ಪ್ರಬಂಧ
ಸತ್ಯ ಎಂದರೆ ಬೆಂಕಿ ಎಂದು ಜನ ನಂಬಿದ್ದ ಕಾಲವದು. ಗ್ರಾಮೀಣರೇ ಆರಿಸಿದ ಐವರು ಸದಸ್ಯರ ಸಮಿತಿಯೇ ಪಂಚಾಯತಿ. ಅದು ಪ್ರಜಾತಂತ್ರ ವ್ಯವಸ್ಥೆಯ ಮೊದಲ ಮಾದರಿ.
ಹರಟೆ ಎಂಬ ಒಣಮಾತಿನ, ಕಾಲಹರಣದ ಪ್ರಕ್ರಿಯೆಯನ್ನು ಒಮ್ಮೆ ನೆನೆದರೆ ಸಾಕು, ಗ್ರಾಮೀಣ ಬದುಕಿನಲ್ಲಿ ಬಾಲ್ಯವನ್ನು ಕಳೆದ ನನ್ನ ಕಣ್ಮುಂದೆ ನಿಲ್ಲುವುದು ಹಳ್ಳಿಯ ಅರಳೀಕಟ್ಟೆ. ಅದನ್ನು ಹರಟೆಕಟ್ಟೆ ಎಂದರೂ ಸರಿಯೇ. ಚಿಂತಕರ ಚಾವಡಿಯು ಒಳಾಂಗಣದಲ್ಲಿ ಏರ್ಪಟ್ಟರೆ, ಹರಟೆಕಟ್ಟೆ ಹೊರಾಂಗಣದ ಸ್ವಚ್ಛಂದ ವಾತಾವರಣದಲ್ಲಿ ನಡೆಯುತ್ತದೆ. ಅರಳೀಕಟ್ಟೆಯಲ್ಲಿ ಚರ್ಚೆಗೆ ಬರುವ ವಿಷಯಗಳು ಬಹುತೇಕ ಊರಿನ ಆಗುಹೋಗುಗಳ ಕುರಿತೇ ಆಗಿರುತ್ತದೆ ಎಂದು ಹೇಳಬಹುದು.
ಕೆಲವೊಮ್ಮೆ ಊರ ಗಡಿ ದಾಟಿ ಪಕ್ಕದ ಊರುಗಳ ಉಸಾಬರಿಗೂ ಹೋಗುವುದಿರುತ್ತದೆ. ಅಲ್ಲಿ ಯಾವುದಾದರೊಂದು ಸಂಗತಿ ಕುರಿತ ಚರ್ಚೆಯಷ್ಟೆ ಇರುತ್ತದೆಯೇ ಹೊರತು ಅದಕ್ಕೆ ತಾರ್ಕಿಕ ಅಂತ್ಯ ಅಂತೇನೂ ಇರುವುದಿಲ್ಲ. ಆದರೂ ಹರಟೆಯ ನಡುವೆ ವ್ಯಂಗ್ಯ, ವಿಡಂಬನೆ, ಗಾದೆ, ಲೋಕೋಕ್ತಿಗಳೂ ತೇಲಿ ಬಂದಾವು. ಬಣ್ಣದ ಮಾತುಗಳು ಬೆರಗನ್ನೂ ಹುಟ್ಟಿಸಿಯಾವು. ನಿಗೂಢ ರಹಸ್ಯವನ್ನು ಭೇದಿಸುವ ಮಾರ್ಗೋಪಾಯಗಳೂ ಇಣುಕಿಯಾವು.
ಚಿಂತಕರ ಚಾವಡಿಯಲ್ಲಿ ವಿಷಯ ಮಂಡನೆ, ಸಮಸ್ಯೆಗಳ ಕುರಿತ ಚರ್ಚೆ, ಅಷ್ಟೇ ಅಲ್ಲದೆ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನೂ ಹುಡುಕಲಾಗುತ್ತದೆ. ನಮ್ಮ ದೇಶೀಯ ‘ಚಿಂತಕರ ಚಾವಡಿ’ ಆಂಗ್ಲರ ಪಾಲಾಗಿ ಅದು ‘ಥಿಂಕ್ ಟ್ಯಾಂಕ್’ ಆಗಿಬಿಟ್ಟಿತು. ಅಲ್ಲಿ ನೀರಿನ ತೊಟ್ಟಿ, ಹೊಂಡ, ಕೆರೆ ಏಕೆ ಬಂದವೋ! ಅದರ ಪ್ರಭಾವ ಎಂಬಂತೆ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ‘ಥಿಂಕ್ ಟ್ಯಾಂಕ್’ ಎಂಬ ಸಮಸ್ಯಾ ಪರಿಹಾರಕರ ತಂಡವಂತೂ ಇರುತ್ತದೆ.
