ಹಿಂದೂಧರ್ಮವು ಇಂದು ಮಾನವಜನಾಂಗದ ಏಳನೇ ಒಂದು ಭಾಗದ ಜನರ ಮೇಲೆ ಪ್ರಭಾವ ಬೀರುತ್ತಿದೆ; ಅಂದರೆ ಮುಖ್ಯವಾಗಿ ಅವರು ಅದನ್ನು ಅನುಸರಿಸುತ್ತಾರೆ. ಇದು ಸನಾತನ ಅಥವಾ ಶಾಶ್ವತಧರ್ಮ. ಇಂದು ಅದು ಜಗತ್ತಿಗೆ ನೀಡುವ ಆಧ್ಯಾತ್ಮಿಕ ಸಂದೇಶ ಏನು? ಮನುಷ್ಯನ ಅತಿ ಪ್ರಾಚೀನ ಸಾಹಿತ್ಯ ಎಂದರೆ ವೇದಗಳೇ ಇದರ ಮೂಲ. ವೇದಗಳದ್ದು ಅನಾದಿ (ಆರಂಭವಿಲ್ಲದ) ಜ್ಞಾನ. ಅವು ಜೀವನದ ಮೂಲಭೂತ ವೈವಿಧ್ಯದ ಬಗ್ಗೆ ಹೇಳುತ್ತವೆ.
ಮನುಷ್ಯನ ಸ್ವಭಾವ ಏನು? ಈ ಜಗತ್ತಿನ ಸ್ವಭಾವ ಏನು? ಮನುಷ್ಯ ಅಂತಿಮವಾಗಿ ಎಲ್ಲಿಗೆ ಮುಟ್ಟುತ್ತಾನೆ? ಅದನ್ನು ತಿಳಿಯುವುದು ಹೇಗೆ? ಮನುಷ್ಯ-ಮನುಷ್ಯನ ಸಂಬಂಧ ಏನು? – ಇವು ಅಸ್ತಿತ್ವದ ರಹಸ್ಯಕ್ಕೆ ಸಂಬಂಧಿಸಿದ ವಿಷಯಗಳು. ವೇದದ ಋಷಿಗಳು ಈ ಸತ್ಯಗಳನ್ನು ಅನ್ವೇಷಿಸಿದರು; ತಮ್ಮ ಒಳಗಿನ ಪರಿಶುದ್ಧತೆ ಮತ್ತು ಧ್ಯಾನಗಳೇ ಅವರು ಅದಕ್ಕೆ ಬಳಸಿದ ಸಾಧನಗಳು. ಸ್ವಾಮಿ ವಿವೇಕಾನಂದರು 1893ರ ಚಿಕಾಗೋ ಧರ್ಮಸಮ್ಮೇಳನದಲ್ಲಿ ಅದನ್ನು ಹೀಗೆ ಹೇಳಿದರು: “ವೇದಗಳೆಂದರೆ ಪುಸ್ತಕಗಳಲ್ಲ; ವಿಭಿನ್ನ ವ್ಯಕ್ತಿಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಂಡುಹಿಡಿದ ಆಧ್ಯಾತ್ಮಿಕ ಶಾಸನಗಳು ಅಲ್ಲಿವೆ.”
ಇತಿಹಾಸಪೂರ್ವ ಕಾಲದಿಂದ ಕನಿಷ್ಠ ಐದಾರು ಸಾವಿರ ವರ್ಷಗಳ ಕಾಲ ಸಿಂಧೂಕಣಿವೆ ನಾಗರಿಕತೆ, ಭಾರತೀಯ ಸಂಸ್ಕøತಿ ಅಥವಾ ಹಿಂದೂ ಸಂಸ್ಕøತಿ ಎನ್ನುವ ಈ ನಾಗರಿಕತೆ ಹೇಗೆ ಉಳಿದು ಬೆಳೆದು ಬಂದಿದೆ ಎನ್ನುವುದು ಎಲ್ಲರಿಗೂ ಒಂದು ಆಶ್ಚರ್ಯದ ವಿಷಯವೇ ಆಗಿದೆ. ಇತಿಹಾಸವನ್ನು ಅವಲೋಕಿಸಿದರೆ ಗರಿಷ್ಠ ಪ್ರಮಾಣದ ಪರಕೀಯ ದಾಳಿಗಳಿಗೆ ಗುರಿಯಾದ ಜಗತ್ತಿನ ಭೂಭಾಗ ಕೂಡ ಇದೇ. ಆದರೆ ಇಲ್ಲಿನ ಸಂಸ್ಕøತಿ-ನಾಗರಿಕತೆಗಳು ನಾಶವಾಗಲಿಲ್ಲ. ಆರಂಭದ ಕಾಲದಲ್ಲಂತೂ (ಕೆಲವು ಸಹಸ್ರಮಾನಗಳು) ಇದು ಪರಕೀಯರನ್ನು ಮತ್ತು ಪರಕೀಯ ದಾಳಿಗಳನ್ನು ಸ್ವೀಕರಿಸಿದ ರೀತಿ ಅದ್ಭುತವಾಗಿದೆ. ಹರಿಯುವ ಒಂದು ನದಿ ತನ್ನತ್ತ ಬರುವ ಹೊಳೆ-ತೊರೆಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ರೀತಿಯಲ್ಲಿ ಅದು ಸಹಜವಾಗಿ ನಡೆದುಹೋಗಿದೆ. ಭಾರತೀಯ ಸಂಸ್ಕøತಿಯ ಈ ಗುಣವನ್ನು ಸ್ಮರಣೀಯವಾಗಿ ವರ್ಣಿಸುವ ಮಾಜಿ ರಾಷ್ಟ್ರಪತಿಗಳೂ ಘನವಿದ್ವಾಂಸರೂ ಆಗಿದ್ದ ಡಾ|| ಎಸ್. ರಾಧಾಕೃಷ್ಣನ್ ಅವರು ಜೀವನದ ಬಗೆಗಿನ ಹಿಂದೂ ದೃಷ್ಟಿಕೋನವು ಅತ್ಯಂತ ಆರೋಗ್ಯಕರ ಎಂಬುದನ್ನು ಕೂಡ ಚಿತ್ರಿಸುತ್ತಾರೆ; ಇದು ಅವಿನಾಶಿಯಾಗಿ ಉಳಿಯುವುದಕ್ಕೂ ಅದೇ ಕಾರಣ ಎನ್ನುವ ಅಭಿಪ್ರಾಯವನ್ನು ಪ್ರಕಟಿಸುತ್ತಾರೆ.
ಮೇಲಿನಿಂದ ಗಮನ
ಮಾನವನ ನಡತೆಯನ್ನು ಎಡೆಬಿಡದೆ ಮೇಲಿನಿಂದ ಗಮನಿಸುತ್ತಿರುವ ಶಕ್ತಿಗಳಿವೆ; ಮತ್ತು ಅವುಗಳ ದೃಷ್ಟಿಯಿಂದ ಪಾಪಗಳನ್ನು ಬಚ್ಚಿಡಲು ಸಾಧ್ಯವಿಲ್ಲವೆಂಬುದು ಹಿಂದೂಗಳ ನಂಬಿಕೆಯಾಗಿತ್ತು. ಅದರಂತೆ ನೀತಿಗೆ ವಿಶೇಷವಾಗಿ ಸಂಬಂಧಿಸಿದ ದೇವತೆ ವರುಣ. ಬೃಹಸ್ಪತಿ, ಅದಿತಿ ಹಾಗೂ ಆದಿತ್ಯರು ಕೂಡ ಆಸ್ತಿಕರನ್ನು ಕಾಪಾಡಬಲ್ಲವರೆಂದು ಭಾವಿಸಲಾಗಿತ್ತು. ಸೂರ್ಯನೇ ಮಿತ್ರಾವರುಣನ ಕಣ್ಣು. ಮನುಷ್ಯರ ನಡತೆಯ ಬಗ್ಗೆ ಮಿತ್ರಾವರುಣನಿಗೆ ಸೂರ್ಯನು ವರದಿ ಮಾಡುತ್ತಾನೆ. ಅವನ ಗೂಢಚಾರರನ್ನು ಮೋಸಗೊಳಿಸುವುದು ಅಸಾಧ್ಯ; ಮತ್ತು ತಪ್ಪು ವರದಿಗಳು ಕೂಡ ಆಗುವುದಿಲ್ಲ. ಇದು ಹೇಗಿದೆಯೆಂದರೆ, ಇಬ್ಬರು ಸೇರಿ ಹೀಗೆ ಮಾತನಾಡಬೇಕೆಂದು ಯೋಜಿಸಿಕೊಳ್ಳುವಾಗ ಮೂರನೆಯವನಾಗಿ ವರುಣದೇವನು ಅಲ್ಲಿರುತ್ತಾನೆ. ಅಂದರೆ ಆ ನೀತಿದೇವನಿಂದ ಏನನ್ನೂ ಬಚ್ಚಿಡಲಾಗದು. ವರುಣನಲ್ಲದೆ ಅಗ್ನಿ, ಸವಿತೃ, ಉಷಸ್, ದ್ಯಾವಾ-ಪೃಥಿವಿಗಳು ಕೂಡ ಪಾಪಗಳನ್ನು ಕ್ಷಮಿಸುತ್ತಾರೆ. ಋಜುಮಾರ್ಗದಲ್ಲಿ ಮಾತ್ರ ನಡೆಯುವ ಸೌಶೀಲ್ಯಕ್ಕೆ ಸತ್ಫಲವನ್ನೂ, ದಾನ, ದಯೆ, ಯಜ್ಞಗಳ ಫಲವನ್ನೂ ಪಡೆಯುತ್ತಾರೆ ಎಂಬ ಭರವಸೆಯನ್ನು ನೀಡಲಾಗಿದೆ. ತಪ್ಪೊಪ್ಪಿಗೆ, ಪಶ್ಚಾತ್ತಾಪಗಳಿಂದ ದೋಷಗಳನ್ನು (ಪಾಪ) ಸರಿಪಡಿಸಿಕೊಳ್ಳಬೇಕು. ಪಾಪದಲ್ಲೇ ಮುಳುಗಿ ಮುಂದುವರಿದರೆ ಜೀವನದ ವಿಫಲತೆ, ರೋಗರುಜಿನಗಳು ಉಂಟಾಗುತ್ತವೆ.
