ಮಾನ್ಯ ಡಿವಿಜಿಯವರು ಅನೇಕ ಬಾರಿ ತಮ್ಮ ಪ್ರಬಂಧಗಳ ಆರಂಭವನ್ನು ‘ವಿಷಯ’ ದ ಶಬ್ದಾರ್ಥ ವಿವರಣೆಯೊಂದಿಗೆ ಮಾಡುತ್ತಿದ್ದರು. ಹಿರಿಯರು ತುಳಿದು ಸವೆದ ಅದೇ ದಾರಿಯಲ್ಲಿ ನಡೆಯುವುದು ನನ್ನ ಪಾದಗಳಿಗೆ ಹಿತಕರವಾಗಿದೆ. ‘ತಂತ್ರಜ್ಞಾನ’ ಎನ್ನುವ ಶಬ್ದವು ನಿಜಾರ್ಥದಲ್ಲಿ ಯಾವುದೇ ಮೆಷಿನ್, ಯಂತ್ರ, ಸಲಕರಣೆ ಎನ್ನುವ ಅರ್ಥವನ್ನು ಕೊಡುವುದೆಂದು ನನಗನಿಸುವುದಿಲ್ಲ. ‘ತಂತ್ರ’ ಅಥವಾ ಟೆಕ್ನೀಕ್ ಅಂದರೆ ಯಾವುದೋ ಒಂದು ವಸ್ತು ಅಥವಾ ಕ್ರಿಯೆಯ ಹಿಂದೆ ಅಡಗಿರುವ ಸತ್ಯ, ರಹಸ್ಯ ಎಂದು ಅರ್ಥೈಸಬಹುದಷ್ಟೆ. ಇದರ ಇಂಗ್ಲಿಷ್ ಪ್ರತಿರೂಪವಾದ ಟೆಕ್ನಾಲಜಿ ಕೂಡ ‘Technique (ತಂತ್ರ) ಮತ್ತು ‘logos’ (ಶಾಸ್ತ್ರ, ಅಧ್ಯಯನ) ಎಂಬೆರಡು ಶಬ್ದಗಳ ಮಿಶ್ರಣವೇ ಆಗಿರುವಂತಿದೆ. ಅಂದರೆ ತಂತ್ರಜ್ಞಾನವು ಶಬ್ದಾರ್ಥದ ಪ್ರಕಾರ ವಿಜ್ಞಾನವೇ. ಅದು ಆಯಾ ವಿಷಯದ ಜ್ಞಾನ, ಸುಜ್ಞಾನ.
ಆದರೆ ನಾವು ತಂತ್ರಜ್ಞಾನವನ್ನು ಈಗ ಅಪ್ಲಯನ್ಸ್ ಎಂಬ ಅರ್ಥದಲ್ಲಿ, ಅಂದರೆ ಯಂತ್ರೋಪಕರಣ ಎಂಬಂತೆಯೇ ಹೆಚ್ಚಾಗಿ ಗ್ರಹಿಸುತ್ತೇವೆ. ಇದು ‘ಶಾಸ್ತ್ರ’ಕ್ಕಿಂತ ಹೆಚ್ಚಾಗಿ ಅನ್ವಯ, ಪ್ರಯೋಗ, ಬಳಕೆ, ಅನುಕೂಲಕರ ಹತ್ಯಾರು ಎಂಬ ಭಾವಗಳಲ್ಲಿ ನಮ್ಮನ್ನು ತಟ್ಟುತ್ತದೆ. “ಟೆಕ್ನಾಲಜಿ ಮುಂದುವರಿದಿದೆ” ಎಂಬಿತ್ಯಾದಿಯಾಗಿ ಜನರು ಆಡುವ ಮಾತು ಯಂತ್ರೋಪಕರಣಗಳ ಕ್ರಾಂತಿಯನ್ನೇ ಹೆಚ್ಚಾಗಿ ಸೂಚಿಸುವುದಷ್ಟೆ. ಈ ಅರ್ಥವ್ಯತ್ಯಾಸವು ಸೂಕ್ಷ್ಮವಾದರೂ ಗಹನವೇ ಸರಿ. ಏಕೆಂದರೆ ‘ಪ್ರಯೋಗ’ವು ಅನೇಕಬಾರಿ ‘ಶಾಸ್ತ್ರ’ವನ್ನು ಮರೆಮಾಚುವ ಅಸಾಮಾನ್ಯ ಶಕ್ತಿಯನ್ನು ಹೊಂದಿದೆ. ಶಾಸ್ತ್ರವು ತನ್ನಿಂದತಾನಾಗಿದ್ದು ಜಡ. ಪ್ರಯೋಗವು ಕ್ರಿಯಾಶೀಲ. ಶಾಸ್ತ್ರವು ತಿಳಿವನ್ನು ವೃದ್ಧಿಸಿ, ಮಿದುಳಿಗೆ ಮೇವು ನೀಡಿ, ತನ್ಮೂಲಕ ಶಾಸ್ತ್ರಾಧ್ಯಾಯಿಯ ಕುತೂಹಲವನ್ನು ತಣಿಸಿ, ಆನಂದವನ್ನು ಕೊಡಬಲ್ಲದು. ಪ್ರಯೋಗವು ಯಾವುದೋ ಕೆಲಸವನ್ನು ಮಾಡುತ್ತದೆ, ಉದ್ದೇಶವನ್ನು ಸಾಧಿಸುತ್ತದೆ; ಪ್ರಯೋಗಿಸಲ್ಪಡುವ ವಸ್ತುವಿನ ಹೆಸರು, ರೂಪ, ಗುಣಗಳನ್ನು ಬದಲಾಯಿಸುತ್ತದೆ; ಕೆಲವೊಮ್ಮೆ ಅತಿಯಾಗಿ ವಿಷಕಾರಿಯೂ ಆಗುತ್ತದೆ. ಶಾಸ್ತ್ರವು ಒಂದು ಅಸಾಮಾನ್ಯ ಯುಗಪ್ರವರ್ತಕ ತತ್ತ್ವವೇ ಆಗಿಬಿಡುವುದುಂಟು – ಐನ್ಸ್ಟೈನರ ಶಕ್ತಿಸಮೀಕರಣದಂತೆ. ಆದರೆ ಅದರ ಅನ್ವಯವು ಕೆಲವೊಮ್ಮೆ ಅಣುಬಾಂಬಿನಂತೆ ಮಾನವೀಯತೆಗೆ ಹಾಕಿದ ಶಾಶ್ವತ ಬರೆಯೇ ಆಗಿಬಿಡುವುದೂ ಇದೆ. ನಮ್ಮ ಸೆಖೆ ತಣಿಸಲೆಂದು ಬಂದ ಫ್ಯಾನ್ ಎಂಬ ಯಂತ್ರವು ಆಗಾಗ್ಗೆ ನೇಣುಹಾಕಿಕೊಳ್ಳಲು ಬಳಕೆಯಾಗುತ್ತಲೇ ಇರುವುದಷ್ಟೆ? ಈ ರೀತಿ ಹೊಸಹೊಸ ತಂತ್ರಜ್ಞಾನವು ಬಂದಂತೆ ಅದರ ಅನ್ವಯವಿಕಾರಗಳು ಬರುತ್ತಲೇ ಇರುತ್ತವೆ. ಅನ್ವಯವು ಮಾಡಿದ ಈ ಹಾನಿಯನ್ನು ಶಾಸ್ತ್ರವು ಎಂದೂ ಮಾಡಲಾರದು. ಆದ್ದರಿಂದ ಟೆಕ್ನಾಲಜಿಯ ಸೂಕ್ತ ಬಳಕೆಯು ಬಳಕೆದಾರನ ನೀತಿ, ಸಂಸ್ಕಾರ, ಸೌಶೀಲ್ಯಗಳ ಮೇಲೆ ನಿಂತಿದೆ. ಇದು ಶಾಸ್ತ್ರ ಮತ್ತು ಅನ್ವಯಗಳ ನಡುವಿನ ವ್ಯತ್ಯಾಸ. ವಿಜ್ಞಾನ ಮತ್ತು ತಂತ್ರಜ್ಞಾನಗಳ ನಡುವಿನ ಕಂದಕ.
ಹುಟ್ಟರಿವಿನ ತುಡಿತದ ಬೇರೆಬೇರೆ ರೂಪಗಳು
ಮನುಷ್ಯ ಮತ್ತು ಇತರೆಲ್ಲ ಪ್ರಾಣಿಗಳು ತಮ್ಮ ಸಹಜಪ್ರವೃತ್ತಿಯ ಸೆಳೆತವು ನಿರ್ದೇಶಿಸುವ ಕೆಲಸಕಾರ್ಯಗಳನ್ನೇ ಮಾಡುತ್ತವೆ. ಹೆಚ್ಚೇಕೆ ನಾವು ಮಾಡುವ ಎಲ್ಲಾ ಕೆಲಸಕಾರ್ಯಗಳು – ಅದು ಚಂದ್ರನ ಮೇಲಕ್ಕೆ ನೆಗೆಯುವುದಿರಲಿ – ಅವೆಲ್ಲವೂ ನಮ್ಮ ಹುಟ್ಟರಿವಿನ ಸೆಳೆತಗಳ ಬೇರೆಬೇರೆ ವಿಸ್ತೃತರೂಪಗಳೇ ಎಂದು ತರ್ಕಸಹಿತವಾಗಿ ನಿರೂಪಿಸಬಹುದು. ಊಟ, ನಿದ್ರೆ, ವಸತಿ, ಸಂತತಿವೃದ್ಧಿ ಇವೆಲ್ಲ ನಮ್ಮ ಅಸ್ತಿತ್ವಕ್ಕೆ ಅಸ್ತಿಭಾರವಾದ ಮೂಲಸೆಳೆತಗಳು.
ಈ ಕೆಲವೇ ಮೂಲಸೆಳೆತಗಳು ಮಡಿಕೆಮಡಿಕೆಯಾಗಿ ವಿಸ್ತರಿಸಿ ಸಂವಹನ, ಆತ್ಮರಕ್ಷಣೆ, ಆಳ್ವಿಕೆ, ಆಕ್ರಮಣ, ಆವಿಷ್ಕರಣ, ಸಂಗ್ರಹಣ, ಸುಖಸೌಲಭ್ಯಪ್ರಿಯತೆ, ದಕ್ಷತೆಯ ಅನ್ವೇಷಣೆ ಹೀಗೆ ನೂರಾರು ರೂಪಗಳನ್ನು ತಾಳಿದೆ. ಆದರೆ ಅವೆಲ್ಲವೂ ಮೂಲ instinctಗಳ ಬೇರೆ ಬೇರೆ ರೂಪಗಳೇ ಆಗಿವೆ. ಏಕೆಂದರೆ ಇವೆಲ್ಲವನ್ನೂ ನಾವು ಇತರ ಪ್ರಾಣಿಗಳಲ್ಲೂ ಸರಳರೂಪಗಳಲ್ಲಿ ಕಾಣಬಹುದಾಗಿದೆ. ಬೇರೆ ಪ್ರಾಣಿಗಳೂ ತಮ್ಮ ಮಧ್ಯೆ ಮಾತನಾಡುತ್ತವೆ, ಇತರರನ್ನು ಆಕ್ರಮಿಸುತ್ತವೆ, ಹೊಸ ದಾರಿಯನ್ನು ಕಂಡುಕೊಳ್ಳುತ್ತವೆ, ಆಹಾರವಸ್ತುಗಳನ್ನು ತಮ್ಮ ಮಿತಿಯಲ್ಲಿ ದಾಸ್ತಾನು ಮಾಡುತ್ತವೆ – ಹೀಗೆ. ವಿಜ್ಞಾನವನ್ನು ಎಲ್ಲ ಸಸ್ಯಪ್ರಾಣಿಗಳೂ ಬಳಸುತ್ತವೆ. ಸಣ್ಣಮಟ್ಟಿನ ಸಾಧನ ಸಲಕರಣೆಗಳನ್ನೂ ಬಹಳ ಪ್ರಾಣಿಗಳು ಬಳಸುವುದುಂಟು. ಆದರೆ ಕೃತಕ ಶಕ್ತಿಚಾಲಿತ ತಂತ್ರಜ್ಞಾನವನ್ನು ಮನುಷ್ಯ ಮಾತ್ರ ಬಳಸುತ್ತಾನೆ. ಇದೇ ನಾವು ಸೀಮಾರೇಖೆಯನ್ನು ಮುಟ್ಟುತ್ತಿರುವ, ಮಿತಿಯನ್ನು ದಾಟುತ್ತಿರುವ, ಎಲ್ಲೆಮೀರುತ್ತಿರುವ ಹಂತ ಎಂಬುದು ಎಲ್ಲರೂ ಒಪ್ಪಿಕೊಳ್ಳುವಂಥ ವಿಷಯ.
