ಪ್ರಪಂಚದ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶದ ಸಾಧನೆಯಾಗುವವರೆಗೂ ಅದು ಜೀವಿಸಿರುತ್ತದೆ ಎನ್ನುತ್ತಾರೆ. ಉದ್ದೇಶದ ಸಾಧನೆಯಾದೊಡನೆಯೇ ಅದು ತನ್ನ ಅಸ್ತಿತ್ವವನ್ನು ಈ ಪ್ರಕೃತಿಯಲ್ಲಿ ವಿಲೀನಗೊಳಿಸಿಕೊಳ್ಳುತ್ತದೆ. ನಮ್ಮೆಲ್ಲರ ಶರೀರದಲ್ಲಿರುವ ಚೈತನ್ಯ ಅವಿನಾಶಿ, ಮಾತ್ರವಲ್ಲ ವಿಶ್ವದ ನಿಯಾಮಕವಾಗಿರುವ ಆ ಬೃಹತ್ ಚೈತನ್ಯದ ಒಂದು ಅಂಶ. ಅದು ಆ ಬೃಹತ್ ಚೈತನ್ಯದಿಂದಲೇ ಹೊರಟು ಅನೇಕ ಜೀವಯೋನಿಗಳ ಮೂಲಕ ಹಾದು ಕೊನೆಗೆ ಆ ಬೃಹತ್ ಚೈತನ್ಯದಲ್ಲಿಯೇ ಒಂದಾಗುತ್ತದೆ. ಪ್ರತಿ ಜೀವಿಯ ಯಾತ್ರೆಯೂ ಆಯಾ ದೇಹದಲ್ಲಿರುವಾಗ ಮಾಡಿದ ಕರ್ಮದ ಫಲಗಳಿಗೆ ಅನುಗುಣವಾಗಿ ಅದರ ಮುಂದಿನ ಜೀವನ ನಿಶ್ಚಯವಾಗುತ್ತದೆ. ಈ ಜನ್ಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಉತ್ತಮ ಫಲ (ಅದನ್ನೇ ನಮ್ಮಲ್ಲಿ ಪುಣ್ಯ ಎನ್ನಲಾಗುತ್ತದೆ) ದೊರೆತು, ಮುಂದಿನ ಜನ್ಮವೂ ಉತ್ತಮವಾಗಿದ್ದು ಆ ಬೃಹತ್ ಚೈತನ್ಯದೊಡನೆ ಒಂದಾಗಲು (ಮೋಕ್ಷ) ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ. ಈ ಜನ್ಮದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿದಾಗ ಅದರ ಫಲವೂ ಕೆಟ್ಟದ್ದಾಗಿ (ಇದೇ ಪಾಪ) ಜೀವಿಯ ಅವನತಿಯೂ ಆಗಿ ಮುಂದಿನ ಜನ್ಮಗಳಲ್ಲಿ ಮೋಕ್ಷಕ್ಕೆ ಹೆಚ್ಚು ಕಷ್ಟಪಡಬೇಕಾಗುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಜೀವನದಲ್ಲಿ ಸದಾಕಾಲ ಒಳ್ಳೆಯದನ್ನೇ ಮಾಡಬೇಕು, ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದಾರೆ.
ಪ್ರಪಂಚದಲ್ಲಿ ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡುವ ಅವಕಾಶ ಇರುವುದು ಮನುಷ್ಯನಿಗೆ ಮಾತ್ರ. ಕಾರಣ ವಿವೇಚನೆ ಎಂಬ ಶಕ್ತಿಯನ್ನು ಭಗವಂತ ಮಾನವನಿಗೆ ಮಾತ್ರ ನೀಡಿದ್ದಾನೆ. ಹಾಗಾಗಿ ಆತ ರಾಕ್ಷಸನೂ ಆಗಬಲ್ಲ, ದೇವತೆಯೂ ಆಗಬಲ್ಲ. ಉಳಿದೆಲ್ಲ ಪ್ರಾಣಿಗಳಿಗೆ ವಿವೇಚನೆ ಎಂಬುದಿಲ್ಲ. ಅವೆಲ್ಲ ತಮ್ಮ ಪ್ರಕೃತಿಯಂತೆ ವ್ಯವಹರಿಸುತ್ತವೆ. ಉದಾಹರಣೆಗೆ ಪ್ರಪಂಚದ ಯಾವುದೇ ಪ್ರಾಣಿ ಇನ್ನೊಂದು ಪ್ರಾಣಿಯನ್ನು ವಂಚಿಸುವುದಿಲ್ಲ. ಮನುಷ್ಯನು ಮೋಸ ಮಾಡುತ್ತಾನೆ. ಯಾವುದೇ ಪ್ರಾಣಿ ಸ್ವಾರ್ಥಿಯಲ್ಲ. ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಅವು ಪರಸ್ಪರ ಕಾದಾಡಬಹುದು. ಹೊಟ್ಟೆ ತುಂಬಿದ ನಂತರ ನಾಳೆಗೂ ಬೇಕೆಂದು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯನು ಮಾತ್ರ ಕಾದಾಡುವುದರ ಜೊತೆಗೆ ಸಂಗ್ರಹಿಸಿಟ್ಟುಕೊಳ್ಳುತ್ತಾನೆ. ತನಗಾಗಿ ಮಾತ್ರವಲ್ಲ ತನ್ನ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಸಂಗ್ರಹಿಸುತ್ತಾನೆ. ಸಂಗ್ರಹದ ಸಂದರ್ಭದಲ್ಲಿ ಬೇರೆಯವರಿಗೆ ಹಾನಿ ಮಾಡಲೂ ಹಿಂಜರಿಯುವುದಿಲ್ಲ. ಮನುಷ್ಯನ ಹೊರತಾಗಿ ಪ್ರಾಣಿಗಳಿಗೆ ಯಾವುದೇ ಜೀವಿ, ವಸ್ತು, ವಿಷಯಗಳ ಬಗ್ಗೆ ಮೋಹವೂ ಇರುವುದಿಲ್ಲ. ಆದರೆ ಮಾನವನು ಮೋಹಕ್ಕೊಳಗಾಗಿ ಬಂಧನಗಳಿಗೆ ಒಳಗಾಗಿ ನರಳುತ್ತಾನೆ. ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿಯೆ ಮನೀಷಿಗಳು ಮಾನವನ ಸಾರ್ಥಕ ಜೀವನದ ಬಗ್ಗೆ ಚಿಂತನೆ ಮಾಡಿದರು.
ಸಾರ್ಥಕ ಜೀವನ ಎಂದರೇನು?
ಪ್ರತಿಯೊಬ್ಬನೂ ಬೆಳೆಯುತ್ತಿದ್ದಂತೆ ತನ್ನ ಮುಂದಿನ ಜೀವನದ ಬಗ್ಗೆ ಕಲ್ಪನೆಗಳನ್ನು ಮಾಡಿಕೊಳ್ಳುತ್ತಾನೆ. ತಾನು ತನ್ನ ಮುಂದಿನ ಜೀವನದಲ್ಲಿ ಸುಖವಾಗಿ ಬದುಕಬೇಕು, ಅದಕ್ಕಾಗಿ ಕೆಲವು ಗಳಿಕೆಗಳನ್ನು ಮಾಡಬೇಕು ಎಂದು ಪ್ರಯತ್ನಿಸುತ್ತಾನೆ. ಆಗ ಅವನಿಗೆ ಸಂಪತ್ತು, ಅಧಿಕಾರ, ಪ್ರಸಿದ್ಧಿ ಇತ್ಯಾದಿಗಳು ಬೇಕೆನಿಸುತ್ತವೆ. ಅದಕ್ಕೆ ಪ್ರಯತ್ನಿಸುತ್ತಾನೆ. ಅದಕ್ಕಾಗಿ ನ್ಯಾಯಯುತ ಅಥವಾ ಅನ್ಯಾಯದ ದಾರಿಯನ್ನು ಹಿಡಿಯುತ್ತಾನೆ. ಒಟ್ಟಿನಲ್ಲಿ ತನ್ನ ಗುರಿ ಸಾಧಿಸಬೇಕೆಂಬ ತುಡಿತ ಅಥವಾ ಅನ್ಯಾಯದ ಹಠ ಅವನಲ್ಲಿ ಕಾಣಿಸಿ ಅನೇಕ ರೀತಿಯ ಸಾಮಾಜಿಕ ಉತ್ಪಾತಗಳಿಗೆ ಕಾರಣನಾಗುತ್ತಾನೆ. ಮನುಷ್ಯನು ಸಂಪತ್ತು, ಅಧಿಕಾರ, ಪ್ರಸಿದ್ಧಿಗಳ ಬೆನ್ನುಹತ್ತಿದಂತೆ ಪರಸ್ಪರ ಹಿತಾಸಕ್ತಿಗಳಲ್ಲಿ ತಾಕಲಾಟ ಉಂಟಾಗಿ ಸಂಘರ್ಷಗಳು ಪ್ರಾರಂಭವಾದವು. ಅದರ ಪರಿಣಾಮವಾಗಿ ಸುಖವು ಮರೀಚಿಕೆಯಾಯಿತು. ಒಂದೊಮ್ಮೆ ಅಂದುಕೊಂಡಿದ್ದನ್ನು ಸಾಧಿಸಿದಾಗಲೂ ಅದರಿಂದ ತೃಪ್ತಿ ಇಲ್ಲದೆ ಇನ್ನಷ್ಟು, ಮತ್ತಷ್ಟು ಬೇಕೆಂಬ ಆಸೆ ಬೆಳೆಯತೊಡಗಿತು. ಪರಿಣಾಮ ಇನ್ನಷ್ಟು ಅಶಾಂತಿ, ಅಸಹನೆ, ಇನ್ನೂ ದೊಡ್ಡ ಸಂಘರ್ಷವೇ ಅವನ ಪಾಲಿಗೆ ದಕ್ಕಿತು. ಹೀಗೆಂದರೆ ಮನುಷ್ಯನ ಸುಖವಿರುವುದು ಅವನು ಗಳಿಸಿದ ವಸ್ತು, ವಿಷಯಗಳಲ್ಲಿ ಅಲ್ಲ ಎಂಬುದು ಸಿದ್ಧವಾಯಿತು. ಹಾಗಾದರೆ ಸುಖ ಯಾವುದರಲ್ಲಿದೆ? ಸುಖ ಎನ್ನುವುದು ಯಾವುದೇ ವಸ್ತುವಿನಲ್ಲಿ ಇಲ್ಲ, ಅದು ಇರುವುದು ಅವನ ಮನಸ್ಸಿನಲ್ಲಿ. ಇಂದ್ರಿಯಗಳ ಮೂಲಕ ಮನುಷ್ಯ ಸುಖವನ್ನು ಗ್ರಹಿಸುತ್ತಾನೆ. ಯಾವುದೋ ಒಂದು ಹಂತದಲ್ಲಿ ಸುಖವನ್ನು ಗ್ರಹಿಸುವುದರಲ್ಲಿ ಇಂದ್ರಿಯಗಳು ವಿಫಲವಾಗುತ್ತವೆ. ಸಿಹಿ ಎಲ್ಲರಿಗೂ ಪ್ರಿಯವಾದ ವಸ್ತು, ಸಿಹಿ ತಿನ್ನಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಒಂದು ಹಂತ ದಾಟಿದಾಗ ವ್ಯಕ್ತಿಗೆ ಆ ಸಿಹಿ ಬೇಡವಾಗುತ್ತದೆ. ಕಾರಣವೇನು? ಸುಖ ನಿಜವಾಗಿಯೂ ಸಿಹಿಯಾದ ವಸ್ತುವಿನಲ್ಲಿಯೇ ಇದ್ದಿದ್ದರೆ ಅದನ್ನು ತಿಂದಷ್ಟೂ ಸುಖ ಹೆಚ್ಚಬೇಕಾಗಿತ್ತು. ಅವನು ಅದರಿಂದ ವಿಮುಖನಾಗಬಾರದಿತ್ತು. ಸಿಹಿ ಏನೂ ಬದಲಾಗಿಲ್ಲ. ಆದರೆ ಸಿಹಿ ತಿಂದರೆ ಆಗುವ ಸುಖ ಆ ಸಿಹಿಯಲ್ಲಿ ಇಲ್ಲದೇ ಅವನ ಮನಸ್ಸಿನಲ್ಲಿತ್ತು. ಕ್ರಮೇಣ ಮನಸ್ಸು ಸಿಹಿಯಿಂದ ವಿಮುಖವಾಯಿತು. ಹೀಗೆ ಸುಖ ಎಂಬುದು ಮನುಷ್ಯನ ಮನಸ್ಸಿನ ಒಂದು ವಿಶೇಷವಾದ ಸ್ಥಿತಿ, ಅದನ್ನು ತನ್ನೊಳಗೇ ಕಂಡುಕೊಳ್ಳಬೇಕು ಎಂದು ಹೇಳುತ್ತಾರೆ ಪ್ರಾಜ್ಞರು. ಈ ಸುಖಾನುಭೂತಿಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದು, ಸದಾಕಾಲ ಅದರಲ್ಲಿಯೇ ಇರುವುದು – ಇದೇ ಮಾನವನು ನಿಜವಾಗಿ ಸಾಧಿಸಬೇಕಾದದ್ದು. ಇದನ್ನು ಸಾಧಿಸುವುದೇ ಜೀವನದ ಸಾರ್ಥಕತೆ.
