‘ಇಷ್ಟು ದೊಡ್ಡವನಾದರೂ ಮಕ್ಕಳಿಗೆ ಜವಾಬ್ದಾರಿ ಕಲಿಸಲಿಲ್ಲ’ ಎಂದು ಶಿಕ್ಷಕರು ಹೆತ್ತವರನ್ನೂ, ‘ಅಷ್ಟೊಂದು ಫೀಸ್ ಕಟ್ಟಿಸಿಕೊಳ್ಳುತ್ತಾರಲ್ಲ, ಶಿಕ್ಷಕರು ನೋಡಿಕೊಳ್ಳಬೇಕಿತ್ತು’ ಎಂದು ಹೆತ್ತವರು ಶಿಕ್ಷಕರನ್ನೂ ಪರಸ್ಪರ ಮೂದಲಿಸುವುದರಲ್ಲಿ ಹೊಣೆಗಾರಿಕೆಯಿಲ್ಲದ ವಿದ್ಯಾರ್ಥಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ.
ಒಂದೆರಡು ತಿಂಗಳುಗಳ ಹಿಂದೆ ತರಗತಿಗಳೆಲ್ಲ ಸಾಂಗವಾಗಿ ನಡೆಯುತ್ತಿದ್ದಾಗ ಒಂದು ದಿನ ವಾರದ ನಡುವೆ ಓರ್ವ ಉಪನ್ಯಾಸಕರ ಗೈರುಹಾಜರಿ ನಿಮಿತ್ತ ಹೆಚ್ಚುವರಿಯಾಗಿ ತರಗತಿಯೊಂದನ್ನು ತೆಗೆದುಕೊಳ್ಳಬೇಕಿತ್ತು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಭಾಷಾಪಠ್ಯಪುಸ್ತಕವನ್ನು ಪ್ರತಿದಿನ ತರಬೇಕು ಎಂಬುದು ಅವರಿಗಿರುವ ಸೂಚನೆ. ಹಾಗೆಂದು ವೇಳಾಪಟ್ಟಿಯಲ್ಲಿ ಇಲ್ಲದ ದಿನ ತರಗತಿ ತೆಗೆದುಕೊಂಡರೆ ಪುಸ್ತಕ ತಂದಿಲ್ಲವೆಂಬ ಕಾರಣಕ್ಕೆ ಗದರುವಂತಿಲ್ಲ. ‘ಟೈಂ-ಟೇಬಲ್ಲಿನಲ್ಲಿ ಇರಲಿಲ್ಲ ಮಿಸ್’ ಎಂಬ ಉತ್ತರ ಬಹಳ ಸಲೀಸಾಗಿ ಬರುತ್ತದೆ. ಮೌನವಾಗುವುದು ನಮಗೆ ಅನಿವಾರ್ಯವಾಗುತ್ತದೆ. ಹಾಗೆಂದು ತರಗತಿಯಲ್ಲಿ ಕುಳಿತಿರುವ ವಿದ್ಯಾರ್ಥಿಗಳ ಆಂಗಿಕ ಅಭಿನಯವನ್ನು ನೋಡಿದರೆ ಅವರಲ್ಲಿ ಪುಸ್ತಕ ಇದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಾಲದ್ದಕ್ಕೆ ಬೋಧಿಸುತ್ತಿರುವ ಪಾಠದ ಮೇಲೆ ಗಮನಕೊಡಲಾಗದೇ ಅವರು ಹರಟುವುದೋ ತೂಕಡಿಸುವುದೋ ಮಾಡಿದರೆ ಅಂತಹ ತರಗತಿ ಪರಮಹಿಂಸೆ. ಈಗ ಮಾಸ್ಕ್ ಕಡ್ಡಾಯವೂ ಆಗಿರುವುದರಿಂದ ಮಾತನಾಡಿ ಸಮಯ ಕಳೆಯುತ್ತಿರುವ ಪುಣ್ಯಾತ್ಮರನ್ನು ತರಗತಿಯಲ್ಲಿ ಗುರುತಿಸಲಾಗದೇ ಇರುವುದು ಅವರಿಗೊಂದು ವರದಾನ. ಮಾತನಾಡುವುದೋ ಹಾಡುವುದೋ ಕೂಗುವುದೋ ಮಿಮಿಕ್ರಿ ಮಾಡುವುದೋ – ಏನೇ ಇದ್ದರೂ ಅವರನ್ನು ಪತ್ತೆಮಾಡುವುದು ಕಷ್ಟವೇ ಆಗಿರುವುದರಿಂದ ವಿದ್ಯಾರ್ಥಿಗಳ ಉಪಟಳ ಕೊಂಚ ಹೆಚ್ಚೇ. ಅಂದರೂ ನಾವು ನಮ್ಮ ಶಂಖ ಊದಿಯೇ ಸಿದ್ಧ.