‘ನಮಗೆ ಎಷ್ಟು ತಂತ್ರಜ್ಞಾನ ಬೇಕು?’ ಎಂಬುದು ಇಲ್ಲಿ ನಿರ್ಧಾರಿತವಾಗಬೇಕಾದ ವಿಚಾರ. ಈ ಪ್ರಶ್ನೆ ಬಹಳ ಸಂಕೀರ್ಣವಾಗಿದೆ, ಮತ್ತು ‘ಇಷ್ಟು’ ಎಂದು ಪ್ರಮಾಣೀಕರಿಸಿ ಹೇಳುವುದು ಕಷ್ಟಕರವಾಗಿದೆ ಎಂಬುದು ನಿಜವೇ ಆದರೂ, ಆ ಸೀಮಾರೇಖೆಯನ್ನು ಕಂಡುಕೊಳ್ಳಲು ಒಂದು ಸುಲಭಸೂತ್ರವನ್ನು ಹುಡುಕುವ ಪ್ರಯತ್ನ ಮಾಡುವುದು ನಮ್ಮ ಉಳಿವಿನ ದೃಷ್ಟಿಯಿಂದ ಅನಿವಾರ್ಯವೇ ಆಗಿದೆ. ಆನ್ವಯಿಕ ತಂತ್ರಜ್ಞಾನಗಳ ಶಕ್ತಿ ಹೆಚ್ಚಿದಂತೆ ಬಳಕೆದಾರನ ಜವಾಬ್ದಾರಿಯೂ ಹೆಚ್ಚಬೇಕಿದೆ. ಕಾಲ್ನಡಿಗೆಯಲ್ಲಿ ನಡೆಯಲು ಯಾರಿಗೂ ಲೈಸನ್ಸ್ನ ಅಗತ್ಯವಿಲ್ಲ. ವಾಹನ ಚಲಾವಣೆಗೆ ಲೈಸನ್ಸ್ ಬೇಕಿದೆ. ನಾಗರಿಕವಿಮಾನ ಚಾಲನೆಗೆ ಇಂತಿಷ್ಟು ಗಂಟೆ ಹಾರಾಟದ ಅನುಭವವಿರಬೇಕೆಂದು ನಿಯಮವಿದೆ. ಅಂದರೆ ಯಂತ್ರಗಳು ಶಕ್ತಿವಂತವಾದಷ್ಟೂ ನಿಯಮಗಳು ಬಿಗಿಯಾಗುತ್ತವೆ. ಆದರೆ ಕಾನೂನಿನ ನಿಯಮಗಳು ಪ್ಯಾರಾಸೆಟಮೋಲ್ ಮಾತ್ರೆಯಂತೆ. ಅವು ರೋಗಲಕ್ಷಣಗಳನ್ನು ಮರೆಮಾಚುತ್ತವೆಯೇ ಹೊರತು ರೋಗವನ್ನು ಗುಣಪಡಿಸಲಾರವು. ಆದ್ದರಿಂದ ಅಪಾತ್ರರ ಕೈಗೆ ಸಿಕ್ಕಿದ ಶಕ್ತಿವಂತ ತಂತ್ರಜ್ಞಾನವು ತಣ್ಣಗೆ ಮನುಷ್ಯ, ಪ್ರಕೃತಿ, ಪರಿಸರದ ಮೇಲೆ ತಮ್ಮ ಪ್ರಹಾರ ಮುಂದುವರಿಸುತ್ತವೆ. ಹೀಗೆ ಹುಟ್ಟರಿವು ಎಂಬ ಹಸಿವಿಗೆ ತಂತ್ರಜ್ಞಾನವೆಂಬ ಮೃಷ್ಟಾನ್ನವು ಸಿಕ್ಕಿ ಮನುಷ್ಯ ಮಿತಿಮೀರಿ ತಿಂದು ದೇಹಬುದ್ಧಿವಿಕಾರ ಹೊಂದಲು ಕಾರಣವಾಗಿದೆ.
