(ಭಾಗ – ೫)
ಈ ಶೋಧಕಾರ್ಯದಲ್ಲಿ ನನಗೆ ಸಿಕ್ಕಿದ ಬೇರೆ ಸುಳಿವುಗಳನ್ನಾಗಲಿ, ಖನಕನ ಹೆಸರನ್ನಾಗಲಿ ನಾನು ಹೇಳಲಿಲ್ಲ. ಸುರಂಗಮಾರ್ಗದ ವಿಚಾರವನ್ನು ಉಲ್ಲೇಖಿಸಲಿಲ್ಲ. ನನ್ನೆದುರು ನಿಂತಿದ್ದವನು ಮೌನವಾಗಿದ್ದ. ಏನೋ ಚಿಂತಿಸುತ್ತ ಇದ್ದಿರಬೇಕು.
ಅವನ ನಗು ನನ್ನಲ್ಲಿ ಭಯವನ್ನೇನೂ ಹುಟ್ಟಿಸಲಿಲ್ಲ. ನನಗೆ ಸದ್ಯ ಇವರು ಯಾರು ಮತ್ತು ನನ್ನನ್ನು ಬಂಧಿಸಿದ್ದು ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಒಂದಂತೂ ಅರ್ಥವಾಯಿತು. ನಾನು ಅರಗಿನಮನೆಯ ಪ್ರಕರಣವನ್ನು ಶೋಧಿಸುವುದು ಇವರಿಗೆ ಬೇಕಿಲ್ಲ; ಅಥವಾ ಅದರಿಂದ ತೊಡಕಾಗುತ್ತದೆ. ಹಾಗಿದ್ದರೆ ಹಸ್ತಿನಾವತಿಯ ಪ್ರಧಾನ ರಕ್ಷಣಾಧಿಕಾರಿಗಾಗಲಿ, ಪ್ರಭುತ್ವಕ್ಕಾಗಲಿ ಸಂಬಂಧಿಸಿದವರು ಇವರಲ್ಲ. ಹಾಗಿದ್ದರೆ?
ನನ್ನ ಯೋಚನೆ ಕಡಿದು ಬೀಳುವಂತೆ ಅವನು ಧ್ವನಿ ಏರಿಸಿ ನುಡಿದ,
“ನಾವು ಯಾರು? ವಾರಣಾವತಕ್ಕೂ ನಮಗೂ ಏನು ಸಂಬಂಧ ಎಂಬುದನ್ನೆಲ್ಲ ನೀನು ಕೇಳುವಂತಿಲ್ಲ. ಕೇಳಿದರೂ ಉತ್ತರ ಸಿಗಲಾರದು. ಇಲ್ಲಿ ನಿನಗೆ ಪ್ರಶ್ನಿಸುವ ಅವಕಾಶವಿಲ್ಲ. ನಿಜವನ್ನು ಹೇಳಿದರೆ ಪ್ರಾಣ ಉಳಿಸುತ್ತೇನೆ. ಇಲ್ಲವಾದರೆ.. ನಿನ್ನ ಪತ್ನಿಯ ಮುಖವನ್ನು ನೀನು ನೋಡಲಾರೆ. ಹೇಳು, ನಿನಗೆ ವಾರಣಾವತದ ಬೆಂಕಿ ಆಕಸ್ಮಿಕದ ಕುರಿತು ಏನು ತಿಳಿದಿದೆ? ಯಾರು ಬೆಂಕಿ ಹಚ್ಚಿದವರು? ಪಾಂಡವರ ಗತಿ ಏನಾಗಿದೆ? ಏನೋ ಒಂದು ಸುಳ್ಳು ಹೇಳಿ ಪಾರಾಗಬಲ್ಲೆ ಎಂದು ತಿಳಿಯಬೇಡ. ನಮಗೆ ಎಲ್ಲವೂ ಗೊತ್ತು. ಈಗ ಹೇಳು”.