ಮರುದಿನ ಅದೇ ತರಗತಿಯನ್ನು ತೆಗೆದುಕೊಳ್ಳುವಾಗ ಮುನ್ನಾದಿನ ಪಠ್ಯಪುಸ್ತಕ ತರದೇ ಇದ್ದವರನ್ನೊಮ್ಮೆ ಗಮನಿಸಿದೆ. ಪುಸ್ತಕವಿರಲಿಲ್ಲ. ಗದರಿದೆ. ‘ನಾನು ಪುಸ್ತಕ ತಗೊಂಡೇ ಇಲ್ಲ’ ಎಂಬ ಉಡಾಫೆಯ ಉತ್ತರ ಒಬ್ಬನಿಂದ ಬಂತು. ಹೇಗೂ ಆನ್ಲೈನ್ ತರಗತಿ, ಪಿಡಿಎಫ್ ರೂಪದಲ್ಲಿ ಪಠ್ಯ ಸಿಗುತ್ತವೆ; ಮುದ್ರಿತ ಪುಸ್ತಕದ ಅಗತ್ಯ ಏನು? – ಎಂಬುದು ಅವನ ಧೋರಣೆ. ಆತನೋ ಶ್ರೀಮಂತರ ಮನೆಯ ಹುಡುಗ. ‘ಅಲ್ಲ ಮಾರಾಯಾ.. ಚಿನ್ನದಂಗಡಿಯ ಯಜಮಾನ ನೀನು. ಒಂದು ಪುಸ್ತಕ ಕೊಂಡುಕೊಳ್ಳುವುದು ಕಷ್ಟವಾ?’ ಎಂದು ಮೆಲ್ಲಗೆ ಕುಟುಕಿದೆ. ‘ಅದಕ್ಕೂ ಇದಕ್ಕೂ ಏನು ಸಂಬAಧ ಮಿಸ್? ನಾನೇನು ಕೇಳ್ಕೊಂಡು ಈ ಕಾಲೇಜಿಗೆ ಬರಲಿಲ್ಲ. ಕಾಲೇಜಿನವರೇ ಕರೆದು ಎಡ್ಮಿಷನ್ ಮಾಡಿಸ್ಕೊಂಡಿರೋದು’ ಎಂಬ ಉದ್ಧಟತನದ ಉತ್ತರ ಬಂತು. ‘ಸಂಬಂಧ ಏನು ಎಂಬುದನ್ನು ಆಮೇಲೆ ಹೇಳೋಣ. ಪುಸ್ತಕವಿಲ್ಲದೇ ತರಗತಿಯಲ್ಲಿ ಕುಳಿತು ಇತರರಿಗೆ ತೊಂದರೆ ಕೊಡಬೇಡ’ ಎಂದು ತರಗತಿಯಿಂದ ಹೊರಗೆ ಕಳುಹಿಸಿದೆ. ಬ್ಯಾಗನ್ನೊಮ್ಮೆ ಕೊಡವಿ, ಚಪ್ಪಲಿಯನ್ನೊಮ್ಮೆ ಸದ್ದಾಗುವಂತೆ ಒದರಿ ಅವನು ಎದ್ದು ಹೋದ. ಎರಡು ನಿಮಿಷ ತರಗತಿಯಿಡೀ ಮೌನವಾಗಿತ್ತು. ಉಳಿದ ಮಕ್ಕಳು ಮಿಕಮಿಕನೆ ನನ್ನ ಮುಖ ನೋಡುತ್ತಾ ಕುಳಿತಿದ್ದರು.