ಸುಖದ ಮಜಲುಗಳು
ಸುಖ ಎನ್ನುವುದು ಒಂದು ಶಬ್ದ, ಒಂದು ಮಾನಸಿಕ ಸ್ಥಿತಿ. ಆದರೂ ಅದು ಒಂದೇ ಅಲ್ಲ. ಅದರ ಸ್ತರಗಳು ಬೇರೆಬೇರೆ ಇರುತ್ತವೆ. ಮನುಷ್ಯ ಒಬ್ಬನಾದರೂ ಅವನೊಳಗೆ ಅನೇಕ ಘಟಕಗಳಿವೆ. ಶರೀರ, ಮನಸ್ಸು, ಬುದ್ಧಿ, ಆತ್ಮಗಳಿಂದ ಕೂಡಿರುವವನು ಮನುಷ್ಯ. ಸುಖ ಎನ್ನುವುದು ಈ ನಾಲ್ಕಕ್ಕೂ ಸಂಬಂಧಪಟ್ಟಿದೆ. ಆದರೆ ಬೇರೆಬೇರೆಯಾಗಿದೆ. ಪಂಚೇಂದ್ರಿಯಗಳಿಂದ ಸಿಗುವ ಸುಖ ಶಾರೀರಿಕ ಸುಖ – ತಿನ್ನುವುದು, ಕುಡಿಯುವುದು, ನೋಡುವುದು, ಮೂಸುವುದು, ಕೇಳುವುದು, ಸ್ಪರ್ಶಿಸುವುದೆಲ್ಲ ಇದರಲ್ಲಿ ಸೇರಿದೆ. ಮನಸ್ಸಿಗೆ ಸಂಬಂಧಪಟ್ಟಿರುವ ಸುಖ ಮಾನಸಿಕ ಸುಖ. ಒಳ್ಳೆಯ ಪುಸ್ತಕ ಓದಿದರೆ, ಒಂದು ಗಣಿತದ ಸಮಸ್ಯೆಯನ್ನು ಬಿಡಿಸಿದರೆ ಸಿಗುವ ಸುಖ ಮಾನಸಿಕ ಸುಖ. ಒಳ್ಳೆಯ ಓದಿನಲ್ಲಿ ಮಗ್ನನಾದವನಿಗೆ ಊಟ, ತಿಂಡಿ, ಆಟ ಯಾವುದೂ ಬೇಡ ಎನಿಸುತ್ತದೆ. ಕಾರಣ ಅವನಿಗೆ ಮಾನಸಿಕ ಸುಖ ಸಿಗುತ್ತದೆ. ಬುದ್ಧಿಯ ಸುಖ ಇದಕ್ಕಿಂತ ಮೇಲ್ಮಟ್ಟದ್ದು. ಆತ್ಮಕ್ಕೂ ಒಂದು ಸುಖವಿದೆ. ಉದಾರತೆ, ವಿಶಾಲತೆ, ತನ್ನಂತೆ ಎಲ್ಲರನ್ನೂ ಭಾವಿಸುವುದು, ಇನ್ನೊಬ್ಬರ ಸುಖದಲ್ಲಿ ತನ್ನ ಸುಖ ಕಾಣುವುದು, ಇನ್ನೊಬ್ಬರ ಸುಖಕ್ಕಾಗಿ ತಾನು ಕಷ್ಟಪಡುವುದು – ಇವೆಲ್ಲ ಆತ್ಮಿಕ ಸುಖದ ಲಕ್ಷಣಗಳು. ಆತ್ಮಿಕ ಸುಖವೇ ಶ್ರೇಷ್ಠವಾದ ಸುಖ ಎನ್ನಲಾಗುತ್ತದೆ.
ಈ ಆತ್ಮಿಕ ಸುಖವನ್ನು ಪಡೆಯುವುದೇ ವೈಯಕ್ತಿಕವಾಗಿ ಒಬ್ಬನ ಜೀವನದ ಅಂತಿಮ ಗುರಿಯಾಗಿರುತ್ತದೆ. ಆದರೆ ಇದನ್ನು ಸಾಧಿಸಲು ಆತ ತ್ಯಾಗಿಯಾಗುವುದು, ಪರೋಪಕಾರಿಯಾಗುವುದು, ಇನ್ನೊಬ್ಬರ ಕುರಿತು ಉದಾರವಾಗಿ ಚಿಂತಿಸುವುದು ಅನಿವಾರ್ಯ. ಇಂತಹ ಜೀವನ ನಡೆಸಿರುವವರನ್ನೇ ಜನರು ದೀರ್ಘಕಾಲ ನೆನಪಿಸಿಕೊಳ್ಳುತ್ತಾರೆ. ಇಂತಹ ಜೀವನವನ್ನೇ ಸಾರ್ಥಕ ಜೀವನ ಎನ್ನುತ್ತಾರೆ. ಅದೊಂದು ಆದರ್ಶ ಜೀವನ ಎನ್ನುತ್ತಾರೆ.
ನಾವು ‘ಶ್ರೇಷ್ಠರು’ ಎಂದು ಗುರುತಿಸುವ ಎಲ್ಲರ ಜೀವನದಲ್ಲೂ ಈ ಗುಣಗಳನ್ನೇ ಕಾಣುತ್ತೇವೆ. ದಧೀಚಿ ಋಷಿ ವಜ್ರಾಯುಧದ ನಿಮಾರ್ಣಕ್ಕಾಗಿ ತನ್ನ ಬೆನ್ನೆಲುಬನ್ನೇ ನೀಡಿದ. ಅದನ್ನು ನೀಡಿದರೆ ತನ್ನ ಅಸ್ತಿತ್ವವೇ ನಷ್ಟವಾಗುವುದೆಂದು ತಿಳಿದೂ ನೀಡಿದ. ಅದಕ್ಕಾಗಿ ಆತ ಶ್ರೇಷ್ಠ. ರಾಜಾ ರಂತಿದೇವ ‘ನನಗೆ ಸ್ವರ್ಗಮೋಕ್ಷಗಳಾವುವೂ ಬೇಡ, ನೊಂದ ಜೀವಿಗಳ ದುಃಖದ ಶಮನವನ್ನು ಮಾಡುವ ಅವಕಾಶ ಮಾತ್ರ ಸಿಗಲಿ’ ಎಂದ. ಶಿಬಿಚಕ್ರವರ್ತಿ ಪುಟ್ಟ ಪಾರಿವಾಳವನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ. ಭೂಮಿಗೆ ಗಂಗೆಯನ್ನು ತರಲು ಸಗರನಿಂದ ಭಗೀರಥನವರೆಗೆ ನಾಲ್ಕೈದು ತಲೆಮಾರುಗಳ ರಾಜರು ಶ್ರಮಿಸಿದರು. ಪರಶುರಾಮ ದುಷ್ಟಕ್ಷತ್ರಿಯರನ್ನೆಲ್ಲ ನಾಶಮಾಡಿದ ನಂತರ ಅವರಿಂದ ಗೆದ್ದ ಭೂಮಿಯನ್ನೆಲ್ಲ ಕಶ್ಯಪಋಷಿಗೆ ದಾನಮಾಡಿ ತಪಸ್ಸಿಗೆ ನಡೆದ. ಹಾಗಾಗಿ ಅವನು ಅವತಾರಪುರುಷನೆನಿಸಿದ. ಶ್ರೀರಾಮ ಅಯೋಧ್ಯೆಯನ್ನು ಭರತನಿಗೆ ಬಿಟ್ಟುಕೊಟ್ಟ. ವಾಲಿಯನ್ನು ಕೊಂದನಂತರ ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟ. ರಾವಣನ ಮೇಲೆ ಯುದ್ಧ ಆರಂಭ ಆಗುವ ಮೊದಲೇ ವಿಭೀಷಣನಿಗೆ ಲಂಕೆಯನ್ನು ಕೊಟ್ಟ. ರಾಜನು ಶತ್ರುವಿನ ಮನೆಯಲ್ಲಿದ್ದವಳನ್ನು ಸ್ವೀಕರಿಸಿದನೆಂಬ ಆರೋಪ ಬಂದಾಗ ಪತ್ನಿಯನ್ನೇ ತ್ಯಜಿಸಿದ. ಹೀಗೆ ರಾಮಾಯಣವೆಂಬುದು ರಾಮನ ಸುಖ-ಸಂತೋಷಗಳ ಕಥೆ ಅಲ್ಲವೇ ಅಲ್ಲ. ಅದು ಅವನ ತ್ಯಾಗದ ಕಥೆ. ಈ ಕಥೆ ನಡೆದು ಕೋಟ್ಯಂತರ ವರ್ಷಗಳೇ ಆದರೂ ಇಂದಿಗೂ ರಾಮ ನಮಗೆ ಆದರ್ಶ. ಇಂದಿಗೂ ಮಕ್ಕಳಿಗೆ ಅವನ ಹೆಸರನ್ನು ಇಡುತ್ತೇವೆ, ಅವನಂತೆಯೇ ಆಗು ಎನ್ನುತ್ತೇವೆ. ಧರ್ಮರಾಜನಾದರೋ ತನ್ನೊಡನೆ ಬಂದ ನಾಯಿಗೆ ಸ್ವರ್ಗ ಸಿಗದಿದ್ದರೆ ತನಗೂ ಸ್ವರ್ಗ ಬೇಡವೇ ಬೇಡ ಎಂದ. ಶ್ರೀಕೃಷ್ಣ ತನ್ನ ಜೀವನದಲ್ಲಿ ಅನೇಕ ದುಷ್ಟ ರಾಜರನ್ನು ಸಂಹರಿಸಿದ, ಪಾಂಡವರ ಸಹಾಯದಿಂದ ಕೊಲ್ಲಿಸಿದ. ಆದರೆ ಯಾರ ರಾಜ್ಯವನ್ನೂ ತಾನು ಇಟ್ಟುಕೊಳ್ಳಲಿಲ್ಲ. ಅವನೆಂದೂ ರಾಜನಾಗಲಿಲ್ಲ ಅದಕ್ಕಾಗಿಯೇ ಅವನು ನಮಗೆ ಪೂಜ್ಯ. ಹೀಗೆ ತ್ಯಾಗದಿಂದಲೇ ಅಮರತ್ವ ಪ್ರಾಪ್ತಿ (ತ್ಯಾಗೇನೈಕೇ ಅಮೃತತ್ವಮಾನಶುಃ) ಎಂದಿದ್ದಾರೆ ನಮ್ಮ ಹಿರಿಯರು.
