ಶೀಲಾ, ಲತಾ, ರಶ್ಮಿ ಮತ್ತು ನಾನು ಒಳ್ಳೆಯ ಸ್ನೇಹಿತೆಯರು. ಆಗಾಗ ಒಟ್ಟಿಗೆ ಸೇರಿ ಮಾತನಾಡುತ್ತಿದ್ದೆವು. ನಾವು ಮೂವರು ವಾಚಾಳಿಗಳಾದರೆ ಶೀಲಾ ನಮ್ಮಂತಲ್ಲ. ಮೌನವನ್ನು ಅಭಿವ್ಯಕ್ತಿಸುವವಳು. ಒಳ್ಳೆಯ ಬರಹಗಾರ್ತಿಯಾದ ಅವಳು ತನ್ನ ಅನೇಕ ಕಥೆಗಳಿಗೆ ಪ್ರಶಸ್ತಿಗಳನ್ನು ಕೂಡ ಪಡೆದಂಥವಳು.
ತಾನು ಬರೆದ ಅನೇಕ ಕಥೆÉಗಳನ್ನು ನಮ್ಮ ಮುಂದೆ ಓದಿ ಅಭಿಪ್ರಾಯ ಕೇಳುತ್ತಿದ್ದಳು. ‘ಅದು ಹೀಗಿದ್ದರೆ ಚೆನ್ನ… ಅದು ಹಾಗಿರಬೇಕಿತ್ತು…’ ಎಂದು ನಮ್ಮ ಅನಿಸಿಕೆಗಳನ್ನು ಹೇಳುವುದು ನಮಗೂ ಇಷ್ಟವಾದ ವಿಷಯವಾಗಿತ್ತು.
ನಮ್ಮ ನಡುವಿನ ನಂಟು ಕಥೆಯ ಕಾರಣದಿಂದ ಮತ್ತಷ್ಟು ಗಾಢವಾಗಿತ್ತು. ಕಳೆದ ಭೇಟಿಯಲ್ಲಿ ‘ತಾನೊಂದು ಹೊಸರೀತಿಯ ಕಥೆÉಯನ್ನು ಬರೆಯತೊಡಗಿದ್ದೇನೆ. ನಿಮ್ಮೆಲ್ಲರ ಅಭಿಪ್ರಾಯ ಅನಿಸಿಕೆಗಳ ಮೇರೆಗೆ ಕಥೆ ಮುಂದುವರಿಯುತ್ತದೆ…’ ಎಂದಾಗ ‘ನಾವೇ ಕಥೆಯನ್ನು ಬರೆಯುತ್ತಿದ್ದೇವೇನೊ’ ಎಂಬ ಉತ್ಸಾಹ ನಮ್ಮಲ್ಲಿ! ಕಥೆಯ ಪ್ರಾರಂಭ ಕೇಳಲು ಸಜ್ಜಾದೆವು.
***
ರಾತ್ರಿ ಹಗಲಾಗುವ ಹೊತ್ತಿಗೆ ಸಣ್ಣ ಜೊಂಪು ಹತ್ತಿತು. ‘ಕರ… ಪರ… ಪರ… ಕರ…’ ಶಬ್ದಕ್ಕೆ ಮಂಪರು ಹರಿದು ಸ್ಪಷ್ಟವಾಗಿ ಎಚ್ಚರಾಯಿತು. ‘ಇಲ್ಲೇ ಎಲ್ಲೋ ಇದೆ, ನನ್ನ ನಿದ್ರೆ ಕಸಿದ ಜಿರಲೆ. ಹುಡುಕಬೇಕು, ಕೊಂದುಬಿಡಬೇಕು…’ ನನ್ನ ಬುದ್ಧಿಗಿಷ್ಟು. ಸಣ್ಣಜಿರಲೆಯಿಂದ ಪ್ರಳಯವಾಗಿಬಿಡುತ್ತಾ? ಯಾಕಿಷ್ಟು ತಲೆಕೆಡಿಸಿಕೊಳ್ಳುತ್ತಿದ್ದೇನೆ ಛೇ…’
ಕಣ್ಮುಚ್ಚಿದೆ. ಮಲಗಲಾಗಲೇ ಇಲ್ಲ. ಜಿರಲೆ ಬಟ್ಟೆಯೊಳಗೆ ಹೋಗಿ ಏನಾದರೂ ಮಾಡಿಬಿಟ್ಟರೆ? ಕ್ಯಾನ್ಸರ್ ತರುವ ಅಪಾಯಕಾರಿ ಕೀಟವದು.
