ಸ್ವಸ್ಥಜೀವನಶೈಲಿ
ಪ್ರತಿ ವರ್ಷದಂತೆ ಈ ವರ್ಷ (2021ರ) ‘ಉತ್ಥಾನ’ದ ಜನವರಿ ‘ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕ’ಕ್ಕೆ ಆಯ್ದುಕೊಂಡಿರುವ ವಿಷಯ ‘ಸ್ವಸ್ಥ ಜೀವನಶೈಲಿ’.
‘ವಿಶ್ವ ಆರೋಗ್ಯ ಸಂಸ್ಥೆ’(WHO)ಯು ಸ್ವಾಸ್ಥ್ಯ ಎಂದರೆ ಏನು ಎಂಬುದನ್ನು ಈ ರೀತಿಯಾಗಿ ವಿವರಿಸಿದೆ – ‘Health is a state of complete physical, mental, social and spiritual well-being and not merely the absence of disease or infirmity.’ ಎಂದರೆ, ಒಬ್ಬ ವ್ಯಕ್ತಿಯು ಸ್ವಾಸ್ಥ್ಯಪೂರ್ಣ ವ್ಯಕ್ತಿ ಎನಿಸಬೇಕಾದರೆ ಆತನಲ್ಲಿ ರೋಗಗಳು ಅಥವಾ ಅಂಗ-ಊನತೆಯು ಇಲ್ಲದೇ ಇದ್ದರೆ ಮಾತ್ರ ಸಾಲದು; ಆತನು ಶಾರೀರಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಚೆನ್ನಾಗಿರಬೇಕು. ಆಗ ಮಾತ್ರ ಆ ವ್ಯಕ್ತಿಯನ್ನು ‘ಸ್ವಾಸ್ಥ್ಯಪೂರ್ಣವ್ಯಕ್ತಿ’ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾನ್ಯ ಮಾಡುತ್ತದೆ. ಆದರೆ ನಮ್ಮ ಪೂರ್ವಿಕರು ನಂಬಿದಂತೆ, ಒಬ್ಬ ವ್ಯಕ್ತಿಯನ್ನು ಸ್ವಾಸ್ಥ್ಯಪೂರ್ಣ ವ್ಯಕ್ತಿ ಎಂದು ಕರೆಯಬೇಕಾದರೆ ಆತನಲ್ಲಿ ಇನ್ನೂ ಕೆಲವು ಗುಣವಿಶೇಷಗಳು ಇರಬೇಕಾಗುತ್ತವೆ; ಆತನ ಬುದ್ಧಿ ಮತ್ತು ಭಾವನೆಗಳೂ ಉತ್ತಮವಾಗಿರಬೇಕು. ಆಗ ಮಾತ್ರ ಅವನು ಉತ್ತಮವಾದ ಜೀವನವನ್ನು ನಡೆಸಬಲ್ಲ.
ಕೇವಲ ಜೀವನಶೈಲಿ ಒಂದರಿಂದಲೇ ಇಂದು ನಾವು ಆರೋಗ್ಯಾದಿ ಹಲವು ಸಮಸ್ಯೆಗಳನ್ನು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಎದುರಿಸುತ್ತಿದ್ದೇವೆ. ನಾವು ಜೀವಿಸುವ ಪರಿಸರ ಬದಲಾದಂತೆ ನಮ್ಮ ಜೀವನಕ್ರಮವೂ ಸಹಜವಾಗಿ ಮತ್ತು ಅನಿವಾರ್ಯವಾಗಿ ಬದಲಾಗುತ್ತದೆ. ಆದರೆ ಈ ಬದಲಾವಣೆಯ ಗತಿ ಹೇಗಿರಬೇಕು ಎಂಬುದೇ ಚಿಂತನೀಯ ಸಂಗತಿ.
