ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಈಗೀಗ ಹೆಚ್ಚುತ್ತಿದೆ, ಆರೋಗ್ಯದ ಬಗ್ಗೆ ಹಲವು ವಿಶ್ಲೇಷಣೆಗಳೂ ಇವೆ. ಆರೋಗ್ಯ ಗಳಿಸಬೇಕೆಂಬ ತುಡಿತ ಜನರಲ್ಲಿ ಹೆಚ್ಚುತ್ತಿದೆ. ಆರೋಗ್ಯದ ಗಳಿಕೆಗಾಗಿ, ರಕ್ಷಣೆಗಾಗಿ ನಾವು ಹಾಗೂ ಸರ್ಕಾರ ಅಪಾರ ಹಣ ಖರ್ಚು ಮಾಡುತ್ತಿದ್ದೇವೆ. ನಾವು ಸಮಾಧಾನದಿಂದ ಯೋಚಿಸಿ, ಆರೋಗ್ಯದ ಬಗ್ಗೆ ನಿಜವಾದ ಅರಿವು ಪಡೆದುಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ, ಸರಿಯಾದ ಜೀವನಶೈಲಿ ಅಳವಡಿಸಿಕೊಂಡಲ್ಲಿ ನಮ್ಮ ಹಾಗೂ ಸಮಾಜದ ಸ್ವಾಸ್ಥ್ಯ ಸುಧಾರಿಸಬಹುದು.
ಯಾರು ಸ್ವಸ್ಥ?
ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ
ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ ||
ಆರೋಗ್ಯ ಕಾಪಾಡಲು ಇರುವ ಪ್ರಮುಖ ಭಾಗವಾದ ವಾತ-ಪಿತ್ತ-ಕಫಗಳೆಂಬ ತ್ರಿಧಾತು/ದೋಷಗಳು, ಜಠರಾಗ್ನಿ ಹಾಗೂ ಧಾತ್ವಗ್ನಿಗಳು ಸÀಮತೋಲಿತವಾಗಿರುವವನು. ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜಾ ಮತ್ತು ಶುಕ್ರ ಈ ಏಳು ಧಾತುಗಳು ಹಾಗೂ ಮಲ-ಮೂತ್ರ-ಬೆವರುಗಳೆಂಬ ಮೂರು ಮಲಗಳು ಹೆಚ್ಚು-ಕಡಮೆಯಾಗದೆ ಸಮತೋಲಿತವಾಗಿ ಕೆಲಸ ಮಾಡುತ್ತಿದ್ದು ಆತ್ಮ, ಇಂದ್ರಿಯ, ಮನಸ್ಸು ಪ್ರಸನ್ನವಾಗಿರುವವನು ಸ್ವಸ್ಥನಾಗಿರುತ್ತಾನೆ, ಆರೋಗ್ಯವಾಗಿರುತ್ತಾನೆ.
‘ಸ್ವ’ಅಂದರೆ ಸಹಜವಾಗಿ, ‘ಸ್ಥ’ಅಂದರೆ ಇರುವುದು. ‘ಸ್ವಸ್ಥ’ಅಂದರೆ ಸಹಜವಾಗಿ ಇರುವುದು; ಇದು ಸ್ವಾಸ್ಥ್ಯದ ಲಕ್ಷಣ. ಮನುಷ್ಯನು ಹಣದ ಆಸೆಗಾಗಿ ಪ್ರಕೃತಿಯ ಮೂಲಸ್ವರೂಪವನ್ನೇ ಬದಲಾಯಿಸಿದಾಗ ಅಸಹಜತೆ ಹಾಗೂ ಅಸ್ವಸ್ಥತೆ ಉಂಟಾಗುತ್ತದೆ. ಉದಾ: ಬೆಳೆಯ ಆಸೆಗಾಗಿ ಮಣ್ಣಿನ ಸಹಜ ಫಲವತ್ತತೆಯನ್ನು ನಾಶಮಾಡುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೆಳೆಯುವ ಆಹಾರಪದಾರ್ಥಗಳು, ಬೆಳೆದ ಹಣ್ಣುಗಳು ಆಕರ್ಷಕವಾಗಿ ಕಾಣುವುದಕ್ಕಾಗಿ ಬಳಸುವ ರಾಸಾಯನಿಕಗಳು ಇತ್ಯಾದಿ.ಗಳಿಂದ ಭೂಮಿ, ನೀರು, ಗಾಳಿ ವಿಷಮಯವಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಇಂದ್ರಿಯಗಳು:
ಮನುಷ್ಯನಲ್ಲಿ ವಿಷಯಭೋಗಕ್ಕಾಗಿಯೇ ಇರುವಂತಹವು ಇಂದ್ರಿಯಗಳು. ಕಿವಿ, ಚರ್ಮ, ಕಣ್ಣು, ನಾಲಗೆ, ಮೂಗು ಇವುಗಳು ಕರ್ಮೇಂದ್ರಿಯಗಳು. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವುಗಳು ಜ್ಞಾನೇಂದ್ರಿಯಗಳು.
