೂರಿ ಮೊದಲಾದ ಸುಗಂಧದ್ರವ್ಯಗಳನ್ನೂ ಜಾಜಿ, ಮಲ್ಲಿಗೆ, ಸಂಪಿಗೆ ಮೊದಲಾದ ಹೂವುಗಳನ್ನೂ ತರಿಸಿದನು. ಅನಂತರ ರಾಜನು ವಿಧಿಪ್ರಕಾರವಾಗಿ ತಾನೇ ಲಕ್ಷ್ಮೀನಾರಾಯಣರನ್ನು ಷೋಡಶೋಪಚಾರಗಳಿಂದ ಪೂಜಿಸಿ, ಬ್ರಾಹ್ಮಣರನ್ನೂ, ಕಲಾವಿದರನ್ನೂ ಗೌರವಿಸಿದನು. ಆಮೇಲೆ ಗಾಯಕರು ವಸಂತರಾಗದ ಆಲಾಪನೆಯನ್ನು ಮಾಡಿ ವಸಂತನನ್ನು ಸಂತೋಷಪಡಿಸಿದರು. ರಾಜನು ಅವರಿಗೂ ಗೌರವಾರ್ಪಣೆ ಮಾಡಿದನು.
ಈ ನಡುವೆ ಒಬ್ಬ ಬ್ರಾಹ್ಮಣನು ತನ್ನ ಮಗಳೊಂದಿಗೆ ಅಲ್ಲಿಗೆ ಬಂದು ರಾಜನಿಗೆ ಆಶೀರ್ವಾದ ಮಾಡಿ “ರಾಜನ್, ಒಂದು ವಿನಂತಿ ಇದೆ” ಎಂದನು.
“ಏನದು? ತಿಳಿಸು” ಎಂದು ರಾಜನು ಕೇಳಲಾಗಿ, ಅವನು “ನಾನು ನಂದಿವರ್ಧನ ನಗರದ ನಿವಾಸಿ. ನನಗೆ ಎಂಟು ಮಂದಿ ಗಂಡುಮಕ್ಕಳು ಹುಟ್ಟಿದರು. ಆದರೆ ಒಬ್ಬಳೂ ಮಗಳು ಹುಟ್ಟಿರಲಿಲ್ಲ. ಅದರಿಂದ ದುಃಖಿತನಾಗಿ ನಾನು ಹೆಂಡತಿಯೊಂದಿಗೆ ಜಗದಂಬಿಕೆಯ ಎದುರು – “ಅಂಬಿಕೇ, ನನಗೆ ಮಗಳು ಹುಟ್ಟಿದರೆ ಅವಳಿಗೆ ನಿನ್ನ ಹೆಸರನ್ನೇ ಇಡುವೆನು. ಮಾತ್ರವಲ್ಲ, ಅವಳಷ್ಟೇ ತೂಕದ ಚಿನ್ನವನ್ನೂ ನಿನಗೆ ಅರ್ಪಿಸುವೆನು. ಆ ಕನ್ಯೆಯನ್ನು ಯಾರಾದರೂ ವೈದಿಕವರನಿಗೆ ಕೊಡುವೆನು” ಎಂದು ಸಂಕಲ್ಪ ಮಾಡಿದೆನು. ಕಾಲ ಕಳೆದಂತೆ ಜಗದಂಬಿಕೆಯ ಅನುಗ್ರಹದಿಂದ ನನಗೆ ಈ ಸುಲಕ್ಷಣಳಾದ ಮಗಳು ಹುಟ್ಟಿದ್ದಾಳೆ. ಅವಳೀಗ ಪ್ರಾಪ್ತವಯಸ್ಕಳಾಗಿದ್ದಾಳೆ. ಈಗ ಅವಳ ಜಾತಕದಲ್ಲಿ ಹನ್ನೊಂದನೆಯ ಸ್ಥಾನದಲ್ಲಿ ಗುರು ಇದ್ದಾನೆ. ಹೇಗಾದರೂ ಮಾಡಿ ಈಗಲೇ ಅವಳ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಆದ್ದರಿಂದ ನಾನು ಮೊದಲು ಮಾಡಿದ ಸಂಕಲ್ಪದಂತೆ ಕನ್ಯೆಯ ಭಾರಕ್ಕೆ ಸಮನಾದ ಚಿನ್ನವನ್ನು ದೇವಿಗೆ ಅರ್ಪಿಸಲು ಬಯಸಿದ್ದೇನೆ. ವಿಕ್ರಮಾರ್ಕನನ್ನು ಬಿಟ್ಟರೆ ಇಷ್ಟೊಂದು ಚಿನ್ನವನ್ನು ಕೊಡಬಲ್ಲವರು ಈ ಭೂಮಂಡಲದಲ್ಲಿ ಬೇರೆ ಯಾರೂ ಇಲ್ಲ ಎಂದು ತಿಳಿದು ನಿನ್ನ ಬಳಿಗೆ ಬಂದಿರುತ್ತೇನೆ” ಎಂದನು.
