ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜನವರಿ 2021 > ಹೊರೆಯಾದ ಜೀವನಶೈಲಿ ರೋಗಗಳು

ಹೊರೆಯಾದ ಜೀವನಶೈಲಿ ರೋಗಗಳು

ಭಾರತವು ಒಂದು ವೈರುಧ್ಯಗಳ ನಾಡು. ನಮ್ಮದು ಅಹಿಂಸೆಯ ಆಚಾರ್ಯಪುರುಷ ಗಾಂಧಿಯವರ ನಾಡು; ಅದೇ ವೇಳೆ ಭಯೋತ್ಪಾದನೆಯ ಹೆಸರಿನಲ್ಲಿ ಪ್ರತಿದಿನ ರಕ್ತದ ಓಕುಳಿಯಾಡುತ್ತಿರುವ ದೇಶ ಕೂಡ ಹೌದು. ನಾವು ಅದೆಷ್ಟೋ ದೇವಿಯರನ್ನು ಪೂಜೆ ಮಾಡುತ್ತೇವೆ; ಅದೇ ಹೊತ್ತಿಗೆ ಮಹಿಳೆಯರ ಮೇಲೆ ಹೇಳಲಾಗದಂತಹ ದೌರ್ಜನ್ಯಗಳು ನಡೆಯುತ್ತಿರುವ ದೇಶವೂ ನಮ್ಮದೇ. ನಮ್ಮಲ್ಲಿ ಜಗತ್ತಿನ ಅತಿದೊಡ್ಡ ಕೊಳಗೇರಿಗಳಿವೆ; ಅದರ ಸಮೀಪವೇ ವಿಶ್ವದ ಅತಿ ದುಬಾರಿಯ ಭವ್ಯ ಬಂಗಲೆಗಳೂ ಇವೆ.

ಈ ವೈರುಧ್ಯವನ್ನು ನಾವು ಆರೋಗ್ಯದ ಕ್ಷೇತ್ರದಲ್ಲಿ ಕೂಡ ನೋಡಬಹುದು. ನಮ್ಮ ದೇಶದ ಬಡವರಲ್ಲಿ ಶ್ರೀಮಂತರ ರೋಗಗಳನ್ನು ಕಾಣಬಹುದು. ಸಾಂಕ್ರಾಮಿಕ ರೋಗಗಳನ್ನು ನಾವಿನ್ನೂ ಜಯಿಸಿಲ್ಲ; ಆದರೆ ಆಗಲೇ ನಮ್ಮನ್ನು ಪರಸ್ಪರ ಹಬ್ಬದಿರುವ ಅಥವಾ ಜೀವನಶೈಲಿ ರೋಗಗಳು ಆಕ್ರಮಿಸಿಬಿಟ್ಟಿವೆ. ನಮ್ಮಲ್ಲಿ ಶಿಶುಗಳು, ಮಕ್ಕಳು ಹಾಗೂ ಸ್ತ್ರೀಯರ ಹೆರಿಗೆ ವೇಳೆಯ ಮರಣಗಳು ತುಂಬ ದೊಡ್ಡ ಪ್ರಮಾಣದಲ್ಲಿವೆ. ಪೌಷ್ಟಿಕ ಆಹಾರದ ಕೊರತೆ, ನೈರ್ಮಲ್ಯದ ಅಭಾವ, ಬಡತನ, ಅನಕ್ಷರತೆ ಹಾಗೂ ವೈದ್ಯಕೀಯ ಸೇವೆಗಳ ಕೊರತೆ ಅದಕ್ಕೆ ಕಾರಣ; ಆದರೆ ಅದೇ ವೇಳೆ ನಮ್ಮಲ್ಲಿ ಅತಿ ಶ್ರೀಮಂತರಿಗೆ ನಾಲ್ಕು ಬಗೆಯ ಶ್ರೇಷ್ಠ ಸೇವೆಯನ್ನು ಒದಗಿಸುವ ಸಪ್ತತಾರಾ ಆಸ್ಪತ್ರೆಗಳು ಕೂಡ ಇವೆ.

