ಮಹಿಳೆಯರ ಏಳ್ಗೆಗಾಗಿಯೇ ಸಾಮಾಜಿಕ ಕಾರ್ಯಗಳು ಸ್ಥಿರವಾಗಿ ನಡೆಯುವಂತೆ ವೀರೇಶಲಿಂಗಂ ‘ಶ್ರೀವಿವೇಕವರ್ಧಿನಿ’ (Knowledge Improver) ಎಂಬ ತೆಲುಗು ಮಾಸಪತ್ರಿಕೆಯನ್ನು 1876ರಲ್ಲಿ ಪ್ರಕಟಿಸಿದರು. ಪ್ರಾರಂಭದಲ್ಲಿ ಮದರಾಸಿನಿಂದ ಅಚ್ಚಾಗಿ ಬರುತ್ತಿದ್ದ ಈ ಪತ್ರಿಕೆ ಕ್ರಮೇಣ ಬಹಳ ಜನಪ್ರಿಯಗೊಂಡ ಕಾರಣ ತಾವೇ ರಾಜಮಂದ್ರಿಯಲ್ಲಿ ಸ್ವಂತ ಮುದ್ರಣಾಲಯವನ್ನು ಪ್ರಾರಂಭಿಸಿ ಪ್ರಕಟಿಸಿದರು. ಅನಂತರದಲ್ಲಿ ‘ಸತಿಹಿತಬೋಧಿನಿ’ ಎಂಬ ಮತ್ತೊಂದು ಪತ್ರಿಕೆಯನ್ನು ಮಹಿಳೆಯರಿಗಾಗಿ ಹೊರಡಿಸಿದರು.
ಆಂಧ್ರಪ್ರದೇಶದ ತೆಲುಗು ಸಾಹಿತ್ಯ ಚರಿತ್ರೆ ಹಾಗೂ ಸಮಾಜಸೇವೆ ಮತ್ತು ಸುಧಾರಣೆ ಕಾರ್ಯಗಳಲ್ಲಿ ಕಂದುಕೂರಿ ವೀರೇಶಲಿಂಗಂ ಪಂತುಲು ಉನ್ನತ ಸ್ಥಾನವನ್ನು ಗಳಿಸಿಕೊಂಡು ಮಹಾವಿದ್ವತ್ಪಂಕ್ತಿಯಲ್ಲಿಯೂ ಪುರಸ್ಕøತರಾಗಿದ್ದವರು. ಅವರು ಹಿಂದೂ ಸ್ತ್ರೀಯರ ಅಭ್ಯುದಯಕ್ಕಾಗಿ, ಅದರಲ್ಲಿ ವಿಶೇಷವಾಗಿ ವಿಧವಾವಿವಾಹ ಪ್ರೋತ್ಸಾಹಕ್ಕಾಗಿ ತಮ್ಮ ಸರ್ವಸ್ವವನ್ನೂ ವಿನಿಯೋಗಿಸಿದರು. ಅವರ ಧರ್ಮಪತ್ನಿ ಬಾಪಮ್ಮ ರಾಜಲಕ್ಷ್ಮಮ್ಮನವರೂ ಸಹ ಈ ಎಲ್ಲ ಕಾರ್ಯಗಳಲ್ಲಿ ಸಂಪೂರ್ಣವಾಗಿ ಸಹಭಾಗಿನಿಯಾಗಿದ್ದರು. ಹೀಗೆ ಹತ್ತುಹಲವು ರೀತಿಗಳಲ್ಲಿ ಈ ದಂಪತಿಗಳು ಆಂಧ್ರಪ್ರದೇಶಕ್ಕೆ ಸೇವೆ ಸಲ್ಲಿಸಿ ಕಳೆದೆಂದರೆ ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದವರು.
ವೀರೇಶಲಿಂಗಂ ಪಂತುಲು ಅವರು ಸಂಪ್ರದಾಯಬದ್ಧ ನಿಯೋಗಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1848ರ ಏಪ್ರಿಲ್ 16 ಸೋಮವಾರದಂದು ಆಂಧ್ರಪ್ರದೇಶದ ರಾಜಮಂದ್ರಿಯಲ್ಲಿ (ರಾಜಮಹೇಂದ್ರವರ) ಜನಿಸಿದರು. ಇವರ ಹಿಂದಿನÀವರು ಪ್ರಕಾಶಂ ಜಿಲ್ಲೆಯ ಕಂದುಕೂರಿನವರು.
ಆದ್ದರಿಂದ ಇವರ ಹೆಸರಿಗೆ ಕಂದುಕೂರು ಸೇರಿತು. ತಂದೆ ಸುಬ್ಬರಾಯಡು, ತಾಯಿ ಪೂರ್ಣಮ್ಮ. ಪಂತುಲು ಆರು ತಿಂಗಳ ಮಗುವಾಗಿದ್ದಾಗಲೇ ಬಂದೊದಗಿದ ಸಿಡುಬು ಬೇನೆಯಿಂದ ಪಾರಾದರು. (ಈ ಬೇನೆ ಆ ಕಾಲಕ್ಕೆ ಬಹು ಭಯಂಕರವಾಗಿತ್ತು). ನಾಲ್ಕನೇ ವಯಸ್ಸಿನಲ್ಲಿ ತಂದೆ ಕಾಲವಾದರು; ಚಿಕ್ಕಪ್ಪನವರಾದ ವೆಂಕಟರತ್ನಂರವರ ಕ್ರಮಬದ್ಧವಾದ ಪೆÇೀಷಣೆಗೆ ಒಳಪಟ್ಟರು. ಅವರು ಒಡಹುಟ್ಟಿದ ಮಗನಂತೆಯೇ ಆತನನ್ನು ಸಾಕಿ ಸಲಹಿ ಬೆಳೆಸಿದರು.
ಐದನೆ ವಯಸ್ಸಿನಲ್ಲಿ ಸ್ಥಳೀಯ ಶಾಲೆಗೆ ಸೇರಿದರು. ಆಗ್ಗೆ ಇಂಗ್ಲಿಷ್ ಭಾಷಾಭ್ಯಾಸಕ್ಕೆ ಅಷ್ಟು ಪ್ರೋತ್ಸಾಹವಿರಲಿಲ್ಲ; ಆದಕಾರಣ ವೆಂಕಟರತ್ನಂ ಅವರು ವೀರೇಶಲಿಂಗಂ ಅವರಿಗೆ ತೆಲುಗು ಭಾಷೆಯಲ್ಲಿ ಆಸಕ್ತಿ ಉಂಟಾಗುವಂತೆ ಮಾಡಿದರು. ಆನಂತರದಲ್ಲಿ ಮೆಟ್ರಿಕ್ಯುಲೇಷನ್ವರೆಗೂ ಇಂಗ್ಲಿಷ್ ಭಾಷೆಯಲ್ಲೇ ಅಭ್ಯಾಸ ಮಾಡಿದರು. ಆಗಾಗಲೇ ತೆಲುಗು ಭಾಷೆಯಲ್ಲಿ ಕವಿತ್ವ ಮಾಡುವ ಸಾಮಥ್ರ್ಯವನ್ನು ಹೊಂದಿದ್ದರಿಂದ ಉಪಾಧ್ಯಾಯರುಗಳು ಬಹಳವಾಗಿ ಮೆಚ್ಚಿ ಅವರು ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯೆಂದು ಪರಿಗಣಿಸಲ್ಪಟ್ಟರು. ಸ್ವಲ್ಪ ಕಾಲದಲ್ಲೇ ಇವರಲ್ಲಿದ್ದ ಭಾಷಾಭಿಮಾನ ಎಲ್ಲರಿಗೂ ಗಮನಕ್ಕೆ ಬಂದಿತು.
