ಪ್ರಚಲಿತ
–ಎಸ್.ಆರ್.ಆರ್.
ಒಂದು ದೇಶಕ್ಕೆ ಎರಗಬಹುದಾದ ಅತ್ಯಂತ ಘೋರ ವಿಪತ್ತೆಂದರೆ ಅರಾಜಕತೆ – ಎಂದಿವೆ ಸ್ಮೃತಿಗಳು. ಅರಾಜಕತೆ ಎಂದರೆ ರಾಜನಿಲ್ಲದ ಸ್ಥಿತಿ ಎಂದಷ್ಟೆ ಅರ್ಥವಲ್ಲ. ವ್ಯವಸ್ಥಾಹೀನತೆಯನ್ನು ಅರಾಜಕತೆ ಎಂದು ಕರೆದಿದ್ದಾರೆ. ವ್ಯವಸ್ಥಾಬದ್ಧತೆಯು ಸ್ಥಾವರಜಂಗಮಾದಿ ಇಡೀ ವಿಶ್ವಕ್ಕೇ ತಳಹದಿಯಾಗಿದೆ. ಗಾಳಿ ಬೆಳಕು ಬೆಂಕಿ ಮೊದಲಾದವೂ ಮೂಲವ್ಯವಸ್ಥೆಯೊಂದಕ್ಕೆ ಅಧೀನಗಳು – ಎಂದಿದೆ ಶ್ರುತಿ. ವ್ಯವಸ್ಥೆ ಇರದಿದ್ದಲ್ಲಿ ಹೇಗೆ ಲೋಕಜೀವನವೇ ದುಃಸಾಧ್ಯವಾಗುತ್ತದೆಂಬುದನ್ನು ರಾಮಾಯಣದ ಈ ಪ್ರಸಿದ್ಧ ಉಕ್ತಿಯೂ ಸೂಚಿಸಿದೆ:
ನಾರಾಜಕೇ ಜನಪದೇ
ಸ್ವಕಂ ಭವತಿ ಕಸ್ಯಚಿತ್ |
ಮತ್ಸ್ಯಾ ಇವ ನರಾ ನಿತ್ಯಂ
ಭಕ್ಷಯಂತಿ ಪರಸ್ಪರಮ್||
“ರಾಜ (=ಸುವ್ಯವಸ್ಥೆ) ಇಲ್ಲದ ದೇಶದಲ್ಲಿ ಯಾವ ಪದಾರ್ಥ ಯಾರಿಗೆ ಸೇರಿದ್ದು ಎಂಬ ಪ್ರಾಥಮಿಕ ನಿಶ್ಚಯವೂ ಇರುವುದಿಲ್ಲ. ದೊಡ್ಡ ಮೀನು ಚಿಕ್ಕ ಮೀನನ್ನು ಕಬಳಿಸುವಂತೆ ಜನರು ಒಬ್ಬರಿಗೊಬ್ಬರು ಕಂಟಕವಾಗಿಬಿಡುತ್ತಾರೆ.’’