ಮೇಲ್ನೋಟಕ್ಕೆ ಇದು ಯಾವುದೇ ಶಾಲಾಕಾಲೇಜಿನಲ್ಲಿ ನಡೆಯಬಹುದಾದ ಒಂದು ಸಾಮಾನ್ಯ ಘಟನೆ. ಆದರೆ ಇಲ್ಲಿ ಗಮನಿಸಲೇಬೇಕಾದ ಮೂರು ಅಂಶಗಳಿವೆ.
ಮೊದಲನೆಯದು, ಪಿಯುಸಿಯ ಹಂತದಲ್ಲಿ ಭಾಷಾಪಠ್ಯವನ್ನು ಮಕ್ಕಳು ಎಷ್ಟು ಅಸಡ್ಡೆಯಿಂದ ಕಾಣುತ್ತಾರೆ ಎಂಬುದು. ಕನಿಷ್ಠಬೆಲೆಗೆ ಸರಕಾರ ಒದಗಿಸುವ ಪಠ್ಯಪುಸ್ತಕವನ್ನು ಖರೀದಿಸಬೇಕು ಎಂಬ ಸಾಮಾನ್ಯಪ್ರಜ್ಞೆ ಮಕ್ಕಳಿಗಿಲ್ಲ. ಅದರ ಅನಿವಾರ್ಯತೆಯೇ ಇಲ್ಲವೆಂಬಂತೆ ವರ್ತಿಸುವುದು ಸಾಮಾನ್ಯ. ‘ನನ್ನ ಮೊಬೈಲಿನಲ್ಲಿ ಪಿಡಿಎಫ್ ಪ್ರತಿ ಇದೆ. ಆದರೆ ತರಗತಿಗೆ ಮೊಬೈಲ್ ತರುವಂತಿಲ್ಲ. ಹಾಗಾಗಿ ನನ್ನಲ್ಲಿ ಪಠ್ಯಪುಸ್ತಕವಿಲ್ಲ’ ಎಂದು ಉತ್ತರಿಸಿದ ವಿದ್ಯಾರ್ಥಿಗಳೂ ಕಳೆದವರ್ಷ ಇದ್ದರು.
ಪರೀಕ್ಷೆಗೆ ಒಂದು ತಿಂಗಳಿರುವಾಗ ಯಾರದ್ದಾದರೂ ಜತೆಯಲ್ಲಿ ಕುಳಿತು ಒಂದಿಷ್ಟು ಚರ್ಚಿಸಿ ಪಾಸಾಗಬಹುದು ಎಂಬುದು ಅವರ ನಿಲುವು. ಅಗತ್ಯವಿದ್ದರೆ ಗೆಳೆಯನ ಬಳಿಯಿರುವ ಗೈಡ್ ದೊರೆಯುತ್ತದೆ. ಓದಬೇಕಾದ ಬರೆಯಬೇಕಾದ ಯಾವ ಅಗತ್ಯವೂ ಇಲ್ಲ. ನೋಟ್ಸ್ ಒದಗಿಸುವ ಹೊಣೆ ಪಾಠ ಮಾಡುವ ಶಿಕ್ಷಕರದ್ದೇ ಆಗಿರುವುದರಿಂದ ಅದರ ಚಿಂತೆಯೂ ಅವರಿಗಿಲ್ಲ. ವರ್ಷಪೂರ್ತಿ ಹೆಣಗಾಡಬೇಕಾದವರು ಶಿಕ್ಷಕರೇ ಆಗಿರುತ್ತಾರೆ ಹೊರತು, ವಿದ್ಯಾರ್ಥಿಗಳ ಶ್ರಮ ಏನು? ಎಂಬುದೇ ಪ್ರಶ್ನೆ.
