ಕೋವಿಡ್ ಎರಡನೆಯ ಅಲೆಯು ಸವಾಲೊಡ್ಡಿದ ಸಮಯದಲ್ಲಿಯೂ ಸಮಾಜ ಸ್ಪಂದಿಸಿದ್ದನ್ನು ನಾವು ಕಾಣುತ್ತಿದ್ದೇವೆ. ಚಿಕಿತ್ಸೆಗಾಗಿ ಆಸ್ಪತ್ರೆಯ ಹಾಸಿಗೆಗಳ ಕೊರತೆಯಾದಾಗ ಸಮುದಾಯಗಳು ನಿರ್ವಹಿಸುತ್ತಿರುವ ಶಾಲೆಗಳೂ ಸಮುದಾಯ ಭವನಗಳೂ ಮಠಗಳ ಆವರಣಗಳೂ ಕೋವಿಡ್ ಆರೈಕೆಯ ಕೇಂದ್ರಗಳಾಗಿ ಪರಿವರ್ತನೆಯಾದವು. ನೂರಾರು ಕಡೆಗಳಲ್ಲಿ ಸ್ವಯಂಸೇವಕರು ನಡೆಸುವ ಸಹಾಯವಾಣಿಗಳು ಕಾರ್ಯಾರಂಭ ಮಾಡಿದವು. ವೈದ್ಯರ ಸಲಹೆ, ಔಷಧ, ಆಮ್ಲಜನಕ ಪೂರೈಕೆ, ಆಂಬುಲೆನ್ಸ್ ಸೇವೆಯಿಂದ ಹಿಡಿದು ಅಂತ್ಯಸಂಸ್ಕಾರಕ್ಕೆ ನೆರವಾಗುವವರೆಗೆ ಸಾವಿರಾರು ಸಹೃದಯರು ನೆರವಿಗೆ ಟೊಂಕ ಕಟ್ಟಿ ನಿಂತರು.ದಾನ ಮತ್ತು ಸೇವೆ – ಭಾರತೀಯ ಸಂಸ್ಕೃತಿಯ ಮೂಲಗುಣಗಳು. ಕೋವಿಡ್ ಸಂಕಷ್ಟದಲ್ಲಿ ನಮ್ಮ ಸಮಾಜದ ಸ್ಪಂದನೆ ಅದರ ಶ್ರೇಷ್ಠ ಉದಾಹರಣೆಯಾಗಿದೆ.
ಸಂಕಷ್ಟಗಳು ಎದುರಾದಾಗ ಮಾನವನ ಸತ್ತ್ವಪರೀಕ್ಷೆ ನಡೆಯುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವ ಮಾತು. ಇದು ಸಮಾಜಕ್ಕೆ ಹಾಗೆಯೇ ಇಡೀ ರಾಷ್ಟ್ರಕ್ಕೂ ಅನ್ವಯವಾಗುತ್ತದೆ. ಕೊರೋನಾ ಸಮಸ್ತ ಮಾನವತೆಯ ಮೇಲೆ ಎರಗಿರುವ ಆಪತ್ತು. ಭಾರತವೂ ಈ ಸಂಕಷ್ಟದಿAದ ಹೊರತಲ್ಲ. ಈ ಸತ್ತ್ವಪರೀಕ್ಷೆಯ ಸವಾಲನ್ನು ಭಾರತೀಯ ಸಮಾಜ ಸಮರ್ಥವಾಗಿ ಎದುರಿಸುತ್ತಿದೆಯೆ? ಅಥವಾ ಕೆಲವು ವರ್ಗದ ಮಾಧ್ಯಮಗಳು, ರಾಜಕೀಯ ಹಿತಾಸಕ್ತಿಗಳು ಬಿಂಬಿಸುತ್ತಿರುವಂತೆ ಇಡೀ ದೇಶದಲ್ಲಿ ಹತಾಶೆ ಮಡುಗಟ್ಟಿದೆಯೆ? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ಕಳೆದ ವರ್ಷ ಕೋವಿಡ್ ಸಂಕಷ್ಟ ಆರಂಭವಾದಾಗಿನಿಂದ ನಮ್ಮ ಸಮಾಜ ಸ್ಪಂದಿಸಿದ ರೀತಿ, ಭಾರತ ಒಂದು ರಾಷ್ಟ್ರವಾಗಿ ಪ್ರತಿಸ್ಪಂದಿಸಿದ ಬಗೆಯನ್ನು ಭಿನ್ನ ದೃಷ್ಟಿಕೋನದಿಂದ ಗ್ರಹಿಸಬೇಕಾದ ಅಗತ್ಯವಿದೆ. Count Your Blessings ಎನ್ನುವ ಇಂಗ್ಲಿಷ್ ಕವನದ ಆಶಯದಂತೆ ನಮ್ಮ ಉಪಲಬ್ಧಿಗಳನ್ನೂ ಗ್ರಹಿಸಬೇಕಿದೆ.