ಎಷ್ಟು ಎಂಬುದರ ನಿರ್ಧಾರಕ್ಕೆ ಒಂದು ಸರಳ ಉದಾಹರಣೆ
ಒಂದು ಸರಳ ಉದಾಹರಣೆಯನ್ನು ನೋಡೋಣ. ಆಡುವ ಬಯಕೆ ಒಂದು ಹುಟ್ಟರಿವು (instinct). ಕರುಗಳು, ಬೆಕ್ಕುನಾಯಿಗಳ ಮರಿಗಳೂ ಆಟವಾಡುತ್ತವೆ. ಈ ಹುಟ್ಟರಿವಿನ ಉದ್ದೇಶ ಸಂತೋಷವನ್ನು ಪಡೆಯುವುದು, ದೇಹಾರೋಗ್ಯವನ್ನು ವೃದ್ಧಿಸುವುದು, ಮಾನಸಿಕ ಶಕ್ತಿಯನ್ನು ಬೆಳೆಸುವುದು ಇತ್ಯಾದಿ. ಇಷ್ಟೇ ಅಲ್ಲದೆ ದೊಡ್ಡವರಾದ ಮೇಲೆ ನಮ್ಮ ಅನ್ನ, ವಸತಿ, ಸಂತತಿವೃದ್ಧಿ ಮತ್ತಿತರ ಮೂಲಬಯಕೆಗಳನ್ನು ಈಡೇರಿಸುವ ಕ್ಷಮತೆ ಪಡೆದುಕೊಳ್ಳುವುದೂ ಆಗಿದೆ. ಬೆಕ್ಕಿನಮರಿಗಳು ಒಂದರ ಮೇಲೊಂದು ಆಕ್ರಮಣ ಮಾಡುವ ಆಟವನ್ನೇ ಆಡುತ್ತವೆ ಮತ್ತು ಅದೇ ತಂತ್ರವನ್ನು ತಮ್ಮ ಬೇಟೆಯ ಮೇಲೂ ಬಳಸಿ ದೊಡ್ಡವಾದ ಮೇಲೆ ತಮ್ಮ ಹೊಟ್ಟೆಹೊರೆದುಕೊಳ್ಳುತ್ತವೆ. ಕರುಗಳು ತಮ್ಮ ಹಿಂಗಾಲನ್ನು ಹಿಂದಕ್ಕೆ ಒದೆಯುತ್ತ ವೇಗವಾಗಿ ಓಡುತ್ತವೆ. ಬೆಳೆದ ಮೇಲೆ ಇದೇ ನೆಗೆತವು ತಮ್ಮನ್ನು ಅಟ್ಟಿಸಿಕೊಂಡು ಬರುವ ಆಕ್ರಾಮಕ ಪ್ರಾಣಿಗಳ ಮುಖಕ್ಕೆ ಆಘಾತವನ್ನೂ ಉಂಟುಮಾಡುತ್ತದೆ. ಅಂದರೆ ಪ್ರಕೃತಿಯು ನಮ್ಮಿಂದ ಎಂತಹ ಆಟವನ್ನು ಆಡಿಸುತ್ತದೆಯೆಂದರೆ ಅದನ್ನು ಆಡುತ್ತ ನಮಗರಿವಿಲ್ಲದೆಯೇ ನಾವು ಜೀವನದ ಪಾಠವನ್ನೂ ಕಲಿತುಬಿಡುತ್ತೇವೆ. ಮಕ್ಕಳಾಡುವ ಕಬಡ್ಡಿ, ಲಗೋರಿ, ಓಡುವುದು, ನೆಗೆಯುವುದು, ಮರಹತ್ತುವುದು – ಇವೆಲ್ಲ ಜೀವನದ ಕಲಿಕೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಟೆಕ್ನಾಲಜಿ ಮುಂದುವರಿದು ಇಂದು ಆಟಗಳು ಮೊಬೈಲಿನೊಳಕ್ಕೂ ಬಂದಿವೆ. ನೆಟ್ವರ್ಕ್ ಬಳಸಿ ಮಕ್ಕಳು ಇಂದು ಎಲ್ಲೋ ಇರುವ ಪ್ರತಿಸ್ಪರ್ಧಿಯೊಂದಿಗೆ ಕುಳಿತೇ ಫುಟ್ಬಾಲೋ ಅಥವಾ ಪಬ್ಜಿಯೋ ಆಡಬಹುದು. ಇಂತಹ ಆಟಗಳು ಈಗಾಗಲೇ ಚರ್ಚಿಸಿದ ಆಡುವ ಮೂಲಉದ್ದೇಶ – ಬಾಳಕಲಿಕೆಯನ್ನು ಈಡೇರಿಸುವಲ್ಲಿ ಸೋತಿವೆ ಎಂದು ತಿಳಿಯಲು ಯಾವುದೇ ಬುದ್ಧಿವಂತಿಕೆಯೂ ಬೇಡ. ಇದು ತಂತ್ರಜ್ಞಾನದ ಸೀಮೆ ದಾಟಿದುದರ ಸಂಕೇತ.
