ಆಂಗ್ಲ ಮೂಲ: ಸುಗತ ಶ್ರೀನಿವಾಸರಾಜು (ಹಿರಿಯ ವಿಶೇಷ ವರದಿಗಾರರು, ‘ಔಟ್‍ಲುಕ್’)
ಕನ್ನಡಾನುವಾದ : ಪ್ರೊ|| ಎಂ. ಧ್ರುವನಾರಾಯಣ
ಉದ್ಯಾನನಗರವೇ, ಉದ್ಯಾನನಗರವೇ ನಿನ್ನ ಉದ್ಯಾನಗಳೆಲ್ಲಿವೆ? – ಎಂದೇ ಕೇಳಬೇಕಾದ ಪರಿಸ್ಥಿತಿ ಉದ್ಭವಿಸಿರುವುದು ನಿಜವಾಗಿಯೂ ಶೋಚನೀಯ ಪರಿಸ್ಥಿತಿ. ಹೀಗಿದ್ದರೂ ಪ್ರಚಾರಕ್ಕೆಂದೇ ಆಭರಣಗಳ ಅಂಗಡಿಯ ಮಾಲಿಕರು ಉದ್ಯಾನನಗರಿಯನ್ನೇ ತಮ್ಮ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಂದು ವಿಪರ್ಯಾಸದ ವಿಷಯ. ಸುಮಾರು ಒಂದು ದಶಕದ ಹಿಂದೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಏಕೆಂದರೆ ಅಂದು ಬೆಂಗಳೂರಿನ ಉದ್ಯಾನಗಳು ಗುಲ್‍ಮೋಹರ್, ಪಾರಿಜಾತ, ಸಂಪಿಗೆ, ಆಕಾಶಮಲ್ಲಿಗೆ, ಮಲ್ಲಿಗೆ, ಅಲೆಕ್ಸಾಂಡಿರಿಯಾ ಲಾರೆಲ್ಸ, ಬೊಹಮಿಯಾ ಮುಂತಾದ ಪುಷ್ಪಸಂಪತ್ತನ್ನು ಹೊತ್ತು ಮೆರೆಯುತ್ತಿದ್ದವು. ಪುಷ್ಪನಗರಿಯ ಹೊಗಳಿಕೆ ಹೊಂದಿದ್ದ ಉದ್ಯಾನನಗರಿಯ ನಾಗರಿಕರನ್ನು ಇಂದು ಕೇಳಿದಲ್ಲಿ ಸಾರಿಗೆಯ ಗೊಂದಲ ಎಂದೇ ಗಂಭೀರವಾಗಿ ಉತ್ತರಿಸುತ್ತಾರೆ. ಅಧಿಕ ಸಾರಿಗೆ ಸಂಪರ್ಕದ ಪರಿಣಾಮವಾಗಿ ಹಾಗೂ ‘ಸಿಲಿಕಾನ್ ಕಣಿವೆ’ ಎಂದೇ ಹಿಂದೆ ವಿಕಾಸಗೊಂಡು ತನ್ನ ಸೌಂದರ್ಯವನ್ನೇ ಕಳೆದುಕೊಂಡಿದೆ ಇಂದಿನ ಉದ್ಯಾನನಗರಿ ಅರ್ಥಾತ್ ನಮ್ಮ ಬೆಂಗಳೂರು.
‘ಉದ್ಯಾನನಗರ’ ಹಾಗೂ ಪಿಂಚಣಿದಾರರ ಸ್ವರ್ಗ ಎಂದೇ ಕರೆಯಲಾಗುತ್ತಿದ್ದ ಬೆಂಗಳೂರು ಇಂದು ಕಾಂಕ್ರೀಟ್ ನಗರವಾಗಿದೆ. ಬೆಂಗಳೂರು, ಅದರಲ್ಲಿಯೂ ದಕ್ಷಿಣಬೆಂಗಳೂರು ವಿಭಾಗದ ಜನರು ಅನೇಕ ಸೌಲಭ್ಯಗಳನ್ನು ಪಡೆದು ಶಾಂತಿಯ ಸುಖಜೀವನಕ್ಕೆ ಮಾರುಹೋಗಿದ್ದವರು ಇಂದು ಬೆಂಗಾಡಿನ ಬಸವಳಿದ ತಾಂತ್ರಿಕ ಮತ್ತು ಯಾಂತ್ರಿಕ ಜೀವನಕ್ಕೆ ಬಲಿಯಾಗಿದ್ದಾರೆ. ದಕ್ಷಿಣಬೆಂಗಳೂರಿನ ನಾಗರಿಕರು, ನಗರದ ವಿಕಾಸದ ಫಲಾನುಭವಿಗಳೂ ಆಗಿದ್ದಾರೆ. ಏಕೆಂದರೆ ಮಾಹಿತಿತಂತ್ರಜ್ಞಾನದ ರೂವಾರಿಯಾದ ನಾರಾಯಣಮೂರ್ತಿ ತಮ್ಮ ಮಾಹಿತಿ ತಂತ್ರಜ್ಞಾನ ಆರಂಭಿಸಿದ್ದು ಜಯನಗರದಿಂದ.