ಕಿವಿಗೆ ಶಬ್ದ ಕೇಳದಿದ್ದರೆ, ಚರ್ಮಕ್ಕೆ ಸ್ಪರ್ಶದ ಅನುಭವ ಆಗದಿದ್ದರೆ, ಕಣ್ಣುಗಳಿಂದ ದೃಶ್ಯವನ್ನು ನೋಡಲು ಸಾಧ್ಯವಾಗದಿದ್ದರೆ, ನಾಲಗೆ ರುಚಿಯನ್ನು ಆಸ್ವಾದಿಸಲು ಅಸಮರ್ಥವಾದರೆ, ಮೂಗು ಪರಿಮಳವನ್ನು ಆಘ್ರಾಣಿಸಲು ವಿಫಲವಾದರೆ ಇಂದ್ರಿಯಗಳು ಸ್ವಸ್ಥವಾಗಿಲ್ಲ ಎಂದರ್ಥ. ಇಂದ್ರಿಯಗಳು ಸ್ವಸ್ಥಸ್ಥಿತಿಯಲ್ಲಿದ್ದು ಅವುಗಳ ಕೆÉಲಸವನ್ನು ಸರಿಯಾಗಿ ನಿರ್ವಹಿಸಬೇಕು. ಆಗ ಇಂದ್ರಿಯಗಳು ಪ್ರಸನ್ನವಾಗಿವೆ ಹಾಗೂ ಆರೋಗ್ಯವಾಗಿವೆ ಎಂದು ಹೇಳಬಹುದು.
ಮನಸ್ಸು:
ಮನಸ್ಸು ಚಂಚಲವಾದುದು. ಮನಸ್ಸಿಗೆ ಕಡಿವಾಣವನ್ನು ಹಾಕಿ ಅದು ಅತ್ತಿತ್ತ ಚಲಿಸದಂತೆ, – ವಿಚಲಿತವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಚಿತೆಗೂ ಚಿಂತೆಗೂ ಇರುವ ವ್ಯತ್ಯಾಸ ‘ಂ’ ಮಾತ್ರ.
ಚಿಂತಾಯಾಶ್ಚ ಚಿತಾಯಾಶ್ಚ
ಬಿಂದುಮಾತ್ರಂ ವಿಶಿಷ್ಯತೇ|
ಚಿತಾ ದಹತಿ ನಿರ್ಜೀವಂ
ಚಿಂತಾ ದಹತಿ ಜೀವಿನಮ್||
ಚಿತೆಯು ನಿರ್ಜೀವ ಶವವನ್ನು ಸುಟ್ಟರೆ, ಚಿಂತೆಯು ಜೀವಂತ ಮನುಷ್ಯನನ್ನೇ ಸುಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ಧಿ, ನಿಃಸ್ವಾರ್ಥ ಸೇವಾಮನೋಭಾವ ಇವುಗಳಿಂದ ನಮ್ಮಲ್ಲಿ ಸಂತೋಷ-ತೃಪ್ತಿ ಹೆಚ್ಚುತ್ತದೆ. ಇದರಿಂದ ಮನಸ್ಸು ಸ್ವಸ್ಥವಾಗುತ್ತದೆ. ಸುಖದಲ್ಲಿರುವವರೊಂದಿಗೆ ಸ್ನೇಹ, ದುಃಖದಲ್ಲಿರುವವರೊಂದಿಗೆ ಕರುಣೆ, ಪುಣ್ಯಕಾರ್ಯದಲ್ಲಿರುವವರೊಂದಿಗೆ ಸಂತೋಷ, ಕೆಟ್ಟಕಾರ್ಯದಲ್ಲಿ ತೊಡಗಬಹುದಾದವರೊಂದಿಗೆ ಅಲಕ್ಷ್ಯ – ಹೀಗೆ ನಡೆದುಕೊಂಡಾಗ ಅಂಥವನ ಮನಸ್ಸು ತನ್ನ ಪ್ರಸನ್ನತೆಯನ್ನು ಕಳೆದುಕೊಳ್ಳದೆ ಮತ್ತಷ್ಟು ಗೆಲವು ಹೊಂದುವುದು.
ದೇಹದಲ್ಲಿ ರೋಗವಿದ್ದು, ಆತ್ಮ, ಇಂದ್ರಿಯ, ಮನಸ್ಸು ಪ್ರಸನ್ನವಾಗಿದ್ದರೆ ದೈಹಿಕ ರೋಗವನ್ನು ಸಹಿಸಿಕೊಳ್ಳಬಹುದು. ಆತ್ಮ, ಇಂದ್ರಿಯ, ಮನಸ್ಸು ರೋಗಿಷ್ಟವಾಗಿದ್ದರೆ ದೈಹಿಕ ಆರೋಗ್ಯದ ಅನುಭವವಾಗುವುದಿಲ್ಲ. ಪರಿಪೂರ್ಣ ಆರೋಗ್ಯದ ಅನುಭವವಾಗಬೇಕಾದರೆ ಶರೀರ ಮತ್ತು ಆತ್ಮ, ಇಂದ್ರಿಯ, ಮನಸ್ಸುಗಳ ಆರೋಗ್ಯ ಅನಿವಾರ್ಯ. ಆತ್ಮ, ಇಂದ್ರಿಯ, ಮನಸ್ಸುಗಳಲ್ಲಿನ ಉದ್ವಿಗ್ನತೆ ಹಾಗೂ ಅಶಾಂತಿಯು ಹಲವು ಖಾಯಿಲೆಗಳಿಗೆ ಕಾರಣವಾಗುತ್ತವೆ.