ರಾಜನು “ಎಲೈ ಬ್ರಾಹ್ಮಣ, ಒಳ್ಳೆಯ ಕೆಲಸ ಮಾಡಿದೆ ನೀನು. ನಿನಗೆ ಬೇಕಾದದ್ದನ್ನು ನಾನು ಕೊಡುತ್ತೇನೆ” ಎಂದು ಹೇಳಿದನು. ಆಮೇಲೆ ಕೋಶಾಧಿಕಾರಿಯನ್ನು ಕರೆದು – “ಈ ಬ್ರಾಹ್ಮಣನಿಗೆ ಅವನ ಕನ್ಯೆಯ ಭಾರದಷ್ಟು ಚಿನ್ನವನ್ನೂ, ಅದಲ್ಲದೆ ಮತ್ತಷ್ಟು ಚಿನ್ನವನ್ನೂ ಅರಮನೆಯ ಬೊಕ್ಕಸದಿಂದ ಕೊಡು” ಎಂದು ಆಜ್ಞೆ ಮಾಡಿದನು.
ಕೋಶಾಧಿಕಾರಿಯು ರಾಜನ ಮಾತಿನಂತೆ ಬ್ರಾಹ್ಮಣನಿಗೆ ಅಷ್ಟೂ ಚಿನ್ನವನ್ನು ಕೊಟ್ಟನು. ಬ್ರಾಹ್ಮಣನೂ ಸಂತುಷ್ಟನಾಗಿ ಮಗಳೊಂದಿಗೆ ತನ್ನ ನಗರಕ್ಕೆ ಹೊರಟು ಹೋದನು. ರಾಜನು ಶುಭಮುಹೂರ್ತದಲ್ಲಿ ನಗರವನ್ನು ಪ್ರವೇಶಿಸಿದನು.’’
ಹೀಗೆ ಕಥೆಯನ್ನು ಹೇಳಿ ಗೊಂಬೆಯು “ದೇವ, ನಿನ್ನಲ್ಲಿ ಈ ರೀತಿಯ ಔದಾರ್ಯವು ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.
***
ಪರೋಪಕಾರಕ್ಕಾಗಿ ಸ್ವದೇಹದ ಆಹುತಿದಾನ ಎಂಬ ಹದಿನೇಳನೇ ಉಪಾಖ್ಯಾನ
ಪುನಃ ಸಿಂಹಾಸನವನ್ನು ಏರಲು ಬಂದ ಭೋಜರಾಜನನ್ನು ತಡೆದು ಮತ್ತೊಂದು ಗೊಂಬೆಯು ಹೇಳಿತು – “ರಾಜನ್, ಕೇಳು. ಔದಾರ್ಯದಲ್ಲಿ ವಿಕ್ರಮಾರ್ಕನಿಗೆ ಸಮನಾದವನು ಇನ್ನೊಬ್ಬ ಇರಲಿಲ್ಲ. ನಿರ್ಮಲವಾದ ಔದಾರ್ಯಗುಣದಿಂದ ಅವನು ತ್ರಿಭುವನದಲ್ಲಿಯೂ ಪ್ರಖ್ಯಾತನಾಗಿದ್ದನು. ಎಲ್ಲರೂ ಅವನ ಶೌರ್ಯ-ಔದಾರ್ಯಾದಿ ಗುಣಗಳನ್ನು ಹೊಗಳುತ್ತಿದ್ದರು.