ಮನುಷ್ಯ ತನ್ನ ಚಿಂತನೆಯಿಂದಾಗಿ ಸ್ವಾರ್ಥಿಯಾಗುತ್ತಾನೆ. ಸ್ವಾರ್ಥ ಬೇಕು, ಆದರೆ ಅದು ಅತಿಯಾದರೆ ಅದರಿಂದ ಹಾನಿ. ತನಗೆ ಮಾತ್ರವಲ್ಲ ಎಲ್ಲರಿಗೂ ಹಾನಿಯಾಗುತ್ತದೆ. ಸ್ವಾರ್ಥಿಯಾಗುವುದಕ್ಕಿಂತ ಪರೋಪಕಾರಿಯಾಗುವುದರಲ್ಲೇ ತನಗೂ ಸಮಾಜಕ್ಕೂ ಹಿತವಿದೆ. ನಮ್ಮ ಸುತ್ತಮುತ್ತಲಿನ ಸಣ್ಣಸಣ್ಣ ಉದಾಹರಣೆಗಳ ಮೂಲಕ ಇದನ್ನು ಅರ್ಥಮಾಡಿಸುವ ಕೆಲಸವನ್ನೂ ನಮ್ಮ ಪ್ರಾಚೀನರು ಮಾಡಿದ್ದಾರೆ.
ಪರೋಪಕಾರಾಯ ಫಲಂತಿ ವೃಕ್ಷಾಃ (ಮರಗಳು ಫಲನೀಡುವುದು ಇತರರಿಗಾಗಿ)|
ಪರೋಪಕಾರಾಯ ವಹಂತಿ ನದ್ಯಃ (ನದಿಗಳು ಹರಿಯುವುದು ಇತರರಿಗಾಗಿ)||
ಪರೋಪಕಾರಾಯ ದುಹಂತಿ ಗಾವಃ (ಹಸುಗಳು ಹಾಲು ನೀಡುವುದು ಇತರರಿಗಾಗಿ)|
ಪರೋಪಕಾರಾರ್ಥಮಿದಂ ಶರೀರಮ್ (ಈ ಶರೀರವೂ ಪರೋಪಕಾರಕ್ಕಾಗಿಯೇ ಮಿಸಲಾಗಲಿ)||
ಜೀವನದಲ್ಲಿ ವ್ಯಕ್ತಿಯೊಬ್ಬನು ಪಡೆದುಕೊಳ್ಳುವುದಕ್ಕಿಂತ ನೀಡುವುದು ಹೆಚ್ಚಾಗಬೇಕು. ಆಗಲೇ ಅದಕ್ಕೆ ಸಾರ್ಥಕತೆ (“ಜೀವನೇ ಯಾವದಾದಾನಂ ಸ್ಯಾತ್ ಪ್ರದಾನಂ ತತೋýಧಿಕಮ್). ನೂರು ಕೈಗಳಿಂದ ಸಂಪಾದಿಸು, ಸಹಸ್ರ ಕೈಗಳಿಂದ ಹಂಚು (ಶತಹಸ್ತಂ ಸಮಾಹರ, ಸಹಸ್ರಂ ತು ವಿಕಿರ) ಮುಪ್ಪು ಸಾವುಗಳಿಲ್ಲದವನೆಂದು ತಿಳಿದು ಸಂಪಾದನೆ ಮಾಡು; ಆದರೆ ಯಮ ನಿನ್ನ ಜುಟ್ಟನ್ನು ಹಿಡಿದೆಳೆಯುತ್ತಿದ್ದಾನೆಂದು ತಿಳಿದು ಧರ್ಮಕಾರ್ಯದಲ್ಲಿ ತೊಡಗು (ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್| ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||). ಇತ್ಯಾದಿಗಳೆಲ್ಲವೂ ಮನುಷ್ಯ ಸಂಗ್ರಹಿಸುವುದಕ್ಕಿಂತ ಹೆಚ್ಚಾಗಿ ನೀಡಬೇಕೆಂಬುದನ್ನು ಮನಗಾಣಿಸುತ್ತವೆ.
ವ್ಯಕ್ತಿ–ಸಮಾಜದ ಸಂಬಂಧಗಳು
ಮನುಷ್ಯನನ್ನು ಸಂಘಜೀವಿ ಎನ್ನುತ್ತಾರೆ. ಹುಟ್ಟಿನಿಂದ ಸಾಯುವವರೆಗೂ ಆತ ಉಳಿದವರ ಜೊತೆಯಲ್ಲಿಯೇ ಬದುಕಬೇಕಾಗುತ್ತದೆ. ಉಳಿದೆಲ್ಲ ಜೀವಿಗಳಿಗಿಂತಲೂ ಮನುಷ್ಯ ಇತರರ ಮೇಲೆ ಅವಲಂಬಿತನಾಗುವ ಪ್ರಮಾಣ ಹೆಚ್ಚು. ಪ್ರಾಣಿಗಳು ಅನ್ಯಪ್ರಾಣಿಗಳ ಮೇಲೆ ಅವಲಂಬಿತವಾಗುವ ಪ್ರಮಾಣ ತುಂಬಾ ಕಡಮೆ. ಪಕ್ಷಿಗಳು ಹಾರುವುದನ್ನು ಕಲಿಯುವ ತನಕ, ಪ್ರಾಣಿಗಳು ಬೇಟೆಯಾಡುವುದನ್ನು ಕಲಿಯುವ ತನಕ, ಹಸು ಎಮ್ಮೆ ಇತ್ಯಾದಿಗಳ ಕರುಗಳು ತಾಯಿ ಮೊಲೆಹಾಲು ನೀಡುವವರೆಗೆ ತಾಯಿಯನ್ನು ಅವಲಂಬಿಸಿರುತ್ತವೆ. ಆನಂತರ ಬದುಕಿನುದ್ದಕ್ಕೂ ಅವು ಸ್ವತಂತ್ರವೇ. ಆದರೆ ಮನುಷ್ಯ ಹಾಗಲ್ಲ. ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳುವುದನ್ನು ಕಲಿತ ನಂತರವೂ ಆತ ತನ್ನ ಕೆಲಸಗಳಿಗಾಗಿ ಇತರರನ್ನು ಅವಲಂಬಿಸುತ್ತಲೇ ಇರುತ್ತಾನೆ. ಅವನಿಗೆ ವಸ್ತ್ರ ನೇಯ್ದುಕೊಡುವವರು ಬೇರೆ, ಬಟ್ಟೆ ಹೊಲಿದುಕೊಡುವವರು ಬೇರೆ, ಶಾಲೆ ನಡೆಸುವವರು, ಪಾಠಮಾಡುವವರು, ಆಹಾರಧಾನ್ಯಗಳನ್ನು ಒದಗಿಸುವವರು, ಮನೆಕಟ್ಟುವವರು, ವಾಹನಗಳನ್ನು ನಿರ್ಮಿಸಿಕೊಡುವವರು….. ಹೀಗೆ ಪ್ರತಿಯೊಂದಕ್ಕೂ ಬೇರೆಯವರನ್ನು ಅವಲಂಬಿಸಿರುತ್ತಾನೆ. ಅದೇ ರೀತಿ ತಾನೂ ಏನೋ ಕೆಲಸ ಮಾಡುತ್ತ ಇತರರ ಆವಶ್ಯಕತೆಗಳನ್ನು ಪೂರೈಸುತ್ತಾನೆ. ಆದರೆ ಬೇರೆಯವರಿಂದ ಪಡೆದದ್ದು ಮತ್ತು ಬೇರೆಯವರಿಗೆ ನೀಡಿದ್ದು ಈ ಎರಡನ್ನೂ ತುಲನೆ ಮಾಡಿದಾಗ ನೀಡಿದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು ಎಂಬ ಅರಿವಾಗುತ್ತದೆ. ಇದನ್ನು ನಮ್ಮಲ್ಲಿ ಋಣ (ಸಾಲ) ಎಂದಿದ್ದಾರೆ. ಪ್ರತಿಯೊಬ್ಬನ ಮೇಲೂ ಹಲವು ತರಹದ ಋಣಗಳಿರುತ್ತವೆ. ಮಾತೃಋಣ, ಪಿತೃಋಣ; ಭ್ರಾತೃ, ಗುರು, ಮಿತ್ರ, ಸಮಾಜದ ಋಣಗಳಿವು. ಈ ಋಣಗಳೆಲ್ಲವನ್ನೂ ತೀರಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ.