ಜೀವನಶೈಲಿ ರೋಗಗಳೆಂದರೆ, ಅನಾರೋಗ್ಯಕರ ನಡವಳಿಕೆ ಹಾಗೂ ಇತರ ಕಾರಣಗಳಿಂದ ಬರುವ ರೋಗಗಳು; ಅವುಗಳಲ್ಲಿ ಕೆಲವು ಬದಲಿಸಲು ಸಾಧ್ಯವಾಗದಂತಹ ಕಾರಣಗಳು. ಉದಾಹರಣೆಗೆ ವಯಸ್ಸು, ಲಿಂಗ, ಜನಾಂಗ ಇತ್ಯಾದಿ. ಇನ್ನು ಕೆಲವು ಬದಲಿಸಲು ಸಾಧ್ಯವಿರುವ ಕಾರಣಗಳು; ಉದಾ. ಧೂಮಪಾನ, ಆಹಾರವಿಧಾನ ವ್ಯಾಯಾಮರಹಿತತೆ, ಮದ್ಯಪಾನ ಮತ್ತು ಮಾದಕವಸ್ತು ಸೇವನೆ.

ಒಂದೆಡೆ ಬೊಜ್ಜಿನಂತಹ ಗಂಭೀರ ಸಮಸ್ಯೆಯಾದರೆ, ಇನ್ನೊಂದೆಡೆ ಪೌಷ್ಟಿಕ ಆಹಾರದ ತೀವ್ರ ಕೊರತೆ – ಇಂತಹ ಅತಿರೇಕಗಳು. ಈ ಸಮಾಜದ ಬಡಜನರ ವರ್ಗಗಳಲ್ಲಿ ಅಪೌಷ್ಟಿಕ ಆಹಾರದಿಂದಾಗಿ ಮರಣಗಳು ಸಂಭವಿಸುತ್ತಲೇ ಇವೆ.

ಇನ್ನೊಂದು ಆಘಾತಕಾರಿ ಅಂಶವೆಂದರೆ, ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕ ಆಹಾರ ದೊರೆಯದಿದ್ದರೆ ಮುಂದೆ ಹುಟ್ಟುವ ಮಕ್ಕಳು ಜೀವನದಲ್ಲಿ ಅತಿಯಾದ ರಕ್ತದೊತ್ತಡ ಹಾಗೂ ಮಧುಮೇಹ ರೋಗಕ್ಕೆ ಗುರಿಯಾಗುವ ಅಪಾಯವಿರುತ್ತದೆ.

ಕಳೆದ ಸುಮಾರು 10-15 ವರ್ಷಗಳಲ್ಲಿ ಭಾರತವು ಸಾಂಕ್ರಾಮಿಕ ರೋಗ(ಸೋಂಕು ಬಾಧೆಯ ರೋಗ)ಗಳಿಗಿಂತ ಹೆಚ್ಚಾಗಿ ಜೀವನಶೈಲಿ-ಆಧಾರಿತ ರೋಗಗಳಿಂದ ಬಳಲುವಂತಾಗಿದೆ. ಸಂಪನ್ಮೂಲಗಳ ಲಭ್ಯತೆಯು ಸೀಮಿತವಾದ ಕಾರಣ (ನಮ್ಮ ಜಿಡಿಪಿಯ ಶೇಕಡಾ ಎರಡು ಭಾಗವನ್ನು ಮಾತ್ರ ಆರೋಗ್ಯಸೇವೆಗೆ ಬಳಸಲಾಗುತ್ತಿದೆ) ಆರೋಗ್ಯಸೇವೆಯ ಸಮಸ್ಯೆ ತೀವ್ರಗೊಳ್ಳುತ್ತಲೇ ಇದೆ. ಈ ಸೀಮಿತ ಸಂಪನ್ಮೂಲಗಳನ್ನು ಸಾಂಕ್ರಾಮಿಕ ರೋಗಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎಳೆಯುತ್ತಿರುವ ಕಾರಣ ಯಾರಿಗೂ ಏನೂ ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗುತ್ತಿದೆ.

ನಮ್ಮ ಎಲ್ಲ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪ್ರಬಲಕಾರಣ ಸಂಪನ್ಮೂಲಗಳ ಹಂಚಿಕೆಯಲ್ಲಿನ ತೀವ್ರ ಅಸಮಾನತೆಯೇ ಆಗಿದ್ದು, ಬಡವ-ಶ್ರೀಮಂತರ ನಡುವೆ ಆಕಾಶ-ಪಾತಾಳದ ಅಂತರವಿದೆ; ಇಲ್ಲಿರುವ ಚಿತ್ರ ಅದನ್ನು ಬಿಚ್ಚಿಡುತ್ತದೆ.

