ಅಜ್ಜಿಯಿಂದ, ಅಜ್ಜಿಮನೆಯಿಂದ ಇಡೀ ಜೀವನಕ್ಕೆ ಬೇಕಾಗುವ ಹಲವು ಪಾಠಗಳನ್ನು ನೋಡಿ ನೋಡಿಯೇ ಕಲಿತೆವು. ಬೋಧನಾ ಪಾಠಕ್ಕಿಂತ, ಅನುಭವಿಸುವ ಪಾಠಗಳು, ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅನುಕರಣೆ, ಅನುಸರಣೆಯೇ ನಮ್ಮ ಬಾಳಿಗೆ ಸ್ಪಷ್ಟಮಾರ್ಗ ರೂಪಿಸಿವೆ.
‘ಆ ಕಾಲವೊಂದಿತ್ತು.. ದಿವ್ಯ ತಾನಾಗಿತ್ತು… ಅದು ಬಾಲ್ಯವಾಗಿತ್ತು!’ – ಕುವೆಂಪು ಮಾತು ಅದೆಷ್ಟು ಸತ್ಯ. ಆ ದಿವ್ಯ ರಸಾನುಭವ ನಮ್ಮೆಲ್ಲರ ಜೀವನದ ಮೇಲೆ ಅಚ್ಚೊತ್ತಿದ ಪರಿಣಾಮವೇ ನಾವೆಲ್ಲ ಇಂದಿಗೂ ಸಂಬಂಧಗಳ ಬಿಗಿಯಲ್ಲಿ ಖುಷಿಯಾಗಿದ್ದೇವೆ.
ಎಲ್ಲ ಮೊಮ್ಮಕ್ಕಳಿಗೂ ಅಜ್ಜಿಮನೆ ಎಂಬುದೊಂದು ಸ್ವರ್ಗ. ಅದೂ ಹಳ್ಳಿಯಲ್ಲಿರುವ ಅಜ್ಜಿಮನೆಯಾದರೆ ಅದು ಇಂದ್ರನ ಅಮರಾವತಿಯೆ ಸೈ.
ಅಜ್ಜಿಮನೆ ಎಂದರೆ ರಾಜಮಂದಿರ. ನಾಲ್ಕುಸುತ್ತಿನ, ಮೂರಂತಸ್ತಿನ ಮನೆ. ನಡುವಿನಂಗಳದಲ್ಲಿ ಜಲದುರ್ಗೆಯ ದೇವಸ್ಥಾನ (ಎಲಿಕೋಡು ಮಠ). ಈ ಅಜ್ಜಿಮನೆ ಎಂದರೆ ಜೇನುಗೂಡಿನಂತೆ. ಒಂದು ದಿನವೂ ನೆಂಟರಿಲ್ಲದ ದಿನವಿಲ್ಲ. ಹಾಗೆಂದು ನಮ್ಮ ಅಜ್ಜಯ್ಯ ಆಗರ್ಭ ಶ್ರೀಮಂತರೇನಲ್ಲ. ಆದರೆ ಹೃದಯ ಶ್ರೀಮಂತಿಕೆಯ ಸಾತ್ತ್ವಿಕರು.
ಹನ್ನೆರಡು ಮಕ್ಕಳಿಗೆ ಮದುವೆಯಾಗಿ ಕುಟುಂಬದ ಸದಸ್ಯರ ಸಂಖ್ಯೆ ಈಗ ಅರವತ್ತರ ಆಸುಪಾಸಾಗಿದೆ. ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಮರಿ ಮಕ್ಕಳು… ಹೀಗೆ ಸಂತತಿ ಬೆಳೆದಿದೆ.
ಅಜ್ಜಯ್ಯ ಮತ್ತು ಅಜ್ಜಿ ವಯಸ್ಸಿನ ಕಾರಣದಿಂದ ದಶಕಗಳ ಹಿಂದೆ ಕಾಲವಾದರು.
ಮೊದಲೇ ಹೇಳಿದಂತೆ ಹನ್ನೆರಡುಮಕ್ಕಳ ಪುಳ್ಳಿಗಳು (ಮೊಮ್ಮಕ್ಕಳು), ಅಜ್ಜಯ್ಯನಿಂದ ಔಷಧ ತೆಗೆದುಕೊಂಡು ಹೋಗಲು ಬರುವ ಊರ, ಪರವೂರ ಜನರು, ಸಂಬಂಧಿಕರು, ಮನೆಮಧ್ಯವಿರುವ ಮಠದ ದೇವರಿಗೆ ಹರಕೆ ಸಲ್ಲಿಸಲು ಬರುವ ಜನ, ಮನೆಯ ಕೆಲಸದಾಳುಗಳು ಹೀಗೆ ದಿನಕ್ಕೆ ಕನಿಷ್ಠ ಮೂವತ್ತು ನಲವತ್ತು ಜನರಿಗೆ ಮೂರು ಹೊತ್ತು ಹೊಟ್ಟೆ ತುಂಬಿಸುವ ಕಾಯಕ ಅಜ್ಜಿ ಮತ್ತು ಅತ್ತೆಯದು.
ಜೊತೆಗೆ ಮಠದ ಪೂಜೆಗೆ ಅಣಿಗೊಳಿಸಿ ಕೊಡುವ ಕಾಯಕವೂ ಅಜ್ಜಿಯದ್ದೆ ಆಗಿತ್ತು.
ಮಡಿ ಎಂದರೆ ಅಬ್ಬಾ! ಅಡಿಗಡಿಗೂ ಮಡಿ ಅಜ್ಜಿಮನೆಯಲ್ಲಿ.
ಮನೆಯ ಬೆಕ್ಕಿಗೂ ಅಡುಗೆಮನೆಗೆ, ಊಟದ ಚಾವಡಿಗೆ ಪ್ರವೇಶವಿರಲಿಲ್ಲ.