ನನಗೆ ಒಳಗೊಳಗೆ ನಗು ಬಂತು. ಎಲ್ಲವೂ ಗೊತ್ತಿದೆ ಎಂದರೆ ನನ್ನನ್ನು ಬಂಧಿಸುವ ಅಗತ್ಯವೇ ಇರಲಿಲ್ಲ. ನಾನು ಸುಳ್ಳು ಹೇಳಿಯೇನು ಎಂಬ ಸಂಶಯ ಉಂಟು ಎಂದರೆ ಬಹುಶಃ ಇವರಿಗೆ ಏನೂ ಗೊತ್ತಿಲ್ಲ. ನಾನೀಗ ಏನು ಹೇಳಿದರೂ ಅದನ್ನು ನಂಬದೆ ಇವರಿಗೂ ನಿರ್ವಾಹವಿಲ್ಲ. ನಾನು ನನ್ನ ಶೋಧದಲ್ಲಿ ಏನನ್ನು ಕಂಡುಕೊಂಡೆನೋ ಅದನ್ನು ಬೇರೆ ಯಾರಲ್ಲೂ ಹೇಳದಿದ್ದುದು ಅನುಕೂಲವಾಯಿತು. ತೀರಾ ಅನಿವಾರ್ಯವಾದಲ್ಲಿ ತೀರ ಅಗತ್ಯವೆನಿಸಿದ್ದನ್ನು ಮಾತ್ರ ಧರ್ಮಾಧಿಕಾರಿಗಳ ಸಹಿತ ಕೆಲವೇ ಮಂದಿಗೆ ಹೇಳಿದ್ದೆ. ಹಾಗಾಗಿ ಅರಗಿನಮನೆಯ ಬೆಂಕಿಯ ಪ್ರಕರಣದ ಪೂರ್ಣ ಚಿತ್ರಣ ಯಾರಿಗೂ ಇಲ್ಲ. ಈಗ ಇವರಿಗೆ ಅದರ ವಿವರ ಬೇಕಾಗಿದೆ ಎಂದರೆ ಏನೋ ಸ್ವಂತ ಹಿತಾಸಕ್ತಿ ಇದೆ ಎಂದರ್ಥ. ಬಹುಶಃ ಪುರೋಚನನನ್ನು ನಿಯೋಜಿಸಿದವರಿಗೆ ನನಗೆಷ್ಟು ಗೊತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.
ಇದ್ದಕ್ಕಿದ್ದ ಹಾಗೆ ನನಗೆ ಸತ್ಯವೊಂದು ಅರಿವಾಯಿತು. ಮಾತ್ರವಲ್ಲ, ನಾನು ಎಷ್ಟು ದೊಡ್ಡ ಆಪತ್ತಿಗೆ ಸಿಲುಕಿದ್ದೇನೆ ಎಂಬುದೂ ಅರ್ಥವಾಯಿತು. ಪುರೋಚನನನ್ನು ನೇಮಿಸಿ ರಾಜವಂಶೀಯರಾದ ಪಾಂಡವರನ್ನು ಕೊಲ್ಲಿಸಿದವರಿಗೆ ನನ್ನದೇನು ಮಹಾ? ತಮ್ಮ ರಹಸ್ಯ ಹೊರಬರದಂತೆ ಮಾಡಲು ನನ್ನನ್ನು ಇಲ್ಲಿಯೇ ಮುಗಿಸಿದರೂ ಆಶ್ಚರ್ಯವಿಲ್ಲ. ಈಗ ಪೂರ್ಣ ರಹಸ್ಯದ ಅರಿವು ನನಗಾಯಿತು. ಇವರು ಯಾರು ಮತ್ತು ಯಾರ ಕಡೆಯವರು ಎನ್ನುವುದೂ ತಿಳಿಯಿತು. ಅದನ್ನು ಇವರು ಗ್ರಹಿಸಿಬಿಟ್ಟರೆ ನನ್ನ ಜೀವ ಉಳಿಯದು. ಗೊತ್ತಿಲ್ಲ ಎಂದರೆ ಇಷ್ಟು ಕಾಲ ಶೋಧ ಮಾಡಿದ್ದು ಏನನ್ನು ಎಂಬ ಪ್ರಶ್ನೆ ಬರುತ್ತದೆ. ಇವರಲ್ಲಿ ಏನನ್ನು ಎಷ್ಟು ಹೇಳಲಿ?
ನನ್ನ ಮೌನ ಅವನನ್ನು ಕೆರಳಿಸಿರಬೇಕು. “ಏಯ್, ಏನು ಆಲೋಚಿಸುತ್ತಿದ್ದೀಯೆ? ಸುಳ್ಳುಗಳನ್ನು ಹೆಣೆದು ನಮ್ಮನ್ನು ನಂಬಿಸಬಹುದು ಎಂದುಕೊಂಡರೆ ಅದು ನಡೆಯಲಾರದು. ನೀನು ವಾರಣಾವತದಲ್ಲಿ ಏನೆಲ್ಲ ತಿಳಿದುಕೊಂಡಿದ್ದೀಯೆ? ಅದಷ್ಟನ್ನೂ ಬಿಡದೆ ಹೇಳು. ಬೆಂಕಿ ಹಚ್ಚಿದವರು ಯಾರೆಂದು ಗೊತ್ತಾಯಿತೆ? ಅಲ್ಲಿದ್ದ ಕರಕಲಾದ ಶವಗಳು ಯಾರವು? ನಿನಗೆ ಈ ವಿಚಾರ ಇನ್ನೆಷ್ಟು ಗೊತ್ತಿದೆ?’’