1869ರಲ್ಲಿ ಮೆಟ್ರಿಕ್ಯುಲೇಷನ್ ಪೂರೈಸಿ ಅದೇ ವರ್ಷ ಕೊರಂಗೈ ಎಂಬ ಹಳ್ಳಿಯಲ್ಲಿ ಪ್ರಥಮಬಾರಿಗೆ ಉಪಾಧ್ಯಾಯರಾಗಿ ಉದ್ಯೋಗ ಪ್ರಾರಂಭಿಸಿದ ಇವರು 1872ರಲ್ಲಿ ಅದೇ ಶಾಲೆಯಲ್ಲಿ ತೆಲುಗು ಪಂಡಿತರಾಗಿ ನಿಯುಕ್ತರಾದರು. 1874ರಲ್ಲಿ ರಾಜಮಂದ್ರಿ ನಗರಕ್ಕೆ ಹತ್ತಿರದಲ್ಲೇ ಇರುವ ದಾವಲೇಶ್ವರಂನಲ್ಲಿ ಅವರೇ ಬಾಲಕಿಯರ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಸ್ಥಾಪಿಸಿ ಅಲ್ಲಿಯೇ ಮುಖ್ಯೋಪಾಧ್ಯಾಯರಾಗಿ ಬಾಲಕಿಯರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡತೊಡಗಿದರು. ನಿರಹಂಕಾರಿಗಳಾಗಿದ್ದ ಇವರು ಧೈರ್ಯಶಾಲಿಯಾಗಿಯೂ ಸಾಹಸಿಯಾಗಿಯೂ ಇದ್ದಕಾರಣ, ಅನಾಥರಿಗೆ ಯಾರಾದರೂ ಕೇಡನ್ನೇ ಆಗಲಿ ಅನ್ಯಾಯವನ್ನೇ ಆಗಲಿ ಎಸಗಿದಲ್ಲಿ ಸಹಿಸುತ್ತಿರಲಿಲ್ಲ.
ಸಾಮಾಜಿಕ ಸೇವೆ
ಬ್ರಹ್ಮಸಮಾಜದ ಸ್ಥಾಪಕರಾದ ರಾಜಾ ರಾಮಮೋಹನರಾಯ್, ಪಂಡಿತ್ ಈಶ್ವರಚಂದ್ರ ವಿದ್ಯಾಸಾಗರ್. ಮಹರ್ಷಿ ಕೇಶವಚಂದ್ರ ಸೇನ್ ಮತ್ತು ಆತ್ಮುರಿ ಲಕ್ಷ್ಮಿನರಸಿಂಹ ಮುಂತಾದವರಿಂದ ಹಾಗೂ ಬ್ರಹ್ಮಸಮಾಜದ ಸಿದ್ಧಾಂತಗಳಿಂದ ಪ್ರೇರಣೆ ಹೊಂದಿದ ಪಂತುಲು ಅವರು ಹಿಂದೂ ಸಾಮಾಜಿಕ ದೋಷಗಳನ್ನು ದೂರಗೊಳಿಸಬೇಕೆಂದು ನಿರ್ಧರಿಸಿದರು. ಮಹಿಳೆಯರ ಏಳ್ಗೆಗಾಗಿಯೇ ಸಾಮಾಜಿಕ ಕಾರ್ಯಗಳು ಸ್ಥಿರವಾಗಿ ನಡೆಯುವಂತೆ ‘ಶ್ರೀವಿವೇಕವರ್ಧಿನಿ’ (Knowledge Improver) ಎಂಬ ತೆಲುಗು ಮಾಸಪತ್ರಿಕೆಯನ್ನು 1876ರಲ್ಲಿ ಆರಂಭಿಸಿದರು. ಪ್ರಾರಂಭದಲ್ಲಿ ಮದರಾಸಿನಿಂದ ಅಚ್ಚಾಗಿ ಬರುತ್ತಿದ್ದ ಈ ಪತ್ರಿಕೆ ಕ್ರಮೇಣ ಬಹಳ ಜನಪ್ರಿಯಗೊಂಡ ಕಾರಣ ತಾವೇ ರಾಜಮಂದ್ರಿಯಲ್ಲಿ ಸ್ವಂತ ಮುದ್ರಣಾಲಯವನ್ನು ಪ್ರಾರಂಭಿಸಿ ಪ್ರಕಟಿಸತೊಡಗಿದರು. ಅನಂತರದಲ್ಲಿ ‘ಸತೀಹಿತಬೋಧಿನಿ’ ಎಂಬ ಮತ್ತೊಂದು ಪತ್ರಿಕೆಯನ್ನು ಮಹಿಳೆಯರಿಗಾಗಿ ಹೊರಡಿಸಿದರು.