ಈ ಋಣಸಂದಾಯಕ್ಕೆ ಸಂಬಂಧಿಸಿದಂತೆ ನಮ್ಮ ಮನೋಭಾವ ಹೇಗಿರಬೇಕೆಂಬುದನ್ನು ತಿಳಿಸಿದ್ದಾರೆ. ಪ್ರಾಚೀನರು ಯಾರ ಋಣ ನಮ್ಮ ಮೇಲಿರುತ್ತದೆ ಎಂದು ಭಾವಿಸುತ್ತೇವೋ ಅವರನ್ನು ದೇವರೆಂದೇ ತಿಳಿದು ಅವರ ಸೇವೆ ಮಾಡಬೇಕು. ಅದಕ್ಕಾಗಿ ಹೇಳಿದ್ದಾರೆ:
ಮಾತೃದೇವೋ ಭವ (ತಾಯಿ ನಿನಗೆ ದೇವರಾಗಲಿ).
ಪಿತೃದೇವೋ ಭವ (ತಂದೆ ನಿನಗೆ ದೇವರಾಗಲಿ).
ಆಚಾರ್ಯದೇವೋ ಭವ (ನಿನಗೆ ಕಲಿಸಿದ ಆಚಾರ್ಯರು ನಿನಗೆ ದೇವರಾಗಲಿ).
ಇದನ್ನೇ ಮುಂದುವರಿಸಿ ವಿವೇಕಾನಂದರು ದೀನದೇವೋ ಭವ, ದರಿದ್ರದೇವೋ ಭವ, ಮೂರ್ಖದೇವೋ ಭವ ಎಂದು ವಿಸ್ತರಿಸಿ ಹೇಳಿದ್ದಾರೆ. ಹೀಗೆ ತಾಯಿ, ತಂದೆ, ಆಚಾರ್ಯ, ಅತಿಥಿ, ದೀನರು, ದರಿದ್ರರು, ರೋಗಿಗಳು, ಮೂರ್ಖರು ಎಲ್ಲರೂ ನನಗೆ ದೇವರು ಎಂದಾದರೆ ಅದೇ ಅಂತಿಮವಾಗಿ ಸಮಾಜದೇವೋ ಭವ, ರಾಷ್ಟ್ರ ದೇವೋ ಭವ ಆಗಿ ಬದಲಾಗುತ್ತದೆ. ಹೀಗೆ ಸಮಾಜದ ಹಿತದ ಕುರಿತು ಎಲ್ಲರೂ ಚಿಂತಿಸಿದಾಗ ಎಲ್ಲರ ಒಟ್ಟು ಸತ್ಕಾರ್ಯಗಳ ಫಲವಾಗಿ ಆ ಸಮಾಜ, ರಾಷ್ಟ್ರ ಸುಖ ಸಮೃದ್ಧವಾಗುತ್ತದೆ.
ವ್ಯಕ್ತಿ-ಸಮಾಜಗಳ ನಡುವಿನ ಸಂಬಂಧವನ್ನು ಪಂಡಿತ ದೀನದಯಾಳ ಉಪಾಧ್ಯಾಯರು ಸುಂದರವಾಗಿ ವಿವರಿಸಿದ್ದಾರೆ. ಸಮಾಜ ಎನ್ನುವುದು ಬ್ಯಾಂಕ್ ಇದ್ದಂತೆ. ಬ್ಯಾಂಕ್ನಲ್ಲಿ ಹಣ ಇಡುವವರೂ ಬೇಕು, ತೆಗೆದುಕೊಳ್ಳುವವರೂ ಬೇಕು. ಬ್ಯಾಂಕ್ನಿಂದ ಕೇವಲ ಪಡೆಯುತ್ತಾ ಹೋಗಿ ಯಾರೂ ಹಣ ಇಡದಿದ್ದಲ್ಲಿ ಅದು ದಿವಾಳಿಯಾಗುತ್ತದೆ. ಅದೇ ರೀತಿ ಕೇವಲ ಹಣ ಇಡುವವರು ಮಾತ್ರ ಇದ್ದು ತೆಗೆದುಕೊಳ್ಳುವವರು ಇರದಿದ್ದಲ್ಲಿ ಆಗಲೂ ಬ್ಯಾಂಕ್ ನಡೆಯುವುದಿಲ್ಲ. ಅದೇ ರೀತಿ ಸಮಾಜವೂ. ಪ್ರತಿಯೊಬ್ಬನೂ ಸಮಾಜದಿಂದ ಪಡೆದುಕೊಳ್ಳುತ್ತಾನೆ ಹಾಗಾಗಿ ಸಮಾಜಕ್ಕೆ ಪ್ರತಿಯೊಬ್ಬನೂ ಕೊಡಲೇಬೇಕು. ಇದೇ ಸಂಘಜೀವನದ ಅರ್ಥ.
ವ್ಯಕ್ತಿಯ ವಿಕಾಸಕ್ರಮ ವ್ಯಷ್ಟಿಯಿಂದ ಸಮಷ್ಟಿಯೆಡೆಗೆ
ಚಿಕ್ಕಮಗುವಿಗೆ ಏನನ್ನೇ ಕೊಟ್ಟರೂ ಬಾಯಿಗೆ ಇಟ್ಟುಕೊಳ್ಳುತ್ತದೆ. ಅದಕ್ಕೆ ಪ್ರಪಂಚದ ಪರಿಚಯ ಆಗುವುದು ಅದರ ನಾಲಿಗೆಯಿಂದಲೇ. ಮಕ್ಕಳು ಸಹಜವಾಗಿಯೇ ಸಿಹಿಯನ್ನು ಬಯಸುತ್ತಾರೆ. ಸಿಹಿಯಿಂದ ಆನಂದಿಸುತ್ತಾರೆ. ಆದರೆ ಅದೇ ಮಗು ಸ್ವಲ್ಪ ಬೆಳೆದಾಗ ಅದಕ್ಕೆ ಸಿಹಿಯನ್ನು ಕೊಟ್ಟರೆ ತಾನೇ ತಿನ್ನದೆ ತಮ್ಮನಿಗೋ ತಂಗಿಗೋ ಕೊಟ್ಟು ಅದು ತಿನ್ನುವುದನ್ನು ನೋಡಿ ತಾನು ಆನಂದಿಸುತ್ತದೆ. ಮಗುವಿನಲ್ಲಿ ಇದೊಂದು ಸಹಜವಾದ ಬೆಳವಣಿಗೆ. ಮಗು ಬೆಳೆದಂತೆಲ್ಲ ಅದರ ಈ ಸಂತೋಷದ ಪರಿಧಿಯೂ ವಿಸ್ತರಿಸುತ್ತದೆ. ಮನೆಮಂದಿಯ ಸುಖದಲ್ಲಿ ತನ್ನ ಸುಖವನ್ನು ಕಾಣುತ್ತದೆ. ಅದೇ ರೀತಿ ನೆರೆಯವರ ಸುಖದಲ್ಲಿ ಸುಖ ಕಾಣುವುದು, ಅದಕ್ಕಾಗಿ ಪ್ರಯತ್ನಿಸುವುದು, ಊರಿನ ಹಿತಕ್ಕಾಗಿ ದುಡಿಯುವುದು, ಜಾತಿಗಾಗಿಯೂ ಭಾಷೆಗಾಗಿಯೂ ದುಡಿಯುವುದು ಕೂಡಾ ಆತನ ಬೆಳವಣಿಗೆಯ ಒಂದು ಹಂತ. ಅಂತೆಯೇ ರಾಷ್ಟ್ರಕ್ಕಾಗಿ, ಮಾನವತೆಗಾಗಿ, ವಿಶ್ವಕ್ಕಾಗಿ ದುಡಿಯುವುದೂ ಆತನ ವಿಕಾಸದ ಉತ್ಥಿತ ಹಂತಗಳು. ಕೇವಲ ದುಡಿಯುವುದು ಮಾತ್ರವಲ್ಲ, ಅವನು ರಾಷ್ಟ್ರದೊಂದಿಗೂ ಪ್ರಕೃತಿಯೊಂದಿಗೂ ಒಂದಾಗಬಲ್ಲ. ಸ್ವಾಮಿ ರಾಮತೀರ್ಥರು ಹೇಳುತ್ತಾರೆ – “ಹಿಮಾಲಯವೇ ನನ್ನ ಕಿರೀಟ, ಗಂಗಾ ಯಮುನಾ ನದಿಗಳೇ ನಾನು ತೊಟ್ಟಿರುವ ಹಾರಗಳು, ವಿಂಧ್ಯಪರ್ವತವೇ ನನ್ನ ಡಾಬು, ಪೂರ್ವಪಶ್ಚಿಮ ಘಟ್ಟಗಳೇ ನನ್ನ ಕಾಲುಗಳು, ಸಮುದ್ರರಾಜ ನನ್ನ ಪಾದಗಳನ್ನು ತೊಳೆಯುತ್ತಿದ್ದಾನೆ. ನಾನೇ ಭಾರತ, ನಾನೇ ಶಂಕರ. ನಾನು ಅಡಿ ಇಟ್ಟರೆ ಭಾರತವೇ ಅಡಿ ಇಟ್ಟಂತೆ.”
ಒಮ್ಮೆ ಸ್ವಾಮಿ ಶ್ರೀರಾಮಕೃಷ್ಣ ಪರಮಹಂಸರು ಚಾವಡಿಯಲ್ಲಿ ಕುಳಿತು ಅಂಗಳವನ್ನು ನೋಡುತ್ತಿದ್ದರು. ಆ ಸಮಯದಲ್ಲಿ ಒಂದು ಹಸು ಅಂಗಳವನ್ನು ಪ್ರವೇಶಿಸಿ ಅಲ್ಲಿ ಹುಲ್ಲುಮೇಯತೊಡಗಿತು. ಆಗ ಪರಮಹಂಸರು ಇದ್ದಕ್ಕಿದ್ದಂತೆಯೇ ಅಯ್ಯೋ, ನನ್ನನ್ನು ತುಳಿಯುತ್ತಿದೆ, ತುಳಿಯುತ್ತಿದೆ, ಕಾಪಾಡಿ, ಕಾಪಾಡಿ ಎಂದು ಚೀರತೊಡಗಿದರು. ಶಿಷ್ಯರು ಓಡಿಬಂದು ನೋಡಿದಾಗ ಪರಮಹಂಸರು ನೆಲದ ಮೇಲೆ ಹೊರಳಾಡುತ್ತ ನೋವಿನಿಂದ ಚೀರುತ್ತಿದ್ದರು. ಪರಮಹಂಸರು ಕೈಸನ್ನೆಯಿಂದಲೇ ಹಸುವನ್ನು ಹೊರಕಳಿಸಲು ಸೂಚಿಸಿದರು. ಶಿಷ್ಯರು ಹಸುವನ್ನು ಹೊರಗೆ ಕಳಿಸಿ ಬಂದು ನೋಡಿದಾಗ ಪರಮಹಂಸರ ಎದೆ-ಬೆನ್ನುಗಳ ಮೇಲೆ ಹಸುವಿನ ಗೊರಸಿನ ಗುರುತು ಮೂಡಿತ್ತು. ಎಂದರೆ ಆ ಸಮಯದಲ್ಲಿ ಪರಮಹಂಸರು ಅಂಗಳದಲ್ಲಿದ್ದ ಹುಲ್ಲಿನೊಂದಿಗೆ ಏಕೀಭಾವರಾಗಿದ್ದರು. ಅದರಿಂದಾಗಿ ಹುಲ್ಲಿನ ಮೇಲೆ ಓಡಾಡಿದ ಹಸುವಿನ ಗೊರಸಿನ ಗುರುತು ಪರಮಹಂಸರ ಶರೀರದ ಮೇಲೆ ಮೂಡಿತ್ತು.