“ನನಗೆ ಹೆಚ್ಚೇನೂ ಗೊತ್ತಾಗಲಿಲ್ಲ. ಪುರೋಚನ ಎನ್ನುವಾತ ಬೆಂಕಿ ಹಾಕಿ ಪಾಂಡುಪುತ್ರರ ಜತೆ ತಾನೂ ಸುಟ್ಟು ಹೋದ. ಅವನು ಯಾಕೆ ಬೆಂಕಿ ಹಚ್ಚಿದನೆಂದು ನನಗೆ ಗೊತ್ತಿಲ್ಲ. ಬಹುಶಃ ತಪ್ಪಿಸಿಕೊಳ್ಳಲಾರದೆ ಸತ್ತಿರಬೇಕು. ಪಾಂಡವರು ಹಾಗೂ ರಾಜಮಾತೆ ಕುಂತಿಯನ್ನು ಸುಟ್ಟು ಕೊಲ್ಲುವ ಪ್ರಯತ್ನದಂತೆ ನನಗೆ ಗೋಚರಿಸಿದೆ. ಅದಂತೂ ಈಡೇರಿದೆ. ಪುರೋಚನ ಹೀಗೆ ಮಾಡಲು ಕಾರಣವನ್ನು ಶೋಧಿಸುವ ಹಂತದಲ್ಲಿ ರಾಜಧಾನಿಯಿಂದ ಆದೇಶ ಬಂತು. ಹೊರಟು ಬಂದೆ. ಇದಕ್ಕಿಂತ ಬೇರೆ ಏನೂ ತಿಳಿದಿಲ್ಲ ನನಗೆ. ಇದರ ಹಿಂದಿರುವವರು ಯಾರು ಎನ್ನುವುದನ್ನು ಶೋಧಿಸಬೇಕಾಗಿದೆ” ಎಂದೆ.
ಈ ಶೋಧಕಾರ್ಯದಲ್ಲಿ ನನಗೆ ಸಿಕ್ಕಿದ ಬೇರೆ ಸುಳಿವುಗಳನ್ನಾಗಲಿ, ಖನಕನ ಹೆಸರನ್ನಾಗಲಿ ನಾನು ಹೇಳಲಿಲ್ಲ. ಸುರಂಗಮಾರ್ಗದ ವಿಚಾರವನ್ನು ಉಲ್ಲೇಖಿಸಲಿಲ್ಲ. ನನ್ನೆದುರು ನಿಂತಿದ್ದವನು ಮೌನವಾಗಿದ್ದ. ಏನೋ ಚಿಂತಿಸುತ್ತ ಇದ್ದಿರಬೇಕು. ಕೊಂಚ ಕಾಲದ ಬಳಿಕ ಅವನೆಂದ,
“ನೀನು ಈ ಶೋಧಕಾರ್ಯವನ್ನು ಇಲ್ಲಿಗೇ ನಿಲ್ಲಿಸತಕ್ಕದ್ದು. ಇದನ್ನು ಮುಂದುವರಿಸುವುದು ಪ್ರಭುತ್ವಕ್ಕೆ ವಿರೋಧವಾಗುತ್ತದೆ. ಇದಕ್ಕೆ ಒಪ್ಪಿಗೆ ನೀಡಿದರೆ ಮಾತ್ರ ನೀನು ಮತ್ತೆ ವಾರಣಾವತವನ್ನು ನೋಡುತ್ತೀಯೆ. ನಮ್ಮ ನಿಬಂಧನೆಯನ್ನು ಅಂಗೀಕರಿಸಿದರೆ ಯಥೇಚ್ಛ ಹೊನ್ನು ಲಭಿಸುವುದು. ಇಲ್ಲವಾದರೆ ಇಲ್ಲಿಯೇ ನಿನ್ನ ಅಂತ್ಯ.” ಈಗ ಅವನ ಮಾತು ತೀಕ್ಷ್ಣವಾಗಿತ್ತು. ನಾನೂ ಅಷ್ಟೇ ತೀಕ್ಷ್ಣವಾಗಿ ನುಡಿದೆ,
“ನಾನು ರಾಜನಿಷ್ಠ ಸೇವಕ. ನೀವಾರೋ ಗೊತ್ತಿಲ್ಲದ ಜನ ಹೇಳಿದಿರೆಂದು ಶೋಧಕಾರ್ಯ ನಿಲ್ಲಿಸಲಾರೆ. ನನ್ನನ್ನು ಇಲ್ಲಿಯೇ ಮುಗಿಸಿಬಿಡುವುದು ಅಷ್ಟು ಸುಲಭವಲ್ಲ. ವಾರಣಾವತದ ಧರ್ಮಾಧಿಕಾರಿಗಳಿಗೆ ಸಕಲವೂ ತಿಳಿದಿದೆ. ನಾನು ಇಲ್ಲಿಗೆ ಬರುವ ಮುನ್ನ ಅವರಲ್ಲಿ ವಿಷದವಾಗಿ ಹೇಳಿಯೇ ಬಂದಿದ್ದೇನೆ. ಅವರು ಧರ್ಮಿಷ್ಠರು. ನಾನು ವಾರಣಾವತಕ್ಕೆ ಕ್ಷೇಮವಾಗಿ ಮರಳದಿದ್ದರೆ ಸುಮ್ಮನಿರುವವರಲ್ಲ. ಆಚಾರ್ಯ ಭೀಷ್ಮರಿಗೆ ಅಥವಾ ವಿದುರರಿಗೆ ದೂರು ಹೋದೀತು. ನೀವು ನನ್ನನ್ನು ಬಂಧಿಸಿದ್ದು ಗೋಪ್ಯವಾಗಿ ಉಳಿಯಲಾರದು. ನನ್ನನ್ನು ಕೊಲ್ಲಿಸಿದರೆ ಅದೂ ಬಹಿರಂಗವಾದೀತು. ಒಬ್ಬ ರಕ್ಷಣಾಧಿಕಾರಿಯ ಹತ್ಯೆಮಾಡಿ ದಕ್ಕಿಸಿಕೊಳ್ಳಬಲ್ಲಿರೆಂದು ಭಾವಿಸಬೇಡಿ. ನಿಮಗಾಗಲಿ, ನಿಮ್ಮ ಹಿಂದಿರುವವರಿಗಾಗಲಿ ಇದು ಕ್ಷೇಮಕರವಲ್ಲ.” ಇಷ್ಟನ್ನು ಹೇಳಿ ನಾನು ಮೌನವಾದೆ. ಇನ್ನೊಂದು ಅಕ್ಷರವನ್ನೂ ಉಚ್ಚರಿಸದಿರಲು ನಿರ್ಧರಿಸಿದೆ.