ವ್ಯವಸ್ಥೆಯ ಅನಿವಾರ್ಯತೆಯ ತತ್ತ್ವದ್ದೇ ಇನ್ನೊಂದು ಮುಖ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬುದು. ಇಲ್ಲಿ ಧರ್ಮ ಎಂಬ ಮಾತಿಗೆ ವಿಸ್ತೃತ ಅರ್ಥವಿದೆ; ದೈವಿಕತೆಗೆ ಅನುಗುಣವಾದ ವರ್ತನೆ ಎಂದಷ್ಟೆ ಅಲ್ಲ. ಯಾವುದೇ ವ್ಯವಸ್ಥೆಯಿಂದ ನಮಗೆ ಪರಮಲಾಭವಾಗಬೇಕಾದರೆ ನಾವು ಅದನ್ನು ಗೌರವಿಸಿ ರಕ್ಷಿಸಬೇಕು. ಧರ್ಮ ಅಥವಾ ವ್ಯವಸ್ಥೆಗೆ ರಕ್ಷಣಸಾಮಥ್ರ್ಯ ಏರ್ಪಡುವುದು ನಮ್ಮ ಸದ್ವರ್ತನೆ-ಅನುಶಾಸನದ ಮೂಲಕ ಅದರಲ್ಲಿ ಶಕ್ತಿಸಂಚಯವಾಗುವುದರಿಂದ. ಈ ಮೂಲಭೂತ ತತ್ತ್ವದಲ್ಲಿ ದುಗ್ರಾಹ್ಯತೆಯೇನಿಲ್ಲ. ಈಗಿನ ಸಿವಿಲ್/ಕ್ರಿಮಿನಲ್ ಕಾನೂನುಗಳು ನಿರಪವಾದವಾಗಿ ಸಮಸ್ತರಿಗೂ ಅನ್ವಯವಾಗುವ ಕಾರಣದಿಂದಲೇ ಅಲ್ಲವೆ ಎಲ್ಲರೂ ನೆಮ್ಮದಿಯಿಂದಿರಲು ಸಾಧ್ಯವಾಗಿರುವುದು?
* **
ಈ ಸಾರ್ವತ್ರಿಕ ನಿಯಮದಿಂದ ರಾಜಕೀಯವೂ ಹೊರತಾಗಿಲ್ಲ. ಆಧುನಿಕ ಯುಗದಲ್ಲಿ ಸಂಸದೀಯ ಪ್ರಜಾಪ್ರಭುತ್ವವು ರಾಜ್ಯನಿರ್ವಹಣೆಯ ಶ್ರೇಷ್ಠಮಾರ್ಗವೆಂದು ಸಭ್ಯಜಗತ್ತೆಲ್ಲ ಅಂಗೀಕರಿಸಿದೆ. ಈ ರಾಜ್ಯವಿನ್ಯಾಸದಿಂದ ಜನಹಿತಸಾಧನೆಯಾಗಬೇಕಾದರೆ ಅದನ್ನು ಎಲ್ಲರೂ ಗೌರವಿಸಬೇಕು; ಅದಕ್ಕೆ ಭಂಗ ತರಬಾರದು. ಅದು ತುಂಬಾ ಬೆಲೆಯುಳ್ಳದ್ದು. ಈ ರಾಜ್ಯಪದ್ಧತಿಯಲ್ಲಿ ಅಧಿಕಾರವು ಶಾಶ್ವತವಲ್ಲ, ಅದು ಬದಲಾಗುತ್ತಿರುತ್ತದೆ. ಶಾಶ್ವತವಾದದ್ದು ವ್ಯವಸ್ಥೆ ಮಾತ್ರ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸರ್ಕಾರಗಳೂ ಪ್ರಜೆಗಳೂ ನಿಯಮಪಾಲನೆ ಮಾಡಬೇಕಾದುದು ಕಡ್ಡಾಯ. ವ್ಯವಸ್ಥಾನಿಬದ್ಧತೆಯೇ ಸರ್ವಸಂಕ್ಷೇಮದ ಮೂಲ. ಕಳೆದ ಏಳು ದಶಕಗಳಿಂದ ಈ ಆಧಾರದ ಮೇಲೆಯೇ ನಮ್ಮ ಗಣರಾಜ್ಯ ನಡೆದಿರುವುದು.
