
ಚೀಣಾದಿಂದ ಟಿಬೆಟ್ ದುರಾಕ್ರಮಣ, ಭಾರತದ ಈಶಾನ್ಯ ಭಾಗ ಪ್ರದೇಶದ ಒತ್ತುವರಿ, ಈಚಿನ ವರ್ಷಗಳಲ್ಲಿ ಜಗತ್ತಿನ ಹಲವಾರೆಡೆಗಳಲ್ಲಿ ಬಗೆಬಗೆಯಾಗಿ ನೇರವಾಗಿಯೂ ಛದ್ಮಮಾರ್ಗಗಳಲ್ಲಿಯೂ ಚೀಣಾ ತನ್ನ ಮಾರುಕಟ್ಟೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದು – ಇವೆಲ್ಲ ಸರ್ವವಿದಿತವೇ ಆಗಿವೆ. ಚೀಣಾದ ವಿಸ್ತರಣ ಪ್ರಯತ್ನಗಳ ಇನ್ನು ಹಲವು ಮುಖಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ.
ಈಗ್ಗೆ ಒಂದು ವರ್ಷ ಹಿಂದೆ (ಫೆಬ್ರುವರಿ 2020) ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನಡೆಸಿದ ಒಂದು ತನಿಖೆಯಿಂದ ಹೊರಪಟ್ಟ ಸಂಗತಿ – ಅಮೆರಿಕದ ಎರಡು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಚೀಣಾದಿಂದಲೂ ಸೌದಿ ಅರೇಬಿಯ, ಖಟಾರ್, ಯುನೈಟಡ್ ಆ್ಯರಬ್ ರಿಪಬ್ಲಿಕ್‍ಗಳಿಂದಲೂ ಸುಮಾರು ಆರೂವರೆ ಶತಕೋಟಿ ಡಾಲರಿನಷ್ಟು ಅಗಾಧ ಪ್ರಮಾಣದ ‘ದೇಣಿಗೆ’ಗಳು ಬಂದಿವೆ – ಎಂಬುದು. ಬ್ಲೂಮ್‍ಬರ್ಗ್ ಸಂಸ್ಥೆ ನಡೆಸಿದ ಶೋಧದಿಂದ ಹೊರಪಟ್ಟದ್ದು ಹಾರ್ವರ್ಡ್ ವಿಶ್ವವಿದ್ಯಾಲಯವೊಂದಕ್ಕೇ ಚೀಣಾದಿಂದ ಒಂದು ಬಿಲಿಯನ್ ಡಾಲರಿನಷ್ಟು ಅಧಿಕ ‘ದೇಣಿಗೆ’ ಸಂದಿದೆ – ಎಂಬುದು; ಅದರಲ್ಲಿ ಕೆಲ ಭಾಗ ‘ಡೊನೇಶನ್’ಗಳ ರೂಪದಲ್ಲಿದ್ದರೆ ಇನ್ನು ಕೆಲ ಭಾಗ ‘ಉಡುಗೊರೆ’ಗಳ (‘ಗಿಫ್ಟ್ಸ್’) ರೂಪದಲ್ಲಿದ್ದವು – ಎಂಬುದು. ಅಮೆರಿಕ ಸರ್ಕಾರ ತನಿಖೆ ಮಾಡಿದಾಗ ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯಗಳಿಗೆ ಬಂದಿದ್ದ ದೊಡ್ಡ ಪ್ರಮಾಣದ ‘ದೇಣಿಗೆ’ಗಳು ಹೇಗೆ ವ್ಯಯವಾದವೆಂಬುದಕ್ಕೆ ಪೂರ್ತಿ ಲೆಕ್ಕ ಸಿಕ್ಕಿಲ್ಲವೆಂಬುದು ಹೊರಪಟ್ಟಿತು.
ಈ ಘೋಟಾಳಗಳು ಪ್ರಕಟಗೊಂಡದ್ದರ ಹಿನ್ನೆಲೆಯಲ್ಲಿ ಸಂಬಂಧಿತ ವಿಶ್ವವಿದ್ಯಾಲಯಗಳ ಹಲವರು ಪ್ರತಿಷ್ಠಿತ ಪ್ರಾಧ್ಯಾಪಕರಿಗೂ ಉಪನ್ಯಾಸಕರಿಗೂ ದಂಡನೆಯಾಗಿದೆ. ಹಲವರನ್ನು ಕೆಲಸದಿಂದ ಉಚ್ಚಾಟಿಸಲಾಗಿದೆ. ಹಲವರು ಬಂಧನದಲ್ಲಿದ್ದಾರೆ. ಅವರೆಲ್ಲ ಕಾನೂನುಬಾಹಿರವಾಗಿ ಚೀಣಾದ ವಿಶ್ವವಿದ್ಯಾಲಯಗಳ ಹಿತಾಸಕ್ತಿಗಳ ಪರವಾಗಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.

