ಜೀವನಗುಣಮಟ್ಟಕ್ಕೆ ಅನಿವಾರ್ಯವಾದ ತತ್ತ್ವವನ್ನು ತುಂಬ ಸರಳವಾಗಿಯೇ ಹೇಳಿಬಿಡಬಹುದು. ಸರಳವಾದ ಅಶನ, ವಸನ, ವಸತಿಗಳಿದ್ದರೆ, ನಮ್ಮ ದುಡಿಮೆಯ ಒತ್ತಡ ಕಡಮೆಯಾಗುತ್ತದೆ; ಆಗ ಬಹಳ ಸರಳವಾಗಿ ಆರಾಮ, ಆರೋಗ್ಯ ಮತ್ತು ಆನಂದ ಸಿದ್ಧಿಸುತ್ತದೆ ಎಂದು ನಮಗೆಲ್ಲರಿಗೂ ಆಗಾಗ ಅನಿಸುತ್ತದೆ. ಇಂತಹ ಆರಾಮದಲ್ಲಿ, ಇಂತಹ ಆನಂದದಲ್ಲಿ ನಮ್ಮ ಪ್ರಾಚೀನ ವೇದ, ಪುರಾಣ, ಸಾಹಿತ್ಯ, ಸಂಗೀತ, ಶಿಲ್ಪಕಲಾ ಪ್ರಕಾರಗಳೆಲ್ಲ ಸರ್ಜನಶೀಲವಾಗಿ ಅವತರಿಸಿದ್ದುದು ಈಗಲೂ ನಮ್ಮ ಕಣ್ಣ ಮುಂದೆ ಇದೆ. ಆಗಾಗ ನಮ್ಮ ಆಧುನಿಕಜೀವನದ ಒತ್ತಡದಲ್ಲಿ, ಕಾಲಿಗೆಳೆದರೆ ಮುಖಕ್ಕೆ ಸಾಲದ ಕುಂಟುಹೊದಿಕೆಯ ಅನಿವಾರ್ಯತೆಯಲ್ಲಿ ಯಾರಿಗಾದರೂ ಆಗಾಗ ಸ್ಮಶಾನವೈರಾಗ್ಯವೋ, ಅಭಾವವೈರಾಗ್ಯವೋ, ಪ್ರವಚನವೈರಾಗ್ಯವೋ ಬಂದು ಸರಳಜೀವನದ ಆಸಕ್ತಿ ಹಾಗೂ ಅಗತ್ಯ ಮನದಲ್ಲಿ ಮೂಡಿ ಮಾಸುವುದು ಕೂಡ ಇರುತ್ತದೆ.
ಆದರೆ ಯಾವತ್ತೂ ಸರಳ ಜೀವನತತ್ತ್ವಗಳನ್ನು ಹೇಳಿದಷ್ಟು ಸುಲಭವಾಗಿ ಪ್ರತಿಪಾದಿಸಲು ಸಾಧ್ಯವಿಲ್ಲ. ಪ್ರತಿಪಾದಿಸಿದಷ್ಟು ಸುಲಭವಾಗಿ ಆಚರಣೆಗೆ ತರಲು ಸಾಧ್ಯವಿಲ್ಲ. ಅದರಲ್ಲೂ ಆಧುನಿಕ ಪ್ರಲೋಭನೆಗಳ ಆಕ್ರಮಣವನ್ನೆದುರಿಸಿ ಗೆಲ್ಲುವುದು ಎಂತು ನೋಡಿದರೂ ಸರಳವಲ್ಲ. ಗೆಲ್ಲಬೇಕಾದರೆ ನಮ್ಮ ಜೀವನವೃಕ್ಷಕ್ಕೆ ಗೆಲ್ಲು ಬೇಕಲ್ಲ?
ಹೌದಲ್ಲ! ಗೆಲ್ಲೇ ಇಲ್ಲದ, ಅಷ್ಟಕ್ಕೂ ಮರವೇ ಅಲ್ಲದ ಗಿಡಗಳ ಮೇಲೆ, ಹುಲು ಸಸ್ಯಗಳ ಮೇಲೆ ನಮ್ಮ ಜೀವನವಿಂದು ನಿಂತಿದೆ. ಗೆದ್ದಲು ಹಿಡಿದ ಮನೆಯ ಮಾಡಿನ ಅಡ್ಡ ಪಕ್ಕಾಸುಗಳಿಗೆ ಅಲ್ಲಿ ಇಲ್ಲಿ ಊರು ಕೊಟ್ಟು (support-ಆನಿಕೆ) ಹಾಗೂಹೀಗೂ ನಿಲ್ಲಿಸುವಂತೆ, ನಮ್ಮ ಜೀವನವನ್ನು ಇಂದು ನಿಲ್ಲಿಸಲಾಗಿದೆ. ಆಧುನಿಕ ತಾರಸಿಮನೆಗಳು ಇಂದು ಮೇಲುನೋಟಕ್ಕೆ ಭದ್ರವಾಗಿ ಕಾಣಬಹುದಾದರೂ, ಅದರ ದುಬಾರಿಖರ್ಚಿಗೆ ಸಮವಾಗಿ ಬಾಳಿಕೆ ಬಾರದು. ಅದು ಮಾಡಿದ ಪರಿಸರನಾಶಕ್ಕೆ ಅದೆಷ್ಟು ಗೆಲ್ಲಿನ ಮರಗಳು ನಾಶವಾದವೆಂಬ ಲೆಕ್ಕ ತೆಗೆದರೆ ಆಘಾತವಾಗುವುದು. ಇಂತಹ ಮನೆಯೊಳಗಿನ ಜೀವನವಂತೂ ಹತ್ತಾರು ತಜ್ಞರು ಕೊಟ್ಟ ಊರಿನ ಮೇಲೆ ನಿಂತಿರುವುದು. ಗಂಭೀರವಾಗಿ ಆಲೋಚನೆ ಮಾಡಿದರೆ, ಪೇಟೆಯ ಜೀವನವು ಇಂದು ತುರ್ತುಚಿಕಿತ್ಸಾ ಘಟಕದಲ್ಲಿ ಜೀವ ಉಳಿಸುವ ಸಾಹಸದಂತೆ ಭಾಸವಾಗುವುದು. ಅಷ್ಟಲ್ಲವೆಂದು ಸಮಾಧಾನ ಪಟ್ಟುಕೊಂಡರೂ, ಮೃಗಾಲಯದ ಜೀವನಕ್ಕಿಂತ ಬೇರೆಯಾಗಿ ಕಾಣದು: ಪೇಟೆಯ ಪ್ರತಿಯೊಂದು ವಿಷಯವೂ ಸರ್ಕಾರೀ ಕೃಪಾಪೋಷಿತವಾಗಿ ನಡೆಯಬೇಕಾಗಿರುವುದು; ಪೇಟೆಯನ್ನು ನಡೆಸುವುದಕ್ಕಾಗಿ ಹಳ್ಳಿಗಳು, ಕಾಡುಗಳು ಸೂರೆಹೋಗಿರುವುದು.
ಸರಳವಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಹಳ್ಳಿಯ ಬಡವರ ಜೀವನವನ್ನು ಜಟಿಲಗೊಳಿಸುವ ಪ್ರಯತ್ನವು ಇಂದು ಎಗ್ಗಿಲ್ಲದೆ ಸಾಗಿದೆ. ಸ್ವಂತ ದುಡಿಮೆಯನ್ನೂ, ಪ್ರಕೃತಿಯ ಒಲುಮೆಯನ್ನೂ ಬಂಡವಾಳ ಮಾಡಿ ಗುಣಮಟ್ಟದ ಜೀವನ ಮಾಡುತ್ತಿದ್ದವರನ್ನೆಲ್ಲ ಮಣಿಸಿ, ಬ್ಯಾಂಕು ಮೊಬೈಲ್ಗಳಿಗೆ ದಾಸರಾಗುವಂತೆ ಮಾಡಲಾಗಿದೆ. ಊರುಗಂಬಗಳನ್ನು ಹೆಚ್ಚು ಮಾಡಿದಷ್ಟೂ ಹೆಚ್ಚು ಹೆಚ್ಚು ಮರದ ಗೆಲ್ಲುಗಳನ್ನು ಕತ್ತರಿಸಬೇಕಾಗುತ್ತದೆಂಬುದನ್ನು ನಿರೀಕ್ಷಿಸದೆ ಪೇಟೆಯನ್ನುಳಿಸುವ ಪ್ರಯತ್ನ ನಡೆದಿದೆ. ಊರುಗಂಬಗಳು ಹೆಚ್ಚಿದಷ್ಟೂ ಸಂಚಾರ ತೊಡಕಾಗುತ್ತದೆಂಬುದನ್ನು ಊಹಿಸಲಾರದಷ್ಟೂ ನಮ್ಮ ವಿದ್ಯಾಭ್ಯಾಸ ಸೋತಿದೆ. ಪೇಟೆಯ ರಸ್ತೆ ವಾಹನ ದಟ್ಟಣೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಆ ಪ್ರಮಾಣದಲ್ಲಿ ಪೇಟೆಯನ್ನುಳಿಸಲು ಹಳ್ಳಿಜನ ಪೇಟೆಗೆ ರಫ್ತಾಗಬೇಕಾಗಿದೆ.
ನಾವು ಎಲ್ಲಿ ಹೋದರೂ, ಏನು ಮಾಡಿದರೂ, ಎಲ್ಲರ ಎಲ್ಲದರ ಶಕ್ತಿಮೂಲವು ಸೂರ್ಯನೇ ಆಗಿದ್ದಾನಷ್ಟೆ. ಆ ಸೂರ್ಯನನ್ನು ಕೆಣಕುವ, ಮಣಿಸುವ, ಮನ್ನಣೆ ಪಡೆಯುವ ಒಂದಿನಿತು ಸ್ವಂತ ಸಾಮಥ್ರ್ಯವಾದರೂ ನಮಗಿಲ್ಲದಿರುವುದರಿಂದ, ನಾವೇನಿದ್ದರೂ ಮರಗಿಡಬಳ್ಳಿಗಳ ಅವಲಂಬನೆಯಿಂದ ಮಾತ್ರ ಸೂರ್ಯನನ್ನು ಗೆಲ್ಲಲು ಸಾಧ್ಯವಿರುವುದರಿಂದ, ನಮ್ಮ ಜೀವನದ ಗೆಲವೆಂದರೆ ಮರಗಿಡಬಳ್ಳಿಗಳ ಗೆಲವೇ ಆಗಿದೆ. ವನವು ಅಂತರ್ಗತವಾಗುವುದರಲ್ಲೇ ನಮ್ಮ ಜೀವನದ ಗೆಲವಿದೆ. ಹಾಗಾಗಿಯೇ ಮರದ ಗೆಲ್ಲುಗಳನ್ನು ಗೆಲ್ಲು ಎಂದು ಹೆಸರಿಸಲಾಗಿದೆ.
ಸರಳವಾದ ಪ್ರಕೃತಿವಿಚಾರಗಳನ್ನು ಅರ್ಥೈಸಿಕೊಳ್ಳಲಾಗದ ನಮ್ಮ ಜೀವನವಿಂದು ಹೇಳಿಕೊಳ್ಳುವಂತಹ ಗೆಲ್ಲುಗಳಿಲ್ಲದ ಭತ್ತ, ಕಬ್ಬು, ಅಡಿಕೆ, ತೆಂಗು, ಬಾಳೆ, ಹೊಗೆಸೊಪ್ಪು, ಕೋಸು, ಬದನೆ, ಅಲಸಂದೆಗಳಂಥ ಕಡಮೆ ಸಾಮಥ್ರ್ಯದ ಸಸ್ಯಗಳ ಮೇಲೆ ಮಾತ್ರ ನಿಂತಿದೆ.
ಸರಳ ಜೀವನವ್ಯಾಖ್ಯೆ
ಮರಗಳನ್ನು ಮರೆ ಮಾಡಿ, ಬರ ದೂಡುವೆವೆಂಬ ಅಹಂಕಾರದಿಂದ ಆಹಾರಧಾನ್ಯಗಳಲ್ಲಿ ಅಧಿಕ ಇಳುವರಿಯ ಕೃತಕ ಪ್ರಯತ್ನ ನಡೆದಿದೆ. ಹಲಸು, ಮಾವು, ಬೇಲ, ನೇರಳೆ, ಅಂಜೂರ, ಸೀಬೆ ಮೊದಲಾದ ಮರಗಳಿಂದ ಒದಗುವ (ಹಾಗಲ್ಲದೆ ಮರದ ಅವಲಂಬನೆಯಲ್ಲಿ ಬೆಳೆಯುವ ವಿವಿಧ ಗೆಡ್ಡೆಗಳಿಂದ ಒದಗುವ) ಸುಲಭ ಆಹಾರದ ಬಳಕೆ ಕಡಮೆಯಾಗುತ್ತಿದೆ. ನಿಜವಾಗಿ ಪ್ರಕೃತಿಯಲ್ಲಿ ನಮ್ಮ ಪರಸ್ಪರಾವಲಂಬನೆ ಹೇಗಿರಬೇಕೆಂದರೆ, ತೀರ ದುರ್ಬಲರಾದ ನಾವು ಯಾವತ್ತೂ ಸಸ್ಯಗಳ ಮೇಲೆ ಅವಲಂಬಿತರಾಗಿರಬೇಕು. ದುರ್ಬಲ ಸಸ್ಯಗಳಾದ ಭತ್ತ, ಕಬ್ಬು ಇತ್ಯಾದಿ, ತರಕಾರಿಗಳು ಸುಮ್ಮನೆ ಅಲ್ಲಿ ಇಲ್ಲಿ ಮಾವು, ಹಲಸುಗಳ ಅಡಿಯಲ್ಲಿ ಬರಬೇಕು. ಹಾಗೆ ಫಲವಂತವೆಂದು ಕಾಣಿಸದ ಬೇವು, ಹೊಂಗೆ, ಹೊನ್ನೆ, ಹಿಪ್ಪೆ, ಥವಸ, ಚಳ್ಳೆ, ಬಸುರಿ, ಆಲ, ಅರಳಿಗಳ ಬೆಂಬಲದಲ್ಲಿ ನಮ್ಮ ಮಾವುಹಲಸುಗಳಿರಬೇಕು. ಆಗ ಆಹಾರಕ್ಕೆಂದು, ಕೃಷಿಗೆಂದು, ನೀರಾವರಿಗೆಂದು, ಗೊಬ್ಬರಕ್ಕೆಂದು, ಅಗತೆಗೆಂದು, ರೋಗಕೀಟ ನಿಯಂತ್ರಣಕ್ಕೆಂದು, ದುಬಾರಿ ಮಾಲಿನ್ಯಕಾರಿ ವಿನಾಶಕಾರಿ ಪೆಟ್ರೋಲಿನ, ವಿದ್ಯುತ್ತಿನ ಅವಲಂಬನೆ ತೀರ ಕನಿಷ್ಠ ಮಟ್ಟಕ್ಕೆ ಇಳಿಯುವುದು. ಬಾಳೆ, ಕಬ್ಬುಗಳಂಥ ದುರ್ಬಲ ಸಸ್ಯಗಳು ಕೂಡ ಸ್ವಂತ ಸಾಮಥ್ರ್ಯದ ಮೇಲೆ ಊರುಗಂಬವಿಲ್ಲದೆ ನಿಲ್ಲುವಂತಾಗುವುದು.