ಈ ಹಂತಕ್ಕೆ ಬಂದಾಗ ರಕ್ಕಸನ ಪಾಪದ ಕೊಡ ತುಂಬಿದಂತೆ, ಪ್ರಕೃತಿಯು ಸುಲಭವಾಗಿ ನಮ್ಮನ್ನು ಸಂಹರಿಸಿಬಿಡುತ್ತದೆ. ಇದರ ಚಟಕ್ಕೆ ಬಿದ್ದವನು ಶಾರೀರಿಕ ಶಕ್ತಿ, ಸಾಮಾಜಿಕ ಜೀವನದ ಕ್ಷಮತೆಯನ್ನು ಕಳೆದುಕೊಳ್ಳುತ್ತ ಸಾಗುತ್ತಾನೆ ಅಷ್ಟೆ. ಪಬ್ಜಿ ಮಾತ್ರ ಅಲ್ಲ. ನಮ್ಮ ಒಲಿಂಪಿಕ್ಸ್, ನೇರಪ್ರಸಾರಗೊಳ್ಳುವ ಕ್ರಿಕೆಟ್, ಟೆನಿಸ್ ಆಟಗಳೂ ಅಷ್ಟೆ. ತಮ್ಮ ಸೀಮಾರೇಖೆಯನ್ನು ಎಂದೋ ದಾಟಿವೆ. ಯಾವುದೇ ಆಟವನ್ನೂ ಅಲ್ಲೇ ಸುತ್ತಮುತ್ತಲು ನೆರೆದ ಜನರನ್ನು ಬಿಟ್ಟು ಬೇರೆಯವರು ‘ಲೈವ್’ನೋಡಬೇಕಾಗಿಲ್ಲ. ಇಂದು ಈ ಆಟಗಳ ತಾಂತ್ರಿಕತೆ, ಸ್ಟ್ರೈಕ್, ಸರ್ವ್ಗಳ ಬಗ್ಗೆ ನಿಖರವಾಗಿ ವಿಶ್ಲೇಷಿಸಬಲ್ಲ, ಆದರೆ ಕೈಗೆ ಬಾಲು, ಬ್ಯಾಟು ಕೊಟ್ಟರೆ ಒಂದು ಹೊಡೆತವನ್ನೂ ಹೊಡೆಯಲಾಗದ ನಿರ್ವೀರ್ಯ ‘ನೋಡುಗ’ರನ್ನು ಸೃಷ್ಟಿಸಿರುವ ಈ ವ್ಯವಸ್ಥೆ ಆದಷ್ಟು ಬೇಗ ಮುರಿದುಬಿದ್ದು, ಇವುಗಳನ್ನು ಸ್ವತಃ ಆಡುವ ದಿನಗಳು ಮತ್ತೆ ಬರಬೇಕಾಗಿವೆ. ಇದು ಆಟವೊಂದರ ಬಗ್ಗೆ ನಮ್ಮ ಟೆಕ್ನಾಲಜಿ ಮಾಡಬೇಕಿರುವ ಹಿಮ್ಮುಖ ಚಲನೆ.
ನಾವು ಆವಿಷ್ಕರಿಸಿದ ಸಲಕರಣೆಗಳು ನಾವು ಮಾಡಬೇಕೆಂದಿರುವ ಕಾರ್ಯವನ್ನು ಸುಲಭ ಮಾಡಲಷ್ಟೇ ಇವೆ. ಆದರೆ ನಮ್ಮ ಆಟವೇ ನಮಗೆ ಜಡತ್ವವನ್ನು ಕೊಟ್ಟರೆ, ನಮ್ಮ ಕೃಷಿಯು ನಮಗೆ ವಿಷವನ್ನು ಕೊಟ್ಟರೆ, ನಮ್ಮ ಆರೋಗ್ಯವ್ಯವಸ್ಥೆಯು ಅನಾರೋಗ್ಯವನ್ನು ನೀಡಿದರೆ, ಸುದ್ದಿಪ್ರಸಾರವ್ಯವಸ್ಥೆಯು ಬರಿಯ ಗಾಸಿಪ್ ಹಬ್ಬುವುದರಲ್ಲಿ ತೊಡಗಿದರೆ – ಅಲ್ಲಿಗೆ ತಂತ್ರಜ್ಞಾನವು ತನ್ನ ಮಿತಿಯನ್ನು ಮೀರಿದೆ ಎಂದು ಸುಲಭವಾಗಿ ಹೇಳಬಹುದು. ಯಂತ್ರಗಳು ಮನುಷ್ಯರ ಮನಸ್ಸಿಗೆ ಹಿಡಿದ ಕನ್ನಡಿ. “ಪರಿಸರಸಮಸ್ಯೆಯು ನಮ್ಮ ಚಾರಿತ್ರ್ಯದ ಸಮಸ್ಯೆಯಿಂದ ಉಂಟಾಗಿದೆ” ಎಂದು ನನ್ನ ಗುರು ಶ್ರೀ ‘ವೆಂಡೆಲ್ ಬೆರಿ’ ಅವರು ಹೇಳಿದಂತೆ, ತಂತ್ರಜ್ಞಾನದ ದುರ್ಬಳಕೆಯು ಮನುಷ್ಯನ ಮನಸ್ಸಿನ ಸ್ಥಿತಿಯನ್ನೂ, ಇಳಿಯುತ್ತಿರುವ ನೈತಿಕತೆಯನ್ನೂ ತೋರಿಸುತ್ತದೆ. ನಮ್ಮ ಹೆಚ್ಚಿನೆಲ್ಲ ತಾಂತ್ರಿಕಪ್ರಗತಿಯು ಇಂದು ಈ ವಿರೋಧಾಭಾಸದ ಹಂತಕ್ಕೆ ತಲಪಿರುವುದು ದುಃಖಕರವಾದ ಸತ್ಯ.
ಸ್ವಯಂನಿಯಂತ್ರಣದ ಸಾಧನೆ
ಇಂಟರ್ನೆಟ್, ಕೃತಕ ಬುದ್ಧಿಮತ್ತೆ, ಅಂಗಾಂಗ ಕಸಿ, ವಂಶವಾಹಿಯ ತಿದ್ದುಪಡಿ – ಹೀಗೆ ನೂರಾರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ತಂತ್ರಜ್ಞಾನದ ತುರೀಯ ಕ್ರಾಂತಿಗಳನ್ನೂ ಅವುಗಳ ಸರಿತಪ್ಪುಗಳನ್ನೂ ವಿಶ್ಲೇಷಿಸುತ್ತ ಕುಳಿತರೆ ಈ ಲೇಖನವು ಕಾದಂಬರಿಯಾಗಿಬಿಡುತ್ತದೆ.