ಇಲ್ಲಿ ಭಾರತೀಯ ಚಿಂತನೆಗೂ ಪಾಶ್ಚಾತ್ಯ ಚಿಂತನೆಗೂ ಒಂದು ಪ್ರಮುಖ ವ್ಯತ್ಯಾಸವಿದೆ. ವ್ಯಕ್ತಿಸ್ವಾತಂತ್ರ್ಯಕ್ಕೆ ಸರ್ವೋಚ್ಚ ಮಹತ್ತ್ವವನ್ನು ಕೊಟ್ಟಿರುವ ಪಾಶ್ಚಾತ್ಯ ತತ್ತ್ವಜ್ಞಾನ ವ್ಯಕ್ತಿ->ಕುಟುಂಬ->ಸಮಾಜ->ಸೃಷ್ಟಿ-ಪರಮೇಷ್ಠಿಗಳ ಮಧ್ಯೆ ಸಂಘರ್ಷವನ್ನೇ ಕಾಣುತ್ತದೆ. ಆದರೆ ಭಾರತೀಯ ಚಿಂತನೆ ಇವೆಲ್ಲವನ್ನೂ ಕ್ರಮವಿಕಾಸದ ವಿವಿಧ ಹಂತಗಳಾಗಿ ಪರಿಗಣಿಸುತ್ತದೆ. ಇದನ್ನು ಈ ಎರಡು ಚಿತ್ರಗಳಿಂದ (ನೋಡಿ ಚಿತ್ರ 1 ಮತ್ತು 2) ಅರಿತುಕೊಳ್ಳಬಹುದು.
ಭಾರತೀಯ ಚಿಂತನೆಯಲ್ಲಿ ಅಂತಿಮವಾಗಿ ವ್ಯಕ್ತಿಯು ಪರಮೇಷ್ಠಿಯೊಂದಿಗೆ ಏಕೀಭಾವನಾಗುವುದೇ ವಿಕಾಸ, ಮತ್ತು ಅದೇ ಜೀವನದ ಸಾರ್ಥಕತೆ. ಆದರೆ ಈ ಸಾರ್ಥಕತೆ ಎನ್ನುವುದನ್ನು ಪಡೆಯಲು ನಮಗೆ ಅನಂತ ಕಾಲಾವಕಾಶವೂ ಇದೆ. ಈ ಜನ್ಮದಲ್ಲಿ ಆಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ನಾವು ಅದನ್ನು ಸಾಧಿಸಬಲ್ಲೆವು. ಅದಕ್ಕಾಗಿ ನಿರಂತರ ಪ್ರಯತ್ನ ಮಾತ್ರ ನಡೆಯುತ್ತಿರಬೇಕು. ಪ್ರತಿ ಜನ್ಮದಲ್ಲಿಯೂ ಉತ್ತಮ ಕೆಲಸಗಳನ್ನೇ ಮಾಡುತ್ತ ಹೋದಲ್ಲಿ ನಾವು ಆ ದಿಕ್ಕಿನತ್ತಲೇ ಸಾಗುತ್ತೇವೆ. ಹಾಗಾಗಿ ಜೀವನದಲ್ಲಿ ಅಲ್ಪಸ್ವಲ್ಪ ಉತ್ತಮ ಕಾರ್ಯ ಮಾಡಿದರೂ ಆತ ಪರಮೇಷ್ಠಿಯೆಡೆಗೆ ಒಂದು ಹೆಜ್ಜೆ ಮುಂದಿಟ್ಟಂತೆ. ಅದಕ್ಕಾಗಿ ಆತನ ಜೀವನ ಸಾರ್ಥಕವೇ.
ಬೌದ್ಧ ಜಾತಕಕಥೆಗಳು ಬೋಧಿಸತ್ತ್ವ ಬುದ್ಧನಾಗುವ ಮೊದಲು ಹಲವಾರು ಜನ್ಮಗಳನ್ನೆತ್ತಿ (ಇವುಗಳಲ್ಲಿ ಮನುಷ್ಯ, ಪ್ರಾಣಿ, ಪಕ್ಷಿಗಳ ಜನ್ಮಗಳೆಲ್ಲ ಸೇರಿವೆ) ಉತ್ತಮ ಕಾರ್ಯಗಳನ್ನು ಮಾಡಿ ಬುದ್ಧನಾದ ಕಥೆಯನ್ನು ಹೇಳುತ್ತವೆ.
ಪರಹಿತದ ಕೆಲಸ – ಉಪಕಾರವಲ್ಲ, ಸೇವೆ
ಪರಹಿತಕ್ಕಾಗಿ ಮಾಡುವ ಕೆಲಸಗಳನ್ನು ಎರಡು ಶಬ್ದಗಳಿಂದ ಗುರುತಿಸುತ್ತೇವೆ: ಉಪಕಾರ ಹಾಗೂ ಸೇವೆ. ಕ್ರಿಯೆ ಒಂದೇ ಆದರೂ ಈ ಎರಡೂ ಶಬ್ದಗಳಲ್ಲಿ ಅಪಾರವಾದ ಅಂತರವಿದೆ. ಒಮ್ಮೆ ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರ ಮಧ್ಯೆ ಮಾತುಕತೆಯಲ್ಲಿ ಪರೋಪಕಾರದ ವಿಷಯ ಬಂದಿತು. ಆಗ ಅಲ್ಲಿದ್ದ ಕೆಲವು ಶಿಷ್ಯರು ತಾವೆಲ್ಲ ಪರೋಪಕಾರ ಮಾಡುವುದರ ಮೂಲಕ ಜನರ ಸಂಕಟಗಳನ್ನು ದೂರಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆಗ ಒಳಗಡೆಯಿಂದ ಬಂದ ಪರಮಹಂಸರು ಗಟ್ಟಿಯಾಗಿ “ನೀವು ಮಾಡಬೇಕಾಗಿರುವುದು ಪರೋಪಕಾರವಲ್ಲ. ಸೇವೆ ಮಾಡಬೇಕು. ನಿಮಗೆ ಅವರ ಸೇವೆ ಮಾಡುವ ಅಧಿಕಾರ ಮಾತ್ರ ಇದೆ. ಅವರೆಲ್ಲ ನಿಮಗೆ ಅವರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ” ಎಂದರು.
‘ಪರೋಪಕಾರ’ದ ಶಬ್ದದಲ್ಲಿ ದೊಡ್ಡಸ್ತಿಕೆಯ ಭಾವ ಇದೆ. ಆದರೆ ‘ಸೇವೆ’ಯಲ್ಲಿ ವಿನಮ್ರತೆಯ ಭಾವ ಇರುತ್ತದೆ. ‘ಉಪಕಾರ’ಮಾಡುವವನು ಅಹಂಕಾರಿಯಾಗುತ್ತಾನೆ, ಆದರೆ ‘ಸೇವೆ’ಮಾಡುವವನು ವಿನಮ್ರನಾಗುತ್ತಾನೆ. ಅವನಲ್ಲಿ ಪ್ರೀತಿ, ದಯೆ, ಅನುಕಂಪಗಳೆಲ್ಲ ಕೂಡಿರುತ್ತವೆ.
ಒಮ್ಮೆ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀ ಮಾತನಾಡುತ್ತ ಹೇಳಿದ್ದರು – “ಆತ್ಮಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸುವ ಎಲ್ಲರಿಗೂ ಅವರವರ ಗುರುಗಳು ಸೇವೆಯನ್ನು ಮಾಡಲು ಹೇಳುತ್ತಾರೆ. ಸೇವೆಗೂ ಆತ್ಮಸಾಕ್ಷಾತ್ಕಾರಕ್ಕೂ ಇರುವ ಸಂಬಂಧ ಏನು? ಸೇವೆ ಮಾಡುವವನ ಅಹಂಕಾರ ನಾಶವಾಗುತ್ತದೆ. ವ್ಯಕ್ತಿಯ ಅಹಂಕಾರ ನಾಶವಾಗದ ವಿನಾ ಅವನಿಗೆ ಆತ್ಮಸಾಕ್ಷಾತ್ಕಾರ ಆಗುವುದಿಲ್ಲ. ಅದಕ್ಕಾಗಿ ಆತ್ಮಸಾಕ್ಷಾತ್ಕಾರದ ಮೊದಲನೆ ಹೆಜ್ಜೆಯೇ ಸೇವೆಯಲ್ಲಿ ತೊಡಗುವುದು.” ಹಾಗಾಗಿ ರಾಮಕೃಷ್ಣಾಶ್ರಮ, ಚೈತನ್ಯಮಿಷನ್ ಇತ್ಯಾದಿಗಳಲ್ಲಿ ಯಾರಿಗೂ ಒಮ್ಮೆಗೇ ಸಂನ್ಯಾಸ ಕೊಡುವುದಿಲ್ಲ. ಬ್ರಹ್ಮಚಾರಿಯಾಗಿದ್ದು ಸೇವೆಯನ್ನು ಮಾಡಿ ಪರಿಪಕ್ವÀವಾದ ನಂತರವೇ ಅಲ್ಲಿ ಸಂನ್ಯಾಸ ನೀಡಲಾಗುತ್ತದೆ.