‘ಊರಿಗೊಂದು ಹನುಮಪ್ಪನ ಗುಡಿ’ ಅಂತಾರಲ್ಲಾ, ಹಾಗೆ ಹಳ್ಳಿಗೊಂದು ಅರಳಿಕಟ್ಟೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಇದು ಭೂಮಿಮಟ್ಟದಿಂದ ನಾಲ್ಕಡಿಯಷ್ಟಾದರೂ ಎತ್ತರ ಇರುತ್ತದೆ. ಅಳತೆಕಲ್ಲು ಮಣ್ಣಿನಿಂದ ಕಟ್ಟಲ್ಪಟ್ಟು ಮೇಲೆ ಉದ್ದಕ್ಕೂ ಕಲ್ಲುಚಪ್ಪಡಿಯ ಹಾಸು ಇರುತ್ತದೆ, ಮಳೆಗಾಲದಲ್ಲಿ ಕಟ್ಟಡದ ಮೇಲ್ಭಾಗ ನೀರಿನಿಂದ ಕೊಚ್ಚಿ ಹೋಗಬಾರದು ಎಂಬ ಕಾರಣಕ್ಕಾಗಿ. ಆಯತಾಕಾರದ ಕಟ್ಟೆಯ ಮಧ್ಯದಲ್ಲಿ ಅದೆಷ್ಟೋ ವರ್ಷಗಳ ಹಿಂದೆ ಗಿಡವಾಗಿ ನೆಟ್ಟ ಅರಳೀಗಿಡ ನಾಲ್ಕಾರು ಆಳೆತ್ತರಕ್ಕೆ ಬೆಳೆದು, ರೆಂಬೆ ಕೊಂಬೆಗಳನ್ನು ಎಲ್ಲ ದಿಕ್ಕುಗಳಿಗೂ ಚಾಚಿ, ಕಟ್ಟೆಯ ಜಗತಿಯಾಚೆಗೂ ನೆರಳು ನೀಡುತ್ತಿರುತ್ತದೆ. ಮರದ ಅಸಂಖ್ಯಾತ ಎಲೆಗಳು ಗಾಳಿಗೆ ಪಟಪಟನೆಂದು ಆಡುವಾಗ ಹಾವು ಹೆಡೆ ಬಿಚ್ಚಿ ಆಡಿಸುತ್ತಿರುವುದು ನೆನಪಾಗುತ್ತದೆ.
ಕಟ್ಟೆಯ ಮೇಲಿನ ಅರಳೀಮರ ಎಂದೂ ಒಂಟಿಯಾಗಿರುವುದಿಲ್ಲ. ಅದರ ಪಾರಂಪರಿಕ ಸಂಗಾತಿ ಬೇವಿನ ಮರ. ಅರಳೀ ಮರ ಗಂಡೆಂದೂ ಬೇವಿನಮರ ಹೆಣ್ಣೆಂದೂ, ಅವೆರಡಕ್ಕೂ ಮದುವೆಯಾಗಿರುತ್ತದೆಂದು ಹಳ್ಳಿಯ ಮುಗ್ಧರು ಹೇಳುತ್ತಿದ್ದುದು ನೆನಪಿದೆ. ಮದುವೆಯಲ್ಲಿ ಹೆಣ್ಣು ಗಂಡುಗಳಿಗೆ ಅರಿಶಿನ, ಕುಂಕುಮ ಹಚ್ಚುತ್ತಾರಷ್ಟೆ. ಅದರಂತೆ ಇಲ್ಲಿ ಎರಡೂ ಮರಗಳ ಬುಡದ ಸುತ್ತಲೂ ಬಳಿಯಲಾಗಿರುವ ಬಿಳಿ(ಸುಣ್ಣ), ಕೆಂಪು (ಕೆಮ್ಮಣ್ಣು) ಬಣ್ಣದ ಪಟ್ಟೆಗಳು ದಾಂಪತ್ಯವನ್ನು ನೆನಪಿಸುತ್ತವೆ. ಇವೆರಡೂ ಮರಗಳು ಹಣ್ಣು ಬಿಟ್ಟಿರುವಾಗ ಕಾಗೆಗಳ ಬಳಗ ಅಲ್ಲಿ ಕಾ ಕಾ ಎಂದು ತನ್ನ ಬಂಧುಗಳನ್ನೂ ಕೂಗಿ ಕರೆದು ಸಂಭ್ರಮಿಸುತ್ತದೆ.