ದಿಗ್ಗನೆ ಎದ್ದೆ. ಮಂಚದ ಸಂದಿಯಲ್ಲಿ, ಕಪಾಟಿನ ಮೂಲೆ ಎಲ್ಲ ಕಡೆ ಹುಡುಕಿದೆ. ಜಿರಲೆಯಲ್ಲ, ಸಣ್ಣ ಹುಳ ಕೂಡ ಸಿಗಲಿಲ್ಲ!
ನಿದ್ರೆ ಬರುವ ಮಾತಂತೂ ದೂರ. ಹಾಸಿಗೆಯಲ್ಲಿ ಅತ್ತಿತ್ತ ಹೊರಳಾಡುತ್ತ ಮಲಗಿದವಳಿಗೆ ಪಕ್ಕದಲ್ಲಿ ಮಲಗಿದ್ದ ಯಜಮಾನರ ಗೊರಕೆ ತಿವಿಯಿತು. ನನ್ನ ತದ್ವಿರುದ್ಧ ಸ್ವಭಾವದ ಜನ ಇವರು. ನಾನೋ ಸಣ್ಣಪುಟ್ಟ ವಿಷಯಕ್ಕೂ ಆಕಾಶ ತಲೆಮೇಲೆ ಬಿದ್ದಂತೆ ವರ್ತಿಸುವವಳು!
ಮತ್ತೆ ಪರ ಪರ ಶಬ್ದ… ಜಿರಲೆಗಾಗಿ ಬ್ಯಾಟರಿ ಹಿಡಿದು ಎಲ್ಲ ಸಂದಿಗೊಂದಿಗಳಲ್ಲಿ ಹುಡುಕಿದೆ. ಏನೂ ಸಿಗಲಿಲ್ಲ. ನನಗೆಲ್ಲೊ ಭ್ರಮೆ! ಮುಸುಕು ಹಾಕಿ ಮಲಗಿದೆ.
ಛೆ! ಈ ಜಿರಲೆ ಯಾಕೆ ನನ್ನ ಬೆನ್ನುಬಿಡುತ್ತಿಲ್ಲ? ಸಣ್ಣ ಶಬ್ದವೂ ಜಿರಲೆಯದೇ ಎಂದು ಅನಿಸುತ್ತದೆ. ಮೊದಲೆಲ್ಲ ಬಟ್ಟೆಯನ್ನು ಕೋಣೆಯೊಳಗೆ ಹಾಕಿ ವಾರವಾದರೂ ಮಡಚಿಡಲು ಪುರುಸೊತ್ತಾಗುತ್ತಿರಲಿಲ್ಲ. ‘ಈವತ್ತಲ್ಲ, ನಾಳೆ ಮಡಚಿದರಾಯಿತು’ ಎಂಬ ಉದಾಸೀನ ಭಾವ. ‘ಏನೂ ಆಗುವುದಿಲ್ಲ’ ಎಂಬ ಧೋರಣೆ. ಆದರೆ ಈಗ ಬಟ್ಟೆಯೊಳಗೆ ಜಿರಲೆ ಅಡಗಿ ಕೂತರೆ, ಬಟ್ಟೆ ತೂತು ಮಾಡಿದರೆ? ಅಬ್ಬಬ್ಬಾ ತಲೆಕೆಡಿಸುವ ಆಲೋಚನೆಗಳು! ಸರಸರನೆ ಮಡಚಿ ಕಪಾಟಿನಲ್ಲಿಟ್ಟು ಬೀಗಹಾಕುತ್ತೇನೆ. ಆದರೆ ಆ ಸಮಾಧಾನವೂ ಶಾಶ್ವತವಲ್ಲ. ‘ನನ್ನ ಕಣ್ಣುತಪ್ಪಿಸಿ ಜಿರಲೆ ಹೊಕ್ಕಿಬಿಟ್ಟರೆ’, ‘ಮರಿ ಹಾಕಿಬಿಟ್ಟರೆ?’ – ಎಂಬ ಅನುಮಾನ…
ನೆಮ್ಮದಿ ಕೆಡಿಸಲು ಬರುವ ಇಂತಹ ಯೋಚನೆಗಳು ಪದೇಪದೇ ಕಪಾಟು ನೋಡುವಂತೆ ಮಾಡಿಬಿಡುತ್ತಿದ್ದವು. ‘ಇವೆಲ್ಲ ಸಮಸ್ಯೆಯೇ ಅಲ್ಲ….’ ನನ್ನನ್ನು ನಾನು ಎಷ್ಟೆ ನಂಬಿಸಿಕೊಂಡರೂ ಹಾಳು ಮನಸ್ಸು ಇಲ್ಲದ ಜಿರಲೆಯನ್ನು ನೆನೆಯುತ್ತಿತ್ತು.
