* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು *
ಜಗತ್ತಿನಲ್ಲಿಯ ಅನೇಕ ಸಾಧನೆಗಳನ್ನು ನೋಡಿದರೆ ಎಲ್ಲ ಸಾಧನೆಗಳ ಮೊದಲನೆ ಮೆಟ್ಟಲು ಎಂದರೆ ಮನುಷ್ಯನಿಗೆ ತನ್ನ ಅವಗುಣಗಳು ಕಾಣತೊಡಗುವುದು. ಸಾಧನೆಯು ಬೆಳೆಯುತ್ತಹೋದಂತೆ ನಮ್ಮಲ್ಲಿಯ ಅವಗುಣಗಳು ಪ್ರಖರವಾಗಿ ಕಾಣತೊಡಗುತ್ತವೆ ಹಾಗೂ ಮುಂದೆ ಮುಂದೆ, ಈ ಅವಗುಣಗಳ ಪರ್ವತವೇ ಇದ್ದಂತೆ ಅನ್ನಿಸುತ್ತದೆ. “ಹೇ ಭಗವಂತನೇ, ನಾನು ಇಷ್ಟೆಲ್ಲ ಅವಗುಣಗಳಿಂದ ತುಂಬಿಕೊAಡಿರುವಾಗ ನಿನ್ನ ದರ್ಶನವಾಗಬೇಕೆಂದು ಅಪೇಕ್ಷೆಯನ್ನಾದರೂ ಹೇಗೆ ಮಾಡಲಿ? ಇಂಥ ಪರ್ವತಪ್ರಾಯ ಅವಗುಣಗಳ ರಾಶಿಯೊಳಗಿನಿಂದ ನನಗೆ ನಿನ್ನ ದರುಶನವು ಕಾಲತ್ರಯದಲ್ಲಾದರೂ ಆಗಲು ಶಕ್ಯವೆ?” ಎಂದು ಅನಿಸತೊಡಗುತ್ತದೆ. ಸಾಧನೆ ಪ್ರಾರಂಭ ಮಾಡುವ ಮೊದಲು ಕ್ರೋಧೀಮನುಷ್ಯನು ಆ ಕ್ರೋಧದ ಬಗ್ಗೆ ಎಂದೂ ಚಿಂತಿಸುವುದಿಲ್ಲ. ಇಷ್ಟೇ ಅಲ್ಲದೆ ಅದು ಅವಗುಣವೆಂದು ಅವನಿಗೆ ಅನ್ನಿಸುವುದೇ ಇಲ್ಲ. ಆದರೆ ಅವನು ಅದನ್ನು ಪುರಸ್ಕರಿಸುತ್ತ “ವ್ಯವಹಾರದಲ್ಲಿ ಇಂಥ ಕ್ರೋಧಾವೇಶ ಬೇಕೇ ಆಗುತ್ತದೆ. ಅದರ ಹೊರತಾಗಿ ಹೇಗೆ ನಡೆದೀತು?” ಅನ್ನುತ್ತಾನೆ. ಒಬ್ಬ ಸಾಧಕನು “ಇತ್ತೀಚೆಗೆ ನನಗೆ ಬಹಳೇ ಸಿಟ್ಟು ಬರುತ್ತದೆ” ಎಂದನು. ವಾಸ್ತವಿಕವಾಗಿ ಅವನಿಗೆ ಆ ಸಿಟ್ಟು ಮೊದಲಿನಿಂದಲೂ ಬರುತ್ತಿತ್ತು. ಆದರೆ ಸಾಧನೆ ಪ್ರಾರಂಭ ಮಾಡಿದಾಗಿನಿಂದ ಅವನಿಗೆ ಅದರ ಅರಿವಾಗತೊಡಗಿತು ಅಥವಾ ಸಿಟ್ಟು ಕೆಟ್ಟದ್ದು ಎಂದು ತಿಳಿಯತೊಡಗಿತು ಅಷ್ಟೆ.
ತಾತ್ಪರ್ಯವೇನೆಂದರೆ ಎಲ್ಲಿಯವರೆಗೆ ನಮಗೆ ನಮ್ಮ ನಿಜವಾದ ದರುಶನವಾಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ಎರಡನೆಯವರ ಅವಗುಣಗಳು ಕಾಣಿಸುತ್ತವೆ. ನಮಗೆ ಕಾಣಿಸುವ ಎರಡನೆಯವರ ಅವಗುಣಗಳ ಬೀಜವು ನಮ್ಮಲ್ಲಿಯೇ ಇರುತ್ತದೆಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು. ಆದ್ದರಿಂದ ಎರಡನೆಯವರ ಅವಗುಣಗಳನ್ನು ನೋಡುವ ಪ್ರವೃತ್ತಿಯನ್ನು ನಾವು ಮೊದಲು ತೆಗೆದುಹಾಕಬೇಕು. ಎರಡನೆಯವರ ಅವಗುಣಗಳನ್ನು ನೋಡುವುದೆಂದರೆ ಅದು ಸಾಮಾನ್ಯ ವ್ಯವಹಾರವಾಗಿರುತ್ತದೆ. ಅದು ಪರಮಾರ್ಥವಲ್ಲ. ನಿಜವಾದ ಪರಮಾರ್ಥಿಯಾದವನು ನಿರಂತರ ಆತ್ಮಪರೀಕ್ಷೆ ಮಾಡುತ್ತಿರುತ್ತಾನೆ. ಅವನಿಗೆ ಎರಡನೆಯವರ ಅವಗುಣಗಳು ಕಾಣಿಸುವುದೇ ಇಲ್ಲ. ಆದರೆ ಅವನಿಗೆ ತನ್ನ ಅವಗುಣಗಳ ದರುಶನವು ಎಷ್ಟು ಆಗುವುದೆಂದರೆ ಅವುಗಳ ಮುಂದೆ ಉಳಿದವರೆಲ್ಲ ಅವನಿಗೆ ಪರಮೇಶ್ವರಸ್ವರೂಪರಾಗಿಯೇ ಕಾಣುತ್ತಾರೆ. ಇದೇ ನಿಜವಾದ ಪರಮಾರ್ಥವಾಗಿರುತ್ತದೆ.
(ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಸೌಜನ್ಯ: ಚೈತನ್ಯಾಶ್ರಮ, ಹೆಬ್ಬಳ್ಳಿ.), ಹೆಬ್ಬಳ್ಳಿ.)