ಸೇವೆ–ಸಹಜಕರ್ಮ
‘ಸೇವೆ’ ಎಂಬ ಶಬ್ದವನ್ನು ಕೇಳಿದ ತಕ್ಷಣವೇ ಸಾಮಾನ್ಯರ ಪ್ರತಿಕ್ರಿಯೆ – ‘ಇದು ನಮಗಲ್ಲ’ ಎಂಬುದು. ಏಕೆಂದರೆ ಇಂದು ‘ಸೇವೆ’ಯ ಅರ್ಥವೇ ಬದಲಾಗಿದೆ. ಅವಕಾಶವಾದಿಗಳೆಲ್ಲ ಅದನ್ನು ಬೇಕುಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಜನರಿಗೆ ಸೇವೆ ಮಾಡುತ್ತೇನೆ ಎನ್ನುವವನ ಕುರಿತಾಗಿ ಕೋಪವೋ ತಿರಸ್ಕಾರವೋ ಉಂಟಾಗುತ್ತದೆ. ಐದು ವರ್ಷಗಳಿಗೊಮ್ಮೆ ನಿಮ್ಮ ಸೇವೆಮಾಡುತ್ತೇವೆಂದು ಹೇಳಿ ಚುನಾಯಿತರಾದ ಜನಪ್ರತಿನಿಧಿಗಳು ಸ್ವತಃ ಹೇಗೆ ಉದ್ಧಾರವಾಗುತ್ತಿದ್ದಾರೆಂಬುದನ್ನು ಜನರು ನೋಡಿದ್ದಾರೆ. ಸೇವೆಯ ಹೆಸರಿನಲ್ಲಿ ಹಣ ಮಾಡುವವರನ್ನು, ಭೂಮಿ ನುಂಗುವವರನ್ನು, ಇನ್ನೂ ಹಲವು ರೀತಿಯಲ್ಲಿ ವಂಚಿಸುವವರನ್ನು ನೋಡಿದ್ದಾರೆ. ಹಾಗಾಗಿ ಅವರಿಗೆ ಸೇವೆಯ ಕುರಿತೇ ತಿರಸ್ಕಾರವುಂಟಾಗಿದೆ. ಸಂಬಳಕ್ಕಾಗಿ ಮಾಡಿದ ಕೆಲಸವನ್ನೂ ಸೇವೆ ಎನ್ನುತ್ತಾರೆ. ಅದು ಸೇವೆಯಲ್ಲ, ದುಡಿಮೆ. ಈ ಎಲ್ಲದರ ಪರಿಣಾಮವಾಗಿ ಜನಸಾಮಾನ್ಯರಲ್ಲಿ ‘ಸೇವೆ ಮಾಡುವವರು ಕೆಲವು ವಿಶಿಷ್ಟ ವ್ಯಕ್ತಿಗಳು – ರಾಜಕಾರಣಿಗಳು, ಧನಿಕರು, ಪ್ರಸಿದ್ಧಿಗಾಗಿ ಹಂಬಲಿಸುವವರು ಇತ್ಯಾದಿ. ಸೇವೆ ನಮ್ಮಂಥ ಸಾಮಾನ್ಯರಿಗಲ್ಲ’ ಎಂಬ ಭಾವ ಬಲವಾಗಿದೆ.
ಅದೇ ರೀತಿ ಸೇವೆ ಯಾರಿಗೆ ಎಂಬ ಪ್ರಶ್ನೆಯೂ ಇದೆ. ಸೇವೆ ಮಾಡಬೇಕಾದದ್ದು ಬಡವರಿಗೆ, ದೀನ ದುರ್ಬಲರಿಗೆ, ರೋಗಿಗಳಿಗೆ, ವೃದ್ಧರಿಗೆ, ಅನಾಥರಿಗೆ… ಹೀಗೆ ಸೇವಿತರ ವಿಶಿಷ್ಟವರ್ಗದ ಕಲ್ಪನೆಯೂ ಇದೆ. ಈ ಎಲ್ಲ ವರ್ಗದವರಿಗೂ ಸೇವೆ ಬೇಕೇಬೇಕು. ಆದರೆ ಇದರ ಹೊರತಾಗಿರುವ ಸಾಮಾನ್ಯ ವರ್ಗಕ್ಕೂ ಅನೇಕ ರೀತಿಯ ಸೇವೆಗಳು ಬೇಕಾಗುತ್ತವೆ.
ಶಿಶುವೊಂದು ಜನಿಸಿದಾಗ ಅದು ಪೂರ್ಣ ಪರಾವಲಂಬಿಯಾಗಿರುತ್ತದೆ. ಅದರ ಎಲ್ಲ ಆವಶ್ಯಕತೆಗಳನ್ನೂ ಮನೆಯವರು ಪೂರೈಸಬೇಕು. ಹಲವು ವರ್ಷಗಳವರೆಗೆ ಶಿಶು ಬೇರೆಯವರ ಸೇವೆಯನ್ನು ಪಡೆದ ನಂತರ ತಾನು ಸಾಮಥ್ರ್ಯಶಾಲಿಯಾಗುತ್ತದೆ. ಆದರೆ ಜೀವನದ ಉತ್ತರಾರ್ಧದಲ್ಲಿ, ವೃದ್ಧಾಪ್ಯದಲ್ಲಿ ಮತ್ತೆ ಪರಾವಲಂಬಿ ಜೀವನ ಅನಿವಾರ್ಯ. ಎಂದರೆ ಜೀವನದಲ್ಲಿ ಪ್ರತಿಯೊಬ್ಬನೂ ಇನ್ನೊಬ್ಬರ ಸೇವೆಯನ್ನು ಅನಿವಾರ್ಯವಾಗಿ ಪಡೆಯುತ್ತಾನೆ. ಹಾಗಾಗಿ ತನಗೆ ಶಕ್ತಿ ಸಾಮಥ್ರ್ಯ ಇರುವಾಗ ಪ್ರತಿಯೊಬ್ಬನೂ ಸೇವೆಯನ್ನು ಮಾಡಲೇಬೇಕು. ಯಾರಾದರೂ ನಾನು ಸೇವೆಯನ್ನು ಮಾಡುವುದೇ ಇಲ್ಲ ಎಂದರೆ ಅವನು ಮನುಷ್ಯನೇ ಅಲ್ಲ ಎಂದು ತಿಳಿಯಬೇಕು. ಹೀಗೆ ಸೇವೆ ಎಂಬುದು ನಾವು ಇನ್ನಾರಿಗೋ ಮಾಡುವ ಉಪಕಾರವಲ್ಲ, ನಮಗೆ ನಾವೇ ಮಾಡಿಕೊಳ್ಳುವ ಹಿತಾರ್ಥಸಾಧನೆ, ಅದೊಂದು ಸಹಜಕರ್ಮ.
ಸೇವೆ – ಜಗದ್ಧಿತಾಯ ಚ
ಮೇಲಿನೆಲ್ಲ ವಿಚಾರಗಳನ್ನು ನೋಡಿದಾಗ ಸೇವೆ ಯಾಕೆ ಎಂಬ ಪ್ರಶ್ನೆಗೆ ‘ಆತ್ಮನೋ ಮೋಕ್ಷಾರ್ಥಮ್’ ಸ್ವಂತದ ಮುಕ್ತಿಗಾಗಿ ಎಂಬ ವಿಚಾರ ತಿಳಿಯುತ್ತದೆ. ಆದರೆ ಇದು ಅರ್ಧಭಾಗ ಮಾತ್ರ, ಇದರ ಉತ್ತರಾರ್ಧ ‘ಜಗದ್ಧಿತಾಯ ಚ’ ಎಂದರೆ ಜಗತ್ತಿನ ಹಿತಕ್ಕಾಗಿ ಎಂಬ ವಿಷಯವೂ ಅಡಗಿದೆ. ರೋಗಿಗಳಿಗೋ, ವೃದ್ಧರಿಗೋ, ದಿವ್ಯಾಂಗರಿಗೋ ಮಾಡುವ ಸೇವೆಯನ್ನು ವೈಯಕ್ತಿಕ ನೆಲೆಯ ಸೇವೆ ಎನ್ನಬಹುದು. ಆದರೆ ಸಾರ್ವಜನಿಕವಾಗಿ ಮಾಡುವ ಸೇವೆಗಳು ಸಮಾಜದ ಒಟ್ಟು ಹಿತವನ್ನು ಸಾಧಿಸುತ್ತವೆ. ಒಂದು ಶಿಕ್ಷಣಸಂಸ್ಥೆ ಒಂದು ಸ್ಥಳದ ಮುಂದಿನ ಪೀಳಿಗೆಗಳ ಭವಿಷ್ಯವನ್ನೇ ಬದಲಿಸಬಲ್ಲದು. ಒಂದು ಆಸ್ಪತ್ರೆ ಆ ಕ್ಷೇತ್ರದ ಜನರ ಆರೋಗ್ಯದ ಮಟ್ಟವನ್ನು ಸುಧಾರಿಸಬಲ್ಲದು. ಸಣ್ಣ ಒಂದು ಸಂಸ್ಕಾರಕೇಂದ್ರ ಮುಂದಿನ ಪೀಳಿಗೆಗಳ ಚಿಂತನೆ, ಚಾರಿತ್ರ್ಯಗಳನ್ನೇ ಬದಲಾಯಿಸಬಲ್ಲದು. ವ್ಯಕ್ತಿಗಳಿಗೆ ಮಾಡುವ ಸೇವೆ ಅನಿವಾರ್ಯ. ಆದರೂ ಸಮಗ್ರ ಸಮಾಜದ ಹಿತಕ್ಕಾಗಿ ಮಾಡುವ ಸೇವೆಗಳ ಕಡೆಗೆ ಹೆಚ್ಚು ಗಮನ ಬೇಕು. ವಿವೇಕಾನಂದರು ಒಂದೆಡೆ ಹೇಳುತ್ತಾರೆ – “ಹಸಿದವನಿಗೆ ಊಟ ನೀಡುವುದು ಒಳ್ಳೆಯದೇ; ಆದರೆ ಅವನು ನಾಳೆಯೂ ಇಂದಿನಷ್ಟೇ ಹಸಿದಿರುತ್ತಾನೆ ಎಂಬುದನ್ನು ನೆನಪಿಡಬೇಕು. ಅದೇ ಅವನಿಗೆ ಒಂದು ಕಸುಬನ್ನು ಕಲಿಸಿದರೆ ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ.” ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಗಳನ್ನು ಕೊಡುವ ರೀತಿಯ ಸೇವೆಗಳು ಇಂದು ಸಮಾಜಕ್ಕೆ ಅಗತ್ಯವಿವೆ.