ಸರಳ ಜೀವನ ಎಂದರೆ ಇದು. ಗುಣಮಟ್ಟದ ಜೀವನ ಎಂದರೂ ಇದು. ಪ್ರಕೃತಿಯಲ್ಲಿ ತಾನಾಗಿ ಆಗುವುದನ್ನು, ತಾನಾಗಿ ಆಗಬೇಕಾದುದನ್ನು ಹಾಗೆ ಆಗಲು ಬಿಡುವುದು; ಹಾಗೆ ಆಗುವ ಲಾಭವನ್ನು ನಾವು ಪಡೆಯುವುದು. ನಾವಷ್ಟು ಮಾಡಿದರೆ ಮಾತ್ರ ಅದು ಸಾಧು.
ಸರಳ ಜೀವನ ತತ್ತ್ವಗಳನ್ನು ಇನ್ನೂ ಒಂದಷ್ಟು ಗುಣಮಟ್ಟದೊಂದಿಗೆ ಅರ್ಥೈಸಿಕೊಳ್ಳಬೇಕಾದರೆ, ಸರಳ ಎಂಬ ಒತ್ತಕ್ಷರವಿಲ್ಲದ ಸರಳ ಶಬ್ದಕ್ಕೆ ಇರುವ ವಿವಿಧ ಅರ್ಥಗಳನ್ನು ಮನನ ಮಾಡುವುದು ಒಳ್ಳೆಯದು. ಹೇಗೆ ಗೆಲ್ಲು ಎಂಬುದಕ್ಕೆ ವಿಸ್ತಾರವಾದ ಅರ್ಥಸಾಮಥ್ರ್ಯ ಇದೆಯೋ ಹಾಗೆ ಸರಳ ಎಂಬ ಶಬ್ದಕ್ಕೆ ಕೂಡ ಇದೆ. ನಮ್ಮ ಜೀವನಭಾಷೆಯು ಪ್ರಕೃತಿಯ ಭಾಷೆಗೆ ಅನುಗುಣವಾಗಿ ರೂಪಗೊಂಡಿದೆ. ಪ್ರತಿಯೊಂದು ಶಬ್ದವೂ ನಿರ್ದಿಷ್ಟ, ನಿರ್ದುಷ್ಟ ಉದ್ದೇಶಗಳೊಂದಿಗೆ ಸ್ಫುರಣೆಗೊಂಡಿದೆ. ನಮ್ಮ ಜೀವನಭಾಷೆಯು ಪ್ರಕೃತಿಯ ಭಾಷೆಗೆ ಬರೆದ ಭಾಷ್ಯವಾಗಿದೆ. ನಮ್ಮ ಜೀವನಭಾಷೆಯು ಪ್ರಕೃತಿಯ ಭಾಷೆಯನ್ನು ಎಂದೂ ಕೆಡಿಸದಂತೆ ಎಚ್ಚರವಹಿಸುವ ಜವಾಬ್ದಾರಿಯನ್ನು ಈ ಶಬ್ದಗಳು ಉಚ್ಚರಿಸುತ್ತವೆ. ಇಂತಹ ಸದುದ್ದೇಶಗಳ ನಡುವೆ ವಿಕಸಿಸಿದ ಸರಳ ಎಂಬ ಶಬ್ದಕ್ಕಾದರೊ ಇರುವ ವೈವಿಧ್ಯಮಯ ಅರ್ಥಗಳನ್ನು ಈಗ ಗಮನಿಸೋಣ.
ಸರಳ = ಬಡ, ನೇರ, ಉದಾರ, ಧಾರಾಳ, ಅಜ್ಞಾನ, ಮೂಢ, ಅನನುಭವ, ಮಂಕು, ಸಾಮಾನ್ಯ, ಋುಜು, ಸೋಗಿಲ್ಲದ, ಸಹಜ, ಪ್ರಾಮಾಣಿಕ, ನಿಷ್ಕಪಟ, ಪ್ರಾಕೃತ, ನಿರಲಂಕೃತ, ನಿರುಪಾಧಿಕ, ಆಡಂಬರರಹಿತ, ತೊಡಕಿಲ್ಲದ, ಜಟಿಲವಲ್ಲದ, ಸಂಕೀರ್ಣವಲ್ಲದ, ಕಷ್ಟವಿಲ್ಲದ, ಸೌಮ್ಯವಾದ, ಸುಲಭವಾದ, ಸಲೀಸಾದ, ಅಗ್ನಿ, ಅಂಬು, ನೀರಝರಿ, ಕಣಿ, ಬಾಣ, ಕೈಕಡಗ, ದೇವದಾರುಮರ.
ಸಂದರ್ಭಾನುಸಾರ ಒಬ್ಬನೇ ವ್ಯಕ್ತಿಯು ಗಂಡ, ಅಪ್ಪ, ಮಗ, ಮಾವ ಎಲ್ಲ ಆಗುವ ಹಾಗೆ; ಸಂದರ್ಭಾನುಸಾರ ಒಂದೇ ಧಾನ್ಯವು ರೊಟ್ಟಿ, ದೋಸೆ, ಗಂಜಿ, ಪಾಯಸ, ಕಜ್ಜಾಯ ಎಲ್ಲ ಆಗುವ ಹಾಗೆ; ಸಂದರ್ಭಾನುಸಾರ ಒಂದೇ ಮರವು ಸೌದೆ, ಬಾಗಿಲು, ಸಟ್ಟುಗ, ಕುರ್ಚಿ, ಮೂರ್ತಿ ಎಲ್ಲ ಆಗುವ ಹಾಗೆ; ಸಂದರ್ಭಾನುಸಾರ ಶೃಂಗಾರ, ವೀರ, ರೌದ್ರ, ಬೀಭತ್ಸಾದಿ ರಸಗಳು ಉದಿಸುವ ಹಾಗೆ, ಸಂದರ್ಭಾನುಸಾರ ಶಬ್ದಗಳು ವೈವಿಧ್ಯಮಯ ಅರ್ಥಗಳನ್ನು ಹೊರಸೂಸುತ್ತವೆ. ಆಗ ಅದು ಸಾಹಿತ್ಯವೆನಿಸುತ್ತದೆ. ಜೀವನದ ಗುಣಮಟ್ಟ ಏರುತ್ತದೆ.