ಬಾಲವಿಧವೆಯರ ಪುನರ್ವಿವಾಹಕ್ಕಾಗಿ ಪಂತುಲು ಮಾಡಿದ ಪ್ರಯತ್ನ ತುಂಬಾ ಪರಿಣಾಮಕಾರಿಯಾಯಿತು. ಈ ಸದುದ್ದೇಶದಿಂದ 1878ರಲ್ಲಿ ರಾಜಮಂದ್ರಿಯಲ್ಲಿ ಸಮಾಜಸುಧಾರಣಾ ಸಂಸ್ಥೆಯನ್ನು ಪ್ರಾರಂಭಿಸಿದರು. ಆಗ ಇವರು ದಾಟಬೇಕಾಗಿ ಬಂದ ವಿಘ್ನಗಳೂ, ಸಹಿಸಬೇಕಾಗಿ ಬಂದ ಹಿಂಸೆಗಳೂ ಎಷ್ಟೆಂದು ಹೇಳತೀರದು. ಆದರೂ ಹೆದರದೆ ತಾವು ಹಿಡಿದ ಕಾರ್ಯವನ್ನು ಬಿಡದೆ ನಡೆಸುತ್ತ ಬಂದರು. ಎಷ್ಟೋ ಮಂದಿ ಬಾಲವಿಧವೆಯರು ಪಂತುಲು ಅವರ ಕರುಣೆಯ ದೆಸೆಯಿಂದ ಪುನರ್ವಿವಾಹಿತರಾಗಿ ತಮ್ಮ ಶೋಚನೀಯ ಸ್ಥಿತಿಯಿಂದ ಬಿಡುಗಡೆಯನ್ನು ಹೊಂದಿ ನೆಮ್ಮದಿಯ ಜೀವನ ನಡೆಸಲು ಪ್ರಾರಂಭಿಸಿದರು. ಕೆಲವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಪೆÇೀಷಿಸುತ್ತ ಬಂದರು. ಮದರಾಸಿನಲ್ಲಿಯೂ ವಿಧವೆಯರಿಗೋಸ್ಕರ ಸ್ಥಾಪಿಸಿದ ಸದನದಲ್ಲಿ ಅನಾಥರಾದ ಅನೇಕ ಮಂದಿ ವಿಧವೆಯರು ನಿರಾತಂಕ ಜೀವನ ನಡೆಸುತ್ತಿದ್ದರು. ಇದಕ್ಕೋಸ್ಕರ ಅವರು ಮದರಾಸಿನಲ್ಲಿ ಆ ಕಾಲದಲ್ಲಿ ಮೂರ್ನಾಲ್ಕು ಸಾವಿರ ರೂಪಾಯಿ ಬೆಲೆಬಾಳುತ್ತಿದ್ದ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೆ ಹಿಂದೂ ಸಾಮಾಜಿಕ ಪರಿಷ್ಕರಣದ ಕೂಟದವರಿಗಾಗಿ ಮದರಾಸಿನಲ್ಲಿಯೆ ಮತ್ತೊಂದು ಮಹಡಿಯ ಮನೆಯನ್ನು ಬಿಟ್ಟುಕೊಟ್ಟರು. ಅದೇ ರೀತಿ ರಾಜಮಂದ್ರಿಯಲ್ಲಿ ಬ್ರಹ್ಮಮಂದಿರವನ್ನು ಕಟ್ಟಿಸಿಕೊಟ್ಟರು. ಈ ಹಲವಾರು ಕಾರ್ಯಗಳಲ್ಲಿ ಇವರಲ್ಲಿದ್ದ ಉದಾರತ್ವ ಎದ್ದುಕಾಣುತ್ತದೆ. ಅವರು ಮದರಾಸ್ ವಿಶ್ವವಿದ್ಯಾನಿಲಯದಲ್ಲಿ ಬಹುಕಾಲ ಬಿ.ಎ., ಎಂ.ಎ. ಮೊದಲಾದ ಉಚ್ಚತರಗತಿಗಳಿಗೆ ಪರೀಕ್ಷಕರಾಗಿದ್ದು ಆಂಧ್ರ ಸರಕಾರದಲ್ಲಿ ಭಾಷಾಧಿಕಾರಿಗಳಾಗಿಯೂ ಪ್ರಸಿದ್ಧಿ ಪಡೆದರು.
ಸಾಹಿತ್ಯಸೇವೆ
ಪಂತುಲು ಅವರು ತೆಲುಗು, ಇಂಗ್ಲಿಷ್ ಮತ್ತು ಸಂಸ್ಕøತ ಭಾಷೆಗಳಲ್ಲಿ ಮೇಲ್ಮಟ್ಟದ ಪ್ರಾವೀಣ್ಯ ಹೊಂದಿದ್ದರು. ಮೂರು ಕಾದಂಬರಿಗಳನ್ನು ತೆಲುಗಿನಲ್ಲಿ ಬರೆದಿದ್ದಾರೆ. ಸತ್ಯವತೀ ಚಾರಿತ್ರ, (ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಪ್ರಕಟವಾದ ಪ್ರಥಮ ಕಾದಂಬರಿ, 1883) ರಾಜಶೇಖರ ಚರಿತ್ರ (1880) ಮತ್ತು ‘ಸತ್ಯರಾಜನ ದೇಶಯಾತ್ರೆಗಳು’, (ಸತ್ಯರಾಜ ಪೂರ್ವದೇಶ ಯಾತ್ರುಲು, 1891-94) – ಬಹು ಪ್ರಸಿದ್ಧವಾದ ಈ ಮೂರು ಕಾದಂಬರಿಗಳು ಕನ್ನಡದಲ್ಲಿಯೂ ಬಂದಿವೆ. (ಸತ್ಯವತಿ ಚರಿತ್ರೆಯನ್ನು ಕನ್ನಡಿಸಿದವರು ನಂಜನಗೂಡು ಅನಂತನಾರಾಯಣ ಶಾಸ್ತ್ರಿಗಳು. ರಾಜಶೇಖರ ಚರಿತ್ರೆಯನ್ನು ಕನ್ನಡಿಸಿದವರು ಬೆಳ್ಳಾವೆ ಸೋಮನಾಥಯ್ಯನವರು. ಸತ್ಯರಾಜನ ದೇಶಯಾತ್ರೆಗಳು ಕೃತಿಯನ್ನು ಕನ್ನಡಿಸಿದವರು ಬೆನಗಲ್ ನಾರಾಯಣರಾಯರು.) 1880ರಲ್ಲಿ ವ್ಯವಹಾರ ಧರ್ಮಬೋಧಿನಿ (A Primer of Legal Practice) ಮತ್ತು ಬ್ರಾಹ್ಮ ವಿವಾಹಮು (A Brahman Wedding) ಕೃತಿಗÀಳನ್ನು ರಚಿಸಿದರು. ಇನ್ನೂ ಅನೇಕ ಕೃತಿಗಳನ್ನೂ ರಚಿಸಿರುವುದಲ್ಲದೆ ಕೆಲವು ಶಾಸ್ತ್ರಗ್ರಂಥಗಳನ್ನು ತೆಲುಗಿಗೆ ಭಾಷಾಂತರ ಮಾಡಿದ್ದಾರೆ.
ಸ್ತ್ರೀ ವಿದ್ಯಾಭ್ಯಾಸ ಹಾಗೂ ವಿಧವೆಯರ ಪುನರ್ವಿವಾಹದ ಬಗೆಗೂ ಅನೇಕ ಕೃತಿಗಳನ್ನು ತೆಲುಗು ಭಾಷೆಯಲ್ಲಿ ರಚಿಸಿದರು.