ಅರಳೀಹಣ್ಣಿನಲ್ಲಿ ಸಣ್ಣ ಸಣ್ಣ ಬೀಜಗಳೇ ತುಂಬಿದ್ದರೂ ಅದರ ಪಿಷ್ಟದಂಥ ತಿರುಳು ಹಾಗೂ ಸಿಪ್ಪೆ, ಸಿಹಿ ರುಚಿ ಹೊಂದಿರುತ್ತವೆ. ಕಾಗೆಗಳಂತೂ ಕೆಂಪನೆಯ ಹಣ್ಣುಗಳನ್ನು ಕುಕ್ಕಿ ಕುಕ್ಕಿ ತಿನ್ನುವುದಲ್ಲದೆ ಕಚ್ಚಿಕೊಂಡು ದೂರಕ್ಕೂ ಹಾರಿ ಹೋಗಿ ಮನೆಯ ಚಾವಣಿ ಮೇಲೆ ತಿಂದಿದ್ದರಲ್ಲಿ ಒಂದಿಷ್ಟನ್ನು ಉಳಿಸಿರುತ್ತವೆ. ಮಾಳಿಗೆ, ಗೋಡೆ, ಕಿಟಕಿಗಳಲ್ಲಿ ಒಂದಿಷ್ಟು ತೇವಾಂಶ ಇದ್ದರೂ ಅಲ್ಲಿ ಬೀಜಾಂಕುರವಾಗಿ ಗಿಡ ಹುಟ್ಟುತ್ತದೆ. ಬೇವಿನಹಣ್ಣು ಅರಳೀಹಣ್ಣಿಗಿಂತ ರುಚಿ ಹೆಚ್ಚು ಎಂಬುದು ತಿಂದವರಿಗಷ್ಟೆ ತಿಳಿದೀತು. ಹಣ್ಣಿನಲ್ಲಿ ಒಂದೇ ಒಂದು ದಪ್ಪ ಬೀಜ, ಅದರ ಸುತ್ತಲೂ ಹಳದಿ ಬಣ್ಣದ ಪಿಷ್ಟವಿರುತ್ತದೆ. ಜನಸಾಮಾನ್ಯರು ಅದನ್ನು ಕಣ್ಣಿನ ಪಿಸುರಿಗೆ ಹೋಲಿಸಿ ಅಸಹ್ಯದಿಂದ ತಿನ್ನದಂತೆ ಮಾಡುತ್ತಾರೆ. ಅರಳೀಹಣ್ಣಿನಂತೆ ಬೇವಿನಹಣ್ಣು ‘ಕಾಕವಾಹ’ದ ಮೂಲಕ ಬೀಜ ಪ್ರಸಾರಗೊಳ್ಳುವುದಿಲ್ಲ. ಬೇವಿನಹಣ್ಣನ್ನು ತಿನ್ನುವ ಕಾಗೆಯ ಕಣ್ಣು ಬಹಳ ಚುರುಕು. ಅದರಂತೆ ಆ ಹಣ್ಣನ್ನು ತಿನ್ನುವ ಮನುಷ್ಯರ ಕಣ್ಣೂ ಚುರುಕಾಗುವುದೇ? ಸಂಶೋಧನೆಗೆ ಒಳಪಡಿಸಬೇಕು.
ನಗರಪ್ರದೇಶಗಳಲ್ಲಿ ಸಕ್ಕರೆರೋಗಿಗಳ ಸಂಖ್ಯೆ ಹೆಚ್ಚು. ಅಂಥವರು ಕಹಿಯನ್ನು ಸೇವಿಸಿಯೇ ಸಿಹಿಯನ್ನು ಗೆಲ್ಲಬೇಕು. ವೈದ್ಯರು ಸಲಹೆ ಮಾಡುವಂತೆ ಬೇವಿನ ಚಿಗುರು, ಹಾಗಲಕಾಯಿ, ತೊಂಡೆಕಾಯಿ ಸೇವನೆಯು ಒಂದು ರಕ್ಷಣೋಪಾಯ. ಸೋಮೇಶ್ವರ ಶತಕದ ಒಂದು ಪದ್ಯದ ‘ಚಿಗುರೆಂದುಂ ಮೇಲೆ ಬೇವು ಸ್ವಾದವಹುದೇ..?’ ಎಂಬುದು ಸಿಹಿಮೂತ್ರ ರೋಗಿಗಳಿಗೆ ಪಥ್ಯವಾಗಲಾರದು. ನಮ್ಮ ಗ್ರಾಮೀಣರು ಅರಳೀಕಟ್ಟೆಯಲ್ಲಿರುವ ಬೇವಿನಮರದ ಗಾಳಿಯನ್ನು ಸೇವಿಸುವುದರಿಂದ ಅವರಿಗೆ ಸಕ್ಕರೆರೋಗ ಹತ್ತಿರವೂ ಸುಳಿಯದು.