ಇಲ್ಲಿಯವರೆಗೆ ಅಮೆರಿಕದ ವಿವಿಧ ಶೋಧಸಂಸ್ಥಾನಗಳ 54 ಮಂದಿ ವಿಜ್ಞಾನಿಗಳನ್ನು ಚೀಣಾ ಪರ ಚಟುವಟಿಕೆಗಳಿಗಾಗಿ ಕೆಲಸದಿಂದ ಉಚ್ಚಾಟಿಸಲಾಗಿದೆ. ಅವರಲ್ಲನೇಕರು ‘ಬೌದ್ಧಿಕ ಹಕ್ಕು’ ನಿಯಮಗಳಂತೆ ರಹಸ್ಯವಾಗಿರಬೇಕಾಗಿದ್ದ ಮಾಹಿತಿಗಳನ್ನು ಚೀಣಾಕ್ಕೆ ರವಾನಿಸಿದ್ದುದು ಖಚಿತಗೊಂಡಿದೆ.
ಆಡುಭಾಷೆಯಲ್ಲಿ ಹೇಳಬೇಕೆಂದರೆ ಚೀಣಾ ದೊಡ್ಡ ಪ್ರಮಾಣದಲ್ಲಿ ಅಮೆರಿಕದಲ್ಲಿನ ಶಿಕ್ಷಕ-ವಿದ್ವಾಂಸರಿಗೆ ಲಂಚ ಉಣಿಸಿದೆ. ಚೀಣಾಕ್ಕೆ ರವಾನೆಯಾದ ಮಾಹಿತಿಗಳಲ್ಲಿ ಹೇಗೆಹೇಗೋ ಕಳವು ಮಾಡಿದ್ದ ರಹಸ್ಯಗಳೂ ಸೇರಿದ್ದವು.
ಈ ಕಲಾಪಗಳೆಲ್ಲ ಉಪಕ್ರಮಗೊಂಡದ್ದು ಕ್ಸೈ-ಜಿಂಪಿಂಗ್‍ರ ಮಗಳು ಕ್ಸೈ-ಮಿಂಗ್‍ಜೇ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡದ್ದರೊಡನೆ. ಆಕೆ ಕಳ್ಳ ಹೆಸರಿನಲ್ಲಿ ಪ್ರವೇಶ ಪಡೆದುಕೊಂಡಿದ್ದಳು. ಆಗಿನಿಂದ ‘ದೇಣಿಗೆ’ಗಳು ಹರಿದುಬರತೊಡಗಿದ್ದವು.
ಚೀಣಾ, ಸೌದಿ ಅರೇಬಿಯ, ಖಟಾರ್, ಯು.ಎ.ಇ.ಗಳಿಗೆ ಅಮೆರಿಕದ ವಿಖ್ಯಾತ ವಿಶ್ವವಿದ್ಯಾಲಯಗಳು ‘ಮಾರಾಟ’ವಾಗುತ್ತಿವೆಯೆ? – ಎಂಬುದು ಆತಂಕದ ವಿಷಯ.
ಅಮೆರಿಕದ 115 ಶಿಕ್ಷಣಸಂಸ್ಥೆಗಳಿಗೆ ಚೀಣಾ ಮೊದಲಾದೆಡೆಗಳಿಂದ ‘ದೇಣಿಗೆ’ಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ ಎನ್ನಲಾಗಿದೆ.
ಕಳೆದೊಂದು ದಶಕದಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದುಕೊಂಡ ಚೀಣೀ ವಿದ್ಯಾರ್ಥಿಗಳ ಸಂಖ್ಯೆ ಮೂರುಪಟ್ಟಾಗಿದೆ. ಈಗ ಅಮೆರಿಕದಲ್ಲಿನ ವಿದೇಶೀ ವಿದ್ಯಾರ್ಥಿಗಳಲ್ಲಿ ಮೂರನೇ ಒಂದು ಭಾಗದಷ್ಟು ಚೀಣೀಯರು.
ಅಮೆರಿಕದ ಅನುಭವದ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಆಕ್ಸ್‍ಫರ್ಡ್ ಮೊದಲಾದ ವಿಶ್ವವಿದ್ಯಾಲಯಗಳು ಈಗ ಸಂಶೋಧನೆಗಳಿಗಾಗಿ ವಿದೇಶಗಳಿಂದ ‘ದಾನ’ಗಳನ್ನು ಪ್ರತಿಬಂಧಿಸಿವೆ.
ಚೀಣಾದ ಹಾಗೂ ಇಸ್ಲಾಮೀ ದೇಶಗಳ ಈ ನಮೂನೆಯ ವಿಸ್ತರಣವಾದಿ ಚಟುವಟಿಕೆಗಳು ಈಗ ಹೊಸ ಆತಂಕಗಳನ್ನು ಹುಟ್ಟುಹಾಕಿವೆ.