ನಮ್ಮ ಹಿರಿಯರ ಕಾಲದಲ್ಲಿ ವೈದ್ಯರು, ವೈದ್ಯಕೀಯ ವ್ಯವಸ್ಥೆ, ಔಷಧಗಳ ಲಭ್ಯತೆ, ವೈದ್ಯಕೀಯ ಜ್ಞಾನ ಇವೆಲ್ಲವುಗಳ ಕೊರತೆಯಿತ್ತು. ಇದಾವುದೂ ಇಲ್ಲದೆಹೋದರೂ ಅವರಿಗೆ ಆರೋಗ್ಯದ ಕೊರತೆ ಇರಲಿಲ್ಲ. ಇಂದು ಸೌಕರ್ಯಗಳೆಲ್ಲವೂ ಬೇಕಾದಷ್ಟಿದ್ದರೂ ‘ನಾನು ಆರೋಗ್ಯವಾಗಿದ್ದೇನೆ’ಎಂದು ಎದೆತಟ್ಟಿ ಹೇಳುವವರನ್ನು ಕಾಣುವುದು ಕಷ್ಟವಾಗಿದೆ. ಬಹುತೇಕ ಮನೆಗಳಲ್ಲಿ ತಂದೆ-ತಾಯಿಗಿಂತ ಮಕ್ಕಳೇ ಹೆಚ್ಚು ಅನಾರೋಗ್ಯವಂತರು. ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಅವರ ಜೊತೆಗಿರಬೇಕಾದ ಅವಸ್ಥೆ ತಂದೆ-ತಾಯಿಯರಿಗೆ ಬರುತ್ತಿರುವುದನ್ನು ನಮ್ಮ ದಿನನಿತ್ಯದ ವೈದ್ಯವೃತ್ತಿಯಲ್ಲಿ ನೋಡುತ್ತಿರುತ್ತೇವೆ. ಹೀಗಾಗಲು ನಮ್ಮ ಜೀವನಶೈಲಿಯೇ ಕಾರಣ ಎಂಬುದನ್ನು ನಾವು ಮರೆಯಬಾರದು. ದೇಹವು ನಮಗೆಷ್ಟು ವೈದ್ಯಕೀಯ ಜ್ಞಾನ, ತಪ್ಪು-ಸರಿಗಳ ತಿಳಿವಳಿಕೆಯಿದೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನಾವೆಷ್ಟರಮಟ್ಟಿಗೆ ಅದರಂತೆ ನಡೆದುಕೊಳ್ಳುತ್ತೇವೆ ಎಂಬುದಷ್ಟೇ ಅದಕ್ಕೆ ಮಹತ್ತ್ವದ್ದು. ಇಂದು ನಾವು ರೋಗರಹಿತರಾಗಿರಲು ಆಯುರ್ವೇದದ ಋಷಿ ಹೇಳಿದ ಸೂತ್ರವನ್ನು ತಿಳಿದು ಅದರಂತೆ ಬದುಕಬೇಕು.
ವಾಗ್ಭಟಾಚಾರ್ಯರು ತಮ್ಮ ‘ಅಷ್ಟಾಂಗಹೃದಯ’ಗ್ರಂಥದಲ್ಲಿ ಒಬ್ಬ ಮನುಷ್ಯ ರೋಗರಹಿತನಾಗಿ ಹೇಗೆ ಬದುಕಬಹುದು ಎಂಬುದನ್ನು ಒಂದು ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ:
“ನಿತ್ಯಂ ಹಿತಾಹಾರ-ವಿಹಾರಸೇವೀ
ಸಮೀಕ್ಷ್ಯಕಾರೀ ವಿಷಯೇಷ್ವಸಕ್ತಃ|
ದಾತಾ ಸಮಃ ಸತ್ಯಪರಃ ಕ್ಷಮಾವಾನ್
ಆಪೆÇ್ತೀಪಸೇವೀ ಚ ಭವತ್ಯರೋಗಃ||”
ನಿತ್ಯಂ ಹಿತಾಹಾರ ಸೇವೀ: ನಿತ್ಯವೂ ಹಿತಾಹಾರವನ್ನು ಸೇವಿಸುವವನು ಎಂದೇನೋ ಅವರು ಹೇಳಿದರು; ಆದರೆ ಹಿತವಾದ ಆಹಾರ ಎಂದರೆ ಎಂತಹ ಆಹಾರ ಎಂಬುದರ ತಿಳಿವಳಿಕೆ ನಮಗೆ ಇರಬೇಕು. ಆಚಾರ್ಯರೇ ಹಲವುಕಡೆ ಅದರ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ನೀಡಿದ್ದಾರೆ. ಹಿತಾಹಾರವೆಂದರೆ ಮೊದಲನೆಯದಾಗಿ ಆ ಆಹಾರದಲ್ಲಿ ಬಳಸಿದ ಘಟಕಗಳು ದೇಹದ ಆರೋಗ್ಯವನ್ನು ಹೆಚ್ಚಿಸುವ ಮತ್ತು ರೋಗವನ್ನು ನಿವಾರಿಸುವ ಗುಣವನ್ನು ಹೊಂದಿರಬೇಕು. ಹಾಗಾಗಿ ಆಹಾರ ತಯಾರಿಸುವಾಗ ನಾವು ಅದರಲ್ಲಿ ಬಳಸುವ ವಸ್ತುಗಳ ಗುಣಗಳ ಬಗ್ಗೆ ಅರಿತಿರಬೇಕು. ಉದಾಹರಣೆಗೆ, ಅರಿಶಿನ, ಶುಂಠಿ, ದಾಲ್ಚಿನ್ನಿಯಂತಹ ಸಾಂಬಾರಪದಾರ್ಥಗಳು, ಕರಿಬೇವು-ನುಗ್ಗೆಯಂತಹ ಸೊಪ್ಪುಗಳು, ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳು, ದೇಶೀ ತಳಿಯ, ಹುಲ್ಲು ಮೆಂದ ಆಕಳ ಹಾಲು ಮತ್ತು ಅದರ ಉತ್ಪನ್ನಗಳು – ಇವೆಲ್ಲ ಧನಾತ್ಮಕ ಗುಣಗಳನ್ನು ಹೊಂದಿರುವ ಆಹಾರಪದಾರ್ಥಗಳು. ಆದರೆ ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯದ ಮೇಲೆ ಅವುಗಳಿಂದಾಗುವ ಪರಿಣಾಮ ನಿರ್ಧಾರವಾಗುತ್ತದೆ. ಸಕ್ಕರೆ, ಮೈದಾ, ಹೊರಗಡೆ ಸಿಗುವ ಸಿದ್ಧ ತಿಂಡಿಗಳಲ್ಲಿ ಬಳಸುವ ರಾಸಾಯನಿಕಗಳು ಜನ್ಮತಃ ಅಹಿತವಾದವು. ಅವುಗಳನ್ನು ಹೇಗೆ ಬಳಸಿದರೂ ದೇಹಕ್ಕೆ ಹಾನಿಯಾಗುವುದು ಶತಃಸಿದ್ಧ. ಹಾಗಾಗಿ ಹಿತವಾದ ಆಹಾರವೆಂದರೆ ಇಂತಹ ರಾಸಾಯನಿಕಗಳನ್ನು ಬಳಸಿರಬಾರದು.
ಆಹಾರಪದಾರ್ಥಗಳನ್ನು ಬೆಳೆಯುವಾಗ, ಶೇಖರಿಸುವಾಗ, ಸಂಸ್ಕರಿಸುವಾಗ, ಅವು ಆಕರ್ಷಕವಾಗಿ ಕಾಣುವಂತೆ ಮಾಡಲು ಹೀಗೆ ಹಲವು ಹಂತಗಳಲ್ಲಿ ರಾಸಾಯನಿಕಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ದಾಳಿಂಬೆ, ಶುಂಠಿ, ಬೂದುಗುಂಬಳಗಳು ಅದ್ಭುತ ಆಹಾರಗಳಾಗಿರಬಹುದು. ಆದರೆ ಇಷ್ಟೆಲ್ಲ ರೀತಿಯಲ್ಲಿ ರಾಸಾಯನಿಕಗಳನ್ನು ಬಳಸಿದಾಗ ಸಹಜವಾಗಿ ಅವು ಕ್ಯಾನ್ಸರ್ನಂತಹ ದೊಡ್ಡ ದೊಡ್ಡ ಕಾಯಿಲೆಗಳು ಬರಲು ಕಾರಣವಾಗುತ್ತವೆ. ಹಾಗಾಗಿ ಸಾಧ್ಯವಾದಷ್ಟಾದರೂ ನಾವೇ ಬೆಳೆದುಕೊಳ್ಳಲು ಅಥವಾ ಸಂಸ್ಕರಿಸಿಕೊಳ್ಳಲು ಪ್ರಯತ್ನಿಸಬೇಕು. ಉದಾಹರಣೆಗೆ ಗೋಧಿಹಿಟ್ಟನ್ನು ತೆಗೆದುಕೊಳ್ಳುವ ಬದಲು ಗೋಧಿಯನ್ನು ತೆಗೆದುಕೊಂಡು ಹಿಟ್ಟು ಮಾಡಿಸಿಕೊಳ್ಳಬಹುದು. ಜೀರಿಗೆಯಂತಹ ಸಾಂಬಾರಪದಾರ್ಥಗಳನ್ನು ತೊಳೆದು ಒಣಗಿಸಿಟ್ಟುಕೊಳ್ಳಬಹುದು. ಈ ಆಧುನಿಕಯುಗದಲ್ಲಿ ಸಂಪೂರ್ಣವಾಗಿ ರಾಸಾಯನಿಕರಹಿತ ಆಹಾರಸೇವನೆ ಸಾಧ್ಯವಿಲ್ಲವಾದರೂ, ರಾಸಾಯನಿಕಗಳನ್ನು ಎಷ್ಟರಮಟ್ಟಿಗೆ ನಮ್ಮ ಊಟದಲ್ಲಿ ಕಡಮೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ.