ಅಭಾವದಿಂದ ಸ್ವಾವಲಂಬನೆಯೆಡೆಗೆ
ಕೋವಿಡ್ ಸಾಂಕ್ರಾಮಿಕದಿಂದ ಭಾರತ ತತ್ತರಿಸಿಹೋಗಲಿದೆ ಎಂದೇ ವಿಶ್ವದ ತಜ್ಞರುಗಳು ಅಭಿಪ್ರಾಯಪಟ್ಟಿದ್ದರು. ಭಾರತದ ಅಂದಿನ ವೈದ್ಯಕೀಯ ಮೂಲಸೌಕರ್ಯದ ಕೊರತೆ, ಬೃಹತ್ ಜನಸಂಖ್ಯೆ, ಜನಸಾಂದ್ರತೆ ಇತ್ಯಾದಿಗಳಿಂದ ಕೋವಿಡ್ ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟುವುದು ಅಸಾಧ್ಯ ಎನ್ನುವುದು ಅವರ ಅಭಿಮತವಾಗಿತ್ತು. ಆದರೆ ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಈ ತಜ್ಞರ ಅಭಿಪ್ರಾಯ ಸುಳ್ಳಾಯಿತು ಎನ್ನುವುದು ಕಂಡುಬರುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ದೇಶದ ವೈದ್ಯಕೀಯ ವ್ಯವಸ್ಥೆ ಕೊರತೆಗಳ ನಡುವೆಯೂ ಎದ್ದುನಿಂತಿದ್ದು, ಸಾಮರ್ಥ್ಯಕ್ಕೂ ಮೀರಿ ದುಡಿದದ್ದನ್ನು ದೇಶ ಕಂಡಿದೆ. ಹಾಗೆಯೇ ಈಗ ಎರಡನೆಯ ಅಲೆ ತೀವ್ರಗೊಂಡ ಸಂದರ್ಭದಲ್ಲಿಯೂ ಕ್ಷಿಪ್ರವಾಗಿ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಜೋಡಿಸಿಕೊಳ್ಳಬಹುದು ಎನ್ನುವುದನ್ನೂ ಭಾರತ ತೋರಿಸಿಕೊಟ್ಟಿದೆ.
೨೦೨೦ರ ಜನವರಿಯಲ್ಲಿ ದೇಶದಲ್ಲಿ ಇದ್ದದ್ದು ಒಂದೇ ಒಂದು ಕೋವಿಡ್ ಪರೀಕ್ಷೆಯ ಲ್ಯಾಬ್; ಪರೀಕ್ಷೆಯ ಯಂತ್ರ ಮತ್ತು ಕಿಟ್ಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ಇಂದು ಪ್ರತಿ ರಾಜ್ಯದಲ್ಲಿ ಪ್ರತಿದಿನ ಲಕ್ಷಗಟ್ಟಲೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ದೇಶದಲ್ಲಿ ಕೋವಿಡ್ ಪತ್ತೆಯಾದ ಸಂದರ್ಭದಲ್ಲಿ ಸುರಕ್ಷತೆಗಾಗಿ ಧರಿಸುವ ಕ್ಲಾಸ್-೩ ಪಿಪಿಇ ಕಿಟ್ ತಯಾರಿಸುವ ಒಂದೇ ಒಂದು ಘಟಕವೂ ದೇಶದಲ್ಲಿರಲಿಲ್ಲ, ಅದರ ತಂತ್ರಜ್ಞಾನವೂ ಇರಲಿಲ್ಲ. ಆದರೆ ಕೇವಲ ೬೦ ದಿನಗಳಲ್ಲಿ ಭಾರತ ಪಿಪಿಇ ಕಿಟ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೇ ಉಳಿದ ದೇಶಗಳಿಗೂ ರಫ್ತು ಮಾಡತೊಡಗಿತು. ಎನ್-೯೫ ಮಾಸ್ಕ್ಗಳ ಕೊರತೆಯಿತ್ತು, ವೆಂಟಿಲೇಟರ್ಗಳ ಕೊರತೆಯಿತ್ತು. ಆದರೆ ಇವುಗಳಲ್ಲಿ ಕ್ಷಿಪ್ರವಾಗಿ ಆತ್ಮನಿರ್ಭರತೆ ಸಾಧಿಸುವಲ್ಲಿ ಭಾರತ ಯಶಸ್ವಿಯಾಯಿತು. ವೆಂಟಿಲೇಟರ್ಗಳು ನಮ್ಮಲ್ಲಿಯೇ ತಯಾರಾಗತೊಡಗಿದವು.
ಅಮೆರಿಕವೂ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಿಗೆ ಅಗತ್ಯ ಔಷಧಿಗಳನ್ನು ಭಾರತ ರಫ್ತು ಮಾಡಿತು. ಭಾರತವನ್ನು ವಿಶ್ವದ ಔಷಧಾಲಯ – ‘ಫಾರ್ಮಸಿ ಆಫ್ ದಿ ವರ್ಲ್ಡ್’ ಎಂದೇ ಕರೆಯಲಾಗುತ್ತಿದೆ. ಅದರಲ್ಲೂ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಏಷಿಯಾದ ಆರ್ಥಿಕವಾಗಿ ಹಿಂದುಳಿದ ದೇಶಗಳಿಗೆ ಜೀವರಕ್ಷಕ ಔಷಧಗಳನ್ನು ಕೈಗೆಟಕುವ ಬೆಲೆಗೆ ಒದಗಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ.
ಭಾರತದಲ್ಲೇ ಎರಡು ಲಸಿಕೆಗಳು ಉತ್ಪಾದನೆಗೊಳ್ಳುತ್ತಿವೆ. ಅದರಲ್ಲಿ ಒಂದಾದ ಕೋವಾಕ್ಸಿನ್ ಭಾರತದಲ್ಲಿಯೇ ಅಭಿವೃದ್ಧಿಗೊಳಿಸಿದ್ದು. ಇದೀಗ ಕೊರ್ಬಾವ್ಯಾಕ್ಸ್ ಹೆಸರಿನ ಮೇಡ್ ಇನ್ ಇಂಡಿಯಾ ಲಸಿಕೆ ಉತ್ಪಾದನೆಗೆ ಸಿದ್ಧವಾಗಿದ್ದು ಅತ್ಯಂತ ಕಡಮೆ ಬೆಲೆಗೆ ದೊರಕಲಿದೆ. ಅತಿ ಹೆಚ್ಚು ಲಸಿಕೆ ನೀಡಿದ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಇದುವರೆಗೆ ಸುಮಾರು ೬ ಕೋಟಿಗೂ ಹೆಚ್ಚು ಮೇಡ್ ಇನ್ ಇಂಡಿಯಾ ಲಸಿಕೆಗಳು ೯೫ ದೇಶಗಳನ್ನು ತಲಪಿವೆ, ಆ ಮೂಲಕ ಮುಂಚೂಣಿ ವೈದ್ಯಕೀಯ ಸಿಬ್ಬಂದಿ ಮತ್ತು ಜನಸಾಮಾನ್ಯರ ಜೀವ ರಕ್ಷಣೆಗೆ ಅತ್ಯಮೂಲ್ಯ ಕೊಡುಗೆ ನೀಡಿದೆ.
ಮಿಡಿದ ಸಮಾಜದ ಸ್ಪಂದನೆ
ಕೋವಿಡ್ ನಿಯಂತ್ರಣಕ್ಕಾಗಿ ಉಳಿದ ದೇಶಗಳು ಅನುಸರಿಸಿದ ವಿಧಾನದಂತೆ ಇಡೀ ದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸಬೇಕಾಗಿ ಬಂದ ಸಂದರ್ಭದಲ್ಲಿ ನಮ್ಮ ಸಮಾಜ ಸ್ಪಂದಿಸಿದ ರೀತಿ ಅವಿಸ್ಮರಣೀಯವಾದುದು. ಕೋಟ್ಯಂತರ ಜನರ ಬದುಕು ಸಂಕಷ್ಟಕ್ಕೊಳಗಾಯಿತು, ನಿಜ. ಹಾಗೆಯೇ ಇಡೀ ಸಮಾಜವು ಪರಸ್ಪರ ಸಹಕಾರಕ್ಕೆ ನಿಂತಿತು. ಬಡವರಿಗೆ, ಅಗತ್ಯ ಉಳ್ಳವರಿಗೆ ರೇಶನ್, ಆಹಾರ ಮೊದಲಾದ ರೀತಿಯಲ್ಲಿ ಸಮಾಜದ ನೆರವು ಹರಿದುಬಂತು. ಸಂಘಸಂಸ್ಥೆಗಳು, ಸಮುದಾಯಗಳು ಸೇವೆಗೆ ನಿಂತವು. ವೈಯಕ್ತಿಕ ಕಷ್ಟಗಳನ್ನು ಬದಿಗಿಟ್ಟು ಇನ್ನೊಬ್ಬರ ನೆರವಿಗೆ ಧಾವಿಸಿದ ಸಾವಿರಾರು ಉದಾಹರಣೆಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಕೋವಿಡ್ ಪರಿಹಾರಕ್ಕಾಗಿ ಕೇಂದ್ರಸರ್ಕಾರ ಆರಂಭಿಸಿದ ‘ಪಿಎಂ ಕೇರ್ಸ್’ ನಿಧಿಯಲ್ಲಿ ಕೆಲವೇ ತಿಂಗಳಲ್ಲಿ ೩ ಸಾವಿರ ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಯಿತು. ಒಟ್ಟಾರೆಯಾಗಿ ಸಮಾಜದ ಸಾಮೂಹಿಕ ಶಕ್ತಿಯು ಉಜ್ವಲವಾಗಿ ಪ್ರಕಟಗೊಂಡಿತು ಎಂದರೆ ತಪ್ಪಾಗಲಾರದು.
ಈಗ ಎರಡನೆಯ ಅಲೆಯು ಸವಾಲೊಡ್ಡಿದ ಸಮಯದಲ್ಲಿಯೂ ಅದೇ ರೀತಿ ಸಮಾಜ ಸ್ಪಂದಿಸಿದ್ದನ್ನು ನಾವು ಕಾಣುತ್ತಿದ್ದೇವೆ. ಚಿಕಿತ್ಸೆಗಾಗಿ ಆಸ್ಪತ್ರೆಯ ಹಾಸಿಗೆಗಳ ಕೊರತೆಯಾದಾಗ ಸಮುದಾಯಗಳು ನಿರ್ವಹಿಸುತ್ತಿರುವ ಶಾಲೆಗಳೂ, ಸಮುದಾಯ ಭವನಗಳೂ, ಮಠಗಳ ಆವರಣಗಳೂ ಕೋವಿಡ್ ಆರೈಕೆಯ ಕೇಂದ್ರಗಳಾಗಿ ಪರಿವರ್ತನೆಯಾದವು. ನೂರಾರು ಕಡೆಗಳಲ್ಲಿ ಸ್ವಯಂಸೇವಕರು ನಡೆಸುವ ಸಹಾಯವಾಣಿಗಳು ಕಾರ್ಯಾರಂಭ ಮಾಡಿದವು. ವೈದ್ಯರ ಸಲಹೆ, ಔಷÀಧ, ಆಮ್ಲಜನಕ ಪೂರೈಕೆ, ಆಂಬುಲೆನ್ಸ್ ಸೇವೆಯಿಂದ ಹಿಡಿದು ಅಂತ್ಯಸAಸ್ಕಾರಕ್ಕೆ ನೆರವಾಗುವವರೆಗೆ ಸಾವಿರಾರು ಸಹೃದಯರು ನೆರವಿಗೆ ಟೊಂಕಕಟ್ಟಿ ನಿಂತರು. ಹಲವಾರು ಕಡೆಗಳಲ್ಲಿ ರಕ್ತದ ಕೊರತೆ ನೀಗಿಸಲು ದೊಡ್ಡ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳು ನಡೆದವು.
ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರು ಹಿಂದು ಸ್ವಯಂಸೇವಕ ಸಂಘ, ಸೇವಾ ಇಂಟರ್ನ್ಯಾಷನಲ್ ಮೊದಲಾದ ವೇದಿಕೆಗಳ ಅಡಿಯಲ್ಲಿ ನೆರವಾದ ಅನೇಕ ಘಟನೆಗಳು ವರದಿಯಾಗಿವೆ. ದಾನ ಮತ್ತು ಸೇವೆ ಭಾರತೀಯ ಸಂಸ್ಕೃತಿಯ ಮೂಲಗುಣಗಳು. ಕೋವಿಡ್ ಸಂಕಷ್ಟದಲ್ಲಿ ನಮ್ಮ ಸಮಾಜದ ಸ್ಪಂದನೆ ಅದರ ಶ್ರೇಷ್ಠ ಉದಾಹರಣೆಯಾಗಿದೆ.
ಕದಡಲಿಲ್ಲ ಶಾಂತಿ
ಮಾನಸಿಕ ಒತ್ತಡ, ಸಾಮಾಜಿಕ ಅಶಾಂತಿ – ಇವು ಸಾಂಕ್ರಾಮಿಕ ತಂದೊಡ್ಡುವ ಸವಾಲಿನ ಸಮಯದಲ್ಲಿ ಸಹಜ. ತಮ್ಮವರನ್ನು ಕಳೆದುಕೊಂಡಾಗ ಉಂಟಾಗುವ ಮಾನಸಿಕ ನೋವು ಸಹಜ. ಹಾಗೆಯೇ ಕೋವಿಡ್ ಲಾಕ್ಡೌನ್ನಿಂದಾಗಿ ಈ ಸಮಸ್ಯೆ ಉಲ್ಬಣಗೊಂಡಿದ್ದನ್ನು ನಾವು ವಿಶ್ವದ ಅನೇಕ ದೇಶಗಳಲ್ಲಿ ಕಾಣುತ್ತಿದ್ದೇವೆ. ಅಮೆರಿಕ ಮತ್ತು ಯೂರೋಪಿನ ದೇಶಗಳ ಪ್ರಮುಖ ನಗರಗಳಲ್ಲಿ, ಆಫ್ರಿಕದ ಕೆಲವು ದೇಶಗಳಲ್ಲಿ ಲಾಕ್ಡೌನ್ ನಿಯಮಗಳನ್ನು ವಿರೋಧಿಸಿ, ವ್ಯಾಕ್ಸೀನ್ ಬೇಕು-ಬೇಡಗಳ ನಡುವೆ, ಮಾಸ್ಕ್ ಹಾಕುವ ನಿಯಮದ ವಿರುದ್ಧ, ಉದ್ಯೋಗ-ಉದ್ಯಮಗಳ ಸಲುವಾಗಿ – ಹೀಗೆ ವಿವಿಧ ವಿಷಯಗಳಿಗೆ ಪ್ರತಿಭಟನೆಗಳು, ಪ್ರದರ್ಶನಗಳು ನಡೆಯುವ ವರದಿಗಳು ದಿನನಿತ್ಯ ಬರುತ್ತವೆ. ಆದರೆ ಭಾರತದಲ್ಲಿ ಇಂತಹ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಕಾಣಲಿಲ್ಲ. ಕಳೆದ ವರ್ಷ ವಲಸೆ ಕಾರ್ಮಿಕರ ವಿಷಯದಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳು ದಂಗೆ ಎಬ್ಬಿಸುವ ಪ್ರಯತ್ನ ಮಾಡಿದರೂ, ಅದು ಯಶಸ್ಸು ಕಾಣಲಿಲ್ಲ. ಭಾರತ ದಂಗೆ ಏಳಲಿಲ್ಲ. ದೇಶದಲ್ಲಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಇತ್ಯಾದಿಗಳಲ್ಲಿ ಅಂತಹ ದೊಡ್ಡ ಪ್ರಮಾಣದ ಏರಿಕೆ ಕಾಣಲಿಲ್ಲ.
ಬದಲಾಗಿ ಲಾಕ್ಡೌನ್ ಕುಟುಂಬದ ಸದಸ್ಯರನ್ನು ಹತ್ತಿರ ತಂದಿತು. ಪರಸ್ಪರ ಆತ್ಮೀಯತೆಯನ್ನೂ ವೃದ್ಧಿಗೊಳಿಸಿತು. ಉದ್ಯೋಗನಿಮಿತ್ತ ನಗರ ಸೇರಿದವರು ವರ್ಕ್ ಫ್ರಂ ಹೋಮ್ ಇತ್ಯಾದಿ ಕಾರಣಗಳಿಂದ ಹಳ್ಳಿಗಳಿಗೆ ಮರಳಿ ಹೋದಾಗ ಬೇರಿನೊಡನೆ ಮತ್ತೆ ಜೋಡಿಸಿಕೊಂಡರು. ಹಳ್ಳಿಗಳಲ್ಲಿಯೂ ಹೊಸ ಗಾಳಿ ಬೀಸಿದ ಅನುಭವ ಕಾಣತೊಡಗಿತು.