ಅಶ್ವತ್ಥಪುರಾಣ
ಅರಳೀಮರ ಅಥವಾ ಅಶ್ವತ್ಥ ವೃಕ್ಷಕ್ಕೆ ದಿವ್ಯತೆಯಿದೆ. ಜನ ಅದರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ತ್ರಿಮೂರ್ತಿಗಳನ್ನು ಕಾಣುತ್ತಾರೆ. ಅದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತ ‘ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣರೂಪಿಣೇ, ಅಗ್ರತಃ ಶಿವರೂಪಾಯ, ವೃಕ್ಷರಾಜಾಯ ತೇ ನಮಃ’ ಎಂದು ಸ್ತುತಿಸುವರು. ನಮ್ಮ ಸನಾತನರ ನಂಬಿಕೆಯಂತೆ ಅಶ್ವತ್ಥ ವೃಕ್ಷ ಯಾನೆ ಅರಳಿಮರವು ‘ಮರಗಳ ರಾಜ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಶ್ವತ್ಥ ವೃಕ್ಷಕ್ಕೆ ವಿವಾಹಿತ ಹೆಣ್ಣು ಪ್ರದಕ್ಷಿಣೆ ಹಾಕಿದಲ್ಲಿ ಗರ್ಭ ಧರಿಸುತ್ತಾಳೆ ಎಂಬ ನಂಬಿಕೆಯಿದೆ. ಅದು ಸಿದ್ಧಿಸಿರುವ ಬಗ್ಗೆಯೂ ಗಾಳಿಮಾತುಗಳಿವೆ. ಅದು ನಿಜವಿರಲೂ ಸಾಧ್ಯವಿದೆ. ಅರಳೀಮರದ ಎಲೆಗಳು ಅಂಗೈಯಷ್ಟು ಅಗಲವಿರುತ್ತವಾದ ಕಾರಣ, ಅವುಗಳಿಂದ ಆಮ್ಲಜನಕವು ಬೇರೆ ಮರಗಳ ಎಲೆಗಿಂತಲೂ ಹೆಚ್ಚು ದೊರೆಯತ್ತದೆ. ಹಾಗಾಗಿ ಅದು ವೈಜ್ಞಾನಿಕವಾಗಿಯೂ ಸಮರ್ಥನೀಯ.
ವಿವಾಹಿತ ಹೆಣ್ಣೊಬ್ಬಳು ಸಂತಾನಾಪೇಕ್ಷೆಯಿಂದ ಅರಳಿಕಟ್ಟೆಯಲ್ಲಿ ಪ್ರದಕ್ಷಿಣೆ ಹಾಕುವಾಗ, ಜನರ ಕಾಕದೃಷ್ಟಿ ಬೀಳದಿರಲೆಂದೋ ಏನೋ, ಎರಡು ಮರಗಳ ನಡುವೆ ಮೂರಾದರೂ ನಾಗರಕಲ್ಲುಗಳು ಪ್ರತಿಷ್ಠಾಪನೆಗೊಂಡಿರುತ್ತವೆ. ಸುಮಂಗಲಿಯರು ಅರಿಶಿನ-ಕುಂಕುಮ-ಹೂ ಇರಿಸಿದ ತಟ್ಟೆಯೊಂದಿಗೆ ಹೋಗುತ್ತಾರೆಂದರೆ, ಅದನ್ನು ‘ನಾಗರಪೂಜೆಯ ಸಲುವಾಗಿ’ ಎಂದು ಭಾವಿಸಬಹುದಲ್ಲವೇ! ನಾಗರಚೌತಿ, ನಾಗಪಂಚಮಿ ದಿನಗಳಂದು ಇಲ್ಲಿನ ನಾಗರಕಲ್ಲಿಗೆ ಹಾಲೆರೆಯುವುದೂ ಉಂಟು. ಸಾಮಾನ್ಯದಿನಗಳಲ್ಲಿ ಜಲಾಭಿಷೇಕ ಮಾಡಿ ಅರಿಶಿನ-ಕುಂಕುಮವಿರಿಸಿ ಬರುವುದು ನಡೆಯುತ್ತದೆ. ಸಿದ್ದಾರ್ಥನೆಂಬ ರಾಜಪುತ್ರ ಬೋಧಿವೃಕ್ಷ(ಅರಳೀಮರ)ದ ಕೆಳಗೆ ಕುಳಿತು ತಪಸ್ಸು ಮಾಡಿಯೇ ಜ್ಞಾನ ಪಡೆದು ಗೌತಮಬುದ್ಧ ಎನಿಸಿದ್ದು! ಅದರ ನೆನಪಾಗಿ ಗಯಾದ ಬುದ್ಧ ದೇವಾಲಯದ ಆವರಣದಲ್ಲಿ ಹಳೆಯದೊಂದು ಅರಳೀಮರ ಇರುವುದನ್ನು ಇಂದಿಗೂ ನೋಡಬಹುದು.