ಸ್ವಲ್ಪವೂ ಕೊಬ್ಬಿನ ಅಂಶವಿಲ್ಲದ ಆಹಾರವನ್ನು ಸೇವಿಸುವುದು ಇಂದಿನ ಫ್ಯಾಶನ್ ಆಗಿದೆ. ಆದರೆ ನಮಗೆ ನಿತ್ಯವೂ ಕೊಬ್ಬಿನ ಆವಶ್ಯಕತೆ ಇದೆ. ನಮ್ಮ ಮೆದುಳು, ಹೃದಯ, ಮೂಳೆಗಳು ಹೀಗೆ ಇಡೀ ಶರೀರ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಕೊಬ್ಬು ಬೇಕೇ ಬೇಕು. ಆದರೆ ಅದು ಒಳ್ಳೆಯ ಕೊಬ್ಬಾಗಿರಬೇಕು. ಹುಲ್ಲು ಮೆಂದ ಆಕಳ ಹಾಲು, ತುಪ್ಪ, ಬೆಣ್ಣೆ, ಗಾಣದಲ್ಲಿ ತಯಾರಿಸಿದ ಕೊಬ್ಬರಿಎಣ್ಣೆ, ಶೇಂಗಾ ಎಣ್ಣೆಗಳು ಮತ್ತು ಬಾದಾಮಿ, ಗೋಡಂಬಿ, ಅಕ್ರೋಟ್ನಂತಹ ಕರಟಕಾಯಿಗಳು; (ನಟ್ಗಳು) ಇಂತಹವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಸಂಸ್ಕರಿತ, ಅತಿಯಾಗಿ ಕರಿದ, ಮಾರ್ಕೆಟ್ಗಳಲ್ಲಿ ಸಿಗುವ ಕೊಬ್ಬಿನ ಪದಾರ್ಥಗಳು ವಿಷಕಾರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. “ಸ್ನಿಗ್ಧಮಶ್ನೀಯಾತ್” ಎಂದು ಆಚಾರ್ಯ ಚರಕರು ಹೇಳಿದ್ದಾರೆ. ಅಂದರೆ ನಮ್ಮ ಊಟದಲ್ಲಿ ಕೊಬ್ಬಿರಲೇಬೇಕು ಎಂದು. ಬೊಜ್ಜು ಇರುವವರಿಗೂ ಕೂಡಾ ಒಳ್ಳೆಯ ಕೊಬ್ಬು ಹಿತಕರವೇ.