ಇಲ್ಲಿ ಕಾಣುವ ಏಕೈಕ ಆಶಾಕಿರಣವೆಂದರೆ ಸಾಂಕ್ರಾಮಿಕವಲ್ಲದ ರೋಗಗಳನ್ನು ಹೆಚ್ಚು ದುಬಾರಿಯಲ್ಲದ ಮುಂಜಾಗ್ರತೆ ಕ್ರಮಗಳ ಮೂಲಕ ನಿಯಂತ್ರಿಸಬಹುದು. ಆದರೆ ಈ ನಿಟ್ಟಿನಲ್ಲಿ ಕಾಣುವ ರೋಗಗಳು ನಮ್ಮಲ್ಲಿ ಇನ್ನೂ ಏರುಗತಿಯಲ್ಲೇ ಇವೆ. ಅದರ ಶೃಂಗವನ್ನು ನಾವಿನ್ನೂ ಮುಟ್ಟಿಲ್ಲ. ಆದ್ದರಿಂದ ನಮ್ಮ ಸಮಾಜವು ಈಗ ಅನುಸರಿಸಬೇಕಾದ ಮಂತ್ರವೆಂದರೆ, ರೋಗ ಬಂದ ಮೇಲೆ ಗುಣಪಡಿಸುವುದಕ್ಕಿಂತ ರೋಗತಡೆಯ ಮುಂಜಾಗ್ರತೆ ಕ್ರಮಗಳಿಗೆ ಹೆಚ್ಚಿನ ಮಹತ್ತ್ವ ನೀಡಬೇಕು. ಅಂದರೆ ರೋಗಕ್ಕೆ ಚಿಕಿತ್ಸೆ ನೀಡುವ ಅಮೆರಿಕದ ವಿಧಾನಕ್ಕೆ ಬದಲಾಗಿ ಶತಮಾನಗಳಿಂದ ಪರಂಪರೆಯಾಗಿ ಬಂದ ನಮ್ಮ ಸ್ವಸ್ಥ ಜೀವನ ವಿಧಾನಕ್ಕೆ ಒತ್ತು ನೀಡಬೇಕಾಗಿದೆ.

ರೋಗದ ಹೊರೆ ಯಾವುದು?

ದೇಶದಲ್ಲಿ ಆರು ಕೋಟಿಗೂ ಅಧಿಕ ಜನ ಮಧುಮೇಹ ರೋಗಿಗಳಿದ್ದಾರೆ; ಅದಕ್ಕಿಂತ ಸ್ವಲ್ಪ ಜಾಸ್ತಿ ಜನ ಆ ರೋಗ ಬರುವ ಅಂಚಿನಲ್ಲಿದ್ದಾರೆ (ವಯಸ್ಕರಲ್ಲಿ ಸುಮಾರು ಮೂರನೇ ಒಂದು ಭಾಗ). ಮಿಲಿಯಗಟ್ಟಲೆ ಜನ ಕ್ಯಾನ್ಸರ್‍ಪೀಡಿತರಿದ್ದರೆ, ಸುಮಾರು ಎರಡು ಲಕ್ಷ ಜನ ಪ್ರತಿವರ್ಷ ಮೂತ್ರಪಿಂಡ ವೈಫಲ್ಯದಿಂದ ಸಾವಿಗೀಡಾಗುತ್ತಿದ್ದಾರೆ; ರೋಗದ ಕಾರಣದಿಂದ ಸುಮಾರು ಒಂದು ಲಕ್ಷ ಜನರಿಗೆ ಅಂಗಚ್ಛೇದ (amputation) ಮಾಡಬೇಕಾಗುತ್ತಿದೆ.

ಈ ಸಂಖ್ಯೆಗಳು ಆಘಾತ ನೀಡುವ ಜೊತೆಗೆ ಆತಂಕವನ್ನು ಕೂಡ ಮೂಡಿಸುತ್ತಿವೆ. ಏಕೆಂದರೆ ಬಹಳಷ್ಟು ಜನರಲ್ಲಿ ಈ ರೋಗಗಳು ಸಣ್ಣ ಪ್ರಾಯದಲ್ಲೇ ಕಾಣಿಸಿಕೊಳ್ಳುತ್ತಿವೆ; ಬಡವರು ಮತ್ತು ದುಡಿಮೆಯ ವರ್ಗದಲ್ಲೂ ಇವೆ. ಇದರಿಂದ ಸಮಾಜದ ಮೇಲೆ ಉಂಟಾಗಬಹುದಾದ ಆರ್ಥಿಕ ಪರಿಣಾಮವು ಊಹೆಗೂ ನಿಲುಕದ್ದು.