ಭಾರತೀಯರಾದ ನಾವು ಮೂಲತಃ ಪ್ರಕೃತಿಯ ಆರಾಧಕರು. ಮರಗಳಲ್ಲೂ ದೇವರನ್ನು ಕಾಣುವ ಪರಂಪರೆ ನಮ್ಮದು. ಸಾಮಾನ್ಯವಾಗಿ ಯಾರೂ ಅರಳಿಮರವನ್ನು ಕಡಿಯುವುದಿಲ್ಲ. ಅದರಿಂದ ಒಣಗಿ ಉದುರಿದ ಕಟ್ಟಿಗೆಗಳನ್ನು ಹೋಮಕುಂಡದಲ್ಲಿ ಅಗ್ನಿ ಪ್ರತಿಷ್ಠಾಪನೆಗಾಗಿ ಬಳಸುತ್ತಾರೆ.
ಟೀವಿ ವಾಹಿನಿಗಳಲ್ಲಿ
ಒಂದು ಕನ್ನಡ ಟೀವಿ ವಾಹಿನಿಯಲ್ಲಿ ವಾರಕ್ಕೊಮ್ಮೆ ‘ಅರಳೀಕಟ್ಟೆ’ ಎಂಬ ಹೆಸರಿನ ಚರ್ಚಾ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ನನ್ನ ಸಾಹಿತಿಮಿತ್ರರೇ ಅದರ ನಿರೂಪಕರು. ಒಂದು ಸಂಜೆ ಅವರಿಂದ ನನಗೊಂದು ದೂರವಾಣಿ ಕರೆ ಬಂತು. ‘ನಾನು ಈ ವಾಹಿನಿಗಾಗಿ ಪ್ರತಿವಾರ ಅರಳೀಕಟ್ಟೆ ಕಾರ್ಯಕ್ರಮ ನಡೆಸಿಕೊಡುತ್ತಾ ಇದ್ದೇನೆ. ನಾಳೆ ಬೆಳಗ್ಗೆ ಎಂಟುಗಂಟೆಯೊಳಗೆ ಸ್ಟುಡಿಯೋಗೆ ಬನ್ನಿ. ಜೊತೆಯಲ್ಲೇ ಉಪಾಹಾರ ತೆಗೆದುಕೊಳ್ಳೋಣ’ ಎಂಬ ಆಹ್ವಾನ ಅದು. ಆ ಹೊತ್ತಿನ ಚರ್ಚಾ ವಿಷಯ ‘ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯ ಬಳಕೆ’ ಎಂಬುದು. ನಾನು ‘ಕಾರ್ಖಾನೆ ವಾತಾವರಣದಲ್ಲಿ ಕನ್ನಡ ಬಳಕೆ’ ಕುರಿತಂತೆ ಒಂದಿಷ್ಟು ಸಿದ್ಧತೆ ಮಾಡಿಕೊಂಡು ನಿಗದಿತ ವೇಳೆಗೆ ಅಲ್ಲಿಗೆ ಹೋದೆ. ಒಳಾಂಗಣದಲ್ಲಿ ಅರಳೀಕಟ್ಟೆಯ ಸೆಟ್ ಅಣಿಯಾಗಿತ್ತು. ಹಿಂಬದಿಗೆ ಅರಳಿ ಮರದ ಚಿತ್ರವಿದ್ದರೆ, ಅದರ ಮುಂಭಾಗದಲ್ಲಿ ಎರಡು ಪಾಶ್ರ್ವಗಳ ಜಗಲಿಕಟ್ಟೆಯಿತ್ತು. ಕಟ್ಟೆಯಲ್ಲಿ ಎಡಬದಿಗೆ ಮೂವರು, ಬಲಬದಿಗೆ ಮೂವರಂತೆ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿದ್ದ ನಾವು ಆರು ಮಂದಿ ಕುಳಿತೆವು. ನಡುವೆ ಕಾರ್ಯಕ್ರಮ ನಡೆಸಿಕೊಡುವ ನಿರೂಪಕ ಕುಳಿತರು. ಅದೊಂದು ಸಂವಾದ ರೂಪದಲ್ಲಿ ಇತ್ತಾದ್ದರಿಂದ ಪರ-ವಿರೋಧದ ಪ್ರಶ್ನೆಯೇ ಇರಲಿಲ್ಲ.
