ಕೊರೋನಾಕ್ಕೇನೊ ಲಸಿಕೆ ಬಂದಾಯಿತು. ಆದರೆ ನಿಷ್ಕಾರಣವಾಗಿಯೂ ಪ್ರಜಾಪ್ರಭುತ್ವ ಮರ್ಯಾದೆಯನ್ನೇ ತೃಣೀಕರಿಸುವಂತೆಯೂ ‘ವಿರೋಧಕ್ಕಾಗಿ ವಿರೋಧ’ ಎಂಬುದನ್ನೇ ಜೀವನಕ್ರಮವಾಗಿಸಿಕೊಂಡಂತೆಯೂ ವರ್ತಿಸುವ ಮನೋವೈಕಲ್ಯಕ್ಕೆ ನಿವಾರಕ ಲಸಿಕೆ ಇನ್ನೂ ಆವಿಷ್ಕಾರಗೊಳ್ಳಬೇಕಾಗಿದೆ.
ಆರೂಢ ಸರ್ಕಾರದ ಎಲ್ಲ ಕ್ರಮಗಳನ್ನೂ ವಿರೋಧಿಸುತ್ತ ಬಂದಿರುವ ವಲಯಗಳ ಬೆಂಬಲದಿಂದ ರೈತಸಂಘಟನೆಗಳು ನಡೆಸಿರುವ ಪ್ರತಿಭಟನೆಯ ಹಲವು ಮುಖಗಳು ಕೌತುಕಕರವಾಗಿವೆ.
ಹೊಸ ಕೃಷಿಸುಧಾರಣ ಕಾಯ್ದೆಗಳ ರೂಪದಲ್ಲಿ ರೈತರ ಹಿತಕ್ಕೆ ಧಕ್ಕೆ ತರುವ ಅಂಶಗಳೇನಾದರೂ ಇದ್ದಲ್ಲಿ ಅವುಗಳ ಬಗೆಗೆ ವಿಮರ್ಶೆಗೆ ತಾನು ಸಿದ್ಧವೆಂದು ಕೇಂದ್ರಸರ್ಕಾರ ಹೇಳಿದ್ದರೂ ಅದಕ್ಕೆ ಸ್ಪಂದಿಸುವುದಕ್ಕೆ ಬದಲಾಗಿ ‘ಕಾಯದೆಗಳು ಸಾರಾಸಗಟಾಗಿ ರದ್ದಾಗಬೇಕು’ ಎಂಬ ಏಕಾಂಶ ಒತ್ತಾಯವನ್ನು ಮುಂದೊತ್ತಿ ಪ್ರತಿಭಟನೆ ಮುಂದುವರಿದಿದೆ.
ದೇಶದ ಜೀವನಾಧಾರವೇ ಆದ ಕೃಷಿಕ್ಷೇತ್ರವನ್ನು ವಿಕೃತಗೊಳಿಸಿರುವ ಮಾರುಕಟ್ಟೆ ವಿನ್ಯಾಸಗಳೂ ಬೆಲೆನಿರ್ಣಯ ಪದ್ಧತಿಗಳೂ ಸುಧಾರಣೆಯಾಗಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳಿಂದಲೂ ಮಂಡನೆಯಾಗಿದೆ. ಆ ದಿಕ್ಕಿನ ಅಲ್ಪ ಸುಧಾರಣ ಪ್ರಯಾಸಗಳನ್ನೂ ಹಿಂದೆ ಅಪೇಕ್ಷಿಸಿದ್ದ ವಲಯಗಳೇ ಈಗ ತಾವೇ ವಿರೋಧಿಸುತ್ತಿವೆಯೆಂದರೆ ಇದಕ್ಕೆ ಅನ್ಯಕಾರಣಗಳೇ ಇರಬೇಕೆಂಬುದು ಸ್ಪಷ್ಟವಿದೆ. ಅಕಾರಣ ಪ್ರತಿಭಟನೆ ನಡೆದಿದೆಯೆಂದರೆ ಅದರ ಹಿಂದೆ ಈಗಿನ ಅಸಮತೋಲಿತ ವ್ಯವಸ್ಥೆಗಳ ದುರ್ಲಾಭ ಪಡೆಯುತ್ತಿರುವ ಸಮೂಹವೇ ಇರಬೇಕಷ್ಟೆ.