ಆದ್ದರಿಂದ ಇದಕ್ಕೆ ಹೊರತೇ ಆದ ಬೇರೊಂದು ದಾರಿಯಲ್ಲಿ ಪರಿಹಾರವನ್ನು ಅರಸಬೇಕಾಗಿದೆ. ಎಲ್ಲ ತಂತ್ರಜ್ಞಾನದ ಅನ್ವೇಷಣೆ, ಬಳಕೆಗಳೂ ಮೊದಲಾಗಿ ಹಣ, ಎರಡನೆಯದಾಗಿ ಸುಖದ ಹುಡುಕಾಟಕ್ಕಾಗಿ ನಡೆಯುತ್ತವೆ. ಹಣ, ಸುಖ ಎರಡೂ ನಮಗೆ ಬೇಕಾಗಿದೆ. ಆದರೆ ಎಷ್ಟು ಎಂಬ ನಿರ್ಧಾರವನ್ನು ಮಾಡುವುದರಲ್ಲಿ ನಮ್ಮ ಜಾಣ್ಮೆ ಇದೆ. ಅಲ್ಲದೆ ಚಪ್ಪಲಿಯನ್ನು ಟೊಪ್ಪಿಯೆಂದು ತಪ್ಪಾಗಿ ಅರ್ಥೈಸಿಕೊಂಡರೆ ಅದನ್ನು ತಲೆಯ ಮೇಲೆ ಹೊರುವುದಾಗುತ್ತದಷ್ಟೆ? ಅದೇ ರೀತಿ ಯಂತ್ರಗಳ ಬಗ್ಗೆ ಇರುವ ಕೆಲವು ಉತ್ಪ್ರೇಕ್ಷೆಗಳಿಂದ ಮೊದಲು ಕಳಚಿಕೊಳ್ಳಬೇಕಿದೆ.
1) ಯಂತ್ರಗಳು ಈಚೀಚೆಗೆ ಬಂದಿರುವುದರಿಂದ ಅವೆಲ್ಲವೂ ಶ್ರೇಷ್ಠ ಎಂಬುದು ಮೊದಲ ತಪ್ಪುಕಲ್ಪನೆ. ಅವೆಷ್ಟೋ ಕೆಲಸಗಳನ್ನು ಯಂತ್ರಗಳಿಲ್ಲದೆಯೆ ಮಾಡುವುದು ಹೆಚ್ಚುಗಾರಿಕೆಯಾಗಿದೆ. ಉದಾಹರಣೆಗೆ ಯಾವುದೇ ವಯೋವೃದ್ಧ ವ್ಯಕ್ತಿಯು ಕೋಲು ಎಂಬ ಯಂತ್ರವನ್ನು ಬಳಸದೆ ಇರುವುದು ಶ್ರೇಷ್ಠ ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಕ್ಯಾಲ್ಕುಲೇಟರ್ ಇಲ್ಲದೆ ಲೆಕ್ಕಮಾಡುವ ವ್ಯಕ್ತಿ ಮನ್ನಣೆ ಪಡೆಯುತ್ತಾನೆ. ಬೋರ್ವೆಲ್ ಬಳಸದೆ ತೆರೆದ ಕೆರೆಯಿಂದ ನೀರಾವರಿ ಮಾಡುವುದು ಆರೋಗ್ಯಕರ ಎಂಬುದು ಸಮಾಜದಲ್ಲಿ ಒಪ್ಪಿತವಾಗಿದೆ. ಆದ್ದರಿಂದ ಯಂತ್ರಗಳು ಹೆಮ್ಮೆ ಎಂಬ ಅಪಕಲ್ಪನೆಯನ್ನು ಬಿಡಬೇಕು. ನಿವಾರಿಸಲು ಸಾಧ್ಯವೇ ಇಲ್ಲದಾದಾಗ ಮಾತ್ರ ಯಂತ್ರಗಳ ಬಳಕೆ ಇರಬೇಕು.
2) ಪ್ರತಿಯೊಂದು ಹೊಸ ಯಂತ್ರದ ಬಳಕೆ ಒಂದು ಜನಪದ ಸಂಸ್ಕೃತಿಯನ್ನು ನಾಶಮಾಡುತ್ತದೆ. ಉದಾಹರಣೆಗೆ ನಾವು ಇಲ್ಲಿಯವರೆಗೆ ಗದ್ದೆಕೊಯ್ಲು ಕೈಯಿಂದ ಮಾಡಿ, ಕೈಯಿಂದ ಹೊಡೆದು ಕಾಳು ಬೇರ್ಪಡಿಸುತ್ತಿದ್ದೆವು. ವರ್ಷಕ್ಕೊಮ್ಮೆ ಮೂರು ದಿನಗಳ ಆ ಕಠಿಣಶ್ರಮದಲ್ಲಿ ಭಾಗವಹಿಸುವುದು ಒಂದು ಅತ್ಯದ್ಭುತ ಅನುಭವವೇ ಆಗಿತ್ತು. ಆದರೆ ಕೊಯ್ಲಿನ ಸಮಯದಲ್ಲಿ ಮಳೆಯ ತೊಂದರೆ, ಕೆಲಸದವರ ನಿರಾಸಕ್ತಿ ಈ ವರ್ಷ ಯಂತ್ರಕ್ಕೆ ಹೇಳುವಂತೆ ಮಾಡಿದೆ. ಆದರೆ ಸಾವಿರಾರು ವರ್ಷಗಳ ಕೈಕೊಯ್ಲಿನ ಪರಂಪರೆ ಇದರಿಂದ ಅಂತ್ಯಗೊಂಡಂತೆ ಎಂಬ ನೋವು ಇಲ್ಲಿ ಅನುಭವಿಸಬೇಕಾದುದು. ಜಾನಪದ ಸಂಸ್ಕೃತಿಯ ಬಗ್ಗೆ ಸಂವೇದನೆಯಿರುವವರು ಯಂತ್ರವನ್ನು ಕುರುಡಾಗಿ ಹೊಗಳುವುದನ್ನು ಬಿಡಬೇಕು.