ಮುಂದಿನ ಬ್ರಾಹ್ಮಣಗಳ ಯುಗದಲ್ಲಿ ಆಧ್ಮಾತ್ಮಿಕತೆಗಿಂತ ತಾಂತ್ರಿಕ ಅಂಶಗಳು ಮುಖ್ಯವಾದವೆಂದು ಪಾಶ್ಚಾತ್ಯರು ಅಭಿಪ್ರಾಯಪಡುತ್ತಾರೆ. ಆದರೆ ಆಗ ಮಾನವನ ದುರಹಂಕಾರವು ದೈವೀಸಹಾಯ ಮತ್ತು ಋಜುಭಕ್ತಿಗಳ ಅಗತ್ಯವನ್ನು ತಿರಸ್ಕರಿಸಿತೆಂದು ಭಾವಿಸುವುದು ಭಾರತದ ಆಧ್ಯಾತ್ಮಿಕ ಚರಿತ್ರೆಯನ್ನು ಅಪಾರ್ಥಮಾಡಿಕೊಂಡಂತೆ ಎಂದು ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ಜೀವನಕ್ಕೆ ಮುಂದೆ ಕೂಡ ಶ್ರದ್ಧೆ ಪ್ರಮುಖ ಆವಶ್ಯಕತೆಯಾಗಿಯೇ ಇತ್ತು. ಆಧ್ಯಾತ್ಮಿಕ ಪರಿಪೂರ್ಣತೆಗೆ ಪರಿಶುದ್ಧತೆ ಅನಿವಾರ್ಯ ಎಂಬುದು ಕೂಡ ಇತ್ತು.
ಕರ್ಮಕ್ಕೂ ಅದರ ಫಲಕ್ಕೂ ಸೂಕ್ಷ್ಮ ಸಂಬಂಧವಿದೆ ಎಂಬುದು ಮುಂದೆ ಸ್ಫುಟಗೊಂಡಿತು. ಸರಿಯಾಗಿ ನಡೆಸಿದ ಯಜ್ಞಗಳು ತಪ್ಪದೆ ಕೆಲವು ಫಲಗಳನ್ನು ನೀಡುತ್ತವೆ. ಹೀಗೆ ಅರ್ಹತೆ ಇದ್ದಲ್ಲಿ ದೇವತೆಗಳು ಸತ್ಫಲವನ್ನು ಕೊಡುತ್ತಾರೆಂದು ಬದಲಿಸಿದ ಧೋರಣೆಯಿಂದಾಗಿ ಅನಂತರದ ಯುಗದಲ್ಲಿ ಶಬ್ದಗಳಲ್ಲೂ ತಾಂತ್ರಿಕ ಕರ್ಮಗಳಲ್ಲೂ ನಿಗೂಢ ಶಕ್ತಿಗಳಿವೆ; ಪ್ರತಿಯೊಬ್ಬ ಅನುಷ್ಠಾನಪರನೂ ತನ್ನ ಧಾರ್ಮಿಕ-ನೈತಿಕ ಕರ್ತವ್ಯಗಳಲ್ಲಿ ನಿರತರಾಗಿರುವಾಗ ಅರಿತಿರಬೇಕು ಎಂಬ ತತ್ತ್ವದ ನಿರೂಪಣೆ ಬಂದಿತು. ಮನೋವಾಕ್ಕುಗಳು ಮಹತ್ತ್ವದವು; ಮತ್ತು ಉದ್ದೇಶಪೂರ್ವಕವಲ್ಲದ ಕರ್ಮವು ನೈತಿಕ ಸತ್ಫಲವನ್ನು ಕೊಡಲು ಸಮರ್ಥವಲ್ಲ ಎಂಬ ನಿರ್ಣಯವು ಕಾಣುತ್ತದೆ. ನೈತಿಕ ಮತ್ತು ಆಧ್ಯಾತ್ಮಿಕ ಜೀವನದ ಷರತ್ತನ್ನು ಪೂರೈಸಲು ಕೇವಲ ಔಪಚಾರಿಕತೆ ಸಾಲದು. ಈ ಯುಗದ ಅಂತ್ಯದಲ್ಲಿ ಪೂರ್ತಿ ಬದಲಾಗಿ ಮಾನವಜೀವಿತದ ಆಧ್ಯಾತ್ಮಿಕ ಗುರಿಗೆ ಮನನ ನಿದಿಧ್ಯಾಸನಗಳೇ ಪ್ರಮುಖ ಸಾಧನಗಳೆಂದು ಹಾಡಿಹೊಗಳಲಾಗಿದೆ. ಅಂದರೆ ನೈತಿಕ ಹಾಗೂ ಧಾರ್ಮಿಕ ಕ್ರಿಯೆಗಳ ಮಾನಸಿಕ ಅಂಗಕ್ಕೆ ಹೆಚ್ಚು ಪ್ರಾಧಾನ್ಯ ನೀಡುವ ಸೂಚನೆ ಇದಾಗಿದೆ.
ನೈತಿಕ ಹೊಣೆಗಾರಿಕೆ
ದೇವತಾಪ್ರೀತಿಯನ್ನು ಗಳಿಸುವುದರ ಆವಶ್ಯಕತೆಯಿಂದ ಮಾನವಕರ್ಮಗಳು ನಿಯಂತ್ರಿತವಾಗಿವೆ ಎಂದು ನಂಬಿರುವವರೆಗೂ ದೈವಸಂಕಲ್ಪವನ್ನು ಮೈಗೂಡಿಸಿಕೊಂಡ ಶ್ರುತಿಸ್ಮøತಿಗಳು ನೈತಿಕ ಹೊಣೆಗಾರಿಕೆಯನ್ನು ನಿರ್ಧರಿಸುತ್ತವೆ. ಅಲ್ಲಿ ಮತವೂ ನೈತಿಕತೆಯ ಮೂಲವಾಗುತ್ತದೆ. ಆ ದೈವಸಂಕಲ್ಪವು ಕರ್ತವ್ಯವನ್ನು ನಿರ್ಧರಿಸುತ್ತದೆ ಎಂದೇ ವಿವಿಧ ಕರ್ಮಗಳನ್ನು ನಿರೂಪಿಸುವ ಮೀಮಾಂಸಾಪದ್ಧತಿಯಲ್ಲಿ ಶ್ರುತಿ (ವೇದ) ಪ್ರಾಮಾಣ್ಯವನ್ನು ಒತ್ತಿಹೇಳಿದೆ. ಅಲ್ಲಿ ವಿಧಿಪೂರ್ವಕವಾಗಿ ಹೇಳಿದ್ದೇ ಧರ್ಮ (ಬೋಧನಾರ್ಥೋ ಧರ್ಮಃ) ಎಂದಿದೆ. ಶ್ರುತಿ ಹೇಳಿದ್ದನ್ನು ಮಾಡಬೇಕು; ಮಾಡದಿದ್ದರೆ ಪಾಪವಾಗುತ್ತದೆ.
ವಿಲಿಯಂ ಜೇಮ್ಸ್ ಪ್ರಕಾರ, ಭಾರತದ ವಿಚಾರಪರರು ಮೃದುಮತಿಗಳಾಗಿರದೆ ದೃಢವಾದ ಸಹಿಷ್ಣುಮತಿಗಳಾಗಿದ್ದರು. ಏಕೆಂದರೆ, ಪ್ರತಿ ವ್ಯಕ್ತಿಯೂ ತನ್ನ ಅಕೃತ್ಯಗಳ ಹೊರೆಯನ್ನು ತಾನೇ ಹೊತ್ತಿರಬೇಕೆಂದೂ ಕೃಪಾಳುವಾದ ಭಗವಂತ ತನ್ನನ್ನು ಪಾರುಮಾಡಬೇಕೆಂದು ನಿರೀಕ್ಷಿಸುತ್ತಿರಲಿಲ್ಲವೆಂದೂ ಗುರುತಿಸಲಾಗಿದೆ. ಆದರೆ ರಾಮಾನುಜಾಚಾರ್ಯರ ದೃಷ್ಟಿಯಲ್ಲಿ ಪರಮಾತ್ಮನು ಮಾನವನ ಲೋಪದೋಷಗಳನ್ನು ಕಳೆಯುವವ. ಆದರೆ ಭಗವಂತನನ್ನು ಒಲಿಸಿಕೊಳ್ಳಬಹುದೆಂದು ನಂಬಿದರೆ ನೈತಿಕ ನಿಯಮವನ್ನು ಅಪ್ರತ್ಯಕ್ಷವಾಗಿ ನಿರಾಕರಿಸಿದಂತಾಗುತ್ತದೆ ಎಂದ ಅವರು, ಮಾನವನ ನೈತಿಕ ವ್ಯವಹಾರದಲ್ಲಿ ದೈವಿಕ ಕೈವಾಡ ಇದೆ ಎಂಬುದರಿಂದ ಪಕ್ಕಕ್ಕೆ ಸರಿದರು.
ಇನ್ನು ಮೀಮಾಂಸಕರು, ಲೋಭಗಳು ತುಂಬ ಇವೆ, ಮಾನವನ ತಿಳಿವಳಿಕೆ ಮತ್ತು ಮನೋನಿರ್ಧಾರಗಳು ದುರ್ಬಲವಾಗಿವೆ. ಆದ್ದರಿಂದ ನೈತಿಕ ಜೀವನದ ಪ್ರಥಮ ಆವಶ್ಯಕತೆ ಎಂದರೆ ಪಾಪದ ಆಕರ್ಷಕ ಆಹ್ವಾನವನ್ನು ತಿರಸ್ಕರಿಸುವುದು ಎಂದು ಹೇಳಿದರು. ಸಮಾಜಘಾತುಕ ಮತ್ತು ಸಾಮಾಜಿಕ ಶಿಸ್ತಿಗೆ ಧಕ್ಕೆ ತರುವ ಕೆಲವು ವಿಧದ ಕೆಲಸಗಳಿಂದ ದೂರವಿರಬೇಕು. ಆದ್ದರಿಂದ ವಿಧಿಗಳನ್ನು ನಿಷೇಧಗಳಿಂದ, ಉತ್ತೇಜನಗಳನ್ನು ಆತ್ಮನಿಗ್ರಹದಿಂದ ಬಲಗೊಳಿಸಬೇಕೆಂದು ಸಲಹೆ ನೀಡಲಾಗಿದೆ.