ಪುಟಿದೆದ್ದ ರಾಷ್ಟ್ರ
ಈ ನಡುವೆ ಕೆಲವು ಮಹತ್ತ್ವದ ಘಟನೆಗಳೂ ನಡೆದವು. ಕೋವಿಡ್ ಸಾಂಕ್ರಾಮಿಕದ ಕಠಿಣ ಸಮಯದಲ್ಲಿ ಲಡಾಕಿನ ಗ್ಯಾಲ್ವಾನ್ ಕಣಿವೆ-ಪ್ಯಾಂಗಾಗ್ ಸರೋವರ ಪ್ರದೇಶಗಳಲ್ಲಿ ಎದುರಾದ ಚೀನಾದ ಗಡಿತಂಟೆಯನ್ನೂ ಭಾರತ ಸಮರ್ಥವಾಗಿ ಎದುರಿಸಿತು, ಚೀನಾವನ್ನು ಹಿಮ್ಮೆಟ್ಟಿಸಿತು.
ಕೋವಿಡ್ ಸಂಕಷ್ಟ ಹಾಗೂ ರೈತರ ಹೆಸರಿನಲ್ಲಿ ಕೆಲವು ದೇಶವಿರೋಧಿ ಶಕ್ತಿಗಳು ನಡೆಸುತ್ತಿರುವ ಹಾದಿ ತಪ್ಪಿಸುವ ಪ್ರತಿಭಟನೆಯ ನಡುವೆ ೨೦೨೦-೨೧ರ ಸಾಲಿನಲ್ಲಿ ಭಾರತವು ಆಹಾರ ಧಾನ್ಯ ಉತ್ಪಾದನೆಯಲ್ಲಿ ಐತಿಹಾಸಿಕ ದಾಖಲೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದ ಆಹಾರ ಧಾನ್ಯ ಉತ್ಪಾದನೆ ಶೇ. ೨ ರಷ್ಟು ಬೆಳವಣಿಗೆ ಕಂಡಿದ್ದು ೩೦೩ ಮಿಲಿಯನ್ ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ.
ದೇಶದ ಆರ್ಥಿಕತೆ ಮತ್ತೆ ಹಳಿಗೆ ಬಂದಿದ್ದು ಮಾರ್ಚ್ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. ೧.೬ರ ಬೆಳವಣಿಗೆ ಕಂಡಿದೆ. ಷೇರು ಮಾರುಕಟ್ಟೆ ಏರುಗತಿಯಲ್ಲಿದ್ದು ಇದು ದೇಶದ ಆರ್ಥಿಕತೆ ಸುಧಾರಿಸುತ್ತಿರುವ ಲಕ್ಷಣ ಎನ್ನಲಾಗುತ್ತಿದೆ.
ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಶಿಕ್ಷಣ ಆನ್ಲೈನ್ ಮಾಧ್ಯಮಕ್ಕೆ ತೆರೆದುಕೊಂಡಿತು. ಪ್ರತಿಕೂಲ ಸನ್ನಿವೇಶಕ್ಕೆ ಹೊರತಾಗಿಯೂ ಮಕ್ಕಳ ಶಿಕ್ಷಣ ಸಂಪೂರ್ಣ ನಿಂತುಹೋಗಿಲ್ಲ. ಹಾಗೆಯೇ ಕಲೆ-ಕಲಾವಿದರೂ ಆನ್ಲೈನ್ ಮಾಧ್ಯಮಗಳ ಮೂಲಕ ಪ್ರದರ್ಶನ ನೀಡಲು ಮುಂದಾದರು. ವ್ಯಾಪಾರ ಆನ್ಲೈನ್ ಮೂಲಕ ವೃದ್ಧಿಸಿತು.
ಕೋವಿಡ್ ಒಂದು ವಿಚಿತ್ರ ಸನ್ನಿವೇಶವನ್ನು, ಸವಾಲನ್ನು ಮಾನವತೆಯ ಮುಂದೆ ಒಡ್ಡಿತು ನಿಜ. ಆದರೆ ಭಾರತ ಅದಕ್ಕೆ ಪ್ರತಿಸ್ಪಂದಿಸಿದ ರೀತಿ ನಿರಾಶಾದಾಯಕವಲ್ಲ. ಏಕೆಂದರೆ ಭಾರತದ ಮೂಲಸತ್ತ್ವವು ಭರವಸೆಯೇ ಹೊರತು ಹತಾಶೆಯಲ್ಲ.
When upon life’s billows
You are tempest tossed
When you are discouraged
Thinking all is lost,
Count your many blessings.
Name them one by one
And it will surprise you
What the Lord has done.