ಗುಣನಿಯಂತ್ರಣ
ಅಂದಹಾಗೆ ಗುಣಮಟ್ಟ ಎನ್ನುವುದಕ್ಕೆ ಅಡುಗೆಯ ರುಚಿ ಎಂಬ ಅರ್ಥವೂ ಇದೆ. ಗುಣಕಾರ ಎಂದರೆ ಅಡುಗೆ ಮಾಡುವವನು ಎಂಬ ಅರ್ಥವಿರುವುದು ಗಮನೀಯವಾಗಿದೆ. ಬೆಂಕಿ ಇಲ್ಲದೆ ಅಡುಗೆ ಮಾಡುವ ನಳನಿಗೆ ಎಂದಿಗಾದರೂ ಮನ್ನಣೆ ಇದೆ. ನಳಪಾಕ ಎಂಬುದೊಂದು ಸಹಜ ಸಾಂಸ್ಕøತಿಕ ನುಡಿಗಟ್ಟಾಗಿ ನಮ್ಮ ನಡುವೆ ಇದೆ. ಹತ್ತುಹಲವು ಭೋಗ-ವ್ಯಸನ ಪೀಡಿತ ಜೀವನದಿಂದ ಜರ್ಝರಿತವಾದ ದೇಹಕ್ಕೆ ಸ್ಥೂಲಕಾಯಕ್ಕೆ ಬೆಂಕಿ ಇಲ್ಲದ ಅಡುಗೆ ಶಾಂತಿಯನ್ನೂ ಸಾಂತ್ವನವನ್ನೂ ಕೊಡುವುದು ಅನುಭವಸಿದ್ಧವಿದೆ. ಪ್ರಕೃತಿಚಿಕಿತ್ಸಾ ವಿಧಾನವಿಂದು ಕಲಿಕಾ ವಿಷಯವಾಗಿ ಪ್ರಾಮುಖ್ಯ ಪಡೆದಿದೆ. ಇದೆಲ್ಲ ಸರಳ ಜೀವನದ ಮಹತ್ತ್ವವನ್ನು ಸಮರ್ಥವಾಗಿ ವಿವರಿಸುತ್ತದೆ. ಆದರೆ ವೈದ್ಯಗತವಾಗುತ್ತಿರುವ ವಿಚಾರಗಳು ವ್ಯಕ್ತಿಗತವಾದಾಗ ಮಾತ್ರ ಜೀವನದ ಗುಣಮಟ್ಟ ಏರುತ್ತದೆ. “ಸರ್ವಂ ಪರವಶಂ ದುಃಖಂ – ಸರ್ವಂ ಆತ್ಮವಶಂ ಸುಖಂ” ಎಂಬ ನುಡಿಗಟ್ಟು ಸರಳಜೀವನದ ಅಗತ್ಯವನ್ನು ಸಾರಿ ಹೇಳುತ್ತದೆ. ಆತ್ಮಗತವಾಗುವುದೆಂದರೆ ನಮ್ಮ ದುಡಿಮೆಯಿಂದ ನಮ್ಮ ಅನ್ನ ಬರುವುದೇ ಆಗಿದೆ. ಅನ್ನದ ದುಡಿಮೆಯೊಂದೇ ಜ್ಞಾನ ಮಾರ್ಗವಾಗಿದೆ. ಇಂತಹ ಆತ್ಮಗತ ಜ್ಞಾನದಿಂದ ಆರೋಗ್ಯ ಮತ್ತು ಆನಂದ ಸಿದ್ಧಿಸಿದಾಗ ಜೀವನದ ಗುಣಮಟ್ಟ ಏರುತ್ತದೆ. ಗಾಳಿಪಟದಂತೆ ಏರಿ ಪ್ರಕೃತಿವಿಸ್ತಾರದಲ್ಲಿ ಸೌಂದರ್ಯಾದ್ಭುತವನ್ನು ನೋಡುತ್ತ ಆತ್ಮವು ಸಂಭ್ರಮಿಸುತ್ತದೆ. ನಮ್ಮ ದೇಹವು ಭೂಮಿಯಲ್ಲಿ ಮತ್ತು ದುಡಿಮೆಯಲ್ಲಿದ್ದಾಗ ಮಾತ್ರ ಈ ಸಂಭ್ರಮವು ಸಾಧ್ಯವಾಗುತ್ತದೆ. ಏಕೆಂದರೆ ಗಾಳಿಪಟದ ಗುಣಮಟ್ಟ ಏರಬೇಕಾದರೆ ಅದರ ಗುಣದ ನಿಯಂತ್ರಣ ನಮ್ಮ ಕೈಯೊಳಗೆ ಇರಬೇಕಾಗುತ್ತದೆ. ಗುಣ ಎಂದರೆ ದಾರ ಎಂಬ ಅರ್ಥವೂ ಇರುವುದನ್ನು ನಾವು ಜವಾಬ್ದಾರಿಯಿಂದ ಗಮನಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ.
ಸುಖವು ಸರಳವಾದಾಗ, ಅದು ಆತ್ಮವಶವಾದಾಗ ಹರಿದ ಬಟ್ಟೆಯಲ್ಲೂ, ಹೆಜ್ಜೆಗುರುತು ಉಳಿಯುವ ಬರಿಗಾಲ ನಡಿಗೆಯಲ್ಲೂ ಶ್ರೀಮಂತಜೀವನವಾಗಿಬಿಡುತ್ತದೆ. ದಾರಿ ಬದಿಯ ನೀರಿನಲ್ಲಿ, ದಾರಿಬದಿಯ ಹಣ್ಣಿನಲ್ಲಿ ಸಂಭ್ರಮವು ಸಾಧ್ಯವಾಗುತ್ತದೆ. ಹಾಗಾಗಿ ಸರಳ ಜೀವನವೆಂದರೆ ಶ್ರೀಮಂತವೆಂದರೂ ಸರಿಹೊಂದುತ್ತದೆ, ಬಡತನವೆಂದರೂ ಸರಿಹೊಂದುತ್ತದೆ. ಬಡತನವೂ ಸಿರಿತನವಾಗಿಬಿಡುತ್ತದೆ. ಕತ್ತಲೆಯೂ ಬೆಳಕಾಗಿ ಬಿಡುತ್ತದೆ. ಕತ್ತಲ ನಿದ್ರೆಗೆ ಆ ಶಕ್ತಿ ಇದೆ. ಹಾಗಾಗಿ ಋಜು, ಪ್ರಾಕೃತ, ನಿರಲಂಕೃತ ಇತ್ಯಾದಿ ಅರ್ಥಗಳೆಲ್ಲ ‘ಸರಳ’ ಎಂಬೊಂದು ಶಬ್ದದಿಂದ ಸಂಗೀತವಾಗಿ ಹೊರಹೊಮ್ಮುತ್ತದೆ.