ಇನ್ನೊಂದು ಟೀವಿ ಸುದ್ದಿ ವಾಹಿನಿಯಲ್ಲೂ ‘ಅರಳೀಕಟ್ಟೆ’ ಹೆಸರಿನ ಹರಟೆ ಕಾರ್ಯಕ್ರಮ ಪ್ರಸಾರವಾಗುತ್ತದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಡಂಬನೆಗೆ ಅದು ಮೀಸಲು. ಅದರಲ್ಲಿ ಕೆಲವು ಅಣಕು (ಮಿಮಿಕ್ರಿ) ಕಲಾವಿದರು ಇರುತ್ತಾರಾದ್ದರಿಂದ ನೋಡಲು ಕೇಳಲು ರಂಜನೀಯವೂ ಸ್ವಾರಸ್ಯಕರವೂ ಆಗಿರುತ್ತದೆ. ನಿರ್ದಿಷ್ಟ ರಾಜಕಾರಣಿಗಳ ಧ್ವನಿ ಅನುಕರಣೆಯಂತೂ ಮಜವಾಗಿರುತ್ತದೆ. ಇಂಥ ಕಲಾವಿದರಿಂದ ಸಿದ್ಧ ಸಂಭಾಷಣೆ ಏರ್ಪಡಿಸಿ ಅದರ ಧ್ವನಿಸಾಂದ್ರಿಕೆಯನ್ನು ರಾಜಕೀಯ ದುರುದ್ದೇಶಗಳಿಗಾಗಿ ಬಳಸಲೂ ಬಹುದು; ಬಳಸಿಯೂ ಇದ್ದಾರೆ. ಆದರೆ ಇಲ್ಲಿಯ ‘ನಕಲಿ ಧ್ವನಿಕರ’ ಅಣಕು ಪ್ರತಿಭೆಯನ್ನು ಕಂಡಮೇಲೆ ‘ಕದ್ದಾಲಿಕೆ ಸಿಡಿ ಕುತಂತ್ರ’ಕ್ಕೆ ಯಾರೂ ಮರುಳಾಗುವುದಿಲ್ಲ. ಆ ವಿಷಯ ಹಾಗಿರಲಿ, ಪ್ರಸ್ತುತ ವಿಷಯಕ್ಕೆ ಬರೋಣ. ‘ಅರಳೀಕಟ್ಟೆ’ ಕಾರ್ಯಕ್ರಮ ಒಂದು ರೀತಿಯಲ್ಲಿ ಹರಟೆ ಕಾರ್ಯಕ್ರಮ. ಅದರಂತೆ ವಿಷಯವು ವದಂತಿ, ಗಾಳಿಮಾತಿನ ಸುತ್ತಲೂ ಗಿರಕಿ ಹೊಡೆಯುತ್ತ ಇರುತ್ತದೆ. ಇನ್ನೇನು ಒಂದು ಮುಕ್ತಾಯ ಬರುತ್ತದೆ ಎಂದು ಇರುವಷ್ಟರಲ್ಲೇ ‘ನಮಗ್ಯಾಕ್ರೀ ಊರ ಉಸಾಬರಿ..’ ಎಂಬ ಉದಾಸೀನದ ನುಡಿಯಿಂದಲೇ ಮುಗಿಯುತ್ತದೆ! ದೃಶ್ಯದ ನೇಪಥ್ಯದಲ್ಲಿ ಅರಳೀಕಟ್ಟೆಯಿರುತ್ತದೆಯಾದರೂ ಹರಟೆಮಲ್ಲ ಮಲ್ಲಿಯರು ಕಟ್ಟೆಯ ಮೇಲೆ ಕುಳಿತೇ ಮಾತಾಡಬೇಕು ಎಂದೇನೂ ಇಲ್ಲ. ನಿಂತೂ ಓಡಾಡುತ್ತಲೂ ಮಾತಾಡುತ್ತಾರೆ.
ಇದರಲ್ಲಿ ಅಭಿನಯಿಸಿ ಹೆಸರು ಮಾಡಿದ ಕೆಲವು ಅಣಕು ಕಲಾವಿದರು ಸಿನೆಮಾದಲ್ಲೂ ಅಭಿನಯಿಸಿದ್ದಾರೆ.
ಕಟ್ಟೆ ತಾಕತ್ತು
ಈಗಿನ ಕೆಲವು ಸುದ್ದಿಮಾಧ್ಯಮಗಳು ಪ್ರಸಕ್ತ ವಿಷಯವೊಂದನ್ನು ಹಿಡಿದು ಮೂರು ವಿಭಿನ್ನ ಪಕ್ಷದ ವಕ್ತಾರರನ್ನು ಕರೆಸಿ, ಚರ್ಚೆಗೆ ಬಿಡುತ್ತಾರಲ್ಲಾ, ಅದನ್ನು ನೋಡಿದಾಗ ‘ಹುತ್ತಬಡಿಯುವುದು’, ‘ತೌಡುಕುಟ್ಟುವುದು’, ‘ಕಂಬಸುತ್ತುವುದು’ ಮೊದಲಾದ ನುಡಿಗಟ್ಟುಗಳು ನೆನಪಾಗುತ್ತವೆ. ಖ್ಯಾತ ಸಿನೆಮಾನಟಿಯ ವಿಷಮ ವಿವಾಹ, ರಾಜಕೀಯ ಪಕ್ಷಾಂತರ, ಲವ್ಜಿಹಾದ್, ಪಕ್ಷಾಂತರ, ಕಾಲೇಜುಫೀಸು, ನೋಟು ಅಮಾನ್ಯೀಕರಣ – ಹೀಗೆ ಯಾವ ಸಂಗತಿಯೇ ಆಗಿರಲಿ, ಸಣ್ಣ ಎಳೆ ಸಿಕ್ಕಿದರೆ ಸಾಕು, ಕಡ್ಡಿಯನ್ನು ಗುಡ್ಡಮಾಡುವ ತಾಕತ್ತು ಈ ಮಾಧ್ಯಮಗಳಿಗೆ ಇರುತ್ತದೆ. ಸುದ್ದಿಯೊಂದನ್ನು ರೋಚಕಗೊಳಿಸಿದಷ್ಟೂ ವಾಹಿನಿ ಟಿಆರ್ಪಿ., ಅಂದರೆ ಅದರ ವೀಕ್ಷಕರ ಸಂಖ್ಯೆ ಏರುತ್ತದಂತೆ! ಟಿಆರ್ಪಿಯ ವಿಸ್ತೃತರೂಪ – ಟೆಲಿವಿಶನ್ ರೇಟಿಂಗ್ ಪಾಯಿಂಟ್. ಅದೊಂದು ರೀತಿಯ ಮಾನದಂಡ. ಟಿಆರ್ಪಿ ಹೆಚ್ಚಾದಂತೆ ಆ ಕಾರ್ಯಕ್ರಮದ ಪ್ರಾಯೋಜಕರ ಉತ್ಪನ್ನಗಳ ಮಾರಾಟವೂ ಹೆಚ್ಚುವುದೇ? ಇರಬಹುದು.