ಆರೋಗ್ಯಸಾಧನ ಮಾರ್ಗ
ನಿತ್ಯಂ ಹಿತಾಹಾರವಿಹಾರಸೇವೀ ಸಮೀಕ್ಷ್ಯಕಾರೀ
ವಿಷಯೇಷ್ವಸಕ್ತಃ |
ದಾತಾ ಸಮಃ ಸತ್ಯಪರಃ ಕ್ಷಮಾವಾನ್
ಆಪ್ತೋಪಸೇವೀ ಚ ಭವತ್ಯರೋಗಃ ||
ನಿತ್ಯವೂ ಹಿತಕರವಾದ ಆಹಾರವಿಹಾರಗಳನ್ನು ಅನುಸರಿಸುವವನೂ, ಪೂರ್ವಾಪರಗಳನ್ನು ವಿವೇಚಿಸಿ ಕೆಲಸ ಮಾಡುವವನೂ, ಇಂದ್ರಿಯವಿಷಯಗಳಲ್ಲಿ ಅತ್ಯಾಸಕ್ತಿ ಹೊಂದಿರದವನೂ, ದಾನ ಮಾಡುವವನೂ, ಸಮತ್ವಬುದ್ಧಿಯುಳ್ಳವನೂ, ಸತ್ಯಶೀಲನೂ, ಕ್ಷಮಿಸುವ ಗುಣವುಳ್ಳವನೂ, ಆಪ್ತಮಿತ್ರರ ಹಿತದ ಸೇವಾಕಾರ್ಯಗಳಲ್ಲಿ ತೊಡಗಿರುವವನೂ ರೋಗಿಯಾಗುವುದಿಲ್ಲ.
ಆಹಾರ :
ನಡೆಯುವುದು, ಓಡುವುದು, ವಿವಿಧರೀತಿಯ ಕೆಲಸಗಳನ್ನು ಮಾಡುವ ಮೂಲಕ ವ್ಯಕ್ತಿಯು ನಿರಂತರ ಚಟುವಟಿಕೆಯಿಂದ ಇರುತ್ತಾನೆ. ಉಸಿರಾಟ ಜೀರ್ಣಕ್ರಿಯೆ ಮೊದಲಾದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಹೃದಯದಿಂದ ರಕ್ತವು ದೇಹದ ಪ್ರತಿಯೊಂದು ಭಾಗಕ್ಕೂ ನಿರಂತರ ಪೂರೈಕೆಯಾಗುತ್ತದೆ. ನಾವು ಸೇವಿಸಿದ ಆಹಾರವು ಒಳ್ಳೆಯ ಹಾಗೂ ಕೆಟ್ಟ ಭಾಗಗಳೆಂದು ವಿಂಗಡಿಸಲ್ಪಟ್ಟು ಒಳ್ಳೆಯದು ಧಾತುಗತವಾಗುವುದು; ಬೇಡವಾದದ್ದು ಮಲರೂಪವಾಗಿ ದೇಹದಿಂದ ಹೊರಹಾಕಲ್ಪಡುತ್ತದೆ. ಈ ಕ್ರಿಯೆಗಳು ನಡೆಯಲು ದೇಹಕ್ಕೆ ಶಕ್ತಿ ಬೇಕು. ನಾವು ಸೇವಿಸುವ ಆಹಾರವು ಜೀರ್ಣಗೊಂಡು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹದಲ್ಲಿ ಪ್ರತಿಕ್ಷಣವೂ ಜೀವಕೋಶಗಳು ಹುಟ್ಟುತ್ತಿರುತ್ತವೆ, ಕ್ರಮೇಣ ಅವುಗಳ ಸಾಮಥ್ರ್ಯ ಕುಂಠಿತವಾಗಿ ಸಾಯುತ್ತವೆ. ಹುಟ್ಟಿದ ಜೀವಕೋಶಗಳು ಸದೃಢವಾಗಿ ಉತ್ಕೃಷ್ಟವಾಗಿ ಕಾರ್ಯ ಮಾಡಬೇಕು. ಸದೃಢ-ಉತ್ಕೃಷ್ಟ ಜೀವಕೋಶಗಳಿಂದ ಧಾತು ವೃದ್ಧಿಯಾಗುತ್ತದೆ. ಇದರಿಂದ ದೇಹ ಹಾಗೂ ಮನಸ್ಸು ಬೆಳೆಯುತ್ತದೆ-ಸದೃಢಗೊಳ್ಳುತ್ತದೆ. ಯಾವುದೇ ರೋಗವನ್ನು ತಡೆಯುವ ಸಾಮಥ್ರ್ಯವನ್ನು ಹೊಂದುತ್ತದೆ. ಹುಟ್ಟುವ ಜೀವಕೋಶಗಳು ಸದೃಢ-ಉತ್ಕೃಷ್ಟವಾಗಿರಲು ಯೋಗ್ಯ ಆಹಾರವನ್ನು ಸೇವಿಸಬೇಕು. ದೇಹಕ್ಕೆ ಅಗತ್ಯವಿರುವ ಆಹಾರ ಸೇವಿಸದಿದ್ದಾಗ ತ್ರಿದೋಷಗಳಲ್ಲಿ ಹಾಗೂ ಸಪ್ತ ಧಾತುಗಳಲ್ಲಿ ಏರುಪೇರು ಉಂಟಾಗುತ್ತದೆ, ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಯಾವ ಆಹಾರ ಸೇವಿಸಬೇಕು? ಯಾವಾಗ, ಹೇಗೆ, ಎಷ್ಟು ಸೇವಿಸಬೇಕು? – ಎನ್ನುವುದನ್ನು ತಿಳಿದುಕೊಂಡವನಿಗೆ, ಅದನ್ನು ಪಾಲಿಸುವವನಿಗೆ ಔಷಧದ ಅಗತ್ಯವಿರುವುದಿಲ್ಲ. ಆಹಾರಕ್ರಮವನ್ನು ಪಾಲಿಸದವನಿಗೆ ಔಷಧದಿಂದ ಲಾಭವಿಲ್ಲ. ಹೀಗಾಗಿ ಕಾಯಿಲೆ ಬಂದಾಗ ಬರಿಯ ಔಷಧಿಗೆ ಮೊರೆ ಹೋಗದೆ ನಮ್ಮ ದಿನನಿತ್ಯದ ಜೀವನಶೈಲಿಯನ್ನು, ಆಹಾರಕ್ರಮವನ್ನು ಪರಿಷ್ಕರಿಸಿಕೊಂಡಲ್ಲಿ ಆರೋಗ್ಯಕರವಾಗಿ ಜೀವನ ಸಾಗಿಸಬಹುದು.
ವ್ಯಾಯಾಮ :
ನಿಯಮಬದ್ಧವಾಗಿ/ಕ್ರಮಬದ್ಧವಾಗಿ ದೇಹದ ಅಂಗಾಂಗಗಳನ್ನು ಹಿಗ್ಗಿಸುವುದು ಹಾಗೂ ಕುಗ್ಗಿಸುವುದೇ ‘ವ್ಯಾಯಾಮ’ವೆನಿಸುತ್ತದೆ. ನಿಯಮಬದ್ಧವಲ್ಲದ ಅಂಗಾಂಗಗಳ ಚಲನೆ ವ್ಯಾಯಾಮವಲ್ಲ. ಇದರಿಂದ ದೇಹಕ್ಕೆ ಶ್ರಮವಾಗಬಹುದಷ್ಟೇ.
ವ್ಯಾಯಾಮದಿಂದ ಶರೀರ-ಮನಸ್ಸು ಹಗುರವಾಗುತ್ತದೆ; ದಣಿವಿಲ್ಲದೆ ದುಡಿಯುವ ಸಾಮಥ್ರ್ಯ ಹೆಚ್ಚುತ್ತದೆ, ಹಸಿವು ಹೆಚ್ಚಾಗುತ್ತದೆ, ಹೆಚ್ಚಾಗಿರುವ ಕೊಬ್ಬಿನ ಪ್ರಮಾಣ ಕಡಮೆಯಾಗುತ್ತದೆ, ಸ್ನಾಯುಗಳು ಪ್ರಮಾಣಬದ್ಧವಾಗಿ ಬೆಳೆದು ಶರೀರಕ್ಕೆ ಅಚ್ಚುಕಟ್ಟಾದ ಆಕಾರವನ್ನು ನೀಡುತ್ತವೆ.
ವ್ಯಾಯಾಮ ಎಷ್ಟು ಮಾಡಬೇಕು?
ವ್ಯಕ್ತಿಯ ಪ್ರಕೃತಿ ಹಾಗೂ ಆರೋಗ್ಯಕ್ಕೆ ಅನುಗುಣವಾಗಿ ವ್ಯಾಯಾಮವನ್ನು ಮಾಡಬೇಕು. ಚಿಕ್ಕಮಕ್ಕಳು ಹಾಗೂ ವಯಸ್ಸಾಗಿರುವವರು ಹೆಚ್ಚು ವ್ಯಾಯಾಮ ಮಾಡಬಾರದು. ವ್ಯಾಯಾಮವು ವಾತ-ಪಿತ್ತವನ್ನು ಹೆಚ್ಚಿಸುವುದರಿಂದ ವಾತ-ಪಿತ್ತ ಪ್ರಕೋಪಗೊಂಡಿರುವವರು ವ್ಯಾಯಾಮ ಮಾಡಬಾರದು. ಅತಿಯಾದ ವ್ಯಾಯಾಮ ಒಳ್ಳೆಯದಲ್ಲ.