2014ರಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು 98.16 ಲಕ್ಷ ಸಾವುಗಳಲ್ಲಿ ಶೇ. 60ಕ್ಕೂ ಅಧಿಕ ಸಾವಿಗೆ ಜೀವನಶೈಲಿ ಸಂಬಂಧಿ ರೋಗಗಳೇ ಕಾರಣ. ಇಂದಿನಿಂದ 2030ರವರೆಗೆ ದೇಶದ ಆರೋಗ್ಯಸೇವೆಯ ವೆಚ್ಚ ಸುಮಾರು 4.5 ಟ್ರಿಲಿಯನ್ ಡಾಲರ್‍ಗಳು ಆಗಬಹುದು. ಇದು ನಮ್ಮ ಜಿಡಿಪಿಯ ಮೂರುಪಟ್ಟು, ವರ್ಷದ ಆರೋಗ್ಯಸೇವೆ ಬಜೆಟ್‍ನ ಇನ್ನೂರುಪಟ್ಟು ಮತ್ತು ನಮ್ಮ ತೈಲ ಆಮದು ಬಜೆಟ್‍ನ ಅರವತ್ತುಪಟ್ಟು ಎಂದು ಅಂದಾಜು ಮಾಡಲಾಗಿದೆ.

ಈ ಅಂಕಿ-ಅಂಶಗಳು ಯಾರಿಗೂ ಗಾಬರಿ ಹುಟ್ಟಿಸದೆ ಇರಲಾರವು. ಆದ್ದರಿಂದ ಇದನ್ನು ನಿಯಂತ್ರಿಸದಿದ್ದರೆ ನಾವು ಪಾರಾಗುವುದು ಕಷ್ಟ; ಹಾಗೂ ನಮ್ಮ ಭವಿಷ್ಯದ ತಲೆಮಾರುಗಳನ್ನು ಈ ಜೀವನಶೈಲಿ ರೋಗಗಳ ಧೃತರಾಷ್ಟ್ರ ಆಲಿಂಗನದಿಂದ ಪಾರು ಮಾಡುವುದು ಕೂಡ ಕಷ್ಟ.

ನಾನು ಇಲ್ಲಿ ವಿಶೇಷವಾಗಿ ಹೇಳಬಯಸುವ ಅಂಶವೆಂದರೆ, ಇದು ಕೇವಲ ಆರೋಗ್ಯಸೇವೆಯ ವಿಷಯವಷ್ಟೇ ಅಲ್ಲ; ಏಕೆಂದರೆ ಬಡತನ, ಅನಕ್ಷರತೆ, ಸಾಮಾಜಿಕ ಅಸಮಾನತೆ ಮತ್ತು ಜನಸಂಖ್ಯಾ ಸಂಬಂಧಿ ಪರಿವರ್ತನೆಗಳಿಂದ ಉಂಟಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಕೂಡ ಸಾಂಕ್ರಾಮಿಕವಲ್ಲದ ರೋಗಗಳು ಕಾಣಿಸಿಕೊಳ್ಳಲು ಬಹುಮುಖ್ಯ ಕಾರಣವಾಗಿರುತ್ತದೆ.

ಇದಕ್ಕೇಕೆ ಗಮನ ಕೊಡಬೇಕು?

ಕಾಡುತ್ತಿರುವ ಈ ವಿಷಯವು ಭೀಕರ ಸ್ವರೂಪವನ್ನು ಪಡೆದುಕೊಳ್ಳುವ ಮೊದಲು ತುರ್ತಾಗಿ ಮತ್ತು ಬಲವಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯ. ಅದೃಷ್ಟವಶಾತ್, ಇದನ್ನು ಈಗಲೂ ಎದುರಿಸಲು ಸಾಧ್ಯವಿದೆ. ಆದರೆ ಈ ಗಂಭೀರ ಆರೋಗ್ಯ ಭೀತಿಯ ವಿರುದ್ಧ ಸಾರ್ವಜನಿಕರಾದ ನಾವು, ಸರ್ಕಾರ ಮತ್ತು ಮಾಧ್ಯಮಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯ.