ಹೀಗೆಂದರೆ ರಾಜ್ಯಾಂಗ, ಶಾಸಕಾಂಗ, ಕಾರ್ಯಾಂಗ – ಈ ಮೂರು ಅಂಗಗಳ ನಡುವೆ ಘರ್ಷಣೆ ನಡೆದಿಲ್ಲವೆಂದಲ್ಲ. ವಿರಳವಾಗಿ ಒಮ್ಮೊಮ್ಮೆ ಹಾಗೆ ಆಗಿರುವುದುಂಟು. ಕೇಂದ್ರದಲ್ಲಿ ಪ್ರಮುಖವಾಗಿರುವ ಪಕ್ಷದ ಸರ್ಕಾರಗಳೇ ಎಲ್ಲ ರಾಜ್ಯಗಳಲ್ಲಿಯೂ ಇರಬೇಕು ಎಂಬ ಆಶಯದ ಪ್ರಯಾಸಗಳು ನೆಹರು-ಇಂದಿರಾಗಾಂಧಿ ಕಾಲದಲ್ಲಿಯೆ ನಡೆದಿದ್ದವು. ಇಂದಿರಾಗಾಂಧಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿತನವನ್ನು ಅಲಕ್ಷಿಸಿ ತಮಗನುಕೂಲರಾಗಿದ್ದ ಕಿರಿಯ ನ್ಯಾಯಾಧೀಶರನ್ನು ಸರ್ವೋಚ್ಚರನ್ನಾಗಿ ನೇಮಿಸಿದರು; ಸಂಸತ್ತಿನಲ್ಲಿ ತಮಗಿದ್ದ ಬಹುಮತದ ದುರ್ಬಳಕೆ ಮಾಡಿ ಸಂವಿಧಾನಕ್ಕೆ ತರ್ಕಹೀನ ತಿದ್ದುಪಡಿಗಳನ್ನು ಮಾಡಿಸಿದರು. ಇಂತಹ ವಿಕೃತಿಗಳು ನಡೆದಲ್ಲಿ ಅನಂತರದಲ್ಲಿ ಬೇರೊಂದು ಧಾರೆಯ ಸರ್ಕಾರ ಪದಾಧಿಷ್ಠಿತವಾದಾಗ ಹಿಂದಿನ ಕ್ರಮಗಳನ್ನು ಅನೂರ್ಜಿತಗೊಳಿಸುವುದಾಗುತ್ತದೆ. ಸಮರ್ಥನೆಯಿಲ್ಲದೆ ರಾಜ್ಯವೊಂದರ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರುವಂತಹ ಕ್ರಮಗಳಿಗೆ ಈಗಿನ ರಾಷ್ಟ್ರ ಪರಿಸರದಲ್ಲಿ ಆಸ್ಪದ ತೀರಾ ಕಡಮೆ.
***
ಚುನಾವಣೆಯ ಪ್ರಕ್ರಿಯೆಯಲ್ಲಿ ಅನುಶಾಸನದ ಕೊರತೆಯಿದ್ದಾಗ ದಕ್ಷ ಕ್ರಮಗಳ ಮೂಲಕ ದಂತಕಥೆಯೇ ಆದ ಆಯುಕ್ತ ಟಿ.ಎನ್. ಶೇಷನ್ ಸಾಂವಿಧಾನಿಕತೆಗೆ ಗೌರವ ತಂದಿತ್ತರು. ಅಲ್ಲಿಂದೀಚೆಗೆ ಚುನಾವಣೆಯ ಪ್ರಚಾರ ಕಾಲದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವ ಸಾಹಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿರುವುದು ತೀರಾ ವಿರಳ. ಚುನಾವಣೆಯ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಬಲ ರಾಜಕೀಯ ಪಕ್ಷಗಳೂ ಉತ್ಸುಕತೆ ತೋರಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ – ತಮ್ಮ ಸ್ವಚ್ಛಂದತೆಗೆ ಕಡಿವಾಣ ಬಿದ್ದಾಗಲೂ ರಾಜಕೀಯ ಪಕ್ಷಗಳಾವವೂ ಶೇಷನ್‍ರ ಬಗೆಗೆ ವೈಯಕ್ತಿಕ ಟೀಕೆ ಮಾಡಲಿಲ್ಲ. ರಾಜ್ಯಾಂಗವು ನಿರೀಕ್ಷಿಸುವ ಸಭ್ಯತೆ ಇದೇ; ಪ್ರಜಾಪ್ರಭುತ್ವವನ್ನು ದೃಢಿಷ್ಠಗೊಳಿಸಬಲ್ಲದ್ದು ಈ ಶಿಷ್ಟತೆಯೇ.