ಯೋಗ:
ಯೋಗದ ಉದ್ದೇಶ – ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಇವು ಯೋಗದ ಎಂಟು ಅಂಗಗಳು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ – ಇವು ಯಮದ ಐದು ಭಾಗಗಳು. ಇವುಗಳ ಆಚರಣೆಯಿಂದ ಮನುಷ್ಯನು ಸನ್ಮಾರ್ಗದಲ್ಲಿ ನಡೆಯುತ್ತಾನೆ, ಅವನ ಮನೋಬಲ ಆತ್ಮಬಲ ಬಲಿಷ್ಠಗೊಳ್ಳುತ್ತದೆ. ಶೌಚ, ಸಂತೋಷ, ತಪ, ಸ್ವಾಧ್ಯಾಯ ಹಾಗೂ ಈಶ್ವರಪ್ರಣಿಧಾನ ಈ ಐದು ನಿಯಮದ ಭಾಗಗಳು. ಇದರ ಪಾಲನೆಯಿಂದ ಶಾರೀರಿಕ ಹಾಗೂ ಮಾನಸಿಕ ದೋಷಗಳು ದೂರವಾಗುತ್ತವೆ. ಯೋಗ ಜೀವನದ ಭಾಗವಾಗಬೇಕು. ಇದರಿಂದ ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯ ಉತ್ತಮವಾಗುತ್ತದೆ.
ನಿದ್ರೆ :
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನಿದ್ರೆ ಬೇಕು. ಸುಖವಾದ ನಿದ್ರೆಯಿಂದ ಆರೋಗ್ಯ, ಶಕ್ತಿ, ಪುಷ್ಟಿ, ವೀರ್ಯವಂತಿಕೆಗಳು ಲಭಿಸುತ್ತವೆ. ನಿದ್ರಾನಾಶದಿಂದ ದುಃಖ, ಸೊರಗುವಿಕೆ, ದೌರ್ಬಲ್ಯ, ವೀರ್ಯಹೀನತೆ, ಅಜ್ಞಾನಗಳು ಉಂಟಾಗುತ್ತವೆ. ಪೂರ್ಣಾರೋಗ್ಯದ ಸುಖಾನುಭವ ಸುಖವಾದ ನಿದ್ರೆಯಿಂದ ಮಾತ್ರ ಲಭ್ಯ.
ಸದಾಚಾರ :
ಬೇರೆ ಯಾವುದೇ ವೈದ್ಯಪದ್ಧತಿಯಲ್ಲಿ ಹೇಳದ, ಆದರೆ ನಮ್ಮ ಭಾರತೀಯ ವೈದ್ಯಪದ್ಧತಿಯಲ್ಲಿ ಹೇಳಿರುವ ಸ್ವಾಸ್ಥ್ಯಕ್ಕೆ ಮಹತ್ತ್ವ ನೀಡಿದ ಅಂಶವೆಂದರೆ ಸದಾಚಾರ. ಸದಾಚಾರ ಎಂದರೆ ಜನತೆಯ-ಸಮಾಜದ ಆಚಾರಸಂಹಿತೆ. ಸದಾಚಾರ ಇಲ್ಲದೆ ಒಳ್ಳೆಯ ಸಮಾಜದ ರಚನೆಯಾಗದು. ಸದಾಚಾರವು ಸ್ವೇಚ್ಛಾಚಾರಗಳನ್ನು ತಡೆಗಟ್ಟಿ ತನ್ನ ಅಂತರಂಗ ಸಂಪತ್ತಿನಿಂದ ಸಮಾಜವನ್ನು-ರಾಷ್ಟ್ರವನ್ನು ಬೆಳಗಿಸುತ್ತದೆ. ಸದಾಚಾರವು ವ್ಯಕ್ತಿಯನ್ನು ಸುಧಾರಿಸುತ್ತದೆ, ಪರಿಷ್ಕರಿಸುತ್ತದೆ, ಬೆಳಗಿಸುತ್ತದೆ. ಮನಸ್ಸಿನಲ್ಲಿ ಕೆಟ್ಟ ವಿಚಾರಗಳಿಗೆ ಆಸ್ಪದ ನೀಡದೆÉ, ಒಳ್ಳೆಯ ಕೆಲಸಗಳಲ್ಲಿ ಯಾವಾಗಲೂ ಮನಸ್ಸನ್ನು ತೊಡಗಿಸಿರಬೇಕು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ಚಿಂತನೆ ಇರಬೇಕು. ರಾಷ್ಟ್ರದೇವೋ ಭವ, ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ – ಇದು ನಮ್ಮ ಪ್ರಾಚೀನ ಋಷಿ-ಮುನಿಗಳ ಅಮೃತ ಸಂದೇಶ, ಇದನ್ನು ಆಚರಣೆಗೆ ತರಬೇಕು. ಧರ್ಮದಿಂದ ಗಳಿಸಿದ ಹಣದಲ್ಲಿಯೇ ಜೀವನ ನಡೆಸಬೇಕು. ನೈತಿಕ ಮಾರ್ಗದಲ್ಲಿಯೇ ನಡೆಯಬೇಕು. ಪೂರ್ವಾಪರ ವಿಮರ್ಶೆ ಹಾಗೂ ವಿವೇಕಯುಕ್ತ ನಡವಳಿಕೆಯ ಅಭ್ಯಾಸ ಬೆಳೆಸಿಕೊಳ್ಳಬೇಕು. ಇತರರೊಡನೆ ಮಾತನಾಡುವಾಗ ಹಿತ-ಮಿತವಾಗಿರಬೇಕು, ಮೃದು-ಮಧುರವಾಗಿರಬೇಕು. ಮನುಷ್ಯೇತರ ಪ್ರಾಣಿಗಳಲ್ಲಿಯೂ ಬಂಧುತ್ವ ಬೆಳೆಸಿಕೊಳ್ಳಬೇಕು. ಕೋಪದಲ್ಲಿರುವವರನ್ನು ಶಾಂತಗೊಳಿಸಬೇಕು, ಇಂತಹ ಸದಾಚಾರಗಳ ಆಚರಣೆಯು ನಮ್ಮ ಹಾಗೂ ಸಮಾಜದ ಆರೋಗ್ಯವನ್ನು ವೃದ್ಧಿಸುತ್ತವೆ.