ಮನುಷ್ಯ ಕೆಟ್ಟವನಲ್ಲ
ಗಮನಾರ್ಹ ಅಂಶವೆಂದರೆ, ಮನುಷ್ಯನು ಸ್ವಭಾವದಿಂದಲೇ ಕೆಟ್ಟವನೆಂದಾಗಲಿ ಅಥವಾ ಅವನ ಕೆಟ್ಟತನವನ್ನು ದಮನ ಮಾಡುವ ನಿಗ್ರಹವೇ ನೈತಿಕತೆ ಎಂದಾಗಲಿ ಭಾವಿಸಿದ್ದು ಹಿಂದೂ ಪರಂಪರೆಯಲ್ಲಿ ಅಪರೂಪವೆಂದೇ ಹೇಳಬೇಕು; ಬದಲಾಗಿ ಬುದ್ಧಿಯನ್ನು ಕದಡಿದಾಗ ಅವನಲ್ಲಿ ಸಹಜವಾಗಿರುವ ಒಳ್ಳೆಯತನವು ಕೆಟ್ಟತನಕ್ಕೆ ತಿರುಗುತ್ತದೆ ಎನ್ನುವ ಅಭಿಪ್ರಾಯವೇ ಪ್ರಚಲಿತವಾಗಿದೆ. ಅದರಿಂದಾಗಿ ಬಹುತೇಕ ಎಲ್ಲ ಮಂತ್ರಗಳು, ಪಠಣಗಳು ‘ಓಂ ಶಾಂತಿಃ ಶಾಂತಿಃ ಶಾಂತಿಃ’ ಎಂದು ಕೊನೆಗೊಳ್ಳುತ್ತವೆ. ಬುದ್ಧಿಯು ಶಾಂತವಾಗಿರಬೇಕು ಎಂಬುದನ್ನಿದು ಸೂಚಿಸುತ್ತದೆ.
ಶೀಲವೇ ಜ್ಞಾನ. ಜನರನ್ನು ಶೀಲವಂತರನ್ನಾಗಿ ಮಾಡುವ ಮಾರ್ಗವೆಂದರೆ, ಅವರ ಆತ್ಮಕ್ಕೆ ಸರಿಯಾದ ಬೆಳಕು ತೋರುವುದು. ಸಾಮಾನ್ಯವಾಗಿ ಜನ ಒಳಿತು ಮಾಡುತ್ತೇವೆನ್ನುವ ಭ್ರಮೆಯಲ್ಲಿ ಕೆಟ್ಟದ್ದನ್ನು ಮಾಡುತ್ತಾರೆ; ತಮ್ಮ ತಪ್ಪು ತಿಳಿದೊಡನೆ ಅದನ್ನು ಸರಿಮಾಡಿಕೊಳ್ಳುತ್ತಾನೆ ಎನ್ನುವಷ್ಟು ಮನುಷ್ಯನಲ್ಲಿ ವಿಶ್ವಾಸವನ್ನು ಪ್ರಕಟಿಸಲಾಗಿದೆ.
ವರ್ಣಾಶ್ರಮ ವ್ಯವಸ್ಥೆಯಲ್ಲಿ ಮೇಲು-ಕೀಳು ಇರುವಂತೆ ಮೇಲ್ನೋಟಕ್ಕೆ ಕಂಡರೂ ಕೂಡ ಸಂಪ್ರದಾಯವಿರಲಿ ಅಥವಾ ಆಚರಣೆಯಿರಲಿ, ಯಾರದ್ದೂ ಏಕಸ್ವಾಮ್ಯ ಅಲ್ಲಿರಲಿಲ್ಲ. ದೇವತಾಮೂರ್ತಿಯನ್ನು ನೇರವಾಗಿ ಬಳಿಸಾರುವ ಅಧಿಕಾರ ಬ್ರಾಹ್ಮಣನದ್ದಾದರೂ ಮತಶ್ರದ್ಧೆ ಅವನ ವರ್ಗದ ಏಕಸ್ವಾಮ್ಯವಾಗಿರಲಿಲ್ಲ. ಎಲ್ಲರೂ ಭಕ್ತಿಯನ್ನು ತಳೆದು ತಮ್ಮ ಮತಾಚರಣೆಯನ್ನು ನಡೆಸಬೇಕು. ಪರೋಪಕಾರ, ಅತಿಥಿಸತ್ಕಾರ, ಮನೆಯ ಪ್ರಾಣಿಗಳಿಗೆ ಆಹಾರ ನೀಡಿಕೆ, ಪಿತೃಪೂಜೆ ಎಲ್ಲರಿಗೂ ಹೇಳಿದೆ. ಅದೇರೀತಿ ಪರಹಿಂಸೆ, ಇತರರ ಸೊತ್ತು ಕಸಿದುಕೊಳ್ಳುವುದು ಯಾರಿಗೂ ಸಲ್ಲದು. ಇದು ಸಾಮಾಜಿಕ ಬಾಳ್ವೆಯ ಮೂಲನಿಯಮ. ಲೈಂಗಿಕಶುದ್ಧಿ ಹಾಗೂ ಎಲ್ಲ ವಿಧಗಳ ಆತ್ಮಸಂಯಮಗಳು ವೈಯಕ್ತಿಕ ಮತ್ತು ಸಾಮಾಜಿಕ ಆವಶ್ಯಕತೆಗಳೆನಿಸಿದ್ದವು. ಇಂದ್ರಿಯನಿಗ್ರಹ, ತ್ರಿಕರಣಪೂರ್ವಕ (ಕಾಯೇನ ಮನಸಾ ವಾಚಾ) ಸತ್ಯಾನುಷ್ಠಾನಗಳು ನೈತಿಕ ಶುದ್ಧತೆಯ ಸಾರ. ಅರಿಷಡ್ವರ್ಗನಿಗ್ರಹವು ಎಲ್ಲರೂ ಪೂರೈಸಬೇಕಾದ ಮಾನವೀಯ ಹೊಣೆ. ಅದಕ್ಕೆ ಇನ್ನೊಂದು ವೈಶಿಷ್ಟ್ಯಪೂರ್ಣ ಸೇರ್ಪಡೆ ಅತಿರಕ್ತಿ ಮತ್ತು ಎಲ್ಲ ಬಗೆಯ ದ್ವೇಷಗಳ ತ್ಯಾಗ.
ಮುನಿಯ ಮಾರ್ಗ
ಮುನಿಯು ಆಸಕ್ತಿಮಾರ್ಗ ಮತ್ತು ಅಭಾವಾತ್ಮಕ ಮಾರ್ಗ ಎರಡನ್ನೂ ಮೆಟ್ಟಿನಿಂತು ಅನಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ದ್ವಂದ್ವಭಾವಕ್ಕೆ (ಸುಖ-ದುಃಖ ಇತ್ಯಾದಿ) ಹೊರತಾಗಿ ನಿಲ್ಲಬೇಕು. ಪ್ರಪಂಚದಿಂದ ಅತಿಯಾಗಿ ಆಕರ್ಷಿತನಾಗಬಾರದು ಅಥವಾ ವಿಮುಖನಾಗಲೂಬಾರದು. ಇದರ ಉಪಸಿದ್ಧಾಂತವಾಗಿ ಜನರು ಕ್ಷಮೆಯನ್ನೂ ಸಹನೆಯನ್ನೂ ಅಭ್ಯಾಸ ಮಾಡಿಕೊಳ್ಳಬೇಕು. ಕೆಟ್ಟದಕ್ಕೆ ಒಳ್ಳೆಯದನ್ನು, ದ್ವೇಷಕ್ಕೆ ಪ್ರೇಮವನ್ನು, ಕಾರ್ಪಣ್ಯಕ್ಕೆ ದಾನವನ್ನು ಮತ್ತು ಮೋಸಕ್ಕೆ ಪ್ರಾಮಾಣಿಕತೆಯನ್ನು ಹಿಂತಿರುಗಿಸಬೇಕೆಂದು ಅದರಲ್ಲಿ ತಿಳಿಸಲಾಯಿತು. ಒಟ್ಟಿನಲ್ಲಿ ಸಮಾಜದಲ್ಲಿ ನ್ಯಾಯವನ್ನು ಸ್ಥಾಪಿಸುವುದೇ ಅಂತಿಮ ಆದರ್ಶ.
ಪಾಪದ ವಿರುದ್ಧ ಪ್ರತಿಭಟಿಸುವ ಸಮಸ್ಯಾವ್ಯಾಧಿಗೆ ಬೇರೆ ಬೇರೆ ಮದ್ದುಗಳನ್ನು ಹೇಳುವವರು ಬಂದರು. ಹಿಂಸಕನನ್ನು ಹಿಂಸಿತರು ಪ್ರತಿಭಟಿಸದಿರುವುದರಿಂದ ಹೃದಯಪರಿವರ್ತನೆ ಆಗುತ್ತದೆಂದು (ಗಾಂಧೀಯ ಮಾರ್ಗ) ಕೆಲವರು ಹೇಳಿದರೆ ಅದಕ್ಕೆ ಪ್ರತಿವಾದ ಕೂಡ ಬಂದಿತು. ಅದು ದುಷ್ಕøತ್ಯವನ್ನು ಮುಂದುವರಿಸಲು ಕೊಟ್ಟ ಉತ್ತೇಜನ ಆಗಬಹುದು; ಆದ್ದರಿಂದ ಪಾಪವನ್ನು ಎದುರಿಸಿ ತಡೆಯಬೇಕು ಎಂದರು. ದುಷ್ಕøತ್ಯಕಾರರು ಕೆಡಿಸಿದ ಸಮಾಜದ ಅಸಮತೋಲನವನ್ನು ಸರಿಪಡಿಸಲು ಅಂಥವರಿಗೆ ಕೇಡನ್ನೇ ಮಾಡುವ ಆವಶ್ಯಕತೆಯನ್ನು ದೇವರ ಆಡಳಿತದ ಕಲ್ಪನೆಯು ಉಂಟುಮಾಡಿತು. ಸಾಮಾಜಿಕ ಗಲಭೆ, ರಾಜಕೀಯ ಆಂದೋಲನಗಳನ್ನು ತಡೆಗಟ್ಟುವುದರಲ್ಲಿ ಪರಮಾತ್ಮನೊಡನೆ ಸಹಕರಿಸುವುದು ಶಾಸನಪಾಲಕರ ಕರ್ತವ್ಯವಾಗಿತ್ತು. ಹೀಗೆ ಮಾಡದಿದ್ದರೆ ನೈತಿಕ ಹೊಣೆಯಿಂದ ಹಿಂಜರಿದು ಪಾಪವನ್ನು ಗಳಿಸಿದಂತಾಗುತ್ತದೆ. ಒಟ್ಟಿನಲ್ಲಿ ಮಾನವ ಗುರಿಗಳನ್ನು ನೈತಿಕ ಕರ್ತವ್ಯ (ಧರ್ಮ), ಸಂಪದ್ ವ್ಯವಹಾರ ಹಾಗೂ ರಾಜತಂತ್ರ (ಅರ್ಥ), ಕಾಮ (ಬಯಕೆ) ಮತ್ತು ವಿಮೋಚನೆ (ಮೋಕ್ಷ) ಈ ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿತ್ತು.