ಈಚಿನ ವರ್ಷಗಳಲ್ಲಿ ಪ್ರತಿಭಟನೆಗಳನ್ನೇ ಧಂದೆಯಾಗಿಸಿಕೊಂಡ ಕೆಲವು ವರ್ಗಗಳು ಬೆಳೆದಿರುವ ಸನ್ನಿವೇಶವನ್ನು ಸ್ವಹಿತಾಸಕ್ತ ವಲಯಗಳು ನಿರ್ಭಿಡೆಯಾಗಿ ಬಳಸಿಕೊಳ್ಳುತ್ತಿವೆ. ದೆಹಲಿ ಗಡಿಯ ಪ್ರತಿಭಟನ ತಂಡಗಳ ಮುಂಚೂಣಿಯಲ್ಲಿದ್ದವರಲ್ಲಿ ದುಬಾರಿ ಸ್ಮಾರ್ಟ್ಫೋನ್ಗಳನ್ನು ಹಿಡಿದು ಎಸ್ಯುವಿಗಳಲ್ಲಿ ಬಂದ ಅನೇಕ ಸೊಗಸುಗಾರರು ಇದ್ದುದು ಮೋಜು ತರಿಸುತ್ತಿತ್ತು. ಪ್ರತಿಭಟನೆಗಳು ಸಾಗಿದಂತೆ ಎಲ್ಲರೂ ‘ರೈತ ಹಿತೈಷಿ’ ಗಳೆನಿಸಲು ಕಾತರರೇ – ಕಾಂಗ್ರೆಸ್, ಆಮ್ ಆದ್ಮಿ, ಸ್ವರಾಜ್ ಅಭಿಯಾನ್, ವಗೈರೆ.
ಸಾತ್ತ್ವಿಕ ಪ್ರತಿರೋಧವೆಂಬ ಆತ್ಯಂತಿಕ ಅಸ್ತ್ರವನ್ನು ವಿಚಾರಶೂನ್ಯವಾಗಿ ಅಪಮೌಲ್ಯೀಕರಣಗೊಳಿಸುತ್ತಿರುವವರು ಯಾರೆಂಬುದು ಈಗ ಜಾಹೀರಾಗಿದೆ. ಪ್ರಾಮಾಣಿಕತೆಯ ಮತ್ತು ನೈತಿಕತೆಯ ಹಿನ್ನೆಲೆಯಿದ್ದಲ್ಲಿ ಮಾತ್ರ ಪ್ರತಿಭಟನೆಗೆ ಬೆಲೆ ಬರಬಲ್ಲದು. ಇಲ್ಲದಿದ್ದಲ್ಲಿ ಅದು ದೊಂಬಿಯಷ್ಟೆ ಆಗುತ್ತದೆ; ವಿರೋಧದ ಹಕ್ಕನ್ನು ನಿಸ್ಸತ್ತ್ವಗೊಳಿಸುತ್ತದೆ.
ಕಳೆದ ಎರಡು ದಶಕಗಳಲ್ಲಿ ಕೃಷಿಯ ಹೊರತು ಎಲ್ಲ ಉದ್ಯಮಗಳೂ ಸುಧಾರಣೆಗಳ ಲಾಭ ಪಡೆದಿವೆ. ಹೀಗಿರುವಾಗ ಕೃಷಿಕ್ಷೇತ್ರ ಮಾತ್ರ ಹಿಂದಿದ್ದಂತೆಯೆ ಇರಲಿ, ಈಗಿನ ಮಾರುಕಟ್ಟೆ ಅಸ್ತವ್ಯಸ್ತತೆ ಮುಂದುವರಿಯಲಿ – ಎಂದು ರೈತಪರವೆಂದು ಹೇಳಿಕೊಳ್ಳುವ ಸಂಘಟನೆಗಳು ಆಗ್ರಹಿಸುತ್ತಿರುವುದು ಆಶ್ಚರ್ಯ ತರುತ್ತದೆ.