ಹೀಗಿರಲು ಒಮ್ಮೆ ಇನ್ನೊಂದು ರಾಜ್ಯದ ರಾಜನ ಎದುರು ಒಬ್ಬ ಸ್ತುತಿಪಾಠಕನು ವಿಕ್ರಮನ ಗುಣಗಳನ್ನು ಹೊಗಳಿದನು. ಅದನ್ನು ಕೇಳಿ ಆ ರಾಜನು – “ಯಾಕೆ ಎಲ್ಲ ಸ್ತುತಿಪಾಠಕರೂ ವಿಕ್ರಮನ ಗಣಗಳನ್ನೇ ಹೊಗಳುತ್ತಾರೆ? ಅವನಂಥ ಇನ್ನೊಬ್ಬ ರಾಜನಿಲ್ಲವೆ?’’ ಎಂದು ಕೇಳಿದನು.
ಆಗ ಅವನು – “ಸ್ವಾಮಿನ್, ತ್ಯಾಗದಲ್ಲಿ ವಿಕ್ರಮಾರ್ಕನಿಗೆ ಸಮನಾದವನು ಮತ್ತೊಬ್ಬನು ಖಂಡಿತವಾಗಿಯೂ ಇಲ್ಲ. ಪರೋಪಕಾರದ ಪ್ರಸಂಗ ಬಂದರೆ ಅವನಿಗೆ ತನ್ನ ಶರೀರದ ಬಗೆಗೂ ಮಮತ್ವ ಇರುವುದಿಲ್ಲ” ಎಂದು ಹೇಳಿದನು.
ಅವನ ಮಾತನ್ನು ಕೇಳಿ ಆ ರಾಜನು ‘ನಾನೂ ಪರೋಪಕಾರ ಮಾಡುವೆನು’ ಎಂದು ಮನಸ್ಸಿನಲ್ಲಿ ಯೋಚಿಸಿ ಒಬ್ಬ ಯೋಗಿಯನ್ನು ಕರೆದು, “ಎಲೈ ಯೋಗಿಯೆ, ನಾನು ಪರೋಪಕಾರ ಮಾಡಲು ಬಯಸಿದ್ದೇನೆ. ಪರೋಪಕಾರಕ್ಕಾಗಿ ಪ್ರತಿದಿನವೂ ಹೊಸ ಹೊಸ ದ್ರವ್ಯಗಳನ್ನು ಕೊಡಲು ಬಯಸುತ್ತೇನೆ. ಅದಕ್ಕಾಗಿ ಪ್ರತಿದಿನವೂ ರಾಶಿಯಷ್ಟು ಚಿನ್ನವನ್ನು ಪಡೆಯುವುದಕ್ಕೆ ಯಾವುದಾದರೂ ಉಪಾಯವಿದೆಯೇ?’’ ಎಂದು ಕೇಳಿದನು.
ಯೋಗಿಯು “ರಾಜನ್, ಯಾಕಿಲ್ಲ? ಇದೆ. ಹೇಳುತ್ತೇನೆ ಕೇಳು. ನೀನು ಕೃಷ್ಣಪಕ್ಷದ ಚತುರ್ದಶಿಯಂದು ಅರವತ್ತನಾಲ್ಕು ಯೋಗಿನೀಚಕ್ರವನ್ನು ಪೂಜಿಸಬೇಕು. ಆಮೇಲೆ ಅದರ ಎದುರು ಮಂತ್ರಪುರಶ್ಚರಣೆ ಮಾಡಿ ದಶಾಂಶಹೋಮ ಮಾಡಬೇಕು. ಹೋಮದ ಕೊನೆಯಲ್ಲಿ ಪೂರ್ಣಾಹುತಿಯ ಸಂದರ್ಭದಲ್ಲಿ ತನ್ನ ಶರೀರವನ್ನೇ ಬೆಂಕಿಯಲ್ಲಿ ಹಾಕಬೇಕು. ಹೀಗೆ ಮಾಡಿದರೆ ನೀನು ನಿರಂತರ ಪರೋಪಕಾರವನ್ನು ಮಾಡುವಷ್ಟು ಬಂಗಾರವನ್ನು ಪಡೆಯುತ್ತೀಯೆ” ಎಂದು ಹೇಳಿದನು.