ಅಜ್ಜಿಮನೆಯಲ್ಲಿ ಚಾವಡಿಯ ಮುಚ್ಚಿಗೆಯ ಕೆಳಭಾಗದಲ್ಲಿ ದೇವರ ಫೋಟೋಗಳನ್ನು ಗೋಡೆಗೆ ಆನಿಸಿ ಇಡುತ್ತಿದ್ದರು. ಈ ಫೋಟೋಗಳ ಹಿಂದೆ ಗುಬ್ಬಚ್ಚಿಗಳು ಗೂಡುಕಟ್ಟುವ ಸಂಭ್ರಮ ವರ್ಷಾವಧಿ ನಡೆಯುತ್ತಿತ್ತು. ಬೆಕ್ಕುಗಳಿಂದ ಮರಿಗಳನ್ನು ರಕ್ಷಿಸಿಕೊಳ್ಳಲು ಇದೊಂದು ಸೇಫ್ಪ್ಲೇಸ್ ಗುಬ್ಬಚ್ಚಿಗಳ ಪಾಲಿಗೆ. ನಾವು ಮೊಮ್ಮಕ್ಕಳೆಲ್ಲ ಚಾವಡಿಯಲ್ಲಿ ಜಮಾಯಿಸಿ ಗಪ್ಚುಪ್ ಮೌನವಹಿಸಿಯೆ…ಅಪ್ಪ ಗುಬ್ಬಿ, ಅಮ್ಮ ಗುಬ್ಬಿಗಳು ಮರಿಗಳಿಗೆ ಹೇಗೆ ಊಟ ಮಾಡಿಸುತ್ತವೆ ಎಂದು ಕದ್ದು ನೋಡುತ್ತಿದ್ದೆವು.
ಅಜ್ಜಿಗೆ ತಿಳಿಯದಂತೆ ಸ್ಟೋರ್ರೂಂನಲ್ಲಿ ಇರುತ್ತಿದ್ದ ಧವಸ ಧಾನ್ಯಗಳನ್ನು ಬೊಗಸೆಯೊಳಗೆ ಬಾಚಿ ತಂದು ಗುಬ್ಬಚ್ಚಿಗಳಿಗೆ ಹಾಕುತ್ತಿದ್ದೆವು. ಗುಬ್ಬಚ್ಚಿ ತಿನ್ನುವುದನ್ನು ನೋಡಿ ಸಂಭ್ರಮಿಸುತ್ತಿದ್ದೆವು.
ಅಜ್ಜಿಮನೆಯ ಪಕ್ಕದಲ್ಲಿ ಶಿವಪುರ ಹೊಳೆ ಹರಿಯುತ್ತದೆ. ಬೆಳಗ್ಗೆ ಎದ್ದೊಡನೆ ಮಕ್ಕಳದಂಡು, ಬ್ರಷ್ ಪೇಸ್ಟ್, ಅಥವಾ ಹಸಿಮಾವಿನಎಲೆ ಹಿಡಿದು ಹೊಳೆಯತ್ತ ಸಾಗುತ್ತಿದ್ದೆವು. ಹಲ್ಲನ್ನು ಉಜ್ಜಿ ಮನೆಗೆ ಮರಳಿ, ಅಜ್ಜಿ ಮಾಡಿಡುತ್ತಿದ್ದ ಜೀರಿಗೆ ಕೊತ್ತುಂಬರಿ, ಮೆಂತೆ, ಸುಗಂಧಿಬೇರು ಹೀಗೆ ಯಾವುದಾದರೊಂದು ಪದಾರ್ಥದ ಜೊತೆ ಬೆಲ್ಲ ಹಾಲು ಹಾಕಿ ಕುದಿಸಿದ ಕಷಾಯ ಕುಡಿದು… (ಕಾಫಿ ಚಹಾದ ಪರಿಪಾಠವೇ ಇರಲಿಲ್ಲ) ಲೋಟವನ್ನು ಚೆನ್ನಾಗಿ ತೊಳೆದು ಮುಸುರೆಕಟ್ಟೆಯ ದಂಡೆಯ ಮೇಲೆ ಇಡಬೇಕಿತ್ತು.
ಕಷಾಯ ಕುಡಿದ ನಂತರ ನಮಗೆಲ್ಲ ಒಂದಿಷ್ಟು ಕೆಲಸ ಹಂಚಿ ಹಾಕುತ್ತಿದ್ದರು.
ಒಂದಿಬ್ಬರು ಎರಡು ಬುಟ್ಟಿ ಹಿಡಿದು ಹೂವು, ಪತ್ರೆ, ಗರಿಕೆ ಇವಿಷ್ಟನ್ನು ಕೊಯ್ದು, ತೊಳೆದು ತಂದು ಮಠದ ಪೌಳಿಯ ಎದುರು ಅಜ್ಜಿ ತೊಳೆದು ಹಾಸಿಡುವ ಬಾಳೆಎಲೆಯ ಮೇಲೆ ಪರಿಪರಿಯಾಗಿ ಜೋಡಿಸಿಡಬೇಕು.
ಮತ್ತಿಬ್ಬರು ಕಾಡಿನಲ್ಲಿ ಬೀಳುವ ರಂಜೆಹೂಗಳನ್ನು, ಸುರಿಗೆ ಹೂಗಳನ್ನು ಆರಿಸಿಕೊಂಡ ಬಂದು, ಅವುಗಳನ್ನು ಸೂಜಿದಾರದಲ್ಲಿ ಪೋಣಿಸಿ ಹಾರ ಮಾಡಬೇಕು. ಮತ್ತಿಬ್ಬರು ಹೊರಾಂಗಣವನ್ನೆಲ್ಲ ಗುಡಿಸಿ ಕಸ ತೆಗೆಯಬೇಕು. ಮತ್ತೆ ನಾಲ್ವರಿಗೆ ಮನೆಯೊಳಗೆ ಗುಡಿಸಿ, ಒರೆಸುವ ಕಾಯಕ. ವಯಸ್ಸಿನಲ್ಲಿ ದೊಡ್ಡವರು ದೇವರ ಪೂಜೆಯ ಪಾತ್ರೆಗಳನ್ನೆಲ್ಲ ಹುಳಿ ಬೂದಿ ಹಾಕಿ ತೊಳೆದು ಬಾವಿಕಟ್ಟೆಯಲ್ಲಿ ಇಡಬೇಕು.
ಇವಿಷ್ಟು ಕೆಲಸವಾದೊಡನೆ ಎಲ್ಲರೂ ಸ್ನಾನ ಮಾಡಿ ಮಠದ ಮುಂದಿನ ಚಾವಡಿಯಲ್ಲಿ ಜಮಾಯಿಸುತ್ತಿದ್ದೆವು.