“ಹಾಗಿದ್ದರೆ ನೀನು ಇದನ್ನು ಇಲ್ಲಿಗೆ ಕೈಬಿಡುವುದಿಲ್ಲ ಅಲ್ಲವೆ?” ಅವನ ಪ್ರಶ್ನೆಗೆ ಉತ್ತರಿಸಲಿಲ್ಲ ನಾನು. ಮತ್ತೆ ಮತ್ತೆ ನನ್ನ ಬಾಯಿ ಬಿಡಿಸಲು ಅವನು ಯತ್ನಿಸಿ ವಿಫಲನಾದ. ನಾನು ಭೀಷ್ಮ, ವಿದುರರ ಹೆಸರೆತ್ತಿದ್ದು ಅವನಿಗೆ ಆತಂಕವಾಗಿರಬೇಕು. ಎಷ್ಟು ಹೊತ್ತಾದರೂ ನಾನು ಬಾಯಿ ಬಿಡದೇ ಉಳಿದೆ. ಕೊನೆಗೆ ಅವನೇ ಸೋತ. ನನ್ನ ಎದುರಿನಿಂದ ಸರಿದು ಹೊರಗೆ ನಡೆದ. ದೀವಟಿಗೆಯ ಭಟರೂ ಹೋದರು. ಬಾಗಿಲ ಕದವಿಕ್ಕಿ ಅಗುಳಿ ಸರಿಸಿದರು. “ಅವನು ಹಾಗೆಯೇ ಬಿದ್ದಿರಲಿ. ನೀರನ್ನು ಕೂಡ ಕೊಡಬೇಡಿ. ಮುಂದಿನ ಆಜ್ಞೆಗೆ ಕಾಯುತ್ತಿರಿ” ಎಂದು ಕಾವಲಿನವರಿಗೆ ಆದೇಶಿದ್ದು ಕೇಳಿಸಿತು.
ನಾನು ಹಸಿದಿದ್ದೆ; ಆಯಾಸಗೊಂಡಿದ್ದೆ. ಆದರೆ ದೈಹಿಕವಾಗಿ ಸಶಕ್ತನಿದ್ದುದರಿಂದ ಇನ್ನೂ ಒಂದೆರಡು ದಿನ ಸಮರ್ಥನಾಗಿಯೇ ಇರಬಲ್ಲೆ ಎಂದುಕೊಂಡೆ. ಇವರ ರೀತಿಯನ್ನು ಕಂಡರೆ ಸಿಂಹಾಸನಕ್ಕೆ ತಿಳಿಯದ ಗೋಪ್ಯ ವ್ಯವಹಾರವಿದು ಅನಿಸಿತು. ಬಹುಶಃ ಧಾರ್ತರಾಷ್ಟ್ರರ ಕಾರ್ಯಾಚರಣೆಯಿರಬಹುದು. ನನ್ನನ್ನು ತೊಲಗಿಸಿದರೆ ಅವರಿಗೆ ಕ್ಷೇಮ ಅನಿಸಿರಬೇಕು. ಪಾಂಡವರನ್ನು ಸುಟ್ಟು ಕೊಂದು ತನ್ನ ಅಧಿಕಾರವನ್ನು ನಿಷ್ಕಂಟಕಗೊಳಿಸುವ ದುರ್ಯೋಧನಾದಿಗಳ ಹುನ್ನಾರವಿದು ಎಂಬುದು ಸ್ಪಷ್ಟವಾಯಿತು. ಈ ಬಲೆಯಿಂದ ಪಾರಾದರೆ ಪಾಂಡವರ ಸಾವಿಗೆ ಇವರೇ ಕಾರಣವೆಂದು ಬಹಿರಂಗಪಡಿಸಿ ತಕ್ಕ ಶಿಕ್ಷೆಯಾಗುವಂತೆ ಮಾಡಬೇಕು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದರೆ ಪ್ರಬಲರಾದ ಧಾರ್ತರಾಷ್ಟ್ರ ಹಾಗೂ ಅವರ ಮಿತ್ರಕೂಟದ ವಿರುದ್ಧ ನನ್ನಂತಹ ಕಿರಿಯ ಅಧಿಕಾರಿ ಏನನ್ನು ತಾನೇ ಮಾಡಲಾದೀತು? ಇದೆಲ್ಲ ರಾಜಪುತ್ರರ ಅಧಿಕಾರದಾಹದ ಆಟ. ನನ್ನದು ಪ್ರವಾಹದ ವಿರುದ್ಧದ ಈಜು ಎಂದು ಬುದ್ಧಿ ಹೇಳುತ್ತಿತ್ತು. ಇದನ್ನೆಲ್ಲ ಮಥನ ಮಾಡುತ್ತ ಕಗ್ಗತ್ತಲ ಆ ಕೋಣೆಯಲ್ಲಿ ಹೊತ್ತಿನ ಪರಿವೆಯಿಲ್ಲದೆ ಬಿದ್ದುಕೊಂಡಿದ್ದೆ.
