ನಮಂತಿ ಫಲಿತಾ ವೃಕ್ಷಾ ನಮಂತಿ ಚ ಬುಧಾ ಜನಾಃ|
ಶುಷ್ಕಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಚ||
– ಸುಭಾಷಿತಸುಧಾನಿಧಿ
“ಕೊಂಬೆಗಳ ತುಂಬಾ ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ಜ್ಞಾನಿಗಳಾದ ಜನರು ವಿನಯದಿಂದ ಬಾಗಿ ನಡೆಯುತ್ತಾರೆ. ಆದರೆ ಒಣಗಿದ ಮರಗಳೂ ಮೂರ್ಖರೂ ಸೆಟೆದುಕೊಂಡಿರುವ ಕಾರಣ ಬಾಗುವುದಿಲ್ಲ; ಅಂತಹವರ ಮೊಂಡುತನ ಖಂಡನೆಗೊಳಗಾಗುತ್ತದೆ.”
ನಮ್ರತೆಯಿಂದ ಬಾಗಿ ನಡೆಯುವವರು ಎಲ್ಲರ ಆದರಣೆಗೆ ಪಾತ್ರರಾಗುತ್ತಾರೆ. ದುರಹಂಕಾರದಿಂದ ಮೆರೆಯುವ ಅಭ್ಯಾಸ ಮಾಡಿಕೊಂಡವರು ಉಳಿದವರ ತಾತ್ಸಾರಕ್ಕೆ ಗುರಿಯಾಗುತ್ತಾರೆ.
ವಿನಯಪೂರ್ವಕ ವರ್ತನೆಯನ್ನೂ ಮೆದುಮಾತನ್ನೂ ಇತರರು ದೌರ್ಬಲ್ಯವೆಂದುಕೊಂಡಾರು – ಎಂಬ ಭ್ರಮೆ ಹಲವರನ್ನು ಕರ್ಕಶರಾಗಿಸಿಬಿಡುತ್ತದೆ. ವಾಸ್ತವವೆಂದರೆ ಮಾರ್ದವವು ದೌರ್ಬಲ್ಯವಲ್ಲ, ಗಡಸುತನವು ದಾಢ್ರ್ಯವೂ ಅಲ್ಲ.
ಈ ತತ್ತ್ವವನ್ನು ಪ್ರಕಾಶಪಡಿಸಲು ದಾರ್ಶನಿಕ ವಾಙ್ಮಯದಲ್ಲಿ ಒಂದು ದೃಷ್ಟಾಂತವು ಪ್ರಚಲಿತವಿದೆ. ಬಾಯಿಯಲ್ಲಿರುವ ನಾಲಗೆ ದೇಹದ ಜನನದೊಡನೆಯೇ ಬಂದದ್ದು. ಬಾಯಿಯೊಳಕ್ಕೆ ಹಲ್ಲುಗಳ ಸೇರ್ಪಡೆಯಾಗುವುದು ಎಷ್ಟೋ ಕಾಲದ ತರುವಾಯ. ಶರೀರಕ್ಕೆ ಮುಪ್ಪು ಬರುತ್ತಿದ್ದ ಹಾಗೆ ಹಲ್ಲುಗಳು ಒಂದೊಂದಾಗಿ ಉದುರುತ್ತ ಹೋಗುತ್ತವೆ. ಆದರೆ ನಾಲಗೆ ಮಾತ್ರ – ಅದು ಕಾಲಮಾನದಲ್ಲಿ ಹಿರಿಯದಾದರೂ – ದೇಹಾಂತದವರೆಗೆ ಏಕರೀತಿಯಲ್ಲಿ ಉಳಿದಿರುತ್ತದೆ. ರಚನೆಯನ್ನು ನೋಡುವುದಾದರೆ ನಾಲಗೆ ಮೃದುವಾದದ್ದು, ಹಲ್ಲುಗಳು ಕಲ್ಲಿನಂತೆ ಗಡಸಾದವು. ಆದರೆ ಗಡಸಾದ ಹಲ್ಲುಗಳದಕ್ಕಿಂತ ಮೆದುವಾದದ್ದೂ ಹಳೆಯದೂ ಆದ ನಾಲಗೆಯ ಆಯುರ್ಮಾನವೇ ಹೆಚ್ಚು!
ಬಿರುಗಾಳಿ ಬೀಸಿದಾಗ ದೈತ್ಯಗಾತ್ರದ ಮರ ಧರಾಶಾಯಿಯಾಗುತ್ತದೆ; ಆದರೆ ಲಘುಗಾತ್ರದ ನಮ್ರವಾದ ಹುಲ್ಲು ತತ್ಕಾಲಕ್ಕೆ ಗಾಳಿಗೆ ಬಾಗಿದರೂ ಅಲ್ಪಕಾಲದ ತರುವಾಯ ಮತ್ತೆ ಚಿಗುರುತ್ತದೆ. ನಮ್ರತೆಯ ಗುಣವತ್ತತೆ ಈ ಬಗೆಯದು.