ಅಜ್ಜಿಮನೆಯಲ್ಲಿ ಬೆಳಗಿನ ಉಪಹಾರ ಎಂಬ ಕಾನ್ಸೆಪ್ಟ್ ಇರಲೇ ಇಲ್ಲ. ಉದ್ದನೆಯ ಚಾವಡಿಯಲ್ಲಿ ಎಲ್ಲರೂ ಸೇರಿ ಮೂವತ್ತಕ್ಕೂ ಹೆಚ್ಚು ಬಾಳೆಲೆ ಹಾಕಿ, ಒರೆಸಿ, ನೀರಿನ ಲೋಟವಿಟ್ಟು, ಉಪ್ಪು, ಉಪ್ಪಿನಕಾಯಿ ಬಡಿಸಿ ಎಲ್ಲರೂ ಊಟಕ್ಕೆ ಬಾಳೆಲೆ ಮುಂದೆ ಕುಳಿತುಕೊಂಡ ನಂತರ ಅತ್ತೆ ಎಲ್ಲರಿಗೂ ಬಿಸಿಬಿಸಿ ಕುಚ್ಚಲಕ್ಕಿ ಗಂಜಿ ಬಡಿಸುತ್ತಿದ್ದರು. ಅಜ್ಜಿ ತುಪ್ಪದಕಂಚಿನಿಂದ ತಲಾ ಎರಡೆರಡು ಚಮಚೆ ತುಪ್ಪ ಬಡಿಸಿದ ನಂತರ ನಾವೆಲ್ಲ ಬಾಳೆಲೆಗೆ ಕೈಹಾಕುತ್ತಿದ್ದೆವು. ಮಾವಿನಮಿಡಿ, ಕೊಚ್ಚಲು, ಲಿಂಬೆ, ಅಮಟೆ, ಕರಂಡೆ(ಗರ್ಚ)ಯ ಉಪ್ಪಿನಕಾಯಿ, ಹೀಗೆ ತರತರದ ಉಪ್ಪಿನಕಾಯಿ ತಯಾರಿಸುತ್ತಿದ್ದ ಅಜ್ಜಿ, ನಮಗಾವುದು ಇಷ್ಟವೋ ಅದನ್ನು ಬಡಿಸುತ್ತಿದ್ದ ಉದಾರಿ.
ಗಡದ್ದಾಗಿ ಗಂಜಿ ಉಂಡು, ಸಾರಿಸಿ ಒರೆಸಿದ ಮೇಲೆ ನಾವೆಲ್ಲ ಮತ್ತೆ ಹೊಳೆ(ನದಿ)ಗೆ ಹೋಗುತ್ತಿದ್ದೆವು. ಹೊಳೆಯಲ್ಲಿ ನಮ್ಮ ನಮ್ಮ ಬಟ್ಟೆಗಳನ್ನು ಒಗೆದು, ನೀರಾಟವಾಡಿ, ಗುಡ್ಡವೆಲ್ಲ ಸುತ್ತಿ, ಮಾವು, ನೇರಳೆ, ಪೇರಳೆ ಹಣ್ಣನ್ನೆಲ್ಲ ಹುಡುಕಿ ಕೊಯ್ದು ತಿಂದು.. ಒಗೆದ ಬಟ್ಟೆಯೊಂದಿಗೆ ಮನೆಗೆ ಮರಳಿ…ಹಿಂದಿನ ಕಣಕ್ಕೆ ಹೋಗಿ ಬಟ್ಟೆಗಳನ್ನು ಒಣಗಿಸಿ, ಚಾವಡಿಯಲ್ಲಿ ಜಮಾಯಿಸುತ್ತಿದ್ದೆವು.
ಈಗ ಬೆಳಗಿನ ಹನ್ನೊಂದು ಗಂಟೆಯಾಗುತ್ತಿತ್ತು. ಅಜ್ಜಿಯೋ, ಅತ್ತೆಯೊ ಒಂದು ಹಂಡೆ ಬೆಲ್ಲ ಹಾಕಿದ ಪಾನಕ ತಂದು ನಮಗೆಲ್ಲ ವಿತರಿಸಿ ಅಡುಗೆಕಾಯಕ ಮಾಡುತ್ತಿದ್ದರೆ, ಅಜ್ಜಯ್ಯ ನಮಗೆಲ್ಲ ಒಂದಿಷ್ಟು ಕೆಲಸ ಕೊಡುತ್ತಿದ್ದರು. ಅಜ್ಜಯ್ಯ ಸ್ವತಃ ಆಯುರ್ವೇದ ಪಂಡಿತರು.
ಹಲವು ಬಗೆಯ ಕಷಾಯಗಳನ್ನು, ಲೇಹಗಳನ್ನು, ಗುಳಿಗೆಗಳನ್ನು ಮನೆಯಲ್ಲೇ ತಯಾರಿಸುತ್ತಿದ್ದರು.
ಈ ಮಾಡಿಟ್ಟ ಕಷಾಯಗಳನ್ನು ಸೀಸೆಗೆ ತುಂಬುವುದು, ಲೇಹವನ್ನು ಡಬ್ಬಿಗೆ ತುಂಬಿ ತೂಕಮಾಡುವ ಕಾಯಕ, ಅರೆದಿಟ್ಟ ಗುಳಿಗೆಯ ಮುದ್ದೆಯನ್ನು ಒಂದೇ ಗಾತ್ರದ ಚಿಕ್ಕಚಿಕ್ಕ ಗೋಲಿ ಮಾಡಿ ನೆರಳಿನಲ್ಲಿ ಒಣಗಿಸುವ ಕೆಲಸ. ಒಣಗಿದ ಗುಳಿಗೆಗಳನ್ನು ಪ್ಯಾಕ್ ಮಾಡುವುದು.
ಬೇರುಗಳನ್ನು ತೊಳೆದು ಒಣಗಿಸಿ, ತುಂಡಾಗಿಸಿ, ಕುಟ್ಟುವುದು, ಕಡೆಯುವುದು…ಹೀಗೆ ಪಂಡಿತರ ಶಾಲೆಯಲ್ಲಿ ಅದೆಷ್ಟು ಕೆಲಸಗಳು! ಅದನ್ನೆಲ್ಲ ಮಾಡುವ ಅವಕಾಶ ನಮಗೆಲ್ಲ ಸಿಗುತ್ತಿತ್ತು.