ಊಟದ ಪ್ರಮಾಣದ ಮೇಲೆಯೂ ನಮ್ಮ ಆರೋಗ್ಯ ಅವಲಂಬಿತವಾಗಿದೆ. ಪೌಷ್ಟಿಕ ಆಹಾರವಾಗಿದ್ದರೂ ಕಂಠಪೂರ್ತಿ ತಿಂದರೆ ಅದು ವಿಷವಾಗಿ ಪರಿಣಮಿಸುತ್ತದೆ. ಹೆಚ್ಚು ತಿಂದಷ್ಟೂ ದೇಹಕ್ಕೆ ಹೆಚ್ಚು ಪುಷ್ಟಿ ಎಂದುಕೊಂಡರೆ ಅದು ತಪ್ಪು. ಇಲಿಗಳ ಮೇಲೆ ಒಂದು ಪ್ರಯೋಗ ಮಾಡಲಾಗಿದೆ. ಕೆಲವು ಇಲಿಗಳಿಗೆ ಬೇಕುಬೇಕಾದಷ್ಟು ಆಹಾರ ಕೊಡಲಾಯಿತು. ಇನ್ನು ಕೆಲವಕ್ಕೆ ದಿನಕ್ಕೆರಡು ಬಾರಿ, ಕೆಲವಕ್ಕೆ ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಹೀಗೆ ಬೇರೆ ಬೇರೆ ಗುಂಪು ಮಾಡಿ ಉಪವಾಸ ಮಾಡಿಸಲಾಯಿತು. ಆಗ ಕಂಡು ಬಂದಿದ್ದೇನೆಂದರೆ, ಅತಿ ಹೆಚ್ಚು ಉಪವಾಸ ಮಾಡಿಸಲಾದ ಇಲಿಗಳು ಮನಸ್ಸಿಗೆ ಬಂದಷ್ಟು ತಿಂದ ಇಲಿಗಳ ಎರಡರಷ್ಟು ಹೆಚ್ಚು ಕಾಲ ಬದುಕಿದವು ಮತ್ತು ಅವುಗಳಿಗಿದ್ದ ರೋಗಗಳು ನಿಧಾನವಾಗಿ ಇಲ್ಲವಾದವು.
ರೋಗಮೂಲಮಜೀರ್ಣಂ
ದುರದೃಷ್ಟವಶಾತ್ ಇಂದು ನಾವು ದಿನಕ್ಕೆ ಎಂಟು-ಹತ್ತು ಬಾರಿ ಆಹಾರ ಸೇವಿಸುತ್ತಿದ್ದೇವೆ. ಆಯುರ್ವೇದ, ನಮ್ಮ ಸಂಸ್ಕೃತಿ ಅಥವಾ ಇತ್ತೀಚಿನ ಸಂಶೋಧನೆಗಳು ಹೇಳುವುದೇನೆಂದರೆ ನಾವು ದಿನಕ್ಕೆರಡು ಬಾರಿ ಊಟ ಮಾಡಿದರೆ ಅದು ಬೇಕಾದಷ್ಟಾಯಿತು. ಉಳಿದ ಸಮಯದಲ್ಲಿ ಹಸಿವಾದರೆ ಎಳನೀರು, ಹಣ್ಣುಗಳ ಜ್ಯೂಸ್ಗಳನ್ನು ಸೇವಿಸಬಹುದು.
ನೊಬೆಲ್ ಪಾರಿತೋಷಿಕ ಪಡೆದ ಜಪಾನಿನ ವಿಜ್ಞಾನಿ ಯೋಶಿನೋರಿ ಓಹ್ಸುಮಿಯ ಸಂಶೋಧನೆಯ ಪ್ರಕಾರ ಉಪವಾಸದಿಂದ ಕ್ಯಾನ್ಸರ್ನಂತಹ ರೋಗಗಳನ್ನೂ ಗೆಲ್ಲಬಹುದು. ಸಂಜೆ ಸೂರ್ಯಾಸ್ತದ ಮೊದಲು ಊಟ ಮಾಡಿ, ನಂತರ 16 ಘಂಟೆಗಳನ್ನು ಬಿಟ್ಟು ಅಂದರೆ ಮರುದಿನ ಬೆಳಗ್ಗೆ ಮತ್ತೆ ಊಟ ಮಾಡುವುದು. ಹೀಗೆ ದಿನಕ್ಕೆರಡು ಬಾರಿ ಊಟ ಮಾಡುವುದು. 8 ತಾಸುಗಳ ಅವಧಿಯಲ್ಲಿ ಆಹಾರ ಸೇವಿಸಿದರೆ, 16 ತಾಸುಗಳ ಅವಧಿಯಲ್ಲಿ ಉಪವಾಸ ಮಾಡುವುದು. ಈ ರೀತಿ ನಾವು ಹೇಳಿದ್ದನ್ನು ಪಾಲಿಸಿ ಎಷ್ಟೋ ನಮ್ಮ ರೋಗಿಗಳು ತಮ್ಮ ಗಂಭೀರ ಕಾಯಿಲೆಗಳನ್ನು ಗುಣಪಡಿಸಿಕೊಂಡಿದ್ದಾರೆ.