*********
ಅರ್ಧ ನಿದ್ರೆ, ಅರ್ಧ ಎಚ್ಚರದ ಸ್ಥಿತಿಯಲ್ಲಿ ಎಷ್ಟೋ ಕಾಲ ಕಳೆದಿರಬೇಕು. ಹಗಲೋ ಇರುಳೋ ಎಂಬ ಅರಿವೂ ಹುಟ್ಟದ ಹೊತ್ತು ಯಾರೋ ಗಟ್ಟಿಧ್ವನಿಯಲ್ಲಿ ಮಾತನಾಡಿದ್ದು ಕೇಳಿಸಿತು. ಆ ಸದ್ದಿನಿಂದ ಪೂರ್ಣ ಎಚ್ಚರಗೊಂಡೆ. ಅಸ್ಪಷ್ಟವಾಗಿ ‘ಯುವರಾಜರು, ಆದೇಶ, ಇಲ್ಲಿಂದ ಸಾಗಿಸಬೇಕು’ ಎಂದೆಲ್ಲ ಕೇಳಿಸಿಕೊಂಡೆ. ಒಂದಿಷ್ಟು ಪ್ರತಿರೋಧದ ಮಾತುಗಳು, ಹಾಗೂ ಅದರೊಂದಿಗೆ, ‘ಹೂಂ. ಬೇಗ ಬಾಗಿಲು ತೆರೆಯಿರಿ. ಇಲ್ಲಿದೆ ಆದೇಶ’ ಎಂಬ ಗದರಿಕೆಯ ದನಿ. ಸ್ವಲ್ಪ ಹೊತ್ತಿನಲ್ಲಿ ನಾನಿದ್ದ ಕೊಠಡಿಯ ಬಾಗಿಲು ತೆರೆಯಿತು.
ಅದೇ ಕತ್ತಲ ಪರದೆ. ಸಣ್ಣ ದೀವಟಿಗೆಯ ಬೆಳಕು. ಒಂದಿಬ್ಬರು ಪಹರೆಯವರು ಜೊತೆಗೆ ಒಬ್ಬ ದೃಢಕಾಯದ ಭಟ ನಾಯಕನಂತೆ ಇದ್ದವನೊಬ್ಬ ಒಳ ಬಂದರು.
‘ಏಯ್, ಏಳು ಮೇಲೆ. ನಿನ್ನನ್ನು ಕರೆದೊಯ್ಯುವುದಕ್ಕೆ ಆಜ್ಞೆಯಾಗಿದೆ’ ಎಂದ ಆ ದೃಢಕಾಯ. ಅವನ ಮುಖ ಗೋಚರಿಸದಂತೆ ಬಟ್ಟೆಯೊಂದನ್ನು ಸುತ್ತಿದ್ದ. ಅವನ ಸನ್ನೆಯಂತೆ ಪಹರೆಯವರು ನನ್ನ ಸರಪಳಿಗಳನ್ನು ಬಿಚ್ಚಿ ಕೈಗಳನ್ನು ಮಾತ್ರ ಹಗ್ಗದಿಂದ ಬಿಗಿದರು. ನಾನು ನಿಧಾನವಾಗಿ ಎದ್ದುನಿಂತೆ. “ಅಹಾರವಿಲ್ಲದೆ ನಿಶ್ಶಕ್ತನಾಗಿರಬೇಕು. ಒಂದಿಷ್ಟು ನೀರು ಕೊಡಿ” ಎಂದು ಪಹರೆಯವರಿಗೆ ಆದೇಶಿಸಿದ. ಒಂದು ತಂಬಿಗೆಯಲ್ಲಿ ನೀರು ಕೊಟ್ಟರು. ಆ ನೀರು ನನಗೆ ಅಮೃತದಂತೆ ಕಂಡಿತು. ಅದನ್ನು ಕುಡಿದ ಮೇಲೆ ಮೈಗೆ ಸ್ವಲ್ಪ ಶಕ್ತಿಯೂ ಕೂಡಿತು. ದೃಢಕಾಯ ನನ್ನ ಹೆಗಲು ಹಿಡಿದು ಕೊಠಡಿಯಿಂದ ಹೊರಗೆ ತಳ್ಳಿದ.
