ಕ್ಷಮಯಾ ರೋಚತೇ ಲಕ್ಷ್ಮೀರ್ಬ್ರಾಹ್ಮೀ ಸೌರೀ ಯಥಾ ಪ್ರಭಾ |
ಕ್ಷಮಿಣಾಮಾಶು ಭಗವಾಂಸ್ತುಷ್ಯತೇ ಹರಿರೀಶ್ವರಃ |||
– ಭಾಗವತ
“ಕ್ಷಮೆಯಿಂದ ಮನುಷ್ಯನ ಬ್ರಹ್ಮತೇಜಸ್ಸು ಸೂರ್ಯನ ಅತಿಶಯ ಪ್ರಕಾಶದಂತೆ ಬೆಳಗುತ್ತದೆ. ಎಲ್ಲ ಲೋಕಗಳ ಒಡೆಯನಾದ ಪರಮಾತ್ಮನು ಕ್ಷಮಾಗುಣವುಳ್ಳವರಲ್ಲಿ ಬಹಳ ಬೇಗ ಸಂತೋಷ ಪಡುತ್ತಾನೆ.”
ಮುಯ್ಯಿಗೆ ಮುಯ್ಯಿ, ಅಕಾರ್ಯಕ್ಕೆ ದಂಡನೆ ಆಗಲೇಬೇಕು – ಎಂಬ ಧೋರಣೆ ಲೌಕಿಕ-ವ್ಯಾವಹಾರಿಕ ಕಕ್ಷೆಗೆ ಸ್ವಲ್ಪಮಟ್ಟಿಗೆ ಸರಿಹೋಗಬಹುದು. ಆದರೆ ವಿಶಾಲ ಮನಸ್ಸಿನಿಂದಲೂ ಕಾರುಣ್ಯಪ್ರವೃತ್ತಿಯಿಂದಲೂ ಜನಿಸಿದ ಕ್ಷಮಾಗುಣವು ಸರ್ವರಿಗೂ ಹಿತಕರವೂ ಸಂಸ್ಕಾರಕಾರಿಯೂ ಸಂಸ್ಥಿತಿಪೋಷಕವೂ ಆಗುತ್ತದೆಂಬ ಇನ್ನೊಂದು ಪಕ್ಷವೂ ಮನನಾರ್ಹವಾದದ್ದು.
ಒಮ್ಮೆ ಹೀಗಾಯಿತು. ಅಮೆರಿಕದ ದೊಡ್ಡ ಇಂಧನತೈಲೋತ್ಪಾದಕ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಿಚರ್ಡ್ ಎಂಬ ಒಬ್ಬ ಸಾಮಾನ್ಯ ನೌಕರನ ಅಚಾತುರ್ಯದಿಂದ ಕಂಪೆನಿಗೆ ಅಗಾಧ ಪ್ರಮಾಣದ ನಷ್ಟ ಸಂಭವಿಸಿತು. ಕಂಪೆನಿಯ ಧಣಿಯಾದ ಜಾನ್ ಡಿ. ರಾಕೆಫೆಲ್ಲರ್ ಉನ್ನತ ಅಧಿಕಾರಿಗಳನ್ನು ಕರೆಯಿಸಿ ಸಲಹೆ ಕೇಳಿದಾಗ ಅವರಲ್ಲಿ ಹೆಚ್ಚಿನವರು ರಿಚರ್ಡ್ ನನ್ನು ಒಡನೆಯೇ ಕೆಲಸದಿಂದ ತೆಗೆದುಹಾಕಬೇಕು ಎಂದು ಅಭಿಪ್ರಾಯಪಟ್ಟರು. ರಾಕೆಫೆಲ್ಲರ್ ಕೂಡಲೆ ಪ್ರತಿಕ್ರಿಯೆ ತೋರದೆ ನೌಕರನಿಗೆ ಸಂಬಂಧಿಸಿದ ಹಿಂದಿನ ಕಡತವನ್ನೆಲ್ಲ ತರಿಸಿ ಪರಾಮರ್ಶೆ ಮಾಡಿ, ಅಧಿಕಾರಿಗಳನ್ನು ಮತ್ತೆ ಕರೆಯಿಸಿ ಅವರಿಗೆ ಹೇಳಿದ: “ಹಿನ್ನೆಲೆಯಷ್ಟನ್ನೂ ಗಮನಿಸಿ ನೋಡಿದಾಗ ರಿಚರ್ಡ್ ಪರವಾಗಿ ಹನ್ನೊಂದು ಅಂಶಗಳೂ ಅವನಿಗೆ ಪ್ರತಿಕೂಲವಾಗಿ ಎರಡು ಅಂಶಗಳೂ ಇವೆ; ಮತ್ತು ಈಗ್ಗೆ ಹಿಂದೆ ಅವನಿಂದಾಗಿ ಎಂದೂ ಯಾವ ನಷ್ಟವೂ ಘಟಿಸಿಲ್ಲ. ಇದನ್ನೆಲ್ಲ ಪರಿಶೀಲಿಸಿ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ನಿಮಗೇ ನೀಡಿದ್ದೇನೆ.”
ಅಧಿಕಾರಿಗಳು ಸಮಾಲೋಚನೆ ನಡೆಸಿದಾಗ ರಿಚರ್ಡ್ ನನ್ನು ನೌಕರಿಯಿಂದ ತೆಗೆದುಹಾಕಬಾರದೆಂದು ನಿರ್ಧರಿಸಿದರು.