ಅನಂತರ ರಾಜನು ಹಾಗೆಯೇ ಮಾಡಿದನು. ಕೊನೆಯಲ್ಲಿ ತನ್ನ ಶರೀರವನ್ನು ಅಗ್ನಿಗೆ ಅರ್ಪಿಸಿದನು. ಅರವತ್ತನಾಲ್ಕು ಯೋಗಿನಿಯರು ಅವನ ಮಾಂಸವನ್ನು ತಿಂದು ಅತೀವ ಪ್ರಸನ್ನರಾದರು. ಆಮೇಲೆ ಅಮೃತದಿಂದ ಅಭಿಷೇಕಮಾಡಿ ಅವನಿಗೆ ಹೊಸ ಶರೀರವನ್ನು ಕೊಟ್ಟರು. ಮತ್ತು “ರಾಜನೇ, ವರವೊಂದನ್ನು ಕೇಳಿಕೋ” ಎಂದರು.
ರಾಜನು “ಮಾತೆಯರೆ, ನೀವು ನನ್ನಲ್ಲಿ ಪ್ರಸನ್ನರಾಗಿರುವುದು ಹೌದಾದರೆ ನನ್ನ ಮನೆಯಲ್ಲಿರುವ ಏಳು ದೊಡ್ಡ ಮಡಕೆಗಳು ಪ್ರತಿದಿನವೂ ಚಿನ್ನದಿಂದ ತುಂಬಿರುವಂತೆ ಮಾಡಿರಿ” ಎಂದು ಬೇಡಿಕೊಂಡನು.
ಯೋಗಿನಿಯರು “ರಾಜನ್, ನೀನು ಇಂದು ಮಾಡಿದ ಕ್ರಮದಲ್ಲಿ ಹೀಗೆಯೇ ಮೂರು ತಿಂಗಳವರೆಗೆ ಪ್ರತಿದಿನವೂ ನಿನ್ನ ಶರೀರವನ್ನು ಬೆಂಕಿಯಲ್ಲಿ ಹೋಮಮಾಡಿದರೆ ನಾವು ನೀನು ಬೇಡಿಕೊಂಡಂತೆ ಮಾಡುತ್ತೇವೆ” ಎಂದರು. ರಾಜನು “ಹಾಗೆಯೇ ಆಗಲಿ” ಎಂದನು. ಅನಂತರ ಅವನು ಪ್ರತಿದಿನವೂ ತನ್ನ ಶರೀರವನ್ನು ಅಗ್ನಿಯಲ್ಲಿ ಹೋಮ ಮಾಡತೊಡಗಿದನು. ಯೋಗಿನಿಯರೂ ಅವನು ಆಹುತಿಯಾಗಿ ಕೊಟ್ಟ ಶರೀರವನ್ನು ತಿಂದು ಸಂತುಷ್ಟರಾಗಿ ಮತ್ತೆ ಅವನನ್ನು ಬದುಕಿಸುತ್ತಿದ್ದರು.
ಹೀಗಿರಲು ಒಂದು ದಿನ ವಿಕ್ರಮಾರ್ಕನು ಯಾರೊಡನೆಯೋ ಮಾತನಾಡುವ ಸಂದರ್ಭದಲ್ಲಿ ಈ ವಾರ್ತೆಯನ್ನು ಕೇಳಿದನು. ಕುತೂಹದಿಂದ ಆ ಸ್ಥಳಕ್ಕೆ ಹೋದನು. ಆಗ ಅಲ್ಲಿ ಇನ್ನೂ ದಿನದ ಪೂಜೆಯ ಆರಂಭವಾಗಿರಲಿಲ್ಲ. ವಿಕ್ರಮಾರ್ಕನು ಆ ರಾಜನು ಬರುವ ಮೊದಲೇ ತಾನೇ ಯೋಗಿನೀಚಕ್ರದ ಪೂಜೆಯನ್ನು ಮಾಡಿ ಮುಗಿಸಿ, ಪೂರ್ಣಾಹುತಿಯ ಸಮಯದಲ್ಲಿ ಹೋಮದ ಬೆಂಕಿಯಲ್ಲಿ ತನ್ನ ದೇಹವನ್ನೇ ಆಹುತಿಯಾಗಿ ಅರ್ಪಿಸಿದನು. ಯೋಗಿನಿಯರು ಎಂದಿನಂತೆ ಬಂದು ಆ ದೇಹವನ್ನು ತಿನ್ನಲು ತೊಡಗಿದರು. ಆಗ ಅವರು ಪರಸ್ಪರ ಹೀಗೆ ಮಾತನಾಡಿಕೊಂಡರು – “ಅರೇ, ಇದೇನಿದು, ಈವತ್ತಿನ ಮಾಂಸದ ರುಚಿಯೇ ಬೇರೆ. ಪ್ರತಿದಿನದ ಹಾಗೆ ಇಲ್ಲ. ಖಂಡಿತವಾಗಿಯೂ ಇದು ಇನ್ನಾರದೋ ಮಹಾಪುರುಷನ ಶರೀರವಿರಬೇಕು. ಇದನ್ನು ನಾವು ತಿನ್ನಬಾರದು” ಎಂದು.