ವ್ಯಕ್ತಿಯ ಬದುಕು ಕೇವಲ ಅವನಿಗೆ ಮಾತ್ರ ಸೀಮಿತವಾದದ್ದಲ್ಲ. ಭಾರತೀಯದರ್ಶನದಲ್ಲಿ ಅದನ್ನು ಸಮಗ್ರ ದೃಷ್ಟಿಕೋನದಿಂದ ನೋಡಲಾಗುತ್ತದೆ. ಪ್ರತಿಯೊಬ್ಬನ ಬದುಕೂ ಸಮಾಜಹಿತಕ್ಕೆ, ತನ್ಮೂಲಕ ರಾಷ್ಟ್ರದ ಉತ್ಕರ್ಷಕ್ಕೆ ಪೂರಕವಾಗಿರಬೇಕು. ಆಗ ಸಮಾಜವೂ ರಾಷ್ಟ್ರವೂ ಸ್ಥಿರ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಲ್ಲವು.
ವ್ಯಕ್ತಿ ಮತ್ತು ಸಮಾಜದ ನಡುವೆ ಇರುವುದು ಅವಿನಾಭಾವ ಸಂಬಂಧ. ಹೇಗೆ ಸಮಾಜವನ್ನುಳಿದು ವ್ಯಕ್ತಿ ಬದುಕಲಾರನೊ, ಹಾಗೆ ವ್ಯಕ್ತಿಯಿಲ್ಲದೆ ಸಮಾಜವಿಲ್ಲ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು ಅವನ ಸುತ್ತಲಿನ ಸಮಾಜ. ಸಮಾಜದ ನಿರ್ಮಾಣವಾಗುವುದು ವ್ಯಕ್ತಿಗಳ ಸಮೂಹದಿಂದ. ಆದ್ದರಿಂದ ವ್ಯಕ್ತಿಯು ಶರೀರ, ಮನಸ್ಸು, ಬುದ್ಧಿ, ಭಾವನೆ ಈ ಎಲ್ಲ ಸ್ತರಗಳಲ್ಲೂ, ಅದಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಸ್ತರದಲ್ಲೂ ಸ್ವಸ್ಥವಾಗಿರುವುದು ತುಂಬ ಮಹತ್ತ್ವದ್ದಾಗುತ್ತದೆ. ಪ್ರತಿ ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ, ಭಾವನೆಗಳು ಸ್ವಸ್ಥಗೊಂಡಾಗ ಪರಿವಾರ ಸ್ವಸ್ಥವಾಗುತ್ತದೆ, ಸಮಾಜ ಸ್ವಸ್ಥವಾಗುತ್ತದೆ. ಸಮಾಜದಿಂದ ರಾಷ್ಟ್ರ, ತನ್ಮೂಲಕ ವಿಶ್ವಸಮುದಾಯವು ಸ್ವಸ್ಥವಾಗುತ್ತದೆ. ಸಮುದಾಯವು ಸ್ವಸ್ಥವಾಗುವುದು ಪರಿಪೂರ್ಣವಾಗಬೇಕಾದರೆ ಪರ್ಯಾವರಣವೂ ಸ್ವಸ್ಥಗೊಳ್ಳುವುದು ಅನಿವಾರ್ಯ. ಹೀಗೆ ಸ್ವಾಸ್ಥ್ಯ ಎನ್ನುವುದು ಒಂದು ಸಮಗ್ರವಾದ ವಿಚಾರವಾಗಿದೆ.
ವಿಶೇಷವಾಗಿ ಇಂದಿನ ಯುವಪೀಳಿಗೆಗೆ ಈ ರೀತಿಯ ಸ್ವಾಸ್ಥ್ಯಮಹತ್ತ್ವದ ಅರಿವು ಶೈಕ್ಷಣಿಕ ಮಟ್ಟದಿಂದಲೇ ದೊರೆಯಬೇಕಾಗಿದೆ; ಪಾಠ್ಯ ಗತಿವಿಧಿಯಾಗಬೇಕಿದೆ. ಆಹಾರ ವಿಹಾರವೇ ಮುಂತಾದ ವ್ಯಕ್ತಿಕೇಂದ್ರಿತ ಸ್ವಾಸ್ಥ್ಯವನ್ನು ಒಳಗೊಂಡಂತೆ, ಅವನ್ನೂ ಮೀರಿದ ಸಮಗ್ರ ಸ್ವಾಸ್ಥ್ಯದ ಮಹತ್ತ್ವದ ಅರಿವು ಯುವಜನಾಂಗದಲ್ಲಿ ಸ್ಥಾಪಿತವಾಗಬೇಕಾಗಿದೆ.