ಈ ವರ್ಷವಂತೂ ಕೊರೋನಾಸುರನ ದಾಳಿಗೆ ಮಕ್ಕಳಲ್ಲಿ ಇದ್ದಂತಹ ಕನಿಷ್ಠ ಬರೆಯುವ ಅಭ್ಯಾಸವೂ ಕಳೆದುಹೋಗಿದೆ. ಅವರಿಗೆ ಬೇಕಾದ ಪಠ್ಯಪುಸ್ತಕ ತರಲೇ ಬೇಕೆಂಬುದನ್ನಾಗಲೀ, ಆಯಾ ಪಾಠದ ಪ್ರಶ್ನೋತ್ತರಗಳನ್ನು ಅವರೇ ಬರೆದರೆ ಕಲಿಕೆಗೆ ಅನುಕೂಲ ಎಂಬುದನ್ನಾಗಲೀ ಅವರ ಮನಸ್ಸಿಗೆ ಮುಟ್ಟಿಸುವುದು ಒಂದು ಹೆಚ್ಚುವರಿ ಹೊಣೆಗಾರಿಕೆಯಾಗಿದೆ!
ಎರಡನೆಯದು, ಅವನ ಮಾತಿನ ರೀತಿ. ಇಂದು ವಿದ್ಯಾರ್ಥಿಗಳ ನಡುವೆ ಇರುವುದಕ್ಕಿಂತ ಹೆಚ್ಚಿನ ಸ್ಪರ್ಧೆ ಶಿಕ್ಷಣಸಂಸ್ಥೆಗಳ ನಡುವೆ ಇದೆ. ಸೀಟುಗಳು ಭರ್ತಿಯಾಗಬೇಕು ಎಂಬ ಒತ್ತಡ. ವಿದ್ಯಾರ್ಥಿಗಳಿಗೆ ತಾವು ಒಳ್ಳೆಯ ಅಂಕಗಳನ್ನು ಗಳಿಸದಿದ್ದರೆ ಕಾಲೇಜಿಗೆ ಸೀಟು ಸಿಗದು ಎಂಬ ಭಯವೇ ಇಲ್ಲ. ದುಡ್ಡೊಂದಿದ್ದರೆ ಯಾವ ಕಾಲೇಜಿನಲ್ಲಾದರೂ ಸರಿ ಎಂಬುದು ಮಕ್ಕಳ ಮನಸ್ಸು. ಮೆರಿಟ್ ಸೀಟು ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಮಧ್ಯಮವರ್ಗದ ಬುದ್ಧಿವಂತ ಮಕ್ಕಳನ್ನು ಹೊರತುಪಡಿಸಿದರೆ ಮತ್ಯಾವ ಮಕ್ಕಳಿಗೂ ಆ ಒತ್ತಡವಿಲ್ಲ. ದುಡ್ಡು ಹೊಂದಿಸುವ ಕಷ್ಟವನ್ನು ಪೋಷಕರ ಮೇಲೆ ಹೇರಿದರಾಯ್ತು.