ಆದರೆ, ಸರಳವೆಂದರೆ ಅಜ್ಞಾನ, ಮೂಢ ಎಂಬ ಅರ್ಥವನ್ನೇ ಪ್ರಧಾನವಾಗಿ ನೋಡುವ ಸ್ಥಿತಿ ಯಾವತ್ತಿಗಾದರೂ ಇರುವಂಥಾದ್ದು. ಪ್ರಕೃತಿ ಸಹಜವಾದದ್ದರಿಂದ ಜಟಿಲವಲ್ಲದ ಸರಳತೆಯು ಅತ್ಯಂತ ಜಟಿಲ ವಿಷಯವಾಗಿಬಿಡುತ್ತದೆ. ಸರಳವೆಂದರೆ ನೇರ ಎಂಬ ಅರ್ಥವು ಒಮ್ಮೆ ಬರುತ್ತದೆ. ಆದರೆ ಪ್ರಕೃತಿಯಲ್ಲಿ ಯಾವ ವಿಷಯವೂ ನೇರವಲ್ಲ ಸರಳವಲ್ಲ. ಯಾವುದೇ ಮರವನ್ನು ಎಲೆಯನ್ನು ಗಮನಿಸಿ, ನೀರ ಹರಿವನ್ನು ಗಮನಿಸಿ, ಬೆಳಕಿನ ಕಿರಣದ ಹೊರತಾಗಿ ಎಲ್ಲವೂ ವಕ್ರವೇ. ಹಾಗಾಗಿ ಪ್ರಕೃತಿಯಲ್ಲಿ ಯಾವುದು ಸರಳ ಯಾವುದು ಜಟಿಲ ಎಂದು ನಿರ್ಧರಿಸಲಾಗದ ದ್ವಂದ್ವವಿರುವುದನ್ನು ಕೂಡ ಗಮನಿಸುತ್ತ ಜೀವನದ ಗುಣಮಟ್ಟವನ್ನು ಏರಿಸಬೇಕಾಗುತ್ತದೆ. ಅಂದ ಹಾಗೆ ಏರುವ ಮರಕ್ಕೆ ಏರದುಳಿಯುವ ಗೆಲ್ಲು ಇದೆ. ಏರಿದ ಮರದಿಂದ ಹಣ್ಣು ಆತುರಾತುರದಿಂದ ಭೂಮಿಗೆ ಇಳಿದುಬರುತ್ತದೆ. ಪ್ರಕೃತಿಯ ವಿವರಗಳನ್ನು ಪ್ರಾಂಜಲ ಮನಸ್ಸಿನಿಂದ ಗಮನಿಸಿದಾಗ ಮಾತ್ರ ಜಟಿಲವಾದ ಸರಳತೆಯು ಸರಳವಾಗಿ ಅನುಭವಕ್ಕೆ ಬರುತ್ತದೆ.
ಯಾವುದೇ ಸಸ್ಯಕ್ಕಾದರೂ, ಜೀವಿಗಾದರೂ ಹುಟ್ಟು, ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಸಾವಿನ ಚಕ್ರ ಅತ್ಯಂತ ಸಹಜ ಹಾಗೂ ಸರಳ. ಇಲ್ಲಿ ಯಾರದೇ ಯಾವುದೇ ಪ್ರಯತ್ನವಿಲ್ಲದೆ ಜೀವನಚಕ್ರ ಸಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಪ್ರಯೋಗ, ಪ್ರಯಾಸ ಏನೂ ಇಲ್ಲದೆ ಜೀವನ ಜಗತ್ತು ನಡೆಯುತ್ತದೆ. ಹಾಗಾಗಿ ಅಲ್ಲಿ ಕೃಷಿಯೂ ಇಲ್ಲ, ಋಷಿಯೂ ಇಲ್ಲ. ಆದರೆ ಮನುಷ್ಯನಿಗೆ ಹಾಗಲ್ಲ. ಕೃಷಿ ಅನಿವಾರ್ಯ. ಹಾಗಾಗಿ ಋತವನರಿಯುವ ತಪಸ್ಸು ಕೂಡ ಅನಿವಾರ್ಯ. ಇಲ್ಲದಿದ್ದರೆ ಕೃಷಿ ಹಾದಿ ತಪ್ಪುತ್ತದೆ. ಪೇಟೆ ಬೆಳೆಯುತ್ತದೆ. ಸರಳವಾಗಿ ನಡೆಯುವ ಪ್ರಕೃತಿಚಕ್ರವನ್ನು ಪ್ರಯತ್ನಪೂರ್ವಕವಾಗಿ ನಡೆಸಬೇಕಾಗುತ್ತದೆ. ಹಾಗಾಗಿ ಹಳ್ಳಿಯ ಮಿತಿಯೊಳಗೆ ಉಳಿಯುವಂಥ ಕೃಷಿಯ ಬದುಕನ್ನು ಸರಳ ಜೀವನ ಎಂದು ಹೇಳಬಹುದಾಗಿದೆ.
ಸರಳ ಜೀವನವೆಂದರೆ ಅಲ್ಲಿ ಕಷ್ಟಗಳು ಇಲ್ಲವೆಂದಲ್ಲ. ಹಗಲು ರಾತ್ರಿಗಳ ಹಾಗೆ ಇರುವ ಕಷ್ಟ-ಸುಖದ ಚಕ್ರದಲ್ಲಿ ಕಷ್ಟವನ್ನು ತೆಗೆದು ಕೇವಲ ಸುಖವನ್ನು ಮಾತ್ರ ಅನುಭವಿಸಲು ಬರುವುದಿಲ್ಲ. ರಾತ್ರಿಯನ್ನು ತೆಗೆದ ವಿದ್ಯುತ್ತು, ಕೇವಲ ಸುಖವನ್ನು ಕೊಡಲೆಂದು ಬಂದ ವಿದ್ಯುತ್ತಿನ ಪರಿಣಾಮವಾಗಿ, ಕಷ್ಟಗಳ ಜೊತೆಗಿದ್ದ ಸರಳ ಜೀವನವನ್ನು ಇನ್ನಷ್ಟು ಮತ್ತಷ್ಟು ಸರಳಗೊಳಿಸುವ ಪ್ರಯತ್ನದ ಪರಿಣಾಮವಾಗಿ, ಬೆಳೆದ ಪೇಟೆಯ ಪರಿಣಾಮವಾಗಿ, ಸರಳ ಎಂಬ ಶಬ್ದಕ್ಕೆ ಈಗ ಬಹಳ ಅಪಾಯಕಾರಿಯಾದ ಅರ್ಥಸಿದ್ಧಿಯಾಗಿದೆ. ಸರಳ ಎಂದರೆ ಅಂಬು, ಕಣೆ, ಬಾಣ ಎಂಬ ಅರ್ಥವಿರುವುದನ್ನು ನಾವೀಗ ಗಮನಿಸಬೇಕಾಗಿದೆ.
ವಿಜ್ಞಾನದ ದುರ್ಬಳಕೆ
ಪ್ರಕೃತಿಯ ಪರವಾಗಿ ಯಾವುದೇ ಜವಾಬ್ದಾರಿ ಇಲ್ಲದ ಸರಳ ಜೀವನ ಮಾಡುವುದಕ್ಕಾಗಿ ವಿಜ್ಞಾನವನ್ನು ದುರ್ಬಳಕೆ ಮಾಡಿದ ಪರಿಣಾಮವಾಗಿ ನಮ್ಮ ಪ್ರತಿಯೊಂದು ಪ್ರಯೋಗವೂ ಬಾಣವಾಗಿ (ಸರಳಾಗಿ) ನಮ್ಮ ಮೇಲೆ ಬಂದೆರಗುತ್ತಿದೆ. ಪ್ರತಿಯೊಬ್ಬರೂ ಇನ್ನೊಬ್ಬರನ್ನು ಸೋಲಿಸುವ ವ್ಯಾಪಾರದಲ್ಲಿ ನಿಷ್ಣಾತರಾಗುವುದನ್ನು ವಿದ್ಯಾವಿಕಾಸವೆಂದು ವಿಶ್ಲೇಷಿಸಲಾಗುತ್ತಿದೆ. ಪ್ರಕೃತಿಧರ್ಮವನ್ನು ಮನ್ನಿಸದೆ ತನ್ನ ಜೀವನಧರ್ಮವಿದೆಂದು, ಪ್ರತಿಜ್ಞಾಬದ್ಧರಾಗಿ ವಿದ್ಯೆಯನ್ನೂ, ವಿಜ್ಞಾನವನ್ನೂ ದುರುಪಯೋಗ ಮಾಡಿದರೆ ಸರಳಮಂಚದ ಶಿಕ್ಷೆ ಯಾರಿಗಾದರೂ ಅನಿವಾರ್ಯವೆಂಬುದನ್ನು ಮಹಾಭಾರತ ಕಥಾನಕವು ಬಹಳ ಪರಿಣಾಮಕಾರಿಯಾಗಿ ಸಾರಿದೆ. ಸರಳಮಂಚದ ಮೇಲೆ ಪ್ರಾಣತೆತ್ತ ಭೀಷ್ಮಾಚಾರ್ಯರ ಜೀವನಾಂತ್ಯಕ್ಕಿಂತಲೂ ಕಡೆಯಾಗಿ ನಮ್ಮ ಬದುಕು ಮತ್ತು ಅಂತ್ಯವು ರುಗ್ಣಾಲಯದ ಮಂಚದ ಮೇಲೆ ನಡೆಯುವಂತಾಗಿದೆ.
ಹಾಗೆ ದೇವರ ಮುಂದೆ ನಿಂತಾಗ ಸರಳವಾಗಿ ನಮ್ಮ ಮನಸ್ಸಿನೊಳಗೆ ತೀರ್ಮಾನವಾಗಬೇಕಾದ ನ್ಯಾಯಾನ್ಯಾಯ ವಿಚಾರಗಳಿಗೆ ಜಟಿಲವಾದ ನ್ಯಾಯಾಲಯ ವ್ಯವಸ್ಥೆ ಬೇಕಾಗಿದೆಯೇನೋ! ದೇವಾಲಯದಲ್ಲಿ ಮಧುರವಾಗಿ ನಡೆದ ಮದುವೆಯಾದರೂ ನ್ಯಾಯಾಲಯದಲ್ಲಿ ಮುರಿದುಬೀಳುವಂತಾಗಿದೆ. ಮಂತ್ರವಾಗಬೇಕಾದ ಜೀವನವು ಯಂತ್ರವಾಗುತ್ತಿದೆ. ಸರಳ ಸನ್ನೆಯ ಕೆಲಸಕ್ಕೆ ಕೂಡ ಕರಾಳ ಯಂತ್ರಗಳು ಬೇಕಾಗಿವೆ. ಸರಳ ಎಂಬ ವಿಷಯವು ಹಾಗೂ ಹೀಗೂ ಅದೆಷ್ಟು ಕಠಿಣವಾಗಿದೆ ಎಂದರೆ, ಅಕ್ಷರಮಾಲೆಯಲ್ಲಿ ಕೊನೆಯ ಅಕ್ಷರಗಳನ್ನು ಬಳಸಿ ತಯಾರಾದ ಈ ಶಬ್ದವು ನಮ್ಮ ಜೀವನದಲ್ಲೂ ಕೊನೆಯ ಬಳಕೆಯ ವಿಷಯವಾಗಿದೆ.
ಸತ್ಯವ್ರತ
ಸರಳ ಜೀವನ ಎನ್ನುವುದಿದು ಸತ್ಯವ್ರತದ ಹಾಗೆ. ಏನು ಇದೆಯೋ, ಏನು ಆಗಿದೆಯೋ ಅದನ್ನು ಅಂತೆಯೆ ಹೇಳುವುದು ಯಾರಿಗಾದರೂ, ಯಾವತ್ತಿಗಾದರೂ ಸುಲಭವೇ. ಅದನ್ನು ನೆನಪಿಟ್ಟು, ಕಥೆಕಟ್ಟಿ ಹೇಳಬೇಕಾಗಿಲ್ಲ. ಆದರೂ ಸ್ವಂತಕ್ಕೆ ಲಾಭ ಅಥವಾ ನಷ್ಟವಾಗುವ ಸಂದರ್ಭದಲ್ಲಿ ಮಾನಾಪಮಾನವಾಗುವ ಸಂದರ್ಭದಲ್ಲಿ ಸತ್ಯ ಹೇಳುವ ಕಷ್ಟ ನಮಗೆಲ್ಲರಿಗೂ ಅನುಭವ ವೇದ್ಯವೇ ಹೌದು.
ಆದರೂ ಈ ಜಗತ್ತು ಮತ್ತು ನಮ್ಮ ಜೀವನ ನಿಂತಿರುವುದು, ಉಳಿದಿರುವುದು ಸತ್ಯದ ಮೇಲೆಯೆ. ಸತ್ಯವು ಸ್ಥಾಯಿ ಅಲ್ಲದಿರುತ್ತಿದ್ದರೆ ಅವರು ನಮ್ಮ ಅಪ್ಪ-ಅಮ್ಮ ಎಂಬುದು ಕೂಡ ನಿಶ್ಚಿತವಾಗುತ್ತಿರಲಿಲ್ಲ. ಸತ್ಯದ ಸ್ಥಾಪನೆಗಾಗಿ ಇರುತ್ತಿರುವ ಕಾನೂನುಗಳಾವವೂ ಕೆಲಸ ಮಾಡುತ್ತಿರಲಿಲ್ಲ. ಎಲ್ಲವೂ ಕೇವಲ ಕಳ್ಳ ನೋಡುಗಳೇ ಆದರೆ ಯಾರಿಗೂ ಏನೂ ಸಿಗುತ್ತಿರಲಿಲ್ಲ. ಕೊಂಡ ಸಂಬಳಕ್ಕೆ ಪ್ರತಿಯಾಗಿ ಕೆಲಸ ಮಾಡಬೇಕೆಂಬ ಸತ್ಯಪ್ರಜ್ಞೆ (ಪಾಪ-ಪುಣ್ಯ ಪ್ರಜ್ಞೆ) ಜಾಗೃತವಾಗಿರದಿದ್ದರೆ ನಮಗಿಂದು ಯಾವುದೇ ಸಾಧನ, ಪ್ರಸಾಧನ ಸಂಪತ್ತು ಇರುತ್ತಿರಲಿಲ್ಲ.