ಪರಂಪರೆಯ ಬಲಿ
ಈಚಿನ ದಿನಗಳಲ್ಲಿ ದಕ್ಷಿಣಬೆಂಗಳೂರಿನ ನಿವಾಸಿಗಳು, ತೊಂಬತ್ತು ವರ್ಷದ ವಿದ್ಯಾಕೇಂದ್ರವಾದ ನ್ಯಾಷನಲ್ ಕಾಲೇಜಿನ ಮುಂದೆ ಕಟ್ಟುತ್ತಿರುವ ಮೇಲುಸೇತುವೆ ಮಾರ್ಗದ ವಿರುದ್ಧ ಪ್ರತಿಭಟನೆ ನಡೆಸಿದರು. ಏಕೆಂದರೆ ಸುಮಾರು ನೂರು ವರ್ಷಗಳ ಪರಂಪರೆಗೆ ಸಾಕ್ಷಿರೂಪವಾಗಿ ವಾಣಿವಿಲಾಸ ವೃತ್ತದಲ್ಲಿದ್ದ ಛಾಂಡೆಲಿಯರ್ ದೀಪಸ್ತಂಭವನ್ನು ಕಿತ್ತುಹಾಕಲಾಯಿತು. ಬಸವನಗುಡಿಯ ಈ ವೃತ್ತ ನೂರು ವರ್ಷದ ರಾಮಕೃಷ್ಣ ಮಠ ಹಾಗೂ ಲಾಲ್‍ಬಾಗ್ ಪಶ್ಚಿಮದ್ವಾರಕ್ಕೆ ಸಾಲುಮರಗಳ ಅಡಿಯಲ್ಲಿ ಬೆಳಗಿನ ವಾಯುವಿಹಾರಿಗಳಿಗೆ ಒಂದು ಉತ್ತಮ ಮಾರ್ಗವಾಗಿತ್ತು. ದಿವಂಗತ ಹೆಚ್. ನರಸಿಂಹಯ್ಯನವರು ಪ್ರತಿದಿನ ಬೆಳಗಿನಜಾವದಲ್ಲಿ ವಾಯುವಿಹಾರಕ್ಕೆ ಈ ಮಾರ್ಗದಿಂದ ಹೊರಡುತ್ತಿದ್ದರು. ಆದರೆ ಶೋಚನೀಯ ವಿಷಯವೆಂದರೆ ನೂರು ವರ್ಷದ ಪರಂಪರೆಯನ್ನು ಕೇವಲ ಸಾರಿಗೆ ಸಂಪರ್ಕಕ್ಕೆ ಬಲಿ ನೀಡಲಾಯಿತು. ಪುರಾತನ ಕಾಲದಿಂದ ಇಂದೂ ಜೀವಿಸಿರುವ ದೆಹಲಿ ನಗರಕ್ಕೆ ನೂರು ವರ್ಷಗಳ ಪರಂಪರೆ ಅಧಿಕವೆನಿಸಲಾರದು. ಆದರೆ ಕೇವಲ 467 ವರ್ಷಗಳಿಂದಿರುವ ಬೆಂಗಳೂರು ನಗರಕ್ಕೆ ನೂರುವರ್ಷದ ಪರಂಪರೆ ಹೇಳಿಕೊಳ್ಳಬಹುದಾದ ಇತಿಹಾಸದ ಪರಂಪರೆಯಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಬಸವನಗುಡಿಯ ಪ್ರಮುಖ ವೃತ್ತದ ಹಿಂದೆ ವಿಶಿಷ್ಟ ನಾಗರಿಕತೆಯ ಹಾಗೂ ವ್ಯಕ್ತಿಗಳ ಚರಿತ್ರೆ ಅಡಗಿದೆ. ರಾಷ್ಟ್ರೀಯ ಧುರೀಣರಾದ ಗಾಂಧಿ, ರಾಜಗೋಪಾಲಾಚಾರಿ ಮುಂತಾದವರನ್ನು ಕಂಡ ಈ ವೃತ್ತ ಇಂದು ಸಾರಿಗೆ ಸಂಪರ್ಕಕ್ಕೆ ಬಲಿಯಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಸಾರಿಗೆಯ ವಿರುದ್ಧ ಸಮರ ಸಾರಿರುವುದು ಕೇವಲ ದಕ್ಷಿಣಬೆಂಗಳೂರಿನ ನಿವಾಸಿಗಳಿಗೆ ಮಾತ್ರ ಸೀಮಿತವಾಗಿರದೆ ಸಮಸ್ತ ಬೆಂಗಳೂರಿನ ನಾಗರಿಕರಿಗೆ ಸಂಬಂಧಿಸಿದೆ. ನಗರದ ಇತಿಹಾಸ ಹಾಗೂ ಪರಂಪರೆಯ ಹೆಗ್ಗುರುತುಗಳೇ ಮಾಯವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರ ಪ್ರಲಾಪವು ಅರಣ್ಯರೋದನವಾಗಿ ಪರಿಣಮಿಸಿರುವುದು ದುಃಖದ ಸಂಗತಿಯಾಗಿದೆ. ವಿಕಾಸಕ್ಕೆ ಗುರಿಯಾದ ನಗರಗಳಂತೆ ಬೆಂಗಳೂರಿನ ನಗರದಲ್ಲಿಯೂ ಪಾರಂಪರಿಕವಾಗಿ ಬಂದಿದ್ದ ಐತಿಹಾಸಿಕ ಸ್ಥಳಗಳು, ಉದ್ಯಾನಗಳು, ನಾಗರಿಕರಿಗೆ ಆಧುನಿಕಜೀವನದ ಸೌಕರ್ಯಗಳು ಹಾಗೂ ಪಾರಂಪರಿಕ ಸೌಲಭ್ಯಗಳ ಮಧ್ಯೆ ಏನನ್ನು ಆಯ್ಕೆ ಮಾಡಬಲ್ಲರು? ಸಾರಿಗೆ ಇಲಾಖೆಯ ಹೇಳಿಕೆಯಂತೆ ಪ್ರತಿದಿನ 650ರಿಂದ 700 ಹೊಸ ವಾಹನಗಳ ನೋಂದಣಿ ನಡೆಯುತ್ತಿದೆ. ಸಧ್ಯ ಬೆಂಗಳೂರಿನ ರಸ್ತೆಗಳಲ್ಲಿ 19,81,589 ವಾಹನಗಳು ಸಂಚರಿಸುತ್ತಿವೆ. ಸುಮಾರು 20 ಲಕ್ಷ ವಾಹನಗಳು ಉಗುಳಬಹುದಾದ ಹೊಗೆ ಹಾಗೂ ವಾಹನಗಳ ಒತ್ತಡದ ನಡುವೆ ಬೆಂಗಳೂರಿನ ನಾಗರಿಕರು ಬದುಕಿರುವುದೇ ಒಂದು ಪವಾಡವಲ್ಲವೇ?