ಮೂರನೆಯದು, ವಿದ್ಯಾರ್ಥಿಯ ವರ್ತನೆ. ತನ್ನದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುವ ಮನಃಸ್ಥಿತಿಯೂ ಅವನಲ್ಲಿ ಇಲ್ಲದಿರುವುದು. ಕೇವಲ ಭಾಷಾಪಠ್ಯದ ಕುರಿತಷ್ಟೇ ಈ ನಿರ್ಲಕ್ಷ್ಯವೇ ಎಂದರೆ ಇತರ ವಿಷಯಗಳ ಕತೆಯೂ ಅಷ್ಟೇ. ತರಗತಿಗೆ ಬರುವುದು ಕೇವಲ ಸ್ನೇಹಿತರೊಂದಿಗೆ ಹರಟುವುದಕ್ಕೆ, ಸಾಧ್ಯವಾದಷ್ಟು ಮಾತನಾಡಿ ಶಿಕ್ಷಕರಿಗೆ ತೊಂದರೆ ಕೊಡುವುದಕ್ಕೆ. ಅದರಲ್ಲೇ ಬದುಕಿನ ಸಾರ್ಥಕ್ಯವೆಂಬ ಭಾವ ಈ ಹುಡುಗರಲ್ಲೇಕೆ? ಪಿಯುಸಿಯ ಹಂತವೆAದರೆ ಸ್ವಲ್ಪಮಟ್ಟಿಗಾದರೂ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕಾದ ವಯಸ್ಸು. ಪ್ರತಿಯೊಂದು ವಿಚಾರಕ್ಕೂ ಪೋಷಕರೋ ಶಿಕ್ಷಕರೋ ಗಮನಕೊಟ್ಟು ನೋಡಿಕೊಳ್ಳಬೇಕಾದ ಅನಿವಾರ್ಯತೆಯೇನು? ಅಷ್ಟಕ್ಕೂ ‘ಇಷ್ಟು ದೊಡ್ಡವನಾದರೂ ಮಕ್ಕಳಿಗೆ ಜವಾಬ್ದಾರಿ ಕಲಿಸಲಿಲ್ಲ’ ಎಂದು ಶಿಕ್ಷಕರು ಹೆತ್ತವರನ್ನೂ, ‘ಅಷ್ಟೊಂದು ಫೀಸ್ ಕಟ್ಟಿಸಿಕೊಳ್ಳುತ್ತಾರಲ್ಲ, ಶಿಕ್ಷಕರು ನೋಡಿಕೊಳ್ಳಬೇಕಿತ್ತು’ ಎಂದು ಹೆತ್ತವರು ಶಿಕ್ಷಕರನ್ನೂ ಪರಸ್ಪರ ಮೂದಲಿಸುವುದರಲ್ಲಿ ಹೊಣೆಗಾರಿಕೆಯಿಲ್ಲದ ಇಂತಹ ವಿದ್ಯಾರ್ಥಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಹಿರಿಯರು ತಮ್ಮ ತಪ್ಪನ್ನು ಎಚ್ಚರಿಸಿದಾಗ ಅದನ್ನು ತಿದ್ದಿಕೊಳ್ಳಬೇಕು ಎಂಬ ಪ್ರಜ್ಞೆಯೂ ಅವರಲ್ಲಿ ಬೆಳೆಯುವುದಿಲ್ಲ. ದುಡ್ಡೆಂಬ ಮದ್ದಾನೆಯೆದುರು ಶಿಕ್ಷಣವೆಂಬುದು ಕಬ್ಬಿನ ಜಲ್ಲೆಯಾಗಿದೆ!