ಅಜ್ಜಯ್ಯ ಸ್ವತಃ ತಾಳಮದ್ದಳೆ ಅರ್ಥಧಾರಿಗಳಾಗಿದ್ದರು. ಅಲ್ಲದೆ ಆಶುಕತೆಗಳನ್ನು ಸೊಗಸಾಗಿ, ವಿನೋದವಾಗಿ ನಿರೂಪಿಸುತ್ತಿದ್ದರು. ಈ ಪಂಡಿತರ ಶಾಲೆಯಲ್ಲಿ ಕೆಲಸ ಮಾಡುವಾಗ ನಮಗೆ ಅಜ್ಜಯ್ಯನಿಂದ ಪುಷ್ಕಳ ನಗುವಿನ ಔತಣ ಸಿಗುತ್ತಿತ್ತು. ನಾವೆಲ್ಲ ಗೊಳ್ ಎಂದು ನಗುವುದು ಅಜ್ಜಿಯ ಕಿವಿಗೆ ಬಿದ್ದರೆ ಸಾಕು…. ಅಜ್ಜಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತ ಪಂಡಿತರ ಶಾಲೆಯ ಬಳಿ ಬಂದು … ‘ಏನಷ್ಟು ನಗುವುದು? ಗಂಡುಮಕ್ಕಳು ನಗಲಿ ಬಿಡಿ. ಈ ಹೆಣ್ಣುಮಕ್ಕಳೆಲ್ಲ ಈ ತರಹ ನಗುವುದು ಸಂಸ್ಕೃತಿಯಲ್ಲ’ ಎಂದೆಲ್ಲಾ ಉಪದೇಶ ಮಾಡಿ ಬೆನ್ನು ತಿರುಗಿಸಿ ಹೊರಟೊಡನೆ… ಅಜ್ಜಯ್ಯ ಕಿಸಕ್ಕನೆ ನಗುತ್ತಾ… ನಮ್ಮನ್ನೆಲ್ಲ ನೋಡಿ ಮಕ್ಳೆ…. ಅದರ ಬುಡ ಅಂದರೆ ಒನ್ಸ್ ಮೋರ್ ಎಂಬ ಡೈಲಾಗ್ ಹೊಡೆದು ಕಣ್ಣು ಮಿಟುಕಿಸೋದು… ನಾವೆಲ್ಲ ಅಜ್ಜಿಯ ಉಪದೇಶಕ್ಕೆ ಜವಾಬು ಎಂಬಂತೆ ಜೋರಾಗಿ ಕೇಕೆ ಹಾಕಿ ನಗುವುದು ಮಾಡುತ್ತಿದ್ದೆವು.
ಆ ಇಳಿವಯಸ್ಸಿನಲ್ಲೂ ಅಜ್ಜಯ್ಯ ಅಜ್ಜಿ ಇಬ್ಬರೂ ಕಾಯಕವೇ ಕೈಲಾಸವೆಂದು ಸಾರುತ್ತಾ, ಜಗಳ ಮಾಡುತ್ತಾ, ಮುದ್ದಾಡುತ್ತಾ… ನಮಗೆಲ್ಲ ಪ್ರೀತಿಯ ಜಗತ್ತಿನ, ಮಾದರಿ ದಾಂಪತ್ಯದ ಪರಿಚಯ ಮಾಡಿಸಿದ್ದು ಅವಿಸ್ಮರಣೀಯ.
ನಮ್ಮ ಅಜ್ಜಯ್ಯನಂತೂ ಹೆಣ್ಣು ಗಂಡು ಎಂದು ಭೇದ ಮಾಡದೆ ಮೊಮ್ಮಕ್ಕಳನ್ನು ಪ್ರೀತಿ ಮಾಡುತ್ತಿದ್ದರು.
ಮಧ್ಯಾಹ್ನ ಒಂದು ಗಂಟೆಯಾದೊಡನೆ ಊಟ. ನವರಾತ್ರಿಯ ದಿನಗಳಲ್ಲಿ ಪ್ರತಿ ಮಧ್ಯಾಹ್ನ ದೇವರ ನೈವೇದ್ಯದ ಭಕ್ಷ್ಯಗಳು, ಹಾಲು ಪರಮಾನ್ನದ ವಿಶೇಷ ಊಟ ನಮ್ಮ ಪಾಲಿಗೆ.
ಜೊತೆಗೆ ಮನೆಯಂಗಳದಲ್ಲಿ, ದೇಗುಲದ ಎದುರಲ್ಲೆಲ್ಲ ಸ್ಪರ್ಧೆಗೆ ಬಿದ್ದಂತೆ ರಂಗೋಲಿ ಬಿಡಿಸುತ್ತಿದ್ದೆವು. ರಂಗೋಲಿ ಹುಡಿಯಿಂದ, ಹೂವಿನ ಪಕಳೆಗಳಿಂದ, ಧಾನ್ಯಗಳಿಂದ, ಬೀಜಗಳಿಂದ ಚಿತ್ತಾರ ಅರಳಿಸಿ, ಎಲ್ಲರನ್ನೂ ಕರೆದು ಕರೆದು ತೋರಿಸಿ ಬೀಗುತ್ತಿದ್ದೆವು.
ಊಟವಾದ ಮೇಲೆ ಹಿರಿಯರೆಲ್ಲ ಪಡಸಾಲೆ, ಕೋಣೆ, ಮೇಲ್ಚಾವಡಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರೆ, ನಾವೆಲ್ಲ ರಜೆಯ ಸದುಪಯೋಗ ಎಂಬಂತೆ, ಕಣ್ಣಾಮುಚ್ಚಾಲೆ, ಕಡ್ಡಿ ಆಟ, ಪಗಡೆಯಾಟ, ಹೀಗೆ ಒಳಾಂಗಣ ಆಟದಲ್ಲಿ ಮಗ್ನರಾಗುತ್ತಿದ್ದೆವು. ಹಿರಿಯರೆಲ್ಲಾ ಕೊಂಚ ವಿಶ್ರಾಂತಿ ಪಡೆದು ಅವರವರ ಕಾಯಕಕ್ಕೆ ತೆರಳುತ್ತಿದ್ದರು. ಆನಂತರ ಹಟ್ಟಿಯ ದನಗಳಿಗೆಲ್ಲ ಅಕ್ಕಚ್ಚು ಹಾಕಿ, ಹಟ್ಟಿ ಹಣೆಗೆ ಹುಲ್ಲನ್ನು ತುಂಬಿ, ದನದ ಹಾಲನ್ನು ಕರೆದು ತಂದು ಮತ್ತೆ ಕಷಾಯದ ಸಮಾರಾಧನೆ ಮಾಡಿಕೊಡುತ್ತಿದ್ದರು.
ಈ ಕಷಾಯ ಕುಡಿದ ನಂತರ ಮಕ್ಕಳಿಗೆ ದನಮೇಯಿಸಲು ಗೇಟ್ಪಾಸ್ ಸಿಕ್ಕಂತೆ. ನಾವೆಲ್ಲ ಹಟ್ಟಿಯ ಅಷ್ಟೂ ದನಗಳನ್ನು ಗುಡ್ಡದ ಕಡೆಗೊ, ಬಯಲಿಗೋ ಅಟ್ಟಿಸಿಕೊಂಡು ಹೋಗುತ್ತಿದ್ದೆವು.