ವ್ಯಕ್ತಿಯ ಸ್ವಂತ ಹಿತದ ಸಮರ್ಥನೆಯಲ್ಲಿ ಅಂಗೀಕೃತವಾಗದ ಕೆಲವು ಕೆಲಸಗಳಿಗೆ ರಾಜ್ಯದ ಸುಭದ್ರತೆಯ ಸಲುವಾಗಿ ಅವಕಾಶವಿತ್ತು. ಉದಾಹರಣೆಗೆ ಕೊಲೆಯು ವೈಯಕ್ತಿಕವಾಗಿ ಕಡುಪಾಪ; ಆದರೆ ಶತ್ರುವಧೆ ಇದ್ದರೂ ನ್ಯಾಯವಾದ ಯುದ್ಧವು ರಾಜ್ಯದ ನೈತಿಕ ಕರ್ತವ್ಯ. ಅದೇ ರೀತಿ ಗೂಢಚರ್ಯೆ, ದುರಾಕ್ರಮಣಗಳೂ ಸಮರ್ಥನೀಯ. ಸಾಮಾನ್ಯವಾಗಿ ಬ್ರಾಹ್ಮಣನೇ ಆಗುತ್ತಿದ್ದುದರಿಂದ ರಾಜ್ಯದ ಕಾರ್ಯನಿರ್ವಾಹಕ ಸಭೆಯಲ್ಲಿ ಪುರೋಹಿತನಿಗೆ ಸ್ಥಾನ ಇರುತ್ತಿತ್ತು; ಮತ್ತು ಆಧ್ಯಾತ್ಮಿಕ ನಾಯಕರಿಗೆ ರಾಜನೀತಿ ರೂಪಣೆಯಲ್ಲಿ ಹಿರಿಯ ಪಾಲಿತ್ತು.
ದೇಹಾರೋಗ್ಯ – ಪರಿಶುದ್ಧತೆ
ಯೋಗದರ್ಶನದಲ್ಲಿ ಸಂಯಮದ ಸಂಯೋಜನೆಯನ್ನು ವಿವರವಾಗಿ ವಿಧಿಸಿದೆ. ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಬಯಸುವವನು ಆತ್ಮನಿಗ್ರಹ, ಸಾಮಾಜಿಕ ಸಾಮರಸ್ಯ, ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಹಲವು ಕಠಿಣ ಸಾಧನೆ, ತ್ಯಾಗಗಳನ್ನು ಹೇಳಿದೆ; ದೇಹಸ್ಥಿತಿಯು ಮನಃಸ್ಥಿತಿಯನ್ನು ಸ್ವಲ್ಪಮಟ್ಟಿಗೆ ನಿರ್ಧರಿಸುತ್ತದೆ ಎಂದು ಕೂಡ ಹೇಳಿದೆ. ವಿಧಿ(ಕರ್ಮ)ಗಳು ಮನಸ್ಸಂಯಮವನ್ನಲ್ಲದೆ ದೇಹದ ನಿಯಂತ್ರಣವನ್ನು ಕೂಡ ಒಳಗೊಂಡಿವೆ. ರುಚಿ, ಧೃತಿ, ಇಂದ್ರಿಯಗಳನ್ನು ಮೊನೆ ಮಾಡಿ ಏಕಾಗ್ರಚಿತ್ತವಾಗಿರುವುದು, ಅಪವಿತ್ರವೂ ಅಸಭ್ಯವೂ ಆದ ವಸ್ತುಗಳಿಂದ ಇಂದ್ರಿಯಗಳನ್ನು ವಿಮುಖಗೊಳಿಸುವುದು, ಪ್ರಾಣಾಯಾಮ, ಆಸನಗಳನ್ನು ಕೂಡ ಚಿತ್ತವೃತ್ತಿನಿರೋಧ, ಮನಶ್ಚಂಚಲತೆಯ ನಾಶ ಮತ್ತು ಧ್ಯಾನಭಂಗಿಗಳನ್ನು ತಂದುಕೊಡುವುದು ಇತ್ಯಾದಿ ಸಾಧನೆಗೆ ಬಳಸಿಕೊಂಡರು. ಇದರ ಗುರಿ ಒಂದೇ. ದೇಹವನ್ನು ಮಿತ್ರನನ್ನಾಗಿ ಮಾಡಿಕೊಳ್ಳುವುದು. ದೇಹವನ್ನು ಆಧ್ಯಾತ್ಮಿಕ ನಿಯಂತ್ರಣಕ್ಕೆ ಒಳಪಡಿಸಿ ಪವಿತ್ರಪೀಠವನ್ನಾಗಿ ಮಾಡಿಕೊಳ್ಳಬೇಕೆಂದು ಹೇಳಿದೆ.
ದೇಹ–ದೇವಾಲಯ
ಉದಾಹರಣೆಗೆ ತಂತ್ರಶಾಸ್ತ್ರದಲ್ಲಿ ವಿವಿಧ ದೇವತೆಗಳು ಅಥವಾ ಒಂದೇ ದೇವತೆಯ ವಿವಿಧ ಅಂಗಗಳು ದೇಹದ ವಿವಿಧ ಭಾಗಗಳಲ್ಲಿ ನೆಲಸಿವೆ ಎಂದು ಭಾವಿಸಲಾಗಿತ್ತು. ದೇಹವನ್ನು ಪವಿತ್ರ ದೇಗುಲವೆಂದೇ ಕಾಣಲಾಗಿತ್ತು. (ದೇಹೋ ದೇವಾಲಯಃ ಪ್ರೋಕ್ತಃ). ದೇವತೆಯೊಡನೆ ಹೀಗೆ ಅನನ್ಯತೆಯನ್ನು ಭಾವಿಸಿಕೊಳ್ಳುವುದು ಭಕ್ತನು ದೇಹವನ್ನು ಭಗವಂತನ ಅವತಾರವೆಂದು ಪೂಜಿಸಿಕೊಳ್ಳುವ ಮಟ್ಟಕ್ಕೆ ಹೋಗಿತ್ತು.
ಮುಂದಿನ ಕಾಲದಲ್ಲಿ ದೇಹವನ್ನು ಈ ದೃಷ್ಟಿಯಲ್ಲಿ ಹೊಗಳಿದ ದರ್ಶನಗಳು ಜನಪ್ರಿಯವಾದವು. ಆಚಾರ್ಯರನ್ನೂ ಸಂತರನ್ನೂ ದೇವರೆಂಬಂತೆ ಪೂಜಿಸುವುದು, ರಾಜರನ್ನು ಭಕ್ತಿಯಿಂದ ಗೌರವಿಸುವುದು (ರಾಜಾ ಪ್ರತ್ಯಕ್ಷದೇವತಾ), ತನ್ನ ದೇಹದಲ್ಲೂ ಇತರರ ದೇಹದಲ್ಲೂ ದೈವತ್ವವು ಮನೆಮಾಡಿದೆ ಎಂದು ತಿಳಿಯುವುದು, ಅತಿಥಿಯು ಎಲ್ಲ ದೇವತೆಗಳ ಪ್ರತಿನಿಧಿ ಎಂಬ ಭಾವನೆ – ಹೀಗೆ ಮುಂದುವರಿಯಿತು. ಮಾನವದೇಹವು ಸಂಪೂರ್ಣ ಮಲಭರಿತ ಎನ್ನುವ ಭಾವನೆಯಿದ್ದರೆ ಪರಮಾತ್ಮನ ಅವತಾರ ಅಥವಾ ದೈವತ್ವವನ್ನು ಮೂರ್ತಿಗಳಲ್ಲಿ ಸಂಕೇತಿಸುವ ಕ್ರಮ ಮುಂದುವರಿಯುತ್ತಿರಲಿಲ್ಲ. ಇಡೀ ವಿಶ್ವವೇ ಬ್ರಹ್ಮ ಎಂಬುದು ಭೌತಿಕ ಸೇರಿದಂತೆ ಎಲ್ಲ ಬಗೆಯ ಅಸ್ತಿತ್ವದ ಪವಿತ್ರತೆಯಲ್ಲಿ ನಂಬಿಕೆ ತಳೆದಿರಬೇಕು.
ಆದರೆ ದಾರ್ಶನಿಕರು ಮತ್ತು ನೀತಿವಾದಿಗಳು ಸಾಮಾನ್ಯದೇಹದ ಬಗ್ಗೆ ಪ್ರತಿಕೂಲವಾಗಿದ್ದರು. ಅವರ ದೃಷ್ಟಿ ಆಧ್ಯಾತ್ಮಿಕವಾಗಿತ್ತು. ಆತ್ಮವು ದೇಹಕ್ಕೆ ಸಮ ಎಂದು ಹೇಳುವ ಹಾಗಿರಲಿಲ್ಲ. ನೈತಿಕತೆಯನ್ನು ಮನಸ್ಸಿನ ನಿಯಂತ್ರಣದ ದೃಷ್ಟಿಯಿಂದ ಕಂಡವರು ದೇಹದ ಆವಶ್ಯಕತೆಗಳನ್ನು ತಿರಸ್ಕಾರದಿಂದ ಕಂಡರು; ಅವು ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿನ ತೊಡಕುಗಳೆಂದು ಭಾವಿಸಿದರು. ನೈತಿಕ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಸಹಕಾರಿ ಆಗುವುದರ ಹೊರತು ದೇಹದ ಹಿತವು ನೀತಿಯ ಗಣನೆಯಲ್ಲಿ ಬರಬಾರದೆಂಬುದು ಬಹುತೇಕ ಎಲ್ಲರ ಒಪ್ಪಿತ ವಿಷಯವಾಗಿತ್ತು. ಹೀಗೆ ಚಪಲಬುದ್ಧಿಯನ್ನು ಹತೋಟಿಯಲ್ಲಿ ಇಡುವುದಕ್ಕಾಗಿ ಆರೋಗ್ಯದ ನಿಯಮವನ್ನು ಪಾಲಿಸಬೇಕು.