ಇವುಗಳನ್ನು ತಡೆಯಬಾರದು :
ಅಪಾನವಾಯು, ತೇಗು, ಮಲ, ಮೂತ್ರ, ಸೀನು, ಬಾಯಾರಿಕೆ, ಹಸಿವು, ನಿದ್ರೆ, ಕೆಮ್ಮು, ಏದುಸಿರು, ಆಕಳಿಕೆ, ಕಣ್ಣೀರು, ವಾಂತಿ, ಶುಕ್ರಸ್ರಾವ – ಈ ಶಾರೀರಿಕ ಕ್ರಿಯೆಗಳನ್ನು ತಡೆಯಬಾರದು ಮತ್ತು ಬಲವಂತವಾಗಿ ಹೊರಹಾಕಬಾರದು. ತಡೆಯುವುದು ಹಾಗೂ ಬಲವಂತವಾಗಿ ಹೊರಹಾಕುವುದು ರೋಗಕ್ಕೆ ಕಾರಣವಾಗುತ್ತದೆ.
ಈ ಮಾನಸಿಕ ಕ್ರಿಯೆಗಳನ್ನು ತಡೆಯಬೇಕು :
ಲೋಭ, ಶೋಕ, ಭಯ, ಕ್ರೋಧ, ಅಹಂಕಾರ, ನಿರ್ಲಜ್ಜತೆ (ಲಜ್ಜೆಗೆಟ್ಟಿರುವುದು), ಈಷ್ರ್ಯೆ, ಉದ್ವೇಗ, ಪರರ ದ್ರವ್ಯವನ್ನು ಅಪಹರಿಸಬೇಕೆಂಬ ದುರಾಸೆ – ಇವೇ ಮೊದಲಾದ ಮಾನಸಿಕ ದುರ್ಗುಣಗಳÀನ್ನು ತಡೆಯಬೇಕು. ಪರರ ಮನಸ್ಸನ್ನು ನೋಯಿಸುವಂತಹ ಬಿರುಸು ಮಾತು, ವ್ಯರ್ಥವಾಗಿ ಬಹಳ ಮಾತನಾಡುವುದು, ಇತರರಿಗೆ ಹಾನಿಯನ್ನುಂಟುಮಾಡುವ ಮಾತು, ಅಪ್ರಸ್ತುತ ಮತ್ತು ಅಸಂಬದ್ಧ ಮಾತು ಇವೇ – ಮುಂತಾದ ಮಾತುಗಳನ್ನು ಹಾಗೂ ಪರಸ್ತ್ರೀ/ಪರಪುರುಷ ಸಂಪರ್ಕ, ಕಳ್ಳತನ, ಪ್ರಾಣಿಹಿಂಸೆ, ಪರರಿಗೆ ಹಿಂಸೆ, ಈ ದುಸ್ವಭಾವಗಳನ್ನು ನಿಗ್ರಹಿಸಬೇಕು. ಈ ನಿಗ್ರಹವು ವ್ಯಕ್ತಿಗತ ಹಾಗೂ ಸಾಮಾಜಿಕ ಆರೋಗ್ಯಕ್ಕೆ ಅನುಕೂಲಕರವಾಗುತ್ತದೆ.
ಹಣದಿಂದ ಎಲ್ಲವನ್ನು ಪಡೆಯಬಹುದು ಎನ್ನುವುದು ಇಂದಿನ ಮಾನಸಿಕತೆ. ಹಣದಿಂದ ವಸ್ತುಗಳನ್ನು ಖರೀದಿಸಬಹುದು, ಆದರೆ ನೆಮ್ಮದಿ, ತೃಪ್ತಿ, ಆರೋಗ್ಯ ಪಡೆಯಲು ಸಾಧ್ಯವಿಲ್ಲ. ಹಣ ಸಂಪಾದನೆ ಜೀವನದ ಒಂದು ಭಾಗವಾಗಬೇಕು; ಆದರೆ ಅದೇ ಜೀವನದ ಗುರಿಯಾಗಬಾರದು. ಇಂದು ಬಹುತೇಕ ಎಲ್ಲ ಮಕ್ಕಳ ತಂದೆ-ತಾಯಂದಿರು ತಮ್ಮ ಮಗು ಚೆನ್ನಾಗಿ ಓದಬೇಕು, ‘ಹಣ ಹಣ ಜೇಬು ತುಂಬ ಹಣ’ ಎಂಬಂತೆ ತುಂಬ ಹಣ ಸಂಪಾದಿಸಬೇಕು ಎಂದು ಯೋಚಿಸುತ್ತಾರೆ. ಅದಕ್ಕಾಗಿ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಇದರಿಂದ ನಿಜವಾದ ಜೀವನಶಿಕ್ಷಣದಿಂದ ಆ ಮಗು ವಂಚಿತವಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಮಗುವಿನ – ಸಮಾಜದ ಆರೋಗ್ಯ ಕೆಡುತ್ತದೆ.