ದಯಮಾಡಿ ದಿವಾನ್ ನ್ಯಾಪತಿ ಮಾಧವರಾವ್ ಅವರು 1954ರಲ್ಲಿ ಸಲ್ಲಿಸಿದ ವರದಿಯೊಂದಿಗೆ ಈ ಅಂಕಿ-ಸಂಖ್ಯೆಗಳನ್ನು ಹೋಲಿಸಿನೋಡಿ. ಅವರು ವಿಕಸಿತ ಬೆಂಗಳೂರಿನ ಬಗೆಗೆ ಮೊದಲ ಬಾರಿ ವರದಿ ಸಲ್ಲಿಸಿದಾಗ ಅವರ ಅಂದಾಜಿನಂತೆ ನಗರದಲ್ಲಿನ ತಲೆಮಾರಿಗೆ ಶೇಕಡಾ 12.5 ಜನಸಂಖ್ಯೆ ಹೆಚ್ಚಿ 2001ರ ಹೊತ್ತಿಗೆ 14,14,000 ಎಂದೇ ಹೇಳಲಾಗಿತ್ತು. ಅವರು ಊಹಿಸಿದಂತೆ 2031ಕ್ಕೆ 20,00,000 ಆದರೆ ಇಂದಿನ ಅಂಕೆ-ಸಂಖ್ಯೆಯಂತೆ ಬೆಂಗಳೂರಿನ ಜನಸಂಖ್ಯೆ 65,23,110. ಅವರು ತಮ್ಮ ವರದಿಯನ್ನು 1954ರಲ್ಲಿ ಸಲ್ಲಿಸಿದಾಗ ನಗರದಲ್ಲಿನ ವಾಹನಗಳ ಸಂಖ್ಯೆ 8535. ಬೆಂಗಳೂರಿನಲ್ಲಿ ನಡೆದ ಕ್ಷಿಪ್ರ ವಿಕಾಸ ಸುಮಾರು 1990ರಿಂದ ಇ-ಮೇಲ್‍ನ ವೇಗದಲ್ಲಿ ನಗರ ಅಡ್ಡಾದಿಡ್ಡಿ ಹಾಗೂ ಗೊಂದಲದ ಪರಿಸ್ಥಿತಿಗೆ ಗುರಿಯಾಗಿ ನಾಗರಿಕ ಜೀವನಕ್ಕೆ ಅನೇಕ ಆತಂಕಗಳನ್ನು ನೀಡಿದೆ. ಹಾಗೂ ಉದ್ಯಾನನಗರಿಯ ಪುರಾತನ ಲಕ್ಷಣಗಳು ಕಣ್ಮರೆಯಾಗತೊಡಗಿದೆ.
ಮಾಯವಾದ ಪಾರಂಪರಿಕ ಹೆಗ್ಗುರುತುಗಳು
ಬೆಂಗಳೂರಿನ ನಾಗರಿಕರಿಗೆ ಚಿರಪರಿಚಿತವಾಗಿದ್ದ ಕೆಲವು ವಿಷಯಗಳೆಂದರೆ ಕಳೆದ ಎಪ್ಪತ್ತು ಅಥವಾ ನೂರು ವರ್ಷಗಳಿಂದ ರೂಢಿಯಲ್ಲಿದ್ದ ಸಾರಿಗೆ ಸಂಪರ್ಕ ಬಿಂದುಗಳು ಆಧುನಿಕ ಸಾರಿಗೆ ಸಂಪರ್ಕಕ್ಕೆ ಅನುಕೂಲ ಮಾಡಿ ಕೊಡಲೆಂದೇ ಮಾಯವಾಗಿಹೋಗಿವೆ. ಉದಾಹರಣೆಗೆ ಕ್ರಿಶ್ಚಿಯನ್ ಸೇವಾಸಂಸ್ಥೆಯ ಸುಪ್ರಸಿದ್ಧ ಶಿಕ್ಷಣತಜ್ಞನಾಗಿದ್ದ ಜಾಕ್ಷುವಾ ಹಡ್ಸನ್ ವೃತ್ತ ಇಂದು ಕಣ್ಮರೆಯಾಗಿದೆ. ಅದರಂತೆಯೇ ಲಾರ್ಡ್ ಇರ್ವಿನ್ ನೀಡಿದ ಭೇಟಿಯ ಕುರುಹಾಗಿದ್ದ ಇರ್ವಿನ್ ಸರ್ಕಲ್ ಇಂದಿಲ್ಲ. ಶೋಚನೀಯ ಸಂಗತಿ ಎಂದರೆ ಅವರು ಮನಸಾರೆ ಮೆಚ್ಚಿ ಕೇಂದ್ರಸರಕಾರಕ್ಕೆ ಮೈಸೂರು ಸಂಸ್ಥಾನ ನೀಡಬೇಕಾಗಿದ್ದ ಅಧಿಕಮೊತ್ತದ ಸಾಲವನ್ನೇ ಮಾಫಿ ಮಾಡಿದ್ದರು. ಉತ್ತರಬೆಂಗಳೂರಿನಲ್ಲಿ ನಿರ್ಮಿಸಲಾದ ಸುರಂಗ ರಸ್ತೆಗೆ 1937ರಲ್ಲಿ ಇನಾಯತುಲ್ಲಾ ಮೇಕ್ರಿಯವರು ನಿರ್ಮಿಸಿದ ಮೇಕ್ರಿ ವೃತ್ತವನ್ನೇ ಬಲಿಕೊಡಲಾಯಿತು. ದುರದೃಷ್ಟದ ಸಂಗತಿ ಎಂದರೆ ಮೇಕ್ರಿಯವರ ನಾಮಫಲಕವನ್ನೇ ಬಿಸಾಡಲಾಗಿತ್ತು. ಆದರೆ ಅವರ ಮನೆತನದವರು ಪ್ರತಿಭಟಿಸಿದಾಗ ಅದನ್ನು ಒಂದು ಮೂಲೆಯಲ್ಲಿ ಪ್ರತಿಷ್ಠಾಪಿಸಲಾಯಿತು. 1947ರ ‘ಮೈಸೂರು ಚಲೋ’ ಚಳವಳಿಗೆ ಆಸ್ಪದ ನೀಡಿದ ವಾಣಿವಿಲಾಸ ವೃತ್ತ ಹಿಂದೆ ಗಾಂಧಿಯವರನ್ನು ಬರಮಾಡಿಕೊಂಡಿತ್ತು. ಅದರಂತೆಯೇ ರಿಚ್‍ಮಂಡ್ ವೃತ್ತ, ಸದಾಶಿವ ನಗರದ ಭಾಷ್ಯಂ ವೃತ್ತ ಹಾಗೂ ಕೃಷ್ಣರಾಜ ವೃತ್ತಗಳನ್ನು ಕೆಡವಿಹಾಕಲಾಗಿದೆ. ಈ ಎಲ್ಲವೂ ಪುರಾತನ ಬೆಂಗಳೂರಿನ ಜೀವಂತ ಪರಂಪರೆಯ ಹೆಗ್ಗುರುತುಗಳಾಗಿದ್ದವು.