ಊಟಕ್ಕೆ ಕುಳಿತಾಗ ಎಷ್ಟು ತಿನ್ನಬೇಕು ಎಂಬುದರ ಅರಿವೂ ಬೇಕಾಗುತ್ತದೆ. ಎಲ್ಲರೂ ಇಷ್ಟು ತಿನ್ನಬೇಕು ಎಂದು ಪ್ರಮಾಣ ನಿರ್ಧರಿಸುವುದು ತಪ್ಪಾಗುತ್ತದೆ. ಏಕೆಂದರೆ, ವ್ಯಕ್ತಿಯ ಪ್ರಕೃತಿ, ವಯಸ್ಸು, ಇರುವ ಪ್ರದೇಶ, ಕಾಲ ಇವುಗಳೆಲ್ಲದರ ಮೇಲೆ ಹಸಿವಿನ ಪ್ರಮಾಣ ಮತ್ತು ಆಹಾರದ ಆವಶ್ಯಕತೆ ಇರುತ್ತದೆ. ಹಾಗಾಗಿ ಇಷ್ಟು ರೊಟ್ಟಿ, ಇಷ್ಟು ಪ್ರಮಾಣದ ಅನ್ನವನ್ನು ಮಾತ್ರ ನಾನು ಉಣ್ಣಬೇಕು ಎಂದು ನಿರ್ಧರಿಸುವುದು ತಪ್ಪಾಗುತ್ತದೆ. ಹಾಗಾಗಿ ಆ ಸಮಯದ ಹಸಿವಿಗೆ ಅನುಗುಣವಾಗಿ ಪ್ರಮಾಣವನ್ನು ನಿರ್ಧರಿಸಬೇಕು ಎಂದು ಆಯುರ್ವೇದ ಹೇಳುತ್ತದೆ. ಆ ಸಮಯದಲ್ಲಿ ಎಷ್ಟು ಹಸಿವಿದೆಯೋ ಅಥವಾ ಎಷ್ಟು ಆಹಾರವನ್ನು ಸೇವಿಸುವ ಸಾಮಥ್ರ್ಯ ಹೊಟ್ಟೆಗಿದೆಯೋ ಅದರ ಅರ್ಧದಷ್ಟು ಪ್ರಮಾಣ ಘನ ಆಹಾರ (ಅನ್ನ, ಚಪಾತಿ ಇತ್ಯಾದಿ), ಕಾಲು ಭಾಗದಷ್ಟು ದ್ರವ ಆಹಾರ (ಸಾಂಬಾರ್, ಮಜ್ಜಿಗೆ ಇತ್ಯಾದಿ) ಮತ್ತು ಇನ್ನುಳಿದ ಕಾಲು ಭಾಗವನ್ನು ಖಾಲಿ ಬಿಡಬೇಕು ಎಂದಿದ್ದಾರೆ. ಕನಿಷ್ಠ ಕಾಲು ಭಾಗವನ್ನಾದರೂ ಖಾಲಿ ಬಿಡದಿದ್ದರೆ ಅದು ಅಗ್ನಿಮಾಂದ್ಯಕ್ಕೆ ಕಾರಣವಾಗಿ, ಆಹಾರವೇ ವಿಷವಾಗಿ ಯಾವ ಖಾಯಿಲೆಗೆ ಬೇಕಾದರೂ ಕಾರಣವಾಗುತ್ತದೆ (‘ರೋಗಾನೇಕಸ್ಯ ತೇ ಮೂಲಮಜೀರ್ಣಂ ಪ್ರಾಪ್ನುವಂತಿ ಹಿ’).