ಹೊರಗೆ ಕಾಲಿಟ್ಟರೆ ಎರಡೂ ಕಡೆ ನಾನಿದ್ದ ಕೊಠಡಿಯಂತಹುದೇ ಕೊಠಡಿಗಳ ಸಾಲು. ನಡುವಿನಲ್ಲೊಂದು ನಡೆದಾಡುವ ಸ್ಥಳಾವಕಾಶವುಳ್ಳ ಓಣಿ. ಈಗ ಪಹರೆಯವರು ಹಿಂದಿದ್ದರು. ನನ್ನ ತೋಳುಗಳನ್ನು ಹಿಡಿದ ಇಬ್ಬರು ಕಟ್ಟಾಳುಗಳು. ಮತ್ತಿಬ್ಬರು ಹಿಂದಿದ್ದರು. ದೃಢಕಾಯ ಮುಂದೆ. ನೂರು ಹೆಜ್ಜೆ ಸಾಗಿ ಇನ್ನೊಂದು ಭದ್ರವಾದ ಬಾಗಿಲಿನ ಮೂಲಕ ಹೊರಗೆ ಬಂದೆವು. ಅಲ್ಲಿದ್ದ ಪಹರೆಯವರಿಗೆ ದೃಢಕಾಯ ಏನೋ ತೋರಿಸಿ, ‘ಇವನನ್ನು ಕರೆತರುವಂತೆ ಯುವರಾಜರ ಆದೇಶ ಎಂದ. ಅವರು ತಲೆಯಾಡಿಸಿ ಮುಂದೆ ಬಿಟ್ಟರು. ನನ್ನ ಬೆನ್ನಿಗೆ ಕತ್ತಿಯ ಮೊನೆಯನ್ನು ಚುಚ್ಚಿ ಹಿಡಿದಿದ್ದ ಒಬ್ಬ. ಹೊರಗೆ ಬಂದರೆ ಬಯಲು. ಇನ್ನೂ ಇರುಳು ಕವಿದಿತ್ತು. ಬೆಳಗಾಗಲು ಸ್ವಲ್ಪ ಹೊತ್ತು ಇದ್ದಿರಬೇಕು. ಹಕ್ಕಿಗಳ ಕೂಜನವಿನ್ನೂ ಪ್ರಾರಂಭವಾಗಿರಲಿಲ್ಲ.
ಅನತಿ ದೂರದಲ್ಲಿ ನಿಂತಿದ್ದ ರಥಕ್ಕೆ ನನ್ನನ್ನು ಹತ್ತಿಸಿದರು. ಅವರೂ ಏರಿಕೊಂಡರು. ನಾಲ್ಕು ಕುದುರೆಗಳನ್ನು ಹೂಡಿದ ದೊಡ್ಡ ರಥವದು. ರಥ ಹೊರಟಿತು. ಹಸ್ತಿನಾವತಿಯ ಪ್ರಧಾನ ರಕ್ಷಣಾಧಿಕಾರಿಯ ಸೌಧದ ಬೀದಿಯಲ್ಲ. ಇದು ದಟ್ಟವಾಗಿ ಕಾಡು ಬೆಳೆದ ಯಾವುದೋ ಅಪರಿಚಿತ ಸ್ಥಳ. ನಗರದಿಂದ ಬಹಳ ದೂರವಿರಬೇಕು. ಕಲ್ಲುಗಳಿಂದ ತುಂಬಿದ ಏರಿಳಿತಗಳ ದಾರಿಯಲ್ಲಿ ಗಡಗಡ ಸದ್ದಿನೊಂದಿಗೆ ರಥ ಧಾವಿಸಿತು. ಸ್ವಲ್ಪ ದೀರ್ಘವೇ ಎನ್ನಬಹುದಾದ ಆ ಶ್ರಮದಾಯಕ ಪ್ರಯಾಣದ ಬಳಿಕ ರಥ ಒಂದು ತೆರೆದ ಪ್ರದೇಶದಲ್ಲಿ ನಿಂತಿತು. ಮುಂದೆ ಸ್ವಲ್ಪ ವಿಶಾಲವಾದ ರಾಜಮಾರ್ಗ ಕಾಣಿಸುತ್ತಿತ್ತು. ಆಗಷ್ಟೇ ನಸುಬೆಳಕು ಮೂಡುತ್ತಿತ್ತು. ರಥದ ಮುಂದಕ್ಕೆ ಕಟ್ಟಿದ ದೊಂದಿಗಳನ್ನು ಆರಿಸಿದರು. ಈಗ ದೃಢಕಾಯನ ಸೂಚನೆಯಂತೆ ನನ್ನ ಕೈಗಳನ್ನು ಬಿಡಿಸಿದರು.