ಬೆಂಗಳೂರಿಗರು ಈ ಸಾರಿಗೆ ದ್ವೀಪಗಳನ್ನು ಇಂದಿಗೂ ಮೆಲುಕು ಹಾಕುತ್ತಲೇ ಇದ್ದಾರೆ. ಏಕೆಂದರೆ ಈ ಸ್ಥಳಗಳೆಲ್ಲ ನಗರದ ಬಿಡುವಿನ ಸಮಯವನ್ನು ಕಳೆಯುವ ಕೇಂದ್ರಗಳಾಗಿದ್ದು ಅವು ಇಂದಿಗೂ ನಾಗರಿಕರ ಮನದಾಳದಿಂದ ಮರೆಯಲಾಗಿಲ್ಲ. ಸುದ್ದಿ ಅಥವಾ ಮಾಹಿತಿ ತಂತ್ರಜ್ಞಾನ ಬರುವ ಮುಂಚಿನ ದಿನಗಳಲ್ಲಿ ಇವು ನಗರದ ವಿರಾಮ ವಿಹಾರಗಳಂತಿದ್ದವು. ಈ ವೃತ್ತಗಳು ರಸ್ತೆಯ ಮಧ್ಯೆ ಇದ್ದು ಉದ್ಯಾನ ಪುಷ್ಪಗಳಿಂದ ಆಕರ್ಷಿತವಾಗಿದ್ದು ನಾಗರಿಕರ ಮನಸ್ಸಿಗೆ ಮತ್ತು ಕಣ್ಣಿಗೆ ಮುದ ಹಾಗೂ ಸೌಂದರ್ಯ ಒದಗಿಸುವ ಕೇಂದ್ರಗಳಾಗಿದ್ದವು. ನಗರದ ಇತಿಹಾಸಕಾರರಾದ ಸುರೇಶ ಮೂನಾ ಅವರು ಹೇಳುವಂತೆ ಈ ವೃತ್ತಗಳು ಸರ್ ಮಿರ್ಜಾ ಇಸ್ಮಾಯಿಲ್ ಅವರು, ಮೈಸೂರಿನ ಒಡೆಯರಾಗಿದ್ದ ಕೃಷ್ಣರಾಜ ಒಡೆಯರ ಆಡಳಿತದ ರಜತ ಮಹೋತ್ಸವದ ನೆನಪಿಗೆಂದೇ ನಗರದ ಈ ವೃತ್ತಗಳಲ್ಲಿ ಸುಂದರವಾದ ದೀಪಸ್ತಂಬವನ್ನು ನಿರ್ಮಿಸಿದರು. ಇದೇ ಕಾರಣಕ್ಕೆಂದೇ ಕೆ.ಆರ್. ಮಾರ್ಕೆಟ್ ಬಳಿ ‘ಸಿಲ್ವರ್ ಜುಬಿಲಿ ಪಾರ್ಕ್’ಉದ್ಯಾನವನ್ನು ನಿರ್ಮಿಸಿ ನಗರದ ಸೌಂದರ್ಯವನ್ನು ವೃದ್ಧಿಪಡಿಸಿದರು. ಆದರೆ ಇಂದು ನಿರ್ಮಿಸಲಾದ ಸಿರ್ಸಿ ಮೇಲು ಸೇತುವೆ ಅದನ್ನು ನುಂಗಿ ನೀರುಕುಡಿದಿದೆ. ನಗಬೇಕೆ ಅಥವಾ ಅಳಬೇಕೇ?
ಬದಲಾದ ಹವಾಮಾನ
ಸಾರಿಗೆ ದ್ವೀಪಗಳಿಂದ ಕಂಗೊಳಿಸುತ್ತಲಿದ್ದ ಬೆಂಗಳೂರಿನ ಮತ್ತೊಂದು ಸೌಂದರ್ಯ ಅಥವಾ ಸೊಬಗಿನ ದೃಶ್ಯ ಎಂದರೆ ಬೀದಿಯ ಎರಡೂ ಬದಿಗಳಲ್ಲಿ ಸೊಂಪಾಗಿ ಬೆಳೆದ ಸಾಲುಮರಗಳು. ಈ ಸಾಲುಮರಗಳಿಂದ ಬೆಂಗಳೂರಿನ ಹವೆ ಸದಾ ತಂಪಾಗಿರುತ್ತಿತ್ತು ಹಾಗೂ ವಿವಿಧ ಪಕ್ಷಿಸಂಕುಲಕ್ಕೆ ಆಶ್ರಯ ನೀಡಿತ್ತು. ಬೆಳಗಿನ ಜಾವದಲ್ಲಿ ಹಾಗೂ ಮುಸ್ಸಂಜೆಯಲ್ಲಿ ಈ ಪಕ್ಷಿಗಳ ಕಲರವ ಕೇಳುವುದೇ ಒಂದು ಭಾಗ್ಯವಾಗಿತ್ತು. ಆದರೆ ಇಂದು ಮಕ್ಕಳಿಗೆ ಗುಬ್ಬಚ್ಚಿಯನ್ನು ತೋರಿಸಲಾಗದ ಪರಿಸ್ಥಿತಿಯಲ್ಲಿ ತೊಳಲಾಡುತ್ತಿದ್ದೇವೆ. ತಂಪಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಇಂದು ಸುಡುಬಿಸಿಲಿನ ಬೆಂಗಾಡಾಗಿದೆ. ಮನೆ ಮುಂದೆ ಕಂಡುಬರುತ್ತಿದ್ದ ತೆಂಗು, ಮಾವು, ಹಲಸು ಹಾಗೂ ಸಂಪಿಗೆ ಗಿಡಗಳು ಮಂಗಮಾಯವಾಗಿ ಹೋಗಿವೆ. ಅರಣ್ಯಖಾತೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಿವೃತ್ತ ಅಧಿಕಾರಿ ಎಸ್.ಜಿ. ನೇಗಿನಹಾಳ್ ಅವರು ಹೇಳುವಂತೆ ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ, ನಗರದಲ್ಲಿನ ಸುಮಾರು ನಾಲ್ಕುನೂರು ಅಥವಾ ಐದುನೂರು ವರ್ಷದ ಗಿಡ-ಮರಗಳನ್ನು ರಸ್ತೆ ಅಗಲಗೊಳಿಸುವ ನೆಪದಲ್ಲಿ ಕಡಿದುಹಾಕಲಾಗಿದೆ. ದುರದೃಷ್ಟಕರ ವಿಷಯವೆಂದರೆ 1982ರಿಂದ 1987ರ ಅವಧಿಯಲ್ಲಿ ನಗರದಲ್ಲಿನ ಹಸಿರುಪಟ್ಟಿಗೆಂದೇ ನೆಡಲಾದ ಲಕ್ಷಾವಧಿ ಗಿಡಗಳನ್ನೂ ರಸ್ತೆ ಅಗಲ ಮಾಡುವ ಉದ್ದೇಶದಿಂದ ಕಡಿದುಹಾಕಲಾಯಿತು.