***
“ಇದಿಷ್ಟು ಬರೆದಿದ್ದು” ಶೀಲಾ ನಿಲ್ಲಿಸಿದಳು. “ತುಂಬಾ ಚೆನ್ನಾಗಿದೆ. ಕಥೆ ಜಿರಲೆ ಬಗ್ಗೆನಾ? ಜಿರಲೆ ಬಗ್ಗೆನೂ ಕಥೆ ಬರೆಯಬಹುದು ಅಂತ ಗೊತ್ತಿರಲಿಲ್ಲ.” ರಶ್ಮಿ ಆಶ್ಚರ್ಯದಿಂದ ಹೇಳಿದಾಗ, ನಾನು “ಹೀಗೆಲ್ಲ ತಲೆಕೆಡಿಸಿಕೊಳ್ಳುವವರು ಇರ್ತಾರಾ? ಪ್ರಪಂಚದಲ್ಲಿ ಎಂತೆಂಥ ವಿಚಿತ್ರಜನ ಇರ್ತಾರೆ ಅಂದರೆ ನನಗೆ ನಂಬೋಕಾಗ್ತಿಲ್ಲ. ಆದ್ರೆ ಶೀಲಾ ಇಂತಹ ಕಥೆಯನ್ನು ಬರೆಯುವುದಕ್ಕೆ ತುಂಬಾ ಕಷ್ಟಪಡಬೇಕು ಅಲ್ವಾ” ನಾನು ಪ್ರಶ್ನಿಸಿದೆ.
“ಕಥೆ ಬರೆಯೋದು ಕಷ್ಟ ಅಲ್ಲ. ಕಥೆಯೆ ಜೀವನ ಆಗದಿದ್ರೆ ಸಾಕು” ಎಂದು ನಿಟ್ಟುಸಿರಿಟ್ಟಾಗ, “ಇವಳೆಂಥ ವಿಚಿತ್ರ ಮಾತಾಡ್ತಾಳೆ” ಎಂದೆನಿಸಿದರೂ, ‘ಸಾಹಿತಿಗಳೆಲ್ಲ ಒಂದೊಂದು ಸಾರಿ ಒಂದೊಂದು ತರಹದ ಮೂಡಿನಲ್ಲಿರ್ತಾರೆ’ ಎಂದು ಅರ್ಥೈಸಿಕೊಳ್ಳುತ್ತ ಅವಳನ್ನು ಬೀಳ್ಕೊಟ್ಟೆವು.
ಮತ್ತೆ ಎಂಟು ದಿನಗಳ ನಂತರದ ನಮ್ಮ ಭೇಟಿಯಲ್ಲಿ ಕಥೆಯ ಮುಂದಿನ ಭಾಗವನ್ನು ನಮ್ಮೆದುರಿಟ್ಟಳು ಶೀಲಾ.
***
ಶಿಸ್ತಿನ ಸಿಪಾಯಿಯಾದ ನನಗೆ ಜಿರಲೆಕಾಟದಿಂದ ಶಾಂತಿ ಎಂಬುದೇ ಇಲ್ಲವಾಗಿತ್ತು. ಮನದೊಳಗೆ ಸಿಟ್ಟು; ಯಾರ ಮೇಲೆ ತೋರಿಸಿಕೊಳ್ಳಲಿ ತಿಳಿಯದಾಗಿತ್ತು. ಮನೆಯನ್ನು ಚೊಕ್ಕವಾಗಿ ಇಟ್ಟುಕೊಂಡಿದ್ದೆ. ಇಷ್ಟೊಂದು ನೀಟಾಗಿರುವ ಮನೆಗೆ ಜಿರಲೆ ಹೊಕ್ಕಿದರೆ….ರೆ… ತಲೆಯಲ್ಲಿ ಮತ್ತೆ ಜಿರಲೆ!
ಮಗಳು ಕಾಲೇಜಿಗೆ, ಅವರು ಆಫೀಸಿಗೆ ಹೋದ ಮೇಲೆ ಕಪಾಟಿನ ಬಾಗಿಲು ತೆರೆದು ಜಾಲಾಡಿದೆ. ಎಲ್ಲಾದರೂ ನನ್ನ ಕಣ್ಣಿಗೆ ಕಾಣಿಸದಂತೆ ಅವಿತು, ಸೀರೆಗಳನ್ನು ತೂತು ಮಾಡಿಬಿಟ್ಟರೆ? ಪ್ರತಿಯೊಂದನ್ನು ಬಿಚ್ಚಿ ನೋಡಿದೆ. ನಿಶ್ಚಿಂತಳಾದೆ ಎಂಬುದಿದೆಯೆ? ಹೊರಗೆಳೆದಾಗ ಹತ್ತಿಕೊಂಡು ಬಿಟ್ಟರೆ ಎಂಬ ಆತಂಕ!