ನಮ್ಮ ರಾಜ್ಯದಲ್ಲಿ ಪ್ರಸ್ತುತ ಮೂರು ಪ್ರಮುಖ ರಾಜಕೀಯ ಪಕ್ಷಗಳು ಚಲಾವಣೆಯಲ್ಲಿವೆ. ಸುದ್ದಿವಾಹಿನಿಯವರು ಯಾವುದೋ ಒಂದು ವಿಷಯವನ್ನು ಹೊತ್ತಿ ಉರಿಯುತ್ತಿರುವ ಸಮಸ್ಯೆ ಎಂದು ತೀರ್ಮಾನಿಸಿ, ಆ ಕುರಿತ ಚರ್ಚೆಗೆ ಆ ಪಕ್ಷದವರನ್ನು ಆಹ್ವಾನಿಸುತ್ತಾರೆನ್ನಿ. ಆಗ ಪಕ್ಷದ ನಾಯಕರೇನೂ ಬರುವುದಿಲ್ಲ. ಬದಲಿಗೆ ತಮ್ಮ ಪಕ್ಷದ ‘ಬಾಯಾಳಿ’ಯನ್ನು ಕಳಿಸುತ್ತಾರೆ. ಅವರಿಗೆ ವಿಷಯದ ಆಳ-ಅಗಲಗಳು ತಿಳಿಯದಿದ್ದರೂ ಚಿಂತೆಯಿಲ್ಲ, ಅವರೇ ಅಧಿಕೃತ ವಾರಸುದಾರರು. ಅವರ ಒಂದೇ ಪಟ್ಟು ಎಂದರೆ – ಯಾವುದೇ ಕಾರಣಕ್ಕೂ ತಾವು ಪ್ರತಿನಿಧಿಸುವ ಪಕ್ಷದ ನಾಯಕ ಅಥವಾ ನಾಯಕಿಯನ್ನು ಬಿಟ್ಟು ಕೊಡದಿರುವುದು. ಪಕ್ಷದಿಂದ ಯಾವುದೇ ಘನಂದಾರಿ ಕೆಲಸ ಆಗಿರದೇ ಇದ್ದರೂ, ಆಗಿದೆಯೆಂಬಂತೆ ಪ್ರತಿಪಾದಿಸಬೇಕು. ಜೊತೆಗೆ ಪ್ರತಿ ಪಕ್ಷದವರನ್ನು ನಾಲಾಯಕ್ ಎಂಬಂತೆ ವಾದಿಸಬೇಕು. ಆ ವಾಹಿನಿಯ ಮಾಲಿಕರು ಯಾವ ರಾಜಕೀಯ ಪಕ್ಷಕ್ಕೆ ಕೃತಕೃತ್ಯರಾಗಿರಬೇಕೋ ಅದಕ್ಕೆ ತಕ್ಕಂತೆ ವಾದವೈಖರಿಯನ್ನು ನಿರೂಪಕರು ಸಂಭಾಳಿಸುವರು. ಆ ಪಕ್ಷದ ವಕ್ತಾರರು ಕೊಂಚ ಹಳಿ ತಪ್ಪಿದರೆನ್ನಿ, ಅದನ್ನು ನಿರೂಪಕರೇ ತಿದ್ದಿ ಸರಿಪಡಿಸುತ್ತಾರೆ. ಇಂಥ ತ್ರಿಪಕ್ಷೀಯ ಚರ್ಚೆಗಳಿಗೆ ಒಂದು ತಾರ್ಕಿಕ ಮುಕ್ತಾಯವುಂಟೇ ಎಂದು ನಿರೀಕ್ಷಿಸಿದಲ್ಲಿ ನಿರಾಶೆಯಾಗುವುದು ನಿಶ್ಚಿತ! ಕೆಲವೊಮ್ಮೆ ಒಬ್ಬ ‘ಬಾಯಾಳಿ’ ಮಾತಾಡುವುದನ್ನು ಕೇಳುವ ಸಹನೆ ಉಳಿದಿಬ್ಬರಲ್ಲಿ ಇರುವುದಿಲ್ಲ. ಅದರ ಪರಿಣಾಮ ಕೇವಲ ಗದ್ದಲ ಅಷ್ಟೆ! ಮನುಷ್ಯನಿಗೆ ಎರಡು ಕಿವಿ, ಒಂದೇ ಬಾಯಿ ಇರುತ್ತದೆಂಬ ವಿವೇಕ ಸಂಯಮ ಯಾರಿಗೂ ಇರುವುದಿಲ್ಲ. ಒಂದಂಶ ಮಾತ್ರ ಸತ್ಯ, ಅದೆಂದರೆ – ನಿರೂಪಕರು ಮೂವರು ‘ಬಾಯಾಳಿ’ಗಳಿಗಿಂತ ಹೆಚ್ಚು ವಿಷಯಜ್ಞಾನ ಹೊಂದಿರುತ್ತಾರೆಂಬುದು.