ಪತ್ನಿಯ ಪಾತ್ರ
ವೀರೇಶಲಿಂಗಂ ಅವರ 13ನೇ ವಯಸ್ಸಿಗೆ ರಾಜಮಂದ್ರಿಗೆ ಮೂರು ಮೈಲಿ ದೂರವಿರುವ ಕಟ್ಟೇರು ಎಂಬ ಗ್ರಾಮದಲ್ಲಿ ಹುಟ್ಟಿದ 10 ವರ್ಷ ವಯಸ್ಸಿನ (ಜನನ 1851 ನವಂಬರ್) ರಾಜಲಕ್ಷ್ಮಿಯೊಡನೆ 1861ರಲ್ಲಿ ವಿವಾಹವನ್ನು ವೆಂಕಟರತ್ನಂ ಅವರೇ ಮಾಡಿದರು. ಈಕೆಗೂ ಚಿಕ್ಕವಯಸ್ಸಿನಲ್ಲಿ ತಂದೆತಾಯಿ ಕಾಲವಾಗಿ ಅವರ ಚಿಕ್ಕಪ್ಪನವರು ಪೋಷಿಸಿ ತೆಲುಗು ಭಾಷೆಯನ್ನು ಅಭ್ಯಾಸ ಮಾಡಿಸಿದ್ದರು. ದೊಡ್ಡಮನುಷ್ಯರಾದ ಪಂತುಲು ಅವರಿಗೆ ಭಗವಂತನು ಅನುಗುಣವುಳ್ಳ ಪತ್ನಿಯನ್ನು ಕೊಟ್ಟುದು ಅವರÀ ಸುಯೋಗ. ಪತಿಯು ನಡೆಸುತ್ತಿದ್ದ ಸಾಮಾಜಿಕ ಸುಧಾರಣ ಪ್ರಯತ್ನಗಳಲ್ಲಿ ತಮ್ಮ ಪೋಷಣೆಗೆ ಒಪ್ಪಿಸಿಕೊಟ್ಟಿದ್ದ ಬಾಲವಿಧವೆಯರನ್ನು ರಾಜಲಕ್ಷ್ಮಿಯವರು ಮಕ್ಕಳಂತೆ ವಾತ್ಸಲ್ಯದಿಂದ ಸಲಹುತ್ತಿದ್ದರು. ಪತಿಯ ಪ್ರೋತ್ಸಾಹದಿಂದ ತೆಲುಗು ಭಾಷೆಯಲ್ಲಿ ಕ್ರಮೇಣ ಪಾಂಡಿತ್ಯ ಹೊಂದುತ್ತ ಬಂದರು. ಪತಿಗೆ ಕೇವಲ ಪ್ರೀತಿಪಾತ್ರರಾಗಿದ್ದಲ್ಲದೆ, ಸಾಮಾಜಿಕ ಪರಿಷ್ಕರಣ ಪ್ರಯಾಸಗಳಲ್ಲಿಯೂ ಅವರಿಗೆ ಬಹು ಸಹಾಯಕರಾಗಿದ್ದರು. ಪತ್ನಿಯ ಸಹಕಾರವಿಲ್ಲದಿದ್ದಲ್ಲಿ ಪಂತುಲು ಅವರು ತಮ್ಮ ಕಾರ್ಯದಲ್ಲಿ ಅಷ್ಟು ಸಾಫಲ್ಯವನ್ನು ಪಡೆಯಲಾಗುತ್ತಿರಲಿಲ್ಲವೆಂದು ಧಾರಾಳವಾಗಿ ಹೇಳಬಹುದು. ಅನಾಥರಾದ ವಿಧವೆಯರಿಗೆ ನಿಜವಾಗಿ ತಾಯಿಯಂತೆ ನಡೆದುಕೊಳ್ಳುತ್ತಿದ್ದರು. ಎಲ್ಲರಿಗೆ ಬೇರೆಬೇರೆ ವಿಷಯಗಳನ್ನು ಕಲಿಸುವುದಲ್ಲದೆ ತೆಲುಗು ಭಾಷೆಯಲ್ಲಿ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರು. ರಾಜಮಂದ್ರಿಯಲ್ಲಿ ಒಂದು ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದರು. ಎಲ್ಲರ ಉಪಯೋಗಕ್ಕೆ ಬೇಕಾದ ನೀರನ್ನು ಸನಿಹದಲ್ಲೇ ಇದ್ದ ಗೋದಾವರಿ ನದಿಯಿಂದ ತಾವೇ ಹೊತ್ತುಕೊಂಡು ಬರುತ್ತಿದ್ದರು.
ವಿಧವಾವಿವಾಹ ಆಂದೋಲನ
ಸಾಮಾಜಿಕ ಪರಿಷ್ಕರಣವನ್ನು ಕೈಗೊಂಡ ಪಂತುಲು ಅವರು ವಿಧವಾವಿವಾಹ ಆಂದೋಲನವನ್ನು ತಮ್ಮ ಜೀವಿತದ ಮುಖ್ಯ ಗುರಿಯೆಂದು ಭಾವಿಸಿ ಗೋಕುಲಪತಿ ಶ್ರೀರಾಮುಲು ಮತ್ತು ಗೌರಮ್ಮ ಅವರಿಗೆ ಸೇರಿದಂತೆ ಇಬ್ಬರು ಮೂವರು ಬಾಲವಿಧವೆಯರಿಗೆ ಪತ್ನಿಯ ಸಹಕಾರದೊಡನೆ ಭಾರತದಲ್ಲೇ ಪ್ರಥಮವಾಗಿ 1881ರ ಡಿಸೆಂಬರ್ 11ರಂದು ಪುನರ್ವಿವಾಹ ಮಾಡಿಸಿದರು. ಆಗ ಪತ್ನಿಗೆ ನೆಂಟರಿಷ್ಟರ ಕಡೆಯಿಂದ ತೀವ್ರ ವಿರೋಧ ಬಂದಿತು. ಆಗ ರಂಗಾಚಾರ್ಯರೆಂಬ ವಿದ್ವಾಂಸರು ವಿಧವಾ ಪುನರ್ವಿವಾಹಕ್ಕೆ ಸ್ಮøತಿಗ್ರಂಥಗಳ ಬೆಂಬಲವಿದೆ ಎಂದು ತೋರಿಸಿಕೊಟ್ಟಾಗ ಪಂತುಲುರವರ ಉತ್ಸಾಹ ಇಮ್ಮಡಿಯಾಯಿತು. ತಮ್ಮ ಹೋರಾಟಕ್ಕೆ ಹೆಚ್ಚಿನ ಕಸುವು ಬರಲೆಂದು ಅವರು ರಾಜಮಂದ್ರಿಯಲ್ಲಿ ‘Widow Re-marriage Association’ (WRA) ಎಂಬ ಸಂಸ್ಥೆಯನ್ನೇ ಸ್ಥಾಪಿಸಿದರು. ಈ ಯತ್ನದಲ್ಲಿ ಅವರಿಗೆ ಬೆಂಬಲವಾಗಿ ನಿಂತವರೆಂದರೆ ಬಸವರಾಜು ಗವರಾಜು, ಈಲೂರಿ ಲಕ್ಷ್ಮಿನರಸಿಂಹ, ಬಯಪನೇಡಿ ವೆಂಕಟಜೋಗಯ್ಯ, ಕನ್ನಮರೆಡ್ಡಿ, ಪಾರ್ಥಸಾರಥಿ ನಾಯ್ಡು, ಚಿರ್ರವೂರಿ ಯಜ್ಞನ್ನ ಶಾಸ್ತ್ರಿ, ಕಾಜಾ ರಾಮಕೃಷ್ಣರಾವು ಮತ್ತು ಕೊಮ್ಮ ರಾಮಲಿಂಗಂ ಶಾಸ್ತ್ರಿ. ಮುಖ್ಯವಾಗಿ ಕಾಕಿವಾಡದ ಪೈಡಿ ರಾಮಕೃಷ್ಣಯ್ಯ ಎಂಬವರು ಈ ಸಂಸ್ಥೆಗೆ 30 ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಿದರು. ಬ್ರಹ್ಮಸಮಾಜದ ಇತಿಹಾಸವನ್ನು ಬರೆದಿರುವ ಶಿವನಾಥಶಾಸ್ತ್ರಿಯವರು ಈ ಸಂಸ್ಥೆಯ ಬಗ್ಗೆ ಆಡಿರುವ ಮಾತುಗಳಿವು – “The widow re-marriage movement was inaugurated (1881) and mainly worked by him (Panthulu). Though not as great a success as it was expected to be, it has rendered considerable in bettering the lot of the forlorn widows in Southern India. His house has afforded ever since the beginning a ready asylum to every widow that sought shelter either for marriage or for education.”
ಈ ಕಾರ್ಯವನ್ನು ದೃಢವಾಗಿ ಮುಂದುವರಿಸಿದ ಪಂತುಲು ದಂಪತಿಗಳ ಹೆಸರು ರಾಜಮಂದ್ರಿಯಲ್ಲಿ ಮನೆಮಾತಾಯಿತು. ಮುಂಬಯಿಯಲ್ಲಿ ಉಮೇಶಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ 1885ರಲ್ಲಿ ನಡೆದ ಪ್ರಪ್ರಥಮ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಂತುಲು ಅವರು ಸೇವೆ ಸಲ್ಲಿಸಿದರು. 1887ರಲ್ಲಿ ರಾಜಮಂದ್ರಿಯಲ್ಲಿ ಬ್ರಹ್ಮಮಂದಿರವನ್ನೂ ಮತ್ತು ಅಬಲಾಶ್ರಮವನ್ನೂ ಸ್ಥಾಪಿಸಿದರು. ಆ ಆಶ್ರಮದಲ್ಲಿ ಬಾಲವಿಧವೆಯರಿಗೂ, ನಿರ್ಗತಿಕ ಮಹಿಳೆಯರಿಗೂ ಮತ್ತು ಅನಾಥೆಯರಿಗೂ ಅನ್ನ-ವಸ್ತ್ರಗಳನ್ನು ಕೊಟ್ಟು ಅವರನ್ನು ಯಾವುದಾದರೊಂದು ಸ್ವತಂತ್ರ ಜೀವಿಕಾವೃತ್ತಿಗೆ ತಯಾರು ಮಾಡುತ್ತಿದ್ದರು. ಇವರ ಸಾಮಾಜಿಕ ಕಾರ್ಯಗಳನ್ನು ಕಂಡ ಆಂಧ್ರಸರ್ಕಾರ ಪಂತುಲು ಅವರಿಗೆ 1893ರಲ್ಲಿ ‘ರಾವ್ ಬಹಾದುರ್’ ಬಿರುದನ್ನು ನೀಡಿ ಗೌರವಿಸಿತು.
1898ರ ಡಿಸೆಂಬರ್ 2 ಶುಕ್ರವಾರದಂದು 19 ವರ್ಷದ ವಧುವಾದ ಸರೋಜಿನೀ ದೇವಿ ಎಂಬಾಕೆಯ (ಮುಂದೆ ಗಾಂಧಿಯವರ ಪ್ರಮುಖ ಅನುಯಾಯಿಯಾದವರು) ವಿವಾಹವು ಡಾ|| ಗೋವಿಂದರಾಜುಲು ನಾಯ್ಡು ಎಂಬವರೊಡನೆ ಮದರಾಸಿನ ಬ್ರಾಹ್ಮೋಮಂದಿರದಲ್ಲಿ ಕ್ರಿಶ್ಚಿಯನ್ ಪದ್ಧತಿಯಲ್ಲಿ ನಡೆಯಿತು. ಬಹು ಸರಳವಾಗಿ ನಡೆದ ಈ ಅಂತರ್ಜಾತಿ ವಿವಾಹಕ್ಕೆ ಪಂಡಿತ್ ವೀರೇಶಲಿಂಗಂ ಪಂತುಲು ಅವರೇ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದರು. ಬ್ರಾಹ್ಮೋ ಪಂಥಕ್ಕೆ ಸೇರಿದ ಅತ್ಯಂತ ಸುಸಂಸ್ಕøತರಾದ ಮಹಿಳೆಯೊಬ್ಬರು ವಧುವಿನ ಪರವಾಗಿ ಬಂದಿದ್ದರು. ಕೊನೆಯಲ್ಲಿ ವೀರೇಶಲಿಂಗಂ ಅವರು ನವದಂಪತಿಗಳಿಗೆ ಆಶೀರ್ವಚನ ನೀಡಿದರು. ಇದು ಆ ದಿನಗಳಲ್ಲಿ ವಿಶಾಲ ಗಮನ ಸೆಳೆಯಿತು.
ಒಂದು ಆಪಾದನೆ
ಒಂದು ಸಂದರ್ಭದಲ್ಲಿ ವೀರೇಶಲಿಂಗಂ ಅವರ ಮೇಲೆ ಒಂದು ಆಪಾದನೆ ಹೊರಟಿತು: ಅವರು ಆಶ್ರಮದ ಒಬ್ಬ ಮಹಿಳೆಯಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದರೆಂದು. ಆ ಆಪಾದನೆಯನ್ನು ಪ್ರಕಟಿಸಿದವರು ತಂಗಟೂರು ಶ್ರೀರಾಮುಲು ಅವರು. ಇವರು ಬ್ಯಾರಿಸ್ಟರ್ ಆಗಿ ‘ದಿ ಕಾರ್ಲೈಲಿಯನ್’ (The Carlylian) ಎಂಬ ಪತ್ರಿಕೆಯನ್ನು ನಡೆಸುತ್ತಿದ್ದವರು. ಇವರ ಅಣ್ಣಂದಿರೇ ಆಂಧ್ರನಾಯಕರೆಂದು ಪ್ರಸಿದ್ಧರಾಗಿ ‘ಸ್ವರಾಜ್ಯ’ ಪತ್ರಿಕೆಯನ್ನು ನಡೆಸಿ ಆನಂತರದಲ್ಲಿ ಮದರಾಸ್ ಸರ್ಕಾರದ ಮುಖ್ಯಮಂತ್ರಿಯೂ ಆಗಿದ್ದ ತಂಗಟೂರು ಪ್ರಕಾಶಂ.
ಶ್ರೀರಾಮುಲು ಅವರು ಮಾಡಿದ್ದ ಆಪಾದನೆ ಕೋರ್ಟಿನಲ್ಲಿ ವಿಚಾರಣೆಗೆ ಬಂದಿತು. ಆಗ ಸ್ಥಿರಪಟ್ಟ ಅಂಶವೇನೆಂದರೆ “ವೀರೇಶಲಿಂಗಂ ಅವರಿಗೆ ಮುಪ್ಪಿನಲ್ಲಿ ಬೆನ್ನ ಮೇಲೆ ಚರ್ಮ ಸುಕ್ಕುಬಿದ್ದು, ಅದು ಅಲ್ಲಲ್ಲಿ ಬಿರಿದು ನವೆಯಾಗಿ ಬಾಧೆ ಕೊಡುತ್ತಿತ್ತು. ಅದಕ್ಕೆ ಒಬ್ಬ ವೈದ್ಯರು ಯಾವುದೋ ಒಂದು ತೈಲವನ್ನು ಕೊಟ್ಟಿದ್ದರು. ಆ ತೈಲವನ್ನು ವೀರೇಶಲಿಂಗಂರವರ ಬೆನ್ನಿಗೆ ಪ್ರತಿದಿನವೂ ಯಾರಾದರೂ ತಿಕ್ಕಬೇಕಾಗಿತ್ತು. ಹೀಗೆ ತೈಲವನ್ನು ತಿಕ್ಕುವುದಕ್ಕಾಗಿ ರಾಜಲಕ್ಷ್ಮಮ್ಮನವರು ಅಶಕ್ತರಾಗಿದ್ದರಿಂದ ತಮ್ಮ ಆಶ್ರಮದ ಒಬ್ಬ ಆಶ್ರಿತೆಗೆ ಆ ಕೆಲಸವನ್ನು ಒಪ್ಪಿಸಿದ್ದದ್ದು ನಿಜ. ಆಕೆ ಆ ಸೇವೆಯನ್ನು ನಡೆಸುತ್ತಿದ್ದದ್ದೂ ನಿಜ. ಇಷ್ಟು ಮಾತ್ರದಿಂದ ಯಾವುದೋ ಅಕಾರ್ಯ ನಡೆಯಿತೆಂದು ಊಹೆಮಾಡುವುದು ಅನ್ಯಾಯವಾದ ಆಪಾದನೆ” – ಹೀಗೆ ಕೋರ್ಟು ತೀರ್ಮಾನ ನೀಡಿತು.
ಬೆಂಗಳೂರಿನಲ್ಲಿ
ಬೆಂಗಳೂರಿನಲ್ಲಿ ಸುಮಾರು 1909ರ ಸುಮಾರಿನಲ್ಲಿ ಪಂತುಲು ಅವರು ಪತ್ನಿ ರಾಜಲಕ್ಷ್ಮಿಯವರೊಡನೆ ಬೆಂಗಳೂರಿಗೆ ಬಂದು ಚಾಮರಾಜಪೇಟೆಯ ಮೊದಲನೆಯ ರಸ್ತೆಯಲ್ಲಿ (ಈಗಿನ ಈದ್ಗಾ ಮೈದಾನದ ಬಳಿ) ಕೆಲವು ದಿವಸ ವಾಸಿಸುತ್ತಿದ್ದುದು, ಆಗ ಇವರನ್ನು ಕಂಡಿದ್ದ ಡಿ.ವಿ.ಜಿ.ಯವರು ತಮ್ಮ ಜ್ಞಾಪಕಚಿತ್ರಶಾಲೆ ಸಂಪುಟ ಆರರ ಕೊನೆಯಲ್ಲಿ ಹೀಗೆ ಸ್ಮರಿಸಿದ್ದಾರೆ:
“ನಾನು ನೋಡಿದಾಗ ವೀರೇಶಲಿಂಗಂ ಅವರು ವೃದ್ಧರು. ಕಾಲಿನಲ್ಲಿ ವಾಯುನೋವು ಬಂದಿದ್ದರಿಂದ ಮೊಣಕಾಲಿನವರೆಗೂ ವುಲ್ಲನ್ ಕಾಲುಚೀಲ ಹಾಕಿಕೊಂಡಿರುತ್ತಿದ್ದರು. ತಲೆ, ಮುಖ ಎಲ್ಲ ಕಡೆ ನರೆತ ಕೂದಲು ಒತ್ತೊತ್ತಾಗಿ ಮುಳ್ಳುಮುಳ್ಳಾಗಿ ಬೆಳೆದಿದ್ದರಿಂದ ಹೊಸಬರಿಗೆ ಹೆದರಿಕೆಯಾಗುತ್ತಿತ್ತೋ ಏನೋ ಎಂದು ಅನಿಸುತ್ತಿತ್ತು. ಆದರೆ ಮಾತುಕತೆಯಾಡಿದರೆ ಅವರು ಎಂಥ ವಿನಯಶಾಲಿಯೆಂಬುದು ಗೊತ್ತಾಗುತ್ತಿತ್ತು.
“ವೀರೇಶಲಿಂಗಂ ಅವರು 45 ವಿಧವಾವಿವಾಹಗಳನ್ನು ಮಾಡಿಸಿದರು. ಅವುಗಳಲ್ಲಿ ಬೆಂಗಳೂರಿನಲ್ಲಿ ನಡೆದವು ಮೂರು ನನಗೆ ತಿಳಿದಿದೆ. ಆ ವಿವಾಹಗಳ ಪೌರೋಹಿತ್ಯದಲ್ಲಿ ನಾನು ಭಾಗವಹಿಸಿದ್ದೂ ಉಂಟು.