ದನಗಳು ಅವುಗಳ ಪಾಡಿಗೆ ಅವು ಮೇಯುತ್ತಿದ್ದರೆ, ನಾವೆಲ್ಲ ಆಟದ ಲೋಕದಲ್ಲಿ ಮಗ್ನರಾಗುತ್ತಿದ್ದೆವು. ಅಲ್ಲದೆ ಗುಡ್ಡದ ಮೇಲೆ ಸಿಗುವ ಬಗೆಬಗೆಯ ಹಣ್ಣುಗಳನ್ನು ತಿನ್ನುತ್ತಾ, ನೇರಳೆ ಮರದ ಎಲೆಯಿಂದ ಪೀಪಿ ಮಾಡಿ ಅದನ್ನು ನುಡಿಸುತ್ತಾ, ಕಿಸ್ಕಾರ ಹೂವಿನ ದಂಟಿನ ತುದಿಗೆ ನಾಚಿಕೆ ಮುಳ್ಳಿನ ಎಲೆಯ ಬುಡದ ಹನಿ ರಸ ಸುರಿದು…ಬಬಲ್ಸ್ ಮಾಡುತ್ತಾ ಖುಷಿ ಪಡುತ್ತಿದ್ದೆವು.
ಹೊಳೆಯತ್ತ ದನಗಳನ್ನು ಓಡಿಸಿಕೊಂಡು ಹೋಗಿ..ದನಗಳನ್ನು, ಎಮ್ಮೆಗಳನ್ನು ನೀರಿಗೆ ಇಳಿಸಿ ಅವುಗಳಿಗೆ ಸ್ನಾನ ಮಾಡಿಸಿ, ನಾವೂ ನೀರಾಟವಾಡುವಾಗ ಅಜ್ಜಯ್ಯನ ಮನೆಯ ಗುಂಡ, ದಾಸು ಎಂಬ ನಾಯಿಗಳು ನಮಗೆ ಜೊತೆಯಾಗುತ್ತಿದ್ದವು.
ದನಗಳೆಲ್ಲ ಮೈಕೊಡವುತ್ತಾ ಹೊಳೆಯಿಂದ ಮೇಲೆ ಬಂದು ಹಟ್ಟಿಯ ದಾರಿ ಹಿಡಿವಾಗ ಗೋಧೂಳಿ ಸಂಜೆ ಆಗಿರುತ್ತಿತ್ತು. ನಾವೆಲ್ಲ ಕೈಕಾಲು ತೊಳೆದು ಮಠದೆದುರಿನ ಚಾವಡಿಯಲ್ಲಿ ಜಮಾಯಿಸುತ್ತಿದ್ದೆವು. ಅಜ್ಜಿ ಆಗಲೇ ದೇವರಿಗೆ, ಹಟ್ಟಿಗೆ, ತುಳಸಿಗೆ ಸಂಧ್ಯಾದೀಪ ಇರಿಸಿ ಭಜನೆ ಮಾಡಲು ತಯಾರಿ ನಡೆಸಿದರೆ, ಅಜ್ಜಯ್ಯ ಸಂಧ್ಯಾವಂದನೆಗೆ ಕೂರುತ್ತಿದ್ದರು.
ಹೆಣ್ಮಕ್ಕಳು ಅಜ್ಜಿಯೊಂದಿಗೆ ಭಜನೆಗೆ ಕುಳಿತುಕೊಳ್ಳುವಾಗ, ಅಜ್ಜಿ ದೇವರ ದೀಪ ಹಚ್ಚುವ ಹತ್ತಿಬತ್ತಿ ಮಾಡುತ್ತ ಭಜನೆ ಮಾಡುವುದು, ಚಿಕ್ಕಮಕ್ಕಳು ಭಜನೆ ಹೇಳಿದರೆ, ದೊಡ್ಡ ಹೆಣ್ಮಕ್ಕಳು ಅಜ್ಜಿ ಸಂಜೆ ಕೊಯ್ದಿಡುತ್ತಿದ್ದ ಮಲ್ಲಿಗೆ ಮಿಟ್ಟೆ, ಜಾಜಿ, ಮುತ್ತುಮಲ್ಲಿಗೆ, ದುಂಡುಮಲ್ಲೆಯ ಮೊಗ್ಗುಗಳನ್ನು ಹಾರ ಮಾಡುತ್ತಾ ಭಜನೆಗೆ ಸಾಥ್ ನೀಡುತ್ತಿದ್ದರು.
ಗಂಡುಮಕ್ಕಳು ಅಜ್ಜಯ್ಯನ ಜೊತೆಗೆ ಜಪ ಪೂರೈಸುತ್ತಿದ್ದರು. ಮಠದ ಪೂಜೆ ಮುಗಿಸಿ ಎಲ್ಲರೂ ದೇವರಿಗೆ ನಮಿಸಿ ಮೇಲ್ಚಾವಡಿಗೆ ಓಡುತ್ತಿದ್ದೆವು.
ಅಜ್ಜಿ ನಮಗೆಲ್ಲ ಸುಟ್ಟಹಪ್ಪಳ, ಮಾವಿನಹಣ್ಣಿನ ಹಂಚಟ್ಟು (ಮಾಂಬಳ), ಹಲಸಿನಹಣ್ಣಿನ ಹಪ್ಪಳ, ಸುಟ್ಟ ಗೇರುಬೀಜ, ಹಲಸಿನ ಬೀಜ ಹೀಗೆ ಏನಾದರೂ ಸಾಂಪ್ರದಾಯಿಕ ಸ್ನ್ಯಾಕ್ಸ್ ವಿತರಿಸುವ ಹೊತ್ತಿದು. ರೇಡಿಯೋ ಮಾತ್ರ ಇದ್ದ ಆ ಕಾಲದಲ್ಲಿ ರಾತ್ರಿ ಏಳು ಮೂವತ್ತೈದಕ್ಕೆ ಕನ್ನಡದಲ್ಲಿ ರಾಷ್ಟ್ರೀಯವಾರ್ತೆ ಕೇಳಲು ನಾವೆಲ್ಲ ಅಜ್ಜಯ್ಯನ ಜೊತೆಯಾಗುತ್ತಿದ್ದೆವು. ವಾರ್ತೆ ಮುಗಿದ ಮೇಲೆ ಫ್ಯಾಮಿಲಿ ಟಾಕ್ಟೈಮ್. ನಂತರ ಸ್ಟೋರಿಟೈಮ್ ಆರಂಭ.