ಮುಂದುವರಿದು ನೇಗಿನಹಾಳ್ ಅವರು ಹೇಳುವಂತೆ ಶೇಷಾದ್ರಿ ರಸ್ತೆಯ ಎರಡೂ ಬದಿಯ ವೃಕ್ಷಗಳನ್ನು ಸದ್ಯದಲ್ಲಿಯೇ ನಿರ್ಮಿಸಲಿರುವ ಆನಂದರಾವ್ ವೃತ್ತದ ಮೇಲು ಸೇತುವೆಗೆಂದೇ ಕಡಿದುಹಾಕಲಾಗುವುದು. ಆನಂದರಾವ್ ವೃತ್ತದಲ್ಲಿ ವಾಹನಗಳ ಸಂಚಾರ ಅಧಿಕ, ಇದರಿಂದಾಗಿ ಪರಿಸರದಲ್ಲಿ ತಾಪಮಾನ ಹೆಚ್ಚು. ಆದರೆ ಅದನ್ನು ನೀಲಕಂಠನಂತೆ ನುಂಗಿ ನಾಗರಿಕರಿಗೆ ತಂಪುನೀಡುತ್ತಿದ್ದ ಈ ಗಿಡಗಳು ಕಣ್ಮರೆಯಾದಾಗ ಉಷ್ಣಾಂಶ ಅಧಿಕವಾಗಿ, ನಗರದ ನಾಗರಿಕರು ಬಿಸಿಲಿನ ಬೇಗೆಯಿಂದ ಬೆಂದುಹೋಗುತ್ತಾರೆ.
ಹೀಗೆ ನಗರದಲ್ಲಿನ ಮರಗಳನ್ನು ನಾಶಗೊಳಿಸುತ್ತ ಹೋದಾಗ ಬದುಕಿ ಬಚಾವಾದ ಮರಗಳ ಭವಿಷ್ಯವೂ ಆತಂಕಕ್ಕೆ ಗುರಿಯಾಗಿದೆ. ಏಕೆಂದರೆ ರಸ್ತೆ ಅಗಲೀಕರಣ ಪಾದಚಾರಿ ಮಾರ್ಗಕ್ಕೆ ನೂತನ ರೂಪ ನೀಡುವ ನೆಪದಲ್ಲಿ ಮಹಾನಗರ ಪಾಲಿಕೆಯು, ಬೇರುಗಳನ್ನು ತಮ್ಮ ಮನಬಂದಂತೆ ಕತ್ತರಿಸಿಹಾಕುತ್ತಾರೆ. ಇದರ ಪರಿಣಾಮವೆಂದರೆ ಬಿರುಗಾಳಿ ಬೀಸಿದಾಗ ಅಥವಾ ಜಡಿಮಳೆ ಸುರಿದಾಗ, ಬೇರು ಸಡಿಲಾದ ಈ ಮಹಾ ಮರಗಳು ಬಿದ್ದು ನಾಗರಿಕರ ಸಾವು ಇಲ್ಲವೇ ವಾಹನಗಳಿಗೆ ಜಖಂ ಉಂಟುಮಾಡುತ್ತವೆ. ಈ ದಾರುಣ ಪರಿಸ್ಥಿತಿ ಇಲ್ಲಿಗೇ ಕೊನೆಗಾಣದೆ ದೂರವಾಣಿ ಸಂಪರ್ಕ ಇಲಾಖೆ, ವಿದ್ಯುತ್ ಶಕ್ತಿ ಇಲಾಖೆಗಳ ದಾಳಿಗೂ ಗುರಿಯಾಗಿ ನಶಿಸಿಹೋಗುತ್ತದೆ. ಹೀಗೆ ವೃಕ್ಷಸಂಹಾರ ಕಾರ್ಯದಿಂದ ಉದ್ಯಾನನಗರವು ಬೆಂಗಾಡಾಗುವುದರಲ್ಲಿ ಯಾವ ಸಂದೇಹವೂ ಇರಲಾರದು ಎಂದೇ ನೇಗಿನಹಾಳರ ಉದ್ಗಾರ. ಆನಂದರಾವ್ ವೃತ್ತದಲ್ಲಿ ನಿರ್ಮಿಸಲಾಗುವ ಮೇಲುಸೇತುವೆಯ ನಿರ್ಮಾಣದಿಂದಾಗಿ ಸುಮಾರು ತೊಂಬತ್ತು ವರ್ಷಗಳಿಂದಲೂ ನಗರದ ಮಧ್ಯೆ ರಾರಾಜಿಸುತ್ತಿದ್ದ ಬೆಂಗಳೂರು ಟರ್ಫ್‍ಕ್ಲಬ್ ನಶಿಸಿಹೋಗುತ್ತದೆ. ಈ ವಿಧವಾಗಿ ಮೇಲುಸೇತುವೆಗಳ ನಿರ್ಮಾಣದ ಕಾರ್ಯದಿಂದಾಗಿ ಉದ್ಯಾನನಗರಿಯ ಶ್ವಾಸಕೋಶಗಳಂತಿದ್ದ ಕಬ್ಬನ್‍ಪಾರ್ಕ್, ಲಾಲ್‍ಬಾಗ್, ಹೈಗ್ರೌಂಡ್ಸ್, ಗಾಲ್ಫ್ ಕ್ಲಬ್‍ಗಳಿಗೆ ಅಪಾರ ಧಕ್ಕೆ ಉಂಟಾಗುತ್ತದೆ. ಒಂದು ಹೇಳಿಕೆಯಂತೆ ಆನಂದರಾವ್ ಮೇಲುಸೇತುವೆಯ ನಿರ್ಮಾಣದಿಂದ ಸುಮಾರು ಮೂರುಸಾವಿರ ಚದರ ಅಡಿ ಗಾಲ್ಫ್‍ಕ್ಲಬ್‍ನ ಜಾಗ ಹೊರಟುಹೋಗುತ್ತದೆ. ನಿಜಸ್ಥಿತಿ ಹೇಳಬೇಕೆಂದರೆ ಆನಂದರಾವ್ ವೃತ್ತದಲ್ಲಿ ಸಾರಿಗೆಯ ದಟ್ಟಣೆಯ ಸಮಯದಲ್ಲಿ ಸರಾಸರಿ 15,125 ಪ್ರಯಾಣಿಕರ ಅಂದರೆ ಪ್ಯಾಸೆಂಜರ್ ಕಾರ್ ಯೂನಿಟ್ ಮಟ್ಟ ತಲಪಿ ಅನೇಕ ಆತಂಕಗಳಿಗೆ ದಾರಿಮಾಡಿಕೊಡುತ್ತದೆ ಎಂದೇ ಒಂದು ವರದಿ ತಿಳಿಸುತ್ತದೆ.
ಹೆಚ್ಚುತ್ತಿರುವ ಆತಂಕ
ಆನಂದರಾವ್ ವೃತ್ತದಿಂದ ಶೇಷಾದ್ರಿರಸ್ತೆಯಲ್ಲಿ ಅನತಿದೂರದಲ್ಲಿ ಕ್ರಿ. ಶ. 1867ರಲ್ಲಿ ನಿರ್ಮಿಸಲಾಗಿದ್ದ ಕೇಂದ್ರ ಕಾರಾಗೃಹವಿದ್ದು ಅದರಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೇಣುಗಂಬಕ್ಕೆ ಏರಿಸಲಾಗಿತ್ತು. ಅಲ್ಲದೆ ತುರ್ತುಪರಿಸ್ಥಿತಿ ಸಾರಿದಾಗ, ಅನೇಕ ರಾಷ್ಟ್ರೀಯ ಧುರೀಣರನ್ನು ಇಲ್ಲಿ ಬಂಧನದಲ್ಲಿಡಲಾಗಿತ್ತು. ಈ ಕಾರಾಗೃಹವನ್ನು ಕೆಡವದೆ ಊರಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಕಾರಾಗೃಹವನ್ನು ಕೆಡವಿದ ಜಾಗದಲ್ಲಿ ಸ್ವಾತಂತ್ರ್ಯ ಉದ್ಯಾನವನವೊಂದನ್ನು ನಿರ್ಮಿಸಲಾಗುವುದು ಎಂದೇ ಹೇಳಲಾಗಿತ್ತು. ಆದರೆ ಮೇಲೆ ಹೇಳಲಾದ ಮೇಲುಸೇತುವೆಯಿಂದಾಗಿ ಉದ್ಯಾನಕಾರ್ಯಕ್ಕೆ ದೊರೆಯಬಹುದಾದ ಸ್ಥಳ ಎಷ್ಟು? ಅಥವಾ ಭೂಹಗರಣಕ್ಕೆ ಹೆಸರಾದ ಬೆಂಗಳೂರಿನ ಹಗರಣದಾರರು ಕಬಳಿಸದೇ ಬಿಡುವರೇ? – ಎಂಬ ಆತಂಕ ಸಾರ್ವಜನಿಕರಲ್ಲಿ ತಲೆದೋರಿದೆ.