ಕುತೂಹಲದ ಸಂಗತಿಯೆಂದರೆ, ಸಾಮಾಜಿಕ ಅರ್ಥಶಾಸ್ತ್ರಜ್ಞರು ಇದರ ಖರ್ಚು-ವೆಚ್ಚಗಳ ಲೆಕ್ಕಾಚಾರವನ್ನು ಮಾಡಿದ್ದಾರೆ; ಇದರ ಆರ್‍ಓಐ (Return on Investment) ಶೇ. 15 ಮತ್ತು ಯಾವುದೇ ವ್ಯವಹಾರಸ್ಥ ಇದರ ಮೇಲೆ ಹಣ ಹೂಡಲು ಮನಸ್ಸು ಮಾಡಬಹುದು.

ಆದ್ದರಿಂದ ನಾವು ನಮ್ಮ ಮನಸ್ಸು ಮತ್ತು ಸಂಪನ್ಮೂಲಗಳನ್ನು ಒಟ್ಟು ಸೇರಿಸಿ ಈ ಮಹಾನ್ ಅವಕಾಶದಲ್ಲಿ ಅದನ್ನು ಬಳಸಿಕೊಳ್ಳೋಣ; ಮತ್ತು ಭಾರತವನ್ನು ಭವಿಷ್ಯದಲ್ಲಿ ಹೆಚ್ಚು ಆರೋಗ್ಯಪೂರ್ಣ ಮತ್ತು ಸದೃಢ ದೇಶವನ್ನಾಗಿ ಮಾಡೋಣ.

ಇದನ್ನು ಮಾಡುವುದು ಹೇಗೆ?

ನಾವು ಕೈಗೊಳ್ಳಬಹುದಾದ ಈ ಕೆಳಗಿನ ಕ್ರಮಗಳು ಮಾಡಲು ಸುಲಭ ಮತ್ತು ಹೆಚ್ಚಿನ ಖರ್ಚೂ ಇಲ್ಲ.

* ಜೀವನಶೈಲಿ ರೋಗಗಳ ಬಗ್ಗೆ ವಿಶೇಷವಾಗಿ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

* ಬಾಲ್ಯದಲ್ಲೇ ಆರಂಭಿಸಿ: ಜೀವನಶೈಲಿ ರೋಗಗಳಿಗೆ ಸಂಬಂಧಿಸಿದಂತೆ ಪಥ್ಯ ಆಹಾರ (ಡಯೆಟ್), ವ್ಯಾಯಾಮ, ಹೊಗೆಸೊಪ್ಪನ್ನು ದೂರವಿಡುವುದು ಮುಂತಾದ ವಿಷಯಗಳ ಕುರಿತು ಶಾಲೆಗಳಲ್ಲಿ ಪ್ರಚಾರಾಂದೋಲನ ನಡೆಸಬೇಕು. ವಿಶೇಷವಾಗಿ ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಹಾಗೂ ಮಧುಮೇಹ ರೋಗಗಳ ಬಗ್ಗೆ ತಪಾಸಣೆ ನಡೆಸಿ ಶೀಘ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಅಗತ್ಯ.

* ಆರು ‘ಎಸ್’ ಮತ್ತು ನಾಲ್ಕು ‘ನೋ’ಗಳನ್ನು ನಾವು ನಿಯಂತ್ರಿಸಿದರೆ ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧದ ಯುದ್ಧವನ್ನು ನಾವು ಗೆದ್ದಂತೆಯೇ.

ಆರು ‘ಎಸ್’ಗಳು ಹೀಗಿವೆ:

1) Smoking – ಧೂಮಪಾನ ಮತ್ತು ಹೊಗೆಸೊಪ್ಪಿನ ಯಾವುದೇ ರೀತಿಯ ಬಳಕೆಯನ್ನು ಮಾಡದಿರುವುದು. (ಇದು ಕ್ಯಾನ್ಸರ್, ಹೃದಯ ರಕ್ತನಾಳ ಮತ್ತು ಶ್ವಾಸಕೋಶದ ರೋಗಗಳಿಗೆ ಕಾರಣವಾಗಿರುತ್ತದೆ.

2) Sugar – ಸಕ್ಕರೆ ಮತ್ತು ಯಾವುದೇ ಅಧಿಕ ಕ್ಯಾಲರಿ ಆಹಾರದಿಂದ ದೂರವಿರುವುದು (ಇದರಿಂದ ಬೊಜ್ಜು, ಮಧುಮೇಹ ಮತ್ತು ಹೃದಯಸಂಬಂಧಿ ರೋಗಗಳು ಬರುತ್ತವೆ.)