ನೀತಿ, ಅಧ್ಯಾತ್ಮಗಳಿಗೆ ಬೇಕಾದ ಮನೋಭಾವವನ್ನು ಪಡೆಯಲು ಸ್ನಾನ, ಸಂಪ್ರೋಕ್ಷಣೆಗಳು ಸಹಾಯಕ ಎಂದು ವಿಧಿಸಿದ್ದರು. ದೇಹಕ್ಕೆ ಇಷ್ಟು ಸಣ್ಣ ಗಮನವೂ ಆತ್ಮಕ್ಕೆ ವಿಕರ್ಷಣೆ ಎಂದು ಭಾವಿಸಿದವರು ದೇಹವನ್ನು ಮಲಿನವಾಗಿಯೇ ಬಿಟ್ಟರು; ಜಟೆ ಬೆಳೆಸಿದರು. ಒಟ್ಟಿನಲ್ಲಿ ಕಠಿಣ ವ್ರತ ನಿಯಮಪಾಲನೆಯಿಂದ ಅಧ್ಯಾತ್ಮದೃಷ್ಟಿಯತ್ತ ಒಲವು ಬೆಳೆಯುತ್ತದೆ. ತಪಸ್ಸು ಅರ್ಥಾತ್ ದೇಹದಂಡನೆಯು ಆತ್ಮಕ್ಕೆ ದೇಹದ ಮೇಲೆ ಹತೋಟಿಯನ್ನು ತಂದುಕೊಡುತ್ತದೆ ಎಂಬುದು ತಾತ್ಪರ್ಯ.
ಸಾಮಾಜಿಕ ಕರ್ತವ್ಯ
ಭಾರತೀಯ ನೀತಿಶಾಸ್ತ್ರವು ಪ್ರಪಂಚವನ್ನು ಉತ್ತಮಗೊಳಿಸುವಲ್ಲಿ ಧರ್ಮವೀರರು ತೋರಿಸಬೇಕಾದ ಉತ್ಸಾಹವನ್ನು ತೋರಿಸುವುದಿಲ್ಲ ಎಂಬ ಆಕ್ಷೇಪವಿದೆ. ಆದರೆ ಅದು ಸಾಮಾಜಿಕ ಕರ್ತವ್ಯಗಳನ್ನು ನಿರ್ದೇಶಿಸಿಕೊಳ್ಳದೆಯೇ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುವ ಕ್ರಮಗಳನ್ನು ವಿಧಿಸುತ್ತದೆ. ಮಾನವ ತನ್ನ ಆಧ್ಯಾತ್ಮಿಕ ಕ್ಷೇಮವನ್ನು ತಾನೇ ಸಾಧಿಸಿಕೊಂಡು ತನ್ನಷ್ಟಕ್ಕೆ ತಾನು ಕೈದೀವಿಗೆ ಆಗಬೇಕೆಂದು ಹೇಳುತ್ತದೆ; ಹೀಗೆ ಈ ಆಕ್ಷೇಪದ ಸಮರ್ಥನೆ ಕಷ್ಟ.
ತನ್ನ ಕರ್ತವ್ಯಗಳಲ್ಲದೆ ಇಡೀ ಸೃಷ್ಟಿಗೂ ದೇವತೆಗಳಿಗೂ ಪಿತೃಗಳಿಗೂ ಸಲ್ಲುವ ಕರ್ತವ್ಯಗಳಿಗಾಗಿ ಪಂಚಮಹಾಯಜ್ಞಗಳನ್ನು ಹೇಳಲಾಗಿದೆ. ಅತಿಥಿಸತ್ಕಾರ, ರೋಗಿಗಳ ಶುಶ್ರೂಷೆ, ಮೂಕಪ್ರಾಣಿಗಳಿಗೆ ಅನ್ನೌಷಧ ನೀಡುವುದು ಗೃಹಸ್ಥನ ಬಾಳ್ವೆಯಲ್ಲಿ ತಪ್ಪದೆ ಬರುವ ಪ್ರಧಾನ ಅಂಶಗಳು. ಬಂಧುಗಳನ್ನು ಕುರಿತ ಕರ್ತವ್ಯದಲ್ಲಿ ಗೌರವ, ಪ್ರೀತಿಗಳಲ್ಲದೆ, ಸಂಕಟದ ಸಮಯದಲ್ಲಿ ಒತ್ತಾಸೆ ಕೊಡುವುದು, ಕೊಟ್ಟು ತೆಗೆದುಕೊಳ್ಳುವ ಪದ್ಧತಿಯಿಂದ ಸಾಮಾಜಿಕ ಸಂಬಂಧಗಳಲ್ಲಿ ಸೌಹಾರ್ದವನ್ನು ಸಾಧಿಸುವುದು ಸೇರಿದೆ.
ದಾನದಲ್ಲಿ ಸಸ್ಯ ನೆಡುವುದು, ಮಹಾಮಾರ್ಗ (ರಸ್ತೆ) ರಚಿಸುವುದು, ಬಾವಿ-ಕೆರೆ ತೋಡಿಸುವುದು, ವಿಶ್ರಾಂತಿಗೃಹಗಳನ್ನು ಕಟ್ಟಿಸುವುದು, ಸಕಲ ಪ್ರಾಣಿ – ಮಾನವರನ್ನು ಒಳಗೊಳ್ಳುವ ಕಾರ್ಯ ಮಾಡುವುದು ಅಂದರೆ ಎಲ್ಲೆಡೆ ಔದಾರ್ಯವನ್ನು ಹರಡುವುದು ಸೇರಿವೆ. ಮನುಷ್ಯನನ್ನು ಅವನ ಯಜ್ಞಫಲಗಳಲ್ಲದೆ ದಾನಗಳೂ ಕೂಡಿಕೊಳ್ಳುತ್ತವೆ ಎಂಬುದು ಪ್ರಾಚೀನ ಮತತತ್ತ್ವಗಳ ಒಂದು ಪ್ರಮುಖ ಅಂಶ. ಭಾರತದಲ್ಲೂ ದೂರಪ್ರಾಚ್ಯದಲ್ಲೂ ಹಿಂದುಗಳು ಮತ್ತು ಬೌದ್ಧರು ನಡೆಸಿದ ಧರ್ಮಪ್ರಸಾರವು ಭಾರತದ ಇತಿಹಾಸದ ಒಂದು ದಿವ್ಯ ಅಧ್ಯಾಯವೆನಿಸಿದೆ.
ವರ್ಣಧರ್ಮದಿಂದ ದುರ್ಬಲರನ್ನು ಕಾಪಾಡಿ ನಾಡನ್ನು ರಕ್ಷಿಸಲು ನಿಯುಕ್ತರಾದವರು ಯಜ್ಞರಕ್ಷಣೆಗಾಗಿ ಮತ್ತು ದುರ್ಬಲರ ಮೇಲೆ ಬಲಶಾಲಿಗಳ ದಮನ ನಡೆದಾಗ, ಸಹಾಯಕ್ಕೆ ಕರೆ ಬಂದಾಗ ಓಗೊಡದೆ ಇರುತ್ತಿರಲಿಲ್ಲ. ತನ್ನ ಪ್ರಾಣಕ್ಕೂ ಆಸ್ತಿಗೂ ಸಂಚಕಾರ ಬಂದಾಗಲೂ ತನ್ನನ್ನು ಮೊರೆಹೊಕ್ಕವನ ಜೀವವನ್ನುಳಿಸಲು ತನ್ನ ಪ್ರಯತ್ನದ ಪರಾಕಾಷ್ಠೆಯನ್ನು ಮಾಡದಿರುವುದು ನೀತಿಗೇಡಿತನವೆಂದು ಭಾವಿಸಲಾಗಿತ್ತು. ಬ್ರಾಹ್ಮಣಗಳಲ್ಲಿ ಅಶಾಶ್ವತ ಅಧಿಕಾರ, ವೈಯಕ್ತಿಕ ಸುಖ, ಕೊನೆಗೆ ಮೋಕ್ಷ ಪಡೆಯುವ ಬದಲು ವಿಶಾಲ ಮಾನವತೆಯ ಸೇವೆ ಮಾಡುವ ಪ್ರಾರ್ಥನೆ, ನಿರ್ಧಾರ ಅಥವಾ ಅಭಿವ್ಯಕ್ತಿಯನ್ನು ಒಳಗೊಂಡ ಗ್ರಂಥಾಂಶಗಳು ಸಿಗುತ್ತವೆ. ಸೃಷ್ಟಿಯಲ್ಲಿ ಯಾರಿಗಾದರೂ ಪ್ರಯೋಜನ ಆಗುವಂತಿದ್ದರೆ ಸಂತನಾದವನು ಪಾಪವನ್ನು ಕೂಡ ಮಾಡಬಹುದೆಂದು ಆಲಂಕಾರಿಕವಾಗಿ ಹೇಳಿದ್ದೂ ಇದೆ. ಎಲ್ಲರೂ ಸುಖಿಗಳಾಗಿರುವಂತೆ ತಮ್ಮ ಸ್ನೇಹ, ಉಪಕಾರದೃಷ್ಟಿಗಳನ್ನು ಎಲ್ಲೆಡೆಗೆ ಬೀರಬೇಕೆಂದು ಮುನಿಗಳಿಗೆ ಉಪದೇಶ ನೀಡಲಾಗುತ್ತಿತ್ತು.