ವಿದ್ಯೆಯೆಂಬುದು ಸ್ವಯಾರ್ಜಿತ ಆಸ್ತಿಯಾಗಬೇಕು ವಿನಾ ಹೆತ್ತವರು ಉಯಿಲು ಬರೆದಿಡಬೇಕಾದುದ್ದಲ್ಲವಲ್ಲ? ಅರ್ಥವಿಲ್ಲದ ಅಹಂಕಾರದ ಬದಲು ವಿನಯವನ್ನು ಮೈಗೂಡಿಸಿಕೊಳ್ಳುವುದನ್ನು ಮೊದಲು ಕಲಿಸಬೇಕಿದೆ. ಶಿಕ್ಷಣಕ್ಷೇತ್ರದ ಮುಂದಿನ ಸ್ವರೂಪವೇನಿರಬಹುದು ಎಂದು ಯೋಚಿಸಿದರೆ ನಿಜಕ್ಕೂ ದಿಗಿಲಾಗುತ್ತದೆ. ಒಂದೇ ಮಗುವೆಂಬ ಕಾರಣಕ್ಕೆ ಪೋಷಕರು ತೋರುವ ಅತಿಯಾದ ಪ್ರೀತಿ-ಮುಚ್ಚಟೆಗಳು ಮಕ್ಕಳನ್ನು ಈ ರೀತಿಯಾಗಿ ರೂಪಿಸುತ್ತವೆಯೇ? ಮನೆಯೊಳಗಿನ ಶ್ರೀಮಂತಿಕೆ ಮನದೊಳಗೂ ಬೆಳೆಯಬೇಕು ಎಂಬುದನ್ನು ಕಲಿಸುವಲ್ಲಿ ಎಡವುತ್ತಿದ್ದೇವೆಯೇ? ನಾವು ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕಾಗಿ, ಅಗತ್ಯವಸ್ತುಗಳಿಗಾಗಿ ಕಷ್ಟಪಟ್ಟಂತೆ ನಮ್ಮ ಮಕ್ಕಳು ಕಷ್ಟ ಪಡಬಾರದು ಎಂಬ ನಮ್ಮ ಕಾಳಜಿಯೇ ಅವರನ್ನು ಬಹುತೇಕ ಜವಾಬ್ದಾರಿಹೀನರನ್ನಾಗಿ ಮಾಡುತ್ತಿದೆ ಎಂದರೂ ತಪ್ಪಾಗಲಾರದೇನೋ. ಮೈಲುಗಟ್ಟಲೆ ನಡೆದು ಶಾಲೆಗೆ ಹೋಗಿಬಂದು, ಮನೆಗೆಲಸಗಳಲ್ಲಿ ಭಾಗಿಯಾಗುವ ಹೊಣೆಯನ್ನೂ ಹೊತ್ತುಕೊಂಡು ಓದು-ಬರವಣಿಗೆಗಾಗಿ ಸಮಯ ಹೊಂದಿಸಿಕೊಳ್ಳಬೇಕಾಗಿದ್ದ ನಮ್ಮ ತಲೆಮಾರಿನವರಿಗೂ ಮನೆಯಂಗಳದಿಂದಲೇ ಸ್ಕೂಟರಿನಲ್ಲಿ ಭರ್ರನೇ ಕಾಲೇಜಿಗೆ ದೌಡಾಯಿಸುವ, ಅಂಕಗಳನ್ನಷ್ಟೇ ಬೆಂಬತ್ತಿ ನಡೆಯುವ ಇಂದಿನ ತಲೆಮಾರಿಗೂ ಅಜಗಜಾಂತರ. ಆದರೆ ನಮ್ಮ ಶಿಕ್ಷಣವೇನು ಎಂಬುದಕ್ಕೆ ಕನ್ನಡಿಯಾಗಬೇಕಾದದ್ದು ನಮ್ಮ ವರ್ತನೆ ಎಂಬುದನ್ನು ಅವರಿಗೆ ಅರ್ಥ ಮಾಡಿಸದ ಶಿಕ್ಷಣದ ಸಾರ್ಥಕ್ಯವೇನು?
ಕೊರೋನಾಭೀತಿಯೊಳಗೆ ಲಾಕ್ಡೌನ್ ಎಂದು ನಮ್ಮ ಕಾಲುಗಳಿಗೆ ನಾವೇ ಬೇಡಿ ತೊಡಿಸಿಕೊಂಡು ಮನೆಯಲ್ಲಿದ್ದೇವೆ ನಿಜ. ಮಕ್ಕಳ ಸಾಮಾಜಿಕ ವರ್ತನೆ, ಮನೋಭೂಮಿಕೆಯನ್ನು ರೂಪಿಸಬೇಕಾದ, ತಿದ್ದಬೇಕಾದ ಬದ್ಧತೆಯೂ ಮನೆಯ ಹಿರಿಯರದ್ದೇ ಆಗಿದೆ. ಅರಳಬೇಕಾದ ಮನಸ್ಸುಗಳು ಕೆರಳದಂತೆ ಎಚ್ಚರವಹಿಸಬೇಕಿದೆ. ಹೌದು. ಮನೆಯೊಳಗಿನ ಮನಗಳ ಹೊಣೆಯೀಗ ಬಹು ದೊಡ್ಡದು!