3)  Salt – ಅಧಿಕ ಉಪ್ಪು ತಿನ್ನುವುದರಿಂದ ಅಧಿಕ ರಕ್ತದೊತ್ತಡ (ಬಿಪಿ) ಬರುತ್ತದೆ.

4) Sedentary (ಪೀಠಸ್ಥ) ಜೀವನಶೈಲಿ: ಇದರಿಂದ ಬೊಜ್ಜು, ಮಧುಮೇಹ ಹಾಗೂ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ.

5) Stress ಒತ್ತಡ(ಇದನ್ನು ನಾನು ದುಃಖ ಎಂದು ಕರೆಯಲೆ?)ದಿಂದ ಹೃದಯದ ಸಮಸ್ಯೆಗಳು ತಲೆದೋರುತ್ತವೆ.

6) Spirits ಅಥವಾ ಮದ್ಯ (ಇದರ ಅತಿಯಾದ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳಲ್ಲದೆ, ಸಾಮಾಜಿಕ ಸಮಸ್ಯೆಗಳು ಕೂಡ ತಲೆದೋರುತ್ತವೆ.)

ಇದಕ್ಕೆ ಹೆಚ್ಚುವರಿಯಾಗಿ ನೀವು ಈ ಕೆಳಗಿನ ನಾಲ್ಕು ಅಂಶಗಳನ್ನು ಗಮನಿಸಿ, ನಿಯಂತ್ರಣದಲ್ಲಿ ಇರಿಸಿಕೊಂಡರೆ ನಿಮ್ಮ ಜೀವನ ನಿಜವಾಗಿಯೂ ತುಂಬ ಆರೋಗ್ಯಪೂರ್ಣವಾಗಿರುತ್ತದೆ.

ಎ) ಸಕ್ಕರೆ

ಬಿ) ಬಿ.ಪಿ.

ಸಿ) ಕೊಲೆಸ್ಟರಾಲ್

ಡಿ) ಮೂತ್ರಪಿಂಡ (ಕ್ರಿಯೇಟಿನೈನ್ ಅಂಶ ಸರಿಯಾಗಿದ್ದರೆ ಮೂತ್ರಪಿಂಡವು (ಕಿಡ್ನಿ) ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಕೊಳ್ಳಬಹುದು.

ಆದ್ದರಿಂದ ನಾನು ಒಟ್ಟಿನಲ್ಲಿ ಹೇಳುವುದೆಂದರೆ, ಆರೋಗ್ಯಪೂರ್ಣವಾಗಿ ಆಹಾರ ಸೇವಿಸಿ; ಕ್ರಮಪ್ರಕಾರ ವ್ಯಾಯಾಮ ಮಾಡಿ; ಹೊಗೆಸೊಪ್ಪಿನ ಮತ್ತು ಹಾಳುಮೂಳು ತಿಂಡಿ(ಜಂಕ್‍ಫುಡ್)ಗಳಿಂದ ದೂರವಿರಿ; ಈ ಕಾರ್ಯಕ್ರಮಗಳನ್ನು ಜೀವನದಲ್ಲಿ ಬೇಗ ಆರಂಭಿಸಿದರೆ ಮುಂದೆಲ್ಲ ಆರೋಗ್ಯಪೂರ್ಣವಾಗಿ ಇರಬಹುದು.

ಆದ್ದರಿಂದ ಜೀವನಶೈಲಿ ಸಂಬಂಧಿ ರೋಗಗಳನ್ನು ದೂರವಿಡುವ ಬಗ್ಗೆ ನಾವಿಂದು ಒಂದು ಪ್ರತಿಜ್ಞೆಯನ್ನು ಸ್ವೀಕರಿಸೋಣ; ಮತ್ತು ಎಲ್ಲ ರೀತಿಯಲ್ಲಿ ಭಾರತವನ್ನು ಒಂದು ಆರೋಗ್ಯಪೂರ್ಣ ಹಾಗೂ ಬಲಶಾಲಿ ರಾಷ್ಟ್ರವನ್ನಾಗಿ ಮಾಡೋಣ.

( ಲೇಖಕರು: ಡಾ. ಎಚ್. ಸುದರ್ಶನ ಬಲ್ಲಾಳ್ , ಲೇಖನ ಸೌಜನ್ಯ: ‘ದಿ ವೀಕ್’ ಇಂಗ್ಲಿಷ್ ವಾರಪತ್ರಿಕೆ)

ಅನುವಾದ : ಎಂ. ಬಿ. ಹಾರ್ಯಾಡಿ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