ನನ್ನನ್ನು ಕೊಲ್ಲುವುದಕ್ಕೆ ಇಲ್ಲಿಗೆ ಕರೆತಂದರೆಂದು ಭಾವಿಸಿದೆ. ಕೈಗಳನ್ನು ಬಿಡಿಸಿದ್ದೇಕೆ ಎಂಬುದು ತಿಳಿಯಲಿಲ್ಲ. ಸಾಧ್ಯವಾದಷ್ಟು ಹೋರಾಡುವುದು ಒಬ್ಬಿಬ್ಬರನ್ನಾದರೂ ಮಲಗಿಸದೆ ಬಿಡಬಾರದು ಎಂಬ ಹಟಹುಟ್ಟಿತು. ಬರಿಗೈಯಾದರೂ ಸರಿ. ಆದರೆ ಅವರು ಆಯುಧಗಳನ್ನು ಹಿರಿಯಲಿಲ್ಲ. ಸುಮ್ಮನೆ ನಿಂತಿದ್ದರು.
ನನ್ನ ಅಚ್ಚರಿಯನ್ನು ಕಂಡು ಭಟನಾಯಕ ತನ್ನ ಮುಖದ ಮುಸುಕನ್ನು ತೆರೆದ. ದಪ್ಪ ಮೀಸೆಯ ಅಗಲವಾದ ಮುಖ. ಪರಿಚಿತವಲ್ಲ. ಆದರೆ ಅವನು ತೆಳುವಾಗಿ ನಗುತ್ತಿದ್ದ.
“ನೀವಾರು? ಏನಿದೆಲ್ಲ?” ಎಂದು ಕೇಳಿದೆ.
ಅವನು ಮತ್ತಷ್ಟು ನಗುತ್ತಾ, “ರಕ್ಷಣಾಧಿಕಾರಿಗಳಿಗೆ ಗೊಂದಲವಾದಂತಿದೆ. ನೀವು ಹಸ್ತಿನಾವತಿಯಲ್ಲಿ ಕಾಣಬೇಕೆಂದುಕೊಂಡ ಖನಕ ನಾನು. ವಾರಣಾವತದಲ್ಲಿ ಸುರಂಗ ಕೊರೆದವನು” ಎಂದ. ನನ್ನ ಅಚ್ಚರಿ ಇಮ್ಮಡಿಯಾಯಿತು. “ಓಹೋ.. ಖನಕ ಅಂದರೆ ನೀನೇನು? ನನ್ನನ್ನು ಸೆರೆಯಲ್ಲಿಟ್ಟವರ ಕಡೆಯವನೊ ಅಲ್ಲಾ?”
ನನ್ನ ಮಾತು ಮುಗಿಯುವ ಮುನ್ನವೇ ಅವನು ಮತ್ತಷ್ಟು ಗಟ್ಟಿಯಾಗಿ ನಗುತ್ತಾ ಹೇಳಿದ: “ಅವರ ಕಡೆಯವನಾದರೆ ನಿಮ್ಮನ್ನು ಅಲ್ಲಿಂದ ಬಿಡಿಸಿಕೊಂಡು ಬರುವ ಪರಿಶ್ರಮವೇಕೆ ನನಗೆ? ನಾನು ಹಸ್ತಿನಾವತಿಯ ಸಿಂಹಾಸನಕ್ಕೆ ನಿಷ್ಠನೇ ಹೊರತು ಇನ್ನಾರಿಗೋ ಅಲ್ಲ. ನಿಮ್ಮನ್ನು ಬಂಧಿಸಿಟ್ಟದ್ದು ರಾಜಾಜ್ಞೆಯಂತೆ ಎಂದು ತಿಳಿದಿರೇನು? ಅದೇನೂ ಅಲ್ಲ. ನಿಜಕ್ಕಾದರೆ ನೀವು ಇಲ್ಲಿಗೆ ಬಂದಿರುವುದು ಧೃತರಾಷ್ಟ್ರ ಪ್ರಭುಗಳಿಗಾಗಲಿ, ಆಚಾರ್ಯ ಭೀಷ್ಮರಿಗಾಗಲಿ ಗೊತ್ತೇ ಇಲ್ಲ… ಅದೆಲ್ಲ ದುಷ್ಟಕೂಟವೊಂದರ ಸಂಚು ಅಷ್ಟೇ”
“ಅಂದರೆ ನನಗೆ ಪ್ರಧಾನ ರಕ್ಷಣಾಧಿಕಾರಿಗಳನ್ನು ಕಾಣಬೇಕೆಂದು ಆದೇಶ ಬಂದಿತ್ತಲ್ಲ?”