ಪ್ರಜಾತಂತ್ರ ಮೂಲ
ಆಂಗ್ಲಭಾಷೆಯಲ್ಲಿ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಅರ್ಥಪೂರ್ಣ ಗಾದೆಯೊಂದಿದೆ. ‘ಕಿರಿದರಲ್ಲಿ ಹಿರಿಯದನ್ನು ಸಾಧಿಸುವ ಗುಣ’ ಅದು. ಗ್ರಾಮವು ಚಿಕ್ಕ ಜನಸಮುದಾಯ ವಾಸಿಸುವ ಪ್ರದೇಶ. ಆದ್ದರಿಂದ ಎಲ್ಲ ರೀತಿಯಲ್ಲೂ ಅದರ ಆಡಳಿತ ಸುಲಲಿತ. ಜನಸಂಖ್ಯೆ ಹೆಚ್ಚಿದಷ್ಟೂ ಸಮಸ್ಯೆಗಳೂ ಹೆಚ್ಚುತ್ತವಷ್ಟೆ. ಹಿಂದೆಲ್ಲ ಗ್ರಾಮ ಪಂಚಾಯತಿ ಎಂಬುದು ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರಲಿಲ್ಲ. ಗ್ರಾಮದ ಕೌಟುಂಬಿಕ ಸಮಸ್ಯೆಗಳು, ಕಲಹಗಳು ಅರಳಿಕಟ್ಟೆಯ ಮೇಲೆ ಏರ್ಪಡುತ್ತಿದ್ದ ಪಂಚಾಯತಿ ಸಭೆಗಳಲ್ಲಿ ಪರಿಹಾರವಾಗುತ್ತಿದ್ದವು. ಸತ್ಯ ಎಂದರೆ ಬೆಂಕಿ ಎಂದು ಜನ ನಂಬಿದ್ದ ಕಾಲವದು. ಗ್ರಾಮೀಣರೇ ಆರಿಸಿದ ಐವರು ಸದಸ್ಯರ ಸಮಿತಿಯೇ ಪಂಚಾಯತಿ. ಅದು ಪ್ರಜಾತಂತ್ರ ವ್ಯವಸ್ಥೆಯ ಮೊದಲ ಮಾದರಿ. ಪ್ರಾಮಾಣಿಕತೆಯಿಂದ ವರ್ತಿಸುತ್ತ, ದೇವರಿಗೆ ಹೆದರುತ್ತ, ಹಿರಿಯರನ್ನು ಗೌರವಿಸುತ್ತ ಇದ್ದ ಕಾಲವದು. ಅಂತಹ ಹಳೆಯ ಕಾಲದ ಅರಳೀಕಟ್ಟೆಯ ಪಂಚಾಯತಿಗೆ ಹೋಲಿಸಿದರೆ ಇಂದಿನ ಟೀವಿ ಚರ್ಚೆಗಳು ಮೈಯುರಿ ಏರಿಸುವುದು ಖಂಡಿತ.
ಆದರೇನು, ಕಾಲಕ್ಕೆ ರಿವರ್ಸ್ ಗೇರ್ ಇಲ್ಲ. ಗಡಿಯಾರ ಹಿಂದಕ್ಕೆ ಚಲಿಸದು. ಕಾರಣ ಅದು ಎಡದಿಂದ ಬಲಕ್ಕೆ ಚಲಿಸುವ ನಿಯಮ ಹೊಂದಿರುವಂಥದ್ದು.