ಈಗ್ಗೆ ಹಿಂದೆ ಸರ್ವೋಚ್ಚ ನ್ಯಾಯಾಲಯದ ಎಷ್ಟೋ ತೀರ್ಪುಗಳು ಆರೂಢಸರ್ಕಾರಕ್ಕೆ ವ್ಯತಿರಿಕ್ತವಾಗಿವೆ. ಆದರೆ ಯಾರೂ ನ್ಯಾಯಾಲಯವನ್ನಾಗಲಿ ನ್ಯಾಯಾಧೀಶರುಗಳನ್ನಾಗಲಿ ಟೀಕಿಸಲಿಲ್ಲ. ಏಳು ದಶಕಗಳ ತರುವಾಯವೂ ಸಂಸದೀಯ ಪ್ರಜಾಪ್ರಭುತ್ವ ಭಗ್ನಗೊಳ್ಳದೆ ಮುಂದುವರಿದಿರುವುದು (ಕೆಲವು ಅಪವಾದಾತ್ಮಕ ಪ್ರಕರಣಗಳನ್ನು ಹೊರತುಪಡಿಸಿ) ಒಟ್ಟಾರೆ ಶಿಷ್ಟತೆಯ ಪಾಲನೆ ಆಗಿರುವುದರಿಂದಲೇ.
ಈಚಿನ ದಿನಗಳಲ್ಲಿ ಶಿಷ್ಟತೆಯನ್ನು ಧಿಕ್ಕರಿಸುವ ರೀತಿಯ ಕೆಲವು ಬೆಳವಣಿಗೆಗಳಾಗಿರುವುದು ದೀರ್ಘಾವಧಿ ದೃಷ್ಟಿಯಿಂದ ಕಳವಳ ತರುತ್ತದೆ. ನಿದರ್ಶನಾರ್ಥ ಎರಡು ವಿದ್ಯಮಾನಗಳನ್ನು ನೆನೆಯಬಹುದು.
ರಾಷ್ಟ್ರಾಧ್ಯಕ್ಷರು, ರಾಷ್ಟ್ರ ಉಪಾಧ್ಯಕ್ಷರು, ಪ್ರಧಾನಮಂತ್ರಿ, ನ್ಯಾಯಾಧೀಶರುಗಳು – ಇವೇ ಮೊದಲಾದ ಸಮುನ್ನತ ಸ್ಥಾನಗಳಿಗೆ ಪ್ರಜೆಗಳೆಲ್ಲರ ಗೌರವ ಸಲ್ಲುತ್ತದೆ. ಆ ಸ್ಥಾನದಲ್ಲಿರುವ ವ್ಯಕ್ತಿ ಯಾರೆಂಬುದು ಅಪ್ರಸ್ತುತ. ಗೌರವ ಕಡ್ಡಾಯವಾಗಿ ಸಲ್ಲಲೇಬೇಕಾದ್ದು ಆ ಸ್ಥಾನಗಳಿಗೆ. ಅವಕ್ಕಿಂತ ಮೇಲೆ ಯಾವುದೇ ಪರಾಮರ್ಶನ ಸ್ಥಾನ ಇಲ್ಲವೆಂಬ ವ್ಯಾವಹಾರಿಕತೆಯೂ ಇದೆ. ಆ ಅತ್ಯುನ್ನತ ಅಧಿಕಾರಸ್ಥಾನಗಳನ್ನೇ ಅಗ್ಗಗೊಳಿಸಿದಲ್ಲಿ ಅರಾಜಕತೆಗಷ್ಟೆ ದಾರಿಯಾದೀತು. ಹಾಗೆ ಆದಲ್ಲಿ ಸ್ವಯಂ ಆ ಟೀಕಾಕಾರರೂ ವಿನಾಶಗೊಳ್ಳುತ್ತಾರೆ.