ಮಗಳು ಇನ್ನೇನು ಬಂದು ಬಿಡುತ್ತಾಳೆ. ಇನ್ನೂ ಅಡುಗೆ ಆಗಿಲ್ಲ. ಸ್ನಾನಕ್ಕೆ ಓಡಿದೆ. ಬಟ್ಟೆಗಳ ರಾಶಿಯನ್ನು ನೋಡಿ ಅವಾಕ್ಕಾದಳು ಮಗಳು. ‘ಜಿರಲೆ…ಧೂಳು’ ಎಂದು ತೊದಲಿದೆ.
‘ಅಮ್ಮಾ ಜಿರಲೆ ಇರೋದು ನಮ್ಮನೆಯಲ್ಲಲ್ಲ. ನಿನ್ನ ತಲೆಯಲ್ಲಿ’ ಅಪ್ಪ-ಮಗಳು ನನ್ನನ್ನು ಆಡಿಕೊಂಡು ನಕ್ಕಾಗ ನನಗೆ ಸಿಟ್ಟು ಬಂತು, ನನ್ನಮೇಲೆಯೆ… ಆದರೆ ಏನೂ ಮಾಡಲಾಗಲಿಲ್ಲ.
***
“ಪಾಪ ಅಲ್ವಾ ಕಥಾನಾಯಕಿ ತುಂಬಾ ಕಷ್ಟಪಡ್ತಿದಾಳೆ. ಗುಣವಾಗುತ್ತೆ ಅಂತ ಮುಗಿಸಲಾ?” ಶೀಲಾ ಅನುಕಂಪ ವ್ಯಕ್ತಪಡಿಸಿದಾಗ, “ಬೇಡ ಕಣೆ ಅವಳಿಗೆ ಜಿರಲೆ ಹುಚ್ಚು ಹೆಚ್ಚಾಗುತ್ತದೆ ಎಂದು ಮುಂದುವರಿಸು…” ಎಂದು ನಾವು ಹೇಳಿದಾಗ, “ಹುಚ್ಚು ಹೆಚ್ಚಾಗುತ್ತದೆ ಅಂತ ಬರೆಯಬೇಕಾ?” ಎಂದಳು ಖಿನ್ನಳಾಗಿ. “ಕಥಾನಾಯಕಿಗೆ ಕಣೆ ಹುಚ್ಚು, ನಿನಗಲ್ಲ” ಎಂದೆವು ನಾವು ನಗುತ್ತ. ಅದರೆ ಅವಳು ನಗಲಿಲ್ಲ. ಆಮೇಲೆ ಹದಿನೈದು ದಿನವಾದರೂ ಪತ್ತೆಯಿಲ್ಲ. ನಮಗೆ ಎಷ್ಟೊತ್ತಿಗೆ ಕಥೆ ಕೇಳುತ್ತೇವೊ ಎಂಬಂತಾಗಿಬಿಟ್ಟಿತ್ತು. ಫೋನ್ ಮಾಡಿ ಕರೆಸಿದರೆ ‘ನಿಶ್ಶಕ್ತಿ… ಜ್ವರ..’ ಎನ್ನುತ್ತ ಸಣ್ಣಗೆ ಕಥೆ ಹೇಳತೊಡಗಿದಳು.
***
ನನ್ನ ಒತ್ತಾಯಕ್ಕಾಗಿ ನಮ್ಮವರು ‘ಕಪ್ಪು ಹಿಟ್’ ತಂದು ಮನೆಯ ಮೂಲೆ ಮೂಲೆಯಲ್ಲಿ ಹೊಡೆದರು. ಜಿರಲೆ ಇದ್ದರೆ ತಾನೇ ಸಾಯೋಕೆ? ಜೇಡರ ಮರಿಗಳೆರಡು ಸತ್ತವು. ‘ಜಿರಲೆ ಅಲ್ಲ, ಅದರ ಮರಿಗಳು ಕೂಡ ಇಲ್ಲ’ ಎಂದು ನಂಗೊತ್ತು. ಆದರೆ ಈ ಹಾಳುಮನಸ್ಸು ‘ಇದೆ.. ಇದೆ..’ ಎಂದು ಬೊಬ್ಬೆಹಾಕ್ತಿದೆ.