ಅದೆಷ್ಟೇ ಪೌಷ್ಟಿಕ ಅಥವಾ ಹಿತವಾದ ಆಹಾರವಾಗಿದ್ದರೂ, ಮೊದಲು ತಿಂದ ಆಹಾರ ಜೀರ್ಣವಾಗುವ ಮೊದಲೇ ಸೇವಿಸಿದರೆ ಅದು ಅಹಿತವೇ ಆಗುತ್ತದೆ. ಇದು ಕೂಡಾ ಕಾಲಾಂತರದಲ್ಲಿ ದೊಡ್ಡ ದೊಡ್ಡ ರೋಗಗಳಿಗೆ ಕಾರಣವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂದು ರಕ್ತದೊತ್ತಡ, ಸಕ್ಕರೆಕಾಯಿಲೆ, ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ ಎಂದರೆ ಅದಕ್ಕೆ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಇಂತಹ ತಪ್ಪುಗಳು ಕಾರಣವಾಗಿರುತ್ತವೆ. ಹಸಿಯದೇ ಉಣ್ಣುವುದು ಮತ್ತು ಹಸಿವಾದ ನಂತರವೂ ಊಟ ಮಾಡದೇ ಇರುವುದು ಎರಡೂ ಕೂಡಾ ಅಹಿತವೇ. “ಕಾಲ- ಭೋಜನಂ ಆರೋಗ್ಯಕರಾಣಾಂ ಶ್ರೇಷ್ಠಂ” ಎಂದು ಆಯುರ್ವೇದ ಹೇಳುತ್ತದೆ. ಅಂದರೆ ಕಾಲಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳುವುದು ಆರೋಗ್ಯ ಕಾರಣಗಳಲ್ಲಿ ಶ್ರೇಷ್ಠವಾದದ್ದು ಎಂದು. ಹಾಗಾಗಿ ಆಯಾ ಕಾಲದಲ್ಲಿ ಬೆಳೆಯುವ ಹಣ್ಣುಗಳು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಏಕೆಂದರೆ ಆ ಕಾಲಕ್ಕೆ ನಮ್ಮ ದೇಹಕ್ಕೆ ಯಾವುದರ ಆವಶ್ಯಕತೆ ಇದೆಯೋ ಅದನ್ನು ಪ್ರಕೃತಿ ನಮಗೆ ಕೊಡುತ್ತದೆ. ಜೊತೆಗೆ ಆಯಾ ಕಾಲದಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಗೆ ಅನುಸಾರವಾಗಿ ನಮ್ಮ ಆಹಾರದಲ್ಲೂ ಬದಲಾವಣೆ ಬರಬೇಕು. ಉದಾಹರಣೆಗೆ, ಮಳೆಗಾಲದಲ್ಲಿ ಜೀರ್ಣಶಕ್ತಿ ಕಡಮೆಯಿರುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಬೇಕು. ಜೇನುತುಪ್ಪ, ಸೊಪ್ಪುಗಳು, ಸಾಂಬಾರಪದಾರ್ಥಗಳನ್ನು ಸೇವಿಸಬಹುದು. ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಕೊಬ್ಬಿನ ಆಹಾರವನ್ನೂ, ಬೇಸಿಗೆಯಲ್ಲಿ ತಂಪು ಕೊಡುವ ಆಹಾರಗಳನ್ನೂ ಸೇವಿಸಬೇಕು.
“ನಿತ್ಯಂ ಸರ್ವರಸಾಭ್ಯಾಸಃ ಬಲಕರಾಣಾಂ ಶ್ರೇಷ್ಠಂ” ಎಂದು ಹೇಳುತ್ತಾರೆ. ಅಂದರೆ ನಿತ್ಯವೂ ಸಿಹಿ, ಹುಳಿ, ಉಪ್ಪು, ಕಹಿ, ಖಾರ, ಒಗರುಗಳನ್ನೆಲ್ಲವನ್ನೂ ಸೇವಿಸಬೇಕು. ಯಾವುದೇ ಒಂದು ರುಚಿಯ ಆಹಾರವನ್ನು ಮಾತ್ರ ಸೇವಿಸುವುದು ತಪ್ಪು. ಷಡ್ರಸೋಪೇತ ಭೋಜನ ನಮ್ಮ ಹಿರಿಯರ ಆರೋಗ್ಯದ ಗುಟ್ಟಾಗಿತ್ತು.
‘ತನ್ಮನಾ ಭುಂಜೀತ’
ಜೊತೆಗೆ, ಆಹಾರ ಸೇವಿಸುವಾಗ ನಾವು ಎಂತಹ ಭಾವನೆಯಲ್ಲಿ ಸೇವಿಸುತ್ತೇವೆಯೋ ಹಾಗೆ ನಾವಾಗುತ್ತೇವೆ ಎನ್ನುತ್ತಾರೆ. ಹಾಗಾಗಿಯೇ “ಜ್ಞಾನ- ವೈರಾಗ್ಯ- ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ” ಎಂದು ಪ್ರಾರ್ಥಿಸಿ ನಾವು ಆಹಾರ ಸೇವಿಸುವುದು. ಭಿಕ್ಷೆ ಕೊಟ್ಟಿದ್ದಕ್ಕೆ ದೇವಿಗೆ ಕೃತಜ್ಞನಾಗಿ, ಜ್ಞಾನ ಮತ್ತು ವೈರಾಗ್ಯ ಸಿದ್ಧಿಗೆ ಪ್ರಯತ್ನಿಸುತ್ತೇನೆ ಎಂಬ ಭಾವನೆಯಲ್ಲಿ ಊಟ ಮಾಡಬೇಕು. ಆದರೆ ಟಿವಿ, ಮೊಬೈಲ್ ನೋಡುತ್ತಾ ಮಾಡಿದ ಅಮೃತಸಮಾನ ಊಟವೂ ದೇಹ ಮತ್ತು ಮನಸ್ಸಿಗೆ ವಿಷಕಾರಿಯಾಗಬಲ್ಲದು. ಆಚಾರ್ಯ ಚರಕರು “ತನ್ಮನಾ ಭುಂಜೀತ” ಎಂದಿದ್ದಾರೆ. ಅಂದರೆ ಊಟ ಮಾಡುವಾಗ ಮನಸ್ಸು ಊಟದಲ್ಲೇ ಇರಬೇಕು ಎಂದು. ಹಾಗಿದ್ದಾಗ ಮಾತ್ರ ಮಾಡಿದ ಊಟವನ್ನು ಜೀರ್ಣಿಸಲು ಮತ್ತು ಹೀರಿಕೊಳ್ಳಲು ದೇಹ ತಯಾರಾಗುತ್ತದೆ.