ಸೇವೆ ಸಂಘಟನೆಗಾಗಿ – ಸಂಘಟನೆಯಿಂದ ಸೇವೆ
ಕಳೆದ ಎರಡು ಸಾವಿರ ವರ್ಷಗಳ ನಿರಂತರ ಸಂಘರ್ಷ ಮತ್ತು ಗತ 300 ವರ್ಷಗಳಲ್ಲಿ ಭಾರತದ ಜನಜೀವನವನ್ನು ನಾಶಮಾಡಲು ಬ್ರಿಟಿಷರು ನಡೆಸಿದ ವ್ಯವಸ್ಥಿತ ಪ್ರಯತ್ನದಿಂದಾಗಿ ಭಾರತೀಯ ಸಮಾಜ ಇಂದು ಛಿದ್ರ-ವಿಚ್ಛಿದ್ರವಾಗಿದೆ. ಅಷ್ಟೇ ಅಲ್ಲ ವಿವಿಧ ಜಾತಿ-ಸಮುದಾಯಗಳ ನಡುವೆ ಪರಸ್ಪರ ದ್ವೇಷವನ್ನು ಬೆಳೆಸುವ ಕೆಲಸವೂ ಜೋರಾಗಿಯೇ ನಡೆಯುತ್ತಿದೆ. ಪರಸ್ಪರ ದೂರವಾಗಿರುವ, ಸಂಶಯದಿಂದ ನೋಡುತ್ತಿರುವ ಸಮುದಾಯಗಳನ್ನು ಒಟ್ಟು ತರಲು ಮಾಡುತ್ತಿರುವ ಪ್ರಯತ್ನಗಳಿಗೇನೂ ಕೊರತೆಯಿಲ್ಲ. ಆದರೆ ಆ ಪ್ರಯತ್ನಗಳಿಗೆ ಸಿಗುತ್ತಿರುವ ಫಲಗಳು ಮಾತ್ರ ನಿರಾಶಾದಾಯಕವೇ. ಇಂತಹ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಇರುವ ಉಪೇಕ್ಷಿತ (ಸಾಮಾನ್ಯರ ಭಾಷೆಯಲ್ಲಿ ಹರಿಜನರು ಇತ್ಯಾದಿ) ಬಂಧುಗಳು ನಗರಗಳಲ್ಲಿದ್ದರೂ, ಗ್ರಾಮಗಳಲ್ಲಿದ್ದರೂ ಅವರನ್ನು ಕೀಳಾಗಿಯೇ ನೋಡಲಾಗುತ್ತಿದೆ. ಪ್ರಾಥಮಿಕ ಸೌಲಭ್ಯಗಳೂ ಅವರಿಗೆ ತಲಪುತ್ತಿಲ್ಲ. ಅವರ ಉನ್ನತಿಗೆ ಪೂರಕವಾಗಲೆಂದು ಸರಕಾರ ಮೀಸಲಾತಿಯನ್ನೇನೋ ತಂದಿದೆ. ಆದರೆ ಅದೂ ಅರ್ಹರಿಗೆ ತಲಪದೆ ಕೆಲವೇ ಕೆಲವರ ಸೊತ್ತಾಗುತ್ತಿದ್ದು, ಪರಿಣಾಮವಾಗಿ ಇನ್ನುಳಿದ ಮೇಲ್ವರ್ಗದವರ ಕೆಂಗಣ್ಣಿಗೆ ಇಡೀ ಉಪೇಕ್ಷಿತ ವರ್ಗ ಗುರಿಯಾಗಿದೆ. ಈ ಪರಿಸ್ಥಿತಿಯಲ್ಲಿ ನಿಜವಾಗಿಯೂ ಉಪೇಕ್ಷಿತರಾಗಿರುವ ಬಂಧುಗಳನ್ನು ತಲಪಿ ಅವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ತರವನ್ನು ಹೆಚ್ಚಿಸಲು ಸೇವೆ ಸಾಧನವಾಗಬಲ್ಲದು. ಮೊದಮೊದಲು ಈ ರೀತಿ ತಥಾಕಥಿತ ಉಪೇಕ್ಷಿತ ಬಾಂಧವರ ಮಧ್ಯೆ ಕೆಲಸ ಮಾಡಲು ಹೋದವರನ್ನು ಸಂಶಯದಿಂದ ಕಂಡರೂ ಕ್ರಮೇಣ ಆ ಕಾರ್ಯಕರ್ತರ ಸ್ನೇಹ, ತಾಳ್ಮೆಗಳಿಂದ ಸಂಶಯಗಳು ದೂರವಾಗಿ ಮೇಲ್ವರ್ಗ-ಕೆಳವರ್ಗಗಳೆಂಬ ಅಂತರ ಅಳಿದು ಸಾಮರಸ್ಯದ ಜೀವನ ಆರಂಭವಾಗುತ್ತಿದೆ.
ಅದೇ ರೀತಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದು ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಇನ್ನೊಂದು ವಿಶಾಲವಾದ ವರ್ಗ ವನವಾಸಿಗಳದು. ಬ್ರಿಟಿಷರ ಕಾಲದಲ್ಲಿ ವನವಾಸಿಗಳು ಹಿಂದುಗಳೇ ಅಲ್ಲ ಎಂದು ಹೇಳಿ ಅವರನ್ನು ಮುಖ್ಯಸಮಾಜದಿಂದ ದೂರವಿಡುವ ಪ್ರಯತ್ನ ನಡೆಯಿತು. ಅವರನ್ನೆಲ್ಲ ಮತಾಂತರಗೊಳಿಸಲು ಯೋಜನಾಬದ್ಧ ಪ್ರಯತ್ನವೂ ನಡೆಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದನಂತರವೂ ಮತಾಂತರಕ್ಕೆ ತಡೆ ಬರಲಿಲ್ಲ. ಬದಲಾಗಿ ಸೆಕ್ಯುಲರಿಸಂ ಹೆಸರಿನಲ್ಲಿ ಪರೋಕ್ಷ ಬೆಂಬಲವೇ ದೊರೆಯಿತು. ಪೂರ್ವಾಂಚಲದಲ್ಲಂತೂ ಆ ವನವಾಸಿ ಬಂಧುಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ನಮ್ಮ ದೇಶದ ವಿರುದ್ಧ ಹೋರಾಟ ಮಾಡುವಂತೆಯೆ ಪ್ರೇರೇಪಿಸಲಾಯಿತು. ಆದರೆ ಆ ಬಂಧುಗಳ ಮಧ್ಯೆಯೂ ವಿವಿಧರೀತಿಯ ಸೇವಾ ಚಟುವಟಿಕೆಗಳು ಪ್ರಾರಂಭವಾದಾಗ ಪ್ರಾರಂಭಿಕ ಸಂದೇಹ, ಅಪನಂಬಿಕೆಗಳ ನಂತರ ಅವರೆಲ್ಲರೂ ಹಿಂದುತ್ವವನ್ನು ಒಪ್ಪಿಕೊಳ್ಳುತ್ತಿದ್ದಾರೆ, ಅಪ್ಪಿಕೊಳ್ಳುತ್ತಿದ್ದಾರೆ. ರಾಷ್ಟ್ರದ ಮುಖ್ಯ ಪ್ರವಾಹದಲ್ಲಿ ಒಂದಾಗುತ್ತಿದ್ದಾರೆ. ‘ವನವಾಸಿ ಕಲ್ಯಾಣ ಆಶ್ರಮ’ ಇಂದು ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಒಂದು ಸಂಸ್ಥೆ. ಹೀಗೆ ‘ಸೇವೆ’ ಸಮಾಜವನ್ನು ಸಂಘಟಿಸಲು ಒಂದು ಉತ್ತಮ ಸಾಧನ. ಯಾರೆಲ್ಲ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೋ ಅವರೆಲ್ಲರನ್ನು ಒಂದುಗೂಡಿಸಲು ಸೇವೆಯ ಮೂಲಕ ಸಾಧ್ಯ.
ಸೇವೆಯಿಂದ ಸಮಾಜವು ಸಂಘಟಿತವಾಗುತ್ತದೆ. ಅದೇ ರೀತಿ ಸೇವೆಯನ್ನು ಮಾಡುವವರು ಸಂಘಟಿತರಾಗಿದ್ದಲ್ಲಿ ಕಾರ್ಯದ ವ್ಯಾಪ್ತಿ, ಪರಿಣಾಮ, ಪ್ರಭಾವಗಳೂ ಹೆಚ್ಚುತ್ತವೆ. ಸಂಘಟನಾತ್ಮಕ ಸ್ವರೂಪ ಇರುವ ಸೇವಾಕಾರ್ಯಗಳಿಗೆ ಹೊಸ ಕಾರ್ಯಕರ್ತರನ್ನು ಜೋಡಿಸುವುದು ಸುಲಭ. ತಾವೇ ಸ್ವತಃ ಮುಂದೆ ನಿಂತು ಸೇವೆ ಮಾಡಲಾಗದವರೂ ಕೂಡಾ ಸೇವೆಗೆ ಸಹಾಯವನ್ನು ಒದಗಿಸಬಲ್ಲರು. ಸಾವಿರಾರು ಜನ ಸೇರಿ ದೊಡ್ಡದಾದ ರಥವನ್ನು ಎಳೆದಂತೆ ಈ ಕಾರ್ಯ. ಸಂಘಟನಾತ್ಮಕ ಸ್ವರೂಪ ಇರುವ ಸೇವಾ ಚಟುವಟಿಕೆಗಳಿಗೆ ಸಂಪನ್ಮೂಲಗಳೂ ಹೆಚ್ಚು ದೊರಕುತ್ತವೆ. ಸರಕಾರ ನಿರ್ದೇಶಿಸಿದ ಕಾನೂನುಗಳನ್ನು ಪಾಲನೆ ಮಾಡುವ ಸಂಘಟನೆಗಳನ್ನು ಜನರು ನಂಬುತ್ತಾರೆ. ಸಹಾಯಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಾರೆ.