ಇನ್‍ಟ್ಯಾಕ್ ಸಂಸ್ಥೆಯ ಬೆಂಗಳೂರು ಅಧ್ಯಾಯದಡಿಯಲ್ಲಿ ಸಂರಕ್ಷಿಸಬೇಕೆಂದ ಅನೇಕ ಪರಂಪರೆಯ ಕಟ್ಟಡಗಳ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಈ ಸಂಸ್ಥೆಯ ನಿಯೋಜಕರಾದ ಹೆಚ್.ಆರ್. ಪ್ರತಿಭಾ ಅವರ ಹೇಳಿಕೆಯಂತೆ ಮಹಾನಗರ ಪಾಲಿಕೆಯ ಆಡಳಿತಕಛೇರಿಯ ಎದುರಿರುವ ಸುಮಾರು ಎಪ್ಪತ್ತು ವರ್ಷದ ಕಾರಂಜಿ ಗ್ರೀಕರ ವಾಸ್ತುಶಿಲ್ಪವನ್ನು ಹೊಂದಿತ್ತು. ಈ ಪರಂಪರೆಯನ್ನೂ ರಕ್ಷಿಸದೇ ಸಿರಸಿ ಮೇಲುಸೇತುವೆಯ ನಿರ್ಮಾಣಕ್ಕೆಂದೇ ಅದನ್ನು ತೆಗೆದುಹಾಕಲಾಯಿತು. ಶೋಚನೀಯ ವಿಷಯವೆಂದರೆ ಈ ಪುರಾತನ ಕಟ್ಟಡವನ್ನು ಸುಮಾರು ಎಂಟು ಹತ್ತು ಬಾರಿ ದ್ರಾವಣ ಪರೀಕ್ಷೆಗೆ ಗುರಿಪಡಿಸಿದ್ದುದರಿಂದ ಅದರ ಸೌಂದರ್ಯವೇ ನಷ್ಟವಾಗಿಹೋಯಿತು. ಮುಂದುವರಿದು ಹೇಳಬೇಕೆಂದರೆ ರಾಜಧಾನಿಯ ಆಡಳಿತಕೇಂದ್ರವಾದ ವಿಧಾನಸೌಧ ಕಟ್ಟಡವನ್ನು ಕಲ್ಮಶ ನಿವಾರಣೆಗೆಂದೇ ಹಾನಿಕರ ದ್ರಾವಣಗಳಿಂದ ತೊಳೆಯಲಾಗಿದ್ದು ಸೌಧವು ತನ್ನ ಮೊದಲಿನ ಸೌಂದರ್ಯವನ್ನು ಕಳೆದುಕೊಂಡಿದೆ. ವಸ್ತುಸ್ಥಿತಿ ಹೀಗಿದ್ದರೂ ತುಂಬಾ ಪ್ರಯಾಸದಿಂದ ವಸಾಹತುಶಾಹಿ ಸಾಮ್ರಾಜ್ಯದಲ್ಲಿ ನಿರ್ಮಿಸಲಾಗಿದ್ದ ‘ಮೇಯೋಹಾಲ್’ ಕಟ್ಟಡವನ್ನು ಉಳಿಸಿಕೊಂಡು ಬರಲಾಗಿದೆ. ಆದರೆ ಕಟ್ಟಡದ ಪಕ್ಕದಲ್ಲಿಯೇ ಹಾದುಹೋಗುವ ವಾಹನಗಳಿಂದ ಕಂಪನ ತಪ್ಪಿದ್ದಲ್ಲ. ಈ ಕಂಪನದ ದಾಳಿಯಿಂದಾಗಿ ಪುರಾತನವಾದ ಕಟ್ಟಡ ಘಾಸಿಗೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂದೇ ಹೇಳಬೇಕಾಗಿದೆ.
ಅವಸಾನದತ್ತ ರಾಜಪಥ
ಬಹು ಭಯಾನಕ ಸಂಗತಿ ಎಂದರೆ ನಗರದ ನಾಡಿಯಂತೆ ಇದ್ದ ಅಥವಾ ಇರುವ ಅವೆನ್ಯೂರೋಡ್ ಅಗಲೀಕರಣ. ಈ ರಸ್ತೆ ನಗರದೊಂದಿಗೆ ಕ್ರಿ.ಶ. 1537ರಿಂದಲೇ ಜಾರಿಯಲ್ಲಿ ಬಂದಿದ್ದು ಇಂದು ಅವಸಾನ ಮಟ್ಟಕ್ಕೆ ತಲಪಿರುವುದು. ನಗರದ ಸಮಸ್ತ ಕಾರ್ಯಗಳ ಕೇಂದ್ರನಾಡಿಯಂತಿರುವ ಈ ರಸ್ತೆಯ ಅಗಲೀಕರಣವನ್ನು ಈ ಹಿಂದೆ ಎರಡು ಬಾರಿ ತಡೆಹಿಡಿಯಲಾಗಿತ್ತು. ಮೊದಲು ಸರ್ ಎಂ. ವಿಶ್ವೇಶ್ವರಯ್ಯ, ಎರಡನೇ ಬಾರಿ ದೇವರಾಜ ಅರಸರು ತಡೆಹಿಡಿದಿದ್ದರು. ಆದರೆ ಶತಮಾನಗಳಿಂದಲೂ ವ್ಯಾಪಾರ ನಡೆಸಿಕೊಂಡು ಬಂದ ವರ್ತಕರ ವಿರೋಧವನ್ನು ಇಂದಿನ ಸರಕಾರ ಪರಿಗಣಿಸುವುದೇ?
ಈಚಿನ ದಿನಗಳಲ್ಲಿ ನಡೆದ ಒಂದು ಕರಾಳ ಘಟನೆ ಎಂದರೆ ಬೌರಿಂಗ್ ಕ್ಲಬ್ ಹಿಂಭಾಗದ ಲ್ಯಾವೆಲ್ಲೆ ರಸ್ತೆಯಲ್ಲಿದ್ದ ಸುಪ್ರಸಿದ್ಧ ಶಿಲ್ಪಿ ಬಾಲನ್ ನಾಯರ್ ಅವರ ಕಲಾಕೃತಿಯನ್ನು, ಸಾರಿಗೆಯ ಒತ್ತಡದಿಂದಾಗಿ ತೆಗೆದಿದ್ದು 1986ರಲ್ಲಿ. ಆದರೆ ಇಂದಿನವರೆಗೂ ಆ ಪ್ರತಿಮೆಯನ್ನು ಎಲ್ಲಿ ಬಿಸಾಡಲಾಗಿದೆ ಎಂದು ಯಾರಿಗೂ ಅದರ ಸುಳಿವು ತಿಳಿದಿಲ್ಲ. ಬಹುಶಃ ಅದನ್ನು ಲೋಹದ ಆಸೆಯಿಂದ ಕರಗಿಸಿರಲೂ ಬಹುದು!