ಅಂತಿಮವಾಗಿ ಉಳಿಯುವ ಸತ್ಯವೆಂದರೆ: ಸರಳತೆಯೆಂದರೆ ಪ್ರಕೃತಿಯಿಂದ ನಾವು ಪಡೆದ ಪ್ರತಿಯೊಂದು ಸವಲತ್ತಿಗೂ, ಸೌಭಾಗ್ಯಕ್ಕೂ ಪ್ರತಿಯಾಗಿ ಪ್ರಕೃತಿಗೆ ಕೊಡುವುದು. ಸಂಬಳ ಪಡೆವ ಉದ್ಯೋಗಿಯ ಜವಾಬ್ದಾರಿಯಿಂದ ಪ್ರಕೃತಿಯ ಪರವಾಗಿ ಕೆಲಸ ಮಾಡುವುದು. ಪ್ರಕೃತಿಯನ್ನು ದಾತಾರನೆಂದೂ, ನೇತಾರನೆಂದೂ ಮಾನ್ಯ ಮಾಡುವುದು. ಸರಳತೆ ಎಂದರೆ ನಾವೇನು ವಿದ್ಯಾಬುದ್ಧಿ ಸಂಪತ್ತುಗಳನ್ನು ಪಡೆದಿದ್ದೇವೋ ಅದಕ್ಕೆ ಪ್ರಕೃತಿಯು ಕಾರಣವೆಂದು ತಿಳಿದು, ಅಹಂಕಾರ ತೊರೆದು, ವಿನೀತರಾಗುವುದು. ನಮಗಿಂತ ಪ್ರತಿಯೊಂದು ವಿಷಯದಲ್ಲೂ ಇಪ್ಪತ್ತುಪಟ್ಟು ಹೆಚ್ಚು ಬಳಸುವ ‘ಅಭಿವೃದ್ಧಿ’ ಹೊಂದಿದ ದೇಶಗಳನ್ನು ಮಾದರಿಯಾಗಿ ತೆಗೆದುಕೊಳ್ಳದೆ, ಭಾರತೀಯತೆಯ ಸಾಂಸ್ಕøತಿಕ ಬೇರುಗಳ ಮೂಲಕ ಭೂಮಿಗೆ ಭದ್ರವಾಗಿ ಆಹಾರವನ್ನು ಗ್ರಹಿಸುವುದು; ಗೆಲ್ಲುಳ್ಳ ಮರವಾಗಿ ಸೂರ್ಯನಿಂದ ವಿಚಾರವನ್ನು ಸಂಗ್ರಹಿಸುವುದು. ಕೃತಕಗೊಬ್ಬರ, ಅಗತೆ, ನೀರಾವರಿಗಳಿಗೆ ಬದಲಾಗಿ ಸಾವಯವವಾಗುವುದು. ಹಾಗೊಂದು ವೇಳೆ ಪ್ರಪಂಚದೊಳಗಿರುವ ಎಲ್ಲ ಮನುಷ್ಯರೂ ಆ ಅವರಂತೆ ಅಭಿವೃದ್ಧಿ ಹೊಂದಿ ಓದು, ವಿಜ್ಞಾನ, ಯಂತ್ರ, ತಂತ್ರ, ಉದ್ಯೋಗ, ವ್ಯಾಪಾರಗಳ ಮೂಲಕ ಭೋಗಜೀವನ ಶ್ರೀಮಂತಿಕೆಯನ್ನು ಪಡೆಯುವಂತಾದರೆ ಈ ಪ್ರಪಂಚದ ಸಂಪತ್ತೆಲ್ಲವೂ ಒಂದೆರಡು ದಿನಗಳಲ್ಲಿ ಬರಿದಾಗುವ ಭಯಾನಕ ಚಿತ್ರವನ್ನು ಊಹಿಸಿಕೊಳ್ಳುವುದು. ಚಿತ್ರವು ಸೃಜನಾತ್ಮಕವಾಗುವಂತೆ ನಡೆಯುವುದು. ನಡೆಯುವುದು ಎಂದರೆ ಬಲುವಿಧ ಅರ್ಥಗಳನ್ನು ಸೂಸಬಹುದು. ಎಷ್ಟು ಸಾಧ್ಯವೋ ಅಷ್ಟು ವಾಹನವನ್ನು ಬಿಟ್ಟು ನಡೆಯುವುದು ಕೂಡ ಇದರೊಳಗೆ ಒಂದು. ವೈಯಕ್ತಿಕ ಅನುಭೋಗದ ಮೇಲೆ (Per Capita consumption) ಅಭಿವೃದ್ಧಿಯನ್ನು ಅಳೆಯುವ ಬದಲು ವೈಯಕ್ತಿಕ ಸ್ವಾವಲಂಬನೆಯ ಮೇಲೆ (Per Capita Independence/Self-reliance) ಅಭಿವೃದ್ಧಿಯನ್ನು ಅಳೆಯುವುದು. ಇದ್ದಲ್ಲೇ ಇದ್ದು ಮೊಳೆಯುವ ಬೀಜವು ಬೆಳೆಬೆಳೆದು ಆಕಾಶದೆತ್ತರ ಬಿತ್ತರಗಳಲ್ಲಿ ವಿಹರಿಸುವ ಪ್ರಕೃತಿಯದ್ಭುತದಲ್ಲಿ ಅಭಿವೃದ್ಧಿಯ ಬೀಜಮಂತ್ರವನ್ನು ಧ್ಯಾನಿಸುವುದು. ಹೀಗೆ ಸರಳ ಜೀವನದ ಆಲೋಚನೆಗಳೊಂದಿಗೆ ಮುಂದುವರಿಯುವುದು ಅಥವಾ ಸರಳ ಜೀವನವಿದ್ದ ಆ ದಿನಗಳ ಕಡೆಗೆ ಒಂದಷ್ಟು ಹಿಂದುವರಿಯುವುದು.