ಸಮಾಜಪರಿವರ್ತನೆಗಾಗಿ ಸೇವೆ
ಸಮಾಜದಲ್ಲಿ ಅನೇಕ ರೀತಿಯ ಮೂಢನಂಬಿಕೆಗಳು, ಆಚರಣೆಗಳು, ಪದ್ಧತಿಗಳು ಇರುತ್ತವೆ. ಕಾಲಕಾಲಕ್ಕೆ ಹೊಸದಾಗಿ ಸೃಷ್ಟಿಯಾಗುತ್ತಲೂ ಇರುತ್ತವೆ. ಯಾವುದೋ ಒಂದು ಕಾಲದ ನಡವಳಿಕೆ, ನಂಬಿಕೆ, ಆಚರಣೆಗಳು ಇಂದಿಗೆ ಕಾಲಬಾಹ್ಯವಾಗಿರಬಹುದು. ಅಂತಹ ಸಂದರ್ಭದಲ್ಲಿ ಆ ಆಚರಣೆಗಳನ್ನು ಬಿಟ್ಟು ಮುಂದೆ ಹೋಗುವುದೇ ಪ್ರಗತಿಯ ಲಕ್ಷಣ. ಆದರೆ ಸಂಪ್ರದಾಯನಿಷ್ಠ ಮನಸ್ಸುಗಳು ಆಚರಣೆಗಳನ್ನು ಬಿಡಲು ಒಪ್ಪುವುದೇ ಇಲ್ಲ. ಬಲವಂತ, ಸಂಘರ್ಷಗಳಿಂದ ಒಳ್ಳೆಯ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ಕಾನೂನುಗಳನ್ನು ಮಾಡಿದರೆ ಪ್ರÀಯೋಜನವಿಲ್ಲ. ಇದಕ್ಕೆ ಬೇಕಾಗಿರುವುದು ಆತ್ಮೀಯತೆ, ಪ್ರೀತಿಯಿಂದ ಕೂಡಿದ ಆಗ್ರಹ. ಆಗ ಮಾತ್ರ ಜನರು ತಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳುತ್ತಾರೆ. ಅಂತಹ ಬದಲಾವಣೆ ಶಾಶ್ವತ ಬದಲಾವಣೆಯಾಗುತ್ತದೆÉ. ಇದರಲ್ಲಿ ಮುಖ್ಯವಾಗಿರುವುದು ಆಗ್ರಹ ಮಾಡುವವರ ಮೇಲೆ ಬದಲಾವಣೆಗೊಳಗಾಗಬೇಕಾದವರ ನಂಬಿಕೆ. ಹೇಳುವವರು ನಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದಾರೆ ಎಂಬ ವಿಶ್ವಾಸ ಮೂಡಬೇಕು. ಹೇಳುವವರ ಈ ಹಿಂದಿನ ನಡವಳಿಕೆಗಳು ಇವರು ನಿಜವಾಗಿಯೂ ನಮ್ಮ ಹಿತಚಿಂತಕರು ಎಂಬ ಭಾವ ಮೂಡಿಸುವಂತಿದ್ದರೆ ಆಗ ಬದಲಾವಣೆ ಬರುತ್ತದೆ. ಹಾಗಾಗಿ ಸಮಾಜಪರಿವರ್ತನೆಗೂ ಸೇವೆ ಸಾಧನವಾಗುತ್ತದೆ.
ಬಳ್ಳಾರಿ ನಗರದ ಒಂದು ಸೇವಾಬಸ್ತಿಯಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕಾರಕೇಂದ್ರ ನಡೆಯುತ್ತಿತ್ತು. ಒಂದು ದಿನ ಆ ಪ್ರದೇಶದ ಪೆÇಲೀಸ್ ಸಬ್ಇನ್ಸ್ಪೆಕ್ಟರ್ ಆ ಸಂಸ್ಕಾರಕೇಂದ್ರ ನಡೆಸುವ ಪ್ರಮುಖರನ್ನು ಹುಡುಕಿಕೊಂಡು ಬಂದರು. ಅವರೊಂದು ವಿಚಿತ್ರ ಅನುಭವವನ್ನು ಹೇಳಿದರು. “ಕಳೆದ 3-4 ತಿಂಗಳುಗಳಿಂದ ಈ ಪ್ರದೇಶದಲ್ಲಿ ಬಾಲ-ಅಪರಾಧ ಪ್ರಕರಣಗಳು ಒಮ್ಮೆಗೇ ಕಡಮೆಯಾಗಿವೆ. ಇದಕ್ಕೆ ಕಾರಣವೇನು ಎಂದು ಶೋಧಿಸಿದಾಗ ಈಗ ಇಲ್ಲಿ ನಿಮ್ಮ ಸಂಸ್ಕಾರಕೇಂದ್ರ ಪ್ರಾರಂಭ ಆಗಿದ್ದು ಹಿಂದೆ ಕೆಟ್ಟಕೆಲಸಗಳನ್ನು ಮಾಡುತ್ತಿದ್ದವರೆಲ್ಲ ಸಂಸ್ಕಾರಕೇಂದ್ರಕ್ಕೆ ಬರುತ್ತಿದ್ದಾರೆ ಮತ್ತು ತಮ್ಮ ದುರ್ವರ್ತನೆಗಳನ್ನು ಬಿಟ್ಟಿದ್ದಾರೆ ಎಂದು ತಿಳಿಯಿತು. ಅದಕ್ಕಾಗಿ ನಿಮಗೆ ಧನ್ಯವಾದ ಹೇಳಲು ಬಂದೆ” ಎಂದರು. ಹಿಂದು ಸೇವಾ ಪ್ರತಿಷ್ಠಾನದ ಶಿಶುಮಂದಿರಕ್ಕೆ ಬರುವ ಮಕ್ಕಳ ಆಗ್ರಹದಿಂದಾಗಿ ಮನೆಯಲ್ಲಿ ಅವರ ಪಾಲಕರು ಬೆಳಗ್ಗೆ ಬೇಗ ಏಳುವುದು, ಮೈ-ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಕುಡಿತ-ಮಾಂಸಗಳನ್ನು ಬಿಟ್ಟಿರುವ ನೂರಾರು ಉದಾಹರಣೆಗಳಿವೆ.
ವನವಾಸಿ ಕ್ಷೇತ್ರಗಳಲ್ಲಿ, ಸೇವಾಬಸ್ತಿಗಳಲ್ಲೂ ಕೂಡಾ ಸೇವಾ ಕಾರ್ಯಕರ್ತರ ತಾಳ್ಮೆ, ನಿರಂತರ ಪರಿಶ್ರಮ ಹಾಗೂ ತೋರಿಸುತ್ತಿರುವ ಕಾಳಜಿಗಳ ಪರಿಣಾಮವಾಗಿ ತಮ್ಮ ಅನೇಕ ಆಚರಣೆಗಳು ವಿಚಾರಹೀನವಾದವು ಎಂಬ ಭಾವನೆ ಬೆಳೆದು ಅವುಗಳನ್ನು ನಿಧಾನವಾಗಿ ಬಿಡುತ್ತಿದ್ದಾರೆ. ಆದರೆ ಸ್ವಾಭಿಮಾನ ಬೆಳೆಸಿಕೊಂಡು ಎಲ್ಲರೊಡನೆ ಸಮಾನತೆಯ ಜೀವನ ನಡೆಸುತ್ತಿದ್ದಾರೆ. ತಮ್ಮ ಸಮಾಜದ ಪ್ರಗತಿಗೆ ತಾವೂ ಕೈ ಜೋಡಿಸಬೇಕೆಂಬ ಭಾವನೆ ಜಾಗೃತವಾಗುತ್ತಿದ್ದು ಕಾರ್ಯಕರ್ತರಾಗಿ ಬದಲಾಗುತ್ತಿದ್ದಾರೆ. ಅನೇಕರು ಪೂರ್ಣಕಾಲಿಕ ಕಾರ್ಯಕರ್ತರೂ ಆಗಿದ್ದಾರೆ.
ಸೇವೆಯ ವಿವಿಧ ಆಯಾಮಗಳು
ಮಾನವಜೀವನದ ಎಲ್ಲ ಮುಖಗಳಿಗೂ ಸಂಬಂಧಿಸಿದಂತೆ ಸೇವೆಯ ಆವಶ್ಯಕತೆ ಇದೆ. ಹಾಗಾಗಿ ಸೇವೆಗೆ ಹಲವು ಆಯಾಮಗಳಿರುತ್ತವೆ. ಒಂದೊಂದು ಕ್ಷೇತ್ರದಲ್ಲಿ ಕೆಲಸ ಪ್ರಾರಂಭ ಆದಂತೆ, ಅದರಲ್ಲಿ ಆಳಕ್ಕೆ ಇಳಿದಂತೆ ಅದರ ಕುರಿತೇ ವಿಶೇಷ ಗಮನ ಕೊಡುವವರು ಬೇಕು. ಒಂದೊಂದು ವಿಷಯಕ್ಕೂ ವಿಶೇಷ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಸಂಪನ್ಮೂಲಗಳ ವ್ಯವಸ್ಥೆ, ಕಾರ್ಯಕರ್ತರ ಜೋಡಣೆ, ತಜ್ಞರ ಜೋಡಣೆ, ಸರಕಾರದ ಕಾನೂನುಗಳ ಪಾಲನೆ, ವಿವಿಧ ಇಲಾಖೆಗಳ ಜೊತೆ ಸಂಬಂಧಗಳು ಎಲ್ಲವೂ ಅನಿವಾರ್ಯ. ಹಾಗಾಗಿ ಸೇವಾ ಚಟುವಟಿಕೆಗಳು ಕ್ರಮೇಣ ಪ್ರಕಲ್ಪದ ಸ್ವರೂಪವನ್ನು ಪಡೆಯುತ್ತವೆ. ಆದರೂ ಸ್ಥೂಲವಾಗಿ ಶಿಕ್ಷಣ, ಸಂಸ್ಕಾರ, ಸ್ವಾಸ್ಥ್ಯ, ಸ್ವಾವಲಂಬನೆ, ಪರಿಸರ ಎಂಬ ಆಯಾಮಗಳಲ್ಲಿ ಸೇವಾ ಚಟುವಟಿಕೆಗಳನ್ನು ಗುರುತಿಸಬಹುದು.
ಈ ಎಲ್ಲ ವಿಷಯಗಳನ್ನೂ ಯಾಕೆ ಹೇಳಬೇಕಾಗಿದೆಯೆಂದರೆ ತುಂಬಾ ಜನ ಅನುಕೂಲತೆಗಳಿಂದ ಕೂಡಿದ, ವೈಭವದಿಂದ ಕೂಡಿದ ಜೀವನವೇ ಸಾರ್ಥಕ ಜೀವನ ಎಂದುಕೊಂಡಿರುತ್ತಾರೆ. ಆದರೆ ಅದಲ್ಲ. ವಿವೇಕಾನಂದರು ಹೇಳಿದ್ದಾರೆ – “ಇನ್ನೊಬ್ಬರಿಗಾಗಿ ಬದುಕುವ ಜೀವನವೇ ನಿಜವಾದ ಜೀವನ. ಉಳಿದವರೆಲ್ಲ ಬದುಕಿದ್ದರೂ ಸತ್ತಂತೆಯೇ” ಎಂದು. ಅದಕ್ಕಾಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಯಾವುದಾದರೊಂದು ರೀತಿಯಲ್ಲಿ ನಾವೆಲ್ಲರೂ ಇನ್ನೊಬ್ಬರಿಗಾಗಿ ಬದುಕಬೇಕು. ನಮ್ಮ ಶಕ್ತಿ, ಸಾಮಥ್ರ್ಯ, ಅಭಿರುಚಿಗಳಿಗೆ ಹೊಂದುವಂತಹ ಯಾವುದಾದರೊಂದು ಕ್ಷೇತ್ರದಲ್ಲಿ ತೊಡಗಿಕೊಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ.
***