“ಪೌರೋಹಿತ್ಯದಲ್ಲಿ ಸೇರಿದ್ದ ಇನ್ನೊಬ್ಬರು ಶರ್ಮಾ ಎಂಬವರು. ಬಹುಶಃ ಆರ್ಯಸಮಾಜಕ್ಕೆ ಸೇರಿದವರು. ವ್ಯಾಕ್ಸಿನೇಟರ್ ಉದ್ಯೋಗದಲ್ಲಿದ್ದರು. ಅವರು ಆರ್ಯ ಸಮಾಜದವರಾದದ್ದರಿಂದ ಮಂತ್ರಗಳನ್ನು ಕಲಿತಿದ್ದರು. ನನಗೆ ತುಂಡು ತುಣುಕು ಮಂತ್ರಗಳು ಬರುತ್ತಿದ್ದದ್ದರಿಂದ ವಿಧವಾವಿವಾಹ ಸಮಾರಂಭಗಳಿಗೆ ಯಜಮಾನರಾಗಿದ್ದ ಚಕ್ರವರ್ತಿ ವೆಂಕಟವರದಯ್ಯಂಗಾರ್ಯರು ನಮ್ಮಿಬ್ಬರನ್ನು ಪೌರೋಹಿತ್ಯಕ್ಕೆ ನಿಯಮಿಸುತ್ತಿದ್ದರು. ಈ ವಿಧವಾವಿವಾಹ ಸಮಾರಂಭ ವಿಷಯದಲ್ಲಿ ನನಗೆ ಉತ್ಸಾಹವಿತ್ತು.
“ವಿವಾಹವು ಕಂಟೋನ್ಮೆಂಟಿನಲ್ಲಿ ನಡೆಯತಕ್ಕದ್ದೆಂದು ಗೊತ್ತು ಮಾಡಲು ಇದ್ದ ಕಾರಣವನ್ನು ಹೇಳುತ್ತೇನೆ. ಆ ಕಾಲದಲ್ಲಿ ವಿಧವಾವಿವಾಹದ ಕಾನೂನು ಬ್ರಿಟಿಷ್ ಇಂಡಿಯಾದಲ್ಲಿ ಜಾರಿಯಲ್ಲಿತ್ತು. ಮೈಸೂರು ರಾಜ್ಯವು ಆಗ್ಗೆ ಪ್ರತ್ಯೇಕವಾಗಿದ್ದುದ್ದರಿಂದ ಆ ಕಾನೂನು ದೇಶೀಯ ಸಂಸ್ಥಾನದಲ್ಲಿ ಊರ್ಜಿತವಾಗತಕ್ಕದ್ದಾಗಿರಲಿಲ್ಲ. ಬೆಂಗಳೂರು ಕಂಟೋನ್ಮೆಂಟ್ ಬ್ರಿಟಿಷ್ ಸರಕಾರದ ಆಧೀನದಲ್ಲಿದ್ದ ಕಾರಣದಿಂದ ಬ್ರಿಟಿಷ್ ಇಂಡಿಯಾದ ಕಾನೂನಿಗೆ ಅಲ್ಲಿ ಬಲವಿತ್ತು. ಈ ರೀತಿ ಯೋಚಿಸಿ ಆ ಕಾಲದಲ್ಲಿ ನಡೆದ ಎಲ್ಲ ವಿಧವಾವಿವಾಹಗಳೂ ಕಂಟೋನ್ಮೆಂಟ್ ಪ್ರದೇಶದಲ್ಲಿಯೇ ನಡೆದವು.”
ಗಾಂಧಿಬಜಾರಿನ ಅಬಲಾಶ್ರಮ
ಪಂತುಲು ಅವರು ಬೆಂಗಳೂರಿಗೆ ಬರಲು ಇದ್ದ ಮುಖ್ಯ ಆಕರ್ಷಣೆಯೆಂದರೆ ವಿಧವಾ ಪುನರ್ವಿವಾಹಕ್ಕೆ ಇಲ್ಲಿ ಇದ್ದ ಪೂರಕವಾದ ವಾತಾವರಣ. 1905ರ ವೇಳೆಗಾಗಲೇ ಬಸವನಗುಡಿಯ ನಾಗಸಂದ್ರ ರಸ್ತೆ (ಇಂದಿನ ಡಿ.ವಿ.ಜಿ.ರಸ್ತೆ)ಯಲ್ಲಿ ಈ ಬಗೆಯ ಸೇವಾಸಂಸ್ಥೆಯಾದ ‘ಅಬಲಾಶ್ರಮ’ ಪ್ರಾರಂಭವಾಗಿತ್ತು. ಆ ದಿನಗಳಲ್ಲಿ ಆರ್ಯಸಮಾಜ, ಬ್ರಹ್ಮಸಮಾಜ, ರಾಮಕೃಷ್ಣ ಮಠ ಮುಂತಾದ ಸಂಸ್ಥೆಗಳ ಸಮಾಜ ಸುಧಾರಣೆಯ ಪ್ರಗತಿಪರ ವಿಚಾರಗಳಿಂದ ಪ್ರೇರಿತರಾಗಿ ಹಲವಾರು ಸಮಾಜಸೇವಾಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಅಂತಹವರಲ್ಲೊಬ್ಬರಾದ ಚಕ್ರವರ್ತಿ ವೆಂಕಟವರದಯ್ಯಂಗಾರ್ ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದರು. ಅವರು ಸ್ವತಃ ತಾವೇ ಕೃಷ್ಣಮ್ಮ ಎಂಬ ವಿಧವೆಯನ್ನು ವಿವಾಹವಾಗಿ ಹೊಸ ಹಾದಿ ತುಳಿದವರು. ಪತಿಪತ್ನಿಯರಿಬ್ಬರೂ ಸೇರಿ ತಮ್ಮ ಮನೆಯಲ್ಲಿಯೇ ಅಬಲಾಶ್ರಮಕ್ಕೆ ಅಂಕುರಾರ್ಪಣೆ ಮಾಡಿದರು. ಅನಂತರ ತಮ್ಮಲ್ಲಿದ್ದ ಹಣವನ್ನು ಹಾಕಿ, ಜೊತೆಗೆ ಸಾರ್ವಜನಿಕರಿಂದ ದೇಣಿಗೆಗಳನ್ನು ಸಂಗ್ರಹಿಸಿ ಡಿ.ವಿ.ಜಿ. ರಸ್ತೆಯಲ್ಲಿ ಕಟ್ಟಡವನ್ನು ನಿರ್ಮಿಸಿದರು. ಈ ರೀತಿಯಾಗಿ ಅವರು ಅನಾಥ, ಅಶಕ್ತ ಮಹಿಳೆಯರಿಗೂ, ವಿಧವೆಯವರಿಗೂ ಆಸರೆ ಕಲ್ಪಿಸಿದರು.