***
ಇತ್ತೀಚಿನ ಒಂದು ದುರ್ಘಟನೆ. ಸಂಸತ್ತು ದೇಶದ ಘನಿಷ್ಠ ಗಂಭೀರ ವೇದಿಕೆ. ಅದರಲ್ಲಿಯೂ ಹಿರಿಯರಿಂದಲೂ ಅನುಭವಿಗಳಿಂದಲೂ ಕೂಡಿದ ರಾಜ್ಯಸಭೆಯು ಲೋಕಸಭೆಗಿಂತಲೂ ಹೆಚ್ಚು ಗೌರವನೀಯವೆಂದು ಗಣನೆಯಿದೆ. ಅಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಈಚೆಗೆ ನಡೆದ ಘಟನೆ ಸಾಂಸದರೆಲ್ಲರೂ ತಲೆತಗ್ಗಿಸುವಂತೆ ಮಾಡಿತು. ಆಂಧ್ರಪ್ರದೇಶದ ವಿಜಯಸಾಯಿರೆಡ್ಡಿ ಎಂಬ ಸಂಸತ್ಸದಸ್ಯರು ವೆಂಕಯ್ಯನಾಯುಡು ಅವರ ಬಗೆಗೆ ವೈಯಕ್ತಿಕ ನೆಲೆಯಲ್ಲಿ ಮನಬಂದಂತೆ ಅತಿಹೀನ ಅಸಭ್ಯ ಭಾಷೆಯಲ್ಲಿ ಅಸಂಬದ್ಧವಾಗಿ ಮಾತನಾಡಿದುದು ಅಲ್ಲಿದ್ದವರಿಗೆ ಅಚ್ಚರಿಯನ್ನೂ ಹೇಸಿಗೆಯನ್ನೂ ತಂದಿತು. ಮೊತ್ತ ಮೊದಲನೆಯದಾಗಿ ವೆಂಕಯ್ಯನಾಯುಡು ರಾಜ್ಯಸಭೆಯ ಸಭಾಧ್ಯಕ್ಷರು. ಅಲ್ಲದೆ ಅವರು ಉಪ-ರಾಷ್ಟ್ರಪತಿಯೂ ಆಗಿದ್ದಾರೆ. ಅಂತಹವರ ಬಗ್ಗೆ ಸಂಸತ್ಸದಸ್ಯರೊಬ್ಬರು ಸಭೆಯಲ್ಲಿ ತೀರಾ ಅಸಭ್ಯ ಭಾಷೆಯಲ್ಲಿ ಜಲ್ಪಿಸಿದುದು ಅಕಲ್ಪನೀಯವಾಗಿತ್ತು; ರಾಜ್ಯಸಭೆಯ ಘನತೆಗೇ ಕುಂದು ತಂದಿತ್ತು.
ಯಾವುದೊ ವಿವಾದಾಂಶಗಳಿದ್ದಲ್ಲಿ ಅವುಗಳ ಪರ್ಯಾಲೋಚನೆಗೆ ವಿಹಿತ ಮಾರ್ಗಗಳೂ ವಿಧಾನಗಳೂ ಇದ್ದೇ ಇವೆ. ಈ ಪ್ರಸಂಗದಲ್ಲಿ ಅಂತಹ ಯಾವುದೇ ತಾತ್ತ್ವಿಕ ಅಂಶಗಳಿರದೆ ಬರಿಯ ವ್ಯಕ್ತಿನಿಂದನೆಯೇ ತುಂಬಿತ್ತು. ಇದು ಅಕ್ಷಮ್ಯ.
ಆ ಅಕಾಂಡತಾಂಡವವನ್ನು ಅಧಿಕೃತ ದಸ್ತಾವೇಜಿನಿಂದ ಉಚ್ಚಾಟನೆ ಮಾಡಬಹುದು. ಅದೆಲ್ಲ ಬೇರೆ ವಿಷಯ. ಆದರೆ ಜನಪ್ರತಿನಿಧಿಗಳೆನಿಸಿದವರಿಗೆ ಹೊಣೆಗಾರಿಕೆ ಇರಬೇಡವೆ?