ಎನ್ನುವ ಕವಿತೆಯ ಸಾಲುಗಳಂತೆ ಕೆಲವೇ ಕೆಲವು ಋಣಾತ್ಮಕ ವಿಷಯಗಳನ್ನು ಇಟ್ಟುಕೊಂಡು ಅವುಗಳನ್ನೇ ವೈಭವೀಕರಿಸುವ ಬದಲು ಸಮಾಜಕ್ಕೆ ಪ್ರಗತಿಯ ಹಾದಿಯಲ್ಲಿ ನಡೆಯಲು ಪ್ರೇರಣೆ ನೀಡುವ ಬಹುಸಂಖ್ಯೆಯಲ್ಲಿ ಇರುವ ಸಂಗತಿಗಳನ್ನು ಗ್ರಹಿಸಬೇಕಾದ ಅಗತ್ಯವಿದೆ. “ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? | ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ” ಎಂದು ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳುವಂತೆ ಸಮಾಜದೊಂದಿಗೆ ಒಂದಾಗಿ ಬದುಕಿ ಸಾರ್ಥಕತೆಯನ್ನು ಸಾಧಿಸುವತ್ತ ನಾವು ಮುನ್ನಡೆಯಲು ಪ್ರೇರಣೆ ಕಂಡುಕೊಳ್ಳಬೇಕಿದೆ. “ಮತ್ತೆ ತೋರ್ಪುದು ನಾಳೆ” – ಹಾಗಾಗಿ ನಾಳೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸಿ ಹಿಮ್ಮೆಟ್ಟಿಸಲು ಸಮರ್ಥರಾಗಿ ಸಿದ್ಧರಾಗಬೇಕಿದೆ.
೧೯೯೯ರಲ್ಲಿ ಒಡಿಶಾವನ್ನು ಅಪ್ಪಳಿಸಿದ ಚಂಡಮಾರುತ ಬಲಿ ಪಡೆದ ಜೀವಗಳ ಸಂಖ್ಯೆ ಸುಮಾರು ೧೦ ಸಾವಿರ. ೪ ಬಿಲಿಯನ್ ಡಾಲರ್ಗೂ ಅಧಿಕ ಮೌಲ್ಯದ ನಷ್ಟ ಸಂಭವಿಸಿತ್ತು. ಎರಡು ದಶಕಗಳ ನಂತರ ಪೂರ್ವ ಕರಾವಳಿಯನ್ನು ಇತ್ತೀಚೆಗೆ ಅಪ್ಪಳಿಸಿದ ಯಾಸ್ ಚಂಡಮಾರುತದಲ್ಲಿ ಉಂಟಾದ ಸಾವಿನ ಸಂಖ್ಯೆ ಆರು. ಹಾಗೆಯೇ ಯಾಸ್ಗೆ ಸ್ವಲ್ಪ ಮೊದಲು ಪಶ್ಚಿಮ ಕರಾವಳಿಗೆ ಅಪ್ಪಳಿಸಿದ ಇನ್ನೂ ತೀವ್ರವಾದ ತೌಕ್ತೆ ಚಂಡಮಾರುತದಲ್ಲಿ ಪಿ-೩೦೫ ನೌಕೆಯ ಅನಾಹುತದಲ್ಲಿ ಮೃತರಾದ ೭೦ ಜನರನ್ನು ಹೊರತುಪಡಿಸಿದರೆ ಪ್ರಾಣ ಕಳೆದುಕೊಂಡವರು ನೂರು ಚಿಲ್ಲರೆ ಮಂದಿ. ಅಂದರೆ ಸಾವು-ನೋವು ಆಸ್ತಿಪಾಸ್ತಿ ನಷ್ಟ ಗಣನೀಯವಾಗಿ ತಗ್ಗಿದೆ. ಭಾರತದ ಈ ‘ಶೂನ್ಯ ಸಾವು’ ವಿಧಾನವು ವಿಶ್ವದ ವೇದಿಕೆಗಳಲ್ಲಿ ಶ್ಲಾಘನೆಗೊಳಗಾಗುತ್ತಿದೆ. ವಿಶ್ವಸಂಸ್ಥೆಯ ಡಿಸಾಸ್ಟರ್ ರಿಸ್ಕ್ ರಿಡಕ್ಶನ್ ಸಂಸ್ಥೆ (UNDRR) ಒಡಿಶಾದ ಚಂಡಮಾರುತ ಮೊದಲಾದ ವಿಕೋಪಗಳ ನಿರ್ವಹಣೆಯ ಕೆಲಸವನ್ನು ವಿಶ್ವದ ಉಳಿದ ಕಡೆಗಳಲ್ಲಿ ಅನುಸರಿಸಬಹುದಾದ ಮಾದರಿ – ಎಂದು ಗುರುತಿಸಿದೆ. ಪ್ರಕೃತಿವಿಕೋಪಗಳನ್ನು ತಾಳಿಕೊಳ್ಳಬಹುದಾದಂತಹ ಆಶ್ರಯಗಳ ನಿರ್ಮಾಣ, ಕ್ಷಿಪ್ರವಾಗಿ ಲಕ್ಷಾಂತರ ಜನರ ಸ್ಥಳಾಂತರ ಹಾಗೂ ಶೀಘ್ರ ಪರಿಹಾರ ಕಾರ್ಯಾಚರಣೆ, ಹಾನಿಗೊಳಗಾದ ವಿದ್ಯುತ್ ದೂರಸಂಪರ್ಕ ಮೊದಲಾದ ಮೂಲಸೌಕರ್ಯಗಳ ಕ್ಷಿಪ್ರ ಮರುಸ್ಥಾಪನೆ, ಹಾಗೆಯೇ ಎಲ್ಲಕ್ಕೂ ಮೊದಲು ದಕ್ಷ ಮುನ್ಸೂಚನಾ ವ್ಯವಸ್ಥೆ – ಇವುಗಳಲ್ಲಿ ಸಾಧಿಸಿದ ಪ್ರಗತಿ ವಿಶ್ವಕ್ಕೆ ಮಾದರಿಯಾಗಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ವಿಪತ್ತು ನಿರ್ವಹಣೆಯಲ್ಲಿ ತರಬೇತಿ ಪಡೆದ ೧೪ ಸಾವಿರ ನುರಿತ ಸೇವಾನಿರತ ಸಿಬ್ಬಂದಿಗಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಬಲ (UNDRF) ತುಕಡಿಗಳು, ಹಾಗೆಯೇ ರಾಜ್ಯಗಳ ವಿಪತ್ತು ನಿರ್ವಹಣಾ ಬಲಗಳು, ವಿಪತ್ತು ನಿರ್ವಹಣೆಯಲ್ಲಿ ಹೆಚ್ಚಿಸಿಕೊಂಡ ದಕ್ಷತೆ, ಕೇಂದ್ರ ಮತ್ತು ರಾಜ್ಯ ಆಡಳಿತಗಳ ಸಮನ್ವಯ ಮತ್ತು ಜಂಟಿ ಕಾರ್ಯಾಚರಣೆ – ಇವೆಲ್ಲವುಗಳಿಂದ ಸಾವುನೋವಿನ ಪ್ರಮಾಣವನ್ನು ತೀವ್ರವಾಗಿ ತಗ್ಗಿಸುವುದು ಸಾಧ್ಯವಾಗಿದೆ. ನಿರಂತರವಾಗಿ ವಿಪತ್ತು ನಿರ್ವಹಣೆಯ ದಕ್ಷತೆ ಹೆಚ್ಚುತ್ತ ಬಂದಿದೆ. ಈ ಸುದ್ದಿಯಾಗದ ಸಾಧನೆ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.
ಭಾರತೀಯ ಸಂಸ್ಕೃತಿಯ ಉದಾತ್ತತೆ
ಈ ಸಂಕಷ್ಟದ ಸಂದರ್ಭದಲ್ಲಿ ವಿಶ್ವದ ಮುಂಚೂಣಿ ದೇಶಗಳು ಏನು ಮಾಡುತ್ತಿವೆ ಎಂದು ಗಮನಿಸಿದರೆ ಆಶ್ಚರ್ಯವಾಗಬಹುದು. ಕೊರೋನಾ ಅತ್ಯಂತ ತೀವ್ರವಾಗಿ ಬಾಧಿಸಿದ್ದು ವಿಶ್ವದ ದೊಡ್ಡಣ್ಣನೆನಿಸಿಕೊಂಡ ಅಮೆರಿಕವನ್ನು ಹಾಗೂ ಮುಂದುವರಿದ ಯೂರೋಪಿನ ದೇಶಗಳನ್ನು. ಈ ದೇಶಗಳ ವೈದ್ಯಕೀಯ ವಿಜ್ಞಾನ ಮತ್ತು ಚಿಕಿತ್ಸಾ ವ್ಯವಸ್ಥೆ ಬಹಳವಾಗಿ ಮುಂದುವರಿದಿವೆ. ಆದರೂ ಕೊರೋನಾ ವೈರಾಣು ತೀವ್ರವಾಗಿ ಹರಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ, ಸಾವಿನ ಪ್ರಮಾಣವನ್ನು ನಿಯಂತ್ರಿಸಲಾಗಲಿಲ್ಲ. ಈ ಮುಂದುವರಿದ ದೇಶಗಳಲ್ಲಿಯೇ ವೈದ್ಯಕೀಯ ವ್ಯವಸ್ಥೆ ಕುಸಿಯಿತು ಎನ್ನುವುದನ್ನು ಗಮನಿಸಬೇಕು. ಇನ್ನು ಈ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಪಂಚದ ಉಳಿದ ದೇಶಗಳ ನೆರವಿಗೆ ನಿಂತವೇ? – ಎಂದರೆ ಉತ್ತರ ಇಲ್ಲ. ಉದಾಹರಣೆಗೆ ಲಸಿಕೆಯ ವಿಚಾರವನ್ನೇ ನೋಡಿದರೆ, ಫೈಜರ್ ಮತ್ತು ಮೊಡರ್ನಾ ಹೆಸರಿನ ಎರಡು ಪ್ರಮುಖ ಲಸಿಕೆಗಳು ಅಮೆರಿಕ ಮತ್ತು ಯೂರೋಪಿನ ದೇಶಗಳಲ್ಲಿ ಪೂರೈಕೆಯಾಗುತ್ತಿವೆ. ಜೊತೆಗೆ ಭಾರತದಲ್ಲಿಯೂ ಉತ್ಪಾದನೆಯಾಗುತ್ತಿರುವ ಆಸ್ಟ್ರಾಜೆನಕ್ ಕಂಪೆನಿಯ ಕೋವಿಶೀಲ್ಡ್ ಲಸಿಕೆಯೂ ಪೂರೈಕೆಯಾಗುತ್ತಿವೆ. ಕೊರೋನಾ ವೈರಾಣುವನ್ನು ಹಿಮ್ಮೆಟ್ಟಿಸಬೇಕೆಂದರೆ ತ್ವರಿತವಾಗಿ ಹೆಚ್ಚಿನ ಜನರಿಗೆ ಲಸಿಕೆ ನೀಡಲೇಬೇಕು ಎನ್ನುವುದು ವಿಜ್ಞಾನಿಗಳು ಮುಂದಿಟ್ಟಿರುವ ವಾದ. ಆದರೆ ಈ ಮುಂದುವರಿದ ದೇಶಗಳೇ ಎಲ್ಲರಿಗೂ ಲಸಿಕೆ ಸಿಗುವಲ್ಲಿ ತೊಡಕಾಗಿವೆ. ಲಸಿಕೆಯನ್ನು ಪೇಟೆಂಟ್ ಮುಕ್ತಗೊಳಿಸಬೇಕು, ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ನೆರವಾಗಬೇಕು ಎನ್ನುವ ಬೇಡಿಕೆಗೆ ನಕಾರಾತ್ಮಕವಾಗಿ ಸ್ಪಂದಿಸಿವೆ. ಇನ್ನೊಂದೆಡೆ ಲಸಿಕೆ ಉತ್ಪಾದಿಸುತ್ತಿರುವ ದೈತ್ಯ ಕಂಪೆನಿಗಳು ಲಸಿಕೆ ರಫ್ತು ಮಾಡಲು ಷರತ್ತುಗಳನ್ನು ಹೇರಿ ಸಾರ್ವಭೌಮ ದೇಶಗಳನ್ನೇ ಬಗ್ಗಿಸಲು ಯತ್ನಿಸುತ್ತಿವೆ. ಹಾಗೆಯೇ ಅಮೆರಿಕ ಮತ್ತು ಯೂರೋಪಿನ ದೇಶಗಳು ತಮ್ಮ ಹಣಬಲದಿಂದ ತಮ್ಮ ಜನಸಂಖ್ಯೆಯ ಅಗತ್ಯಕ್ಕಿಂತ ಮೂರುನಾಲ್ಕುಪಟ್ಟು ಲಸಿಕೆಗಳನ್ನು ಖರೀದಿಸಿ ಇಟ್ಟುಕೊಂಡು ಕೃತಕ ಅಭಾವವನ್ನೂ ಸೃಷ್ಟಿಸಿವೆ. ಅಮೆರಿಕ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಅಗತ್ಯವಾದ ಮೂಲವಸ್ತುವನ್ನು ರಫ್ತು ಮಾಡಲೂ ಅಡ್ಡಗಾಲು ಹಾಕುತ್ತಿದೆ. ಅಂದರೆ ಪೃಥ್ವಿಯ ಮೇಲಿನ ಸಮಸ್ತ ಮಾನವಜನಾಂಗವೇ ಸಂಕಷ್ಟದಲ್ಲಿದ್ದರೂ ಅಮೆರಿಕ ಮತ್ತು ಯೂರೋಪಿನ ಶ್ರೀಮಂತ ದೇಶಗಳು ತಮ್ಮ ವ್ಯಾವಹಾರಿಕ ಲಾಭದ ವಿಷಯದಲ್ಲಿ ಹೊಂದಾಣಿಕೆಗೆ ಸಿದ್ಧರಿಲ್ಲ.
ಇನ್ನೊಂದೆಡೆ ವಿಶ್ವಕ್ಕೆ ಕೋವಿಡ್ ಸಾಂಕ್ರಾಮಿಕವನ್ನು ಹಂಚಿದ ಕಮ್ಯುನಿಸ್ಟ್ ಚೀನಾದ ಧೋರಣೆಯಂತೂ ಇನ್ನೂ ಕ್ರೂರ. ಮೊದಲನೆಯದಾಗಿ ಈ ವೈರಾಣುವಿನ ಹುಟ್ಟು ಆರಂಭಗಳ ಕುರಿತು ಸರಿಯಾದ ಮಾಹಿತಿ ಹಂಚಿಕೆಗೆ, ಸಂಶೋಧನೆಗಳಿಗೆ ಚೀನಾ ಅಸಹಕಾರ ನೀಡುತ್ತಲೇ ಬಂದಿದೆ. ಅದಕ್ಕೂ ಮುಂದುವರಿದು ಪರಿಸ್ಥಿತಿಯ ಲಾಭ ಪಡೆದು ಗಡಿತಂಟೆ ನಡೆಸುವುದು, ಉಳಿದ ಸಣ್ಣಪುಟ್ಟ ದೇಶಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವುದು, ಪೃಥ್ವಿಯ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಲು ಯತ್ನಿಸುವುದು – ಇದು ಚೀನಾ ಈ ಸಂಕಷ್ಟ ಸಮಯದಲ್ಲಿಯೂ ಅನುಸರಿಸುತ್ತಿರುವ ನೀತಿ.
ಪೃಥ್ವಿಯೇ ಒಂದು ಕುಟುಂಬ ಎಂದು ಎಲ್ಲರ ನೆರವಿಗೆ ಧಾವಿಸುವ ಭಾರತದ ಸಂಸ್ಕೃತಿಯನ್ನು ಪಾಶ್ಚಾತ್ಯರ ವ್ಯಾವಹಾರಿಕ ಲಾಭ-ಲೆಕ್ಕಾಚಾರದ ಮನಃಸ್ಥಿತಿ, ಕಮ್ಯುನಿಸ್ಟ್ ಚೀನಾದ ವಿಸ್ತರಣಾವಾದಿ ಧೋರಣೆಯೊಂದಿಗೆ ತುಲನೆ ಮಾಡಿದರೆ ಭಾರತೀಯ ಸಂಸ್ಕೃತಿಯ ಉದಾತ್ತತೆ ಅರಿವಿಗೆ ಬರುತ್ತದೆ.