ಇದೀಗ ಕನಿಷ್ಠ ಬೆಂಬಲ ಬೆಲೆ ನೀಡಿಕೆಯ ವ್ಯವಸ್ಥೆ ಇರುವುದು ಅಕ್ಕಿ ಗೋಧಿ ಧಾನ್ಯಗಳಿಗೆ ಮಾತ್ರ. ಇದರ ಅತ್ಯಧಿಕ ಲಾಭ ಪಡೆಯುತ್ತಿರುವವು ಪಂಜಾಬ್ ಹರ್ಯಾಣಾ ರಾಜ್ಯಗಳು. ಆ ರಾಜ್ಯಗಳಿಗೆ ಸಮಸ್ಯೆಗಳಿದ್ದಲ್ಲಿ ಅವು ರಾಜ್ಯಮಟ್ಟದಲ್ಲಿ ಪರಿಷ್ಕಾರಗೊಳ್ಳಬೇಕು.
ಇಷ್ಟಾಗಿ ಹೊಸ ಕಾಯದೆಗಳಲ್ಲಿ ಕನಿಷ್ಠ ಬೆಲೆ ನೀಡಿಕೆ ಪದ್ಧತಿಯನ್ನಾಗಲಿ ಎ.ಪಿ.ಎಂ.ಸಿ. (ಅಗ್ರಿಕಲ್ಚರಲ್ ಪ್ರಾಡ್ಯೂಸ್ ಮಾರ್ಕೆಟಿಂಗ್ ಕಮಿಟಿ) ವ್ಯವಹಾರ ರೀತಿಗಳನ್ನಾಗಲಿ ದುರ್ಬಲಗೊಳಿಸುವ ಯಾವ ಅಂಶಗಳೂ ಇಲ್ಲ; ತಮಗೆ ತೋರಿದಂತೆ ಫಸಲನ್ನು ಮಾರಾಟ ಮಾಡುವ ರೈತರ ಹಕ್ಕನ್ನು ಉಳಿಸಲಾಗಿದೆ.
ಸರ್ಕಾರವು ಸಾರ್ವಜನಿಕ ವಿತರಣೆಗಾಗಿ ಖರೀದಿಸುತ್ತಿರುವುದು ದೇಶದ ಒಟ್ಟು ಕೃಷಿ ಉತ್ಪನ್ನದ ಮೂರರಲ್ಲೊಂದರಷ್ಟು ಭಾಗವನ್ನು ಮಾತ್ರ. ಉಳಿದ ಅಧಿಕ ಭಾಗವಷ್ಟೂ ಮುಕ್ತ ಮಾರುಕಟ್ಟೆಯಲ್ಲಿಯೇ ಸಂಚಾಲಿತವಾಗುತ್ತಿದೆ.
ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ರೈತರ ಪರವೆಂದು ಮಂಡಿತವಾಗುತ್ತಿರುವ ಈಗಿನ ಪ್ರತಿಭಟನೆಗಳು ಸತರ್ಕವೆನಿಸುವುದಿಲ್ಲ.