ಹಾಗಾಗಿ ಪಂತುಲುರವರು ಬೆಂಗಳೂರಿನಲ್ಲಿ ಅಂತಹ ಇನ್ನಷ್ಟು ವಿವಾಹಗಳನ್ನು ನೆರವೇರಿಸಲು ಯೋಚಿಸಿದರು. ಪ್ರತಿಬಾರಿ ಆಂಧ್ರದಿಂದ ಬರುವಾಗಲೂ ಅವರು ಮಾಗಂಟಿ ವೆಂಕಟಸುಬ್ಬಮ್ಮ, ನ್ಯಾಪತಿ ಜಾನಿಕಮ್ಮ, ಕಾಮರಾಜುಗುಡ್ಡ ಮಂಗಮ್ಮ ಮುಂತಾದ ಒಬ್ಬಿಬ್ಬ ವಿಧವೆಯರನ್ನು ಈ ಉದ್ದೇಶಕ್ಕಾಗಿ ತಮ್ಮೊಂದಿಗೆ ಕರೆದುಕೊಂಡು ಬರುತ್ತಿದ್ದರು. 1910ರಲ್ಲಿ ಪಂತುಲುರವರು ಬೆಂಗಳೂರಿನಲ್ಲಿ ನಡೆಸಿದ ಮೊತ್ತಮೊದಲ ವಿವಾಹ ನ್ಯಾಪತಿ ಜಾನಿಕಮ್ಮ ಎಂಬ ವಿಧವೆಯದು. ಬೆಂಗಳೂರಿನ ಪ್ರಜ್ಞಾವಂತ ನಾಗರಿಕರು ಈ ವಿಧವಾವಿವಾಹದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಈ ವಿವಾಹವು ನೂತನವಾದ ರೀತಿಯದಾಗಿದ್ದುದರಿಂದ ಬೆಂಗಳೂರಿನ ದೊಡ್ಡಮನುಷ್ಯರು ವಿಶೇಷವಾಗಿ ಬಂದು ತಾಂಬೂಲಾದಿ ಸತ್ಕಾರಗಳನ್ನು ಸ್ವೀಕರಿಸಿ ಸಂತೋಷಿಸಿ ಹೋಗುತ್ತಿದ್ದರು. ಪಂತುಲು ಅವರ ಎಲ್ಲ ಆದರ್ಶಗಳಿಗೆ ಬೆಂಬಲವಾಗಿ ನಿಂತಿದ್ದ ಪತ್ನಿ ರಾಜಲಕ್ಷ್ಮಮ್ಮನವರು 1910ರ ಆಗಸ್ಟ್ 12ರಂದು ತಮ್ಮ 60ನೇ ವಯಸ್ಸಿನಲ್ಲಿ ಮರಣ ಹೊಂದಿದರು. ತಮ್ಮ ಆತ್ಮಕಥೆ ‘ಸ್ವೀಯಚರಿತ್ರಮು’ವಿನ ಎರಡನೇ ಭಾಗವನ್ನು ಬೆಂಗಳೂರಿನ ತಮ್ಮ ಮನೆಯಲ್ಲೇ ಆರಂಭಿಸಿ ಮರುವರ್ಷವೇ ಬರೆದು ಮುಗಿಸಿದರು. ಪಂತುಲು ಅವರು ಪತ್ನಿಯೊಂದಿಗೆ ಕಳೆದ ಮಧುರಕ್ಷಣಗಳನ್ನು ಮರೆಯಲಾಗದೆ ದಾಖಲೆ ಮಾಡಿದ್ದಾರೆ. ಚಾಮರಾಜಪೇಟೆಯ ಮನೆಯನ್ನು ಮಾರಾಟ ಮಾಡಿ ರಾಜಮಂದ್ರಿಗೆ ಹಿಂತಿರುಗಿ ಕೆಲವೇ ವರ್ಷಗಳಲ್ಲಿ ಅಂದರೆ 1919ರ ಮೇ 27ರಂದು ತಮ್ಮ 71ನೇ ವಯಸ್ಸಿನಲ್ಲಿ ಮದರಾಸಿನಲ್ಲಿ ನಿಧನ ಹೊಂದಿದರು. ಇವರ ಸ್ಮರಣಾರ್ಥವಾಗಿ 1974ರಲ್ಲಿ ವಿಶಾಖಪಟ್ಟಣದ ರಾಮಕೃಷ್ಣ ಬೀಚ್ನಲ್ಲಿ ಇವರ ಪ್ರತಿಮೆಯನ್ನು ಆಂಧ್ರ ಸರ್ಕಾರ ಅನಾವರಣಗೊಳಿಸುವುದರೊಂದಿಗೆ 25 ಪೈಸೆ ಸ್ಟಾಂಪನ್ನೂ ಬಿಡುಗಡೆ ಮಾಡಲಾಯಿತು.
‘ಆಂಧ್ರದ ರಾಜಾ ರಾಮಮೋಹನರಾಯ್’ ಎಂದೇ ಹೆಸರು ಗಳಿಸಿದ್ದ ಕಂದುಕೂರಿ ವೀರೇಶಲಿಂಗಂ ಪಂತುಲು ಅವರಿಗೆ ಇಂಡಿಯಾ ದೇಶದ ಸಾಹಿತ್ಯ ವಿದ್ವತ್ ಪ್ರಪಂಚದಲ್ಲಿಯೂ ಮತ್ತು ಸಮಾಜ ಪರಿಷ್ಕಾರಕ ಪ್ರಪಂಚದಲ್ಲಿಯೂ ಒಂದು ಉನ್ನತಸ್ಥಾನ ಶಾಶ್ವತವಾಗಿ ಮೀಸಲಾಗಿರುತ್ತದೆ.
ಆಧಾರ
1 ‘ಹಲವರು ಸಾರ್ವಜನಿಕರು’, ಜ್ಞಾಪಕ ಚಿತ್ರಶಾಲೆ, ಸಂಪುಟ-6, ಡಿ.ವಿ.ಜಿ. 1973, ಪುಟ 274-278
2 ‘ಕೈದಾಳ’ ಡಾ. ಕೆ.ಆರ್. ಗಣೇಶ ಅವರ ಅಭಿನಂದನಾ ಗ್ರಂಥ, ಬೆಂಗಳೂರಿನಲ್ಲಿ ವೀರೇಶಲಿಂಗಂ ಪಂತುಲು ಅವರ ಚಟುವಟಿಕೆಗಳು, ಲೇಖಕರು ಡಾ. ಎಸ್.ಎಲ್. ಶ್ರೀನಿವಾಸಮೂರ್ತಿ, 2012, ಪುಟ 439-442.
3 ‘ಬೆಂಗಳೂರು ದರ್ಶನ’ ಸಂಪುಟ-2, ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಂಗಳೂರು-19, ಪುಟ-216.
4 ‘ವೃತ್ತಾತ ಪತ್ರಿಕೆ’ 2-2-1902, ಪುಟ-3. (ಗೋಖಲೆ ಸಾರ್ವಜನಿಕ ಸಂಸ್ಥೆಯ ಸರಸ್ವತಿ ಭಂಡಾರದಲ್ಲಿ ಸಿಗುತ್ತದೆ).
5 ಅಂತರ್ಜಾಲದಿಂದ.