ಆ ಸದಸ್ಯರು ಪ್ರತಿನಿಧಿಸುವ ಜಗನ್ಮೋಹನರೆಡ್ಡಿ ಪಕ್ಷದವರು ಆಂಧ್ರಪ್ರದೇಶದಲ್ಲಿ ನ್ಯಾಯಾಧೀಶರುಗಳನ್ನೇ ಟೀಕಿಸುವ ಧಾಷ್ಟ್ರ್ಯ ತೋರಿದ್ದಾರೆ.
ತೀರಾ ಈಚೆಗೆ (ಫೆಬ್ರುವರಿ 2021) ಶಿಮ್ಲಾದಲ್ಲಿ ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ ಐವರು ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಮೇಲೆಯೆ ಹಲ್ಲೆ ನಡೆಸಿದುದರಿಂದ ಸಭೆಯಿಂದ ಅಮಾನತುಗೊಂಡಿದ್ದಾರೆ.
ಸಾರ್ವಜನಿಕ ಜೀವನಕ್ಕೆ ಬರುವವರು ಮೊತ್ತಮೊದಲು ಅರಿತುಕೊಳ್ಳಬೇಕಾದದ್ದು ತಮ್ಮ ‘ಲಕ್ಷ್ಮಣರೇಖೆ’ ಯನ್ನು, ಅಲ್ಲವೆ?
***
ಸಂಸದೀಯ ಪ್ರಜಾಪ್ರಭುತ್ವ ಮರ್ಯಾದೆಯನ್ನು ಕುರಿತು ಯೋಚಿಸುವಾಗ ಈಚಿನ ದಿನಗಳ ಹಲವು ವಿದ್ಯಮಾನಗಳು ಕಳವಳ ತರುತ್ತವೆ. ಸಂಕ್ಷೇಪವಾಗಿ ಹೇಳಬೇಕೆಂದರೆ ಸರ್ವರಿಗೂ ಅನ್ವಯಿಸುವ ಸಂಹಿತೆಯೆಂದು ರಾಜ್ಯಾಂಗವನ್ನು ಗುರುತಿಸುವುದಕ್ಕೆ ಬದಲಾಗಿ ಸ್ವಪಕ್ಷಾಸಕ್ತಿಯ ದೃಷ್ಟಿಯಿಂದಷ್ಟೆ ಕಟಾಕ್ಷಿಸಲಾಗುತ್ತಿದೆ. ಅಧಿಕಾರಾರೂಢ ಸರ್ಕಾರವು ಎಂದೂ ತಪ್ಪು ಮಾಡುವುದಿಲ್ಲವೆಂದು ಯಾರೂ ಹೇಳರು. ಸರ್ಕಾರ ದಾರಿತಪ್ಪಿದಾಗ ಎಚ್ಚರಿಸುವುದಕ್ಕಾಗಿಯೆ ಸಂಸತ್ತು ಇರುವುದು. ಆದರೆ ಟೀಕೆಗಳಿಗೆ ಸಾರ್ಥಕತೆ ಬರಬೇಕಾದರೆ ಅವು ವಸ್ತುನಿಷ್ಠವೂ ಆಧಾರಸಹಿತವೂ ರಚನಾತ್ಮಕವೂ ಆಗಿರಬೇಕಾಗುತ್ತದೆ. ಆಳುವ ಪಕ್ಷಕ್ಕೆ ಅನ್ವಯವಾಗುವ ವೈಧಾನಿಕತೆಯೇ ವಿರೋಧಪಕ್ಷಗಳಿಗೂ ಅನ್ವಯವಾಗುತ್ತದೆ. ಅವು ಹೊಣೆಗಾರಿಕೆ ಮರೆತು ವರ್ತಿಸಿದಲ್ಲಿ ಅದು ಮರ್ಯಾದಾತಿಕ್ರಮ ಮಾತ್ರವಲ್ಲದೆ ಅವರನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡಿದ ಜನಸಮುದಾಯ ಅವರಲ್ಲಿರಿಸಿದ ವಿಶ್ವಾಸಕ್ಕೂ ದ್ರೋಹಬಗೆದಂತೆ ಆಗುತ್ತದೆ.