ಎಲ್ಲವನ್ನೂ ಪದೇ ಪದೇ ಅಡಿಮೇಲು ಮಾಡ್ತೀನಿ. ರಾತ್ರಿಯೆಲ್ಲ ನಿದ್ರೆ ಬಾರದೆ ಹೊರಳಾಡ್ತೀನಿ. ಮಗಳ ಪುಸ್ತಕದಲ್ಲಿ ಸೇರಿಕೊಂಡಿದೆ ಎಂದು ಗುಮಾನಿ ಬಂದು ಎಲ್ಲದರ ಪುಟಗಳನ್ನು ತಿರುವಿದ್ದೇ ತಿರುವಿದ್ದು. ಮಗಳಿಗೆ ಎಚ್ಚರವಾಗಿ ಗಾಬರಿಯಿಂದ ‘ಯಾರದು?’ ಎಂದು ಎದ್ದು ಕುಳಿತಾಗ, “ಏನಿಲ್ಲಮ್ಮ ನಾನೇ. ನಿದ್ರೆ ಬರಲಿಲ್ಲ. ಪುಸ್ತಕ ಓದೋಣ ಎಂದು ಬಂದೆ” ಎಂದು ತೊದಲಿದೆ. ಮಗಳಿಗೆ ಸ್ವಲ್ಪವೂ ನಂಬಿಕೆ ಬರಲಿಲ್ಲ.
ಬೆಳಗ್ಗೆ ಮಗಳು ನಮ್ಮವರ ಹತ್ತಿರ “ಅಪ್ಪಾ, ಅಮ್ಮ ರಾತ್ರಿ ಕೋಣೆಯಲ್ಲಿ ಏನೋ ಮಾಡ್ತಾ ಇದ್ಳು. ಬಹುಶಃ ಜಿರಲೆನ ಹುಡುಕ್ತಾ ಇದ್ಳೇನೊ! ಕೇಳಿದ್ದಕ್ಕೆ ಪುಸ್ತಕ ಓದ್ತಾ ಇದೀನಿ ಎಂದಳು” ಎಂದಾಗ ನಮ್ಮವರು, “ಹೌದು ನನಗೂ ಗಮನಕ್ಕೆ ಬಂದಿದೆ. ಇತ್ತಿತ್ತಲಾಗಿ ವಿಚಿತ್ರವಾಗಿ ಆಡ್ತಾಳೆ. ಬ್ಯಾಟರಿ ಕೋಲು ಹಿಡಿದು ಮನೆಯ ಮೂಲೆ ಸಂದಿಗಳನ್ನೆಲ್ಲ ರಾತ್ರಿ ಜಾಲಾಡ್ತಾಳೆ. ಬೆಕ್ಕು ಇಲಿ ಅಂತಾಳೆ” ಅಪ್ಪ ಮಗಳ ಗುಸುಗುಸು…
ಮನೆಗೆಲಸದಲ್ಲಿ ಮುಳುಗಿದರೂ ಕಿವಿ ತೆರೆದುಕೊಂಡೆ ಇತ್ತು. ‘ಹೌದು ನಾನೇಕೆ ಹೀಗೆಲ್ಲ ಮಾಡ್ತೀನಿ? ಎಲ್ಲರಂತಿಲ್ಲ ಯಾಕೆ?’ ಬೇಸರ… ಖಿನ್ನತೆ… ಮನಕ್ಕೆ ಶಾಂತಿಯೆ ಇಲ್ಲ….
ಮೊನ್ನೆ ಅವರು ತಮ್ಮ ತಂಗಿಯ ಮನೆಗೆ ಕರೆದುಕೊಂಡು ಹೋಗಿದ್ದರು. ಹೋಗಿ ಅರ್ಧಗಂಟೆಗೆ ಏನೋ ಚಡಪಡಿಕೆ. ಮನೆ ಬಿಟ್ಟು ವರ್ಷವಾಯಿತೇನೊ ಎಂಬಂತಹ ಭಾವ. ‘ಮನೆಗೆ ಹೋಗ್ಬೇಕು’ ಅಂದೆ. ‘ಆಗೊಲ್ಲ’ ಅಂದ್ರು ಹಟಮಾಡಿದೆ. ಅವರ ಮಾತನ್ನು ಮೀರಿ ನಡೆಯುವ ಹಂತಕ್ಕೆ ಬಂದುಬಿಟ್ಟಿತ್ತು ಮನಸ್ಸು!