ಅಜ್ಜಯ್ಯ ನಮಗೆಲ್ಲ ರಾಮಾಯಣ ಮಹಾಭಾರತದ ಕತೆಗಳನ್ನು ಹೇಳುತ್ತ, ಅದರ ನೀತಿಯನ್ನು ವಿವರಿಸಿ, ಹಾಸ್ಯವಿದ್ದರೆ ಅಭಿನಯಿಸಿ, ವೀರಾವೇಶವನ್ನು ನಟಿಸಿ… ನಮ್ಮೆದೆಯೊಳಗೆ ರಾಮಾಯಣ ಮಹಾಭಾರತ ಹುದುಗುವಂತೆ ಕಥೆ ನಿರೂಪಿಸುತ್ತಿದ್ದರು.
ಹೀಗೆ ಅಜ್ಜಯ್ಯ ಕತೆ ಹೇಳುವ ಹೊತ್ತಲ್ಲಿ ನಾವು ಅವರ ತಲೆಯಲ್ಲಿದ್ದ ಉದ್ದವಾದ ಬೆಳ್ಳಿಯ ಕೂದಲನ್ನು ಹೆಣೆದು ಜಡೆ ಕಟ್ಟುವುದು, ಅಜ್ಜಯ್ಯನ ಹಣೆಗೆ ಕುಂಕುಮ ಇಡುವುದು ಹೀಗೆ …ಅಜ್ಜಯ್ಯನಿಗೆ ಸ್ತ್ರೀವೇಷ ಮಾಡಿ ಖುಷಿ ಪಡುತ್ತಿದ್ದೆವು. ಕವಳ ತಿನ್ನುತ್ತಿದ್ದ ಅಜ್ಜಯ್ಯನ ಬಾಯಿ ತುಟಿ ಸದಾ ರಂಗಾಗೇ ಇರುತ್ತಿತ್ತು ಈ ವೇಷ ಕಲಾಪ ಮುಗಿದ ಮೇಲೆ ಊಟದ ಸಮಯ.
ಊಟವಾದಮೇಲೆ ಉದ್ದನೆಯ ಚಾವಡಿಯಲ್ಲಿ ಎಲ್ಲರೂ ಮಲಗಲು ಉದ್ದಕ್ಕೆ ಚಾಪೆ, ಉದ್ದನೆಯ ಜಮಖಾನ, ಓಲಿ ಚಾಪೆ ಹಾಕಿಕೊಂಡು ಅಜ್ಜಿಯ ಹತ್ತಿಸೀರೆ ಹೊದ್ದು ಮಲಗುತ್ತಿದ್ದೆವು. ಚಳಿಗಾಲವಾದರೆ ಕಂಬಳಿ ಹೊದ್ದು ಮಲಗುವುದು. ಆಗಲೂ ಮಾತು, ಕೇಕೆ, ಅಜ್ಜಿಯ ಬೈಗುಳ, ಅಜ್ಜಯ್ಯನ ಒನ್ಸ್ ಮೋರ್ ಡೈಲಾಗ್… ಈ ಮಲಗುವ ಸಮಯವೂ ಮೋಜಿನ ಸಮಯವೇ ಆಗಿತ್ತು. ಮಾತು, ನಗುವೆಲ್ಲ ಮುಗಿದು ಕಣ್ಣು ಬಾಡಿದೊಡನೆ ಅಜ್ಜಯ್ಯ ಏರುಧ್ವನಿಯಲ್ಲಿ ನಮಗೆಲ್ಲ ‘ರಾಮಂ ಸ್ಕಂದಂ ಹನೂಮಂ ವೈನತೇಯ ವೃಕೋಧರಂ, ಶಯನೇನ ಸ್ಮರೇ ನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ’ ಎಂಬ ಮಂತ್ರ ಬೋಧಿಸುತ್ತಿದ್ದರು. ನಾವೆಲ್ಲ ಅದನ್ನು ಹೇಳಿ ನಿದ್ದೆಗೆ ಶರಣಾಗುತ್ತಿದ್ದೆವು.
ಇದು ಅಜ್ಜಿಮನೆಯ ದಿನಚರಿಯಾದರೆ…ಇನ್ನು, ಅಜ್ಜಿಗೆ ಅಕ್ಷರಜ್ಞಾನ ಇತ್ತು. ಆಕೆಗೆ ಅದು ಅನಿವಾರ್ಯ ಅನ್ನಿಸಲಿಲ್ಲ. ಆದರೆ ಅಜ್ಜಯ್ಯ ಶಿಕ್ಷಣದ ಮಹತ್ತ್ವ ಅರಿತಿದ್ದರು. ಹಾಗಾಗಿ ಅವರ ಎಲ್ಲ ಹನ್ನೆರಡು ಮಕ್ಕಳು ವಿದ್ಯಾವಂತರಾದರು.
ಅಜ್ಜಿಮನೆಯ ದೀಪಾವಳಿ ಅಭ್ಯಂಜನ ಬಹಳ ಗಮ್ಮತ್ತು. ಹಂಡೆಗೆ ನೀರು ತುಂಬುವ ದಿನ ಅಜ್ಜಿ ಕಜ್ಜಾಯ ಮಾಡಿ ಹಂಡೆಯ ನೀರಿಗೆ ನೈವೇದ್ಯ ಮಾಡುತ್ತಿದ್ದರು. ನಮಗೆಲ್ಲ ಹಬ್ಬಕ್ಕಿಂತ ಕಜ್ಜಾಯವೇ ಪ್ರೀತಿ.
ನವರಾತ್ರಿಯಲ್ಲಿ ಮಠದ ಪೂಜೆ, ಕೊನೆಯ ನವರಾತ್ರಿಯಂದು ನಡೆಯುವ ವಿಶೇಷ ಪೂಜೆಗಳು, ಪುಷ್ಕಳ ಊಟದ ಸವಿ ಬಣ್ಣಿಸಲಸದಳ. ನವರಾತ್ರಿಯ ಸಮಯದಲ್ಲಿ ಅಜ್ಜಿಮನೆಯಲ್ಲಿ ವ್ಯವಸಾಯದ ಕೊಯ್ಲಿನ ಕೆಲಸ ಮುಗಿದು ಭತ್ತದ ತಿರಿ ಕಟ್ಟುವ ಸಂಪ್ರದಾಯವಿತ್ತು.