ಕಳೆದ ಹತ್ತಿರಹತ್ತಿರ ಏಳು ವರ್ಷಗಳುದ್ದಕ್ಕೂ ವಿಪಕ್ಷಗಳು ಬಿಡುವಿಲ್ಲದೆ ಭಾಜಪಾ ನೇತೃತ್ವದ ಎನ್.ಡಿ.ಎ. ಸರ್ಕಾರವನ್ನು ಟೀಕಿಸಿಕೊಂಡು ಬಂದಿವೆ. ಇದು ಯಾವುದೊ ಅನ್ಯಾಯಕ್ಕಾಗಿಯೊ ಯಾವುದೊ ಧೋರಣೆಯ ಪ್ರಾಮಾದಿಕತೆಗಾಗಿಯೊ ಅಲ್ಲ. ಅವುಗಳ ಆಕ್ರೋಶವೆಲ್ಲ ನರೇಂದ್ರಮೋದಿ ಎಂಬ ವ್ಯಕ್ತಿಗೆ ವಿರುದ್ಧವಾಗಿ. ಮೋದಿಸರ್ಕಾರ-ಸಂಚಾಲಿತ ಸುಧಾರಣೆಗಳನ್ನು ದೇಶವೆಲ್ಲ ಮೆಚ್ಚಿರುವುದರಿಂದಲೇ ಮೋದಿಯವರ ವರ್ಚಸ್ಸು ಹೆಚ್ಚುತ್ತ ಸಾಗಿರುವುದು. ಇದೇ ವಿಪಕ್ಷಗಳಿಗೆ ಕಣ್ಣಕಿಸುರಾಗಿರುವುದು. ಈ ಅಸಹಾಯತೆಯಿಂದಲೇ ವಿಪಕ್ಷಗಳು ಅಸೂಯೆಯಿಂದ ಮೈ ಪರಚಿಕೊಳ್ಳುತ್ತಿರುವುದು. ಮೋದಿ ಸರ್ವೋತ್ತಮರೆಂದಾಗಲಿ ಅವರ ನೂರಕ್ಕೆ ನೂರರಷ್ಟೂ ಧೋರಣೆಗಳು ದೋಷಾತೀತಗಳೆಂದಾಗಲಿ ಯಾರೂ ಭಾವಿಸಿಲ್ಲ. ಆದರೆ ಅವರ ಪ್ರಯಾಸಗಳ ಹಿಂದಿನ ಪ್ರಾಮಾಣಿಕತೆ ಹಗಲಿನಷ್ಟು ಸ್ಪಷ್ಟವಿದೆ. ಇದೂ ವಿಪಕ್ಷಗಳ ಅಸಮಾಧಾನಕ್ಕೆ ಒಂದು ಕಾರಣ: ಹಿಂದಿನ ಕಾಂಗ್ರೆಸ್ ಹಯಾಮಿನಲ್ಲಿದ್ದಂತಹ ಸ್ವಲಾಭ ಸಾಧನಾವಕಾಶಗಳು ತಪ್ಪಿಹೋಗಿವೆಯೆಂದು. (ಪಂಜಾಬಿನ ಜಾಠರೇ ರೈತಪ್ರತಿಭಟನೆಗಳ ಮುಂಚೂಣಿಯಲ್ಲಿರುವುದು ಇಂತಹದೇ ಹಿನ್ನೆಲೆಯಲ್ಲಿ.)