ಮಾರುಕಟ್ಟೆಯ ವಿಸ್ತರಣೆ, ಯಥೇಷ್ಟ ವಿದ್ಯುತ್ತು-ನೀರಿನ ಒದಗಣೆ, ಸುಲಭ ಸಾಲ ಮೊದಲಾದ ಸವಲತ್ತುಗಳು ಈ ಪ್ರಮಾಣದಲ್ಲಿ ಹಿಂದೆ ಇರಲಿಲ್ಲ. ಕಳೆದ ವರ್ಷದ (1919-20) ಬಜೆಟಿನಡಿಯ PM-KISAN ಯೋಜನೆಯೊಂದರ ಅಡಿಯಲ್ಲಿಯೆ ಹದಿನಾಲ್ಕೂವರೆ ಕೋಟಿಯಷ್ಟು ರೈತರಿಗೆ ಆಗಂತುಕ ವ್ಯತ್ಯಯಗಳ ವಿರುದ್ಧ ಭದ್ರತೆಯನ್ನು ಕಲ್ಪಿಸಲಾಯಿತು. ಇಪ್ಪತ್ತೆರಡು ವಿವಿಧ ಬೆಳೆಗಳಿಗೆ ಸರ್ಕಾರೀ ಬೆಲೆ ನೀಡಿಕೆಯನ್ನು ಶೇ. 1.5ರಷ್ಟು ಹೆಚ್ಚಿಸಲಾಯಿತು. ಇಂತಹ ಅನೇಕ ಕ್ರಮಗಳು ಎದ್ದುಕಾಣುತ್ತಿದ್ದರೂ ಈಗಿನ ಸರ್ಕಾರದ ಕ್ರಮಗಳು ರೈತವಿರೋಧಿ ಎಂದು ಹಲವು ಸ್ವಹಿತಾಸಕ್ತ ಮಧ್ಯವರ್ತಿ ವಲಯಗಳು ಬೊಬ್ಬೆ ಹೊಡೆಯುತ್ತಿರುವುದಕ್ಕೆ ಏನೆನ್ನಬೇಕು?
ಕಳೆದ ವರ್ಷ (2020) ಸಂಸತ್ತಿನಲ್ಲಿ ಅಂಗೀಕೃತವಾದ ರೈತ ಸಬಲೀಕರಣ ಕಾಯದೆಯಿಂದ ರೈತ ಸಮುದಾಯಕ್ಕೆ ನೇರವಾಗಿ ಆಗಲಿರುವ ಎರಡು ಲಾಭಗಳೆಂದರೆ : 1) ಬೆಳೆಗೆ ಕಡ್ಡಾಯವಾಗಿ ನಿಖರ ಬೆಲೆ ದೊರೆಯುವ ವ್ಯವಸ್ಥೆ; 2) ಕಂಪೆನಿಗಳೊಡನೆಯೋ ಸಹಕಾರಿ ಸಂಘಟನೆಗಳೊಡನೆಯೋ, ವ್ಯಕ್ತಿಗಳೊಡನೆಯೋ ಖರೀದಿದಾರರೊಡನೆಯೋ ರೈತರೇ ಮುಂಚಿತವಾಗಿಯೇ ಮಾಡಿಕೊಳ್ಳಬಹುದಾದ ಒಪ್ಪಂದಗಳಡಿಯಲ್ಲಿ ರೈತರಿಗೆ ಅವಶ್ಯಬೀಳುವ ತಾಂತ್ರಿಕ ಸೇವೆಗಳ ಲಭ್ಯತೆ. ಈ ಏರ್ಪಾಡುಗಳಿಂದಾಗಿ ಮಾರುಕಟ್ಟೆ ವ್ಯತ್ಯಯಗಳ ಕಾರಣದಿಂದ ರೈತರು – ವಿಶೇಷವಾಗಿ ಸಣ್ಣ ರೈತರು – ಈಗ ಎದುರಿಸುತ್ತಿರುವ ಅನಿಶ್ಚಿತತೆಗಳು ನಿವಾರಣೆಯಾದಾವು. ಮಾರಾಟದ ಹಂತದಲ್ಲಿ ಬೆಲೆ ಏರುಪೇರು ಮೊದಲಾದ ಆತಂಕಗಳಿಗೆ ಹೆದರದೆ ಹೆಚ್ಚು ಬೆಲೆಯ ಸಾಧ್ಯತೆಯ ಬೆಳೆಗಳ ಕಡೆಗೆ ಆಸಕ್ತ ರೈತರು ಗಮನಹರಿಸಲು ಆಸ್ಪದವಾಗುತ್ತದೆ.
ಈ ವಾಸ್ತವಗಳನ್ನು ಜನತೆಗೆ ಮನವರಿಕೆ ಮಾಡಿಸುವ ಮತ್ತು ಪ್ರಚೋದಿತ ಪ್ರತಿಭಟನೆಗಳ ನಿರಾಧಾರತೆಯನ್ನು ಬಯಲುಮಾಡುವ ವ್ಯಾಪಕ ಅಭಿಯಾನ ನಡೆಯಬೇಕಾಗಿದೆ.