ಅಜ್ಜಿಮನೆಯಲ್ಲಿ ಅಕ್ಷಯತದಿಗೆಯ ದಿನ ಪ್ರತಿವರ್ಷವೂ ಚಂಡಿಕಾಹೋಮ ಮಾಡಿ, ಊರ ಜನರಿಗೆ, ಸಂಬಂಧಿಕರಿಗೆ ಮೃಷ್ಟಾನ್ನಭೋಜನ ಏರ್ಪಡಿಸುವ ಪದ್ಧತಿ ಇಂದಿನವರೆಗೂ ನಡೆದುಕೊಂಡು ಬಂದಿದೆ. ಈ ದಿನ ಮಧ್ಯಾಹ್ನ ಸಂತರ್ಪಣೆಯ ನಂತರ ಹರಿಕಥಾ ಶ್ರವಣ ಯೋಗವಿತ್ತು.
ಹೀಗೆ ಕೃಷಿಕಾಯಕ, ವೈದ್ಯಸೇವೆ, ವೈದಿಕಪ್ರವೃತ್ತಿಯಿಂದ ಗಿಜಿಗುಡುತ್ತಿದ್ದ, ಇಂದಿಗೂ ಗಿಜಿಗುಡುವ ನನ್ನಜ್ಜಿ ಮನೆ, ಅಲ್ಲಿ ನಾವೆಲ್ಲ ಕಳೆದ ಬಾಲ್ಯ ಈಗಲೂ ಆ ಸ್ವರ್ಗದಲ್ಲಿ ಸಿಗುವ ಸುಖ ಜೇನಿನಷ್ಟು ಮಧುರ. ಅಜ್ಜಿಮನೆಯೇ ಒಂದು ವಿಶೇಷ ಪ್ರಪಂಚ. ಅದು ಅಜ್ಜಿ ಜಗುಲಿ ಮಾತ್ರವಲ್ಲದ ಒಂದು ಸಾರ್ವಜನಿಕ ಜಗತ್ತು. ನಮಗೆಲ್ಲ ತಿಳಿದಿರುವ ಹಳ್ಳಿಬದುಕಿನ ಲೋಕವದು. ಕಳೆದುಹೋದ ದಿನಗಳು, ಅಲ್ಲಿನ ಬಿಗಿಸಂಬಂಧಗಳನ್ನು ಮತ್ತೆಮತ್ತೆ ನೆನಪಿಸಲು ಅಜ್ಜಿಮನೆಯಷ್ಟು ಪ್ರಶಸ್ತ ಮನೆ ಮತ್ತೊಂದಿಲ್ಲ.
ಈ ಅಜ್ಜಿಯಿಂದ, ಅಜ್ಜಿಮನೆಯಿಂದ ಇಡೀ ಜೀವನಕ್ಕೆ ಬೇಕಾಗುವ ಹಲವು ಪಾಠಗಳನ್ನು ನೋಡಿ ನೋಡಿಯೇ ಕಲಿತೆವು. ಬೋಧನಾ ಪಾಠಕ್ಕಿಂತ, ಅನುಭವಿಸುವ ಪಾಠಗಳು, ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅನುಕರಣೆ, ಅನುಸರಣೆಯೇ ನಮ್ಮ ಬಾಳಿಗೆ ಸ್ಪಷ್ಟಮಾರ್ಗ ರೂಪಿಸಿವೆ.
ಅತಿಥಿ ಸತ್ಕಾರ, ಕೂಡು ಕುಟುಂಬದಲ್ಲಿ ಹೊಂದಾಣಿಕೆ, ದಣಿವರಿಯದೆ ಕಾಯಕ ಮಾಡುವ ಮಾದರಿ, ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ತತ್ತ್ವ, ನಮ್ಮ ಸಂಸ್ಕೃತಿ, ಮನೆತನದ ವಿಶೇಷತೆ, ಮಕ್ಕಳನ್ನು ಬೆಳೆಸುವ ಪರಿ… ಇವೆಲ್ಲವೂ ನಮಗೆ ಈ ಅಜ್ಜಿಮನೆಯ ಗರಡಿಯಲ್ಲಿ ಸಿಕ್ಕ ಅಮೂಲ್ಯರತ್ನಗಳು. ಅದನ್ನೆಲ್ಲಾ ಜೋಪಾನವಾಗಿ ಕಾಪಾಡಿಕೊಂಡು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಅಜ್ಜಿಯಂದಿರಾಗುವ ನಮ್ಮ ಹೆಗಲಮೇಲಿದೆ. ನಮ್ಮ ಅಜ್ಜಿಯಂದಿರದ್ದು ‘ಸ್ತ್ರೀದೃಷ್ಟಿಕೋನ’ವೇ ಹೊರತು ‘ಸ್ತ್ರೀವಾದಿ ದೃಷ್ಟಿಕೋನ’ ಅಲ್ಲವೇ ಅಲ್ಲ ಎಂಬುದೂ ಅಜ್ಜಿಮನೆಯಲ್ಲಿ ನಾವು ಕಂಡುಕೊಂಡ ಸತ್ಯ.
ಒಟ್ಟಿನಲ್ಲಿ ಅಜ್ಜಿಮನೆ ಮತ್ತು ಅಜ್ಜಿ ನೆನಪಾಗಿ, ಮೌಲ್ಯವಾಗಿ, ನೈತಿಕ ನಿಕಷವಾಗಿ, ಭಾವಮೂಲವಾಗಿ ಸದಾ ಇದ್ದೇ ಇರುತ್ತವೆ. ಇರುತ್ತಾರೆ. ಅಜ್ಜಿಮನೆ, ಅಜ್ಜಿ ಅಲ್ಲಿ ಆಗಿಹೋದ ಜಗತ್ತೂ ಅಲ್ಲ, ಜೀವವೂ ಅಲ್ಲ. ಈಗಲೂ ಇರುವ ಜೀವ ಮತ್ತು ಜೀವಂತಿಕೆ ಎಂದರೆ ತಪ್ಪಲ್ಲ. ಆದ್ದರಿಂದ ನಾನೆಂದದ್ದು ಅಜ್ಜಿಮನೆ ಎಂದರೆ ಅಮರಾವತಿ ಎಂದು.