ನಾವು ಎದುರಿಸಲೇಬೇಕಾದ ಒಂದು ಪ್ರಶ್ನೆ ಎಂದರೆ: ಪುರಾತನ ಸಾರಿಗೆ ದ್ವೀಪಗಳಂತೆ ಇದ್ದ ಸ್ಥಳಗಳನ್ನು ಹಾಗೂ ಮರಗಳನ್ನು ಕಡಿದು ಹಾಕಿದ ಮೇಲೆ ನಿರ್ಮಿಸಲಾದ ನೂತನ ಮೇಲುಸೇತುವೆಗಳಿಂದ ವಾಹನದಟ್ಟಣೆಯ ಸಮಸ್ಯೆ ಪರಿಹಾರವಾಗಿದೆಯೇ? ಒಂದು ದಾಖಲೆಯಂತೆ ನಗರದಲ್ಲಿ ಸುಮಾರು ಏಳಕ್ಕಿಂತ ಅಧಿಕಸಂಖ್ಯೆಯ ಮೇಲುಸೇತುವೆಗಳು, ಒಂದು ಕೇಬಲ್ ಸೇತುವೆ ಹಾಗೂ ಸುರಂಗ ಮಾರ್ಗಗಳಿದ್ದರೂ ಅಧಿಕ ದಟ್ಟಣೆಯ ಸಮಯದಲ್ಲಿ ಅಂದರೆ ಪೀಕ್ ಅವರ್ಸ್‍ನಲ್ಲಿ ಸರಾಸರಿ 10,000 ಪಿ.ಸಿ.ಯ ವಾಹನ ಸಂಚಾರವಿದೆ. ಸುಮಾರು 45 ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ಕಾರ್ಯ ವಿಧಿಸಲಾಗಿದೆ. ಬೆಂಗಳೂರಿನಲ್ಲಿ ನೂರಡಿಯ ರಸ್ತೆಗಳು ಕ್ಚಚಿತ್. ನಗರದ ರಸ್ತೆಗಳು ತುಂಬಾ ಚಿಕ್ಕವು. ಇದು ವಾಹನ ಸಂಚಾರ ನಿರ್ವಹಣೆಗೆ ಅಡಚಣೆ ಉಂಟುಮಾಡಿದೆ ಎಂದೇ ಪೆÇಲೀಸ್ ಆಯುಕ್ತರ ಹೇಳಿಕೆ.
ಕಾಂಪ್ರೆಹೆನ್ಸಿವ್ ಟ್ರಾಮಾ ಕನ್ಸೋರ್‍ಶಿಯಂನ ಅಧಿಕಾರಿ ಡಾ. ಎನ್.ಕೆ. ವೆಂಕಟರಮಣ ಅವರು ಹೇಳುವಂತೆ ತುರ್ತುವೈದ್ಯಕೀಯ ಪರಿಸ್ಥಿತಿಗೆ ಗುರಿಯಾದ ರೋಗಿಗಳ ಬಗೆಗೆ 2002ನೆಯ ಇಸವಿಯಲ್ಲಿ ಪ್ರಾರಂಭವಾದಾಗಿನಿಂದ 402 ದೂರವಾಣಿ ಕರೆಗಳನ್ನು ಪರಿಹರಿಸಲಾಗಿಲ್ಲ. ವಾಹನದ ಸಾರಿಗೆ ಒತ್ತಡ, ಟ್ರಾಫಿಕ್ ಜಾಮ್‍ಗಳಿಂದಾಗಿ ಪ್ರತಿ ತಿಂಗಳೂ ಕನಿಷ್ಠ 15 ಕರೆಗಳನ್ನು ಪೂರೈಸಲಾಗುತ್ತಿಲ್ಲ. ಇದು ಉದ್ಯಾನನಗರಿಯ ವಸ್ತುಸ್ಥಿತಿ. ವಿಪರ್ಯಾಸದ ವಿಷಯ ಎಂದರೆ ನಮ್ಮ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಬೆಂಗಳೂರನ್ನು ಸಿಂಗಾಪುರವಾಗಿ ನಿರ್ಮಿಸಲು ಹಾತೊರೆದಿದ್ದರು.
ಲಂಡನ್ ನಗರದಲ್ಲಿ ವಾಸವಾಗಿರುವ ಬೆಂಗಳೂರಿನ ಅಜಯ್ ಥಾಚಿಲ್ ಅವರ ಅಭಿಪ್ರಾಯದಂತೆ ಬೆಂಗಳೂರು ಬಂಡವಾಳವನ್ನು ಆಕರ್ಷಿಸುವಲ್ಲಿ ಮುಖ್ಯ ಪ್ರಭಾವಿ ಅಂಶಗಳು ಇಂತಿವೆ. “ಸುಂದರವಾದ ತಂಪನೆಯ ವಾತಾವರಣ, ಗಿಡ-ಮರಗಳ ವನ-ಉಪವನಗಳ ವಾತಾವರಣ, ಬಹು ಭಾಷಾ-ಸಂಸ್ಕøತಿಗಳ ವೈವಿಧ್ಯ, ಇವುಗಳೊಂದಿಗೆ ಕಷ್ಟಸಹಿಷ್ಣುತೆ, ಎಣೆಯಿಲ್ಲದ ಬುದ್ಧಿಮತ್ತೆಯ, ಸುಲಭವಾಗಿ ಹೊಂದುಕೊಳ್ಳುವಿಕೆ – ಬೆಂಗಳೂರಿಗರ ಗುಣಗಳಾಗಿವೆ.” ತಕ್ಷಣ ತುರ್ತುಕ್ರಮ ಕೈಗೊಳ್ಳದಿದ್ದರೆ ಇವುಗಳಲ್ಲಿ ಮೊದಲೆರಡು ಇತಿಹಾಸ ಪುಟಗಳಲ್ಲಿ ಸೇರಲಿವೆ. ಉಳಿದವುಗಳಿಗೂ ಸರಿದುಹೋಗುವ ಅಪಾಯವಿಲ್ಲದಿಲ್ಲ. ಆದಾಗ್ಯೂ ಇವೆಲ್ಲವುಗಳೊಂದಿಗೆ ಬದುಕಿ ಬಾಳಲೇಬೇಕು. ಇವೆಲ್ಲವೂ ಸರಿದುಹೋದ ನಂತರವೂ, ಬೆಂಗಳೂರಿಗರಲ್ಲಿ ಹೊಂದಿಕೊಳ್ಳುವ ಗುಣವಂತೂ ನಿರಂತರವಾಗಿರುತ್ತದೆ.
ಕಾಲಾಯ ತಸ್ಮೈ ನಮಃ ಅಲ್ಲವೇ?
(ಕೃಪೆ: ಉದಯಭಾನು ಕಲಾಸಂಘ 2005ರಲ್ಲಿ ಹೊರತಂದ ಲೇಖನಗಳ ಸಂಕಲನ: ಜಾಗತೀಕರಣ ಬೆಂಗಳೂರು; ಸಂಪಾದಕರು: ಪ್ರೊ. ಡಿ. ಲಿಂಗಯ್ಯ)