3) ಕೈಕೆಲಸದ ಸೂಕ್ಷ್ಮತೆಯನ್ನು ಯಂತ್ರಗಳು ಪಡೆಯಲಾರವು. ಕೈಯಿಂದ ಕಳೆ ಕೊಚ್ಚಿದರೆ ಆ ಹುಲ್ಲನ್ನು ಮೇವಾಗಿಯೂ ಬಳಸಬಹುದು, ಯಂತ್ರವು ಹುಲ್ಲನ್ನು ನಾಶಮಾಡುತ್ತದೆ. ಯಂತ್ರಗಳಿಂದ ಮಾಡಿದ ಮಣ್ಣಿನ ಕೆಲಸವು ಒರಟಾಗಿ ಇರುತ್ತದೆ, ಕೈಕೆಲಸದ ಕಲೆಗಾರಿಕೆ ಅಲ್ಲಿಲ್ಲ. ವೇಗ ಮತ್ತು ದೊಡ್ಡ ಪ್ರಮಾಣವು ಯಂತ್ರದ ಶಕ್ತಿಯೇ ಹೊರತು ಒನಪು, ಸೂಕ್ಷ್ಮತೆ, ಕಲೆ ಅದರಲ್ಲಿಲ್ಲ.
4) ಆಹಾರದ ಸಂಸ್ಕರಣೆಯಲ್ಲಿ ಯಂತ್ರಗಳು ದೊಡ್ಡ ಅಪಸವ್ಯಗಳನ್ನೇ ಉಂಟುಮಾಡುತ್ತವೆ. ಸರಳ ಉದಾಹರಣೆಯೆಂದರೆ ಮಿಕ್ಸರ್ನಲ್ಲಿ ಸಣ್ಣಪ್ರಮಾಣದಲ್ಲಿ ಆಹಾರದೊಳಕ್ಕೆ ಮುಚ್ಚಳದಲ್ಲಿನ ರಬ್ಬರ್ ಸೇರಿಕೊಳ್ಳುತ್ತದೆ. ಬ್ಲೇಡ್ನ ಕೆಳಗಿರುವ ಸಿಂಥೆಟಿಕ್ ಮೆಟೀರಿಯಲ್ಗಳು ಆಹಾರಕ್ಕೆ ಕರಗುತ್ತವೆ. ಈ ಎಲ್ಲ ಕಾರಣಕ್ಕೆ ಮತ್ತೆ ಮಣ್ಣಿನ ಪಾತ್ರೆ, ತೆಂಗಿನ ಚಿಪ್ಪಿನ ಸೌಟು, ಕಡೆಯುವ ಕಲ್ಲುಗಳ ಶ್ರೇಷ್ಠತೆಯನ್ನು ಕೆಲವರಾದರೂ ಮನಗಾಣುತ್ತಿದ್ದಾರೆ. ಆಧುನಿಕ ಎಣ್ಣೆಗಾಣಗಳು ಎಣ್ಣೆಯ ಗುಣವನ್ನು ಕೆಡಿಸುತ್ತಿರುವುದನ್ನು ಜನ ಈಗ ಅರಿತಿದ್ದಾರೆ. ನಿತ್ಯಾನುಷ್ಠಾನಕ್ಕೆ ತೊಡಕು ಇದ್ದರೂ ಹಿಂದಿನ ವ್ಯವಸ್ಥೆಯಲ್ಲಿ ಮೌಲ್ಯವಿತ್ತು ಎಂದು ಜನ ಗುರುತಿಸುತ್ತಿದ್ದಾರೆ.
5) ಯಂತ್ರತಂತ್ರಗಳು ಎಷ್ಟೇ ಬೆಳೆದಿದ್ದರೂ, ಇಂದಿಗೂ ಅವುಗಳಿಗೆ ಆಹಾರವಾಗಿಸಲು ಬೇಕಾದ ಮೂಲವಸ್ತುಗಳೆಂದರೆ ನೀರು, ಕಲ್ಲಿದ್ದಲು, ಮರ, ಬಿದಿರು, ಪೆಟ್ರೋಲಿಯಂ, ಲೋಹಗಳು, ಆಹಾರಧಾನ್ಯಗಳು ಇತ್ಯಾದಿಗಳೇ. ಅಂದರೆ ಅತ್ಯಾಧುನಿಕ ಯಂತ್ರಗಳು ಕೋಟ್ಯಂತರ ವರ್ಷ ಹಿಂದಿನಿಂದ ಇರುವ ಅವೇ ಸೀಮಿತ ಮೂಲವಸ್ತುಗಳನ್ನು ಬಳಸುತ್ತವೆ. ಆದ್ದರಿಂದ ಸೋಲಾರ್ನಂತಹ ಹೊಸ ಶಕ್ತಿಮೂಲಗಳನ್ನು ಬಳಸಿದರೂ ಈ ಕಚ್ಚಾವಸ್ತುಗಳ ಕೊರತೆ ಮುಂದುವರಿಯಲಿದೆ. ಶಕ್ತಿಯ ಮಿತಬಳಕೆ ಇದಕ್ಕೆ ಪರಿಹಾರವೇ ಹೊರತು ಸೋಲಾರ್ ಪರಿಹಾರವಲ್ಲ. ಆದ್ದರಿಂದ ಸೌರಶಕ್ತಿಯ ಕ್ರಾಂತಿಗಿಂತ ಹೆಚ್ಚಾಗಿ ಮಿತಶಕ್ತಿಬಳಕೆಯ ಕ್ರಾಂತಿ ನಮಗಿಂದು ಬೇಕಾಗಿದೆ.
