ಸಜ್ಜನಸ್ಯ ಹೃದಯಂ ನವನೀತಂ ಯದ್ವದಂತಿ ಕವಯಸ್ತದಲೀಕಂ |
ಅನ್ಯದೇಹವಿಲಸತ್ಪರಿತಾಪಾತ್ ಸಜ್ಜನೋ ದ್ರವತಿ ನೋ ನವನೀತಮ್||
– ಸುಭಾಷಿತರತ್ನ-ಭಂಡಾಗಾರ
“ಕವಿಗಳು ಸಜ್ಜನರ ಹೃದಯವನ್ನು ಮೃದುವಾದ ಬೆಣ್ಣೆಗೆ ಹೋಲಿಸುತ್ತಾರೆ. ಇದು ಅಷ್ಟು ಸರಿಯೆನಿಸುವುದಿಲ್ಲ. ಬೇರೆಯವರು ಕಷ್ಟದಲ್ಲಿದ್ದಾರೆಂದು ತಿಳಿದೊಡನೆ ಸಜ್ಜನರು ಕರಗಿಹೋಗುತ್ತಾರೆ. ಬೆಣ್ಣೆ ಹಾಗೆ ತಾನಾಗಿ ಕರಗುವುದಿಲ್ಲ.”
ಉದಾತ್ತ ಮಾನಸಿಕತೆಯನ್ನು ಬೆಳೆಸಿಕೊಂಡವರಲ್ಲಿ ಅನ್ಯರ ಬಗೆಗೆ ಅನುಕಂಪ, ಕಾರುಣ್ಯ ಮೊದಲಾದ ಸ್ಪಂದನವು ಸ್ವಭಾವಸಹಜವಾಗಿರುತ್ತದೆ. ಸಾಮಾನ್ಯ ಜನರಲ್ಲಿಯೂ ಇಂತಹ ಆಂತರಗಿಕ ಭಾವನೆಗಳಿದ್ದರೂ ಹೆಚ್ಚಿನವರು ಅವನ್ನು ಒಳಗೇ ಅಣಗಿಸಿಕೊಂಡು ನಿಷ್ಕ್ರಿಯರಾಗಿರುತ್ತಾರೆ.
ಆದರೆ ಒಮ್ಮೆ ಎಲ್ಲಿಯಾದರೂ ಅನ್ಯಸಹಾಯೋತ್ಸಾಹ ಪ್ರಕಟಗೊಂಡಲ್ಲಿ ಇತರರೂ ಕೈಜೋಡಿಸಲು ಬರುವುದುಂಟು. ದುಷ್ಟಕೂಟಗಳು ಬೆಳೆಯುವಂತೆಯೇ ಹಲವೊಮ್ಮೆ ಲೋಕಹಿತಕಾರಿ ಪ್ರಯಾಸಗಳೂ ಬೆಂಬಲಿಗರನ್ನು ಆಕರ್ಷಿಸಬಲ್ಲವು. ಆಫ್ರಿಕದ ಗುಡ್ಡಗಾಡು ಬಡಜನರಿಗೆ ಆಲ್ಬರ್ಟ್ ಶ್ವೈಟ್ಸರ್ ವೈದ್ಯಕೀಯ ನೆರವನ್ನೀಯಲು ಶ್ರಮಿಸುತ್ತಿದ್ದುದರ ಬಗೆಗೆ ಕೇಳಿ ಅಮೆರಿಕದ ಯಾವುದೊ ಊರಿನ ಜಾನ್ ಎಂಬ ಹದಿಮೂರು ವರ್ಷದ ಬಾಲಕನ ಮನಸ್ಸು ಕರಗಿ ತಾನು ಏನಾದರೂ ಮಾಡಬೇಕೆಂದು ಸಂಕಲ್ಪ ತಳೆದ. ಆ ಊರ ಹತ್ತಿರದ ವಿಮಾನನಿಲ್ದಾಣಕ್ಕೆ ಪತ್ರ ಬರೆದ: “ನನಗೆ ತಂದೆ-ತಾಯಿ ಕೊಡುವ ಮೇಲ್ಖರ್ಚನ್ನು ಉಳಿಸಿ ಎರಡು ಶೀಸೆ ಆಸ್ಪಿರಿನ್ ಮಾತ್ರೆಗಳನ್ನು ಮಾತ್ರ ಕೊಳ್ಳಲು ಸಾಧ್ಯವಾಗಿದೆ. ಇದನ್ನು ದಯವಿಟ್ಟು ಆಫ್ರಿಕಕ್ಕೆ ಕಳಿಸಿರಿ.” ವಿಮಾನಾಧಿಕಾರಿಗಳು ಇದನ್ನೋದಿ ಆರ್ದ್ರರಾದರು, ಸ್ಥಳೀಯ ಪತ್ರಿಕೆಗಳಲ್ಲೂ ರೇಡಿಯೊ ಮೂಲಕವೂ ಪ್ರಸಾರ ಮಾಡಿದರು. ಇದನ್ನು ಓದಿದ, ಕೇಳಿದ ಎಲ್ಲರ ಹೃದಯಗಳೂ ಕರಗಿದವು, ಎಲ್ಲರೂ ಶ್ವೈಟ್ಸರರ ನೆರವಿಗಾಗಿ ಹಣವನ್ನು ವಿಮಾನಾಧಿಕಾರಿಗಳಿಗೆ ಕಳಿಸಿದರು. ಹಾಗೆ ಸಂಗ್ರಹವಾದ ಹಣ ನಾಲ್ಕು ಲಕ್ಷ ಡಾಲರುಗಳಷ್ಟು! ಅದರಿಂದ ಕೊಂಡ ನಾಲ್ಕೂವರೆ ಟನ್ ಔಷಧಗಳ ರಾಶಿ ಶ್ವೈಟ್ಸರ್ ನಡೆಸುತ್ತಿದ್ದ ಆಸ್ಪತ್ರೆಗೆ ತಲಪಿತು. ನಮ್ರವಾದ ಅರಳಿದ ಹೂಗಳ ಪರಿಮಳವೂ ಬಹಳ ದೂರ ಹರಡಬಲ್ಲದು.