ಸೀದಾ ಮನೆಗೆ ಬಂದು ಫ್ರಿಡ್ಜ್, ಕಪಾಟು, ಗ್ಯಾಸ್ ಸಿಲಿಂಡರ್ ಬಳಿ ಎಲ್ಲ ತಡಕಾಡಿದೆ. ಎದೆ ಢವಗುಡುತ್ತಲಿತ್ತು. ‘ಸದ್ಯಃ ಬಂದಿದ್ದೆ ಒಳ್ಳೆದಾಯ್ತು’. ನನಗೆ ನಾನೇ ಸಮಾಧಾನಿಸಿದೆ. ಅಪ್ಪ-ಮಗಳಿಬ್ಬರು ಗಂಭೀರವಾಗಿದ್ದರು. ಮಾತನಾಡದೆಯೆ….
ದಿನದಿಂದ ದಿನಕ್ಕೆ ಕನವರಿಕೆ, ಭ್ರಮೆ ಹೆಚ್ಚಾಗುತ್ತಿತ್ತು, ಮನಸ್ಸು ನನ್ನ ನಿಯಂತ್ರಣದಲ್ಲಿ ಇರಲಿಲ್ಲ. ಅನಿಶ್ಚಿತತೆ, ಅಶಾಂತಿ ಯಾವಾಗಲೂ!
‘ಅಮ್ಮಾ… ಸೈಕಿಯಾಟ್ರಿಸ್ಟ್ ಬಳಿ ಹೋಗೋಣ…” ಮಗಳು ಮೆಲುದನಿಯಲ್ಲಿ ಹೇಳಿದಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ನನಗೂ ಇದರಿಂದ ಬಿಡುಗಡೆ ಬೇಕಿತ್ತು.
ಡಾಕ್ಟರ್ ಏನೇನೊ ಪ್ರಶ್ನೆ ಕೇಳಿದರು. ನನ್ನ ಗಮನ ಔಷಧಿಸ್ಟಾಂಡ್ ಮೇಲೇ! ಅಲ್ಲಿ ಕಪ್ಪಗೆ, ರೆಕ್ಕೆ ಇರುವಂಥದ್ದು ಮೀಸೆ ಅಲ್ಲಾಡಿಸುತ್ತ ಓಡಾಡುತ್ತಿತ್ತು. ‘ಜಿರಲೆ.. ಅದನ್ನು ಕೊಲ್ಲಬೇಕು’ ಎದ್ದು ನಿಂತೆ. ಡಾಕ್ಟರ್ ಹೇಳುತ್ತಿರುವುದು ನನ್ನ ಕಿವಿಗೆ ಬೀಳಲಿಲ್ಲ! ‘ಹಿಡಿಯಬೇಕು.. ಹೊಡೆಯಬೇಕು’ ಓಡಿದೆ. ಕಾರಿಡಾರ್ ಪೂರ. ಏನೋ ಚುಚ್ಚಿದಂತಾಯಿತು. ಮರುಕ್ಷಣದಲ್ಲಿ ‘ಜಿರಲೆ… ಆಸ್ಪತ್ರೆ… ಡಾಕ್ಟರ್.. ಈ ಭ್ರಮೆಯಿಂದ ಹೊರಬರಬೇಕು, ಹೊಸ ಮನುಷ್ಯಳಾಗಿ ಬದುಕಬೇಕು’ ಎಂದುಕೊಂಡೆ.
***
“ನಾವು ಹೇಳಿದಂತೆ ಮುಂದುವರಿಸಿದ್ದೀಯೆ. ಚೆನ್ನಾಗಿ ಬಂದಿದೆ ಪೂರ್ತಿ ಹುಚ್ಚು ಹಿಡಿಸಿಬಿಡು. ಓದುಗರ ಸಿಂಪತಿ ಸಿಗುತ್ತೆ. ಯಾವುದಾದರೂ ಬಹುಮಾನ ಸಿಕ್ಕರೂ ಸಿಗಬಹುದು…” ರಶ್ಮಿ ಬಾಯಿ ಚಪ್ಪರಿಸಿದಳು, “ಆಯ್ತು ನಿಮ್ಮಾಸೆಯಂತೆ ಕಥೆ ಮುಗಿಸುತ್ತೇನೆ. ನಾವೆಲ್ಲ ಕಥೆಯ ಅಂತ್ಯದಲ್ಲಿ ಸೇರೋಣ” ಎನ್ನುತ್ತ ಶೀಲಾ ಅಟೋ ಹತ್ತಿದ್ದಳು.