ಮಾನವದೇಹವು ಒಂದು ಅಸಾಮಾನ್ಯ, ಅಮಿತಶಕ್ತಿಯ ಯಂತ್ರ. ಇದು ಹಿತ್ತಿಲಿನಲ್ಲಿ ದೊರೆಯುವ ಸಾಮಾನ್ಯ ಆಹಾರವನ್ನು ತಿಂದು ಅತ್ಯದ್ಭುತವಾದ ಕೆಲಸಕಾರ್ಯಗಳನ್ನು ಮಾಡಬಲ್ಲುದು. ಮಾನವ ನಿರ್ಮಿತ ಕೃತಕಯಂತ್ರಗಳು ಈ ಜೈವಿಕಯಂತ್ರಗಳ ಅತ್ಯಂತ ಒರಟಾದ, ಕಳಪೆಯಾದ ನಕಲುಗಳಷ್ಟೆ. ಆದರೆ ಇಂದು ಈ ನಕಲುಗಳೇ ಅಸಲಿ ಯಂತ್ರಗಳಿಗಿಂತ ಹೆಚ್ಚು ವಿಜೃಂಭಿಸಿವೆ. ಕಾಗೆಬಂಗಾರವು ನಿಜಬಂಗಾರವಾಗಿದೆ, ಕೆಂಬೂತವೇ ನವಿಲಾಗಿದೆ. ಈ ಅಸಮಂಜಸತೆಯನ್ನು ನಾವೇ ಸ್ವಂತಬುದ್ಧಿಯಿಂದ ಸರಿಪಡಿಸಬೇಕಾಗಿದೆ; ಹಂತಹಂತವಾಗಿ ನಮ್ಮ ಜೀವನದಲ್ಲಿ ಜಾರಿಗೊಳಿಸಬೇಕಾಗಿದೆ. ನಮ್ಮ ಪ್ರಜ್ಞಾವಂತಿಕೆಯನ್ನು ಎಚ್ಚರದಲ್ಲಿಟ್ಟು ಸ್ವಲ್ಪಸ್ವಲ್ಪವೇ ಸರಿದಾರಿಗೆ ತರಬೇಕಾಗಿದೆ. ಯಂತ್ರಗಳಿಗೆ ನಾವು ದಾಸರಾಗುವ ಬದಲಿಗೆ ನಮಗೆ ಯಂತ್ರಗಳು ದಾಸರಾಗಬೇಕಾಗಿದೆ.
ಭಾರತೀಯ ಸಂಸ್ಕೃತಿಯು ಗುರಿಯನ್ನು ತಲಪುವಷ್ಟೇ ಮಹತ್ತ್ವವನ್ನು ತಲಪುವ ದಾರಿಗೂ ಕೊಟ್ಟಿದೆ. ಆದರೆ ಯಂತ್ರಗಳು ದಾರಿಯನ್ನು ಕ್ರಮಿಸದೆ ಗುರಿಯನ್ನು ತಲಪುವ ಅನುಭವ ನೀಡುತ್ತವೆ. ಆದರೆ ಅದೆಷ್ಟೋ ಬಾರಿ ದಾರಿಯು ಗುರಿಯಷ್ಟೇ ಅಥವಾ ಗುರಿಗಿಂತ ಹೆಚ್ಚು ಆನಂದವನ್ನು ನೀಡುತ್ತದೆ. ಈ ಅನುಭವವನ್ನು ಯಂತ್ರಗಳು ನಷ್ಟಗೊಳಿಸುತ್ತವೆ. ಕಾರಿನಲ್ಲಿ ಹೋಗುವಂಥ ಅದೇ ಕ್ಷೇತ್ರವನ್ನು ಕಾಲ್ನಡಿಗೆಯಲ್ಲಿ ದರ್ಶಿಸಿದರೆ ಅದು ಬೇರೆಯದೇ ಅನುಭವ ನೀಡುವುದಷ್ಟೆ? ಅಡುಗೆಯನ್ನು ಉಣ್ಣುವಷ್ಟೇ ಮತ್ತು ಅದಕ್ಕಿಂತ ಭಿನ್ನವಾದ ಅನುಭವವನ್ನು ಅಡುಗೆ ಮಾಡುವ ಪ್ರಕ್ರಿಯೆ ನೀಡುವುದಷ್ಟೆ? ತಂತ್ರಜ್ಞಾನವು ಉತ್ಪನ್ನಕ್ಕೆ ಮಾತ್ರ ಬೆಲೆ ಕೊಡುತ್ತದೆ. ತತ್ತ್ವಜ್ಞಾನವು ಪ್ರಕ್ರಿಯೆಗೆ ಹೆಚ್ಚಿನ ಮಹತ್ತ್ವ ನೀಡುತ್ತದೆ. ಅನಿವಾರ್ಯ ಎಂದು ಯಂತ್ರಗಳನ್ನು ಅಳವಡಿಸುವುದಿದ್ದರೆ ಸರಿ. ಆದರೆ ಹೆಮ್ಮೆ ಎಂದುಕೊಂಡು ಯಂತ್ರಗಳನ್ನು ಬರಮಾಡಿಕೊಳ್ಳುವುದರ ಬಗ್ಗೆ ಮರುಯೋಚಿಸಬೇಕಿದೆ. ಡಯಾಬಿಟೀಸ್ ಬಂದಿದೆಯೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ, ಡಯಾಬಿಟೀಸ್ ಹೊಂದುವುದೇ ಹೆಮ್ಮೆ ಎಂದುಕೊಳ್ಳುವುದಕ್ಕೂ ಅಜಗಜಾಂತರವಿದೆಯಷ್ಟೆ? ನಮ್ಮ ತಂತ್ರಜ್ಞಾನದ ಪ್ರಗತಿ ಮತ್ತು ಅನ್ವಯಗಳನ್ನು ಈ ಅಂಶಗಳಿಂದ ಪುನರವಲೋಕಿಸಬೇಕಿದೆ.