ಪಶ್ಚಿಮಬಂಗಾಳದ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಮೇ ಮೊದಲ ವಾರದಲ್ಲಿಯೆ ಆರಂಭಗೊಂಡು ತೃಣಮೂಲ ಕಾಂಗ್ರೆಸಿನ ಗೂಂಡಾ ಪಡೆಗಳಿಂದ ತಿಂಗಳ ಕಾಲ ಅವ್ಯಾಹತವಾಗಿ ನಡೆದ ಹಿಂಸಾಚರಣೆಗಳ, ಅತ್ಯಾಚಾರಗಳ ಸರಣಿಯು ರಾಜ್ಯಾಂಗಮರ್ಯಾದೆಗೆ ಮಾತ್ರವಲ್ಲದೆ ಮಾನವಸಭ್ಯತೆಗೇ ಕಲಂಕಪ್ರಾಯವಾಗಿದೆ. ಕಾನೂನುಪಾಲನೆಯು ಸಾರ್ವಜನಿಕ ಜೀವನದ ಅಡಿಪಾಯವಾಗಿರಬೇಕಾದ ಈ ಕಾಲದಲ್ಲಿ ಇಂತಹ ನಿರ್ಭಿಡೆಯಾದ ಪಾಶವೀಯ ನಡೆಯು ಕಲ್ಪನೆಗೇ ಮೀರಿದ್ದು. ಈ ದೌರ್ಜನ್ಯಗಳು ವಾರಗಳುದ್ದಕ್ಕೂ ನಡೆದವೆಂಬುದೇ ಅವಕ್ಕೆ ಆರೂಢ ಸರ್ಕಾರದ ಬೆಂಬಲವಿದ್ದಿತೆಂಬುದನ್ನು ಸ್ಫುಟಪಡಿಸಿದೆ. ಚುನಾವಣೆಯಲ್ಲಿ ಗೆದ್ದ ಪಕ್ಷವೊಂದು ತಮ್ಮ ವಿರೋಧಪಕ್ಷಗಳವರ ಮೇಲೆ ಆರಿಸಿ ಆರಿಸಿ ಹಲ್ಲೆ ನಡೆಸುವುದು ಸಾಧ್ಯವಾಯಿತೆಂದಲ್ಲಿ ಜವಾಬ್ದಾರಿಯುತ ಸರ್ಕಾರ ಅಸ್ತಿತ್ವದಲ್ಲಿದೆಯೆಂದು ಹೇಗೆ ನಂಬುವುದು? ದಿನ ಕಳೆದಂತೆ ಹೊರಬೀಳುತ್ತಿರುವ ಹಿಂಸಾಚರಣೆಯ ವಿವರಗಳು ಇಡೀ ದೇಶವನ್ನೇ ದಿಗ್‌ಭ್ರಾಂತವಾಗಿಸಿವೆ. ಆಳುವ ಪಕ್ಷದ ರಾಜಕೀಯ ವಿರೋಧಿಗಳ ಮೇಲೆ ಹಿಂಸಾಚರಣೆ ನಡೆಸಲು ಸರ್ಕಾರೀ ಯಂತ್ರವನ್ನೇ ಧಾರಾಳವಾಗಿ ಬಳಸಿಕೊಳ್ಳಲಾಯಿತೆಂಬುದು ಸಂದೇಹಾತೀತವಾಗಿ ರುಜುವಾತಾಗಿದೆ. ತೃಣಮೂಲ ಕಾಂಗ್ರೆಸ್ ಬೆಂಬಲಿಗರು ‘ಖೇಲಾ ಹೋಬೇ – ಖೇಲಾ ಹೋಬೇ’ ಘೋಷಣೆಗಳನ್ನು ಕೂಗುತ್ತಾ ಹಿಂಸಾಚಾರವೆಸಗಿದುದು ನೂರಾರು ಜನರ ಸಮ್ಮುಖದಲ್ಲಿಯೆ ನಡೆಯಿತು; ಸರ್ಕಾರೀ ಅಧಿಕಾರಿಗಳೆಲ್ಲ ಮೂಕಪ್ರೇಕ್ಷಕರಾಗಿದ್ದರು. ಜನರ ದೂರುಗಳನ್ನು ಸ್ವೀಕರಿಸಲೂ ಯಾರೂ ಇರಲಿಲ್ಲ; ಕೇಂದ್ರ ಗೃಹಖಾತೆಯ ಮೊರೆಹೊಗಬೇಕಾಯಿತು. ‘ಗ್ರೂಪ್ ಆಫ್ ಇಂಟೆಲೆಕ್ಚುಅಲ್ಸ್’ ಮೊದಲಾದ ಸ್ವತಂತ್ರ ತನಿಖಾ ತಂಡಗಳು ರಾಶಿರಾಶಿ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ. ಅವರ್ಣನೀಯ ದೌರ್ಜನ್ಯಗಳನ್ನೆಸಗಿದವರಿಗೆ ಕ್ಷಿಪ್ರವಾಗಿ ದಂಡನೆಯಾಗದಿದ್ದಲ್ಲಿ ನ್ಯಾಯಪಾರಮ್ಯದಲ್ಲಿಯೆ ದೇಶದ ಜನತೆಯ ನಂಬಿಕೆ ಶಿಥಿಲಗೊಂಡೀತು.
ಬಂಗಾಳದಲ್ಲಿ ಹಿಂಸಾಚರಣೆಯೇ ಸಂವಾದದ ಭಾಷೆ
Month : August-2021 Episode : Author :