ವೈದ್ಯಕೀಯಕ್ಷೇತ್ರವು ಇಂದು ಸೇವೆಯಾಗಿ ಉಳಿದಿಲ್ಲ, ಉದ್ದಿಮೆಯಾಗಿ ಬೆಳೆಯುತ್ತಿದೆ. ಸೇವೆಯಲ್ಲಿ ಧನ್ಯತೆ ಕಾಣಬಹುದು, ಉದ್ದಿಮೆಯಲ್ಲಿ ಹಣ ಸಂಪಾದನೆಯ ಭಾವವೇ ಪ್ರಧಾನವಾಗಿರುತ್ತದೆ. ನೈತಿಕ ಮಾರ್ಗದಿಂದ, ಪ್ರಾಮಾಣಿಕತೆಯಿಂದ ಸಂಪಾದಿಸುವ ಹಣದಿಂದ ನೆಮ್ಮದಿಯೂ ತೃಪ್ತಿಯೂ ಹೆಚ್ಚುತ್ತದೆ. ಇದರಿಂದ ವ್ಯಕ್ತಿಯ-ಸಮಾಜದ ಸ್ವಾಸ್ತ್ಯ ಹೆಚ್ಚುತ್ತದೆ.
ಹೇಗೆ ಲಾಭ? :
ರೋಗಿಗೆ ಚಿಕಿತ್ಸೆ ನೀಡುವುದರಿಂದ ವೈದ್ಯನಿಗೇನು ಲಾಭ ಎಂಬ ಪ್ರಶ್ನೆಗೆ ಯೋಗರತ್ನಾಕರದಲ್ಲಿ ಹೀಗೆ ಹೇಳಿದೆ-
ಕ್ವಚಿತ್ ಧರ್ಮೋ ಕ್ವಚಿತ್ ಮೈತ್ರೀ ಕ್ವಚಿತ್ ಅರ್ಥಃ ಕ್ವಚಿತ್ ಯಶಸ್| ಕರ್ಮಾಭ್ಯಾಸಃ ಕ್ವಚಿತ್ ಚೇತಿ ಚಿಕಿತ್ಸಾ ನಾಸ್ತಿ ನಿಷ್ಫಲಾ||
ಸ್ವಲ್ಪವಾದರೂ ಮಾನವಧರ್ಮ-ವೈದ್ಯಧರ್ಮದ ಪಾಲನೆ, ಕರ್ತವ್ಯಪಾಲನೆ ಮಾಡಿದಂತಾಗುತ್ತದೆ. ರೋಗಿಗಳೊಂದಿಗೆ ಆತ್ಮೀಯತೆ ಹಾಗೂ ಸ್ನೇಹ ಸಂಪಾದನೆಯಾಗುತ್ತದೆ. ಜೀವನನಿರ್ವಹಣೆಗೆ ಧರ್ಮೋಚಿತ ಹಣ ಸಂಪಾದನೆಯಾಗುತ್ತದೆ. ಚಿಕಿತ್ಸೆಯ ಮೂಲಕ ರೋಗಿಗಳು ಗುಣಮುಖರಾದಂತೆ ಯಶಸ್ಸು-ಕೀರ್ತಿ ಲಭಿಸುತ್ತದೆ. ಚಿಕಿತ್ಸೆ ನೀಡುತ್ತಾ ನೀಡುತ್ತಾ ಅನುಭವ ಹೆಚ್ಚುತ್ತದೆ. ಹೀಗೆ ಹಲವು ರೀತಿಯ ಲಾಭಗಳಿವೆ. ಇದು ವೈದ್ಯನಿಗೆ ಮಾತ್ರವಲ್ಲ, ಕೃಷಿಕ, ಉದ್ಯಮಿ, ವ್ಯಾಪಾರಿ ಹೀಗೆ ಎಲ್ಲರಿಗೂ ಅನ್ವಯಿಸುತ್ತದೆ. ಅವರವರು ಅವರವರÀ ಕ್ಷೇತ್ರದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಲ್ಲಿ ಜನರೊಂದಿಗೆ ಆತ್ಮೀಯತೆ-ಸ್ನೇಹ ಸಂಪಾದನೆಯಾಗುತ್ತದೆ. ಅನುಭವ, ಯಶಸ್ಸು-ಕೀರ್ತಿ, ಹಣ ಹೀಗೆ ಎಲ್ಲವೂ ಲಭಿಸುತ್ತವೆ. ಇದರಿಂದ ವ್ಯಕ್ತಿಯ ಹಾಗೂ ಸಮಾಜದ ಆರೋಗ್ಯ ಸುಧಾರಣೆಯಾಗುತ್ತದೆ.
