ಇದೀಗ ದೇಶವು ಎಪ್ಪತ್ತೆರಡನೆಯ ಗಣತಂತ್ರದಿನವನ್ನು ಆಚರಿಸಿ ಸ್ವಾತಂತ್ರ್ಯದ ಎಪ್ಪತ್ತೈದನೆ ವರ್ಷಾಚರಣೆಯ ಶುಭಪರ್ವದತ್ತ ಹೆಜ್ಜೆಯಿರಿಸುತ್ತಿದೆ. ಈವರೆಗೆ ಹತ್ತಾರು ಬಾಹ್ಯ ಹಾಗೂ ಆಂತರಿಕ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದಾಗಿದೆ. ದೇಶದ ಸ್ವಾಯತ್ತತೆಯನ್ನೂ ವರ್ಚಸ್ಸನ್ನೂ ನಿಷ್ಪ್ರಭಗೊಳಿಸುವ ಪ್ರಯತ್ನಗಳು ದಶಕಗಳಿಂದ ನಡೆದಿವೆ. ರಾಜಕೀಯ ಸ್ವಾತಂತ್ರ್ಯ ಈಚಿನದಷ್ಟೆ; ಆದರೆ ದೇಶದ ‘ಊರ್ಜಿತಸತ್ತ್ವ’ ಬಹಳ ಹಿಂದಿನದು. ಅದನ್ನು ಆಗಂತುಕ ಸನ್ನಿವೇಶಗಳು ದುರ್ಬಲಗೊಳಿಸಲು ಸಾಧ್ಯವಾಗಿಲ್ಲ. ಹಿಂದಿನ ದುರಾಕ್ರಮಣಗಳನ್ನೂ ಯುದ್ಧಗಳನ್ನೂ ಕ್ಷಾಮಗಳನ್ನೂ ಬಲಿಷ್ಠ ಬಾಹ್ಯಶಕ್ತಿಗಳ ಪಾಳೆಗಾರಿಕೆಯನ್ನೂ ಸಮರ್ಥವಾಗಿ ಎದುರಿಸಿದ್ದು ಚಾರಿತ್ರಿಕ ಸಂಗತಿ. ಈಚೆಗೆ ಕೋವಿಡ್-19 ಸಾಂಕ್ರಾಮಿಕವನ್ನು ಭಾರತ ನಿರ್ವಹಿಸಿದ ರೀತಿಯಂತೂ ಜಾಗತಿಕ ಪ್ರಶಂಸೆಯನ್ನು ಗಳಿಸಿಕೊಂಡಿದೆ. ಈ ಸಾಧನೆಗಳೆಲ್ಲ ನಡೆದಿರುವುದು ವಿರೋಧಗಳ ನಡುವೆಯೇ. ನಮ್ಮ ನಾಗರಿಕತೆಯ ಚಿರಂತನತೆಯನ್ನಾಗಲಿ ಆಧುನಿಕ ಜಗತ್ತೆಲ್ಲ ಸ್ವೀಕರಿಸಿರುವ ಪ್ರಜಾಪ್ರಭುತ್ವ ಮರ್ಯಾದೆಯನ್ನಾಗಲಿ ಗೌರವಿಸದ ನಿಷೇಧಾತ್ಮಕ ಕೂಟಗಳ ಆಟಗಳು ಒಂದೆಡೆ ಮುಂದುವರಿದಿರುವಂತೆಯೇ ಇನ್ನೊಂದೆಡೆ ದೇಶವು ವಿಶ್ವದ ಪ್ರಬಲ ಶಕ್ತಿಯಾಗುವ ದಿಶೆಯಲ್ಲಿ ದೃಢವಾಗಿ ಸಾಗಿದೆ. ಈ ಗತಿಪ್ರಕರ್ಷವನ್ನು ಯಾವ ಸಂಕುಚಿತಮನಸ್ಕ ಕ್ಷುದ್ರಪ್ರಯಾಸಗಳೂ ತಡೆಯಲಾರವು. “ಜಯನ್ತಿ ಶಾಸ್ತ್ರಾಣಿ ದ್ರವನ್ತಿ ದಾಂಭಿಕಾಃ| ಹೃಷ್ಯನ್ತಿ ಸನ್ತೋ ನಿಪತನ್ತಿ ನಾಸ್ತಿಕಾಃ||”
ಊರ್ಜಿತಸತ್ತ್ವ
Month : March-2021 Episode : Author :