ಸುವರ್ಣ ನಿಯಮ
ಬ್ರಹ್ಮದಲ್ಲಿ ಹಾಗೂ ಬ್ರಹ್ಮದಿಂದ ಎಲ್ಲ ಆತ್ಮಗಳೂ ಒಂದೇ ಎಂಬ ವೇದಾಂತದ ತತ್ತ್ವದಿಂದಾಗಿ ಮಾನವಜಾತಿಯ ಏಕತೆಯನ್ನು ಒತ್ತಿಹೇಳಿದಂತಾಗಿತ್ತು. ಆದ್ದರಿಂದ ತಮ್ಮನ್ನು ಇತರರು ಹೇಗೆ ಕಾಣಬಾರದೆಂದು (ಜನ) ಅಪೇಕ್ಷಿಸುತ್ತಾರೋ ಇತರರನ್ನು ತಾವು ಹಾಗೆ ಕಾಣಬಾರದೆಂಬ ಸುವರ್ಣ ನಿಯಮವನ್ನು ಪಾಲಿಸಬೇಕೆಂದು ಜನರಿಗೆ ತಿಳಿಹೇಳಿದ್ದರು.
ಇಲ್ಲಿನ ವಾಙ್ಮಯ ತನ್ನ ಮಹಾಪುರುಷರಲ್ಲೂ ಸ್ತ್ರೀಯರಲ್ಲೂ ಕೆಲವು ಬಗೆಯ ಆದರ್ಶಗುಣಗಳನ್ನು ಅಮರಗೊಳಿಸದಿದ್ದರೆ ಹಿಂದೂ ನೀತಿಶಾಸ್ತ್ರವು ಇಷ್ಟು ದೊಡ್ಡ ದೇಶದ ಮೇಲೆ ಈ ರೀತಿ ಶಾಶ್ವತ ಹಿಡಿತವನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶ್ರೀರಾಮನ ಕ್ಷತ್ರಿಯಕರ್ಮ, ಲಕ್ಷ್ಮಣಭರತರ ಸೋದರಪ್ರೇಮ, ಸೀತೆ, ಸಾವಿತ್ರಿ, ದಮಯಂತಿಯರ ಪಾತಿವ್ರತ್ಯ, ಕರ್ಣನ ಔದಾರ್ಯ, ಶಿಬಿ, ಜೀಮೂತವಾಹನರ ದಯೆ, ತ್ಯಾಗ, ಧರ್ಮರಾಯನ ಸತ್ಯಸಂಧತೆ, ಭೀಷ್ಮನ ದೃಢಪ್ರತಿಜ್ಞೆ, ಧ್ರುವ-ಪ್ರಹ್ಲಾದರ ಭಕ್ತಿ, ದಧೀಚಿಯ ತ್ಯಾಗ ಮುಂತಾದವು ಯುಗಗಳಿಂದ ಸಂಜ್ಞಾಜ್ಯೋತಿಗಳಾಗಿವೆ. ದೇಶದ ಮೂರು ಮಹಾಮತಗಳು ಧೃತಿ, ಸಹಿಷ್ಣುತೆ, ಘನತೆ, ಸನ್ಮಾರ್ಗಗಳ ಅಸಂಖ್ಯಾತ ಕಥೆಗಳಿಂದ ಲೋಕದ ಮನದ ಮೇಲೆ ನೈತಿಕ ಆದರ್ಶಗಳನ್ನು ಅಚ್ಚೊತ್ತಿವೆ.
ಮತಸಹಿಷ್ಣುತೆಯ ವಿಕ್ರಮ
ಮತಸಹಿಷ್ಣುತೆಯಲ್ಲಿ ಇಂದಿಗೂ ಭಾರತದ್ದೇ ಏಕೆ ವಿಕ್ರಮವೆಂದರೆ, ಅನ್ಯಮತದವರನ್ನು ಬಲಾತ್ಕಾರದಿಂದ ಮತಾಂತರಗೊಳಿಸಿ ತುಳಿದುಬಿಡುವುದನ್ನು ಇಲ್ಲಿ ನೈತಿಕಶೀಲವೆಂದು ಎಂದೂ ಎಣಿಸಲಿಲ್ಲ. ಇಲ್ಲಿನ ಎಲ್ಲ ಮತಾಚರಣೆಗಳ ಕೊನೆಯಲ್ಲಿ ಶಾಂತಿಮಂತ್ರ ಅಥವಾ ಶಾಂತಿಸ್ವಸ್ತಿಗಳ ಆಶೀರ್ವಚನವಿರುತ್ತದೆ.
ತೈತ್ತಿರೀಯ ಉಪನಿಷತ್ತಿನಲ್ಲಿ ವಿದ್ಯೆಯನ್ನು ಮುಗಿಸಿ ಮನೆಗೆ ಮರಳುವ ಶಿಷ್ಯನಿಗೆ ಆಚಾರ್ಯ ಈ ರೀತಿ ಉಪದೇಶಿಸುತ್ತಾನೆ: “ಸತ್ಯ, ಶೀಲ ಮತ್ತು ವೇದಾಧ್ಯಯನಗಳನ್ನು ಅಲಕ್ಷ್ಯ ಮಾಡಬೇಡ. ಅವುಗಳನ್ನು ನಿನ್ನ ಜೀವನದಲ್ಲಿ ಅನುಸಂಧಾನ ಮಾಡುತ್ತಿರು. ತಾಯಿ-ತಂದೆ, ಆಚಾರ್ಯ, ಅತಿಥಿಗಳನ್ನು ದೇವರೆಂದೇ ಕಂಡು ಅವರಿಗೆ ಸರಿಯಾದ ರೀತಿಯಲ್ಲಿ ಅವಲಂಬನೆ, ಒತ್ತಾಸೆಗಳನ್ನು ನೀಡು. ಈ ವಿಶಾಲ ವಿಶ್ವದಲ್ಲಿ ದೇವರು, ಪಿತೃಗಳೊಡನೆ ನಿನ್ನ ಸಂಬಂಧವನ್ನು ಸ್ಮರಿಸುತ್ತಿರು; ಶ್ರದ್ಧಾಭಕ್ತಿಗಳಿಂದ ಅವರ ಬಳಿಸಾರು. ಅತಿಥಿಗಳನ್ನು ವಿಳಂಬವಿಲ್ಲದೆ ಸತ್ಕರಿಸು. ದೀನರಿಗೆ ನೆರವನ್ನು ನೀಡುವಾಗ ಕೊಡುವ ರೀತಿಯಿಂದ ಅವರು ಮನನೊಂದಾರು, ಜೋಕೆ. ನಿಗರ್ವಿಯಾಗಿಯೂ ಸೌಹಾರ್ದದಿಂದಲೂ ನೊಂದುಕೊಂಡಾನೆಂಬ ಭಯದಿಂದಲೂ ನೀಡು. ಗೃಹಸ್ಥನಾಗಿ ಮುಂದೆ ಸಾಮಾಜಿಕ ವ್ಯವಹಾರಗಳಲ್ಲಿ ನಿರತನಾಗಿರುವಾಗ ಸರಿ ಯಾವುದೆಂದು ಸಂದೇಹ ಬಂದರೆ ವಿಚಾರವಂತರೂ ಶ್ರದ್ಧಾಳುಗಳೂ ಶೀಲವಂತರೂ ಋಜುಮಾರ್ಗಿಗಳೂ ನಿಃಸ್ಪøಹರೂ ಆದವರ ಬಳಿಸಾರಿ ಸಂದೇಹವನ್ನು ಪರಿಹರಿಸಿಕೋ.” ಇದು ಹಿಂದೂ ಜೀವನದೃಷ್ಟಿಯ ಒಂದು ಮಾದರಿ.
ನಮ್ಮ ಪೂರ್ವಿಕರು ಮೋಕ್ಷಶಾಸ್ತ್ರದಂತೆಯೇ ಅರ್ಥಶಾಸ್ತ್ರವನ್ನು ಕೂಡ ಬೆಳೆಸಿಕೊಂಡಿದ್ದರು. ಅದರೊಂದಿಗೆ ನೈತಿಕತೆ ಅಥವಾ ಯಜ್ಞಕರ್ತವ್ಯ (ಧರ್ಮ), ಮಿಥುನಾವಶ್ಯಕತೆ (ಕಾಮ) ಮತ್ತು ಬಿಡುಗಡೆ (ಮೋಕ್ಷ) ಈ ಚತುರ್ವರ್ಗಗಳನ್ನು ಬೇರೆಯಾಗಿಯೇ ಇಡಲಾಗಿತ್ತು. ಧರ್ಮಯುದ್ಧವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಶತ್ರುಗಳನ್ನು ಮತ್ತು ಪಾತಕಿಗಳನ್ನು ಮಾನವೀಯವಾಗಿ ಕಾಣಬೇಕೆನ್ನುವ ಉಪದೇಶವಿದ್ದರೂ ರಾಷ್ಟ್ರೈಕ್ಯವನ್ನು ಉಳಿಸಿಕೊಳ್ಳಬೇಕೆನ್ನುವ ಪರಮಾವಶ್ಯಕತೆಯನ್ನೂ ಮೀರುವಂತಿರಲಿಲ್ಲ. ಶಿಷ್ಟರಕ್ಷಣವೂ ದುಷ್ಟಶಿಕ್ಷಣವೂ ಒಂದೇ ತೂಕದ ನೈತಿಕಹೊಣೆಗಳೆಂದು ವಿಧಿಸಲಾಗಿತ್ತು. ಆದರೆ ಅಹಿತಕರ ಕರ್ತವ್ಯಗಳನ್ನು ಕ್ರೋಧ, ಸೇಡುಗಳಿಂದ ಮಾಡುವಂತಿರಲಿಲ್ಲ; ದಯೆ, ತಾಳ್ಮೆಗಳಿಂದ ತಿದ್ದಲು ಯತ್ನಿಸಬೇಕು; ಅನಿವಾರ್ಯವಾದಾಗ ನಿರ್ದಾಕ್ಷಿಣ್ಯ ಕ್ರಮ. ಮಾನವಕುಲದ ಒಕ್ಕಟ್ಟನ್ನೂ, ಆತ್ಮಸಂಯಮದ ಪ್ರಾಥಮಿಕ ಹೊಣೆಯನ್ನೂ, ಎಲ್ಲ ನೈತಿಕ ಕರ್ಮಗಳಿಗೂ ಅಧ್ಯಾತ್ಮವೇ ಮೂಲ ಎಂಬುದನ್ನೂ ಎಡೆಬಿಡದೆ ನೆನಪಿಟ್ಟುಕೊಳ್ಳಬೇಕೆಂದು ಪೂರ್ವಿಕರು ಹೇಳಿದ್ದರು.