ಹಾಗಾದರೆ ನಾವು ಸುಖದ, ಅನುಕೂಲದ, ಐಷಾರಾಮದ ಜೀವನವನ್ನೆಂದೂ ಮಾಡಲಾಗದೆ? ನಮ್ಮದೇ ಪ್ರಯೋಗದ, ಪರಿಶ್ರಮದ ಫಲವಾಗಿ ಒದಗಿ ಬರುವ ಭೋಗಜೀವನ ಸಾಧ್ಯತೆಯನ್ನು ಸ್ವಾವಲಂಬನೆ ಎಂದೆನಬಾರದೆ? ಸಾಮಾನ್ಯ ಜನರು ಕೂಡ ವಿಲಾಸೀ ಜೀವನ ನಡೆಸಲು ಸಾಧ್ಯವಾಗುತ್ತಿರುವ ಈ ದಿನಗಳಲ್ಲಿ ನಾವು ಸಾಮಥ್ರ್ಯವಿದ್ದೂ ಅವರಿಗಿಂತ ಕೀಳಾಗಿ ಬದುಕಬೇಕೆ? ತ್ಯಾಗವೇ ನಮ್ಮ ಗೋಳಾಗಬೇಕೆ? ಬಡತನವೇ ನಮ್ಮ ಬಾಳಾಗಬೇಕೆ? – ಎಂಬಿತ್ಯಾದಿ ಸಂದೇಹಗಳು, ಉದ್ವೇಗದ ಪ್ರಶ್ನೆಗಳು ನಮಗೆ ಆಗಾಗ ಬರಬಹುದು. ಸಾಂತ್ವನದ ಉತ್ತರಗಳ ಜೊತೆಜೊತೆಗೆ ಉದಾಸೀನದ ಉತ್ತರಗಳು ಕೂಡ ನಮಗೆ ಸಿಗಬಹುದು. ಇಂತಹ ಸಂದರ್ಭದಲ್ಲಿ ನಮ್ಮ ಹಿರಿಯರು ನೀಡಿದ ಸುಂದರ ಸತ್ಯಸೂತ್ರವನ್ನು ನಾವೀಗ ಗಮನಿಸಬಹುದು:
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್
ನ ಬ್ರೂಯಾತ್ ಸತ್ಯಮಪ್ರಿಯಂ |
ಪ್ರಿಯಂ ಚ ನಾನೃತಂ ಬ್ರೂಯಾತ್
ಏಷ ಧರ್ಮಃ ಸನಾತನಃ ||
ಎಂದರೆ ನಾವು ಲೋಕಹಿತವನ್ನು ಅನುಲಕ್ಷಿಸುತ್ತಾ ಒಂದಷ್ಟು ಸತ್ಯಗಳನ್ನು ಮುಚ್ಚಿಡಬಹುದು. ಲೋಕದ ಹಿತ ಎಂದೆನ್ನುವಾಗ, ಈ ಲೋಕದಲ್ಲಿ ನಾವು ಕೂಡ ಇರುವುದರಿಂದ ನಮ್ಮ ಹಿತವನ್ನೂ ಕಾಯುವಂತೆ ಒಂದಷ್ಟು ಅಪ್ರಿಯ ಸತ್ಯಗಳನ್ನು ಮುಚ್ಚಿಡಬಹುದು. ಸತ್ಯವನ್ನು ಮುಚ್ಚಿಡುವುದಕ್ಕೂ ಸುಳ್ಳು ಹೇಳುವುದಕ್ಕೂ ಇರುವ ಅಂತರವನ್ನು ಗಮನಿಸುತ್ತ ನಮ್ಮ ಜೀವನದಲ್ಲಿ ಸರಳತೆಯ ಜೊತೆಗೆ ಒಂದಷ್ಟು ಸುಖಭೋಗಗಳನ್ನು ಅನುಭವಿಸಬಹುದು. ನಮ್ಮ ಜೀವನಕ್ಕಾಗುವ ಸರಳತೆ ಯಾವುದು, ಜಟಿಲತೆ ಯಾವುದು ಎಂಬುದನ್ನು ನಮ್ಮ ನೆಲೆಯಲ್ಲಿ ನಾವು ನಿರ್ಧರಿಸಬಹುದು. ಮೇಲಿನ ನಾಲ್ಕು ವಾಕ್ಯಗಳ ಸರಳೀಕೃತ ಸಾರಾಂಶವನ್ನು ಹೇಳುವುದಾದರೆ, ನಾಲ್ಕನೇ ಒಂದು ಭಾಗದಷ್ಟು ಸುಳ್ಳು ಹೇಳಿಬಿಡಬಹುದು ಅಥವಾ ಐಷಾರಾಮಿ ಜೀವನ ಮಾಡಬಹುದು. ಅಷ್ಟು ಪ್ರಕೃತಿಯ ಶೋಷಣೆ ಮಾಡಬಹುದು. ಹೀಗೊಂದು ಸಮಾಧಾನದ ತೀರ್ಮಾನಕ್ಕೆ ಬರಬಹುದೇನೋ!
ಯಾರೇನು ಮಾಡಿದರೂ, ಮಾಡದಿದ್ದರೂ ನಮ್ಮ ದೇಹ ಬುದ್ಧಿಗಳ ಬೆಳವಣಿಗೆಗೊಂದು ಮಿತಿ ಇದೆ. ನಮ್ಮ ಬದುಕಿಗೊಂದು ಮಿತಿ ಇದೆ. ಭೋಗಾತಿರೇಕವು ಭೋಗ ಸಾಮಥ್ರ್ಯವನ್ನೇ ಹರಣಮಾಡುವ ಪ್ರಕೃತಿನಿಯಮವನ್ನು ನಾವು ಎಲ್ಲ ವಿಷಯಗಳಲ್ಲೂ ಗಮನಿಸಬಹುದಾಗಿದೆ. ಪರಸ್ಪರ ಪೂರಕವಾಗಿ ದೇಹ ಮತ್ತು ಬುದ್ಧಿಸಾಮಥ್ರ್ಯಗಳು ವಿಕಾಸಗೊಳ್ಳದಿದ್ದರೆ ಅದು ಅಂಗವೈಕಲ್ಯವೆಂದೆನಿಸುತ್ತದೆ. ಅವನು ಅಸಾಧಾರಣ ಬುದ್ಧಿಸಾಮಥ್ರ್ಯದಿಂದ ವಿಜ್ಞಾನಪ್ರಪಂಚದಲ್ಲೊಂದು ತಾರೆಯಾಗಿ ಮಿನುಗಿದನೆಂದು ನಾವು ಕೂಡ ಕುಳಿತಲ್ಲೇ ಕೆಲಸ ಮಾಡುತ್ತ ಸ್ವೀಫನ್ ಹಾಕಿಂಗ್ಸ್ನಂತೆ ಆಗುವುದರಲ್ಲಿ ಸರ್ವನಾಶದ ಭವಿಷ್ಯವಿದೆ. ನಮ್ಮ ಭವಿಷ್ಯವನ್ನು ನೆನೆಯುತ್ತ, ನಮ್ಮ ಇತಿ-ಮಿತಿಯನ್ನು ಅರಿಯುತ್ತ ವರ್ತಮಾನದಲ್ಲಿ ವ್ಯವಹರಿಸುವ ಸರಳಸತ್ಯದ ದರ್ಶನದ ಸೌಭಾಗ್ಯ ನಮಗೆಲ್ಲರಿಗೂ ಸದಾ ಆಗುತ್ತಿರಲಿ ಎಂದು ಆಶಿಸುತ್ತ ವಿರಮಿಸುತ್ತೇನೆ.
***