“ಇರಬಹುದು. ಆದರೆ ಅದು ಕೃತ್ರಿಮ. ಕಳುಹಿಸಿದವರಿಗೆ ನಿಮ್ಮ ಶೋಧನೆ ಎಲ್ಲಿ ಸತ್ಯದ ದರ್ಶನ ಮಾಡಿಸುವುದೋ ಎಂಬ ಆತಂಕವಿತ್ತು. ಅದಕ್ಕಾಗಿ ನಿಮ್ಮನ್ನು ಬೆದರಿಸಿ ಅಥವಾ ಕೊಂದಾದರೂ ಶೋಧಕಾರ್ಯ ನಿಲ್ಲುವಂತೆ ಮಾಡಬೇಕಿತ್ತು. ಹಾಗಾಗಿ ಸುಳ್ಳು ಸಂದೇಶ ಕಳುಹಿಸಿ ಬರಮಾಡಿಕೊಂಡರು. ನೀವು ಪ್ರಧಾನ ರಕ್ಷಣಾಧಿಕಾರಿಗಳನ್ನು ಕಾಣುವುದು ಸಾಧ್ಯವೇ ಇರಲಿಲ್ಲ. ಅವರು ನಗರದಲ್ಲಿಲ್ಲ. ಅನ್ಯ ಕಾರ್ಯಭಾರದ ಮೇಲೆ ಇಂದ್ರಪ್ರಸ್ಥದತ್ತ ತೆರಳಿದ್ದಾರೆ. ಇದೆಲ್ಲ ಇವರದೇ ಕುತಂತ್ರ.” ಅವನು ಬಿಡಿಸಿ ಹೇಳಿದ.
“ಅದೇನೋ ಸರಿ. ಆದರೆ ನಾನು ಬಂಧನದಲ್ಲಿ ಇದ್ದೇನೆಂದು ನಿನಗೆ ತಿಳಿಯಿತು ಹೇಗೆ? ನನ್ನನ್ನು ಬಿಡಿಸುವುದಕ್ಕೆ ಕಾರಣವೇನು?”
“ಅದನ್ನೇನು ಕೇಳುತ್ತೀರಿ? ನೀವು ಬಂಧನಕ್ಕೊಳಗಾದ ದಿನ ಅಂದರೆ ಮೊನ್ನೆ ಸಾಯಂಕಾಲದವರೆಗೆ ನಿಮ್ಮ ಸಾರಥಿ ಮಹಾದ್ವಾರದ ಬಳಿ ಕಾದಿದ್ದ. ಆ ಬಳಿಕವೂ ನೀವು ಬಾರದಿದ್ದಾಗ ಅವನಿಗೆ ಕಳವಳವಾಗಿ ಮಹಾಮಂತ್ರಿ ವಿದುರರ ಭವನಕ್ಕೆ ಹೋಗಿ ಅವರಲ್ಲಿ ನಿವೇದಿಸಿಕೊಂಡ. ಅವರ ಸೂಚನೆಯಂತೆ ನಮ್ಮ ಕೇರಿಗೆ ಬಂದು ನನ್ನಲ್ಲಿ ಹೇಳಿದ. ಅರಮನೆಯಲ್ಲಿ ಪ್ರಭುತ್ವದ ಮೂಗಿನ ಕೆಳಗೆ ಸಂಚುಗಳು ನಡೆಯುತ್ತಿರುವುದು ನಮ್ಮಲ್ಲಿ ಕೆಲವರಿಗೆ ತಿಳಿದಿತ್ತು. ಎರಡಕ್ಕೆ ಎರಡು ಸೇರಿದರೆ ನಾಲ್ಕು ಆಗಲೇಬೇಕಲ್ಲ! ನಾನು ನನ್ನ ಈ ಭಟರನ್ನು ಸೇರಿಸಿಕೊಂಡು ನಿಮ್ಮನ್ನು ಬಿಡಿಸಿಕೊಂಡು ಬಂದೆ.”
“ಅಲ್ಲಯ್ಯ, ನನ್ನನ್ನು ಅಕ್ರಮವಾಗಿ ಸೆರೆಯಲ್ಲಿಟ್ಟವರು ನೀನು ಕೇಳಿದೊಡನೆ ಹೇಗೆ ಬಿಟ್ಟುಕೊಟ್ಟರು? ಅವರಿಗೆ ನಿನ್ನ ಮಾತು ಕೇಳಬೇಕಾದ ಬದ್ಧತೆ ಏನು? ಅಥವಾ ಮಹಾಮಂತ್ರಿಗಳ ಆಜ್ಞೆಯೆ?” ನನ್ನ ಪ್ರಶ್ನೆಯಲ್ಲಿ ಕುತೂಹಲವೂ ಗೊಂದಲವೂ ಮಿಶ್ರವಾಗಿತ್ತು.
ಆಗ ಅವನು ವಿಶದವಾಗಿ ಹೇಳತೊಡಗಿದ.
(ಸಶೇಷ)