ಪರಂಪರೆಯಿಂದ ನಾವು ದೃಢವಾಗಿ ನಂಬಿಕೊಂಡು ಪಾಲಿಸಿಕೊಂಡು ಬಂದಿರುವುದು –
ಸರ್ವೇýತ್ರ ಸುಖಿನಃ ಸಂತು
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||
ಅಂದರೆ, “ಇಲ್ಲಿ ಎಲ್ಲರಿಗೂ ಸುಖವು ಉಂಟಾಗಲಿ, ಎಲ್ಲರೂ ಆರೋಗ್ಯದಿಂದ, ಶಾಂತಿ ನೆಮ್ಮದಿಯಿಂದ ಇರಲಿ, ಎಲ್ಲರೂ ಯಾವತ್ತೂ ಒಳ್ಳೆಯದನ್ನೇ ಕಾಣುವಂತಾಗಲಿ, ಯಾರೊಬ್ಬರೂ ಯಾವತ್ತೂ ದುಃಖವನ್ನು ಹೊಂದದೆ ಇರಲಿ” – ಎಂಬ ವಿಶಾಲತೆಯನ್ನು.
ಮನಸ್ಸೂ ಭಾವನೆಯೂ ವಿಶಾಲವಾದಾಗ ಜೀವನದ ಗುರಿಯೂ ವಿಸ್ತಾರವಾಗುತ್ತದೆ. ಅದು ಸ್ವಹಿತ-ಕುಟುಂಬಹಿತವನ್ನು ಮೀರಿ ಸ್ವದೇಶಹಿತವನ್ನೂ ಸ್ವರಾಷ್ಟ್ರ ಸ್ವಹಿತವನ್ನೂ ವ್ಯಾಪಿಸುತ್ತದೆ. ಆತ್ಯಂತಿಕವಾಗಿ ವೈಶ್ವಿಕಹಿತವನ್ನೂ ಒಡಗೂಡಿಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಆಧ್ಯಾತ್ಮಿಕ ವಿಕಾಸದ ಕಡೆಗಿನ ಒಂದು ತೀರ್ಥಯಾತ್ರೆಯಾಗುತ್ತದೆ. ವ್ಯಕ್ತಿಯಿಂದ ಪರಿವಾರ, ಪರಿವಾರದಿಂದ ಸಮಾಜ, ಸಮಾಜದಿಂದ ರಾಷ್ಟ್ರ, ರಾಷ್ಟ್ರದಿಂದ ವಿಶ್ವ, ವಿಶ್ವದಿಂದ ಸೃಷ್ಟಿ, ಸೃಷ್ಟಿಯಿಂದ ಪರಮೇಷ್ಟಿ – ಈ ಬಗೆಯಲ್ಲಿ ನಡೆಯಬೇಕಾದುದು ಪ್ರತಿಯೊಬ್ಬರ ಜೀವನಯಾತ್ರೆ. ಅಂತಹದೊಂದು ಭಾವನೆ ವ್ಯಕ್ತಿಯಲ್ಲಿ ಬಲಿತಾಗ ಅದುವೆ ಅವನ ಕರ್ತವ್ಯವಾಗುತ್ತದೆ; ಧರ್ಮವಾಗುತ್ತದೆ.
ಈ ಎಲ್ಲ ದೃಷ್ಟಿಯಿಂದ ಈ ಬಾರಿಯ ‘ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕ’ವನ್ನು ರೂಪಿಸಲಾಗಿದೆ, ಓದುಗರಿಗೆ ಇದು ರುಚಿಸುತ್ತದೆ ಎಂದು ಭಾವಿಸಿದ್ದೇವೆ.