ಹೀಗೆ ಮಾತನಾಡಿಕೊಂಡು ಆ ಯೋಗಿನಿಯರು ಆ ಶರೀರಕ್ಕೆ ಮತ್ತೆ ಪ್ರಾಣದಾನ ಮಾಡಿ ಅವನನ್ನು ಬದುಕಿಸಿ – “ಎಲೈ ಮಹಾಸತ್ತ್ವ, ನಿನ್ನ ಶರೀರತ್ಯಾಗದಿಂದ ಏನು ಪ್ರಯೋಜನ?’’ ಎಂದು ಕೇಳಿದರು. ವಿಕ್ರಮಾರ್ಕನು “ನಾನು ಪರೋಪಕಾರಕ್ಕಾಗಿ ನನ್ನ ಶರೀರವನ್ನು ಅಗ್ನಿಗೆ ಆಹುತಿ ನೀಡಿದೆ” ಎಂದು ಹೇಳಿದನು.
“ಹಾಗಿದ್ದರೆ ನಾವು ಪ್ರಸನ್ನರಾಗಿದ್ದೇವೆ. ಬೇಕಾದ ವರವನ್ನು ಬೇಡಿಕೋ” ಎಂದು ಯೋಗಿನಿಯರು ಹೇಳಿದರು.
ಆಗ ವಿಕ್ರಮನು “ಈ ರಾಜನು ಪ್ರತಿದಿನ ತನ್ನ ಶರೀರವನ್ನು ಅರ್ಪಿಸುವುದರಿಂದ ಕಷ್ಟ ಅನುಭವಿಸುತ್ತಿದ್ದಾನೆ, ಅದನ್ನು ನಿವಾರಿಸಬೇಕು. ನೀವು ನನ್ನಲ್ಲಿ ಪ್ರಸನ್ನರಾಗಿದ್ದರೆ ಈ ರಾಜನು ತನ್ನ ದೇಹವನ್ನು ಅರ್ಪಿಸದೇ ಅವನ ಮನೋರಥವು ಪೂರ್ಣವಾಗುವಂತೆ ಅನುಗ್ರಹ ಮಾಡಿ” ಎಂದನು.
ಯೋಗಿನಿಯರು “ಹಾಗೆಯೇ ಆಗಲಿ” ಎಂದರು. ಅನಂತರ ಅವರು ರಾಜನ ಮರಣವಿಲ್ಲದೆಯೂ ಅವನ ಮನೆಯಲ್ಲಿ ಇರುವ ಏಳು ದೊಡ್ಡ ಮಡಕೆಗಳು ಪ್ರತಿದಿನ ಸುವರ್ಣದಿಂದ ತುಂಬುವ ಹಾಗೆ ಅನುಗ್ರಹ ಮಾಡಿದರು. ಅನಂತರ ವಿಕ್ರಮಾರ್ಕನು ತನ್ನ ನಗರಕ್ಕೆ ಹೋದನು.’’ ಹೀಗೆ ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ “ರಾಜನೇ, ನಿನ್ನಲ್ಲಿ ಈ ರೀತಿಯ ಪರೋಪಕಾರ, ಧೈರ್ಯ, ದಯೆ ಇವುಗಳಿದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.