ಹಿತ ವಿಹಾರ ಸೇವೀ: ಅಂದರೆ ನಿತ್ಯವೂ ಹಿತವಾದ ಕ್ರಿಯೆಗಳನ್ನು ಮಾಡಬೇಕು ಎಂದು. ಬ್ರಾಹ್ಮೀಮುಹೂರ್ತದಲ್ಲಿ ಏಳುವುದು, ನಿತ್ಯವೂ ಅಭ್ಯಂಗ (ಎಣ್ಣೆಯ ಮಸ್ಸಾಜ್) ಮಾಡಿಕೊಳ್ಳುವುದು, ಆಸನ, ಪ್ರಾಣಾಯಾಮ, ದೈಹಿಕ ವ್ಯಾಯಾಮಗಳನ್ನು ಮಾಡುವುದು, ಸಾಧ್ಯವಾದಷ್ಟೂ ರಾಸಾಯನಿಕರಹಿತ ವಸ್ತುಗಳನ್ನು ಬಳಸುವುದು, ಉರಿ ಬೇಸಿಗೆಯ ಹೊರತಾಗಿ ಬೇರೆ ದಿನಗಳಲ್ಲಿ ಹಗಲುನಿದ್ದೆ ಮಾಡದೇ ಇರುವುದು, ರಾತ್ರಿ ಬೇಗ ಮಲಗಿಕೊಳ್ಳುವುದು, ಪ್ರಯಾಣ- ಸಾಹಸ- ಮೈಥುನಗಳನ್ನು ಹಿತಮಿತವಾಗಿ ಮಾಡುವುದು ಇವೆಲ್ಲಾ ಹಿತವಾದ ವಿಹಾರಗಳು. ನಾವು ಪ್ರತಿನಿತ್ಯವೂ ಇಂತಹ ಕ್ರಿಯೆಗಳಲ್ಲಿ ಮಾಡುವ ತಪ್ಪಿನಿಂದಾಗಿ ಸಮಸ್ಯೆ ಅನುಭವಿಸುವ ರೋಗಿಗಳನ್ನು ನೋಡುತ್ತೇವೆ. ಯಾವುದೇ ಔಷಧದಿಂದ ಸಮಸ್ಯೆ ಗುಣವಾಗದಿದ್ದರೂ ಇವುಗಳನ್ನು ಸರಿಪಡಿಸಿದಾಗ ಗುಣವಾಗುತ್ತದೆ.
ಸಮೀಕ್ಷ್ಯಕಾರೀ: ಯಾವುದಾದರೂ ಕೆಲಸ ಮಾಡುವ ಮೊದಲು ಸರಿಯಾಗಿ ಯೋಚಿಸಿ ಕೆಲಸ ಮಾಡುವುದರಿಂದ ಎಷ್ಟೋ ಸಮಸ್ಯೆಗಳನ್ನು ತಪ್ಪಿಸಿಕೊಂಡು ಆರೋಗ್ಯದಿಂದಿರಬಹುದು. ಇಲ್ಲದೇ ಹೋದರೆ, ಮಾಡಿಕೊಂಡ ತಪ್ಪುಗಳಿಂದಾಗಿ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯ ಹಾಳಾಗುತ್ತದೆ.