ರೋಗನಿವಾರಣೆಗಿಂತ ರೋಗನಿರೋಧವು ಉತ್ತಮ. ಉತ್ತಮ ಆರೋಗ್ಯ ಇದ್ದಾಗ ಉತ್ತಮ ವಿಚಾರಗಳು, ಭಾವನೆಗಳು, ಯೋಚನೆ-ಯೋಜನೆಗಳು ಮೂಡಿಬರುತ್ತವೆ. ಪ್ರಸನ್ನತೆ, ಧೈರ್ಯ, ಆತ್ಮವಿಶ್ವಾಸ, ದೃಢನಿಶ್ಚಯ, ಸಕಾರಾತ್ಮಕ ಚಿಂತನೆ ಇವುಗಳು ಶರೀರದ ಆರೋಗ್ಯಕ್ಕೆ ಅಗತ್ಯ. ಭಾರತೀಯ ಚಿಂತನೆಯಲ್ಲಿ, ವ್ಯಕ್ತಿಯ ಸುಖ-ಆರೋಗ್ಯವೇ ಸಮಾಜದ ಸುಖ-ಆರೋಗ್ಯಕ್ಕೆ ಸಾಧನಗಳಾಗಿವೆ. ನಿಯಮಿತ ಹಾಗೂ ಋತುಗಳಿಗನುಗುಣವಾದ ಆಹಾರ ಸೇವನೆ, ದಿನಚರ್ಯೆ; ತನಗೆ, ತನ್ನ ಕುಟುಂಬಕ್ಕೆ, ಸಮಾಜದ ಹಿತಕ್ಕೆ ಪೂರಕವಾದ ಸದಾಚಾರವನ್ನು ಅನುಸರಿಸುವುದು; ದೇಹದಲ್ಲಿ ಉಂಟಾದ ಅಥವಾ ಸಂಗ್ರಹವಾದ ದೋಷಗಳನ್ನು ತಜ್ಞವೈದ್ಯರ ಸಹಕಾರದಿಂದ ಹೊರಹಾಕುವುದು; – ಇವುಗಳ ಅಳವಡಿಕೆಯಿಂದ ರೋಗನಿರೋಧಕ ಶಕ್ತಿಯು ವೃದ್ಧಿಸುತ್ತದೆ.
‘ಪೂರ್ವಜನ್ಮಕೃತಂ ಪಾಪಂ ವ್ಯಾಧಿರೂಪೇಣ ಪೀಡತೇ’ – ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪವು ಈ ಜನ್ಮದಲ್ಲಿ ವ್ಯಾಧಿಯಾಗಿ ಕಾಡುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ಇದು ಹತಾಶೆಯ ಮಾತುಗಳಲ್ಲ, ಆಲೋಚನೆಯೂ ಅಲ್ಲ. ಈ ಜನ್ಮದಲ್ಲಿ ನಾವು ರೋಗವನ್ನು ಅನುಭವಿಸುತ್ತಿದ್ದೇವೆ. ಮುಂದಿನ ಜನ್ಮದಲ್ಲಿ ಸುಖವಾಗಿರಬೇಕಾದರೆ ಈ ಜನ್ಮದಲ್ಲಿ ಉತ್ತಮ ಕೆಲಸಗಳನ್ನೂ ಉತ್ತಮ ಯೋಚನೆಗಳನ್ನೂ ಮಾಡಬೇಕು, ಉತ್ತಮ ನಡವಳಿಕೆಯಿಂದಿರಬೇಕು – ಎಂಬ ಚಿಂತನೆ ಮಾಡಬೇಕು. ಈ ಚಿಂತನೆಯು ಈ ಜನ್ಮದಲ್ಲಿನ ನಮ್ಮ ಆರೋಗ್ಯದ ಸುಧಾರಣೆಗೂ ಅಗತ್ಯ. ಮನೋಬಲ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ, ದೀರ್ಘ ಶ್ವಾಸಾಭ್ಯಾಸ, ಇಷ್ಟದೇವತೆಯ ಜಪ, ಭಜನೆ, ಧ್ಯಾನ ಇತ್ಯಾದಿಗಳನ್ನು ನಿತ್ಯಸಾಧನೆಯಲ್ಲಿ ಅಳವಡಿಸಿಕೊಳ್ಳಬೇಕು.
‘ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ’ – ಎಂಬ ಪ್ರಕೃತಿತತ್ತ್ವವನ್ನು ಅರಿತು, ಬಾಳಿನ ಕಹಿಗಳೆಲ್ಲವನ್ನು ಇಲ್ಲದಂತೆ ಮಾಡುವ ಅನುಕೂಲವು ಮಾನವನ ಅಧೀನದಲ್ಲಿಲ್ಲ ಎಂಬ ಸತ್ಯವನ್ನರಿತುಕೊಳ್ಳಬೇಕು. ಬಾಳಿನಲ್ಲಿ ಎದುರಿಸಬೇಕಾದ ದುಃಖ, ನಿರಾಶೆ, ಅಪಮಾನ, ಅತೃಪ್ತಿಗಳಿಂದ ಮನಸ್ಸು ಕೆರಳದಂತಿರಬೇಕಾದರೆ ಮನಸ್ಸನ್ನು ಬಲಗೊಳಿಸಬೇಕು. ಇದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.
***