ಮುಖ್ಯ ವಿಷಯವೆಂದರೆ – ಹಗಲುರಾತ್ರಿ ‘ವಿರೋಧಕ್ಕಾಗಿ ವಿರೋಧ’ ಎಂಬಂತೆ ಸರ್ಕಾರದ ಒಂದೊಂದು ಕ್ರಮವನ್ನೂ ನಿಷ್ಕಾರಣವಾಗಿ ವ್ಯತಿರೇಕಿಸುತ್ತಿರುವುದೇ ತಮ್ಮ ಏಕಾಂಶ ಕರ್ತವ್ಯ ಎಂಬ (ಅಂತರಂಗದಲ್ಲಿ ತಾವೂ ನಂಬಿರದ) ವಿಪಕ್ಷಗಳ ವರ್ತನೆ ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು ಹಾಸ್ಯಾಸ್ಪದವಾಗುತ್ತ ಸಾಗಿದೆ. ಇದಾವುದೂ ಪ್ರಾಮಾಣಿಕ ಅಭಿಪ್ರಾಯಭೇದ-ಆಧಾರಿತವಲ್ಲ. ಈ ವ್ಯರ್ಥ ಪ್ರಯಾಸಗಳನ್ನು ‘manufactured dissent’ ಎಂದು ಅನುಭವಿ ಚಿಂತಕರೊಬ್ಬರು ವ್ಯಂಗ್ಯವಾಗಿ ಕರೆದಿರುವುದು ಉಚಿತವೇ ಆಗಿದೆ. ದೆಹಲಿಯಲ್ಲಿ, ಕರ್ನಾಟಕದಲ್ಲಿ – ಎಲ್ಲೆಡೆ ಇದೇ ಕಥೆ.
ಈ ಅನುತ್ಪಾದಕ ಅಸಹ್ಯಗಳನ್ನೆಲ್ಲ ಸ್ಮರಿಸಿದುದರ ಉದ್ದೇಶ – ಹೊಣೆಗಾರಿಕೆಗೆ ತಿಲಾಂಜಲಿ ನೀಡಿದ ಸ್ವಚ್ಛಂದ ವರ್ತನೆಗಳಿಂದ ಸಾಧಿಸಬಹುದಾದ್ದು ಸಾರ್ವಜನಿಕ ಜೀವನವನ್ನು ಇನ್ನಷ್ಟು ಅಪಮೌಲ್ಯಗೊಳಿಸುವುದಷ್ಟೆ.
ಯೋ ಧ್ರುವಾಣಿ ಪರಿತ್ಯಜ್ಯ
ಅಧ್ರುವಾಣಿ ನಿಷೇವತೇ |
ಧ್ರುವಾಣಿ ತಸ್ಯ ನಶ್ಯಂತಿ
ಅಧ್ರುವಂ ನಷ್ಟಮೇವ ಚ||
– ಪಂಚತಂತ್ರ
“ಯಾರು ಸ್ಥಿರವಾದವುಗಳನ್ನು ತ್ಯಜಿಸಿ ಅಸ್ಥಿರವಾದವುಗಳ ಬೆನ್ನುಹತ್ತುತ್ತಾನೋ ಅಂತಹವನಿಗೆ ಸ್ಥಿರವಾದವುಗಳಾವವೂ ದಕ್ಕುವುದಿಲ್ಲ. ಅಸ್ಥಿರವಾದುದಂತೂ ಮೊದಲೇ ಕೈಬಿಟ್ಟು ಹೋಗಿದೆ.”
ಈ ಪ್ರಕೃತಿತತ್ತ್ವವನ್ನು ಮನವರಿಕೆ ಮಾಡಿಸುವುದಕ್ಕಾಗಿಯೆ ಹಳೆಯ ಸಾಮತಿ ಹೊರಟಿರುವುದು: ಆಕಾಶದಲ್ಲಿ ತೇಲುತ್ತಿರುವ ಮೋಡಗಳತ್ತ ನೋಟ ನೆಟ್ಟು ನೆಲದ ಮೇಲಿನ ಸೇದುವ ಬಾವಿಯನ್ನು ಕೆಡಿಸಿಹಾಕಬಾರದು.