ದಿನಗಳು ಉರುಳಿ, ತಿಂಗಳು ಬದಲಾಯ್ತು. ಶೀಲಾಳ ಸುಳಿವೇ ಇಲ್ಲ. ಕಥೆ ಕೇಳುವ ಆಸೆಗೆ ಕಡಿವಾಣ ಹಾಕಲಾಗದೆ ಸೀದಾ ಅವಳ ಮನೆಗೇ ಹೋಗಿಬಿಟ್ಟೆವು. ಮನೆಯಲ್ಲಿ ಮೌನವಾಗಿ ಕುಳಿತ ತಂದೆ-ಮಗಳ ಬಳಿ “ಶೀಲಾ ಎಲ್ಲಿ?” ಎಂದು ಕೇಳಿದಾಗ “ಗೊತ್ತಿಲ್ಲ” ಎಂದು ಒಂದು ಲಕೋಟೆಯನ್ನು ಕೊಟ್ಟರು. ಅವಸರದಿಂದ ಅದನ್ನು ಒಡೆದಾಗ ಅದರಲ್ಲಿ ಕಥೆ ಮುಂದುವರಿದಿತ್ತು.
***
ಆ ದಿನ ಏಳುವ ಹೊತ್ತಿಗೆ ನಾಗಂದಿಗೆಯ ಮೂಲೆಯಲ್ಲಿ ಏನೋ ಕಪ್ಪಗೆ, ಮೀಸೆ ಅಲ್ಲಾಡಿಸಿದಂತೆ ಕಂಡುಬಂದು ಬೆಚ್ಚಿಬಿದ್ದೆ. ಒಬ್ಬಳೇ ಇರಲು ಭಯವಾಗುತ್ತಿತ್ತು. ಸ್ನಾನಮಾಡಲು ಸಹ ಮಗಳು ಬೇಕಿತ್ತು!
ಬ್ಯಾಟರಿ, ಕೋಲು ಹಿಡಿದು ಸದಾ ಸನ್ನದ್ಧಳಾಗಿ ಜಿರಲೆ ಬಡಿಯಲು ತಯಾರಾಗಿರುತ್ತಿದವಳು ಈಗ ಜಿರಲೆಗೆ ಹೆದರತೊಡಗಿದ್ದೆ, ಅಳುತ್ತಿದ್ದೆ. ಹೆಬ್ಬಾಗಿಲಿನ ಬಾಗಿಲಿನಿಂದ ಸಾಲಾಗಿ ಒಳಗೆಬಂದಂತೆ.. ಕಪಾಟಿನಲ್ಲಿ ಒಂದಿಷ್ಟು… ಅಡಿಗೆ ಮನೆಯಲ್ಲಿ… ಸ್ನಾನದ ಮನೆಯಲ್ಲಿ… ಎಲ್ಲ ಹೊಕ್ಕಿದಂತೆ ಕನಸು! ಹೃದಯಾಘಾತವಾಗಿಬಿಡುತ್ತೇನೊ ಎಂಬಂತೆ, ಎದೆ ಹೊಡೆದುಕೊಳ್ಳುತ್ತಿತ್ತು. ಸದಾ ಏನೋ ಭೀತಿ ನನ್ನೊಳಗೆ! ವಿಕ್ಷಿಪ್ತತೆ. ನಾನು ಒಂಟಿಯಾಗಿ ಜಿರಲೆಗಳ ಸಮೂಹದ ಮಧ್ಯೆ ಸಿಕ್ಕಿಬಿದ್ದಂತೆ, ಅವು ನನ್ನ ಮೇಲೆ ಎರಿ ಬಂದಂತೆ, ಏನೇನೋ ಅಸಂಬದ್ಧ ಕಲ್ಪನೆಗಳು… ಅವರು ಪಕ್ಕದಲ್ಲೇ ಇದ್ದರೂ ಹೆದರಿಕೆ. ‘ನಿದ್ರೆ ಮಾಡಲೇಬಾರದು, ಆಗ ಕನಸೂ ಬೀಳದು’ ಎಂದು ಎಚ್ಚರವಾಗಿಯೇ ಉಳಿಯತೊಡಗಿದೆ. ಬರಿ ನನಗೆ ಮಾತ್ರ ಕಾಣಿಸುವ ಜಿರಲೆಗಳ ಹಿಂಡು ಮತ್ತಾರಿಗೂ ಕಾಣಿಸದು ಎಂಬುದು ಭಯಾನಕ ವಿಷಯವಾಗಿತ್ತು. ಎಷ್ಟೊತ್ತಿಗೆ ಯಾವ ಕಡೆಯಿಂದ ದಾಳಿ ಮಾಡುತ್ತವೆಯೊ ಎಂದೆನಿಸಿ ಯಾರಾದರೂ ಒಬ್ಬರು ಬೇಕಿತ್ತು ಜೊತೆಯಿರಲು!
