ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ |
ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್ ||
– ಮುಂಡಕೋಪನಿಷತ್
“ಓಂಕಾರವೇ ಧನುಸ್ಸು. ಆತ್ಮನೇ ಬಾಣ. ಬ್ರಹ್ಮವೇ ಅದರ ಗುರಿ – ಎಂದು ಹೇಳಲ್ಪಟ್ಪಿದೆ. ಪ್ರಮತ್ತನಾಗದೆ (ಏಕಾಗ್ರತೆಯಿಂದ) ಗುರಿಯೆಡೆಗೆ ಹೊಡೆಯಬೇಕು. ಬಿಲ್ಲುಗಾರನು ಬಾಣದಂತೆ ತನ್ಮಯನಾಗಬೇಕು.”
ಇಲ್ಲಿ ಜೀವಾತ್ಮನೇ ಬಾಣ; ದೃಶ್ಯಪ್ರಪಂಚದೊಡನೆ ಮೈಮರೆಯದೆ ಅಂತರ್ಮುಖನಾಗಿ ಲಕ್ಷ್ಯವಾದ ಬ್ರಹ್ಮದ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು – ಎಂಬುದು ಸಂಕ್ಷೇಪದಲ್ಲಿ ಮೇಲಣ ವಾಕ್ಯದ ಸೂಚನೆ.
ದುಗ್ರ್ರಾಹ್ಯ ತತ್ತ್ವಗಳನ್ನು ಸುಬೋಧಗೊಳಿಸುವುದಕ್ಕಾಗಿ ಉಪನಿಷತ್ತುಗಳಲ್ಲಿ ಆಖ್ಯಾನಗಳ ಮತ್ತು ಉಪಮೆಗಳ ಬಳಕೆಯಾಗಿದೆ. ಮನನ ಮಾಡಿದಷ್ಟೂ ಹೆಚ್ಚುಹೆಚ್ಚು ಅರ್ಥಗಳನ್ನು ಈ ಉಪಮೆಗಳು ಹೊಮ್ಮಿಸುತ್ತವೆ.
ಬಿಲ್ಲು ಎಂಬುದು ಜೀವಚೈತನ್ಯ. ಅದು ಎಲ್ಲ ಶಕ್ತಿಯ ಉಗಮಸ್ಥಾನ. ಬಾಣವು ಒಮ್ಮೆ ಬಿಲ್ಲಿನಿಂದ ಹೊರಹೋದಾಗಲೂ ಜೀವವು ಬಿಲ್ಲಿನೊಡನೆಯೇ ಇರುತ್ತದೆ. ಬಾಣವು ತನ್ನ ಕೆಲಸ ಮಾಡಬೇಕಾದರೆ ನಡುನಡುವೆ ವಿರಮಿಸಲೂಬೇಕಾಗುತ್ತದೆ; ಸದಾ ಬಿಗಿತದ ಸ್ಥಿತಿಯಲ್ಲಿ ಇರಲಾಗದು. ಹ್ರಾಸಗೊಂಡ ಶಕ್ತಿಯು ಮತ್ತೆ ಪೂರೈಕೆಯಾಗುತ್ತಿರಬೇಕು. ಅನಂತರ ಬಾಣವನ್ನೆಸೆದಾಗ ಅದರಲ್ಲಿ ಪೂರ್ಣಶಕ್ತಿ ಅನುಗೂಡಿರುತ್ತದೆ. ಇನ್ನು ಬಿಲ್ಲು ಕೂಡಾ ಸ್ವತಂತ್ರವಲ್ಲ; ಅದು ವ್ಯಕ್ತಿಯ ಕೈಯ (ಎಂದರೆ ಇಚ್ಛೆಯ) ವಿಸ್ತರಣೆಯಷ್ಟೆ. ಹೀಗೆ ವ್ಯಕ್ತಿಯ ಇಚ್ಛೆ-ಧ್ಯಾನಗಳೇ ನಿರ್ಣಾಯಕವಾದವು.
ಬಿಲ್ಲಿನಲ್ಲಿ ಒಂದಷ್ಟು ನಮ್ಯತೆ (ಬಾಗಿಸಬಲ್ಲ ಸೌಲಭ್ಯ) ಇದ್ದರೂ ಅದಕ್ಕೆ ನಿಖರ ಪರಿಮಿತಿಗಳೂ ಇರುತ್ತವೆ. ಅದರಂತೆ ಶರೀರದಿಂದ ಅದು ನಿಮಗೆ ಎಷ್ಟನ್ನು ಕೊಡಬಲ್ಲದೋ ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಬಾರದು. ಬಿಲ್ಲನ್ನು ಅನಾವಶ್ಯಕವಾಗಿ ಆಯಾಸಗೊಳಿಸದಿದ್ದಲ್ಲಿ ಹೆಚ್ಚಿನ ಬಾಣಗಳನ್ನು ಗುರಿಗಳತ್ತ ಎಸೆಯಲು ಸಾಧ್ಯವಾಗುತ್ತದೆ.