ನಾಲ್ಕು ಪುರುಷಾರ್ಥಗಳು
ಭಾರತೀಯ ತತ್ತ್ವವು ಅದರ ಚರಿತ್ರೆಯ ಉದ್ದಕ್ಕೂ ಪುರುಷಾರ್ಥಗಳಿಗೆ ಮೊದಲ ಸ್ಥಾನವನ್ನು ಕೊಟ್ಟಿದೆ. ಇವು ಜೀವನದ ನಾಲ್ಕು (ಧರ್ಮ, ಅರ್ಥ, ಕಾಮ, ಮೋಕ್ಷ) ಮೌಲ್ಯಗಳಾಗಿ ಗಣಿಸಲ್ಪಟ್ಟಿದ್ದರೂ ಅವುಗಳೊಳಗೆ ಒಂದು ಭೇದವಿದೆ. ಮೋಕ್ಷವನ್ನು ಬಿಟ್ಟು ಮೊದಲ ಮೂರನ್ನು ಮಾತ್ರ ಪುರುಷಾರ್ಥಗಳೆಂದು ಹೇಳಲಾಗುತ್ತಿತ್ತು. ರಾಮಾಯಣ, ಮಹಾಭಾರತಗಳಲ್ಲಿ ಕೂಡ ಹಾಗೆಯೇ ಇದೆ. ಮೋಕ್ಷವೆನ್ನುವ ಧ್ಯೇಯವು ಕನಿಷ್ಠ ಉಪನಿಷತ್ತುಗಳಷ್ಟು ಹಳೆಯದೆಂದು ನಂಬಲಾಗಿದೆ. ಮೊದಲ ಮೂರನ್ನು ‘ತ್ರಿವರ್ಗ’ ಎನ್ನುತ್ತಾರೆ. ಅವುಗಳಿಗೆ ಮಾತ್ರ ಇಷ್ಟಾರ್ಥವೆನ್ನಬಹುದು.
ಅರ್ಥವನ್ನು ಆರ್ಥಿಕ ಮೌಲ್ಯವೆಂದೂ ಕಾಮವನ್ನು ಮಾನಸಿಕ ಮೌಲ್ಯವೆಂದೂ ಧರ್ಮವನ್ನು ನೈತಿಕ ಮೌಲ್ಯವೆಂದೂ ನಿರ್ದೇಶಿಸಬಹುದು. ಅರ್ಥವು ಸಾಧನವಾಗಿದ್ದು, ಜೀವನದ ವಿವಿಧ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಿದೆ. ಅವುಗಳ ಪೂರೈಕೆಯೇ ಕಾಮ. ಅದು ಸ್ವಾಭಾವಿಕವಾದ್ದರಿಂದ ಅದು ಏಕೆ ಎಂಬ ಪ್ರಶ್ನೆಗೆ ಅವಕಾಶವಿಲ್ಲ. ಉದಾಹರಣೆಗೆ, ಆಹಾರವನ್ನು ಏಕೆ ಅರಸುತ್ತೇವೆ ಎಂದು ಪ್ರಶ್ನಿಸಬಹುದು, ಆದರೆ ಆಹಾರಸೇವನೆಯಿಂದ ಆಗುವ ತೃಪ್ತಿ ಯಾವುದಕ್ಕಾಗಿ ಎಂದು ಪ್ರಶ್ನಿಸಲಾಗದು ಎನ್ನುತ್ತಾರೆ ಮೈಸೂರಿನ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಪ್ರೊ|| ಎಂ. ಹಿರಿಯಣ್ಣ ಅವರು.
ಧರ್ಮವು ಮಾನವನಿಗೆ ಸೀಮಿತವಾದದ್ದು (ಪ್ರಾಣಿಗಳಿಗಿಲ್ಲ); ಅದರ ಅರಿವು ಆಂತರಿಕವಾಗಿದ್ದು ಅದೊಂದು ನೈತಿಕ ಮೌಲ್ಯವಾಗಿದೆ. ನೈತಿಕ ನೈರ್ಮಲ್ಯ ಇಲ್ಲದವರಿಗೆ ಕರ್ಮದಿಂದ ಸ್ವಲ್ಪವೂ ಉಪಯೋಗವಿಲ್ಲ. ಆದ್ದರಿಂದ ಸದ್ವರ್ತನೆಯು ವೈದಿಕ ಧರ್ಮಕ್ಕೆ ಅತ್ಯಗತ್ಯವಾದ ಪೂರ್ವವಿಧಿಯಾಗಿದೆ. ಇವುಗಳಲ್ಲಿ ಕರ್ಮಕ್ಕಿಂತ ಸದ್ವರ್ತನೆಯೇ ಅಪೇಕ್ಷ್ಯ ಎಂದು ಕೂಡ ಪ್ರಾಚೀನ ಗ್ರಂಥಗಳಲ್ಲಿ ಉಕ್ತವಾಗಿದೆ. ಅನೇಕ ಅಶ್ವಮೇಧಯಾಗಗಳನ್ನು ಮಾಡುವುದಕ್ಕಿಂತ ಸತ್ಯ ನುಡಿಯುವುದು ಉತ್ತಮವೆಂದು ಮಹಾಭಾರತ ಹೇಳಿದರೆ, ಪ್ರಾಚೀನರಾದ ಗೌತಮರು ಆತ್ಮಗುಣಗಳಾದ ದಯೆ ಮತ್ತು ನೈತಿಕ ಸ್ವಚ್ಛತೆಗಳೇ ಕರ್ಮಕ್ಕಿಂತ ಮೇಲಾದವು ಎಂದಿದ್ದಾರೆ. ಅಹಿಂಸೆ, ನಿಷ್ಕಾಪಟ್ಯ, ಪ್ರಾಮಾಣಿಕತೆ, ಶುಚಿ, ಇಂದ್ರಿಯನಿಗ್ರಹ, ದಾನ, ಆತ್ಮಸಂಯಮ, ದಯೆ ಮತ್ತು ಸಹನೆಗಳು ಧರ್ಮದ ಗುಣಗಳೆಂದು ಯಾಜ್ಞವಲ್ಕ್ಯಸ್ಮøತಿ ಹೇಳಿದೆ. ಇನ್ನು ಅರ್ಥ-ಕಾಮಗಳಿಗೆ ಧರ್ಮದ ಕಟ್ಟುಪಾಡು ಇರುತ್ತದೆ. ಧರ್ಮಕ್ಕೆ ಸಮ್ಮತವಾದ ಕಾಮವೇ ನಿಜವಾದ ಮೌಲ್ಯ; ಬೇರೆಯದಲ್ಲ. ಹೀಗೆ ಜೀವನವನ್ನು ವಿವೇಕಪೂರ್ಣವನ್ನಾಗಿ ಮಾಡುವುದೇ ಧರ್ಮದ ಶ್ರೇಷ್ಠತೆಗೆ ಕಾರಣ ಎಂದು ವಿವರಿಸಲಾಗಿದೆ.
‘ಗೋಳಿನ ತತ್ತ್ವ’ ಅಲ್ಲ
ಎಲ್ಲ ಭಾರತೀಯ ದರ್ಶನಗಳ ಪ್ರಕಾರ, ಸಂಸಾರದ ಕೇಡು ಅಥವಾ ಬಂಧನವು ತನ್ನ ವಿನಾಶಕ್ಕೆ ಕಾರಣವಾಗುವ ಬೀಜವನ್ನು ತಾನೇ ಹೊಂದಿರುತ್ತದೆ. ಅಂದರೆ ಯಾವೊಂದು ಭಾರತೀಯ ದರ್ಶನ ಕೂಡ ಪರಿಣಾಮದಲ್ಲಿ ನಿರಾಶಾವಾದವಲ್ಲ. ಈ ದರ್ಶನಗಳು ‘ಗೋಳಿನ ತತ್ತ್ವ’ ಗಳೆಂಬ ಈಚಿನವರ ಆಪಾದನೆ ಸರ್ವಥಾ ಅಸಾಧು. ಈ ವಿಶ್ವ ಅಂತಿಮವಾಗಿ ಮಂಗಳಕರ ಮತ್ತು ತರ್ಕಸಮ್ಮತವಾದ್ದು ಎನ್ನುವ ನಂಬಿಕೆಯನ್ನು ಸೂಚಿಸುವ ಮಾತುಗಳು ಸಂಸ್ಕøತದಲ್ಲಿ ಅನೇಕ ಇವೆ. ‘ಸತ್’ ಎಂದರೆ ‘ನಿಜವಾಗಿ ಇರುವುದು’ ಎಂಬ ಅರ್ಥವನ್ನು ಕೊಡುವುದರ ಜೊತೆಗೆ ‘ಒಳ್ಳೆಯದು’ ಎನ್ನುವ ಅರ್ಥವನ್ನು ಕೂಡ ಕೊಡುತ್ತದೆ. ‘ಭವ್ಯ’ ಎಂದರೆ ‘ಮುಂದೆ ಆಗಬೇಕಾದ್ದು’ ಎನ್ನುವಂತೆಯೇ ‘ಮಂಗಳಕರ’ ಅಥವಾ ‘ಮುಂದೆ ಉತ್ತಮೋತ್ತಮ’ ಎನ್ನುವ ಅರ್ಥವನ್ನೂ ಕೊಡುತ್ತದೆ.
ಭಾರತೀಯ ಚಿಂತನೆಯ ಶ್ರೀಮಂತಿಕೆಗೆ ಕಾರಣವೆಂದರೆ, ಮಾನವಜೀವನದಲ್ಲಿ ಉಂಟಾಗುವ ದುಃಖದುರಿತಗಳಿಗೆ ಆತ್ಮದ ಸರಿಯಾದ ತಿಳಿವಳಿಕೆಯೇ ಏಕೈಕ ಪರಿಹಾರವೆಂಬ ನಿರಂತರ ನಂಬಿಕೆಯಿದೆ. ಅದರಂತೆ ಆತ್ಮಜ್ಞಾನವು ಮನುಷ್ಯನ ಕರ್ತವ್ಯ-ಬಾಧ್ಯತೆಗಳ ಶ್ರೇಣಿಯಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿಕೊಂಡಿದೆ.
ಐಹಿಕ ಜೀವನದೃಷ್ಟಿ
ಅಂದಿನ ಜನ ತಮ್ಮ ಐಹಿಕಜೀವನವನ್ನು ಬಹಳ ಮೇಲ್ಮಟ್ಟದ ಸುಖಸಂತೋಷಗಳಿಂದ ಬಾಳುತ್ತಿದ್ದರೆಂದು ಋಗ್ವೇದದಿಂದ ನಾವು ತಿಳಿಯುತ್ತೇವೆ. ಸುಖಭೋಗಗಳು ಅಂದು ಸಮೃದ್ಧವಾಗಿದ್ದವು. ಸ್ವರ್ಣಾಭರಣಗಳೂ ಸೊಗಸಾದ ವಸ್ತ್ರಗಳೂ ಹೇರಳವಾಗಿ ದೊರೆಯುತ್ತಿದ್ದವು. ಸಂಗೀತ, ನರ್ತನ ಹಾಗೂ ಕುಶಲಕಲೆಗಳು ಉಚ್ಛ್ರಾಯಸ್ಥಿತಿಯನ್ನು ಮುಟ್ಟಿದ್ದವು. ಈ ಪ್ರಪಂಚವು ದುಃಖಮಯವಾದುದೆಂದು ಋಷಿಗಳು ಭಾವಿಸಿದ್ದರೆಂದು ತೋರಿಸಲು ಋಗ್ವೇದದಲ್ಲಿ ಯಾವ ಆಧಾರವೂ ಇಲ್ಲ. ಈ ಪ್ರಪಂಚದಿಂದ ವಿಮುಕ್ತಿಯನ್ನು ಪಡೆದುಕೊಂಡು ಹೋಗಬೇಕೆಂಬ ಆಕಾಂಕ್ಷೆಯ ಸೂಚನೆ ಕೂಡ ಎಲ್ಲಿಯೂ ಇಲ್ಲ. ಈ ಪ್ರಪಂಚ ಅವರ ದೃಷ್ಟಿಯಲ್ಲಿ ಒಳ್ಳೆಯ ಪ್ರಪಂಚವಾಗಿತ್ತು. ಸ್ವಲ್ಪ ಕಾಲ ತಂಗುವ ವಸತಿಯಂತಿದ್ದ ಈ ಐಹಿಕಜೀವನದಲ್ಲಿ ಒಳ್ಳೆಯ ಬಾಳನ್ನು ಬದುಕಲು ಸಜ್ಜನರಿಗೆ ಈ ಲೋಕ ಅರ್ಹವಾದ ಸ್ಥಾನವೆಂದು ಋಷಿಗಳು ಭಾವಿಸಿದ್ದರು. ಇತರ ಸ್ಥಾನಗಳ ಉನ್ನತ ಜೀವನಕ್ಕೆ ಈ ಲೋಕ ನಿಜವಾಗಿಯೂ ಒಂದು ಸೋಪಾನ. ವೇದಧರ್ಮದಲ್ಲಾಗಲಿ ದರ್ಶನಗಳಲ್ಲಾಗಲಿ ಎಲ್ಲಿಯೂ ನಿರಾಶಾವಾದದ ಪ್ರವರ್ತನೆ ಇಲ್ಲ. ಆದರೆ ಮುಂದಿನ ಲೋಕದಲ್ಲಿ ಲಭಿಸುವ ಆನಂದವನ್ನವರು ಕೊಂಡಾಡಿದ್ದಾರೆ; ಮರಣಾನಂತರ ಸಜ್ಜನರಿಗೆ ಕಾದಿರುವ ವೈಭವವನ್ನವರು ಒತ್ತಿಹೇಳಿದ್ದಾರೆ. ಈ ರೀತಿಯಲ್ಲಿ ಮಾನವನ ಆತ್ಮಕಲ್ಯಾಣದ ಹಾದಿಯಲ್ಲಿ ಈ ಲೋಕ ಅವರಿಗೆ ಒಂದು ಮುಖ್ಯವಾದ ಘಟ್ಟವಾಗಿತ್ತು.
ಮಾನವನ ಮುಂದಿನ ಹಾಗೂ ಇಂದಿನ ಜೀವನಗಳ ಮಧ್ಯೆ ಘರ್ಷಣೆಯೇ ಇರಲಿಲ್ಲ. ಮಾನವಜೀವನವು ಸಮನ್ವಯ ದೃಷ್ಟಿಯಿಂದ ಅಖಂಡವಾಗಿದೆ ಎಂದವರು ಭಾವಿಸಿದ್ದರು. ಮಾನವಕಲ್ಯಾಣವನ್ನೇ ಗುರಿಯನ್ನಾಗಿ ಹೊಂದಿದ ಪೂರ್ಣಜೀವನದ ಆದರ್ಶವನ್ನು ಅವರು ಸ್ಥಾಪಿಸಿದ್ದರು. ನಾಡಿನ ಸಾಮಾಜಿಕ ಜೀವನದಲ್ಲಿ ವಿವಿಧ ವರ್ಗಗಳ ನಡುವೆ ಇದ್ದ ಬಾಂಧವ್ಯ ಮೊದಲಾದವನ್ನು ಅಂದಿನ ಗ್ರಂಥಗಳು ವಿವರಿಸುತ್ತವೆ. ಅವುಗಳಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ವಿವರಣೆಗಳಿಂದ ವೇದಋಷಿಗಳ ಬೌದ್ಧಿಕ ಔನ್ನತ್ಯದ ಸ್ಪಷ್ಟವಾದ ಅರಿವು ನಮಗಾಗುತ್ತದೆ.
ವಿಜ್ಞಾನ ಹೊಸದಲ್ಲ
“ಇಂದು ‘ವಿಜ್ಞಾನ’ವೆಂಬ ಹೆಸರಿನಲ್ಲಿ ಪ್ರಚುರಗೊಂಡಿರುವ ಪ್ರಕ್ರಿಯೆ ಹೊಸದೇನಲ್ಲ; ಪ್ರಾಚೀನ ಭಾರತಕ್ಕೆ ಅದು ಅಪರಿಚಿತವಲ್ಲ. ಅಶ್ವಶಾಸ್ತ್ರ, ಕೃಷಿ, ಜ್ಯೌತಿಷ, ಧನುರ್ವೇದ, ಆಯುರ್ವೇದ, ಲೋಹಶಾಸ್ತ್ರ, ರಸವಿಜ್ಞಾನ – ಇವೆಲ್ಲ ವಿಜ್ಞಾನಗಳೇ. ಒಂದು ವಿಶೇಷತೆಯೆಂದರೆ ಅವನ್ನು ಪೂರ್ವಿಕರು ಎಷ್ಟು ಮಟ್ಟಿಗೆ ಜೀವಪೋಷಕವೋ ಅಷ್ಟುಮಟ್ಟಿಗೆ ಮಾತ್ರ ಬೆಳೆಸಿದರು. ಕೇವಲ ವಿಜ್ಞಾನಕ್ಕಾಗಿ ವಿಜ್ಞಾನ ಎಂಬಂತೆ ಅದನ್ನು ಬೆಳೆಸಲಿಲ್ಲ. ಹೀಗೆ ಭೌತವ್ಯವಹಾರಗಳಿಗೆ ಒಂದು ಪರಿಧಿ ಹಾಕಿಕೊಂಡಿದ್ದರಿಂದಲೇ ನಮ್ಮ ನಾಗರಿಕತೆ ಅಷ್ಟು ದೀರ್ಘಕಾಲ ಮುಂದುವರಿಯಿತು. ಗ್ರೀಕ್ ಮೊದಲಾದ ನಾಗರಿಕತೆಗಳು ಕೆಲವು ಶತಮಾನಗಳ ಕಾಲ ವಿಜೃಂಭಿಸಿ ಮರೆಯಾದುದಕ್ಕೆ ಪ್ರಮುಖ ಕಾರಣ ಅವು ಇಂಥ ಸಮನ್ವಯಪ್ರಜ್ಞೆಯನ್ನು ರೂಢಿಸಿಕೊಳ್ಳದಿದ್ದುದು” ಎಂದು ಎಸ್.ಆರ್. ರಾಮಸ್ವಾಮಿ ಅವರು ಅಭಿಪ್ರಾಯಪಡುತ್ತಾರೆ (ನೋಡಿ – ಪ್ರಬಂಧಸಂಗ್ರಹ ‘ಧ್ರುವಜಲ’). “ಒಂದೊಂದು ನಾಗರಿಕತೆಗೆ ಒಂದೊಂದು ಗಡಿ ಇರುತ್ತದೆ. ವಿಹಿತ ಗಡಿಗಳನ್ನು ಉಲ್ಲಂಘಿಸಿದುದರಿಂದಲೇ ಎಷ್ಟೋ ನಾಗರಿಕತೆಗಳು ಅವಸಾನಗೊಂಡದ್ದು. ಭಾರತೀಯರು ತಮ್ಮ ನಾಗರಿಕತೆಗೆ, ಜೀವನಕ್ಕೆ ಗಡಿ ಎಂದು ಭಾವಿಸಿದುದು ಧರ್ಮವನ್ನು” ಎಂದೂ ಅವರು ಹೇಳಿದ್ದಾರೆ.
ಹೀಗೆ ಒಟ್ಟಾರೆಯಾಗಿ ನೋಡಿದರೆ ಹಿಂದೂ ಸಂಸ್ಕøತಿ ಅಥವಾ ಭಾರತದ ನಾಗರಿಕತೆಯು ಸಹಸ್ರಾರು ವರ್ಷಗಳಿಂದ ಶಾಶ್ವತವಾಗಿ ಉಳಿದುಬಂದಿತು ಎಂಬಲ್ಲಿಗೇ ನಾವು ಮತ್ತೆ ಮರಳಬೇಕಾಗುತ್ತದೆ. ಏಕೆ ಉಳಿದುಬಂದಿತು ಎನ್ನುವುದರಲ್ಲೇ ಅದರ ಶ್ರೇಷ್ಠತೆಯೂ ಅಡಗಿದೆ.
***