ಸೋಫಾದಲ್ಲಿ ಕುಳಿತಿದ್ದೆ ಏನೇನೋ ಯೋಚನೆಗಳು. ಆಚೀಚೆ ನೋಡಿದೆ. ಅವರೂ ಇಲ್ಲ, ಮಗಳೂ ಇಲ್ಲ. “ಎಲ್ಲಿ ಹೋದ್ರಿ? ನನಗೆ ಭಯವಾಗ್ತಿದೆ..” ಎನ್ನುವಷ್ಟರಲ್ಲಿ ಜಿರಲೆಗಳ ಹಿಂಡು ಗೇಟಿನಿಂದ ಪ್ರವಾಹದಂತೆ ಬರತೊಡಗಿತು. ಮೀಸೆ ದಪ್ಪಗೆ ಆನೆಯ ಸೊಂಡಿಲಿನಂತೆ ಕಾಣುತ್ತಿತ್ತು. ಅಡುಗೆಮನೆ, ಹಾಲ್, ರೂಮು ಎಲ್ಲ ಕಡೆ ಅವೇ ತುಂಬಿಬಿಟ್ಟವು. ‘ನನ್ನನ್ನು ಪೂರ್ತಿಯಾಗಿ ಆವರಿಸುತ್ತವೆ, ಕೊಂದು ಬಿಡುತ್ತವೆ..’ ಎಂದೆನ್ನಿಸಿ ಓಡಿದೆ. ಇದರಿಂದ ತಪ್ಪಿಸಿಕೊಳ್ಳಬೇಕು, ಶಕ್ತಿಮೀರಿ ಓಡಿದೆ. ಓಡುತ್ತಲೇ ಇದ್ದೆ. ಯಾರೂ ಇಲ್ಲದ ಜಾಗಕ್ಕೆ ತಲಪಲು.
***
“ಅಮ್ಮ ಬೆಳಗಿನಿಂದ ಕಾಣ್ತಾ ಇಲ್ಲ. ಇತ್ತಿತ್ತಲಾಗಿ ವಿಚಿತ್ರವಾಗಿ ಆಡ್ತಾ ಇದ್ಳು. ಸೈಕಿಯಾಟ್ರಿಸ್ಟ್ ಬಳಿ ತೋರಿಸಿದ್ದೂ ಆಯ್ತು, ದಿನದಿಂದ ದಿನಕ್ಕೆ ನವೆಯುತ್ತಲೇ ಹೋದಳು…”
ಶೀಲಾಳ ಮಗಳು ಹೇಳುವುದನ್ನು ಕೇಳಿದರೆ ಅವಳು ಬರೆದ ಕಥೆಯನ್ನೇ ಓದಿದಂತಾಗುತ್ತಿತ್ತು. ಪ್ರತಿಸಲ ಅವಳು ‘ಕಥಾನಾಯಕಿಗೆ ಗುಣವಾಗುತ್ತದೆ’ ಎಂದು ಮುಂದುವರಿಸಲಾ? ಎಂದು ಕೇಳುತ್ತಿದ್ದುದು; ನಾವೆಲ್ಲ ‘ಬೇಡ ಪೂರ್ತಿ ಹುಚ್ಚಿಯಂತೆ ಚಿತ್ರಿಸು’ ಎಂದು ಹೇಳಿದ್ದು ನೆನಪಾಗಿ, ತನ್ನ ಕಥೆಯನ್ನೇ ಬರೆಯುತ್ತಿದ್ದಾಳೆ’ ಎಂದು ಚೂರು ಸುಳಿವು ಸಿಗದೇ ಹೋಯಿತಲ್ಲ ಅಂತ ಪೇಚಾಡಿದೆವು. ಕಥೆಯ ಅಂತ್ಯವನ್ನು ನಾವು ಹೇಳಿದಂತೆ ಮಾಡಿ ತನ್ನ ಬದುಕಿನ ಅಂತ್ಯವನ್ನು ಹುಡುಕಲು ಹೊರಟ ಗೆಳತಿಯ ಪರಿಸ್ಥಿತಿಗೆ ನಾವೇ ಕಾರಣರಾದೆವೇನೋ ಎಂದು ಯೋಚಿಸುತ್ತ ನಮ್ಮೊಳಗೆ ನಾವು ಕಳೆದುಹೋಗುವ ಹೊತ್ತಿಗೆ ಕಾಲಂಚಿನಲ್ಲಿ ಮೀಸೆ ಅಲ್ಲಾಡಿಸುತ್ತ ಕಪ್ಪಗೆ ರೆಕ್ಕೆ ಬಿಚ್ಚಿಕೊಂಡ ಜಿರಲೆಯೊಂದನ್ನು ಕಂಡು ಬೆಚ್ಚಿಬಿದ್ದೆವು.