ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2021 > ಮನಸ್ಸಿಗೂ ವ್ಯಾಕ್ಸೀನ್ ಬೇಕಾಗಿದೆ

ಮನಸ್ಸಿಗೂ ವ್ಯಾಕ್ಸೀನ್ ಬೇಕಾಗಿದೆ

ಕೊರೋನಾ ಸಾಂಕ್ರಾಮಿಕ ನಿಮಿತ್ತ ಎರಡು ಆವರ್ತ ಲಾಕ್‌ಡೌನ್ ಪರ್ವಗಳನ್ನು ದಾಟಿದ್ದು ಆಗಿದೆ. ಸಾಂಕ್ರಾಮಿಕದ ಪ್ರಕರ್ಷವು ರಕ್ತಬೀಜಾಸುರನನ್ನು ನೆನಪಿಸುತ್ತಿದೆ. ಮೊದಲ ಹಂತಕ್ಕಿಂತ ಆಮೇಲಿನ ಹಂತಗಳು ಹೆಚ್ಚು ಆಘಾತಕಾರಿ ಎನಿಸಿದವು. ಎರಡನೇ ‘ಅಲೆ’ ತಹಬಂದಿಗೆ ಬರುತ್ತಿದ್ದ ಹಾಗೆಯೆ ‘ಬ್ಲ್ಯಾಕ್ ಫಂಗಸ್’ ಇಣುಕಿ ನೋಡುತ್ತಿದೆ. ಮೂರನೇ ಅಲೆಯ ಬಗೆಗೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಾ ಬರುತ್ತಿದ್ದಾರೆ. ವಿಜ್ಞಾನ ಸಮುದಾಯಕ್ಕೂ ಈಗಿನದು ಅಭೂತಪೂರ್ವ ಸವಾಲೇ ಆಗಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಕಾಲಿಕ ದಿಟ್ಟ ಕ್ರಮಗಳಿಂದಾಗಿ ಲಕ್ಷಾಂತರ ಜೀವಗಳು ಉಳಿದವೆಂಬುದತೂ ವಿವಾದಾತೀತವಾಗಿದೆ. ವೈದ್ಯಕೀಯ ದೃಷ್ಟಿಯಿಂದ ಸಮಸ್ಯೆಯ ನಿರ್ವಹಣೆಯು ಅಪೇಕ್ಷಿಸುವ ವ್ಯಾಪಕ ಕ್ರಮಗಳು ಮುಂದುವರಿದಿವೆ, ಫಲದಾಯಕವೂ ಆಗಿವೆ. ಈ ಯಾವುದೇ ಕ್ರಮಗಳ ಪೂರ್ಣ ಸಫಲತೆ ಜನತೆಯ ಸಹಕಾರವನ್ನು ಅವಲಂಬಿಸಿದೆಯೆಬುದು ಹಗಲಿನಷ್ಟು ಸ್ಪಷ್ಟವಿದೆ. ನಕಲಿ ಔಷಧಗಳ ಪ್ರಸಾರ, ಔಷಧಗಳ ಮಾರಾಟದಲ್ಲಿ ಲಾಭಕೋರರ ಕಸರತ್ತುಗಳು ಮೊದಲಾದ ಆಗಂತುಕ ಸನ್ನಿವೇಶಗಳು ಆತಂಕಕಾರಿಯಾದರೂ ಅನಿವಾರಣೀಯವಲ್ಲ. ಈ ವಿಷಯದಲ್ಲಿಯೂ ಜನಜಾಗೃತಿಯ ಪಾತ್ರವೇ ಮಹತ್ತ್ವವದ್ದು. ದುರ್ಭರ ಸಂದರ್ಭಗಳಲ್ಲಿಯೂ ಮಾನಸಿಕ ಸ್ತಿಮಿತತೆಯನ್ನು ಉಳಿಸಿಕೊಂಡು ಆಘಾತದಿಂದ ಪಾರಾದವರ ಹತ್ತಾರು ಉದಾಹರಣೆಗಳೂ ಬೆಳಕು ಕಂಡಿವೆ. ಪ್ರಕೃತ ಪರಿಸ್ಥಿತಿಯಲ್ಲಿ ಸಾರ್ವಜನಿಕರು ‘ಮಾಸ್ಕ್’, ‘ಡಿಸ್ಟೆನ್ಸ್’ ಮೊದಲಾದ ನಿಯಮಗಳನ್ನು ಶತಾಂಶ ಪಾಲಿಸುವುದಂತೂ ಅತ್ಯವಶ್ಯವೆಂಬುದು ಸ್ಪಷ್ಟವೇ ಆಗಿದೆ. ಜೊತೆಜೊತೆಗೇ ಹತಾಶೆಗೊಳಗಾಗದೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದರ ಕಡೆಗೂ ಲಕ್ಷ್ಯ ಕೊಡಲೇಬೇಕಾಗಿದೆ. ಏಕೆಂದರೆ  ಮಾನಸಿಕ ಸಮತೋಲ ನಷ್ಟವಾದರೆ ಅದರ ಪರಿಣಾಮವು ದೂರಗಾಮಿಯಾಗುತ್ತದೆ, ಚಿಕಿತ್ಸಾಕ್ರಮಗಳನ್ನೂ ಅದು ನಿಷ್ಪ್ರಭಗೊಳಿಸೀತು. ಮಾನಸಿಕ ಸ್ವಾಸ್ಥ್ಯದ ರಕ್ಷಣೆಯಾದರೋ ಪೂರ್ಣವಾಗಿ ಜನರ ಕಕ್ಷೆಗೇ ಒಳಪಟ್ಟಿರುತ್ತದೆ. ಕೌಟುಂಬಿಕ ಮೌಲ್ಯಗಳ ದೃಢೀಕರಣ, ಶಕ್ಯವಿದ್ದಷ್ಟು ವ್ಯಾಯಾಮ-ಪ್ರಾಣಾಯಾಮಾದಿಗಳು, ಸದ್ಗ್ರಂಥ ವ್ಯಾಸಂಗ ಮೊದಲಾದವನ್ನೊಳಗೊಂಡ ಸ್ವಸ್ಥ ಜೀವನಕ್ರಮಾನುಸಂಧಾನಕ್ಕೂ ಈಗಿನ ಸನ್ನಿವೇಶದಲ್ಲಿ ವಿಶೇಷ ಗಮನ ಸಲ್ಲಬೇಕಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