ತೀರ್ಪುಗಾರರ ಮಾತು:
‘ಉತ್ಥಾನ’ ಪತ್ರಿಕೆಯು ‘ಅಜ್ಜಿಮನೆ’ಯ ಕುರಿತಾಗಿ ಪ್ರಬಂಧ ಬರೆದು ಕಳುಹಿಸಲು ನೀಡಿದ್ದ ಆಹ್ವಾನವನ್ನು ಸ್ವೀಕರಿಸಿ ಸುಮಾರು ಎಪ್ಪತ್ತು ಪ್ರಬಂಧಗಳು ಬಂದಿದ್ದು, ಅವುಗಳಲ್ಲಿ ಅರ್ಹವೆನಿಸಿದ ಹತ್ತು ಪ್ರಬಂಧಗಳನ್ನು ಸಂಪಾದಕರು ನಮಗೆ ಕಳಿಸಿದ್ದರು. ಹೀಗೆ ಕಳಿಸಿದ್ದ ಆ ಹತ್ತು ಪ್ರಬಂಧಗಳಲ್ಲಿ ಉತ್ತಮವೆನಿಸಿದ ಮೂರು ಪ್ರಬಂಧಗಳನ್ನು ಆಯ್ಕೆ ಮಾಡುವಂತೆ ಅವರು ತಿಳಿಸಿದ್ದರು. ಆದರೆ, ಈ ಪ್ರಬಂಧಗಳ ಬಗ್ಗೆ ಮೊದಲ ಓದಿಗೆ ಏನೂ ಹೇಳದಂತಹ ಮನಃಸ್ಥಿತಿ ನಮ್ಮದಾಯಿತು. ಎಲ್ಲವೂ ಒಂದಕ್ಕಿಂತ ಒಂದು ಚೆಂದವೇ. ಸುಮಾರು ಮೂರುನಾಲ್ಕು ಸಲ ಓದಿಯಾದ ಮೇಲೆ, ಸಣ್ಣ ಜರಡಿ ಹಿಡಿದು ಪರೀಕ್ಷೆಗೆ ಒಳಪಡಿಸಬೇಕಾಯಿತು.
ಭಾಷೆಯ ಮೇಲಿನ ಹಿಡಿತ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಕೌಶಲ, ಜೀವನಮೌಲ್ಯಗಳ ಅನಾವರಣ ಮತ್ತು ಓದುಗನ ಮೇಲೆ ಪ್ರಬಂಧ ಮಾಡಬಹುದಾದ ಒಟ್ಟು ಪರಿಣಾಮ – ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾದ ಮೇಲೆಯೆ, ಒಂದು ನಿರ್ಧಾರಕ್ಕೆ ಬರುವಂತಾಯಿತು.
ನಮಗೆ ಮೆಚ್ಚುಗೆಯಾದ ಒಟ್ಟು ನಾಲ್ಕು ಪ್ರಬಂಧಗಳನ್ನು ಹೆಸರಿಸುವ ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದೇವೆ.
ಅಜ್ಜಿ ಅಂದರೆ ನೆನಪುಗಳ ಕಣಜ. ತಲೆತಲೆಮಾರುಗಳ ಹಿಂದಿನ ಪಳೆಯುಳಿಕೆ. ಸುಮಾರು ಅರವತ್ತು ಎಪ್ಪತ್ತು ವರ್ಷಗಳಲ್ಲಿ ನಮ್ಮ ಬದುಕಿನ ರೀತಿ ರಿವಾಜು ಅದೆಷ್ಟು ಬದಲಾಯಿತೆಂಬುದನ್ನು, ವರ್ತಮಾನದ ಕಾಲಘಟ್ಟದಲ್ಲಿ ನಿಂತು ಅವಲೋಕಿಸಿದರೆ, ಅದರ ಆಳ ಅರಿವಿಗೆ ಬರುತ್ತದೆ. ಇಲ್ಲಿ ಅಜ್ಜಿ ಮಾನ್ಯರಿಗಿಂತ ಮಾನಿನಿಯರನ್ನು ಹೆಚ್ಚು ಕಾಡಿದಂತಿದೆ. ಸ್ಪರ್ಧೆಗೆ ಭಾಗವಹಿಸಿದವರಲ್ಲಿ ಒಬ್ಬರನ್ನು ಹೊರತು ಪಡಿಸಿದರೆ, ಉಳಿದವರೆಲ್ಲ ಮಹಿಳೆಯರೆ ಎನ್ನುವುದು ಅವರ ಬರವಣಿಗೆಯಿಂದ ತಿಳಿದುಬರುತ್ತದೆ.
ಮತ್ತೂ ವಿಶೇಷವೆಂದರೆ, ಸದ್ಯಃ ನಗರವಾಸಿಗಳಾಗಿರುವ ಈ ಬರಹಗಾರರ ಅಜ್ಜಿಯಂದಿರು ಹಳ್ಳಿವಾಸಿಗಳು. ಕೃಷಿಕುಟುಂಬದ ಹಿನ್ನೆಲೆಯುಳ್ಳವರು. ಭಿನ್ನವಾದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಬಾಲ್ಯಕಳೆದ ಇಂದಿನವರು ಅದೇ ಹಳವಂಡದಲ್ಲಿ ಇಲ್ಲಿ ಅಜ್ಜಿಯನ್ನು ನೆನೆಯುತ್ತಾರೆ. ಹೀಗೆ ನೆನೆದವರಲ್ಲಿ ಈಗಷ್ಟೆ ಎಸ್ಸೆಸ್ಸೆಲ್ಸಿ ಮುಗಿಸಿರುವ ನವತರುಣಿ ಮತ್ತು ಎಂಬತ್ತೆರಡು ವರ್ಷದ ಹಿರಿಯ ಅಜ್ಜಿಗೂ ತಮ್ಮ ಅಜ್ಜಿಯೊಂದಿಗಿನ ದಿನಗಳನ್ನು ನೆನಪಿಸಿಕೊಳ್ಳುವ ಸೌಭಾಗ್ಯ.
ಕೆಲವರಿಗೆ ಅಜ್ಜಿಯ ಮನೆ ‘ಅಮರಾವತಿ’ಯಾದರೆ, ಮತ್ತೊಬ್ಬರಿಗೆ ‘ನೆನಪುಗಳ ಖಜಾನೆ’. ಮಗದೊಬ್ಬರಿಗೆ ‘ಬನವಾಸಿ ದೇಶಂ’. ಅಜ್ಜಿ ಕಟ್ಟಿಕೊಟ್ಟ ‘ಕೃಷಿಬುತ್ತಿ’ಯನ್ನು ನಮ್ಮೊಂದಿಗೆ ಹಂಚಿಕೊಂಡವರೂ ಇಲ್ಲುಂಟು. ಒಟ್ಟಿನಲ್ಲಿ ಅಜ್ಜಿಯ ಮನೆ ಎಂಬುದು ಸವಿನೆನಪುಗಳ ರಂಗಶಾಲೆ.
– ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ
– ಶಾರದಾ ವಿ. ಮೂರ್ತಿ, ಬೆಂಗಳೂರು