ವಿಷಯೇಶ್ವಸಕ್ತ: ಇಂದ್ರಿಯಗಳ ದಾಸನಾಗದೇ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡವನಿಗೆ ಸುಲಭವಾಗಿ ಅನಾರೋಗ್ಯ ಕಾಡಲು ಸಾಧ್ಯವಿಲ್ಲ. ಇಂದು ಬಹಳಷ್ಟು ಜನರು ಇಂದ್ರಿಯಗಳು ಬಯಸುವ ಕ್ಷಣಿಕಸುಖದ ಹಿಂದೆ ಬಿದ್ದು ಶಾಶ್ವತಸುಖವನ್ನು ಕಳೆದುಕೊಳ್ಳುತ್ತಿದ್ದಾರೆ.
ದಾತಾ: ದಾನ ಮಾಡುವುದು ಎನ್ನುವುದಕ್ಕಿಂತ ದಾನ ಮಾಡುವ ಪ್ರವೃತ್ತಿಯಲ್ಲಿರುವವನ ಮನಸ್ಸು ಸದಾ ಸಂತೋಷದಲ್ಲಿರುತ್ತದೆ. ಅಂಥವನು ಆಹಾರ-ವಿಹಾರಗಳಲ್ಲಿ ಸಣ್ಣಪುಟ್ಟ ತಪ್ಪು ಮಾಡಿದರೂ ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಎಲ್ಲವೂ ತನಗೇ ಬೇಕೆಂಬ ಭಾವನೆಯಿಂದಲೇ ಇಂದು ಬಹಳಷ್ಟು ಜನರಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಆಟೋ-ಇಮ್ಯೂನ್ ಕಾಯಿಲೆಗಳು ಸರ್ವೇ ಸಾಮಾನ್ಯವಾಗುತ್ತಿವೆ.
ಕ್ಷಮಾವಾನ್: ಕ್ಷಮಿಸುವ ಗುಣದಿಂದಾಗಿ ನಮ್ಮೆದುರಿನವರಿಗೆ ಅನುಕೂಲವಾಗುತ್ತದೆಯೋ ಇಲ್ಲವೋ, ನಮ್ಮ ಮನಸ್ಸಂತೂ ಹಗುರವಾಗಿರುತ್ತದೆ. ಒಂದಿಂಚು ಜಾಗದ ಸಲುವಾಗಿ ಗುದ್ದಾಡಿ, ಕೊನೆಗೆ ಒಂದಿಂಚೂ ಅಲುಗಾಡಲಾಗದಷ್ಟು ಕಾಯಿಲೆಗಳನ್ನು ತಂದುಕೊಳ್ಳುತ್ತೇವೆ. ನಾವು ದ್ವೇಷಭಾವನೆಯಲ್ಲಿದ್ದಾಗಲೇ ನಮ್ಮ ಜೀವಕೋಶಗಳೂ ಪರಸ್ಪರ ದ್ವೇಷಿಸಿ ದೊಡ್ಡ ದೊಡ್ಡ ಕಾಯಿಲೆಗಳಿಗೆ ಕಾರಣವಾಗುವುದು.
ಆಪ್ತೋಪಸೇವೀ: ಜ್ಞಾನಿಗಳು ಹೇಳಿದಂತೆ ನಡೆಯುವುದರಿಂದ ಎಷ್ಟೋ ಸಮಸ್ಯೆಗಳನ್ನು ತಪ್ಪಿಸಬಹುದು. ಆರೋಗ್ಯ ಕಾಪಾಡಿಕೊಳ್ಳಲು ಹಿತವಚನಗಳನ್ನು ಹೇಳಿದಾಗ ಅದನ್ನು ಉಡಾಫೆ ಮಾಡುವುದು ಬಹುತೇಕರ ರೂಢಿ. ಏಕೆಂದರೆ ನಮಗೆ ಆರೋಗ್ಯ ಇರುವಾಗ ಅದರ ಬೆಲೆ ತಿಳಿಯುವುದಿಲ್ಲ. ಅದು ಇಲ್ಲವಾದ ನಂತರ ಪರಿತಪಿಸಿದರೆ ತಿರುಗಿ ಬರುವುದಿಲ್ಲ.
ಭವತ್ಯರೋಗಃ: ಇಷ್ಟೆಲ್ಲವನ್ನೂ ಸರಿಯಾಗಿ ಪಾಲಿಸಿದವನಿಗೆ, ಈ ರೀತಿಯಲ್ಲಿಯೇ ಬದುಕಿದವನಿಗೆ ಎಂದೂ ರೋಗ ಬರುವುದಿಲ್ಲ. ಭಗವಂತನು ನಮಗೆ ಹೀಗೆ ಬದುಕುವ ಬುದ್ಧಿ ಮತ್ತು ಸಮೃದ್ಧ ಆರೋಗ್ಯವನ್ನು ನೀಡಲಿ.
***